Tag: death

  • ಎಳನೀರು ಸಾಗಿಸುವ ವಾಹನ ಡಿಕ್ಕಿ ಹೊಡೆದು 5 ವರ್ಷದ ಬಾಲಕ ಸಾವು

    ಎಳನೀರು ಸಾಗಿಸುವ ವಾಹನ ಡಿಕ್ಕಿ ಹೊಡೆದು 5 ವರ್ಷದ ಬಾಲಕ ಸಾವು

    ಮಂಡ್ಯ: ಎಳನೀರು ಸಾಗಿಸುವ ವಾಹನ ಡಿಕ್ಕಿ ಹೊಡೆದು ಐದು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಗ್ರಾಮದ ವರದರಾಜು ಮತ್ತು ಸುಮಿತ್ರ ದಂಪತಿಯ ಪುತ್ರ ಜೀವನ್ ಮೃತ ದುರ್ದೈವಿ. ಬಾಲಕ ಜೀವನ್ ತನ್ನ ಮನೆ ಬಳಿ ಆಟವಾಡುತ್ತಿದ್ದಾಗ ಅಪಘಾತ ಸಂಭವಿಸಿದೆ. ತಮ್ಮ ಐದು ವರ್ಷದ ಮಗನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ಘಟನೆಗೆ ಸಂಬಂಧಿಸಿದಂತೆ ಕೆಆರ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಗಳ ಕೊರಳಿಗೆ ತಾಳಿ ಬಿದ್ದ ಕೆಲವೇ ಕ್ಷಣಗಳಲ್ಲಿ ತಾಯಿಗೆ ಹೃದಯಾಘಾತ!

    ಮಗಳ ಕೊರಳಿಗೆ ತಾಳಿ ಬಿದ್ದ ಕೆಲವೇ ಕ್ಷಣಗಳಲ್ಲಿ ತಾಯಿಗೆ ಹೃದಯಾಘಾತ!

    ಮಂಗಳೂರು: ಮಗಳ ಕೊರಳಿಗೆ ತಾಳಿ ಬಿದ್ದ ಕೆಲವೇ ಕ್ಷಣಗಳಲ್ಲಿ ತಾಯಿ ಮೃತಪಟ್ಟ ಹೃದಯವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ.

    50 ವರ್ಷದ ವಾರಿಜಾ ಮೃತ ದುರ್ದೈವಿ. ಇವರು ಬೆಳ್ತಂಗಡಿಯ ಪಿಲಿಗೂಡು ನಿವಾಸಿ ತನಿಯಪ್ಪರ ಪತ್ನಿ.

    ಇಂದು ವಾರಿಜಾ ಅವರ ಮಗಳ ಮದುವೆ ಉಪ್ಪಿನಂಗಡಿಯ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನಡೆಯುತ್ತಿತ್ತು. ಮಗಳ ಕೊರಳಿಗೆ ತಾಳಿ ಬೀಳುತ್ತಿದ್ದಂತೆಯೇ ವಾರಿಜಾ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಷ್ಟರಲ್ಲೇ ವಾರಿಜ ಮೃತಪಟ್ಟಿದ್ದಾರೆ.

    ವಾರಿಜಾ- ತನಿಯಪ್ಪ ದಂಪತಿಗೆ ಒಬ್ಬಳೇ ಮಗಳು ನವ್ಯ. ಈಕೆಗೆ ಮೊಗ್ರು ಗ್ರಾಮದ ಕಂಚಿನಡ್ಕ ನಿವಾಸಿ ಆನಂದ ಎಂಬವರ ಜೊತೆ  ಮದುವೆ ನಿಶ್ಚಯವಾಗಿತ್ತು. ಹೀಗಾಗಿ ಇಂದು ನವ್ಯಳ ವಿವಾಹದಲ್ಲಿ ತಾಯಿ ವಾರಿಜಾ ಸಂತೋಷದಿಂದಲೇ ಓಡಾಡುತ್ತಿದ್ದರು. ಅತಿಯಾದ ಸಂತೋಷ ಹಾಗೂ ಭಾವದ್ವೇಗದಿಂದಲೇ ವಾರಿಜಾ ಅವರಿಗೆ ಹೃದಯಾಘಾತವಾಗಿದೆ ಎಂದು ಹೇಳಲಾಗುತ್ತಿದೆ.

    ವಧುವಿನ ತಾಯಿಯ ಮರಣದಿಂದಾಗಿ ಇದೀಗ ಮದುವೆ ಮನೆಯಲ್ಲಿ ಸೂತಕದ ಛಾಯೆ ನಿರ್ಮಾಣವಾಗಿದೆ.

  • ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಚಾಲನೆ ಮಾಡಿ ಮಸಣ ಸೇರಿದ ಇಬ್ಬರು ಮಕ್ಕಳು

    ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಚಾಲನೆ ಮಾಡಿ ಮಸಣ ಸೇರಿದ ಇಬ್ಬರು ಮಕ್ಕಳು

    ವಿಜಯಪುರ: ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರನ್ನು ಮಕ್ಕಳು ಚಾಲನೆ ಮಾಡಿದ ಪರಿಣಾಮ ಇಬ್ಬರು ಮಕ್ಕಳು ಸಾವನ್ನಪ್ಪಿರೋ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಗ್ರಾಮದಲ್ಲಿ ನಡೆದಿದೆ

    3 ವರ್ಷ ಪ್ರಾಯದ ಶಬನಮ್ ಕುಣಬಿ ಹಾಗೂ 5 ವರ್ಷದ ಅಬುತಾಲೀಬ್ ಮೃತ ದುರ್ದೈವಿಗಳು. ಮನೆ ಮುಂದೆ ಟ್ಯಾಕ್ಟರ್ ತಂದು ನಿಲ್ಲಿಸಿದ್ದ ತಂದೆ ಕೀಯನ್ನು ಟ್ಯಾಕ್ಟರ್‍ನಲ್ಲೇ ಮರೆತು ಹೋಗಿದ್ದಾರೆ. ಇದೇ ವೇಳೆ ಆಟವಾಡಲು ಬಂದ ಮಕ್ಕಳು ಆಟವಾಡುತ್ತಾ ಕೀಯನ್ನು ತಿರುವಿದ್ದಾರೆ. ಇದರ ಪರಿಣಾಮ ಟ್ಯಾಕ್ಟರ್ ಚಾಲನೆಯಾಗಿ ಮನೆಯ ಗೋಡೆಗೆ ಗುದ್ದಿದೆ. ಇದರಿಂದಾಗಿ ಚಾಲಕ ಸೀಟನಲ್ಲಿ ಕುಳಿತು ಆಟವಾಡುತ್ತಿದ್ದ ಶಬನಮ್ ಹಾಗೂ ಅಬುತಾಲೀಬ್ ಮೃತಪಟ್ಟಿದ್ದಾರೆ.

    ಘಟನೆಯಲ್ಲಿ ಲಾಲಸಾಬ್, ಫಾತಿಮಾ ಬಾನು, ಫಹಿಮಾ ಎಂಬ ಮಕ್ಕಳು ಗಾಯಗೊಂಡಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 250 ಮೀಟರ್ ಎತ್ತರದಿಂದ ನದಿಗೆ ಬಿತ್ತು ಬಸ್: 44 ಜನರ ಸಾವು

    250 ಮೀಟರ್ ಎತ್ತರದಿಂದ ನದಿಗೆ ಬಿತ್ತು ಬಸ್: 44 ಜನರ ಸಾವು

    ಶಿಮ್ಲಾ: ಖಾಸಗಿ ಬಸ್ಸೊಂದು ನದಿಯೊಳಗೆ ಬಿದ್ದ ಪರಿಣಾಮ 44 ಪ್ರಯಾಣಿಕರು ಸಾವನ್ನಪ್ಪಿರುವ ಭೀಕರ ಅಪಾಘತ ಹಿಮಾಚಲ ಪ್ರದೇಶದ ಚೋಪಲಾ ಎಂಬಲ್ಲಿ ನಡೆದಿದೆ.

    ರಾಜಧಾನಿ ಶಿಮ್ಲಾದಿಂದ 95 ಕಿ.ಮೀ. ದೂರದಲ್ಲಿ ಟೋನ್ಸ್ ನದಿಗೆ ಬಸ್ ಬಿದ್ದಿದೆ. ಬಸ್‍ನಲ್ಲಿ ಒಟ್ಟು 52 ರಿಂದ 55 ಜನರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದುವರೆಗೂ 10 ಮಹಿಳೆಯರು, 31 ಪುರುಷರು ಹಾಗು 3 ಮಕ್ಕಳ ಮೃತ ದೇಹಗಳು ಪತ್ತೆಯಾಗಿವೆ. ಇನ್ನು ಒಂದೆರೆಡು ಶವಗಳು ನದಿಯಲ್ಲಿ ಹರಿದು ಹೋಗಿರಬಹುದು ಎಂದು ಶಂಕಿಸಲಾಗಿದೆ.

    ಬಸ್‍ನಲ್ಲಿದ್ದ ಪ್ರಯಾಣಿಕರು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ರಾಜ್ಯದವರು ಎಂದು ಹೇಳಲಾಗುತ್ತಿದೆ. ಯುಕೆ 66 ಪಿ 0045 ಎಂಬ ನಂಬರಿನ ಬಸ್ ಉತ್ತರಾಖಂಡ ರಾಜ್ಯದ ಟಿಯುನಿ ನಗರದಿಂದ ವಿಕಾಸ್‍ನಗರಕ್ಕೆ ಹೋಗುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಟೋನ್ಸ್ ನದಿ ಯಮುನಾ ನದಿಯ ಅತಿದೊಡ್ಡ ಉಪನದಿಯಾಗಿದ್ದು, ಉತ್ತರಾಖಂಡದ ಗರ್ಹವಾಲ್ ಪ್ರದೇಶದಿಂದ ಹಿಮಾಚಲ ಪ್ರದೇಶದಲ್ಲಿ ಈ ನದಿ ಹರಿಯುತ್ತದೆ.

     

  • ಅಪ್ಪ-ಅಮ್ಮ ಹೊಡೀತಿದ್ದಾರೆ, ಬೇಗ ಬಾ ಎಂದ್ಲು ಯುವತಿ- ಮನೆಗೆ ಹೋದ ಪ್ರಿಯಕರ ಹೆಣವಾದ!

    ಅಪ್ಪ-ಅಮ್ಮ ಹೊಡೀತಿದ್ದಾರೆ, ಬೇಗ ಬಾ ಎಂದ್ಲು ಯುವತಿ- ಮನೆಗೆ ಹೋದ ಪ್ರಿಯಕರ ಹೆಣವಾದ!

    ಬೆಂಗಳೂರು: ಐದು ವರ್ಷ ಪ್ರೀತಿ ಮಾಡಿದ ಗೆಳತಿ ದಿಢೀರನೇ ಮೆಸಜ್ ಮಾಡಿ ಅಪ್ಪ ಅಮ್ಮ ಹೊಡೀತ್ತಿದ್ದಾರೆ. ಮನೆಗೆ ಬೇಗ ಬಾ ಎಂದು ಹೇಳಿದ್ದಳು. ಮೆಸೇಜ್ ನೋಡಿ ಗೆಳತಿಯ ಮನೆಗೆ ಹೋದ ಯುವಕ ಸಾವನ್ನಪ್ಪಿದ್ದಾರೆ.

    ನಗರದ ಹೊರವಲಯದ ಅವಲಹಳ್ಳಿ ನಿವಾಸಿ ಮೋಹನ್ ರಾಜ್ ಮೃತ ಯುವಕ. ಮೋಹನ್ ತನ್ನದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದರು. ಅದರೆ ಇವರಿಬ್ಬರದು ಬೇರೆ ಬೇರೆ ಜಾತಿಯಾಗಿದ್ದರಿಂದ ಇಬ್ಬರ ಮನೆಯಲ್ಲೂ ವಿರೋಧವಿತ್ತು. ಹೀಗಿದ್ರೂ ಇವರಿಬ್ಬರೂ ಕಳೆದ ಐದು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು.

    ಇದನ್ನೂ ಓದಿ: 5 ವರ್ಷ ಪ್ರೀತಿಸಿ ಈಗ ನೀನು ಕಪ್ಪಗಿದ್ಯ ಎಂದು ಬೇಡ ಅಂದ್ಳು

    ರವಿವಾರ ರಾತ್ರಿ 11 ಗಂಟೆ ಸುಮಾರಿಗೆ ಮೋಹನ್‍ಗೆ ಯುವತಿ ಮೊಬೈಲ್ ನಿಂದ ಒಂದು ಮಸೇಜ್ ಬಂದಿತ್ತು. ನನ್ನ ಪೋಷಕರು ಹೊಡೆಯುತ್ತಿದ್ದಾರೆ, ಮನೆಗೆ ಬಾ ಎಂದು ಹೇಳಿದ್ದಳು. ಗಾಬರಿಗೊಂಡ ಮೋಹನ್ ಯುವತಿಯ ಮನೆಗೆ ಹೋಗಿದ್ದರು. ಆದರೆ ಯುವತಿಯ ಮನೆಯ ನಾಲ್ಕನೆಯ ಮಹಡಿಯಿಂದ ಬಿದ್ದಿದ್ದಾರೆ. ಕೂಡಲೇ ಮೋಹನ್‍ರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೋಹನ್ ಸಾವನ್ನಪ್ಪಿದ್ದಾರೆ.

    ಮೋಹನ್ ರಾಜ್ ತಂದೆ

    ನಮ್ಮ ಮಗನನ್ನು ಯುವತಿಯ ಮನೆಯವರು ಮಹಡಿಯಿಂದ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಮೋಹನ್ ತಂದೆ ನಾರಾಯಣ್ ಆರೋಪ ಮಾಡುತ್ತಿದ್ದಾರೆ. ಈ ಸಂಬಂಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯಿಂದ ಮಾತ್ರ ಮೋಹನ್ ಸಾವಿನ ಸತ್ಯಾಂಶ ತಿಳಿಯಬೇಕಿದೆ.

  • ಮ್ಯಾನ್ಮಾರ್: ವಾಟರ್ ಫೆಸ್ಟಿವಲ್ ವೇಳೆ 285 ಜನರ ಸಾವು, 1073 ಮಂದಿಗೆ ಗಾಯ

    ಮ್ಯಾನ್ಮಾರ್: ವಾಟರ್ ಫೆಸ್ಟಿವಲ್ ವೇಳೆ 285 ಜನರ ಸಾವು, 1073 ಮಂದಿಗೆ ಗಾಯ

    ಯಾಂಗಾನ್: ಮ್ಯಾನ್ಮಾರ್‍ನಲ್ಲಿ ನಡೆದ ನಾಲ್ಕು ದಿನಗಳ ವಾಟರ್ ಫೆಸ್ಟಿವಲ್‍ನಲ್ಲಿ ಒಟ್ಟು 285 ಮಂದಿ ಮೃತಪಟ್ಟು, 1,073 ಮಂದಿಗೆ ಗಾಯಗಳಾದ ಬಗ್ಗೆ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

    ಮ್ಯಾನ್ಮಾರ್ ನಲ್ಲಿ ಹೊಸ ವರ್ಷವನ್ನು ತಿಂಗ್ಯಾನ್ ವಾಟರ್ ಫೆಸ್ಟಿವೆಲ್ ಹೆಸರಿನಲ್ಲಿ ಆಚರಿಸಲಾಗುತ್ತದೆ. ಈ ವರ್ಷ ಕಳೆದ ಗುರುವಾರದಿಂದ ಭಾನುವಾರದವರೆಗೆ ವಾಟರ್ ಫೆಸ್ಟಿವಲ್ ಆಚರಿಸಲಾಯಿತು. ನಿಗದಿತ ಸ್ಥಳಗಳಲ್ಲಿ ಜಮಾವಣೆಗೊಳ್ಳುವ ಜನ ನೀರೆರಚಿಕೊಂಡು ಸಂಭ್ರಮಿಸುವುದೇ ಈ ವಾಟರ್ ಫೆಸ್ಟಿವಲ್‍ನ ವಿಶೇಷತೆ.

    ಮ್ಯಾನ್ಮಾರ್‍ನ ಪ್ಯಿ ಟಾವ್ ನಲ್ಲಿ 10, ಯಾಂಗೂನ್ ನಲ್ಲಿ 44, ಮಂಡಾಲೆಯಲ್ಲಿ 36, ಸ್ಯಾಗಿಂಗ್ ಪ್ರಾಂತ್ಯದಲ್ಲಿ 26, ತನ್ನಿಂತರಿ ಪ್ರಾಂತ್ಯದಲ್ಲಿ 11, ಬಾಗೊ ಪ್ರಾಂತ್ಯದಲ್ಲಿ 37, ಮಾಗ್‍ವೇ ಪ್ರಾಂತ್ಯದಲ್ಲಿ 11, ಮಾನ್ ರಾಜ್ಯದಲ್ಲಿ 20, ರಖಿನೆಯಲ್ಲಿ 17, ಶಾನ್ ರಾಜ್ಯದಲ್ಲಿ 29 ಹಾಗೂ ಅಯೆಯವಾಡ್ಡಿ ಪ್ರಾಂತ್ಯದಲ್ಲಿ 28 ಮಂದಿ ವಾಟರ್ ಫೆಸ್ಟಿವೆಲ್ ವೇಳೆ ಮೃತಪಟ್ಟಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಒಟ್ಟು 1,200 ಕ್ರಿಮಿನಲ್ ಕೇಸ್‍ಗಳು ದಾಖಲಾಗಿದೆ. ಕೊಲೆ, ಕಾರು ಅಪಘಾತ, ಮಾದಕ ವ್ಯಸನ, ಕಳ್ಳತನ, ಶಸ್ತ್ರಾಸ್ತ್ರ ಹೊಂದಿದ್ದ ಬಗ್ಗೆ ಹಾಗೂ ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಈ ಪ್ರಕರಣಗಳನ್ನ ದಾಖಲಿಸಿಕೊಳ್ಳಲಾಗಿದೆ ಅಂತಾ ವರದಿಯಾಗಿದೆ.

    ಕಳೆದ ವರ್ಷದ ವಾಟರ್ ಫೇಸ್ಟಿವಲ್‍ನಲ್ಲಿ ಒಟ್ಟು 272 ಮಂದಿ ಮೃತಪಟ್ಟು, 1,086ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

  • ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಮಹಿಳೆ ಸಾವು

    ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಮಹಿಳೆ ಸಾವು

    ಧಾರವಾಡ: ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಮಹಿಳೆ ಸಾವನ್ನಪ್ಪಿರುವ ಘಟನೆ ಸೋಮವಾರ ರಾತ್ರಿ ಧಾರವಾಡದ ಬೋಗೂರ ಗ್ರಾಮದಲ್ಲಿ ನಡೆದಿದೆ.

    ಭೀಮವ್ವ ಮಾಳವಾಡ ಮೃತ ಮಹಿಳೆ. ಭೀಮವ್ವ 14 ತಿಂಗಳ ಹಿಂದೆ ಗ್ರಾಮದ ನಾಗಪ್ಪ ಎಂಬುವನನ್ನು ಮದುವೆ ಆಗಿದ್ದರು. ವರದಕ್ಷಿಣೆ ಕಿರುಕುಳವೇ ಭೀಮವ್ವ ಸಾವಿಗೆ ಕರಣ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಇತ್ತ ಭೀಮವ್ವ ಪತಿ ನಾಗಪ್ಪ ಘಟನೆ ಬಳಿಕ ಪರಾರಿಯಾಗಿದ್ದಾನೆ. ಮಹಿಳೆಯ ಅತ್ತೆ ಮಾವನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

    ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಾಲ್ ತರಲು ಹೋಗಿ ಮಣ್ಣಿನಲ್ಲಿ ಸಿಲುಕಿದೆವು- ಸಾವಿಗೂ ಮುನ್ನ ಹರ್ಷಲ್ ಕೊನೇ ಮಾತು

    ಬಾಲ್ ತರಲು ಹೋಗಿ ಮಣ್ಣಿನಲ್ಲಿ ಸಿಲುಕಿದೆವು- ಸಾವಿಗೂ ಮುನ್ನ ಹರ್ಷಲ್ ಕೊನೇ ಮಾತು

    ಮೈಸೂರು: ಮೈಸೂರಿನ ಬೆಲವತ್ತ ಗ್ರಾಮದಲ್ಲಿ ಕುದಿಯುತ್ತಿರೋ ಭೂಮಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದ ಬಾಲಕ ಹರ್ಷಲ್ ಮೃತಪಟ್ಟಿದ್ದಾರೆ. ಆದ್ರೆ ಹರ್ಷಲ್ ಸಾವಿಗೂ ಮುನ್ನ ಮಾತನಾಡಿದ್ದ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    `ಅಣೆಕಟ್ಟಿನ ಬಳಿಯಿರೋ ತೋಟದಲ್ಲಿ ಕ್ರಿಕೆಟ್ ಆಟವಾಡಲೆಂದು 5, 6 ಮಂದಿ ಗೆಳೆಯರು ಸೇರಿ ಹೋಗಿದ್ವಿ. ಆಟವಾಡುತ್ತಿದ್ದ ವೇಳೆ ಯಶವಂತ್ ಅಣ್ಣ ಬಾಲ್ ಜೋರಾಗಿ ಹೊಡೆದರು. ಬಾಲ್ ತರಲು ಹೋದೆವು. ಈ ವೇಳೆ ಮನೋಜ್ ಬಾಲ್ ತೆಗೆದುಕೊಂಡು ಬರಲು ಹೋಗಿ ಮಣ್ಣಿನಲ್ಲಿ ಸಿಲುಕಿಕೊಂಡು ಕಿರುಚಿದ. ತಕ್ಷಣ ಅವನನ್ನು ಎತ್ತಿಕೊಳ್ಳಲು ನಾನು ಹೋದೆ. ಆದ್ರೆ ಅವನು ನನ್ನ ಕೈಗೆ ಸಿಕ್ಕಿಲ್ಲ. ಇತ್ತ ನಾನು ನಿಂತಲ್ಲಿ ಮಣ್ಣು ಕುಸಿಯುತ್ತಿದ್ದು ಕಾಲು ಬೆಂಕಿಯಲ್ಲಿ ಬೇಯುತ್ತಿತ್ತು. ಈ ವೇಳೆ ಆ ಕಡೆಯಿಂದ ಎದ್ದು ಬಂದು ಮನೋಜ್ ನನ್ನನ್ನು ಹೇಗೋ ಮೇಲಕ್ಕೆತ್ತಿದ. ಎದ್ದ ಬಳಿಕ ರೋಡಿನ ವೆರೆಗೆ ನಡೆದುಕೊಂಡು ಬಂದು ಅಲ್ಲಿ ಇಬ್ಬರು ಅಣ್ಣಂದಿರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಬೇಡಿಕೊಂಡೆವು. ಹಾಗಾಗಿ ಅವರು ನಮ್ಮನ್ನ ಆಸ್ಪತ್ರೆಗೆ ಸೇರಿಸಿದ್ರು ಅಂತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಹರ್ಷಲ್ ಘಟನೆಯ ಬಗ್ಗೆ ವಿವರಿಸಿದ್ದಾನೆ.

    ನನಗೆ ಅಣ್ಣ ಬೇಕು: ಬೆಂಕಿಯ ಕೆನ್ನಾಲಿಗೆಗೆ ಬಲಿಯಾದ ಹರ್ಷಲ್ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಅಣ್ಣ ನನ್ನ ಜೊತೆ ಚೆನ್ನಾಗಿದ್ದ, ಚೆನ್ನಾಗಿ ಮಾತಾಡ್ತಿದ್ದ. ಕ್ರಿಕೆಟ್ ಆಡಿಕೊಂಡು ಹೋಗಿ ಬರ್ತೀನಿ ಅಂತಾ ಹೇಳಿ ಹೋಗಿದ್ರು. ಅಣ್ಣ ರನ್ನಿಂಗ್ ರೇಸ್‍ನಲ್ಲಿ ಫಸ್ಟ್ ಇದ್ರು. ಇದೀಗ ಅಣ್ಣ ನಮ್ಮನ್ನ ಬಿಟ್ಟು ಹೋಗಿದ್ದಾರೆ. ಅಣ್ಣ ನನಗೆ ಬೇಕು ಅಂತಾ ಹರ್ಷಲ್ ಸಹೋದರ ಪ್ರಜ್ವಲ್ ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ.

    ಹರ್ಷಲ್ ಸಾವಿಗೆ ಆ ಘಟನಾ ಸ್ಥಳದಲ್ಲಿ ರಸಾಯನಿಕ ಸೋರಿಕೆಯಾಗುತ್ತೀರುವುದೇ ಕಾರಣವೆಂದು ಹರ್ಷಲ್ ಚಿಕ್ಕಮ್ಮ ಆರೋಪಿಸಿದ್ದಾರೆ. ಅಲ್ಲದೆ ಹರ್ಷಲ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಓದು-ಆಟದಲ್ಲೂ ಮುಂದೆಯಿದ್ದ ಅಂತಾ ಅಳಲು ತೋಡಿಕೊಂಡ್ರು.

    ಹರ್ಷಲ್ ತಾಯಿ ಆಸ್ಪತ್ರೆಗೆ ದಾಖಲು: ಮಗನ ಸಾವಿನಿಂದ ನೊಂದ ಹರ್ಷಲ್ ತಾಯಿ ಜಾನ್ಸಿ ಅಸ್ವಸ್ಥಗೊಂಡಿದ್ದು, ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    https://www.youtube.com/watch?v=Btgx1uyjnrQ

    https://www.youtube.com/watch?v=ywVV_4ReqUo

    https://www.youtube.com/watch?v=D9woM-UTAhc

    https://www.youtube.com/watch?v=zhnfw0flfZ8

  • ಹಾವೇರಿ: ಸ್ಪರ್ಧೆ ನೋಡುತ್ತಿದ್ದಾಗ ಹೋರಿ ತಿವಿದು ವ್ಯಕ್ತಿ ಸಾವು

    ಹಾವೇರಿ: ಸ್ಪರ್ಧೆ ನೋಡುತ್ತಿದ್ದಾಗ ಹೋರಿ ತಿವಿದು ವ್ಯಕ್ತಿ ಸಾವು

    ಹಾವೇರಿ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿಯೊಂದು ತಿವಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ನಡೆದಿದೆ.

    ಶಿಗ್ಗಾಂವಿ ತಾಲೂಕಿನ ಹುಲಿಕಟ್ಟಿ ಗ್ರಾಮದ ನಿವಾಸಿಯಾದ 45 ವರ್ಷದ ರೇವಣಗೌಡ ಪಾಟೀಲ ಮೃತ ವ್ಯಕ್ತಿ. ಸವಣೂರು ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಎಪಿಎಂಸಿ ಆವರಣದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಪಟ್ಟಣದ ವೀರಭದ್ರೇಶ್ವರ ಭಕ್ತ ಮಂಡಳಿ ಈ ಹೋರಿ ಸ್ಪಧೆಯನ್ನು ಏರ್ಪಡಿಸಿತ್ತು. ರೇವಣಗೌಡ ಅವರು ಸವಣೂರು ಪಟ್ಟಣದಲ್ಲಿ ನಡೆಯುತ್ತಿದ್ದ ಹೋರಿ ಬೆದರಿಸುವ ಸ್ಪರ್ಧೆಯನ್ನು ನೋಡಲು ಆಗಮಿಸಿದ್ದರು.

    ಸ್ಪರ್ಧೆಯನ್ನು ನೋಡುವಾಗ ಹೋರಿಯೊಂದು ನೇರವಾಗಿ ರೇವಣಗೌಡರ ಹೊಟ್ಟೆಗೆ ತಿವಿದಿದೆ. ತೀವ್ರವಾಗಿ ಗಾಯಗೊಂಡ ರೇವಣಗೌಡರನ್ನು ಸವಣೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಅಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ರೇವಣಗೌಡರು ಸಾವನ್ನಪ್ಪಿದ್ದಾರೆ.

    ಕಾರ್ಯಕ್ರಮ ಆಯೋಜಕರು ಯಾವುದೇ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳದ ಆರೋಪದ ಮೇಲೆ ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಮೈಸೂರು: ಕುದಿಯುತ್ತಿರೋ ಭೂಮಿ ಪರಿಶೀಲನೆಗೆ ಭೂ ವಿಜ್ಞಾನಿಗಳು ಭೇಟಿ- ಇಂದು ಹರ್ಷಲ್ ಅಂತ್ಯಕ್ರಿಯೆ

    ಮೈಸೂರು: ಕುದಿಯುತ್ತಿರೋ ಭೂಮಿ ಪರಿಶೀಲನೆಗೆ ಭೂ ವಿಜ್ಞಾನಿಗಳು ಭೇಟಿ- ಇಂದು ಹರ್ಷಲ್ ಅಂತ್ಯಕ್ರಿಯೆ

    ಮೈಸೂರು: ಇಲ್ಲಿನ ಹೊರವಲಯದ ಬೆಲವತ್ತ ಗ್ರಾಮದ ಬಳಿ ಭೂಮಿ ಕೊತಕೊತನೆ ಕುದಿಯುತ್ತಿದ್ದು, ಇದರ ಅರಿವಿಲ್ಲದೆ ಬಹಿರ್ದೆಸೆಗೆ ತೆರಳಿದ್ದ 14 ವರ್ಷದ ಹರ್ಷಲ್ ಬೆಂಕಿಗೆ ಸಿಲುಕಿ ಮೃತಪಟ್ಟಿದ್ದಾರೆ.

    ಕುಂಬಾರ ಕೊಪ್ಪಲು ನಿವಾಸಿ ಸೋಮಣ್ಣ ಎಂಬುವರಿಗೆ ಸೇರಿರುವ 4 ಎಕರೆ ಜಮೀನಿನಲ್ಲಿ ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಮತ್ತೊಬ್ಬ ಬಾಲಕನಿಗೆ ಗಂಭೀರ ಗಾಯವಾಗಿದೆ.

    ಪ್ರಕೃತಿಯ ವೈಚಿತ್ರ್ಯದ ಬಗ್ಗೆ ಮೇಟಗಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಮಾಡಿದ್ದಾರೆ. ಹಗಲು ಹೊತ್ತು ಭೂಮಿ ಕುದಿಯುತ್ತಿದ್ದ ದೃಶ್ಯ ಕಂಡು ಬಂದಿದೆ. ಜಮೀನಿನ ಪಕ್ಕದಲ್ಲೇ ನೋಟು ಪ್ರಿಂಟ್ ಮಾಡುವ ಆರ್‍ಬಿಐ ಸಂಸ್ಥೆ ಹಾಗೂ ಸಾವಿರಾರು ಕಾರ್ಖಾನೆಗಳು ಹಾಗು ಇತರೆ ಕಂಪನಿಗಳು ಇವೆ. ಅಲ್ಲೇ ಇರೋ ಟೈರ್ ಕಂಪನಿಯಿಂದ ರಾಸಾಯನಿಕ ವಸ್ತು ಹೊರ ಬಿಡುತ್ತಿರುವ ಶಂಕೆ ಇದೆ. ಅಲ್ಲದೇ ಕಾರ್ಖಾನೆಗಳು ತಮ್ಮ ತ್ಯಾಜ್ಯಗಳನ್ನ ಈ ಜಾಗದಲ್ಲಿ ತಂದು ಸುರೀತಿದ್ದಾರೆ. ಸ್ಥಳದಲ್ಲಿ ಒಂದಷ್ಟು ಕೆಮಿಕಲ್‍ಗಳು ಕಂಡುಬರ್ತಿವೆ. ಒಟ್ಟಿನಲ್ಲಿ ಮಣ್ಣಿನ ಪರೀಕ್ಷೆ ನಂತರವೇ ಸೂಕ್ತ ಕಾರಣ ಪತ್ತೆಯಾಗಬೇಕಿದೆ ಅಂತಾ ವಿಜ್ಞಾನಿಗಳು ತಿಳಿಸಿದ್ದಾರೆ.

    ಭೂಮಿ ಕುದಿಯುತ್ತಿರೋ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಒಂದು ದಿನದ ನಂತ್ರ ಎಚ್ಚೆತ್ತ ಭೂವಿಜ್ಞಾನಿಗಳು ಬೆಳ್ಳಂಬೆಳಗ್ಗೆ ಘಟನಾ ಸ್ಥಳಕ್ಕೆ ಬಂದಿದ್ದಾರೆ. ಬೆಂಕಿ ಹಾಗೂ ಭೂಮಿಯನ್ನು ಪರಿಶೀಲಿಸುತ್ತಿದ್ದಾರೆ. ಆದ್ರೆ, ಇದುವರೆಗೂ ಡಿಸಿ, ತಹಶೀಲ್ದಾರ್, ಎಂಎಲ್‍ಎ, ಎಂಪಿ ಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಅಂತಾ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಭಾರೀ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ.

    ಇಂದು ಅಂತ್ಯಕ್ರಿಯೆ: ಭೂಮಿಯ ಬೆಂಕಿಗೆ ಬಲಿಯಾದ ಹರ್ಷಿಲ್ ಅಂತ್ಯಕ್ರಿಯೆ ನಡೆಯಲಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.