Tag: Deepavali festival

  • `ದೀಪದ ಬೆಳಕಲ್ಲಿ ಬದುಕಿನ ಪ್ರತಿರೂಪ’ – ಪ್ರತಿದಿನವೂ ಹಬ್ಬವೇ

    `ದೀಪದ ಬೆಳಕಲ್ಲಿ ಬದುಕಿನ ಪ್ರತಿರೂಪ’ – ಪ್ರತಿದಿನವೂ ಹಬ್ಬವೇ

    ಕೈಯಲ್ಲಿ ಸುರ್‌ಸುರ್‌ ಬತ್ತಿ ಸುತ್ತಿಸುತ್ತ, ಕಾಲಿನಡಿ ‘ಕೃಷ್ಣನ ಚಕ್ರ’ ತಿರುಗಿಸುತ್ತಾ ಬೆಳಕಿನ ಚಿತ್ತಾರದಲ್ಲಿ ಕುಣಿದಾಡುವ ಕಲರ್‌ಫುಲ್‌ ದೀಪಾವಳಿ ಹಬ್ಬ (Deepavali Festival) ಆಚರಿಸೋದು ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ? ಹಾಗೇ ಕಿವಿ ಗಡಚಿಕ್ಕುವಂತೆ ಶಬ್ಧ ಮಾಡುವ ಪಟಾಕಿ, ಆಕಾಶಕ್ಕೆ ಮಿಂಚು ಹೊಡೆದಂತೆ ಮಾಡುವ ಬಗೆ ಬಗೆಯ ರಾಕೆಟ್‌ ಹಾರಿಸೋದೇ ಒಂದು ಚೆಂದ. ಎಲ್ಲ ಸಮುದಾಯದ ಜನರೂ ಸಹ ಅಪ್ಪಿ.. ಒಪ್ಪಿ ಸ್ವಾಗತಿಸುವ ಈ ಹಬ್ಬಕ್ಕಾಗಿ ವರ್ಷದಿಂದ ಕಾಯುತ್ತಿರುತ್ತಾರೆ. ಈ ಹಬ್ಬಕ್ಕೆ ಇಂದು ತೆರೆ ಎಳೆಯುವ ಸಮಯ ಬಂದುಬಿಟ್ಟಿದೆ.

    ದೀಪಾವಳಿ ಕತ್ತಲು ಸರಿಸಿ ಬೆಳಗುವ ಹಬ್ಬ ಮಾತ್ರವಲ್ಲ, ನಮ್ಮೊಳಗೂ ಬೆಳಕು ಹರಿವ ಧ್ಯೋತಕವೂ ಹೌದು. ದುಃಖ ದುಮ್ಮಾನಗಳನ್ನು ಸರಿಸಿ ಸಂತಸದ ಹಣತೆ ಹೊತ್ತಿಸುವ ದಿನವೇ ಈ ದೀಪಾವಳಿ.

    ಹಬ್ಬದ ಆಚರಣೆ ಹಿಂದಿನ ಪುರಾಣಗಳೂ ಇದೇ ಸಾರವನ್ನ ಜಗತ್ತಿಗೆ ಸಾರಿವೆ. ಮನೆಯ ಮುಂದೆ ಹಚ್ಚಿಟ್ಟ ಸಾಲು ಸಾಲು ಹಣತೆಗಳು, ಬಾನಲ್ಲಿ ಬೆಳಕಿನ ಚಿತ್ತಾರ, ಒಮ್ಮೊಮ್ಮೆ ಬೆಚ್ಚಿಬೀಳಿಸುವ ಪಟಾಕಿ ಶದ್ಧ, ಹೊಸ ಬಟ್ಟೆ, ಸಿಹಿತಿನಿಸಿಗಳು… ದೀಪಾವಳಿ ಎಂದಾಕ್ಷಣ ಮನದಲ್ಲಿ ತೆರೆದುಕೊಳ್ಳುವ ಚಿತ್ರಗಳಿವು. ಆದ್ರೆ ಇವೆಲ್ಲದರೊಂದಿಗೆ ದೀಪಾವಳಿ ಶ್ರೇಷ್ಠ ಅನ್ನಿಸುವುದು ಅದರ ಆಚರಣೆ ಹಿಂದಿನ ಪುರಾಣಗಳಿಂದ, ಅವು ಸಾರಿರುವ ಸಂದೇಶಗಳಿಂದ. ಕತ್ತಲನ್ನು ಹೊಡೆದೋಡಿಸುವ ಸಂಕೇತವಾಗಿ ಆಚರಿಸುವ ದೀಪಾವಳಿ ಹಿಂದೆ ಹಲವು ಕಥೆಗಳಿವೆ. ಬೆಳಕಿನ ಈ ಹಬ್ಬಕ್ಕೆ ಪುರಾಣದ, ಸಂಪ್ರದಾಯ-ಸಂಸ್ಕೃತಿಯ ದೊಡ್ಡ ಹಿನ್ನೆಲೆಯೇ ಇದೆ.

    ಹಲವು ಧರ್ಮಗಳಲ್ಲಿ ದೀಪಾವಳಿ ಆಚರಣೆ ನಡೆಯುತ್ತದೆ. ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು ಈ ಹಬ್ಬವನ್ನು ವಿವಿಧ ಕಾರಣಗಳಿಗೆ ಆಚರಿಸುತ್ತಾರೆ. ಹಿಂದೂಗಳ ಪ್ರಕಾರ, ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಮರಳಿದ ರಾಮನಿಗೆ, ಊರಿನಲ್ಲಿ ಸಾಲು ದೀಪಗಳ ಸ್ವಾಗತ ನೀಡಿ, ಅಂದು ದೀಪಾವಳಿಯನ್ನು ಆಚರಿಸಲಾಯಿತು. ದುಷ್ಟಶಕ್ತಿ ಸಂಹಾರದ ಗುರುತಾಗಿ ಈ ಹಬ್ಬದ ಆಚರಣೆ ನಡೆಯಿತಂತೆ.

    ಜೈನರಲ್ಲಿ, ಮಹಾವೀರರು ಮೋಕ್ಷ ಪಡೆದ ದಿನದ ಗುರುತಿಗೆ ಈ ದಿನ ಹಬ್ಬ ಆಚರಿಸುತ್ತಾರೆ. ಮಹಾವೀರರ ನಿರ್ವಾಣ ಸ್ಥಳವಾದ ಬಿಹಾರದ ಪಾವಾಪುರಿಗೆ ಯಾತ್ರೆ ಕೈಗೊಳ್ಳುವುದೂ ಇದೆ. ಸಿಖ್ಖರಿಗೆ ಗುರು ಹರಗೋವಿಂದರು ಮೊಘಲರಿಂದ ಬಿಡುಗಡೆಗೊಂಡ, ಹಲವು ರಾಜರನ್ನೂ ಬಂಧನದಿಂದ ಮುಕ್ತಗೊಳಿಸಿದ ದಿನ. ಈ ಹಬ್ಬ ಮನದ ದುಃಖವೆಂಬ ಬಂಧನದಿಂದ ಬಿಡುಗಡೆಗೊಳ್ಳುವ ಸೂಚಕವೂ ಹೌದಂತೆ.

    ದಕ್ಷಿಣ ಭಾರತದಲ್ಲಿ ದೀಪಾವಳಿಯನ್ನು ಮೂರು ದಿನಗಳ ಕಾಲ ಆಚರಿಸುವ ರೂಢಿಯಿದೆ. ಆಚರಣೆಯು ಪ್ರದೇಶಗಳ ಮೇಲೆ ಅವಲಂಬಿತವಾಗಿರುತ್ತದೆ. ಜಗತ್ತಿಗೆ ಕಂಟಕನಾದ ನರಕಾಸುರನನ್ನು ಸಂಹಾರ ಮಾಡಿದ ದಿನವೇ ನರಕ ಚತುರ್ದಶಿ ಎಂದು ಆಚರಿಸಲಾಗುತ್ತದೆ. 2ನೇ ದಿನ ಲಕ್ಷ್ಮೀ ಪೂಜೆ, 3ನೇ ಬಲಿಪಾಢ್ಯಮಿ ದಿನದಂದು ಗೋ ಪೂಜೆ ಆಚರಿಸಲಾಗುತ್ತದೆ.

    ರೈತಾಪಿ ವರ್ಗ ಕೃಷಿ ಕಾರ್ಯ ಮುಗಿಸುವ ಸಮಯ ಇದಾಗಿದ್ದು, ಮೈಗೊತ್ತಿಕೊಂಡಿರುವ ಭತ್ತದ ಜುಂಗನ್ನು ಬಿಡಿಸಲು ಕೊಯ್ಲು ಕೆಲಸ ಸಂಪೂರ್ಣ ಮುಗಿದ ನಂತರ ತೈಲಾಭ್ಯಂಜನ ಮಾಡಿಕೊಳ್ಳುತ್ತಿದ್ದರು. ಚರ್ಮಕ್ಕೆ ಆದ ತುರಿಕೆ, ನವೆಯನ್ನು ನಿವಾರಿಸಿಕೊಳ್ಳುವ ಚಿಕಿತ್ಸಾ ಪದ್ಧತಿಯಾಗಿ ಸ್ನಾನ ನಡೆಯುತ್ತಿತ್ತು. ಇದನ್ನೇ ನೀರು ತುಂಬುವ ಹಬ್ಬ ಎಂದು ಆಚರಿಸಲಾಗುತ್ತೆ. ಆ ದಿನ ಕೆಲವು ಔಷಧಿಯ ಗಿಡಮೂಲಿಕೆಗಳನ್ನು ನೀರಿಗೆ ಸೇರಿಸಿ ಕಾಯಿಸಿ, ಕುದಿಸಿ ಔಷಧಿಯ ಸಂಶಗಳನ್ನು ಎಣ್ಣೆಗೆ ಸೇರಿಸಿ, ವಿಶೇಷವಾಗಿ ತಯಾರಿಸಿ ಮೈಗೆ ಹಚ್ಚಿಕೊಂಡು ಬಿಸಿನೀರಿನಲ್ಲಿ ಸ್ನಾನ ಮಾಡಲಾಗುತ್ತದೆ. ಇದು ಸ್ನಾಯುಗಳನ್ನು ಗಟ್ಟಿಗೊಳಿಸುತ್ತದೆ. ಜೊತೆಗೆ ದೇಹ, ಮನಸ್ಸಿನ ಜಡ್ಡನ್ನು ತೊಡೆದುಹಾಕುತ್ತದೆ ಅನ್ನೋದು ನಂಬಿಕೆ.

    ಹೀಗೆ ಹಲವು ವಿಧಗಳನ್ನ ದೀಪಾವಳಿ ಆಚರಣೆ ನಡೆಯುತ್ತದೆ. ಆದ್ರೆ ಆಚರಣೆಯ ಕವಲುಗಳು ಹಲವು ಇದ್ದರೂ ಉದ್ದೇಶ ಒಂದೇ. ಕತ್ತಲನ್ನು ತೊಲಗಿಸಿ, ಜ್ಞಾನ ದೀವಿಗೆಯನ್ನು ಮನದಲ್ಲಿ ಹೊತ್ತಿಸುವುದು ಆ ಬೆಳಕಿನಲ್ಲೇ ಬದುಕನ್ನು ನಡೆಸುವುದು. ಅದಕ್ಕಾಗಿ ಬದುಕಲ್ಲಿ ಮತ್ತೆ ಮತ್ತೆ ದೀಪಾವಳಿ ಆಚರಿಸೋಣ….

  • ದಾವಣಗೆರೆಯ ಈ ಹಳ್ಳಿಗೆ ದೀಪಾವಳಿ ಅಂದ್ರೆ ಕರಾಳ ದಿನ!

    ದಾವಣಗೆರೆಯ ಈ ಹಳ್ಳಿಗೆ ದೀಪಾವಳಿ ಅಂದ್ರೆ ಕರಾಳ ದಿನ!

    ದಾವಣಗೆರೆ: ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಹಬ್ಬದ ದಿನ ದೀಪ ಹಚ್ಚಿ, ಪಟಾಕಿ ಸಿಡಿಸಿ ಎಲ್ಲರೂ ಸಂಭ್ರಮ ಪಡುತ್ತಾರೆ. ಇಲ್ಲೊಂದು ಗ್ರಾಮದಲ್ಲಿ ದೀಪಾವಳಿ (Deepavali) ಅಂದ್ರೇನೆ ಭಯ ಅಂತೇ, ಈ ಹಬ್ಬ ಬಂದ್ರೆ ಇಲ್ಲಿನ ಜನ ಕರಾಳ ದಿನ ಬಂದಂತೆ ಅಂತಾರೆ. ಅಯ್ಯೋ ಇಂತಹದ್ದು ಒಂದು ಊರು ಇದಿಯಾ? ಅಂತೀರಾ. ಹೌದು, ಅನಾದಿಕಾಲದಿಂದಲೂ ದೀಪಾವಳಿಗೆ ಭಯಪಡುವ ಗ್ರಾಮದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

    ದಾವಣಗೆರೆ (Davangere) ತಾಲೂಕಿನ ಲೋಕಿಕೆರೆ ಗ್ರಾಮದ ಕೆಲ ಸಮುದಾಯದ ಜನರಿಗೆ ದೀಪಾವಳಿ ಹಬ್ಬ ಕರಾಳ ದಿನವಂತೆ. ವಿವಿಧ ಕಾರಣಕ್ಕೆ ಕಳೆದ ಆರೇಳು ತಲೆಮಾರುಗಳಿಂದ ದೀಪಾವಳಿ ನಮ್ಮ ಪಾಲಿಗೆ ಕರಾಳ ಹಬ್ಬ ಎನ್ನುವ ನಂಬಿಕೆಯಲ್ಲಿ ದೀಪಾವಳಿಯಿಂದ ಗ್ರಾಮದ ಸುಮಾರು 200 ಕ್ಕೂ ಅಧಿಕ ಕುಟುಂಬಗಳು ದೂರ ಉಳಿದಿವೆ. ದೇಶದೆಲ್ಲೆಡೆ ಮನೆ ಮನೆಯಲ್ಲಿ ಬೆಳಕು ಮೂಡಿದರೆ, ಇಲ್ಲಿ ಮಾತ್ರ ಕತ್ತಲು ಆವರಿಸಿರುತ್ತದೆ. ಇದನ್ನೂ ಓದಿ: ಪಟಾಕಿ ಸಿಡಿಸಲು ಹೋಗಿ ಅನಾಹುತ – ನಾರಾಯಣ ನೇತ್ರಾಲಯದಲ್ಲಿ 20 ಕೇಸ್ ದಾಖಲು

    ಈ ಗ್ರಾಮದವರು ಹಬ್ಬ ಮಾಡದಿರಲು ಸಾಕಷ್ಟು ಕಾರಣ ಹೇಳುತ್ತಾರೆ. ನೂರಾರು ವರ್ಷದ ಹಿಂದೆ ಈ ಗ್ರಾಮದಲ್ಲಿ ವಿವಿಧ ಸಮುದಾಯದ ನೂರಾರು ಯುವಕರು ದೀಪಾವಳಿ ಹಬ್ಬದ ದಿನದಂದೇ ಕಾಣೆಯಾಗಿದ್ದರಂತೆ. ಹಬ್ಬದ ದಿನ ಪೂಜೆಗಾಗಿ, ಉತ್ರಾಣಿ ಕಡ್ಡಿ, ಕಾಶಿಕಡ್ಡಿ, ಹೂ ತರಲು ಊರಿಂದ ಹೊರಗೆ ಹೋದವರು ಮರಳಿ ಬರಲೇ ಇಲ್ವಂತೆ. ಗ್ರಾಮಸ್ಥರು ಅದೆಷ್ಟೇ ಹುಡುಕಿದರೂ ಅವರು ಸುಳಿವು ಸಿಗಲಿಲ್ಲ ಅದೇ ಕಾರಣಕ್ಕೆ ಅಂದೆ ದೀಪಾವಳಿ ಕರಾಳ ದಿನ ಎಂದು ಹಬ್ಬ ಆಚರಣೆ ಕೈಬಿಟ್ಟಿದ್ದಾರೆ. ಅದು ತಲೆ ತಲೆಮಾರುಗಳಿಂದ ಇಲ್ಲಿ ಮುಂದುವರೆಯುತ್ತಾ ಬಂದಿದೆ.

    ಯಾವುದಕ್ಕೂ ಆಗಿದ್ದೆಲ್ಲಾ ಆಗಿ ಹೋಗಿದೆ, ಹಿಂದಿನದೆಲ್ಲಾ ಏಕೆ ಎಂದು ದೀಪಾವಳಿ ಹಬ್ಬ ಆಚರಣೆ ಮಾಡಲು ಐದು ದಶಕದ ಹಿಂದೆ ನಿರ್ಧಾರ ಮಾಡಿದ್ದರು. ಎಂದಿನಂತೆ ದೀಪಾವಳಿ ಹಬ್ಬದ ದಿನದಂದು ಹಬ್ಬ ಆಚರಣೆ ಮಾಡಲು ಮುಂದಾಗಿದ್ದಾರೆ ಈ ವೇಳೆ ಏಕಾಏಕಿ ಜಮೀನಿನಲ್ಲಿನ ಪೈರಿಗೆ, ಹುಲ್ಲಿನ ಬಣವಿಗೆ ಬೆಂಕಿ ಬಿದ್ದು ಹೊತ್ತಿ ಉರಿದಿದೆ. ಇದನ್ನು ಕಂಡು ಆ ಕುಟುಂಬಸ್ಥರು ಮತ್ತಷ್ಟು ಆತಂಕಗೊಂಡಿದ್ದಾರೆ, ಅವತ್ತೇ ಕೊನೆ ಮುಂದೆ ಯಾವತ್ತೂ ಹಬ್ಬ ಮಾಡುವ ಯೋಚನೆಯನ್ನೇ ಇವರು ಮಾಡಿಲ್ಲವಂತೆ. ಇದನ್ನೂ ಓದಿ: ದೀಪಾವಳಿ 2025 – ಬಲಿಪಾಡ್ಯಮಿ ಹಬ್ಬದ ಮಹತ್ವ ಏನು?

  • ಪಟಾಕಿ ನಿಷೇಧ ಕಾಗದದಲ್ಲಿ ಮಾತ್ರ ಅಸ್ತಿತ್ವದಲ್ಲಿದೆ: ದೆಹಲಿ ಸರ್ಕಾರದ ಕಿವಿ ಹಿಂಡಿದ ಸುಪ್ರೀಂ ಕೋರ್ಟ್‌

    ಪಟಾಕಿ ನಿಷೇಧ ಕಾಗದದಲ್ಲಿ ಮಾತ್ರ ಅಸ್ತಿತ್ವದಲ್ಲಿದೆ: ದೆಹಲಿ ಸರ್ಕಾರದ ಕಿವಿ ಹಿಂಡಿದ ಸುಪ್ರೀಂ ಕೋರ್ಟ್‌

    ನವದೆಹಲಿ: ಪಟಾಕಿ (Firecracker) ನಿಷೇಧ ಕೇವಲ ಕಾಗದದಲ್ಲಿ ಮಾತ್ರ ಅಸ್ತಿತ್ವದಲ್ಲಿದೆ ಎಂದು ಸುಪ್ರೀಂ ಕೋರ್ಟ್‌ (Supreme Court) ದೆಹಲಿ (Delhi) ಸರ್ಕಾರ ಮತ್ತು ಪೊಲೀಸರಿಗೆ ಚಾಟಿ ಬೀಸಿದೆ.

    ದೀಪಾವಳಿ ಹಬ್ಬದ (Deepavali Festival) ನಂತರ ಕೆಲವು ದಿನಗಳ ಕಾಲ ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಉಸಿರುಗಟ್ಟಿಸುವ ವಿಷಕಾರಿ ಗಾಳಿಯಿಂದ ತುಂಬಿದ್ದಕ್ಕೆ ಸುಪ್ರಿಂ ಕೋರ್ಟ್‌ ಸರ್ಕಾರ ಮತ್ತು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. ದೀಪಾವಳಿ ಸಮಯದಲ್ಲಿ ಪಟಾಕಿ ನಿಷೇಧ ಕ್ರಮವನ್ನು ಪ್ರತಿ ವರ್ಷ ಘೋಷಿಸುವ ಮತ್ತು ನಿರ್ಲಕ್ಷಿಸುವ ವಿಚಾರದ ಬಗ್ಗೆ ಸರ್ಕಾರ ಮತ್ತು ಪೊಲೀಸರು ತಕ್ಷಣ ಪ್ರತಿಕ್ರಿಯೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್‌ ವಿವಾದ ಮತ್ತೆ ಮುನ್ನೆಲೆಗೆ – ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದ ಮಹಿಳೆ ಅರೆಸ್ಟ್‌

    ಪಟಾಕಿಗಳ ನಿಷೇಧವನ್ನು ದೆಹಲಿ ಎನ್‌ಸಿಆರ್‌ನಲ್ಲಿ ಜಾರಿಗೆ ತರಲಾಗಿಲ್ಲ ಎಂದು ವ್ಯಾಪಕ ವರದಿಗಳಿವೆ. ಇದು ಮಾಲಿನ್ಯವನ್ನು ಕಡಿಮೆ ಮಾಡಲು ಪ್ರಮುಖ ಕ್ರಮವಾಗಬೇಕಿತ್ತು ಎಂದು ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಅಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

    ಪಟಾಕಿ ನಿಷೇಧ ಕುರಿತು ಸರ್ಕಾರದ ಆದೇಶವೇನು? ಅದನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತಿದೆ? ಎಂದು ನ್ಯಾಯಾಲಯ ಸರ್ಕಾರಕ್ಕೆ ಪ್ರಶ್ನಿಸಿದೆ. 2025 ರಲ್ಲಿ ದೆಹಲಿಯು ಮಾಲಿನ್ಯಕಾರಕಗಳಿಂದ ಉಸಿರುಗಟ್ಟುವ ವಾತಾವರಣ ಸೃಷ್ಠಿಯಾಗುವುದಿಲ್ಲ ಎಂಬುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಸರ್ಕಾರದ ಆದೇಶ ಏನಾದರೂ ಕೆಲಸ ಮಾಡಬೇಕು ಎಂದು ಪೀಠ ಸರ್ಕಾರದ ಕಿವಿ ಹಿಂಡಿದೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಲ್ಯಾಂಡ್ ಜಿಹಾದ್ – ಬಿಜೆಪಿ ಆಕ್ರೋಶ

    ಪಟಾಕಿ ನಿಷೇಧದ ಬಳಿಕವೂ ದೆಹಲಿಯಲ್ಲಿ ದೀಪಾವಳಿ ಸಮಯದಲ್ಲಿ ಭಾರೀ ಪಟಾಕಿ ಸಿಡಿಸಲಾಗಿದೆ. ಈಗಾಗಲೇ ವಿಶ್ವದ ಕಲುಷಿತ ನಗರಗಳ ಪಟ್ಟಿಯಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ. ಪಟಾಕಿ ನಿಷೇಧಿಸಿದ ಉದ್ದೇಶ ಈಡೇರಿದಿಯೇ? ಎಂದು ಸುಪ್ರೀಂಕೋರ್ಟ್ ದೆಹಲಿ ಸರ್ಕಾರಕ್ಕೆ ಪ್ರಶ್ನಿಸಿದೆ.

    ದೆಹಲಿಯ ಮಾಲಿನ್ಯದ ಮಟ್ಟವು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಇದು ಹಿಂದಿನ ಎರಡು ವರ್ಷಗಳಿಗಿಂತ ಹೆಚ್ಚಾಗಿದೆ. ಅಲ್ಲದೇ ದೀಪಾವಳಿಯ ಆಸುಪಾಸಿನಲ್ಲಿ ಹುಲ್ಲು ಸುಡುವ ಪ್ರಕರಣಗಳು ಹೆಚ್ಚುತ್ತಿವೆ. ಅಕ್ಟೋಬರ್‌ನ ಕೊನೆಯ ಹತ್ತು ದಿನಗಳಲ್ಲಿ ಹುಲ್ಲು ಸುಟ್ಟ ಪ್ರಕರಣಗಳ ವಿವರಗಳ ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

    ಈ ವರ್ಷ ಪಟಾಕಿ ನಿಷೇಧವನ್ನು ಜಾರಿಗೆ ತರಲು ತೆಗೆದುಕೊಂಡ ಕ್ರಮಗಳು ಮತ್ತು ಮುಂದಿನ ವರ್ಷ ನಿಷೇಧವನ್ನು ಖಚಿತಪಡಿಸಿಕೊಳ್ಳಲು ಒಂದು ವಾರದೊಳಗೆ ಪ್ರಸ್ತಾಪಿಸಲಾದ ಕ್ರಮಗಳ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ದೆಹಲಿ ಸರ್ಕಾರ ಮತ್ತು ದೆಹಲಿ ಪೊಲೀಸ್ ಕಮಿಷನರ್‌ಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

    ಇದೇ ವೇಳೆ ಸಾರಿಗೆ ಮಾಲಿನ್ಯ, ಭಾರೀ ಟ್ರಕ್‌ಗಳ ಪ್ರವೇಶದಿಂದ ಉಂಟಾಗುವ ಮಾಲಿನ್ಯ ಮತ್ತು ಕೈಗಾರಿಕಾ ಮಾಲಿನ್ಯ ಸೇರಿದಂತೆ ಇತರ ಮಾಲಿನ್ಯಕಾರಕ ಪಾಲುದಾರರನ್ನು ಪರಿಗಣಿಸುವುದಾಗಿ ಕೋರ್ಟ್ ಹೇಳಿದೆ. ನ.14 ರಂದು ವಿಚಾರಣೆ ನಡೆಸುವುದಾಗಿ ಕೋರ್ಟ್‌ ಹೇಳಿದೆ.

  • ಭಾರತದ ಈ ಜೋಡಿ ಹಳ್ಳಿಯಲ್ಲಿ ಇನ್ನೂ 1 ತಿಂಗಳ ಬಳಿಕ ದೀಪಾವಳಿ – ಹಿಂದಿದೆ ರೋಚಕ ಕಥೆ?

    ಭಾರತದ ಈ ಜೋಡಿ ಹಳ್ಳಿಯಲ್ಲಿ ಇನ್ನೂ 1 ತಿಂಗಳ ಬಳಿಕ ದೀಪಾವಳಿ – ಹಿಂದಿದೆ ರೋಚಕ ಕಥೆ?

    ದಕ್ಷಿಣ ಭಾರತದಲ್ಲಿ ದೀಪಾವಳಿಯ (Deepavali) ಸಂಭ್ರಮ ನಡೆಯುವುದು ಮೂರು ದಿನಗಳ ಕಾಲ. ನರಕ ಚತುರ್ದಶಿ, ಲಕ್ಷ್ಮೀಪೂಜೆ ಮತ್ತು ಬಲಿಪಾಡ್ಯಮಿ ಆಚರಿಸಿದರೆ ದೀಪಾವಳಿಯ ಸಂಭ್ರಮ ಮುಗಿಯಿತು. ಆದರೆ ಉತ್ತರ ಭಾರತ ಮತ್ತು ನೇಪಾಳಗಳಲ್ಲಿ ದೀಪಾವಳಿ ಎಂದರೆ ಐದು ದಿನಗಳ ಹಬ್ಬ ಇಲ್ಲಿ ಅಮಾವಾಸ್ಯೆಗೆ ಎರಡು ದಿನಗಳ ಮೊದಲೇ ದಿವಾಲಿಯ ಸಂಭ್ರಮ ಆರಂಭವಾಗುತ್ತದೆ. ಅಮಾವಾಸ್ಯೆಯ ಲಕ್ಷ್ಮೀಪೂಜೆ ನಡೆದು ಎರಡು ದಿನಗಳ ಬಳಿಕ ಭಾಯಿದೂಜ್ ಎಂಬ ಆಚರಣೆಯೊಡನೆ ಮುಕ್ತಾಯವಾಗುತ್ತದೆ.

    ಜೋಡಿ ಹಳ್ಳಿಯಲ್ಲಿ ತಿಂಗಳ ನಂತ್ರ ದೀಪಾವಳಿ:
    ಮತ್ತೊಂದು ವಿಶೇಷವೆಂದರೆ ದೇಶವಿಡೀ ದೀಪಾವಳಿಯ ಸಂಭ್ರಮ ಆಚರಿಸುತ್ತಿರುವಾಗ ಉತ್ತರಾಖಂಡದ (Uttarakhand) ಚೌನ್‌ಸರ್- ಬಾವರ್ ಎಂಬ ಗುಡ್ಡಗಾಡಿನ ಜೋಡಿ ಹಳ್ಳಿಗಳ ಜನರು ತಮ್ಮ ಹೊಲಗಳಲ್ಲಿ ದುಡಿಯುತ್ತಾರೆ. ಈ ಜೋಡಿ ಹಳ್ಳಿಯ ಸಂಸ್ಕೃತಿಯೇ ಬೇರೆ.

    ಚೌನ್‌ಸರ್ ನಿವಾಸಿಗಳು ತಮ್ಮನ್ನು ಪಾಂಡವರ ವಂಶಜರು ಎಂದು ಕರೆದುಕೊಂಡರೆ, ಬವಾರಿಗಳು ತಮ್ಮನ್ನು ದುರ್ಯೋಧನ ಅಥವಾ ಕೌರವರ ವಂಶಜರು ಎಂದು ಕರೆದುಕೊಳ್ಳುತ್ತಾರೆ. ಈ ಹಳ್ಳಿಗಳ ಪ್ರಧಾನ ದೇವತೆ ಮಹಾಸು ದೇವಿ. ಇವರಲ್ಲಿ ಬಹುಪತಿತ್ವ, ಬಹುಪತ್ನಿತ್ವ ಎರಡೂ ಪದ್ಧತಿಯೂ ಇದೆ. ದೀಪಾವಳಿ ಇವರಲ್ಲೂ ಇದೆ. ಈ ಸಂಭ್ರಮ ಒಂದೆರಡು ದಿನ ಇರೋದಿಲ್ಲ, ಒಂದು ವಾರ ಪೂರ್ತಿ ನಡೆಯುತ್ತದೆ. ಆದ್ರೆ ಈ ದೀಪಾವಳಿ ಹಬ್ಬ ಬರುವುದು ಒಂದು ತಿಂಗಳ ಬಳಿಕ. ಇದನ್ನೂ ಓದಿ: ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದರ ಮಹತ್ವವೇನು?

    DEEPA

    ಇವರು ದಸರಾ, ಮಾಘ ಮೇಲಾ, ಬಿಸು ಹಬ್ಬಗಳನ್ನು ಎಲ್ಲರಂತೆ ಆಚರಿಸಿದರೂ ದೀಪಾವಳಿಯನ್ನು ಮಾತ್ರ ಒಂದು ತಿಂಗಳ ಬಳಿಕ ಆಚರಿಸುತ್ತಾರೆ. ಇವರ ದೀಪಾವಳಿಗೆ ಬೂಡೀ ದಿವಾಲಿ (ಹಳೆಯ ದೀಪಾವಳಿ) ಎಂದು ಹೆಸರು. ಇದರ ಸಂಪ್ರದಾಯಗಳೇ ಬೇರೆ. ಉತ್ತರಭಾರತದಲ್ಲಿ ದೀಪಾವಳಿಯನ್ನು ಶ್ರೀರಾಮ ಅಯೋಧ್ಯೆಗೆ ಮರಳಿದ ದಿನವಾಗಿ ಆಚರಿಸುತ್ತಾರೆ. ಈ ಜಾಗ ಪ್ರಾಚೀನ ಅಯೋಧ್ಯಾ ರಾಜ್ಯಕ್ಕೆ ಸೇರಿತ್ತು. ಆದ್ರೂ ಇಲ್ಲಿ ದೀಪಾವಳಿ ತಡ ಯಾಕೆ? ಇದನ್ನೂ ಓದಿ: ದೀಪಾವಳಿ| ಕರಾವಳಿಯಲ್ಲಿ ಗೋಪೂಜೆ ಮಹತ್ವ ಏನು?

    ಶ್ರೀರಾಮ ಪತ್ನಿ ಸಮೇತನಾಗಿ ರಾಜಧಾನಿಗೆ ಮರಳಿ ಬಂದ ವಾರ್ತೆ ದೇಶದ ಸುತ್ತ ಕಾಡಿಚ್ಚಿನಂತೆ ಹರಡಿದ್ದರೂ ಈ ಗುಡ್ಡಗಾಡಿನ ಜನರಿಗೆ ಒಂದು ತಿಂಗಳ ಬಳಿಕವೇ ಅದರ ಸುದ್ದಿ ತಲುಪಿತಂತೆ. ಹೀಗಾಗಿ ಇವರು ಶ್ರೀರಾಮನ ಪುನರಾಗಮನದ ಸಂಭ್ರಮ ಒಂದು ತಿಂಗಳು ತಡವಾಗಿ ಆಚರಿಸಿದರಂತೆ. ಇಂದಿಗೂ ದೀಪಾವಳಿಯನ್ನು ಒಂದು ತಿಂಗಳು ತಡವಾಗಿ ಆಚರಿಸುವ ಸಂಪ್ರದಾಯ ಮುಂದುವರಿಸಿದ್ದಾರೆ ಇಲ್ಲಿನ ಜನರು. ಇವರು ತಮ್ಮ ದೀಪಾವಳಿಯನ್ನು ಮನೆಮನೆಗಳ ಅಲಂಕಾರದಲ್ಲಿ ಕಳೆಯುವುದಿಲ್ಲ. ಹೊಲಗಳಲ್ಲಿ ಕಟ್ಟಿಗೆ ರಾಶಿಯನ್ನು ಉರಿಸಿ ಅದರ ಸುತ್ತ ನರ್ತಿಸುತ್ತಾರೆ. ಎರಡೂ ಹಳ್ಳಿಗಳ ಜನ ಒಂದಾಗಿ ಸೇರಿ ಈ ದೀಪಾವಳಿಯ ಸಂಭ್ರಮ ಆಚರಿಸುತ್ತಾರೆ.

    ಬಡೀ ದಿವಾಲಿಯ ದಿನ ಚೌನ್‌ಸರ್-ಬಾವರ್ ನಿವಾಸಿಗಳು ಮರದ ಆನೆಯನ್ನು ಊರಿನ ಸುತ್ತ ಮೆರವಣಿಗೆಯಲ್ಲಿ ಒಯ್ಯುತ್ತಾರೆ. ಒಂದು ವಾರದ ತನಕ ಬಣ್ಣ ಬಣ್ಣದ ಬಟ್ಟೆ ಧರಿಸಿ, ಹಾಡು ಕುಣಿತಗಳ ಸಂಭ್ರಮದಲ್ಲಿ ಮುಳುಗಿರುತ್ತಾರೆ. ಇದನ್ನೂ ಓದಿ: ಮನೆಗಳಲ್ಲಿ ಬೆಳಗಲಿ ದೀಪ.. ಕಲರ್‌ಫುಲ್ ದೀಪಾವಳಿಗೆ 10 ದೀಪಾಲಂಕಾರಗಳ ಟಿಪ್ಸ್

  • ಹಾಡು ಹಾಡಿ ಬೆಳಕು ಹಂಚುವ ಮಲೆನಾಡಿಗರ ವಿಶೇಷ ದೀಪಾವಳಿ!

    ಹಾಡು ಹಾಡಿ ಬೆಳಕು ಹಂಚುವ ಮಲೆನಾಡಿಗರ ವಿಶೇಷ ದೀಪಾವಳಿ!

    ಇಂದಿಗೂ ಜನಪದ ಸೊಗಡನ್ನು ತನ್ನೊಳಗೆ ಉಳಿಸಿಕೊಂಡ ಮಲೆನಾಡು, ವಿಶೇಷ ಕಲೆ ಸಂಪ್ರದಾಯಗಳಿಂದ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ಅದೇ ರೀತಿ ದೀಪಾವಳಿ (Deepavali Festival) ಸಂದರ್ಭದಲ್ಲಿ ಮಲೆನಾಡಿನ ಜನ ಆಚರಿಸುವ ‘ಅಂಟಿಕೆ ಪಿಂಟಿಕೆ’ (Antike Pintike) ಮನರಂಜನೆ ಜೊತೆಗೆ, ಬದುಕಿನ ಸಂದೇಶವನ್ನೂ ಸಾರುತ್ತದೆ.

    ʻಅಂಟಿಕೆ ಪಿಂಟಿಕೆʼಇದು ಕೇವಲ ಒಂದು ಕಲೆ ಅಲ್ಲ. ಒಬ್ಬರಿಗೊಬ್ಬರು ಬೆಸೆದುಕೊಂಡಿರುವುದು, ಸಹಬಾಳ್ವೆ ಎಂದರ್ಥ. ಇದೇ ಸಂದೇಶವನ್ನೇ ಗ್ರಾಮದ ಊರು ಊರುಗಳಿಗೂ ದೀಪಾವಳಿ ಹಬ್ಬದ ರಾತ್ರಿಯಿಂದ ಮುಂಜಾನೆವರೆಗೂ ದೀಪ ಹಂಚುತ್ತ ಬದುಕಿನ ಅರ್ಥದ ಕತೆ, ಹಾಡುಗಳನ್ನು ಹಾಡುತ್ತ, ಮನಸ್ಸಿಗಂಟಿದ ಕತ್ತಲೆ ಕಳೆಯುವ ಆಚರಣೆ ಇದಾಗಿದೆ.

    ‘ಅಂಟಿಕೆ ಪಿಂಟಿಕೆ’ ಸಂಪ್ರದಾಯ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಇದಕ್ಕೆ ಅನೇಕ ವರ್ಷಗಳ ಹಿನ್ನೆಲೆ ಇದೆ. ಇತ್ತೀಚೆಗೆ ಈ ಕಲೆಯ ಬಗ್ಗೆ ಕೊಂಚ ಆಸಕ್ತಿ ಜನರಿಗೆ ಕಡಿಮೆ ಆಗುತ್ತಿದೆ. ಆದರೆ ಶಿವಮೊಗ್ಗದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಅಂಟಿಕೆ ಪಿಂಟಿಕೆ ಇಂದಿಗೂ ಆಚರಣೆಯಲ್ಲಿದೆ.

    ದೀಪಾವಳಿಯ ಬಲಿಪಾಡ್ಯಮಿಯಿಂದ ಮೂರು ದಿನಗಳ ಕಾಲ ಅಹೋರಾತ್ರಿ ಮನೆ ಮನೆಗೆ ದೀಪದಿಂದ ದೀಪ ನೀಡುವ (ಅಂಟಿಸುವ) ಸಂಪ್ರದಾಯ ಉಳಿದುಕೊಂಡಿದೆ. ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ ಮತ್ತು ಸೊರಬ ಸೇರಿದಂತೆ ಕೆಲವು ತಾಲೂಕುಗಳ ಹಲವು ಊರುಗಳಲ್ಲಿ ಇದನ್ನು ಇಂದಿಗೂ ಆಚರಿಸಿಕೊಂಡು ಬರಲಾಗುತ್ತದೆ.

    ಒಂದು ಊರಿನಿಂದ ಮತ್ತೊಂದು ಊರಿಗೆ ದೀಪ ಬೆಳಗಿಸಲು ಹೋಗುವ ತಂಡಕ್ಕೆ ಅಂಟಿಕೆ ಪಿಂಟಿಕೆ ತಂಡ ಅಥವಾ ಹಬ್ಬ ಹಾಡುವವರ ತಂಡ ಎಂದು ಕರೆಯುವ ರೂಢಿ ಇದೆ. ಬಲಿಪಾಡ್ಯಮಿಯ ಸಂಜೆ ಈ ತಂಡ ಊರ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ, ಬಳಿಕ ದೇವರ ಸಾನ್ನಿಧ್ಯದಲ್ಲಿ ಇರುವ ದೀಪದಿಂದ ಮತ್ತೊಂದು ದೀಪವನ್ನು ಹಚ್ಚಿ, ಅದನ್ನು ತೆಗೆದುಕೊಂಡು ಊರೂರು ಸುತ್ತಲು ತೆರಳುತ್ತಾರೆ. ಈ ತಂಡಗಳಲ್ಲಿ ಇಪ್ಪತ್ತರಿಂದ ಮೂವತ್ತು ಜನ ಇರುತ್ತಾರೆ.

    ತಂಡದ ಸದಸ್ಯರೆಲ್ಲ ಜನ ನೀಡಿದ ಆಹಾರ ಪದಾರ್ಥಗಳು, ಅಕ್ಕಿ ಮತ್ತು ಎಣ್ಣೆಯನ್ನು ಹಣದ ರೂಪದಲ್ಲಿ ಪರಿವರ್ತಿಸಿ ಬಂದ ದುಡ್ಡನ್ನು ಊರಿನ ದೇವಸ್ಥಾನದ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳುತ್ತಾರೆ.

  • ಪಟಾಕಿ ಮಾರಾಟ ಮಳಿಗೆಗಳಲ್ಲಿ ಮಕ್ಕಳನ್ನ ನೇಮಿಸಿದ್ರೆ 2 ವರ್ಷ ಜೈಲು ಗ್ಯಾರಂಟಿ: ರಿಯಾಜ್ ಪಟೇಲ್

    ಪಟಾಕಿ ಮಾರಾಟ ಮಳಿಗೆಗಳಲ್ಲಿ ಮಕ್ಕಳನ್ನ ನೇಮಿಸಿದ್ರೆ 2 ವರ್ಷ ಜೈಲು ಗ್ಯಾರಂಟಿ: ರಿಯಾಜ್ ಪಟೇಲ್

    – ಯಾದಗಿರಿ ಜಿಲ್ಲೆಯ ಬಾಲ ಕಾರ್ಮಿಕ ಯೋಜನಾಧಿಕಾರಿ ಖಡಕ್ ಎಚ್ಚರಿಕೆ

    ಯಾದಗಿರಿ: ಪಟಾಕಿ ಮಾರಾಟ ಮಳಿಗೆಗಳಲ್ಲಿ (Fire Crackers Shops) ಕೆಲಸಕ್ಕೆ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ನೇಮಿಸಿಕೊಂಡರೆ ಅಂತಹ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಯಾದಗಿರಿ (Yadgir) ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ಎಚ್ಚರಿಕೆ ನೀಡಿದ್ದಾರೆ.

    ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಹಾಗೂ ಯಾದಗಿರಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ (Child Labor Project Society) ವತಿಯಿಂದ ಜಿಲ್ಲೆಯ ಪಟಾಕಿ ಅಂಗಡಿಗಳಿಗೆ ತೆರಳಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಲಾಯಿತು. ನಗರದ ಪಟಾಕಿ ಮಾರುವ ಮಳಿಗೆಗಳಿಗೆ ತೆರಳಿ, ಪಟಾಕಿ ಮಾರುವ ಪ್ರಕ್ರಿಯೆಯಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಕರಪತ್ರದಲ್ಲಿ ಬರೆದು ಹಂಚಲಾಯಿತು. ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಶೂ ಬದಲು ಚಪ್ಪಲಿ ಭಾಗ್ಯ – ದ್ವಂದ್ವ ನಿಲುವಿನ ಆದೇಶದಿಂದ ಹಠ ಹಿಡಿದ ಮಕ್ಕಳು

    ಈ ವೇಳೆ ಅವರು ಮಾತನಾಡುತ್ತಾ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡರೆ ಅಂತಹ ಮಾಲೀಕರ ವಿರುದ್ಧ 20,000 ರಿಂದ 50,000 ರೂ.ಗಳ ವರೆಗೆ ದಂಡ ಮತ್ತು 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಎರಡನ್ನೂ ವಿಧಿಸಲಾಗುವುದು ಖಡಕ್‌ ಸೂಚನೆ ನೀಡಿದರು. ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳಾಗಬೇಕು ಅಂತ ಸಚಿವರಿಗೆ ಹೈಕಮಾಂಡ್‌ ಹೇಳಿಲ್ಲ: ಸತೀಶ್‌ ಜಾರಕಿಹೊಳಿ

    ಬಾಲಕಾರ್ಮಿಕ ಹಾಗೂ ಕಿಶೋರಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ 2016ರ ಕಾಯ್ದೆ ಅನ್ವಯ ಬಾಲಕಾರ್ಮಿಕ ಪದ್ಧತಿ ಕಾನೂನು ಪ್ರಕಾರ ಅಪರಾಧವಾಗುತ್ತದೆ. ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದನ್ನು ಮೀರಿಯೂ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡರೆ ಅಂತಹ ಮಾಲೀಕರ ವಿರುದ್ಧ 20,000 ರಿಂದ 50,000 ರೂ.ಗಳ ವರೆಗೆ ದಂಡ ಮತ್ತು 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಅವಳಿ ಮಕ್ಕಳ ಜೊತೆ ಅಮೂಲ್ಯ ದೀಪಾವಳಿ ಸೆಲೆಬ್ರೇಶನ್

  • ನರಕ ಚತುರ್ದಶಿ ಏಕೆ ಆಚರಿಸ್ತಾರೆ?

    ನರಕ ಚತುರ್ದಶಿ ಏಕೆ ಆಚರಿಸ್ತಾರೆ?

    ನರಕ ಚತುರ್ದಶಿ ದೀಪಾವಳಿಯ (Deepavali Festival) 2ನೇ ಮಹತ್ವದ ದಿನವಾಗಿದೆ. ಇದನ್ನು ಪ್ರತಿವರ್ಷ ಕಾರ್ತಿಕ ಮಾಸದ 14ನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ಶ್ರೀಕೃಷ್ಣ ಮತ್ತು ಸತ್ಯಭಾಮಾ ಇಬ್ಬರೂ ಸೇರಿ ನರಕಾಸುರ ಎಂಬ ರಾಕ್ಷಸನನ್ನು ಸಂಹಾರ (Narakasura Vadha) ಮಾಡಿದರು. ಅದಕ್ಕಾಗಿ ನರಕ ಚತುರ್ದಶಿ ಆಚರಣೆಗೆ ಬಂದಿತು ಎಂಬ ನಂಬಿಕೆಯಿದೆ. ಇದಕ್ಕೆ ಭಾಗವತ ಪುರಾಣದಲ್ಲಿ ಉಲ್ಲೇಖಗಳಿವೆ ಎನ್ನುತ್ತಾರೆ. ಆದ್ರೆ ಕಾಳಿಕಾ ಪುರಾಣದಲ್ಲಿ ಮಹಾಕಾಳಿ (Mahakali) ಈ ದಿನದಂದು ನರಕಾಸುರನನ್ನು ಸಂಹರಿಸಿದಳು, ಅದಕ್ಕಾಗಿ ನರಕ ಚತುರ್ದಶಿ ಆಚರಣೆಗೆ ಬಂತು ಎಂಬ ಉಲ್ಲೇಖಗಳಿವೆ.

    ಭಾಗವತಾ ಪುರಾಣ ಕಥೆ ಹೇಳುವಂತೆ, ಹಿಂದೆ ಪ್ರಾಗ್‌ಜ್ಯೋತಿಷಪುರ ಎಂಬಲ್ಲಿ ಭೌಮಾಸುರ ಅಥವಾ ನರಕಾಸುರನೆಂಬ ಒಬ್ಬ ಬಲಾಢ್ಯ ರಾಕ್ಷಸನು ರಾಜ್ಯವನ್ನಾಳುತ್ತಿದ್ದನು. ಅವನು ದೇವತೆಗಳಿಗೆ ಮತ್ತು ಮಾನವರಿಗೆ ತೊಂದರೆ ಕೊಡುತ್ತಿದ್ದ. ರಾಕ್ಷಸನಾದ ನರಕಾಸುರನು ಭೂಮಿತಾಯಿಯ ಮಗ. ಇವನ ಆಳ್ವಿಕೆಯಲ್ಲಿ ಸಾಕಷ್ಟು ದೌರ್ಜನ್ಯ ಎಸಗಿದ್ದ, ಜನರಿಗೆ ಮೋಸ ಮಾಡಿದ್ದ. ಭೂಮಿಯ ಮೇಲೆ ತನ್ನದೇ ಆಡಳಿತ ಮಾಡುತ್ತಾ ದುರಹಂಕಾರಕ್ಕೆ ಒಳಗಾಗಿದ್ದ. ನಂತರ ತಾನು ಸ್ವರ್ಗವನ್ನು ಆಳಬೇಕು ಎಂದು ಬಯಸಿದ. ಈ ಬಯಕೆಯ ಪ್ರಯುಕ್ತ ಯುದ್ಧಕ್ಕಾಗಿ ಇಂದ್ರ ದೇವನನ್ನು ಆಹ್ವಾನಿಸಿದನು.

    DEEPAVALI

    ಈ ದುಷ್ಟದೈತ್ಯನು ಸ್ತ್ರೀಯರನ್ನು ಪೀಡಿಸತೊಡಗಿದನು. ಅವನು ತಾನು ಜಯಿಸಿ ತಂದಿದ್ದ 16,000 ವಿವಾಹಯೋಗ್ಯ ರಾಜಕನ್ಯೆಯರನ್ನ ಸೆರೆವಾಸದಲ್ಲಿಟ್ಟು ಅವರೊಂದಿಗೆ ವಿವಾಹವಾಗುವ ಹುನ್ನಾರ ಮಾಡಿದ್ದ. ಈ ವೃತ್ತಾಂತವು ಶ್ರೀಕೃಷ್ಣನಿಗೆ ತಿಳಿದ ಕೂಡಲೇ ಅವನು ಸತ್ಯಭಾಮೆಯೊಂದಿಗೆ ಬಂದು ನರಕಾಸುರನನ್ನು ಸಂಹಾರ ಮಾಡಿ, ಸೆರೆಯಲ್ಲಿದ್ದ ರಾಜಕನ್ಯೆಯರನ್ನ ಮುಕ್ತಗೊಳಿಸಿದನು.

    ಏಕೆ ಅಭ್ಯಂಗ ಸ್ನಾನ ಮಾಡಬೇಕು?
    ಕೃಷ್ಣನು ಆಶ್ವಯುಜ ಮಾಸದ ಕೃಷ್ಣಪಕ್ಷದ ಚತುರ್ದಶಿ ದಿನದಂದು ನರಕಾಸುರನನ್ನು ಸಂಹರಿಸಿದ. 16000 ರಾಜಪುತ್ರಿಯರನ್ನು ಬಂಧನದಿಂದ ಬಿಡಿಸಿ ಬೆಳಗಿನ ಜಾವ ಮನೆಗೆ ಬಂದು ಅಭ್ಯಂಜನ ಸ್ನಾನ ಮಾಡಿದ. ಅಂದಿನಿಂದ ಕೃಷ್ಣ ಚತುರ್ದಶಿಯನ್ನು ನರಕ ಚತುರ್ದಶಿ ಎಂದು ಆಚರಿಸಲಾಗುತ್ತದೆ. ನರಕಾಸುರನನ್ನು ಸಂಹರಿಸಿದಾಗ ದೇಹದ ರಕ್ತದ ಕಲೆಗಳಾಗಿದ್ದರಿಂದ ಅದನ್ನು ಶುಚಿಗೊಳಿಸಲು ಶ್ರೀಕೃಷ್ಣನು ಸಹ ಎಣ್ಣೆ-ನೀರನ್ನು ಹಾಕಿಕೊಂಡಿದ್ದನು. 16000 ರಾಜಪುತ್ರಿಯರು ಕೃಷ್ಣನ ಕಡೆಗೆ ಬಂದು ಕೃತಜ್ಞತೆ ಸಲ್ಲಿಸಿ ಸಂಭ್ರಮದಿಂದ ಕೃಷ್ಣನಿಗೆ ಆರತಿ ಬೆಳಗಿ ಪೂಜಿಸಿದರು.

    ತಾಯಿ ಭೂದೇವಿ ಮಗ ನರಕಾಸುರನನ್ನು ಕಳೆದುಕೊಂಡು ದುಃಖಿಸಿದಳು. ಈ ದಿನವು ನನ್ನ ಮಗನ ಹೆಸರಿನಿಂದ ಆಚರಿಸಲ್ಪಡಲಿ. ಈ ದಿನ ಎಲ್ಲರೂ ನಿನ್ನಂತೆಯೇ ಅಭ್ಯಂಜನ ಸ್ನಾನ ಮಾಡಲಿ ಎಂದು ಕೃಷ್ಣನಲ್ಲಿ ಬೇಡಿದಳು. ಕೃಷ್ಣ ತಥಾಸ್ತು ಎಂದ. ಈ ಕಾರಣಕ್ಕೆ ನರಕಚತುರ್ದಶಿಯಂದು ಜನರು ಅಭ್ಯಂಜನ ಮಾಡುತ್ತಾರೆ. ಬೆಳಗಿನ ಜಾವ ಮಾಡುವ ಅಭ್ಯಂಜನ ಶ್ರಿಕೃಷ್ಣನೊಂದಿಗೆ ಭೂದೇವಿಗೂ ಹಿತಕರ. ಅಂದು ಜನರು ಸೂರ್ಯೋದಯಕ್ಕೂ ಮುಂಚೆ ಎದ್ದು, ಅಭ್ಯಂಗ ಸ್ನಾನ ಮಾಡುತ್ತಾರೆ. ಜೊತೆಗೆ ಬಾಳಿನ ಕತ್ತಲೆಯನ್ನು ತೊಡೆದು ಹಾಕಬೇಕೆಂಬ ನಂಬಿಕೆಯಿಂದ ಮನೆ ಮನೆಯಲ್ಲೂ ದೀಪ ಬೆಳಗಿಸುತ್ತಾರೆ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ.

    ಅಷ್ಟೇ ಅಲ್ಲದೇ ಪ್ರಾಚೀನ ವೈದ್ಯ ಪದ್ಧತಿಯಾದ ಆಯುರ್ವೇದದಲ್ಲಿಯೂ ಅಭ್ಯಂಗಕ್ಕೆ ವಿಶೇಷ ಮಹತ್ವವಿದೆ. ಶರೀರಕ್ಕೆ ತೈಲ ಹಚ್ಚಿ ಮೃದುವಾಗಿ ತೀಡಿ, ಸ್ವಲ್ಪ ಹೊತ್ತು ಕಳೆದ ನಂತರ ಸ್ನಾನ ಮಾಡುವುದನ್ನು ಅಭ್ಯಂಗ ಸ್ನಾನವೆಂದು ಹೇಳಲಾಗುತ್ತೆ. ಹಿಂದೂ ಸಂಪ್ರದಾಯದಲ್ಲಿ ಅಮಾವಾಸ್ಯೆ, ಹಬ್ಬ-ಹರಿದಿನಗಳು ಹಾಗೂ ವಿಶೇಷ ಸಂದರ್ಭಗಳಲ್ಲೂ ಅಭ್ಯಂಗ ಸ್ನಾನ ಮಾಡಿ, ದೇವರಿಗೆ ಪೂಜೆ ಸಲ್ಲಿಸುತ್ತಾರೆ.

    ಅಂದು ಚಿಕ್ಕಮಕ್ಕಳಾದಿಯಾಗಿ ಎಲ್ಲರೂ ಅಭ್ಯಂಜನ ಸ್ನಾನಮಾಡಿ ಹೊಸವಸ್ತ್ರಗಳನ್ನು ಧರಿಸುತ್ತಾರೆ. ನರಕ ಎಂದರೆ ಅಜ್ಞಾನ. ಚತುರ್ದಶಿ ಎಂದರೆ ಬೆಳಕು. ಅಜ್ಞಾನ ಕಳೆದು ಸುಜ್ಞಾನದ ಬೆಳಕು ದೊರೆಯಲೆಂದೇ ನರಕಚತುರ್ದಶಿಯ ಆಚರಣೆ.

  • ಅಯೋಧ್ಯೆಯಲ್ಲಿ 5.51 ಲಕ್ಷ ದೀಪ ಬೆಳಗಿಸಿ ಗಿನ್ನಿಸ್ ರೆಕಾರ್ಡ್

    ಅಯೋಧ್ಯೆಯಲ್ಲಿ 5.51 ಲಕ್ಷ ದೀಪ ಬೆಳಗಿಸಿ ಗಿನ್ನಿಸ್ ರೆಕಾರ್ಡ್

    ಅಯೋಧ್ಯೆ: ಬೆಳಕಿನ ಹಬ್ಬ ದೀಪಾವಳಿಯನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಶುಭಸಂಭ್ರಮದ ಹಿನ್ನೆಲೆಯಲ್ಲಿ ಶನಿವಾರ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಬರೋಬ್ಬರಿ 5.51 ಲಕ್ಷ ದೀಪಗಳನ್ನು ಬೆಳಗಿಸಿ ದೀಪಾವಳಿ ಹಬ್ಬದ ದೀಪೋತ್ಸವವನ್ನು ಆಚರಿಸಲಾಗಿದ್ದು, ಇದು ಗಿನ್ನಿಸ್ ಬುಕ್ ದಾಖಲೆಗೆ ಸಾಕ್ಷಿಯಾಗಿದೆ.

    5.51 ಲಕ್ಷ ದೀಪಗಳಲ್ಲಿ, ಸುಮಾರು 4 ಲಕ್ಷಗಳನ್ನು ರಾಮ್ ಪೈಡಿಯಲ್ಲಿ ಬೆಳಗಿಸಲಾಗಿತ್ತು. ಉಳಿದ ದೀಪಗಳನ್ನು ನಗರದ ಇತರೆ ದೇವಾಲಯಗಳಲ್ಲಿ ಬೆಳಗಿಸಲಾಯಿತು. ಅದರಲ್ಲೂ ಅಯೋಧ್ಯೆಯಲ್ಲಿ ರಾರಾಜಿಸಿದ ದೀಪಗಳೆಲ್ಲವೂ ಮಣ್ಣಿನ ದೀಪಗಳಾಗಿರುವುದು ವಿಶೇಷವಾಗಿತ್ತು.

    ಅಯೋಧ್ಯೆಯ ವಿಶೇಷ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ್ ಭಾಗಿಯಾಗಿದ್ದರು. ಈ ವೇಳೆ ಶ್ರೀರಾಮ ಆಳ್ವಿಕೆ ನಡೆಸಿದ ತ್ರೇತಾಯುಗದ ಮರುನಿರ್ಮಾಣ ಮಾಡಲಾಗಿತ್ತು. ಶ್ರೀರಾಮ ಹಾಗೂ ಸೀತಾಮಾತೆಯರು ಪುಷ್ಪಕ ವಿಮಾನದ ಮೂಲಕ ಸರಯೂ ನದಿಯ ದಂಡೆ ಮೇಲಿಳಿದ ದೃಶ್ಯಗಳನ್ನು ಪುನರ್ ಸೃಷ್ಟಿಸಲಾಗಿತ್ತು. ಈ ಕಲಾಕೃತಿಗಳು ಭಕ್ತಾದಿಗಳ ಕಣ್ಮನ ಸೆಳೆಯಿತು. ಹಾಗೆಯೇ ದೇಶದ ವಿವಿಧ ರಾಜ್ಯಗಳಿಂದ ಬಂದಿದ್ದ ಕಲಾತಂಡಗಳು ಅಯೋಧ್ಯೆ ದೀಪೋತ್ಸವದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದವು.

    ಶ್ರೀರಾಮನ ಜನ್ಮ ಸ್ಥಳ ಅಯೋಧ್ಯೆ ಬಗ್ಗೆ ಸಿಎಂ ಯೋಗಿ ಮಾತನಾಡಿ, ಹಿಂದಿನ ಸಿಎಂಗಳು ಅಯೋಧ್ಯೆಗೆ ಭೇಟಿ ನೀಡದೆ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ನಾನು ಕಳೆದ ಎರಡೂವರೆ ವರ್ಷಗಳಲ್ಲಿ ಸಾಕಷ್ಟು ಬಾರಿ ಅಯೋಧ್ಯೆಗೆ ಭೇಟಿ ಕೊಟ್ಟಿದ್ದೇನೆ. ಇಲ್ಲಿ ಬಡವ, ಶ್ರೀಮಂತ ಎನ್ನುವ ಭೇದಭಾವವಿಲ್ಲ. ಧರ್ಮ ಭೇದವೂ ಎಲ್ಲ. ಇಲ್ಲಿ ಎಲ್ಲರೂ ಸಮಾನರೆಂದು ಜನರು ಖುಷಿಯಾಗಿ ಬಾಳುತ್ತಿದ್ದಾರೆ ಎಂದು ಖುಷಿಯನ್ನು ಹಂಚಿಕೊಂಡರು.

    ಹಾಗೆಯೇ ಈ ಬಾರಿ ಅಯೋಧ್ಯೆಯಲ್ಲಿ ನಡೆಯುತ್ತಿರುವುದು ಮೂರನೇ ದೀಪೋತ್ಸವ. ಕಳೆದ ಬಾರಿ 3,51,000 ದೀಪಗಳನ್ನು ಬೆಳಗಿಸಿ ದಾಖಲೆ ನಿರ್ಮಿಸಲಾಗಿತ್ತು. ಆದರೆ ಈ ಬಾರಿ 4 ಲಕ್ಷಕ್ಕೂ ಅಧಿಕ ದೀಪಗಳನ್ನು ಬೆಳಗಿಸಿ ಹೊಸ ದಾಖಲೆ ಬರೆಯಲಾಗಿದೆ. ಇದನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ಗೂ ಪರಿಗಣಿಸಲಾಗಿದೆ ಎಂದು ತಿಳಿಸಿದರು.

  • ದೀಪಾವಳಿಗಾಗಿ ಊರಿಗೆ ತೆರಳುವ ಮಂದಿಗೆ ಗುಡ್ ನ್ಯೂಸ್

    ದೀಪಾವಳಿಗಾಗಿ ಊರಿಗೆ ತೆರಳುವ ಮಂದಿಗೆ ಗುಡ್ ನ್ಯೂಸ್

    ಬೆಂಗಳೂರು: ನರಕ ಚತುರ್ದಶಿ ಹಾಗೂ ಬಲಿಪಾಡ್ಯಮಿ ಹಬ್ಬದ ಹಿನ್ನೆಲೆಯಲ್ಲಿ ನಗರದಿಂದ ಊರಿಗೆ ತೆರಳುವ ಯೋಜನೆಯಲ್ಲಿದ್ದ ಸಾರ್ವಜನಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‍ಆರ್ ಟಿಸಿ) ನ.2ರಿಂದ 5ರ ವರೆಗೆ ಬೆಂಗಳೂರಿನಿಂದ ರಾಜ್ಯ ಹಾಗೂ ಹೊರರಾಜ್ಯದ ವಿವಿಧ ಸ್ಥಳಗಳಿಗೆ 1,500 ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿದೆ.

    ನಗರದ ಪ್ರಮುಖ ಕೇಂದ್ರವಾದ ಮೆಜೆಸ್ಟಿಕ್, ಸ್ಯಾಟಲೈಟ್, ಶಾಂತಿನಗರ, ಜಯನಗರ ಸೇರಿದಂತೆ ನಗರದ ಪ್ರಮುಖ ಬಸ್ ನಿಲ್ದಾಣಗಳಿಂದ ಸೇವೆ ನೀಡಲಾಗಿದೆ.

    ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ ಮೊದಲಾದ ಸ್ಥಳಗಳಿಗೆ ಹೆಚ್ಚುವರಿ ಬಸ್ ಸೇವೆ ನೀಡಲಾಗಿದೆ.

    ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆಗೆ ಹಾಗೂ ಶಾಂತಿನಗರದ ಕೇಂದ್ರ ಘಟಕ 2 ಮತ್ತು 4ರ ಮುಂಭಾಗದಿಂದ ತಮಿಳುನಾಡು ಮತ್ತು ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ವಿವಿಧ ಸ್ಥಳಗಳಿಗೆ ಬಸ್ ಕಾರ್ಯಾಚರಣೆ ಇರಲಿದೆ. ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ, ಜಯನಗರ, ಜಯನಗರ 4ನೇ ಬ್ಲಾಕ್, ಜಾಲಹಳ್ಳಿ ಕ್ರಾಸ್, ನವರಂಗ್ (ರಾಜಾಜಿನಗರ), ಮಲ್ಲೇಶ್ವರಂ 18ನೇ ಅಡ್ಡರಸ್ತೆ, ಬನಶಂಕರಿ, ಜೀವನ್ ಬೀಮಾನಗರ, ಐಟಿಐ ಗೇಟ್, ಗಂಗಾನಗರ, ಕೆಂಗೇರಿ ಉಪನಗರ ಮೊದಲಾದ ಸ್ಥಳಗಳಿಂದ ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಶಿವಮೊಗ್ಗ, ದಾವಣಗೆರೆ, ತಿರುಪತಿ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಮೊದಲಾದ ಸ್ಥಳಗಳಿಗೆ ಬಸ್ ಕಾರ್ಯಾಚರಣೆ ಮಾಡಲಾಗುವುದು ಎಂದು ಕೆಎಸ್‍ಆರ್ ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

    ಹಬ್ಬದ ಬಳಿಕ ನ.11ರಂದು ರಾಜ್ಯ ಮತ್ತು ಅಂತರ್ ರಾಜ್ಯದ ವಿವಿಧಡೆಯಿಂದ ಬೆಂಗಳೂರಿಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸುವುದಾಗಿಯೂ ಇದೇ ವೇಳೆ ಕೆಎಸ್‍ಆರ್ ಟಿಸಿ ವಿವರಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv