-ರಾತ್ರೋರಾತ್ರಿ ದುಬೈನಿಂದ ದೆಹಲಿಗೆ ಕರೆತಂದ ಸಿಬಿಐ ಅಧಿಕಾರಿಗಳು
ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್‍ನನ್ನು ಸಿಬಿಐ ಮಂಗಳವಾರ ತಡರಾತ್ರಿ ಭಾರತಕ್ಕೆ ಕರೆದುತಂದಿದ್ದು, ವಿಚಾರಣೆ ಆರಂಭಿಸಿದೆ.
ಬ್ರಿಟನ್ ಪ್ರಜೆ ಕ್ರಿಶ್ಚಿಯನ್ ಮೈಕಲ್ ಜೇಮ್ಸ್ ನನ್ನು ಯುಎಇ ಗಡಿಪಾರು ಮಾಡಿದ್ದು, ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಯ ಸಿಬಿಐ ಮುಖ್ಯಕಚೇರಿಗೆ ಕರೆತರಲಾಗಿದೆ.
ಗಡೀಪಾರು ಮಾಡಿದ್ದು ಯಾಕೆ?
ಬಿಟ್ರನ್ ಬಿಟ್ಟು ದುಬೈನಲ್ಲಿ ಮೈಕಲ್ ನೆಲೆಸಿದ್ದ. ಈತನನ್ನು ಗಡಿಪಾರು ಮಾಡುವಂತೆ ಭಾರತ ಸರ್ಕಾರ ಯುಎಇಗೆ ಮನವಿ ಸಲ್ಲಿಸಿತ್ತು. ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಸಹ ಜಾರಿ ಮಾಡಿತ್ತು. ಇದನ್ನು ವಿರೋಧಿಸಿ ಮೈಕಲ್ ದುಬೈ ಕೋರ್ಟ್ ಮೊರೆ ಹೋಗಿದ್ದ. ಆದರೆ ಕೋರ್ಟ್ ಆತನ ಕೋರಿಕೆಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಯುಎಇ ಸರ್ಕಾರ ಮೈಕಲ್ ನನ್ನು ಗಡಿಪಾರು ಮಾಡಿತ್ತು.

ಏನಿದು ಪ್ರಕರಣ?
ವಿವಿಐಪಿ ವ್ಯಕ್ತಿಗಳ ಪ್ರಯಾಣಕ್ಕೆ ಇಟಲಿಯ ಫಿನ್‍ಮೆಕ್ಯಾನಿಕಾ ಕಂಪೆನಿಯ ಅಂಗಸಂಸ್ಥೆಯಾದ ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಯ ಜೊತೆ 2010ರಲ್ಲಿ 12 ಹೆಲಿಕಾಪ್ಟರ್ ಖರೀದಿಸಲು ಯುಪಿಎ ಸರ್ಕಾರ 3,600 ಕೋಟಿ ರೂ. ಒಪ್ಪಂದ ಮಾಡಿಕೊಂಡಿತ್ತು. 2013ರಲ್ಲಿ ಈ ಲಂಚದ ಆರೋಪ ಕೇಳಿ ಬಂದ ಕಾರಣ ಸರ್ಕಾರ 2014ರಲ್ಲಿ ಒಪ್ಪಂದವನ್ನು ರದ್ದು ಮಾಡಿತ್ತು. ಹಗರಣ ಬಯಲಿಗೆ ಬಂದ ಬಳಿಕ 1818 ಕೋಟಿ ರೂ. ಭಾರತ ಮರು ವಶಪಡಿಸಿಕೊಂಡಿದೆ. ಈ ಮೂಲಕ ಒಟ್ಟು 2,068 ಕೋಟಿ ರೂ. ವಾಪಸ್ ಪಡೆದುಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿತ್ತು. ಈ ನಿಟ್ಟಿನಲ್ಲಿ ಒಪ್ಪಂದ ಕುದುರಿಸುವ ಉದ್ದೇಶದಿಂದ ಆಗಸ್ಟಾ ವೆಸ್ಟ್‍ಲ್ಯಾಂಡ್‍ನಿಂದ 225 ಕೋಟಿ ರೂ. ಹಣವನ್ನು ಮೈಕಲ್ ಪಡೆದಿದ್ದ ಎನ್ನುವ ಆರೋಪ ಕೇಳಿಬಂದಿದೆ. ಆದರೆ ಆ ಹಣವನ್ನು ಮೈಕಲ್ ಭಾರತದ ಕೆಲವು ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಲಂಚ ನೀಡುವ ಉದ್ದೇಶದಿಂದ ಪಡೆದಿದ್ದ ಎನ್ನಲಾಗಿದೆ.

ಮೈಕಲ್ ಡೈರಿಯಲ್ಲಿ ಗಣ್ಯರ ಹೆಸರು:
ಈ ಖರೀದಿಯಲ್ಲಿ ಅವ್ಯವಹಾರ ವಾಸನೆ ಹೊಡೆದು ಭಾರೀ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಯುಪಿಎ ಸರ್ಕಾರ 2014ರ ಜನವರಿಯಲ್ಲಿ ಒಪ್ಪಂದವನ್ನು ರದ್ದು ಮಾಡಿಕೊಂಡಿತ್ತು. ಇತ್ತ ಮೈಕಲ್ ಡೈರಿಯಲ್ಲಿ ಕಾಂಗ್ರೆಸ್ಸಿನ ಪ್ರಭಾವಿ ನಾಯಕರ ಹೆಸರು ಸಿಕ್ಕಿದೆ. ಅಷ್ಟೇ ಅಲ್ಲದೆ ಹಲವರಿಗೆ ಹಣ ನೀಡಿದ್ದರ ವಿವರವೂ ಅದರಲ್ಲಿದ್ದು, ಯಾರಿಗೆ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಕರಣದ ಬೆನ್ನು ಬಿದ್ದಿದ್ದ ಸಿಬಿಐ ಹಾಗೂ ಜಾರಿನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಕ್ರಿಶ್ಚಿಯನ್ ಮೈಕಲ್‍ಗಾಗಿ ಬಲೆ ಬೀಸಿದ್ದರು. ದುಬೈನಲ್ಲಿ ಮೈಕಲ್ ಇದ್ದಾನೆ ಎನ್ನುವ ಮಾಹಿತಿ ಲಭ್ಯವಾಗುತ್ತಿದ್ದಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಯುಎಇ ಅಬ್ದಿಲ್ಲಾ ಬಿನ್ ಜಾಯೆದ್ ಅವರ ಜೊತೆಗೆ ಮಾತುಕತೆ ನಡೆಸಿದ್ದರು. ಇದು ಯಶಸ್ವಿಯಾಗಿದ್ದು, ಬುಧವಾರ ರಾತ್ರಿಯೇ ದುಬೈನಿಂದ ಆರೋಪಿಯನ್ನು ಕರೆತರಲಾಗಿದೆ.
ಎಸ್‍ಪಿ ತ್ಯಾಗಿ ಬಂಧನವಾಗಿತ್ತು:
ಈ ಖರೀದಿ ಅಕ್ರಮದಲ್ಲಿ ಎಸ್‍ಪಿ ತ್ಯಾಗಿ ಶಾಮೀಲಾಗಿರುವುದಕ್ಕೆ ಸಾಕ್ಷ್ಯಗಳಿವೆ ಎಂದು ಇಟಲಿಯ ಮಿಲಾನ್ ಕೋರ್ಟ್ 2016ರ ಏಪ್ರಿಲ್ 8ರಂದು ತೀರ್ಪು ನೀಡಿತ್ತು. ಈ ತೀರ್ಪು ಬಂದ ಬಳಿಕ ನಿವೃತ್ತ ವಾಯುಸೇನಾ ಮುಖ್ಯಸ್ಥ ಎಸ್‍ಪಿ ತ್ಯಾಗಿ ಅವರನ್ನು ಸಿಬಿಐ ಬಂಧಿಸಿತ್ತು. ಖರೀದಿ ಒಪ್ಪಂದದಲ್ಲಿ ಕಿಕ್ ಬ್ಯಾಕ್ ಪಡೆದುಕೊಂಡು ಹಗರಣದಲ್ಲಿ ಶಾಮೀಲಾಗಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ತ್ಯಾಗಿ ಅವರನ್ನು ಬಂಧಿಸಿತ್ತು. ತ್ಯಾಗಿ ಜೊತೆ ದೆಹಲಿ ಮೂಲದ ವಕೀಲ ಗೌತಮ್ ಖಟಿಯನ್, ಎಸ್‍ಪಿ ತ್ಯಾಗಿ ಅವರ ಸಂಬಂಧಿ ಸಂಜೀವ್ ತ್ಯಾಗಿ ಅವರನ್ನು ಬಂಧಿಸಲಾಗಿತ್ತು.
ತ್ಯಾಗಿ ಮೇಲಿದ್ದ ಆರೋಪ ಏನು?
ವಿವಿಐಪಿ ಹೆಲಿಕಾಪ್ಟರ್ ಖರೀದಿ ಸಂಬಂಧ ಸರ್ಕಾರ ಕರೆದ ಹರಾಜು ಪ್ರಕ್ರಿಯೆಯಲ್ಲಿ ಹೆಲಿಕಾಪ್ಟರ್ ಹಾರಾಟದ ಎತ್ತರದ ಮಿತಿಯನ್ನು 6 ಸಾವಿರ ಮೀಟರ್ ನಿಂದ 4,500 ಮೀಟರ್ ಗೆ(15,000 ಅಡಿಗಳಿಗೆ) ವಾಯುಸೇನೆ ಇಳಿಸಿತ್ತು. ಆಗಸ್ಟಾ ಕಂಪನಿ ನೆರವಾಗುವ ಉದ್ದೇಶದಿಂದಲೇ ಎಸ್‍ಪಿ ತ್ಯಾಗಿ ಅವರು ಎತ್ತರದ ಮಿತಿಯನ್ನು ಇಳಿಸಿದ್ದಾರೆ. ಅಷ್ಟೇ ಅಲ್ಲದೇ ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಜೊತೆ ಎಸ್‍ಪಿ ತ್ಯಾಗಿ ಮಾತುಕತೆ ನಡೆಸಿ ಕಿಕ್‍ಬ್ಯಾಕ್ ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv