Tag: death

  • ಕುಡಿದ ಮತ್ತಲ್ಲಿ 10 ವರ್ಷದ ಮಗಳನ್ನೇ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ

    ಕುಡಿದ ಮತ್ತಲ್ಲಿ 10 ವರ್ಷದ ಮಗಳನ್ನೇ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ

    ಕೊಪ್ಪಳ: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ತಾಯಿ ಹಾಗೂ ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ತಾನೂ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಜಿಲ್ಲೆಯ ಗಂಗಾವತಿ ತಾಲೂಕಿನ ಕಕ್ಕರಗೊಳು ಗ್ರಾಮದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಕುಡಿದ ಅಮಲಿನಲ್ಲಿ 40 ವರ್ಷದ ಹೊನ್ನುರಪ್ಪ ಕಟಿಗೇರ ಈ ಕೃತ್ಯ ಎಸಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ಆರೋಪಿ ನಾಲ್ವರು ಮಕ್ಕಳು ಮತ್ತು ತಾಯಿ ಮೇಲೆ ಹಲ್ಲೆ ನಡೆಸಿದ್ದು, 10 ವರ್ಷದ ಮಗಳು ಪವಿತ್ರಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.ಉಳಿದ ಮೂವರು ಮಕ್ಕಳು ಹಾಗೂ ತಾಯಿಯ ಸ್ಥಿತಿ ಚಿಂತಾಜನಕವಾಗಿದೆ.

    60 ವರ್ಷದ ತಾಯಿ ಈರಮ್ಮ, ಮಕ್ಕಳಾದ 7 ವರ್ಷದ ತ್ರಿವೇಣಿ, 5 ವರ್ಷದ ಈರಣ್ಣ ಹಾಗೂ 3 ವರ್ಷದ ಸಿದ್ದಪ್ಪ ಸ್ಥಿತಿ ಚಿಂತಾಜನಕವಾಗಿದ್ದು, ಕೊಪ್ಪಳದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರು ದಿನದ ಹಿಂದೆ ಹೆಂಡತಿ ವಿಶಾಲಾಕ್ಷಿಯನ್ನು ಹೊಡೆದು ತವರಿಗೆ ಓಡಿಸಿದ್ದ ಆರೋಪಿ ಇದೀಗ ಈ ಕೃತ್ಯ ಎಸಗಿದ್ದಾನೆ.

    ಈ ಬಗ್ಗೆ ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ನೀರಿನಲ್ಲಿ ಮುಳುಗುತ್ತಿರುವ ಬಾಲಕರನ್ನು ರಕ್ಷಿಸಲು ಮುಂದಾದ ಯುವತಿ ನೀರುಪಾಲು

    ನೀರಿನಲ್ಲಿ ಮುಳುಗುತ್ತಿರುವ ಬಾಲಕರನ್ನು ರಕ್ಷಿಸಲು ಮುಂದಾದ ಯುವತಿ ನೀರುಪಾಲು

    ಬಾಗಲಕೋಟೆ: ನೀರಿರುವ ಕ್ವಾರಿಯಲ್ಲಿ ಮುಳುಗುತ್ತಿದ್ದ ಬಾಲಕರನ್ನು ರಕ್ಷಿಸಲು ಮುಂದಾದ ಯುವತಿ ಸೇರಿದಂತೆ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಹೊಸುರು ತಾಂಡಾದಲ್ಲಿ ನಡೆದಿದೆ.

    ನೇತ್ರಾವತಿ ಚವ್ಹಾಣ್ (18) ಮತ್ತು ಗಣೇಶ್ ರಾಥೋಡ್ (10) ಮೃತ ದುರ್ದೈವಿಗಳು. ಇತ್ತೀಚಿಗೆ ಮಳೆ ಆಗಿದ್ದರಿಂದ ಕಲ್ಲು ಕ್ವಾರಿಯಲ್ಲಿ ನೀರು ತುಂಬಿಕೊಂಡಿತ್ತು. ಇಂದು ನೇತ್ರಾವತಿ ಬಟ್ಟೆ ತೊಳೆಯಲು ಹೋದಾಗ ಗಣೇಶ್ ಮತ್ತು ಮುತ್ತು ಎಂಬ ಬಾಲಕರು ನೀರಲ್ಲಿ ಆಟವಾಡುತ್ತಿದ್ದರು. ನೀರಲ್ಲಿ ಆಟವಾಡುತ್ತಿದ್ದ ಇಬ್ಬರು ಬಾಲಕರು ಆಯತಪ್ಪಿ ಮುಳಗತೊಡಗಿದ್ದರು.

    ಸ್ಥಳದಲ್ಲಿದ್ದ ನೇತ್ರಾವತಿ ಮುಳುಗುತ್ತಿದ್ದ ಮುತ್ತು ಎಂಬ ಬಾಲಕನನ್ನು ರಕ್ಷಿಸಿದ್ದರು. ಇನ್ನು ನೀರಲ್ಲಿ ಉಳಿದ ಇನ್ನೊಬ್ಬ ಗಣೇಶ್‍ನನ್ನು ರಕ್ಷಿಸಲು ಮುಂದಾಗಿದ್ದಾಗ, ದುರಾದೃಷ್ಟವಶಾತ್ ಗಣೇಶ್ ಜೊತೆ ಯುವತಿ ನೇತ್ರವಾತಿಯೂ ನೀರು ಪಾಲಾಗಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಇಳಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಲಾರಿ-ಬಸ್ ಮುಖಾಮುಖಿ: ಓರ್ವ ಮಹಿಳೆ ಸ್ಥಳದಲ್ಲೇ ಸಾವು

    ಲಾರಿ-ಬಸ್ ಮುಖಾಮುಖಿ: ಓರ್ವ ಮಹಿಳೆ ಸ್ಥಳದಲ್ಲೇ ಸಾವು

    ಮಡಿಕೇರಿ: ಲಾರಿ ಹಾಗು ಬಸ್ ಮುಖಾಮುಖಿಯಾದ ಪರಿಣಾಮ ಮಹಿಳೆಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಏಳನೇ ಹೊಸಕೋಟೆ ಬಳಿ ನಡೆದಿದೆ.

    ಲಾರಿ ಮತ್ತು ಖಾಸಗಿ ಮಿನಿ ಬಸ್ ನಡುವೆ ಈ ಅಪಘಾತ ಸಂಭವಿಸಿದ್ದು, ಬಸ್‍ನಲ್ಲಿದ್ದ ಮೋಹನಾ(65) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ಮೂಲತಃ ತಮಿಳುನಾಡಿನ ತಿರುಪೂರ್ ಜಿಲ್ಲೆಯವರು ಎಂದು ತಿಳಿದುಬಂದಿದೆ. ತಮಿಳುನಾಡಿನಿಂದ 15 ಜನ ಕೊಡಗು ಜಿಲ್ಲೆಗೆ ಪ್ರವಾಸಕ್ಕೆಂದು ಬಂದಿದ್ದರು ಎಂದು ಹೇಳಲಾಗಿದೆ. ಲಾರಿ ಚಾಲಕನ ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದೆ.

    ಘಟನೆಯಿಂದ ಬಸ್ಸಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಾಳಗಿವೆ. ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಾಗಲಕೋಟೆ: ಮರದ ಕೆಳಗೆ ಮಲಗಿದ್ದಾಗ ಜೆಸಿಬಿ ಹರಿದು ಮಗು ಸಾವು

    ಬಾಗಲಕೋಟೆ: ಮರದ ಕೆಳಗೆ ಮಲಗಿದ್ದಾಗ ಜೆಸಿಬಿ ಹರಿದು ಮಗು ಸಾವು

    ಬಾಗಲಕೋಟೆ: ಜೆಸಿಬಿ ಹರಿದು 1 ವರ್ಷ 4 ತಿಂಗಳ ಮಗುವೊಂದು ಸಾವನ್ನಪ್ಪಿದ ದಾರುಣ ಘಟನೆ ಮುಧೋಳ ನಗರದ ಹೌಸಿಂಗ್ ಕಾಲೋನಿಯಲ್ಲಿ ನಡೆದಿದೆ.

    ನಗರದ ಪರಮಾನಂದ್ ಸೈದಾಪುರ ಅವರ ಪುತ್ರಿ ಕೀರ್ತಿ ಮೃತ ದುರ್ದೈವಿ. ಬಿಸಿಲಿನ ಝಳಕ್ಕೆ ಮರದ ಕೆಳಗೆ ಮಲಗಿಸಿದ್ದ ಸಂದರ್ಭದಲ್ಲಿ ಮಗುವಿನ ಮೇಲೆ ಜೆಸಿಬಿ ಹರಿದು ಈ ಅವಘಡ ಸಂಭವಿಸಿದೆ.

    ಸ್ಥಳಕ್ಕೆ ಮುಧೋಳ ಪಿಎಸ್‍ಐ ಸಂತೋಷ ಹಳ್ಳೂರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾಜ್ಯದ ಹಲವೆಡೆ ಗಾಳಿ ಸಹಿತ ಭಾರೀ ಮಳೆ: ಸಿಡಿಲು ಬಡಿದು ಮೂವರ ಸಾವು

    ರಾಜ್ಯದ ಹಲವೆಡೆ ಗಾಳಿ ಸಹಿತ ಭಾರೀ ಮಳೆ: ಸಿಡಿಲು ಬಡಿದು ಮೂವರ ಸಾವು

    ಬೆಂಗಳೂರು: ರಾಜ್ಯದ ಹಲವೆಡೆ ಗಾಳಿ ಸಹಿತ ಮಳೆಯಾಗಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಯಾಗಿದೆ. ಮೈಸೂರು, ಕೋಲಾರ, ಚಾಮರಾಜನಗರ, ಧಾರವಾಡ, ಹುಬ್ಬಳ್ಳಿ, ಯಾದಗಿರಿ, ದಾವಣಗೆರೆ ಸೇರಿದಂತೆ ಹಲವೆಡೆ ಮಳೆಯಾಗಿದೆ.

    ಕೋಲಾರದಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದು, ಮೆಣಸಿಕಾಯಿ, ಟೊಮೆಟೋ ಮುಂತಾದ ಬೆಳೆಗಳು ನಾಶವಾಗಿದ್ದು, ರೈತರು ನಷ್ಟ ಅನುಭವಿಸಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನಲ್ಲಿ ಗುರುವಾರ ಸುರಿದ ಮಳೆಗೆ ರೈತರು ಬರದ ನಡುವೆಯೂ ಕಷ್ಟಪಟ್ಟು ಬೆಳೆದಿದ್ದ ಬೆಳೆಗಳು ನೆಲಕಚ್ಚಿವೆ. ಶಿಗ್ಗಾಂವಿ ತಾಲೂಕಿನ ನೀರಲಗಿ ಗ್ರಾಮದ ನಿವಾಸಿ ಉಮೇಶ್ ಪಾಟೀಲ್ (18) ಎಂಬವರಿಗೆ ಸಿಡಿಲು ತಾಗಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಉಮೇಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಚಾಮರಾಜನಗರ ಜಿಲ್ಲೆಯಲ್ಲೂ ಮಳೆಯಾಗಿದ್ದು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಧಾರವಾಡ ನಗರದಲ್ಲಿ ಮಧ್ಯಾಹ್ನದಿಂದ ಮಳೆ ಸುರಿಯುತ್ತಿದ್ದು, ರಸ್ತೆಯ ಬದಿಯ ಬೃಹತ್ ಮರುಗಳು ಬಿದ್ದಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಇನ್ನೂ ಧಾರವಾಡ ನಗರದ ಕೆಲವು ಕಡೆ ಮರಗಳು ವಾಹನಗಳ ಮೇಲೆಯೇ ಬಿದ್ದಿದ್ದರಿಂದ ಬೈಕ್‍ಗಳು ಜಖಂಗೊಂಡಿವೆ.

    ಚಿಕ್ಕಬಳ್ಳಾಪುರದಲ್ಲಿ ಅಲಿಕಲ್ಲು ಸಹಿತ ಮಳೆಯಾಗಿದ್ದರಿಂದ ಗೇರಹಳ್ಳಿ ಗ್ರಾಮದ ರೈತ ಸುಬ್ಬರಾಯಪ್ಪ ಅವರು ಅಪಾರ ಸಾಲ ಮಾಡಿ ಬೆಳದಿದ್ದ ದ್ರಾಕ್ಷಿ ಬೆಳೆ ಸಂಪೂರ್ಣ ನಾಶವಾಗಿದೆ. ದಾವಣಗೆರೆಯಲ್ಲಿ ತುಂತುರು ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಸ್ಥಳೀಯರಲ್ಲಿ ಖುಷಿ ತಂದಿದೆ.

    ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಸಿಡಿಲು ಬಡಿದು ಆಕಾಶ್ (10), ಪುಟ್ಟ (8) ಮಕ್ಕಳು ಸಾವನ್ನಪ್ಪಿದ್ದಾರೆ. ಮೈಸೂರಿನಲ್ಲಿಯೂ ಕೃಷ್ಣ ಮತ್ತು ಲಕ್ಷ್ಮಿ ದಂಪತಿಗಳ 4 ತಿಂಗಳ ಗಂಡು ಮಗು ಸಾವನ್ನಪ್ಪಿದೆ. ಯಾದಗಿರಿ ತಾಲೂಕಿನ ಹಳೆಗೇರಾ ಗ್ರಾಮದಲ್ಲಿ ಸಿಡಿಲು ತಾಗಿ ಕುರಿಗಾಹಿಯೊಬ್ಬರ 30 ಕುರಿಗಳು ಸೇರಿದಂತೆ ಒಂದು ನಾಯಿ ಸಾವನ್ನಪ್ಪಿವೆ.

     

  • ಭಾರೀ ಮಳೆಯಿಂದ ಮನೆಗೆ ನೀರು ನುಗ್ಗಿ 4 ತಿಂಗಳ ಮಗು ಸಾವು!

    ಭಾರೀ ಮಳೆಯಿಂದ ಮನೆಗೆ ನೀರು ನುಗ್ಗಿ 4 ತಿಂಗಳ ಮಗು ಸಾವು!

    ಮೈಸೂರು: ಮೈಸೂರಿನ ಟಿ. ನರಸೀಪುರದ ಕೊಳಚೆ ಪ್ರದೇಶವಾದ ದಾವಣಗೆರೆ ಕಾಲೋನಿಯಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಯ ಪರಿಣಾಮ ಮನೆಗಳಿಗೆ ನೀರು ನುಗ್ಗಿ 4 ತಿಂಗಳ ಹಸುಗೂಸು ಮೃತಪಟ್ಟಿರೋ ದಾರುಣ ಘಟನೆ ನಡೆದಿದೆ.

    ಕೃಷ್ಣ ಮತ್ತು ಲಕ್ಷ್ಮಿ ದಂಪತಿಗಳ ಗಂಡು ಮಗು ಮೃತ ದುರ್ದೈವಿ. ರಾತ್ರಿ ಏಕಾಏಕಿ ಜೋರಾಗಿ ಮಳೆ ಸುರಿದಿದ್ದು, ಜೋಪಡಿಯಂಥ ಮನೆಗೆ ನೀರು ನುಗ್ಗಿ ಹಸುಗೂಸು ಮೃತಪಟ್ಟಿದೆ. ಇದೇ ರೀತಿ ಆ ಏರಿಯಾದಲ್ಲಿನ ಎಲ್ಲಾ ಮನೆಗಳಿಗೂ ಮಳೆ ನೀರು ಹಾಗೂ ಚರಂಡಿ ನೀರು ನುಗ್ಗಿ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ.

    ಈ ಪ್ರದೇಶದಲ್ಲಿ 36 ಕುಟುಂಬವಿದ್ದು, 150 ಜನರು ವಾಸಿಸುತ್ತಿದ್ದಾರೆ. ಕಳೆದ 18 ವರ್ಷಗಳಿಂದ ಇದೇ ಪ್ರದೇಶದಲ್ಲಿ ಇವರೆಲ್ಲಾ ವಾಸವಿದ್ದು ಕನಿಷ್ಟ ಮೂಲಭೂತ ಸೌಕರ್ಯ ಕಲ್ಪಿಸುವಲ್ಲೂ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಕಳೆದ ವರ್ಷ ಇದೇ ರೀತಿಯ ಮಳೆ ಸಂದರ್ಭದಲ್ಲಿ ಹೆಗ್ಗಣಗಳು ಮನೆಗೆ ನುಗ್ಗಿ ಮಕ್ಕಳ ಕೈ ಬೆರಳು, ಕಾಲಿನ ಬೆರಳನ್ನು ತುಂಡರಿಸಿದ್ದವು.

  • ಮಂಡ್ಯದಲ್ಲಿ ವಿಚಾರಣಾಧೀನ ಕೈದಿ ಸಾವು- ಕಾರಾಗೃಹ ಅಧೀಕ್ಷಕರ ವಿರುದ್ಧ ಕೈದಿಗಳು ಆಕ್ರೋಶ

    ಮಂಡ್ಯದಲ್ಲಿ ವಿಚಾರಣಾಧೀನ ಕೈದಿ ಸಾವು- ಕಾರಾಗೃಹ ಅಧೀಕ್ಷಕರ ವಿರುದ್ಧ ಕೈದಿಗಳು ಆಕ್ರೋಶ

    ಮಂಡ್ಯ: ವಿಚಾರಣಾಧೀನ ಕೈದಿಯ ಸಾವಿಗೆ ಕಾರಾಗೃಹ ಅಧೀಕ್ಷಕರ ನಿಲಕ್ಷ್ಯವೇ ಕಾರಣ ಅಂತಾ ಆರೋಪಿಸಿ ಇದೀಗ ಜೈಲಿನೊಳಗೆ ಕೈದಿಗಳು ಪ್ರತಿಭಟನೆ ನಡೆಸಿದ್ದಾರೆ.

    ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿ ಆನಂದ್ ಎಂಬಾತನೇ ಮೃತ ದುರ್ದೈವಿ. ವರ್ಷದ ಹಿಂದೆ ಪೋಕ್ಸೋ ಕಾಯ್ದೆಯಡಿ ಬಂಧಿಯಾಗಿದ್ದ ಆನಂದ್‍ಗೆ ಮಂಗಳವಾರ ಅನಾರೋಗ್ಯ ಕಾಣಿಸಿಕೊಂಡಿತ್ತು. ಆತನನ್ನ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆನಂದ್ ಇಂದು ಮುಂಜಾನೆ 3 ಗಂಟೆ ಸಮಯದಲ್ಲಿ ಅಸುನೀಗಿದ್ದಾನೆ.

    ಆನಂದ್ ಸಾವಿಗೆ ಕಾರಾಗೃಹದ ಅಧೀಕ್ಷಕ ಲೋಕೇಶ್ ಅವ್ರೇ ಕಾರಣ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸಿದ್ರೆ ಬದುಕುಳಿಯುತ್ತಿದ್ದ ಅಂತಾ ಆರೋಪಿಸಿ ಜೈಲೊಳಗಿರೋ ಕೈದಿಗಳು ಆಕ್ರೋಶಗೊಂಡು ಪ್ರತಿಭಟಿಸಿದ್ರು. ಆನಂದ್ ಜೊತೆ ಬಂಧಿಯಾಗಿದ್ದ ಇನ್ನೊಬ್ಬ ಕೈದಿಯ ತಾಯಿ, ತನ್ನ ಮಗನೂ ಕಷ್ಟಕ್ಕೆ ಸಿಲುಕಿದ್ದಾನೆ. ಆತನನ್ನ ನೋಡಬೇಕು. ಬಾಗಿಲು ತೆಗೆಯಿರಿ ಅಂತಾ ಗೋಳಾಡ್ತ, ಕಾರಾಗೃಹ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ರು.

    ಘಟನೆಯ ಬಗ್ಗೆ ತಿಳಿದ ಮಂಡ್ಯ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಜೈಲಿಗೆ ಭೇಟಿ ನೀಡಿ, ಪ್ರತಿಭಟನಾ ನಿರತ ಕೈದಿಗಳ ಜೊತೆ ಮಾತುಕತೆ ನಡೆಸಿದ್ದಾರೆ.

  • ಅತೀ ವೇಗದ ಚಾಲನೆಗೆ ಸಚಿವರ ಪುತ್ರನ ದುರ್ಮರಣ!

    ಅತೀ ವೇಗದ ಚಾಲನೆಗೆ ಸಚಿವರ ಪುತ್ರನ ದುರ್ಮರಣ!

    ಹೈದ್ರಾಬಾದ್: ಇಲ್ಲಿನ ಪ್ರತಿಷ್ಟಿತ ಜುಬಿಲಿ ಹಿಲ್ಸ್ ನಲ್ಲಿರುವ ರೋಡ್ ನಂಬರ್ 36ರಲ್ಲಿ ನಡೆದ ಅಪಘಾತದಲ್ಲಿ ಸಚಿವರೊಬ್ಬರ ಪುತ್ರ ಸೇರಿದಂತೆ ಇಬ್ಬರು ಮೃತರಾದ ಘಟನೆ ಇಂದು ನಸುಕಿನ ಜಾವ ನಡೆದಿದೆ.

    ಆಂಧ್ರ ಪ್ರದೇಶದ ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ನಾರಾಯಣ್ ಅವರ ಪುತ್ರ ನಿಶಿತ್ ನಾರಾಯಣ್ ಹಾಗೂ ಅವರ ಸ್ನೇಹಿತ ಸಾವಿಗೀಡಾಗಿದ್ದಾರೆ. ಮೃತ ನಿಶಿತ್ ನಾರಾಯಣ ವಿದ್ಯಾಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

    ನಡೆದಿದ್ದೇನು?: ಕುಡಿದು ಮತ್ತಿನಲ್ಲಿ ನಿಶಿತ್ ತನ್ನ ಮರ್ಸಿಡಿಸ್ ಬೆಂಜ್ ಕಾರನ್ನು ವೇಗವಾಗಿ ಚಲಾಯಿಸಿದ್ದಾರೆ. ಹೀಗಾಗಿ ಕಾರು ನಿಯಂತ್ರಣ ತಪ್ಪಿ ಮೆಟ್ರೋ ರೈಲಿಗಾಗಿ ಹಾಕಲಾಗಿದ್ದ ಪಿಲ್ಲರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರಿಗೂ ಗಂಭೀರ ಗಾಯಗಳಾದವು. ಕೂಡಲೇ ಸ್ಥಳೀಯರ ಸಹಾಯದಿಂದ ನಿಷಿತ್ ಹಾಗೂ ರಾಜಾ ರವಿವರ್ಮ ಅವರನ್ನು ಉಸ್ಮಾನಿಯಾ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ನಿಷಿತ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

    ಸದ್ಯ ಮಗನ ಸಾವಿನ ಸುದ್ದಿ ಕೇಳಿ ಅಮೆರಿಕ ಪ್ರವಾಸದಲ್ಲಿದ್ದ ಸಚಿವ ನಾರಾಯಣ್ ಹೈದ್ರಾಬಾದ್‍ಗೆ ವಾಪಾಸ್ಸಾಗಿದ್ದಾರೆ.

  • ನೀರು ಅರಸಿ ಟ್ಯಾಂಕ್‍ಗೆ ಇಳಿದ 14 ಮಂಗಗಳು ಸಾವು: ಗ್ರಾಮಸ್ಥರಿಂದ ಅಂತ್ಯ ಸಂಸ್ಕಾರ

    ನೀರು ಅರಸಿ ಟ್ಯಾಂಕ್‍ಗೆ ಇಳಿದ 14 ಮಂಗಗಳು ಸಾವು: ಗ್ರಾಮಸ್ಥರಿಂದ ಅಂತ್ಯ ಸಂಸ್ಕಾರ

    ರಾಯಚೂರು: ಬರಗಾಲದ ಬೇಸಿಗೆ ಹಿನ್ನೆಲೆ ನೀರು ಅರಿಸಿ ಗ್ರಾಮಕ್ಕೆ ಬಂದ ವಾನರ ಸೈನ್ಯ ನೀರು ಇಲ್ಲದೆ, ತಪ್ಪಿಸಿಕೊಳ್ಳಲು ದಾರಿಯಿಲ್ಲದೆ ಪ್ರಾಣವನ್ನೇ ಬಿಟ್ಟಿರುವ ಹೃದಯ ವಿದ್ರಾವಕ ಘಟನೆ ರಾಯಚೂರಿನ ಗಧಾರ್ ಗ್ರಾಮದಲ್ಲಿ ನಡೆದಿದೆ.

    ಮಂಗನಿಂದ ಮಾನವ ಅಂತಾರೆ, ಮಂಗಗಳನ್ನ ದೇವರಿಗೂ ಹೋಲಿಸ್ತಾರೆ ಆದ್ರೆ, ಮಾನವನ ಯಡವಟ್ಟಿನಿಂದ ಮಂಗಗಳ ಮಾರಣಹೋಮವೇ ನಡೆದಂತಾಗಿದೆ. ಒಂದಲ್ಲ ಎರಡಲ್ಲಾ 14 ಮಂಗಗಳು ಜಿಲ್ಲಾ ಪಂಚಾಯ್ತಿ ಯಡವಟ್ಟಿನಿಂದ ಚಿತ್ರಹಿಂಸೆ ಅನುಭವಿಸಿ ಸಾವನ್ನಪ್ಪಿವೆ.

    ಆಹಾರವಿಲ್ಲದೇ ಮೃತಪಟ್ಟ ವಾನರ ಸೈನ್ಯ: ಸುಮಾರು 15 ದಿನಗಳ ಹಿಂದೆ ಗ್ರಾಮಕ್ಕೆ ಬಂದಿದ್ದ ಮಂಗಗಳು ನೀರನ್ನ ಹರಿಸಿ ನೂತನವಾಗಿ ನಿರ್ಮಾಣಗೊಂಡ ಸಾರ್ವಜನಿಕ ನೀರಿನ ಟ್ಯಾಂಕ್ ಹತ್ತಿವೆ. ಟ್ಯಾಂಕ್ ನಿರ್ಮಾಣಗೊಂಡು ವರ್ಷವಾದ್ರೂ ಸಾರ್ವಜನಿಕರಿಗೆ ನೀರು ಹರಿಸದೆ ಜಿಲ್ಲಾಪಂಚಾಯ್ತಿ ಕನಿಷ್ಠ ಟ್ಯಾಂಕ್‍ನ ಮ್ಯಾನ್ ಹೋಲ್‍ನ್ನೂ ಮುಚ್ಚಿರಲಿಲ್ಲ. ಹೀಗಾಗಿ ಅಲ್ಪಸ್ವಲ್ಪ ನಿಂತಿದ್ದ ನೀರನ್ನ ಕುಡಿಯಲು ಮಂಗಗಳು ಒಂದಾದ ಮೇಲೊಂದರಂತೆ ಟ್ಯಾಂಕಿನೊಳಗೆ ಜಿಗಿದಿವೆ. ಆದ್ರೆ ಮೇಲೆರಲು ಏಣಿ ಸೇರಿದಂತೆ ಯಾವುದೇ ವ್ಯವಸ್ಥೆಯಿಲ್ಲದ ಹಿನ್ನೆಲೆ ನೀರು, ಆಹಾರವಿಲ್ಲದೆ ಮಂಗಗಳು ಟ್ಯಾಂಕ್‍ನಲ್ಲೇ ಸಾವನ್ನಪ್ಪಿವೆ.

    ಮಂಗಗಳ ಸಾವಿನ ಪಶ್ಚಾತಾಪಕ್ಕೆ ಗ್ರಾಮದ ಜನ ಮೃತ ಮಂಗಗಳಿಗೆ ಮಾನವರಂತೆ ವಾದ್ಯಗಳೊಂದಿಗೆ ಮೆರವಣಿಗೆ ಮಾಡಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದ್ದಾರೆ. ಗ್ರಾಮದಲ್ಲಿ ಮಂಗಳು ಸಾವನ್ನಪ್ಪುವುದು ಗ್ರಾಮಕ್ಕೆ ಕೆಡುಕನ್ನ ತರುತ್ತದೆ ಅಂತ ಇದೀಗ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.

    ಇದನ್ನೂ ಓದಿ: ಅಪಘಾತದಲ್ಲಿ ಸಾವಿಗೀಡಾದ ಕೋತಿಗೆ 11 ದಿನದ ಬಳಿಕ ತಿಥಿ!

    ಏಪ್ರಿಲ್ 29 ರಂದು ಬಸವ ಜಯಂತಿಯ ದಿನ ಗ್ರಾಮದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಗುತ್ತಿತ್ತು, ಆಗ ಶಬ್ದಕ್ಕೆ ಹೆದರಿ ಟ್ಯಾಂಕನೊಳಗೆ ಮಂಗಗಳು ಜಿಗಿದಿರಬಹುದು ಅಂತಲೂ ಗ್ರಾಮಸ್ಥರು ಹೇಳುತ್ತಿದ್ದಾರೆ. ಆದ್ರೆ ದಿನದಿಂದ ದಿನಕ್ಕೆ ಕೊಳೆತ ಕೆಟ್ಟ ವಾಸನೆ ಗ್ರಾಮದಲ್ಲಿ ಹರಡುತ್ತಿದ್ದಂತೆ ವಾಸನೆಯ ಮೂಲ ಹುಡುಕಿದಾಗ ಮಂಗಗಳು ಸಾವನ್ನಪ್ಪಿರುವುದು ಬಯಲಾಗಿದೆ. ಮಂಗಗಳು ಕಾಣೆಯಾಗಿದ್ದರಿಂದ ಕಾಟ ತಪ್ಪಿತು ಅಂದುಕೊಂಡಿದ್ದ ಗ್ರಾಮಸ್ಥರಿಗೆ ಮಂಗಗಳ ಸಾವು ನಿಜಕ್ಕೂ ಶಾಕ್ ನೀಡಿದೆ. ಮಂಗಗಳ ಅಂತ್ಯ ಸಂಸ್ಕಾರ ವೇಳೆ ಬದುಕುಳಿದ ವಾನರಗಳು ಇಣುಕುತ್ತಿದ್ದದ್ದು ಎಂತವರಿಗೂ ಮನಕಲುಕುವಂತಿತ್ತು.

    ಒಟ್ನಲ್ಲಿ, ಟ್ಯಾಂಕ್ ನಿರ್ಮಿಸಿದ ಗುತ್ತಿಗೆದಾರ ಹಾಗೂ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂಕ ಪ್ರಾಣಿಗಳು ಬಲಿಯಾಗಿವೆ. ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿದ್ದರು ಸರಿಯಾಗಿ ನೀರು ಸರಬರಾಜು ಮಾಡಲಾಗದ ಜಿಲ್ಲಾಪಂಚಾಯ್ತಿ ಈಗ ಮಂಗಗಳ ಮಾರಣಹೋಮಕ್ಕೂ ಕಾರಣವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

     

  • ಪತಿ ಸಾವಿಗೆ ಕಾರಣವಾಗಿದ್ದಕ್ಕೆ ಮಗು ಕೊಟ್ಳು, ಈಗ ಅದೇ ಮಗನಿಗಾಗಿ ಸಾಕು ತಾಯಿಯ ಜೊತೆ ಮಾರಾಮಾರಿ ಮಾಡಿದ್ಳು!

    ಪತಿ ಸಾವಿಗೆ ಕಾರಣವಾಗಿದ್ದಕ್ಕೆ ಮಗು ಕೊಟ್ಳು, ಈಗ ಅದೇ ಮಗನಿಗಾಗಿ ಸಾಕು ತಾಯಿಯ ಜೊತೆ ಮಾರಾಮಾರಿ ಮಾಡಿದ್ಳು!

    ಕೊಪ್ಪಳ: 12 ವರ್ಷದ ಗಂಡುಮಗುವಿಗಾಗಿ ಜನ್ಮ ನೀಡಿದ ತಾಯಿ ಮತ್ತು ಸಾಕು ತಾಯಿ ಮಧ್ಯೆ ಮಂಗಳವಾರ ಬೀದಿ ಜಗಳ ನಡೆದಿರುವ ಘಟನೆ ಗಂಗಾವತಿಯಲ್ಲಿ ನಡೆದಿದೆ.

    ಗಂಗಾವತಿಯ ಗುಂಡಮ್ಮ ಕ್ಯಾಂಪ್ ನಿವಾಸಿ ಬೀಬಿಜಾನ ಮತ್ತು ಬಳ್ಳಾರಿ ಜಿಲ್ಲೆ ಸಂಡೂರಿನ ನೂರ್ ಜಹಾನ್ ನಡುವೆ 12 ವರ್ಷದ ಶಾಶುವಲಿಗಾಗಿ ನಿನ್ನೆ ಮಾರಾಮಾರಿ ನಡೆದಿದೆ.

    ನಡೆದಿದ್ದೇನು?: 12 ವರ್ಷದ ಹಿಂದೆ ಸಂಡೂರಿನ ನೂರ್ ಜಾನ್ ಮೂರನೇ ಮಗುವಿಗೆ ಜನ್ಮ ನೀಡಿದ್ದಳು. ಕೆಲದಿನದಲ್ಲೇ ಪತಿ ಅನೀರಿಕ್ಷಿತವಾಗಿ ಮೃತಪಟ್ಟಿದ್ದರಿಂದ, ಹುಟ್ಟಿದ ಮಗುವಿನ ದೋಷದಿಂದಲೇ ಪತಿ ಸಾವು ಸಂಭವಿಸಿದೆ ಎಂದು ತಿಳಿದು ತನ್ನ ಮೂರನೇ ಮಗುವಿಗೆ 6 ತಿಂಗಳು ಇರುವಾಗಲೇ ಆ ಮಗುವನ್ನು ಸಹೋದರ ಸಂಬಂಧಿ ಬೀಬೀ ಜಾನ್‍ಗೆ ನೀಡಿದ್ದಾರೆ.

    ಇದೀಗ 12 ವರ್ಷದ ಮಗು ಶಾಶುವಲಿಯನ್ನು ತಮಗೆ ಕೊಡುವಂತೆ ನೂರ್ ಜಾನ್ ಕ್ಯಾತೆ ತೆಗೆದಿದ್ದು, ಪ್ರಕರಣ ಗಂಗಾವತಿ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಆದ್ರೆ, ತನಗೆ ಪರಿಚಯವೇ ಇಲ್ಲದ ಜನ್ಮ ನೀಡಿದ ತಾಯಿ ಜೊತೆ ಹೋಗಲು ಶಾಶುವಲಿ ನಿರಾಕರಿಸುತ್ತಿದ್ದಾನೆ.

    ಮಗನ ಹೆಸರಿನಲ್ಲಿ ಆಸ್ತಿ ಸಿಗುತ್ತದೆ ಎಂದು ಇಷ್ಟು ದಿನವಿಲ್ಲದ ಮಗುವನ್ನು ಈಗ ಕೇಳುತ್ತಿದ್ದಾರೆ ಎಂಬುದು ಸಾಕು ತಂದೆ-ತಾಯಿ ಆರೋಪ ಮಾಡಿದ್ದಾರೆ. ಕೋರ್ಟ್ ನಲ್ಲಿ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಹೇಳಿ ಪೊಲೀಸರು ಸಾಗ ಹಾಕಿದ್ದಾರೆ.