Tag: death

  • ಯಾತ್ರಾಸ್ಥಳ ಕೊಡಚಾದ್ರಿಯಲ್ಲಿ ಆಕ್ಸಲ್ ಕಟ್ಟಾಗಿ ಜೀಪ್ ಪಲ್ಟಿ- ಮಹಿಳೆಯ ದುರ್ಮರಣ

    ಯಾತ್ರಾಸ್ಥಳ ಕೊಡಚಾದ್ರಿಯಲ್ಲಿ ಆಕ್ಸಲ್ ಕಟ್ಟಾಗಿ ಜೀಪ್ ಪಲ್ಟಿ- ಮಹಿಳೆಯ ದುರ್ಮರಣ

    ಶಿವಮೊಗ್ಗ: ಪುರಾಣ ಪ್ರಸಿದ್ಧ ಯಾತ್ರ ಸ್ಥಳ ಕೊಡಚಾದ್ರಿಗೆ ಹೋಗುವಾಗ ಜೀಪ್ ಪಲ್ಟಿಯಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.

    ಮೃತ ಮಹಿಳೆಯನ್ನು ಕೇರಳ ತ್ರಿಶ್ಯೂರ್ ಮೂಲದ 38 ವರ್ಷದ ಸರಿತಾ ಎಂದು ಗುರುತಿಸಲಾಗಿದೆ. ಜೀಪಿನಲ್ಲಿ ಇದ್ದ ಇನ್ನಿತರರಿಗೆ ಗಾಯಗಳಾಗಿದ್ದು, ಅವರನ್ನು ಕುಂದಾಪುರ ಆಸ್ಪತ್ರೆಗೆ ಸೇರಿಸಲಾಗಿದೆ

    ಕೇರಳದಿಂದ ಬಂದಿದ್ದ ಎಂಟು ಜನ ಯಾತ್ರಿಕರು ಇದ್ದ ಈ ಜೀಪ್ ಕೊಡಚಾದ್ರಿಯ ದುರ್ಗಮ ಮಾರ್ಗದಲ್ಲಿ ಹತ್ತುವಾಗ ಆಕ್ಸಲ್ ಕಟ್ಟಾಗಿದೆ. ಇದರಿಂದಾಗಿ ಜೀಪ್ ನಿಯಂತ್ರಣ ತಪ್ಪಿದಾಗ ಮುಂದಿನ ಸೀಟಿನಲ್ಲಿ ಕೂತಿದ್ದ ಮಹಿಳೆ ಕೆಳಗೆ ಉರುಳಿ, ಅವರ ಮೇಲೆ ಜೀಪು ಪಲ್ಟಿಯಾಗಿ ಬಿದ್ದಿದೆ.

    ಕೊಲ್ಲೂರಿಗೆ ಬಂದು ಮೂಕಾಂಬಿಕೆ ದರ್ಶನ ಪಡೆದು ಅಲ್ಲಿಂದ ಹೊಸನಗರ ತಾಲೂಕಿನಲ್ಲಿರುವ ಕೊಡಚಾದ್ರಿಯ ತುದಿಯಲ್ಲಿ ಇರುವ ಸರ್ವಜ್ಞ ಪೀಠಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸುವುದು ವಾಡಿಕೆ.

    ಈ ಮಾರ್ಗ ಅತ್ಯಂತ ದುರ್ಗಮವಾಗಿದ್ದು, ಜೀಪು ಸೇರಿ ಯಾವುದೇ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಆದರೆ, ಅರಣ್ಯ ಇಲಾಖೆ ಜೀಪ್ ಮಾಲೀಕರಿಂದ ಹಣ ಕಟ್ಟಿಸಿಕೊಂಡು ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಿದೆ. ಹಲವು ಬಾರಿ ಈ ರೀತಿಯ ಅವಘಡಗಳು ನಡೆದಿದ್ದರೂ, ಪ್ರಾಣಾಪಾಯ ಸಂಭವಿಸಿರಲಿಲ್ಲ. ಈಗ ಜೀಪ್ ಚಾಲಕರ ಹಣದಾಸೆ ಹಾಗೂ ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಯಾತ್ರೆಗೆ ಬಂದಿದ್ದ ಮಹಿಳೆ ಜೀವ ಬಲಿ ಪಡೆದಿದೆ.

    ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಘಟನೆ ನಡೆದಿದೆ.

  • ಗಮನಿಸಿ, ಟ್ಯಾಂಕರ್ ಪಲ್ಟಿಯಾದರೆ ತೈಲ ತುಂಬಿಸೋ ಮುನ್ನ ಈ ಸುದ್ದಿ ಓದಿ

    ಗಮನಿಸಿ, ಟ್ಯಾಂಕರ್ ಪಲ್ಟಿಯಾದರೆ ತೈಲ ತುಂಬಿಸೋ ಮುನ್ನ ಈ ಸುದ್ದಿ ಓದಿ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ತೈಲ ಟ್ಯಾಂಕರೊಂದು ಪಲ್ಟಿಯಾಗಿ ಬಳಿಕ ಸ್ಫೋಟಗೊಂಡ ಪರಿಣಾಮ 123 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾದ ಘಟನೆ ಇಂದು ಮುಂಜಾನೆ ನಡೆದಿದೆ.

    ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಬಹವಲ್‍ಪುರ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ.

    ನಡೆದಿದ್ದೇನು?: ಹೆದ್ದಾರಿಯಲ್ಲಿ ತೈಲ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದು, ಅದರಲ್ಲಿದ್ದ ಇಂಧನ ಸೋರಿಕೆಯಾಗುತ್ತಿತ್ತು. ಇದನ್ನು ಕಂಡ ಸ್ಥಳೀಯರು ಇಂಧನ ತುಂಬಿಸಿಕೊಳ್ಳಲೆಂದು ಘಟನಾ ಸ್ಥಳದಲ್ಲಿ ಜಮಾಯಿಸಿದ್ದರು. ಅಪಘಾತದ ತೀವ್ರತೆಗೆ ಟ್ಯಾಂಕರ್ ಭಾರೀ ಶಬ್ಧದೊಂದಿಗೆ ಸ್ಫೋಟಗೊಂಡಿದೆ ಅಂತಾ ಸ್ಥಳೀಯ ಸರ್ಕಾರಿ ಅಧಿಕಾರಿ ಮೊಹಮ್ಮದ್ ಸಲೀಂ ಅಫ್ಜಲ್ ಅಲ್ಲಿನ ಮಾಧ್ಯಮಕ್ಕೆ ವಿವರಿಸಿದ್ದಾರೆ.

    ಟ್ಯಾಂಕರ್ ಸ್ಫೋಟಗೊಳ್ಳುತ್ತಿದ್ದಂತೆಯೇ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವಲ್ಲಿ ಕಾರ್ಯದಲ್ಲಿ ತೊಡಗಿದ್ರು. ಸದ್ಯ ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

    ಈ ರಕ್ಷಣಾ ಕಾರ್ಯಾಚರಣೆಗೆ ಸ್ಥಳೀಯ ಸಿಬ್ಬಂದಿಯ ಜತೆ ಸೇನೆಯೂ ಸಹ ಕೈ ಜೋಡಿಸಿದೆ ಎಂದು ಪಾಕಿಸ್ತಾನದ ಸೇನಾ ವಕ್ತಾರರು ತಿಳಿಸಿದ್ದಾರೆ.

    https://youtu.be/JcfwKTpZ-wU

     

  • ಉಡುಪಿಯಲ್ಲಿ ರಾಷ್ಟ್ರ ಪಕ್ಷಿಯ ಸಾವು- ಕಾನೂನು ಗೌರವದೊಂದಿಗೆ ಅಂತ್ಯಸಂಸ್ಕಾರ

    ಉಡುಪಿಯಲ್ಲಿ ರಾಷ್ಟ್ರ ಪಕ್ಷಿಯ ಸಾವು- ಕಾನೂನು ಗೌರವದೊಂದಿಗೆ ಅಂತ್ಯಸಂಸ್ಕಾರ

    ಉಡುಪಿ: ನಗರದ ಹೊರವಲಯದಲ್ಲಿರುವ ಮಂಚಿ ಮೂಲ ಸ್ಥಾನದ ಸಮೀಪ ಮನೆ ಕಂಪೌಂಡಿನ ಆವರಣದೊಳಗೆ ಬಿದ್ದುಕೊಂಡಿದ್ದ ರಾಷ್ಟ್ರಪಕ್ಷಿ ನವಿಲನ್ನು ಸಾಮಾಜಿಕ ಕಾರ್ಯಕರ್ತರು ಅರಣ್ಯ ಇಲಾಖೆಗೆ ಹಸ್ತಾಂತರಿಸಿ, ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

    ರಾತ್ರಿ 8 ಗಂಟೆ ಸುಮಾರಿಗೆ ಮಂಚಿ ಸಮೀಪ ಎಮ್.ಎಮ್ ಗೌಸ್ ಅವರ ಮನೆ ಕಂಪೌಂಡಿನ ಆವರಣದೊಳಗೆ ಗಂಡು ನವಿಲು ಬಿದ್ದುಕೊಂಡಿದೆ ಎನ್ನುವ ಮಾಹಿತಿ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಗೆ ದೊರೆಯಿತು.

    ವಿಶು ಶೆಟ್ಟಿ ಸಾಮಾಜಿಕ ಕಾರ್ಯಕರ್ತ ತಾರಾನಾಥ್ ಮೇಸ್ತ ಜೊತೆಗೂಡಿ ವಾಹನದಲ್ಲಿ ಜಾಗರೂಕತೆಯಿಂದ ತಂದು ಚಿಕಿತ್ಸೆಗಾಗಿ ಪಶು ವೈದ್ಯ ಡಾ. ಸಂದೀಪ್ ಶೆಟ್ಟಿ ಅವರಿಗೆ ತೋರಿಸಿ ಚಿಕಿತ್ಸೆ ಕೊಡಿಸಿದರು. ಆ ಸಮಯದಲ್ಲಿ ನವಿಲಿನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ನವಿಲು ಮೃತಪಟ್ಟಿತು. ಅದೇ ದಿನ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಮೃತ ನವಿಲನ್ನು ಅರಣ್ಯರಕ್ಷಕ ಡಿ. ದೇವರಾಜ್ ಪಾಣ ಅವರಿಗೆ ಹಸ್ತಾಂತರಿಸಲಾಯಿತು.

    ಉಡುಪಿ ಅರಣ್ಯ ಇಲಾಖೆಯ ವಠಾರದಲ್ಲಿ ನವಿಲಿನ ಶವ ಪರೀಕ್ಷೆಯನ್ನು ಪಶು ವೈದ್ಯಾಧಿಕಾರಿ ಡಾ. ಸಂದೀಪ್ ಶೆಟ್ಟಿ ನೆಡೆಸಿದರು. ನವಿಲಿನ ಯಕೃತ್ (ಲಿವರ್) ಭಾಗ ಘಾಸಿಗೊಂಡಿದ್ದು, ಕೆಲವು ಅಂಗಾಗಗಳಿಂದ ರಕ್ತಸ್ತ್ರಾವಗೊಂಡಿದ್ದವು. ಕೆಲವು ದಿನಗಳಿಂದ ಆಹಾರ ಸೇವನೆ ಮಾಡದೆ ಇರುವುದೇ ನವಿಲಿನ ಸಾವಿಗೆ ಕಾರಣ ಅಂತಾ ಶವಪರೀಕ್ಷೆಯಿಂದ ದೃಢಪಟ್ಟಿದೆ.

    ಶವಪರೀಕ್ಷೆ ಹಾಗೂ ಕಾನೂನು ಪ್ರಕ್ರಿಯೆಗಳು ನಡೆದ ನಂತರ ಆದಿ-ಉಡುಪಿ ಅರಣ್ಯ ಇಲಾಖೆಯ ಆಶ್ರಯದಲ್ಲಿರುವ ಪ್ರಾಣಿಗಳ ಕಳೇಬರ ದಹನ ಭೂಮಿಯಲ್ಲಿ ಅರಣ್ಯವಿಕ್ಷಕ ಸಿಬ್ಬಂದಿಯ ಸಮಕ್ಷಮದಲ್ಲಿ ಕಾನೂನು ಗೌರವದೊಂದಿಗೆ ದಹನ ಮಾಡುವ ಮುಖಾಂತರ ಅಂತ್ಯಸಂಸ್ಕಾರ ನಡೆಸಲಾಯಿತು. ವಿಶು ಶೆಟ್ಟಿ ಮತ್ತು ತಾರಾನಾಥ್ ಮೇಸ್ತರು ನವಿಲಿನ ಕಳೇಬರಕ್ಕೆ ಬಿಳಿ ಬಟ್ಟೆ ಹೊದಿಸಿ, ಹೂಹಾರ ಸಮರ್ಪಿಸಿ ರಾಷ್ಟ್ರಪಕ್ಷಿಗೆ ಅಂತಿಮ ಗೌರವ ಸಲ್ಲಿಸಿದರು.

  • ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿದ್ರೆ ದಂಡ!

    ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿದ್ರೆ ದಂಡ!

    ಮೊರಾದಾಬಾದ್: ಅತಿಯಾದರೆ ಅಮೃತವೂ ವಿಷ ಎಂಬ ಗಾದೆ ಮಾತು ಈಗಿನ ಸೆಲ್ಫಿ ಕ್ರೇಜ್ ಯುವಕರಿಗೆ ಅನ್ವಯಿಸುತ್ತದೆ. ಇಂದಿನ ಸ್ಮಾರ್ಟ್ ಫೋನ್ ಯುಗದಲ್ಲಿ ಸೆಲ್ಫಿ ಕ್ರೇಜ್ ಯಾರನ್ನೂ ಬಿಟ್ಟಿಲ್ಲ. ಈ ಸೆಲ್ಫಿ ಕ್ರೇಜ್ ಕೆಲವರ ಜೀವಕ್ಕೆ ಅಪಾಯವಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಅನಾಹುತ ತಡೆಯಲು ಉತ್ತರಪ್ರದೇಶ ಪೊಲೀಸರು ಮುಂದಾಗಿದ್ದಾರೆ.

    ರೈಲ್ವೆ ಹಳಿ, ಬಸ್ ನಿಲ್ದಾಣ, ಹೆದ್ದಾರಿ, ನದಿ ದಡ, ಎತ್ತರದ ಕಟ್ಟಡಗಳಂತಹ ಸ್ಥಳಗಲ್ಲಿ ಸೆಲ್ಫಿ ತೆಗೆದುಕೊಂಡವರ ಮೇಲೆ ದಂಡ ವಿಧಿಸಲಾಗುವುದು ಮತ್ತುಕಠಿಣ ಕ್ರಮ ಕೈಗೊಳ್ಳಲಾಗುವುದು ಮೊರಾದಾಬಾದ್ ಎಂದು ಪೊಲೀಸರು ಹೇಳಿದ್ದಾರೆ,

    ಯುವ ಜನತೆ ಸೆಲ್ಫಿ ತೆಗೆಯುವುದು ತಪ್ಪು ಎಂದು ನಾವು ಹೇಳುತ್ತಿಲ್ಲ. ಆದರೆ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ನಾವು ದಂಡ ವಿಧಿಸಲು ಮುಂದಾಗಿದ್ದೇವೆ ಎಂದು ಎಸ್‍ಪಿ ಆಶೀಶ್ ಶ್ರೀವಾಸ್ತವ್ ಹೇಳಿದ್ದಾರೆ.

    ಕಳೆದ ತಿಂಗಳು ತೆಲಂಗಾಣದ ಸಿಕಂದರಾಬಾದ್ ಸಮೀಪ ಅಲ್ವಾಲ್ ರೈಲ್ವೆ ನಿಲ್ದಾಣದಲ್ಲಿ ಸೆಲ್ಫಿ ತಗೆದುಕೊಳ್ಳಲು ಹೋಗಿ  ಓರ್ವ ವ್ಯಕ್ತಿ ಮೃತಪಟ್ಟಿದ್ದ. ಅಲ್ಲದೆ ಇನ್ನೊಬ್ಬ ವ್ಯಕ್ತಿ ತನ್ನ ಕೈ ಕಳೆದುಕೊಂಡಿದ್ದ.

    ಇದನ್ನೂ ಓದಿ: ಸಮುದ್ರ ದಂಡೆಯ ಮೇಲೆ ಸೆಲ್ಫೀ ತೆಗೆಯಲು ಹೋದ ಯುವಕ ನೀರುಪಾಲು

  • ರಾಯಚೂರಿನಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ- ಚರಂಡಿಗೆ ಬಿದ್ದು ಶಿಕ್ಷಕ ಸಾವು

    ರಾಯಚೂರಿನಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ- ಚರಂಡಿಗೆ ಬಿದ್ದು ಶಿಕ್ಷಕ ಸಾವು

    ರಾಯಚೂರು: ನಗರದಲ್ಲಿ ಭಾನುವಾರ ಭಾರೀ ಮಳೆಯಾದ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವ್ಯಕ್ತಿಯೊಬ್ಬರು ಒಳಚರಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.

    ಕೊಪ್ಪಳ ಮೂಲದ ಶಿಕ್ಷಕ ಭೀಮಪ್ಪ ಸಾವನ್ನಪ್ಪಿದ ವ್ಯಕ್ತಿ. ನಗರದ ತೀನ್ ಕಂದೀಲ್ ಬಳಿ ಈ ಘಟನೆ ನಡೆದಿದೆ. ಭೀಮಪ್ಪ ರಾತ್ರಿಯೇ ಚರಂಡಿಗೆ ಬಿದ್ದಿದ್ದು ಮಳೆ ಹಿನ್ನೆಲೆಯಲ್ಲಿ ಸಾವನ್ನಪ್ಪಿರಬಹುದು ಅಂತ ಶಂಕಿಸಲಾಗಿದೆ.

    ರಾಯಚೂರಿನ ರೈಲ್ವೇ ಕೆಳಸೇತುವೆಗೆ ನೀರು ನುಗ್ಗಿದ್ದು, ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ಶಾಲೆಗೆ ತೆರಳಲು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾ ಕೂಡ ಕೆಳಸೇತುವೆ ಮಾರ್ಗದಲ್ಲಿ ಸಂಚರಿಸುತ್ತಿಲ್ಲ. ಹೀಗಾಗಿ ಮಕ್ಕಳು ಶಾಲೆಗೆ ಹೋಗುವ ಬದಲು ಮನೆಗೆ ಮರಳುವಂತಾಗಿದೆ.

    ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಪೂರ್ಣ ನೀರು ನಿಂತಿದ್ದು ಕೆರೆಯಂತಾಗಿದೆ. ನೀರು ಹೋಗಲು ದಾರಿಯಿಲ್ಲದೆ ಕ್ರೀಡಾಂಗಣಕ್ಕೆ ಕ್ರೀಡಾಪಟುಗಳು ಕಾಲಿಡದಂತಾಗಿದೆ. ಜಿಲ್ಲೆಯ ವಿವಿಧೆಡೆ ಸುರಿದ ಮಳೆಗೆ ರಸ್ತೆ ಸಂಚಾರ ಹದಗೆಟ್ಟಿದ್ದು ಜನ ಪರದಾಡುತ್ತಿದ್ದಾರೆ. ಮಾನ್ವಿ ತಾಲೂಕಿನ ಕುರಕುಂದ ಬಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಿರವಾರ-ಹಟ್ಟಿ ರಸ್ತೆ ಮಾರ್ಗ ಬಂದ್ ಆಗಿದೆ.

     

  • ಜಗಳ ಬಿಡಿಸಲು ಹೋದವನಿಗೇ ಚಾಕು ಇರಿತ: ಮಂಡ್ಯದ ಯುವಕ ಸಾವು

    ಜಗಳ ಬಿಡಿಸಲು ಹೋದವನಿಗೇ ಚಾಕು ಇರಿತ: ಮಂಡ್ಯದ ಯುವಕ ಸಾವು

    ಮಂಡ್ಯ: ಜಗಳ ಬಿಡಿಸಲು ಹೋದ ವೇಳೆ ಚಾಕು ಇರಿತಕ್ಕೊಳಕ್ಕಾಗಿ ಗಂಭೀರ ಗಾಯಗೊಂಡ ಯುವಕನೊಬ್ಬ ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕೆ.ಮಲ್ಲೇನಹಳ್ಳಿ ಬಳಿ ತಡರಾತ್ರಿ ನಡೆದಿದೆ.

    ಬೆಂಗಳೂರಿನ ಮಾಗಡಿ ರಸ್ತೆ ವಾಸಿ ಕಿರಣ್(28) ಮೃತ ದುರ್ದೈವಿ ಯುವಕ. ಮೃತ ಕಿರಣ್ ಭಾನುವಾರ ರಾತ್ರಿ ಪತ್ನಿಯ ಅಣ್ಣನಿಗೆ ಟಾರ್ಪಲ್ ಕೊಡಲು ಪತ್ನಿ ಜೊತೆ ಬಂದಿದ್ದರು. ಈ ವೇಳೆ ಕ್ಷುಲಕ ಕಾರಣಕ್ಕೆ ಪತ್ನಿಯ ಅಣ್ಣನೊಂದಿಗೆ ಬೇರೆ ಯುವಕರು ಜಗಳವಾಡ್ತಿದ್ರು. ಹೀಗಾಗಿ ಕಿರಣ್ ಜಗಳ ಬಿಡಿಸಲೆಂದು ತೆರಳಿದ್ದರು. ಇದೇ ಸಂದರ್ಭದಲ್ಲಿ ಯುವಕರು ಕಿರಣ್‍ಗೆ ಚಾಕು ಇರಿದು ಅಲ್ಲಿಂದ ಪರಾರಿಯಾಗಿದ್ದಾರೆ.

    ಘಟನೆಯಿಂದ ಗಂಭೀರ ಗಾಯಗೊಂಡ ಕಿರಣ್ ನನ್ನು ನಾಗಮಂಗಲ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆಂದು ಬಿ.ಜಿ ನಗರದ ಎಐಎಂಎಸ್ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

    ಈ ಸಂಬಂಧ ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಟೋಗೆ ಡಿಯೋ ಡಿಕ್ಕಿ- ಸವಾರ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ

    ಆಟೋಗೆ ಡಿಯೋ ಡಿಕ್ಕಿ- ಸವಾರ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ

    ಬೆಂಗಳೂರು: ಆಟೋಗೆ ಡಿಯೋ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನಪ್ಪಿದ ಘಟನೆ ಬೆಂಗಳೂರಿನ ಜಕ್ಕೂರು ಏರೋ ಡ್ರಮ್ ಬಳಿಯಲ್ಲಿ ನಡೆದಿದೆ.

    ಮೃತ ಬೈಕ್ ಸವಾರನನ್ನು ಅಭಿನವ್ ಎಂದು ಗುರುತಿಸಲಾಗಿದೆ. ಮೃತ ಅಭಿನವ್ ಥ್ರಿಬಲ್ ರೈಡಿಂಗ್ ನಲ್ಲಿ ಹೋಗ್ತಿದ್ದ ವೇಳೆ ಆಟೋಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಅಭಿನವ್ ಸ್ಥಳದಲ್ಲೇ ಸಾವನಪ್ಪಿದ್ದು, ಉಳಿದ ಇಬ್ಬರು ಸ್ನೇಹಿತರಾದ ಆದರ್ಶ ಮತ್ತು ಸುಬ್ರಹ್ಮಣ್ಯ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸವಾರನ ಅತಿವೇಗ ಮತ್ತು ಅಜಾಗರೂಕತೆಯಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಕಣಿವೆಗೆ ಉರುಳಿತು ಖಾಸಗಿ ಬಸ್: 10 ಜನ ಪ್ರವಾಸಿಗರ ದುರ್ಮರಣ

    ಕಣಿವೆಗೆ ಉರುಳಿತು ಖಾಸಗಿ ಬಸ್: 10 ಜನ ಪ್ರವಾಸಿಗರ ದುರ್ಮರಣ

    ಧರ್ಮಶಾಲಾ: ಅಮೃತಸರದಿಂದ ಗುರುವಾರ ಪ್ರವಾಸಕ್ಕೆ ಬಂದಿದ್ದ ಖಾಸಗಿ ಬಸ್‍ವೊಂದು ಹಿಮಾಚಲ ಪ್ರದೇಶದ ದಲಿರಾ ಸಮೀಪದ ಕಣಿವೆಗೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ. ಹಾಗೂ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ .

    ಹಿಮಾಚಲ ಪ್ರದೇಶದ ಧರ್ಮಶಾಲಾದಿಂದ ಸುಮಾರು 60 ಕಿ.ಮೀ. ದೂರದಲ್ಲಿ ಈ ಘಟನೆ ಸಂಭವಿಸಿದೆ. ಮೃತಪಟ್ಟವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಧರ್ಮಶಾಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಏಸ್ ಗಾಂಧಿ ಅವರು ಹೇಳಿದ್ದಾರೆ.

    ಇನ್ನೂ ಈ ಅಪಘಾತದಲ್ಲಿ ಗಾಯಗೊಂಡವರನ್ನೂ ಕಂಗ್ರಾದಲ್ಲಿರುವ ಟಂಡಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

  • ಒಂದೇ ದಿನ ಹುಟ್ಟಿ, ಒಂದೇ ದಿನ ಕಾರಿನಲ್ಲಿ ಪ್ರಾಣಬಿಟ್ಟ ಅವಳಿ ಸಹೋದರಿಯರು

    ಒಂದೇ ದಿನ ಹುಟ್ಟಿ, ಒಂದೇ ದಿನ ಕಾರಿನಲ್ಲಿ ಪ್ರಾಣಬಿಟ್ಟ ಅವಳಿ ಸಹೋದರಿಯರು

    ಗುರ್‍ಗಾಂವ್: ಅವಳಿ ಸಹೋದರಿಯರು ಒಂದೇ ದಿನ ಸಾವನ್ನಪ್ಪಿರುವ ಘಟನೆ ದೆಹಲಿ ಬಳಿಯ ಗುರ್‍ಗಾಂವ್‍ನಲ್ಲಿ ಬುಧವಾರ ನಡೆದಿದೆ.

    ಐದು ವರ್ಷದ ಹರ್ಷ ಮತ್ತು ಹರ್ಷಿತ ಸಾವನ್ನಪ್ಪಿದ ಕಂದಮ್ಮಗಳು. ಬೇಸಿಗೆ ರಜೆಗೆಂದು ಅಜ್ಜಿಯ ಊರಾದ ಪಟೋಡಿ ವಿಭಾಗದ ಜಮಲ್‍ಪುರ್‍ಗೆ ತೆರಳಿದ್ದರು. ಬುಧವಾರ ಮಧ್ಯಾಹ್ನ ಹರ್ಷ ಮತ್ತು ಹರ್ಷಿತಾ ಆಟ ಆಡುತ್ತಾ ಮನೆಯ ಹಿಂದುಗಡೆಯ ಹುಂಡೈ ಕಾರಿನ ಒಳಗಡೆ ಹೋಗಿದ್ದಾರೆ.

    ಕಾರಿನ ಒಳಗಡೆ ಆಡುವಾಗ ಕಾರ್ ಆಟೋಮೆಟಿಕ್ ಲಾಕ್ ಅಗಿದೆ. ಮಕ್ಕಳು ಕಾರಿನ ಲಾಕ್ ತೆಗೆಯಲು ಪ್ರಯತ್ನಿಸಿದ್ರೂ ಅದು ಓಪನ್ ಆಗಿಲ್ಲ. ಸಂಜೆ 4 ಗಂಟೆಗೆ ಮನೆಯ ಸದಸ್ಯರಿಗೆ ಹರ್ಷ ಮತ್ತು ಹರ್ಷಿತಾ ನಾಪತ್ತೆಯಾಗಿದ್ದು ತಿಳಿದಿದೆ. ಮಕ್ಕಳನ್ನು ಹುಡುಕಲು ಆರಂಭಿಸಿದಾಗ ಕಾರಿನಲ್ಲಿ ಹರ್ಷ ಮತ್ತು ಹರ್ಷಿತಾಳ ದೇಹಗಳು ಪತ್ತೆಯಾಗಿವೆ. ಕೂಡಲೇ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರೂ ಅವಳಿ ಸಹೋದರಿಯರು ಸಾವನ್ನಪ್ಪಿದ್ದಾರೆ.

    ನನ್ನ ಮಕ್ಕಳಿಬ್ರೂ ಹುಟ್ಟಿದಾಗ ನಮ್ಮ ಕುಟುಂಬದಲ್ಲಿ ಸಂತೋಷ ಮನೆ ಮಾಡಿತ್ತು. ಇಬ್ಬರನ್ನು ಮೀರತ್‍ನ ಸೆಂಟ್ರಲ್ ಸ್ಕೂಲ್ ದಾಖಲು ಮಾಡಲಾಗಿತ್ತು. ಮಕ್ಕಳಿಬ್ಬರೂ ತುಂಬಾ ಚೂಟಿಯಾಗಿದ್ದರು ಎಂದು ಮಕ್ಕಳ ತಂದೆ ಗೋವಿಂದ್ ಕಣ್ಣೀರು ಹಾಕುತ್ತಾ ಹೇಳಿದರು.

    ಹರ್ಷ ಮತ್ತು ಹರ್ಷಿತಾ ಒಂದೇ ದಿನ ಹುಟ್ಟಿ ನಮಗೆಲ್ಲ ಖುಷಿ ನೀಡಿದ್ದರು. ಇಬ್ಬರು ಒಂದೇ ದಿನ ಸಾವನ್ನಪ್ತಾರೆ ಎಂದು ಗೊತ್ತಿರಲಿಲ್ಲ ಎಂದು ಮಕ್ಕಳ ಚಿಕ್ಕಪ್ಪ ಕನ್ವಾಲ್ ಸಿಂಗ್ ತಿಳಿಸಿದರು.

  • ಸಾಯೋಕು ಮುನ್ನವೇ ಮನೆಯಲ್ಲೇ ಸಮಾಧಿ ರೆಡಿ ಮಾಡಿದ್ರು ದಂಪತಿ

    ಸಾಯೋಕು ಮುನ್ನವೇ ಮನೆಯಲ್ಲೇ ಸಮಾಧಿ ರೆಡಿ ಮಾಡಿದ್ರು ದಂಪತಿ

    ಚಿಕ್ಕಬಳ್ಳಾಪುರ: ಎಂತಹವರಿಗೂ ಸಾವು ಎಂದಾಕ್ಷಣ ಆವರಿಸೋದೆ ಭಯ. ಆದ್ರೆ ಈ ದಂಪತಿ ಸಾಯೋಕು ಮುನ್ನವೇ ಮನೆಯಲ್ಲೇ ಸಮಾಧಿ ರೆಡಿ ಮಾಡಿಕೊಂಡು ಸಾವಿಗಾಗಿ ಕಾಯುತ್ತಿದ್ದಾರೆ.

    ಹೌದು. ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಬಂಡಹಳ್ಳಿ ಗ್ರಾಮದಲ್ಲಿರುವ ವೆಂಕಟರೆಡ್ಡಿ ರಾಯಲು ಹಾಗೂ ಜಯಮ್ಮ ದಂಪತಿಯೇ ಇಂತಹ ವಿಚಿತ್ರ ಸಾಹಸಕ್ಕೆ ಮುಂದಾಗಿದ್ದಾರೆ. ಈ ದಂಪತಿ ತಾವು ಸಾಯೋಕು ಮುನ್ನವೇ ತಮ್ಮದೇ ಮನೆಯಲ್ಲೇ ಸಮಾಧಿಯನ್ನ ರೆಡಿ ಮಾಡಿಕೊಂಡಿದ್ದಾರೆ. ಮನೆಯ ಮಧ್ಯಭಾಗದಲ್ಲೇ ಕಲ್ಲು ಚಪ್ಪಡಿಗಳ ಮೂಲಕ ತಮ್ಮ ಸಮಾಧಿಗಳನ್ನ ತಾವೇ ನಿರ್ಮಾಣ ಮಾಡಿ ಕಟ್ಟಿಕೊಂಡಿದ್ದಾರೆ.

    ವೆಂಕಟರೆಡ್ಡಿ ರಾಯಲು ಅವರಿಗೆ 88 ವರ್ಷ ವಯಸ್ಸು. ಇವರ ಪತ್ನಿ ಜಯಮ್ಮಗೆ ಸರಿ ಸುಮಾರು 80 ವರ್ಷಗಳಾಗಿವೆ. ವೆಂಕಟರೆಡ್ಡಿ ರಾಯಲು ಅವರನ್ನ ಯಾಕೆ ಈ ತರ ಅಂತ ಕೇಳಿದರೆ ವೇದಗಳ ಮೂಲಕ ಆತ್ಮದ ರಹಸ್ಯ ತಿಳಿದು ಹೀಗೆ ಮಾಡುತ್ತಿದ್ದೇವೆ ಅಂತ ಹೇಳಿದ್ದಾರೆ.

    ಇನ್ನೂ ಇವರ ಸಾವು 2020 ರಲ್ಲಿ ಸಂಭವಿಸುತ್ತಂತೆ. ಸಾಯೋಕೆ ಒಂದು ತಿಂಗಳ ಮುಂಚೆಯೇ ಸಾವು ಹೇಗೆ ಬರುತ್ತೆ ಅನ್ನೋದು ಕೂಡ ಇವರಿಗೆ ತಿಳಿಯುತ್ತಂತೆ. ಹೀಗಾಗಿ ಸಮಾಧಿಯನ್ನ ಎರಡು ಭಾಗಗಳಾಗಿ ಮಾಡಿಕೊಂಡಿದ್ದು ಸಾಯೋಕು ಒಂದು ತಿಂಗಳ ಮುಂಚೆಯೇ ಅನ್ನ-ಆಹಾರ ತ್ಯಜಿಸಿ ಮೊದಲನೇ ಭಾಗದ ಸಮಾಧಿಯಲ್ಲಿ ಜೀವಂತವಾಗಿ ಸಮಾಧಿಯಾಗುತ್ತೇವೆ ಎಂದು ಹೇಳುತ್ತಾರೆ.

    ಪತ್ನಿ ಸತ್ತ ಅದೇ ತಿಂಗಳಲ್ಲಿ ನಾನು ಕೂಡ ಸಾಯುತ್ತೇನೆ. ಹಾಗೆ ಪ್ರತಿದಿನ ಇದೇ ಸಮಾಧಿಯಲ್ಲಿ ಕುಳಿತು ಧ್ಯಾನ ಪೂಜೆ ಕೂಡ ಮಾಡುತ್ತಿದ್ದೇವೆ ಎಂದು ವೆಂಕಟರೆಡ್ಡಿ ರಾಯಲು ತಿಳಿಸಿದ್ದಾರೆ.

    ಈ ದಂಪತಿ ಮನೆಯಲ್ಲಿಯೇ ಶಿವಲಿಂಗ ಪ್ರತಿಷ್ಟಾಪಿಸಿದ್ದು, ಮನೆಯನ್ನ ಶಿವನ ದೇವಾಲಯನ್ನಾಗಿ ಮಾಡಿಕೊಂಡಿದ್ದಾರೆ. ಬದುಕಿನ ಬಂಡಿಗೆ ಅಂತ ಹಸುವಿನ ಸಾಕಾಣಿಕೆ ಸೇರಿದಂತೆ ಕೃಷಿಕಾಯಕವನ್ನು ಮಾಡುತ್ತಾರೆ.

    ಈ ದಂಪತಿಗೆ 3 ಜನ ಹೆಣ್ಣು ಮಕ್ಕಳು 2 ಗಂಡು ಮಕ್ಕಳು ಇದ್ದು ಎಲ್ಲರು ಮದುವೆಯಾಗಿ ಬೇರೆ ಬೇರೆ ಮನೆಗಳಲ್ಲಿ ವಾಸವಾಗಿದ್ದಾರೆ. ಒಟ್ಟಿನಲ್ಲಿ ಇಂತಹ ತಂತ್ರಜ್ಞಾನ ಯುಗದಲ್ಲೂ ಸಾಯೋಕು ಮುನ್ನವೇ ಸಮಾಧಿ ಮಾಡಿಕೊಂಡಿರೋ ಇವರಿಗೆ ಮೌಢ್ಯ ಅನ್ನಬೇಕೋ ಅಥವಾ ಹುಚ್ಚಾಟ ಅನ್ನಬೇಕೋ ಇವರು ನಂಬಿರೋ ಆ ದೇವರೇ ಬಲ್ಲ.