Tag: Death penalty

  • ಯಾರೀ ಕೇರಳ ನರ್ಸ್‌ ನಿಮಿಷಾ ಪ್ರಿಯಾ; ಯೆಮನ್‌ನಲ್ಲಿ ಗಲ್ಲುಶಿಕ್ಷೆಯೇ ಯಾಕೆ – ಏನಿದು ಸ್ಟೋರಿ!?

    ಯಾರೀ ಕೇರಳ ನರ್ಸ್‌ ನಿಮಿಷಾ ಪ್ರಿಯಾ; ಯೆಮನ್‌ನಲ್ಲಿ ಗಲ್ಲುಶಿಕ್ಷೆಯೇ ಯಾಕೆ – ಏನಿದು ಸ್ಟೋರಿ!?

    ಯೆಮನ್‌ನಲ್ಲಿ (Yemen) ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ (Nimisha Priya) ಅವರ ಎದುರು ನೇಣಿನ ಕುಣಿಕೆ ತೂಗಾಡುತ್ತಿದೆ. ಈ ಕುಣಿಕೆ ಹಿಂದೆ ಸ್ವಾರಸ್ಯಕರ ಕಥೆಯೇ ಇದೆ. ಜೀವನ ಕಟ್ಟಿಕೊಳ್ಳಲು ದೇಶ ಬಿಟ್ಟು ಮತ್ತೊಂದು ದೇಶಕ್ಕೆ ಹೋಗಿದ್ದಾಕೆಯ ಬದುಕಲ್ಲಿ ದುರಂತವೇ ನಡೆದುಬಿಟ್ಟಿತು. ತನಗೆ ಎದುರಾದ ಸಂಕಷ್ಟದಿಂದ ಪಾರಾಗಲು ಆತುರದ ಕೈಗೆ ಬುದ್ದಿ ಕೊಟ್ಟರು ನಿಮಿಷಾ. ಯೆಮನ್ ದೇಶದ ಪ್ರಜೆಯ ಕೊಲೆ ಕೇಸಲ್ಲಿ ಈಗ ಮರಣದಂಡನೆಯಂತಹ ಘೋರ ಶಿಕ್ಷೆಗೆ ಗುರಿಯಾಗಿದ್ದಾರೆ. ಇಡೀ ಭಾರತ ದೇಶದ ಗಮನ ಈಗ ಆಕೆಯ ಕಡೆ ನೆಟ್ಟಿದೆ. ಪ್ರಿಯಾ ಶಿಕ್ಷೆಯಿಂದ ಪಾರಾಗಲೆಂಬ ಪ್ರಾರ್ಥನೆಗಳು ಕೇಳಿಬಂದಿವೆ. ಭಾರತ ಸರ್ಕಾರ ಕೂಡ ಆಕೆಯನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರಲು ಶತಪ್ರಯತ್ನ ನಡೆಸುತ್ತಿದೆ. ಮುಂದೇನಾಗುತ್ತದೋ ಎಂಬುದು ಸದ್ಯದ ಕುತೂಹಲವಾಗಿದೆ.

    ಅಷ್ಟಕ್ಕೂ ಯಾರು ಈ ನಿಮಿಷಾ ಪ್ರಿಯಾ? ಯೆಮನ್‌ನಲ್ಲಿ ಏನಾಯಿತು? ಮರಣದಂಡನೆ ಶಿಕ್ಷೆಗೆ ಆಕೆ ಗುರಿಯಾಗಿದ್ಯಾಕೆ? ಯೆಮನ್ ಕಾನೂನು ಏನು ಹೇಳುತ್ತೆ? ಭಾರತ ಸರ್ಕಾರದ ಪ್ರಯತ್ನಗಳೇನು? ಪ್ರಕರಣ ಈಗ ಯಾವ ಹಂತದಲ್ಲಿದೆ ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ. ಇದನ್ನೂ ಓದಿ: ನಿಮಿಷಾ ಪ್ರಿಯಾರನ್ನ ಸುರಕ್ಷಿತವಾಗಿ ವಾಪಸ್ ಕರೆತರಲು ಶಕ್ತಿಮೀರಿ ಪ್ರಯತ್ನ – ‘ಸುಪ್ರೀಂ’ಗೆ ಕೇಂದ್ರದಿಂದ ಮಾಹಿತಿ

    ನಿಮಿಷಾ ಪ್ರಿಯಾ ಯಾರು?
    ನಿಮಿಷಾ ಪ್ರಿಯಾ ಯೆಮನ್‌ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ನರ್ಸ್. ಯೆಮನ್ ನಾಗರಿಕ ತಲಾಲ್ ಅಬ್ದೋ ಮೆಹದಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದಾರೆ. ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ನಿಮಿಷಾ, 2017 ರಲ್ಲಿ ಕೊಲೆ ಆರೋಪದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಅದಕ್ಕೂ ಮುನ್ನ ಅವರು ಹಲವಾರು ವರ್ಷಗಳ ಕಾಲ ಆ ದೇಶದಲ್ಲಿ ನರ್ಸ್ ಆಗಿ ಕೆಲಸ ಮಾಡಿದ್ದರು.

    ಯೆಮನ್ ಪ್ರಜೆಯ ಕೊಲೆ ಏಕಾಯ್ತು?
    ತಲಾಲ್ ಅವರ ಬೆಂಬಲದೊಂದಿಗೆ, ನಿಮಿಷಾ 2015ರ ಏಪ್ರಿಲ್‌ನಲ್ಲಿ ವಿದೇಶದಲ್ಲಿ ತನ್ನ ಕನಸಿನ ಚಿಕಿತ್ಸಾಲಯವನ್ನು ತೆರೆದರು. ಅಲ್ಲಿ ಅವರು ಮಾನಸಿಕ, ದೈಹಿಕ ಮತ್ತು ಆರ್ಥಿಕ ಕಿರುಕುಳವನ್ನು ಅನುಭವಿಸಿದ್ದಾರೆಂದು ಆರೋಪಿಸಲಾಗಿದೆ. ತಲಾಲ್ ಕ್ಲಿನಿಕ್‌ನಲ್ಲಿ ಶೇ.33 ರಷ್ಟು ಪಾಲನ್ನು ಪಡೆಯಲು ಸುಳ್ಳು ದಾಖಲೆ ಸೃಷ್ಟಿಸಿದ್ದ. ಆಕೆಯ ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಂಡಿದ್ದ. ಕಾನೂನುಬದ್ಧವಾಗಿ ಮದುವೆಯಾಗಿದ್ದಾವೆಂದು ಸೂಚಿಸಲು ವಿವಾಹ ಪ್ರಮಾಣಪತ್ರವನ್ನು ಸಹ ನಕಲಿ ಮಾಡಿದ್ದ. ಮಹ್ದಿ ತನ್ನ ಮೇಲೆ ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನಿಮಿಷಾ ಆರೋಪಿಸಿದ್ದರು.

    2017ರ ಜುಲೈನಲ್ಲಿ ನಿಮಿಷಾ ಜೈಲಿಗೆ ಭೇಟಿ ನೀಡಿದಾಗ, ತನ್ನ ಪಾಸ್‌ಪೋರ್ಟ್ ಅನ್ನು ಮರಳಿ ಪಡೆಯಲು ಮಹ್ದಿಗೆ ನಿದ್ರಾಜನಕ ಇನ್‌ಜೆಕ್ಷನ್ ಚುಚ್ಚಿದರು. ಪ್ರಮಾಣ ಅತಿಯಾದ್ದರಿಂದ ವ್ಯಕ್ತಿ ಮೃತಪಟ್ಟಿದ್ದ. ಮತ್ತೊಬ್ಬ ನರ್ಸ್ ಸಹಾಯ ಪಡೆದು ಮೃತದೇಹ ವಿಲೇವಾರಿಗೆ ಮುಂದಾಗಿದ್ದರು. ದೇಹವನ್ನು ಕತ್ತರಿಸಿ ನೀರಿನ ಟ್ಯಾಂಕ್‌ನಲ್ಲಿ ಭಾಗಗಳನ್ನು ವಿಲೇವಾರಿ ಮಾಡುವಂತೆ ಸೂಚಿಸಿದ್ದ. ಇಬ್ಬರೂ ತಲೆಮರೆಸಿಕೊಂಡಿದ್ದರು. ಕೊನೆಗೆ ಅವರನ್ನು ಪೊಲೀಸರು ಬಂಧಿಸಿದರು.

    ಯೆಮನ್ ನ್ಯಾಯಾಲಯ ತೀರ್ಪೇನು?
    ಕೊಲೆ ಪ್ರಕರಣದಲ್ಲಿ ಪ್ರಿಯಾಳನ್ನು ಬಂಧಿಸಿ ಯೆಮನ್‌ನಲ್ಲಿ ವಿಚಾರಣೆ ನಡೆಸಲಾಯಿತು. 2020 ರಲ್ಲಿ, ಸ್ಥಳೀಯ ನ್ಯಾಯಾಲಯವು ಆಕೆಗೆ ಒಮ್ಮೆ ಅಲ್ಲ, ಮೂರು ಬಾರಿ ಮರಣದಂಡನೆ ವಿಧಿಸಿತು. ನಂತರ ಮೇಲ್ಮನವಿ ನ್ಯಾಯಾಲಯವು ಒಂದು ಶಿಕ್ಷೆಯನ್ನು ರದ್ದುಗೊಳಿಸಿತು. ಆದಾಗ್ಯೂ, ದೇಶದ ಸುಪ್ರೀಂ ಕೋರ್ಟ್ ಉಳಿದ ಎರಡು ಶಿಕ್ಷೆಯನ್ನು ಎತ್ತಿಹಿಡಿಯಿತು. ಯೆಮನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ, ಕಳೆದ ವರ್ಷ ಆಕೆಗೆ ಮರಣದಂಡನೆಯನ್ನು ಅನುಮೋದಿಸಿದರು. ಪ್ರಿಯಾ ಪ್ರಸ್ತುತ ಸನಾ ಕೇಂದ್ರ ಜೈಲಿನಲ್ಲಿದ್ದಾರೆ. ಈ ವರ್ಷದ ಜನವರಿಯಲ್ಲಿ, ಹೌತಿ ನಿಯಂತ್ರಿತ ಸುಪ್ರೀಂ ಪೊಲಿಟಿಕಲ್ ಕೌನ್ಸಿಲ್‌ನ ಅಧ್ಯಕ್ಷ ಮಹ್ದಿ ಅಲ್-ಮಶಾತ್ ಅವರು ಮರಣದಂಡನೆಯನ್ನು ಅನುಮೋದಿಸಿದರು.

    ಅಂದಿನಿಂದ ಆದೇಶವು ಪ್ರಾಸಿಕ್ಯೂಟರ್ ಬಳಿಯೇ ಇತ್ತು. ಪ್ರಕರಣ ಮತ್ತಷ್ಟು ಸೂಕ್ಷ್ಮತೆ ಪಡೆದುಕೊಂಡಿದೆ. ಭಾರತೀಯ ಅಧಿಕಾರಿಗಳು ಅವರೊಂದಿಗೆ ಮತ್ತು ಯೆಮನ್‌ನಲ್ಲಿರುವ ಪ್ರಾಸಿಕ್ಯೂಟರ್ ಕಚೇರಿಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದಾರೆ. ಭಾರತದಲ್ಲಿರುವ ಮುಸ್ಲಿಂ ಧರ್ಮಗುರುಗಳು ಸಹ ಯೆಮನ್ ಮುಖಂಡರನ್ನು ಸಂಪರ್ಕಿಸಿ ಶಿಕ್ಷೆ ರದ್ದುಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಸ್ಥಳೀಯ ಅಧಿಕಾರಿಗಳು ಪ್ರಿಯಾರ ಮರಣದಂಡನೆಯನ್ನು ಮುಂದೂಡಿದರು. ಇದನ್ನೂ ಓದಿ: ಕೇರಳ ನರ್ಸ್ ನಿಮಿಷಾ ಪ್ರಿಯಾಗೆ ಮರಣದಂಡನೆ ಮುಂದೂಡಿಕೆ

    ನಿಮಿಷಾಳ ಕುಟುಂಬ ಗೋಳಾಟ
    ಕೊಚ್ಚಿಯಲ್ಲಿ ಮನೆಕೆಲಸ ಮಾಡುತ್ತಿರುವ ನಿಮಿಷಾಳ ತಾಯಿ ಪ್ರೇಮಾ ಕುಮಾರಿ, ಸಂಘರ್ಷಪೀಡಿತ ಯೆಮನ್‌ಗೆ ಪ್ರಯಾಣ ನಿಷೇಧದಿಂದ ವಿನಾಯಿತಿ ಪಡೆಯಲು ಕಳೆದ ವರ್ಷ ಡಿಸೆಂಬರ್‌ನಲ್ಲಿ ದೆಹಲಿ ಹೈಕೋರ್ಟ್ ಅನ್ನು ಸಂಪರ್ಕಿಸಿದರು. ಮಹ್ದಿ ಅವರ ಕುಟುಂಬದೊಂದಿಗೆ ಮನವಿ ಮಾಡಲು ಅವರು 2024 ರಲ್ಲಿ ಅಂತಿಮ ಪ್ರಯತ್ನವಾಗಿ ಯೆಮನ್‌ಗೆ ಪ್ರಯಾಣ ಬೆಳೆಸಿದರು. ಯೆಮನ್‌ನ ರಾಜಧಾನಿ ಸನಾಗೆ ತೆರಳಿದ್ದು, ಕಳೆದ ವರ್ಷದಿಂದ ಶಿಬಿರದಲ್ಲಿದ್ದಾರೆ. ಜೈಲಿನಲ್ಲಿ ಮಗಳನ್ನು ಭೇಟಿಯಾಗಿದ್ದಾರೆ. ಮಗಳನ್ನು ಶಿಕ್ಷೆಯಿಂದ ಪಾರು ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ.

    ಮರಣದಂಡನೆಗೆ ಭಾರತ ಸರ್ಕಾರ ಪ್ರತಿಕ್ರಿಯೆ ಏನು?
    ಕಳೆದ ವರ್ಷ ಯೆಮನ್ ಅಧ್ಯಕ್ಷರು ಮರಣದಂಡನೆಯನ್ನು ಅನುಮೋದಿಸಿದಾಗ, ದೆಹಲಿಯಲ್ಲಿರುವ ವಿದೇಶಾಂಗ ಸಚಿವಾಲಯವು ಆಕೆ ಮತ್ತು ಆಕೆಯ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಹೇಳಿತ್ತು. ಭಾರತದ ಸುಪ್ರೀಂ ಕೋರ್ಟ್ ಕಳೆದ ವಾರ ಜುಲೈ 14 ರಂದು ನಿಮಿಷಾ ಪ್ರಕರಣವನ್ನು ವಿಚಾರಣೆ ನಡೆಸಲು ಒಪ್ಪಿಕೊಂಡಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ತೆಗೆದುಕೊಂಡಿರಬಹುದಾದ ಯಾವುದೇ ಕ್ರಮಗಳ ಬಗ್ಗೆ ಕೇಂದ್ರಕ್ಕೆ ತಿಳಿಸುವಂತೆ ಕೇಳಿತು. ಭಾರತ ಸರ್ಕಾರವು ಇತರ ಪಕ್ಷದೊಂದಿಗೆ ಪರಸ್ಪರ ಒಪ್ಪಬಹುದಾದ ಪರಿಹಾರವನ್ನು ತಲುಪಿಸಲು ಕುಟುಂಬಕ್ಕೆ ಹೆಚ್ಚಿನ ಸಮಯವನ್ನು ಕೋರಲು ಸಂಘಟಿತ ಪ್ರಯತ್ನಗಳನ್ನು ಮಾಡಿತು. ಇದು ಅಂತಿಮವಾಗಿ ಮರಣದಂಡನೆಯನ್ನು ಮುಂದೂಡಲು ಕಾರಣವಾಯಿತು.

    ಸುಪ್ರೀಂ ಕೋರ್ಟ್‌ಗೆ ಕೇಂದ್ರ ಏನು ಹೇಳಿದೆ?
    ಕೇರಳ ನರ್ಸ್ ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ಶತಪ್ರಯತ್ನ ಮಾಡಿದೆ. ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ವಾದ ಮಂಡಿಸಿ, ತನ್ನ ಪ್ರಜೆಗಳನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದ್ದು, ನಿಮಿಷಾ ಪ್ರಿಯಾ ವಿಚಾರದಲ್ಲಿ ಏನೆಲ್ಲಾ ಮಾಡಬಹುದೋ ಅದನ್ನೆಲ್ಲ ಮಾಡುತ್ತಿದೆ. ಸದ್ಯದ ಮಟ್ಟಿಗೆ ಗಲ್ಲು ಶಿಕ್ಷೆ ಜಾರಿಯನ್ನು ಅಮಾನತಿನಲ್ಲಿಡಲು ಸಾಧ್ಯವಾಗುವಂತಹ ದಾರಿಯನ್ನು ಪತ್ತೆ ಮಾಡುವಂತೆ ಆ ಪ್ರದೇಶದ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಸರ್ಕಾರ ಪತ್ತೆ ಬರೆದಿತ್ತು. ಯೆಮನ್‌ನಲ್ಲಿ ಹೆಚ್ಚು ಪ್ರಭಾವ ಹೊಂದಿರುವ ಕೆಲವು ಶೇಖ್‌ಗಳ ಜೊತೆಗೆ ಮಾತುಕತೆಯನ್ನೂ ನಡೆಸಿದೆ ಎಂದು ಮಾಹಿತಿ ನೀಡಿದ್ದಾರೆ.

    ಕೇರಳ ಸರ್ಕಾರ ಏನು ಹೇಳುತ್ತೆ?
    ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ಪ್ರಧಾನಿ ಮೋದಿಯವರಿಗೆ ಪತ್ರದಲ್ಲಿ ವಿಜಯನ್ ಹೀಗೆ ಬರೆದಿದ್ದಾರೆ, ‘ಕೇರಳ ಸರ್ಕಾರವು ಪ್ರಿಯಾರ ಸುರಕ್ಷಿತ ವಾಪಸಾತಿಗಾಗಿ ಶ್ರಮಿಸುತ್ತಿರುವ ಎಲ್ಲರೊಂದಿಗೂ ದೃಢವಾಗಿ ನಿಲ್ಲುತ್ತದೆ. ಈ ಪ್ರಕರಣವು ಸಹಾನುಭೂತಿಗೆ ಅರ್ಹವಾಗಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಕೇರಳ ನರ್ಸ್‌ ತಪ್ಪಿಗೆ ಕ್ಷಮೆಯಿಲ್ಲ, ಗಲ್ಲಿಗೇರಿಸಲೇಬೇಕು: ಕೊಲೆಯಾದ ಯೆಮನ್‌ ವ್ಯಕ್ತಿ ಸಹೋದರ ಪ್ರತಿಕ್ರಿಯೆ

    ಸಮುದಾಯದ ಮುಖಂಡರು ತೆಗೆದುಕೊಂಡ ಕ್ರಮಗಳೇನು?
    ನಿಮಿಷಾ ಪ್ರಿಯಾರ ಜೀವ ಉಳಿಸಲು ಯೆಮನ್‌ನಲ್ಲಿ ವಿವಿಧ ಹಂತಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಆಕೆ ಜೀವ ಉಳಿಸುವ ಚರ್ಚೆಗಳು ನಿರ್ಣಾಯಕ ಹಂತದಲ್ಲಿವೆ. ಸಕಾರಾತ್ಮಕ ಫಲಿತಾಂಶದ ಬಗ್ಗೆ ನಮಗೆ ಭರವಸೆ ಇದೆ. ಭಾರತೀಯ ಕಾರ್ಯಾಚರಣೆಯೊಂದಿಗೆ ಸಂಬAಧ ಹೊಂದಿರುವ ಇಬ್ಬರು ಯೆಮನ್ ನಾಗರಿಕರು ಮತ್ತು ಸಮಾಲೋಚಕ ಸ್ಯಾಮ್ಯುಯೆಲ್ ಜೆರೋಮ್ ಭಾಸ್ಕರನ್ ಚರ್ಚೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಮೂಲವೊಂದು ತಿಳಿಸಿದೆ.

    ಮರಣದಂಡನೆಯನ್ನು ಮುಂದೂಡಿದ ಬಗ್ಗೆ ಯೆಮನ್ ಅಧಿಕಾರಿಗಳೊಂದಿಗೆ ಚರ್ಚೆಗಳನ್ನು ನಡೆಸುತ್ತಿದ್ದ ಸಂಧಾನಕಾರ ಭಾಸ್ಕರನ್, ‘ಯೆಮನ್ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ವಿದೇಶಾಂಗ ಸಚಿವಾಲಯಕ್ಕೆ ನಾನು ಧನ್ಯವಾದ ಹೇಳುತ್ತೇನೆ’ ಎಂದು ತಿಳಿಸಿದ್ದಾರೆ. ಪ್ರಮುಖ ಮುಸ್ಲಿಂ ನಾಯಕ ಮತ್ತು ಅಖಿಲ ಭಾರತ ಸುನ್ನಿ ಜಮಿಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಕೂಡ ನಿಮಿಷಾರ ಬಿಡುಗಡೆಗೆ ಪ್ರಯತ್ನಿಸಲು ಮಧ್ಯಸ್ಥಿಕೆ ವಹಿಸಿದ್ದಾರೆ. ತಲಾಲ್ ಕುಟುಂಬವು ಮಹಿಳೆಗೆ ಕ್ಷಮೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ಯೆಮನ್‌ನ ಪ್ರಮುಖ ಸೂಫಿ ವಿದ್ವಾಂಸರೊಬ್ಬರು ತಲಾಲ್ ಅವರ ಕುಟುಂಬ ಮತ್ತು ಸ್ಥಳೀಯ ನಾಯಕತ್ವದೊಂದಿಗೆ ಚರ್ಚೆ ನಡೆಸಬೇಕೆಂದು ಮುಸ್ಲಿಯಾರ್ ಒತ್ತಾಯಿಸಿದ್ದಾರೆ.

    ಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್ ಎಂದರೇನು?
    2020 ರಲ್ಲಿ ರಚಿಸಲಾದ ಗ್ರೂಪ್ ಇದು. ಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್, ನರ್ಸ್ ಜೀವ ಉಳಿಸುವ ಪ್ರಯತ್ನಗಳನ್ನು ಮುನ್ನಡೆಸಿದೆ. ದೇಣಿಗೆ ಮತ್ತು ಕ್ರೌಡ್‌ಫಂಡಿಂಗ್ ಮೂಲಕ, ಕೌನ್ಸಿಲ್ 1 ಮಿಲಿಯನ್ ಡಾಲರ್ ಸಂಗ್ರಹಿಸಿದೆ. ಮೃತ ವ್ಯಕ್ತಿಯ ಕುಟುಂಬದೊಂದಿಗೆ ಮಾತುಕತೆ ನಡೆಸಲು ಯೆಮನ್ ಮೂಲದ ಸಾಮಾಜಿಕ ಕಾರ್ಯಕರ್ತ ಸ್ಯಾಮ್ಯುಯೆಲ್ ಜೆರೋಮ್ ಭಾಸ್ಕರನ್ ಅವರನ್ನು ನಾಮನಿರ್ದೇಶನ ಮಾಡಿದೆ. ಇದನ್ನೂ ಓದಿ: ಕೇರಳದ ನರ್ಸ್‌ಗೆ ಜು.16ರಂದು ಯೆಮೆನ್‌ನಲ್ಲಿ ನೇಣು; ಮರಣದಂಡನೆ ತಡೆಯಲು ಸಾಧ್ಯವಿಲ್ಲ – ಸುಪ್ರೀಂಗೆ ಕೇಂದ್ರ ಮಾಹಿತಿ

    ಕಿಸಾಸ್‌ ಕಾನೂನು ಏನು ಹೇಳುತ್ತೆ?
    ಯೆಮನ್‌ ದೇಶದಲ್ಲಿ ಇಸ್ಲಾಮಿಕ್‌ ಕಾನೂನು ಇದೆ. ಕಿಸಾಸ್‌ ಎಂದರೆ, ಕೊಲೆಯಾದ ವ್ಯಕ್ತಿಯನ್ನು ಅಪರಾಧಿ ಸ್ಥಾನದಲ್ಲಿರುವವರು ಯಾವ ರೀತಿ ಕೊಂದಿದ್ದಾರೋ ಅದೇ ರೀತಿಯ ಶಿಕ್ಷೆಯನ್ನು ನೀಡಬೇಕೆಂದು ಹೇಳುತ್ತದೆ. ಸಾಮಾನ್ಯವಾಗಿ ಇದು ಮರಣದಂಡನೆಯಾಗಿರುತ್ತದೆ.

    ಶಿಕ್ಷೆ ತಪ್ಪಿಸಲು ಇರೋದೊಂದೇ ದಾರಿ
    ಪ್ರಿಯಾ ಅವರು ಯೆಮನ್‌ನಲ್ಲಿದ್ದು ಸಾಮಾಜಿಕ ಕಾರ್ಯಕರ್ತರೊಬ್ಬರೊಂದಿಗೆ ಕ್ಷಮಾ ಪರಿಹಾರ ಮೊತ್ತದ (ಬ್ಲಡ್ ಮನಿ) ವಿಚಾರವಾಗಿ ಮೃತಪಟ್ಟ ವ್ಯಕ್ತಿಯ ಕುಟುಂಬದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಆತನ ಕುಟುಂಬವು ಕ್ಷಮಾ ಪರಿಹಾರ ಮೊತ್ತವನ್ನು ಸ್ವೀಕರಿಸಲು ಒಪ್ಪಿದರೆ ಮಾತ್ರ ಮರಣ ದಂಡನೆಯನ್ನು ತಪ್ಪಿಸಲು ಸಾಧ್ಯ.

  • ಅಪ್ರಾಪ್ತೆಯ ಅತ್ಯಾಚಾರವೆಸಗಿ ಕೊಲೆ- ಅಪರಾಧಿಗೆ ಮರಣದಂಡನೆ

    ಅಪ್ರಾಪ್ತೆಯ ಅತ್ಯಾಚಾರವೆಸಗಿ ಕೊಲೆ- ಅಪರಾಧಿಗೆ ಮರಣದಂಡನೆ

    ಮುಂಬೈ: ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಪ್ರಕರಣದಲ್ಲಿ 24 ವರ್ಷದ ಅಪರಾಧಿಗೆ ಪುಣೆಯ ಸೆಷನ್ಸ್ ನ್ಯಾಯಾಲಯ (Pune Sessions Court) ಮರಣದಂಡನೆ (Death Penalty) ವಿಧಿಸಿ ತೀರ್ಪು ನೀಡಿದೆ. ಅಲ್ಲದೇ ಸಾಕ್ಷ್ಯವನ್ನು ಮರೆಮಾಚಿದಕ್ಕಾಗಿ ಮತ್ತು ಘಟನೆಯನ್ನು ಪೊಲೀಸರಿಗೆ (Police) ತಿಳಿಸದ ಆರೋಪದ ಮೇಲೆ ಆತನ ತಾಯಿಗೂ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

    ಆಗಸ್ಟ್ 2022 ರಲ್ಲಿ ಆರು ವರ್ಷ ವಯಸ್ಸಿನ ಬಾಲಕಿ ತನ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಮಾವಲ್ ತಾಲೂಕಿನ ಕಾಮಶೆಟ್ ನಿವಾಸಿಯಾದ ಅಪರಾಧಿ ಅವಳನ್ನು ಅಪಹರಿಸಿ, ಅತ್ಯಾಚಾರ ಮಾಡಿ ಕತ್ತು ಸೀಳಿ ಹತ್ಯೆಗೈದಿದ್ದ. ಬಳಿಕ ಮೃತದೇಹವನ್ನು ತನ್ನ ಮನೆಯ ಹಿಂದಿನ ಮರದ ಕೆಳಗಿನ ಗುಂಡಿಯಲ್ಲಿ ಹೂತುಹಾಕಲು ಪ್ರಯತ್ನಿಸಿದ್ದ. ಈ ವೇಳೆ ಆತನ ತಾಯಿ ತನ್ನ ಮಗನನ್ನು ಶಿಕ್ಷೆಯಿಂದ ರಕ್ಷಿಸಲು ಮೃತ ಬಾಲಕಿಯ ಬಟ್ಟೆ ಮತ್ತು ವಸ್ತುಗಳನ್ನು ಬಚ್ಚಿಟ್ಟಿದ್ದಳು. ಮರುದಿನ ಆತನ ಮನೆಯ ಹಿಂದೆ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಬಳಿಕ ಅಪರಾಧಿಯನ್ನು ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ರಷ್ಯಾದಲ್ಲಿ ಉಗ್ರರ ಅಟ್ಟಹಾಸ- 70ಕ್ಕೂ ಹೆಚ್ಚು ಮಂದಿ ದುರ್ಮರಣ

    ಪೊಲೀಸರ ತನಿಖೆಯ ಸಮಯದಲ್ಲಿ ಇಬ್ಬರೂ ಅಪರಾಧಿಗಳು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದರು. ಅಲ್ಲದೇ ನ್ಯಾಯಾಲಯದಲ್ಲೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು. ಬಳಿಕ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಬ್ಬರೂ ಅಪರಾಧಿಗಳಿಗೂ ಶಿಕ್ಷೆ ಪ್ರಕಟಿಸಿದೆ.

    ಶಿಕ್ಷೆ ಪ್ರಕಟಿಸುವ ವೇಳೆ ನ್ಯಾಯಾಲಯ, ಅಪರಾಧಿ ಲೈಂಗಿಕ ಹುಚ್ಚನಾಗಿದ್ದಾನೆ. ಕ್ರೂರ ಲೈಂಗಿಕ ಆಲೋಚನೆಗಳಿಂದ ಗೀಳನ್ನು ಹೊಂದಿದ್ದಾನೆ. ಮಕ್ಕಳ ಅಶ್ಲೀಲತೆಯನ್ನು ವೀಕ್ಷಿಸಲು ವ್ಯಸನಿಯಾಗಿದ್ದು, ಈತ ಎಸಗಿರುವುದು ಅತ್ಯಂತ ಹೇಯ ಕೃತ್ಯ ಎಂದಿದೆ. ಸರಿಸುಮಾರು ಕೃತ್ಯ ನಡೆದ ಒಂದು ವರ್ಷ, ಏಳು ತಿಂಗಳಲ್ಲಿ ಶಿಕ್ಷೆ ಪ್ರಕಟವಾಗಿದೆ. ಇದನ್ನೂ ಓದಿ: ಅರವಿಂದ್‌ ಕೇಜ್ರಿವಾಲ್‌ 7 ದಿನಗಳ ಕಾಲ ಇ.ಡಿ ಕಸ್ಟಡಿಗೆ

  • ಬಿಜೆಪಿ ಮುಖಂಡನ ಹತ್ಯೆ: 15 ಪಿಎಫ್‌ಐ ಕಾರ್ಯಕರ್ತರಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್

    ಬಿಜೆಪಿ ಮುಖಂಡನ ಹತ್ಯೆ: 15 ಪಿಎಫ್‌ಐ ಕಾರ್ಯಕರ್ತರಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್

    ಮಾವೇಲಿಕ್ಕರ (ಆಲೆಪ್ಪಿ): ಬಿಜೆಪಿ (BJP) ಮುಖಂಡ ಹಾಗೂ ವಕೀಲ ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣದ ಆರೋಪಿಗಳಾದ 15 ಪಿಎಫ್‌ಐ ಕಾರ್ಯಕರ್ತರಿಗೆ (PFI Activists) ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶೆ (ಒಂದು) ವಿ.ಜಿ.ಶ್ರೀದೇವಿ ಶಿಕ್ಷೆ ಪ್ರಕಟಿಸಿದ್ದು, ಆರೋಪಿಗಳು ಯಾವುದೇ ರೀತಿಯ ಕರುಣೆಗೂ ಅರ್ಹರಲ್ಲ ಎಂದು ತೀರ್ಪು ನೀಡಿದರು.

    ಆರೋಪಿಗಳ್ಯಾರು..?
    ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರಾದ ನಿಸಾಮ್, ಅಜ್ಮಲ್, ಅನೂಪ್, ಮುಹಮ್ಮದ್ ಅಸ್ಲಂ, ಮಣ್ಣಂಜೇರಿ ಞರವೇಲಿ ಅಬ್ದುಲ್ ಕಲಾಂ ಅಲಿಯಾಸ್ ಸಲಾಂ, ಅಬ್ದುಲ್ ಕಲಾಂ, ಸರಫುದ್ದೀನ್, ಮನ್ಷಾದ್, ಜಸೀಬ್ ರಾಜ, ನವಾಸ್, ಸಮೀರ್, ನಸೀರ್, ಝಕೀರ್ ಹುಸೈನ್, ಷಾಜಿ, ಶೆರ್ನಾಝ್ ಅಶ್ರಫ್ ಆರೋಪಿಗಳು. 10ನೇ ಆರೋಪಿ ನವಾಜ್ ಅನಾರೋಗ್ಯದಿಂದ ಬಳಲುತ್ತಿದ್ದು, ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ: ED  ಕೈಗೆ ಸಿಗದ ಜಾರ್ಖಂಡ್ ಸಿಎಂ – ಹೇಮಂತ್ ಸೊರೆನ್  BMW ಕಾರು  ವಶಕ್ಕೆ

    ಬಿಗಿ ಬಂದೋಬಸ್ತ್:
    ಈ ತಿಂಗಳ 20 ರಂದು ಎಲ್ಲಾ ಆರೋಪಿಗಳು ತಪ್ಪಿತಸ್ಥರು ಎಂದು ಘೋಷಿಸಿತು. ಬಳಿಕ ಆರೋಪಿಗಳ ವಾದವನ್ನು ಆಲಿಸಿದ ಬಳಿಕ ಶಿಕ್ಷೆ ಪ್ರಕಟಿಸುವ ದಿನಾಂಕವನ್ನು ಇಂದಿಗೆ ಮುಂದೂಡಲಾಯಿತು. ಇಂದು ತೀರ್ಪು ಪ್ರಕಟಿಸುವ ವೇಳೆ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಚೆಂಗನ್ನೂರು ಮತ್ತು ಕಾಯಂಕುಳಂ ಡಿವೈಎಸ್ಪಿಗಳು ನ್ಯಾಯಾಲಯದಲ್ಲಿ ಭದ್ರತೆ ಒದಗಿಸಿದರು. ಇದನ್ನೂ ಓದಿ: ಕಡಲ್ಗಳ್ಳರಿಂದ ಅಪಹರಣಕ್ಕೆ ಒಳಗಾಗಿದ್ದ 19 ಪಾಕ್ ನಾವಿಕರನ್ನು ರಕ್ಷಿಸಿದ ಭಾರತೀಯ ನೌಕಾಪಡೆ

    ಪ್ರಕರಣದ ವಿವರ:
    2012ರ ಡಿಸೆಂಬರ್ 19ರಂದು ರಂಜಿತ್ ಶ್ರೀನಿವಾಸನ್ ಅವರು ವಾಸವಾಗಿದ್ದ ಆಲೆಪ್ಪಿಯ ಮನೆಗೆ ಪ್ರವೇಶಿಸಿದ ಅರೋಪಿಗಳು ಕುಟುಂಬ ಸದಸ್ಯರ ಎದುರೇ ಕೊಚ್ಚಿ ಕೊಲೆ ಮಾಡಿದ್ದರು. ಆಲೆಪ್ಪಿ ಜಿಲ್ಲೆಯಲ್ಲಿ ನಡೆದ 3 ಸರಣಿ ರಾಜಕೀಯ ಕೊಲೆಗಳಲ್ಲಿ ಕೊನೆಯದಾಗಿ ರಂಜಿತ್ ಕೊಲೆಯಾಗಿತ್ತು. ವಯಲಾರ್‌ನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ಆರ್.ನಂದುಕೃಷ್ಣ ಹತ್ಯೆಯಾದ ಮೊದಲ ವ್ಯಕ್ತಿ. ನಂತರ ಮಣ್ಣಂಜೇರಿಯಲ್ಲಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಎಸ್.ಶಾನ್ ಕೊಲೆಯಾಗಿತ್ತು. ಇದರ ಮರುದಿನ ಬೆಳಗ್ಗೆ ರಂಜಿತ್ ಕೊಲೆಯಾಗಿತ್ತು. ಇದನ್ನೂ ಓದಿ: ‘ಬಾಯ್ಕಾಟ್‌ ಮಾಲ್ಡೀವ್ಸ್‌’ ಎಫೆಕ್ಟ್‌ – ಮಾಲ್ಡೀವ್ಸ್‌ ಪ್ರವಾಸ ರ‍್ಯಾಂಕಿಂಗ್‌ನಲ್ಲಿ ನಂ.1 ರಿಂದ 5ನೇ ಸ್ಥಾನಕ್ಕೆ ಕುಸಿದ ಭಾರತ

    ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಅಭಿಯೋಜಕ ಪ್ರತಾಪ್ ಜಿ.ಪಡಿಕ್ಕಲ್ ವಾದ ಮಂಡಿಸಿದ್ದರು. ನ್ಯಾಯಾಲಯವು ಆರೋಪಿಗಳ ಬಗ್ಗೆ ರಾಜ್ಯ ಸರ್ಕಾರ, ಜಿಲ್ಲಾ ಪರೀಕ್ಷಾಧಿಕಾರಿ, ಜೈಲಿನಲ್ಲಿ ಆರೋಪಿಗಳಿದ್ದಾಗ ಇದ್ದ ಅವರ ಮಾನಸಿಕ ವರ್ತನೆಯ ವರದಿ, ಮನೋವೈದ್ಯಕೀಯ ವರದಿಯನ್ನು ಪಡೆದುಕೊಂಡಿತ್ತು. ಇದನ್ನೂ ಓದಿ: ನಮ್ಮ ಮಕ್ಕಳು ಲೆಹೆಂಗಾ ಧರಿಸಿ ಶಾಲೆಗೆ ಹೋಗ್ತಾರೆ: ಹಿಜಬ್‌ ವಿರುದ್ಧ ಬಿಜೆಪಿ ಶಾಸಕ ಹೇಳಿಕೆ

  • ಕತಾರ್‌ನಲ್ಲಿ ಬಂಧಿತರಾಗಿದ್ದ 8 ಮಾಜಿ ನೌಕಾಪಡೆ ಸಿಬ್ಬಂದಿಗೆ ಮರಣದಂಡನೆ! – ಭಾರತಕ್ಕೆ ಆಘಾತ

    ಕತಾರ್‌ನಲ್ಲಿ ಬಂಧಿತರಾಗಿದ್ದ 8 ಮಾಜಿ ನೌಕಾಪಡೆ ಸಿಬ್ಬಂದಿಗೆ ಮರಣದಂಡನೆ! – ಭಾರತಕ್ಕೆ ಆಘಾತ

    ದೋಹಾ: ಕತಾರ್‌ನಲ್ಲಿ (Qatar) 1 ವರ್ಷಕ್ಕೂ ಹೆಚ್ಚು ಕಾಲ ಬಂಧಿತರಾಗಿರುವ 8 ಮಾಜಿ ಭಾರತೀಯ ನೌಕಾಪಡೆ ಸಿಬ್ಬಂದಿಗೆ (Former Navy Personnel) ಗುರುವಾರ ಕತಾರ್‌ನ ನ್ಯಾಯಾಲಯ ಮರಣದಂಡನೆ (Death Penalty) ವಿಧಿಸಿದೆ. ಈ ತೀರ್ಪಿಗೆ ಭಾರತ (India) ತೀವ್ರ ಆಘಾತ ವ್ಯಕ್ತಪಡಿಸಿದೆ ಮತ್ತು ಸಾಧ್ಯವಿರುವ ಎಲ್ಲಾ ಕಾನೂನು ಕ್ರಮಗಳನ್ನು ಅನ್ವೇಷಿಸುತ್ತಿರುವುದಾಗಿ ಹೇಳಿದೆ.

    ನಾವು ಮರಣದಂಡನೆಯ ತೀರ್ಪಿನಿಂದ ತೀವ್ರ ಆಘಾತಕ್ಕೊಳಗಾಗಿದ್ದೇವೆ ಮತ್ತು ವಿವರವಾದ ತೀರ್ಪಿಗಾಗಿ ಕಾಯುತ್ತಿದ್ದೇವೆ. ನಾವು ಅವರ ಕುಟುಂಬ ಸದಸ್ಯರು ಮತ್ತು ಕಾನೂನು ತಂಡದೊಂದಿಗೆ ಸಂಪರ್ಕದಲ್ಲಿದ್ದೇವೆ. ಸಾಧ್ಯವಿರುವ ಎಲ್ಲಾ ಕಾನೂನು ಆಯ್ಕೆಗಳನ್ನು ಅನ್ವೇಷಿಸುತ್ತಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

    ನಾವು ಈ ಪ್ರಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದೇವೆ ಮತ್ತು ಅದನ್ನು ನಿಕಟವಾಗಿ ಅನುಸರಿಸುತ್ತಿದ್ದೇವೆ. ನಾವು ಎಲ್ಲಾ ಕಾನೂನು ಸಹಾಯವನ್ನು ವಿಸ್ತರಿಸುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದೆ. ಆದರೂ ಎಂಇಎ ತನ್ನ ಹೇಳಿಕೆಯಲ್ಲಿ ಪ್ರಕ್ರಿಯೆಗಳ ಗೌಪ್ಯ ಸ್ವರೂಪವನ್ನು ಒಪ್ಪಿಕೊಂಡಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಇದನ್ನೂ ಓದಿ: 2036ರ ಜಾಗತಿಕ ಕ್ರೀಡಾಹಬ್ಬಕ್ಕೆ ಭಾರತ ತಯಾರಿ ಶುರು – ಮುಂದಿರುವ ಸವಾಲುಗಳೇನು?

    ಏನಿದು ಪ್ರಕರಣ?
    ಕಳೆದ ವರ್ಷ ಆಗಸ್ಟ್‌ನಲ್ಲಿ ಕತಾರ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 8 ಮಾಜಿ ಭಾರತೀಯ ನೌಕಾಪಡೆ ಸಿಬ್ಬಂದಿಯನ್ನು ಇಸ್ರೇಲ್‌ಗೆ ಗೂಢಾಚಾರ ಕೆಲಸ ಮಾಡುತ್ತಿದ್ದ ಶಂಕೆಯ ಮೇಲೆ ಬಂಧಿಸಲಾಗಿತ್ತು. ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಾದ ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಟ್, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಸಂಜೀವ್ ಗುಪ್ತಾ ಮತ್ತು ನಾವಿಕ ರಾಗೇಶ್ ಅವರನ್ನು 2022ರ ಆಗಸ್ಟ್ 30 ರಂದು ಕತಾರ್‌ನ ಗುಪ್ತಚರ ಸಂಸ್ಥೆ ದೋಹಾದಿಂದ ಬಂಧಿಸಿತ್ತು.

    ಬಂಧಿತ ಮಾಜಿ ನೌಕಾಪಡೆ ಸಿಬ್ಬಂದಿಯ ಜಾಮೀನು ಅರ್ಜಿಗಳನ್ನು ಕತಾರ್ ಅಧಿಕಾರಿಗಳು ಹಲವಾರು ಬಾರಿ ತಿರಸ್ಕರಿಸಿದ್ದರು. ಈ ಹಿಂದಿನ ದಿನಗಳಲ್ಲಿ ಕತಾರ್‌ನ ಪ್ರಥಮ ನಿದರ್ಶನದ ನ್ಯಾಯಾಲಯವು ಮರಣದಂಡನೆಯನ್ನು ಘೋಷಿಸಿತು. ಮಾಧ್ಯಮ ವರದಿಗಳ ಪ್ರಕಾರ ಬಂಧಿತರು ಇಸ್ರೇಲ್ ಪರವಾಗಿ ಜಲಾಂತರ್ಗಾಮಿ ವಿಷಯಕ್ಕೆ ಸಂಬಂಧಿಸಿದ ಬೇಹುಗಾರಿಕೆಯ ಆರೋಪಗಳನ್ನು ಎದುರಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕತಾರ್ ಅಧಿಕಾರಿಗಳು ಹೆಚ್ಚುವರಿಯಾಗಿ ಎಲೆಕ್ಟ್ರಾನಿಕ್ ಪುರಾವೆಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿ ವಾಯುಮಾಲಿನ್ಯಕ್ಕೆ ಮೂಲ ಗೊತ್ತಿಲ್ಲ – ಆಪ್ ಸಚಿವೆ ವಿವಾದಾತ್ಮಕ ಹೇಳಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಪ್ರಾಪ್ತೆಯರ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ, ಗ್ಯಾಂಗ್‌ ರೇಪ್‌ಗೆ 20 ವರ್ಷ ಜೈಲು – ಲೋಕಸಭೆಯಲ್ಲಿ 3 ಮಸೂದೆ ಮಂಡಿಸಿದ ಅಮಿತ್‌ ಶಾ

    ಅಪ್ರಾಪ್ತೆಯರ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ, ಗ್ಯಾಂಗ್‌ ರೇಪ್‌ಗೆ 20 ವರ್ಷ ಜೈಲು – ಲೋಕಸಭೆಯಲ್ಲಿ 3 ಮಸೂದೆ ಮಂಡಿಸಿದ ಅಮಿತ್‌ ಶಾ

    ನವದೆಹಲಿ: ಕ್ರಿಮಿನಲ್ ಕಾನೂನುಗಳನ್ನು ಪರಿಷ್ಕರಿಸುವ ಮೂರು ಮಸೂದೆಗಳನ್ನು ಕೇಂದ್ರ ಗೃಹಸಚಿವ ಅಮಿತ್‌ ಶಾ (Amit Shah) ಅವರು ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಿದ್ದಾರೆ.

    ದೇಶದ ಕ್ರಿಮಿನಲ್ ಕಾನೂನುಗಳನ್ನು ಕೂಲಂಕಷವಾಗಿ ಪರಿಶೀಲಿಸುವ ಹೊಸ ಮಸೂದೆಯನ್ನು ಅಮಿತ್ ಶಾ ಅವರು ಸಂಸತ್ತಿನಲ್ಲಿ ಮಂಡಿಸಿದರು. ಹೊಸ ಮಸೂದೆಗಳೊಂದಿಗೆ ಸರ್ಕಾರವು ನ್ಯಾಯವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆಯೇ ಹೊರತು, ಶಿಕ್ಷೆಯನ್ನಲ್ಲ ಎಂದು ಮಸೂದೆ ಮಂಡನೆ ವೇಳೆ ಅಮಿತ್‌ ಶಾ ತಿಳಿಸಿದ್ದಾರೆ. ಇದನ್ನೂ ಓದಿ: ವಿಪಕ್ಷಗಳ ಮೈತ್ರಿಯಲ್ಲಿರುವ INDIA ಹೆಸರನ್ನು ನಿರ್ಬಂಧಿಸಿ – ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

    ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಗುಂಪು ಹಿಂಸಾಚಾರಕ್ಕೆ ಮರಣದಂಡನೆ ಶಿಕ್ಷೆ ವಿಧಿಸುವುದನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಅಲ್ಲದೇ ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗಳಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಲಾಗಿದೆ. ಭಾರತೀಯ ದಂಡ ಸಂಹಿತೆ (IPC), ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (CrPC) ಮತ್ತು ಭಾರತೀಯ ಸಾಕ್ಷಿ ಕಾಯಿದೆಯನ್ನು ಬದಲಿಸುವ ಮಸೂದೆಯನ್ನು ಅಮಿತ್‌ ಶಾ ಮಂಡಿಸಿದ್ದಾರೆ.

    ವಿವಾದಾತ್ಮಕ ದೇಶದ್ರೋಹ ಕಾನೂನನ್ನು ಸಂಪೂರ್ಣವಾಗಿ ರದ್ದುಗೊಳಿಸುವ ನಿಬಂಧನೆಯನ್ನು ಮಸೂದೆ ಹೊಂದಿದೆ. ಮಸೂದೆಯು IPCಯನ್ನು ಬದಲಿಸುವ ಗುರಿಯನ್ನು ಹೊಂದಿದೆ ಎಂದು ಅಮಿತ್‌ ಶಾ ಸಂಸತ್‌ನಲ್ಲಿ ಹೇಳಿದ್ದಾರೆ. ಇದನ್ನೂ ಓದಿ: 50ರ ಅಜ್ಜಿಗೆ ಫ್ಲೈಯಿಂಗ್ ಕಿಸ್ ಕೊಡಲು ರಾಹುಲ್‌ಗೇನು ಹುಡುಗಿಯರ ಕೊರತೆ ಇಲ್ಲ: ಕಾಂಗ್ರೆಸ್ ಶಾಸಕಿ ಹೇಳಿಕೆ

    ಅಪರಾಧದ ತೀವ್ರತೆಗೆ ಅನುಗುಣವಾಗಿ ಗುಂಪು ಹತ್ಯೆ ಪ್ರಕರಣಗಳಲ್ಲಿ ಮರಣದಂಡನೆ, ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಲಂಚ ನೀಡಿದರೆ ಒಂದು ವರ್ಷ ಜೈಲು ಶಿಕ್ಷೆ, ಸಾಮೂಹಿಕ ಅತ್ಯಾಚಾರಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆ, ಅಪ್ರಾಪ್ತೆಯರ ಅತ್ಯಾಚಾರಕ್ಕೆ ಮರಣದಂಡನೆ ಅಂಶಗಳನ್ನು ಮಸೂದೆ ಒಳಗೊಂಡಿದೆ.

    1860 ರ ಭಾರತೀಯ ದಂಡ ಸಂಹಿತೆಯನ್ನು ಭಾರತೀಯ ನ್ಯಾಯ ಸಂಹಿತಾದಿಂದ ಬದಲಾಯಿಸಲಾಗುವುದು. ಮೊದಲು 511 ವಿಭಾಗಗಳಿದ್ದವು, ಆದರೆ ಈಗ ಅದು 356 ವಿಭಾಗಗಳನ್ನು ಹೊಂದಿರುತ್ತದೆ. 175 ಪರಿಚ್ಛೇದಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತ್ನಿ, ಸ್ವಂತ ಮಕ್ಕಳು ಸೇರಿ ಐವರನ್ನ ಕೊಂದಿದ್ದ ಆರೋಪಿಗೆ ಮರಣದಂಡನೆ ಶಿಕ್ಷೆ

    ಪತ್ನಿ, ಸ್ವಂತ ಮಕ್ಕಳು ಸೇರಿ ಐವರನ್ನ ಕೊಂದಿದ್ದ ಆರೋಪಿಗೆ ಮರಣದಂಡನೆ ಶಿಕ್ಷೆ

    ಬಳ್ಳಾರಿ: ಹೆಂಡತಿಯ ಶೀಲ ಶಂಕಿಸಿ ಐವರನ್ನು ಕೊಚ್ಚಿ ಕೊಲೆ ಮಾಡಿದ್ದ, ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಧಾರವಾಡ ಹೈಕೋರ್ಟ್‌ (Dharwad High Court) ಆದೇಶ ಹೊರಡಿಸಿದೆ.

    ಗಣಿ ನಾಡು ಬಳ್ಳಾರಿ (Bellari) ಜಿಲ್ಲೆ ಕಂಪ್ಲಿ ತಾಲ್ಲೂಕಿನ ಚಪ್ಪರದಳ್ಳಿ ನಿವಾಸಿ ವಡ್ಡರ ತಿಪ್ಪಯ್ಯಾ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. ಬಳ್ಳಾರಿ ಸೆಷನ್ಸ್‌ ನ್ಯಾಯಾಲಯ ಹೊರಡಿಸಿದ್ದ ಮರಣದಂಡನೆ ಶಿಕ್ಷೆ ಆದೇಶವನ್ನು ಧಾರವಾಡ ಹೈಕೋರ್ಟ್‌ ಈಗ ಎತ್ತಿ ಹಿಡಿದಿದೆ. ಇದನ್ನೂ ಓದಿ: ಬೆಂಗ್ಳೂರಲ್ಲೂ ದೆಹಲಿ ಮಾದರಿಯ ಮರ್ಡರ್ – ಮಹಿಳೆಯನ್ನ ಕೊಂದು, ದೇಹ ಪೀಸ್ ಪೀಸ್ ಮಾಡಿದ ಹಂತಕರು

    ಪ್ರಕರಣ ಏನು?
    2017ರ ಫೆಬ್ರವರಿ 25 ರಂದು ಕೊಲೆ ನಡೆದಿತ್ತು. ಪತ್ನಿಯ ಶೀಲ ಶಂಕಿಸಿ ಪತ್ನಿ, ಆಕೆಯ ತಂಗಿ, ಹೆತ್ತ ಮೂರು ಮಕ್ಕಳು ಸೇರಿ ಒಟ್ಟು ಐವರನ್ನ ತಿಪ್ಪಯ್ಯ‌ ಕೊಲೆ ಮಾಡಿದ್ದ. ಪತ್ನಿ ಪಕ್ಕೀರಮ್ಮ (36), ಪತ್ನಿಯ ತಂಗಿ ಗಂಗಮ್ಮ (30), ಮಕ್ಕಳಾದ ಬಸಮ್ಮ (9), ರಾಜಪ್ಪ (8), ಪವಿತ್ರ (6) ಹತ್ಯೆಯಾಗಿದ್ದ ದುರ್ದೈವಿಗಳು. ಈ ಸಂಬಂಧ ಕಂಪ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಕೆ ಮಾಡಿದ್ದರು.

    ಪ್ರಕರಣದ ವಿಚಾರಣೆ ನಡೆಸಿದ್ದ, ನ್ಯಾಯಾಲಯವು ತಿಪ್ಪಯ್ಯನಿಗೆ 2019ರ ಡಿಸೆಂಬರ್ 3ರಂದು ಬಳ್ಳಾರಿ ಸೆಷನ್ಸ್ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಆದರೆ ಬಳ್ಳಾರಿ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನೆ ಮಾಡಿದ್ದ ತಿಪ್ಪಯ್ಯ, ಧಾರವಾಡ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ನ್ಯಾಯಾಲಯವು ಬಳ್ಳಾರಿ ಸೆಷನ್ಸ್ ನ್ಯಾಯಾಲಯದ ತೀರ್ಪನ್ನೇ ಎತ್ತಿ ಹಿಡಿದಿದೆ. ಕೆಳ ನ್ಯಾಯಾಲಯ ನೀಡಿದ ಆದೇಶದಂತೆ ಮರಣದಂಡನೆ ಆದೇಶ ಹೊರಡಿಸಿದೆ. ಇದನ್ನೂ ಓದಿ: ಪತ್ನಿಯೊಂದಿಗೆ ಜಗಳ – ಬೀದಿಗಳಲ್ಲಿ ಆಕೆಯ ನಂಬರ್‌ನೊಂದಿಗೆ ಅಶ್ಲೀಲ ಪೋಸ್ಟರ್ ಹಚ್ಚಿದ ಆಸಾಮಿ

  • ಎನ್‍ಐಎಯಿಂದ ಮರಣದಂಡನೆಗೆ ಮನವಿ- ಯಾಸಿನ್ ಮಲಿಕ್‍ಗೆ ಹೈಕೋರ್ಟ್ ನೋಟಿಸ್

    ಎನ್‍ಐಎಯಿಂದ ಮರಣದಂಡನೆಗೆ ಮನವಿ- ಯಾಸಿನ್ ಮಲಿಕ್‍ಗೆ ಹೈಕೋರ್ಟ್ ನೋಟಿಸ್

    ನವದೆಹಲಿ: ಭಯೋತ್ಪಾದನೆಗೆ ಹಣಕಾಸು ನೆರವು (Terror Funding Case) ನೀಡಿದ್ದ ಪ್ರಕರಣದಲ್ಲಿ ಮರಣದಂಡನೆ (Death Penalty) ವಿಧಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency) ಮಾಡಿದ ಮನವಿಯ ಮೇರೆಗೆ ದೆಹಲಿ ಹೈಕೋರ್ಟ್ (Delhi High Court) ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‍ಗೆ (Yasin Malik) ಸೋಮವಾರ ನೋಟಿಸ್ ಜಾರಿ ಮಾಡಿದೆ.

    ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ಮತ್ತು ತಲ್ವಂತ್ ಸಿಂಗ್ ಅವರ ಪೀಠವು ಪ್ರಸ್ತುತ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಲಿಕ್‍ನನ್ನು ಆಗಸ್ಟ್ 9ರ ಒಳಗಾಗಿ ಕೋರ್ಟ್‍ಗೆ ಹಾಜರುಪಡಿಸುವಂತೆ ಆದೇಶದಲ್ಲಿ ತಿಳಿಸಿದೆ. ಎನ್‍ಐಎ (NIA) ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಆರೋಪಿಯು ಭಯೋತ್ಪಾದಕ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಅಲ್ಲದೆ ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ಅಪರಾಧಿಗೆ ಮರಣದಂಡನೆ ನೀಡಬೇಕು ಎಂದು ವಾದಿಸಿದರು. ಇದನ್ನೂ ಓದಿ: ಹುಟ್ಟಿನಿಂದ ಸ್ತ್ರೀ, ಬಳಿಕ ಪುರುಷ- ದಾಖಲೆಯಲ್ಲಿ ಲಿಂಗ ಬದಲಾವಣೆ ಅರ್ಜಿಗೆ ಕೋರ್ಟ್ ಹೇಳಿದ್ದೇನು?

    ಯಾಸಿನ್ ಮಲಿಕ್ ಅಪರಾಧ ಒಪ್ಪಿಕೊಂಡ ಕಾರಣಕ್ಕೆ ಐಪಿಸಿ ಸೆಕ್ಷನ್ 121ರ ಅಡಿಯಲ್ಲಿ (121 IPC) ಮರಣ ದಂಡನೆಯ ಬದಲಾಗಿ ಜೀವಾವಧಿ ಶಿಕ್ಷೆಗೆ ಮಾರ್ಪಡಿಸಲಾಗಿದೆ ಎಂದು ಕೋರ್ಟ್ ಉಲ್ಲೇಖಿಸಿದೆ. 2022ರ ಮೇ 24 ರಂದು ನ್ಯಾಯಾಲಯವು ಮಲಿಕ್‍ಗೆ ದೇಶದ್ರೋಹ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು.

    ಮರಣದಂಡನೆ ನೀಡುವಂತೆ ಎನ್‍ಐಎ ಹೈಕೋರ್ಟ್‍ಗೆ ಸಲ್ಲಿಸಿದ ಮನವಿಯಲ್ಲಿ, ಉಗ್ರರಿಗೆ ತಪ್ಪೊಪ್ಪಿಕೊಂಡ ಕಾರಣಕ್ಕೆ ಮರಣದಂಡನೆಯನ್ನು ನೀಡದಿದ್ದರೆ ಅದರಿಂದ ತಪ್ಪಿಸಿಕೊಳ್ಳಲು ದಾರಿಯಾಗುತ್ತದೆ ಎಂದು ಉಲ್ಲೇಖಿಸಿತ್ತು. ಇದನ್ನೂ ಓದಿ: ಐಡಿ ಪ್ರೂಫ್ ಇಲ್ಲದೆ 2,000 ರೂ. ನೋಟು ವಿನಿಮಯ ವಿರುದ್ಧ ಮನವಿ- ದೆಹಲಿ ಹೈಕೋರ್ಟ್‌ನಿಂದ ಅರ್ಜಿ ವಜಾ

  • 1 ಕೆಜಿ ಗಾಂಜಾ ಕಳ್ಳಸಾಗಣೆ ಆರೋಪ – ಭಾರತ ಮೂಲದ ವ್ಯಕ್ತಿಯನ್ನು ಗಲ್ಲಿಗೇರಿಸಿದ ಸಿಂಗಾಪುರ

    1 ಕೆಜಿ ಗಾಂಜಾ ಕಳ್ಳಸಾಗಣೆ ಆರೋಪ – ಭಾರತ ಮೂಲದ ವ್ಯಕ್ತಿಯನ್ನು ಗಲ್ಲಿಗೇರಿಸಿದ ಸಿಂಗಾಪುರ

    ಸಿಂಗಾಪುರ: ಸುಮಾರು 1 ಕೆಜಿ ತೂಕದಷ್ಟು ಗಾಂಜಾವನ್ನು ಕಳ್ಳಸಾಗಣೆ (Cannabis Smuggling) ಮಾಡಲು ಸಂಚು ರೂಪಿಸಿದ್ದ ಆರೋಪದ ಮೇಲೆ ಭಾರತ ಮೂಲದ ವ್ಯಕ್ತಿಯನ್ನು (Indian) ಸಿಂಗಾಪುರ (Singapore) ಗಲ್ಲಿಗೇರಿಸಿದೆ.

    ಅಂತಾರಾಷ್ಟ್ರೀಯ ಮಟ್ಟದ ವಿರೋಧದ ನಡುವೆಯೂ ಭಾರತ ಮೂಲದ ವ್ಯಕ್ತಿ ತಂಗರಾಜು ಸುಪ್ಪಯ್ಯನನ್ನು (46) ಸಿಂಗಾಪುರದ ಚಾಂಗಿ ಜೈಲು ಸಂಕೀರ್ಣದಲ್ಲಿ ಬುಧವಾರ ಗಲ್ಲಿಗೇರಿಸಲಾಗಿದೆ (Hanging) ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    2017 ರಲ್ಲಿ ತಂಗರಾಜು 1,017.9 ಗ್ರಾಂ. ಗಾಂಜಾವನ್ನು ಕಳ್ಳಸಾಗಣೆ ಮಾಡುವ ಸಂಚಿನಲ್ಲಿ ತೊಡಗಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದ. ಸಿಂಗಾಪುರದ ಕಾನೂನಿನ ಪ್ರಕಾರ ಗಲ್ಲುಶಿಕ್ಷೆಗೆ ಗುರಿಪಡಿಸಲು ಇರುವ ಪ್ರಮಾಣದ 2 ಪಟ್ಟು ಮಾದಕ ವಸ್ತು ಆತನ ಬಳಿ ಸಿಕ್ಕಿತ್ತು. 2018ರಲ್ಲಿ ಆತನಿಗೆ ಮರಣದಂಡನೆ ವಿಧಿಸಲಾಗಿತ್ತು. ಇದನ್ನು ಮೇಲ್ಮನವಿ ನ್ಯಾಯಾಲಯ ಕೂಡಾ ಬಳಿಕ ಎತ್ತಿ ಹಿಡಿದಿತ್ತು.

    ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಸೇರಿದಂತೆ ಅಂತಾರಾಷ್ಟ್ರೀಯ ಸಂಸ್ಥೆಗಳು ತಂಗರಾಜುವಿನ ಗಲ್ಲುಶಿಕ್ಷೆಯನ್ನು ಮರುಪರಿಶೀಲನೆ ನಡೆಸುವಂತೆ ಸಿಂಗಾಪುರ ಸರ್ಕಾರವನ್ನು ಒತ್ತಾಯಿಸಿವೆ. ಆದರೆ ಇವಾವುದಕ್ಕೂ ಕಿವಿಗೊಡದ ಅಲ್ಲಿನ ಸರ್ಕಾರ ತಂಗರಾಜುನನ್ನು ಗಲ್ಲಿಗೇರಿಸಿದೆ. ಇದನ್ನೂ ಓದಿ: 40 ಮಹಿಳೆಯರಿಗೆ ಒಬ್ನೇ ಪತಿ

    ತಂಗರಾಜುನನ್ನು ಬಂಧಿಸಲಾದ ಸಂದರ್ಭ ಆತನ ಬಳಿ ಎಲ್ಲಿಯೂ ಡ್ರಗ್ಸ್ ಪತ್ತೆಯಾಗಿರಲಿಲ್ಲ. ಅಮಾಯಕ ವ್ಯಕ್ತಿಯನ್ನು ವಿನಾಕಾರಣ ಕೊಲ್ಲಲಾಗುತ್ತಿದೆ ಎಂದು ಜಿನೀವಾ ಮೂಲದ ಮಾದಕ ವಸ್ತು ನೀತಿಗಳ ಜಾಗತಿಕ ಆಯೋಗದ ಸದಸ್ಯ ರಿಚರ್ಡ್ ಬ್ರಾನ್ಸರ್ ಅವರು ತಮ್ಮ ಬ್ಲಾಗ್‌ನಲ್ಲಿ ಸೋಮವಾರ ಬರೆದಿದ್ದರು. ಆದರೆ ತಂಗರಾಜುವಿನ ತಪ್ಪನ್ನು ಸಮಂಜಸವಾದ ಅನುಮಾನದಾಚೆಗೂ ಸಾಬೀತುಪಡಿಸಲಾಗಿದೆ ಎಂದು ಸಿಂಗಾಪುರದ ಗೃಹ ವ್ಯವಹಾರಗಳ ಸಚಿವಾಲಯ ಮಂಗಳವಾರ ತಿಳಿಸಿದೆ.

    ಜಗತ್ತಿನ ಅತ್ಯಂತ ಕಠಿಣ ಮಾದಕವಸ್ತು ವಿರೋಧಿ ಕಾನೂನುಗಳಿರುವ ದೇಶಗಳಲ್ಲಿ ಸಿಂಗಾಪುರ ಒಂದಾಗಿದೆ. ಅಲ್ಲಿ ಮಾದಕವಸ್ತುಗಳ ಕಳ್ಳಸಾಗಣೆಯನ್ನು ತಡೆಯಲು ಮರಣ ದಂಡನೆ ಶಿಕ್ಷೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ಆದರೆ ಸಿಂಗಾಪುರದ ವಾದವನ್ನು ವಿಶ್ವಸಂಸ್ಥೆಗಳ ಮಾನವ ಹಕ್ಕುಗಳ ಹೈ ಕಮಿಷನ್ ಖಂಡಿಸಿದೆ.

    ಕಳೆದ 6 ತಿಂಗಳಲ್ಲಿ ಸಿಂಗಾಪುರದಲ್ಲಿ ಜಾರಿಗೊಳಿಸಲಾದ ಮೊದಲ ಮರಣದಂಡನೆ ತಂಗರಾಜುವಿನದ್ದಾಗಿದೆ. 2 ವರ್ಷಗಳ ಅಂತರದ ಬಳಿಕ 2022ರ ಮಾರ್ಚ್‌ನಲ್ಲಿ ಸಿಂಗಾಪುರ ಮರಣದಂಡನೆ ಶಿಕ್ಷೆಯನ್ನು ಮತ್ತೆ ಆರಂಭಿಸಿತು. ಅದರಲ್ಲಿ ಇದು 12ನೇ ಶಿಕ್ಷೆಯಾಗಿದೆ. ಇದನ್ನೂ ಓದಿ: ಉತ್ತರ ಪ್ರದೇಶ ಅಂದ್ರೆ ಗೂಂಡಾ ರಾಜ್ಯ ಅನ್ನೋ ವಾತಾವರಣವಿತ್ತು – ಸುಮಲತಾ

  • ತಾಯಿಯ ಶಿರಚ್ಛೇದ ಮಾಡಿದ್ದ ಮಗನಿಗೆ ಮರಣದಂಡನೆ ವಿಧಿಸಿದ ಕೋರ್ಟ್

    ತಾಯಿಯ ಶಿರಚ್ಛೇದ ಮಾಡಿದ್ದ ಮಗನಿಗೆ ಮರಣದಂಡನೆ ವಿಧಿಸಿದ ಕೋರ್ಟ್

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಉಧಮ್‍ಪುರ (Udhampur) ಜಿಲ್ಲೆಯಲ್ಲಿ 2014 ರಲ್ಲಿ ತನ್ನ ತಾಯಿಯ ಶಿರಚ್ಛೇದ ಮಾಡಿದ್ದ 45 ವರ್ಷದ ಅಪರಾಧಿಗೆ ಸ್ಥಳೀಯ ನ್ಯಾಯಾಲಯ (Court) ಮರಣದಂಡನೆ (Death penalty) ವಿಧಿಸಿ ಶನಿವಾರ ತೀರ್ಪು (Judgement) ಪ್ರಕಟಿಸಿದೆ.

    ಅಪರಾಧಿಯು ವೃದ್ಧ ತಾಯಿಯ ಕುತ್ತಿಗೆಯ ಮೇಲೆ ಕುಡಗೋಲಿನಿಂದ ಹಲ್ಲೆ ನಡೆಸಿದ್ದ. ನಂತರ ಅತ್ಯಂತ ಅಮಾನವೀಯ ಮತ್ತು ಬರ್ಬರವಾಗಿ ಆಕೆಯ ತಲೆಯನ್ನು ಕೊಡಲಿಯಿಂದ ಕಡಿದು ಕೊಲೆ (Murder) ಮಾಡಿದ್ದ. ಈ ಕೃತ್ಯವನ್ನು ಅಪರಾಧಿ ಸಂಚು ರೂಪಿಸಿ ಎಸಗಿದ್ದ ಎಂದು ಉಧಮ್‍ಪುರದ ಪ್ರಧಾನ ಸೆಷನ್ಸ್ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಹಳೆ ದ್ವೇಷ – ಮಡಿಕೇರಿಯಲ್ಲಿ ಗುಂಡೇಟಿಗೆ ವ್ಯಕ್ತಿ ಬಲಿ

    ರಾಮನಗರದ ನಿವಾಸಿ ಜೀತ್ ಸಿಂಗ್ ಅಪರಾಧಿಯಾಗಿದ್ದು, ತಾಯಿಯೊಂದಿಗೆ ಜಮೀನು ನೀಡುವಂತೆ ಆಗಾಗ ಗಲಾಟೆ ಮಾಡುತ್ತಿದ್ದ. ಇನ್ನೊಬ್ಬ ಮಗ ಮುಲಾಖ್ ರಾಜ್‍ನೊಂದಿಗೆ ವಾಸಿಸುವಂತೆ ಒತ್ತಾಯಿಸುತ್ತಿದ್ದ. 2014ರ ಡಿಸೆಂಬರ್ 7ರಂದು ತಾಯಿ ವೈಷ್ಣೋದೇವಿಯನ್ನು ಅವರ ಮನೆಯಲ್ಲಿಯೇ ಕೊಲೆ ಮಾಡಿದ್ದ. ಪತ್ನಿ ಸಂತೋಷ್ ದೇವಿ ಅತ್ತೆಯನ್ನು ರಕ್ಷಿಸಲು ಮುಂದಾದಾಗ ಅವರನ್ನೂ ಕೊಲೆ ಮಾಡಲು ಯತ್ನಿಸಿದ್ದ.

    ಆ ವೇಳೆ ಪತ್ನಿ ತಪ್ಪಿಸಿಕೊಳ್ಳದೆ ಅಲ್ಲೇ ಉಳಿದುಕೊಂಡಿದ್ದರೆ ಅವನು ಖಂಡಿತವಾಗಿಯೂ ತನ್ನ ಹೆಂಡತಿಯನ್ನೂ ಕೊಲ್ಲುತ್ತಿದ್ದ ಎಂದು ನ್ಯಾಯಾಧೀಶ ಹಕ್ ನವಾಜ್ ಜರ್ಗರ್ ತೀರ್ಪಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಸೆಕ್ಸ್‌ – 6 ಮಂದಿ US ಶಿಕ್ಷಕಿಯರು ಅರೆಸ್ಟ್‌

  • ಸೌದಿ ಅರೇಬಿಯಾದಲ್ಲಿ ಕತ್ತಿಯಿಂದ ಜನರ ಶಿರಚ್ಛೇದ – 10 ದಿನಗಳಲ್ಲಿ 12 ಜನರಿಗೆ ಮರಣದಂಡನೆ

    ಸೌದಿ ಅರೇಬಿಯಾದಲ್ಲಿ ಕತ್ತಿಯಿಂದ ಜನರ ಶಿರಚ್ಛೇದ – 10 ದಿನಗಳಲ್ಲಿ 12 ಜನರಿಗೆ ಮರಣದಂಡನೆ

    ರಿಯಾದ್: ಕಳೆದ 10 ದಿನಗಳಲ್ಲಿ ಮಾದಕವಸ್ತು ಸಂಬಂಧಿತ ಅಪರಾಧಗಳಿಗಾಗಿ ಸೌದಿ ಅರೇಬಿಯಾ (Saudi Arabia) 12 ಜನರನ್ನು ಗಲ್ಲಿಗೇರಿಸಿದೆ. ಇವುಗಳಲ್ಲಿ ಕೆಲವು ಅಪರಾಧಿಗಳನ್ನು ಕತ್ತಿಯಿಂದ ಶಿರಚ್ಛೇದ (Beheading) ಮಾಡಲಾಗಿದೆ ಎಂದು ವರದಿಯೊಂದು ತಿಳಿಸಿದೆ.

    ಮಾದಕವಸ್ತು ಸಂಬಂಧಿತ ಆರೋಪದ ಮೇಲೆ ಜೈಲಿನಲ್ಲಿದ್ದ 12 ಜನರಿಗೆ ಮರಣದಂಡನೆ (Death Penalty) ವಿಧಿಸಲಾಗಿದೆ. ಅದರಲ್ಲಿ ಮೂವರು ಪಾಕಿಸ್ತಾನಿಗಳು, 4 ಸಿರಿಯನ್ನರು, ಇಬ್ಬರು ಜೋರ್ಡಾನ್ ಮೂಲದವರು ಹಾಗೂ ಮೂವರು ಸೌದಿಗಳು ಸೇರಿದ್ದಾರೆ ಎಂದು ವರದಿಯಾಗಿದೆ.

    ಈ ವರ್ಷ ಮಾರ್ಚ್‌ನಲ್ಲಿ ಸೌದಿ ಅರೇಬಿಯಾದ ಆಧುನಿಕ ಇತಿಹಾಸದಲ್ಲೇ ಅತಿ ದೊಡ್ಡ ಸಾಮೂಹಿಕ ಮರಣದಂಡನೆ ನೀಡಲಾಗಿತ್ತು. ಹತ್ಯೆ, ಉಗ್ರಗಾಮಿ ಗುಂಪು ಸೇರಿದಂತೆ ವಿವಿಧ ಅಪರಾಧಗಳಿಂದ ಶಿಕ್ಷೆಗೊಳಗಾದ 81 ಜನರನ್ನು ಗಲ್ಲಿಗೇರಿಸಲಾಗಿತ್ತು. ಇದನ್ನೂ ಓದಿ: ಪಂಪ್‌ವೆಲ್‌ ಫ್ಲೈ ಓವರ್‌ ಬಳಿ ಬಾಂಬ್‌ ಸ್ಟೋಟಿಸಲು ಮುಂದಾಗಿದ್ದ ಶಾರೀಕ್‌

    ಕಳೆದ 2 ವರ್ಷಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಮರಣದಂಡನೆಗಳಂತಹ ಶಿಕ್ಷೆಗಳನ್ನು ಕಡಿಮೆ ಮಾಡುವುದಾಗಿ ಅಲ್ಲಿನ ಆಡಳಿತ ಪ್ರತಿಜ್ಞೆ ಮಾಡಿತ್ತು. 2018ರಲ್ಲಿ ಟರ್ಕಿಯಲ್ಲಿ ಅಮೆರಿಕದ ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆಯ ಬಳಿಕ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಹೊಸ ಆದೇಶವನ್ನು ನೀಡಿದ್ದರು.

    2018ರ ಬಳಿಕ ಸೌದಿ ಆಡಳಿತ ಮರಣದಂಡನೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದು, ಕೊಲೆ ಅಥವಾ ನರಹತ್ಯೆಯ ತಪ್ಪಿತಸ್ಥರನ್ನು ಮಾತ್ರವೇ ಮರಣದಂಡನೆಗೆ ಒಳಪಡಿಸಲು ಪ್ರಾರಂಭಿಸಿತು. ಇದೀಗ ಮತ್ತೆ ಮರಣದಂಡನೆ ಶಿಕ್ಷೆಗಳನ್ನು ಹೆಚ್ಚಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಇಂಡೋನೇಷ್ಯಾ ಬಳಿಕ ಸೊಲೊಮನ್ ದ್ವೀಪದಲ್ಲಿ ಭಾರೀ ಭೂಕಂಪ – ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆ ದಾಖಲು

    Live Tv
    [brid partner=56869869 player=32851 video=960834 autoplay=true]