Tag: Deathnote

  • ಕೊಟ್ಟ ಹಣ ಮರಳಿ ಕೊಡದಿದ್ದಕ್ಕೆ ಡೆತ್‍ನೋಟ್ ಬರೆದಿಟ್ಟು ಯುವಕ ನೇಣಿಗೆ ಶರಣು

    ಕೊಟ್ಟ ಹಣ ಮರಳಿ ಕೊಡದಿದ್ದಕ್ಕೆ ಡೆತ್‍ನೋಟ್ ಬರೆದಿಟ್ಟು ಯುವಕ ನೇಣಿಗೆ ಶರಣು

    ಹಾವೇರಿ: ಕೊಟ್ಟ ಹಣವನ್ನು ಮರಳಿ ಕೊಡದಿದ್ದಕ್ಕೆ ಯುವಕ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕುರುಬಗೊಂಡ ಗ್ರಾಮದಲ್ಲಿ ನಡೆದಿದೆ.

    ಮನೋಜ್‍ ಕುಮಾರ್ ಬೆಣಗೇರಿ(26) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದ ಎರಡು ವರ್ಷಗಳಿಂದ ಮನೋಜ್ ಕುಮಾರ್ ಬೇಕರಿಗಳಿಗೆ ಬಿಸ್ಕೆಟ್ ಸಪ್ಲೈ ಮಾಡುತ್ತಿದ್ದನು ಎಂದು ಹೇಳಲಾಗುತ್ತಿದೆ. ಅಲ್ಲದೆ ಮನೋಜ್, ಶ್ರೀಕಾಂತ್ ಬೆಳಲದವರ ಎಂಬವನಿಗೆ 3 ಲಕ್ಷ 40 ಸಾವಿರ ರೂ. ಸಾಲ ನೀಡಿದ್ದನು. ಆದರೆ ಶ್ರೀಕಾಂತ್ 90 ಸಾವಿರ ರೂ. ಹಣ ನೀಡಿ ಉಳಿದ ಹಣ ನೀಡುತ್ತಿರಲಿಲ್ಲ. ಹೀಗಾಗಿ ಮನೋಜ್ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಡೆತ್‍ನೋಟ್‍ನಲ್ಲಿ ಏನಿದೆ?
    ನನ್ನ ಸಾವಿಗೆ ಶ್ರೀಕಾಂತ್ ಬೆಳಲದವರ ಕಾರಣ. ಶ್ರೀಕಾಂತ್ ನನ್ನ ಜೊತೆ ಹಣ ತೆಗೆದುಕೊಂಡಿದ್ದು, ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದಾನೆ. ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಶ್ರೀಕಾಂತ್ ನನ್ನ ಬಳಿ 3 ಲಕ್ಷದ 40 ಸಾವಿರ ರೂ. ತೆಗೆದುಕೊಂಡಿದ್ದು, ಇದರಲ್ಲಿ 90 ಸಾವಿರ ರೂ. ಕೊಟ್ಟಿದ್ದಾನೆ. ಉಳಿದ ಹಣ ಕೇಳಿದರೆ ಕೊಡುವುದಿಲ್ಲ ಎಂದು ಪೀಡಿಸುತ್ತಿದ್ದಾನೆ. ಉಳಿದ ಹಣ ಕೊಡದಿದ್ದಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದೇನೆ ಎಂದು ಮನೋಜ್ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಅಲ್ಲದೆ ಡೆತ್‍ನೋಟ್‍ನಲ್ಲಿ ಸಾರಿ ಅಮ್ಮಾ, ಅಪ್ಪಾ, ಆಂಟಿ ಹಾಗೂ ಅಜ್ಜಿ ಎಂದು ಬರೆದಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ನನ್ನ ಸಾವಿಗೆ ಯಾರೂ ಕಾರಣರಲ್ಲ – ಒಂದೂವರೆ ಪುಟ ಡೆತ್‍ನೋಟ್ ಬರೆದು ಆತ್ಮಹತ್ಯೆಗೆ ಶರಣಾದ ನಟ

    ನನ್ನ ಸಾವಿಗೆ ಯಾರೂ ಕಾರಣರಲ್ಲ – ಒಂದೂವರೆ ಪುಟ ಡೆತ್‍ನೋಟ್ ಬರೆದು ಆತ್ಮಹತ್ಯೆಗೆ ಶರಣಾದ ನಟ

    ಮುಂಬೈ: ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಒಂದೂವರೆ ಪುಟ ಡೆತ್‍ನೋಟ್ ಬರೆದು ಬಾಲಿವುಡ್ ನಟ ಹಾಗೂ ಜೋರ್ ಕಾ ಜತ್ಕ ರಿಯಾಲಿಟಿ ಶೋ ವಿನ್ನರ್ ಕುಶಾಲ್ ಪಂಜಾಬಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಇಂದು ಕುಶಾಲ್ ಪಂಜಾಬಿ ತಮ್ಮ ಮುಂಬೈ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರನ್ನು ಮುಂಬೈನ ಬಾಬಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ವೈದ್ಯರು ಕುಶಾಲ್ ಪಂಜಾಬಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಕುಶಾಲ್ ಪಂಜಾಬಿ ಅವರ ನಿವಾಸದಲ್ಲಿ ಪೊಲೀಸರಿಗೆ ಒಂದೂವರೆ ಪುಟದ ಡೆತ್‍ನೋಟ್ ಸಿಕ್ಕಿದ್ದು, ಅದರಲ್ಲಿ ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಬರೆದುಕೊಂಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

    https://www.instagram.com/p/BsEzuU6h3kU/?utm_source=ig_embed

    ಕುಶಾಲ್ ಪಂಜಾಬಿ ಅವರು, ಇಂಗ್ಲಿಷ್ ನಲ್ಲಿ ಒಂದೂವರೆ ಪುಟದ ಡೆತ್‍ನೋಟ್ ಬರೆದಿದ್ದು, ಆದರಲ್ಲಿ ತನ್ನ ಆಸ್ತಿಯ ಶೇ.50 ರಷ್ಟು ಭಾಗ ತನ್ನ ತಂದೆ-ತಾಯಿ ಮತ್ತು ಸಹೋದರಿಯರಿಗೆ ಹಂಚಿಕೆಯಾಗಬೇಕು ಮತ್ತು ಉಳಿದ ಶೇ.50 ರಷ್ಟು ಆಸ್ತಿ ನನ್ನ ಮೂರು ವರ್ಷದ ಮಗ ಕಿಯಾನ್‍ಗೆ ಸೇರಬೇಕು ಎಂದು ಬರೆದಿದ್ದಾರೆ.

    ಕುಶಾಲ್ ಪಂಜಾಬಿಯವರು, 2015 ರಲ್ಲಿ ತನ್ನ ಯೂರೋಪಿಯನ್ ಗೆಳತಿ ಅಡ್ರೆ ಡೊಲ್ಹೆನ್ ಅವರ ಜೊತೆ ಮದುವೆಯಾಗಿದ್ದು, ಈ ಜೋಡಿಗೆ ಮೂರು ವರ್ಷದ ಕಿಯಾನ್ ಹೆಸರಿನ ಮಗನಿದ್ದಾನೆ. ವರದಿಯ ಪ್ರಕಾರ ಕುಶಾಲ್ ಪಂಜಾಬಿಯವರು ಕಳೆದ ಕೆಲ ದಿನಗಳಿಂದ ಆರೋಗ್ಯ ಖಿನ್ನತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ. ಅವರು ಮದುವೆಯಾಗಿ 4 ವರ್ಷಗಳಾಗಿದ್ದು, ಅದರಲ್ಲು ಕೌಟುಂಬಿಕ ಕಲಹಗಳು ಇದ್ದು, ಅದರಿಂದಲು ಕುಶಾಲ್ ನೊಂದಿದ್ದರು ಎನ್ನಲಾಗಿದೆ.

    https://www.instagram.com/p/BxuYrAdJ1VJ/?utm_source=ig_embed

    ಕುಶಾಲ್ ಪಂಜಾಬಿಯವರು ಕೊನೆಯದಾಗಿ ತನ್ನ ಮಗನ ಫೋಟೋವನ್ನು ಇನ್‍ಸ್ಟಾಗ್ರಾಮ್‍ಗೆ ಹಾಕಿಕೊಂಡಿದ್ದು, ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ತಾನು ಮತ್ತು ಮಗ ಕಿಯಾನ್ ಇರುವ ಫೋಟೋವನ್ನು ಇನ್‍ಸ್ಟಾಗ್ರಾಮ್ ಸ್ಟೋರಿಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  • ಕುಟುಂಬದ ಐವರನ್ನು ಕೊಲೆಗೈದು ಆತ್ಮಹತ್ಯೆಗೆ ಶರಣು

    ಕುಟುಂಬದ ಐವರನ್ನು ಕೊಲೆಗೈದು ಆತ್ಮಹತ್ಯೆಗೆ ಶರಣು

    – ಸ್ಥಳದಲ್ಲಿ ಸಿಕ್ತು 19 ಪುಟದ ಡೆತ್‍ನೋಟ್

    ಚಂಡೀಗಢ: ಯುವಕನೊಬ್ಬ ತನ್ನ ಕುಟುಂಬದ ಐವರು ಸದಸ್ಯರನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಂಬಾಜ್‍ನ ಮೋಗದಲ್ಲಿ ನಡೆದಿದೆ.

    ಸಂದೀಪ್ ಸಿಂಗ್ (27) ಕೊಲೆ ಮಾಡಿದ ಯುವಕ. ಸಂದೀಪ್ ತನ್ನ ತಂದೆ, ತಾಯಿ, ತಾತ, ಅಜ್ಜಿ, ಸಹೋದರಿ ಹಾಗೂ ಸಹೋದರಿ ಮಗಳನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಸಂದೀಪ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಸಂದೀಪ್ ಮನೆಯಿಂದ ಬರುತ್ತಿದ್ದ ಕಿರುಚಾಟದ ಶಬ್ಧ ಕೇಳಿ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಓಡಿ ಬಂದಿದ್ದಾರೆ. ಈ ವೇಳೆ ಸಂದೀಪ್ ತಾತ ಗುರುಚರಣ್ ಸಿಂಗ್ ಸ್ಥಿತಿ ಗಂಭೀರವಾಗಿದ್ದನ್ನು ನೋಡಿದ ಸ್ಥಳೀಯರು ಅವರನ್ನು ಫರಿದ್‍ಕೋಟ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.

    ಕೆಲವು ತಿಂಗಳಿನಲ್ಲಿ ಸಂದೀಪ್ ಮದುವೆವಿತ್ತು. ಸಂದೀಪ್ ಗುಪ್ತ ರೋಗದಿಂದ ಬಳಲುತ್ತಿದ್ದು, ಈ ವಿಷಯಕ್ಕಾಗಿ ಯಾವಾಗಲೂ ಒತ್ತಡದಲ್ಲಿ ಇರುತ್ತಿದ್ದನು. ಅಲ್ಲದೆ ಆತ ಮದ್ಯ ಸೇವನೆ ಮಾಡುವುದನ್ನು ಕೂಡ ಶುರು ಮಾಡಿಕೊಂಡಿದ್ದನು ಎಂದು ಹೇಳಲಾಗುತ್ತಿದೆ.

    ಈ ವಿಷಯ ತಿಳಿದ ಎಎಸ್‍ಪಿ ಹರಿಂದರ್ ಸಿಂಗ್ ತಮ್ಮ ಪೊಲೀಸ್ ತಂಡದ ಜೊತೆ ಘಟನಾ ಸ್ಥಳಕ್ಕೆ ತಲುಪಿದ್ದರು. ಸದ್ಯ ಪೊಲೀಸರು ಸಂದೀಪ್ ಸೇರಿದಂತೆ ಐವರ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ 19 ಪುಟದ ಡೆತ್‍ನೋಟ್ ದೊರೆತಿದ್ದು, ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

  • ಆತ್ಮಹತ್ಯೆ ಮಾಡಿಕೊಳ್ತೀನಿ ಎಂದಿದ್ದ ಮಹಿಳೆ ಬೆಂಗ್ಳೂರಿನಲ್ಲಿ ಪತ್ತೆ

    ಆತ್ಮಹತ್ಯೆ ಮಾಡಿಕೊಳ್ತೀನಿ ಎಂದಿದ್ದ ಮಹಿಳೆ ಬೆಂಗ್ಳೂರಿನಲ್ಲಿ ಪತ್ತೆ

    ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ ಹೈಪ್ರೊಫೈಲ್ ಕುಟುಂಬದ ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಬೆಂಗಳೂರಿನಲ್ಲಿ ಪತ್ತೆ ಆಗಿದ್ದಾಳೆ.

    ಕೋಮಲ್ ಆತ್ಮಹತ್ಯೆ ಡ್ರಾಮಾ ಮಾಡಿದ ಮಹಿಳೆ. ಕೋಮಲ್ ತನ್ನ ಕಾರನ್ನು ಗಾಜಿಯಾಬಾದ್‍ನ ಕಾಲುವೆ ಬಳಿ ಪಾರ್ಕ್ ಮಾಡಿದ್ದಳು. ಅಲ್ಲದೆ ಆ ಕಾರಿನಲ್ಲಿ ಡೆತ್‍ನೋಟ್ ಬರೆದಿಟ್ಟು ಅಲ್ಲಿಂದ ಪರಾರಿಯಾಗಿದ್ದಳು. ಆದರೆ ಈಗ ಕೋಮಲ್ ಬೆಂಗಳೂರಿನಲ್ಲಿ ಪತ್ತೆ ಆಗಿದ್ದಾಳೆ.

    ಏನಿದು ಪ್ರಕರಣ?
    ಕೋಮಲ್ ಗಾಜಿಯಾಬಾದ್ ಕಾಲುವೆ ಬಳಿ ತನ್ನ ಕಾರನ್ನು ನಿಲ್ಲಿಸಿದ್ದರಿಂದ ಆಕೆ ಕಾಲುವೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ಹರಿದಾಡಿತ್ತು. ತನ್ನ ಡೆತ್‍ನೋಟ್‍ನಲ್ಲಿ ಪತಿಯ ಕಾಟ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಉಲ್ಲೇಖಿಸಿದ್ದಳು. ಹೀಗಾಗಿ 3 ದಿನಗಳ ಕಾಲ ಕಾಲುವೆಯಲ್ಲಿ ಹುಡುಕಾಡಿದರೂ ಆಕೆ ಪತ್ತೆ ಆಗಿರಲಿಲ್ಲ.

    ಶನಿವಾರ ಬೆಳಗ್ಗೆ 11 ಗಂಟೆಗೆ ಪೊಲೀಸರಿಗೆ ಹಿಂಡೆನ್ ಬ್ಯಾರೇಜ್ ಬಳಿ ಸ್ಕಾರ್ಪಿಯೋ ಕಾರು ನಿಲ್ಲಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾಗ ಪೊಲೀಸರಿಗೆ ಡೆತ್‍ನೋಟ್ ಪತ್ತೆಯಾಗಿದೆ. ಆ ಡೆತ್‍ನೋಟ್‍ನಲ್ಲಿ ನಾನು ನೋಯ್ಡಾ ನಿವಾಸಿಯಾಗಿದ್ದು, ತಂದೆ ಭಾರತೀಯ ರೈತ ಸಂಘದಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಆಗಿದ್ದಾರೆ ಎಂದು ಕೋಮಲ್ ಬರೆದಿದ್ದಳು.

    ಮಗಳು ನಾಪತ್ತೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ತಂದೆ ಅನಿಲ್, ದೆಹಲಿಯ ಪಾಂಡವನಗರದಲ್ಲಿ ಇರುವ ಅಭಿಷೇಕ್ ಜೊತೆ ಮಗಳ ಮದುವೆ ಮಾಡಿಸಿದ್ದೇನೆ. ಮದುವೆಗಾಗಿ ಸುಮಾರು ಒಂದೂವರೆ ಕೋಟಿ ರೂ. ಖರ್ಚು ಮಾಡಿದ್ದೇನೆ. ಇದರ ಹೊರತಾಗಿಯೂ ಅಭಿಷೇಕ್ ಹಾಗೂ ಆತನ ಕುಟುಂಬಸ್ಥರು ಆಕೆಗೆ ಕಿರುಕುಳ ನೀಡುತ್ತಿದ್ದರು. ಅಭಿಷೇಕ್ ಅವರ ತಂದೆ ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದರು.

    ಕೋಮಲ್ ಶುಕ್ರವಾರ ಸಂಜೆಯಿಂದ ಕಾಣೆಯಾಗಿದ್ದಳು. ಅಭಿಷೇಕ್ ಕುಟುಂಬದವರು ಪಾಂಡವನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಕೋಮಲ್ ಹಾಗೂ ಅಭಿಷೇಕ್ ಇಬ್ಬರು ಎಂಬಿಎ ಓದಿದ್ದು, ಕೋಮಲ್ ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಅಭಿಷೇಕ್ ಸ್ವಂತ ಬಿಸಿನೆಸ್ ನಡೆಸುತ್ತಿದ್ದಾರೆ.

  • ಸ್ವಾರಿ, ನಾನು ಈಗ ವೇಸ್ಟ್ ವ್ಯಕ್ತಿ ಆಗಿದ್ದೇನೆ – ಭಾವನಾತ್ಮಕ ಡೆತ್‍ನೋಟ್ ಬರೆದು ಐಐಟಿ ವಿದ್ಯಾರ್ಥಿ ಆತ್ಮಹತ್ಯೆ

    ಸ್ವಾರಿ, ನಾನು ಈಗ ವೇಸ್ಟ್ ವ್ಯಕ್ತಿ ಆಗಿದ್ದೇನೆ – ಭಾವನಾತ್ಮಕ ಡೆತ್‍ನೋಟ್ ಬರೆದು ಐಐಟಿ ವಿದ್ಯಾರ್ಥಿ ಆತ್ಮಹತ್ಯೆ

    ಹೈದರಾಬಾದ್: ಐಐಟಿ ವಿದ್ಯಾರ್ಥಿಯೊಬ್ಬ ಡೆತ್‍ನೋಟ್ ಬರೆದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಆಂಧ್ರ ಪ್ರದೇಶದ ಹೈದರಾಬಾದ್‍ನಲ್ಲಿ ನಡೆದಿದೆ.

    ಮಾರ್ಕ್ ಆಂಡ್ರ್ಯೂ ಚಾರ್ಲ್ಸ್(20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಚಾರ್ಲ್ಸ್ ಮೂಲತಃ ಉತ್ತರ ಪ್ರದೇಶದ ವಾರಾಣಸಿ ಜಿಲ್ಲೆಯವನಾಗಿದ್ದು, ಮಾಸ್ಟರ್ ಇನ್ ಡಿಸೈನಿಂಗ್ ಓದುತ್ತಿದ್ದನು. ಸ್ವಲ್ಪ ದಿನದ ಹಿಂದೆ ಚಾರ್ಲ್ಸ್ ಕೊನೆಯ ವರ್ಷದ ಪರೀಕ್ಷೆಯನ್ನು ಬರೆದು ಫೈನಲ್ ಪ್ರೆಸೆಂಟೇಷನ್‍ಗೆ ತಯಾರಿ ನಡೆಸುತ್ತಿದ್ದನು.

    ಚಾರ್ಲ್ಸ್ ಸೋಮವಾರ ರಾತ್ರಿ ಸುಮಾರು 11 ಗಂಟೆಗೆ ತನ್ನ ಹಾಸ್ಟೆಲ್ ರೂಮಿಗೆ ಹೋಗಿದ್ದದ್ದಾನೆ. ಆದರೆ ಮತ್ತೆ ಆತ ಹಾಸ್ಟೆಲ್ ರೂಮಿನಿಂದ ಹೊರ ಬರದಿರುವ ಕಾರಣ ಮಂಗಳವಾರ ಮಧ್ಯಾಹ್ನ ಆತನ ಸ್ನೇಹಿತರು ರೂಮಿನ ಬಾಗಿಲು ಒಡೆದುಹಾಕಿದ್ದಾರೆ. ಆಗ ಚಾರ್ಲ್ಸ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತನ ಮೃತದೇಹದ ಬಳಿ ಡೆತ್‍ನೋಟ್ ಕೂಡ ಸಿಕ್ಕಿದೆ ಎಂದು ಡಿಎಸ್‍ಪಿ ಪಿ. ಶ್ರೀಧರ್ ರೆಡ್ಡಿ ತಿಳಿಸಿದ್ದಾರೆ.

    ಡೆತ್‍ನೋಟ್‍ನಲ್ಲಿ ಏನಿದೆ?
    ಈ ಪ್ರಪಂಚದಲ್ಲಿ ಫೆಲ್ಯೂರ್ ಗಳಿಗೆ ಯಾವುದೇ ಭವಿಷ್ಯ ಇಲ್ಲ. ನಾನು ನಿಮಗೆ ಹೀಗೆ ನಿರಾಸೆ ಮಾಡುತ್ತೇನೆ ಎಂದುಕೊಂಡಿರಲಿಲ್ಲ. ದಯವಿಟ್ಟು ನನ್ನನ್ನು ಮಿಸ್ ಮಾಡಿಕೊಳ್ಳಬೇಡಿ. ಏಕೆಂದರೆ ನಾನು ಅದಕ್ಕೆ ಅರ್ಹನಲ್ಲ. ಅಲ್ಲದೆ ನಾನು ಅದಕ್ಕೆ ಯೋಗ್ಯನೂ ಅಲ್ಲ. ಒಂದು ವಿಷಯ ಮಾತ್ರ ಗೊತ್ತು ನೀವು ನನ್ನನ್ನು ಹೇಗೆ ಪ್ರೀತಿಸಿದ್ದೀರೋ ನಾನು ಹಾಗೆ ನಿಮ್ಮನ್ನು ಪ್ರೀತಿಸಿದ್ದೇನೆ. ನಾನು ಬೇಸರದಿಂದ ಇದ್ದೇನೆ. ಹಾಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಅಲ್ಲದೆ ನನ್ನ ಬೆಸ್ಟ್ ಪೋಷಕರಿಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ನನ್ನನ್ನು ಕ್ಷಮಿಸಿ ನಾನು ಈಗ ವೇಸ್ಟ್ ವ್ಯಕ್ತಿ ಆಗಿದ್ದೇನೆ ಎಂದು ಡೆತ್‍ನೋಟ್‍ನಲ್ಲಿ ಉಲ್ಲೇಖಿಸಿದ್ದಾನೆ.

    ಸದ್ಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಚಾರ್ಲ್ಸ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆತನ ಪೋಷಕರು ವಾರಾಣಾಸಿಯಿಂದ ಬರುತ್ತಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.

  • ಬೇರೊಬ್ಬನ ಜೊತೆ ತನ್ನ ಪ್ರೇಯಸಿಯನ್ನ ನೋಡಿ ಆತ್ಮಹತ್ಯೆಗೆ ಶರಣು

    ಬೇರೊಬ್ಬನ ಜೊತೆ ತನ್ನ ಪ್ರೇಯಸಿಯನ್ನ ನೋಡಿ ಆತ್ಮಹತ್ಯೆಗೆ ಶರಣು

    – ನಾನು ಅವಳನ್ನು ತುಂಬಾ ಪ್ರೀತಿ ಮಾಡುತ್ತೇನೆ

    ಮುಂಬೈ: ಪ್ರೀತಿಸಿದ ಯುವತಿ ಮೋಸ ಮಾಡಿದಳು ಎಂದು ಹೇರ್ ಸ್ಟುಡಿಯೋ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

    ಶೋಬಿತ್ ಸಿಂಗ್ ಮೃತ ಯುವಕ. ಈ ಘಟನೆ ಏಪ್ರಿಲ್ 30 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾಥೆರಾನ್ ಬೆಟ್ಟದಲ್ಲಿ ಸಿಂಗ್ ಮೃತ ದೇಹದ ಪತ್ತೆಯಾಗಿದ್ದು, ಇದೀಗ ಅಂಬೋಲಿ ಪೊಲೀಸರು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಏನಿದು ಪ್ರಕರಣ?
    ಶೋಬಿತ್ ಏಪ್ರಿಲ್ 13 ರಂದು ಕಾಣೆಯಾಗಿದ್ದನು. ಅದೇ ದಿನ ಸಿಂಗ್ ಸ್ನೇಹಿತ ಪಂಕಜ್ ಚೌಹಾಣ್‍ಗೆ ಆತ್ಮಹತ್ಯೆಯ ಮೆಸೇಜ್ ಮಾಡಿದ್ದನು. ತಕ್ಷಣ ಸಿಂಗ್ ಸಹೋದ್ಯೋಗಿ ಮಿಖೈಲ್ ಚಂದ್ರಮಣಿ ಅಂಬೋಲಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನು ದಾಖಲಿಸಿದ್ದರು. ಮೆಸೇಜ್‍ನಲ್ಲಿ ಸಿಂಗ್, ತನ್ನ ಪ್ರೇಯಸಿ ಮತ್ತು ಇನ್ನಿತರ ಇಬ್ಬರು ವ್ಯಕ್ತಿಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಅತ್ಯಾಚಾರ ಪ್ರಕರಣವನ್ನು ದಾಖಲಿಸುವುದಾಗಿ ಬೆದರಿಕೆವೊಡ್ಡುತ್ತಿದ್ದಾರೆ ಎಂದು ತನ್ನ ನೋವನ್ನು ತೋಡಿಕೊಂಡಿದ್ದ.


    ಸ್ನೇಹಿತ ಪಂಕಂಜ್‍ನಿಂದ ಮೆಸೇಜ್ ಬಂದ ಬಳಿಕ ನಾವು ತಕ್ಷಣ ಅಂಬೋಲಿ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ತಿಳಿಸಿದೆವು. ಅವರು ಕೂಡ ಇತರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಶೋಧಕಾರ್ಯವನ್ನು ಶುರು ಮಾಡಿದ್ದರು. ಅವನು ಮಾಡಿದ ಇನ್‍ಸ್ಟಾಗ್ರಾಂ ಮೂಲಕ ಸ್ಥಳವನ್ನು ಟ್ರೇಸ್ ಮಾಡಿ ತಕ್ಷಣ ಅಲ್ಲಿಗೆ ಹೋದೆವು. ಆದರೆ ಆತನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದು ಚಂದ್ರಮಣಿ ಹೇಳಿದ್ದಾರೆ.

    ಸ್ವಲ್ಪ ದಿನದ ನಂತರ ಏಪ್ರಿಲ್ 23 ರಂದು ಪೋಲಿಸರು ಫೋನ್ ಮಾಡಿ ಅದೇ ಸ್ಥಳದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ ಎಂದು ನಮ್ಮನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಆತನೇ ಶೋಬಿತ್ ಸಿಂಗ್ ಎಂದು ಗುರುತಿಸಲಾಗಿದ್ದು, ಆತನ ಸಾವಿಗೆ ಗೆಳತಿ ಮತ್ತು ಅವಳ ಸ್ನೇಹಿತರು ಕಾರಣರಾಗಿದ್ದಾರೆ. ಈ ಬಗ್ಗೆ ಅವರ ವಿರುದ್ಧ ಸಾಕ್ಷ್ಯಾಧಾರವಿದ್ದರೂ ಪೊಲೀಸರು ಎಫ್‍ಐಆರ್ ದಾಖಲಿಸಲು ಒಂದು ವಾರ ತಡಮಾಡಿದರೂ ಎಂದು ಚಂದ್ರಮಣಿ ಆರೋಪಿಸಿದ್ದಾರೆ.

    ಡೆತ್‍ನೋಟ್‍ನಲ್ಲಿ ಏನಿದೆ?
    ನನ್ನ ಪ್ರೇಯಸಿ ಬೇರೊಬ್ಬ ಹುಡುಗನೊಂದಿಗೆ ಸುತ್ತಾಡುತ್ತಿದ್ದು, ಆತನ ಜೊತೆ ಸಂಬಂಧ ಹೊಂದಿದ್ದಳು. ಇದನ್ನು ನೋಡಿದ ನಾನು ನಿಮ್ಮ ಪೋಷಕರಿಗೆ ತಿಳಿಸುವುದಾಗಿ ಹೇಳಿದೆ. ಆಗ ತನ್ನ ಸ್ನೇಹಿತನ ಜೊತೆ ಸೇರಿಕೊಂಡು ನನ್ನ ಮೇಲೆ ಅತ್ಯಾಚಾರದ ಕೇಸ್ ದಾಖಲಿಸುವುದಾಗಿ ಬೆದರಿಕೆವೊಡ್ಡಿದರು ಎಂದು ಬರೆದಿದ್ದಾನೆ. ಇನ್ನೂ ಮೃತ ದೇಹದ ಪಕ್ಕದಲ್ಲಿ ಪತ್ರವೊಂದು ಸಿಕ್ಕಿದೆ. ಅದರಲ್ಲಿ “ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ಸಂಪೂರ್ಣ ಬದುಕನ್ನು ಅವಳೊಂದಿಗೆ ಜೀವಿಸಲು ಇಷ್ಟಪಟ್ಟಿದ್ದೆ. ಆದರೆ ಅದು ಈಗ ಅಸಾಧ್ಯವೆಂದು ತಿಳಿಯಿತು. ಹೀಗಾಗಿ ನಾನು ಶಾಶ್ವತವಾಗಿ ಹೋಗುತ್ತೇನೆ ಕ್ಷಮಿಸಿ..” ಎಂದು ಶೋಬಿತ್ ಬರೆದಿದ್ದಾನೆ.

    ಸದ್ಯಕ್ಕೆ ಆತನ ಪ್ರೇಯಸಿ ಮತ್ತು ಆಕೆಯ ಸ್ನೇಹಿತರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಇನ್ಸ್ ಪೆಕ್ಟರ್ ಭರತ್ ಗಾಯಕ್‍ವಾಡ್ ಹೇಳಿದ್ದಾರೆ.

  • ಡೆತ್‍ನೋಟ್ ಬರೆದು 1 ತಿಂಗ್ಳ ಹಿಂದೆ ಮದ್ವೆಯಾಗಿದ್ದ ಪ್ರೇಮಿಗಳು ಆತ್ಮಹತ್ಯೆ

    ಡೆತ್‍ನೋಟ್ ಬರೆದು 1 ತಿಂಗ್ಳ ಹಿಂದೆ ಮದ್ವೆಯಾಗಿದ್ದ ಪ್ರೇಮಿಗಳು ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ರೈಲಿಗೆ ಸಿಲುಕಿ ನವ ವಿವಾಹಿತ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ವೀರಾಪುರದ ಬಳಿ ನಡೆದಿದೆ.

    ದೊಡ್ಡಬಳ್ಳಾಪುರ ಶಾಂತಿನಗರದ ಲೀಲಾವತಿ ಮತ್ತು ವಿಜಯ್ ಕುಮಾರ್ ಮೃತ ಪ್ರೇಮಿಗಳು. ವೀರಾಪುರದ ಬಳಿ ರೈಲ್ವೆ ಹಳಿಗಳ ಮೇಲೆ ಯುವಕ-ಯುವತಿಯ ಮೃತದೇಹ ಪತ್ತೆಯಾಗಿದೆ. ಮೃತರ ಬಳಿ ಡೆತ್‍ನೋಟ್ ಸಹ ಪತ್ತೆಯಾಗಿದೆ.

    ಡೆತ್‍ನೋಟ್‍ನಲ್ಲಿ ಏನಿದೆ?
    ನನ್ನ ಹೆಸರು ಲೀಲಾವತಿ, ನಾನು ವಿಜಯ್ ಅನ್ನೋ ಹುಡುಗನನ್ನ ಇಷ್ಟಪಟ್ಟಿದ್ದೆ. ಮನೆಯಲ್ಲಿ ವಿಷಯ ಗೊತ್ತಾಗಿ ನನಗೆ ಹಿಂಸೆ ಕೊಟ್ಟರು. ಆದ್ದರಿಂದ ನಾವಿಬ್ಬರು ಮದುವೆ ಮಾಡಿಕೊಂಡಿದ್ದೇವೆ. ನಮಗೆ ಮದುವೆಯಾಗಿ ಒಂದು ತಿಂಗಳ ಆಗಿದೆ. ಆದರೆ ನಾವಿಬ್ಬರು ಮದುವೆಯಾಗಿದ್ದರು ನಮ್ಮ ಮಾವನಾದ ಮಂಜುನಾಥ್.ಆರ್ ನಮ್ಮಿಬ್ಬರಿಗೆ ಹಿಂಸೆಕೊಡುತ್ತಿದ್ದಾರೆ. ಅವರ ಹಿಂಸೆ ತಡೆಯಲಾರದೇ ನಾವಿಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಸಾವಿಗೆ ಮಾವ ಮಂಜುನಾಥ್ ಕಾರಣ ಎಂದು ಬರೆದಿದ್ದಾರೆ.

    ಈ ಸಂಬಂಧ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

  • ಡೆತ್ ನೋಟ್ ನಂಬಿದ್ದ ಪೊಲೀಸರಿಗೆ ಶಾಕ್: ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್!

