Tag: Defense Minister

  • ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು – ನಮ್ಮ ದೇಶ ದಿವಾಳಿಯಾಗಿದೆ ಎಂದ ರಕ್ಷಣಾ ಸಚಿವ

    ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು – ನಮ್ಮ ದೇಶ ದಿವಾಳಿಯಾಗಿದೆ ಎಂದ ರಕ್ಷಣಾ ಸಚಿವ

    ಇಸ್ಲಾಮಾಬಾದ್: ನಗದು ಕೊರತೆಯಿಂದ ಬಳಲುತ್ತಿರುವ ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟನ್ನು (Pakistan economic crisis) ಎದುರಿಸಲು ಹೆಣಗಾಡುತ್ತಿರುವ ನಡುವೆಯೇ ಇದೀಗ ಅಲ್ಲಿನ ರಕ್ಷಣಾ ಸಚಿವರು (Defense Minister) ಪಾಕಿಸ್ತಾನ ದಿವಾಳಿ (Bankrupt) ರಾಷ್ಟ್ರವಾಗಿದೆ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.

    ಶನಿವಾರ ಸಿಯಾಲ್‌ಕೋಟ್‌ನಲ್ಲಿ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif), ನಾವೀಗ ದಿವಾಳಿಯಾಗಿರುವ ದೇಶದಲ್ಲಿ ವಾಸಿಸುತ್ತಿದ್ದೇವೆ. ಈ ಸ್ಥಿತಿಗೆ ಪ್ರತಿಯೊಬ್ಬರೂ ಕಾರಣರು. ಪಾಕಿಸ್ತಾನದ ಸಮಸ್ಯೆಗೆ ಪಾಕಿಸ್ತಾನವೇ ಪರಿಹಾರ ಕಂಡುಕೊಳ್ಳಬೇಕು ಎಂದಿದ್ದಾರೆ.

    ಪಾಕಿಸ್ತಾನ ಈಗಾಗಲೇ ದಿವಾಳಿಯಾಗಿದೆ. ನಾವು ದಿವಾಳಿಯಾಗಿರುವ ದೇಶದಲ್ಲಿ ವಾಸಿಸುತ್ತಿದ್ದೇವೆ. ಪಾಕಿಸ್ತಾನದ ಸಮಸ್ಯೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಬಳಿ ಪರಿಹಾರವಿಲ್ಲ. ನಮ್ಮ ಸಮಸ್ಯೆಗಳಿಗೆ ನಮ್ಮ ದೇಶದೊಳಗೆಯೇ ಪರಿಹಾರವಿದೆ. ಪಾಕಿಸ್ತಾನದಲ್ಲಿ ಕಾನೂನು ಹಾಗೂ ಸಂವಿಧಾನವನ್ನು ಅನುಸರಿಸದಿರುವುದರಿಂದ ಆರ್ಥಿಕ ಅವ್ಯವಸ್ಥೆ ಉಂಟಾಗಿದೆ. ಈ ಪರಿಸ್ಥಿತಿಗೆ ಅಧಿಕಾರಶಾಹಿ ಹಾಗೂ ರಾಜಕಾರಣಿಗಳು ಸೇರಿದಂತೆ ಎಲ್ಲರೂ ಕಾರಣರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಜಪಾನ್ ಮೇಲೆ ಪರೀಕ್ಷಾರ್ಥ ಖಂಡಾಂತರ ಕ್ಷಿಪಣಿ ಹಾರಿಸಿದ ಉ. ಕೊರಿಯಾ – ಅಮೆರಿಕ, ದ. ಕೊರಿಯಾಗೆ ಎಚ್ಚರಿಕೆ

    ತೀವ್ರ ಆರ್ಥಿಕ ಕುಸಿತ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಕಳೆದ ವಾರ ಹಣದುಬ್ಬರ ಶೇ.38.4 ಕ್ಕೆ ಏರಿಕೆಯಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವುದು ಮುಂದುವರಿಯುತ್ತಿರುವುದರಿಂದ ಒಂದೇ ವಾರದಲ್ಲಿ ಶೇ.38.4 ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಕಾರಿನಲ್ಲಿ ಹೋಗುತ್ತಿದ್ದಾಗ ತನ್ನ ಅಜ್ಜಿಗೆ ಗುಂಡು ಹಾರಿಸಿದ 6ರ ಬಾಲಕಿ – ವೃದ್ಧೆ ಸಾವು

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಂಗ್ ಕಮಾಂಡರ್ ಅಭಿನಂದನ್‍ರನ್ನ ಭೇಟಿ ಮಾಡಿದ ರಕ್ಷಣಾ ಸಚಿವೆ

    ವಿಂಗ್ ಕಮಾಂಡರ್ ಅಭಿನಂದನ್‍ರನ್ನ ಭೇಟಿ ಮಾಡಿದ ರಕ್ಷಣಾ ಸಚಿವೆ

    ನವದೆಹಲಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ವಿಂಗ್ ಕಮಾಂಡರ್ ಅಭಿನಂದನ್‍ರನ್ನು ಭೇಟಿ ಮಾಡಿದರು.

    ತನ್ನ ಧೈರ್ಯ ಹಾಗೂ ಘನತೆಯಿಂದ ಭಾರತೀಯರ ಮನಗೆದ್ದ ಅಭಿನಂದನ್ ಅವರು ವಾಯುಪಡೆಯ ಕೇಂದ್ರದಲ್ಲಿ ವೈದ್ಯಕೀಯ ಸೇವೆ ಸಂದರ್ಭದಲ್ಲಿ ಭೇಟಿ ಮಾಡಿದ್ದರು. ಈ ವೇಳೆ ಶತ್ರು ರಾಷ್ಟ್ರದಲ್ಲಿದ್ದ 60 ಗಂಟೆಗಳ ಅವಧಿಯಲ್ಲಿ ನಡೆದ ಘಟನೆಗಳ ಬಗ್ಗೆ ಮಾಹಿತಿ ನೀಡಿದರು ಎನ್ನಲಾಗಿದೆ.

    ಇದೇ ವೇಳೆ ದೇಶದ ಜನತೆ ನಿಮ್ಮನ್ನ ಕಂಡು ಹೆಮ್ಮೆ ಪಡುತ್ತಿದೆ ಎಂದು ಸಚಿವರು ಅಭಿನಂದನ್ ಅವರಿಗೆ ತಿಳಿಸಿದ್ದಾರೆ. ಇಬ್ಬರ ನಡುವಿನ ಭೇಟಿ ಸಂದರ್ಭದ ಫೋಟೋದಲ್ಲಿ ಅಭಿನಂದನ್ ಹಾಗೂ ಸಚಿವೆ ಮಾತುಕತೆ ನಡೆಸುತ್ತಿರುವುದನ್ನು ಕಾಣಬಹುದಾಗಿದೆ.

    ಶುಕ್ರವಾರ ರಾತ್ರಿ ಪಾಕ್ ಸೈನಿಕರು ಭಾರತಕ್ಕೆ ಹಸ್ತಾಂತರಿಸಿದ ಬಳಿಕ ಅಭಿನಂದನ್ ರಾತ್ರಿ ಸುಮಾರು 11.30ರ ವೇಳೆಗೆ ದೆಹಲಿಗೆ ಆಗಮಿಸಿದ್ದರು. ಅಲ್ಲದೇ ತಮ್ಮ ಪೋಷಕರನ್ನು ಭೇಟಿಯಾಗಿದ್ದರು. ಈ ವೇಳೆ ನಾನು ಆರಾಮವಾಗಿದ್ದೇನೆ. ನನ್ನ ಆರೋಗ್ಯ ಚೆನ್ನಾಗಿದೆ ಎಂದು ತಿಳಿಸಿದ್ದರು. ಅಲ್ಲದೆ ಇದೇ ವೇಳೆ ಮತ್ತೆ ನಾನು ವಾಯುಸೇನೆಯ ಕರ್ತವ್ಯಕ್ಕೆ ಹಾಜರಾಗುತ್ತೇನೆ ಎಂಬ ಭರವಸೆ ನೀಡಿದ್ದರು ಎಂದು ವರದಿಯಾಗಿತ್ತು.

    ಈ ವೇಳೆ ಅವರಿಗೆ ವಿವಿಧ ಹಂತಗಳಲ್ಲಿ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿತ್ತು. ಪಾಕಿಸ್ತಾನದ ವಾಯುದಾಳಿಯನ್ನು ಹಿಮ್ಮೆಟ್ಟುವ ವೇಳೆ ಗಡಿ ದಾಟಿ ಪಾಕ್ ಸೈನ್ಯದ ವಶದಲ್ಲಿದ್ದ ಅಭಿನಂದನ್ ಶುಕ್ರವಾರ ಸಂಜೆ ವೇಳೆಗೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿ ಮತ್ತೆ ತನ್ನ ಕುತಂತ್ರವನ್ನು ಪ್ರದರ್ಶಿಸಿತ್ತು. ನಿನ್ನೆ ಮುಂಜಾನೆಯಿಂದಲೇ ವಾಘಾ ಗಡಿಯಲ್ಲಿ ಕಾದು ಕುಳಿತಿದ್ದ ಭಾರತೀಯ ಅಭಿಮಾನಿಗಳ ಛಲ ರಾತ್ರಿಯಾದ್ರು ಕಡಿಮೆ ಆಗಲಿಲ್ಲ. ಸಂಜೆ ವೇಳೆಗೆ ಮಳೆ ಬಂದಿದ್ದರೂ ಕೂಡ ಲೆಕ್ಕಿಸದ ಭಾರತೀಯರು ಅಲ್ಲೇ ನಿಂತಿದ್ದರು. ಇವೆಲ್ಲದರ ನಡುವೆಯೇ ರಾತ್ರಿ 9.15 ಗಂಟೆ ವೇಳೆಗೆ ಅಭಿನಂದನ್ ಭಾರತದ ನೆಲವನ್ನು ಪ್ರವೇಶಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚೈನಾ ವಸ್ತುಗಳ ಮೇಲೆ ನಿಷೇಧ ಯಾಕಿಲ್ಲ: ನಿರ್ಮಲಾ ಸೀತಾರಾಮನ್‍ಗೆ ವಿದ್ಯಾರ್ಥಿಗಳ ಪ್ರಶ್ನೆ

    ಚೈನಾ ವಸ್ತುಗಳ ಮೇಲೆ ನಿಷೇಧ ಯಾಕಿಲ್ಲ: ನಿರ್ಮಲಾ ಸೀತಾರಾಮನ್‍ಗೆ ವಿದ್ಯಾರ್ಥಿಗಳ ಪ್ರಶ್ನೆ

    – ಈ ಬಾರಿ ಬಹುಮತದಿಂದ ಗೆದ್ದರೆ 50 ವರ್ಷ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಖಚಿತ
    – ಕಾಂಗ್ರೆಸ್ ಅವಧಿಯಲ್ಲಿ ರಕ್ಷಣಾ ವ್ಯವಸ್ಥೆ ಕುಲಗೆಟ್ಟಿತ್ತು

    ಬೆಂಗಳೂರು: ರಾಜಾಜಿನಗರದ ಕೆಎಲ್‍ಇ ಸೊಸೈಟಿ ಸ್ಕೂಲ್‍ನಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಅವರು ವಿದ್ಯಾರ್ಥಿಗಳ ಜೊತೆ ಭಾನುವಾರ ಸಂವಾದ ಕಾರ್ಯಕ್ರಮ ನಡೆಸಿದರು. ಚೈನಾ ವಸ್ತುಗಳ ಮೇಲೆ ನಿಷೇಧ ಹೇರುವುದು, ಪುಲ್ವಾಮಾ ದಾಳಿ ಸೇರಿದಂತೆ ಅನೇಕ ವಿಚಾರವಾಗಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ನಿರ್ಮಲಾ ಸೀತಾರಾಮನ್ ಉತ್ತರ ನೀಡಿದರು.

    ಪಾಕಿಸ್ತಾನ ಬಗ್ಗೆ ತಲೆಕೆಡಿಸಿಕೊಂಡಿರುವ ನಾವು ಚೀನಾವನ್ನ ಮರೆತಿರುವುದೇಕೆ? ಚೈನಾ ಉತ್ಪನ್ನಗಳ ಮೇಲೆ ನಿಷೇಧ ಏಕೆ ಹೇರುತ್ತಿಲ್ಲ ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದ. ಇದಕ್ಕೆ ಪ್ರತಿಕ್ರಿಯೆ ನೀಡಿದ ನಿರ್ಮಲಾ ಸೀತಾರಾಮನ್ ಅವರು, ಚೈನಾ ವಸ್ತುಗಳಿಗೆ ನಿಷೇಧ ಹೇರುವುದು ಅಷ್ಟು ಸುಲಭವಲ್ಲ. ಒಂದು ವೇಳೆ ನಿಷೇಧ ಹೇರಿದರೆ ಬಡ ಮತ್ತು ಮಧ್ಯಮ ವರ್ಗದವರ ಮೇಲೆ ಪೆಟ್ಟು ಬೀಳುತ್ತದೆ. ಚೀನಾದಿಂದ ಬರುತ್ತಿರುವ ಕಡಿಮೆ ದರದ ವಸ್ತುಗಳಿಂದಲೇ ಅನೇಕ ಸಣ್ಣ ಕೈಗಾರಿಕೆಗಳು ನಡೆಯುತ್ತಿವೆ. ಚೈನಾದ ವಸ್ತುಗಳನ್ನ ನಿಷೇಧಿಸಿದರೆ ಅದು ನಮ್ಮ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಭಾರತದಲ್ಲಿ ಕಡಿಮೆ ದರದ ವಸ್ತುಗಳು ಗಗನಕ್ಕೇರಿದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸುವ ಮೂಲಕ ಉತ್ತರ ನೀಡಿದರು.

