Tag: Defense Department

  • ಬೆಳ್ಳಂದೂರು ರಸ್ತೆ ನಿರ್ಮಾಣಕ್ಕಾಗಿ ಬಿಬಿಎಂಪಿಗೆ ಭೂಮಿ ನೀಡಲು ರಕ್ಷಣಾ ಇಲಾಖೆ ಒಪ್ಪಿಗೆ: ಡಿಕೆಶಿ

    ಬೆಳ್ಳಂದೂರು ರಸ್ತೆ ನಿರ್ಮಾಣಕ್ಕಾಗಿ ಬಿಬಿಎಂಪಿಗೆ ಭೂಮಿ ನೀಡಲು ರಕ್ಷಣಾ ಇಲಾಖೆ ಒಪ್ಪಿಗೆ: ಡಿಕೆಶಿ

    ಬೆಂಗಳೂರು: ಲೋವರ್ ಆಗರಂನಿಂದ (Lower Agaram Road) ಸರ್ಜಾಪುರವರೆಗೂ (Sarjapura) ರಸ್ತೆ ಅಗಲೀಕರಣಕ್ಕೆ 12.34 ಎಕರೆ ಜಮೀನನ್ನು ರಕ್ಷಣಾ ಇಲಾಖೆ ಬಿಬಿಎಂಪಿಗೆ (BBMP) ನೀಡಿದ್ದು, ಇನ್ನೂ 10.77 ಎಕರೆ ನೀಡಲು ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಹೇಳಿದ್ದಾರೆ.

    ನಗರದ ಎಎಸ್‌ಸಿ ಸೆಂಟರ್ ಮತ್ತು ಕಾಲೇಜಿನ ಕಮಾಂಡೆಂಟ್ ಲೆಫ್ಟಿನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್ವಾಲ್ ಅವರ ಜೊತೆ ಡಿಸಿಎಂ ಅವರು ಇಂದು (ಸೆ.28) ವಿಧಾನಸೌಧದಲ್ಲಿ ಸಮಾಲೋಚನೆ ನಡೆಸಿದರು.ಇದನ್ನೂ ಓದಿ: ಶೀಘ್ರವೇ ಗೃಹಲಕ್ಷ್ಮಿ ಹಣ, ಯೋಜನೆ ನಿಲ್ಲುವ ಮಾತೇ ಇಲ್ಲ: ಲಕ್ಷ್ಮಿ ಹೆಬ್ಬಾಳ್ಕರ್‌

    ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಜಿ ರಸ್ತೆಯಿಂದ (M G Road) ಬೆಳ್ಳಂದೂರು ಭಾಗಕ್ಕೆ ತೆರಳಲು ಸುಮಾರು 1 ಗಂಟೆ ಸಮಯ ಬೇಕಾಗಿತ್ತು. ಈ ರಸ್ತೆ ನಿರ್ಮಾಣವಾದ ನಂತರ 5-8 ನಿಮಿಷಗಳ ಅಂತರದಲ್ಲಿ ಕ್ರಮಿಸಬಹುದು. ಬೆಳ್ಳಂದೂರು, ಈಜಿಪುರ, ಆಗರಂ ಭಾಗದ ಸಂಚಾರ ದಟ್ಟಣೆಗೆ ಮುಕ್ತಿ ಸಿಗಲಿದೆ. ನಾನು ಹಾಗೂ ಸಿಎಂ ಕೇಂದ್ರ ರಕ್ಷಣಾ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೆವು ಎಂದರು.

    ನಮ್ಮ ಮನವಿಗೆ ಕೇಂದ್ರ ರಕ್ಷಣಾ ಸಚಿವಾಲಯ ಸ್ಪಂದಿಸಿ, ಒಟ್ಟು 22 ಎಕರೆ ಜಾಗವನ್ನು ರಸ್ತೆಗಾಗಿ ಬಿಟ್ಟುಕೊಡಲು ತೀರ್ಮಾನಿಸಿ ಸಹಕಾರ ನೀಡಿದೆ. ಈ ರಸ್ತೆ ನಿರ್ಮಾಣದ ಮೊದಲ ಹಂತದ 3.50 ಕಿ.ಮೀ ಕಾಮಗಾರಿಗೆ 35 ಕೋಟಿ ರೂ. ಮೊತ್ತದ ಟೆಂಡರ್ ಕರೆಯಲಾಗಿದೆ. ಟ್ರಿನಿಟಿ ಸರ್ಕಲ್, ಈಜಿಪುರ ಸೇರಿದಂತೆ ಒಂದಷ್ಟು ಕಡೆ ನೂತನ ರಸ್ತೆ ನಿರ್ಮಾಣಕ್ಕೆ ಇನ್ನೂ 10.77 ಎಕರೆ ಜಾಗವನ್ನು ರಕ್ಷಣಾ ಇಲಾಖೆ ನೀಡಬೇಕಿದೆ. ಇದರಿಂದ ಐಟಿ ಹಬ್‌ಗೆ ತೆರಳಲು ಇದ್ದ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ ಎಂದು ತಿಳಿಸಿದರು.

    ಈಗಾಗಲೇ ರಕ್ಷಣಾ ಇಲಾಖೆಯವರು 12.34 ಎಕರೆ ಜಾಗವನ್ನು ಬಿಬಿಎಂಪಿಗೆ ಹಸ್ತಾಂತರಿಸಿದ್ದಾರೆ. ಇದಕ್ಕಾಗಿ ನಮಗೆ ಸಹಕಾರ ಕೊಟ್ಟ ಲೆಫ್ಟನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್ವಾಲ್ ಅವರು ಇದೇ 30 ರಂದು ನಿವೃತ್ತಿಯಾಗುತ್ತಿದ್ದು, ಅವರನ್ನು ನಮ್ಮ ಕಚೇರಿಗೆ ಆಹ್ವಾನಿಸಿ ಅಭಿನಂದಿಸಿದ್ದೇವೆ. ಬೆಂಗಳೂರಿನ ನಾಗರೀಕರಿಗೆ, ವಿಶೇಷವಾಗಿ ಐಟಿ ಹಬ್‌ಗೆ ತೆರಳುವವರಿಗೆ ಹಾಗೂ ಪೂರ್ವ ಬೆಂಗಳೂರಿಗರಿಗೆ ಈ ಯೋಜನೆಯಿಂದ ಸಾಕಷ್ಟು ಅನುಕೂಲವಾಗಲಿದೆ ಎಂದಿದ್ದಾರೆ.

    ನಾನು ಬೆಂಗಳೂರು ನಗರಭಿವೃದ್ಧಿ ಇಲಾಖೆಯ (Bengaluru Development Authority) ಜವಾಬ್ದಾರಿ ತೆಗೆದುಕೊಂಡ ನಂತರ ಬೆಳ್ಳಂದೂರು ಹಾಗೂ ಸುತ್ತಮುತ್ತಲ ಐಟಿ ಹಬ್ ಭಾಗದ ಜನರ ಸಮಸ್ಯೆ ಆಲಿಸಿದ್ದೆ. ಅಲ್ಲಿನ ಸಂಚಾರ ದಟ್ಟಣೆ ವಿಚಾರವಾಗಿ ದಿನನಿತ್ಯ 8-10 ಇ-ಮೇಲ್‌ಗಳು ನನಗೇ ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ನಾನು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆವು. ಈ ಸಮಸ್ಯೆಗೆ ಈಗ ಪರಿಹಾರ ಸಿಕ್ಕಿದಂತಾಗಿದೆ ಎಂದು ಹೇಳಿದರು.ಇದನ್ನೂ ಓದಿ: ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹತ್ಯೆ – ಇಸ್ರೇಲ್ ಸೇನೆಯಿಂದ ಘೋಷಣೆ

    ಹೆಬ್ಬಾಳದ ಬಳಿಯ ಹೋಪ್ ಡೈರಿ ಫಾರ್ಮ್ ಬಳಿ ಟನಲ್ ರಸ್ತೆಯ ಪ್ರವೇಶಕ್ಕೆ ಜಾಗ ಅಗತ್ಯವಿದೆ. ಇದಕ್ಕೆ 2 ಎಕರೆ ಜಾಗ ಬಿಟ್ಟುಕೊಡಬೇಕು ಎಂಬ ಪ್ರಸ್ತಾವನೆ ನೀಡಲಿದ್ದೇವೆ. ಈ ಜಾಗಗಳನ್ನು ರಕ್ಷಣಾ ಇಲಾಖೆಯಿಂದ ಪಡೆಯಲು ನಾನು ಬಹಳಷ್ಟು ಪ್ರಯತ್ನ ಮಾಡಿದ್ದೇನೆ. ಕಾಗದದ ಕೆಲಸ ಮಾಡಿದ್ದೇನೆ. ನಿರಂತರವಾಗಿ ರಕ್ಷಣಾ ಇಲಾಖೆ ಜೊತೆ ಸಂಪರ್ಕ ಇಟ್ಟುಕೊಂಡು ಮನವಿ ಮಾಡಿದ್ದೇನೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಕ್ಷಣಾ ಇಲಾಖೆ ಸಚಿವರು ಹಾಗೂ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಭೂಮಿ ಹಸ್ತಾಂತರಕ್ಕೆ ರಕ್ಷಣೆ ಇಲಾಖೆ ಏನು ಬೇಡಿಕೆ ಇಟ್ಟಿದೆ ಎಂದು ಕೇಳಿದಾಗ “ರಕ್ಷಣಾ ಇಲಾಖೆಯು ಭೂಮಿಗೆ ಪರ್ಯಾಯವಾಗಿ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವಂತೆ ಕೇಳಿದ್ದು, ನಾವು ಅದನ್ನು ಮಾಡುತ್ತೇವೆ” ಎಂದಿದ್ದಾರೆ.

  • ಅಮಿತ್ ಶಾಗೆ ಗೃಹ, ಸೀತಾರಾಮನ್‍ಗೆ ಹಣಕಾಸು – ಮೋದಿ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?

    ಅಮಿತ್ ಶಾಗೆ ಗೃಹ, ಸೀತಾರಾಮನ್‍ಗೆ ಹಣಕಾಸು – ಮೋದಿ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?

    ನವದೆಹಲಿ: ಬಿಜೆಪಿಯ ಚಾಣಕ್ಯ ಅಮಿತ್ ಶಾ ಅವರಿಗೆ ಮೋದಿ 2 ಸರ್ಕಾರದಲ್ಲಿ ಗೃಹ ಇಲಾಖೆ ಸಿಕ್ಕಿದೆ. ಈ ಹಿಂದೆ ಗೃಹ ಇಲಾಖೆ ನಿರ್ವಹಿಸಿದ್ದ ರಾಜನಾಥ್ ಸಿಂಗ್ ಅವರಿಗೆ ಈ ಬಾರಿ ರಕ್ಷಣಾ ಇಲಾಖೆಯನ್ನು ಮೋದಿ ನೀಡಿದ್ದಾರೆ.

    ರಫೇಲ್ ವಿವಾವದವನ್ನು ಸಮರ್ಥವಾಗಿ ನಿರ್ವಹಿಸಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಇಲಾಖೆ ಸಿಕ್ಕಿದೆ. ಕಳೆದ ಬಾರಿ ನಿರ್ವಹಿಸಿದ್ದ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಖಾತೆಯನ್ನೇ ಮೋದಿ ಮತ್ತೊಮ್ಮೆ ನಿತಿನ್ ಗಡ್ಕರಿ ಅವರಿಗೆ ನೀಡಿದ್ದಾರೆ. ಧರ್ಮೆಂದ್ರ ಪ್ರಧಾನ್ ಪೆಟ್ರೋಲಿಯಂ, ಪಿಯೂಶ್ ಗೋಯಲ್ ರೈಲ್ವೇ, ಜೈ ಶಂಕರ್ ಅವರಿಗೆ ವಿದೇಶಾಂಗ ಇಲಾಖೆ ಸಿಕ್ಕಿದೆ.

    ಗುಜರಾತ್ ನಲ್ಲಿ ಮೋದಿ ಸಿಎಂ ಆಗಿದ್ದಾಗ ಅಮಿತ್ ಶಾ ಗೃಹ ಖಾತೆಯನ್ನು ನೋಡಿಕೊಳ್ಳುತ್ತಿದ್ದರು. ಈಗ ಮತ್ತೊಮ್ಮೆ ಅಮಿತ್ ಶಾ ಮೋದಿ ಕ್ಯಾಬಿನೆಟ್‍ನಲ್ಲಿ ಗೃಹ ಖಾತೆಯನ್ನು ನಿರ್ವಹಿಸಲಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ – ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ, ಪರಮಾಣು ಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆ, ಹಂಚಿಕೆಯಾಗದ ಎಲ್ಲ ಖಾತೆಗಳು.

    ಸಂಪುಟ ದರ್ಜೆ ಸಚಿವರು:
    ರಾಜನಾಥ್ ಸಿಂಗ್ – ರಕ್ಷಣೆ
    ಅಮಿತ್ ಶಾ – ಗೃಹ, ಸಣ್ಣ ಮತ್ತು ಮಧ್ಯಮ ಉದ್ಯಮ
    ನಿತಿನ್ ಗಡ್ಕರಿ – ಸಾರಿಗೆ ಮತ್ತು ರಾಷ್ಟ್ರಿಯ ಹೆದ್ದಾರಿ
    ಸದಾನಂದ ಗೌಡ – ರಾಸಾಯನಿಕ ಮತ್ತು ರಸಗೊಬ್ಬರ
    ನಿರ್ಮಲಾ ಸೀತಾರಾಮನ್ – ಹಣಕಾಸು, ಕಾರ್ಪೋರೆಟ್ ವ್ಯವಹಾರ
    ರಾಮ್ ವಿಲಾಸ್ ಪಾಸ್ವಾನ್ – ಆಹಾರ ಮತ್ತು ಸಾರ್ವಜನಿಕ ವಿತರಣೆ

    ನರೇಂದ್ರ ಸಿಂಗ್ ತೋಮರ್ – ಕೃಷಿ, ಗ್ರಾಮೀಣ ಅಭಿವೃದ್ಧಿ, ರೈತ ಕಲ್ಯಾಣ, ಪಂಚಾಯತ್ ರಾಜ್
    ರವಿಶಂಕರ್ ಪ್ರಸಾದ್ – ಕಾನೂನು ಮತ್ತು ನ್ಯಾಯ, ಸಂವಹನ ಮತ್ತು ಮಾಹಿತಿ, ತಂತ್ರಜ್ಞಾನ
    ಹರ್ಸಿಮ್ರತ್ ಕೌರ್ – ಆಹಾರ ಸಂಸ್ಕರಣಾ ಕೈಗಾರಿಕೆ
    ತಾವರ್ ಚಂದ್ ಗೆಹ್ಲೋಟ್ – ಸಾಮಾಜಿಕ ಕಲ್ಯಾಣ ಮತ್ತು ಸಬಲೀಕರಣ
    ಎಸ್.ಜೈಶಂಕರ್ – ವಿದೇಶಾಂಗ ಇಲಾಖೆ
    ರಮೇಶ್ ಪೋಖ್ರಿಯಾಲ್ – ಮಾನವ ಸಂಪನ್ಮೂಲ
    ಅರ್ಜುನ್ ಮುಂಡಾ – ಬುಡಕಟ್ಟು ಅಭಿವೃದ್ಧಿ

    ಸ್ಮೃತಿ ಇರಾನಿ – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
    ಡಾ.ಹರ್ಷವರ್ಧನ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ, ತಂತ್ರಜ್ಞಾನ ಮತ್ತು ಭೂ ವಿಜ್ಞಾನ
    ಪ್ರಕಾಶ್ ಜಾವ್ಡೇಕರ್ – ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಮತ್ತು ಪ್ರಸಾರ ಮತ್ತು ಮಾಹಿತಿ ತಂತ್ರಜ್ಞಾನ
    ಪಿಯುಷ್ ಗೋಯಲ್ – ರೈಲ್ವೇ, ವಾಣಿಜ್ಯ ಮತ್ತು ಕೈಗಾರಿಕೆ
    ಧರ್ಮೇಂದ್ರ ಪ್ರಧಾನ್ – ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಉಕ್ಕು

    ಮುಕ್ತಾರ್ ಅಬ್ಬಾಸ್ ನಖ್ವಿ – ಅಲ್ಪ ಸಂಖ್ಯಾತ ಕಲ್ಯಾಣ
    ಪ್ರಹ್ಲಾದ್ ಜೋಷಿ – ಸಂಸದೀಯ ವ್ಯವಹಾರ, ಕಲಿದ್ದಲು ಮತ್ತು ಗಣಿಗಾರಿಕೆ
    ಮಹೇಂದ್ರನಾಥ್ ಪಾಂಡೆ – ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ ಶೀಲತೆ
    ಅರವಿಂದ್ ಸಾವಂತ್ – ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ
    ಗಿರಿರಾಜ್ ಸಿಂಗ್ – ಪಶು ಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಮೀನುಗಾರಿಕೆ
    ಗಜೇಂದ್ರ ಸಿಂಗ್ ಶೇಖಾವತ್‌ – ಜಲ ಶಕ್ತಿ

    ರಾಜ್ಯ ಖಾತೆ ಸಚಿವರು:
    ಫಗನ್ ಸಿಂಗ್ ಕುಲಸ್ತೆ – ಉಕ್ಕು
    ಅಶ್ವಿನಿ ಚೌಬೆ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
    ಬಿಕನೇರ್ ಅರ್ಜುನ್ ರಾಮ್ ಮೇಘವಾಲ್ – ಸಂಸದೀಯ ವ್ಯವಹಾರ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ
    ವಿ.ಕೆ.ಸಿಂಗ್ – ರಸ್ತೆ ಸಾರಿಗೆ ಮತ್ತು ಹೆದ್ದಾರಿ
    ಕೃಷ್ಣಪಾಲ್ ಗುರ್ಜರ್ – ಸಾಮಾಜಿಕ ನ್ಯಾಯ ಸಬಲೀಕರಣ
    ರಾವ್ ಸಾಹೇಬ್ ದಾನವೆ ರಾವ್ – ಗ್ರಾಹಕ ವ್ಯವಹಾರ ಮತ್ತು ಆಹಾರ ಮತ್ತು ಸಾರ್ವಜನಿಕರ ವಿತರಣೆ
    ಕಿಶಾನ್ ರೆಡ್ಡಿ- ಗೃಹ ಇಲಾಖೆ

    ಪುರುಷೋತ್ತಮ ರುಪಾಲಾ – ಕೃಷಿ ಮತ್ತು ರೈತರ ಕಲ್ಯಾಣ
    ರಾಮದಾಸ್ ಅಠಾವಳೆ – ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
    ಸಾಧ್ವಿ ನಿರಂಜನ್ ಜ್ಯೋತಿ – ಗ್ರಾಮೀಣ ಅಭಿವೃದ್ಧಿ
    ಬಾಬುಲ್ ಸುಪ್ರಿಯೋ – ಪರಿಸರ, ಅರಣ್ಯ, ಹವಾಮಾನ ಬದಲಾವಣೆ

    ಸಂಜೀವ್ ಬಲಿಯಾನ್ – ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ
    ಸಂಜಯ್ ಧೋತ್ರೆ – ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಂವಹನ, ಮಾಹಿತಿ ತಂತ್ರಜ್ಞಾನ
    ಅನುರಾಗ್ ಠಾಕೂರ್ – ಹಣಕಾಸು ಮತ್ತು ಕಾರ್ಪೋರೆಟ್ ವ್ಯವಹಾರ
    ಸುರೇಶ್ ಅಂಗಡಿ – ರೈಲ್ವೇ ಖಾತೆ
    ನಿತ್ಯಾನಂದ್ ರಾಯ್ – ಗೃಹ ವ್ಯವಹಾರ ಖಾತೆ

    ರತನ್ ಲಾಲ್ ಕಟಾರಿಯಾ – ಜಲ ಶಕ್ತಿ, ಸಾಮಾಜಿಕ ನ್ಯಾಯ, ಸಬಲೀಕರಣ,
    ವಿ.ಮುರಳೀಧರನ್ – ವಿದೇಶಾಂಗ ಮತ್ತು ಸಂಸದೀಯ ವ್ಯವಹಾರ,
    ರೇಣುಕಾ ಸಿಂಗ್ – ಬುಡಕಟ್ಟು ವ್ಯವಹಾರ,
    ಸೋಮ್ ಪ್ರಕಾಶ್ – ವಾಣಿಜ್ಯ ಮತ್ತು ವ್ಯವಹಾರ

    ರಾಮೇಶ್ವರ್ ತೇಲಿ – ಆಹಾರ ಸಂಸ್ಕರಣ ಉದ್ಯಮ
    ಸಾರಂಗಿ – ಸಣ್ಣ ಮತ್ತು ಮಧ್ಯಮ ಉದ್ಯಮ, ಪಶು ಸಂಗೋಪನೆ, ಮೀನುಗಾರಿಕೆ,
    ಕೈಲಾಶ್ ಚೌಧರಿ – ಕೃಷಿ ಮತ್ತು ರೈತರ ಕಲ್ಯಾಣ
    ದೆಬೊಶ್ರೀ ಚೌಧರಿ – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

    ಸ್ವತಂತ್ರ ಖಾತೆ ಸಚಿವರು:
    ಸಂತೋಷ್ ಕುಮಾರ್ ಗಂಗ್ವಾರ್ – ಕಾರ್ಮಿಕ ಮತ್ತು ಉದ್ಯೋಗ
    ಇಂದ್ರಜಿತ್ ಸಿಂಗ್ – ಸಾಂಖ್ಯಿಕ ಅಭಿವೃದ್ಧಿ ಮತ್ತು ಅನುಷ್ಠಾನ ಖಾತೆ
    ಶ್ರೀಪಾದ್ ಎಸ್ ನಾಯಕ್- ಆಯುಶ್, ರಕ್ಷಣಾ
    ಜಿತೇಂದ್ರ ಸಿಂಗ್- ಈಶಾನ್ಯ ಅಭಿವೃದ್ಧಿ ಮತ್ತು ಬಾಹ್ಯಾಕಾಶ, ಪರಮಾಣು ಶಕ್ತಿ

    ಕಿರಣ್ ರಿಜಿಜು- ಕ್ರೀಡಾ ಮತ್ತು ಯುವ ಸಬಲೀಕರಣ – ಅಲ್ಪ ಸಂಖ್ಯಾತ
    ಪ್ರಹ್ಲಾದ್ ಸಿಂಗ್ ಪಟೇಲ್ – ಸಂಸ್ಕ್ರತಿ ಮತ್ತು ಪ್ರವಾಸ್ಯೋದಮ
    ರಾಜ್‍ಕುಮಾರ್ ಸಿಂಗ್ – ಇಂಧನ, ನವೀಕರಿಸಬಹುದಾದ ಶಕ್ತಿ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ ಶೀಲತೆ
    ಹರ್ದೀಪ್ ಸಿಂಗ್ ಪುರಿ – ವಸತಿ ಮತ್ತು ನಗರಾಭಿವೃದ್ಧಿ, ನಾಗರೀಕ ವಿಮಾನಯಾನ, ವಾಣಿಜ್ಯ ಮತ್ತು ಕೈಗಾರಿಕೆ
    ಮನಸುಖ್ ಮಾಂಡವ್ಯ – ಹಡಗು, ರಾಸಾಯನಿಕ ಮತ್ತು ರಸಗೊಬ್ಬರ

  • ಪಾಕ್ ಗಡಿ ಬಳಿಯೇ ವಾಯುಪಡೆ ಶಕ್ತಿ ಪ್ರದರ್ಶನ – ಎಚ್ಚರಿಕೆ ಸಂದೇಶ ರವಾನಿಸಿದ ಭಾರತ – ವಿಡಿಯೋ ನೋಡಿ

    ಪಾಕ್ ಗಡಿ ಬಳಿಯೇ ವಾಯುಪಡೆ ಶಕ್ತಿ ಪ್ರದರ್ಶನ – ಎಚ್ಚರಿಕೆ ಸಂದೇಶ ರವಾನಿಸಿದ ಭಾರತ – ವಿಡಿಯೋ ನೋಡಿ

    ಪೋಖ್ರಾನ್: ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಇತ್ತ ಪಾಕಿಸ್ತಾನ ಗಡಿಯಲ್ಲಿ ಭಾರತೀಯ ವಾಯಸೇನೆ ತನ್ನ ಶಕ್ತಿ ಪ್ರದರ್ಶನ ಮಾಡಿದೆ.

    ಅಣ್ವಸ್ತ್ರ ಪರೀಕ್ಷಾರ್ಥ ಪ್ರಯೋಗ ನಡೆದಿದ್ದ ರಾಜಸ್ಥಾನ ರಾಜ್ಯದ ಪೋಖ್ರಾನ್ ಮರುಭೂಮಿಯಲ್ಲಿ ಯುದ್ಧ ವಿಮಾನಗಳು ಅಬ್ಬರಿಸಿವೆ. ನಿರ್ದೇಶಿತ ಕ್ಷಿಪಣಿ ಪ್ರಯೋಗ ಮೂಲಕ ಆರ್ಭಟಿಸಿದ್ದು, ಈ ಮೂಲಕ ವೈರಿ ಪಾಕಿಸ್ತಾನಕ್ಕೆ ಭಾರತ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದೆ.

    ಪಾಕಿಸ್ತಾನದ ಗಡಿಯಲ್ಲೇ ನಡೆದ ಪ್ರದರ್ಶನದಲ್ಲಿ ವಾಯುಸೇನೆಯ ಯುದ್ಧ ವಿಮಾನಗಳು, ಹೆಲಿಕಾಪ್ಟರ್ ಗಳು ಭಾಗವಹಿಸಿದ್ದವು. ಪ್ರಮುಖವಾಗಿ ತೇಜಸ್, ಹಾಂಕ್ ಎಂಕೆ-132, ನೆಲದಿಂದ ಆಕಾಶಕ್ಕೆ ಮತ್ತು ಆಗಸದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿಯನ್ನು ಪ್ರಯೋಗಿಸಲಾಯಿತು. ಈ ವೇಳೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಸೇನಾ ಅಧಿಕಾರಿಗಳು ಹಾಗೂ ಐಎಎಫ್ ಗೌರವಾನ್ವಿತ ಸಮೂಹ ಕ್ಯಾಪ್ಟನ್, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ಭಾಗವಹಿಸಿದ್ದರು. ಈ ಪ್ರದರ್ಶನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

    ಇತ್ತ ಪುಲ್ವಾಮಾ ದಾಳಿ ವಿಚಾರದಲ್ಲಿ ಇಡೀ ದೇಶ ಒಂದಾಗಿದೆ. ಈ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಂದೇ ಧ್ವನಿ ಹೊರಡಿಸಿವೆ. ಇಂದು ದೆಹಲಿಯಲ್ಲಿ ನಡೆದ ಸರ್ವ ಪಕ್ಷ ಸಭೆಯಲ್ಲಿ ಭಯೋತ್ಪಾದಕ ದಾಳಿಯನ್ನು ಸರ್ವಾನುಮತದಿಂದ ಖಂಡಿಸಿವೆ. ಭಯೋತ್ಪಾದನೆ ದಮನಕ್ಕಾಗಿ ಸರ್ಕಾರ ಕೈಗೊಳ್ಳುವ ನಿರ್ಧಾರಗಳಿಗೆ ಬೆಂಬಲ ಘೋಷಿಸಿವೆ. ಹುತಾತ್ಮರ ಕುಟುಂಬಗಳ ದು:ಖದಲ್ಲಿ ಭಾಗಿಯಾಗುವುದಾಗಿ ತಿಳಿಸಿವೆ.

    ಸರ್ವಪಕ್ಷ ಸಭೆ ಬಳಿಕ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್, ಈ ದುರ್ಘಟನೆಗೆ ಕಾರಣರಾದವರೂ ಯಾರೇ ಆಗಿರಲಿ, ಅವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲು ಎಲ್ಲ ಪಕ್ಷಗಳೂ ಒಮ್ಮತ ತೀರ್ಮಾನಕ್ಕೆ ಬಂದಿವೆ ಎಂದು ತಿಳಿಸಿದರು. ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮಾತನಾಡಿ, ಸರ್ಕಾರದ ಜೊತೆ ಭಿನ್ನಾಭಿಪ್ರಾಯ ಇರಬಹುದು. ಆದರೆ ದೇಶದ ಹಿತಾಸಕ್ತಿ, ಭದ್ರತೆ ವಿಚಾರದಲ್ಲಿ ಸರ್ಕಾರದ ಜೊತೆ ನಿಲ್ಲುತ್ತೇವೆ, ಸರ್ಕಾರಕ್ಕೆ ನಮ್ಮ ಬೆಂಬಲವಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಕ್ಷಣಾ ಬಜೆಟ್ 3 ಲಕ್ಷ ಕೋಟಿ ರೂ.ಗೆ ಹೆಚ್ಚಳ, ಹೆಚ್ಚುವರಿ ನೀಡಲು ನಾವು ಸಿದ್ಧ

    ರಕ್ಷಣಾ ಬಜೆಟ್ 3 ಲಕ್ಷ ಕೋಟಿ ರೂ.ಗೆ ಹೆಚ್ಚಳ, ಹೆಚ್ಚುವರಿ ನೀಡಲು ನಾವು ಸಿದ್ಧ

    ನವದೆಹಲಿ: ದೇಶದ ಗಡಿ ರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಈ ಬಾರಿಯ ಕೇಂದ್ರ ಬಜೆಟ್‍ನಲ್ಲಿ ರಕ್ಷಣೆಗೆ ಹೆಚ್ಚುವರಿ ಅನುದಾನ ನೀಡುವಾಗಿ ಪಿಯೂಷ್ ಗೋಯಲ್ ತಿಳಿಸಿದ್ದು, ರಕ್ಷಣಾ ಬಜೆಟನ್ನು 3 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಳ ಮಾಡಿದ್ದಾರೆ.

    ಕಳೆದ ವರ್ಷದ ಬಜೆಟ್ ನಲ್ಲಿ 2,95,511 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಆದರೆ ಈ ವರ್ಷ ಅದನ್ನು ಮತ್ತಷ್ಟು ಹೆಚ್ಚಳ ಮಾಡಿದ್ದಾರೆ. ದೇಶದ ರಕ್ಷಣೆ ಮಾಡುವುದು ಸೈನಿಕರು ನಮ್ಮ ಹೆಮ್ಮೆ ಆಗಿದ್ದು, ನಾವು 3 ಲಕ್ಷ ಕೋಟಿ ರೂ.ಗಳನ್ನು ಹಂಚಿಕೆ ಮಾಡಿದ್ದೇವೆ. ಒಂದೊಮ್ಮೆ ಹೆಚ್ಚುವರಿ ಅನುದಾನ ಬೇಕಾದರೂ ನಾವು ನೀಡುತ್ತೇವೆ ಎಂದು ಗೋಯಲ್ ಸ್ಪಷ್ಟಪಡಿಸಿದ್ದಾರೆ.

    ಕಳೆದ 40 ವರ್ಷಗಳಿಂದ ಜಾರಿಯಾಗದೇ ಇದ್ದ ಒನ್ ರ್‍ಯಾಂಕ್ ಒನ್ ಪೆನ್ಷನ್ ಯೋಜನೆ ಜಾರಿ ಮಾಡಿದ್ದು, ಇದಕ್ಕಾಗಿ 35 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ ಎಂದು ಗೋಯಲ್ ತಿಳಿಸಿದರು. ಅಲ್ಲದೇ ಬಜೆಟ್ ಮಂಡನೆ ವೇಳೆ ಈ ಹಿಂದಿನ ಯುಪಿಎ ಸರ್ಕಾರದ ಅನುದಾನವನ್ನು ಪ್ರಸ್ತಾಪ ಮಾಡಿ, ಕೇವಲ 500 ಕೋಟಿ ರೂ.ಗಳನ್ನು ಯೋಜನೆಗೆ ನೀಡಿದ್ದರು ಎಂದು ತಿಳಿಸಿದ್ದಾರೆ. ಯುಪಿಎ ಬಜೆಟ್ ಮಂಡನೆ ವೇಳೆ ಕೇವಲ ಒನ್ ರ್‍ಯಾಂಕ್ ಒನ್ ಪೆನ್ಷನ್ ಯೋಜನೆ ಕುರಿತು ಭರವಸೆಯನ್ನು ಮಾತ್ರ ನೀಡಲಾಗಿತ್ತು. ಆದರೆ ನಾವು ಅದನ್ನು ಜಾರಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಏರ್ ಶೋ ಯಾವುದೇ ಕಾರಣಕ್ಕೂ ಸ್ಥಳಾಂತರಗೊಳ್ಳುವುದಿಲ್ಲ: ಕೇಂದ್ರ ಸಚಿವ ಅನಂತ್ ಕುಮಾರ್

    ಏರ್ ಶೋ ಯಾವುದೇ ಕಾರಣಕ್ಕೂ ಸ್ಥಳಾಂತರಗೊಳ್ಳುವುದಿಲ್ಲ: ಕೇಂದ್ರ ಸಚಿವ ಅನಂತ್ ಕುಮಾರ್

    ಬೆಂಗಳೂರು: ನಗರದಲ್ಲಿ ನಡೆಯುತ್ತಿದ್ದ ಏರ್ ಶೋ ಯಾವುದೇ ಕಾರಣಕ್ಕೂ ಲಕ್ನೋಗೆ ಸ್ಥಳಾಂತರಗೊಳ್ಳುವುದಿಲ್ಲವೆಂದು ರಾಸಾಯನಿಕ ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಅನಂತಕುಮಾರ್ ಸ್ಪಷ್ಟನೆ ನೀಡಿದ್ದಾರೆ.

    ಏರ್ ಶೋ ಕುರಿತು ಉಂಟಾಗಿರುವ ಗೊಂದಲಕ್ಕೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ ಅವರು, 2019ರಲ್ಲಿ ಬೆಂಗಳೂರಿನಲ್ಲಿ ನಡೆಯುವ ಏರ್ ಶೋ ಲಕ್ನೋಗೆ ಸ್ಥಳಾಂತರಗೊಳ್ಳುವುದಿಲ್ಲವೆಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಈ ವಿಚಾರವಾಗಿ ನಾನು ಸಹ ಖುದ್ದು ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್‍ರವರೊಂದಿಗೆ ಮಾತನಾಡಿದ್ದೇನೆ. ಅವರು ಸಹ ಸ್ಥಳಾಂತರಗೊಳ್ಳುವ ಯಾವುದೇ ನಿರ್ಧಾವಿಲ್ಲವೆಂದು ಹೇಳಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಏರ್ ಶೋ ಲಕ್ನೋಗೆ ಶಿಫ್ಟ್ ಆಗಲ್ಲ: ಬಿಎಸ್‍ವೈ

    ಏರ್ ಶೋ ಸ್ಥಳಾಂತರ ಕುರಿತು ಎದ್ದಿರುವ ಊಹಾಪೋಹಗಳಿಗೆ ಜನರು ಕಿವಿಗೊಡಬಾರದು, ಕಳೆದ ಬಾರಿಯೂ ಸಹ ಇಂತಹುದೇ ಗೊಂದಲ ಏರ್ಪಟ್ಟಿತ್ತು. ಕೇಂದ್ರ ಸರ್ಕಾರವು ಸ್ಥಳಾಂತರ ಕುರಿತು ಎಲ್ಲಿಯೂ ಮಾಹಿತಿ ನೀಡಿಲ್ಲ. 2019ರಲ್ಲಿ ನಡೆಯುವ ಏರ್ ಶೋ ಬೆಂಗಳೂರಿನಲ್ಲೇ ನಡೆಯಲಿದೆ ಎಂದು ಹೇಳಿದ್ದಾರೆ.

    ಏರ್ ಶೋ ಲಕ್ನೋಗೆ ಸ್ಥಳಾಂತರವಾಗುತ್ತಿದೆ ಎನ್ನುವ ಸುದ್ದಿ ಪ್ರಕಟವಾದ ಬೆನ್ನಲ್ಲೆ ಕಾಂಗ್ರೆಸ್, ಬಿಜೆಪಿ ನಾಯಕರ ನಡುವೆ ವಾಕ್ಸಮರ ಆರಂಭವಾಗಿತ್ತು. ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪ್ರಧಾನಿ ಮೋದಿಗೆ ಪತ್ರ ಬರೆದು ಯಾವುದೇ ಕಾರಣಕ್ಕೂ ಲಕ್ನೋಗೆ ಸ್ಥಳಾಂತರ ಮಾಡಬಾರದು ಎಂದು ಮನವಿ ಮಾಡಿದ್ದರು. ಇದನ್ನೂ ಓದಿ: ಏರ್ ಶೋ ಉಳಿಸಿಕೊಳ್ಳಲು ಅಖಾಡಕ್ಕೆ ಇಳಿದ ಎಚ್‍ಡಿಕೆ-ಮೋದಿಗೆ ಪತ್ರ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಡಿಯಲ್ಲಿ ಉಗ್ರರನ್ನು ಮಟ್ಟ ಹಾಕ್ತಿದೆ ಬಿಎಸ್‍ಎಫ್ ಸ್ನೈಪರ್ಸ್: ತರಬೇತಿ ಹೇಗಿರುತ್ತೆ? ತಂಡದ ವಿಶೇಷತೆ ಏನು?

    ಗಡಿಯಲ್ಲಿ ಉಗ್ರರನ್ನು ಮಟ್ಟ ಹಾಕ್ತಿದೆ ಬಿಎಸ್‍ಎಫ್ ಸ್ನೈಪರ್ಸ್: ತರಬೇತಿ ಹೇಗಿರುತ್ತೆ? ತಂಡದ ವಿಶೇಷತೆ ಏನು?

    ನವದೆಹಲಿ: ಭಾರತೀಯ ಗಡಿ ರಕ್ಷಣಾ ಪಡೆ (ಬಿಎಸ್‍ಎಫ್) ಪಡೆಯ ವಿಶೇಷ ಸ್ನೈಪರ್ಸ್ ತಂಡ ಗಡಿ ನಿಯಂತ್ರಣ ರೇಖೆ ಬಳಿ ಅಕ್ರಮವಾಗಿ ನುಸುಳುತ್ತಿರುವ ಉಗ್ರರನ್ನು ಹತ್ಯೆಗೈದು ಮೆಚ್ಚುಗೆಗೆ ಪಾತ್ರವಾಗುತ್ತಿದೆ.

    ಪಾಕಿಸ್ತಾನದಲ್ಲಿ ತರಬೇತಿ ಪಡೆದಿರುವ ಉಗ್ರರ ಹಲವು ಗುಂಪುಗಳು ಭಾರತಕ್ಕೆ ಪ್ರವೇಶ ಮಾಡಿ ವಿಧ್ವಂಸಕ ಕೃತ್ಯ ನಡೆಸಲು ಸಿದ್ಧರಾಗಿದ್ದಾರೆ ಎಂದು ಭಾರತದ ಗುಪ್ತಚರ ಸಂಸ್ಥೆ ಮಾಹಿತಿ ನೀಡಿದ್ದು, ಅಕ್ರಮ ನುಸುಳುಕೋರರ ದಾಳಿಯನ್ನು ಎದುರಿಸಲು ಬಿಎಸ್‍ಎಫ್ ವಿಶೇಷ ತರಬೇತಿ ನೀಡಿ ಸ್ನೈಪರ್ಸ್ ತಂಡವನ್ನು ತಯಾರು ಮಾಡಿದೆ.

    ಆಯ್ಕೆ ಹೇಗೆ?
    ಮಧ್ಯಪ್ರದೇಶದ ಇಂದೋರ್ ಕೇಂದ್ರದಲ್ಲಿ ತರಬೇತಿ ಪಡೆಯುವ 100 ಮಂದಿಯಲ್ಲಿ ಓರ್ವ ಸೈನಿಕನನ್ನು ಸ್ನೈಪರ್ಸ್ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಆಯ್ಕೆಯಾದವರನ್ನು ಪ್ರತ್ಯೇಕ ತಂಡವಾಗಿ ರಚಿಸಿ 60 ದಿನಗಳ ಕಾಲ ವಿಶೇಷ ಕಠಿಣ ತರಬೇತಿ ನೀಡಲಾಗುತ್ತದೆ.

    ಕಾರ್ಯಾಚರಣೆ ಹೇಗೆ?
    ಹೆಚ್ಚಿನ ತರಬೇತಿ ಪಡೆದ ಸೈನಿಕರನ್ನು ಗಡಿ ಭದ್ರತಾ ಪಡೆಯ ವಿಶೇಷ ತಂಡವಾಗಿ ನಿಯೋಜನೆ ಮಾಡಲಾಗುತ್ತದೆ. ಈ ತಂಡ ಉಗ್ರಗಾಮಿಗಳು ಒಳನುಸುಳುವ ಪ್ರಮುಖ ಸ್ಥಳಗಳನ್ನು ಗುರುತಿಸಿ ಅಡಗಿ ಕುಳಿತುಕೊಂಡು ಕಾರ್ಯ ನಿರ್ವಹಿಸುತ್ತದೆ.

    ವಿಶೇಷ ವಿನ್ಯಾಸ ಬಟ್ಟೆ: ಉಗ್ರರ ಕಣ್ಣು ತಪ್ಪಿಸಿ ಕಾರ್ಯಾಚರಣೆ ನಡೆಸಲು ಯೋಧರಿಗೆ ವಿಶೇಷ ವಿನ್ಯಾಸ ಮಾಡಲಾಗಿರುವ ಬಟ್ಟೆಯನ್ನು ನೀಡಲಾಗುತ್ತದೆ. ಅರಣ್ಯ, ಹಿಮ ಹಾಗೂ ಬಯಲು ಪ್ರದೇಶಗಳಿಗೆ ಹೊಂದಾಣಿಕೆ ಆಗುವಂತೆ ಬಟ್ಟೆಯನ್ನು ವಿನ್ಯಾಸ ಮಾಡಲಾಗಿರುತ್ತದೆ. ಈ ಯೋಧರು ವಿರೋಧಿಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಅವರ ವಲಯವನ್ನು ಪ್ರವೇಶ ಮಾಡುವಂತಹ ಸಾಮರ್ಥ್ಯವನ್ನ ಹೊಂದಿರುತ್ತಾರೆ. ಮೊದಲೇ ದಾಳಿ ನಡೆಸಬೇಕಾದ ನಿರ್ಧಿಷ್ಟ ಸ್ಥಳವನ್ನು ಆಯ್ಕೆ ಮಾಡಿ ಗುಂಪಾಗಿ ತೆರಳಿ ಕಾರ್ಯಾಚರಣೆ ನಡೆಸಲಾಗುತ್ತದೆ.

    ಒಂದು ಬುಲೆಟ್, ಒಂದು ಗುರಿ: ಸ್ನೈಪರ್ಸ್ ಯೋಧರಿಗೆ `ಒಂದು ಬುಲೆಟ್ ಒಂದು ಟಾರ್ಗೆಟ್’ ನೀಡಲಾಗುತ್ತದೆ. ಒಂದೇ ಬುಲೆಟ್ ನಲ್ಲಿ ಗುರಿಗೆ ನಿಖರವಾಗಿ ಹೊಡೆಯಬೇಕಾಗುತ್ತದೆ.

    ಸ್ನೈಪರ್ಸ್ ತಂಡವನ್ನು ಈ ಬಾರಿ ವಿಶೇಷವಾಗಿ ಅಮರನಾಥ ಯಾತ್ರಿಕರ ರಕ್ಷಣೆಗಾಗಿಯೂ ನಿಯೋಜಿಸಲಾಗಿದೆ. ಯಾತ್ರಿಕ ಮೇಲೆ ಉಗ್ರರು ದಾಳಿ ನಡೆಸುವ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಕಾರಣ ಮುಂಜಾಗೃತವಾಗಿ ಈ ಪಡೆಯನ್ನು ನಿಯೋಜಿಸಲಾಗಿದೆ.

    ಕೆಲ ದಿನಗಳ ಹಿಂದೆ ಜಮ್ಮುವಿನ ಸುಂದರ್ ಬನಿ ಪ್ರದೇಶದಲ್ಲಿ ಪಾಕ್ ಸ್ನೈಪರ್ಸ್ ತಂಡದ ದಾಳಿಗೆ ಗಡಿಯಲ್ಲಿ ಕರ್ತವ್ಯದಲ್ಲಿದ್ದ ಬಿಎಸ್‍ಎಫ್ ಸಬ್ ಇನ್ಸ್ ಪೆಕ್ಟರ್ ಎಸ್‍ಎನ್ ಯಾದವ್ ಹಾಗೂ ಕಾನ್ ಸ್ಟೇಬಲ್ ವಿ ಪಾಂಡೆ ಹುತಾತ್ಮರಾಗಿದ್ದರು. ರಂಜಾನ್ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಕಾಶ್ಮೀರ ಕಣಿವೆಯಲ್ಲಿ ಶಾಂತಿ ಸ್ಥಾಪಿಸಲು ಕದನ ವಿರಾಮ ಘೋಷಿಸಿತ್ತು. ಈ ವೇಳೆ ಉಗ್ರರು ದಾಳಿ ನಡೆಸಿ ಯೋಧ ಔರಂಗಜೇಬ್ ಅವರನ್ನು ಅಪಹರಿಸಿ ಹತ್ಯೆ ನಡೆಸಿತ್ತು. ಈ ಪ್ರಕರಣಕ್ಕೆ ತಿರುಗೇಟು ನೀಡಿದ ಸೇನೆ ಸೋಮವಾರ ನಾಲ್ವರು ಉಗ್ರರನ್ನು ಹತ್ಯೆ ಮಾಡಿದೆ.