    ಡೆತ್ ನೋಟ್ ನಂಬಿದ್ದ ಪೊಲೀಸರಿಗೆ ಶಾಕ್: ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್!

    – ನಾಲ್ಕು ತಿಂಗಳಿಂದ ಯುವತಿಗೆ ಕಾಟ ಕೊಡುತ್ತಿದ್ದ ಆರೋಪಿ ಪಾಪಿ ಹಳೆಯ ಸ್ನೇಹಿತ
    – ಯುವತಿ ಕಾಣೆಯಾದ ದಿನ ನಿಮ್ಮ ಮಗಳನ್ನ ತಂದೊಪ್ಪಿಸ್ತೀನಿ ಎಂದಿದ್ದ
    – ಹುಟ್ಟು ಹಬ್ಬದ ಹೊಸ್ತಿಲಲ್ಲೇ ಹೆಣವಾದ ಯುವತಿ
    – ಯುವತಿ ಸಾವಿಗೆ ಮಿಡಿಯುತ್ತಿರುವ ರಾಜ್ಯದ ಜನತೆ

    ವಿಜಯ್ ಜಾಗಟಗಲ್
    ರಾಯಚೂರು: ನಗರದ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಪ್ರಕರಣ ದಿನಕ್ಕೊಂದು ಹೊಸ ಟ್ಟಿಸ್ಟ್ ಗಳನ್ನ ಪಡೆಯುತ್ತಿದೆ. ಮೃತ ಯುವತಿ ಮಧು ಪತ್ತಾರ್ ಶವ ಪತ್ತೆಯಾದ ಸ್ಥಳದಲ್ಲಿ ಸಿಕ್ಕ ಡೆತ್ ನೋಟ್ ಆಧಾರದ ಮೇಲೆ ನೇತಾಜಿ ನಗರ ಠಾಣೆ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಸಾವಿನ ಬಗ್ಗೆ ವಿದ್ಯಾರ್ಥಿಗಳು, ಸಾರ್ವಜನಿಕ ವಲಯದಲ್ಲಿ ಉಂಟಾದ ಅನುಮಾನ, ಹೋರಾಟ ಹಾಗೂ ಪೋಷಕರು ನೀಡಿದ ದೂರಿನ ಮೇರೆಗೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಸುದರ್ಶನ್ ಯಾದವ್ ನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಡೆತ್ ನೋಟ್ ನಲ್ಲೇನಿತ್ತು, ಅಸಲಿ ಸತ್ಯ ಏನು?
    ಯುವತಿ ಶವದ ಬಳಿ ಸಿಕ್ಕ ಡೆತ್ ನೋಟ್ ನಲ್ಲಿ ಓದಲು ಆಗುತ್ತಿಲ್ಲ ಕಡಿಮೆ ಅಂಕ, ಬರುತ್ತಿದೆ ಫೇಲ್ ಆಗುತ್ತಿದ್ದೇನೆ ಅದಕ್ಕೆ ಈ ನಿರ್ಧಾರ ಮಾಡಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಯಾರೂ ಹೊಣೆಯಲ್ಲ ಅಂತ ಬರೆಯಲಾಗಿದೆ. ಆದ್ರೆ ಇತ್ತೀಚೆಗೆ ಬಂದ ಫಲಿತಾಂಶದಲ್ಲಿ ಮಧು ಪತ್ತಾರ್ ಸಿವಿಲ್ ಎಂಜಿನಿಯರಿಂಗ್ ಎಲ್ಲಾ ವಿಷಯಗಳಲ್ಲೂ ಉತ್ತೀರ್ಣಳಾಗಿದ್ದಾಳೆ. ಐದನೇ ಸೆಮಿಸ್ಟರ್ ನಲ್ಲೀ ಫೇಲಾಗಿದ್ದ ಎರಡು ವಿಷಯಗಳು ಮರುಮೌಲ್ಯಮಾಪನದಲ್ಲಿ ಪಾಸ್ ಆಗಿದ್ದಾಳೆ. ಅಲ್ಲದೇ ಕಾಲೇಜಿನಲ್ಲಿ ತುಂಬಾ ಚೂಟಿಯಾಗಿದ್ದ ಮಧು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಥಿತಿ ಹೊಂದಿರಲಿಲ್ಲ ಅಂತ ಅವಳ ಸಹಪಾಠಿಗಳು ಹೇಳಿದ್ದಾರೆ. ಹೀಗಾಗಿ ಕೇವಲ ಡೆತ್ ನೋಟ್ ಆಧಾರದ ಮೇಲೆ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಗೆ ಇರುಸುಮುರುಸು ಉಂಟಾಗಿದೆ.

    ನಾಲ್ಕು ತಿಂಗಳಿಂದ ಕಾಟ:
    ಪಿಯುಸಿ ಸಹಪಾಠಿಯಾದ ಸುದರ್ಶನ್ ಯಾದವ್ ಜೊತೆ ಮಧು ಪತ್ತಾರ್ ನಾಲ್ಕು ವರ್ಷದಿಂದ ಸ್ನೇಹದಲ್ಲಿದ್ದಾಳೆ. ಆದರೆ ಇತ್ತೀಚೆಗೆ ಮಧು ಆರೋಪಿಯಿಂದ ದೂರವಾಗಿದ್ದಳು. ಇದರಿಂದ ಸುದರ್ಶನ್ ಯುವತಿಗೆ ಕಿರುಕುಳ ನೀಡಲು ಶುರುಮಾಡಿದ್ದನಂತೆ. ನವೋದಯ ಎಂಜಿನಿಯರಿಂಗ್ ಕಾಲೇಜಿನ ಮುಂಭಾಗದಲ್ಲಿ ಮಗಳಿಗೆ ಹಿಂಸೆ ನೀಡುವುದ್ದನ್ನು ಮಧು ಪತ್ತಾರ್ ತಂದೆ ನಾಗರಾಜ್ ಪತ್ತಾರ್ ಕಣ್ಣಾರೆ ನೋಡಿದ್ದಾರೆ. ಅಂದಿನಿಂದ ಮಗಳಿಗೆ ತಂದೆ ಕಾವಲಾಗಿ ಕೆಲಸ ಮಾಡುತ್ತಲೇ ಬಂದಿದ್ದಾರೆ. ಆದರೆ ಏಪ್ರಿಲ್ 13 ರಂದು ಮನೆಯಿಂದ ಕಾಲೇಜಿಗೆ ಹೋದ ಮಗಳು ಮರಳಿ ಬರಲಿಲ್ಲ. ಕಾಣೆಯಾದ ದಿನವೇ ಸುದರ್ಶನ್ ಹುಡುಕಿದ ಮಧು ತಂದೆ ನಾಗರಾಜ್ ಮಗಳ ಬಗ್ಗೆ ವಿಚಾರಿಸಿದ್ದಾರೆ. ಮಧುಳನ್ನ ಕರೆದುಕೊಂಡು ಬರುತ್ತೇನೆ ಅಂತ ಹೇಳಿ ಸುದರ್ಶನ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಏಪ್ರಿಲ್ 17 ರಂದು ಮಧು ಹುಟ್ಟುಹಬ್ಬದ ದಿನದಂದು ಕೇಕ್ ಕತ್ತರಿಸಿ ಕಣ್ಣೀರಿಟ್ಟಿದ್ದಾರೆ. ನಮ್ಮ ಮಗಳು ಸತ್ತಿಲ್ಲ, ಮನೆಗೆ ವಾಪಸ್ ಬರುತ್ತಾಳೆ ಎನ್ನುವ ನಂಬಿಕೆಯಲ್ಲಿದ್ದೇವೆ. ಆ ಪಾಪಿಗೆ ಉಗ್ರ ಶಿಕ್ಷೆಯಾಗಬೇಕು ಅಂತ ಮಧು ತಾಯಿ ರೇಣುಕಾದೇವಿ ಪಬ್ಲಿಕ್ ಟಿವಿ ಮುಂದೆ ಅಳಲು ತೋಡಿಕೊಂಡಿದ್ದಾರೆ.

    ಕಂಬನಿ ಮಿಡಿಯುತ್ತಿದೆ ಇಡೀ ರಾಜ್ಯ
    ಮಧು ಸಾವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಆಂದೋಲನಕ್ಕೆ ಇಡೀ ರಾಜ್ಯವೇ ಎದ್ದು ಕುಳಿತಿದೆ. ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ರಾಯಚೂರಿಗೆ ಬಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಮಧು ಪೋಷಕರನ್ನ ಭೇಟಿ ಮಾಡಿ ಸಾಂತ್ವಾನ ಹೇಳಿದ್ದಾರೆ. ಪ್ರಕರಣದ ತನಿಖೆಯನ್ನು ತೀವ್ರಗೊಳಿಸಲು ಪೊಲೀಸ್ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇನ್ನೂ ಸ್ವತಃ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿ ಘಟನೆಗೆ ಸಂತಾಪ ಸೂಚಿಸಿದ್ದಾರೆ. ರಾಯಚೂರು ಎಸ್ ಪಿ ಗೆ ಮಾತನಾಡಿ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಹಾಗೂ ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಅಂತ ಟ್ವೀಟ್ ಮಾಡಿದ್ದಾರೆ. ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಸೇರಿದಂತೆ ಸಿನೆಮಾ ನಟ ನಟಿಯರು ಸಹ ಟ್ವಿಟರ್ ನಲ್ಲಿ ಸಂತಾಪ ಸೂಚಿಸಿದ್ದು ಮಧು ಸಾವಿಗೆ ನ್ಯಾಯ ಸಿಗಬೇಕು ಅಂತ ಒತ್ತಾಯಿಸಿದ್ದಾರೆ.

    ತನಿಖೆ ಎಲ್ಲಿಯವರೆಗೆ ಬಂದಿದೆ?
    ಮೃತ ಮಧು ತಾಯಿ ರೇಣುಕಾದೇವಿ ದೂರಿನ ಮೇರೆಗೆ ಅತ್ಯಾಚಾರ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಸುದರ್ಶನ ಯಾದವ್ ನನ್ನ ಬಂಧಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಯುವತಿ ಶವ ಪತ್ತೆಯಾದ ದಿನ ಏಪ್ರಿಲ್ 16 ರಂದೇ ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೇ ಆರೋಪಿಯಿಂದ ಯಾವ ಮಾಹಿತಿಯನ್ನ ಕಲೆಹಾಕಿದ್ದಾರೆ ಅನ್ನೋದು ಬಯಲಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಹಾಗೂ ಆರೋಪಿ ವೈದ್ಯಕೀಯ ಪರೀಕ್ಷೆ ವರದಿಗಳ ಆಧಾರದ ಮೇಲೆ ಪ್ರಕರಣ ನಿಂತಿದೆ.

    ರಾಯಚೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳು, ಸಾರ್ವಜನಿಕರು ಹೋರಾಟ ಮುಂದುವರಿಸಿದ್ದಾರೆ. ನಗರದ ಅಂಬೇಡ್ಕರ್ ವೃತ್ತ, ವೀರ ಸಾವರ್ಕರ್ ವೃತ್ತದಲ್ಲಿ ಮೇಣದ ಬತ್ತಿ ಹಿಡಿದು ತಪ್ಪಿತ್ತಸ್ಥರಿಗೆ ಉಗ್ರ ಶಿಕ್ಷೆಯಾಗಬೇಕು ಅಂತ ಆಗ್ರಹಿಸಿ ಹೋರಾಟ ಮಾಡುತ್ತಲೇ ಇದ್ದಾರೆ. ಅಲ್ಲದೆ ವಿದ್ಯಾರ್ಥಿನಿ ಸಂಘಟನೆಗಳು ಹಾಗೂ ವಿಶ್ವಕರ್ಮ ಸಮಾಜದ ಮುಖಂಡರು ಒಟ್ಟಾಗಿ ಎಪ್ರಿಲ್ 25 ರಂದು ರಾಯಚೂರು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

  • ನಂಗೆ ಬದುಕೋ ಯೋಗ್ಯತೆ ಇಲ್ಲ – ಡೆತ್‍ನೋಟ್ ಬರೆದು ಮಗುವಿಗೆ ನೇಣು ಬಿಗಿದು ತಾಯಿ ಆತ್ಮಹತ್ಯೆ

    ನಂಗೆ ಬದುಕೋ ಯೋಗ್ಯತೆ ಇಲ್ಲ – ಡೆತ್‍ನೋಟ್ ಬರೆದು ಮಗುವಿಗೆ ನೇಣು ಬಿಗಿದು ತಾಯಿ ಆತ್ಮಹತ್ಯೆ

    ಬೆಂಗಳೂರು: ತಾಯಿಯೊಬ್ಬಳು ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಮಗುವಿಗೆ ನೇಣು ಬಿಗಿದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಚಂದ್ರಲೇಔಟ್‍ನಲ್ಲಿ ನಡೆದಿದೆ.

    ಸಾತ್ವಿಕ್ 2 ವರ್ಷ ಹಾಗೂ ಪ್ರತಿಭಾ (28) ಆತ್ಮಹತ್ಯೆಗೆ ಶರಣಾದ ತಾಯಿ ಮಗ. ಆತ್ಮಹತ್ಯೆಗೆ ಶರಣಾದ ಮಹಿಳೆ ಪತಿ ಸಂತೋಷ್ ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಸಂತೋಷ್ ಮೂಲತಃ ಕಾರವಾರದವರು ಎನ್ನಲಾಗಿದೆ. ಪತಿ ಸಂತೋಷ್ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

    ಮೊದಲಿಗೆ ಮಗನಿಗೆ ತಾಯಿ ಪ್ರತಿಮಾ ನೇಣು ಹಾಕಿದ್ದಾಳೆ. ಬಳಿಕ ತಾನು ಅದೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ಪ್ರತಿಭಾ ಡೆತ್‍ನೋಟ್ ಬರೆದಿದ್ದು, ಸ್ಥಳದಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ತಿಳಿದು ಚಂದ್ರಲೇಔಟ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

    ಡೆತ್ ನೋಟ್‍ನಲ್ಲಿ ಏನಿದೆ?
    ಕ್ಷಮಿಸಿ.. ನನ್ನ ಸಾವಿಗೆ ನಾನೇ ಕಾರಣ. ನನ್ನ ಸಾವಿನ ಬಳಿಕ ಮಗನನ್ನ ಸಾಕುವುದಕ್ಕೆ ಗಂಡನಿಗೆ ಕಷ್ಟವಾಗುತ್ತದೆ. ಹಾಗಾಗಿ ಮಗನನ್ನು ಸಾಯಿಸಿದ್ದೇನೆ. ನನಗೆ ಬದುಕುವ ಯೋಗ್ಯತೆ ಇಲ್ಲ. ಎಂದು ಡೆತ್ ನೋಟ್ ಬರೆದಿಟ್ಟು ಪ್ರತಿಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿಮಾ ಇತ್ತೀಚೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗುತ್ತಿದೆ. ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಅಂತಾ ಶಂಕಿಸಲಾಗಿದೆ.

    ಈ ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪತಿ ಸಂತೋಷ್‍ನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • ತಪ್ಪು ಮಾಡ್ತಿದ್ದೇನೆ, I Love you ಅಪ್ಪ ಅಮ್ಮ- ಡೆತ್‍ನೋಟ್ ಬರೆದು ಬಾಲಕಿ ಆತ್ಮಹತ್ಯೆ

    ತಪ್ಪು ಮಾಡ್ತಿದ್ದೇನೆ, I Love you ಅಪ್ಪ ಅಮ್ಮ- ಡೆತ್‍ನೋಟ್ ಬರೆದು ಬಾಲಕಿ ಆತ್ಮಹತ್ಯೆ

    ಮಡಿಕೇರಿ: ಪರೀಕ್ಷೆಗೆ ಹೆದರಿಕೊಂಡು 14 ವರ್ಷದ ಬಾಲಕಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಹೊಸಕೇರಿಯಲ್ಲಿ ನಡೆದಿದೆ.

    ಜಸ್ಮಿತಾ(14) ಮೃತ ದುರ್ದೈವಿ. ಜಸ್ಮಿತಾ ಸೋಮವಾರ ಗಣಿತ ಪರೀಕ್ಷೆ ಬರೆದಿದ್ದಳು. ಪರೀಕ್ಷೆ ಬರೆದು ಬಳಿಕ ಮನೆಗೆ ಬಂದಾಗ ಡೆತ್ ನೋಟ್ ಬರೆದಿದ್ದಾಳೆ. ನಂತರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಡೆತ್‍ನೋಟ್‍ನಲ್ಲಿ ಏನಿದೆ?
    ಅಪ್ಪ-ಅಮ್ಮ ನೀವು ನನ್ನ ಚಂದ ಓದಿಸಬೇಕು ಅಂತ ಇದ್ದೀರಿ. ಆದರೆ ನನಗೆ ಓದಬೇಕು ಅಂತ ಇತ್ತು. ಆದರೆ ನಾನು ಯಾವಾಗಾಲೂ ಆಟವಾಡುತ್ತಿದೆ. ನನಗೆ ಅಮ್ಯನ ಮದುವೆ ನೋಡಬೇಕು ಅಂತ ಆಸೆ ಇತ್ತು. ಆದರೆ ನಾನು ಇವತ್ತು ದೊಡ್ಡ ತಪ್ಪು ಮಾಡಿದೆ. ಎಲ್ಲಿಯಾದರೂ ಹೋಗಬೇಕೆಂದು ತಿರ್ಮಾನ ಮಾಡಿದೆ. ನೀವು ನನ್ನ ಚಂದ ಬೆಳೆಸಿದ್ದೀರಿ. ಒಳ್ಳೆಯ ವಿದ್ಯಾಭ್ಯಾಸ ಮಾಡಿಸಿದ್ದೀರಿ. ಆದರೆ ನನಗೆ ಓದುವುದಕ್ಕೆ ಆಗಲಿಲ್ಲ.

    ಅಮ್ಮ- ಅಪ್ಪ ನೀವು ಎಂದರೆ ನನಗೆ ಪ್ರಾಣ. ನನಗೆ ಎಲ್ಲರನ್ನು ಇಷ್ಟಪಡುತ್ತೇನೆ. ನಾನು ನಿಮಗೆ ತುಂಬಾ ಕೆಟ್ಟ ಹೆಸರು ತರುತ್ತಿದ್ದೀನಿ. ನಾನು 9ನೇ ತರಗತಿ ಪಾಸ್ ಆಗುವುದಿಲ್ಲ ಎಂದು ನನಗೆ ಗೊತ್ತಿತ್ತು. ಅದಕ್ಕೆ ನಾನು ಎಲ್ಲಿಯಾದರು ಹೋಗಬೇಕು ಎಂದು ತೀರ್ಮಾನ ಮಾಡಿದೆ. ಐ ಲವ್ ಯೂ ಅಮ್ಮ- ಅಪ್ಪ. ಅಮ್ಮ ಇಂದು ನಮ್ಮ ಮೂರು ಜನರ ಮಾನ ಮಾರ್ಯದೆ ಹೋಯಿತು. ಅದಕ್ಕೆ ನಾನು ಈ ರೀತಿ ತೀರ್ಮಾನ ಮಾಡಿದೆ.

    ಅಣ್ಣ- ಅಕ್ಕಂದಿರೆ, ನೀವು ಅಂದರೆ ನನಗೆ ತುಂಬಾ ಇಷ್ಟ. ಬಾವ ಪವನಾ, ಜೀವನ್ ತುಂಬಾ ಇಷ್ಟ. ರಮ್ಯಾ ನಿನ್ನ ಮದುವೆ ಚೆನ್ನಾಗಿ ನಡೆಯಬೇಕು. ಎಲ್ಲರನ್ನು ತುಂಬಾ ನೆನಪಿಸಿಕೊಳ್ಳುತ್ತೀನಿ ಎಂದು ಬಾಲಕಿ ಡೆತ್‍ನೋಟ್ ಬರೆದು ಕರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv