Tag: debtor

  • ಸಾಲಬಾಧೆ ತಾಳಲಾರದೆ ಬೀದರ್ ರೈತ ಆತ್ಮಹತ್ಯೆ

    ಸಾಲಬಾಧೆ ತಾಳಲಾರದೆ ಬೀದರ್ ರೈತ ಆತ್ಮಹತ್ಯೆ

    ಬೀದರ್: ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ ಜಿಲ್ಲೆ ಔರಾದ್ ತಾಲೂಕಿನ ಪಾಶಾಪೂರ್ ಗ್ರಾಮದಲ್ಲಿ ನಡೆದಿದೆ.

    ರಾಜಪ್ಪ ಬಿರಾದರ್ (42) ಆತ್ಮಹತ್ಯೆಗೆ ಶರಣಾದ ರೈತ. ವಿವಿಧ ಬ್ಯಾಂಕುಗಳಲ್ಲಿ ಆರು ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಅಲ್ಲದೆ, ಈ ಬಾರಿಯಾದರೂ ಮುಂಗಾರು ಮಳೆ ಉತ್ತಮವಾಗಿ ಬೆಳೆ ಚೆನ್ನಾಗಿ ಬರುತ್ತದೆ ಎಂಬ ನಂಬಿಕೆಯಿಂದ ಮತ್ತೆ ಬ್ಯಾಂಕ್‍ನಲ್ಲಿ ಸಾಲ ಮಾಡಿ ಬಿತ್ತನೆ ಮಾಡಿದ್ದರು. ಆದರೆ, ಮುಂಗಾರು ಮಳೆ ಕೈಕೊಟ್ಟಿದೆ. ಇದೇ ಬೇಸರದಿಂದ ರಾಜಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

    ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತನಿಗೆ ಮುಂಗಾರು ಬಳೆ ಸಮರ್ಪಕವಾಗಿ ಬಾರದೇ ಬರದ ಛಾಯೆ ಆವರಿಸಿದೆ. ಇನ್ನೊಂದೆಡೆ ಸರ್ಕಾರದ ಸಾಲ ಮನ್ನಾ ಯೋಜನೆಯು ಸಮರ್ಪಕವಾಗಿ ಜಾರಿಯಾಗಿಲ್ಲ. ಇದೆಲ್ಲದರಿಂದ ಮನನೊಂದು ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದು ಈ ಕುರಿತು ಸಂತಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇತ್ತೀಚೆಗಷ್ಟೇ ಸಾಲಬಾಧೆ ತಾಳಲಾರದೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಾಸುವ ಮುನ್ನವೇ ಈ ಘನೆ ನಡೆದಿದೆ. ಅಲ್ಲದೆ, ಮಂಡ್ಯದ ರೈತನೋರ್ವ ರೈತರಿಗೆ ಎದುರಾಗಿರುವ ನೀರಿನ ಸಮಸ್ಯೆಯನ್ನು ಮುಖ್ಯಮಂತ್ರಿಗೆ ತಿಳಿಸಲು ಆತ್ಮಹತ್ಯೆ ಮಾಡಿಕೊಂಡಿದ್ದರು. ನಮ್ಮ ಜಿಲ್ಲೆಯಲ್ಲಿ 150 ಅಡಿ ಕೊಳವೆ ಬಾವಿ ಕೊರೆದರೆ ನೀರು ಉಕ್ಕುತ್ತಿತ್ತು. ಇದೀಗ 1,500 ಅಡಿ ಕೊಳವೆ ಬಾವಿ ಕೊರೆದರೂ ನೀರು ಬರುತ್ತಿಲ್ಲ. ಇದಕ್ಕೆ ಪರಿಹಾರ ಕಲ್ಪಿಸಬೇಕಿದೆ ಹೀಗಾಗಿ ಮುಖ್ಯಮಂತ್ರಿಗಳು ನನ್ನ ಅಂತ್ಯ ಸಂಸ್ಕಾರಕ್ಕೆ ಬರಬೇಕು ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದರು.

  • ಅತ್ತ ಸಿಎಂ ಹೆಚ್‍ಡಿಕೆ ರಿಲ್ಯಾಕ್ಸ್-ಇತ್ತ ಅನ್ನದಾತನಿಗೆ ಕೋರ್ಟ್ ವಾರೆಂಟ್

    ಅತ್ತ ಸಿಎಂ ಹೆಚ್‍ಡಿಕೆ ರಿಲ್ಯಾಕ್ಸ್-ಇತ್ತ ಅನ್ನದಾತನಿಗೆ ಕೋರ್ಟ್ ವಾರೆಂಟ್

    ತುಮಕೂರು: ರಾಜ್ಯದಲ್ಲಿ ಭೀಕರ ಬರಗಾಲ ಬಂದು ಜನ- ಜಾನುವಾರುಗಳ ಸ್ಥಿತಿ ನೋಡಲು ಆಗುತ್ತಿಲ್ಲ. ಟೀಕೆ ಟಿಪ್ಪಣಿಗಳ ನಡುವೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಡಿಕೇರಿಯ ಇಬ್ಬನಿ ರೆಸಾರ್ಟಿನಲ್ಲಿ ರಿಲ್ಯಾಕ್ ಮೂಡ್‍ನಲ್ಲಿದ್ದಾರೆ. ಇದೆಲ್ಲದರ ನಡುವೆ ಸಾಲಮನ್ನಾ ಇನ್ನೂ ಜಾರಿಯಾಗದೇ ರೈತ ಬ್ಯಾಂಕ್‍ಗಳಿಂದ ಬರೋ ನೋಟಿಸ್ ನೋಡಿ ಕಂಗಾಲಾಗುತ್ತಿದ್ದಾನೆ.

    ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಬಂದು ಹತ್ರತ್ರ 1 ವರ್ಷ ಆಗುತ್ತಾ ಬಂತು. ಇದರ ನಡುವೆ ಸಿಎಂ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡ್ತೀನಿ. ಅನ್ನದಾತರ ಮನೆ ಬಾಗಿಲಿಗೆ ಋಣಮುಕ್ತ ಪತ್ರ ಕಳುಹಿಸುತ್ತೇನೆ ಎಂಬ ಭರವಸೆಯನ್ನು ನೀಡಿದ್ದರು. ರೈತರಿಗೆ ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್‍ನವರು ಒತ್ತಡ ಹಾಕಬಾರದು ಎಂದೂ ತಾಕೀತು ಮಾಡಿದ್ದೇನೆ ಎಂದು ಹೇಳಿದ್ದರು. ಆದ್ರೆ ಸಾಲಮನ್ನಾ ಬಿಡಿ, ಸಿಎಂ ವಾಗ್ದಾನ ಮಾಡಿದ ಋಣಮುಕ್ತ ಪತ್ರ ಇನ್ನೂ ರೈತರಿಗೆ ತಲುಪಿಲ್ಲ. ಈ ನಡುವೆ ರೈತರ ಮೇಲೆ ಬ್ಯಾಂಕ್ ಗಳ ದಬ್ಬಾಳಿಕೆ ಮುಂದುವರೆದಿದೆ.

    ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಹೊಸಳ್ಳಿಯ ರೈತ ರಾಜಣ್ಣಗೆ ಕೋಲ್ಕತ್ತಾ ಕೋರ್ಟನಿಂದ ವಾರಂಟ್ ಜಾರಿಯಾಗಿದೆ. ರಾಜಣ್ಣ ಮಾಗ್ಮಾ ಫೈನಾನ್ಸ್‍ನಿಂದ ಟ್ರಾಕ್ಟರ್ ಖರೀದಿಸಲು 4 ಲಕ್ಷ ಸಾಲ ಪಡೆದಿದ್ದರು. ಇದೂವರೆಗೆ ಸರಿಸುಮಾರು 3 ಲಕ್ಷ ರೂಪಾಯಿ ಸಾಲ ಮರುಪಾವತಿ ಮಾಡಿದ್ದಾರೆ. ಸತತ ಬರಗಾಲ, ಕೈ ಕೊಟ್ಟ ಬೋರ್‍ವೆಲ್‍ನಿಂದಾಗಿ ಉಳಿದ ಕಂತು ಕಟ್ಟಲು ಸಾಧ್ಯವಾಗಿಲ್ಲ. ಇದರಿಂದಾಗಿ ಮಾಗ್ಮಾ ಫೈನಾನ್ಸ್, ಕೋಲ್ಕತ್ತಾದ ಕೋರ್ಟಿನಲ್ಲಿ ದೂರು ದಾಖಲಿಸಿದೆ. ಕೋರ್ಟ್ ಗೆ ಹಾಜರಾಗೋದು ಕಷ್ಟವಾಗಿದ್ದಕ್ಕೆ ವಾರಂಟ್ ಜಾರಿಯಾಗಿದೆ.

    6 ತಿಂಗಳ ಕಾಲಾವಕಾಶದಲ್ಲಿ ಎರಡು ಕಂತುಗಳಲ್ಲಿ ಲೋನ್ ಕ್ಲೀಯರ್ ಮಾಡುತ್ತೇನೆ ಎಂದು ರಾಜಣ್ಣ ಮನವಿ ಮಾಡಿಕೊಂಡಿದ್ದಾರೆ. ಆದರೂ ವಾರಂಟ್ ಹಿಡಿದು ಬಂದ ಗುಬ್ಬಿ ಪೊಲೀಸರು ರಾಜಣ್ಣಗೆ ಪದೇ ಪದೇ ಹೆದರಿಸುತ್ತಿದ್ದಾರೆ ಎಂದು ಹೇಳಲಾಗಿದೆ.

  • ರೈತನಿಂದ ಸಾಲ ವಸೂಲಾತಿಗಾಗಿ ಕೋರ್ಟ್ ಮೆಟ್ಟಿಲೇರಿದ ಬ್ಯಾಂಕ್!

    ರೈತನಿಂದ ಸಾಲ ವಸೂಲಾತಿಗಾಗಿ ಕೋರ್ಟ್ ಮೆಟ್ಟಿಲೇರಿದ ಬ್ಯಾಂಕ್!

    ಮಂಡ್ಯ: ಮುಖ್ಯಮಂತ್ರಿ ಕುಮಾರಸ್ವಾಮಿ ರೈತರಿಗೆ ನೋಟಿಸ್ ನೀಡಬೇಡಿ ಎಂದು ಖಡಕ್ ಸೂಚನೆ ನೀಡಿದ್ದರೂ ಬ್ಯಾಂಕ್ ಅಧಿಕಾರಿಗಳು ಸಾಲ ಮರುಪಾವತಿಸುವಂತೆ ಕೋರ್ಟ್ ಮುಖಾಂತರ ರೈತನಿಗೆ ನೋಟಿಸ್ ನೀಡಿದೆ.

    ಪಾಂಡವಪುರ ತಾಲೂಕಿನ, ಮೇನಾಗರ ಗ್ರಾಮದ ರೈತ ಜವರೇಗೌಡರಿಗೆ ಕೋರ್ಟ್ ನೋಟಿಸ್ ನೀಡಿದ್ದು, ಅಕ್ಟೋಬರ್ 5 ರಂದು ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಲಾಗಿದೆ.

    ಎಸ್‍ಬಿಎಂ ಬ್ಯಾಂಕ್, ಬೆಳ್ಳಾಳೆ ಬ್ರಾಂಚ್‍ನವರು ನಿಮ್ಮ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಹೀಗಾಗಿ ನೀವು ನಿಮ್ಮ ವಕೀಲರ ಮೂಲಕ ಕೋರ್ಟ್‌ಗೆ ಹಾಜರಾಗುವಂತೆ ನೋಟಿಸ್ ನಲ್ಲಿ ಉಲ್ಲೇಖವಾಗಿದೆ.

    ರೈತ ಜವರೇಗೌಡ 1.30 ಲಕ್ಷ ರೂ. ಬೆಳೆ ಸಾಲ ಮಾಡಿದ್ದರು. 2007 ಮತ್ತು 2009ರಲ್ಲಿ ಸತತ ಬರಗಾಲದಿಂದ ಸರಿಯಾಗಿ ಬೆಳೆಯಾಗದೇ ಸಾಲ ತೀರಿಸಲು ಸಾಧ್ಯವಾಗಿಲ್ಲ. ಸಾಲ ತೀರಿಸದ ಹಿನ್ನೆಲೆಯಲ್ಲಿ ಬ್ಯಾಂಕ್ ಈಗ ಕೋರ್ಟ್ ಮೂಲಕ ವಸೂಲು ಮಾಡಲು ಮುಂದಾಗಿದೆ.

    ನೋಟಿಸ್ ಬಗ್ಗೆ ರೈತ ಜವರೇಗೌಡ ಪ್ರತಿಕ್ರಿಯಿಸಿ, ನನಗೆ ಹೃದಯ ಸಂಬಂಧಿ ಕಾಯಿಲೆಯಿದ್ದು, ಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕುಮಾರಸ್ವಾಮಿ ಅವರು ನೋಟಿಸ್ ನೀಡುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಇತ್ತ ನೋಟಿಸ್ ನೀಡಿದರೆ ನಾವು ಬದುಕಬೇಕೇ ಅಥವಾ ಇಲ್ಲ ಸಾಯಬೇಕೇ ಎಂದು ಪ್ರಶ್ನೆ ಮಾಡಿದ್ದಾರೆ.

    ನೋಟಿಸ್ ಗಳು ಈಗ ಯಾಕೆ ಬರುತ್ತದೆ ಎನ್ನುವ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಒಬ್ಬರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿಯವರು ಬಜೆಟ್ ನಲ್ಲಿ ಸಾಲ ಮನ್ನಾ ಘೋಷಣೆ ಮಾಡಿದ್ದು ಕಳೆದ ವಾರವಷ್ಟೇ ನೋಟಿಸ್ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಆದರೆ ನೋಟಿಸ್ ಗಳು ಕೆಲ ದಿನಗಳ ಹಿಂದೆಯೇ ರವಾನೆಯಾಗಿದ್ದು ಈಗ ರೈತರ ಕೈಗೆ ತಲುಪುತ್ತಿವೆ ಎಂದು ತಿಳಿಸಿದ್ದಾರೆ.

    ಸಿಎಂ ಹೇಳಿದ್ದು ಏನು?
    ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲಾಡಳಿತದಿಂದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜನೆಗೊಂಡಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ್ದ ಸಿಎಂ ಕುಮಾರಸ್ವಾಮಿ, ಸಾಲ ನೀಡಿದ ಬ್ಯಾಂಕಿನವರು ಸಾಲ ತೀರಿಸುವಂತೆ ಒತ್ತಡ ಹೇರಿ ನೋಟಿಸ್ ಜಾರಿ ಮಾಡಿದರೆ ಅಂಥಹ ಬ್ಯಾಂಕ್ ಮ್ಯಾನೇಜರ್ ಅನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಳುತ್ತಾ ಕುಳಿತ್ರೆ ಆಗಲ್ಲ, ಕೆಲ್ಸ ಮಾಡಿ- ಸಿಎಂಗೆ ರಾಜ್ಯರೈತ ಸಂಘದ ಗೌರವಾಧ್ಯಕ್ಷ ಚಾಟಿ

    ಅಳುತ್ತಾ ಕುಳಿತ್ರೆ ಆಗಲ್ಲ, ಕೆಲ್ಸ ಮಾಡಿ- ಸಿಎಂಗೆ ರಾಜ್ಯರೈತ ಸಂಘದ ಗೌರವಾಧ್ಯಕ್ಷ ಚಾಟಿ

    ರಾಯಚೂರು: ಅಳುತ್ತಾ ಕುಳಿತರೆ ಆಗಲ್ಲ. ಇಲ್ಲಿ ಕೆಲಸ ಮಾಡಬೇಕು. ಕೇವಲ ಭಾವನಾತ್ಮಕತೆಯಿಂದ ರಾಜ್ಯ ಉದ್ಧಾರವಾಗಲ್ಲ ಅಂತ ರಾಜ್ಯರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಚಾಟಿ ಬೀಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಸಂಪೂರ್ಣ ಸಾಲಮನ್ನಾ ಮಾಡಲು ಆಗದಿದ್ದರೆ ಕುರ್ಚಿಯಿಂದ ಕೆಳಗೆ ಇಳಿಯಿರಿ. ಆದ್ರೆ ಬೇಜವಾಬ್ದಾರಿತನದ ಹೇಳಿಕೆ ನೀಡಬೇಡಿ ಅಂತ ಎಚ್ಚರಿಕೆ ನೀಡಿದ್ರು. ರೈತರಿಗೆ ಸಾಲಮನ್ನಾ ಕೇಳಲು ನೈತಿಕತೆಯಿಲ್ಲ ಅಂತ ಜಾತಿ ವ್ಯಾಮೋಹಕ್ಕೆ ಮತಹಾಕಿದ್ದಾರೆ ಎಂದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಚುನಾವಣಾ ಪೂರ್ವದಲ್ಲಿ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಹೇಳಿ, 2 ಲಕ್ಷ ಮನ್ನಾ ಮಾಡಿದ ನಿಮಗೆ ಯಾವ ನೈತಿಕತೆಯಿದೆ. ರೈತರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಅಳುತ್ತಾ ಕುಳಿತರೆ ಏನೂ ಆಗಲ್ಲ. ಇಲ್ಲಿ ಕೆಲಸ ಮಾಡಿ ತೋರಿಸಬೇಕು. ಕೇವಲ ಭಾವನಾತ್ಮಕತೆಯಿಂದ ರಾಜ್ಯದ ಜನರ ಉದ್ಧಾರವಾಗುವುದಿಲ್ಲ ಅಂದ್ರು.

    ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ಬೇಜವಾಬ್ದಾರಿ ಹೇಳಿಕೆಗಳನ್ನ ನೀಡಬೇಡಿ ಅಂತ ಚಾಮರಸ ಮಾಲೀಪಾಟೀಲ್ ಅವರು ಇದೇ ಸಂದರ್ಭದಲ್ಲಿ ಸಿಎಂ ಅವರನ್ನು ಎಚ್ಚರಿಸಿದ್ದಾರೆ.