    ಅಮೆರಿಕವು ಒಸಮಾ ಬಿನ್ ಲ್ಯಾಡನ್ ಹತ್ಯೆ ಮಾಡಿದಂತೆ ಪುಲ್ವಾಮಾದಲ್ಲಿ ದಾಳಿ ಮಾಡಿದ ಉಗ್ರರಿಗೆ ತಿರುಗೇಟು ನೀಡಲು ಸಾಧ್ಯವಿಲ್ಲವೇ ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರು, 40 ಹುತಾತ್ಮ ಯೋಧರ ಬಲಿದಾನ ನೀರಿನಲ್ಲಿ ಹೋಮವಾಗಲು ಬಿಡುವುದಿಲ್ಲ. 2014ರ ನಂತರ ಉಗ್ರರ ಉಪಟಳ ಕಡಿಮೆಯಾಗಿದೆ ಎಂದು ಉತ್ತರಿಸುವ ಮೂಲಕ ಪ್ರತಿಕಾರದ ಸುಳಿವು ಬಿಟ್ಟುಕೊಟ್ಟರು.

    ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯಕ್ರಮ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಕಳೆದ ಚುನಾವಣೆ ಬಿಜೆಪಿಯನ್ನು ಗೆಲ್ಲಿಸಿದ್ದು ಮುಖ್ಯವಲ್ಲ. ಈ ಬಾರಿ ಬಹುಮತದಿಂದ ಜಯಗಳಿಸುವಂತೆ ಮಾಡುವುದು ನಮಗೆ ಮುಖ್ಯವಾಗಿದೆ. ಒಂದು ವೇಳೆ 2019ರ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಸರ್ಕಾರ ರಚನೆ ಮಾಡಿದರೆ ಮುಂದಿನ 50 ವರ್ಷಗಳ ಕಾಲ ನಮ್ಮ ಪಕ್ಷವೇ ಅಧಿಕಾರದಲ್ಲಿರುತ್ತೆ ಎಂದು ತಿಳಿಸಿದರು.

    ಕೇಂದ್ರ ಸರ್ಕಾರದ ಅಭಿವೃದ್ಧಿಗಳನ್ನು ಪ್ರಸ್ತಾಪಿಸಿದ ಸಚಿವರು, ದಿನದ ಇಪ್ಪತ್ತು ನಾಲ್ಕು ಗಂಟೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಕೆಲಸ ಮಾಡುತ್ತಿದೆ. ಒಂದೇ ಒಂದು ರೂಪಾಯಿ ವ್ಯರ್ಥವಾಗದಂತೆ ದೇಶದ ಖಜಾನೆಯನ್ನು ಉಪಯೋಗಿಸಿದ್ದೇವೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಧಿಕಾರಕ್ಕೆ ಬರುತ್ತೆಂದು ನಾನು ತುಂಬಾ ವಿಶ್ವಾಸ ಹೊಂದಿದ್ದೇನೆ ಎಂದರು.

    ವೇದಿಕೆಯಲ್ಲಿ ಒಂದಾಂದ ನಂತರ ಒಂದು ಯೋಜನೆಗಳನ್ನು ಗಂಟೆಗಟ್ಟಲೆ ಹೇಳಿಕೊಂಡು ಹೋಗಬಹುದು. 2014ರಲ್ಲಿ ಕೇಂದ್ರ ಸರ್ಕಾರ ರಚನೆಯಾದಾಗಿನಿಂದ ಯೋಜನೆಗಳು, ನಿರ್ಧಾರಗಳು ಬೆಳೆಯುತ್ತ ಬಂದಿವೆ. ನಿಮ್ಮ ನಿರ್ದಿಷ್ಟ ಪ್ರಶ್ನೆಗಳಿಗೆ ನಾನು ಖುಷಿಯಿಂದ ಉತ್ತರಿಸುವೆ. ಆಹಾರ ಭದ್ರತೆ, ಅಗತ್ಯ ವಸ್ತುಗಳ ಬೆಲೆ ಇನ್ನಿತರ ವಿಚಾರಗಳು ಹಿಂದೆ ಹೇಗಿದ್ದವು ಈಗ ಹೇಗಿದೆ ಅನ್ನುವ ವ್ಯತ್ಯಾಸ ನಿಮಗೆ ತಿಳಿದಿರಲಿ. ಜಿಎಸ್‍ಟಿ, ಕಪ್ಪು ಹಣ ವಿಚಾರಗಳು ಜಾರಿಗೆ ಬರುತ್ತಾ ಎನ್ನುವುದು ಪ್ರಶ್ನೆಯಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ. ಭಾರತದ ಜೊತೆ ವಿಶ್ವದ ಅನೇಕ ದೇಶಗಳು ಉತ್ತಮ ಆಂತರಿಕ ಸಂಬಂಧ ಹೊಂದಿವೆ. ಇದು ಪ್ರಧಾನಿ ಅವರಿಂದ ಸಾಧ್ಯವಾಗಿದೆ. ಪ್ರಗತಿ ಕಾರ್ಯಕ್ರಮದ ಮೂಲಕ ಜಿಲ್ಲಾಧಿಕಾರಿ ಜೊತೆ ಮೋದಿ ನೇರವಾಗಿ ಚರ್ಚಿಸುತ್ತಾರೆ. ಇದು ಅವರ ಗುಣ ಎಂದರು.

    ಕಾಂಗ್ರೆಸ್ ಸರ್ಕಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವೆ ನಿರ್ಮಾಲಾ ಸೀತಾರಾಮನ್ ಅವರು, ಯುಪಿಎ ಅವಧಿಯಲ್ಲಿ ರಕ್ಷಣಾ ವ್ಯವಸ್ಥೆ ಕುಲಗೆಟ್ಟಿತ್ತು. ಸೈನಿಕರಿಗೆ ಬಂದೂಕು ಇದ್ದರೆ ಬುಲೆಟ್ ಇರುತ್ತಿರಲಿಲ್ಲ. ಬುಲೆಟ್ ಪ್ರೂಫ್ ಜಾಕೆಟ್ ಇರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅರುಣ್ ಜೇಟ್ಲಿಯವರ ಮಾರ್ಗದರ್ಶನದಲ್ಲಿ ಸಮಸ್ಯೆಗಳನ್ನು ನಾನು ನಿವಾರಿಸಿದ್ದೇನೆ. ಒಂದು ವರ್ಷದಲ್ಲಿ ಭಾರತೀಯ ರಕ್ಷಣಾ ವಲಯವನ್ನು ಬಲಗೊಳಿಸಲಾಗಿದೆ. ಒಂದೊಂದು ರೂಪಾಯಿಯನ್ನು ರಕ್ಷಣಾ ವಲಯಕ್ಕೆ ಸದ್ಬಳಕೆ ಆಗಿದೆ. ರಕ್ಷಣಾ ವಲಯಕ್ಕೆ ಮೀಸಲಿಟ್ಟ ಪ್ರತಿ ಅನುದಾನವನ್ನು ಒಂದೇ ವರ್ಷದಲ್ಲಿ ಸದ್ಬಳಕೆ ಮಾಡಿಕೊಂಡಿದ್ದೇವೆ. ಪ್ರತಿ ವರ್ಷ ಬರುವ ಅನುದಾನ ಎಲ್ಲೂ ದುರ್ಬಳಕೆಯಾಗದಿದ್ದರೆ ರಕ್ಷಣಾ ವಲಯ ಎಷ್ಟು ಬಲಗೊಳ್ಳುತ್ತದೆಂದು ನೀವೇ ಯೋಚಿಸಿ ವಿದ್ಯಾರ್ಥಿಗಳಿಗೆ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಕಾರ ಮಾಡಲಾಗದ ಯೋಜನೆಗಳನ್ನು ವೀರೇಂದ್ರ ಹೆಗ್ಗಡೆಯವರು ಜಾರಿಗೆ ತಂದಿದ್ದಾರೆ: ನಿರ್ಮಲಾ ಸೀತಾರಾಮನ್

    ಸರ್ಕಾರ ಮಾಡಲಾಗದ ಯೋಜನೆಗಳನ್ನು ವೀರೇಂದ್ರ ಹೆಗ್ಗಡೆಯವರು ಜಾರಿಗೆ ತಂದಿದ್ದಾರೆ: ನಿರ್ಮಲಾ ಸೀತಾರಾಮನ್

    ಮಂಗಳೂರು: ಸರ್ಕಾರಗಳು ಮಾಡಲಾಗದ ಯೋಜನೆಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗೆಡೆಯವರು ಜಾರಿಗೆ ತಂದಿದ್ದಾರೆಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಆರಂಭಿಸಲಾಗಿರುವ ಆರೋಗ್ಯ ವಿಮೆ ಪ್ರಗತಿ ರಕ್ಷಾ ಕವಚ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಚಿಕ್ಕವಳಿದ್ದಾಗ ಧರ್ಮಸ್ಥಳಕ್ಕೆ ಹೆತ್ತವರ ಜೊತೆ ಬಂದಿದ್ದೆ. ಆದರೆ ಇಂದು ರಕ್ಷಣಾ ಸಚಿವೆಯಾಗಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು ನನ್ನ ಸೌಭಾಗ್ಯ. ಧರ್ಮಸ್ಥಳದಲ್ಲಿ ಧರ್ಮ, ನ್ಯಾಯದಿಂದ ಕೂಡಿದೆ ಎಂದು ಹೇಳಿದರು.

    ಸಾಲವನ್ನು ತೀರಿಸಲಾಗದೇ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದರ್ಭಗಳಲ್ಲಿ ಗ್ರಾಮಾಭಿವೃದ್ಧಿ ಯೋಜನೆಯು ಜನರ ಸಾಲದ ಭಯವನ್ನು ಹೋಗಲಾಡಿಸಿದೆ. ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರು ಸರ್ಕಾರ ಮಾಡಲಾಗದ ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.

    ಕಾರ್ಯಕ್ರಮಕ್ಕೂ ಮುನ್ನ ಸಚಿವೆ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದುಕೊಂಡರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ಮತ್ತು ಭಾರತೀಯ ಜೀವ ವಿಮಾ ನಿಗಮಗಳು ಜಂಟಿಯಾಗಿ ಎಸ್‌ಕೆಡಿಆರ್‌ಡಿಪಿ ಸದಸ್ಯರಿಗಾಗಿ ರೂಪಿಸಿರುವ `ಪ್ರಗತಿ ರಕ್ಷಾ ಕವಚ್’ ವಿಮಾ ಯೋಜನೆಗೆ ಅಧಿಕೃತ ಚಾಲನೆ ನೀಡಿದರು.

    ಏನಿದು ಪ್ರಗತಿ ರಕ್ಷಾ ಕವಚ್ ಯೋಜನೆ?
    ಎಸ್‌ಕೆಡಿಆರ್‌ಡಿಪಿ ಸದಸ್ಯರು ಅಕಾಲಿಕವಾಗಿ ಮೃತಪಟ್ಟ ಸಂದರ್ಭಗಳಲ್ಲಿ ಅವರು ಪಡೆದ ಸಾಲದ ಬಾಕಿಯನ್ನು ತಪ್ಪಿಸಲು ಹಾಗೂ ಮೃತರ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಈ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಸ್ಥಳ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆಯವರು ವಹಿಸಿಕೊಂಡಿದ್ದರು. ಸಮಾರಂಭಕ್ಕೆ ಹೇಮಾವತಿ ಹೆಗ್ಗಡೆ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಎಸ್.ಅಂಗಾರ, ಸಂಜೀವ ಮಠಂದೂರು, ಭಾರತೀಯ ಜೀವ ವಿಮಾ ನಿಗಮದ ಅಧ್ಯಕ್ಷ ವಿ.ಕೆ.ಶರ್ಮ, ನಿರ್ದೇಶಕ ಕದಿರೇಶನ್, ಸುಶೀಲ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಚ್‍ಎಎಲ್ ಜೊತೆ ರಫೇಲ್ ಯೋಜನೆ ಕೈಬಿಟ್ಟಿದ್ದೇಕೆ: ಸ್ಪಷ್ಟನೆ ನೀಡಿದ ರಕ್ಷಣಾ ಸಚಿವೆ

    ಎಚ್‍ಎಎಲ್ ಜೊತೆ ರಫೇಲ್ ಯೋಜನೆ ಕೈಬಿಟ್ಟಿದ್ದೇಕೆ: ಸ್ಪಷ್ಟನೆ ನೀಡಿದ ರಕ್ಷಣಾ ಸಚಿವೆ

    ನವದೆಹಲಿ: ಎಚ್‍ಎಎಲ್(ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್)ನೊಂದಿಗೆ ರಫೇಲ್ ಯುದ್ದ ವಿಮಾನದ ಒಪ್ಪಂದವನ್ನು ಕೈಬಿಟ್ಟಿದ್ದೇಕೆ ಎಂಬುದರ ಕುರಿತು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ.

    ರಫೇಲ್ ಒಪ್ಪಂದ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದಲ್ಲಿ ಸಂಪಾದಕರು ಮತ್ತು ವರದಿಗಾರರ ಜೊತೆ ಸಂವಾದ ನಡೆಸಿದ ಸೀತಾರಾಮನ್ ಕಾಂಗ್ರೆಸ್ ಅವಧಿಗಿಂತ ನಮ್ಮ ಒಪ್ಪಂದ ಅತ್ಯುತ್ತಮವಾಗಿದೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

    ಫ್ರಾನ್ಸ್ ಡಸಾಲ್ಟ್ ಏವಿಯೇಶನ್ ಸಹಯೋಗದೊಂದಿಗೆ ರಫೇಲ್ ಯುದ್ದ ವಿಮಾನಗಳನ್ನು ನಿರ್ಮಿಸುವ ಸಾಮರ್ಥ್ಯ ಎಚ್‍ಎಎಲ್‍ಗೆ ಇರಲಿಲ್ಲ. ಇದು ಯುಪಿಎ ಅವಧಿಯಲ್ಲಿ ಮಾಡಿಕೊಂಡಿದ್ದ 126 ರಫೆಲ್ ಯುದ್ದ ವಿಮಾನಗಳ ಖರೀದಿ ಒಪ್ಪಂದ ಮುರಿದು ಬೀಳಲು ಪ್ರಮಖ ಕಾರಣ. ರಫೇಲ್ ಯುದ್ದ ವಿಮಾನಗಳ ಖರೀದಿ ಸಂಬಂಧ ಎಚ್‍ಎಎಲ್ ಮತ್ತು ಫ್ರಾನ್ಸ್’ನ ಡಸಾಲ್ಟ್ ಏವಿಯೇಶನ್ ಜೊತೆಗೆ ಹಲವು ಸುತ್ತಿನ ಮಾತುಕತೆಗಳು ನಡೆದವು. ಮಾತುಕತೆ ವೇಳೆ ರಫೇಲ್ ಯುದ್ದ ವಿಮಾನಗಳನ್ನು ಭಾರತದಲ್ಲಿಯೇ ಉತ್ಪಾದಿಸಲು ಮುಂದಾದರೆ ಅದರ ಬೆಲೆ ಮೂಲ ಬೆಲೆಗಿಂತ ದುಪ್ಪಟ್ಟಾಗುವ ವಿಚಾರ ಬೆಳಕಿಗೆ ಬಂದಿತ್ತು. ಒಂದು ವೇಳೆ ವಿಮಾನಗಳನ್ನು ಭಾರತದಲ್ಲೇ ತಯಾರಿಸಿದರೆ, ಅವುಗಳಿಗೆ ಗ್ಯಾರೆಂಟಿ ಕೊಡಬೇಕಾಗಿತ್ತು. ಆದರೆ ವಿಮಾನಗಳಿಗೆ ಗ್ಯಾರಂಟಿ ಕೊಡುವ ಪರಿಸ್ಥಿತಿಯಲ್ಲಿ ಎಚ್‍ಎಎಲ್ ಇರಲಿಲ್ಲ. ಹೀಗಾಗಿ ಡಸಾಲ್ಟ್ ಕಂಪೆನಿಯು ಜಂಟಿಯಾಗಿ ರಫೇಲ್ ವಿಮಾನಗಳನ್ನು ನಿರ್ಮಿಸುವ ಮಾತುಕತೆಯನ್ನು ನಿಲ್ಲಿಸಿತ್ತು ಎಂದು ವಿವರಿಸಿದರು.

    ಯುಪಿಎ ಸರ್ಕಾರದ ಅವಧಿಯಲ್ಲಿನ ಒಪ್ಪಂದಕ್ಕೆ ಹೋಲಿಸಿದರೆ, ಮುಂದಿನ ವರ್ಷ 2019ರ ಸೆಪ್ಟೆಂಬರ್ ತಿಂಗಳಿನಲ್ಲಿಯೇ ರಫೇಲ್ ಯುದ್ಧವಿಮಾನಗಳು ಸೇನೆಗೆ ಸಿಗಲಿವೆ. ಇವುಗಳು ಶಸ್ತ್ರಬಳಕೆ, ಏವಿಯೋನಿಕ್ಸ್ ತಂತ್ರಜ್ಞಾನ ಹಾಗೂ ಇನ್ನೂ ಅನೇಕ ಉನ್ನತ ತಂತ್ರಜ್ಞಾನಗಳನ್ನು ಒಳಗೊಂಡಿವೆ. 2016ರಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 36 ರಫೇಲ್ ಯುದ್ಧವಿಮಾನಗಳನ್ನು ಖರೀದಿಸಲು ಫ್ರಾನ್ಸ್’ನೊಂದಿಗೆ ಒಪ್ಪಂದ ಮಾಡಿಕೊಟ್ಟಿತ್ತು. ಈ ವಿಚಾರದಲ್ಲಿ ಬಹುಕೋಟಿ ಹಗರಣ ನಡೆದಿದ್ದು, ಎಚ್‍ಎಎಲ್‍ನೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲವೆಂದು ಕಾಂಗ್ರೆಸ್ ಗಂಭೀರವಾಗಿ ಆರೋಪ ಮಾಡುತ್ತಿದೆ ಎಂದು ತಿಳಿಸಿದರು.

    ಕಾಂಗ್ರೆಸ್‍ಗೆ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಮಾತನಾಡಲು ಯಾವುದೇ ವಿಷಯಗಳು ಸಿಗಲಿಲ್ಲ. ಹೀಗಾಗಿ ಅವರು ರಫೇಲ್ ಒಪ್ಪಂದದಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂದು ಹೇಳಲು ಮುಂದಾದರು. ಆದರೆ ನಮ್ಮದು ದೇಶಕಂಡ ಅತ್ಯಂತ ಸ್ವಚ್ಛ ಹಾಗೂ ಭ್ರಷ್ಟಾಚಾರ ಮುಕ್ತ ಸರ್ಕಾರ ಎಂಬುದು ಜನರಿಗೆ ಗೊತ್ತಿದೆ. ಹತಾಶಾ ಮನೋಭಾವನೆಗೆ ತಲುಪಿರುವ ಕಾಂಗ್ರೆಸ್ ನಮ್ಮ ಸರ್ಕಾರದಿಂದ ಕಲಿಯಬೇಕಾದ ಪಾಠಗಳು ಸಾಕಷ್ಟು ಇವೆ ಎಂದು ಹೇಳಿದರು.

