Tag: death

  • ಬೆಂಕಿಯನ್ನೇ ಉಗುಳುತಿದೆ ಭೂಮಿ-ವಿಸ್ಮಯಕಾರಿ ಕೆನ್ನಾಲಿಗೆಗೆ ಬಾಲಕ ಬಲಿ

    ಬೆಂಕಿಯನ್ನೇ ಉಗುಳುತಿದೆ ಭೂಮಿ-ವಿಸ್ಮಯಕಾರಿ ಕೆನ್ನಾಲಿಗೆಗೆ ಬಾಲಕ ಬಲಿ

    ಮೈಸೂರು: ನಗರದ ಹೊರವಲಯದಲ್ಲಿ ವಿಚಿತ್ರ ಹಾಗು ವಿಲಕ್ಷಣ ಘಟನೆ ನಡೆದಿದೆ. ಭೂಮಿಯಿಂದ ಬೆಂಕಿ ಹೊರಬರುತ್ತಿದ್ದು, ಬೆಂಕಿಯ ಕೆನ್ನಾಲಿಗೆಗೆ 14 ವರ್ಷದ ಬಾಲಕನೊಬ್ಬ ಬಲಿಯಾಗಿದ್ದಾನೆ. ಕುಂಬಾರ ಕೊಪ್ಪಲು ನಿವಾಸಿ ಸೋಮಣ್ಣ ಎಂಬುವರಿಗೆ ಸೇರಿರುವ 4ಎಕರೆ ಜಮೀನಿನಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

    ಹರ್ಷಲ್ ಬೆಂಕಿಯ ಕೆನ್ನಾಲಿಗೆಗೆ ಮೃತಪಟ್ಟ ಬಾಲಕ. ಹರ್ಷಲ್ ಬಹಿರ್ದಸೆಗೆ ತೆರಳಿದ್ದಾಗ ತನಗರಿವಿಲ್ಲದೇ ಬೆಂಕಿ ಉಗುಳುತ್ತಿದ್ದ ಭೂಮಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದನು. ಬಳಿಕ ಹರ್ಷಲ್‍ನನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹರ್ಷಲ್ ಮೃತಪಟ್ಟಿದ್ದಾನೆ. ಹರ್ಷಲ್ ಕ್ಯಾದನಹಳ್ಳಿಯ ಮೂರ್ತಿ ಹಾಗೂ ಜಾನಕಿ ಎಂಬವರ ಪುತ್ರ.

    ಘಟನಾ ಸ್ಥಳಕ್ಕೆ ಮೇಟಗಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಭೇಟಿ ನೀಡಿದ ಸಂದರ್ಭದಲ್ಲೂ ಭೂಮಿಯಿಂದ ಬೆಂಕಿ ಹೊರ ಬರುತ್ತಿತ್ತು. ಭೂಮಿಯಿಂದ ಈ ರೀತಿಯಾಗಿ ಬೆಂಕಿ ಬಂದಿರುವುದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಆಸುಪಾಸಿನಲ್ಲಿರುವ ಕಾರ್ಖಾನೆಯಿಂದ ರಾಸಾಯನಿಕ ಪದಾರ್ಥಗಳನ್ನು ತಂದು ಸುರಿದಿರುವ ಕಾರಣ ಈ ರೀತಿ ಭೂಮಿಯಿಂದ ಬೆಂಕಿ ಬಂದಿರಬಹುದೆಂದು ಶಂಕಿಸಲಾಗಿದೆ.

     

  • ಅಂಬೇಡ್ಕರ್ ಕಟೌಟ್ ಅಳವಡಿಸುವಾಗ ವಿದ್ಯುತ್ ಸ್ಪರ್ಶದಿಂದ ಮೂವರ ಸಾವು

    ಅಂಬೇಡ್ಕರ್ ಕಟೌಟ್ ಅಳವಡಿಸುವಾಗ ವಿದ್ಯುತ್ ಸ್ಪರ್ಶದಿಂದ ಮೂವರ ಸಾವು

    ಮೈಸೂರು: ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಬೃಹತ್ ಕಟೌಟ್ ಅಳವಡಿಸುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶದಿಂದ ಮೂವರು ಮೃತಪಟ್ಟು ಆರು ಜನರು ಗಂಭೀರವಾಗಿ ಗಾಯಗೊಂಡಿರೋ ಘಟನೆ ಜಿಲ್ಲೆಯ ಕ್ಯಾತಮಾರನಹಳ್ಳಿಯಲ್ಲಿ ನಡೆದಿದೆ.

    ಮಣಿಕಂಠ (27), ಕುಮಾರ್ (40), ಶಿವು (25) ಸಾವನ್ನಪ್ಪಿದ ದುರ್ದೈವಿಗಳು. ಕ್ಯಾತಮಾರನಹಳ್ಳಿಯ ಎಕೆ ಕಾಲೋನಿಯ ನಿಂಬೆಯಣ್ಣ ವೃತ್ತದ ಬಳಿ ಗುರುವಾರ ರಾತ್ರಿ ಅಂಬೇಡ್ಕರ್ ಅವರ ಬೃಹತ್ ಕಟೌಟ್ ಅಳವಡಿಸಲು ಸಿದ್ಧತೆ ಮಾಡಲಾಗಿತ್ತು. ಅಂಬೇಡ್ಕರ್ ಅವರ 30 ಅಡಿ ಎತ್ತರದ ಕಟೌಟ್‍ಗೆ ಕಬ್ಬಿಣದ ಫ್ರೇಂ ಹಾಕಿ ಕಟ್ಟಲಾಗುತ್ತಿತ್ತು. ಕಬ್ಬಿಣದ ಫ್ರೇಂ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

    ಗಂಭೀರವಾಗಿ ಗಾಯಗೊಂಡವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರಿನ ಕೆಆರ್ ಆಸ್ಪತ್ರೆಯ ಶವಾಗಾರದಲ್ಲಿದ್ದ ಮೃತದೇಹಗಳನ್ನ ಇರಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಅಲ್ಲದೆ, ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಕೊಡಿಸುವುದಾಗಿ ತಿಳಿಸಿದರು.

     

  • ಬಿಸಿಲ ಬೇಗೆಗೆ ನಿತ್ರಾಣಗೊಂಡಿದ್ದ ಆನೆ ಸಾವು

    ಬಿಸಿಲ ಬೇಗೆಗೆ ನಿತ್ರಾಣಗೊಂಡಿದ್ದ ಆನೆ ಸಾವು

    ರಾಮನಗರ: ಸುಮಾರು 15 ವರ್ಷದ ಆನೆಯೊಂದು ಬಿಸಿಲ ಬೇಗೆಗೆ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ದೇವೀರಮ್ಮನದೊಡ್ಡಿ ಗ್ರಾಮದ ಬಳಿ ನಡೆದಿದೆ.

    ಗ್ರಾಮದ ಕೃಷ್ಣೇಗೌಡ ಎಂಬವರ ತೋಟದ ಬಳಿ ನೀರು ಕುಡಿದು ನಿತ್ರಾಣಗೊಂಡು ಆನೆ ಬಿದ್ದಿತ್ತು. ಬೆಳಗ್ಗೆ ಕೃಷ್ಣೆಗೌಡ್ರು ತೋಟಕ್ಕೆ ಬಂದಾಗ ವಿಷಯ ಬೆಳಕಿಗೆ ಬಂದಿದೆ. ನೀಲಗಿರಿ ತೋಪಿನಲ್ಲಿ ನಿತ್ರಾಣವಾಗಿ ಬಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಆನೆಯನ್ನು ಕಂಡು ಗ್ರಾಮಸ್ಥರು ಕೂಡಲೇ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ರು. ಬಳಿಕ ಸ್ಥಳಕ್ಕೆ ಬಂದ ಕಾವೇರಿ ವನ್ಯಜೀವಿ ಧಾಮದ ಅಧಿಕಾರಿಗಳು ಸ್ಥಳೀಯ ಪಶುವೈದ್ಯರನ್ನ ಕರೆಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ರು.

    ಆನೆ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ತಜ್ಞವೈದ್ಯರ ತಂಡ, ಆನೆಗೆ ನೀರು ಮಿಶ್ರಿತ ಗ್ಲೂಕೋಸ್ ಹಾಗೂ ಡ್ರಿಪ್ಸ್ ಹಾಕಿದ್ರು. ಅಲ್ಲದೇ ನಿತ್ರಾಣಗೊಂಡಿದ್ದ ಆನೆಗೆ ಬಾಳೆಹಣ್ಣು ಹಾಗೂ ಹುಲ್ಲು ತಿನ್ನಿಸುವ ಯತ್ನವನ್ನು ಸಹ ನಡೆಸಲಾಯಿತು. ಆದ್ರೆ ಆನೆಯ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.

    ಜಿಲ್ಲೆಯಲ್ಲಿ ಗರಿಷ್ಠ 39 ಡಿಗ್ರಿ ತಾಪಮಾನವಿದ್ದು, ಬಿಸಿಲಿನ ಝಳದಿಂದ ಇದೀಗ ಕಾಡು ಪ್ರಾಣಿಗಳು ಸಹ ಸಾವನ್ನಪ್ಪುತ್ತಿವೆ. ಕಾಡಾನೆ ಸಿದ್ದನ ನೆನಪು ಮಾಸುವ ಮುನ್ನವೇ ಮತ್ತೊಂದು ಆನೆ ಸಾವು-ಬದುಕಿನ ನಡುವೆ ಹೋರಾಟ ನಡೆಸಿ ಸಾವನ್ನಪ್ಪಿರೋದು ಪ್ರಾಣಿಪ್ರಿಯರಲ್ಲಿ ಆತಂಕವನ್ನುಂಟು ಮಾಡಿದೆ.

     

  • ಕಾರುಗಳ ನಡುವೆ ಡಿಕ್ಕಿ – ಇಬ್ಬರ ಸಾವು, ಮಂತ್ರಾಲಯಕ್ಕೆ ಹೊರಟ್ಟಿದ್ದವರಿಗೆ ಗಾಯ

    ಕಾರುಗಳ ನಡುವೆ ಡಿಕ್ಕಿ – ಇಬ್ಬರ ಸಾವು, ಮಂತ್ರಾಲಯಕ್ಕೆ ಹೊರಟ್ಟಿದ್ದವರಿಗೆ ಗಾಯ

    ರಾಯಚೂರು: ಜಿಲ್ಲೆಯ ಮಾನ್ವಿ ಪಟ್ಟಣದ ಹೊರವಲಯದ ಆಟೋನಗರ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    35 ವರ್ಷದ ಸುರೇಶ್ ರೆಡ್ಡಿ ಹಾಗೂ ಗಂಗಾಧರ್ ಸಾವನ್ನಪ್ಪಿರುವ ದುರ್ದೈವಿಗಳು. ಅಪಘಾತದಲ್ಲಿ ಮೂರು ಜನರಿಗೆ ಗಾಯಗಳಾಗಿವೆ. ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೊರಟಿದ್ದ ಇನ್ನೋವಾ ಕಾರು ಹಾಗೂ ರಾಯಚೂರಿನಿಂದ ಮಾನ್ವಿಗೆ ಹೊರಟಿದ್ದ ಸ್ವಿಫ್ಟ್ ಕಾರಿನ ನಡುವೆ ಈ ಅಪಘಾತ ಸಂಭವಿಸಿದೆ.

    ಸ್ವಿಫ್ಟ್ ಕಾರಿನಲ್ಲಿದ್ದ ಗಣದಿನ್ನಿಯ ವಕೀಲ ಸುರೇಶ್ ರೆಡ್ಡಿ ಹಾಗೂ ಗುತ್ತಿಗೆದಾರ ಗಂಗಾಧರ್ ಸಾವನ್ನಪ್ಪಿದ್ದಾರೆ. ಇನ್ನೋವಾ ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು ಮಾನ್ವಿ ಹಾಗೂ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಿನ ಜಾವ ಅತೀ ವೇಗದ ವಾಹನ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

     

  • ಬೆಂಗಳೂರು-ಹಾಸನ ನೂತನ ರೈಲು ಮಾರ್ಗದಲ್ಲಿ ವ್ಯಕ್ತಿ ಬಲಿ

    ಬೆಂಗಳೂರು-ಹಾಸನ ನೂತನ ರೈಲು ಮಾರ್ಗದಲ್ಲಿ ವ್ಯಕ್ತಿ ಬಲಿ

    ನೆಲಮಂಗಲ: ನೂತನವಾಗಿ ಪ್ರಾರಂಭವಾಗಿರುವ ಬೆಂಗಳೂರು ಹಾಸನ ರೈಲು ಮಾರ್ಗದಲ್ಲಿ, ಯುವಕನೋರ್ವ ರೈಲಿಗೆ ಸಿಲುಕಿ ಮೃತ ಪಟ್ಟಿದ್ದಾನೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ವಿಶ್ವೇಶ್ವರಪುರ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಲೋಹಿತ್‍ನಗರ ಗ್ರಾಮದ ನಿವಾಸಿ ಪವನ್ ಮೃತ ದುರ್ದೈವಿ. ಮೃತ ಬುದ್ಧಿಭ್ರಮಣೆಯಿಂದ ಬಳಲುತ್ತಿದ್ದು, ಮುಂಜಾನೆ ರೈಲು ಹಳಿಯ ಬಳಿ ತೆರಳಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

    ಇತ್ತೀಚೆಗೆ ಪ್ರಾರಂಭವಾಗಿರುವ ರೈಲ್ವೆ ಹಳಿಗೆ ಈ ಗ್ರಾಮಗಳ ಬಳಿ ಯಾವುದೇ ತಡೆಗೋಡೆ ನಿರ್ಮಾಣ ಮಾಡದಿರುವುದು ಘಟನೆಗೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮುಂದಿನ ದಿನದಲ್ಲಿ ಇಂತಹ ಅವಘಡ ಸಂಭವಿಸದಂತೆ ಇಲಾಖೆ ಎಚ್ಚೆತ್ತು, ಕೂಡಲೇ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದು ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

  • ಬೆಳಗಾವಿಯಲ್ಲಿ ಭಾರೀ ಮಳೆ: ಧರೆಗುರಳಿದ ಮರ, ವಿದ್ಯುತ್ ಕಂಬಗಳು

    ಬೆಳಗಾವಿಯಲ್ಲಿ ಭಾರೀ ಮಳೆ: ಧರೆಗುರಳಿದ ಮರ, ವಿದ್ಯುತ್ ಕಂಬಗಳು

    -ಬಳ್ಳಾರಿಯಲ್ಲಿ ಮನೆಯ ಸೀಟ್ ಕುಸಿದು ಎರಡು ಸಾವು

    – ಕಾರವಾರದಲ್ಲಿ ಸಿಡಿಲುಬಡಿದು ಜಾನುವಾರು ಸಾವು

    ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಲವೆಡೆ ಭಾರೀ ಬಿರುಗಾಳಿ ಸಹಿತ ಮಳೆಯಾಗಿದೆ. ಹೊಸೂರು ಗ್ರಾಮದಲ್ಲಿ ಮರ, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಮನೆಗಳ ಛಾವಣಿ ಹಾರಿಹೋಗಿವೆ.

    ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿಯೂ ಮಳೆಯಾಗಿದ್ದು, ಮನೆಯೊಂದರ ಹೆಂಚೊಂದು ಹಾರಿಹೋಗಿ ಮನೆಯಲ್ಲಿದ್ದ ಕಂಪ್ಯೂಟರ್ ಮತ್ತು ದಿನಬಳಕೆಯ ವಸ್ತುಗಳು ನೀರು ಪಾಲಾಗಿವೆ. ಬಳ್ಳಾರಿಯಲ್ಲಿ ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಇಬ್ಬರು ಬಲಿಯಾಗಿದ್ದಾರೆ.

    ಹೊಸಪೇಟೆಯ ಊರಮ್ಮ ದೇವಿ ದೇವಸ್ದಾನದ ಬಳಿಯ ಮನೆಯ ಸೀಟ್ ಕುಸಿದ ಬಿದ್ದ ಪರಿಣಾಮ ಮನೆಯಲ್ಲಿದ್ದ ನಿವಾಸಿ 35 ವರ್ಷದ ಸಣ್ಣ ಮಾರೆಪ್ಪ ಮತ್ತು 25 ವರ್ಷದ ಮಹಿಳೆ ರಾಜವ್ವ ಮೃತಪಟ್ಟಿದ್ದಾರೆ. ಅತ್ತ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಓರಲಗಿಯಲ್ಲಿ ಸಿಡಿಲು ಬಡಿದು ಎರಡು ಹಸುಗಳು ಸಾವನ್ನಪ್ಪಿವೆ.

     

  • ದಾವಣಗೆರೆ: ಪಲ್ಟಿ ಹೊಡೆದ ಬಸ್- ಓರ್ವ ಮಹಿಳೆ ಸಾವು, ಇಬ್ಬರು ಗಂಭೀರ

    ದಾವಣಗೆರೆ: ಪಲ್ಟಿ ಹೊಡೆದ ಬಸ್- ಓರ್ವ ಮಹಿಳೆ ಸಾವು, ಇಬ್ಬರು ಗಂಭೀರ

    ದಾವಣಗೆರೆ: ಖಾಸಗಿ ಬಸ್ಸೊಂದು ಪಲ್ಟಿ ಹೊಡೆದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಜಮ್ಮಾಪುರ ಗ್ರಾಮದ ಬಳಿ ನಡೆದಿದೆ.

    ಬಸ್ ಚನ್ನಗಿರಿಯಿಂದ ಬೀರೂರಿಗೆ ಹೋಗುತ್ತಿತ್ತು. ಬಸ್‍ನಲ್ಲಿ ಒಟ್ಟು 35 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. 35 ಜನರಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಹಿಳೆಯ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಸಣ್ಣ ಪ್ರಮಾಣದಲ್ಲಿ ಗಾಯಗೊಂಡವರನ್ನು ಚನ್ನಗಿರಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೀರೂರು-ಸಮ್ಮಸಗಿ ಮಾರ್ಗ ಮಧ್ಯೆ ರಸ್ತೆ ಕಾಮಾಗಾರಿ ನಡೆಯುತ್ತಿದ್ದು, ರಸ್ತೆ ಇಕ್ಕಟ್ಟಾಗಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಬಸ್ಸನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಅಂತರ್ಜಾತಿ ಮದುವೆಯಾಗಿದ್ದಕ್ಕೆ ಸ್ವಂತ ಮಗಳನ್ನೇ ಕೊಡಲಿಯಿಂದ ಕೊಂದ ತಂದೆ

    ಅಂತರ್ಜಾತಿ ಮದುವೆಯಾಗಿದ್ದಕ್ಕೆ ಸ್ವಂತ ಮಗಳನ್ನೇ ಕೊಡಲಿಯಿಂದ ಕೊಂದ ತಂದೆ

    ಬೆಳಗಾವಿ: ಅಂತರ್ಜಾತಿ ವಿವಾಹವಾಗಿದ್ದಕ್ಕಾಗಿ ತಂದೆಯೋರ್ವ ತನ್ನ 21ರ ಹರೆಯದ ಪುತ್ರಿಯನ್ನು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಬುಲ್ಡಾನಾ ಜಿಲ್ಲೆಯ ನಿಮ್ಖೆಡಾ ಗ್ರಾಮದಲ್ಲಿ ನಡೆದಿದೆ.

    ಮನೀಷಾ ಹಿಂಗನೆ ಕೊಲೆಯಾದ ದುರ್ದೈವಿ. ಬಾಬು ಶಿವಾರೆ ತನ್ನ ಪುತ್ರಿಯನ್ನು ಬುಧವಾರ ಕೊಡಲಿಯಿಂದ ಕೊಚ್ಚಿ ಹತ್ಯಗೈದಿದ್ದಾನೆ. ಮನೀಷಾ ಬೇರೆ ಜಾತಿಗೆ ಸೇರಿದ ಗಣೇಶ್ ಎಂಬವರನ್ನು ಪ್ರೀತಿಸುತ್ತಿದ್ದರು. ಆದರೆ ಬಾಬು ಮಗಳ ಮದುವೆಯನ್ನು ಏಪ್ರಿಲ್ 20 ರಂದು ಬೇರೊಬ್ಬ ಯುವಕನೊಂದಿಗೆ ನಿಶ್ಚಯ ಮಾಡಿದ್ದರು.

    ಮನೀಷಾ ಮತ್ತು ಗಣೇಶ್ ಮನೆಯಿಂದ ಪರಾರಿಯಾಗಿ ಮಾರ್ಚ್ 23ರಂದು ಮದುವೆಯಾಗಿದ್ದರು. ಕೆಲವು ದಿನಗಳ ಬಳಿಕ ಗ್ರಾಮದಲ್ಲಿ ಎಲ್ಲಾ ಸರಿಯಾಗಿರಬಹುದು ಎಂದು ಭಾವಿಸಿದ ದಂಪತಿ ಗ್ರಾಮಕ್ಕೆ ವಾಪಸಾಗಿದ್ದಾರೆ. ಔಷಧಿಗಳ ಮಾರಾಟ ಪ್ರತಿನಿಧಿಯಾಗಿರುವ ಗಣೇಶ್ ಬುಧವಾರ ಕರ್ತವ್ಯಕ್ಕೆ ತೆರಳಿದ್ದು, ಆತನ ಪೋಷಕರು ಮನೆಯಲ್ಲಿರಲಿಲ್ಲ.

    ಈ ವೇಳೆ ಮಗಳ ಮನೆಗೆ ಬಂದ ಬಾಬು ಮಗಳನ್ನು ಕೊಲೆ ಮಾಡಿದ್ದಾನೆ. ಕೊಲೆಯ ನಂತರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಈ ಸಂಬಂಧ ಸತಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ಸಾವಿಗೂ ಮುನ್ನ ಯಾರು ನಿನನ್ನನ್ನ ಯಾರು ಕೊಂದಿದ್ದ, ನಿಮ್ಮ ತಂದೇನಾ ಅಂತಾ ಕೇಳಿದ್ದಕ್ಕೆ ಹೌದು ಅಂತಾ ಯುವತಿ ತಲೆ ಅಲ್ಲಾಡಿಸುವ ದೃಶ್ಯ ಎಲ್ಲರ ಮನಕಲಕುವಂತಿತ್ತು.

     

    https://www.youtube.com/watch?v=gbw1Nt1lMhg

     

  • ಪತಿಯ ಸಾವಿನ ಬ್ರೇಕಿಂಗ್ ನ್ಯೂಸ್ ಓದಿ ಕರ್ತವ್ಯ ಪ್ರಜ್ಞೆ ಮೆರೆದ ನಿರೂಪಕಿ!

    ಪತಿಯ ಸಾವಿನ ಬ್ರೇಕಿಂಗ್ ನ್ಯೂಸ್ ಓದಿ ಕರ್ತವ್ಯ ಪ್ರಜ್ಞೆ ಮೆರೆದ ನಿರೂಪಕಿ!

    ರಾಯ್‍ಪುರ: ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಗಂಡನ ಸುದ್ದಿಯನ್ನು ನಿರೂಪಕಿಯೊಬ್ಬರು ಓದಿರುವ ಮನಕಲಕುವ ಘಟನೆ ಛತ್ತೀಸ್‍ಘಡ್‍ನಲ್ಲಿ ನಡೆದಿದೆ.

    ಐಬಿಸಿ 24 ಹೆಸರಿನ ಚಾನೆಲ್‍ನ ಆಂಕರ್ ಸರ್‍ಪ್ರೀತ್ ಕೌರ್ ಬೆಳಗ್ಗೆ ನ್ಯೂಸ್ ಲೈವ್‍ನಲ್ಲಿರುವಾಗ ಮಹಸಮುಂದ್ ಜಿಲ್ಲೆಯ ಪಿತಾರಾ ಎಂಬಲ್ಲಿ ರೆನಾಲ್ಟೋ ಡಸ್ಟರ್ ಕಾರ್ ಅಪಘಾತವಾಗಿ ಕಾರ್‍ನಲ್ಲಿದ್ದ ಐವರ ಪೈಕಿ ಮೂವರು ಸಾವನ್ನಪ್ಪಿರೋ ಸುದ್ದಿ ಬಂದಿತ್ತು. ಕೌರ್ ಗಂಡ ಹರ್ಷಾದ್ ಕವಾಡೆ ಕೂಡ ಅಪಘಾತಕ್ಕೆ ಬಲಿಯಾಗಿದ್ರು. ಸ್ಥಳದಿಂದ ವರದಿಗಾರ ಫೋನ್ ಮೂಲಕ ಮಾಹಿತಿ ಕೊಟ್ಟಿದ್ದರು.

    ಕೌರ್ ಅವರಿಗೆ ಸುದ್ದಿಯನ್ನು ಓದುವಾಗ ಅಪಘಾತಕ್ಕೆ ಒಳಗಾದ ಕಾರು ತನ್ನ ಪತಿಯದ್ದೇ ಎಂದು ಗೊತ್ತಾಗಿತ್ತು. ಆದರೂ ಕೌರ್ ಅವರು ಸುದ್ದಿಯನ್ನು ಅರ್ಧಕ್ಕೆ ನಿಲ್ಲಿಸದೇ ಪೂರ್ಣವಾಗಿ ಓದಿ ತನ್ನ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಸ್ಟುಡಿಯೋ ದಿಂದ ಹೊರ ಬಂದು ಕೌರ್ ಭಾವುಕರಾಗಿ ಕಣ್ಣೀರು ಹಾಕಲು ಪ್ರಾರಂಭಿಸಿದರು ಎಂದು ಚಾನೆಲ್‍ನ ಮುಖ್ಯಸ್ಥರು ತಿಳಿಸಿದ್ದಾರೆ.

    ಐಬಿಸಿ ಚಾನೆಲ್ ಛತ್ತೀಸಘಡ್ ರಾಜ್ಯದ ಬಹು ವೀಕ್ಷಕರನ್ನು ಹೊಂದಿರುವ ಚಾನೆಲ್. ಕಳೆದ 9 ವರ್ಷಗಳಿಂದ ಐಬಿಸಿ 24 ಸುದ್ದಿ ವಾಹಿನಿಯಾಗಿ ಕಾರ್ಯನಿರ್ವಹಿಸುತ್ತಿದೆ. 28 ವರ್ಷದ ಕೌರ್ ಒಂದು ವರ್ಷದ ಹಿಂದೆ ಹರ್ಷದ್ ಕಾವಡೆ ಎಂಬವರನ್ನು ವಿವಾಹವಾಗಿದ್ದರು. ಇಬ್ಬರು ರಾಯ್‍ಪುರ ನಗರದಲ್ಲಿ ವಾಸವಗಿದ್ದರು.

    ನಮಗೆ ಕೌರ್ ನ್ಯೂಸ್ ಓದುವಾಗ ಅವರ ಪತಿ ತೀರಿಕೊಂಡಿರೋ ಬಗ್ಗೆ ಗೊತ್ತಿತ್ತು. ಆದ್ರೆ ಹೇಳೋ ಧೈರ್ಯ ಬರಲಿಲ್ಲ. ಕೌರ್ ಧೈರ್ಯವಂತೆ. ನಮಗೆ ಆಕೆಯ ಬಗ್ಗೆ ಹೆಮ್ಮೆ ಇದೆ ಅಂತೆ ವಾಹಿನಿ ಸಂಪಾದಕರು ತಿಳಿಸಿದ್ದಾರೆ.

     

  • ಕ್ಯಾಂಟರ್, ಬೈಕ್ ಡಿಕ್ಕಿ: ಬೈಕ್ ಸವಾರ ಸಾವು, ಮತ್ತೋರ್ವ ಗಂಭೀರ

    ಕ್ಯಾಂಟರ್, ಬೈಕ್ ಡಿಕ್ಕಿ: ಬೈಕ್ ಸವಾರ ಸಾವು, ಮತ್ತೋರ್ವ ಗಂಭೀರ

    ಮಂಡ್ಯ: ಕ್ಯಾಂಟರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಣ್ಣೇಕೊಪ್ಪಲು ಗ್ರಾಮದ ಗೇಟ್ ಬಳಿ ನಡೆದಿದೆ.

    ರಾಮನಗರ ಮೂಲದ 25 ವರ್ಷದ ಉದ್ದೀನ್ ಲಡ್ಡು ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರ. ಇನ್ನು ಬೈಕ್ ಹಿಂಬದಿ ಸವಾರ ಲೋಹಿತ್ ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಜಿಲ್ಲೆಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಯಾಂಟರ್ ಕೊಳ್ಳೆಗಾಲದಿಂದ ಮುತ್ತತ್ತಿ ಕಡೆಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಕ್ಯಾಂಟರನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

    ಅಪಘಾತಕ್ಕೆ ಕ್ಯಾಂಟರ್ ಹಾಗೂ ಬೈಕ್ ಚಾಲಕರ ಅತಿಯಾದ ವೇಗವೇ ಕಾರಣ ಎಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.