Tag: Deepak Subramanya

  • ಥ್ರಿಲ್ ಕೊಟ್ಟ ‘ಸಾರಾಂಶ’ ಪಾತ್ರ: ನಟ ದೀಪಿಕ್ ಸುಬ್ರಮಣ್ಯ

    ಥ್ರಿಲ್ ಕೊಟ್ಟ ‘ಸಾರಾಂಶ’ ಪಾತ್ರ: ನಟ ದೀಪಿಕ್ ಸುಬ್ರಮಣ್ಯ

    ದಾಸ ಪುರಂದರ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ದೀಪಕ್ ಸುಬ್ರಮಣ್ಯ (Deepak Subramanya) ಇದೀಗ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಆಗಮಿಸಿದ್ದಾರೆ. ಸೂರ್ಯ ವಸಿಷ್ಠ ನಿರ್ದೇಶನದ `ಸಾರಾಂಶ’ (Saramsha) ಚಿತ್ರದ ಪ್ರಧಾನ ಪಾತ್ರವೊಂದರ ಮೂಲಕ ಮತ್ತೊಮ್ಮೆ ಹಿರಿತೆರೆ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಖುಷಿ, ತಾನು ಬಯಸಿದಂಥಾದ್ದೇ ಗುಣಲಕ್ಷಣಗಳನ್ನು ಹೊಂದಿರುವ ಪಾತ್ರ ಸಿಕ್ಕಿದ ಆತ್ಮತೃಪ್ತಿ ದೀಪಕ್ ರದ್ದು. ಧಾರಾರಾವಾಹಿಯಲ್ಲಿ ಒಂದಷ್ಟು ಪ್ರಸಿದ್ಧಿ ಪಡೆದುಕೊಂಡಿದ್ದ ದೀಪಕ್ ಈಗೊಂದಷ್ಟು ಕಾಲದಿಂದ ಹಿರಿತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಆಯ್ಕೆಯ ವಿಚಾರದಲ್ಲೊಂದು ಗುಣಮಟ್ಟ ಕಾಯ್ದುಕೊಳ್ಳುವ ಗುಣ ಹೊಂದಿರೋ ದೀಪಕ್, ಅತ್ಯಂತ ಸಂತಸದಿಂದ ಒಪ್ಪಿಕೊಂಡಿರೋ ಚಿತ್ರ ಸಾರಾಂಶ.

    ಟ್ರೈಲರ್ ನಲ್ಲಿ ದೀಪಕ್ ಸುಬ್ರಮಣ್ಯ ಪಾತ್ರದ ಒಂದಷ್ಟು ಚಹರೆಗಳು ತೆರೆದುಕೊಂಡಿವೆ. ಅದರ ಬಗ್ಗೆ ಮತ್ತೊಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಖುದ್ದು ದೀಪಕ್ ಹಂಚಿಕೊಂಡಿದ್ದಾರೆ. ಈ ಹಿಂದೆ ಅನೇಕ ಕಿರುಚಿತ್ರಗಳ ಮೂಲಕ ದೀಪಕ್ ಅವರಿಗೆ ಸೂರ್ಯ ವಸಿಷ್ಠರ (Surya Vasistha) ಪರಿಚಯವಾಗಿತ್ತು. ಆ ಸಂದರ್ಭದಲ್ಲಿಯೇ ಸೂರ್ಯರ ನಿರ್ದೇಶನದ ಕಸುವು, ಕಥನಕ್ಕೆ ದೃಷ್ಯರೂಪ ನೀಡುವ ಚಾಕಚಕ್ಯತೆ ದೀಪಕ್ ಗೆ ಹಿಡಿಸಿತ್ತು. ಆ ಕಾರಣದಿಂದಲೇ ಸೂರ್ಯ ಕಥೆ ಹೇಳಿ, ತನ್ನ ಪಾತ್ರದ ಬಗ್ಗೆ ವಿವರಿಸಿದಾಕ್ಷಣ ಅವರೊಳಗೊಂದು ಭರವಸೆ ಮೂಡಿಕೊಂಡಿತ್ತು. ಅದರ ಫಲವಾಗಿಯೇ ದೀಪಕ್ ಸಾರಾಂಶ ಚಿತ್ರದಲ್ಲಿ ತೇಜಸ್ವಿ ಪಂಡಿತ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ.

    ದೀಪಕ್ ಹಂಚಿಕೊಂಡಿರುವ ಒಂದಷ್ಟು ವಿಚಾರಗಳನ್ವಯ ಹೇಳೋದಾದರೆ, ಈ ಪಾತ್ರ ನಿಜಕ್ಕೂ ವಿಶೇಷವಾಗಿದೆ. ಅದು ಸಿಎ ಪ್ರೊಫೆಷನ್ನಿನ ಪಾತ್ರ. ಜನರ ನಡುವಿದ್ದರೂ ಅಂತರ್ಮುಖಿ ಗುಣ ಹೊಂದಿರುವ ಪಾತ್ರವದು. ಸಾಮಾನ್ಯವಾಗಿ ತಮ್ಮ ಅಸಲೀ ಗುಣಕ್ಕೆ ವಿರುದ್ಧವಾದ ಪಾತ್ರಗಳನ್ನು ನಿರ್ವಹಿಕಸೋದೆಂದರೆ ಕಲಾವಿದರಾದವರಿಗೆ ಥ್ರಿಲ್ ಆಗುತ್ತೆ. ಅದಕ್ಕಾಗಿ ತಯಾರಿ ನಡೆಸೋದೇ ಒಂದು ಅನೂಹ್ಯ ಅನುಭವ. ಅಂಥಾದ್ದನ್ನೆಲ್ಲ ದೀಪಕ್ ಸುಬ್ರಮಣ್ಯ ಅಕ್ಷರಶಃ ಸಂಭ್ರಮಿಸಿದ್ದಾರೆ. ಮೂಲತಃ ಮಾತಿನ ಮಲ್ಲನಂಥಾ ಗುಣ ಹೊಂದಿರೋ ದೀಪಕ್ ಪಾಲಿಗೆ ಅಂತರ್ಮುಖಿ ವರ್ತನೆ ಅಪರಿಚಿತ. ಅದನ್ನು ಆವಾಹಿಸಿಕೊಳ್ಳಲು ಬಹಳಷ್ಟು ತಯಾರಿ ಮಾಡಿಕೊಂಡಿದ್ದರಂತೆ. ಇನ್ನುಳಿದಂತೆ ಸಿಎ ಅನ್ನೋದು ಕೂತು ಮಾಡೋ ಕೆಲಸವಾದ್ದರಿಂದ ಅದಕ್ಕೆ ದೈಹಿಕವಾಗಿಯೂ ರೂಪಾಂತರವಾಗಬೇಕಿತ್ತು. ಅದಕ್ಕಾಗಿ ದೈಹಿಕ ಕಸರತ್ತು ನಡೆಸಿದ್ದ ದೀಪಕ್, ಅತ್ಯಂತ ಕಡಿಮೆ ಅವಧಿಯಲ್ಲಿ ಇಪ್ಪತ್ಮೂರು ಕೇಜಿಯಷ್ಟು ತೂಕ ಹೆಚ್ಚಿಸಿಕೊಂಡಿದ್ದರಂತೆ.

     

    ಇದಲ್ಲದೇ ಸಿಎಗಳ ಬಾಡಿ ಲ್ಯಾಗ್ವೇಜ್ ಮತ್ತು ವರ್ತನೆಗಳನ್ನೂ ಅಭ್ಯಸಿಸಿಕೊಂಡು ಆ ಪಾತ್ರಕ್ಕೆ ಜೀವ ತುಂಬಿದ ತೃಪ್ತಿ ದೀಪಕ್ ಅವರಲ್ಲಿದೆ. ನಮ್ಮೊಳಗೆ ಆಗಾಗ ಊಟೆಯೊಡೆಯುತ್ತಾ, ಹೇಳಿಕೊಳ್ಳಲಾಗದ ಭಾವ ಸ್ಫರಿಸೋ ತಾಕಲಾಟಗಳನ್ನಿಲ್ಲಿ ಸೂರ್ಯ ವಸಿಷ್ಠ ಪಾತ್ರಗಳ ಮೂಲಕ ಮಾತಾಗಿಸಿದ್ದಾರಂತೆ. ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವ, ತಮ್ಮದೇ ಅನ್ನಿಸುವ ಅದೆಷ್ಟೋ ವಿಚಾರಗಳು ಸಾರಾಂಶದಲ್ಲಿವೆ ಎಂಬುದು ದೀಪಕ್ ಭರವಸೆ. ಬ್ರಿಡ್ಜ್ ಮೂವಿ ಅಂತ ಕರೆಸಿಕೊಳ್ಳುವ ಲಕ್ಷಣ ಹೊಂದಿರುವ ಸಾರಾಂಶ ಬದುಕಿನ ಸೂಕ್ಷ್ಮ ಸಾರಗಳನ್ನು ಹಿಡಿದಿಟ್ಟುಕೊಂಡಿರುವ ಸಿನಿಮಾ. ಇಂಥಾ ಹೊಸತನಗಳನ್ನು ಒಳಗೊಂಡಿರುವ ಸಾರಾಂಶ ಎಲ್ಲ ವರ್ಗದ ಪ್ರೇಕ್ಷಕರಿಗೂ ಖಂಡಿತಾ ಹಿಡಿಸಲಿದೆ ಎಂಬ ಗಾಢ ನಂಬಿಕೆ ದೀಪಕ್ ಸುಬ್ರಮಣ್ಯರದ್ದು

  • ‘ಸಾರಾಂಶ’ದ ಪಾತ್ರದಲ್ಲಿ ತನ್ನೊಳಗೆ ತಾನೇ ಆವರಿಸಿಕೊಂಡ ನಟಿ ಶ್ರುತಿ

    ‘ಸಾರಾಂಶ’ದ ಪಾತ್ರದಲ್ಲಿ ತನ್ನೊಳಗೆ ತಾನೇ ಆವರಿಸಿಕೊಂಡ ನಟಿ ಶ್ರುತಿ

    ಯಾವುದೇ ನಟ ನಟಿಯರಾದರೂ ಒಮ್ಮೆ ಕಮರ್ಶಿಯಲ್ ಸಿನಿಮಾಗಳ ಮೂಲಕ ಗೆದ್ದರೆ ಮತ್ತೆ ಆಚೀಚೆ ಹೊರಳಿ ನೋಡುವುದೇ ಅಪರೂಪ. ಆದರೆ, ಇಂಥವರ ನಡುವೆ ಕೆಲವರು ಮಾತ್ರವೇ ಅಪ್ಪಟ ಕಲಾವಿದರಾಗಿ, ಸದಾ ಹೊಸತಿನೆಡೆಗೆ ಹಾತೊರೆಯುತ್ತಾರೆ. ಹೊಸ ಬಗೆಯ ಪಾತ್ರಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಾರೆ. ಇಂಥಾ ವಿರಳ ನಟಿಯರ ಸಾಲಿನಲ್ಲಿ ಗುರುತಿಸಿಕೊಳ್ಳುವ ಎಲ್ಲ ಗುಣಲಕ್ಷಣಗಳನ್ನೂ ಹೊಂದಿರುವವರು ಶ್ರುತಿ ಹರಿಹರನ್ (Shruthi Hariharan). ಸಾಂಸಾರಿಕ ಜೀವ, ಮಡಿಲು ತುಂಬಿದ ಮಗುವಿನ ಜವಾಬ್ದಾರಿಗಳಲ್ಲಿ ಲೀನರಾಗಿದ್ದ ಶೃತಿ ಹರಿಹರನ್ ಇದೀಗ ಸೂರ್ಯ ವಸಿಷ್ಠ ನಿರ್ದೇಶನದ `ಸಾರಾಂಶ’ (Saramsha) ಚಿತ್ರದ ಮೂಲಕ ಪ್ರೇಕ್ಷಕರನ್ನು ಸಂಧಿಸುವ ಖುಷಿಯಲ್ಲಿದ್ದಾರೆ.

    ಯಾವುದೇ ಸಿನಿಮಾವಾದರೂ, ಕಲಾವಿದರಿಗೆ ಪಾತ್ರವೊಂದು ಒಲಿದು ಬರುವುದರ ಹಿಂದೆ ಒಂದಷ್ಟು ಅಚ್ಚರಿಗಳಿರುತ್ತವೆ. ಅಂಥಾ ವಿಚಾರಗಳು ಸಾರಾಂಶದಲ್ಲಿಯೂ ಖಂಡಿತಾ ಇದ್ದಾವೆ. ಸೂರ್ಯ ವಸಿಷ್ಠ ಈ ಸಿನಿಮಾ ನಿರ್ದೇಶನಕ್ಕೆ ತಯಾರಿ ಶುರು ಮಾಡಿದ್ದು ಒಂದಷ್ಟು ವರ್ಷಗಳ ಹಿಂದೆ. ಆ ಕಾಲದಲ್ಲಿಯೇ ಅದೊಂದು ಪಾತ್ರಕ್ಕೆ ಸೂರ್ಯ ಆಯ್ಕೆ ಮಾಡಿದ್ದದ್ದು ಶೃತಿ ಹರಿಹರನ್ ಅವರನ್ನು. ಹಾಗೆ ಇಂಥಾದ್ದೊಂದು ಅವಕಾಶ ತಮ್ಮ ಮುಂದೆ ಬಂದಾಗ ಆರಂಭಿಕವಾಗಿಯೇ ಶೃತಿ ಥ್ರಿಲ್ ಆಗಿದ್ದರಂತೆ. ಸಾಮಾನ್ಯವಾಗಿ, ಯಾರೇ ನಟ ನಟಿಯರಾದರೂ ಕೆಲವೊಂದಿಷ್ಟು ಪಾತ್ರಗಳನ್ನು ಧ್ಯಾನಿಸುತ್ತಾರೆ. ಅಂಥಾದ್ದೇ ಪಾತ್ರ ಅಚಾನಕ್ಕಾಗಿ ಎದುರಾದಾಗ ಪುಳಕವೊಂದು ತಂತಾನೇ ಆವರಿಸಿಕೊಳ್ಳುತ್ತೆ. ಸಾರಾಂಶದ ಕಥೆ ಕೇಳಿ ಶೃತಿ ಹರಿಹರನ್ ಅವರನ್ನು ಆವರಿಸಿಕೊಂಡಿದ್ದು ಅಕ್ಷರಶಃ ಅಂಥಾದ್ದೇ ಭಾವ.

    ಕಥೆಗಾರನೊಬ್ಬನ ಜಗತ್ತಿನ ಸುತ್ತ ಕದಲುವ ಈ ಕಥಾನಕ ಕನ್ನಡದಲ್ಲಿ ಮಾತ್ರವಲ್ಲದೇ, ಮತ್ಯಾವ ಭಾಷೆಯಲ್ಲೂ ನೋಡಿಲ್ಲ ಎಂಬುದು ಶೃತಿ ಅಭಿಪ್ರಾಯ. ಮಕ್ಕಳಾದಿಯಾಗಿ ಎಲ್ಲರನ್ನೂ ಕಾಡುವ ಗುಣ ಹೊಂದಿರುವ ಈ ಸಿನಿಮಾವನ್ನು ಸೂರ್ಯ ವಸಿಷ್ಠ ಅಮೋಘವಾಗಿ ರೂಪಿಸಿದ್ದಾರೆಂಬ ಮೆಚ್ಚುಗೆಯೂ ಶ್ರುತಿ ಅವರಲ್ಲಿದೆ. ಅದೇ ಭಾವನೆ ನೋಡಿದ ಪ್ರತಿಯೊಬ್ಬರಲ್ಲಿಯೂ ಪ್ರವಹಿಸುತ್ತದೆಂಬ ನಂಬಿಕೆಯೂ ಅವರಲ್ಲಿದೆ. ಅಂದಹಾಗೆ, ಶೃತಿ ಹರಿಹರನ್ ಗಿಲ್ಲಿ ಕಲಾವಿದೆಯ ಪಾತ್ರ ಸಿಕ್ಕಿದೆ. ಮಾಯಾ ಎಂಬ ಹೆಸರಿನ ಆ ಪಾತ್ರವನ್ನು ಆವಾಹಿಸಿಕೊಳ್ಳಲು ಒಂದಷ್ಟು ತಯಾರಿಯನ್ನ ಮಾಡಿಕೊಂಡೇ ಅದಕ್ಕೆ ಜೀವ ತುಂಬಿದ್ದಾರೆ.

    ಮೇಕಪ್ ನ ಗೊಡವೆಯಿಲ್ಲದೆ, ಅತ್ಯಂತ ಸಹಜವಾಗಿ ಆ ಪಾತ್ರಕ್ಕೆ ಜೀವ ತುಂಬಿದ ಖುಷಿ ಶೃತಿಗಿದೆ. ಈ ಸಿನಿಮಾ ವಿಶೇಷತೆಗಳಾಚೆಗೆ, ಇಂಥಾದ್ದೊಂದು ತಂಡದೊಂದಿಗೆ ಕಾರ್ಯನಿರ್ವಹಿಸಿದ ಖುಷಿಯೂ ಶೃತಿತಿಗಿದೆ. ಯಾಕೆಂದರೆ, ಲೂಸಿಯಾ ಕಾಲದ ಒಂದಷ್ಟು ತಂತುಗಳು ಸಾರಾಂಶದ ಭೂಮಿಕೆಯಲ್ಲವರನ್ನು ಸಂಧಿಸಿವೆ. ಈ ಸಿನಿಮಾದ ಸಂಗೀತ ನಿರ್ದೇಶಕ ಉದಿತ್ ಹರಿತಾಸ್ ಈ ಹಿಂದೆ ಲೂಸಿಯಾ ತಂಡದ ಭಾಗವಾಗಿದ್ದರು. ಅವರು ಸಾರಾಂಶದಲ್ಲಿಯೂ ಮತ್ತೆ ಸಿಕ್ಕಿದ್ದಾರೆ. ಇಡೀ ತಂಡದ ಉತ್ಸಾಹ, ಪ್ರತಿಭೆ, ಸಿನಿಮಾ ಧ್ಯಾನದ ನಡುವೆ ಕಳೆದು ಹೋದದ್ದೊಂದು ವಿಶಿಷ್ಟ ಅನುಭವ ಎಂಬುದು ಶೃತಿ ಅಭಿಪ್ರಾಯ.

     

    ಸದಾ ಹೊಸತಿನತ್ತ ಹಾತೊರೆಯುವ ಶೃತಿ ಹರಿಹರನ್ ಪಾಲಿಗೆ ಸಾರಾಂಶದಲ್ಲಿ ಅಂಥಾದ್ದೇ ಪಾತ್ರ ಸಿಕ್ಕಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಹಾಡಿನಲ್ಲಿ ಅವರ ಪಾತ್ರದ ಝಲಕ್ಕುಗಳು ಕಾಣಿಸಿಕೊಂಡಿವೆ. ಅದನ್ನು ನೋಡುಗರೂ ಮೆಚ್ಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ದೀಪಕ್ ಸುಬ್ರಮಣ್ಯ (Deepak Subramanya), ಸೂರ್ಯ ವಸಿಷ್ಠ, ಶೃತಿ ಹರಿಹರನ್, ಶ್ವೇತಾ ಗುಪ್ತ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪ್ರೊಡಕ್ಷನ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರ ತಾರಾಗಣ, ಅಪರಾಜಿತ್ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ. ಸಾರಾಂಶದ ಮೂಲಕ ಅನಂತ್ ಭಾರದ್ವಾಜ್ ಎಂಬ ಪ್ರತಿಭಾನ್ವಿತ ಛಾಯಾಗ್ರಾಹಕನ ಆಗಮನವೂ ಆಗುತ್ತಿದೆ. ಈ ಚಿತ್ರದ ಒಟ್ಟಾರೆ ಆಕರ್ಷಣೆಗಳಲ್ಲಿ ಛಾಯಾಗ್ರಹಣವೂ ಒಂದಾಗಿ ಸೇರಿಕೊಂಡಿದೆ.