Tag: Deathnote

  • ಒಂಟಿ ಜೀವನದ ಮುಕ್ತಿಗಾಗಿ 80 ಸಾವಿರ ಸಂಬಳ ಪಡೆಯುವ ಯುವಕ ಸಮುದ್ರಕ್ಕೆ ಹಾರಿದ!

    ಒಂಟಿ ಜೀವನದ ಮುಕ್ತಿಗಾಗಿ 80 ಸಾವಿರ ಸಂಬಳ ಪಡೆಯುವ ಯುವಕ ಸಮುದ್ರಕ್ಕೆ ಹಾರಿದ!

    ಮುಂಬೈ: ನನಗೆ ಒಂಟಿ ಜೀವನದಿಂದ ಮುಕ್ತಿ ಬೇಕೆಂದು ಸಮುದ್ರಕ್ಕೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಆಶೋರ್ ಜುಹು ಚೌಪಟ್ಟಿ ಯಲ್ಲಿ ನಡೆದಿದೆ.

    29 ವರ್ಷದ ಅಜಿತ್ ದುಕ್ರೆ ಆತ್ಮಹತ್ಯೆಗೆ ಶರಣಾದ ಎಂಬಿಎ ಪದವಿಧರ. ಅಜಿತ್ ಗುರುವಾರ ಘಟಕ್‍ಪುರನ ತಮ್ಮ ಮನೆಯಿಂದ ನಾಪತ್ತೆಯಾಗಿದ್ರು. ಈ ಸಂಬಂಧ ಅಜಿತ್ ಸಹೋದರ ಅನಿಲ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

    ಪುಣೆ ಮೂಲದ ಅಜಿತ್ ಘಟಕ್‍ಪುರ ನಲ್ಲಿ ಅಣ್ಣನೊಂದಿಗೆ ವಾಸವಾಗಿದ್ದರು. ಅಜಿತ್ ಹಣಕಾಸಿನ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ತಿಂಗಳಿಗೆ 80 ಸಾವಿರ ರೂ. ಸಂಬಳ ಪಡೆಯುತ್ತಿದ್ದರು.

    ಗುರುವಾರ ರಾತ್ರಿ ಸಂತಾಕ್ರೂಜ್ ಬಳಿಯ ಆಶೋರ್ ಜುಹು ಚೌಪಟ್ಟಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತ ದೇಹವನ್ನು ಪರೀಶಿಲಿಸಿದಾಗ, ಫಸ್ಟ್ ಕ್ಲಾಸ್ ರೈಲ್ವೇ ಟಿಕೆಟ್ ಸಿಕ್ಕಿದೆ. ಟಿಕೆಟ್ ಆಧರಿಸಿ ತನಿಖೆ ಆರಂಭಿಸಿದ ಪೊಲೀಸರಿಗೆ ಶವ ಅಜಿತ್‍ನಂದು ತಿಳಿದಿದೆ. ಪೊಲೀಸರಿಂದ ವಿಷಯ ತಿಳಿದ ಅಜಿತ್ ಸಹೋದರ ಅನಿಲ್ ಸ್ಥಳಕ್ಕಾಗಮಿಸಿ ಮೃತದೇಹ ಗುರುತಿಸಿದ್ದಾರೆ. ಪೊಲೀಸರು ಸಾವಿಗೆ ನಿಖರ ಕಾರಣ ತಿಳಿಯಲು ತನಿಖೆಯನ್ನು ಚುರುಕುಗೊಳಿಸಿದಾಗ ಅಜಿತ್ ಕೋಣೆಯಲ್ಲಿ ಡೆತ್ ನೋಟ್ ಸಿಕ್ಕಿದೆ.

    ಏನಿತ್ತು ಡೆತ್ ನೋಟ್‍ನಲ್ಲಿ?: ಅಜಿತ್ ಡೆತ್‍ನೋಟ್ ನಲ್ಲಿ ತನ್ನ ಜೀವನ ಶೈಲಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಚಿಕ್ಕಂದಿನಿಂದಲೂ ಪುಸ್ತಕದ ಹುಳು ಆಗಿದ್ದೆ. ಹಾಗಾಗಿ ಸಮಾಜದಲ್ಲಿನ ಯಾರೊಂದಿಗೆ ಬೆರೆಯುತ್ತಿರಲಿಲ್ಲ. ಸಮಾಜದಲ್ಲಿ ವ್ಯವಹರಿಸುವ ಕನಿಷ್ಠ ಜ್ಞಾನವು ನನ್ನಲ್ಲಿ ಇರಲಿಲ್ಲ. ನನ್ನನ್ನು ಸದಾ ಒಂಟಿತನ ಕಾಡುತ್ತಿತ್ತು. ನನಗೆ ಉಂಟಾಗಿರುವ ನೋವಿಗೆ ಕೊನೆ ಹಾಡಲು ನನ್ನ ಜೀವನಕ್ಕೆ ವಿದಾಯ ಹೇಳುತ್ತಿದ್ದೇನೆ. ನಾನು ಜಲ ಸಮಾಧಿ ಆಗುತ್ತಿದ್ದೇನೆ ಎಂದು ಬರೆಯಲಾಗಿತ್ತು.

    ಅಜಿತ್ ಜೀವನದಲ್ಲಿ ಏಕಾಂಗಿತನ, ಮಾನಸಿಕ ಖಿನ್ನತೆ ಯಾವುದೇ ನಮಗೆ ಕಂಡು ಬಂದಿಲ್ಲ. ಅಜಿತ್ ಬಾಲ್ಯದಿಂದಲೂ ಏಕಾಂಗಿಯಾಗಿ ಇರಲು ಇಷ್ಟಪಡುತ್ತಿದ್ದನು. ಆದರೆ ಅಜಿತ್ ಈ ರೀತಿಯಾಗಿ ದೊಡ್ಡ ಹೆಜ್ಜೆ ಇಡುತ್ತಾನೆ ಅಂತಾ ನಾವು ಕನಸಿನಲ್ಲಿಯೂ ಊಹಿಸಿರಲಿಲ್ಲ ಎಂದು ಅಜಿತ್ ಸಂಬಂಧಿ ಶರದ್ ದೊಕ್ರೆ ಹೇಳುತ್ತಾರೆ.

    ಮರಣೋತ್ತರ ಶವ ಪರೀಕ್ಷೆಯ ನಂತರ ಅಜಿತ್ ಮೃತ ದೇಹವನ್ನು ಅನಿಲ್ ವಶಕ್ಕೆ ನೀಡಲಾಗಿದೆ. ಅಜಿತ್ ಶವವನ್ನು ಪುಣೆ ಜಿಲ್ಲೆಯ ಜುನ್ನರ್ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂತಿಮ ವಿಧಿ ವಿಧಾನಗಳನ್ನು ಮಾಡಲಾಗಿದೆ. ನಾವು ತನಿಖೆಯನ್ನು ಮುಂದುವರೆಸಿದ್ದು, ಜುಹು ಬೀಚ್‍ನಲ್ಲಿಯ ಸಿಸಿಟಿವಿ ಫೋಟೇಜ್ ಪರಿಶೀಲನೆ ನಡೆಸಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳಿಂದ ಅಜಿತ್ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಸ್ಥಳದಲ್ಲಿ ಜನರು ಮತ್ತು ಬೀಚ್‍ನಲ್ಲಿ ಆತನ ಚಲನವಲನ ಗಮನಿಸಲಾಗುವುದು ಎಂದು ಸಂತಕ್ರೂಜ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಶಾಂತನು ಪವಾರ್ ತಿಳಿಸಿದ್ದಾರೆ.

  • ನಾನು ಅಪ್ರಾಪ್ತೆಯಲ್ಲ ಎಂದು ಲವ್ವರ್ ನ ಮದ್ವೆಯಾದ್ಳು – ಮದ್ವೆಯಾದ ಕೆಲವೇ ತಿಂಗ್ಳಲ್ಲಿ ಡೆತ್‍ನೋಟ್ ಬರೆದು 18ರ ಯುವತಿ ಆತ್ಮಹತ್ಯೆ

    ನಾನು ಅಪ್ರಾಪ್ತೆಯಲ್ಲ ಎಂದು ಲವ್ವರ್ ನ ಮದ್ವೆಯಾದ್ಳು – ಮದ್ವೆಯಾದ ಕೆಲವೇ ತಿಂಗ್ಳಲ್ಲಿ ಡೆತ್‍ನೋಟ್ ಬರೆದು 18ರ ಯುವತಿ ಆತ್ಮಹತ್ಯೆ

    ಚಂಡೀಗಢ: ನಾನು ಅಪ್ತಾಪ್ತೆಯಲ್ಲ ಎಂದು ಹೇಳಿ ಪ್ರೀತಿಸಿದವನ ಜೊತೆ 18ರ ಯುವತಿ ಮದುವೆಯಾದಳು. ಆದರೆ ಮದುವೆಯಾದ ಒಂದು ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್‍ನ ಮೊಹಲಿಯಲ್ಲಿ ನಡೆದಿದೆ.

    18 ವರ್ಷದ ಆವಂತಿಕಾ ತನ್ನ ಮನೆಯಲ್ಲಿ ಫ್ಯಾನಿಗೆ ನೇಣಿ ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಯುವತಿ. ಶುಕ್ರವಾರ ಊಟದ ಸಮಯದಲ್ಲಿ ಅವಳ ಚಿಕ್ಕಮ್ಮ ಕೆಲಸದಿಂದ ಮನೆಗೆ ಬಂದಾಗ ಆವಂತಿಕಾ ರೂಂ ಒಳಗೆ ಸೇರಿಕೊಂಡು ಲಾಕ್ ಮಾಡಿಕೊಂಡಿದ್ದಳು. ಎಷ್ಟೆ ಬಾಗಿಲು ಬಡಿದರೂ ತೆಗೆಯಲಿಲ್ಲ. ಕೊನೆಗೆ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಳು. ತಕ್ಷಣ ಅವಳನ್ನು ಕೆಳಗಿಳಿಸಿ ಸಮೀಪದ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಅಷ್ಟರಲ್ಲಿ ಆವಂತಿಕಾ ಮೃತಪಟ್ಟಿದ್ದಳು.

    ಆವಂತಿಕಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್‍ನೋಟ್ ಬರೆದಿದ್ದು, ಪೋಷಕರು ವಿರೋಧಿಸಿದರು ನಾನು ಪ್ರೀತಿಸಿದ ಹುಡುಗನನ್ನು ವಿವಾಹವಾಗಿ ತಪ್ಪು ಮಾಡಿದೆ. ಈಗ ಈ ಜೀವನದಲ್ಲಿ ನನಗೆ ಜಿಗುಪ್ಸೆಯಾಗಿದೆ. ಕಳೆದ ವರ್ಷ ಕುಟುಂಬದ ವಿರೋಧವಿದ್ದರೂ ನಾನು ಪ್ರೀತಿಸಿದ ಹರ್ದೀಪ್ ನನ್ನು ಗುರುದ್ವಾರದಲ್ಲಿ ಮದುವೆಯಾದೆ. ಆದರೆ ಮದುವೆಯಾದ ಮೊದಲು ಎಲ್ಲವೂ ಸರಿ ಇತ್ತು. ಸ್ವಲ್ಪದಿನಗಳ ನಂತರ ಸಮಸ್ಯೆಗಳು ಪ್ರಾರಂಭವಾದವು.

    ಹರ್ದೀಪ್ ನನ್ನನ್ನು ನಿರಂತರವಾಗಿ ನಿಂದಿಸುತ್ತಿದ್ದನು. ಅತ್ತೆ, ಮಾವ ಸಹ ಅವನಿಗೆ ಸಹಾಯ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಮಾವ ಕೂಡ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದನು. ಒಂದು ಬಾರಿ ಕುತ್ತಿಗೆಯನ್ನು ಹಿಡಿದಿದ್ದ. ತನಗೆ ಆಗುತ್ತಿರುವ ಅನ್ಯಾಯವನ್ನು ಪತಿಗೆ ತಿಳಿಸಿದರೆ ನನಗೆ ಸುಮ್ಮನಿರು ಅಂತಾ ಹೇಳಿದ್ದನು ಎಂದು ಬರೆದಿದ್ದಾಳೆ.

    ಆವಂತಿಕಾ ಸಾವನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಹಾರ್ದೀಪ್, ಮಾವ ಜಗ್ಸೀರ್ ಸಿಂಗ್ ಮತ್ತು ಅತ್ತೆ ಕರ್ಮಜೀತ್ ಕೌರ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಈ ಹಿಂದೆ ಆವಂತಿಕಾ ತಂದೆ 2017 ರಲ್ಲಿ ಹಾರ್ದೀಪ್ ವಿರುದ್ಧ ದೂರು ನೀಡಿದ್ದು, ಜೂನ್ 23 ರಂದು ಆವಂತಿಕಾ ನಮ್ಮ ಸಂಬಂಧಿಗಳ ಮನೆಗೆ ಹೋಗುತ್ತೇನೆ ಎಂದು ಹೋಗಿದ್ದಳು. ಆದರೆ ಅವಳು ಮನೆಗೆ ತಲುಪಲಿಲ್ಲ. ಹಾರ್ದೀಪ್ ಅವಳನ್ನು ಕರೆದೊಯ್ದಿದ್ದನು ಎಂದು ಶಂಕಿಸಿ ದೂರು ನೀಡಿದ್ದರು.

  • ಮದ್ವೆಯಾದ ಒಂದೇ ತಿಂಗ್ಳಿಗೆ ಡೆತ್‍ನೋಟ್ ಬರೆದು ಮಹಿಳೆ ಆತ್ಮಹತ್ಯೆ

    ಮದ್ವೆಯಾದ ಒಂದೇ ತಿಂಗ್ಳಿಗೆ ಡೆತ್‍ನೋಟ್ ಬರೆದು ಮಹಿಳೆ ಆತ್ಮಹತ್ಯೆ

    ರಾಮನಗರ: ನವ ವಿವಾಹಿತ ಮಹಿಳೆಯೊಬ್ಬರು ಡೆತ್ ನೋಟ್ ಬರೆದು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಶೆಟ್ಟಿ ಹಳ್ಳಿ ಬಳಿ ಘಟನೆ ನಡೆದಿದೆ.

    ಕಾಂತಲಕ್ಷ್ಮಿ (26) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮೂಲತಃ ಬೆಂಗಳೂರಿನ ಕೆ.ಆರ್.ಪುರಂ ನಿವಾಸಿಯಾಗಿದ್ದ ಕಾಂತಲಕ್ಷ್ಮಿ ಮದುವೆಗೂ ಮುನ್ನ ಪ್ರದೀಪ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಪ್ರೀತಿಗೆ ಮನೆಯವರು ಒಪ್ಪದ ಕಾರಣ ಬೇರೊಬ್ಬನ ಜೊತೆ ವಿವಾಹ ನಡೆದಿತ್ತು. ಇದರಿಂದ ಮನನೊಂದಿದ್ದ ಕಾಂತಲಕ್ಷ್ಮಿ ಇಂದು ಬೆಳಗ್ಗೆ ಚನ್ನಪಟ್ಟಣಕ್ಕೆ ಬಂದು ಶೆಟ್ಟಿಹಳ್ಳಿ ಗ್ರಾಮದ ಬಳಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ನಾನು ಮದುವೆಗೂ ಮುನ್ನ ಪ್ರದೀಪ್ ಎಂಬಾತನನ್ನು ಪ್ರೀತಿಸುತ್ತಿದ್ದೆ. ಆದರೆ ನಮ್ಮ ಪ್ರೀತಿಗೆ ಮನೆಯವರು ಒಪ್ಪಲಿಲ್ಲ. ಬದಲಿಗೆ ಬೇರೆ ಹುಡುಗನ ಜೊತೆ ಮದುವೆ ಮಾಡಿಸಿದರು. ಆದರೆ ಅವನ ಜೊತೆ ಬಾಳಲು ನನಗೆ ಇಷ್ಟವಿಲ್ಲ. ಆದ್ದರಿಂದ ನಾನು ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿದ್ದೇನೆ ಎಂದು ಕಾಂತಲಕ್ಷ್ಮಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಘಟನೆ ಸಂಬಂಧ ಚನ್ನಪಟ್ಟಣ ನಗರ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಐ ಮಿಸ್ ಯು ಪಪ್ಪ, ಮಮ್ಮಿ ಎಂದು ಬರೆದಿಟ್ಟು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ!

    ಐ ಮಿಸ್ ಯು ಪಪ್ಪ, ಮಮ್ಮಿ ಎಂದು ಬರೆದಿಟ್ಟು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ!

    ಬೆಂಗಳೂರು: ಡೆತ್‍ನೋಟ್ ಬರೆದಿಟ್ಟು ಡಿಪ್ಲೋಮಾ ಇನ್ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬೇಗೂರು ಗ್ರಾಮದಲ್ಲಿ ನಡೆದಿದೆ.

    ಮೌನಿಷಿ ರಾಂ (20) ಆತ್ಮಹತ್ಯೆ ಶರಣಾದ ವಿದ್ಯಾರ್ಥಿನಿ. ಪಶ್ಚಿಮ ಬಂಗಾಳ ಮೂಲದ ಮೌನಿಷಿ, ಅಂಬಿಕಾ ಕಾಲೇಜಿನಲ್ಲಿ ಡಿಪ್ಲೋಮಾ ಇನ್ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು.

    ಮೌನಿಷಿ ಪಶ್ಚಿಮ ಬಂಗಾಳ ಮೂಲದ ಹುಡುಗನನ್ನೇ ಪ್ರೀತಿಸುತ್ತಿದ್ದಳು. ಈ ವಿಚಾರ ಅವರ ಪೋಷಕರಿಗೂ ತಿಳಿದಿತ್ತು. ಆದರೆ ಮನೆಯವರು ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮೂರು ದಿನಗಳಿಂದ ಈ ವಿಚಾರದ ಬಗ್ಗೆ ಮನೆಯರೊಂದಿಗೆ ಫೋನ್ ನಲ್ಲಿ ಮಾತನಾಡಿದ್ದಾಳೆ. ಆದ್ರೆ ಶನಿವಾರ ರಾತ್ರಿ ಮನನೊಂದ ಮೌನಿಷಿ ಮನನೊಂದು ಡೆತ್‍ನೋಟ್ ಬರೆದಿಟ್ಟು ಸೀಲಿಂಗ್ ಫ್ಯಾನ್ ಹುಕ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ನಮ್ಮ ಮನೆಯಲ್ಲಿ ನಮ್ಮ ಪ್ರೀತಿಗೆ ಒಪ್ಪುತ್ತಿಲ್ಲ. ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಐ ಮಿಸ್ ಯು ಪಪ್ಪ, ಐ ಮಿಸ್ ಯು ಮಮ್ಮಿ ಎಂದು ಡೆತ್‍ನೋಟಿನಲ್ಲಿ ಬರೆದಿದ್ದಾಳೆ.

    ಈ ಘಟನೆ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಳ್ವಾಸ್ ಕಾಲೇಜು ವಿದ್ಯಾರ್ಥಿನಿಯ ಆತ್ಮಹತ್ಯೆ ಸುತ್ತ ಅನುಮಾನದ ಹುತ್ತ!

    ಆಳ್ವಾಸ್ ಕಾಲೇಜು ವಿದ್ಯಾರ್ಥಿನಿಯ ಆತ್ಮಹತ್ಯೆ ಸುತ್ತ ಅನುಮಾನದ ಹುತ್ತ!

    ಮಂಗಳೂರು: ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿ ರಚನಾ ಆತ್ಮಹತ್ಯೆ ಪ್ರಕರಣ ಹೆತ್ತವರಲ್ಲಿ ಅನುಮಾನ ಮೂಡಿಸಿದೆ.

    ಗುರುವಾರ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಚಿತ್ರದುರ್ಗ ಮೂಲದ ರಚನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಕಾಲೇಜು ತಿಳಿಸಿತ್ತು. ಹಾಸ್ಟೆಲ್ ಐದನೇ ಮಹಡಿಗೆ ತೆರಳಿ ಬ್ಯಾಗ್, ನೀರಿನ ಬಾಟಲಿ, ಚಪ್ಪಲಿಯನ್ನು ಅಲ್ಲೇ ಬಿಟ್ಟು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಾಲೇಜು ರಚನಾ ಪೋಷಕರಿಗೆ ತಿಳಿಸಿತ್ತು.

    ರಚನಾ ತಂದೆ ಮಂಜುನಾಥ್ ಹೇಳಿದ್ದು ಹೇಗೆ:
    ನಾವು ಮೂಲತಃ ಚಿತ್ರದುರ್ಗದವರಾಗಿದ್ದು, ರಚನಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಪ್ರಾಂಶುಪಾಲರು ಕರೆ ಮಾಡಿ ತಿಳಿಸಿದ್ದರು. ನಮ್ಮ ಮಗಳನ್ನು ಕಳೆದ ವರ್ಷದಿಂದ ಈ ಸಂಸ್ಥೆಯಲ್ಲಿ ಓದಲು ಬಿಟ್ಟಿದ್ದೇವು. ಬೆಳಗ್ಗೆ ನಾನು ಕೆಲಸಕ್ಕೆ ಹೋಗಲು ತಯಾರಾಗಿದ್ದೆ. ಆಗ ಪ್ರಾಂಶುಪಾಲರು ಕರೆ ಮಾಡಿ ನಿಮ್ಮ ಮಗಳು 5ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ನಿಮ್ಮ ಮಗಳ ಸ್ಥಿತಿ ತುಂಬಾನೇ ಚಿಂತಾಜನಕವಾಗಿದೆ ಎಂದು ಅವರು ತಿಳಿಸಿದ್ದರು.

    ವಿಷಯ ತಿಳಿದ ತಕ್ಷಣ ನಾವು ಕೂಡಲೇ ಚಿತ್ರದುರ್ಗದಿಂದ ಹೊರಟೆವು. ಆಗ ಪ್ರಾಂಶುಪಾಲರು ಮತ್ತೆ ಕರೆ ಮಾಡಿ ನಿಮ್ಮ ಮಗಳಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಎಜೆ ಆಸ್ಪತ್ರೆಗೆ ದಾಖಲಿಸುತ್ತಿದ್ದೇವೆ ಹಾಗೂ ವೆಂಟಿಲೇಶನ್ ನಲ್ಲಿ ಹಾಕಿದ್ದಾರೆ ಎಂದು ತಿಳಿಸಿದ್ದರು. ನಂತರ ಮತ್ತೆ ಕರೆ ಮಾಡಿ ನಿಮ್ಮ ಮಗಳು ಮೃತಪಟ್ಟಿದ್ದಾರೆ ಎಂದು ಹೇಳಿದ್ದರು.

    ಕಾಲೇಜಿಗೆ ಭೇಟಿ ನೀಡಿದ ಬಳಿಕ ನಾನು ಪೊಲೀಸರ ಜೊತೆಗೆ ರಚನಾ ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ಭೇಟಿ ನೀಡಿದೆ. ಆಕೆ ಬಿದ್ದಿರುವ ಜಾಗ ನೋಡಿ ನಾನು ಆಶ್ಚರ್ಯಪಟ್ಟೆ. ಆಕೆ ಅಲ್ಲಿಂದ ಹೇಗೆ ಬಿದ್ದಳೋ ಗೊತ್ತಿಲ್ಲ. ಆತ್ಮಹತ್ಯೆ ಮಾಡಿಕೊಂಡ ಸ್ಥಳದ ಪಕ್ಕದಲ್ಲಿ ಚಪ್ಪಲಿವಿತ್ತು. ಡೆಸ್ಕ್ ಮೇಲೆ ಬ್ಯಾಗ್, ಊಟದ ತಟ್ಟೆ, ನೀರಿನ ಬಾಟಲಿ ಎಲ್ಲ ಇತ್ತು. ಇದನ್ನು ನೋಡಿದ್ದರೆ ಆಕೆ ಆತ್ಮಹತ್ಯೆಗೆ ಯತ್ನಿಸಿಲ್ಲ ಎನ್ನುವುದು ತಿಳಿಯುತ್ತದೆ.

    ರಚನಾ 5 ಅಂತಸ್ತಿನಿಂದ ಬಿದ್ದಿದ್ದರೆ ಆಕೆಯ ದೇಹದ ಮೇಲೆ ಗಾಯವಾಗಬೇಕಿತ್ತು. ಇಲ್ಲವೆಂದರೆ ದೇಹದ ಮೂಳೆ ಮುರಿದು, ಊದಿಕೊಳ್ಳುಬೇಕಿತ್ತು. ಆದರೆ ಇಲ್ಲಿ ನೋಡಿದ್ದರೆ ರಕ್ತ ಬರುವಂತಹ ಗಾಯಗಳು ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಇದು ನಮಗೆ ಅನುಮಾನ ಹುಟ್ಟಿಸಿದೆ. ಜೊತೆಗೆ ಡೆತ್ ನೋಟನ್ನು ಆಕೆ ಬರೆದಿಲ್ಲ. ಡೆತ್ ನೋಟ್ ನಲ್ಲಿರುವುದು ಆಕೆಯ ಕೈಬರಹ ಅಲ್ಲ. ರಚನಾ ಸಾವಿನ ಹಿಂದೆ ಅನುಮಾನವಿದ್ದು, ಆಕೆ ಆತ್ಮಹತ್ಯೆಗೈಯಲು ಸಾಧ್ಯವಿಲ್ಲ. ಇದನ್ನೂ ಓದಿ: ಆಳ್ವಾಸ್ ಕಾಲೇಜಿನ 5ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

  • ಮದ್ವೆಯಾಗಿ 7 ವರ್ಷವಾದ್ರೂ ಮಕ್ಕಳಾಗದ್ದಕ್ಕೆ ಮನನೊಂದ ಗೃಹಿಣಿ ಆತ್ಮಹತ್ಯೆ

    ಮದ್ವೆಯಾಗಿ 7 ವರ್ಷವಾದ್ರೂ ಮಕ್ಕಳಾಗದ್ದಕ್ಕೆ ಮನನೊಂದ ಗೃಹಿಣಿ ಆತ್ಮಹತ್ಯೆ

    ನವದೆಹಲಿ: ಮಕ್ಕಳಾಗದಿದ್ದರಿಂದ ಮನನೊಂದ ಗೃಹಿಣಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆಯೊಂದು ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.

    ಈ ಘಟನೆ ಗುರುವಾರ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಕ್ಕಳಾಗದಿರುವುದರಿಂದ ಆಕೆಗೆ ಗಂಡನ ಮನೆಯವರು ಕಿರುಕುಳ ನೀಡಿದ್ದೇ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

    ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ರಜನಿ ಎಂದು ಗುರುತಿಸಲಾಗಿದ್ದು, ಇವರು ತುಘಲಕ್ ಬಾದ್ ಗ್ರಾಮದಲ್ಲಿ ತನ್ನ ಗಂಡ ಸಂದೀಪ್ ಜೊತೆ ನೆಲೆಸಿದ್ದರು. ಗುರುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಪತಿ ಕರೆ ಮಾಡಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ.

    ಅಂತೆಯೇ ಸ್ಥಳಕ್ಕೆ ದೌಡಾಯಿಸಿದ ಸಂದರ್ಭದಲ್ಲಿ ಡೆತ್ ನೋಟ್ ದೊರೆತಿದ್ದು, ಅದರಲ್ಲಿ ತನಗೆ ಮಕ್ಕಳಾಗದಿರುವುದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿದ್ದಾರೆ. ರಜನಿ ಮತ್ತು ಸಂದೀಪ್ ದಾಂಪತ್ಯಕ್ಕೆ ಜೀವನಕ್ಕೆ ಕಾಲಿರಿಸಿ ಸುಮಾರು 7 ವರ್ಷಗಳೇ ಕಳೆದಿದ್ದವು ಅಂತ ಪೊಲೀಸ್ ಆಯುಕ್ತ ಚಿನ್ಮಯ್ ಸಿದ್ವಾಲ್ ಹೇಳಿದ್ದಾರೆ.

    ಸಂದೀಪ್ ಅವರು ದೆಹಲಿ ಮೆಟ್ರೋದಲ್ಲಿ ಟಿಕೆಟ್ ಹಂಚಿಕೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. ಪ್ರಕರಣ ಕುರಿತಂತೆ ಮಹಿಳೆಯ ತಂದೆ, ತನ್ನ ಮಗಳಿಗೆ ಆಕೆಯ ಗಂಡನ ಮನೆಯಲ್ಲಿ ಹಿಂಸೆ ಕೊಡುತ್ತಿದ್ದರು. ಹೀಗಾಗಿ ಆಕೆ ತೊಂದರೆ ಅನಿಭವಿಸಿದ್ದಾಳೆ. ತವರು ಮನೆಯಿಂದ ವರದಕ್ಷಿಣಿ ತರುವಂತೆಯೂ ಒತ್ತಡ ಹೇರುತ್ತಿದ್ದರು. ಅಲ್ಲದೇ ಆಕೆಗೆ ಮದ್ವೆಯಾಗಿ ವರ್ಷಗಳೇ ಕಳೆದ್ರೂ ಮಕ್ಕಳಾಗಲಿಲ್ಲ. ಹೀಗಾಗಿ ಆಕೆಗೆ ಗಂಡನ ಮನೆಯವರು ಹೊಡೆಯುತ್ತಿದ್ದರು. ಪ್ರತೀ ನಿತ್ಯ ಹಿಂಸೆ ಅನುಭವಿಸುತ್ತಿದ್ದುದರಿಂದ ಆಕೆ ಈ ನಿರ್ಧಾರ ಕೈಗೊಂಡಿದ್ದಾಳೆಂದು ಆರೋಪಿಸಿದ್ದಾರೆ.

    ಸದ್ಯ ಮಹಿಳೆಯ ತಂದೆ ರಾಮ್ ಹೇಳಿಕೆಯಂತೆ ಪೊಲೀಸರು ಪತಿ ಸಂದೀಪ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ನನ್ನ ಸಾವಿಗೆ ನಾನು ಕಾರಣನಲ್ಲ, ನನ್ನ ದಡ್ಡತನ ಕಾರಣ- ಡೆತ್‍ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

    ನನ್ನ ಸಾವಿಗೆ ನಾನು ಕಾರಣನಲ್ಲ, ನನ್ನ ದಡ್ಡತನ ಕಾರಣ- ಡೆತ್‍ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

    ಬೆಂಗಳೂರು: ಇತ್ತೀಚೆಗೆ ಮೀಟರ್ ಬಡ್ಡಿ ದಂಧೆಗೆ ಸಿಲುಕಿದ್ದ ಯುವಕನೊಬ್ಬ ಪೊಲೀಸ್ ಕಂಟ್ರೋಲ್ ರೂಮ್ ಗೆ ಫೋನ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಈ ಪ್ರಕರಣ ಮಾಸುವ ಮುನ್ನವೇ ಅದೇ ಮೀಟರ್ ಬಡ್ಡಿ ದಂಧೆಗೆ ಮತ್ತೊಬ್ಬ ಯುವಕ ಬಲಿಯಾಗಿರುವ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ಬಸವನಪುರದಲ್ಲಿ ನಡೆದಿದೆ.

    ಸಂತೋಷ್(28) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಇತ್ತೀಚೆಗೆ ಸುನಿಲ್ ಎಂಬವನಿಂದ ಮೀಟರ್ ಬಡ್ಡಿಗೆ ಸಾಲ ಪಡೆದಿದ್ದ. ಬಡ್ಡಿ ಕಟ್ಟಲಾಗದೆ ಒದ್ದಾಡುತ್ತಿದ್ದ. ಬಡ್ಡಿಗಾಗಿ ಸುನಿಲ್ ಸಂತೋಷನ ಬೈಕ್ ಹಾಗೂ ಮೊಬೈಲ್ ಕಿತ್ತುಕೊಂಡಿದ್ದ. ಇದರಿಂದ ಖಿನ್ನತೆಗೊಳಗಾಗಿದ್ದ ಸಂತೋಷ್, ಗುರುವಾರ ತಡರಾತ್ರಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.

    ಡೆತ್‍ನೋಟ್‍ನಲ್ಲಿ ಏನಿದೆ?: ಅಮ್ಮ, ಅಪ್ಪ ನಾನು ಸಂತು. ಪಪ್ಪಾ ನನ್ನ ಕ್ಷಮಿಸಿಬಿಡಿ. ನನ್ನ ಕೈಯಲ್ಲಿ ಈ ಕಷ್ಟ ಅನುಭವಿಸಕ್ಕೆ ಆಗಲ್ಲ. ಇವತ್ತು ನನ್ನ ಜೊತೆ ಯಾರೂ ಇಲ್ಲ ಅಂತ ನನಗೆ ಅನ್ನಿಸುತ್ತಿದೆ. ಅಣ್ಣ ಅರುಣ ಅಪ್ಪ ಅಮ್ಮನ್ನ ಚೆನ್ನಾಗಿ ನೋಡಿಕೋ ಪ್ಲೀಸ್. ಅಪ್ಪ ನನಗೆ ಒಂದು ಅವಕಾಶ ಕೊಡಬೇಕಾಗಿತ್ತು. ಅಪ್ಪ ನನಗೆ ನೀನು ತುಂಬಾ ಸರಿ ಹೇಳಿದ್ದೆ, ಯಾರ ಜೊತೆ ಸೇರಬೇಡ ಅಂತಾ. ಆದರೂ ನಾನು ಕೇಳಿಲ್ಲ. ಅದೇ ಇವತ್ತು ನನ್ನ ಈ ತರ ಮಾಡಿಬಿಟ್ಟಿದೆ.

    ರಾಮ ಸಾರಿ ರಾಮ ನನ್ನ ಸ್ನೇಹಿತ ಅಂತ ನೀನೊಬ್ಬ ನನ್ನ ಜೊತೆ ಇದ್ದೆ. ಆದರೆ ನಾನು ಹೋಗ್ತಾ ಇದ್ದೀನಿ. ಮತ್ತೆ ಈ ಪತ್ರ ಓದೋ ಎಲ್ಲರಿಗೂ ನಾನು ಹೇಳೋದು ಒಂದೇ. ಸಾಲ ಕೊಡಿ ಆದರೆ ಪ್ರಾಣ ಕೇಳಬೇಡಿ. ನನ್ನ ಸಾವಿಗೆ ನಾನೇ ಕಾರಣವಲ್ಲ. ನನ್ನ ದಡ್ಡತನವೇ ಕಾರಣ. ನನ್ನನ್ನು ಎಲ್ಲರೂ ಕ್ಷಮಿಸಿ. ಮತ್ತೆ ಪಪ್ಪ ನನ್ನ ನೀವು ದಯವಿಟ್ಟು ಈ ಊರಲ್ಲಿ ಮಣ್ಣು ಮಾಡಬಾರದು. ನನ್ನನ್ನು ನೀವು ಸುಟ್ಟು ನಂತರ ನದಿಗೆ ಹಾಕಬೇಕು ಎಂದು ಡೆತ್‍ನೋಟ್ ಬರೆದಿದ್ದಾನೆ.

    ಈ ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಡೆತ್‍ನೋಟ್ ಬರೆದು ಮಠದಲ್ಲೇ ನೇಣು ಬಿಗಿದುಕೊಂಡು ಸ್ವಾಮೀಜಿ ಆತ್ಮಹತ್ಯೆ

    ಡೆತ್‍ನೋಟ್ ಬರೆದು ಮಠದಲ್ಲೇ ನೇಣು ಬಿಗಿದುಕೊಂಡು ಸ್ವಾಮೀಜಿ ಆತ್ಮಹತ್ಯೆ

    ಹಾವೇರಿ: ಡೆತ್‍ನೋಟ್ ಬರೆದಿಟ್ಟು ಮಠದಲ್ಲೇ ಸ್ವಾಮೀಜಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ನಡೆದಿದೆ.

    38 ವರ್ಷದ ಮಹಾಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಶರಣಾದವರು. ಇವರು ಹುಲ್ಲತ್ತಿ ದಿಂಗಾಲೇಶ್ವರ ಶಾಖಾ ಮಠದ ಸ್ವಾಮೀಜಿಯಾಗಿದ್ದರು. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬಾಲೇಹೊಸೂರಿನ ದಿಂಗಾಲೇಶ್ವರ ಮಠದ ಶಾಖಾ ಮಠದ ಸ್ವಾಮೀಜಿಯೂ ಆಗಿದ್ದರು.

    ಕಳೆದ ಕೆಲವು ತಿಂಗಳುಗಳಿಂದ ಮಠದಲ್ಲಿ ವಾಸವಾಗಿದ್ದ ಸ್ವಾಮೀಜಿ ರಾತ್ರಿ ಯಾರು ಇಲ್ಲದ ವೇಳೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಜಾನೆ ಗ್ರಾಮಸ್ಥರು ಮಠಕ್ಕೆ ಬಂದು ನೋಡಿದಾಗ ವಿಚಾರ ಬೆಳಕಿಗೆ ಬಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ಡೆತ್‍ನೋಟ್‍ನಲ್ಲಿ ಏನಿದೆ?
    ಪೂಜ್ಯ ಗುರುಗಳೇ ಮತ್ತು ನನ್ನ ಬಂಧುಬಾಂದವರೇ ಹಾಗೂ ನನ್ನ ಮಿತ್ರರೇ, ನನ್ನ ಸಾವಿಗೆ ನಾನೇ ಕಾರಣ ಯಾರು ಹೊಣೆಗಾರರಲ್ಲ. ನನಗೆ ಮನಃಶಾಂತಿ ಇಲ್ಲ. ಅದಕ್ಕೆ ನಾನು ಮನಃಶಾಂತಿಗೋಸ್ಕರ ನಾನು ಆತ್ಮಹತ್ಯೆ ಮಾಡಿಕೊಂಡಿದ್ದೇವೆ. ನನ್ನ ಸಮಾಧಿ ಇದೇ ಮಠದಲ್ಲಿ ಮಾಡಿ. ಇದು ನನ್ನ ಕೊನೆಯ ಆಸೆ. ನಾನು ಯಾವ ಭಕ್ತರಿಗೂ ಕೆಟ್ಟದನ್ನು ಮಾಡಿರಲಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದೇನೆ.

  • ‘ದಯವಿಟ್ಟು ಈ ರೀತಿ ಶಿಕ್ಷೆ ನೀಡಬೇಡಿ’ ಅಂತ ಬರೆದು 5ನೇ ಕ್ಲಾಸ್ ವಿದ್ಯಾರ್ಥಿ ಆತ್ಮಹತ್ಯೆ

    ‘ದಯವಿಟ್ಟು ಈ ರೀತಿ ಶಿಕ್ಷೆ ನೀಡಬೇಡಿ’ ಅಂತ ಬರೆದು 5ನೇ ಕ್ಲಾಸ್ ವಿದ್ಯಾರ್ಥಿ ಆತ್ಮಹತ್ಯೆ

    ಗೋರಖ್‍ಪುರ್: ಶಾಲೆಯಲ್ಲಿ ಶಿಕ್ಷಕಿ ಕಠಿಣ ಶಿಕ್ಷೆ ಕೊಟ್ಟಿದ್ದಕ್ಕೆ 5ನೇ ತರಗತಿಯ ಹುಡುಗ ಡೆತ್ ನೋಟ್ ಬರೆದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಗೋರಖ್‍ಪುರ್‍ನಲ್ಲಿ ನಡೆದಿದೆ.

    ಸೆಂಟ್ ಆಂಟೋನಿ ಕಾನ್ವೆಂಟ್ ಶಾಲೆಯಲ್ಲಿ ಓದುತ್ತಿದ್ದ ನವನೀತ್ ಪ್ರಕಾಶ್(8) ಆತ್ಮಹತ್ಯೆಗೆ ಶರಣಾದ ಬಾಲಕ. ವಿಷ ಸೇವಿಸಿದ ಬಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

    ‘ದಯವಿಟ್ಟು ನನ್ನ ಶಿಕ್ಷಕರಿಗೆ ಹೇಳಿ ಯಾರಿಗೂ ಈ ತರಹ ಕಠಿಣ ಶಿಕ್ಷೆ ನೀಡಬಾರದು’ ಎಂದು ತನ್ನ ಕೊನೆಯ ಆಸೆಯನ್ನು ನವನೀತ್ ಡೆತ್‍ನೋಟ್‍ನಲ್ಲಿ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಸೆಪ್ಟಂಬರ್ 15 ರಂದು ನವನೀತ್ ಪರೀಕ್ಷೆಯನ್ನು ಬರೆಯಲು ಶಾಲೆಗೆ ಹೋಗಿದ್ದನು. ಶಾಲೆಯಿಂದ ಮನೆಗೆ ಬಂದ ಬಳಿಕ ನವನೀತ್ ಬಹಳ ಬೇಸರಗೊಂಡಿದ್ದ ಬಳಿಕ ವಿಷ ಸೇವಿಸಿದ್ದಾನೆ ಎಂದು ಪೋಷಕರು ತಿಳಿಸಿದ್ದಾರೆ.

    ಶಾಲೆಯಲ್ಲಿ ನನ್ನನ್ನು 3 ಪಿರಿಯಡ್‍ಗಳ ಕಾಲ ಬೆಂಚ್ ಮೇಲೆ ನಿಲ್ಲಿಸಿದ್ದರು ಮತ್ತು ನನ್ನ ಹತ್ತಿರ ಕೆಟ್ಟದಾಗಿ ವರ್ತಿಸಿದ್ದರು ಎಂದು ನವನೀತ್ ಡೆತ್‍ನೋಟ್ ನಲ್ಲಿ ಬರೆದಿದ್ದಾನೆ.

    ಮಗನಿಗೆ ಶಾಲೆಯ ಶಿಕ್ಷಕರು ಮಾನಸಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಶಾಲೆ ಹಾಗೂ ಶಿಕ್ಷಕಿಯ ವಿರುದ್ಧ ನವನೀತ್ ಪೋಷಕರು ಕೇಸ್ ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಲಾ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.