    ರಫೇಲ್ ಒಪ್ಪಂದದ ಕುರಿತು ವಿರೋಧ ಪಕ್ಷಗಳಿಗೆ ಮನವರಿಕೆ ಮಾಡಿಕೊಡುವ ಆಸಕ್ತಿ ನಮಗಿಲ್ಲ. ವಿರೋಧ ಪಕ್ಷಗಳು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಅವರಿಗೆ ವಾಯುಪಡೆಯ ಕಾರ್ಯಾಚರಣೆ ಸನ್ನದ್ಧತೆಯು ಹೇಗೆ ಇರಬೇಕೆಂಬುದರ ಕಾಳಜಿ ಇಲ್ಲ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ 526 ಕೋಟಿಗೆ ಒಪ್ಪಂದ ಆಗಿತ್ತು. ಆದರೆ ಬಿಜೆಪಿ ಅವಧಿಯಲ್ಲಿ 1,670 ಕೋಟಿ ರೂಪಾಯಿ ಏರಿಕೆ ಮಾಡಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ನಾನು ಇಷ್ಟಂತು ಹೇಳಬಲ್ಲೆ, ಯುಪಿಎ ಅವಧಿಯಲ್ಲಿನ ಒಪ್ಪಂದದ ವಿಮಾನಗಳು ಕೇವಲ ಹಾರುವ ಮತ್ತು ಇಳಿಯುವ ಸಾಮರ್ಥ್ಯವನ್ನು ಮಾತ್ರ ಹೊಂದಿದ್ದವು. ಆದರೆ ನಮ್ಮ ಅವಧಿಯಲ್ಲಿನ ವಿಮಾನಗಳು ಅತ್ಯಾಧುನಿಕ ತಂತ್ರಜ್ಞಾನಗಳ ಸಹಿತ ಶತ್ರುಗಳೊಂದಿಗೆ ಹೋರಾಡುವ ಶಕ್ತಿಯನ್ನು ಸಹ ಹೊಂದಿವೆ ಎಂದು ತಿಳಿಸಿದರು.

    ಏನಿದು ರಫೇಲ್ ಒಪ್ಪಂದ?
    ಯುಪಿಎ ಸರ್ಕಾರದ ಅವಧಿಯಲ್ಲಿ 2012ರಲ್ಲಿ ಫ್ರಾನ್ಸ್’ನ ಡಸಾಲ್ಟ್ ಏವಿಯೇಶನ್ ಸಂಸ್ಥೆಯೊಂದಿಗೆ 126 ಮಧ್ಯಮ ಶ್ರೇಣಿಯ ಬಹುಮುಖಿ ಯುದ್ಧ ವಿಮಾನಗಳ(ಎಂಎಂಆರ್’ಸಿಎ-ಮೀಡಿಯಂ ಮಲ್ಟಿ ರೋಲ್ ಕಾಂಬಾಟ್ ಏರ್’ಕ್ರಾಫ್ಟ್) ಖರೀದಿಗೆ ಒಪ್ಪಂದ ಮಾಡಿಕೊಟ್ಟಿತ್ತು. ಮಾತುಕತೆಯ ನಿಯಮಗಳ ಪ್ರಕಾರ ಡಸಾಲ್ಟ್ ಏವಿಯೇಶನ್ ಸಂಸ್ಥೆಯು 18 ರಫೇಲ್ ಜೆಟ್‍ಗಳನ್ನು ಹಾರಾಡಲು ಸನ್ನದ್ಧವಾಗಿರುವ ಸ್ಥಿತಿಯಲ್ಲಿ ಭಾರತಕ್ಕೆ ಪೂರೈಸಬೇಕು ಹಾಗೂ ಭಾರತದ ಎಚ್‍ಎಎಲ್‍ನೊಂದಿಗೆ ಉಳಿದ 108 ಯುದ್ಧ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸಬೇಕೆನ್ನುವ ಷರತ್ತನ್ನು ಹಾಕಿತ್ತು.

    ಎಚ್‍ಎಎಲ್ ಕೈ ಬಿಡಲು ಕಾರಣಗಳೇನು?
    ಎಚ್‍ಎಎಲ್ ಸಂಸ್ಥೆಗೆ ರಫೇಲ್ ಯುದ್ಧ ವಿಮಾನಗಳನ್ನು ನಿರ್ಮಿಸುವ ಸಾಮರ್ಥ್ಯವಿಲ್ಲವೆಂಬುದೇ ಪ್ರಮುಖ ಕಾರಣ. ಅಲ್ಲದೇ ಎಚ್‍ಎಎಲ್‍ನಲ್ಲಿ ಉತ್ಪಾದನೆಯಾಗುವ ವಿಮಾನಗಳ ವೆಚ್ಚವು ಫ್ರಾನ್ಸ್’ನಲ್ಲಿ ತಯಾರಾಗುವ ವಿಮಾನಗಳ ವೆಚ್ಚಕ್ಕಿಂತ ದುಬಾರಿಯಾಗಿತ್ತು. ಸಂಸ್ಥೆಗೆ ವಿಮಾನಗಳ ಉತ್ಪಾದನೆಗೆ ಬೇಕಾಗುವ ಸಂಪನ್ಮೂಲಗಳ ಬಗ್ಗೆ ಅಂದಿನ ಕೇಂದ್ರ ಸರ್ಕಾರ ತಲೆ ಕೆಡಿಸಿಕೊಂಡಿರಲಿಲ್ಲ. ಇದಲ್ಲದೇ 2013ರ ರಕ್ಷಣಾ ಸಚಿವ ಎ.ಕೆ.ಆಂಟನಿಯವರು ಪದೇ ಪದೇ ಯುದ್ಧ ವಿಮಾನಗಳ ಖರೀದಿ ಮಾತುಕತೆಯಲ್ಲಿ ಮಧ್ಯ ಪ್ರವೇಶಿಸುತ್ತಿದ್ದರಿಂದ ಫ್ರಾನ್ಸ್ ಕಂಪೆನಿಯು ಜಂಟಿ ತಯಾರಿಕೆಗೆ ಹಿಂದೇಟು ಹಾಕಿತು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಕ್ಷಣಾ ಇಲಾಖೆ ಭೂಮಿ ಬಳಕೆಗೆ ರಾಜ್ಯಕ್ಕೆ ಅನುಮತಿ

    ರಕ್ಷಣಾ ಇಲಾಖೆ ಭೂಮಿ ಬಳಕೆಗೆ ರಾಜ್ಯಕ್ಕೆ ಅನುಮತಿ

    – ರಕ್ಷಣಾ ಇಲಾಖೆ ಮತ್ತು ರಾಜ್ಯ ಸರ್ಕಾರದ ನಡುವಿನ ಒಪ್ಪಂದ ಹೀಗಿದೆ
    – ಬೆಂಗಳೂರಿನಿಂದ ಏರ್‍ಶೋ ಶಿಫ್ಟ್ ಅನುಮಾನ

    ಬೆಂಗಳೂರು: ರಕ್ಷಣಾ ಇಲಾಖೆ ಭೂಮಿಯನ್ನು ವಿವಿಧ ಅಭಿವೃದ್ಧಿ ಯೋಜನೆಗೆ ರಾಜ್ಯ ಸರ್ಕಾರಕ್ಕೆ ನೀಡಲು ಕೇಂದ್ರ ರಕ್ಷಣಾ ಇಲಾಖೆ ಒಪ್ಪಿಗೆ ನೀಡಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ಸಿಎಂ ಕುಮಾರಸ್ವಾಮಿ ಅವರು ಭೂಮಿ ವರ್ಗಾವಣೆ ಕುರಿತು ಸಭೆ ನಡೆಸಿದರು.

    ಬೆಂಗಳೂರಿನಲ್ಲಿರುವ 10 ಪ್ರಕರಣಗಳ ಭೂಮಿಯನ್ನ ರಾಜ್ಯ ಸರ್ಕಾರಕ್ಕೆ ನೀಡಲು ರಕ್ಷಣಾ ಇಲಾಖೆ ಒಪ್ಪಿಗೆ ನೀಡಿದೆ. ಸುಮಾರು 282 ಕೋಟಿ ಮೌಲ್ಯದ 45,165 ಚದರ ಮೀಟರ್ ರಕ್ಷಣಾ ಭೂಮಿಯನ್ನ ರಾಜ್ಯ ಸರ್ಕಾರಕ್ಕೆ ನೀಡಲು ಸಮ್ಮತಿಸಿದೆ. ಜೊತೆಗೆ 10,654 ಚದರ ಮೀಟರ್ ಜಾಗವನ್ನ ಬಾಡಿಗೆ ರೂಪದಲ್ಲಿ ನೀಡಲು ಸಭೆಯಲ್ಲಿ ಒಪ್ಪಿಕೊಳ್ಳಲಾಗಿದೆ. ಸಭೆ ಬಳಿಕ ಜಂಟಿ ಸುದ್ದಿಗೋಷ್ಟಿ ನಡೆಸಿದ್ರು. ಹಲವು ವರ್ಷಗಳಿಂದ ವಿವಾದದಲ್ಲಿದ್ದ ಪ್ರಕರಣಗಳು ಇತ್ಯರ್ಥವಾಗಿವೆ ಅಂತ ಸಿಎಂ ಹೇಳಿದರು.

    ಇಲಾಖೆ ಭೂಮಿಗೆ ಬದಲಾಗಿ ಅಷ್ಟೇ ಮೌಲ್ಯದ ಭೂಮಿ ನೀಡಲು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಹೀಗಾಗಿ, ಕೂಡಲೇ ಈ ಜಾಗಗಳಲ್ಲಿ ಕಾಮಗಾರಿ ಪ್ರಾರಂಭಿಸಬಹುದು. 2019ರ ಏರ್‍ಶೋ ಬೆಂಗಳೂರಿನಲ್ಲೇ ನಡೆಯುವ ಸಾಧ್ಯತೆ ಇದೆ. ಬೆಂಗಳೂರಿನಿಂದ ಲಖನೌಗೆ ಏರ್‍ಶೋ ಶಿಫ್ಟ್ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ ಅಂತ ಕೇಂದ್ರ ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

    ಅನೇಕ ರಾಜ್ಯಗಳು ಏರ್ ಶೋ ಆತಿಥ್ಯ ವಹಿಸಲು ಬೇಡಿಕೆಯಿಟ್ಟಿವೆ. ಆದರೆ ಈ ಬಗ್ಗೆ ಚರ್ಚೆ ನಡೆದಿಲ್ಲ. ಅಲ್ಲದೆ, ಯಾವಾಗ ಏರ್ ಶೋ ಮಾಡಬೇಕು ಅನ್ನೋ ಅರಿವು ಇದೆ ಅಂತಲೂ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು. ಇದೇ ವೇಳೆ, ಸಿಎಂ ಕುಮಾರಸ್ವಾಮಿ ಅವರು ವೈಮಾನಿಕ ಪ್ರದರ್ಶನ ನಮ್ಮಲ್ಲೇ ಮುಂದುವರಿಸಿ ಅಂತ ಕೇಂದ್ರ ಸಚಿವರಿಗೆ ಮನವಿ ಮಾಡಿದರು.

    ರಕ್ಷಣಾ ಇಲಾಖೆ ಮತ್ತು ರಾಜ್ಯ ಸರ್ಕಾರದ ಮಧ್ಯೆ ನಡೆದಿರುವ ಒಪ್ಪಂದ:

    1. ಈಜೀಪುರ ಒಳ ವರ್ತುಲ ರಸ್ತೆಯಿಂದ ಸರ್ಜಾಪುರ ಮುಖ್ಯರಸ್ತೆವರೆಗಿನ 25 ಮೀಟರ್ ರಸ್ತೆ ನಿರ್ಮಾಣಕ್ಕೆ 2015 ಬೆಂಗಳೂರು ಮಾಸ್ಟರ್ ಪ್ಲಾನ್ ಅನ್ವಯ ಭೂಮಿ.
    2. ಬ್ಯಾಟರಾಯನಪುರದ ಸಂಜೀವಿನಗರ ವಾರ್ಡ್ 7ರಿಂದ ರಾಷ್ಟ್ರೀಯ ಹೆದ್ದಾರಿ 7ಕ್ಕೆ ಸಂಪರ್ಕ ರಸ್ತೆ.
    3. ಹೆಬ್ಬಾಳದ ಸರೋವರ ಲೇಔಟ್‍ನಿಂದ ಅಮ್‍ಕೋ ಲೇಔಟ್ ಮೂಲಕ ರಾಷ್ಟ್ರೀಯ ಹೆದ್ದಾರಿ 7ಕ್ಕೆ ಸಂಪರ್ಕ ರಸ್ತೆ ನಿರ್ಮಾಣ.
    4. ಹೊಸೂರು ಲಸ್ಕರ್ ರಸ್ತೆಯ ವಿಸ್ತರಣೆ.

    5. ಹಾಸ್‍ಮೆಟ್ ಆಸ್ಪತ್ರೆಯಿಂದ ವಿವೇಕನಗರ ವರೆಗಿನ ಐಎಸ್‍ಟಿ ಮುಖ್ಯರಸ್ತೆ ವಿಸ್ತರಣೆ.
    6. ಅಗರಂ ರಸ್ತೆ ಅಗಲಿಕರಣ.
    7. ಕಾವಲಬೈರಸಂದ್ರ ಮುಖ್ಯರಸ್ತೆಯಿಂದ ಮೋದಿ ಗಾರ್ಡನ್‍ವರೆಗಿನ ಪರ್ಯಾಯ ರಸ್ತೆ ನಿರ್ಮಾಣಕ್ಕೆ ಭೂಮಿ ಹಸ್ತಾಂತರ.
    8. ಈಜೀಪುರ ಮುಖ್ಯರಸ್ತೆಯಲ್ಲಿ ಒಳ ವರ್ತುಲ ರಸ್ತೆಯ ಜಂಕ್ಷನ್, ಸೋನಿ ವಲ್ರ್ಡ್ ಜಂಕ್ಷನ್ ಮತ್ತು ಕೇಂದ್ರೀಯ ಸದನ ಜಂಕ್ಷನ್‍ವರೆಗೆ ಎಲೆವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಅಗತ್ಯವಾದ ಭೂಮಿ.
    (ಈ 8 ಯೋಜನೆಗಳಲ್ಲಿ 45 ಸಾವಿರದ 165.84 ಚದುರ ಮೀಟರ್ – 282.09 ಕೋಟಿ ರೂಪಾಯಿ ಮೌಲದ್ಯ ಭೂಮಿ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಿರುವ ರಕ್ಷಣಾ ಇಲಾಖೆ. ಇದಕ್ಕೆ ಪರ್ಯಾಯವಾಗಿ, ರಾಜ್ಯ ಸರ್ಕಾರ ಕೂಡ ರಕ್ಷಣಾ ಇಲಾಖೆಗೆ ಇಷ್ಟೇ ಮೌಲ್ಯದ ಭೂಮಿಯನ್ನ ಬೇರೆ ಕಡೆ ಕೊಡಲಿದೆ.)

    9. ಬಾಣಸವಾಡಿಯಲ್ಲಿ ರೈಲ್ವೆ ಮೇಲ್ಸೇತುವೆ ಲೂಪ್ ರಸ್ತೆ ನಿರ್ಮಾಣಕ್ಕೆ ಪರವಾನಗಿ.
    10. ಬೈಯಪ್ಪನಹಳ್ಳಿಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ 10,654. 11 ಚದರ ಅಡಿ ಭೂಮಿಗೆ ಪರವಾನಗಿ.
    (ರಕ್ಷಣಾ ಇಲಾಖೆಗೆ ರಾಜ್ಯ ಸಕಾರ ಪರ್ಯಾಯವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ 8 ಲಕ್ಷದ 53 ಸಾವಿರದ 137 ಪಾಯಿಂಟ್ 95 ಚದುರ ಮೀಟರ್ – 488.42 ಕೋಟಿ ಮೌಲ್ಯ ಭೂಮಿ ಹಸ್ತಾಂತರಿಸಲಿದೆ)

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ  www.instagram.com/publictvnews

  • ಚೀನಾ ಸೈನಿಕರಿಗೆ ನಮಸ್ಕಾರದ ಅರ್ಥ ತಿಳಿಸಿದ ನಿರ್ಮಲಾ ಸೀತಾರಾಮನ್

    ಚೀನಾ ಸೈನಿಕರಿಗೆ ನಮಸ್ಕಾರದ ಅರ್ಥ ತಿಳಿಸಿದ ನಿರ್ಮಲಾ ಸೀತಾರಾಮನ್

    ನವದೆಹಲಿ: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗಡಿ ಪ್ರದೇಶದಲ್ಲಿ ಚೀನಿ ಸೈನಿಕರಿಗೆ ಭಾರತೀಯ ನಮಸ್ಕಾರದ ಅರ್ಥವನ್ನು ತಿಳಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

    ಭಾರತ ಮತ್ತು ಚೀನಾ ಗಡಿ ಪ್ರದೇಶದ ನಾಥುಲಾ ದಲ್ಲಿ ಭಾನುವಾರ ಇಂಡೋ-ಟಿಬೆಟಿಯನ್ ಸೈನಿಕರನ್ನು ಭೇಟಿ ಮಾಡಿದ್ದ ರಕ್ಷಣಾ ಸಚಿವರು ತಮ್ಮ ಭೇಟಿಯ ಕುರಿತು ಟ್ವಿಟ್ಟರ್‍ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದರು. ನಂತರ ಸೇನಾ ಅಧಿಕಾರಿಗಳೊಂದಿಗೆ ತೆರಳಿ ಚೀನಾ ಸೈನಿಕರನ್ನು ಭೇಟಿ ಮಾಡಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

    ವಿಡಿಯೋದಲ್ಲಿ ರಕ್ಷಣಾ ಸಚಿವರು ಚೀನಿ ಸೈನಿಕರೊಂದಿಗೆ ಮಾತುಕತೆ ನಡೆಸಿದ್ದು, ಆ ವೇಳೆ ಭಾರತೀಯ ನಮಸ್ಕಾರದ ಮಹತ್ವವನ್ನು ತಿಳಿ ಹೇಳಿದ್ದಾರೆ. ಈ ವಿಡಿಯೋವನ್ನು ಸ್ವತಃ ರಕ್ಷಣಾ ಸಚಿವರೇ ಟ್ವೀಟ್ ಮಾಡಿದ್ದಾರೆ. ಲಾಥುಲಾ ಗಡಿಯನ್ನು ಭೇಟಿ ಮಾಡಿದ ವೇಳೆ ಚೀನಿ ಸೈನಿಕರು ಸತತವಾಗಿ ತನ್ನ ಫೋಟೋಗಳನ್ನು ತೆಗೆಯುತ್ತಿದ್ದರು ಎಂದು ತಮ್ಮ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

    ಇಂಡೋ-ಚೀನಾ ಗಡಿಯಲ್ಲಿ ಕೈಗೊಂಡಿರುವ ರಕ್ಷಣಾ ಕಾರ್ಯಗಳನ್ನು ವೀಕ್ಷಿಸಲು ಸಚಿವೆ ಸೀತಾರಾಮನ್ ತೆರಳಿದ್ದರು. ಡೋಕ್ಲಾಂ ಗಡಿ ಪ್ರದೇಶದಲ್ಲಿ ಚೀನಾ ತನ್ನ ಸೈನಿಕರನ್ನು ಹಿಂಪಡೆದಿಲ್ಲ ಎಂಬ ಸಂಗತಿಯನ್ನು ಭಾರತೀಯ ರಕ್ಷಣಾ ಅಧಿಕಾರಿಗಳು ಸ್ಪಷ್ಟಪಡಿಸಿದ ನಂತರ ಗಡಿ ಪ್ರದೇಶಕ್ಕೆ ಭೇಟಿ ನೀಡಲಾಗಿದೆ. ಈ ಹಿಂದೆ ಡೋಕ್ಲಾಂ ಗಡಿ ಪ್ರದೇಶದಲ್ಲಿ ಚೀನಾ ನಿರ್ಮಿಸಿಸುತ್ತಿದ್ದ ರಸ್ತೆಯ ವಿರೋಧಿಸಿ ಭಾರತೀಯ ಸೈನಿಕರು ಹಾಗೂ ಚೀನಿ ಪಡೆಗೆ ಸಂಘರ್ಷ ಉಂಟಾಗಿತ್ತು. ಈ ಸ್ಥಳದಿಂದ ಕೇವಲ 10 ಕಿ.ಮೀ. ದೂರದಲ್ಲಿ ಚೀನಾ ಮತ್ತೆ ರಸ್ತೆಯನ್ನು ನಿರ್ಮಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿತ್ತು. ಹಾಗಿದ್ದರೂ ಡೋಕ್ಲಾಂ ಪ್ರದೇಶದಲ್ಲಿ ಯಥಾಸ್ಥಿತಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.