Tag: Debt Waiver

  • ಬ್ಯಾಂಕಿನಿಂದ ರೈತರಿಗೆ ನೋಟಿಸ್ ನೀಡೋದು ತಪ್ಪಲ್ಲ- ಸಚಿವ ಮಾಧುಸ್ವಾಮಿ

    ಬ್ಯಾಂಕಿನಿಂದ ರೈತರಿಗೆ ನೋಟಿಸ್ ನೀಡೋದು ತಪ್ಪಲ್ಲ- ಸಚಿವ ಮಾಧುಸ್ವಾಮಿ

    – ನಮ್ಮ ಸರ್ಕಾರ ಇನ್ನು ಸಾಲ ಮನ್ನಾ ನಿರ್ಧಾರ ತೆಗೊಂಡಿಲ್ಲ

    ತುಮಕೂರು: ಬ್ಯಾಂಕ್‍ನಿಂದ ರೈತರಿಗೆ ನೋಟಿಸ್ ನೀಡುವುದು ತಪ್ಪಲ್ಲ. “ಕಮರ್ಷಿಯಲ್ ಬ್ಯಾಂಕ್‍ಗೆ ರೈತರ ಸಾಲ ವಸೂಲಿ ಮಾಡಬೇಡಿ ಎಂದು ಹೇಳುವುದು ಕಷ್ಟ” ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಾಲ ಮನ್ನಾ ಮಾಡಿದರೂ ರೈತರಿಗೆ ನೋಟಿಸ್ ನೀಡುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ರೈತರಿಗೆ ಸಾಲದ ಕುರಿತು ನೋಟಿಸ್ ನೀಡಬೇಡಿ ಎಂದು ನಮ್ಮ ಸಹಕಾರಿ ಬ್ಯಾಂಕ್‍ಗಳಿಗೆ ನಿರ್ದೇಶನ ಕೊಡಬಹುದು. ಆದರೆ ಕಮರ್ಷಿಯಲ್ ಬ್ಯಾಂಕ್‍ಗಳಿಗೆ ರೈತರ ಸಾಲ ವಸೂಲಿ ಮಾಡಬೇಡಿ ಎಂದು ಹೇಳುವುದು ಕಷ್ಟ. ಅಲ್ಲದೆ ಸಾಲ ಮನ್ನಾ ನಿರ್ಧಾರವನ್ನು ನಮ್ಮ ಸರ್ಕಾರ ಇನ್ನು ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಸಾಲ ವಸೂಲಾತಿಗೆ ಬ್ಯಾಂಕ್‍ಗಳು ಪ್ರತಿ ಸಾರಿ ಅದಾಲತ್ ಮಾಡುತ್ತವೆ. ಸಾಲ ಕಟ್ಟದೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ನೀಡಿರಬಹುದು. ಸರ್ಕಾರ ಸಾಲಮನ್ನಾ ಯೋಜನೆಯ ಹಣವನ್ನು ಬ್ಯಾಂಕಿಗೆ ತುಂಬದೆ ಬ್ಯಾಂಕಿನವರಿಗೆ ನೋಟಿಸ್ ಕೊಡಬೇಡಿ ಎಂದು ಹೇಳಲು ಆಗುವುದಿಲ್ಲ. ಬ್ಯಾಂಕಿನವರು ಸಾಲದ ನೋಟಿಸ್ ಕೊಡುವುದರಲ್ಲಿ ತಪ್ಪಿಲ್ಲ. ಆದರೆ ರೈತರ ಆಸ್ತಿಗಳನ್ನು ಜಪ್ತಿ ಮಾಡಿ ಕಿರುಕುಳ ನೀಡದಂತೆ ಎಚ್ಚರಿಕೆ ನೀಡಿದ್ದೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

  • ರಾಜ್ಯ ಸರ್ಕಾರದಿಂದ ಕೊಡಗಿನ 4257 ರೈತರ ಸಾಲಮನ್ನಾ

    ರಾಜ್ಯ ಸರ್ಕಾರದಿಂದ ಕೊಡಗಿನ 4257 ರೈತರ ಸಾಲಮನ್ನಾ

    ಮಡಿಕೇರಿ: ಸಹಕಾರಿ ಸಾಲಾ ಮನ್ನಾ ಯೋಜನೆಯಡಿ ಜಿಲ್ಲೆಯ 4,257 ರೈತರ 32.64 ಕೋಟಿ ರೂ. ಸಾಲದ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ್ದು ಸಾಲಮನ್ನಾ ನಿರೀಕ್ಷೆಯಲ್ಲಿದ್ದ ರೈತರ ಮೊಗದಲ್ಲಿ ಇದೀಗ ಮಂದಹಾಸ ಮೂಡಿದೆ.

    ಈ ಬಗ್ಗೆ ಡಿಸಿಸಿ ಬ್ಯಾಂಕ್ ತಿಳಿಸಿದ್ದು, 2018ರಲ್ಲಿ ಘೋಷಿಸಿದ ಸಾಲಮನ್ನಾದ 32,903 ರೈತರು ಫಲಾನುಭವಿಗಳು ಜಿಲ್ಲೆಯಲ್ಲಿದ್ದರೂ 254.81 ಕೋಟಿ ಹಣವನ್ನು ಬಿಡುಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಹಿಂದಿನ ಸರ್ಕಾರ ಈಗಾಗಲೇ 10,421 ರೈತರ 68.45 ಕೋಟಿ ಹಣವನ್ನು ಬಿಡುಗಡೆಗೊಳಿಸಿ ಸಾಲಮನ್ನಾಕ್ಕೆ ಅರ್ಹರೆಂದು ಪರಿಗಣಿಸಿತ್ತು.

    16,673 ರೈತರ ಪೈಕಿ 6,252 ರೈತರ 48.25 ಕೋಟಿ ರೂ. ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿತ್ತು. ಸಾಲ ಮನ್ನಾಕ್ಕೆ ಅರ್ಹತೆ ಪಡೆದಿರುವ ಜಿಲ್ಲೆಯ 16,673 ರೈತರ ಪೈಕಿ ಈ ವರೆಗೂ ಬಾಕಿ ಉಳಿಸಿಕೊಂಡಿದ್ದ 6,252 ರೈತರ 48.25 ಕೋಟಿ ರೂ. ಮೊತ್ತದಲ್ಲಿ 4,257 ರೈತರಿಗೆ ಸಂಬಂಧಿಸಿದ 32.64 ಕೋಟಿ ರೂ. ಹಣವನ್ನು ಸೆ.13 ರಂದು ಫಲಾನುಭವಿ ರೈತರ ಖಾತೆಗೆ ಬಿಡುಗಡೆಗೊಳಿಸಲಾಗಿದೆ.

    ಈ ಬಗ್ಗೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಪಬ್ಲಿಕ್ ಟಿವಿಯೊಂದಿಗೆ ಮಾತಾನಾಡಿ ಸರ್ಕಾರ ಹಣ ಬಿಡುಗಡೆ ಮಾಡಿದೆ. ಸುಮಾರು 25% ರೈತರ ಅಕೌಂಟ್ ಗೆ ಜಮೆ ಯಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಪ್ರಕೃತಿಕ ವಿಕೋಪಕ್ಕೆ ನಲುಗಿ ಹೋಗಿದ ಕೊಡಗಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

  • ಮೀನುಗಾರರಿಗೆ ಸಿಹಿ ಸುದ್ದಿ- 50 ಸಾವಿರ ಸಾಲ ಮನ್ನಾ

    ಮೀನುಗಾರರಿಗೆ ಸಿಹಿ ಸುದ್ದಿ- 50 ಸಾವಿರ ಸಾಲ ಮನ್ನಾ

    ಬೆಂಗಳೂರು: ಇತ್ತೀಚೆಗಷ್ಟೇ ನೇಕಾರರ ಸಾಲ ಮನ್ನಾ ಮಾಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಇದೀಗ ಮೀನುಗಾರರ ಸಾಲ ಮನ್ನಾ ಮಾಡಿ ನಿರ್ಧಾರ ಕೈಗೊಂಡಿದೆ.

    ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಂಡಿದ್ದು, ಮೀನುಗಾರರ 50 ಸಾವಿರ ರೂ. ವರೆಗಿನ ಸಾಲವನ್ನು ಮನ್ನಾ ಮಾಡಲು ಕ್ರಮ ಕೈಗೊಳ್ಳಲಾಗಿದೆ. ವಾಣಿಜ್ಯ, ಪ್ರಾದೇಶಿಕ, ಗ್ರಾಮೀಣ ಬ್ಯಾಂಕ್‍ಗಳಿಂದ ಪಡೆದ ಸಾಲ ಮನ್ನಾ ಆಗಲಿದ್ದು, ಈ ಮೂಲಕ ನೇಕಾರರ ಜೊತೆಗೆ ಮೀನುಗಾರರಿಗೂ ಸಹ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಸ ನೀಡಿದ್ದಾರೆ.

    ಕರಾವಳಿಯ ಮೂರು ಜಿಲ್ಲೆಗಳ ಮೀನುಗಾರರ ಒಟ್ಟು 60 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದ್ದು, ಸುಮಾರು 23,507 ಮೀನುಗಾರರು ಸಾಲಮನ್ನಾ ಪ್ರಯೋಜನ ಪಡೆಯಲಿದ್ದಾರೆ. 2017-18, 2018-19 ನೇ ಸಾಲಿನ ಅಂದರೆ ಎರಡು ವರ್ಷಗಳ ಹಿಂದಿನಿಂದ ಈ ವರೆಗೆ ಮಾಡಿದ 50 ಸಾವಿರ ರೂ.ಗಳ ವರಿಗಿನ ಸಾಲ ಮನ್ನಾ ಆಗಲಿದ್ದು, ಈ ಮೂಲಕ ಮೀನುಗಾರರಿಗೆ ಸಿಎಂ ಗಿಫ್ಟ್ ನೀಡಿದ್ದಾರೆ.

    ನೇಕಾರರ ಸಾಲ ಮನ್ನಾ
    ರಾಜ್ಯದಲ್ಲಿ ಮಳೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು, ನೇಕಾರರು, ಮೀನುಗಾರರ ಸಂಕಷ್ಟವನ್ನು ಪರಿಹರಿಸಲು ವಿಶೇಷ ಗಮನ ಹರಿಸುತ್ತೇನೆ. ಈ ಸಂಬಂಧ ಕ್ಯಾಬಿನೆಟ್ ಸಭೆಯಲ್ಲಿ ಎರಡು ನಿರ್ಧಾರಗಳನ್ನು ಕೈಗೊಂಡಿದ್ದೇವೆ. ಪ್ರಧಾನ ಮಂತ್ರಿ ಸಮ್ಮಾನ್ ಯೋಜನೆಗೆ ಈಗಾಗಲೇ ಆಯ್ಕೆ ಮಾಡಲಾದ ರೈತರಿಗೆ ರಾಜ್ಯ ಸರ್ಕಾರದಿಂದಲೂ 4 ಸಾವಿರ ರೂ.ವನ್ನು ಎರಡು ಕಂತುಗಳಲ್ಲಿ ನೀಡಲು ನಿರ್ಧರಿಸಿದ್ದೇವೆ. ನೇಕಾರರ 100 ಕೋಟಿ ರೂ. ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇವೆ ಎಂದು ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನವೇ ಯಡಿಯೂರಪ್ಪ ಘೋಷಣೆ ಮಾಡಿದ್ದರು.

  • ಸಾಲ ಮನ್ನಾದ ನಿರೀಕ್ಷೆಯಲ್ಲಿದ್ದ ರೈತರಿಗೆ ಬ್ಯಾಂಕ್ ನೋಟಿಸ್

    ಸಾಲ ಮನ್ನಾದ ನಿರೀಕ್ಷೆಯಲ್ಲಿದ್ದ ರೈತರಿಗೆ ಬ್ಯಾಂಕ್ ನೋಟಿಸ್

    ಹಾವೇರಿ: ರಾಜ್ಯದ ರೈತರಿಗೆ ಸಿಎಂ ಕುಮಾರಸ್ವಾಮಿ ಅವರ ಸಾಲ ಮನ್ನದ ಯೋಜನೆ ಇನ್ನೂ ಸಿಕ್ಕಿಲ್ಲ. ಸಾಲ ಮನ್ನಾ ಆಗುತ್ತದೆ ಎಂದು ನಂಬಿದ್ದ ರೈತರಿಗೆ ಈಗ ಬ್ಯಾಂಕ್‍ನಿಂದ ನೋಟಿಸ್ ಬಂದಿದೆ.

    ರೈತರಿಗಾಗಿ ಸಾಲಮನ್ನಾ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಸಿಎಂ ಎಚ್‍ಡಿಕೆ ಎದೆ ತಟ್ಟಿಕೊಂಡು ಹೇಳುತ್ತಾರೆ. ಆದರೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಶಂಕ್ರಿಪುರ ಗ್ರಾಮದ ರೈತ ವೀರಭದ್ರಪ್ಪ ಅವರಿಗೆ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದೆ. ಈ ಸಂಬಂಧ ಜೂನ್ 10 ರಂದು ನ್ಯಾಯಾಲಯಕ್ಕೆ ಹಾಜರಾಗಿ ಸಾಲದ ಹಣವನ್ನು ಕಟ್ಟುವಂತೆ ನೋಟಿಸ್ ನೀಡಲಾಗಿದೆ.

    ಸಾಲ ಪಡೆಯುವ ಸಮಯದಲ್ಲಿ ರೈತ ವೀರಭದ್ರಪ್ಪ ಅವರಿಗೆ ರೈತರಾದ ಮಲ್ಲಪ್ಪ ಮತ್ತು ಲಿಂಗಪ್ಪ ಎಂಬ ರೈತರು ಶ್ಯೂರಿಟಿ ನೀಡಿದ್ದರು. ಈಗ ಇವರಿಗೂ ನೋಟಿಸ್ ಜಾರಿಯಾಗಿದೆ.

    ರೈತರ ಹೆಸರು ಸಾಲಮನ್ನಾದ ಪಟ್ಟಿಯಲ್ಲಿದೆ ಹೊರತು ಇನ್ನೂ ಸಾಲಮನ್ನಾ ಆಗಲೇ ಇಲ್ಲ. ಸಾಲ ಮನ್ನಾ ಆಗುತ್ತದೆ ಎಂದು ನಂಬಿದ್ದ ರೈತರು ಈಗ ಕಷ್ಟಪಡುವಂತೆ ಆಗಿದೆ.

  • ಸಾಲಮನ್ನಾ ಫಲ ಪಡೆಯುವವರಲ್ಲಿ ಒಕ್ಕಲಿಗರೇ ನಂಬರ್ 1 – ಜಾತಿವಾರು ಸಂಖ್ಯಾ ಮಾಹಿತಿ ಇಲ್ಲಿದೆ

    ಸಾಲಮನ್ನಾ ಫಲ ಪಡೆಯುವವರಲ್ಲಿ ಒಕ್ಕಲಿಗರೇ ನಂಬರ್ 1 – ಜಾತಿವಾರು ಸಂಖ್ಯಾ ಮಾಹಿತಿ ಇಲ್ಲಿದೆ

    ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸಾಲಮನ್ನಾದ ಲಾಭವನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಒಕ್ಕಲಿಗರು ಪಡೆಯಲಿದ್ದಾರೆ.

    ಹೌದು. ಸಮ್ಮಿಶ್ರ ಸರ್ಕಾರದ ಬಜೆಟ್ ನಲ್ಲಿ ಕುಮಾರಸ್ವಾಮಿಯವರು 2 ಲಕ್ಷ ರೂ. ವರೆಗಿನ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದರಿಂದ 33% ಒಕ್ಕಲಿಗರ ಸಾಲ ಮನ್ನಾ ಆಗಲಿದೆ.

    ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡಿ ಅವರು ಕಳೆದ ವರ್ಷ ನಡೆಸಿದ ಸಮೀಕ್ಷೆಯಲ್ಲಿ ನಡೆಸಿತ್ತು. ಈ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಬ್ಯಾಂಕಿನಿಂದ ಒಕ್ಕಲಿಗ ಸಮುದಾಯದವರು ಕೃಷಿ ಸಾಲ ಪಡೆದುಕೊಂಡಿದ್ದರೆ, ಎರಡನೇ ಸ್ಥಾನದಲ್ಲಿ ಗೊಲ್ಲ ಸಮುದಾಯದವರಿದ್ದರು.

    ಜಾತಿವಾರು ಲೆಕ್ಕಾಚಾರ
    ಒಕ್ಕಲಿಗ- ಶೇ.32
    ಇತರೆ- ಶೇ.15.6
    ಗೊಲ್ಲ- ಶೇ. 12.1
    ಆದಿ ಕರ್ನಾಟಕ- ಶೇ.11.9
    ಲಿಂಗಾಯತ- ಶೇ.10.9
    ಕುರುಬ- ಶೇ.4.8
    ಮಾದಿಗ- ಶೇ.4.3
    ನಾಯಕ- ಶೇ.3.9
    ಮುಸ್ಲಿಂ- ಶೇ.2.4
    ಗಾಣಿಗ- ಶೇ.2.1

    ಸಾಲಮನ್ನಾ ಎಷ್ಟು? ಷರತ್ತೇನು?:
    ಮೊದಲ ಹಂತದಲ್ಲಿ 2017 ಡಿಸೆಂಬರ್ 31ರವರೆಗೆ ರೈತರು ಮಾಡಿದ ಎಲ್ಲಾ ಸುಸ್ತಿ ಬೆಳೆ ಸಾಲವನ್ನು ಒಂದೇ ಹಂತದಲ್ಲಿ ಮನ್ನಾ ಮಾಡಲು ತೀರ್ಮಾನಿಸಿದ್ದಾರೆ. ರೈತರ ಸಾಲ ಮನ್ನಾದಿಂದ 34 ಸಾವಿರ ಕೋಟಿ ಸಮ್ಮಿಶ್ರ ಸರ್ಕಾರಕ್ಕೆ ಹೊರೆಯಾಗಲಿದೆ. ಇದರಿಂದ ರೈತರಿಗೆ ಸುಮಾರು 40 ಲಕ್ಷ ಸಾಲ ಮನ್ನಾದ ಪ್ರಯೋಜನವಾಗಿದೆ. ಅಕ್ಟೋಬರ್ 30, 2018 ಒಳಗೆ ಪೂರ್ತಿ ತೆರಿಗೆ ಪಾವತಿಸುವವರಿಗೆ ದಂಡ ಮತ್ತು ಬಡ್ಡಿಯನ್ನು ಮನ್ನಾ ಮಾಡಲಾಗುವುದು.

    ಇನ್ನು ಸಕಾಲದಲ್ಲಿ ಸಾಲ ಪಾವತಿಸಿರುವ ರೈತರಿಗೆ 25 ಸಾವಿರ ನಗದು ವಾಪಸ್ ಕೊಡಲಾಗುವುದು. ಅಷ್ಟೇ ಅಲ್ಲದೇ ರೈತರಿಗೆ ಹೊಸ ಸಾಲ ನೀಡಲು 6 ಸಾವಿರ ಕೋಟಿ ನಿಗದಿ ಮಾಡಲಾಗಿದೆ. ಆದರೆ 3 ವರ್ಷಗಳಲ್ಲಿ ಆದಾಯ ತೆರಿಗೆ ಕಟ್ಟಿರುವ ರೈತರ ಸಾಲ ಮತ್ತು ಇತರೆ ಅನರ್ಹ ಕೃಷಿ ಸಾಲಗಾರರ ಸಾಲ ಮನ್ನಾ ಕೂಡ ಇಲ್ಲವಾಗಿದೆ. ಸರ್ಕಾರಿ ಅಧಿಕಾರಿಗಳು ಮತ್ತು ಸಹಕಾರಿ ಕ್ಷೇತ್ರಗಳ ಅಧಿಕಾರಿ ಕುಟುಂಬಗಳ ಸಾಲ ಮನ್ನಾ ಮಾಡಿಲ್ಲ.

  • 2 ಲಕ್ಷ ವರೆಗಿನ ಸಾಲ ಮನ್ನಾ: ಯಾವೆಲ್ಲ ರೈತರು ಸಾಲಮನ್ನಾಗೆ ಅರ್ಹರಾಗುತ್ತಾರೆ?

    2 ಲಕ್ಷ ವರೆಗಿನ ಸಾಲ ಮನ್ನಾ: ಯಾವೆಲ್ಲ ರೈತರು ಸಾಲಮನ್ನಾಗೆ ಅರ್ಹರಾಗುತ್ತಾರೆ?

    ಬೆಂಗಳೂರು: ಮೊಟ್ಟ ಮೊದಲ ಬಾರಿಗೆ ಇಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ 2018-19ರ ಬಜೆಟ್ ಮಂಡಿಸುತ್ತಿದ್ದಾರೆ. ಇಂದಿನ ಕುಮಾರಸ್ವಾಮಿ ಬಜೆಟ್ ನಲ್ಲಿ ನಿರೀಕ್ಷೆಗಳ ಭಾರವೇ ಇದೆ. 95 ಪುಟಗಳ ಬಜೆಟ್ ಆಗಿದ್ದು, ಇಂದಿನ ಬಜೆಟ್ ಗಾತ್ರ 2 ಲಕ್ಷ 18 ಸಾವಿರ 488 ಕೋಟಿ ರೂ. ಆಗಿದೆ.

    ರೈತರ ಕೃಷಿ ಚಟುವಟಿಕೆಗಳಿಗಾಗಿ ಮಾಡಿರುವ ಎಲ್ಲಾ ಬಗೆಯ ಬೆಳೆ ಸಾಲವನ್ನು ನಮ್ಮ ಪಕ್ಷದ ಪೂರ್ಣ ಸರ್ಕಾರ ರಚನೆಯಾದ 24 ಗಂಟೆಯಲ್ಲಿಯೇ ಮನ್ನಾ ಮಾಡಲು ನಾನು ಸಂಕಲ್ಪ ತೊಟ್ಟಿದ್ದೆ. ಆದರೆ ನಾಡಿನ ಜನತೆ ಏಕಪಕ್ಷದ ಸರ್ಕಾರ ರಚನೆಗೆ ಬೇಕಾಗಿರುವ ಆಶೀರ್ವಾದ ಮಾಡಲಿಲ್ಲವಾದರೂ ಮೈತ್ರಿ ಸರ್ಕಾರ ರಚಿಸಿ, ಆ ಕೂಟದ ಮುಖ್ಯಮಂತ್ರಿಯಾಗಿ ಕೆಲಸ ಮಾಡುವ ಸದಾವಕಾಶ್ವನ್ನು ನನಗೆ ಒದಗಿಸಿದೆ ಎಂದು ಕುಮಾರಸ್ವಾಮಿ ಭಾಷಣದಲ್ಲಿ ಹೇಳಿದರು.

    ರೈತರ ಬೆಳೆ ಸಾಲದ ಬಗ್ಗೆ ಸರ್ಕಾರಿ ಅಧಿಕಾರಿಗಳೊಂದಿಗೆ, ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಕ್ಷೇತ್ರದ ಅಧಿಕಾರಿಗಳು ಹಾಗೂ ರೈತ ಸಮೂದಾಯದೊಂದಿಗೆ ಚರ್ಚೆ ಮಾಡಿದ್ದೇನೆ. ಈ ಚರ್ಚೆಯ ಫಲಶೃತಿಯಾಗಿ ಮೊದಲ ಹಂತದಲ್ಲಿ 2017 ಡಿಸೆಂಬರ್ 31ರವರೆಗೆ ರೈತರು ಮಾಡಿದ ಎಲ್ಲಾ ಸುಸ್ತಿ ಬೆಳೆ ಸಾಲವನ್ನು ಒಂದೇ ಹಂತದಲ್ಲಿ ಮನ್ನಾ ಮಾಡಲು ತೀರ್ಮಾನಿಸಿರುತ್ತೇನೆ. ಇದಲ್ಲದೆ ಸಕಾಲದಲ್ಲಿ ಸಾಲ ಮರುಪಾವತಿ ಮಾಡಿರುವ ರೈತರಿಗೂ ಸಹ ಅನುಕೂಲ ಮಾಡಿಕೊಡಲು ಸುಸ್ತಿದಾರರಲ್ಲದ ರೈತ ಸಾಲ ಖಾತೆಗಳಿಗೆ ಉತ್ತೇಜನಕಾರಿಯಾಗಿ ಪ್ರತಿ ಖಾತೆಗೆ ಅವರು ಮರುಪಾವತಿ ಮಾಡಿರುವ ಸಾಲದ ಮೊತ್ತ ಅಥವಾ 25,000 ರೂ. ಗಳಲ್ಲಿ ಯಾವುದು ಕಡಿಮೆಯೋ ಅದನ್ನು ತುಂಬಲು ನಾನು ನಿರ್ಧರಿಸಿದ್ದೇನೆ ಎಂದರು.

    ಕೃಷಿಕರ ಬೆಳೆ ಸಾಲ ಮನ್ನಾ ವಿಷಯವನ್ನು ಪೂರ್ಣವಾಗಿ ಪರಿಶೀಲಿಸಿದಾಗ ದೊಡ್ಡ ಭು ಹಿಡುವಳಿ ಹೊಂದಿರುವ ರೈತರ ಸಾಲಗಳು 40 ಲಕ್ಷ ಮೀರಿದಂತಹ ಪ್ರಸಂಗಗಳು ಸಹ ಕಂಡು ಬಂದಿವೆ. ಈ ಹಿನ್ನಲೆಯಲ್ಲಿ ಹೆಚ್ಚಿದ ಮೊತ್ತದ ಬೆಳೆ ಸಾಲವನ್ನು ಮನ್ನಾ ಮಾಡುವುದು ಸರಿಯಾದ ಕ್ರಮವಲ್ಲ ಎನ್ನವ ರೈತ ಸಮುದಾಯದ ಅಭಿಪ್ರಾಯದ ಹಿನ್ನೆಯಲ್ಲಿ ಸಾಲದ ಮೊತ್ತವನ್ನು ಪ್ರತಿ ರೈತ ಕುಟುಂಬಕ್ಕೆ 2 ಲಕ್ಷ ರೂ.ಗಳಿಗೆ ಮಿತಿಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

    ಈ ಬೆಳೆ ಸಾಲ ಮನ್ನಾ ಯೋಜನೆಯಿಂದ ಸುಮಾರು 34,000 ಕೋಟಿ ರೂ. ಗಳ ಮೊತ್ತದ ಪ್ರಯೋಜನ ರೈತರಿಗೆ ದೊರೆಯಲಿದೆ. ಸರ್ಕಾರಿ ಅಧಿಕಾರಿಗಳು ಮತ್ತು ಸಹಕಾರಿ ಕ್ಷೇತ್ರದ ಅಧಿಕಾರಿಗಳ ಕುಟುಂಬಗಳು ಹಾಗೂ ಕಳೆದ 3 ವರ್ಷಗಳಲ್ಲಿ ಆದಾಯ ತೆರಿಗೆ ಕಟ್ಟಿರುವಂತಹ ರೈತರುಗಳು ಹಾಗೂ ಇತರೆ ಅನರ್ಹ ಕೃಷಿ ಸಾಲಗಾರರು ಈ ಸಾಲ ಮನ್ನಾ ಯೋಜನೆಯಿಂದ ಹೊರಗೆ ಇರಲಿದ್ದಾರೆ.

    ರೈತರಿಗೆ ಹೊಸ ಸಾಲ ಪಡೆಯಲು ಅನುಕೂಲವಾಗುವಂತೆ ಸರ್ಕಾರವು ಅವರ ಸುಸ್ತಿ ಖಾತೆಯಲ್ಲಿರುವ ಬಾಕಿಯನ್ನು ಮನ್ನಾ ಮಾಡಿ ಋಣಮುಕ್ತ ಪತ್ರವನ್ನು ನೀಡಲು ಕ್ರಮ ಕೈಗೊಳ್ಳಲಿದೆ. ಈ ಉದ್ದೇಶಕ್ಕಾಗಿ 2018-19ರ ಆಯವ್ಯಯದಲ್ಲಿ 6,500 ಕೋಟಿ ರೂ. ನಿಗದಿಪಡಿಸಿರುತ್ತೇನೆ. ಇದಲ್ಲದೆ ಹಿಂದಿನ ಸರ್ಕಾರವು ಸಹಕಾರಿ ಬ್ಯಾಂಕ್ ಗಳಲ್ಲಿ ರೈತರು ಮಾಡಿದ ಸುಮಾರು 8,165 ಕೋಟಿ ರೂ. ಸಾಲ ಮನ್ನಾ ಮಾಡಿ ಅದರಲ್ಲಿ 4,165 ಕೋಟಿ ರೂ.ಗಳನ್ನು ಹಿಂದಿನ ವರ್ಷ ಬಿಡುಗಡೆ ಮಾಡಿದೆ. ಉಳಿದ 4,000 ಕೋಟಿ ರು.ಗಲನ್ನು ಸಹ ಪಾವತಿ ಮಾಡಲು ಈ ಆಯವ್ಯಯದಲ್ಲಿ ಅವಕಾಶ ಕಲ್ಪಿಸಲಾಗಿದೆ.

  • ಇನ್ನು ಒಂದು ವರ್ಷ ಯಾರೂ  ನನ್ನ ಟಚ್ ಮಾಡೋಕೆ ಆಗಲ್ಲ: ಸಿಎಂ ಎಚ್‍ಡಿಕೆ

    ಇನ್ನು ಒಂದು ವರ್ಷ ಯಾರೂ ನನ್ನ ಟಚ್ ಮಾಡೋಕೆ ಆಗಲ್ಲ: ಸಿಎಂ ಎಚ್‍ಡಿಕೆ

    ಬೆಂಗಳೂರು: ಸಮ್ಮಿಶ್ರ ಸರ್ಕಾರ ಸುಭದ್ರವಾಗಿ ಇರುತ್ತದೆ. ಮುಂದಿನ ಲೋಕಸಭೆ ಚುನಾವಣೆವರೆಗೆ ನನ್ನನ್ನು ಯಾರು ಟಚ್ ಮಾಡೋಕೆ ಆಗಲ್ಲ. ಈ ವಿಚಾರ ನನಗೆ ಗೊತ್ತು ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ಲೆಕ್ಕ ಪರಿಶೋಧಕರ ಸಮಾವೇಶ ಉದ್ಘಾಟನೆ ಮಾಡಿ ಮಾತನಾಡಿದ ಸಿಎಂ, ನಾನು ಒಂದು ವರ್ಷವಾದರೂ ಅಧಿಕಾರದಲ್ಲಿ ಇರುತ್ತೇನೆ. ಅಲ್ಲಿವರೆಗೂ ನನ್ನನ್ನು ಯಾರು ಟಚ್ ಮಾಡಲು ಸಾಧ್ಯವಿಲ್ಲ. ಅಲ್ಲಿವರೆಗೂ ನಾನು ಸುಮ್ಮನೆ ಸಮಯ ವ್ಯರ್ಥ ಮಾಡಲ್ಲ. ಸಿಕ್ಕಿರುವ ಅವಕಾಶದಲ್ಲಿ ಒಂದೊಂದು ಕ್ಷಣನೂ ನಾನು ಏನು ತೀರ್ಮಾನ ಮಾಡಬೇಕು ಎಂದು ಯೋಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

    ನನಗೆ ನನ್ನ ರಾಜ್ಯದ ಅಭಿವೃದ್ಧಿ ಮುಖ್ಯ. ಈ ಸರ್ಕಾರ ಕೇವಲ ಗ್ರಾಮೀಣ ಪ್ರದೇಶದ ಪರವಾಗಿರುತ್ತದೆ. ರೈತರ ಸಾಲಮನ್ನಾ ಕಮಿಟ್ ಮೆಂಟ್ ನಿಂದ ಯಾವುದೇ ಕಾರಣಕ್ಕೂ ಎಸ್ಕೇಪ್ ಆಗೊಲ್ಲ ಅಂತ ಹಾಗೇ ಸಾಲ ಮನ್ನಾ ಮಾಡೋದು ಹೇಗೆ ಅಂತಾ ನನಗೆ ಗೊತ್ತು. ಈಗಾಗಲೇ ರೈತರ ಸಾಲಮನ್ನಾ ಬಗ್ಗೆ ಬ್ಯಾಂಕ್ ಮುಖ್ಯಸ್ಥರ ಜೊತೆ ಸಭೆ ಮಾಡಿದ್ದೇನೆ. ಆರ್ಥಿಕ ಶಿಸ್ತಿಗೆ ಧಕ್ಕೆ ಆಗದಂತೆ, ನಿಯಮಗಳ ಒಳಗೆ ಸಾಲಮನ್ನಾ ಮಾಡ್ತೀನಿ. ನಾನು ಹೆದರಿ ಓಡಿ ಹೋಗೊಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

    ಜುಲೈ ಮೊದಲ ವಾರ ಬಜೆಟ್ ಮಂಡನೆ ಮಾಡೋ ಯೋಚನೆ ಇದೆ. ಇನ್ನು ಕೆಲವರು ಬಜೆಟ್ ಮಂಡನೆ ಮಾಡಿದರೆ ಎಲ್ಲಿ ಕುಮಾರಸ್ವಾಮಿ ಹೆಸರು ಮಾಡುತ್ತಾರೆ ಅನ್ನೋ ಚಿಂತೆಯಲ್ಲಿದ್ದಾರೆ. ಆದರೆ ಹೊಸ ಸರ್ಕಾರವಾಗಿ ಹೊಸ ಕಾರ್ಯಕ್ರಮ ನೀಡಲು ಬಜೆಟ್ ಮಂಡಿಸಬೇಕು ಎಂದು ಹೆಸರು ಹೇಳದೆ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

    ಹಣಕಾಸು ಸಚಿವನಾಗಿ ಹೇಳುತ್ತಿದ್ದೇನೆ. ನಾನು ಏನು ಹೇಳಿದ್ದೇನೋ ಅದನ್ನ ಮಾಡೇ ಮಾಡುತ್ತೇನೆ. ರೈತ ಸಾಲಮನ್ನಾ ಮಾಡಲು ಕಾಂಗ್ರೆಸ್, ನಾವು ತಯಾರು ಇದ್ದೇವೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಜನರ ಮುಂದೆ ಹೇಳಿದ ಎಲ್ಲಾ ಕಾರ್ಯಕ್ರಮ ಜಾರಿಗೆ ತರುತ್ತೇನೆ. ಕಾಂಗ್ರೆಸ್ ಕಾರ್ಯಕ್ರಮಗಳು ಕೂಡಾ ಜಾರಿಗೆ ತರುತ್ತೇವೆ. ರೈತರ ಸಾಲಮನ್ನಾ ಮಾಡೋದು ಗ್ಯಾರಂಟಿ. ಅದಕ್ಕಾಗಿ ಹಣ ಕ್ರೋಢೀಕರಣ ಮಾಡುತ್ತಿದ್ದೇನೆ ಅಂತ ತಿಳಿಸಿದ್ದಾರೆ.

  • ಸಾರ್ ಇನ್ನು 5 ವರ್ಷ ಟೈಂ ಇದೆ, ಮುಂದಿನ ಬಾರಿ ಮತ್ತೊಂದು ನಾಟಕವಾಡಿ: ಸಿಎಂಗೆ ನೆಟ್ಟಿಗರ ಕ್ಲಾಸ್

    ಸಾರ್ ಇನ್ನು 5 ವರ್ಷ ಟೈಂ ಇದೆ, ಮುಂದಿನ ಬಾರಿ ಮತ್ತೊಂದು ನಾಟಕವಾಡಿ: ಸಿಎಂಗೆ ನೆಟ್ಟಿಗರ ಕ್ಲಾಸ್

    ಬೆಂಗಳೂರು: ಸಾಲ ಮನ್ನಾ ಮಾಡಲು ನಾನು ಸಂಪೂರ್ಣ ಬದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಕ್ಕೆ ಜನ ಟ್ವಿಟ್ಟರ್ ನಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ರೈತ ಬಾಂಧವರೇ, ಸಾಲ ಮನ್ನಾ ಬಗ್ಗೆ ಯಾವುದೇ ರೀತಿಯ ಗೊಂದಲ ಬೇಡ. ಸಾಲ ಮನ್ನಾ ಮಾಡಲು ನಾನು ಸಂಪೂರ್ಣ ಬದ್ಧನಿದ್ದೇನೆ. ಅತ್ಯಂತ ವೈಜ್ಞಾನಿಕವಾಗಿ ಗರಿಷ್ಠ ರೈತರಿಗೆ ಈ ಪ್ರಯೋಜನ ಸಿಗಬೇಕು ಎನ್ನುವ ಉದ್ದೇಶ ನನ್ನದು. ನಾನು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು ಅತಿ ಶೀಘ್ರದಲ್ಲಿ ಈ ಬಗ್ಗೆ ಘೋಷಣೆ ಮಾಡುತ್ತೇನೆ ಎಂದು ಶುಕ್ರವಾರ ಬೆಳಗ್ಗೆ 9.45ಕ್ಕೆ ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.

    ಈ ಟ್ವೀಟ್ ಪ್ರಕಟಗೊಂಡ ಬಳಿಕ ಟ್ವೀಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದು, ಆರಂಭದಲ್ಲಿ ಅಧಿಕಾರ ಸ್ವೀಕರಿಸಿದ 24 ಗಂಟೆಯ ಒಳಗಡೆ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದ್ದೀರಿ. ಆದರೆ ಇನ್ನೂ ಘೋಷಣೆಯಾಗಿಲ್ಲ ಯಾಕೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಗೋಪಿ ಬಿ.ಎನ್ ಎನ್ನುವವರು “ಸರ್ ಇನ್ನೂ ಐದು ವರ್ಷ ಟೈಮ್ ಇದೆ ಆರಾಮಾಗಿ ಸಾಲ ಮನ್ನಾ ಮಾಡಿ. ಮುಂದಿನ ಚುನಾವಣೆಯಲ್ಲಿ ಇನ್ನೊಂದು ನಾಟಕ ಮಾಡಿದರಾಯಿತು” ಎಂದು ಬರೆದು ಟಾಂಗ್ ನೀಡಿದ್ದಾರೆ.

    “ಮಾನ್ಯ @ಸಿಎಂ ಆಫ್ ಕರ್ನಾಟಕ ಅವರೆ ರೈತರು ಟ್ವಿಟ್ಟರ್ ಬಳಕೆ ಮಾಡುತ್ತಾರೆಯೇ? ನೀವು ಹೇಳ ಬೇಕಾಗಿದ್ದು ರೈತರ ಮುಂದೆಯೇ ಹೊರತು ಇಲ್ಲಲ್ಲ. ದಯವಿಟ್ಟು ರಾಜ್ಯದ ಪ್ರತಿ ರೈತರಿಗೆ ತಲುಪುವ ಹಾಗೇ ಹೇಳಿ. ಅಲ್ಲದೇ ಈ ಸಾಲ ಮನ್ನಾ ಮಾಡುವ ಮೊದಲು ಹಳೇ ಸರ್ಕಾರದ ಮನ್ನಾ ಮಾಡಿರುವ ಸಾಲದ ಮೊತ್ತವನ್ನು ರೈತರ ಖಾತೆಗೆ ಹಾಕಿ ಎಂದು ಬಿಎಸ್ ರುದ್ರೇಶ್ ಟ್ವೀಟ್ ಮಾಡಿದ್ದಾರೆ.

    ಏಪ್ರಿಲ್ 1 ಯಾವತ್ತೋ ಆಗಿ ಹೋಗಿದೆಯಲ್ಲ ಗುರು ಎಂದು ಜಗದೀಶ್ ಐತಳ್ ವ್ಯಂಗ್ಯವಾಡಿದ್ದಾರೆ.

    https://twitter.com/GopiBN5/status/1007497143509241856

    “ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ನೀವು ಕೇಳಿದ್ದ ಸಾಲ ಮನ್ನಾದ ಗಡುವನ್ನೇ ಮನ್ನಾ ಮಾಡಿಬಿಟ್ಟಿದ್ದಾರಲ್ಲ ಕುಮಾರಣ್ಣ. ಅದರ ಬಗ್ಗೆ ನೀವು ಏನಂತೀರಾ” ಎಂದು ಸುರೇಶ್ ಕುಮಾರ್ ಅವರು ಸಿಎಂ ಕುಮಾರಸ್ವಾಮಿ ಅವರ ಕಾಲೆಳೆದ್ದಾರೆ.

    ಕುಮಾರಣ್ಣ ಎಲ್ಲಿಯವರೆಗೆ ಬರೀ ಸಾಲಮನ್ನಾ ಮಾಡುತ್ತೀರಾ. ರೈತರೇ ಸರ್ಕಾರಕ್ಕೆ ಸಾಲ ಕೊಡುವಂತಹ ಯೋಜನೆಗಳನ್ನು ರೂಪಿಸಿ ಎಂದು ಎಂ.ಡಿ.ಮುಜೇಬ್ ವ್ಯಂಗ್ಯವಾಡಿದ್ದಾರೆ.

    ಕೊಟ್ಟ ಮಾತಿಗೆ ತಪ್ಪಬೇಡಿ, ಸಾಲ ಮನ್ನಾ ಮಾಡುವುದರಿಂದ ರೈತರು ಶ್ರೀಮಂತರಾಗುವುದಿಲ್ಲ. ನಿಮ್ಮ ಹೆಸರು ಹೇಳಿಕೊಂಡು ಸ್ವಲ್ಪ ನಿಟ್ಟುಸಿರು ಬಿಡುತ್ತಾರೆ. ಸಾಲ ಮನ್ನಾ ಮಾಡಲು ಯಾವುದೇ ಜಾತಿ ರಾಜಕಾರಣ ಬೇಡ. ಬಡವರು-ಶ್ರೀಮಂತರು ಅಂತಾ ಮುಖ ನೋಡಬೇಡಿ ಎಲ್ಲರಿಗೂ ಒಂದೇ ನ್ಯಾಯ ಸಿಗಲಿ. ಇದು ನನ್ನ ಕೋರಿಕೆ ಎಂದು ಶ್ರೀನಿವಾಸ್ ಮೂರ್ತಿ ಎಚ್.ಎಂ ಬರೆದಿದ್ದಾರೆ.

    ಸ್ವಲ್ಪ ಕಾಯಿರಿ ಫ್ರೆಶ್ ಎಲೆಕ್ಷನ್ ಬರುತ್ತದೆ ಎಂದು ಸುನೀಲ್ ಎಂಬವರು ಬರೆದು ಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

  • ರಾಜ್ಯ ಬಜೆಟ್ 2018- ಸಾಲ ಮನ್ನಾ ಮಾಡಿ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ

    ರಾಜ್ಯ ಬಜೆಟ್ 2018- ಸಾಲ ಮನ್ನಾ ಮಾಡಿ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಸಾಲದಿಂದ ಬೇಸತ್ತ ರೈತರಿಗೆ ಸಿಹಿ ¸ಸುದ್ದಿ ನೀಡಿದ್ದಾರೆ. ಕೃಷಿ ಸಾಲ ಮನ್ನಾ ಘೋಷಣೆ ಮಾಡಲಾಗಿದ್ದು, ಹಲವು ಹೊಸ ಯೋಜನೆಗಳನ್ನ ಘೋಷಿಸಿದ್ದಾರೆ. 2018-19ನೇ ಸಾಲಿನಲ್ಲಿ ಕೃಷಿ ಇಲಾಖೆಗೆ ಒಟ್ಟು 5,849 ಕೋಟಿ ರೂ. ಒದಗಿಸಲಾಗಿದೆ.

    ಸತತ ಬರಗಾಲದಿಂದ ಕಂಗೆಟ್ಟ ರೈತರಿಗೆ ಸಾಲದ ಹೊರೆಯನ್ನು ಕೂಡಲೇ ಕಡಿಮೆಗೊಳಿಸಲು ಪ್ರಸಕ್ತ ವರ್ಷದಲ್ಲಿ ಸರ್ಕಾರ 8165 ಕೋಟಿ ರೂ. ವೆಚ್ಚದಲ್ಲಿ ಸಾಲ ಮನ್ನಾ ಯೋಜನೆ ಘೋಷಿಸಿದೆ.

    ಇದರಿಂದ ರಾಜ್ಯದಲ್ಲಿ 22,27,506 ರೈತರಿಗೆ ಅನುಕೂಲವಾಗಿದೆ. ಈ ಮೊತ್ತದ ಒಂದು ಭಾಗವನ್ನು ಈಗಾಗಲೇ ಪ್ರಸಕ್ತ ವರ್ಷದ ಪೂರಕ ಅಂದಾಜಿನಲ್ಲಿ ಒದಗಿಸಲಾಗಿದೆ. ಉಳಿದ ಮೊತ್ತವನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಒದಗಿಸಲು ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದೆ.

    ಸಾಲ ಮನ್ನಾ ಪ್ರಮುಖ ಅಂಶಗಳು ಹೀಗಿವೆ:
    2015ರ ಸೆಪ್ಟೆಂಬರ್ 30ಕ್ಕೆ ಸುಸ್ತಿಯಾಗಿರುವ ಎಲ್ಲಾ ಬಗೆಯ ಕೃಷಿ ಸಾಲಗಳ ಅಸಲನ್ನು 2017ರ ಮಾರ್ಚ್ 31ರೊಳಗೆ ಪಾವತಿಸದ ರೈತರ 124.70 ಕೋಟಿ ರೂ. ಮೊತ್ತದ ಪೂರ್ಣ ಬಡ್ಡಿ ಮನ್ನಾ.
    ಕಳೆದ 4 ವರ್ಷಗಳ ಅವಧಿಯಲ್ಲಿ 10.7 ಲಕ್ಷ ರೈತರ 2359 ಕೋಟಿ ರೂ. ಬಡ್ಡಿ ಮನ್ನಾ
    2017ರ ಜೂನ್ 20ಕ್ಕೆ ಅನ್ವಯವಾಗುವಂತೆ ಸಹಕಾರಿ ಬ್ಯಾಂಕ್‍ಗಳಲ್ಲಿನ ರೈತರ 50 ಸಾವಿರ ರೂ. ವರೆಗಿನ ಸಾಲ ಮನ್ನಾ.
    ಇದರಿಂದ ರಾಜ್ಯದ 22,27,506 ರೈತರ ಒಟ್ಟು 8165 ಕೋಟಿ ರೂ. ಸಾಲ ಮನ್ನಾ ಆಗಿದೆ.

    ಹೊಸ ಯೋಜನೆಗಳು:
    ಕೃಷಿ ಹೊಂಡಗಳು ಮತ್ತು ಪಾಲಿ ಹೌಸ್ ಗಳ ನಿರ್ಮಾಣ, ಮಣ್ಣು ಕಾರ್ಡ್ ವಿತರಣೆ.
    ಹನಿ ನೀರಾವರಿಗೆ ಎಲ್ಲಾ ವರ್ಗದ ರೈತರಿಗೂ 90% ಸಹಾಯಧನ, ರೈತರಿಗೆ ಕೃಷಿ ಯಂತ್ರೋಪಕರಣ ಮತ್ತು ಕೃಷಿ ಸಲಕರಣೆ ಬಾಡಿಗೆಗೆ ನೀಡಿಕೆ, ಹಾಲು ಉತ್ಪಾದನಾ ಸಹಾಯಧನ.
    ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರಾಥಮಿಕ ಕೃಷಿ ಸಹಕಾರಿ ಸಂಘ ಸ್ಥಾಪನೆ.
    ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ತಲಾ 5 ಕೋಟಿ ರೂ. ವೆಚ್ಚದಲ್ಲಿ ಗೋದಾಮು ನಿರ್ಮಾಣ.
    ದೇಶದಲ್ಲೇ ಮೊದಲ ಬಾರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷದವರೆಗೆ ಸಾಲ ನೀಡಲಾಗ್ತಿದೆ. ಇದರ ಜೊತೆ 3% ಬಡ್ಡಿ ದರದಲ್ಲಿ 3 ರಿಂದ 10 ಲಕ್ಷದವರೆಗೆ ಸಾಲ.

    ಖುಷ್ಕಿ ಭೂಮಿಯ ಸಂಕಷ್ಟಗಳನ್ನ ನೇರವಾಗಿ ಪರಿಹರಿಸಲು ರೈತರಿಗೆ ನೇರ ಆದಾಯ ನೆರವು ನೀಡುವ ‘ರೈತ ಬೆಳಕು’ ಎಂಬ ವಿಶಿಷ್ಟ ಯೋಜನೆ ರಾಜ್ಯದಲ್ಲಿ ಮೊದಲ ಬಾರಿಗೆ ಪ್ರಾರಂಭ.
    2018-19ರಿಂದ ಮಳೆ ಆಶ್ರಿತ ಬೆಳೆ ಬೆಳೆಯುವ ರೈತರಿಗೆ ಪ್ರತಿ ವರ್ಷ ಪ್ರತಿ ರೈತನಿಗೆ ಗರಿಷ್ಠ 10 ಸಾವಿರ ರೂ.
    ಪ್ರತಿ ಹೆಕ್ಟೇರ್‍ಗೆ 5 ಸಾವಿರ ರೂ. ರೈತರ ಬ್ಯಾಂಕ್ ಖಾತೆಗಳ ಮೂಲಕ ನೇರವಾಗಿ ವರ್ಗಾವಣೆ.
    ಯೋಜನೆಗೆ ಪ್ರತಿ ವರ್ಷ 3500 ಕೋಟಿ ರೂ. ಖರ್ಚು, ಅಂದಾಜು 70 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಯೋಜನ.

    ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 2018-19ನೇ ಸಾಲಿಗೆ ರಾಜ್ಯದ ಪಾಲು ಭರಿಸಲು 845 ಕೋಟಿ ರೂ. ಅನುದಾನ.
    2018-19ನೇ ಸಾಲಿನಲ್ಲಿ ಸಿರಿಧಾನ್ಯಗಳ ವಿಸ್ತೀರ್ಣ 60 ಸಾವಿರ ಹೆಕ್ಟೇರ್‍ಗೆ ಹೆಚ್ಚಿಸಲು ವಿಶೇಷ ಕಾರ್ಯಕ್ರಮ- 24 ಕೋಟಿ ರೂ. ಅನುದಾನ.
    ನೆಲಗಡಲೆ ಬೆಳೆಯುವ ರೈತರಿಗೆ 50 ಕೋಟಿ ರೂ. ಗಳ ವಿಶೇಷ ಪ್ಯಾಕೇಜ್.
    ಕಬ್ಬು ಕಟಾವು ಯಂತ್ರಗಳಿಗೆ ಸಹಾಯಧನ ನೀಡಲು 20 ಕೋಟಿ ರೂ.
    ಕೃಷಿ ಚಟುವಟಿಕೆ ಸಮಯದಲ್ಲಿ ಹಾವು ಕಡಿತದಿಂದ ಆಕಸ್ಮಿಕ ಮರಣ ಹೊಂದಿದ ರೈತರ ಹಾಗೂ ಕೃಷಿ ಕಾರ್ಮಿಕರ ಕುಟುಂಬಕ್ಕೆ ನೀಡುತ್ತಿರುವ ಪರಿಹಾರ 2 ಲಕ್ಷ ರೂ.ಗೆ ದ್ವಿಗುಣ
    ಹುಲ್ಲು ಮೆದೆ/ಬಣವೆಗಳು ಆಕಸ್ಮಿಕ ಬೆಂಕಿಯಿಂದ ನಷ್ಟವಾಗುವ ಪ್ರಕರಣಗಳಲ್ಲಿ ನೀಡಲಾಗುವ ಪರಿಹಾರ ದ್ವುಗುಣ- ಗರಿಷ್ಠ 20 ಸಾವಿರ ರೂ.
    ಚಾಮರಾಜನಗರದಲ್ಲಿ ನೂತನ ಕರಷಿ ಕಾಲೇಜು ಸ್ಥಾಪನೆ.