Tag: Defence

  • ಯುಪಿಯ ಪುರುಷನಿಗೆ ಪಾಕ್ ಏಜೆಂಟ್ ನೇಹಾ ಆಮಿಷ – ರಕ್ಷಣಾ ಇಲಾಖೆಯ ಮಾಹಿತಿ ಸೋರಿಕೆ ಮಾಡ್ತಿದ್ದವನ ಬಂಧನ

    ಯುಪಿಯ ಪುರುಷನಿಗೆ ಪಾಕ್ ಏಜೆಂಟ್ ನೇಹಾ ಆಮಿಷ – ರಕ್ಷಣಾ ಇಲಾಖೆಯ ಮಾಹಿತಿ ಸೋರಿಕೆ ಮಾಡ್ತಿದ್ದವನ ಬಂಧನ

    ಲಕ್ನೋ: ಪಾಕಿಸ್ತಾನದ (Pakistan) ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್‌ (ISI) ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಫಿರೋಜಾಬಾದ್‌ನ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಬಂಧಿಸಿದೆ.

    ಬಂಧಿತನನ್ನ ರವೀಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ‌ಫಿರೋಜಾಬಾದ್‌ನ ಹಜರತ್‌ಪುರ ಮೂಲದ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಈತ ಗಗನಯಾನ ಬಾಹ್ಯಾಕಾಶ ಯೋಜನೆ ಮತ್ತು ಮಿಲಿಟರಿ ಲ್ಯಾಜಿಸ್ಟಿಜ್ಸ್‌, ಡ್ರೋನ್ ಪ್ರಯೋಗಗಳ ಮಾಹಿತಿ ಸೇರಿದಂತೆ ಗೌಪ್ತ ಮಾಹಿತಿಯನ್ನ ಪಾಕಿಸ್ತಾನದ ಐಎಸ್‌ಐ ಜೊತೆಗೆ ಹಂಚಿಕೊಂಡಿದ್ದಾನೆ ಎಂದು ಯುಪಿ ಎಟಿಎಸ್ (UP ATS) ಮುಖ್ಯಸ್ಥ ನೀಲಬ್ಜಾ ಚೌಧರಿ ತಿಳಿಸಿದ್ದಾರೆ.

    ರವೀಂದ್ರ ಕುಮಾರ್‌ನನ್ನ ತೀವ್ರ ವಿಚಾರಣೆಗೆ ಒಳಪಡಿಸಿದ ಬಳಿಕ ಆತ ʻನೇಹಾʼ (Neha) ಎಂಬ ಹ್ಯಾಂಡ್ಲರ್‌ ಮೂಲಕ ರಕ್ಷಣಾ ವಲಯದ ಸೂಕ್ಷ್ಮ ಮಾಹಿತಿಗಳನ್ನ ಹಂಚಿಕೊಂಡಿರುವುದು ತಿಳಿದುಬಂದಿದೆ. ಈ ಮಾಹಿತಿಯನ್ನ ಇತರ ಕಾನೂನು ಸಂಸ್ಥೆಗಳೊಂದಿಗೆ ಹಂಚಿಕೊಂಡಿರುವುದಾಗಿ ಚೌಧರಿ ವಿವರಿಸಿದ್ದಾರೆ.

    ʻನೇಹಾʼ ಹೆಸರಿನ ಹ್ಯಾಂಡ್ಲರ್‌ ಕಳೆದ ಒಂದು ವರ್ಷದ ಹಿಂದೆ ಫೇಸ್‌ ಮೂಲಕ ರವೀಂದ್ರನನ್ನ ಸಂಪರ್ಕಿಸಿದ್ದಳು. ಈಕೆಯೊಂದಿಗೆ ರಸಹ್ಯ ಡೇಟಾ ಹಂಚಿಕೊಳ್ಳುತ್ತಿದ್ದ ರವೀಂದ್ರ ತನ್ನ ಕೋಡನ್ನು ಮರೆ ಮಾಚಲು ʻಚಂದನ್‌ ಸ್ಟೋರ್‌ ಕೀಪರ್‌-2ʼ ಎಂದು ಸೇವ್‌ ಮಾಡಿಕೊಂಡಿದ್ದ. ಹಣದ ಆಮಿಷಕ್ಕೆ ಒಳಗಾಗಿ‌ ವಾಟ್ಸಪ್‌ ಮೂಲಕವೂ ಅನೇಕ ಗೌಪ್ಯ ಮಾಹಿತಿಗಳನ್ನ ಹಂಚಿಕೊಂಡಿದ್ದ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

    ಸಮಗ್ರ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು ರವೀಂದ್ರನನ್ನ ಆಗ್ರಾದಲ್ಲಿ ಬಂಧಿಸಿದ್ದಾರೆ. ಇದೇ ವೇಳೆ ಆತನ ಸಹಚರನನ್ನೂ ಬಂಧಿಸಲಾಗಿದ್ದು, ವಾಟ್ಸಪ್ ಚಾಟ್‌, ವರ್ಗೀಕೃತ ದಾಖಲೆ ಸೇರಿದಂತೆ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಕೊಂಡಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

  • ಭಾರತದಿಂದ 85 ದೇಶಗಳಿಗೆ ರಕ್ಷಣಾ ಸಾಮಾಗ್ರಿ ರಫ್ತು – 1,5920 ಕೋಟಿ ದಾಖಲೆ

    ಭಾರತದಿಂದ 85 ದೇಶಗಳಿಗೆ ರಕ್ಷಣಾ ಸಾಮಾಗ್ರಿ ರಫ್ತು – 1,5920 ಕೋಟಿ ದಾಖಲೆ

    ನವದೆಹಲಿ: ಭಾರತ (India) ರಕ್ಷಣಾ (Defence) ವಲಯದಲ್ಲಿ ಆತ್ಮನಿರ್ಭರ (Atmanirbhar) ಸಾಧಿಸುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. 6 ವರ್ಷಗಳಲ್ಲಿ ಭಾರತದ ರಕ್ಷಣಾ ರಫ್ತು ಮೌಲ್ಯ 10 ಪಟ್ಟು ಏರಿಕೆಯಾಗಿದೆ. 85 ದೇಶಕ್ಕೆ ವಿಮಾನ, ಕಾಪ್ಟರ್, ಶಸ್ತ್ರಾಸ್ತ್ರ ರಫ್ತು ಮಾಡಲಾಗಿದೆ. ರಕ್ಷಣಾ ಪರಿಕರಗಳ ರಫ್ತಿನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. 2022-23 ಸಾಲಿನಲ್ಲಿ ದೇಶದಿಂದ ದಾಖಲೆಯ 1,5920 ಕೋಟಿ ರೂ. ಮೌಲ್ಯದ ರಕ್ಷಣಾ ಉಪಕರಣಗಳನ್ನು ರಫ್ತು ಮಾಡಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ಬೆಳವಣಿಗೆಯನ್ನು ಅಭೂತಪೂರ್ವ ಸಾಧನೆ ಎಂದು ಬಣ್ಣಿಸಿದ್ದಾರೆ.

    ಫಲ ನೀಡಿದ ಸುಧಾರಣೆ:
    ಮೇಕ್ ಇನ್ ಇಂಡಿಯಾ ಹಾದಿಯಲ್ಲಿ ಭಾರತದ ಸಾಮಥ್ರ್ಯ ಮತ್ತು ಉತ್ಸಾಹಕ್ಕೆ ಇದೊಂದು ಸ್ಪಷ್ಟ ಉದಾಹರಣೆ. ರಕ್ಷಣಾ ವಲಯದಲ್ಲಿ ಸುಧಾರಣೆ ಕೈಗೊಂಡ ಕೆಲವು ವರ್ಷಗಳಲ್ಲಿ ಉತ್ತಮ ಫಲ ನೀಡುತ್ತಿದೆ. ಭಾರತವನ್ನು ರಕ್ಷಣಾ ಉತ್ಪಾದನಾ ಕೇಂದ್ರಸ್ಥಾನವನ್ನಾಗಿ ಮಾಡಲು ನಮ್ಮ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

    ಈ ಕುರಿತು ಶನಿವಾರ ಟ್ವೀಟ್ ಮೂಲಕ ಮಾಹಿತಿ ನೀಡಿರುವ ರಾಜನಾಥ್ ಸಿಂಗ್, 2022-23ರ ಅವಧಿಯ ಅಭೂತಪೂರ್ವ ಸಾಧನೆ, ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಮುಂದಿನ ದಿನಗಳಲ್ಲಿ ರಕ್ಷಣಾ ವಲಯ ಇನ್ನಷ್ಟು ವೇಗವಾಗಿ ಬೆಳೆಯಲಿದೆ ಎಂದಿದ್ದಾರೆ.

    2016-17ರಲ್ಲಿ 1,521 ಕೋಟಿ ರೂ., 2017-18ರಲ್ಲಿ 4,682 ಕೋಟಿ ರೂ., 2018-19ರಲ್ಲಿ 10,745 ಕೋಟಿ ರೂ., 2019-20ರಲ್ಲಿ 9,115 ಕೋಟಿ ರೂ., 2020-21ರಲ್ಲಿ 8,434 ಕೋಟಿ ರೂ., 2021-22ರಲ್ಲಿ 12,814 ಕೋಟಿ ರೂ. ಮೌಲ್ಯದ ರಕ್ಷಣಾ ಉಪಕರಣ ರಫ್ತು ಮಾಡಿದ್ದ ಭಾರತ 2022-23ರಲ್ಲಿ ಹೊಸ ದಾಖಲೆ ಬರೆದಿದೆ. ಮುಂದಿನ 2024-25ರ ವೇಳೆಗೆ ಒಟ್ಟಾರೆ 1.75 ಲಕ್ಷ ಕೋಟಿ ರೂ. ಮೌಲ್ಯದ ರಕ್ಷಣಾ ಉಪಕರಣ ಉತ್ಪಾದಿಸುವ ಮತ್ತು 35,000 ಕೋಟಿ ರು. ಮೌಲ್ಯದ ಉಪಕರಣ ರಫ್ತು ಮಾಡುವ ಗುರಿಯನ್ನೂ ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಕಳೆದ 6 ವರ್ಷಗಳಲ್ಲಿ 1521 ಕೋಟಿ ರೂ. ಗಳಿಂದ 15290 ಕೋಟಿ ರೂ. ಗಳಿಗೆ ಹೆಚ್ಚಳ ಮಾಡುವಲ್ಲಿ ಯಶಸ್ವಿಯಾಗಿದೆ. ಅಂದರೆ 10 ಪಟ್ಟು ರಫ್ತು ಏರಿಕೆ ಮಾಡಲಾಗಿದೆ.

    ಏನೇನು ರಫ್ತು?: ಭಾರತವು ಸುಧಾರಿತ ಹೆಲಿಕಾಪ್ಟರ್, ಕಣ್ಣಾವಲು ನೌಕೆ, ವೈಯಕ್ತಿಕ ರಕ್ಷಣಾ ಉಪಕರಣ, ಕಾವಲು ವ್ಯವಸ್ಥೆಯ ರೇಡಾರ್, ತೇಜಸ್ ಯುದ್ಧ ವಿಮಾನ, ಆರ್ಟಿಲರಿ ಗನ್ಸ್, ಟ್ಯಾಂಕ್ ಮೊದಲಾದ ಶಸ್ತಾಸ್ತ್ರಗಳನ್ನು ರಫ್ತು ಮಾಡುತ್ತಿದೆ.

    85 ದೇಶಗಳಿಗೆ ರಫ್ತು: ಭಾರತ ಈಗ ಸುಮಾರು 85 ದೇಶಗಳಿಗೆ ರಕ್ಷಣಾ ಸಲಕರಣೆಗಳನ್ನು ರಫ್ತು ಮಾಡುತ್ತಿದೆ. ಇಟಲಿ, ಶ್ರೀಲಂಕಾ, ರಷ್ಯಾ, ಮಾಲ್ಡೀವ್ಸ್, ಮಾರಿಷಸ್, ನೇಪಾಳ, ಫ್ರಾನ್ಸ್, ಈಜಿಪ್ಟ್, ಇಸ್ರೇಲ್, ಭೂತಾನ್, ಯುಎಇ, ಸೌದಿ ಅರೇಬಿಯಾ, ಇಥಿಯೋಪಿಯಾ, ಫಿಲಿಪೀನ್ಸ್, ಪೋಲೆಂಡ್, ಚಿಲಿ ಹಾಗೂ ಮುಂತಾದ ದೇಶಗಳಿಗೆ ರಕ್ಷಣಾ ಸಾಮಾಗ್ರಿಗಳನ್ನು ಪೂರೈಸಲಾಗಿತ್ತು. ಇದನ್ನೂ ಓದಿ ಭಾರತದಲ್ಲಿ ತಯಾರಾಗುತ್ತಿದೆ ಎಕೆ-203 ರೈಫಲ್? ವಿಶೇಷತೆ ಏನು? ಅಗತ್ಯ ಏನು? – ಇಲ್ಲಿದೆ ಪೂರ್ಣ ಮಾಹಿತಿ

  • ಸೇನೆಗೆ ಸ್ವದೇಶಿ ಆಧುನಿಕ ಶಸ್ತ್ರಾಸ್ತ್ರ ಹಸ್ತಾಂತರ – ಏನಿದು F-INSAS ಸಿಸ್ಟಂ? ನಿಪುಣ್‌ ಲ್ಯಾಂಡ್‌ ಮೈನ್ಸ್‌?

    ಸೇನೆಗೆ ಸ್ವದೇಶಿ ಆಧುನಿಕ ಶಸ್ತ್ರಾಸ್ತ್ರ ಹಸ್ತಾಂತರ – ಏನಿದು F-INSAS ಸಿಸ್ಟಂ? ನಿಪುಣ್‌ ಲ್ಯಾಂಡ್‌ ಮೈನ್ಸ್‌?

    ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಮರುದಿನ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭಾರತೀಯ ಸೇನೆಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿದ್ದಾರೆ. F-INSAS ಸಿಸ್ಟಂ, ನಿಪುಣ್‌ ಹೆಸರಿನ ಲ್ಯಾಂಡ್‌ ಮೈನ್ಸ್‌, ಎಲ್‌ಸಿಎಯನ್ನು ಹಸ್ತಾಂತರ ಮಾಡಿದ್ದಾರೆ.

    F-INSAS ಸಿಸ್ಟಂ:
    Future Infantry Soldier As A System ಹೃಸ್ವ ರೂಪವೇ F-INSAS. ಭಾರತೀಯ ಸೇನೆಯನ್ನು ಆಧುನಿಕರಣಗೊಳಿಸಲು ಸರ್ಕಾರ ಹಲವು ಯೋಜನೆಗಳನ್ನು  ಮಾಡುತ್ತಿದ್ದು ಆಧುನಿಕ ಶಸ್ತ್ರಾಸ್ತ್ರಗಳನ್ನು ನೀಡುತ್ತಿದೆ. F-INSAS ಭಾಗವಾಗಿ ಸೈನಿಕರಿಗೆ ರಷ್ಯಾ ನಿರ್ಮಿತ ಎಕೆ -203 ಅಸಾಲ್ಟ್‌ ರೈಫಲ್‌ ನೀಡಲಾಗುತ್ತದೆ. 300 ಮೀಟರ್‌ ದೂರದಲ್ಲಿರುವ ಗುರಿಯನ್ನು ಹೊಡೆಯುವ ಸಾಮರ್ಥ್ಯ ಹೊಂದಿರುವ ರೈಫಲ್‌ ಅನ್ನು ಉತ್ತರ ಪ್ರದೇಶದ ಅಮೇಠಿಯಲ್ಲಿ ರಷ್ಯಾ ಮತ್ತು ಭಾರತ ಜಂಟಿಯಾಗಿ ಅಭಿವೃದ್ಧಿ ಪಡಿಸುತ್ತಿದೆ.

    F-INSAS ಸಿಸ್ಟಂ ಅಡಿಯಲ್ಲಿ ಬ್ಯಾಲಿಸ್ಟಿಕ್‌ ಹೆಲ್ಮೆಟ್‌, ಬ್ಯಾಲಿಸ್ಟಿಕ್‌ ಕನ್ನಡಕ, ಬುಲೆಟ್‌ ಪ್ರೂಫ್‌ ಜಾಕೆಟ್‌ ನೀಡಲಾಗುತ್ತದೆ. ಎಕೆ 47 ಬಂದೂಕಿನಿಂದ ಹೊಡೆದ ಗುಂಡು ಅಲ್ಲದೇ 9 ಮಿಲಿ ಮೀಟರ್‌ ಗಾತ್ರದ ಗುಂಡುಗಳನ್ನು ಈ ಬುಲೆಟ್‌ ಪ್ರೂಫ್‌ ಜಾಕೆಟ್‌ ಮತ್ತು ಹೆಲ್ಮೆಟ್‌ ತಡೆಯುವ ಸಾಮರ್ಥ್ಯವನ್ನು ಹೊಂದಿರುವುದು ವಿಶೇಷ. ಇದನ್ನೂ ಓದಿ: ಮೊದಲ ಬಾರಿಗೆ ಮೇಡ್ ಇನ್ ಇಂಡಿಯಾ ಫಿರಂಗಿಯಿಂದ ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ – ಹೊವಿಟ್ಜರ್ ವಿಶೇಷತೆ ಏನು?

    ನಿಪುಣ್‌ ಲ್ಯಾಂಡ್‌ ಮೈನ್ಸ್‌:
    ಪುಣೆಯಲ್ಲಿರುವ ಶಸ್ತ್ರಾಸ್ತ್ರ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ( Armament Research and Development Establishment) ಮತ್ತು ಭಾರತೀಯ ಸೇನೆ ಜಂಟಿಯಾಗಿ ನಿಪುಣ್‌ ಸ್ಫೋಟಕವನ್ನು ತಯಾರಿಸಿದೆ. ಗಡಿ ಭಾಗದಲ್ಲಿ ಉಗ್ರರು ನೆಲದ ಅಡಿಯಲ್ಲಿ ಸ್ಫೋಟಕ ಇಡುತ್ತಾರೆ. ಇದಕ್ಕೆ ಪ್ರತಿಯಾಗಿ ಸೇನೆಯೂ ಈಗ ಈ ರೀತಿಯ ಸ್ಫೋಟಕವನ್ನು ತಯಾರಿಸುತ್ತಿದೆ. ನಿಪುಣ್‌ ಮೇಲೆ ಕಾಲಿಟ್ಟಾಗ ಅದು ಸ್ಫೋಟಗೊಳ್ಳುತ್ತದೆ. ಒಟ್ಟು 7 ಲಕ್ಷ ನಿಪುಣ್‌ ಲ್ಯಾಂಡ್‌ ಮೈನ್ಸ್‌ಗಳನ್ನು ಸೈನ್ಯಕ್ಕೆ ನೀಡಲು ಭಾರತೀಯ ಸೇನೆ ಮುಂದಾಗಿದೆ.

    ಎಲ್‌ಸಿಎ:
    ಲ್ಯಾಂಡಿಂಗ್ ಕ್ರಾಫ್ಟ್ ಅಸಾಲ್ಟ್ (LCA) ಸ್ವದೇಶಿ ನಿರ್ಮಿತ ದೋಣಿಯಾಗಿದೆ. ಲಡಾಖ್-‌ ಚೀನಾ ಗಡಿಯಲ್ಲಿರುವ ಪ್ಯಾಂಗೊಂಗ್ ತ್ಸೋ ಸರೋವರದಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಸೀಮಿತ ಸಾಮರ್ಥ್ಯಗಳ ದೋಣಿಗಳ ಬದಲಿಯಾಗಿ ಈ ಎಲ್‌ಸಿಎಯನ್ನು ಇನ್ನು ಮುಂದೆ ಬಳಸಲಾಗುತ್ತದೆ. ಗೋವಾದ ಅಕ್ವೇರಿಯಸ್ ಶಿಪ್ ಯಾರ್ಡ್ ಲಿಮಿಟೆಡ್‌ ಎಲ್‌ಸಿಎಯನ್ನು ಅಭಿವೃದ್ಧಿ ಪಡಿಸಿದೆ. ವೇಗ ಮತ್ತು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ.

    Live Tv
    [brid partner=56869869 player=32851 video=960834 autoplay=true]

  • ಉಕ್ರೇನ್‌ನಲ್ಲಿರುವ ಭಾರತೀಯರು ಭಾರತಕ್ಕೆ ಬನ್ನಿ – ವಿದೇಶಾಂಗ ಇಲಾಖೆ

    ಉಕ್ರೇನ್‌ನಲ್ಲಿರುವ ಭಾರತೀಯರು ಭಾರತಕ್ಕೆ ಬನ್ನಿ – ವಿದೇಶಾಂಗ ಇಲಾಖೆ

    ಕೀವ್‌: ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧದ ಕಾಮೋಡ ದಟ್ಟವಾಗುತ್ತಿದ್ದು, ಉಕ್ರೇನ್‍ನಲ್ಲಿರುವ ಭಾರತೀಯರು ದೇಶಕ್ಕೆ ಮರಳುವಂತೆ ವಿದೇಶಾಂಗ ಇಲಾಖೆ ಸೂಚನೆ ನೀಡಿದೆ. ಉಕ್ರೇನ್ ರಾಜಧಾನಿ ಕೀವ್‍ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಈ ಮಾಹಿತಿ ರವಾನಿಸಿದ್ದು ವಿದ್ಯಾರ್ಥಿಗಳು ಆದ್ಯತೆಯಲ್ಲಿ ದೇಶ ತೊರೆಯುವಂತೆ ಹೇಳಿದೆ.

    ಉಕ್ರೇನ್‍ನಲ್ಲಿ ಅನಿಶ್ಚಿತೆ ಹೆಚ್ಚುತ್ತಿದೆ, ರಷ್ಯಾ ಯಾವುದೇ ಸಂದರ್ಭದಲ್ಲೂ ದಾಳಿ ಮಾಡುವ ಸಾಧ್ಯತೆಗಳಿದ್ದು ಯುದ್ಧದ ವಾತಾವರಣ ಹೆಚ್ಚಾಗಿದೆ. ಹೀಗಾಗಿ ಅಲ್ಲಿ ಅನಿವಾರ್ಯವಲ್ಲದೇ ಭಾರತೀಯರು, ವಿಶೇಷವಾಗಿ ವಿದ್ಯಾರ್ಥಿಗಳು ದೇಶಕ್ಕೆ ಮರಳಿ ಎಂದು ತಿಳಿಸಲಾಗಿದೆ. ಅಲ್ಲದೇ ಉಕ್ರೇನ್‍ಗೆ ಅನಿವಾರ್ಯವಲ್ಲದ ಪ್ರಯಾಣ ಮಾಡದಂತೆ ಭಾರತೀಯರಿಗೆ ಮನವಿ ಮಾಡಿದೆ. ಇದನ್ನೂ ಓದಿ: ವೈಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಅವಘಡ – ವಿದ್ಯುತ್ ಉತ್ಪಾದನೆ ಸ್ಥಗಿತ

    ಕೀವ್‍ನಲ್ಲಿರುವ ರಾಯಭಾರ ಕಚೇರಿಯು ಉಕ್ರೇನ್‍ನಲ್ಲಿರುವ ಭಾರತೀಯರನ್ನು ತನ್ನ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಮನವಿ ಮಾಡಿದೆ, ಅಗತ್ಯವಿದ್ದಾಗ ಸಂಪರ್ಕಿಸುವುದಾಗಿ ಅದು ತಿಳಿಸಿದೆ. ಉಕ್ರೇನ್‍ನಲ್ಲಿ ವಾಸಿಸುವ ಭಾರತೀಯರಿಗೆ ಎಲ್ಲಾ ಸೇವೆಗಳನ್ನು ಒದಗಿಸುತ್ತದೆ ಎಂದು ಮಾರ್ಗಸೂಚಿಗಳಲ್ಲಿ ಹೇಳಲಾಗಿದೆ. ಇದಕ್ಕೂ ಮೊದಲು ಜನವರಿ 26 ರಂದು, ಭಾರತೀಯ ರಾಯಭಾರ ಕಚೇರಿಯು ಉಕ್ರೇನ್‍ನಲ್ಲಿ ವಾಸಿಸುವ ಎಲ್ಲಾ ಭಾರತೀಯರನ್ನು ನೋಂದಾಯಿಸಲು ಕೇಳಿಕೊಂಡಿದ್ದು, ಯಾವುದೇ ಮಾಹಿತಿಯನ್ನು ತ್ವರಿತವಾಗಿ ರವಾನಿಸುವ ಸಾಧ್ಯತೆಗಳಿದೆ. ಇದನ್ನೂ ಓದಿ: ಹೋಟೆಲ್‍ನಲ್ಲಿ ಊಟ, ತಿಂಡಿ ಸಪ್ಲೈಗೆ ಬಂತು ರೋಬೋ – ಮೈಸೂರಿನ ಜನತೆಯ ಮನಗೆದ್ದ ಸಪ್ಲೇಯರ್ ಲೇಡಿ

    ರಷ್ಯಾ ಉಕ್ರೇನ್ ಗಡಿ ವಿವಾದ ತಾರಕಕ್ಕೇರಿದ್ದು ಎರಡು ಕಡೆಯ ಸೇನೆಗಳು ಜಮಾವಣೆಗೊಂಡಿವೆ. ರಷ್ಯಾ ಹೆಚ್ಚು ಸೈನಿಕರನ್ನು ನಿಯೋಜನೆ ಮಾಡಿದ್ದು ಯುದ್ಧಕ್ಕೆ ಸನ್ನದ್ಧವಾಗಿದೆ ಎಂದು ಉಕ್ರೇನ್ ಆರೋಪಿಸಿದೆ. ಆದರೆ ಈ ಆರೋಪವನ್ನು ರಷ್ಯಾ ನಿರಾಕರಿಸಿದೆ. ಈ ನಡುವೆ ರಷ್ಯಾ-ಉಕ್ರೇನ್ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತವೂ ಸೇರಿದಂತೆ ಯಾವುದೇ ರಾಷ್ಟ್ರದ ಪಾತ್ರವನ್ನು ಅಮೆರಿಕ ಸ್ವಾಗತಿಸುತ್ತದೆ ಎಂದು ಅಮೆರಿಕ ಈ ಹಿಂದೆ ಶ್ವೇತಭವನದ ವಕ್ತಾರರು ಹೇಳಿದ್ದರು.

  • ಬೆಂಗಳೂರಿನ ಪೀಣ್ಯದ ಕಂಪನಿಗೆ ಸಿಕ್ತು 590 ಕೋಟಿ ರೂ. ರಕ್ಷಣಾ ಯೋಜನೆ

    ಬೆಂಗಳೂರಿನ ಪೀಣ್ಯದ ಕಂಪನಿಗೆ ಸಿಕ್ತು 590 ಕೋಟಿ ರೂ. ರಕ್ಷಣಾ ಯೋಜನೆ

    ಬೆಂಗಳೂರು: 590 ಕೋಟಿ ರೂ. ಮೊತ್ತದ ರಕ್ಷಣಾ ಯೋಜನೆಯನ್ನು ಬೆಂಗಳೂರು ಮೂಲದ ಪೀಣ್ಯದ ಕಂಪನಿ ಪಡೆದುಕೊಂಡಿದೆ.

    ಅಲ್ಫಾ ಡಿಸೈನ್‌ ಟೆಕ್ನಾಲಜೀಸ್‌ ಕಂಪನಿ ಕೆಲ ದಿನಗಳ ಹಿಂದೆ ಪಿಚೋರಾ ಕ್ಷಿಪಣಿ ಮತ್ತು ರೇಡಾರ್‌ ವ್ಯವಸ್ಥೆಯ ಉನ್ನತೀಕರಣ, ಡಿಜಟಲೀಕರಣ ಸಂಬಂಧ ರಕ್ಷಣಾ ಸಚಿವಾಲಯದ ಜೊತೆ ಸಹಿ ಹಾಕಿದೆ.

    30 ವರ್ಷದ ಹಿಂದಿನ ಪಿಚೋರಾ ಕ್ಷಿಪಣಿ ಮತ್ತು ರೇಡಾರ್‌ ವ್ಯವಸ್ಥೆ ಭಾರತೀಯ ವಾಯುಸೇನೆಯಲ್ಲಿದ್ದು ಈಗ ಇದು ಹಳೆಯದಾಗಿದೆ. ಭಾರತೀಯ ವಾಯುಸೇನೆ ಈ ವ್ಯವಸ್ಥೆಯನ್ನು ಉನ್ನತೀಕರಿಸಲು ಟೆಂಡರ್‌ ಕರೆದಿತ್ತು. ಇದನ್ನೂ ಓದಿ: ರಫೇಲ್‌ ಡೀಲ್‌ – ಆಫ್‌ಸೆಟ್‌ ನಿಯಮವನ್ನೇ ಕೈಬಿಟ್ಟ ಸರ್ಕಾರ

    ಅಲ್ಫಾ ಡಿಸೈನ್‌ ಟೆಕ್ನಾಲಜೀಸ್‌ ಕಂಪನಿಯ ಮುಖ್ಯಸ್ಥ ಮತ್ತು ನಿರ್ದೇಶಕ ನಿವೃತ್ತ ಕರ್ನಲ್‌ ಎಚ್‌ಎಸ್‌ ಶಂಕರ್‌ ಪ್ರತಿಕ್ರಿಯಿಸಿ, ಮುಂದಿನ 4 ವರ್ಷದಲ್ಲಿ ರಷ್ಯಾದ ಸಹಕಾರದೊಂದಿಗೆ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

    ಇದು ರಾಷ್ಟ್ರೀಯ ಮಹತ್ವ ಪಡೆದ ಯೋಜನೆಯಾಗಿದೆ. ಶೀಘ್ರವೇ ಮುಂದೆ ಅಲ್ಫಾ ಡಿಸೈನ್‌ ಮತ್ತು ಇತರೇ ಭಾರತದ ಕಂಪನಿಗಳು ಈಗಲೂ ಬಳಕೆಯಲ್ಲಿರುವ ಹಲವು ವರ್ಷಗಳ ಹಿಂದಿನ ರೇಡಾರ್‌ ಮತ್ತು ಕ್ಷಿಪಣಿ ವ್ಯವಸ್ಥೆಯನ್ನು ಉನ್ನತೀಕರಿಸಲಿವೆ. ಹೊಸ ವ್ಯವಸ್ಥೆಯನ್ನು ಖರೀದಿಸುವ ಬದಲು ಈಗ ಇರುವ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಿದರೆ ಖರ್ಚು ಕಡಿಮೆ ಎಂದು ಕರ್ನಲ್‌ ಎಚ್‌ಎಸ್‌ ಶಂಕರ್‌ ತಿಳಿಸಿದರು.

    ಉನ್ನತೀಕರಣ ಮಾಡಬೇಕಾದರೆ ಹಲವು ಸಾಧನಗಳು ಸ್ವದೇಶದಲ್ಲೇ ತಯಾರಾಗಬೇಕು. ವಿಶೇಷವಾಗಿ ರೇಡಾರ್‌ ಟ್ರಾನ್ಸ್‌ಮಿಟರ್‌, ಥರ್ಮಲ್‌ ಇಮೇಜ್‌ ಬೇಸ್ಡ್‌ ಎಲೆಕ್ಟ್ರೋ ಆಪ್ಟಿಕಲ್‌ ಸಿಸ್ಟಂ, ಸಂವಹನ ಸಾಧನಗಳು, ಕಂಟ್ರೋಲ್‌ ಕ್ಯಾಬಿನ್‌, ಕೇಬಲ್‌ ಇತ್ಯಾದಿಗಳನ್ನು ತಯಾರಿಸಬೇಕಾಗುತ್ತದೆ.

    ಈ ಯೋಜನೆಯ ಅನ್ವಯ ಅಲ್ಫಾ ಡಿಸೈನ್‌ ಕಂಪನಿ 16 ಪಿಚೋರಾ ಕ್ಷಿಪಣಿ ವ್ಯವಸ್ಥೆಯನ್ನು ಉನ್ನತೀಕರಿಸಲಿದೆ. ಈ ಯೋಜನೆ ಯಶಸ್ವಿಯಾದ ಬಳಿಕ ಮತ್ತೆ 8 ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸುವ ಉತ್ಸಾಹವನ್ನು ಕಂಪನಿ ತೋರಿಸಿದೆ.

    ಪಿಚೋರಾ ಕ್ಷಿಪಣಿಯನ್ನು 1961ರಲ್ಲಿ ರಷ್ಯಾ ಅಭಿವೃದ್ಧಿ ಪಡಿಸಿದ್ದು, ಈಗಲೂ ಹಲವು ದೇಶಗಳ ವಾಯುಸೇನೆಗಳು ಈ ಕ್ಷಿಪಣಿಯನ್ನು ಬಳಕೆ ಮಾಡುತ್ತಿವೆ. ಭಾರತ ಈಗ ಮೇಕ್‌ ಇನ್‌ ಇಂಡಿಯಾ ಯೋಜನೆಯ ಅಡಿಯಲ್ಲಿ ಸ್ವದೇಶಿ ಕಂಪನಿಗೆ ಕ್ಷಿಪಣಿಯನ್ನು ಮೇಲ್ದರ್ಜೆಗೆ ಏರಿಸಲು ಮುಂದಾಗುತ್ತಿದೆ.

  • ಆರ್ಮಿ ಆತ್ಮ ನಿರ್ಭರ ಭಾರತ್ – ಕೇಂದ್ರ ರಕ್ಷಣಾ ಇಲಾಖೆಯಿಂದ ಮಹತ್ವದ ಘೋಷಣೆ

    ಆರ್ಮಿ ಆತ್ಮ ನಿರ್ಭರ ಭಾರತ್ – ಕೇಂದ್ರ ರಕ್ಷಣಾ ಇಲಾಖೆಯಿಂದ ಮಹತ್ವದ ಘೋಷಣೆ

    ನವದೆಹಲಿ: ರಕ್ಷಣಾ ಇಲಾಖೆಗೆ ಅವಶ್ಯವಿರುವ 101 ವಿವಿಧ ಉಪಕರಣಗಳನ್ನು ಭಾರತದಲ್ಲೇ ಉತ್ಪಾದಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇಲಾಖೆಯಲ್ಲಿ ಸ್ವಾವಲಂಬಿ ಸಾಧಿಸುವ ನಿಟ್ಟಿನಲ್ಲಿ ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

    ಇಂದು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಇಲಾಖೆಯ 101 ಉಪಕರಣಗಳನ್ನು ಉತ್ಪಾದಿಸಲು ದೇಶಿಯ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಹಲವು ಹಂತದ ಮಾತುಕತೆ ಮುಗಿದಿದ್ದು, ಸುಮಾರು 1 ಲಕ್ಷ 40 ಸಾವಿರ ಕೋಟಿಯ ಉತ್ಪಾದನೆ ಇದಾಗಿದೆ ಎಂದು ಹೇಳಿದ್ದಾರೆ.

    ಮದ್ದು, ಗುಂಡು, ಫಿರಂಗಿ, ಆರ್ಟಿಲರಿ ಗನ್, ರೆಡಾರ್, ಲಘು ಯುದ್ದ ವಿಮಾನ, ಹೆಲಿಕಾಪ್ಟರ್, ಸೋನಾರ್ ಸಿಸ್ಟಮ್, ಶಸ್ತ್ರಸಜ್ಜಿತ ವಾಹನ ಸೇರಿದಂತೆ 101 ವಿವಿಧ ಉಪಕರಣಗಳನ್ನು ದೇಶದಲ್ಲೇ ತಯಾರಿಸಲು ನಿರ್ಧರಿಸಿದೆ. ಇದರಿಂದ ಆತ್ಮನಿರ್ಭರ ಭಾರತಕ್ಕೆ ಉತ್ತೇಜನ ಸಿಗಲಿದೆ ಎಂದು ರಾಜನಾಥ್ ಸಿಂಗ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

    2020 ರಿಂದ 2024ರ ನಡುವೆ ಈ ಮಹತ್ವದ ಕಾರ್ಯ ನಡೆಯಲಿದೆ. ಸಂಪೂರ್ಣವಾಗಿ ರಕ್ಷಣಾ ಸಾಮಗ್ರಿ ದೇಶದಲ್ಲೇ ಉತ್ಪಾದನೆ ಆಗಲಿದೆ. ಇದಕ್ಕಾಗಿ ಪ್ರತ್ಯೇಕ ಬಜೆಟ್ ಮುಖ್ಯಸ್ಥರ ನೇಮಕ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕತೆ, ಮೂಲಸೌಕರ್ಯ, ವ್ಯವಸ್ಥೆ, ಜನಸಂಖ್ಯೆ ಮತ್ತು ಬೇಡಿಕೆ ಎಂಬ 5 ಆಧಾರ ಸ್ತಂಭಗಳ ಮೇಲೆ ಸ್ವಾವಲಂಬಿ ಭಾರತಕ್ಕಾಗಿ ಸ್ಪಷ್ಟ ಕರೆ ನೀಡಿದ್ದಾರೆ. ಹೀಗಾಗಿ ಸ್ವಾವಲಂಬಿ ಭಾರತಕ್ಕಾಗಿ `ಆರ್ಮಿ ಆತ್ಮ ನಿರ್ಭರ ಭಾರತ್’ ಹೆಸರಿನ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ರಕ್ಷಣಾ ಇಲಾಖೆ ಘೋಷಿಸಿದೆ ಎಂದು ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ.

    ಸಶಸ್ತ್ರ ಪಡೆಗಳ ಅವಶ್ಯಕತೆಗಳನ್ನು ಪೂರೈಸಲು ಡಿಆರ್‌ಡಿಒ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನಕಾರಾತ್ಮಕ ಪಟ್ಟಿಯಲ್ಲಿರುವ ವಸ್ತುಗಳನ್ನು ತಯಾರಿಸಲು ಇಂಡಸ್ಟ್ರಿಗಳಿಗೆ ಉತ್ತಮ ಅವಕಾಶವನ್ನು ನೀಡುತ್ತದೆ. ಸೇನಾ ಪಡೆಗಳು, ಸಾರ್ವಜನಿಕ ಮತ್ತು ಖಾಸಗಿಯ ಎಲ್ಲ ಷೇರುದಾರರ ಜತೆ ಹಲವು ಸುತ್ತಿನ ಸಮಾಲೋಚನೆ ನಡೆಸಿದ ಬಳಿಕ ರಕ್ಷಣಾ ಇಲಾಖೆ ಸಾಮಗ್ರಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಮುಂದಿನ ದಿನಗಳಲ್ಲಿ 6 ರಿಂದ 7 ವರ್ಷ ದೇಶೀಯ ಉದ್ಯಮದ ಮೇಲೆ ಸುಮಾರು 4 ಲಕ್ಷ ಕೋಟಿ ರೂ.ಗಳ ಒಪ್ಪಂದಗಳನ್ನು ಮಾಡಲಾಗುವುದು ಎಂದು ಅಂದಾಜಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

  • ಪಾಕ್ ಎಫ್ 16 ವಿರುದ್ಧ ಹೋರಾಡಲು ಬೇಕೇಬೇಕು – ರಕ್ಷಣಾ ಸಚಿವಾಲಯದಿಂದ ರಫೇಲ್ ರಹಸ್ಯ ದಾಖಲೆ ಕಳ್ಳತನ: ಕೇಂದ್ರ

    ಪಾಕ್ ಎಫ್ 16 ವಿರುದ್ಧ ಹೋರಾಡಲು ಬೇಕೇಬೇಕು – ರಕ್ಷಣಾ ಸಚಿವಾಲಯದಿಂದ ರಫೇಲ್ ರಹಸ್ಯ ದಾಖಲೆ ಕಳ್ಳತನ: ಕೇಂದ್ರ

    ನವದೆಹಲಿ: ಪಾಕಿಸ್ತಾನದ ಎಫ್ 16 ವಿಮಾನಕ್ಕೆ ತಡೆ ಒಡ್ಡಬೇಕಾದರೆ ಭಾರತಕ್ಕೆ ರಫೇಲ್ ಯುದ್ಧ ವಿಮನ ಅಗತ್ಯವಿದೆ ಎಂದು ಹೇಳಿ, ರಫೇಲ್ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ರಕ್ಷಣಾ ಸಚಿವಾಲಯದಿಂದ ಕಳ್ಳತನವಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ.

    ರಫೇಲ್ ತೀರ್ಪಿನ ಮರುಪರಿಶೀಲನಾ ಅರ್ಜಿ ವಿಚಾರಣೆ ಇಂದು ಮುಖ್ಯ ನ್ಯಾ. ರಂಜನ್ ಗೊಗೋಯ್, ನ್ಯಾ. ಸಂಜೀವ್ ಕಿಶನ್ ಕೌಲ್, ನ್ಯಾ. ಕೆಎಂ ಜೋಸೆಫ್ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆಯಿತು. ಈ ವೇಳೆ ಅರ್ಜಿದಾರರಾದ ಪ್ರಶಾಂತ್ ಭೂಷಣ್ ಮಾಧ್ಯಮವೊಂದರಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿಸಿದರು. ಈ ಸಂದರ್ಭದಲ್ಲಿ ಕೋರ್ಟ್ ಈ ಅರ್ಜಿಗೆ ಸಂಬಂಧಿಸಿದಂತೆ ನಾವು ಯಾವುದೇ ಹೊಸ ದಾಖಲೆಗಳನ್ನು ಪರಿಗಣಿಸುವುದಿಲ್ಲ ಎಂದು ಹೇಳಿತು.

    ನ್ಯಾಯಾಲಯದಿಂದ ಈ ಅಭಿಪ್ರಾಯ ಬಂದ ಕೂಡಲೇ, ಈ ದಾಖಲೆಗಳು ಸೂಕ್ಷವಾಗಿದ್ದು, ರಕ್ಷಣಾ ಸಚಿವಾಲಯದ ಮೂಲಗಳಿಂದ ನಾನು ಪಡೆದಿದ್ದೇನೆ ಪ್ರಶಾಂತ್ ಭೂಷಣ್ ತಿಳಿಸಿದರು. ಈ ಸಂದರ್ಭದಲ್ಲಿ ಅಟಾರ್ನಿ ಜನರಲ್ ಕೆಸಿ ವೇಣುಗೋಪಾಲ್, ರಕ್ಷಣಾ ಸಚಿವಾಲಯದಿಂದ ಕಳ್ಳತನವಾಗಿರುವ ಮಾಹಿತಿಯನ್ನು ಆಧಾರವಾಗಿ ಇಟ್ಟುಕೊಂಡು ಉಲ್ಲೇಖಿಸಿ ವರದಿಯನ್ನು  ಪ್ರಶಾಂತ್ ಭೂಷಣ್ ಹೇಳುತ್ತಿದ್ದಾರೆ. ರಕ್ಷಣಾ ಇಲಾಖೆಯ ಮಾಜಿ ಅಥವಾ ಹಾಲಿ ಉದ್ಯೋಗಿಗಳು ದಾಖಲೆಗಳನ್ನು ಕದ್ದಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

    ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯ ನ್ಯಾ. ರಂಜನ್ ಗೊಗೋಯ್ ಈ ಸಂಬಂಧ ಸರ್ಕಾರ ಏನು ಕ್ರಮವನ್ನು ತೆಗೆದುಕೊಂಡಿದೆ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ತನಿಖೆ ನಡೆಯುತ್ತಿದೆ ಎಂದು ಎಜೆ ಉತ್ತರಿಸಿದರು.

    ರಫೇಲ್ ಸುದ್ದಿ ಪ್ರಕಟಿಸಿ ವಿಚಾರಣೆ ವೇಳೆ ಪ್ರಭಾವ ಮೂಡಿಸುವ ಯತ್ನ ನಡೆಯುತ್ತಿದೆ. ಈ ಕಾರಣಕ್ಕಾಗಿ ಮಂಗಳವಾರ ಒಂದು ಸುದ್ದಿ ಪ್ರಕಟವಾಗಿದ್ದರೆ ಇಂದು ಇನ್ನೊಂದು ಸುದ್ದಿ ಪ್ರಕಟವಾಗಿದೆ. ಈ ಸುದ್ದಿಯನ್ನು ಆಧಾರವಾಗಿಟ್ಟುಕೊಂಡು ಅರ್ಜಿದಾರರು ವಾದಿಸುತ್ತಿದ್ದಾರೆ. ಅರ್ಜಿದಾರರು ಉಲ್ಲೇಖಿಸಿದ ಮಾಹಿತಿ ಅಧಿಕೃತ ರಹಸ್ಯ ಕಾಯ್ದೆಯ ಅಡಿಯಲ್ಲಿ ಬರುತ್ತದೆ ಮತ್ತು ನ್ಯಾಯಾಂಗದ ಉಲ್ಲಂಘನೆಯಾಗಿದೆ. ಈ ಮಾಹಿತಿಗಳು ಸಾರ್ವಜನಿಕವಾಗಿ ಲಭ್ಯವಾಗಬಾರದು. ಹೀಗಾಗಿ ಇದು ಅಧಿಕೃತ ರಹಸ್ಯ ಕಾಯ್ದೆಯ ಉಲ್ಲಂಘನೆ. ಈ ದಾಖಲೆಗಳನ್ನು ಯಾವುದೇ ಕಾರಣಕ್ಕೆ ಅರ್ಜಿಯ ಜೊತೆ ಪರಿಗಣಿಸಬಾರದು ಎಂದು ವಾದಿಸಿದರು.

    ರಫೇಲ್ ಖರೀದಿ ಪ್ರಕ್ರಿಯೆ ನ್ಯಾಯಾಂಗದ ಪರಾಮರ್ಶೆಯ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ತೀರ್ಪು ಮರುಪರಿಶೀಲನೆ ನಡೆಸಬೇಕೆಂದು ಸಲ್ಲಿಕೆಯಾದ ಎಲ್ಲ ಅರ್ಜಿಗಳನ್ನು ವಜಾಗೊಳಿಸಬೇಕೆಂದು ಎಜಿ ಮನವಿ ಮಾಡಿದರು.

    ಏರ್ ಸರ್ಜಿಕಲ್ ಸ್ಟ್ರೈಕ್ ನಡೆದ ಬಳಿಕ ಪಾಕ್ ಸೇನೆಯ ದಾಳಿಯನ್ನು ಪ್ರಸ್ತಾಪಿಸಿದ ಎಜೆ, ಒಂದು ವೇಳೆ ಎಫ್ 16 ವಿಮಾನಗಳಿಗೆ ತಡೆ ಒಡ್ಡಬೇಕಾದರೆ ರಫೇಲ್ ದೇಶಕ್ಕೆ ಅಗತ್ಯವಿದೆ. ಈಗಾಗಲೇ ತರಬೇತಿಗಾಗಿ ನಮ್ಮ ಪೈಲಟ್ ಗಳು ಪ್ಯಾರಿಸ್ ಗೆ ತೆರಳಿದ್ದಾರೆ. ಇದೇ ಸೆಪ್ಟೆಂಬರ್ ನಲ್ಲಿ ಹಾರಲು ಸಿದ್ಧವಾಗಿರುವ ಸ್ಥಿತಿಯಲ್ಲಿರುವ ರಫೇಲ್ ವಿಮಾನ ವಾಯುಸೇನೆಗೆ ಸೇರ್ಪಡೆಯಾಗಲಿದೆ ಎಂದು ಹೇಳಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.

    ವಿಚಾರಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತಾ ವಿಚಾರವನ್ನು ಉಲ್ಲಂಘಿಸಿ ಸರ್ಕಾರಿ ದಾಖಲೆಯನ್ನು ಪ್ರಕಟಿಸಿದ್ದಕ್ಕಾಗಿ ಎರಡು ಮಾಧ್ಯಮಗಳ ವಿರುದ್ಧ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಎಜೆ ನ್ಯಾಯಾಲಯಕ್ಕೆ ತಿಳಿಸಿದರು.

    ದೀರ್ಘವಾಗಿ ವಾದ, ಪ್ರತಿವಾದವನ್ನು ಆಲಿಸಿದ ಕೋರ್ಟ್ ಮುಂದಿನ ವಿಚಾರಣೆಯನ್ನು ಮಾರ್ಚ್ 14ರ ಮಧ್ಯಾಹ್ನ 3 ಗಂಟೆಗೆ ಮುಂದೂಡಿತು.

    ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ ಕೇಂದ್ರದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದಾರೆ. ಇದರ ಜೊತೆಯಲ್ಲೇ ಕೇಂದ್ರ ಸರ್ಕಾರ ತೀರ್ಪಿನ ಉಲ್ಲೇಖ ಇರುವ ವಾಕ್ಯದಲ್ಲಿ ಕೆಲವು ತಿದ್ದುಪಡಿಗಳಾಗಬೇಕಿದೆ ಎಂದು ಅಫಿಡವಿಟ್ ಮನವಿ ಸಲ್ಲಿಸಿತ್ತು. ಮಹಾಲೇಖಪಾಲರ ವರದಿ(ಸಿಎಜಿ) ಹಾಗೂ ಪಿಎಸಿಗೆ ಸಂಬಂಧಿಸಿದ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿತ್ತು. ಈ ದಾಖಲೆಗಳ ವಿಷಯವನ್ನು ತಪ್ಪಾಗಿ ವ್ಯಾಖ್ಯಾನ ಮಾಡಲಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೋರ್ಟ್ ಮೊರೆ ಹೋಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv