Tag: death

  • ಚಿಕ್ಕಮಗಳೂರು: ಬೈಕ್-ಟಿಪ್ಪರ್ ಮುಖಾಮುಖಿ ಡಿಕ್ಕಿ, ಇಬ್ಬರ ಸಾವು

    ಚಿಕ್ಕಮಗಳೂರು: ಬೈಕ್-ಟಿಪ್ಪರ್ ಮುಖಾಮುಖಿ ಡಿಕ್ಕಿ, ಇಬ್ಬರ ಸಾವು

    -5 ಕಿ.ಮೀ. ದೂರದ ಹಳ್ಳಿಗೆ ಒಂದೂವರೆ ಗಂಟೆ ತಡವಾಗಿ ಬಂದ ಅಂಬುಲೆನ್ಸ್

    ಚಿಕ್ಕಮಗಳೂರು: ಬೈಕ್ ಹಾಗೂ ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯೆ ಮುಗುಳುವಳ್ಳಿ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.

    ಚಿಕ್ಕಮಗಳೂರಿನ ರಾಮನಹಳ್ಳಿ ನಿವಾಸಿಗಳಾದ ಚನ್ನಕೇಶವ (30), ಕಾರ್ತಿಕ್ (28) ಮೃತ ದುರ್ದೈವಿಗಳು. ಕಾರ್ತಿಕ್ ತನ್ನ ತಂದೆ ತಾಯಿಯ ಮದುವೆ ವಾರ್ಷಿಕೋತ್ಸವವನ್ನು ಮುಗಿಸಿಕೊಂಡು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಹೋಗುವಾಗ ಈ ಅವಘಡ ನಡೆದಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ ಮೂರ್ನಾಲ್ಕು ಕ್ರಷರ್‍ಗಳಿದ್ದು ಟಿಪ್ಪರ್ ಚಾಲಕರು ಅತ್ಯಂತ ವೇಗವಾಗಿ ವಾಹನ ಚಲಾಯಿಸುವುದರಿಂದ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಟಿಪ್ಪರ್ ಚಾಲಕರು ಹಾಗೂ ಕ್ರಷರ್ ಮಾಲೀಕರ ವಿರುದ್ಧ ಹಿಡಿಶಾಪ ಹಾಕ್ತಿದ್ದಾರೆ.

    ಅಪಘಾತದ ಕೂಡಲೇ ಸ್ಥಳೀಯರು ಸುಮಾರು 11 ಗಂಟೆ ವೇಳೆಗೆ 108 ಕ್ಕೆ ಕರೆ ಮಾಡಿದ್ದಾರೆ. ಆದರೆ ಅಂಬುಲೆನ್ಸ್ ಬಂದಿದ್ದು ಮಾತ್ರ 12.30 ಕ್ಕೆ. ಅಪಘಾತ ಸಂಭವಿಸಿದ ಕೂಡಲೇ ಅಂಬುಲೆನ್ಸ್‍ಗೆ ಕರೆ ಮಾಡಿದ್ರೂ ಐದು ಕಿ.ಮೀ. ದೂರದ ಮುಗುಳುವಳ್ಳಿಗೆ ಬರೋದಕ್ಕೆ ಅವರು ತೆಗೆದುಕೊಂಡ ಸಮಯ ಒಂದೂವರೆ ಗಂಟೆ. ಇದ್ರಿಂದ ಸಿಟ್ಟಿಗೆದ್ದ ಸ್ಥಳಿಯರು ಕೆಲಕಾಲ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

    ಟಿಪ್ಪರ್ ಚಾಲಕರಿಗೆ ಸರಿಯಾಗಿ ಮೀಸೆಯೂ ಬಂದಿಲ್ಲ. ಅಂತಹವರೆಲ್ಲಾ ಟಿಪ್ಪರ್ ಚಾಲಾಯಿಸ್ತಾರೆ. ಕ್ರಷರ್ ಮಾಲೀಕರು ಹಾಗೂ ಪೊಲೀಸ್ ಇಲಾಖೆ ಅಂತವರ ಬಗ್ಗೆ ಎಚ್ಚರ ವಹಿಸಬೇಕು. ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ಈ ರಸ್ತೆಯಲ್ಲಿ ಜೀವಕ್ಕೆ ಬೆಲೆಯೇ ಇರೋದಿಲ್ಲ. ಇನ್ನೊಮ್ಮೆ ಇಂತಹ ಘಟನೆ ನಡೆದ್ರೆ ಬೃಹತ್ ಹೋರಾಟ ನಡೆಸುತ್ತೇವೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

    ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಠಾಣಾ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ಲಾರಿ ಚಾಲಕ ಹಾಗೂ ಲಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

     

  • ಕುರುಗೋಡು ದೊಡ್ಡ ಬಸವೇಶ್ವರ ರಥೋತ್ಸವ: ಚಕ್ರಕ್ಕೆ ಸಿಲುಕಿ ಓರ್ವ ಸಾವು

    ಕುರುಗೋಡು ದೊಡ್ಡ ಬಸವೇಶ್ವರ ರಥೋತ್ಸವ: ಚಕ್ರಕ್ಕೆ ಸಿಲುಕಿ ಓರ್ವ ಸಾವು

    ಬಳ್ಳಾರಿ: ಭಾನುವಾರದಂದು ಜಿಲ್ಲೆಯ ದೇವಾಲಯಗಳ ನಗರ ಕುರುಗೋಡಿನಲ್ಲಿ ನಡೆದ ದೊಡ್ಡಬಸವೇಶ್ವರ ರಥೋತ್ಸವದಲ್ಲಿ ರಥದ ಚಕ್ರಕ್ಕೆ ಸಿಲುಕಿ ಓರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಸಿರುಗುಪ್ಪ ತಾಲೂಕಿನ ಸಿರಿಗೆರೆ ಗ್ರಾಮದ ನಿವಾಸಿ ಸಿದ್ದಲಿಂಗಪ್ಪ (25) ಮೃತ ಯುವಕ. ತೇರನ್ನು ಎಳೆಯುವಾಗ ನೋಡಲು ಬಂದ ಸಿದ್ದಲಿಂಗಪ್ಪ ತೇರಿಗೆ ಹಾಕುತ್ತಿದ್ದ ಸನ್ನೆ ಸಲಕರಣೆ ತಗುಲಿ ಕೆಳಗೆ ಬಿದ್ದಿದ್ದಾರೆ. ಇದರಿಂದ ಅವರ ಎರಡೂ ಕಾಲುಗಳಿಗೆ ತೀವ್ರವಾಗಿ ಗಾಯವಾಗಿದ್ದು, ತಕ್ಷಣ ಅವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆ ತಂದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಿದ್ದಲಿಂಗಪ್ಪ ಸಾವನ್ನಪ್ಪಿದ್ದಾರೆ.

    ಇದನ್ನೂ ಓದಿ: ವೀಡಿಯೋ: ಕೊಟ್ಟೂರೇಶ್ವರ ಜಾತ್ರೆಯಲ್ಲಿ ರಥ ಬೀಳೋ ಮೊದ್ಲೇ ನಡೆದಿತ್ತು ಅಚ್ಚರಿ

    ಪ್ರತಿ ವರ್ಷದಂತೆ ಹೋಳಿ ಹುಣ್ಣಿಮೆ ದಿನ ಕುರುಗೋಡು ದೊಡ್ಡ ಬಸವೇಶ್ವರ ರಥೋತ್ಸವ ನಡೆಯುತ್ತದೆ. ಈ ಬಾರಿಯೂ ಕೂಡ ರಾಜ್ಯದ ವಿವಿಧಡೆಯಿಂದ ಬಂದ ಸಾವಿರಾರು ಭಕ್ತರು ವರ್ಣಾಲಂಕೃತ ರಥೋತ್ಸವಕ್ಕೆ ಹಣ್ಣು, ಹೂ ಎಸೆದು ಭಕ್ತಿ ಅರ್ಪಿಸಿದರು. ಒಂದು ವಾರದ ಕಾಲ ಜಾತ್ರಾ ಮಹೋತ್ಸವ ನಡೆಯುತ್ತದೆ. ಸುತ್ತ ಮುತ್ತಲಿನ ಹಳ್ಳಿಗಳ ಜನತೆ ತಮ್ಮ ಕೃಷಿಗೆ ಅಗತ್ಯವಾದ ಸಾಮಾಗ್ರಿಗಳನ್ನು ಈ ಜಾತ್ರೆಯಲ್ಲಿ ಖರೀದಿಸುತ್ತಾರೆ.

    ಇದನ್ನೂ ಓದಿ: ಬಳ್ಳಾರಿ ಕೊಟ್ಟೂರೇಶ್ವರ ಜಾತ್ರೆಯಲ್ಲಿ ಉರುಳಿ ಬಿದ್ದ ರಥ

  • ಕನ್ನಡ ಶಾಯರಿಗಳ ಜನಕ ಇಟಗಿ ಈರಣ್ಣ ವಿಧಿವಶ

    ಕನ್ನಡ ಶಾಯರಿಗಳ ಜನಕ ಇಟಗಿ ಈರಣ್ಣ ವಿಧಿವಶ

    – ಸ್ಪರ್ಶ ಚಿತ್ರಕ್ಕಾಗಿ `ಚಂದಕಿಂತ ಚಂದ ನೀನೇ ಸುಂದರ’ ಹಾಡು ಬರೆದಿದ್ದ ಈರಣ್ಣ

    ಶಿವಮೊಗ್ಗ: ಉಸಿರು ನಿಲ್ಲುವ ಮುನ್ನ ಹೆಸರು ನಿಲ್ಲುವ ಕೆಲಸ ಮಾಡಬೇಕು ಎಂದು ಬರೆದ ಕನ್ನಡ ಶಾಯರಿಗಳ ಜನಕ ಎಂದೇ ಖ್ಯಾತರಾಗಿದ್ದ ಖ್ಯಾತ ಕವಿ ಇಟಗಿ ಈರಣ್ಣ ಹೃದಯಾಘಾತದಿಂದ ನಿಧನರಾಗಿದ್ದಾರೆ.

    ಹೊಸಪೇಟೆ, ಬಳ್ಳಾರಿ, ಹೂವಿನಹಡಗಲಿ ಇನ್ನಿತರ ಕಡೆ ಉಪನ್ಯಾಸಕರಾಗಿದ್ದ ಈರಣ್ಣ ನಿವೃತ್ತಿಯ ನಂತರ ಶಿವಮೊಗ್ಗದಲ್ಲಿ ನೆಲೆಸಿದ್ದರು. ಕನ್ನಡದ ಶಾಯರಿಗಳು ಅವರ ಜನಪ್ರಿಯ ಪುಸ್ತಕ. ಹದಿನೈದಕ್ಕೂ ಹೆಚ್ಚು ಮುದ್ರಣ ಕಂಡಿರುವುದು ಅವರ ಜನಪ್ರಿಯತೆಗೆ ಸಾಕ್ಷಿ. ತಾಯಿ ಕೊಟ್ಟ ತಾಳಿ ಅವರ ಸಾಹಿತ್ಯ ಬಳಕೆ ಆದ ಮೊದಲ ಚಿತ್ರ. ಸ್ಪರ್ಶ ಸಿನಿಮಾಕ್ಕಾಗಿ ಅವರು ಬರೆದ ಶಾಯರಿ `ಚಂದಕಿಂತ ಚಂದ ನೀನೇ ಸುಂದರ’ ಎಲ್ಲರ ಮನಗೆದ್ದ ಗೀತೆ. ಕಬೀರ್ ದಾಸರ ದೋಹೆಗಳು, ಹರಿವಂಶರಾಯ್ ಬಚ್ಚನ್ ಅವರ ಮಧುಶಾಲಾ ಕೃತಿ ಸೇರಿ ಹಲವು ಕಾವ್ಯ, ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

    ಯಹೂದಿ ಹುಡುಗಿ, ರಾವಿ ನದಿ ದಂಡೆಯಲ್ಲಿ ಅವರ ಪ್ರಮುಖ ಅನುವಾದಿತ ನಾಟಕಗಳು. ಇವಲ್ಲದೆ ಈಶಾನ ವಚನಗಳು, ಬಸವಣ್ಣನವರ ವಚನಗಳ ಸಂಗ್ರಹ ಇನ್ನಿತರ ಕೃತಿಗಳ ರಚನೆ ಮಾಡಿದ್ದಾರೆ. ಇವರ ನಾಟಕಗಳು, ಕಾವ್ಯ ಹಲವು ವಿವಿಗಳ ಪಠ್ಯವಾಗಿ ಬೋಧನೆ ಆಗುತ್ತಿದೆ.

    *ಕನ್ನಡದೊಳಗ ‘ಶಾಯಿರಿ’ ನಂತೂ ಯಾರೂ ಬರೆದಿಲ್ಲ ಇವತ್ತಿನ ತನಕ |
    ನನಗಂತೂ ಬರೀಬೇಕನಸತೈತಿ ನಾನಂತೂ ಸಾಯೋತನಕ ||*

    ಹೀಗೆ ಬರೆದ ಇಟಗಿ ಈರಣ್ಣ ಸಾಯೋತನಕ ಶಾಯರಿಗಳನ್ನೇ ಉಸಿರಾಗಿಸಿಕೊಂಡವರು. ನಾಡಿನ ನಾನಾ ಕಡೆ ಹಲವು ಸಾಂಸ್ಕೃತಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಉಪನ್ಯಾಸಕ್ಕಾಗಿ ನಿರಂತರ ಪ್ರವಾಸ ಮಾಡುತ್ತಿದ್ದ ಈರಣ್ಣ, ಶಿವಮೊಗ್ಗದ ಸಾಂಸ್ಕೃತಿಕ ಲೋಕದ ಅವಿಭಾಜ್ಯ ಅಂಗವಾಗಿದ್ದರು. ನಾಲ್ಕು ದಿನಗಳ ಹಿಂದಷ್ಟೇ ಅವರ ತಾಯಿ ಮೃತಪಟ್ಟಿದ್ದರು. ಭಾನುವಾರ ಶಿವಮೊಗ್ಗದ ಬಸವ ಕೇಂದ್ರದಲ್ಲಿ ಅವರ ಕಾರ್ಯ ನಡೆಸಿ, ರಾತ್ರಿ ಮನೆಗೆ ಹೋಗಿದ್ದರು. ಮನೆಗೆ ಹೋದ ಸ್ವಲ್ಪ ಹೊತ್ತಿನಲ್ಲೇ ತೀವ್ರ ಹೃದಯಾಘಾತದಿಂದ ಅಸ್ವಸ್ಥಗೊಂಡಾಗ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಈರಣ್ಣ ಸಾವನ್ನಪ್ಪಿದ್ದಾರೆ.

    ಈರಣ್ಣ ಅವರಿಗೆ 66 ವರ್ಷ ವಯಸ್ಸಾಗಿತ್ತು.

     

  • ಹೋಳಿಯಾಟವಾಡಿ ನದಿ ಸ್ನಾನಕ್ಕೆ ಹೋದವ ಶವವಾದ

    ಹೋಳಿಯಾಟವಾಡಿ ನದಿ ಸ್ನಾನಕ್ಕೆ ಹೋದವ ಶವವಾದ

    ಕೊಪ್ಪಳ: ಹೋಳಿ ಹಬ್ಬದಂದು ಬಣ್ಣದ ಓಕುಳಿ ಆಡಿ ನಂತರ ನದಿ ಸ್ನಾನಕ್ಕೆ ಹೋದ ಯುವಕ ಜಲಸಮಾಧಿ ಆದ ಘಟನೆ ಕೊಪ್ಪಳ ತಾಲೂಕಿನ ನೇಲಗಿಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.

    25 ವರ್ಷದ ಬಸವರಾಜ್ ಮ್ಯಾಳಿ ಮೃತ ಯುವಕ. ಭಾನುವಾರದಂದು ಹೋಳಿ ಆಡಿದ ನಂತರ ಬಸವರಾಜ್ ಮತ್ತು ಆತನ ಸ್ನೇಹಿತರು ತುಂಗಭದ್ರಾ ಡ್ಯಾಂನ ಹಿನ್ನೀರಿನಲ್ಲಿ ಸ್ನಾನಕ್ಕೆಂದು ತೆರಳಿದ್ದರು. ಈ ವೇಳೆ ಬಸವರಾಜ್ ಮತ್ತು ಮಾರುತಿ ಎಂಬ ಇಬ್ಬರು ಯುವಕರು ನೀರಿನಲ್ಲಿ ಮುಳುಗಿದ್ದಾರೆ. ನದಿಯ ದಡದಲ್ಲಿದ್ದ ಮೀನುಗಾರರು ಮಾರುತಿಯನ್ನು ರಕ್ಷಣೆ ಮಾಡಿದ್ದಾರೆ. ಆದ್ರೆ ಬಸವರಾಜ್ ಮೃತಪಟ್ಟಿದ್ದಾರೆ.

    ಬಸವರಾಜ್ ಮೃತ ದೇಹಕ್ಕಾಗಿ ಸುಮಾರು 30 ಕ್ಕೂ ಹೆಚ್ಚು ನುರಿತ ಈಜುಗಾರರು ಕಾರ್ಯಾಚರಣೆ ಮಾಡಿದ್ದರೂ ಮೃತ ದೇಹ ಇನ್ನೂ ಪತ್ತೆಯಾಗಿಲ್ಲ. ಭಾನುವಾರ ಕತ್ತಲಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗೆ ಪುನಃ ಕಾರ್ಯಾಚರಣೆ ಆರಂಭಗೊಂಡಿದೆ.

    ಸಾಮಾನ್ಯವಾಗಿ ಈ ಭಾಗದ ಯುವಕರು ಹೋಳಿ ನಂತರ ಸ್ನಾನಕ್ಕೆ ನದಿಗೆ ಹೋಗುತ್ತಾರೆ. ಆದ್ರೆ ಈ ಬಾರಿ ನದಿಯಲ್ಲಿ ಹೆಚ್ಚು ಹೂಳಿರುವುದರಿಂದ ಹೊಳಿನಲ್ಲಿ ಬಸವರಾಜ ಮೃತ ದೇಹ ಸಿಕ್ಕಿ ಹಾಕಿಕೊಂಡಿರುವ ಸಾಧ್ಯತೆ ಇದೆ. ಅಳವಂಡಿ ಠಾಣಾ ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟು, ಪರಶೀಲನೆ ನಡೆಸಿದ್ದಾರೆ.

     

     

  • ಹಣವೆಂದು ಬ್ಯಾಗ್ ತೆರೆದು ನೋಡಿದ್ರೆ ಶಾಕ್: ಹೃದಯಾಘಾತದಿಂದ ವ್ಯಕ್ತಿ ಸಾವು

    ಹಣವೆಂದು ಬ್ಯಾಗ್ ತೆರೆದು ನೋಡಿದ್ರೆ ಶಾಕ್: ಹೃದಯಾಘಾತದಿಂದ ವ್ಯಕ್ತಿ ಸಾವು

    ಕೊಪ್ಪಳ: ಹಣ ಕಂಡ್ರೆ ಹೆಣವೂ ಬಾಯ್ಬಿಡುತ್ತೆ ಅನ್ನೋ ಮಾತಿದೆ. ಅದೇ ರೀತಿ ಹಣ ಡಬಲ್ ಮಾಡಿಕೊಳ್ಳಲು ಹೋಗಿ ವ್ಯಕ್ತಿಯೊಬ್ಬರು ಹೆಣವಾದ ಘಟನೆ ಕೊಪ್ಪಳದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಜಿಲ್ಲೆಯ ಸಜ್ಜಿ ಹೊಲ ಪ್ರದೇಶದ ನಿವಾಸಿ ಕೆ.ಹುಸೇನ್ ಖಾನ್ ರಾತ್ರೋರಾತ್ರಿ ಶ್ರೀಮಂತರಾಗಲು ಹೋಗಿ ಪ್ರಾಣ ಬಿಟ್ಟಿದ್ದಾರೆ.

    ನಡೆದಿದ್ದೇನು: ಮೃತ ಹುಸೇನ್ ಅವರಿಗೆ ಸೈಯದ್ ಸಾಹೇಬ್ ಎಂಬಾತ ಒಂದಕ್ಕೆ ಹತ್ತುಪಟ್ಟು ಹಣ ಕೊಡಿಸುವುದಾಗಿ ನಂಬಿಸಿದ್ದ. ಹೀಗಾಗಿ ಹಣದ ಆಸೆಗೆ ಹುಸೇನ್ ಖಾನ್ ಐದಾರು ತಿಂಗಳ ಹಿಂದೆ ಸೈಯದ್ ಸಾಹೇಬ್ ಮೂಲಕ ಬಾಬಾ ಎಂಬಾತನಿಗೆ 2 ಲಕ್ಷ ರೂಪಾಯಿ ಕೊಟ್ಟಿದ್ರು. 20 ಲಕ್ಷದ ಆಸೆಗಾಗಿ ಬಾಬಾನ ಹಿಂದೆ ಕೆಲ ತಿಂಗಳು ಅಲೆದಾಡಿದ್ರು. ಆಗ ಬಾಬಾ 20 ಲಕ್ಷ ರೂಪಾಯಿ ಇವೆ ಎಂದು ಹೇಳಿ ಒಂದು ಬ್ಯಾಗ್ ಕೊಟ್ಟು ಮನೆಗೆ ಹೋಗಿ ನೋಡಿಕೊಳ್ಳುವಂತೆ ಹೇಳಿದ್ದಾರೆ. ಅಂತೆಯೇ ಹುಸೇನ್ ಖಾನ್ ಕಳೆದ ಫೆಬ್ರವರಿ 20 ರಂದು ಮನೆಗೆ ಬಂದು ಬ್ಯಾಗ್ ತೆರೆದು ನೋಡಿದಾಗ ಬ್ಯಾಗ್ ತುಂಬಾ ಬರೀ ಕರಿ ಹಾಳೆಗಳು ಕಂಡಿವೆ. ಇದನ್ನು ನೋಡಿದ ಖಾನ್ ಗೆ ಹೃದಯಾಘಾತವಾಗಿದೆ. ಇದೀಗ ಪತ್ನಿ ಜಬೀನಾ ಗಂಡನನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.

    ಕೆಲ ದಿನಗಳ ಹಿಂದೆ ತಂದೆಯ ಮೊಬೈಲ್ ನಲ್ಲಿನ ಕರೆಗಳ ವಾಯ್ಸ್ ರೆಕಾರ್ಡ್ ಪತ್ತೆಯಾಗಿದೆ ಅಂತಾ ಮೃತ ಹುಸೇನ್ ಖಾನ್ ಪುತ್ರ ಹೇಳಿದ್ದಾರೆ.

  • ಸ್ಮಶಾನದಿಂದ ಬದುಕಿ ಬಂದಿದ್ದ ಬಾಲಕ ಮತ್ತೆ ಮಸಣಕ್ಕೆ

    ಸ್ಮಶಾನದಿಂದ ಬದುಕಿ ಬಂದಿದ್ದ ಬಾಲಕ ಮತ್ತೆ ಮಸಣಕ್ಕೆ

    ಹುಬ್ಬಳ್ಳಿ: 20 ದಿನಗಳ ಹಿಂದೆ ಸ್ಮಶಾನದಿಂದ ಸಾವನ್ನು ಗೆದ್ದು ಬಂದಿದ್ದ ಬಾಲಕ ಇವತ್ತು ಮತ್ತೆ ಮಸಣ ಸೇರಿದ್ದಾನೆ.

    ಕುಮಾರ್ ಮರಡಿ (16) ಇಂದು ಮಸಣ ಸೇರಿದ ಬಾಲಕ. ಕುಮಾರ್‍ಗೆ ಫೆಬ್ರವರಿ 19 ರಂದು ಬೀದಿ ನಾಯಿ ಕಚ್ಚಿತ್ತು. ಸೂಕ್ತ ಚಿಕಿತ್ಸೆ ಪಡೆಯದ ಕಾರಣ ನಂಜಾಗಿ ಮೂರ್ಛೆ ಹೋಗಿದ್ದನು. ಬಳಿಕ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ವೈದ್ಯರು ಕುಮಾರನನ್ನು ಮನೆಗೆ ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದರು.

    ಕುಮಾರ್ ಉಸಿರಾಟ ಹಾಗು ನಾಡಿಮಿಡಿತ ನಿಂತಿರುವುದನ್ನು ಗಮನಿಸಿದ ಪೋಷಕರು ಆತ ಮೃತಪಟ್ಟಿದ್ದಾನೆ ಎಂದು ಅಂತ್ಯಸಂಸ್ಕಾರಕ್ಕೆ ಮನಗುಂಡಿ ಗ್ರಾಮದಲ್ಲಿ ಸಿದ್ಧತೆ ಮಾಡಿಕೊಂಡಿದ್ರು. ಆದ್ರೆ ಅಚ್ಚರಿ ಎಂಬಂತೆ ಸ್ಮಶಾನಕ್ಕೆ ಸಾಗಿಸುವ ಮಾರ್ಗ ಮಧ್ಯೆ ಕುಮಾರ್ ಉಸಿರಾಟ ಆರಂಭಿಸಿದ್ದನು.

    ಕುಮಾರ್ ಉಸಿರಾಟ ಕ್ರಿಯೆ ಆರಂಭಿಸುತ್ತಿದ್ದಂತೆ ಪೋಷಕರು ಹುಬ್ಬಳ್ಳಿಯ ಸುಚಿರಾಯ್ ಆಸ್ಪತ್ರೆಗೆ ದಾಖಲಿಸಿದ್ದರು. ಕುಮಾರನನ್ನು ತೀವ್ರ ನಿಗಾ ಘಟಕ (ಐಸಿಯು)ದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಕುಮಾರ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

     

  • ಬೆಳಗ್ಗೆ ಅಪ್ಪಿ ಶುಭ ಕೋರಿದ್ರು, ರಾತ್ರಿ ಮೃತರಾದ್ರು: ಕಿಚ್ಚನ ಅಭಿಮಾನಿ ಇನ್ನಿಲ್ಲ

    ಬೆಳಗ್ಗೆ ಅಪ್ಪಿ ಶುಭ ಕೋರಿದ್ರು, ರಾತ್ರಿ ಮೃತರಾದ್ರು: ಕಿಚ್ಚನ ಅಭಿಮಾನಿ ಇನ್ನಿಲ್ಲ

    ತುಮಕೂರು: ಇವರೆಂದರೆ ಸುದೀಪ್ ಗೆ ಬಹಳ ಪ್ರೀತಿ. ನಗರಕ್ಕೆ ಬಂದಾಗಲೆಲ್ಲ ಇವರನ್ನು ಮಾತನಾಡಿಸಿ ಹೋಗುತ್ತಿದ್ದರು. ನಿನ್ನೆ ಬೆಳಗ್ಗೆ ಇವರ ಪ್ರೀತಿಯ ಅಪ್ಪುಗೆಯನ್ನು ಸ್ವೀಕರಿಸಿದ್ದರು. ಆದರೆ ರಾತ್ರಿ ತನ್ನ ಪ್ರೀತಿಯ ಸ್ನೇಹಿತ, ಅಭಿಮಾನಿಯನ್ನು ಸುದೀಪ್ ಈಗ ಕಳೆದುಕೊಂಡಿದ್ದಾರೆ.

    ಸುದೀಪ್ ಅವರ ಆತ್ಮೀಯ ಗೆಳೆಯ ತುಮಕೂರಿನ ಕಪಾಲಿ ಹೋಟೆಲ್ ನ ಶಶಿ ಹೃದಯಾಘಾತದಿಂದ ಸೋಮವಾರ ರಾತ್ರಿ ನಿಧನರಾಗಿದ್ದಾರೆ.

    ಹೆಬ್ಬುಲಿ ಚಿತ್ರದ ಪ್ರಚಾರಕ್ಕೆಂದು ನಟ ಸುದೀಪ್ ಅವರು ತುಮಕೂರಿಗೆ ಸೋಮವಾರ ಬಂದಿದ್ದರು. ಈ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಶಶಿ ಅಪ್ಪಿಕೊಂಡಿದ್ದರು.

    ಕಳೆದ 25 ವರ್ಷದ ಸ್ನೇಹಿತನಾಗಿದ್ದ ಶಶಿ ಅವರು, ಸುದೀಪ್ ಅವರ ಮೊದಲ ಚಿತ್ರ ಸ್ಪರ್ಶ ಮೂವಿಯ ಡಿಸ್ಟ್ರಿಬ್ಯೂಟರ್ ಆಗಿದ್ದರು. ತುಮಕೂರಿಗೆ ಬಂದಾಗಲೆಲ್ಲಾ ಭೇಟಿಯಾಗುತ್ತಿದ್ದರು. ಅದರಂತೆ ನಿನ್ನೆ ಕೂಡಾ, ಹೆಬ್ಬುಲಿ ಚಿತ್ರದ ಪ್ರಚಾರಕ್ಕೆ ಸುದೀಪ್ ಆಗಮಿಸಿದಾಗ, ಶಶಿ ಅವರು ಭೇಟಿಯಾಗಿ ಕುಶಲೋಪರಿ ವಿಚಾರಿಸಿದ್ದರು.

    ಆದರೆ ಆ ಗೆಳೆತನ ನಿನ್ನೆಗೆ ಕೊನೆಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲವೇನೊ? ಆದರೂ ಶಶಿ ಕೊನೆಯ ಅಪ್ಪುಗೆಯ ನಂತರ ರಾತ್ರಿ ಸಾವನ್ನಪ್ಪಿದ್ದು ಸುದೀಪ್ ಅಭಿಮಾನಿಗಳಿಗೆ ಬೇಸರ ತಂದಿದೆ.

    ದು:ಖ ತಂದಿದೆ: ತುಮಕೂರಿನ ಅಭಿಮಾನಿ ಶಿವು ಮೃತಪಟ್ಟಿರುವುದು ನನಗೆ ದುಃಖ ತಂದಿದೆ. ಎಲ್ಲರಂತೆ ನನಗೂ ಅಭಿಮಾನಿಗಳು ಅಂದ್ರೆ ಬಹಳ ಇಷ್ಟ. ಆದರೆ ಆತನ ಸಾವು ನನಗೆ ನೋವು ತಂದಿದೆ. ನನ್ನ ಜೊತೆ ಹಲವು ದಿನಗಳಿಂದಲೂ ಒಟನಾಟ ಇಟ್ಟುಕೊಂಡಿದ್ದ. ನಾನು ಅಲ್ಲೆ ಇದ್ದರೆ ಅವನನ್ನು ಖಂಡಿತಾ ನೋಡಲು ಹೋಗುತ್ತಿದ್ದೆ ಎಂದು ಹುಬ್ಬಳ್ಳಿಯಲ್ಲಿ ಸುದೀಪ್ ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ: ಸ್ಯಾಂಡಲ್‍ವುಡ್‍ನ ಎಲ್ಲ ದಾಖಲೆಗಳನ್ನು ಧೂಳಿಪಟ ಮಾಡಿದ ಹೆಬ್ಬುಲಿ

  • ತುಮಕೂರು: ಸಿಡಿಲು ಬಡಿತಕ್ಕೆ ತಾಯಿ-ಮಗಳು ಬಲಿ

    ತುಮಕೂರು: ಸಿಡಿಲು ಬಡಿತಕ್ಕೆ ತಾಯಿ-ಮಗಳು ಬಲಿ

    ತುಮಕೂರು: ಸಿಡಿಲಿನಿಂದ ಇಬ್ಬರು ಸಾವನ್ನಪ್ಪಿರುವ ಘಟನೆ ಸೋಮವಾರ ಜಿಲ್ಲೆಯ ಗುಬ್ಬಿ ತಾಲೂಕಿನ ಪೆಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಳೆಯಿಂದ ರಕ್ಷಣೆ ಪಡೆಯಲು ಆಲದ ಮರದ ಕೆಳಗೆ ನಿಂತಾಗ ಸಿಡಲು ಬಡಿದು ಸಾವನ್ನಪ್ಪಿದ್ದಾರೆ.

    40 ವರ್ಷದ ಮಂಜುಳಾ ಹಾಗೂ 13 ವರ್ಷದ ಭಾರತಿ ಸಾವನ್ನಪ್ಪಿರುವ ದುರ್ಧೈವಿಗಳು. ಮಂಜುಳಾ ಅವರ ಇನ್ನಿಬ್ಬರು ಮಕ್ಕಳಾದ ಶಿಲ್ಪಾ ಮತ್ತು ಸಂತೋಷ ಗಾಯಗೊಂಡಿದ್ದಾರೆ. ಗುಬ್ಬಿ ತಾಲೂಕಿನ ಅರಿಶಿಣಕುಂಟೆ ಗ್ರಾಮದಲ್ಲಿ ಗಿರಿಯಮ್ಮ ಎಂಬವರಿಗೆ ಸೇರಿದ 9 ಮೇಕೆಗಳು ಸಿಡಿಲಿಗೆ ಸಾವನ್ನಪ್ಪಿವೆ.

    ಸತತ ಎರಡು ತಿಂಗಳಿನಿಂದ ಬಿಸಿಲಿನಿಂದ ತತ್ತರಿಸಿದ ಜನತೆಗೆ ವರುಣನ ಸಿಂಚನ ಕೆಲವಡೆ ತಂಪು ತಂದಿದ್ದರೆ, ಇನ್ನು ಕೆಲವಡೆ ಸಿಡಿಲಿನ ಅವಘಡದಿಂದ ದುಃಖದ ಛಾಯೆ ಮೂಡಿಸಿದೆ.

     

  • ಮನೆಗೆ ಆಕಸ್ಮಿಕ ಬೆಂಕಿ: ಮಹಿಳೆ ಸಜೀವ ದಹನ

    ಮನೆಗೆ ಆಕಸ್ಮಿಕ ಬೆಂಕಿ: ಮಹಿಳೆ ಸಜೀವ ದಹನ

    ಗದಗ: ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಮಹಿಳೆಯೊಬ್ಬರು ಸಜೀವ ದಹನವಾಗಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ನಡೆದಿದೆ.

    56 ವರ್ಷ ವಯಸ್ಸಿನ ಉಡಚಮ್ಮ ಸಜೀವ ದಹನವಾದ ಮಹಿಳೆ. ಶನಿವಾರ ರಾತ್ರಿ ಎಲ್ಲರೂ ಮಲಗಿದ್ದ ವೇಳೆಯಲ್ಲಿ ಮನೆಗೆ ಬೆಂಕಿ ತಗುಲಿದೆ. ನಿದ್ದೆಯ ಮಂಪರಿನಲ್ಲಿದ್ದ ಉಡಚಮ್ಮ ಮನೆಯಿಂದ ಹೊರ ಬರಲಾರದೇ ಬೆಂಕಿ ಕೆನ್ನಾಲಿಗೆಗೆ ತುತ್ತಾಗಿದ್ದಾರೆ.

    ಮನೆಗೆ ಬೆಂಕಿ ಹೊತ್ತಿಕೊಂಡಾಗ ಮನೆಯಲ್ಲಿದ್ದ ಇನ್ನುಳಿದ ನಾಲ್ಕು ಜನ 7 ಜಾನುವಾರುಗಳ ಜೊತೆ ಬೆಂಕಿಯಿಂದ ಪಾರಾಗಿದ್ದಾರೆ. ಬೆಂಕಿಯ ತೀವ್ರತೆಗೆ 4 ಎಮ್ಮೆ, 2 ಆಕಳು ಮತ್ತು 1 ಕರುವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮನೆಯಲ್ಲಿದ್ದ ಗೃಹ ಉಪಯೋಗಿ ವಸ್ತುಗಳು, 60 ಗ್ರಾಂ ಚಿನ್ನ, ಲಕ್ಷಾಂತರ ರೂಪಾಯಿ ಬೆಲೆಬಾಳುವ ದವಸ ಧಾನ್ಯಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.

    ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸಿ ಮಹಿಳೆ ಶವವನ್ನು ಹೊರತೆಗೆದಿದ್ದಾರೆ. ಸ್ಥಳದಲ್ಲಿ ಉಚಡಮ್ಮ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಬೆಳಗಾವಿ: ಬೈಕ್‍ಗೆ ಡಿಕ್ಕಿ ಹೊಡೆದ ಕಾರು, ಸ್ಥಳದಲ್ಲೇ ಮೂವರ ದುರ್ಮರಣ

    ಬೆಳಗಾವಿ: ಬೈಕ್‍ಗೆ ಡಿಕ್ಕಿ ಹೊಡೆದ ಕಾರು, ಸ್ಥಳದಲ್ಲೇ ಮೂವರ ದುರ್ಮರಣ

    ಬೆಳಗಾವಿ: ಕಾರೊಂದು ಬೈಕ್‍ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಚಿಕಾಲಗುಡ್ಡ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಗುರುವಾರ ತಡರಾತ್ರಿ ನಡೆದಿದೆ.

    ಮುಜಾಹಿದ್ ದೇಸಾಯಿ, ಅಬ್ದುಲ್‍ರಜಾಕ್ ಪಟೇಲ್ ಹಾಗೂ ಕಲೀಮುನ ಪಟೇಲ್ ಅಪಘಾತದಲ್ಲಿ ಮೃತಪಟ್ಟ ದುರ್ಧೈವಿಗಳು. ಮೃತರೆಲ್ಲರೂ ಬೆಳಗಾವಿ ಜಿಲ್ಲೆಯ ಕರೋಶಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.

    ಮೃತರು ಬೆಳಗಾವಿಯಲ್ಲಿ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು, ಕರೋಶಿ ಗ್ರಾಮಕ್ಕೆ ವಾಪಾಸ್ಸಾಗುತ್ತಿದ್ದ ಸಂದರ್ಭದಲ್ಲಿ ಎದುಗಡೆಯಿಂದ ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಮೇಲೆ ಇದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.