Tag: Delhi Air Pollution

  • ದೆಹಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಕ್ರಮ – ಸಿಎನ್‌ಜಿ ಆಟೋಗಳಿಗೆ ಬ್ರೇಕ್, ಇವಿಗೆ ಮಾತ್ರ ಆದ್ಯತೆ?

    ದೆಹಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಕ್ರಮ – ಸಿಎನ್‌ಜಿ ಆಟೋಗಳಿಗೆ ಬ್ರೇಕ್, ಇವಿಗೆ ಮಾತ್ರ ಆದ್ಯತೆ?

    ನವದೆಹಲಿ: ಹತ್ತು ವರ್ಷ ಹಳೆಯ ಡೀಸೆಲ್, ಹದಿನೈದು ವರ್ಷಗಳ ಹಳೆಯ ಪೆಟ್ರೋಲ್ ವಾಹನಗಳನ್ನು ದೆಹಲಿ ಸರ್ಕಾರ (Delhi Government) ಸಂಪೂರ್ಣವಾಗಿ ನಿಷೇಧಿಸಿತ್ತು. ಇದೀಗ ವಾಯುಮಾಲಿನ್ಯ ನಿಯಂತ್ರಿಸುವ ದೃಷ್ಟಿಯಿಂದ ಸಿಎನ್‌ಜಿ (CNG) ಚಾಲಿತ ಆಟೋಗಳ ನೋಂದಣಿ ರದ್ದು ಮಾಡಲು ನಿರ್ಧರಿಸಿದೆ.

    ವಾಯುಮಾಲಿನ್ಯ (Air Pollution) ನಿಯಂತ್ರಣಕ್ಕಾಗಿ ದೆಹಲಿ ಸರ್ಕಾರ ಹೊಸ ಇವಿ ನೀತಿಯನ್ನು ಜಾರಿ ಮಾಡಲು ಮುಂದಾಗಿದೆ. ಶೀಘ್ರದಲ್ಲಿ ಈ ಸಂಬಂಧ ಹೊಸ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ. ಹೊಸ ನೀತಿಯ ಪ್ರಕಾರ ಈ ವರ್ಷದ ಆ.15ರಿಂದ ಸಿಎನ್‌ಜಿ ಆಟೋ ನೋಂದಣಿಯನ್ನು ನಿಲ್ಲಿಸಲಾಗುತ್ತದೆ. ಇದೇ ವೇಳೆ ಸಿಎನ್‌ಜಿ ಆಟೋಗಳ ನವೀಕರಣಕ್ಕೂ ಸರ್ಕಾರ ಬ್ರೇಕ್ ಹಾಕಲು ನಿರ್ಧರಿಸಿದೆ.ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ ರಿಸಲ್ಟ್: ಪಾಸಾದವರಿಗೆ ವಿಶ್ ಮಾಡಿ, ಫೇಲ್ ಆದವರಿಗೆ ಧೈರ್ಯ ತುಂಬಿದ ಸಿಎಂ

    ಹೊಸ ನೀತಿಯಡಿ ಎಲ್ಲಾ ನವೀಕರಿಸಿದ ಅಥವಾ ಬದಲಿ ಪರವಾನಗಿಗಳನ್ನು ವಿದ್ಯುತ್ ಆಟೋಗಳಿಗೆ ಮಾತ್ರ ನೀಡಲಾಗುತ್ತದೆ. ಆಟೋರಿಕ್ಷಾಗಳಲ್ಲದೆ, ನಾಗರಿಕ ಸೇವೆಗಳಿಗೆ ಬಳಸುವ ಇಂಧನ ಚಾಲಿತ ವಾಹನಗಳನ್ನು ಸಹ ಈ ನೀತಿಯಡಿ ಗುರಿಯಾಗಿಸಿಕೊಂಡಿದೆ. ಹೆಚ್ಚು ಮಹತ್ವಾಕಾಂಕ್ಷೆಯ ಪ್ರಸ್ತಾವನೆಯಲ್ಲಿ, ಹೊಸ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಚಾಲಿತ ದ್ವಿಚಕ್ರ ವಾಹನಗಳ ನೋಂದಣಿಯನ್ನು 2026ರ ಆ.15ರಿಂದ ನಿಷೇಧಿಸಬೇಕು ಎಂದು ಕರಡು ಹೇಳುತ್ತದೆ.

    ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (Delhi Municipal Corporation), ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಮತ್ತು ದೆಹಲಿ ಜಲಮಂಡಳಿ ನಿರ್ವಹಿಸುವ ಎಲ್ಲಾ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಚಾಲಿತ ಕಸ ಸಂಗ್ರಹಣಾ ವಾಹನಗಳನ್ನು ಹಂತ ಹಂತವಾಗಿ ಸ್ಥಗಿತಗೊಳಿಸಲು ಇದು ಶಿಫಾರಸು ಮಾಡುತ್ತದೆ. ಇವುಗಳನ್ನು 2027ರ ಡಿ.31ರೊಳಗೆ ಸಂಪೂರ್ಣವಾಗಿ ವಿದ್ಯುತ್ ಚಾಲಿತವಾಗಿ ಪರಿವರ್ತಿಸಲಾಗುವುದು.

    ದೆಹಲಿ ಸಾರಿಗೆ ನಿಗಮ ಮತ್ತು ದೆಹಲಿ ಇಂಟಿಗ್ರೇಟೆಡ್ ಮಲ್ಟಿ-ಮೋಡಲ್ ಟ್ರಾನ್ಸಿಟ್ ಸಿಸ್ಟಮ್ ನಿರ್ವಹಿಸುವ ಎಲ್ಲಾ ಇಂಟ್ರಾ-ಸಿಟಿ ಬಸ್‌ಗಳು ಇನ್ಮುಂದೆ ವಿದ್ಯುತ್ ಚಾಲಿತವಾಗಿರಬೇಕು ಎಂದು ನೀತಿಯು ಪ್ರಸ್ತಾಪಿಸುತ್ತದೆ. ಅಂತರ-ರಾಜ್ಯ ಮಾರ್ಗಗಳಿಗೆ ಬಿಎಸ್-ವಿಐ ಕಂಪ್ಲೈಂಟ್ ಬಸ್‌ಗಳನ್ನು ಮಾತ್ರ ಅನುಮತಿಸಲಾಗುತ್ತದೆ. ಹೊಸ ನೀತಿಯಡಿಯಲ್ಲಿ ನಗರ ಬಳಕೆಗಾಗಿ ಯಾವುದೇ ಹೊಸ ಪಳೆಯುಳಿಕೆ ಇಂಧನ ಆಧಾರಿತ ಬಸ್‌ಗಳನ್ನು ಖರೀದಿಸಲಾಗುವುದಿಲ್ಲ.

    ಕರಡು ಇನ್ನೂ ಪರಿಶೀಲನೆಯಲ್ಲಿದ್ದು, ದೆಹಲಿ ಸಚಿವ ಸಂಪುಟದ ಮುಂದೆ ಇಡುವ ಮೊದಲು ವಿಶೇಷವಾಗಿ ದ್ವಿಚಕ್ರ ವಾಹನಗಳ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕೆಲವು ಬದಲಾವಣೆಗಳಿಗೆ ಒಳಗಾಗಬಹುದು. ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಾ.31 ರಂದು ಮುಕ್ತಾಯಗೊಂಡ ಪ್ರಸ್ತುತ ಇವಿ (Electric Vehicles) ನೀತಿಯ ಹೊಸ ಆವೃತ್ತಿಯನ್ನು ಅಂತಿಮಗೊಳಿಸಲು 15 ದಿನಗಳವರೆಗೆ ವಿಸ್ತರಿಸಲಾಗಿದೆ. ಪಳೆಯುಳಿಕೆ ಇಂಧನ ಚಾಲಿತ ವಾಹನಗಳನ್ನು ಎಲ್ಲಾ ವಿಭಾಗಗಳಲ್ಲಿ ಆಕ್ರಮಣಕಾರಿಯಾಗಿ ಬದಲಾಯಿಸುವ ಮೂಲಕ ದೆಹಲಿಯ ವಾಯುಮಾಲಿನ್ಯವನ್ನು ತೀವ್ರವಾಗಿ ಕಡಿಮೆ ಮಾಡುವುದು ಈ ನೀತಿಯ ಗುರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಭಾರತೀಯ ಷೇರುಪೇಟೆಯಲ್ಲಿ ಚೇತರಿಕೆ – ಜಾಗತಿಕ ಮಾರುಕಟ್ಟೆಯಲ್ಲೂ ಕಡಿಮೆಯಾದ ಒತ್ತಡ

  • Delhi Air Pollution | ಮಾಲಿನ್ಯ ನಿಯಂತ್ರಣಕ್ಕೆ ಕೃತಕ ಮಳೆ ಸುರಿಸಲು ಪ್ಲ್ಯಾನ್‌

    Delhi Air Pollution | ಮಾಲಿನ್ಯ ನಿಯಂತ್ರಣಕ್ಕೆ ಕೃತಕ ಮಳೆ ಸುರಿಸಲು ಪ್ಲ್ಯಾನ್‌

    – ದೆಹಲಿ ದೇಶದ ರಾಜಧಾನಿಯಾಗಿ ಮುಂದುವರಿಯಬೇಕಾ?
    – ಚರ್ಚೆಗೆ ಗ್ರಾಸವಾಯ್ತು ಶಶಿ ತರೂರ್‌ ಟ್ವೀಟ್‌

    ನವದೆಹಲಿ: ದೆಹಲಿ ವಾಯುಮಾಲಿನ್ಯ (Delhi Air Pollution) ಸದ್ಯಕ್ಕೆ ನಿಯಂತ್ರಣಕ್ಕೆ ಬರುವಂತೆ ಕಾಣ್ತಿಲ್ಲ. ಕಳೆದ 24 ಗಂಟೆಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ 488 ತಲುಪಿದೆ. ಸತತ 7ನೇ ದಿನವೂ ದೆಹಲಿ ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಇದೆ. ಬಾಂಗ್ಲಾದೇಶದ ಢಾಕಾ, ಪಾಕಿಸ್ತಾನದ (Pakistan) ಲಾಹೋರ್‌ ಕ್ರಮವಾಗಿ 2, 3ನೇ ಸ್ಥಾನಗಳಲ್ಲಿವೆ.

    ಇಂತಹ ಪರಿಸ್ಥಿತಿಯಲಿ ದೆಹಲಿ ಇನ್ನೂ ದೇಶದ ರಾಜಧಾನಿಯಾಗಿ ಮುಂದುವರೆಯಬೇಕಾ? ಎಂದು ಸಂಸದ ಶಶಿ ತರೂರ್ (Shashi Tharoor) ಪ್ರಶ್ನೆ ಮಾಡಿದ್ದಾರೆ. ನವೆಂಬರ್‌ನಿಂದ ಜನವರಿವರೆಗೂ ಈ ನಗರ ವಾಸಕ್ಕೆ ಯೋಗ್ಯವಲ್ಲ.. ಉಳಿದ ಅವಧಿಯಲ್ಲೂ ಉತ್ತಮ ಜೀವನ ಸಾಧಿಸಲು ಸಾಧ್ಯವಾಗಲ್ಲ. ಕೇಂದ್ರ ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ.. ಇಂತಹ ಸನ್ನಿವೇಶದಲ್ಲಿ ದೆಹಲಿ ರಾಜಧಾನಿಯಾಗಿ ಉಳೀಬೇಕಾ? ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ.

    ಇತ್ತ ಮಾಲಿನ್ಯ ಹೆಚ್ಚಳದ ಬಗ್ಗೆ ಹಿರಿಯ ವಕೀಲ ಕಪಿಲ್ ಸಿಬಲ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ವೇಳೆ ವರ್ಚುವಲ್‌ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಿಜೆಐ ಸಂಜೀವ್ ಖನ್ನಾ ಸೂಚಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್‌ ಬಿಲ್ ಬಾಕಿ, ದೆಹಲಿಯ ಹಿಮಾಚಲ ಭವನ ಮುಟ್ಟುಗೋಲು ಹಾಕಲು ಹೈಕೋರ್ಟ್ ಆದೇಶ

    ಇನ್ನೂ, ವಾಯು ಮಾಲಿನ್ಯ ನಿಯಂತ್ರಣಕ್ಕೆ ಕೃತಕ ಮಳೆ ಸುರಿಸೋದೊಂದೇ ಮಾರ್ಗ.. ಅದಕ್ಕೆ ಅನುಮತಿ ಕೊಡಿ ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರಾಯ್ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ದೆಹಲಿ ಮಾತ್ರವಲ್ಲ.. ಉತ್ತರ ಭಾರತದಲ್ಲಿ ಮಂಜು ಆವರಿಸಿದೆ. ನೋಯ್ಡಾ ಬಳಿ ಸರಣಿ ಅಪಘಾತ ನಡೆದಿದೆ. ಹತ್ತಾರು ಕಾರು ಡಿಕ್ಕಿಯಾಗಿ, ಇಬ್ಬರು ಸಾವನ್ನಪ್ಪಿದ್ದಾರೆ. ಆಗ್ರಾದಲ್ಲಿ ತಾಜ್‌ಮಹಲ್ ಕೂಡ ಗೋಚರ ಆಗ್ತಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬುಧವಾರ ಮಹಾ ಚುನಾವಣೆ – ಎಂವಿಎ ವರ್ಸಸ್ ಮಹಾಯುತಿ ಭರ್ಜರಿ ಕದನ

  • ದೆಹಲಿಯಲ್ಲಿ ವಿಷವಾಗುತ್ತಿದೆ ಉಸಿರಾಡುವ ಗಾಳಿ – 1,500ರ ಗಡಿ ದಾಟಿದ AQI

    ದೆಹಲಿಯಲ್ಲಿ ವಿಷವಾಗುತ್ತಿದೆ ಉಸಿರಾಡುವ ಗಾಳಿ – 1,500ರ ಗಡಿ ದಾಟಿದ AQI

    – ವಿಮಾನಗಳು, ರೈಲು ಪ್ರಯಾಣದಲ್ಲಿ ಅಸ್ತವ್ಯಸ್ತ

    ನವದೆಹಲಿ: ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಾದ್ಯಂತ ಹುಲ್ಲು ಸುಡುವಿಕೆಯಿಂದೆ ದೆಹಲಿಯಲ್ಲಿ ಉಂಟಾದ ವಾಯು ಮಾಲಿನ್ಯ (Delhi Air Pollution) ಅಪಾಯದ ಮಟ್ಟ ಮೀರಿದೆ. ಸತತ 6ನೇ ದಿನವೂ ವಾಯುಮಾಲಿನ್ಯ ಮುಂದುವರಿದಿದ್ದು ಉಸಿರಾಡುವ ಗಾಳಿ ವಿಷವಾಗುತ್ತಿದೆ. ಸೋಮವಾರ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ (AQI) 1,500ರ ಗಡಿ ದಾಟಿದೆ.

    ಸೋಮವಾರ ಬೆಳಗ್ಗೆ ದೆಹಲಿಯ ಮುಂಡ್ಕಾದಲ್ಲಿ ಎಕ್ಯೂಐ 1591 ಎಕ್ಯೂಐ, ದ್ವಾರಕ-8ನೇ ಸೆಕ್ಟಾರ್‌ನಲ್ಲಿ ಎಕ್ಯೂಐ 1,497 ಹಾಗೂ ರೋಹಿಣಿ ಸೆಕ್ಟಾರ್‌ನಲ್ಲಿ 1,427 ಎಕ್ಯೂಐ ದಾಖಲಾಗಿದೆ. ಗೋಚರತೆ ಪ್ರಮಾಣ ಇನ್ನಿಲ್ಲದಂತೆ ಕುಸಿದಿದೆ. ರಸ್ತೆ, ರೈಲು, ವೈಮಾನಿಕ ಸೇವೆಗಳಲ್ಲಿ ತೀವ್ರ ವ್ಯತ್ಯಯವಾಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮತ್ತೊಂದೆಡೆ ಹೆಚ್ಚಿದ ವಾಯು ಮಾಲಿನ್ಯದಿಂದ ದೆಹಲಿ ಜನರಲ್ಲಿ ಉಸಿರಾಟ ಸಮಸ್ಯೆ ತೀವ್ರವಾಗಿದೆ. ಇದನ್ನೂ ಓದಿ: ದೆಹಲಿ ಮಾಲಿನ್ಯಕ್ಕೆ ಕೇಂದ್ರ ಸರ್ಕಾರವೇ ಹೊಣೆ – ರಾಜಕೀಯ ಬಿಟ್ಟು ಕ್ರಮ ತೆಗೆದುಕೊಳ್ಳಲಿ: ಅತಿಶಿ

    ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದೆ. ಅಪಾಯದ ಮಟ್ಟ ಮೀರಿದ ಮಾಲಿನ್ಯ ನಿಯಂತ್ರಣಕ್ಕೆ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್‌ನ 4ನೇ ಹಂತವನ್ನು ದೆಹಲಿ ಸರ್ಕಾರ ಜಾರಿ ಮಾಡಿದೆ. ಮಾಲಿನ್ಯ ವಿಚಾರವಾಗಿ ಆಳುವ ಸರ್ಕಾರವನ್ನು ಸುಪ್ರೀಂ ಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ: `ಏಕ್ ಹೈ ತೊ ಸೇಫ್ ಹೈ’ ಪ್ರಧಾನಿ ಘೋಷಣೆಗೆ ಟೀಕೆ – ಮೋದಿ, ಅದಾನಿ ಫೋಟೋ ತೋರಿಸಿ ರಾಗಾ ವ್ಯಂಗ್ಯ

    ನಾವು ಹೇಳೋವರೆಗೂ ಜಿಆರ್‌ಎಪಿ-4 ನಿಯಮ ಸಡಿಲಿಸಬಾರದು. ಎಕ್ಯೂಐ 400ಕ್ಕಿಂತ ಕಡಿಮೆಯಾದ್ರೂ ಈ ನಿಯಮ ಸಡಿಲಿಸಬಾರದು ಎಂದು ಸೂಚಿಸಿದೆ. ಆದರೆ, ವಾಯುಮಾಲಿನ್ಯ ವಿಚಾರವಾಗಿ ರಾಜಕೀಯ ನಡೆದಿದೆ. ವಾಯು ಮಾಲಿನ್ಯ ತೀವ್ರ ಸ್ವರೂಪ ಪಡೆಯೋವರೆಗೂ ಕೇಂದ್ರ ಅಚೇತನವಾಗಿತ್ತು.

    ಯಾವುದೇ ಮುಂಜಾಗ್ರತೆ ವಹಿಸಲಿಲ್ಲ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಹುಲ್ಲು ಸುಡುತ್ತಿರುವುದೇ ದೆಹಲಿ ಮಾಲಿನ್ಯಕ್ಕೆ ಕಾರಣ ಎಂದು ಸಿಎಂ ಅತಿಶಿ ದೂರಿದ್ದಾರೆ. ಇದನ್ನೂ ಓದಿ: ಮಣಿಪುರ ಗಲಭೆ: ಅಮಿತ್ ಶಾ ನೇತೃತ್ವದಲ್ಲಿ ಹೈವೋಲ್ಟೇಜ್‌ ಸಭೆ – 50 ಕೇಂದ್ರೀಯ ಭದ್ರತಾ ಪಡೆ ನಿಯೋಜನೆ

  • ಇಡೀ ದೇಶದಲ್ಲೇ ಅತ್ಯಂತ ಶುದ್ಧ ಗಾಳಿ ಇರೋದು ಮಡಿಕೇರಿಯಲ್ಲಿ!

    ಇಡೀ ದೇಶದಲ್ಲೇ ಅತ್ಯಂತ ಶುದ್ಧ ಗಾಳಿ ಇರೋದು ಮಡಿಕೇರಿಯಲ್ಲಿ!

    ಮಡಿಕೇರಿ: ಭಾರತದ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ (Delhi Air Pollution) ಜನರ ಉಸಿರುಗಟ್ಟಿಸುತ್ತಿದೆ. ಈಗಾಗಲೇ ಅಪಾಯ ಮಟ್ಟ ಮೀರಿರುವ ದೆಹಲಿಯಲ್ಲಿ ದಿನದಿಂದ ದಿನಕ್ಕೆ ಗುಣಮಟ್ಟ ಕಳಪೆಯಾಗುತ್ತಲೇ ಇದೆ. ಆದರೆ ಇತ್ತ ಕರ್ನಾಟಕ ಕಾಶ್ಮೀರ ಕೊಡಗು ಜಿಲ್ಲೆ ದೇಶದಲ್ಲೇ ಅತ್ಯಂತ ಶುದ್ಧ ಗಾಳಿ ಹೊಂದಿರುವ ಸ್ಥಳಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ (Pollution control Board) ಮಾಹಿತಿ ಪ್ರಕಾರ ಮಂಜಿನ ನಗರಿ ಮಡಿಕೇರಿ ಪ್ರಥಮ ಸ್ಥಾನದಲ್ಲಿದೆ. ಈ ವರದಿ ಸ್ಥಳೀಯ ನಿವಾಸಿಗಳಿಗೆ ಖುಷಿ ಕೊಟ್ಟಿದೆ.

    ಹೌದು. ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಷಪೂರಿತ ಗಾಳಿ ಸೇವನೆಯಿಂದ ಅಲ್ಲಿನ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಪ್ರಾಥಮಿಕ ಶಾಲಾ ಮಕ್ಕಳಿಗೆ ಆನ್‌ಲೈನ್‌ ತರಗತಿಗಳಿಗೆ (Online Class) ವರ್ಗಾಯಿಸಲಾಗಿದೆ. 3ನೇ ಹಂತದ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಇತ್ತ ದೇಶದಲ್ಲೇ ಅತ್ಯಂತ ಶುದ್ಧ ಗಾಳಿ ಹೊಂದಿರುವ ಸ್ಥಳಗಳ ಪಟ್ಟಿಯಲ್ಲಿ ಮಂಜಿನ ನಗರಿ ಮಡಿಕೇರಿಗೆ ನಂ.1 ಸ್ಥಾನ ಸಿಕ್ಕಿದೆ. ಕೇಂದ್ರ ಪರಿಸರ ಮಾಲಿನ್ಯ ಮಂಡಳಿಯ ಮಾಹಿತಿ ಪ್ರಕಾರ ಮಂಜಿನ ನಗರಿ  ಮಡಿಕೇರಿ (Madikeri) ಪ್ರಥಮ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ರಾಜ್ಯದ ಗದಗ ಜಿಲ್ಲೆ ಕೂಡ ಸ್ಥಾನ ಪಡೆದುಕೊಂಡಿದ್ದು, 8ನೇ ಸ್ಥಾನ ಪಡೆದುಕೊಂಡಿದೆ. ಇದನ್ನೂ ಓದಿ: ದೆಹಲಿ ಮಾಲಿನ್ಯಕ್ಕೆ ಕೇಂದ್ರ ಸರ್ಕಾರವೇ ಹೊಣೆ – ರಾಜಕೀಯ ಬಿಟ್ಟು ಕ್ರಮ ತೆಗೆದುಕೊಳ್ಳಲಿ: ಅತಿಶಿ

    ಕಳೆದ ವರ್ಷ ಇದೇ ಸಮಯದಲ್ಲಿ ಮಡಿಕೇರಿ 5ನೇ ಸ್ಥಾನದಲ್ಲಿತ್ತು. ಇದೀಗ ಕೊಡಗಿನ ಹಸಿರು ಪರಿಸರ, ಪರಿಶುದ್ಧ ಗಾಳಿ, ಝುಳು ಝುಳು ನೀರು ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣವಾಗಿದೆ ಮಂಜಿನ ನಗರಿ ಮಡಿಕೇರಿ. ಅಲ್ಲದೇ ನಗರ ಪ್ರದೇಶ, ಪ್ರವಾಸಿತಾಣಗಳಲ್ಲಿ ದಿನಕಳೆದಂತೆ ಪರಿಸ್ಥಿತಿ ಬದಲಾಗುತ್ತಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯು ಗುಣಮಟ್ಟ (AQI) ಸೂಚ್ಯಂಕ ಪ್ರಮಾಣ ಪ್ರಕಾರ ಕೊಡಗಿನಲ್ಲಿ ಗಾಳಿಯ ಗುಣಮಟ್ಟ ವರ್ಷದ ಬಹುತೇಕ ದಿನಗಳಲ್ಲಿ ಉತ್ತಮ ಎಂದೇ ದಾಖಲಾಗುತ್ತಿದೆ. ಇದೀಗ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಹಿತಿ ಪ್ರಕಾರ, ದೇಶದ 10 ಪರಿಶುದ್ಧ ಗಾಳಿ ಇರುವ ಪ್ರದೇಶದಲ್ಲಿ ಮಡಿಕೇರಿ ಮೊದಲ ಸ್ಥಾನ ಪಡೆದುಕೊಂಡಿರುವುದು ಸ್ಥಳೀಯರಿಗೆ ಖುಷಿ ಕೊಟ್ಟಿದೆ.‌

    ಇನ್ನೂ ಶುದ್ಧಗಾಳಿ ಹೊಂದಿರುವ ದೇಶದ ಪ್ರಥಮ ಹತ್ತು ಸ್ಥಳಗಳಲ್ಲಿ ಮಡಿಕೇರಿ ಮೊದಲ ಸ್ಥಾನದಲ್ಲಿದ್ದರೆ, ನಂತರ ಸ್ಥಾನಗಳನ್ನು ಕ್ರಮವಾಗಿ ಪಾಲ್ಕಲೈಪೆರೂರ್, ಕರೂರು, ತಿರುನಲ್ವೇಲಿ, ತಿರುಪತಿ, ಊಟಿ, ವೆಲ್ಲೂರ್, ರಾಣಿಪೇಟ್, ಗದಗ, ತೂತುಕುಡಿ ಹಾಗೂ ಪುದುಚೆರಿ ಪಡೆದುಕೊಂಡಿವೆ. ಮಡಿಕೇರಿಯಲ್ಲಿ ಗಾಳಿಯ ಮಾಲಿನ್ಯದ ಪ್ರಮಾಣ ಎಕ್ಯೂಐ ಸೂಚ್ಯಂಕದ ಪ್ರಕಾರ 10 ಆಗಿದ್ದರೆ, ಪಾಲ್ಕಲೈಪೆರೂರ್ 17, ಕರೂರು 22, ತಿರುನಲ್ವೇಲಿ 23, ತಿರುಪತಿ 24, ಊಟಿ 26, ವೆಲ್ಲೂರ್ 26, ರಾಣಿಪೇಟ್ 26, ಗದಗ 32, ತೂತುಕುಡಿ 32 ಹಾಗೂ ಪುದುಚೆರಿಯಲ್ಲಿ 34 ಆಗಿದೆ. ಇದನ್ನೂ ಓದಿ: `ಏಕ್ ಹೈ ತೊ ಸೇಫ್ ಹೈ’ ಪ್ರಧಾನಿ ಘೋಷಣೆಗೆ ಟೀಕೆ – ಮೋದಿ, ಅದಾನಿ ಫೋಟೋ ತೋರಿಸಿ ರಾಗಾ ವ್ಯಂಗ್ಯ

    ಅತಿ ಹೆಚ್ಚು ವಾಯು ಮಾಲಿನ್ಯದಿಂದ ಸಮಸ್ಯೆ ಎದುರಿಸುತ್ತಿರುವ ದೆಹಲಿಯಲ್ಲಿ ಎಕ್ಯೂಐ ಸೂಚ್ಯಂಕ ಭಾನುವಾರ 457 ದಾಟಿದೆ. ಹೀಗಾಗಿ ಮಡಿಕೇರಿ ಶಾಸಕ ಮಂಥರ್ ಗೌಡ ಪಬ್ಲಿಕ್ ಟಿವಿಯೊಂದಿಗೆ ಮಾತಾನಾಡಿ, ಕೊಡಗು ಜಿಲ್ಲೆಯ ಪರಿಸರವನ್ನು ರಕ್ಷಣೆ ಮಾಡಿರುವುದರಿಂದ ಈ ಜಿಲ್ಲೆಗೆ ಅಗ್ರಸ್ಥಾನ ದೊರಕಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಸರ ಪೂರಕವಾದ ಯೋಜನೆಗಳನ್ನು ಹಮ್ಮಿಕೊಂಡು ಮುಂದಿನ‌ ಪೀಳಿಗೆಗೂ ಉತ್ತಮ ಗಾಳಿ ಸಿಕ್ಕುವಂತೆ ಮಾಡುವುದು ಎಲ್ಲರ ಕರ್ತವ್ಯ ಎಂದು ಹೇಳಿದ್ದಾರೆ.

    ಒಟ್ಟಿನಲ್ಲಿ ಮಂಜಿನ ನಗರಿ ಮಡಿಕೇರಿ ಭೂಲೋಕದ ಸ್ವರ್ಗ ಎಂಬುದು ಈ ಮೂಲಕ ಸಾಬೀತಾದಂತಿದೆ. ಉತ್ತಮ ಆರೋಗ್ಯಕ್ಕೆ ಶುದ್ಧಗಾಳಿ, ಶುದ್ಧ ನೀರು, ನಿರ್ಮಲ ವಾತಾವರಣ ಎಂಬುದನ್ನು ಚಿಕ್ಕ ಜಿಲ್ಲೆ ಕೊಡಗು ತನ್ನದಾಗಿಸಿಕೊಂಡಿರುವುದು ನಿಜಕ್ಕೂ ಸಂತಸದ ವಿಚಾರವೇ ಸರಿ. ಇದನ್ನೂ ಓದಿ: ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ GRAP-III ಜಾರಿ – ನಿಯಮ ಉಲ್ಲಂಘಿಸಿದವರಿಂದ 5 ಕೋಟಿಗೂ ಅಧಿಕ ದಂಡ ವಸೂಲಿ

  • ದೆಹಲಿ ಮಾಲಿನ್ಯಕ್ಕೆ ಕೇಂದ್ರ ಸರ್ಕಾರವೇ ಹೊಣೆ – ರಾಜಕೀಯ ಬಿಟ್ಟು ಕ್ರಮ ತೆಗೆದುಕೊಳ್ಳಲಿ: ಅತಿಶಿ

    ದೆಹಲಿ ಮಾಲಿನ್ಯಕ್ಕೆ ಕೇಂದ್ರ ಸರ್ಕಾರವೇ ಹೊಣೆ – ರಾಜಕೀಯ ಬಿಟ್ಟು ಕ್ರಮ ತೆಗೆದುಕೊಳ್ಳಲಿ: ಅತಿಶಿ

    ನವದೆಹಲಿ: ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಾದ್ಯಂತ ಹುಲ್ಲು ಸುಡುವಿಕೆ ವ್ಯಾಪಕವಾಗಿದೆ ಇದರ ವಿರುದ್ಧ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ದೆಹಲಿಯಲ್ಲಿ ವಾಯು ಮಾಲಿನ್ಯದ (Delhi Air Pollution) ಪ್ರಮಾಣ ತೀವ್ರವಾಗಿ ಏರುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅತಿಶಿ (Atishi) ಆರೋಪಿಸಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಲ್ಲು ಸುಡುವ ಬಿಕ್ಕಟ್ಟಿಗೆ ರಾಷ್ಟ್ರವ್ಯಾಪಿ ಪರಿಹಾರ ಕಂಡುಕೊಳ್ಳುವುದು ಕೇಂದ್ರ ಸರ್ಕಾರದ (Central Government) ಜವಾಬ್ದಾರಿಯಾಗಿದೆ. ಆದರೆ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಿಷ್ಕ್ರಿಯವಾಗಿದೆ. ಪಂಜಾಬ್‌ನಲ್ಲಿ ಹುಲ್ಲು ಸುಡುವುದು ನಿಯಂತ್ರಿಸಬಹುದಾದರೆ ಉಳಿದ ರಾಜ್ಯಗಳಲ್ಲಿ ಯಾಕೆ ಸಾಧ್ಯವಿಲ್ಲ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬ್ರೆಜಿಲ್‌ನಲ್ಲಿ ವೇದಘೋಷಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಗೆ ಭವ್ಯ ಸ್ವಾಗತ

    ಜನರು ಉಸಿರಾಡಲು ಕಷ್ಟಪಡುತ್ತಿದ್ದಾರೆ. ಕಳೆದ ರಾತ್ರಿ, ನನಗೆ ಹಲವಾರು ಕರೆಗಳು ಬಂದವು. ಕೆಲವರು ವಯಸ್ಸಾದ ಕುಟುಂಬ ಸದಸ್ಯರನ್ನು ಆಸ್ಪತ್ರೆಗಳಿಗೆ ಧಾವಿಸುತ್ತಿದ್ದಾರೆ, ಇತರರು ತಮ್ಮ ಮಕ್ಕಳಿಗೆ ಸ್ಟೀರಾಯ್ಡ್‌ಗಳನ್ನು ಹುಡುಕುತ್ತಿದ್ದಾರೆ. ಉತ್ತರ ಭಾರತವು ಇಂದು ಆರೋಗ್ಯ ತುರ್ತು ಪರಿಸ್ಥಿತಿ (Health Emergency) ಎದುರಿಸುತ್ತಿದೆ, ಪ್ರದೇಶದಾದ್ಯಂತ ನಗರಗಳು ‘ತೀವ್ರ’ ಮತ್ತು ‘ಅತ್ಯಂತ ಕಳಪೆ’ AQI ಮಟ್ಟವನ್ನು ದಾಖಲಿಸುತ್ತಿವೆ ಎಂದರು. ಇದನ್ನೂ ಓದಿ: ಅಧಿಕಾರ ದಾಹಕ್ಕಾಗಿ ಏನು ಮಾಡಲು ಹಿಂಜರಿಯದವರು ಅಂದ್ರೆ ಅದು ಬಿಜೆಪಿಯವರು: ಈಶ್ವರ್ ಖಂಡ್ರೆ

    ಹುಲ್ಲು ಸುಡುವಿಕೆ ಉತ್ತರ ಪ್ರದೇಶದಲ್ಲಿ 60% ನಷ್ಟು ಹೆಚ್ಚಳವಾಗಿದೆ, ಆದರೆ ಮಧ್ಯಪ್ರದೇಶವು ಪ್ರಸ್ತುತ ಅತಿ ಹೆಚ್ಚು ಹುಲ್ಲು ಸುಡುತ್ತಿದೆ ಅಲ್ಲಿ ಪ್ರತಿದಿನ 700ಕ್ಕೂ ಹೆಚ್ಚು ಘಟನೆಗಳು ವರದಿಯಾಗುತ್ತವೆ. ಕಳೆದ 6-7 ವರ್ಷಗಳಿಂದ, ದೇಶಾದ್ಯಂತ ಹುಲ್ಲು ಸುಡುವ ಘಟನೆಗಳು ಹೆಚ್ಚಾಗುತ್ತಿವೆ, ಪಂಜಾಬ್ ಹುಲ್ಲು ಸುಡುವಿಕೆ 80% ಕಡಿತವನ್ನು ಸಾಧಿಸಬಹುದಾದರೆ, ಇತರ ರಾಜ್ಯಗಳು ಏಕೆ ಸಾಧ್ಯವಿಲ್ಲ? ಉತ್ತರ ಭಾರತದಾದ್ಯಂತ ನಗರಗಳಲ್ಲಿನ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಕೇಂದ್ರ ಸರ್ಕಾರ ರಾಜಕೀಯ ಮಾಡುವುದನ್ನು ಬಿಟ್ಟು ನಿರ್ಣಾಯಕ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಮಾಲಿನ್ಯವು ರಾಜ್ಯದ ಗಡಿಗಳನ್ನು ಅಥವಾ ರಾಜಕೀಯ ಸಂಬಂಧಗಳನ್ನು ಗುರುತಿಸುವುದಿಲ್ಲ ಎಂಬುದನ್ನು ಬಿಜೆಪಿ ಮತ್ತು ಕೇಂದ್ರ ಸರ್ಕಾರ ಅರ್ಥಮಾಡಿಕೊಳ್ಳಬೇಕು, ಮಾಸ್ಕ್ ಹಂಚುವ ರಾಜಕೀಯ ಮಾಡುವುದು ಬಿಟ್ಟು ಮಾಲಿನ್ಯ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ದೇವೇಗೌಡ, ಕುಮಾರಸ್ವಾಮಿ ಯಾವತ್ತು ಕರ್ನಾಟಕಕ್ಕೆ ಅನ್ಯಾಯ ಆಗಿದೆ ಅಂತ ಮಾತಾಡಿಲ್ಲ- ಸಿಎಂ

  • ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ GRAP-III ಜಾರಿ – ನಿಯಮ ಉಲ್ಲಂಘಿಸಿದವರಿಂದ 5 ಕೋಟಿಗೂ ಅಧಿಕ ದಂಡ ವಸೂಲಿ

    ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ GRAP-III ಜಾರಿ – ನಿಯಮ ಉಲ್ಲಂಘಿಸಿದವರಿಂದ 5 ಕೋಟಿಗೂ ಅಧಿಕ ದಂಡ ವಸೂಲಿ

    ನವದೆಹಲಿ: ವಾಯು ಮಾಲಿನ್ಯದಿಂದ ದೆಹಲಿ (Delhi Air Pollution) ತತ್ತರಿಸಿದೆ. ಸತತ 4ನೇ ದಿನವೂ ಗಾಳಿಯ ಗುಣಮಟ್ಟ ವಿಪರೀತವಾಗಿ ಹಾಳಾಗಿದೆ. ಎಷ್ಟರ ಮಟ್ಟಿಗೆ ಅಂದ್ರೆ ಇಲ್ಲಿನ ಪ್ರಜೆಗಳು ಏಕಕಾಲದಲ್ಲಿ 4 ಸಿಗರೇಟ್‌ಗೆ ಸಮಾನವಾದ ಹೊಗೆಯನ್ನು ಸೇವನೆ ಮಾಡ್ತಿದ್ದಾರೆ. ಪರಿಣಾಮ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಿದೆ. ಮಾಸ್ಕ್ ಧರಿಸಿ.. ವಾಕಿಂಗ್ ಮಾಡ್ಬೇಡಿ.. ಉಗುರುಬೆಚ್ಚಗಿನ ನೀರು ಕುಡೀರಿ ಎಂದು ವೈದ್ಯರು ಸೂಚಿಸಿದ್ದಾರೆ.

    ಇನ್ನೂ ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರದಿಂದ (Delhi Government) ಮೂರನೇ ಹಂತದ ಕ್ರಮ ಜಾರಿಗೊಳಿಸಿದ್ದು, BS 3 ಪೆಟ್ರೋಲ್, BS IV ಡೀಸೇಲ್ ವಾಹನಗಳ ಸಂಚಾರಕ್ಕೆ ತಡೆ ನೀಡಲಾಗಿದೆ. ಗಡಿ ಪ್ರದೇಶಗಳಲ್ಲಿ ತಪಾಸಣೆ ತೀವ್ರಗೊಳಿಸಿದ್ದು, ಅಂತರರಾಜ್ಯ ಬಸ್‌ಗಳನ್ನು ಸಹ ಪರಿಶೀಲಿಸಲಾಗುತ್ತಿದೆ.

    ಇದರ ಹೊರತಾಗಿಯೂ ನಿಯಮವನ್ನು ಗಾಳಿಗೆ ತೂರಿದವರಿಗೆ ಅಧಿಕಾರಿಗಳು ದಂಡದ ಬಿಸಿ ಮುಟ್ಟಿಸಿದ್ದಾರೆ. ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಸುಮಾರು 550 ಚಲನ್‌ ವಿಧಿಸಿದ್ದು, 1 ಕೋಟಿ ರೂ.ಗಿಂತಲೂ ಅಧಿಕ ದಂಡ ವಿಧಿಸಲಾಗಿದೆ. ಇದರೊಂದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUCC) ಹೊಂದಿರದಿದ್ದಕ್ಕಾಗಿ 4,855 ವಾಹನಗಳಿಗೆ ಚಲನ್‌ ನೀಡಿದ್ದು, ಒಟ್ಟು 4.8 ಕೋಟಿ ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ʻಬ್ಯಾಗ್‌ ಗದ್ದಲʼದ ನಡುವೆ ಅಮರಾವತಿಯಲ್ಲಿ ರಾಹುಲ್‌ ಗಾಂಧಿ ಹೆಲಿಕಾಪ್ಟರ್‌ ತಪಾಸಣೆb

    ಮಾನ್ಯ ಮಾಲಿನ್ಯ ನಿಯಂತ್ರಣ (PUC) ಪ್ರಮಾಣಪತ್ರ ಹೊಂದಿರದ ವಾಹನ ಚಾಲಕರಿಗೆ 10,000 ರೂ. ದಂಡ ವಿಧಿಸಲಾಗುತ್ತದೆ. ಹಾಗಾಗಿ ನಗರದ ಪೂರ್ವ, ಮಧ್ಯ ಮತ್ತು ಉತ್ತರ ವ್ಯಾಪ್ತಿಯಲ್ಲಿ BS-III ಪೆಟ್ರೋಲ್‌ ಮತ್ತು BS-IV ಡೀಸೇಲ್‌ ವಾಹನಗಳಿಗೆ ಒಟ್ಟು 293 ಚಲನ್‌, ಪಿಯುಸಿಸಿ ಸರ್ಟಿಫಿಕೇಟ್ ಇಲ್ಲದ ಕಾರಣಕ್ಕೆ ಒಟ್ಟು 2,404 ಚಲನ್‌ಗಳನ್ನು ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್ ದೂರು – ನಡ್ಡಾ, ಖರ್ಗೆಯಿಂದ ಸ್ಪಷ್ಟನೆ ಕೇಳಿದ ಚುನಾವಣಾ ಆಯೋಗ

    ಎಲ್ಲೆಲ್ಲಿ ಎಷ್ಟು ಚಲನ್‌ ವಿತರಣೆ?
    GRAP -III ನಿಯಮ ಉಲ್ಲಂಘಿಸಿದವರ ವಿರುದ್ಧ ನವದೆಹಲಿ ವ್ಯಾಪ್ತಿಯಲ್ಲಿ 63 ಚಲನ್‌, ಪಶ್ಚಿಮ ವಲಯದಲ್ಲಿ 73 ಮತ್ತು ದಕ್ಷಿಣ ವಲಯದಲ್ಲಿ 121 ಚಲನ್‌, ನವದೆಹಲಿ, ದಕ್ಷಿಣ ಮತ್ತು ಪಶ್ಚಿಮ ಶ್ರೇಣಿಗಳು ಪಿಯುಸಿಸಿ ಹೊಂದಿಲ್ಲದ ಕಾರಣ ಕ್ರಮವಾಗಿ 322, 894 ಮತ್ತು 1,235 ಚಲನ್‌ಗಳನ್ನು ವಿತರಿಸಲಾಗಿದೆ. ಸಂಚಾರ ಪೊಲೀಸರ ಮೂರು ವ್ಯಾಪ್ತಿಯಲ್ಲಿ ಶುಕ್ರವಾರ ಸುಮಾರು 3,000 ವಾಹನಗಳ ತಪಾಸಣೆ ನಡೆಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಸಂಚಾರ) ರಾಜೀವ್ ಕುಮಾರ್ ರಾವಲ್ ತಿಳಿಸಿದ್ದಾರೆ.

  • ಉಸಿರುಗಟ್ಟಿಸುತ್ತಿದೆ ದೆಹಲಿ – ಮಾಲಿನ್ಯ ನಿಯಂತ್ರಣಕ್ಕೆ ಶುಕ್ರವಾರದಿಂದ GRAP-III ನಿರ್ಬಂಧ ಜಾರಿ

    ಉಸಿರುಗಟ್ಟಿಸುತ್ತಿದೆ ದೆಹಲಿ – ಮಾಲಿನ್ಯ ನಿಯಂತ್ರಣಕ್ಕೆ ಶುಕ್ರವಾರದಿಂದ GRAP-III ನಿರ್ಬಂಧ ಜಾರಿ

    ನವದೆಹಲಿ: ಇಡೀ ವಿಶ್ವದಲ್ಲೇ ಮಾಲಿನ್ಯಯುತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ದೆಹಲಿ (Delhi Air Pollution), ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯು ಗುಣಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಜನ ಉಸಿರಾಡುವುದಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ.

    ಈ ಹಿನ್ನೆಲೆಯಲ್ಲಿ ವಾಯು ಗುಣಮಟ್ಟ ನಿರ್ವಹಣೆಯ ಆಯೋಗವು (CAQM) ಮಾಲಿನ್ಯ ನಿಯಂತ್ರಣಕ್ಕೆ 3ನೇ ಹಂತದ ಕ್ರಮ (ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP-III) ಜಾರಿಗೆ ಮುಂದಾಗಿದೆ. ನವೆಂಬರ್‌ 15ರ ಶುಕ್ರವಾರದಿಂದಲೇ ಈ ಕಟ್ಟುನಿಟ್ಟಿನ ಕ್ರಮ ಜಾರಿಗೆ ಬರಲಿವೆ.

    ಏನೇನು ಕ್ರಮ ?
    ಜಿಆರ್‌ಎಪಿ-3 (GRAP-III) ಜಾರಿಯಲ್ಲಿರುವವರೆಗೆ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಾಲೆಯಿಂದ ವಿನಾಯಿತಿ ನೀಡಲಾಗುತ್ತಿದ್ದು, ಆನ್‌ಲೈನ್ ಮೂಲಕ ತರಗತಿ ನಡೆಸಲು ಸೂಚನೆ ನೀಡಲಾಗಿದೆ. BS-3 ಪೆಟ್ರೋಲ್ ಡಿಸೇಲ್ ವಾಹನಗಳ ಸಂಚಾರಕ್ಕೆ ತಡೆ ನೀಡಲಾಗುತ್ತದೆ. ಸಿಎನ್‌ಜಿ, ಇವಿ ಸೇರಿದಂತೆ ಅಂತರರಾಜ್ಯಗಳ BS4 ಡಿಸೇಲ್ ಬಸ್‌ಗಳಿಗೆ ಮಾತ್ರ ದೆಹಲಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ತುರ್ತು ಅಲ್ಲದ ನಿರ್ಮಾಣ ಮತ್ತು ಕಟ್ಟಡ ತೆರವು ಕಾರ್ಯಕ್ಕೆ ತಡೆ ನೀಡಲಾಗಿದ್ದು, ಸರ್ಕಾರಿ ಕಾಮಗಾರಿ, ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಟ್ಟಡಗಳ ಕಾಮಗಾರಿಗೆ ಮಾತ್ರ ಅನುಮತಿ ನೀಡಲಾಗಿದೆ. ಜೊತೆಗೆ ರಸ್ತೆಗಳಲ್ಲಿ ನೀರು ಚಿಮುಕಿಸುವುದನ್ನು ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ. ದೆಹಲಿ ಎನ್‌ಸಿಎಆರ್‌ನಲ್ಲಿ 5ನೇ ತರಗತಿವರೆಗಿನ ಶಾಲೆಗಳನ್ನು ಮುಚ್ಚಲು ಆದೇಶ ನೀಡಲಾಗಿದೆ. ಮುಖ್ಯವಾಗಿ ದೆಹಲಿ ನಿವಾಸಿಗಳು ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಬಳಕೆಗೆ ಆದ್ಯತೆ ನೀಡಬೇಕು ಎಂದು ಸರ್ಕಾರ ಕಟ್ಟುನಿಟ್ಟಾಗಿ ಹೇಳಿದೆ.

    ಅಪಾಯ ಮಟ್ಟ ಮೀರಿದ ಮಾಲಿನ್ಯ:
    ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, ರಾಜಧಾನಿ ಭಾಗದ ಹಲವು ಪ್ರದೇಶಗಳಲ್ಲಿ ಎಕ್ಯೂಐ ಪ್ರಮಾಣ 450 ದಾಟಿದೆ. ಆನಂದ ವಿಹಾರ್, ಅಶೋಕ್ ವಿಹಾರ್, ಬವಾನಾ, ದ್ವಾರಕಾ, ಜಹಾಂಗೀರ್‌ಪುರಿ, ಮುಂಡ್ಕ, ನಜಾಫ್‌ಗಡ, ಲಾಜ್‌ಪತ್ ನಗರ್, ಪತ್ಪರ್‌ಗಂಜ್, ಪಂಜಾಬಿ ಬಾಗ್, ಆರ್‌ಕೆ ಪುರಂ, ರೋಹಿಣಿ, ವಿವೇಕ್ ವಿಹಾರ್ ಮತ್ತು ವಾಜಿರ್‌ಪುರ ಪ್ರದೇಶಗಳನ್ನು ಎಕ್ಯೂಐ ಸರಾಸರಿ ‘ತೀವ್ರ’ ಸ್ವರೂಪದ ವರ್ಗದಲ್ಲಿ ಗುರುತಿಸಲಾಗಿದ್ದು, ಬೆಳಿಗ್ಗೆ 6 ಗಂಟೆ ಸುಮಾರಿಗೆ 450ಕ್ಕಿಂತ ಅಧಿಕವಿತ್ತು.

    ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, ಎಕ್ಯೂಐ ಮಟ್ಟವು ಶೂನ್ಯದಿಂದ 50 ರಷ್ಟಿದ್ದರೆ ಉಸಿರಾಟಕ್ಕೆ ಯೋಗ್ಯ ಗಾಳಿ, 51 ರಿಂದ 100 ರಷ್ಟಿದ್ದರೆ ಸಮಾಧಾನಕರ, 101 ರಿಂದ 200 ರಷ್ಟಿದ್ದರೆ ಸಾಧಾರಣ, 201 ರಿಂದ 300 ರಷ್ಟಿದ್ದರೆ ಕಳಪೆ ಹಾಗೂ 301 ರಿಂದ 400 ರಷ್ಟಿದ್ದರೆ ಅತ್ಯಂತ ಕಳಪೆ, 401 ರಿಂದ 450ರಷ್ಟು ಕಂಡು ಬಂದರೆ ತೀವ್ರ ಕಳಪೆ ಹಾಗೂ 450ಕ್ಕಿಂತ ಹೆಚ್ಚಾದರೆ ಅತ್ಯಂತ ಅಪಾಯಕಾರಿ ಎಂದು ವರ್ಗೀಕರಿಸಲಾಗಿದೆ.

    300ಕ್ಕೂ ಅಧಿಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ:
    ಗುರುವಾರ (ನ.14) ಬೆಳಿಗ್ಗೆ ದಟ್ಟನೆಯ ಮಂಜು ಆವರಿಸಿದ್ದನ್ನು ಕಂಡು ದೆಹಲಿಯ ಜನ ಕಂಗಾಲಾಗಿದ್ದಾರೆ. ವಾಯು ಗುಣಮಟ್ಟ ಸೂಚ್ಯಂಕದಲ್ಲಿ (AIQ) ಮಟ್ಟ ಅಪಾಯಕಾರಿ ಹಂತದತ್ತ ತಲುಪುತ್ತಿದೆ. ಮುಂಜಾನೆ AQI 452ರ ಗಡಿ ದಾಟಿದೆ. ಇದರಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Delhi Airport) ಗೋಚರತೆ ಕಡಿಮೆಯಾಗಿದ್ದು, 300 ಅಧಿಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಫ್ಲೈಟ್‌ರಾಡಾರ್ ತಿಳಿಸಿದೆ.

  • ದೆಹಲಿಯಲ್ಲಿ ವಾಯು ಮಾಲಿನ್ಯ; 300ಕ್ಕೂ ಅಧಿಕ ವಿಮಾನಗಳ ಹಾರಾಟ ವ್ಯತ್ಯಯ

    ದೆಹಲಿಯಲ್ಲಿ ವಾಯು ಮಾಲಿನ್ಯ; 300ಕ್ಕೂ ಅಧಿಕ ವಿಮಾನಗಳ ಹಾರಾಟ ವ್ಯತ್ಯಯ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ (Delhi Air Pollution) ಮುಂದುವರಿದಿದೆ. ಇಂದು (ಗುರುವಾರ) ಮುಂಜಾನೆ AQI 452ರ ಗಡಿ ದಾಟಿದ್ದು ದಟ್ಟಮಂಜಿನಂತಹ ಹೊಗೆ ಆಚರಿಸಿಕೊಂಡಿತ್ತು. ಫ್ಲೈಟ್‌ರಾಡಾರ್ ಪ್ರಕಾರ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Delhi Airport) ಗೋಚರತೆ ಕಡಿಮೆಯಾಗಿದೆ, ಇದರಿಂದಾಗಿ 300 ಅಧಿಕ ವಿಮಾನಗಳು ವಿಳಂಬವಾಗಿವೆ.

    ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, ರಾಜಧಾನಿ ಪ್ರದೇಶದ ಹಲವಾರು ಪ್ರದೇಶಗಳಲ್ಲಿ AQI 450 ಕ್ಕಿಂತ ಹೆಚ್ಚು ದಾಖಲಾಗಿದೆ. ಆನಂದ್ ವಿಹಾರ್, ಅಶೋಕ್ ವಿಹಾರ್, ಬವಾನಾ, ದ್ವಾರಕಾ, ಜಹಾಂಗೀರ್ಪುರಿ, ಮುಂಡ್ಕಾ, ನಜಾಫ್ಗಢ್, ಲಜಪತ್ ನಗರ, ಪಟ್ಪರ್ಗಂಜ್, ಪಂಜಾಬಿ ಬಾಗ್, ಆರ್‌ಕೆ ಪುರಂ, ರೋಹಿಣಿ, ವಿವೇಕ್ ವಿಹಾರ್, ಮತ್ತು ವಜೀರ್‌ಪುರ ದೆಹಲಿಯ ಹಲವಾರು ಪ್ರದೇಶಗಳಲ್ಲಿ ಸೇರಿವೆ.

    ಹದಗೆಡುತ್ತಿರುವ ಗಾಳಿಯ ಗುಣಮಟ್ಟದ ಕುರಿತು ಮಾತನಾಡಿದ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಅತಿಶಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು, ನಾವು ಕರ್ತವ್ಯ ಪಥದಲ್ಲಿ ನಿಂತಿದ್ದೇವೆ ಇಲ್ಲಿ AQI 474 ತಲುಪಿದೆ. ನಮಗೆ ಇಂಡಿಯಾ ಗೇಟ್ ಅನ್ನು ಸಹ ನೋಡಲಾಗುತ್ತಿಲ್ಲ, ಎಎಪಿ ಸರ್ಕಾರದ ಅಸಮರ್ಥತೆ ಇದಕ್ಕೆ ಕಾರಣ ಎಂದು ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಯನಾಡ್‌ನಿಂದ ದೆಹಲಿಗೆ ಹಿಂದಿರುಗಿದ ಬಗ್ಗೆ ಮಾತನಾಡಿ, ದೆಹಲಿಗೆ ಆಗಮಿಸಿದ್ದು `ಗ್ಯಾಸ್ ಚೇಂಬರ್‌ಗೆ ಪ್ರವೇಶಿಸಿದ ಅನುಭವ’ ಎಂದು ಹೇಳಿದರು. ವಯನಾಡಿನ ವಾಯು ಗುಣಮಟ್ಟ ಸೂಚ್ಯಂಕವು 35% ರಷ್ಟಿದ್ದರೆ, ದೆಹಲಿಯ ಮಾಲಿನ್ಯವು ಮರುಕಳಿಸಲಾಗದ ಬಿಕ್ಕಟ್ಟಾಗಿದೆ ಎಂದು ವಿವರಿಸಿದರು. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ಸಾಮೂಹಿಕ ಕ್ರಮಕ್ಕೆ ಕರೆ ನೀಡಿದರು.

    ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರಾಲಜಿಯು ನವೆಂಬರ್ 15 ರಿಂದ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಸ್ವಲ್ಪ ಸುಧಾರಣೆ ಕಂಡುಬರುವ ಮುನ್ಸೂಚನೆಯನ್ನು ಒದಗಿಸಿದೆ, ವಾರಾಂತ್ಯದಲ್ಲಿ ಮತ್ತಷ್ಟು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ.

  • ಪಾಕ್‌ ಕೈಗಾರಿಕೆಗಳ ಬ್ಯಾನ್‌ ಮಾಡ್ಬೇಕೆ: ದಿಲ್ಲಿ ವಾಯುಮಾಲಿನ್ಯಕ್ಕೆ ಪಾಕ್‌ ಕಾರಣ ಎಂದ ಯುಪಿ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ

    ಪಾಕ್‌ ಕೈಗಾರಿಕೆಗಳ ಬ್ಯಾನ್‌ ಮಾಡ್ಬೇಕೆ: ದಿಲ್ಲಿ ವಾಯುಮಾಲಿನ್ಯಕ್ಕೆ ಪಾಕ್‌ ಕಾರಣ ಎಂದ ಯುಪಿ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ

    ನವದೆಹಲಿ: ಭಾರತದ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯಕ್ಕೆ ಪಾಕಿಸ್ತಾನ ಕಾರಣ ಎಂದು ಆಪಾದಿಸಿದ ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಪಾಕಿಸ್ತಾನ ಕೈಗಾರಿಕೆಗಳ ನಿಷೇಧವನ್ನು ನೀವು ಬಯಸುತ್ತೀರಾ ಎಂದು ಯುಪಿ ಸರ್ಕಾರವನ್ನು ಸುಪ್ರೀಂ ಪ್ರಶ್ನಿಸಿದೆ.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಳಕ್ಕೆ ಉತ್ತರ ಪ್ರದೇಶದ ಕೈಗಾರಿಕೆಗಳು ಕಾರಣವಲ್ಲ. ಪಾಕಿಸ್ತಾನದಿಂದ ಬರುತ್ತಿರುವ ಕಲುಷಿತ ಗಾಳಿಯಿಂದ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಪೀಠವು, ಯುಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಹಾಗಾದರೆ ನೀವು, ಪಾಕಿಸ್ತಾನದ ಕೈಗಾರಿಕೆಗಳ ನಿಷೇಧವನ್ನು ಬಯಸುತ್ತೀರಾ ಎಂದು ಖಾರವಾಗಿ ಪ್ರಶ್ನಿಸಿದೆ. ಇದನ್ನೂ ಓದಿ: ಡಿ.4 ರಂದು ಆಂಧ್ರಪ್ರದೇಶ, ಒಡಿಶಾಗೆ ಅಪ್ಪಳಿಸಲಿರುವ ಜವಾದ್ ಚಂಡಮಾರುತ

    ಯುಪಿ ಸರ್ಕಾರದ ಪರವಾಗಿ ಹಿರಿಯ ವಕೀಲ ರಂಜಿತ್‌ ಕುಮಾರ್‌ ವಾದ ಮಂಡಿಸಿ, ಪಾಕಿಸ್ತಾನದಿಂದ ಬರುತ್ತಿರುವ ಮಾಲಿನ್ಯಕಾರಕ ಗಾಳಿಯು ದೆಹಲಿಯ ವಾಯು ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ಉತ್ತರ ಪ್ರದೇಶದಲ್ಲಿ ನಡೆಸಿದ 8 ಗಂಟೆಗಳ ಕಾರ್ಯಾಚರಣೆಯಿಂದ ಕಬ್ಬು ಮತ್ತು ಹಾಲಿನ ಉದ್ಯಮಗಳ ಮೇಲೆ ಪರಿಣಾಮ ಉಂಟಾಗಿದೆ ಎಂದು ಪ್ರತಿಪಾದಿಸಿದ್ದರು. ಈ ವೇಳೆ ವಕೀಲರ ವಿರುದ್ಧ ಗರಂ ಆದ ಸಿಜೆಐ ಎನ್‌.ವಿ.ರಮಣ ನೇತೃತ್ವದ ಪೀಠ, ಮೊದಲು ಆಯೋಗದ ಮೊರೆ ಹೋಗಿ, ವಾಯುಮಾಲಿನ್ಯದ ಪ್ರಮುಖ ಸಮಸ್ಯೆಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಹೇಳಿ ಎಂದು ಸೂಚಿಸಿತು.

    ವಾಯುಗುಣಮಟ್ಟ ನಿರ್ವಹಣೆ ಆಯೋಗವು ರಾಜಧಾನಿಯಲ್ಲಿನ ವಾಯುಮಾಲಿನ್ಯ ಪರಿಸ್ಥಿತಿಯನ್ನು ಪರಿಶೀಲಿಸಲು ಕಾರ್ಯಪಡೆಯೊಂದನ್ನು ರಚಿಸಿದೆ. ಈ ಹಿನ್ನೆಲೆಯಲ್ಲಿ, ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವನ್ನು ನಿಯಂತ್ರಿಸಲು ಕೆಲವು ಕ್ರಮಗಳನ್ನು ಕೈಗೊಳ್ಳುವಂತೆ ಆಯೋಗಕ್ಕೆ ಸುಪ್ರೀಂ ಕೋರ್ಟ್‌ 24 ಗಂಟೆಗಳ ಗಡುವು ನೀಡಿದೆ. ಇದನ್ನೂ ಓದಿ: ಕೇರಳ ವಿದ್ಯಾರ್ಥಿಗಳ ಬೀದಿರಂಪಾಟ – ಪೊಲೀಸರ ಮೇಲೆ ಹಲ್ಲೆ

    ಪರಿಸರ ಹೋರಾಟಗಾರ ಆದಿತ್ಯ ದುಬೆ ಮತ್ತು ಕಾನೂನು ವಿದ್ಯಾರ್ಥಿ ಅಮನ್‌ ಬಂಕಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಸಣ್ಣ ಮತ್ತು ಅತಿ ಸಣ್ಣ ಕೃಷಿ ವಲಯದ ರೈತರಿಗೆ ಹುಲ್ಲು ತೆಗೆಯುವ ಯಂತ್ರಗಳನ್ನು ಉಚಿತವಾಗಿ ಒದಗಿಸಲು ನಿರ್ದೇಶನ ನೀಡುವಂತೆ ಕೋರಿ ದುಬೆ ಅವರು ಸುಪ್ರೀಂಗೆ ಮನವಿ ಮಾಡಿದ್ದಾರೆ.

  • ಕೃಷಿ ತ್ಯಾಜ್ಯ ಸುಟ್ಟಿದ್ದಕ್ಕೆ ಪಂಜಾಬಿನಲ್ಲಿ 84 ರೈತರ ಬಂಧನ

    ಕೃಷಿ ತ್ಯಾಜ್ಯ ಸುಟ್ಟಿದ್ದಕ್ಕೆ ಪಂಜಾಬಿನಲ್ಲಿ 84 ರೈತರ ಬಂಧನ

    ನವದೆಹಲಿ: ಮಿತಿಮೀರಿದ ವಾಯುಮಾಲಿನ್ಯ ಸಂಬಂಧ ದೆಹಲಿ ಸಮೀಪದ ಮೂರು ರಾಜ್ಯಗಳ ಕಾರ್ಯದರ್ಶಿಗಳಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಬೆನ್ನಲ್ಲೇ ಇಂದು ಪಂಜಾಬ್‌ನಲ್ಲಿ 84 ರೈತರನ್ನು ಬಂಧಿಸಲಾಗಿದೆ.

    ಪ್ರತಿ ಚಳಿಗಾಲದಲ್ಲೂ ಕೊಯ್ಲಿನ ನಂತರ ರೈತರು ಬೆಳೆ ಸುಡುವುದರಿಂದ ವಿಷಕಾರಿ ಹೊಗೆ ದೆಹಲಿಯನ್ನು ಆವರಿಸುತ್ತದೆ. ಇದು ವಾಹನಗಳು ಹಾಗೂ ಕಾರ್ಖಾನೆಯ ಹೊಗೆಯೊಂದಿಗೆ ಸೇರಿಕೊಳ್ಳುತ್ತದೆ. ಇದೇ ದೆಹಲಿಯನ್ನು ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯನ್ನಾಗಿ ಪರಿವರ್ತನೆಗೆ ಕಾರಣವಾಗುತ್ತದೆ.

    ಬುಧವಾರ ಸುಪ್ರೀಂ ಕೋರ್ಟ್ ಈ ಕುರಿತು ಅಧಿಕಾರಿಗಳಿಗೆ ಚಾಟಿ ಬೀಸಿ ರೈತರಲ್ಲಿ ಕೃಷಿ ತ್ಯಾಜ್ಯ ಸುಡದಂತೆ ಸೂಚಿಸಿತ್ತು. ಆದರೂ ಸಹ ಹರ್ಯಾಣ, ಪಂಜಾಬ್, ಉತ್ತರ ಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲಿ ರೈತರು ಕೃಷಿ ತ್ಯಾಜ್ಯವನ್ನು ಸುಡುತ್ತಿದ್ದಾರೆ.

    ಕಳೆದ ಮೂರು ದಿನಗಳಲ್ಲಿ ಪಂಜಾಬ್‌ನಲ್ಲಿ 17 ಸಾವಿರಕ್ಕೂ ಹೆಚ್ಚು ಕೃಷಿ ಜಮೀನುಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬುಧವಾರ ಒಂದೇ ದಿನ 4,741 ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪಂಜಾಬಿನ ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಕಾನೂನು ಉಲ್ಲಂಘಿಸಿದ್ದಕ್ಕಾಗಿ 84ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. 174 ರೈತರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

    ಪಂಜಾಬ್ ಮತ್ತು ಹರ್ಯಾಣ ಪ್ರತಿ ವರ್ಷ ಸುಮಾರು 18 ದಶಲಕ್ಷ ಟನ್ ಅಕ್ಕಿ ಉತ್ಪಾದಿಸುವ ಪ್ರಮುಖ ರಾಜ್ಯಗಳಾಗಿದ್ದು, ಕೇವಲ ಈ ಎರಡು ರಾಜ್ಯಗಳಲ್ಲಿ 20 ದಶಲಕ್ಷ ಟನ್ ಕೃಷಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣವನ್ನು ಸುಡಲಾಗುತ್ತದೆ. ಈ ವರ್ಷ ಸೆಪ್ಟೆಂಬರ್ ಅಂತ್ಯದ ವೇಳೆಗೆ ಎರಡೂ ರಾಜ್ಯಗಳಲ್ಲಿ 48 ಸಾವಿರಕ್ಕೂ ಹೆಚ್ಚು ಕೃಷಿ ಗದ್ದೆಗಳಿಗೆ ಬೆಂಕಿ ಹಚ್ಚಲಾಗಿದೆ. 2018ರಲ್ಲಿ 30 ಸಾವಿರ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿತ್ತು. ಈ ಬಾರಿ ಭಾರೀ ಏರಿಕೆ ಕಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸುಪ್ರೀಂ ಕೋರ್ಟ್ ನಿನ್ನೆಯಷ್ಟೇ ಯಾವುದೇ ದೇಶದಲ್ಲಿ ಕೃಷಿ ತ್ಯಾಜ್ಯ ಸುಡಲು ಸರ್ಕಾರಗಳು ಅನುಮತಿ ಕೊಟ್ಟಿಲ್ಲ. ವಾಯುಮಾಲಿನ್ಯ ತಡೆ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸದ ಅಧಿಕಾರಿಗಳು, ರೈತರ ಮೇಲೆ ಗೂಬೆ ಕೂರಿಸ್ತಿದ್ದೀರಾ? ನಿಮಗೆ ನಾಚಿಕೆ ಆಗುದಿಲ್ಲವೇ ಎಂದು ಪ್ರಶ್ನಿಸಿ ಮೂರು ರಾಜ್ಯಗಳ ಕಾರ್ಯದರ್ಶಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು.

    ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ. ಈ ಸಾಧನೆಗೆ ಗರ್ವ ಪಡ್ತಿದ್ದೀರಾ? ಅಧಿಕಾರಿಗಳನ್ನು ಶಿಕ್ಷಿಸುವ ಸಮಯ ಬಂದಿದೆ ಎಂದು ಹೇಳಿ ಎಚ್ಚರಿಸಿತ್ತು. ಜೊತೆಗೆ, ಮೂರು ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಸುಡದಂತೆ ಆದೇಶಿಸಿತ್ತು.

    ಇದು ಕೋಟಿ ಜನರ ಬದುಕಿನ ಪ್ರಶ್ನೆ. ಈ ರೀತಿ ನಿರ್ಲಕ್ಷ್ಯದಿಂದಿರುವುದು ಸರಿಯೇ? ನಿಮ್ಮ ವೈಫಲ್ಯ ನಿಮಗೆ ಗೊತ್ತಾಗುತ್ತಿಲ್ಲವೇ? ನಿಮ್ಮನ್ನೂ ನಾವು ಈ ಕೂಡಲೇ ಅಮಾನತುಗೊಳಿಸಬಹುದು ಎಂದು ಕಾರ್ಯದರ್ಶಿಗಳಿಗೆ ಎಚ್ಚರಿಕೆ ನೀಡಿತ್ತು.