Tag: Dealer

  • ಡ್ರಗ್ಸ್ ಗ್ರಾಹಕರಲ್ಲಿ ನಟರಿಗಿಂತ ನಟಿಯರೇ ಹೆಚ್ಚು – ಬಂಧಿತ ಡೀಲರ್ ಬಿಚ್ಚಿಟ್ಟ ಸ್ಫೋಟಕ ಸತ್ಯ

    ಡ್ರಗ್ಸ್ ಗ್ರಾಹಕರಲ್ಲಿ ನಟರಿಗಿಂತ ನಟಿಯರೇ ಹೆಚ್ಚು – ಬಂಧಿತ ಡೀಲರ್ ಬಿಚ್ಚಿಟ್ಟ ಸ್ಫೋಟಕ ಸತ್ಯ

    – ಸೌಂದರ್ಯ ಹೆಚ್ಚಿಸಿಕೊಳ್ಳಲು ಡ್ರಗ್ಸ್ ಹಿಂದೆ ಬಿದ್ದಿದ್ದ ನಟಿಯರು

    ಬೆಂಗಳೂರು: ಡ್ರಗ್ಸ್ ಕಸ್ಟಮರ್ಸ್ ಗಳಲ್ಲಿ ನಟರಿಗಿಂತ ನಟಿಯರೇ ಹೆಚ್ಚು ಎಂಬ ಸ್ಫೋಟಕ ಮಾಹಿತಿಯನ್ನು ಬಂಧಿತ ಡ್ರಗ್ ಡೀಲರ್ ಅನೂಪ್ ಬಾಯ್ಬಿಟ್ಟಿದ್ದಾನೆ.

    ಸದ್ಯ ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ ದಂಧೆಯ ಘಾಟು ಜೋರಾಗಿ ಬರುತ್ತಿದೆ. ಗುರುವಾರ ಎನ್‍ಸಿಬಿ ಅಧಿಕಾರಿಗಳು ಬಂಧಿಸಿದ ಮೂವರು ಹೈಟೆಕ್ ಡ್ರಗ್ ಪೆಡ್ಲರ್ ಗಳು ವಿಚಾರಣೆ ವೇಳೆ ಒಂದೇ ಒಂದೇ ಭಯಾನಕ ಸತ್ಯವನ್ನು ಹೊರಹಾಕುತ್ತಿದ್ದಾರೆ. ಸೌಂದರ್ಯ ಹೆಚ್ಚಿಸಿಕೊಳ್ಳಲು ನಟಿಯರು ಡ್ರಗ್ಸ್ ಹಿಂದೆ ಬಿದ್ದಿದ್ದರು ಎಂಬ ಮಾಹಿತಿ ಲಭ್ಯವಾಗುತ್ತಿದೆ.

    ಮೂವರು ಡ್ರಗ್ ಪೆಡ್ಲರ್ ಗಳನ್ನು ವಶಕ್ಕೆ ಪಡೆದಿರುವ ಎನ್‍ಸಿಬಿ ಅಧಿಕಾರಿಗಳು ದಿನ ಒಬ್ಬರಂತೆ ಡ್ರಿಲ್ ಮಾಡುತ್ತಿದ್ದಾರೆ. ಶುಕ್ರವಾರ ಕಿಂಗ್‍ಪಿನ್ ಅನಿಕಾಳನ್ನು ವಿಚಾರಣೆ ಮಾಡಲಾಗಿತ್ತು. ಅನಿಕಾ ತಾನು ಆರು ವರ್ಷದಿಂದ ಡ್ರಗ್ ಡೀಲರ್ ಆಗಿದ್ದು, ಕಾಲೇಜಿನಲ್ಲೇ ಡ್ರಗ್ ಸಪ್ಲೇ ಮಾಡುತ್ತಿದ್ದೆ. ಜೊತೆಗೆ ಸದ್ಯ ಕನ್ನಡದ ಸ್ಟಾರ್ ನಟಿ ತನ್ನ ಸಹಪಾಠಿ ಎಂಬ ವಿಚಾರವನ್ನು ಹೇಳಿದ್ದಳು. ಈಗ ಅನೂಪ್, ನಟರಿಗಿಂತ ನಟಿಯರೇ ಹೆಚ್ಚು ಡ್ರಗ್ ಖರೀದಿ ಮಾಡುತ್ತಿದ್ದರು ಎಂಬ ವಿಚಾರವನ್ನು ಬಾಯ್ಬಿಟ್ಟಿದ್ದಾನೆ.

    ಗುರುವಾರ ಅನಿಕಾ, ಅನೂಪ್ ಮತ್ತು ರೀಜೇಸ್‍ನನ್ನು ಎನ್‍ಸಿಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ಅರೆಸ್ಟ್ ಮಾಡಿದ್ದರು. ವಿಚಾರಣೆ ವೇಳೆ ಡ್ರಗ್ ಡೀಲರ್ಸ್ ಗಳು ಹಲವಾರು ನಟಿಯರ ಹೆಸರನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸ್ಯಾಂಡಲ್‍ವುಡ್‍ನ ಹಲವು ನಟಿಯರಿಗೆ ಎನ್‍ಸಿಬಿ ಅಧಿಕಾರಿಗಳು ನೋಟಿಸ್ ನೀಡುವ ಸಾಧ್ಯತೆ ಇದೆ.

  • ಮಾಸ್ಕ್, ಸ್ಯಾನಿಟೈಜರ್ ಅಧಿಕ ಬೆಲೆಗೆ ಮಾರಾಟ ಮಾಡಿದರೆ ಕ್ರಮ: ಡಿಸಿ ಎಚ್ಚರಿಕೆ

    ಮಾಸ್ಕ್, ಸ್ಯಾನಿಟೈಜರ್ ಅಧಿಕ ಬೆಲೆಗೆ ಮಾರಾಟ ಮಾಡಿದರೆ ಕ್ರಮ: ಡಿಸಿ ಎಚ್ಚರಿಕೆ

    ಬೀದರ್: ಮಾಸ್ಕ್ ಮತ್ತು ಸ್ಯಾನಿಟೈಜರ್ ಗಳ ಕೃತಕ ಅಭಾವ ಸೃಷ್ಟಿಸುವಂತಿಲ್ಲ ಮತ್ತು ಅಧಿಕ ಬೆಲೆಗೆ ಮಾರಾಟ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿಗಳಾದ ಡಾ. ಹೆಚ್.ಆರ್ ಮಹಾದೇವ್ ಅವರು ಇಂದು ಬೀದರ ಜಿಲ್ಲೆಯ ಎಲ್ಲಾ ಔಷದ ವ್ಯಾಪಾರಿಗಳಿಗೆ ಮತ್ತು ಮಾರಾಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.

    ಭಾರತ ಸರ್ಕಾರವು ಹೊರಡಿಸಿದ ಅಧಿಸೂಚನೆ-2020ರಲ್ಲಿ ಒಂದು 2 ಲೇಯರ್ ಮಾಸ್ಕಗೆ 8 ರೂಪಾಯಿ ಮತ್ತು ಒಂದು 3 ಲೇಯರ್ ಮಾಸ್ಕಗೆ 10 ರೂಪಾಯಿಗಿಂತ ಅಧಿಕ ಬೆಲೆಗೆ ಮಾರಾಟ ಮಾಡುವಂತಿಲ್ಲ. ಹಾಗೆಯೇ ಪ್ರತಿ 200 ಎಂಎಲ್ ಬಾಟಲ್ ಸ್ಯಾನಿಟೈಜರ್ ನ್ನು 100 ರೂಪಾಯಿಗಿಂತ ಅಧಿಕ ಬೆಲೆಗೆ ಮಾರಾಟ ಮಾಡುವಂತಿಲ್ಲವೆಂದು ಆದೇಶಿಸಲಾಗಿದೆ.

    ಹೀಗಾಗಿ ಕೇಂದ್ರ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಮೇಲ್ಕಂಡ ವಸ್ತುಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡಿದರೆ ಅಗತ್ಯ ವಸ್ತುಗಳ ಕಾಯ್ದೆ-1955, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ ಆದೇಶ-2020 ಹಾಗೂ ಪೊಟ್ಟಣ ಸಾಮಾಗ್ರಿಗಳ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.

  • 88 ವರ್ಷದ ಡ್ರಗ್ ಡೀಲರ್ ವೃದ್ಧೆ ಅರೆಸ್ಟ್

    88 ವರ್ಷದ ಡ್ರಗ್ ಡೀಲರ್ ವೃದ್ಧೆ ಅರೆಸ್ಟ್

    ನವದೆಹಲಿ: ಮಾದಕವಸ್ತು ದಂಧೆ ನಡೆಸುತ್ತಿದ್ದ ವೃದ್ಧೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ದೆಹಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು 88 ವರ್ಷದ ರಾಜ್ರಾಣಿ ಎಂದು ಗುರುತಿಸಲಾಗಿದ್ದು, ಈಕೆ ದಶಕಗಳಿಂದ ಮಾದಕವಸ್ತುಗಳ ವ್ಯಾಪಾರ ಮಾಡುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

    ಈ ಮಾದಕವಸ್ತುಗಳ ದಂಧೆಯನ್ನು ಮೊದಲು ರಾಜ್ರಾಣಿ ಗಂಡ ನೋಡಿಕೊಳ್ಳತ್ತಿದ್ದ. ಆದರೆ 1990 ರಲ್ಲಿ ಆತ ಮೃತಪಟ್ಟ ನಂತರ ರಾಜ್ರಾಣಿ ಈ ದಂಧೆ ಮಾಡುವ ಅಧಿಕಾರವನ್ನು ವಹಿಸಿಕೊಂಡಿದ್ದಾಳೆ. ರಾಜ್ರಾಣಿಯನ್ನು 1996 ರಿಂದ ಇಲ್ಲಿಯವರಿಗೂ ದೆಹಲಿ ಪೊಲೀಸರು 6 ಬಾರಿ ಬಂಧಿಸಿದ್ದು ಜಾಮೀನು ಪಡೆದು ಬಿಡುಗಡೆಯಾಗುತ್ತಿದ್ದಳು.

    ರಾಜ್ರಾಣಿಗೆ ಈಗ ವಯಸ್ಸಾದ ಕಾರಣ ಆಕೆಯ ಆರೋಗ್ಯ ಸರಿಯಿಲ್ಲ. ಆಕೆಗೆ ನಡೆಯಲು ಆಗುವುದಿಲ್ಲ. ಆದರೆ ಅವಳ ಸಹಚರರ ಸಹಾಯದಿಂದ ಈಗಲೂ ದಂಧೆ ನಡೆಸುತ್ತಿದ್ದಾಳೆ. ಬುಧವಾರ ಆಕೆ 16 ಗ್ರಾಮ್ ಹೆರಾಯಿನ್ ಅಕ್ರಮವಾಗಿ ಸಾಗಿಸುತ್ತಿದ್ದಾಳೆ ಎಂಬ ಖಚಿತ ಮಾಹಿತಿ ಮೇರೆಗೆ ದೆಹಲಿ ಪೊಲೀಸರು, ಪಶ್ಚಿಮ ದೆಹಲಿಯಲ್ಲಿರುವ ಆಕೆಯ ಮನೆಯ ಮೇಲೆ ದಾಳಿ ಮಾಡಿ ಆಕೆಯನ್ನು ಬಂಧಿಸಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಡಿಸಿಪಿ ಮೋನಿಕಾ ಭಾರದ್ವಾಜ್, ಪೊಲೀಸರು ಮನೆಯ ಮೇಲೆ ದಾಳಿ ನಡೆಸಿ ರಾಜ್ರಾಣಿಯನ್ನು ಬಂಧಿಸಿದ್ದಾರೆ. ಈ ವೇಳೆ ಅವಳ ಬಳಿ ಹೆರಾಯಿನ್ ಕಂಡುಬಂದಿದೆ. ಆಕೆ ಪಂಜಾಬ್ ಮತ್ತು ಉತ್ತರ ಪ್ರದೇಶದ ಮಾದಕವಸ್ತು ವ್ಯಾಪಾರಿಗಳೊಂದಿಗೆ ಸಂಪರ್ಕದಲ್ಲಿದ್ದಳು. ಜೈಲಿಗೆ ಹೋಗಲು ಭಯ ಪಡದ ಮಹಿಳೆ, ಕಾನೂನುಗಳ ಬಗ್ಗೆ ಚೆನ್ನಾಗಿ ತಿಳಿದಿಕೊಂಡಿದ್ದಾಳೆ ಮತ್ತು ನಾವು ಬಂಧಿಸಿದ ಪ್ರತಿ ಬಾರಿಯೂ ಜಾಮೀನು ಪಡೆದು ಹೊರಬರುತ್ತಾಳೆ ಎಂದು ಹೇಳಿದ್ದಾರೆ.

    ವಿಚಾರಣೆ ವೇಳೆ ರಾಜ್ರಾಣಿ ತಾನು ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದೆ ಮತ್ತು ಪತಿಯೊಂದಿಗೆ ಏಳು ಮಕ್ಕಳು ಇದ್ದರು ಎಂದು ಹೇಳಿದ್ದಾಳೆ. ಆದರೆ ಪತಿ ಮಾದಕವಸ್ತು ವ್ಯಾಪಾರಿಯಾಗಿದ್ದ ಕಾರಣದಿಂದ ನನ್ನ ಆರು ಮಕ್ಕಳು ಮಾದಕ ದ್ರವ್ಯ ಸೇವನೆಯಿಂದ ಮತ್ತು ಕೆಲವರು ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ಆಕೆ ಹೇಳಿಕೆ ನೀಡಿದ್ದಾಳೆ.

    ಈಗ ಮತ್ತೆ ಆಕೆಯನ್ನು ಅರೆಸ್ಟ್ ಮಾಡಿರುವ ಪೊಲೀಸರು ರಾಜ್ರಾಣಿ ವಿರುದ್ಧ ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ವಸ್ತುಗಳ ಕಾಯ್ದೆ ಮತ್ತು ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

  • ಕತ್ತಿಯಿಂದ ಕುತ್ತಿಗೆಯನ್ನು ಇರಿದು ವ್ಯಾಪಾರಿ ಬರ್ಬರ ಹತ್ಯೆ -ಸ್ಥಳೀಯರ ಸಮಯ ಪ್ರಜ್ಞೆಯಿಂದ ಆರೋಪಿಗಳು ಸೆರೆ

    ಕತ್ತಿಯಿಂದ ಕುತ್ತಿಗೆಯನ್ನು ಇರಿದು ವ್ಯಾಪಾರಿ ಬರ್ಬರ ಹತ್ಯೆ -ಸ್ಥಳೀಯರ ಸಮಯ ಪ್ರಜ್ಞೆಯಿಂದ ಆರೋಪಿಗಳು ಸೆರೆ

    ಮಡಿಕೇರಿ: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ರಿಯಲ್ ಎಸ್ಟೇಟ್ ದಲ್ಲಾಳಿಯನ್ನು ಮೂವರು ವ್ಯಕ್ತಿಗಳು ಕತ್ತಿಯಿಂದ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದಿದೆ.

    ಶಫೀಕ್ ಮೃತ ದುರ್ದೈವಿ. ಕಳೆದ ರಾತ್ರಿ 10.30 ಗಂಟೆಗೆ ವಿರಾಜಪೇಟೆಯ ಶಫೀಕ್ ಅವರನ್ನು ಆರೋಪಿಗಳು ಕೊಲೆ ಮಾಡಿದ್ದಾರೆ. ಅಸ್ಸಾಂ ಮೂಲದ ವ್ಯಕ್ತಿಯೊಬ್ಬನ ಜೊತೆ ಮತ್ತೊಬ್ಬ ಪ್ರಮುಖ ಆರೋಪಿ ಕೆದಮುಳ್ಳೂರಿನ ಮಾಳೇಟಿರ ದರ್ಶನ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

    ಹತ್ಯೆಗೊಳಗಾಗಿರುವ ಶಫೀಕ್ ರಿಯಲ್ ಎಸ್ಟೇಟ್ ದಲ್ಲಾಳಿ ವೃತ್ತಿಯೊಂದಿಗೆ ಹೋಟೆಲ್ ನಡೆಸುತ್ತಿದ್ದು, ಪತ್ನಿ ಹಾಗೂ ತಾಯಿಯೊಂದಿಗೆ ವಿರಾಜಪೇಟೆ-ಗೋಣಿಕೊಪ್ಪ ರಸ್ತೆಯಲ್ಲಿರುವ ಮಂಜುನಾಥ ನಗರದಲ್ಲಿ ನೆಲೆಸಿದ್ದರು.

    ಎರಡು ದಿನಗಳ ಹಿಂದೆಯಷ್ಟೆ ಶಫೀಕ್ ಪತ್ನಿ ತವರು ಮನೆಗೆ ಹೋಗಿದ್ದರು. ಅಲ್ಲದೇ ಅವರ ತಾಯಿ ಕೃತ್ಯ ನಡೆಯುವ ಸ್ವಲ್ಪ ಹೊತ್ತಿನ ಮೊದಲು ಪಕ್ಕದ ಮನೆಗೆ ತೆರಳಿದ್ದಾರೆ. ಈ ಸಮಯ ಸಾಧಿಸಿ ಶಫೀಕ್ ಒಬ್ಬರೇ ಇರುವುದನ್ನು ಖಾತರಿ ಪಡಿಸಿಕೊಂಡಿರುವ ಕೆದಮುಳ್ಳೂರಿನ ಮಾಳೆಯಂಡ ದರ್ಶನ್ ಹಾಗೂ ಇನ್ನಿಬ್ಬರು ಮನೆಯೊಳಗೆ ಬಂದಿದ್ದಾರೆ. ಇವರ ನಡುವೆ ಮಾತುಕತೆ ನಡೆಯುತ್ತಿದ್ದಂತೆಯೇ ಹಂತಕರು ಶಫೀಕ್ ಅವರ ಮೇಲೆ ಎರಗಿ ಹಲ್ಲೆ ಮಾಡಿ ಕತ್ತಿಯಿಂದ ಕುತ್ತಿಗೆಯ ಭಾಗಕ್ಕೆ ಕಡಿದಿದ್ದಾರೆ. ಕತ್ತಿಯ ಪ್ರಹಾರಕ್ಕೆ ಸಿಲುಕಿ ಶಫೀಕ್ ಸ್ಥಳದಲ್ಲಿಯೇ ಜೀವತೆತ್ತಿದ್ದಾರೆ.

    ಸ್ಥಳೀಯರ ಸಮಯಪ್ರಜ್ಞೆ – ಆರೋಪಿಗಳ ಸೆರೆ:
    ಶಫೀಕ್ ಅವರನ್ನು ಹತ್ಯೆ ಮಾಡುತ್ತಿದ್ದ ಸಂದರ್ಭ ಕಿರುಚಾಟ ಕೇಳಿಬಂದಿದೆ. ಇದರಿಂದ ಎಚ್ಚೆತ್ತ ಸ್ಥಳೀಯರು ಮನೆಯೊಳಗೆ ಏನೋ ಅನಾಹುತ ನಡೆಯುತ್ತಿದೆ ಎಂದು ಊಹಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿ ಮನೆಯನ್ನು ಸುತ್ತುವರಿದಿದ್ದಾರೆ. ಇದರಿಂದಾಗಿ ಆರೋಪಿಗಳ ಪೈಕಿ ಇಬ್ಬರು ಪರಾರಿಯಾಗಲು ಸಾಧ್ಯವಾಗಲಿಲ್ಲ. ಕೂಡಲೇ ಸ್ಥಳಕ್ಕೆ ಧಾವಿಸಿದ ವಿರಾಜಪೇಟೆ ಪೊಲೀಸರು ಆರೋಪಿಗಳಾದ ಮಾಳೇಟಿರ ದರ್ಶನ್ ಹಾಗೂ ಅಸ್ಸಾಂ ಮೂಲದ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv