Tag: Deepti Sharma

  • ಕೊನೆಯಲ್ಲಿ ಸ್ನೇಹ್‌ ರಾಣಾ ಹೋರಾಟ ವ್ಯರ್ಥ – ವಿರೋಚಿತ ಸೋಲಿನೊಂದಿಗೆ ಆರ್‌ಸಿಬಿ ಮನೆಗೆ

    ಕೊನೆಯಲ್ಲಿ ಸ್ನೇಹ್‌ ರಾಣಾ ಹೋರಾಟ ವ್ಯರ್ಥ – ವಿರೋಚಿತ ಸೋಲಿನೊಂದಿಗೆ ಆರ್‌ಸಿಬಿ ಮನೆಗೆ

    – ಯುಪಿ ವಾರಿಯರ್ಸ್‌ಗೆ 12 ರನ್‌ಗಳ ರೋಚಕ ಜಯ

    ಲಕ್ನೋ: ಕೊನೆಯಲ್ಲಿ ಸ್ನೇಹ್‌‌ ರಾಣಾ ಭರ್ಜರಿ ಸಿಕ್ಸರ್‌, ಬೌಂಡರಿ ಆಟದ ಹೊರತಾಗಿಯೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡ ಯುಪಿ ವಾರಿಯರ್ಸ್‌ ವಿರುದ್ಧ 12 ರನ್‌ಗಳ ವಿರೋಚಿತ ಸೋಲು ಕಂಡಿದೆ. ಈ ಮೂಲಕ ಡಬ್ಲ್ಯೂಪಿಎಲ್‌ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ. ಮಾರ್ಚ್‌ 11 ರಂದು ಮುಂಬೈ ಇಂಡಿಯನ್ಸ್‌ ವಿರುದ್ಧ ಬಾಕಿ ಇರುವ ಒಂದು ಪಂದ್ಯವನ್ನಾಡಿ 2025ರ ಮಹಿಳಾ ಪ್ರೀಮಿಯರ್‌ ಲೀಗ್‌ ಅಭಿಯಾನಕ್ಕೆ ವಿದಾಯ ಹೇಳಲಿದೆ.

    ಇನ್ನೂ 2025ರ ಆವೃತ್ತಿಯ ಲೀಗ್‌ ಸುತ್ತಿನ ಕೊನೆಯ ಪಂದ್ಯವನ್ನಾಡಿದ ಯುಪಿ ವಾರಿಯರ್ಸ್‌ 12 ರನ್‌ಗಳ ರೋಚಕ ಗೆಲುವು ಸಾಧಿಸಿದೆ.

    ಕೊನೆಯ 12 ಎಸೆತಗಳಲ್ಲಿ ಆರ್‌ಸಿಬಿ ಗೆಲುವಿಗೆ 42 ರನ್‌ಗಳ ಅಗತ್ಯವಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಸ್ನೇಹ್‌ರಾಣಾ ನಿರೀಕ್ಷೆಗೂ ಮೀರಿದ ಬ್ಯಾಟಿಂಗ್‌ ಪ್ರದರ್ಶಿಸಿದರು. ದೀಪ್ತಿ ಶರ್ಮಾ ಅವರ ಬೌಲಿಂಗ್‌ಗೆ ಒಂದೇ ಓವರ್‌ನಲ್ಲಿ 28 ರನ್‌ (1, 4, 6, 6, 5nb, 6) ರನ್‌ ಸಿಡಿಸಿದರು. ಆದ್ರೆ 19ನೇ ಓವರ್‌ನ ಕೊನೇ ಎಸೆತದಲ್ಲಿ ಸಿಕ್ಸರ್‌ ಸಿಡಿಸಲು ಯತ್ನಿಸಿ ಕ್ಯಾಚ್‌ ನೀಡಿದರು. ಅಲ್ಲಿಯವರೆಗೂ ಗೆಲುವಿನ ಕನಸು ಕಂಡಿದ್ದ ಆರ್‌ಸಿಬಿ ಆಸೆಗೆ ತಣ್ಣೀರು ಎರಚಿದಂತಾಯ್ತು.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಯುಪಿ ತಂಡ 5 ವಿಕೆಟ್‌ ನಷ್ಟಕ್ಕೆ 225 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಆರ್‌ಸಿಬಿ 19.3 ಓವರ್‌ಗಳಲ್ಲಿ 123ರನ್‌ ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು. ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್‌ ಮಾಡಲು ಆರಂಭಿಸಿದ ಆರ್‌ಸಿಬಿ ಒಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ಆದ್ರೆ ನಿರ್ಣಾಯಕ ಪಂದ್ಯದಲ್ಲಿ ನಾಯಕಿ ಸ್ಮೃತಿ ಮಂಧಾನ, ಎಲ್ಲಿಸ್‌ ಪೆರ್ರಿ ಅವರ ಬ್ಯಾಟಿಂಗ್‌ ವೈಫಲ್ಯಕ್ಕೆ ತಂಡ ಬೆಲೆ ತೆರಬೇಕಾಯಿತು.

    ರಿಚಾ, ರಾಣಾ ಹೋರಾಟ ವ್ಯರ್ಥ:
    ಒಂದೆಡೆ ವಿಕೆಟ್‌ ಕಳೆದುಕೊಂಡಿದ್ದ ಆರ್‌ಸಿಬಿಗೆ ರಿಚಾ ಘೋಷ್‌ ಬ್ಯಾಟಿಂಗ್‌ನಲ್ಲಿ ಬಲ ತುಂಬಿದ್ದರು. ಕೇವಲ 33 ಎಸೆತಗಳಲ್ಲಿ 69 ರನ್‌ (6 ಬೌಂಡರಿ, 5 ಸಿಕ್ಸ್‌) ಗಳಿಸಿ ಔಟಾದರು. ಇದರೊಂದಿಗೆ ಪೆರ್ರಿ 28 ರನ್‌, ಜಾರ್ಜಿಯಾ 17 ರನ್‌, ಶಬ್ನೇನಿ ಮೇಘನಾ 27 ರನ್‌, ಕೊನೆಯಲ್ಲಿ ಸ್ನೇಹ್‌ ರಾಣಾ 6 ಎಸೆತಗಳಲ್ಲಿ 26 ರನ್‌ ಕೊಡುಗೆ ನೀಡಿದರು.

    WPL ಇತಿಹಾಸದಲ್ಲೇ ದಾಖಲೆಯ ರನ್‌:
    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು‌ ಬ್ಯಾಟಿಂಗ್‌ ಮಾಡಿದ ಯುಪಿ ವಾರಿಯರ್ಸ್‌ ತಂಡ ಆರಂಭದಿಂದಲೇ ಆರ್‌ಸಿಬಿ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಬೆಂಡೆತ್ತಲು ಶುರು ಮಾಡಿತು. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 225 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇದು ಇನ್ನಿಂಗ್ಸ್‌ವೊಂದರಲ್ಲಿ ತಂಡವೊಂದರಿಂದ ದಾಖಲಾದ ಗರಿಷ್ಠ ರನ್‌ ಸಹ ಆಗಿದೆ. ಮತ್ತೊಂದೆಡೆ ಅಜೇಯ 99 ರನ್ ಗಳಿಸಿದ ಜಾರ್ಜಿಯಾ, ಕೇವಲ ಒಂದು ರನ್ ಅಂತರದಿಂದ ಶತಕ ವಂಚಿತರಾದರು.

    ಆರಂಭಿಕರಾಗಿ ಕಣಕ್ಕಿಳಿದ ಯುಪಿಗೆ ಗ್ರೇಸ್ ಹ್ಯಾರಿಸ್ ಹಾಗೂ ಜಾರ್ಜಿಯಾ ವೊಲ್ ಸ್ಫೋಟಕ ಆರಂಭ ತಂದುಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 7.1 ಓವರ್‌ಗಳಲ್ಲೇ 77 ರನ್‌ಗಳ ಜೊತೆಯಾಟ ಕಟ್ಟಿದರು. ಹ್ಯಾರಿಸ್ 22 ಎಸೆತಗಳಲ್ಲಿ 39 ರನ್ ಗಳಿಸಿದರು. ಬಳಿಕ ಕ್ರೀಸಿಗಿಳಿದ ಕಿರಣ್ ನವಗಿರೆ ಕೇವಲ 16 ಎಸೆತಗಳಲ್ಲಿ ಸ್ಫೋಟಕ 46 ರನ್ (5 ಸಿಕ್ಸರ್, 2 ಬೌಂಡರಿ) ಗಳಿಸಿ ಅಬ್ಬರಿಸಿದರು. ವಿಕೆಟ್‌ನ ಇನ್ನೊಂದು ತುದಿಯಿಂದ ಬಿರುಸಿನ ಆಟವಾಡಿದ ಜಾರ್ಜಿಯಾ, ಆರ್‌ಸಿಬಿ ಬೌಲರ್‌ಗಳನ್ನು ಬೆಂಡೆತ್ತಿದರು. ಇನಿಂಗ್ಸ್‌ನ ಕೊನೆಯ ಎಸೆತದವರೆಗೂ ಸ್ಫೋಟಕ ಪ್ರದರ್ಶನ ನೀಡಿದ ಜಾರ್ಜಿಯಾ ಕೇವಲ ಒಂದು ರನ್ನಿನಿಂದ ಶತಕ ವಂಚಿತರಾದರು.

    56 ಎಸೆತಗಳನ್ನು ಎದುರಿಸಿದ ಜಾರ್ಜಿಯಾ ಇನಿಂಗ್ಸ್‌ನಲ್ಲಿ 17 ಬೌಂಡರಿ ಹಾಗೂ ಒಂದು ಸಿಕ್ಸ‌ರ್‌ನೊಂದಿಗೆ 99 ರನ್‌ಗಳಿಸಿ ಅಜೇಯರಾಗುಳಿದರು.

  • ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲೇ ಗರಿಷ್ಠ ರನ್‌ ದಾಖಲೆ – ಐರ್ಲೆಂಡ್‌ ವಿರುದ್ಧ ಸರಣಿ ಗೆದ್ದ ಸಿಂಹಿಣಿಯರು

    ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲೇ ಗರಿಷ್ಠ ರನ್‌ ದಾಖಲೆ – ಐರ್ಲೆಂಡ್‌ ವಿರುದ್ಧ ಸರಣಿ ಗೆದ್ದ ಸಿಂಹಿಣಿಯರು

    ರಾಜ್‌ಕೋಟ್‌: ಐರ್ಲೆಂಡ್‌ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ವನಿತೆಯರು (Team India Womens) ಇತಿಹಾಸ ನಿರ್ಮಿಸಿದ್ದಾರೆ.

    50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 435 ರನ್‌ ಗಳಸಿದ ಭಾರತದ ವನಿಯರು 304 ರನ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್‌ಸ್ವೀಪ್‌ ಮಾಡಿದ್ದಾರೆ.

    ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 435 ರನ್‌ ಸಿಡಿಸಿತ್ತು. 436 ರನ್‌ಗಳ ಬೃಹತ್‌ ಮೊತ್ತದ ಗುರಿ ಪಡೆದ ಐರ್ಲೆಂಡ್‌ ಮಹಿಳಾ ತಂಡ (Ireland Womens Team) 131 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು.

    ಸ್ಮೃತಿ, ಪ್ರತಿಕಾ ಶತಕಗಳ ಆರ್ಭಟ:
    ಆರಂಭಿಕರಾಗಿ ಕಣಕ್ಕಳಿದ ಪ್ರತೀಕಾ ರಾವಲ್ (Pratika Rawal) ಹಾಗೂ ಸ್ಮೃತಿ ಮಂಧಾನ (Smriti Mandhana) ಜೋಡಿ ಮೊದಲ ವಿಕೆಟ್‌ಗೆ 233 ರನ್‌ ಗಳ ಭರ್ಜರಿ ಜೊತೆಯಾಟ ನೀಡಿತು. ಆರಂಭದಿಂದಲೇ ಈ ಜೋಡಿ ಐರ್ಲೆಂಡ್‌ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಚೆಂಡಾಡಿತು. ಪ್ರತೀಕಾ 129 ಎಸೆತಗಳಲ್ಲಿ 154 ರನ್‌ (20 ಬೌಂಡರಿ, 1 ಸಿಕ್ಸರ್)‌ ಚಚ್ಚಿದ್ರೆ, ಮತ್ತೋರ್ವ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 80 ಎಸೆತಗಳಲ್ಲಿ ಸ್ಫೋಟಕ 135 ರನ್‌ (12 ಬೌಂಡರಿ, 7 ಸಿಕ್ಸರ್)‌ ಸಿಡಿಸಿ ಮಿಂಚಿದರು. ಇದು ತಂಡದ ಬೃಹತ್‌ ಮೊತ್ತಕ್ಕೆ ಕಾರಣವಾಯ್ತು. ಇದರೊಂದಿಗೆ ರಿಚಾ ಘೋಷ್‌ 59 ರನ್‌, ತೇಜಲ್ ಹಸಬ್ನಿಸ್ 28 ರನ್‌, ಹರ್ಲಿನ್‌ ಡಿಯೋಲ್‌ 15 ರನ್‌, ದೀಪ್ತಿ ಶರ್ಮಾ 11 ರನ್‌ ಹಾಗೂ ಜೆಮಿಮಾ ರೊಡ್ರಿಗ್ಸ್‌ 4 ರನ್‌ಗಳ ಕೊಡುಗೆ ನೀಡಿದರು.

    ಭಾರತದ ಇತಿಹಾಸದಲ್ಲೇ ಅತ್ಯಧಿಕ ರನ್‌:
    ಐರ್ಲೆಂಡ್‌ ವಿರುದ್ಧ ಸರಣಿಯ ಕೊನೇ ಪಂದ್ಯದಲ್ಲಿ ಭಾರತೀಯ ವನಿತೆಯರು 435 ರನ್‌ ಗಳಿಸಿದ್ದು, ಭಾರತೀಯ ಏಕದಿನ ಕ್ರಿಕೆಟ್‌ ಇತಿಹಾಸದಲ್ಲೇ ಗರಿಷ್ಠ ರನ್‌ ಆಗಿದೆ. ಪುರುಷರ ಏಕದಿನ ಕ್ರಿಕೆಟ್‌ನಲ್ಲಿ 2011ರಲ್ಲಿ ಭಾರತ ವೆಸ್ಟ್‌ಇಂಡೀಸ್‌ ವಿರುದ್ಧ 418 ರನ್‌ ಗಳಿಸಿದ್ದು, ಈವರೆಗಿನ ದಾಖಲಾಗಿತ್ತು.

    ಐತಿಹಾಸಿಕ ಜಯ
    ಭಾರತೀಯ ವನಿಯರು 304 ರನ್‌ಗಳ ಅಂತರದಲ್ಲಿ ಐರ್ಲೆಂಡ್‌ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮಹಿಳೆಯರ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ಗಳಿಂದ ಗೆಲುವು ಶಾಧಿಸಿದ 7ನೇ ತಂಡವೆಂಬ ವಿಶೇಷ ಸಾಧನೆಗೆ ಪಾತ್ರರಾದರು. ಇದಕ್ಕೂ ಮುನ್ನ ನ್ಯೂಜಿಲೆಂಡ್‌ (408 ರನ್‌), ಆಸೀಸ್‌ (374 ರನ್‌), ಆಸೀಸ್‌ (363 ರನ್‌), ನ್ಯೂಜಿಲೆಂಡ್‌ (347 ರನ್‌), ನ್ಯೂಜಿಲೆಂಡ್‌ (306 ರನ್‌), ನ್ಯೂಜಿಲೆಂಡ್‌ (305 ರನ್‌) ಕ್ರಮವಾಗಿ ಮೊದಲ 6 ಸ್ಥಾನಗಳಲ್ಲಿವೆ.

    ವಿಶ್ವದ 4ನೇ ತಂಡ:
    ಇನ್ನೂ ಭಾರತೀಯ ಮಹಿಳಾ ತಂಡ, ಏಕದಿನ ಕ್ರಿಕೆಟ್‌ನ ಇನ್ನಿಂಗ್ಸ್‌ವೊಂದರಲ್ಲಿ ಅತ್ಯಧಿಕ ರನ್‌ ಗಳಿಸಿದ 4ನೇ ತಂಡವಾಗಿಯೂ ಹೊರಹೊಮ್ಮಿದೆ. ಇದಕ್ಕೂ ಮುನ್ನ ನ್ಯೂಜಿಲೆಂಡ್‌ (491 ರನ್‌, 455 ರನ್‌, 440 ರನ್‌) ಮೊದಲ ಮೂರು ಸ್ಥಾನಗಳಲ್ಲಿದೆ.

  • WPL 2024: ವಾರಿಯರ್ಸ್‌ ಮನೆಗೆ – ಆರ್‌ಸಿಬಿಗೆ ಪ್ಲೇ ಆಫ್‌ಗೆ; ಅಭಿಮಾನಿಗಳು ಖುಷ್‌

    WPL 2024: ವಾರಿಯರ್ಸ್‌ ಮನೆಗೆ – ಆರ್‌ಸಿಬಿಗೆ ಪ್ಲೇ ಆಫ್‌ಗೆ; ಅಭಿಮಾನಿಗಳು ಖುಷ್‌

    – ದೀಪ್ತಿ ಶರ್ಮಾ ಅರ್ಧಶತಕದ ಹೋರಾಟ ವ್ಯರ್ಥ
    – ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ಗೆದ್ದು ಬೀಗಿದ ಗುಜರಾತ್‌

    ನವದೆಹಲಿ: ದೀಪ್ತಿ ಶರ್ಮಾ (Deepti Sharma) ಅವರ ಸ್ಫೋಟಕ ಬ್ಯಾಟಿಂಗ್‌ ಹೊರತಾಗಿಯೂ ಗುಜರಾತ್‌ ಜೈಂಟ್ಸ್‌ (Gujarat Giants) ಮಹಿಳಾ ತಂಡ, ಯುಪಿ ವಾರಿಯರ್ಸ್‌ ವಿರುದ್ಧ 8 ರನ್‌ಗಳ ಜಯ ಸಾಧಿಸಿದೆ. ಪ್ಲೇಫ್‌ ರೇಸ್‌ನಲ್ಲಿದ್ದ ಯುಪಿ ವಾರಿಯರ್ಸ್‌ ತಂಡ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಈ ಸೋಲಿನಿಂದ ಆರ್‌ಸಿಬಿ (RCB) ಪ್ಲೇ ಆಫ್‌ ಖಚಿತಪಡಿಸಿಕೊಂಡಿದೆ.

    ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಜೈಂಟ್ಸ್‌ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 152 ರನ್‌ ಗಳಿಸಿತ್ತು. 153 ರನ್‌ಗಳ ಗುರಿ ಬೆನ್ನತ್ತಿದ್ದ ಯುಪಿ ವಾರಿಯರ್ಸ್‌ (UP Warriorz) 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 144 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಈ ಸೋಲಿನೊಂದಿಗೆ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿತು. ಇದನ್ನೂ ಓದಿ: ಭಾರೀ ಹೈಡ್ರಾಮಾ ಬಳಿಕ ಟ್ರಯಲ್ಸ್‌ನಲ್ಲಿ ವಿನೇಶ್‌ಗೆ ವಿಜಯ – ಪ್ಯಾರಿಸ್‌ ಒಲಿಂಪಿಕ್ಸ್‌ ಕನಸು ಜೀವಂತ

    ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಹೀನಾಯ ಸೋಲನುಭವಿಸಿದ್ದ ಗುಜರಾತ್‌ ಜೈಂಟ್ಸ್‌ ತಂಡ ಬಳಿಕ ಮೂರು ಪಂದ್ಯಗಳಲ್ಲಿ ಸುಧಾರಿತ ಪ್ರದರ್ಶನ ನೀಡಿತ್ತು. ಸದ್ಯ 7 ಪಂದ್ಯಗಳಲ್ಲಿ 2 ರಲ್ಲಿ ಗೆಲುವು ಸಾಧಿಸಿರುವ ಗುಜರಾತ್‌ ಜೈಂಟ್ಸ್‌ ಮಾ.13 ರಂದು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಕೊನೆಯ ಪಂದ್ಯವನ್ನಾಡಲಿದೆ. ಈ ಪಂದ್ಯದಲ್ಲಿ ಗೆದ್ದರೂ ಸೋತರೂ ಗುಜರಾತ್‌ ತಂಡ ಮನೆಗೆ ತೆರಳಬೇಕಿದೆ. ಯುಪಿ ವಾರಿಯರ್ಸ್‌ ತಂಡವು ತನ್ನ ಲೀಗ್‌ ಸುತ್ತಿನ ಎಲ್ಲಾ ಪಂದ್ಯಗಳನ್ನಾಡಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಹೀಗಾಗಿ 3ನೇ ಸ್ಥಾನದಲ್ಲಿರುವ ಆರ್‌ಸಿಬಿ ಮಾ.12 ರಂದು ನಡೆಯಲಿರುವ ಕೊನೆಯ ಲೀಗ್‌ ಪಂದ್ಯದಲ್ಲಿ ಗೆದ್ದರೂ ಸೋತರೂ ಪ್ಲೇ ಆಫ್‌ ತಲುಪಲಿದೆ.

    ಗುಜರಾತ್‌ ಜೈಂಟ್ಸ್‌ ಪರ ಲಾರಾ ವೊಲ್ವಾರ್ಡ್ಟ್ 43 ರನ್‌, ಬೆತ್‌ ಮೂನಿ 74 ರನ್‌ ಹಾಗೂ ಆಶ್ಲೀಗ್ ಗಾರ್ಡ್ನರ್ 15 ರನ್‌, ಕ್ಯಾಥರಿನ್ ಬ್ರೈಸ್ 11 ರನ್‌ ಗಳಿಸಿದ್ರೆ ಉಳಿದವರು ಅಲ್ಪಮೊತ್ತಕ್ಕೆ ನಿರ್ಗಮಿಸಿದರು. ಚೇಸಿಂಗ್‌ ಆರಂಭಿಸಿದ ಯುಪಿ ವಾರಿಯರ್ಸ್‌ ತಂಡದ ಪರ ಕೊನೆಯವರೆಗೂ ಹೋರಾಡಿದ ದೀಪ್ತಿ ಶರ್ಮಾ 60 ಎಸೆತಗಳಲ್ಲಿ 4 ಸಿಕ್ಸರ್‌, 9 ಬೌಂಡರಿಗಳೊಂದಿಗೆ 88 ರನ್‌ ಗಳಿಸಿದ್ರೆ, ಪೂನಂ ಖೇಮ್ನಾರ್ 36 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.ಇದನ್ನೂ ಓದಿ: ಐತಿಹಾಸಿಕ ಸಾಧನೆ ಬೆನ್ನಲ್ಲೇ ಬಿಸಿಸಿಐನಿಂದ ಗುಡ್‌ನ್ಯೂಸ್‌ – ವಾರ್ಷಿಕ ಸಂಬಳ ಹೊರತುಪಡಿಸಿ ವಿಶೇಷ ವೇತನ ಘೋಷಣೆ

  • WPL 2024 ಹರಾಜಿಗೆ 165 ಪ್ಲೇಯರ್ಸ್‌ ನೋಂದಣಿ – ಯಾರಾಗ್ತಾರೆ ಈ ಬಾರಿಯ ಟಾಪ್‌ ಪ್ಲೇಯರ್‌?

    WPL 2024 ಹರಾಜಿಗೆ 165 ಪ್ಲೇಯರ್ಸ್‌ ನೋಂದಣಿ – ಯಾರಾಗ್ತಾರೆ ಈ ಬಾರಿಯ ಟಾಪ್‌ ಪ್ಲೇಯರ್‌?

    ಮುಂಬೈ: 17ನೇ ಆವೃತ್ತಿಯ ಐಪಿಎಲ್‌ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್‌ 19ರಂದು ದುಬೈನಲ್ಲಿ ನಡೆಯಲಿದೆ. ಈ ನಡುವೆ ಟಾಟಾ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2024 Auction) 2ನೇ ಆವೃತ್ತಿಗೆ ನಿಗದಿಯಾಗಿರುವ ಆಟಗಾರ್ತಿಯರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಡಿಸೆಂಬರ್‌ 9 ರಂದು ಮುಂಬೈನಲ್ಲಿ (Mumbai) ಹರಾಜು ಪ್ರಕ್ರಿಯೆ ನಡೆಯಲಿದೆ.

    ಹರಾಜಿಗೆ 165 ಪ್ಲೇಯರ್‌ಗಳನ್ನ ಪಟ್ಟಿ ಮಾಡಲಾಗಿದೆ. ಈ ಪೈಕಿ 104 ಭಾರತೀಯರು ಮತ್ತು 61 ವಿದೇಶಿಯರಿದ್ದಾರೆ. ಐಸಿಸಿ ಪೂರ್ಣ ಸದಸ್ಯತ್ವ ಪಡೆಯದ ರಾಷ್ಟ್ರಗಳ 15 ಆಟಗಾರ್ತಿಯರು ಇದ್ದಾರೆ. ಒಟ್ಟು 56 ಕ್ಯಾಪ್ಡ್ ಪ್ಲೇಯರ್ಸ್‌ ಇದ್ದರೆ, ಅನ್ ಕ್ಯಾಪ್ಡ್ ಪ್ಲೇಯರ್ಸ್‌ 109 ಮಂದಿ ಇದ್ದಾರೆ. ಇದನ್ನೂ ಓದಿ: WPLನಲ್ಲಿ ನೋಬಾಲ್‌ ವಿವಾದ – ಚಾಂಪಿಯನ್‌ ಪಟ್ಟ ಕೈತಪ್ಪಿಸಿದ ಆ ಒಂದು ಔಟ್‌

    2ನೇ ಆವೃತ್ತಿಗಾಗಿ ಒಟ್ಟು 5 ತಂಡಗಳಿಂದ 60 ಆಟಗಾರ್ತಿಯರನ್ನ ರಿಟೇನ್‌ ಮಾಡಿಕೊಳ್ಳಲಾಗಿದೆ. ಇದರಲ್ಲಿ 21 ವಿದೇಶಿಗರು ಇದ್ದಾರೆ. ಇನ್ನುಳಿದವರನ್ನ ಖರೀದಿಸಲು 5 ತಂಡಗಳ ಬಳಿ 17.65 ಕೋಟಿ ರೂ. ಮಾತ್ರ ಬಾಕಿ ಉಳಿದಿದ್ದು, 30 ಸ್ಲಾಟ್‌ಗಳು ಬಾಕಿಯಿದೆ. 9 ವಿದೇಶಿ ಆಟಗಾರ್ತಿಯರಿಗೆ ಅವಕಾಶವಿದೆ. ಇದನ್ನೂ ಓದಿ: ರೋಚಕ ಫೈನಲ್‌ – ಮುಂಬೈ ಇಂಡಿಯನ್ಸ್‌ ಚೊಚ್ಚಲ WPL ಚಾಂಪಿಯನ್‌

    ಯಾವ ತಂಡದ ಬಳಿ ಎಷ್ಟು ಹಣವಿದೆ?
    ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಈಗಾಗಲೇ 11.25 ಕೋಟಿ ರೂ. ಖರ್ಚು ಮಾಡಿದ್ದು, 2.25 ಕೋಟಿ ರೂ. ಪರ್ಸ್‌ನಲ್ಲಿ ಉಳಿಸಿಕೊಂಡಿದೆ. ಹಾಲಿ ಚಾಂಪಿಯನ್ಸ್‌ ಆಗಿರುವ ಮುಂಬೈ ಇಂಡಿಯನ್ಸ್‌ ಬಳಿ ಕೇವಲ 2.1 ಕೋಟಿ ರೂ. ಮಾತ್ರವೇ ಬಾಕಿಯಿದ್ದು, ಉಳಿದ ತಂಡಗಳ ಪೈಕಿ ಅತ್ಯಂತ ಕಡಿಮೆ ಮೊತ್ತ ಉಳಿಸಿಕೊಂಡಿದೆ. ಇನ್ನುಳಿದಂತೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 3.35 ಕೋಟಿ ರೂ., ಯುಪಿ ವಾರಿಯರ್ಸ್‌ 4 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಆದ್ರೆ ಗುಜರಾತ್‌ ಜೈಂಟ್ಸ್‌ 5.95 ಕೋಟಿ ರೂ. ಹಣ ಉಳಿಸಿಕೊಂಡಿದ್ದು, ಹೆಚ್ಚಿನ ಆಟಗಾರ್ತಿಯರನ್ನ ಖರೀದಿಸುವ ಅವಕಾಶ ಹೊಂದಿದೆ.

    50 ಲಕ್ಷ ರೂ. ಮೂಲ ಬೆಲೆಯ ಇಬ್ಬರು ಆಟಗಾರ್ತಿಯರು (ಡಿಯಾಂಡ್ರಾ ಡಾಟಿನ್ ಮತ್ತು ಕಿಮ್ ಗಾರ್ತ್) ಮುಂಚೂಣಿಯಲ್ಲಿದ್ದಾರೆ. ಇನ್ನುಳಿದಂತೆ 40 ಲಕ್ಷ ಮೂಲ ಬೆಲೆಯ ನಾಲ್ವರು ಪ್ಲೇಯರ್ಸ್‌ ಹರಾಜು ಪಟ್ಟಿಯಲ್ಲಿದ್ದಾರೆ. ಇದನ್ನೂ ಓದಿ: WPL Auction 2023ː ದುಬಾರಿ ಬೆಲೆಗೆ RCB ಪಾಲಾದ ಸ್ಮೃತಿ ಮಂದಾನ – ಯಾವ ತಂಡದಲ್ಲಿ ಯಾರಿದ್ದಾರೆ?

    ಮಂದಾನ ಟಾಪ್‌: ಇದೇ ವರ್ಷದಲ್ಲಿ ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ ಚೊಚ್ಚಲ ಆವೃತ್ತಿಗೆ ಭಾರತದ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂದಾನ (Smriti Mandhana) ದುಬಾರಿ ಬೆಲೆಗೆ ಆರ್‌ಸಿಬಿ (RCB) ತಂಡದ ಪಾಲಾದರು. 3.40 ಕೋಟಿ ರೂ. ಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸ್ಮೃತಿ ಅವರನ್ನು ಖರೀದಿಸಿತು. ಆಸ್ಟ್ರೇಲಿಯಾ ಮಹಿಳಾ ತಂಡದ ಆಶ್ಲೀಗ್ ಗಾರ್ಡ್ನರ್ (Ashleigh Gardner) 3.2 ಕೋಟಿಗೆ ಗುಜರಾತ್ ಜೈಂಟ್ಸ್ ತಂಡದ ಪಾಲಾಗಿ 2ನೇ ದುಬಾರಿ ಆಟಗಾರ್ತಿ ಎನಿಸಿಕೊಂಡರು. ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) 1.80 ಕೋಟಿ ರೂ.ಗಳಿಗೆ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಗೆ ಸೇರ್ಪಡೆಯಾದರು. ಆದ್ರೆ ಈ ಬಾರಿ ಡಿಯಾಂಡ್ರಾ ಡಾಟಿನ್ ಮತ್ತು ಕಿಮ್ ಗಾರ್ತ್ ಬೇಡಿಕೆಯ ಪ್ಲೇಯರ್‌ಗಳಾಗಿದ್ದು, 50 ಲಕ್ಷ ರೂ. ಮೂಲ ಬೆಲೆ ನಿಗದಿಯಾಗಿದೆ. ಹರಾಜಿನಲ್ಲಿ ಇವರ ಬೆಲೆ ಮತ್ತಷ್ಟು ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

  • WPL Auction 2023ː ದುಬಾರಿ ಬೆಲೆಗೆ RCB ಪಾಲಾದ ಸ್ಮೃತಿ ಮಂದಾನ – ಯಾವ ತಂಡದಲ್ಲಿ ಯಾರಿದ್ದಾರೆ?

    WPL Auction 2023ː ದುಬಾರಿ ಬೆಲೆಗೆ RCB ಪಾಲಾದ ಸ್ಮೃತಿ ಮಂದಾನ – ಯಾವ ತಂಡದಲ್ಲಿ ಯಾರಿದ್ದಾರೆ?

    ಮುಂಬೈ: ಐಪಿಎಲ್ ಹರಾಜು (WPL Auction 2023) ಪ್ರಕ್ರಿಯೆಯಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಮಂದಾನ (Smriti Mandhana) ದುಬಾರಿ ಬೆಲೆಗೆ ಆರ್‌ಸಿಬಿ (RCB) ತಂಡದ ಪಾಲಾಗಿದ್ದಾರೆ.

    3.40 ಕೋಟಿ ರೂ. ಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸ್ಮೃತಿ ಅವರನ್ನು ಖರೀದಿಸಿದೆ. ಈ ಮೂಲಕ ಬೆಂಗಳೂರು ಫ್ರಾಂಚೈಸಿ ಬಲಿಷ್ಠ ತಂಡವನ್ನು ಕಟ್ಟಲು ದುಬಾರಿ ಬೆಲೆ ವಿನಿಯೋಗಿಸಿದೆ. ಇದನ್ನೂ ಓದಿ: 951 ಕೋಟಿ ರೂ. ನೀಡಿ ಮಹಿಳಾ ಐಪಿಎಲ್ ಪ್ರಸಾರ ಹಕ್ಕು ಪಡೆದ Viacom18 – ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ.

    ಮುಂಬೈನಲ್ಲಿ (Mumbai) ನಡೆದ ಮಹಿಳಾ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಮಂದಾನ ದುಬಾರಿ ಮೊತ್ತಕ್ಕೆ ಹರಾಜಾಗಿದ್ದು, ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) 1.80 ಕೋಟಿ ರೂ.ಗಳಿಗೆ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಗೆ ಸೇರ್ಪಡೆಯಾಗಿದ್ದಾರೆ. ಇನ್ನೂ ಓದಿ: ಪಾಕ್ ಬೌಲರ್‌ಗಳ ಬೆವರಿಳಿಸಿದ ಜೆಮಿಮಾಗೆ ಸ್ಫೂರ್ತಿಯಾಗಿದ್ದು ಕೊಹ್ಲಿ ಇನ್ನಿಂಗ್ಸ್ǃ

    ಮುಂಬೈನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿ ಹರಾಜಿನಲ್ಲಿ 50 ಲಕ್ಷ ರೂ. ಮೂಲ ಬೆಲೆಯ ಸ್ಮೃತಿ ಮಂದಾನ ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ (Mumbai Indians) ನಡುವೆ ಸಾಕಷ್ಟು ಪೈಪೋಟಿ ನಡೆದಿತ್ತು. ಅಂತಿಮವಾಗಿ ಆರ್‌ಸಿಬಿ 3.4 ಕೋಟಿ ರೂ. ಗಳಿಗೆ ಮಂದಾನ ಅವರನ್ನ ಖರೀದಿಸುವಲ್ಲಿ ಯಶಸ್ವಿಯಾಯಿತು.

    ಸ್ಮೃತಿ ಮಂದಾನ ಆರ್‌ಸಿಬಿ ಸೇರ್ಪಡೆಯಾಗುತ್ತಿದ್ದಂತೆ `ನಮಸ್ಕಾರ ಬೆಂಗಳೂರು’ ಎಂದು ಟ್ವೀಟ್ ಮಾಡುವ ಮೂಲಕ ಖುಷಿ ಹಂಚಿಕೊಂಡಿದ್ದಾರೆ.

    ಇನ್ನುಳಿದಂತೆ ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಆಸ್ಟೇಲಿಯಾ ತಂಡದ ಆಶ್ಲೀಗ್ ಗಾರ್ಡ್ನರ್ (Ashleigh Gardner) 3.2 ಕೋಟಿಗೆ ಗುಜರಾತ್ ಜೈಂಟ್ಸ್ ತಂಡದ ಪಾಲಾಗಿದ್ದು, 2ನೇ ದುಬಾರಿ ಆಟಗಾರ್ತಿಯಾಗಿದ್ದಾರೆ. ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ 1.8 ಕೋಟಿಗೆ ಮುಂಬೈ ಇಂಡಿಯನ್ಸ್ ತಂಡದ ಪಾಲಾದರೆ, ದೀಪ್ತಿ ಶರ್ಮಾ (Deepti Sharma) 2.6 ಕೋಟಿಗೆ ಯುಪಿ ವಾರಿಯರ್ಸ್, ಶೆಫಾಲಿ ವರ್ಮಾ 1.90 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬಿಕರಿಯಾಗಿದ್ದಾರೆ.

    IPL

    ನ್ಯೂಜಿಲೆಂಡ್ ತಂಡದ ಸೋಫಿ ಡಿವೈನ್(50 ಲಕ್ಷ ರೂ.), ಆಸ್ಟ್ರೇಲಿಯಾದ ಎಲ್ಲಿಸ್ ಪರ‍್ರೆ (1.7 ಕೋಟಿ ರೂ.) ಹಾಗೂ ರೇಣುಕಾ ಸಿಂಗ್ (1.5 ಕೋಟಿ ರೂ.) ಅವರನ್ನು ಆರ್‌ಸಿಬಿ ಖರೀದಿಸಿದೆ.

    ಸೋಫಿ ಎಕ್ಲೆಸ್ಟೋನ್ 1.8 ಕೋಟಿ ರೂ. ನೀಡಿ ಯುಪಿ ವಾರಿಯರ್ಸ್ ಖರೀದಿಸಿದರೆ, ಇಂಗ್ಲೆಂಡ್‌ನ ನಟಾಲಿಯಾ ಸ್ಕಿವರ್‌ಗೆ ಮುಂಬೈ 3.2 ಕೋಟಿ ರೂ. ನೀಡಿದೆ. ತಾಲಿಯಾ ಮೆಕ್‌ಗ್ರಾತ್ ಅವರಿಗೆ ಯುಪಿ ವಾರಿಯರ್ಸ್ 1.4 ಕೋಟಿ ರೂ. ನೀಡಿದರೆ, ಗುಜರಾತ್ ಜೈಂಟ್ಸ್ ಆಸ್ಟ್ರೇಲಿಯಾದ ಬೆತ್ ಮೂನಿ ಅವರನ್ನು 2 ಕೋಟಿ ರೂ.ಗೆ ಬಿಡ್ ಮಾಡಿ ಗೆದ್ದಿದೆ.

    ಶಬ್ನಿಮ್ ಇಸ್ಮಾಯಿಲ್ ಅವರಿಗೆ ಯುಪಿ ವಾರಿಯರ್ಸ್ 1 ಕೋಟಿ ರೂ. ನೀಡಿದರೆ, ಮುಂಬೈ ಇಂಡಿಯನ್ಸ್ ಅಮೆಲಿಯಾ ಕೆರ್ ಅವರನ್ನು 1 ಕೋಟಿ ರೂ.ಗೆ ಬಿಡ್ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೊನೆಯ ಓವರ್ ಥ್ರಿಲ್ಲರ್ – ಆ ಒಂದು ‘ನೋ ಬಾಲ್‍’ನಿಂದ ಭಾರತ ತಂಡ ಮನೆಗೆ

    ಕೊನೆಯ ಓವರ್ ಥ್ರಿಲ್ಲರ್ – ಆ ಒಂದು ‘ನೋ ಬಾಲ್‍’ನಿಂದ ಭಾರತ ತಂಡ ಮನೆಗೆ

    ಕ್ರೈಸ್ಟ್ ಚರ್ಚ್: ಮಹಿಳಾ ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಎಡವಿದೆ. ಕೊನೆಯ ಓವರ್‌ನಲ್ಲಿ ಎಸೆದ ಆ ಒಂದು ನೋ ಬಾಲ್‍ನಿಂದಾಗಿ ಭಾರತ ಮಹಿಳಾ ತಂಡ ಪಂದ್ಯವನ್ನು ಕೈ ಚೆಲ್ಲಿ ಟೂರ್ನಿಯಿಂದ ಕಿಕ್ ಔಟ್ ಆಗಿದೆ.

     

    ಕೊನೆಯ ಓವರ್‌ನಲ್ಲಿ ಏನಾಯಿತು:
    ಕೊನೆಯ ಬಾಲ್ ವರೆಗೂ ರೋಚಕತೆಯಿಂದ ಕೂಡಿದ ಪಂದ್ಯದ ಕೊನೆಯ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 6 ಎಸೆತಗಳಲ್ಲಿ 7 ರನ್ ಬೇಕಾಗಿತ್ತು. ಟೀಂ ಇಂಡಿಯಾ ಪರ ಅನುಭವಿ ಬೌಲರ್ ದೀಪ್ತಿ ಶರ್ಮಾ ಕೊನೆಯ ಓವರ್ ಎಸೆಯಲು ಮುಂದಾದರು. ಆಫ್ರಿಕಾ ಪರ ಕೊನೆಯ ಓವರ್‌ನ ಮೊದಲ ಎಸೆತ ಎದುರಿಸಿದ ತ್ರಿಶಾ ಚೆಟ್ಟಿ 1 ರನ್ ಓಡಿದರು. ಎರಡನೇ ಎಸೆತದಲ್ಲಿ ಮಿಗ್ನಾನ್ ಡು ಪ್ರೀಜ್, ಲಾಂಗ್ ಆನ್ ಅತ್ತ ಹೊಡೆದು 2 ರನ್ ಕದಿಯಲು ಮುಂದಾದರು ಈ ವೇಳೆ ಹರ್ಮನ್‍ಪ್ರೀತ್ ಕೌರ್ ಕೈ ಸೇರಿದ ಚೆಂಡಿನಿಂದಾಗಿ, ತ್ರಿಶಾ ಚೆಟ್ಟಿ ರನೌಟ್ ಆಗಿ ಹೊರನಡೆದರು. ಕೊನೆಯ ನಾಲ್ಕು ಎಸೆತದಲ್ಲಿ 5 ರನ್ ಬೇಕಾಗಿತ್ತು. ಮೂರು ಮತ್ತು ನಾಲ್ಕನೇ ಎಸೆತದಲ್ಲಿ ತಲಾ ಒಂದೊಂದು ರನ್ ಬಂತು. ಕೊನೆಯ ಎರಡು ಎಸೆತದಲ್ಲಿ 3 ರನ್ ಅವಶ್ಯಕತೆ ಇತ್ತು. 5ನೇ ಎಸೆತ ಎಸೆದ ದೀಪ್ತಿ ಶರ್ಮಾ ನೋ ಬಾಲ್ ಮಾಡಿದರು. ಇದರಿಂದ ಫ್ರೀ ಹಿಟ್ ಸಹಿತ 2 ರನ್‍ಗಳನ್ನು ಆಫ್ರಿಕಾ ಬ್ಯಾಟರ್‌ಗಳು ಕಸಿದರು. ಕೊನೆಯ 1 ಬಾಲ್‍ಗೆ 1 ರನ್ ಅವಶ್ಯಕತೆ ಇದ್ದಾಗ ಸ್ಟ್ರೈಕ್‌ನಲ್ಲಿದ್ದ ಮಿಗ್ನಾನ್ ಡು ಪ್ರೀಜ್ ಮಿಡ್ ವಿಕೆಟ್ ಮೇಲೆ ಹೊಡೆದು ಒಂಟಿ ರನ್ ಓಡಿ ತಂಡಕ್ಕೆ ರೋಚಕ ಗೆಲುವು ತಂದು ಕೊಟ್ಟರು. ಇದನ್ನೂ ಓದಿ: ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ ಸೋಲು – ಮಹಿಳಾ ವರ್ಲ್ಡ್‌ಕಪ್ ಟೂರ್ನಿಯಿಂದ ಭಾರತ ಔಟ್

    https://twitter.com/rishabhgautam81/status/1508001031598194693

    ಈ ಮೂಲಕ ಆ ಒಂದು ನೋ ಬಾಲ್‍ನಿಂದಾಗಿ ಭಾರತ ತಂಡದ ಸೆಮಿಫೈನಲ್ ಕನಸು ಭಗ್ನಗೊಂಡಿತು. ಇತ್ತ ಭಾರತದ ಸೋಲಿಗಾಗಿ ಕಾಯುತ್ತಿದ್ದ ವೆಸ್ಟ್ ಇಂಡೀಸ್, ಆಫ್ರಿಕಾ ಜೊತೆ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿತು. ಇದನ್ನೂ ಓದಿ: ಧೋನಿ ಅರ್ಧಶತಕದಾಟ ವ್ಯರ್ಥ – ಚೆನ್ನೈ ವಿರುದ್ಧ ಕೋಲ್ಕತ್ತಾಗೆ ಜಯ

    ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ 7 ವಿಕೆಟ್ ನಷ್ಟಕ್ಕೆ 274 ರನ್‍ಗಳ ಗುರಿಯನ್ನು ಆಫ್ರಿಕಾಗೆ ನೀಡಿತ್ತು. ತಂಡದ ಬೃಹತ್ ಮೊತ್ತಕ್ಕೆ ಬ್ಯಾಟರ್‌ಗಳಾದ ಶಫಾಲಿ ವರ್ಮಾ, ಸ್ಮೃತಿ ಮಂಧಾನ ಮತ್ತು ಮಿಥಾಲಿ ರಾಜ್ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದರು. ಬಳಿಕ ಭಾರತ ತಂಡದ ಬೌಲರ್‌ಗಳು ಗೆಲುವಿಗಾಗಿ ಹೋರಾಡಿದರೂ ಕೊನೆಯ ನಿಮಿಷದಲ್ಲಿ ಗೆಲುವು ಆಫ್ರಿಕಾಗೆ ದಕ್ಕಿತು.