Tag: dead body

  • ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ

    ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ

    ಶಿವಮೊಗ್ಗ: ಸಾಗರದ ತಿಲಕ್ ರಸ್ತೆಯ ಕೇಶವ ಜ್ಯುವೆಲ್ಲರಿ ಅಂಗಡಿಯ ಹಿಂಭಾಗದ ಬಾವಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ.

    ಯುವತಿಯನ್ನು ಸುಚಿತ್ರ ಶೆಟ್ಟಿ (25) ಎಂದು ಗುರುತಿಸಲಾಗಿದ್ದು, ತಾಲೂಕಿನ ಹಂಸಗಾರು ಜಡ್ಡುಗದ್ದೆ ನಿವಾಸಿ ರಘುವೀರ ಶೆಟ್ಟಿ ಅವರ ಪುತ್ರಿ ಎಂದು ತಿಳಿದು ಬಂದಿದೆ. ಸಾಗರದ ಅಣಲೇಕೊಪ್ಪದ ತಮ್ಮ ಸಹೋದರ ಮಾವನ ಮನೆಯಲ್ಲಿ ವಾಸವಾಗಿದ್ದ ಮೃತ ಸುಚಿತ್ರ, ತಿಲಕ್ ರಸ್ತೆಯ ಕೇಶವ ಜ್ಯುವೆಲ್ಲರಿ ಅಂಗಡಿಯಲ್ಲಿ ನಾಲ್ಕೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದಳು.

    ದಿನ ನಿತ್ಯದಂತೆ ನಿನ್ನೆ ಸಹ ಕೆಲಸಕ್ಕೆ ಬಂದಿದ್ದ ಸುಚಿತ್ರ ರಾತ್ರಿ 8:30 ಸುಮಾರಿಗೆ ಮನೆಗೆ ಹೊರಟಿದ್ದಾಳೆ. 10:30 ಆದರೂ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಮಾಲೀಕರಿಗೆ ವಿಚಾರ ತಿಳಿಸಿದ್ದಾರೆ. ನಂತರ ರಾತ್ರಿ ಯುವತಿಗೆ ಹುಡುಕಾಟ ನಡೆಸಿದ್ದಾರೆ. ಆದರೆ ಇಂದು ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಬಾವಿಯಲ್ಲಿ ನೇಣು ಬಿಗಿದುಕೂಂಡ ಸ್ಥಿತಿಯಲ್ಲಿ ಯುವತಿಯ ಶವ ಕಂಡ ಮಾಲೀಕ ಸಾಗರಪೇಟೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಸಾಗರಪೇಟೆ ಪೊಲೀಸ್ ಹಾಗೂ ಸಾಗರ ಡಿವೈಎಸ್ಪಿ ಜೆ.ರಘು ಆಗಮಿಸಿ ಪ್ರಕರಣ ದಾಖಲು ಮಾಡಿಕೊಂಡು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಾಗರ ಉಪವಿಭಾಗಿಯ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಯುವತಿಯ ಸಾವಿನ ಹಿಂದೆ ಅನುಮಾನದ ಹುತ್ತ ಹುಟ್ಟಿಕೊಂಡಿದ್ದು ಪೊಲೀಸರ ತನಿಖೆಯ ನಂತರ ಸಾವಿನ ಸತ್ಯಾಂಶ ಹೊರಬರಬೇಕಾಗಿದೆ.

  • ಕಾಣೆಯಾಗಿದ್ದ ಆಟೋ ಡ್ರೈವರ್ ಶವವಾಗಿ ಪತ್ತೆ- ಕೊಲೆ ಶಂಕೆ

    ಕಾಣೆಯಾಗಿದ್ದ ಆಟೋ ಡ್ರೈವರ್ ಶವವಾಗಿ ಪತ್ತೆ- ಕೊಲೆ ಶಂಕೆ

    ಚಾಮರಾಜನಗರ: ಕಳೆದ ನಾಲ್ಕು ದಿನಗಳಿಂದ ಕಾಣೆಯಾಗಿದ್ದ ಆಟೋ ಡ್ರೈವರ್ ಇದೀಗ ಶವವಾಗಿ ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.

    ಆಟೋ ಡ್ರೈವರ್ ನಾಗ (30) ಶವ ತೆರಕಣಾಂಬಿ ಕೆರೆಯಲ್ಲಿ ಪತ್ತೆಯಾಗಿದೆ. ಕಳೆದ ನಾಲ್ಕು ದಿನಗಳಿಂದಲೂ ಕೂಡ ನಾಗ ಕಾಣೆಯಾಗಿರುವ ಬಗ್ಗೆ ಸ್ನೇಹಿತರು, ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಇದೀಗ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಕೆರೆಯಲ್ಲಿ ಮೃತ ದೇಹ ಸಿಕ್ಕಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದೀಗ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ತೆರಕಣಾಂಬಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಯಾಗಿರೋ ಬಗ್ಗೆ ಶಂಕೆ ವ್ಯಕ್ತಪಡಿಸಿ ಪೊಲೀಸರು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

  • ಸ್ಮಶಾನ ಸೇರಬೇಕಾದ ಶವ ಆಸ್ಪತ್ರೆಗೆ

    ಸ್ಮಶಾನ ಸೇರಬೇಕಾದ ಶವ ಆಸ್ಪತ್ರೆಗೆ

    ಚಾಮರಾಜನಗರ: ಶವಸಂಸ್ಕಾರಕ್ಕೆ ಸಿದ್ಧವಾಗಿದ್ದ ಮೃತದೇಹವನ್ನು ಪೊಲೀಸರು ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ.

    ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನ ಮಲ್ಲಳ್ಳಿಮಾಳ ಗ್ರಾಮದ 40 ವರ್ಷದ ನಿಂಗರಾಜು ಮೃತಪಟ್ಟಿದ್ದರು. ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಎಲ್ಲ ಸಿದ್ಧತೆಗಳನ್ನು ನಡೆಸಿದ್ದರು. ನಿಂಗರಾಜು ಸಾವು ಸಹಜ ಅಲ್ಲ. ಅದೊಂದು ಕೊಲೆ ಇರಬಹುದು ಎಂದು ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಗ್ರಾಮಕ್ಕೆ ಆಗಮಿಸಿದ ಪೊಲೀಸರು ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕಿದ್ದಾರೆ. ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಮರಣೋತ್ತರ ಶವ ಪರೀಕ್ಷೆಗಾಗಿ ಮೃತದೇಹವನ್ನ ಆಸ್ಪತ್ರೆಗೆ ರವಾನಿಸಿದ್ದಾರೆ.

    ಪೊಲೀಸದ ದಿಢೀರ ಎಂಟ್ರಿಯಿಂದ ಗ್ರಾಮಸ್ಥರೆಲ್ಲ ಅಚ್ಚರಿಗೊಳಗಾಗಿದ್ದಾರೆ. ನಿಂಗರಾಜು ಕುತ್ತಿಗೆ ಭಾಗದಲ್ಲಿ ನೇಣು ಬಿಗಿದು ಗುರುತು ಪತ್ತೆಯಾಗಿದೆ. ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಅನುಮಾನಾಸ್ಪದವಾದ ಸೀರೆಯೊಂದನ್ನು ವಶಪಡಿಸಿಕೊಂಡಿದ್ದಾರೆ. ವೈದ್ಯಕೀಯ ಪರೀಕ್ಷೆ ನಂತರ ತನಿಖೆ ಚುರುಕುಗೊಳ್ಳಲಿದೆ.

  • ಮೇಲ್ಜಾತಿಯ ಜನ ದಾರಿ ನೀಡದ್ದಕ್ಕೆ ಸೇತುವೆ ಮೇಲಿಂದ ಶವ ಇಳಿಸಿದ್ರು

    ಮೇಲ್ಜಾತಿಯ ಜನ ದಾರಿ ನೀಡದ್ದಕ್ಕೆ ಸೇತುವೆ ಮೇಲಿಂದ ಶವ ಇಳಿಸಿದ್ರು

    ಚೆನ್ನೈ: ಮೇಲ್ವರ್ಗದ ಸಮುದಾಯದವರು ತಮ್ಮ ಜಮೀನಿನಲ್ಲಿ ಶವವನ್ನು ತೆಗೆದುಕೊಂಡು ಹೋಗಲು ದಾರಿ ನೀಡದ ಕಾರಣ ದಲಿತರು ಸೇತುವೆ ಮೇಲಿನಿಂದ ಹಗ್ಗ ಕಟ್ಟಿ ಶವ ಇಳಿಸಿದ್ದಾರೆ. ಈ ಅಮಾನವೀಯ ಘಟನೆ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ವನಿಯಂಬಾಡಿ ತಾಲೂಕಿನಲ್ಲಿ ನಡೆದಿದೆ.

    46 ವರ್ಷದ ಎಸ್.ಕುಪ್ಪಂ ಎಂಬ ವ್ಯಕ್ತಿ ಸಾವನ್ನಪ್ಪಿದ್ದರು. ಅಂತ್ಯಕ್ರಿಯೆಯಾಗಿ ಶವವನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಮೇಲ್ಜಾತಿಯ ಕೆಲವರು ತಮ್ಮ ಜಮೀನಿನಲ್ಲಿ ಶವವನ್ನು ತೆಗೆದುಕೊಂಡು ಹೋಗದಂತೆ ತಡೆದಿದ್ದಾರೆ. ಕೊನೆಗೆ ಕುಟುಂಬಸ್ಥರು ಸೇತುವೆ ಮೇಲಿಂದ ಶವವನ್ನು ಕೆಳಗೆ ಇಳಿಸಿದ್ದಾರೆ.

    ಈ ಗ್ರಾಮದಲ್ಲಿ ದಲಿತರಿಗೆ ಮೃತದೇಹವನ್ನು ಅಂತ್ಯಕ್ರಿಯೆ ಮಾಡಲು ಇರುವುದು ಒಂದೇ ಸ್ಮಶಾನ. ಶವವನ್ನು ತೆಗೆದುಕೊಂಡು ಹೋಗುವ ಮಾರ್ಗ ಮಧ್ಯೆ ಮೇಲ್ವರ್ಗದವರ ಕೃಷಿ ಜಮೀನನ್ನು ದಾಟಿಕೊಂಡು ಹೋಗಬೇಕು. ಮೇಲ್ವರ್ಗದ ಜನರು ತಮ್ಮ ಜಮೀನಿನಲ್ಲಿ ಶವ ತೆಗೆದುಕೊಂಡು ಹೋಗಲು ಅಡ್ಡಿಪಡಿಸುತ್ತಾರೆ. ಹೀಗಾಗಿ ಚಟ್ಟಕ್ಕೆ ಎರಡು ಕಡೆ ಹಗ್ಗ ಕಟ್ಟಿ ಕೆಲವರು ಮೇಲಿನಿಂದ ಇಳಿಸುತ್ತಾರೆ. ಕೆಳಗೆ ಕೆಲವರು ಶವವನ್ನು ಇಳಿಸಿಕೊಳ್ಳುತ್ತಾರೆ.

    ಶವವನ್ನು ಸೇತುವೆ ಮೇಲಿಂದ ಕೆಳಗಿಳಿಸುವ ದೃಶ್ಯಗಳನ್ನು ಕೆಲವರು ಮೊಬೈಲಿನಲ್ಲಿ ಸೆರೆಹಿಡಿದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸರು, ಈ ರೀತಿಯ ಘಟನೆ ನಡೆದಿದೆಯೇ ಎಂದು ತನಿಖೆ ನಡೆಸಲಾಗುವುದು. ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

  • ಅಧ್ಯಯನಕ್ಕೆ ತರಿಸಿದ್ದ ಮೃತ ದೇಹಕ್ಕೆ ಪೂಜೆ ಸಲ್ಲಿಸಿದ ಮೆಡಿಕಲ್ ವಿದ್ಯಾರ್ಥಿಗಳು

    ಅಧ್ಯಯನಕ್ಕೆ ತರಿಸಿದ್ದ ಮೃತ ದೇಹಕ್ಕೆ ಪೂಜೆ ಸಲ್ಲಿಸಿದ ಮೆಡಿಕಲ್ ವಿದ್ಯಾರ್ಥಿಗಳು

    ತುಮಕೂರು: ಅಧ್ಯಯನದ ಉದ್ದೇಶದಿಂದ ತರಿಸಿಕೊಳ್ಳಲಾದ ಮೃತದೇಹಕ್ಕೆ ವೈದ್ಯಕೀಯ ವಿದ್ಯಾರ್ಥಿಗಳು ಹಾರ ಹಾಕಿ ವಿಶೇಷವಾಗಿ ಬರಮಾಡಿಕೊಂಡ ಅಪರೂಪದ ಘಟನೆ ತುಮಕೂರಿನ ಶ್ರೀದೇವಿ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.

    ಬೆಳಗಾವಿ ಹಾರೋಗೇರಿ ಪಟ್ಟಣದಿಂದ ತರಿಸಿಕೊಳ್ಳಲಾದ ವ್ಯಕ್ತಿಯೊಬ್ಬರ ಮೃತದೇಹಕ್ಕೆ ಶ್ರೀದೇವಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದರು. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ನಿವಾಸಿ ಹಣಮಂತ ಸಿದ್ದಪ್ಪ ಬೀರಾದಾರ ಪಾಟೀಲ (76) ಎಂಬುವರು ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾಗಿದ್ದರು.

    ಶ್ರೀದೇವಿ ಮೆಡಿಕಲ್ ಕಾಲೇಜು ಆಡಳಿತ ಮಂಡಳಿಯ ಮನವಿಯಂತೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಎಸ್.ಜಿ.ವಿ. ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಹಾಗೂ ಹಾರೂಗೇರಿಯ ಶರಣ ವಿಚಾರ ವಾಹಿನಿಯ ಮುಖಾಂತರ ಪಾಟೀಲರ ಮೃತದೇಹವನ್ನು ತುಮಕೂರಿಗೆ ತರಿಸಿಕೊಳ್ಳಲಾಯಿತು.

    ಈ ವೇಳೆ ವಿದ್ಯಾರ್ಥಿಗಳು ಪೂಜೆ ಸಲ್ಲಿಸಿ ಬಳಿಕ ಶರೀರ ರಚನಾ ವಿಭಾಗಕ್ಕೆ ಗೌರವಪೂರ್ವಕವಾಗಿ ಸಾಗಿಸಲಾಯ್ತು. ಮೃತಪಟ್ಟ ನಂತರ ತನ್ನ ದೇಹವನ್ನು ವೈದ್ಯಕೀಯ ಅಧ್ಯಯನಕ್ಕಾಗಿ ದಾನ ಮಾಡಬೇಕೆಂಬ ಇಂಗಿತವನ್ನು ಹಣಮಂತ ಸಿದ್ದಪ್ಪ ಬಿರಾದಾರ್ ಪಾಟೀಲ್ ಅವರು ಬದುಕಿದ್ದಾಗಲೇ ವ್ಯಕ್ತಪಡಿಸಿದ್ದರು.

  • ಅಪಹರಿಸಿ, ಕೊಲೆಗೈದು ಅಪ್ರಾಪ್ತೆಯ ಶವದ ಮೇಲೆಯೇ ಅತ್ಯಾಚಾರ ಮಾಡ್ದ!

    ಅಪಹರಿಸಿ, ಕೊಲೆಗೈದು ಅಪ್ರಾಪ್ತೆಯ ಶವದ ಮೇಲೆಯೇ ಅತ್ಯಾಚಾರ ಮಾಡ್ದ!

    ಡೆಹ್ರಾಡೂನ್: ಆರು ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಕೊಲೆಗೈದು, ಆಕೆಯ ಶವದ ಮೇಲೆಯೇ ಕಾಮುಕನೊಬ್ಬ ಅತ್ಯಾಚಾರವೆಸಗುವ ಮೂಲಕ ಮೃಗೀಯ ವರ್ತನೆ ತೋರಿದ ಘಟನೆ ಉತ್ತರಾಖಂಡ್ ನಲ್ಲಿ ನಡೆದಿದೆ.

    ಬಾಲಕಿ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ಶುಕ್ರವಾರದಂದು ಅವರು ಮಗಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದರು. ಈ ವೇಳೆ ತನ್ನ ಗೆಳೆಯರ ಜೊತೆ ಆಟವಾಡುತ್ತಿದ್ದ ಬಾಲಕಿ ಏಕಾಏಕಿ ಕಾಣೆಯಾಗಿದ್ದಳು. ಸಂಜೆ ಮನೆಗೆ ಬಂದ ಪೋಷಕರು ಮಗಳು ಕಾಣೆಯಾಗಿರುವ ವಿಷಯ ತಿಳಿದು ಹುಡುಕಾಟ ನಡೆಸಿದ್ದಾರೆ. ಆದ್ರೆ ಶನಿವಾರದಂದು ಕಾಡಿನಲ್ಲಿ ಬಾಲಕಿಯ ಶವ ಪತ್ತೆಯಾಗಿದೆ.

    ಬಾಲಕಿಯ ಮನೆ ಬಳಿ ಇದ್ದ ಪೌಲ್ಟ್ರಿ ಫಾರಂ ಸೆಕ್ಯುರಿಟಿ ಗಾರ್ಡ್ ಈ ಕೃತ್ಯವೆಸಗಿದ್ದಾನೆ. ಆಟವಾಡುತ್ತಿದ್ದ ಬಾಲಕಿಯನ್ನು ಅಪಹರಿಸಿದ ಆರೋಪಿ, ಆಕೆಯನ್ನು ಕಾಡಿಗೆ ಕರೆದೊಯ್ದು ಅತ್ಯಾಚಾರ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಬಾಲಕಿ ಕಿರುಚಾಡಿದ್ದಕ್ಕೆ ಕೋಪಗೊಂಡು ಆಕೆಯನ್ನ ಕೊಲೆ ಮಾಡಿದ್ದಾನೆ. ಬಳಿಕ ಬಾಲಕಿಯ ಶವದ ಮೇಲೆಯೇ ಅತ್ಯಾಚಾರವೆಸಗಿ ತನ್ನ ಕಾಮತೃಷೆ ತೀರಿಸಿಕೊಳ್ಳುವ ಮೂಲಕ ವಿಕೃತಿ ಮೆರೆದಿದ್ದಾನೆ.

    ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಅಲ್ಲದೆ ವಿಚಾರಣೆ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಸಾರ್ವಜನಿಕ ಶೌಚಾಲಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಯ್ತು ಮಹಿಳೆಯ ಶವ!

    ಸಾರ್ವಜನಿಕ ಶೌಚಾಲಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಯ್ತು ಮಹಿಳೆಯ ಶವ!

    ನವದೆಹಲಿ: ಸಾರ್ವಜನಿಕ ಶೌಚಾಲಯದಲ್ಲಿ ನೇಣುಬಿಗಿದುಕೊಂಡಿರುವ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದು, ಜನರನ್ನು ಬೆಚ್ಚಿಬೀಳಿಸಿದೆ.

    ದೆಹಲಿಯ ಗೋವಿಂದರಿ ನಗರದ ಮಾ ಆನಂದಮಯಿ ಮಾರ್ಗಕ್ಕೆ ಹತ್ತಿರವಿರುವ ಸಾರ್ವಜನಿಕ ಶೌಚಾಲಯವೊಂದರಲ್ಲಿ ಮಹಿಳೆಯವ ಶವ ಪತ್ತೆಯಾಗಿದೆ. ಮೃತಪಟ್ಟಿರುವ ಮಹಿಳೆ ಸ್ಥಳೀಯ ನಿವಾಸಿಯಾಗಿದ್ದು, ಮಂಗಳವಾರ ಮನೆಯಿಂದ ಹೊರ ಹೋಗಿದ್ದ ಮಹಿಳೆ ರಾತ್ರಿಯಾದರೂ ವಾಪಸ್ ಬರದಿದ್ದ ಕಾರಣಕ್ಕೆ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಮಹಿಳೆಯ ಮನೆ ಬಳಿಯೇ ಇದ್ದ ಸಾರ್ವಜನಿಕ ಶೌಚಾಲಯದಲ್ಲಿ ಆಕೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದನ್ನು ನೋಡಿದ ಸ್ಥಳಿಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ಕಳೆದ ಎರಡು ವರ್ಷದ ಹಿಂದೆ ಈ ಮಹಿಳೆಯ ವಿವಾಹವಾಗಿತ್ತು. ಆದರೆ ಪತಿ ಹಾಗೂ ಆತನ ಮನೆಯವರು ಮಹಿಳೆಗೆ ತವರಿಂದ ವರದಕ್ಷಿಣೆ ತರುವಂತೆ ಹಿಂಸೆ ನೀಡುತ್ತಿದ್ದರು. ಆದರಿಂದ ಒಮ್ಮೆ ಮಹಿಳೆ ಗಂಡನ ಮನೆ ಬಿಟ್ಟು, ತವರಿಗೆ ಕೂಡ ಬಂದಿದ್ದಳು. ಬಳಿಕ ಪತಿಯೇ ಆಕೆಯನ್ನು ಮನೆಗೆ ವಾಪಾಸ್ ಕರೆಕೊಂಡು ಹೋಗಿದ್ದ ಎಂದು ಮಹಿಳೆಯ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.

    ಅಲ್ಲದೆ ಇದು ಆತ್ಮಹತ್ಯೆಯಲ್ಲ, ಕೊಲೆ. ಪತಿ ಹಾಗೂ ಆತನ ಮನೆಯವರು ಸೇರಿಕೊಂಡು ಕೊಲೆ ಮಾಡಿ ಬಳಿಕ ಆತ್ಮಹತ್ಯೆ ಎಂದು ಬಿಂಬಿಸಲು ಸಾರ್ವಜನಿಕ ಶೌಚಾಲಯದಲ್ಲಿ ಶವ ಇಟ್ಟುಬಂದಿದ್ದಾರೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

    ಮಹಿಳೆ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿದ್ದು, ಈಗಾಗಲೇ ಮಹಿಳೆಯ ಮೃತದೇಹವನ್ನು ಪೊಲೀಸರು ಮರಣೋತ್ತರ ಪರಿಕ್ಷೆಗೆ ಕಳುಹಿಸಿದ್ದಾರೆ. ಹಾಗೆಯೇ ಆಕೆಯ ಮೊಬೈಲ್ ಕಾಲ್ ರೆಕಾರ್ಡ್ ಗಳನ್ನು ಪರಿಶೀಲಿಸಿ, ತನಿಖೆ ನಡೆಸುತ್ತಿದ್ದಾರೆ.

  • 90ರ ದಶಕದ ಬಾಲಿವುಡ್ ಖಳನಟನ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

    90ರ ದಶಕದ ಬಾಲಿವುಡ್ ಖಳನಟನ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

    ಮುಂಬೈ: 90ರ ದಶಕದ ಬಾಲಿವುಡ್ ಖಳನಟ ಮಹೇಶ್ ಆನಂದ್ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಮಹೇಶ್ ಆನಂದ್ 80 ಹಾಗೂ 90ರ ದಶಕದಲ್ಲಿ ಹಿಂದಿ ಚಿತ್ರಗಳಲ್ಲಿ ಖಳನಟರಾಗಿ ಅಭಿನಯಿಸಿದ್ದಾರೆ. ಮಹೇಶ್ ಅವರ ಸಾವಿನ ವಿಷಯ ಅಧಿಕೃತವಾಗಿ ತಿಳಿದು ಬಂದಿಲ್ಲ. ಸದ್ಯ ಅವರ ಮೃತದೇಹವನ್ನು ಕೋಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಂತರ ಇದು ಆತ್ಮಹತ್ಯೆಯೋ ಅಥವಾ ಸಹಜ ಸಾವೋ ಎಂಬುದು ತಿಳಿದು ಬರಲಿದೆ.

    ಮಹೇಶ್ ಆನಂದ್ ಮುಂಬೈನ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದು, ಅವರ ಪತ್ನಿ ಮಾಸ್ಕೋದಲ್ಲಿ ವಾಸಿಸುತ್ತಿದ್ದಾರೆ. ವರದಿಗಳ ಪ್ರಕಾರ ಮಹೇಶ್ ಆರ್ಥಿಕವಾಗಿ ಕಷ್ಟಪಡುತ್ತಿದ್ದರು ಎಂದು ಹೇಳಲಾಗಿದೆ. ಸಂದರ್ಶನವೊಂದರಲ್ಲಿ ಮಹೇಶ್ ಅವರು, “ನನಗೆ 18 ವರ್ಷದಿಂದ ಯಾವುದೇ ಸಿನಿಮಾ ಆಫರ್ ಗಳು ಬರಲಿಲ್ಲ. ಕೆಲವು ಬಾರಿ ನಾನು ಊಟಕ್ಕಾಗಿ ವ್ರೆಸ್ಲಿಂಗ್ ಮ್ಯಾಚ್ ಆಡುತ್ತಿದೆ” ಎಂದು ಹೇಳಿಕೊಂಡಿದ್ದರು.

    ಮಹೇಶ್ ಕೊನೆಯದಾಗಿ ನಟ ಗೋವಿಂದ ಅವರ ‘ರಂಗೀಲಾ ರಾಜಾ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಕಳೆದ ತಿಂಗಳು ಜನವರಿಯಲ್ಲಿ ಬಿಡುಗಡೆ ಆಗಿತ್ತು. ಈ ಸಿನಿಮಾ ಬಿಡುಗಡೆ ಆದ ನಂತರ ಮಹೇಶ್ ತಮ್ಮ ಫೇಸ್‍ಬುಕ್ ಖಾತೆಯಲ್ಲಿ, “18 ವರ್ಷಗಳ ನಂತರ ನನ್ನ ರಂಗೀಲಾ ರಾಜಾ ಸಿನಿಮಾ ಬಿಡುಗಡೆ ಆಗಿದೆ. ನಾನು ತುಂಬಾ ಖುಷಿ ಆಗಿದ್ದೇನೆ. ನಾನು ಆ ಸಿನಿಮಾದ ಕೊನೆಯಲ್ಲಿ ಕೇವಲ 6 ನಿಮಿಷ ನಟಿಸಿದ್ದೇನೆ. ನೀವು ನನ್ನನ್ನು ಮತ್ತೆ ಸ್ವಾಗತಿಸುತ್ತೀರಿ ಎಂದುಕೊಂಡಿದ್ದೇನೆ” ಎಂದು ಪೋಸ್ಟ್ ಮಾಡಿದ್ದರು.

    ಮಹೇಶ್ ಆನಂದ್ ಅವರು ಈ ಹಿಂದೆ ಕುರುಕ್ಷೇತ್ರ, ಸ್ವರ್ಗ್, ಕೂಲಿ ನಂ. 1, ವಿಜೇತ್, ಶೆಹೆನ್‍ಶಾ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಮಹೇಶ್ ಬಾಲಿವುಡ್ ಹಿರಿಯ ಕಲಾವಿದರಾದ ಧರ್ಮೆಂದ್ರ, ಸನ್ನಿ ಡಿಯೋಲ್, ಸಂಜಯ್ ದತ್, ಗೋವಿಂದ ಹಾಗೂ ಅಮಿತಾಬ್ ಬಚ್ವನ್ ಸೇರಿದಂತೆ ಹಲವು ಹಿಂದಿ ಸೂಪರ್ ಸ್ಟಾರ್‍ಗಳ ಜೊತೆ ನಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೃಷಿಹೊಂಡದಲ್ಲಿ ಮಹಿಳೆ, ಬಾಲಕಿಯ ಶವ ಪತ್ತೆ

    ಕೃಷಿಹೊಂಡದಲ್ಲಿ ಮಹಿಳೆ, ಬಾಲಕಿಯ ಶವ ಪತ್ತೆ

    ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಲ್ಲಿನಾಯಕನಹಳ್ಳಿ ಗ್ರಾಮದ ಬಳಿಯ ಕೃಷಿ ಹೊಂಡದಲ್ಲಿ ಮಹಿಳೆ ಹಾಗೂ ಬಾಲಕಿಯ ಶವಪತ್ತೆಯಾಗಿದೆ.

    ಖಾಸಗಿ ಬೀಜ ಕಂಪನಿ ಮಾನ್ಸೆಂಟೊ ಸೇರಿದ ಕೃಷಿಹೊಂಡದಲ್ಲಿ 25 ವರ್ಷದ ಮಹಿಳೆ ಹಾಗೂ 8 ವರ್ಷದ ಬಾಲಕಿಯ ಅಪರಿಚಿತ ಮೃತದೇಹಗಳ ಪತ್ತೆಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಗೌರಿಬಿದನೂರು ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರ ಅಥವಾ ಯಾರಾದರೂ ಕೊಲೆ ತಂದೆ ಕೃಷಿಹೊಂಡಕ್ಕೆ ಹಾಕಿದ್ದಾರ ಎನ್ನುವ ನಿಟ್ಟಿನಲ್ಲಿ ತನಿಖೆ ಆರಂಭವಾಗಿದೆ. ಇದುವರೆಗೂ ಮಹಿಳೆ ಮತ್ತು ಬಾಲಕಿಯ ಹೆಸರು, ವಿವರಗಳು ಪತ್ತೆಯಾಗಿಲ್ಲ. ಆದರೆ ಬೆಂಗಳೂರಿನ ಸ್ಯಾಟ್‍ಲೈಟ್ ನಿಂದ ಮೆಜೆಸ್ಟಿಕ್‍ಗೆ ಬಂದಿರುವ ಮಹಿಳೆ ಬಳಿಕ ಮೆಜೆಸ್ಟಿಕ್‍ನಿಂದ ಹಿಂದೂಪುರಕ್ಕೆ ಟಿಕೆಟ್ ತೆಗೆದುಕೊಂಡಿದ್ದಾರೆ. ಆ ಟಿಕೆಟ್ ಹಾಗೂ ಜೊತೆಗೆ ಒಂದು ಫೋಟೋ ಕೃಷಿಹೊಂಡದ ಬಳಿ ಪತ್ತೆಯಾಗಿದೆ.

    ಈ ಘಟನೆ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಲ್ಲಿನಿಂದ ಜಜ್ಜಿ ನವಜಾತ ಶಿಶು ಹತ್ಯೆ!

    ಕಲ್ಲಿನಿಂದ ಜಜ್ಜಿ ನವಜಾತ ಶಿಶು ಹತ್ಯೆ!

    ಚಿಕ್ಕಮಗಳೂರು: ಮಕ್ಕಳು ಆಗಲಿಲ್ಲವೆಂದು ಅನೇಕ ಮಹಿಳೆಯರು ದೇವರ ಮೊರೆ ಹೋಗುತ್ತಾರೆ. ಆದರೆ ವಿಕೃತ ಮನಸ್ಥಿತಿಯ ದುಷ್ಕುರ್ಮಿಗಳು ಕಣ್ಣು ಬಿಡುವ ಮೊದಲೇ ಶಿಶುವೊಂದನ್ನು ಹತ್ಯೆ ಮಾಡಿದ ಅಮಾನವೀಯ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.

    ನಗರದ ಹಳೇ ತಾಲೂಕು ಕಚೇರಿ ಬಳಿ ಶಿಶುವಿನ ಮೃತ ದೇಹ ಪತ್ತೆಯಾಗಿದೆ. ಕೇವಲ ಒಂದು ದಿನದ ಶಿಶುವನ್ನು ಕಲ್ಲಿನಿಂದ ಜಜ್ಜಿ ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯ ಬಳಿಕ ಶಿಶುವನ್ನು ಹಾಸಿಗೆಯಲ್ಲಿ ಸುತ್ತಿ ಜನದಟ್ಟಣೆ ಇಲ್ಲದ ಹಳೇ ತಾಲೂಕು ಕಚೇರಿಯ ಬಳಿ ಇರುವ ಪಾಳುಬಿದ್ದ ಕಟ್ಟಡದ ಹಿಂದೆ ಎಸೆದಿದ್ದಾರೆ. ಅಷ್ಟೇ ಅಲ್ಲದೆ ಮಗುವಿನ ಸುತ್ತ ಕಲ್ಲುಗಳನ್ನು ಇಟ್ಟಿದ್ದಾರೆ.

    ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv