Tag: Defence Sysytem

  • ಗೋಲ್ಡನ್‌ ಡೋಮ್;‌ ಕ್ಷಿಪಣಿ ದಾಳಿಯಿಂದ ಅಮೆರಿಕ ರಕ್ಷಣೆಗೆ ಬಾಹ್ಯಾಕಾಶದಲ್ಲಿ ರಕ್ಷಾಕವಚ

    ಗೋಲ್ಡನ್‌ ಡೋಮ್;‌ ಕ್ಷಿಪಣಿ ದಾಳಿಯಿಂದ ಅಮೆರಿಕ ರಕ್ಷಣೆಗೆ ಬಾಹ್ಯಾಕಾಶದಲ್ಲಿ ರಕ್ಷಾಕವಚ

    -175 ಬಿಲಿಯನ್‌ ಡಾಲರ್‌ ವೆಚ್ಚದಲ್ಲಿ ಹೊಸ ಅಸ್ತ್ರ

    ರಾಜಮಹಾರಾಜರ ಕಾಲದಲ್ಲಿ ಭೂಯುದ್ಧ ಹಾಗೂ ಸಮುದ್ರ ಯುದ್ಧ ನಡೆಯುತ್ತಿತ್ತು. ಆದರೆ ಕಾಲ ಬದಲಾದಂತೆ ತಂತ್ರಜ್ಞಾನ ಸುಧಾರಿಸಿ ಇದೀಗ ಆಕಾಶದಲ್ಲೂ ಯುದ್ಧಗಳು ನಡೆಯುತ್ತವೆ. ಹಮಾಸ್‌ ಉಗ್ರರು ನಡೆಸಿದ ರಾಕೆಟ್‌ ದಾಳಿಯಿಂದ ಇಸ್ರೇಲ್‌ ಅನ್ನು ರಕ್ಷಿಸಿದ ಅತ್ಯಾಧುನಿಕ ವ್ಯವಸ್ಥೆ ಎಂದರೆ ಐರನ್‌ ಡೋಮ್. ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ಸಮಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಡ್ರೋನ್‌ ಹಾಗೂ ಮಿಸೈಲ್‌ ದಾಳಿ ನಡೆಸಿದ ಸಂದರ್ಭ ಭಾರತಕ್ಕೆ ರಕ್ಷಣಾ ಕವಚವಾಗಿ ನಿಂತಿದ್ದು ಸುದರ್ಶನ ಚಕ್ರ (ಎಸ್‌ -400). ಇದೀಗ ಅಮೆರಿಕ ಇದೆಲ್ಲವನ್ನೂ ಮೀರಿ ತನ್ನವರನ್ನು ರಕ್ಷಿಸಲು ಹೊಸ ಅಸ್ತ್ರವನ್ನು ತಯಾರಿಸಲು ಮುಂದಾಗಿದೆ.

    ವಿಶ್ವಕ್ಕೆ ಶಾಂತಿ ಪಾಠ ಹೇಳುವ ಅಮೇರಿಕ ಮಾತ್ರ ಪ್ರಸ್ತುತ ಜಗತ್ತಿನ ಅತ್ಯಂತ ಬಲಿಷ್ಠ ಮಿಲಿಟರಿ ಹೊದಿರುವ ದೇಶಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದೆ. ಈ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸದ್ಯ ಗೋಲ್ಡನ್ ಡೋಮ್ ಎಂಬ ಹೊಸ ಕ್ಷಿಪಣಿ ತಡೆ ವ್ಯವಸ್ಥೆ ತಯಾರಿಕೆ ಯೋಜನೆಗೆ ಅಡಿಪಾಯ ಹಾಕಿದ್ದಾರೆ. ಹಾಗಿದ್ರೆ ಏನಿದು ಗೋಲ್ಡನ್‌ ಡೋಮ್?‌ ಇದರ ವಿಶೇಷತೆಗಳೇನು? ಇದರ ವೆಚ್ಚ ಎಷ್ಟು ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

    ಏನಿದು ಗೋಲ್ಡನ್‌ ಡೋಮ್?
    ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೇ 20ರ ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ಗೋಲ್ಡನ್‌ ಡೋಮ್‌ ಎಂಬ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಬಗ್ಗೆ ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ. ಬರೋಬ್ಬರಿ 175 ಬಿಲಿಯನ್‌ ಡಾಲರ್‌ ಮೊತ್ತದ ಯೋಜನೆ ಇದಾಗಿದ್ದು, ಬಾಹ್ಯಾಕಾಶದಲ್ಲಿ ಆಯುಧವನ್ನು ಇಡಲು ಅಮೆರಿಕ ಮುಂದಾಗಿದೆ. ಇದರೊಂದಿಗೆ ಟ್ರಂಪ್‌ ರಣರಂಗವನ್ನು ಬಾಹ್ಯಾಕಾಶಕ್ಕೆ ವಿಸ್ತರಿಸಲು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ರಷ್ಯಾ ಹಾಗೂ ಚೀನಾ ದೇಶಗಳು ಅಮೆರಿಕದ ಗೋಲ್ಡನ್‌ ಡೋಮ್‌ ಅನ್ನು ವಿರೋಧಿಸುತ್ತಿವೆ. ಇದು ಬ್ಯಾಲಿಸ್ಟಿಕ್‌ ಮತ್ತು ಕ್ರೂಸ್‌ ಕ್ಷಿಪಣಿಗಳು ಸೇರಿ ವೈಮಾನಿಕ ಬೆದರಿಕೆಗಳನ್ನು ಬಾಹ್ಯಾಕಾಶದಿಂದಲೇ ಹೊಡೆದುರುಳಿಸುವ ವ್ಯವಸ್ಥೆಯನ್ನು ಹೊಂದಿದೆ.

    ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ನೆಲ ಮತ್ತು ಬಾಹ್ಯಾಕಾಶ ಆಧಾರಿತ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಿದೆ. ಇದು ಹಾರಾಟದ ಬಹು ಹಂತಗಳಲ್ಲಿಯೇ ಮಿಸೈಲ್‌ಗಳನ್ನು ಪತ್ತೆ ಮಾಡಿ, ಅವುಗಳನ್ನು ಟ್ರಾಕ್‌ ಮಾಡಿ ಹೊಡೆದುರುಳಿಸುತ್ತದೆ. ಪ್ರಮುಖವಾಗಿ ಕ್ಷಿಪಣಿಗಳು ಲಾಂಚ್‌ ಆಗುವ ಮುನ್ನವೇ ಅವುಗಳನ್ನು ಹೊಡೆದುರುಳಿಸುವ ಹಾಗೂ ಆನ್‌ ಏರ್‌ ಅಂದ್ರೇ ಆಕಾಶದಲ್ಲೇ ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರಪಂಚದ ಯಾವುದೇ ಭಾಗದಿಂದ ಮಿಸೈಲ್‌ ಲಾಂಚ್‌ ಮಾಡಿದರು ಅಥವಾ ಬಾಹ್ಯಾಕಾಶದಿಂದಲೂ ಕ್ಷಿಪಣಿಗಳನ್ನು ಉಡಾಯಿಸಿದರು ಕೂಡ ಅವುಗಳನ್ನು ಎದುರಿಸುವ ಶಕ್ತಿಯನ್ನು ಈ ಗೋಲ್ಡನ್‌ ಡೋಮ್‌ ಹೊಂದಿದೆ. ಗೋಲ್ಡನ್ ಡೋಮ್ ಹೆಚ್ಚು ವಿಸ್ತಾರವಾದ ಟಾರ್ಗೆಟ್‌ ರೇಂಜ್‌ ಹೊಂದಿದ್ದು, ಬಾಹ್ಯಾಕಾಶ ಆಧಾರಿತ ಸೆನ್ಸಾರ್‌ಗಳು ಮತ್ತು ಪ್ರತಿಬಂಧಕಗಳನ್ನು ಒಳಗೊಂಡಂತೆ ಭೂಮಿ, ಸಮುದ್ರ ಮತ್ತು ಬಾಹ್ಯಾಕಾಶದಾದ್ಯಂತ ರಕ್ಷಣೆಯ ತಂತ್ರಜ್ಞಾನವನ್ನು ಹೊಂದಿರಲಿದೆ.

    ಗೋಲ್ಡನ್‌ ಡೋಮ್‌ ಹೇಗೆ ಕೆಲಸ ಮಾಡುತ್ತದೆ?
    ಗೋಲ್ಡನ್ ಡೋಮ್ ಬಾಹ್ಯಾಕಾಶದಲ್ಲಿ ಇರಿಸಲಾಗಿರುವ ಕಕ್ಷೆಯ ಲೇಸರ್‌ಗಳು ಮತ್ತು ಕ್ಷಿಪಣಿ ಪ್ರತಿಬಂಧಕಗಳನ್ನು ಸಂಯೋಜಿಸುತ್ತದೆ. ಇದು ಕ್ಷಿಪಣಿಗಳನ್ನು ಆರಂಭದಲ್ಲಿಯೇ ಪತ್ತೆಹಚ್ಚಲು ಮತ್ತು ನಾಶಮಾಡಲು ಸಹಾಯ ಮಾಡುತ್ತದೆ. ಇದು ಭೂಮಿ ಆಧಾರಿತ ವ್ಯವಸ್ಥೆಯನ್ನು ಮೀರಿ ಬಾಹ್ಯಾಕಾಶದಲ್ಲೂ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ವಿಸ್ತರಿಸುತ್ತದೆ. ಸದ್ಯದ ಡಿಫೆನ್ಸ್‌ ಸಿಸ್ಟಮ್‌ಗಳು ಭೂಮಿಯಿಂದ ರಾಡಾರ್‌ಗಳ ಮೂಲಕ ವೈರಿಗಳ ಕ್ಷಿಪಣಿಗಳನ್ನು ಪತ್ತೆ ಮಾಡುತ್ತವೆ. ಆದರೆ, ಗೋಲ್ಡನ್‌ ಡೋಮ್‌ನಲ್ಲಿ ಕ್ಷಿಪಣಿಗಳ ಚಲನವಲನಗಳನ್ನು ಪತ್ತೆಹಚ್ಚಲು 400 ರಿಂದ 1000ಕ್ಕೂ ಹೆಚ್ಚು ರಕ್ಷಣಾ ಉಪಗ್ರಹಗಳನ್ನು ಸ್ಪೇಸ್‌ಗೆ ಉಡಾಯಿಸಲು ಯೋಜಿಸಲಾಗಿದೆ. ಅದಲ್ಲದೇ ಶಸ್ತ್ರಸಜ್ಜಿತವಾದ 200 ಅಟ್ಯಾಕ್‌ ಸ್ಯಾಟಲೈಟ್‌ಗಳ ಸಮೂಹವು ಕ್ಷಿಪಣಿ ಅಥವಾ ಲೇಸರ್‌ಗಳ ಮೂಲಕ ಶತ್ರುಗಳ ಡ್ರೋನ್‌ ಹಾಗೂ ಮಿಸೈಲ್‌ಗಳನ್ನು ನಾಶಪಡಿಸಲಿವೆ.

    ಅಮೆರಿಕದಲ್ಲಿ ಈಗ ಇರುವ ಪ್ರಮುಖ ಏರ್‌ ಡಿಫೆನ್ಸ್‌ ಸಿಸ್ಟಮ್‌ಗಳು ಇದರ ಭಾಗವಾಗಲಿದ್ದು, ಬಹು ಹಂತದ ರಕ್ಷಣಾ ವ್ಯವಸ್ಥೆಯ ಸಮೀಕರಣವಾಗಿರಲಿದೆ. ಅಂದ್ರೇ ಅಮೆರಿಕದ ಪೇಟ್ರಿಯಾಟ್‌ ಮಿಸೈಲ್‌ ಬ್ಯಾಟರಿ, ಥಾಡ್‌ ಏರ್‌ ಡಿಫೆನ್ಸ್‌ ಸಿಸ್ಟಮ್‌, ಏಜಿಸ್‌ ಬ್ಯಾಲಿಸ್ಟಿಕ್‌ ಮಿಸೈಲ್‌ ಡಿಫೆನ್ಸ್‌ ಸಿಸ್ಟಮ್‌ ಹಾಗೂ ಗ್ರೌಂಡ್‌ ಬೇಸ್ಡ್‌ ಮಿಡ್‌ಕೋರ್ಸ್‌ ಡಿಫೆನ್ಸ್‌ ಸಿಸ್ಟಮ್‌ ಅನ್ನು ಗೋಲ್ಡನ್‌ ಡೋಮ್‌ ಒಳಗೊಂಡಿರಲಿದೆ. ಎಲ್ಲ ಡಿಫೆನ್ಸ್‌ ಸಿಸ್ಟಮ್‌ಗಳ ಜೊತೆ ದಾಳಿ ಹಾಗೂ ರಕ್ಷಣೆಯ ಸ್ಯಾಟಲೈಟ್‌ಗಳು ಗೋಲ್ಡನ್‌ ಡೋಮ್‌ನಲ್ಲಿ ಇರಲಿವೆ.

    ಇದರ ಬೆಲೆ ಎಷ್ಟು?
    ಇಷ್ಟೊಂದು ಟೆಕ್ನಾಲಜಿ ಹೊಂದಿರುವ ಗೋಲ್ಡನ್‌ ಡೋಮ್‌ ಬೆಲೆ ಎಷ್ಟು ಎಂಬುದನ್ನು ನೋಡುವುದಾದರೆ, ಈ ವ್ಯವಸ್ಥೆಗೆ 500 ಬಿಲಿಯನ್‌ ಡಾಲರ್‌ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಅಂದ್ರೇ ಭಾರತದ ರೂಪಾಯಿ ಪ್ರಕಾರ ಸುಮಾರು 41 ಲಕ್ಷ ಕೋಟಿ ರೂಪಾಯಿ ಆಗಲಿದೆ. ಆದರೆ, 25 ಬಿಲಿಯನ್‌ ಡಾಲರ್‌ ಅನ್ನು ಈ ಯೋಜನೆಗೆ ಈಗಾಗಲೇ ಟ್ರಂಪ್‌ ಘೋಷಿಸಿದ್ದಾರೆ. ಅಂತಿಮವಾಗಿ ಇದಕ್ಕೆ ಒಟ್ಟು 175 ಬಿಲಿಯನ್‌ ಡಾಲರ್‌ ಖರ್ಚು ಆಗಬಹುದು ಅಂತಾ ಅಂದಾಜು ಮಾಡಲಾಗಿದೆ. ಅದಲ್ಲದೇ ಈ ಗೋಲ್ಡನ್‌ ಡೋಮ್‌ ಅಭಿವೃದ್ಧಿಯನ್ನು ಮೂರು ವರ್ಷದಲ್ಲಿ ಮುಗಿಸಬೇಕು ಎಂದು ಟ್ರಂಪ್‌ ಡೆಡ್‌ಲೈನ್‌ ಅನ್ನು ಕೂಡ ನೀಡಿದ್ದಾರೆ. ಅಂದ್ರೇ ತಮ್ಮ ಅಧಿಕಾರಾವಧಿ ಮುಗಿಯುವ ಮುನ್ನವೇ ಈ ಗೋಲ್ಡನ್‌ ಡೋಮ್‌ ವ್ಯವಸ್ಥೆಯನ್ನು ಅಮೆರಿಕಕ್ಕೆ ನೀಡಲು ಟ್ರಂಪ್‌ ಮುಂದಾಗಿದ್ದಾರೆ. ಆದರೆ, ಈ ಯೋಜನೆ ಸಾಕಾರಗೊಂಡು ಕಾರ್ಯರೂಪಕ್ಕೆ ಬರಲು 20 ರಿಂದ 30 ವರ್ಷ ಬೇಕಾಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.

    ಯೋಜನೆಯ ಲೀಡರ್ ಯಾರು?
    ಅಮೆರಿಕದ ಸ್ಪೇಸ್‌ ಫೋರ್ಸ್‌ ಅಂದ್ರೇ ಬಾಹ್ಯಾಕಾಶ ಪಡೆಯ ಜನರಲ್‌ ಮೈಕೆಲ್‌ ಗುಟ್ಲಿನ್‌ ಈ ಯೋಜನೆಯ ನೇತೃತ್ವವನ್ನು ವಹಿಸಿದ್ದಾರೆ. ನಾಲ್ಕು ಸ್ಟಾರ್‌ ಹೊಂದಿರುವ ಜನರಲ್‌ ಮೈಕೆಲ್‌ ಗುಟ್ಲಿನ್ 2021ರಲ್ಲಿ ಬಾಹ್ಯಾಕಾಶ ಪಡೆಗೆ ಸೇರಿದ್ದರು. ಅದಕ್ಕೂ ಮುನ್ನ ಏರ್‌ಫೋರ್ಸ್‌ನಲ್ಲಿ 30 ವರ್ಷ ಸೇವೆ ಸಲ್ಲಿಸಿದ್ದರು. ಪ್ರಮುಖವಾಗಿ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಹಾಗೂ ಬಾಹ್ಯಾಕಾಶ ವ್ಯವಸ್ಥೆಗಳಲ್ಲಿ ಪರಿಣಿತಿಯನ್ನು ಗುಟ್ಲಿನ್‌ ಹೊಂದಿದ್ದಾರೆ. ‌

    ರಷ್ಯಾ, ಚೀನಾ ವಿರೋಧ ಏಕೆ?
    ಇಸ್ರೇಲ್‌ನ ಐರನ್‌ ಡೋಮ್‌ ಏರ್‌ ಡಿಫೆನ್ಸ್‌ ಸಿಸ್ಟಮ್‌ನಿಂದ ಸ್ಫೂರ್ತಿ ಪಡೆದು ಗೋಲ್ಡನ್‌ ಡೋಮ್‌ ಕನಸನ್ನು ಅಮೆರಿಕ ಕಂಡಿದೆ. 2011ರಲ್ಲಿ ಆಪರೇಷನ್‌ಗೆ ಇಳಿದ ಇಸ್ರೇಲ್‌ನ ಐರನ್‌ ಡೋಮ್‌ ಸಾವಿರಾರು ಕ್ಷಿಪಣಿಗಳು, ಇತರೆ ಸ್ಫೋಟಕಗಳಿಂದ ಇಸ್ರೇಲ್‌ ಅನ್ನು ಕಾಪಾಡಿದೆ. ಅದರಿಂದ ಸ್ಫೂರ್ತಿ ಪಡೆದು ದೊಡ್ಡ ಮಟ್ಟದಲ್ಲಿ ಗೋಲ್ಡನ್‌ ಡೋಮ್‌ ಸಿಸ್ಟಮ್‌ ತರಲಾಗಿದೆ. ಇದು ಬಾಹ್ಯಾಕಾಶಕ್ಕೂ ವಿಸ್ತರಣೆಯಾಗಲಿರುವ ಕಾರಣ ಭವಿಷ್ಯದಲ್ಲಿ ಸ್ಪೇಸ್‌ಗೂ ಯುದ್ಧ ವಿಸ್ತರಣೆಯಾಗುವುದು ಪಕ್ಕಾ ಎನ್ನಲಾಗುತ್ತಿದೆ. ಇದೇ ಆತಂಕವನ್ನು ರಷ್ಯಾ ಹಾಗೂ ಚೀನಾ ವ್ಯಕ್ತಪಡಿಸಿದ್ದು, ಅಮೆರಿಕದ ಗೋಲ್ಡನ್‌ ಡೋಮ್‌ಗೆ ವಿರೋಧವನ್ನು ವ್ಯಕ್ತಪಡಿಸಿವೆ.

    ಯಾವೆಲ್ಲಾ ದೇಶಗಳು ಆಸಕ್ತಿ ಹೊಂದಿವೆ?
    ಗೋಲ್ಡನ್‌ ಡೋಮ್‌ ಮೂಲಕ ಇಡೀ ಅಮೆರಿಕವನ್ನು ಎಲ್ಲ ರೀತಿಯ ಕ್ಷಿಪಣಿ ಹಾಗೂ ಡ್ರೋನ್‌ ದಾಳಿಯಿಂದ ರಕ್ಷಿಸಲಾಗುತ್ತದೆ. ಈ ವ್ಯವಸ್ಥೆಗೆ ಕೆನಡಾ ಕೂಡ ಸೇರುವ ಆಸಕ್ತಿಯನ್ನು ತೋರಿಸಿದೆ ಎಂದು ಟ್ರಂಪ್‌ ಹೇಳಿದ್ದಾರೆ. ಆದರೆ, ಕೆನಡಾದಿಂದ ಈ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಟ್ರಂಪ್‌ ಕೆನಡಾವನ್ನು ಅಮೆರಿಕದ ಭಾಗ ಮಾಡಿಕೊಳ್ಳಬೇಕು ಎಂದು ಬಯಸಿದ್ದು, ಆ ಕಾರ್ಯತಂತ್ರದ ಭಾಗವಾಗಿಯೂ ಕೆನಡಾದ ಅನಿಸಿಕೆಯನ್ನು ಹೇಳಿರಬಹುದು. ಪ್ರಮುಖವಾಗಿ ಈ ಯೋಜನೆಯಲ್ಲಿ ಎಲಾನ್‌ ಮಸ್ಕ್‌ ಅವರ ಸ್ಪೇಸ್‌ ಎಕ್ಸ್‌ ಕೂಡ ದೊಡ್ಡ ಪಾತ್ರ ವಹಿಸಲಿದೆ ಎಂದು ಹೇಳಲಾಗಿದೆ. ಇದುವರೆಗೂ 180 ಕಂಪನಿಗಳು ಈ ಯೋಜನೆ ಬಗ್ಗೆ ಇಂಟ್ರಸ್ಟ್‌ ವ್ಯಕ್ತಪಡಿಸಿವೆ ಎಂದು ಮೂಲಗಳು ತಿಳಿಸಿವೆ.

    ಎಸ್‌-500 VS ಗೋಲ್ಡನ್‌ ಡೋಮ್‌:
    ಸದ್ಯ ಜಗತ್ತಲ್ಲಿ ಅತಿ ಬಲಶಾಲಿ ಏರ್‌ ಡಿಫೆನ್ಸ್‌ ಸಿಸ್ಟಮ್‌ಗಳಲ್ಲಿ ಒಂದಾದ ಎಸ್‌-400 ಅದರ ಅಪ್‌ಡೇಟೆಡ್‌ ವರ್ಷನ್‌ ಎಸ್‌-500 ಅನ್ನು ರಷ್ಯಾ ಅಭಿವೃದ್ಧಿಪಡಿಸಿದ್ದು, ಕೆಲವೇ ವರ್ಷಗಳಲ್ಲಿ ಅದು ಸೇನೆಯಲ್ಲಿ ಬಳಕೆಗೆ ಲಭ್ಯವಾಗಲಿದೆ. ರಷ್ಯಾದ ಎಸ್‌-500 ಹಾಗೂ ಗೋಲ್ಡನ್‌ ಡೋಮ್‌ ಎರಡು ಕೂಡ ಭವಿಷ್ಯದ ಯೋಜನೆಗಳೇ ಆಗಿದೆ.

    ಗೋಲ್ಡನ್‌ ಡೋಮ್‌ ಅನ್ನು ಭೂಮಿ ಮತ್ತು ಬಾಹ್ಯಾಕಾಶದಿಂದ ಬಳಸಬಹುದಾಗಿದ್ದು, ಎಸ್‌-500 ಅನ್ನು ಭೂಮಿಯಿಂದ ಬಳಸಲಾಗುತ್ತದೆ. ಗೋಲ್ಡನ್‌ ಡೋಮ್‌ ಟಾರ್ಗೆಟ್‌ಗಳನ್ನು ಲಾಂಚ್‌ ಆಗುವ ಮುನ್ನವೇ ಹೊಡೆದರೆ, ಎಸ್‌-500 ಲಾಂಚ್‌ ಆದ್ಮೇಲೆ ಟಾರ್ಗೆಟ್‌ ಅನ್ನು ಹೊಡೆದುಹಾಕುತ್ತದೆ. ಗೋಲ್ಡನ್‌ ಡೋಮ್‌ ಬಾಹ್ಯಾಕಾಶ ಹಾಗೂ ಜಾಗತಿಕ ವ್ಯಾಪ್ತಿ ಹೊಂದಿದ್ದರೆ, ಎಸ್‌-500 600 ಕಿಮೀ ವ್ಯಾಪ್ತಿಯನ್ನು, 180 ರಿಂದ 200 ಕಿಮೀ ಎತ್ತರಕ್ಕೂ ಕ್ಷಿಪಣಿಯನ್ನು ಕಳುಹಿಸುತ್ತದೆ.

    ಗೋಲ್ಡನ್‌ ಡೋಮ್‌ ಬ್ಯಾಲಿಸ್ಟಿಕ್‌, ಕ್ರೂಸ್‌, ಹೈಪರ್‌ಸಾನಿಕ್‌, ಡ್ರೋನ್‌, ಸ್ಪೇಸ್‌ನ ವೈರಿಗಳನ್ನು ಹೊಡೆದರೆ, ಎಸ್‌-500 ಬ್ಯಾಲಿಸ್ಟಿಕ್‌, ಕ್ರೂಸ್‌, ಹೈಪರ್‌ಸಾನಿಕ್‌, ಏರ್‌ಕ್ರಾಫ್ಟ್‌ ಅನ್ನು ಹೊಡೆಯುತ್ತೆ. ಇನ್ನೂ ಗೋಲ್ಡನ್‌ ಡೋಮ್‌ ಬಹು ಹಂತದ ವ್ಯವಸ್ಥೆಯ ಕಮಾಂಡ್‌, ಕಂಟ್ರೋಲ್‌ ಅನ್ನು ಹೊಂದಿದ್ದರೆ, ಎಸ್‌-500 ಆಧುನಿಕ ರೆಡಾರ್‌ ಸಿಸ್ಟಮ್‌ ಅನ್ನು ಹೊಂದಿದೆ.