Tag: DCM

  • ಬಿಎಸ್‍ವೈ ಕ್ಯಾಬಿನೆಟ್‍ನಲ್ಲಿ ಡಿಸಿಎಂಗಳು ಬೇಕಾ, ಬೇಡ್ವಾ?- ರಹಸ್ಯ ಸಹಿ ಸಂಗ್ರಹ

    ಬಿಎಸ್‍ವೈ ಕ್ಯಾಬಿನೆಟ್‍ನಲ್ಲಿ ಡಿಸಿಎಂಗಳು ಬೇಕಾ, ಬೇಡ್ವಾ?- ರಹಸ್ಯ ಸಹಿ ಸಂಗ್ರಹ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಡಿಸಿಎಂಗಳು ಇರ್ತಾರಾ ಅನ್ನೋ ಪ್ರಶ್ನೆಯೊಂದು ಎದುರಾಗಿದೆ.

    ಸಂಪುಟ ವಿಸ್ತರಣೆಯಾದರೆ ಡಿಸಿಎಂಗಳ ಸಂಖ್ಯೆ ಎಷ್ಟಿರುತ್ತೆ ಎಂಬ ಪ್ರಶ್ನೆ ರಾಜ್ಯ ಬಿಜೆಪಿ ವಲಯದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಈ ಚರ್ಚೆಯ ಬೆನ್ನಲ್ಲೇ ಡಿಸಿಎಂಗಳ ವಿರುದ್ಧ ಬಿಜೆಪಿ ಆಂತರಿಕ ವಲಯದಲ್ಲಿ ಬಣ ಕಾದಾಟ ಜೋರಾಗುತ್ತಿದೆ. ಬಣ ಗುದ್ದಾಟದ ಫಲವೇ ರಹಸ್ಯ ಸಹಿ ಸಂಗ್ರಹವಾಗಿದೆ.

    ಕೆಲವು ದಿನಗಳ ಹಿಂದೆಯಷ್ಟೇ ಬೇಡ ಬೇಡ ಡಿಸಿಎಂ ಬೇಡ ಅಂತ ಬಿಎಸ್‍ವೈ ಆಪ್ತ ಶಾಸಕರೇ ಧ್ವನಿ ಎತ್ತಿದರು. ಬಹಿರಂಗವಾಗಿಯೇ ಡಿಸಿಎಂ ಬೇಕು ಬೇಡಗಳ ಬಗ್ಗೆ ಚರ್ಚೆ ಶುರು ಮಾಡಿದರು. ಅದರಲ್ಲೂ ಯಡಿಯೂರಪ್ಪ ಆಪ್ತ ಶಾಸಕ ರೇಣುಕಾಚಾರ್ಯ ಬಹಿರಂಗವಾಗಿ ಮಾತಾಡಿದರು. ಅಷ್ಟೇ ಅಲ್ಲ ಡಿಸಿಎಂ ಅವಶ್ಯಕತೆ ಇಲ್ಲ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‍ಗೆ ಮನವಿ ಕೂಡ ಸಲ್ಲಿಸಿದರು. ಆದರೆ ಇದೀಗ ಡಿಸಿಎಂಗಳ ಅಗತ್ಯತೆ ಇದೆಯೋ..? ಇಲ್ಲವೋ ಎಂಬುದರ ಬಗ್ಗೆ ಸಹಿ ಸಂಗ್ರಹ ಮೇಲಾಟ ನಡೆಯುತ್ತಿದೆ ಎನ್ನಲಾಗಿದೆ.

    ಸಿಎಂ ಯಡಿಯೂರಪ್ಪ ಆಪ್ತ ಶಾಸಕರ ಗುಂಪಿನಿಂದ ರಹಸ್ಯ ಸಹಿ ಸಂಗ್ರಹ ಶುರುವಾಗಿದೆ. ಡಿಸಿಎಂಗಳ ಅಗತ್ಯತೆ ಇಲ್ಲ ಎಂದು ಸಹಿ ಸಂಗ್ರಹ ಶುರು ಮಾಡಿರುವ ಬಿಜೆಪಿ ಒಂದು ಟೀಂ, ಸಹಿ ಸಂಗ್ರಹಿಸಿ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಕಳುಹಿಸಲು ಪ್ಲಾನ್ ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾಗೆ ಕಳುಹಿಸಲು ತಂತ್ರ ರೂಪಿಸಿದ್ದಾರೆ.

    ಹಾಗಾದರೆ ಯಡಿಯೂರಪ್ಪ ಆಪ್ತ ಶಾಸಕರ ಟೀಂ ತಂತ್ರಕ್ಕೆ ಹೈಕಮಾಂಡ್ ಮಣೆ ಹಾಕುತ್ತಾ?, ಇರುವ ಡಿಸಿಎಂಗಳನ್ನ ರದ್ದು ಮಾಡುತ್ತಾ?, ಇಲ್ಲ ಇನ್ನೊಂದು ಡಿಸಿಎಂ ಸೃಷ್ಟಿಸುತ್ತಾ? ಅನ್ನೋ ಕುತೂಹಲ ರಾಜ್ಯ ಬಿಜೆಪಿಯಲ್ಲಿ ತೀವ್ರವಾಗಿದೆ.

    ಒಂದು ವೇಳೆ ಡಿಸಿಎಂ ಬೇಡ ಎಂಬ ನಿರ್ಧಾರಕ್ಕೆ ಹೈಕಮಾಂಡ್ ಬಂದರೆ ಮೂವರು ಡಿಸಿಎಂ ಹುದ್ದೆ ಕಳೆದುಕೊಳ್ಳುತ್ತಾರೆ. ಡಿಸಿಎಂ ಬೇಕು ಅಂತ ಹೈಕಮಾಂಡ್ ಉಳಿಸಿಕೊಂಡರೆ ಡಿಸಿಎಂ ಸ್ಥಾನ 4ಕ್ಕೆ ಹೆಚ್ಚಾದ್ರೂ ಅಚ್ಚರಿ ಇಲ್ಲ ಎನ್ನಲಾಗಿದೆ. ಆಗ ಒಂದು ವೇಳೆ 4ನೇ ಡಿಸಿಎಂ ಸೃಷ್ಟಿಯಾದರೆ ಶ್ರೀರಾಮುಲು, ರಮೇಶ್ ಜಾರಕಿಹೊಳಿ ನಡುವೆ ದೊಡ್ಡ ಮಟ್ಟದ ಕಾದಾಟವಂತೂ ನಡೆಯದೇ ಇರದು.

  • ಒಂದು ಡಿಸಿಎಂ ಸ್ಥಾನ, ನಾಲ್ವರಿಗೆ ಮಂತ್ರಿಗಿರಿ ನೀಡಬೇಕು: ಪ್ರಸನ್ನಾಂದ ಸ್ವಾಮೀಜಿ ಆಗ್ರಹ

    ಒಂದು ಡಿಸಿಎಂ ಸ್ಥಾನ, ನಾಲ್ವರಿಗೆ ಮಂತ್ರಿಗಿರಿ ನೀಡಬೇಕು: ಪ್ರಸನ್ನಾಂದ ಸ್ವಾಮೀಜಿ ಆಗ್ರಹ

    ಕೊಪ್ಪಳ: ವಾಲ್ಮೀಕಿ ಸಮುದಾಯದ ಒಬ್ಬರಿಗೆ ಉಪ ಮುಖ್ಯಮಂತ್ರಿ ಸ್ಥಾನ, ನಾಲ್ವರಿಗೆ ಸಚಿವ ಸ್ಥಾನ ನೀಡಬೇಕು ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.

    ಗಂಗಾವತಿಯಲ್ಲಿ ಆದಿಕಾವಿ ವಾಲ್ಮೀಕಿ ಜಾತ್ರೆಯ ಅಂಗವಾಗಿ ನಾಯಕ ಸಮುದಾಯದ ಮುಖಂಡರ ಪೂರ್ವಭಾವಿ ಸಭೆ ಇಂದು ಕರೆಯಲಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿ, 2008ರಲ್ಲಿ ಅಂದಿನ ಬಿಜೆಪಿ ಸರ್ಕಾರ ವಾಲ್ಮೀಕಿ ಸಮುದಾಯದ ನಾಲ್ವರು ಶಾಸಕರಿಗೆ ಸಚಿವ ಸ್ಥಾನ ನೀಡಿತ್ತು. ಅದರಂತೆ ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡುತ್ತೇವೆ ಎಂದು ಘೊಷಣೆ ಕೂಡ ಮಾಡಿದ್ದರು. ಬಿಜೆಪಿ ನಾಯಕರ ಭರವಸೆಯಂತೆ ನಮ್ಮ ಸಮುದಾಯದ ಒಬ್ಬರನ್ನು ಡಿಸಿಎಂ ಮಾಡಬೇಕು ಮತ್ತು ನಾಲ್ವರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

    ಈಗಾಗಲೆ ಸಮಾಜದ ಬಹುದೊಡ್ಡ ಬೇಡಿಕೆ ಎಂಬಂತೆ ಸಮಾಜಕ್ಕೆ ಶೇ. 7.5ರಷ್ಟು ಮೀಸಲಾತಿ ನೀಡಬೇಕೆಂದು ಸಮಾಜದ ಬೇಡಿಕೆಯಾಗಿದೆ. ಬರುವ ವಾಲ್ಮೀಕಿ ಜಾತ್ರೋತ್ಸವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೀಸಲಾತಿ ಘೋಷಣೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.

  • ರಾಮುಲು ಡಿಸಿಎಂ ಆಗಬೇಕೆನ್ನುವುದು ಜನರ ಒತ್ತಾಯ: ಸಚಿವ ಶ್ರೀರಾಮುಲು

    ರಾಮುಲು ಡಿಸಿಎಂ ಆಗಬೇಕೆನ್ನುವುದು ಜನರ ಒತ್ತಾಯ: ಸಚಿವ ಶ್ರೀರಾಮುಲು

    ಯಾದಗಿರಿ: ರಾಮುಲು ಸರ್ಕಾರದಲ್ಲಿ ಡಿಸಿಎಂ ಆಗಬೇಕೆನ್ನುವುದು ಜನರ ಒತ್ತಾಯ. ನಾನು ಅದನ್ನು ತಿರಸ್ಕರಿಸುವುದಿಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮಲು ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಡಿಸಿಎಂ ನೀಡಬೇಕು ಎನ್ನುವುದು ಜನರ ಅಪೇಕ್ಷೆಯಾಗಿದ್ದು, ಜನರ ಮಾತನ್ನು ಸರ್ಕಾರ ಕೇಳುತ್ತದೆ ಎಂಬ ನಂಬಿಕೆಯಿದೆ. ಸೂಕ್ತ ಸಮಯದಲ್ಲಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ಡಿಸಿಎಂ ಸ್ಥಾನ ನೀಡದಿದ್ದರೆ ಮುಂದೆ ನೋಡೋಣ ಎಂದರು.

    ವಾಲ್ಮೀಕಿ ಸಮಾಜಕ್ಕೆ 7.5 ಮೀಸಲಾತಿ ನೀಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸಿಎಂ ಬಿಎಸ್‍ವೈ ನೂರಕ್ಕೆನೂರು 7.5 ಮೀಸಲಾತಿ ಕೊಟ್ಟೇ ಕೊಡುತ್ತಾರೆ. ಮೀಸಲಾತಿ ಕೊಡದಿದ್ದರೆ ಶ್ರೀಗಳ ಮಾತಿಗೆ ನಾವೆಲ್ಲರೂ ಬದ್ಧರಾಗಿದ್ದೇವೆ. ಸ್ವಾಮೀಜಿಗಳ ಮಾತನ್ನು ಯಾವುದೇ ಕಾರಣಕ್ಕೂ ನಾವು ಮೀರುವುದಿಲ್ಲ. 7.5 ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ, ಮೀಸಲಾತಿ ಘೋಷಣೆಗೆ ಯಾವುದೇ ದಿನಾಂಕ ನಿಗದಿಯಾಗಿಲ್ಲ ಸರ್ಕಾರದ ನಡೆಯನ್ನು ಕಾದು ನೋಡುತ್ತೇವೆ ಎಂದು ತಿಳಿಸಿದರು.

  • ಜಾತ್ರೆಯಂದೇ ಮೀಸಲಾತಿ ಘೋಷಣೆಯಾಗ್ಬೇಕು: ಪ್ರಸನ್ನಾನಂದ ಪುರಿ ಸ್ವಾಮೀಜಿ

    ಜಾತ್ರೆಯಂದೇ ಮೀಸಲಾತಿ ಘೋಷಣೆಯಾಗ್ಬೇಕು: ಪ್ರಸನ್ನಾನಂದ ಪುರಿ ಸ್ವಾಮೀಜಿ

    ಯಾದಗಿರಿ: ಮುಂದಿನ ವರ್ಷದ ಫೆಬ್ರವರಿ ತಿಂಗಳ 8, 9ರಂದು ಮಠದ ಜಾತ್ರೆ ಇದೆ. ಅದೇ ಜಾತ್ರೆಯಲ್ಲಿ ಮೀಸಲಾತಿ ಘೋಷಣೆಯಾಗಬೇಕು. 7.5% ಮೀಸಲಾತಿ ಶೀಘ್ರವಾಗಿ ಜಾರಿಯಾಗದಿದ್ದರೆ ನಮ್ಮ ಸಮಾಜದ 15 ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಲು ಸಿದ್ಧರಿದ್ದಾರೆ ಅಂತ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದ ಪುರಿ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಯಾದಗಿರಿಯ ಸರ್ಕಿಟ್ ಹೌಸ್ ನಲ್ಲಿ ಜಾತ್ರೆಯ ಪೋಸ್ಟರ್ ಬಿಡುಗಡೆಗೊಳಿಸಿ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಅವರು, ಬಿಜೆಪಿ ನಮ್ಮ ಸಮುದಾಯದ ಶಾಸಕರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವ ಭರವಸೆ ನೀಡಿ ಹೈಜಾಕ್ ಮಾಡಿದೆ. ಆದರೆ ಸ್ಥಾನ ನೀಡಲು ಯಾಕೆ ತಡ ಮಾಡುತ್ತಿದ್ದಾರೋ ಗೊತ್ತಿಲ್ಲ. ನಮ್ಮ ಸಮಾಜದ ಸಚಿವರರಿಗೆ ಡಿಸಿಎಂ ಸ್ಥಾನ ನೀಡಲೇ ಬೇಕು ಮತ್ತು ಸುರಪುರದ ಶಾಸಕ ರಾಜೂಗೌಡರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

    ಮರ್ಯಾದೆ ಪುರುಷ ಶ್ರೀರಾಮನ ಚರಿತ್ರೆಯನ್ನು ಜಗತ್ತಿಗೆ ಹೇಳಿದವರು ಮಹರ್ಷಿ ವಾಲ್ಮೀಕಿ. ಹೀಗಾಗಿ ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ಮಂದಿರ ನಿರ್ಮಾಣ ಮಾಡಬೇಕು ಮತ್ತು ಹಂಪಿ ವಿವಿಗೆ ಶ್ರೀ ಮಹರ್ಷಿ ವಾಲ್ಮೀಕಿ ವಿವಿ ಅಂತ ಮರುನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.

    ವಾಲ್ಮೀಕಿ ಅನ್ನ ಕುಟಿರ ಪ್ರಸ್ತಾವನೆಯನ್ನು ನಾನು ಸ್ವಾಗತಿಸುತ್ತೆನೆ. ಹೀಗಿರುವಾಗ ಇಂದಿರಾ ಕ್ಯಾಂಟಿನ್ ಗಳಿಗೆ ಅದೇ ಹೆಸರು ಇರಲಿ. ಆದರೆ ಇನ್ನು ಮುಂದೆ ನಿರ್ಮಾಣ ಮಾಡುವ ಕ್ಯಾಂಟಿನ್ ಗಳಿಗೆ ವಾಲ್ಮೀಕಿ ಅನ್ನ ಕುಟಿರ ಎಂದು ನಾಮಕರಣ ಮಾಡಬೇಕು ಎಂದರು.

  • ಯಡಿಯೂರಪ್ಪಗೆ ನಾನು ಪೈಪೋಟಿ ಅಲ್ಲ: ಉಮೇಶ್ ಕತ್ತಿ

    ಯಡಿಯೂರಪ್ಪಗೆ ನಾನು ಪೈಪೋಟಿ ಅಲ್ಲ: ಉಮೇಶ್ ಕತ್ತಿ

    ನವದೆಹಲಿ: ಸಿಎಂ ಸ್ಥಾನಕ್ಕೆ ನಾನು ಅರ್ಹ ವ್ಯಕ್ತಿ, ಸಿಎಂ ಆಗಲು ಎಲ್ಲ ಕ್ವಾಲಿಫೈಗಳು ನನ್ನಲ್ಲಿದೆ. ಆದರೆ ನಾನು ಬಿ.ಎಸ್ ಯಡಿಯೂರಪ್ಪ ಅವರಿಗೆ ಪೈಪೋಟಿ ಅಲ್ಲ ಎಂದು ಶಾಸಕ ಉಮೇಶ್ ಕತ್ತಿ ಪ್ರತಿಕ್ರಿಯಿಸಿದ್ದಾರೆ.

    ನವದೆಹಲಿಯಲ್ಲಿ ಮಾತನಾಡಿದ ಅವರು, ಗ್ಯಾಸ್ ಕನೆಕ್ಷನ್ ಸಂಬಂಧ ದೆಹಲಿಗೆ ಬಂದಿದ್ದೇನೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭೇಟಿಯಾಗುತ್ತೇನೆ. ಕ್ಷೇತ್ರದ ಕೆಲವು ಕೆಲಸಗಳ ಬಗ್ಗೆ ಚರ್ಚೆ ಮಾಡಲಿದ್ದೇನೆ ಎಂದರು.

    ದೆಹಲಿಯಲ್ಲಿ ಪ್ರಹ್ಲಾದ್ ಜೋಶಿ ಬಿಟ್ಟು ಹೈಕಮಾಂಡ್ ಪೈಕಿ ಯಾರ ಜೊತೆಗೂ ಮಾತನಾಡಲ್ಲ. ನಾನು ಮಂತ್ರಿಗಿರಿ ಕೇಳ್ತಿಲ್ಲ, ಅದು ನನ್ನ ಹಕ್ಕು. ನನಗೆ ಸಚಿವ ಸ್ಥಾನ ನೀಡಿದರೆ ಒಳ್ಳೆಯ ಕೆಲಸ ಮಾಡುವೆ ಎಂದು ಸಿಎಂಗೆ ಗೊತ್ತಿದೆ. ಹೈಕಮಾಂಡ್‍ಗೂ ಮನವಿ ಮಾಡ್ತೇನೆ, ಸಚಿವ ಸ್ಥಾನ ಕೊಡದಿದ್ರೆ ಪಕ್ಷದ ಶಿಸ್ತಿನ ಸಿಪಾಯಿ ಆಗಿ ಕೆಲಸ ಮಾಡುತ್ತೇನೆ ಎಂದರು.

    ಸಿಎಂ ಸ್ಥಾನದ ಬಗ್ಗೆ ಮಾತನಾಡಿ, ನಾನು ಸಿಎಂ ಸ್ಥಾನಕ್ಕೆ ಅರ್ಹ ವ್ಯಕ್ತಿ, ಎಲ್ಲ ಕ್ವಾಲಿಫೈ ಇದೆ. 8 ಬಾರಿ ಶಾಸಕನಾಗಿದ್ದೇನೆ, ಮಂತ್ರಿಯಾಗಿ 13 ವರ್ಷ ಕೆಲಸ ಮಾಡಿದ ಅನುಭವ ಇದೆ. ಹಾಗಂತ ಮಾತ್ರಕ್ಕೆ ಯಡಿಯೂರಪ್ಪ ಅವರಿಗೆ ನಾನು ಪೈಪೋಟಿ ಅಲ್ಲ, ಮುಂದಿನ ದಿನಗಳಲ್ಲಿ ನಾನು ಸಿಎಂ ಆಗಬಹುದು ಎಂದರು.

    ಡಿಸಿಎಂ ಸಾಂವಿಧಾನಿಕ ಹುದ್ದೆ ಅಲ್ಲ ಅವರನ್ನು ಮುಂದುವರಿಸುವುದು ಬಿಡುವುದು ಹೈಕಮಾಂಡ್‍ಗೆ ಬಿಟ್ಟಿದ್ದು. ನಾನು ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿಲ್ಲ. ಅತಿ ಹೆಚ್ಚು ಶಾಸಕರು ಬೆಳಗಾವಿಯಲ್ಲಿದ್ದಾರೆ. ಹೆಚ್ಚು ಸಚಿವ ಸ್ಥಾನ ಕೊಟ್ಟರೇ ತಪ್ಪಿಲ್ಲ ಎಂದು ಬೆಳಗಾವಿಗೆ ಹೆಚ್ಚು ಸಚಿವ ಸ್ಥಾನ ನೀಡುವುದನ್ನು ಸಮರ್ಥಿಸಿಕೊಂಡರು.

  • ಡಿಸಿಎಂ ಪ್ರಶ್ನೆಗೆ ನಾನು ಚಿಕ್ಕವನು ಅಂದ್ರು ಆರ್.ಅಶೋಕ್

    ಡಿಸಿಎಂ ಪ್ರಶ್ನೆಗೆ ನಾನು ಚಿಕ್ಕವನು ಅಂದ್ರು ಆರ್.ಅಶೋಕ್

    ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಈಗ ಡಿಸಿಎಂ ಜಟಾಪಟಿ ಜೋರಾಗಿದೆ. ಮೂರು ನಾಲ್ಕಾಗುತ್ತೋ? ಎರಡಾಗುತ್ತೋ? ಎಲ್ಲ ಖಾಲಿ ಆಗಿ ಬಿಡುತ್ತೋ ಅನ್ನೋ ಲೆಕ್ಕಚಾರ ಭರ್ಜರಿಯಾಗಿಯೇ ನಡೀತಾ ಇದೆ. ಈ ಡಿಸಿಎಂ ಮೇಲಾಟದಲ್ಲಿ ಕಂದಾಯ ಸಚಿವ ಅಶೋಕ್ ಅವರದ್ದು ಮಾತ್ರ ರಕ್ಷಣಾತ್ಮಕ ಆಟ. ಡಿಸಿಎಂ ವಿವಾದ ಬಗ್ಗೆ ಏನೇ ಪ್ರಶ್ನೆ ಕೇಳಿದರೂ ನೋ ಕಮೆಂಟ್ ಅನ್ನೋದಕ್ಕೆ ಶುರು ಮಾಡಿದ್ದಾರೆ.

    ಅಂದಹಾಗೆ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಆರ್.ಅಶೋಕ್ ಪವರ್ ಫುಲ್ ಆಗಿದ್ರು. ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಅಶೋಕ್, ಈಶ್ವರಪ್ಪ ಡಿಸಿಎಂ ಆಗಿದ್ದರು. ಈಗ ಇಬ್ಬರು ಕ್ಯಾಬಿನೆಟ್ ದರ್ಜೆ ಸಚಿವರು. ಡಿಸಿಎಂಗಾಗಿ ಲಾಸ್ಟ್ ಮಿನಿಟ್ ಫೈಟ್ ಮಾಡಿ ಸುಮ್ಮನಾಗಿದ್ದರು. ಅದಕ್ಕೆ ಕಾರಣ ಹೈಕಮಾಂಡ್ ಕಂಟ್ರೋಲ್. ಈಶ್ವರಪ್ಪ, ಅಶೋಕ್ ಬಿಟ್ಟು ಅಚ್ಚರಿಯಾಗಿ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ್, ಲಕ್ಷ್ಮಣ ಸವದಿ ಅವರನ್ನು ಹೈಕಮಾಂಡ್ ಡಿಸಿಎಂ ಮಾಡಿತ್ತು. ಇದು ಸಹಜವಾಗಿಯೇ ಅಶೋಕ್, ಈಶ್ವರಪ್ಪ ಸೇರಿದಂತೆ ಹಲವು ನಾಯಕರ ಕೆಂಗಣ್ಣಿಗೆ ಕಾರಣವಾಗಿತ್ತು. ಆದರೂ ಹೈಕಮಾಂಡ್ ಭಯಕ್ಕೆ ಹೊರಾಂಗಣ ರಾಜಕಾರಣದಲ್ಲಿ ವಿರೋಧಿಸುವ ಕೆಲಸ ಮಾಡಲಿಲ್ಲ.

    ಶ್ರೀರಾಮುಲು, ರಮೇಶ್ ಜಾರಕಿಹೊಳಿಯಿಂದಾಗಿ ಮತ್ತೆ ಡಿಸಿಎಂ ಬೇಕಾ ಅಥವಾ ಬೇಡ್ವಾ? ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಈ ಲೆಕ್ಕಚಾರಕ್ಕೆ ರೇಣುಕಾಚಾರ್ಯ ಅವರು ಪ್ರಬಲ ನಾಯಕರು ನಮಗೆ ಇರುವಾಗ ಆ ಸ್ಥಾನಗಳೇ ಬೇಡ ಎಂದು ಬಿಜೆಪಿ ಅಂಗಳದಲ್ಲಿ ಸಂಚಲನ ಮೂಡಿಸಿದ್ದರು. ಇಷ್ಟೆಲ್ಲ ಆದರೂ ಇನ್ನೊಮ್ಮೆ ಡಿಸಿಎಂ ಆಗಬೇಕು ಎಂದು ಕನಸು ಕಂಡಿದ್ದ ಅಶೋಕ್ ಮಾತ್ರ ಹೊರಾಂಗಣ ರಾಜಕಾರಣದಲ್ಲಿ ಸೈಲೆಂಟ್ ಆಗಿದ್ದಾರೆ. ರಕ್ಷಣಾತ್ಮಕ ಆಟಕ್ಕಿಳಿದಿದ್ದು ಮಾಧ್ಯಮದವರು ಕೇಳುವ ಪ್ರಶ್ನೆಗೆ ನಗುನಗುತ್ತಲೇ ಜಾರಿಕೊಳ್ಳುತ್ತಿದ್ದಾರೆ. ಇವತ್ತು ಕೂಡ ವಿಧಾನಸೌಧದಲ್ಲಿ ಅಶೋಕ್ ಮಾತನಾಡುವಾಗ ಡಿಸಿಎಂ ಪ್ರಶ್ನೆ ಎದುರಾಯ್ತು. ಆಗ ನಾನು ಚಿಕ್ಕವನು, ಡಿಸಿಎಂ ವಿಚಾರದ ಬಗ್ಗೆ ನೋ ಕಮೆಂಟ್ ಎಂದು ಸ್ಮೈಲ್ ಮಾಡಿ ಹೊರಟರು.

  • ಡಿಸಿಎಂ ಹುದ್ದೆ ಶ್ರೀರಾಮುಲುಗೆ ರಾಜಕೀಯ ಬಿಸಿ ತುಪ್ಪ!

    ಡಿಸಿಎಂ ಹುದ್ದೆ ಶ್ರೀರಾಮುಲುಗೆ ರಾಜಕೀಯ ಬಿಸಿ ತುಪ್ಪ!

    ಬೆಂಗಳೂರು: ಯಡಿಯೂರಪ್ಪ ಸರ್ಕಾರದಲ್ಲಿ ಬಯಸದೇ ಬಂದ ಭಾಗ್ಯ ಅಂದ್ರೆ ಡಿಸಿಎಂ ಕುರ್ಚಿ. ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಡಿಸಿಎಂ ಹುದ್ದೆ. ಅಷ್ಟಕ್ಕೂ ಡಿಸಿಎಂ ಹುದ್ದೆ ಸೃಷ್ಟಿಸಿದ್ದು ಯಡಿಯೂರಪ್ಪ ಅಲ್ಲ. ಹೈಕಮಾಂಡ್ ಅಚ್ಚರಿ ರೀತಿಯಲ್ಲಿ ಡಿಸಿಎಂ ಹುದ್ದೆ ಸೃಷ್ಟಿಸಿತು. ಆದರೆ ಈ ಡಿಸಿಎಂ ಹುದ್ದೆ ಮಾತ್ರ ಶ್ರೀರಾಮುಲು ಅವರಿಗೆ ದಕ್ಕಲೇ ಇಲ್ಲ. ಆಗ ದಕ್ಕದ ಹುದ್ದೆಗೆ ಈಗ ದಕ್ಕಿಸಿಕೊಳ್ಳುವ ಪ್ರಯತ್ನಗಳು ನಡೆದಿವೆ. ಆದರೂ ಈ ಡಿಸಿಎಂ ಹುದ್ದೆ ಹೋರಾಟ ರಾಮುಲು ಅವರಿಗೆ ನುಂಗಲಾರದ ಬಿಸಿತುಪ್ಪವಾಗಿದೆ.

    2018ರ ವಿಧಾನಸಭೆ ಚುನಾವಣೆ ವೇಳೆ ರಾಮುಲು ಡಿಸಿಎಂ ಎಂದೇ ಪ್ರಚಾರ ನಡೆಸಲಾಗಿತ್ತು. ಸರ್ಕಾರ ಬಂದರೆ ಶ್ರೀರಾಮುಲು ಪಕ್ಕಾ ಡಿಸಿಎಂ ಅನ್ನೋ ಆಸೆ ಹುಟ್ಟಿಸಿದ್ದರು. ಆಗ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿ ರಾಮುಲುಗೆ ನಿರಾಸೆ ತಂದೊಡ್ಡಿತ್ತು. ಬದಲಾದ ರಾಜಕೀಯ ಪರಿಸ್ಥಿತಿ, ಆಪರೇಷನ್ ಕಮಲದ ಟರ್ನ್ ಪಾಯಿಂಟ್ ನಿಂದ ಹೈಕಮಾಂಡ್ ಲೆಕ್ಕಾಚಾರದಲ್ಲಿ ಶ್ರೀರಾಮುಲು ಅವರಿಗೆ ಅದೃಷ್ಟ ಕೈಕೊಟ್ಟಿತ್ತು.

    ಈಗ ಮತ್ತೆ ಡಿಸಿಎಂ ಪಟ್ಟ ಹೋರಾಟ ಮುನ್ನಲೆಗೆ ಬಂದಿದೆ. ಎಸ್ ಟಿ ಸಮುದಾಯಕ್ಕೆ ಡಿಸಿಎಂ ಪಟ್ಟ ಬೇಕು ಅನ್ನೋ ಬೇಡಿಕೆ ಜೋರಾಗಿಯೇ ನಡೆಯುತ್ತಿದೆ. ಎಸ್ ಟಿ ಸಮುದಾಯದಲ್ಲಿ ಆಪರೇಷನ್ ಡೈನಾಮಿಕ್ ಸ್ಟಾರ್ ರಮೇಶ್ ಜಾರಕಿಹೊಳಿ ಸಹ ರೇಸ್ ನಲ್ಲಿ ಇರೋದು ರಾಮುಲು ಅವರಿಗೆ ಅಡೆತಡೆ ಎದುರಾಗಿದೆ. ಹಾಗಾಗಿ ಈ ಬಾರಿ ಹೈಕಮಾಂಡ್ ಡಿಸಿಎಂ ಪಟ್ಟವನ್ನ 4ಕ್ಕೆ ಏರಿಸುತ್ತಾ? 2ಕ್ಕೆ ಇಳಿಸುತ್ತಾ? ಇಲ್ಲ ಎಲ್ಲವನ್ನು ರದ್ದುಗೊಳಿಸುತ್ತಾ ಅನ್ನೋದರ ಆಧಾರದ ಮೇಲೆ ರಾಮುಲು ಡಿಸಿಎಂ ಭವಿಷ್ಯ ನಿಂತಿರೋದಂತೂ ಸತ್ಯ.

    ಈ ನಡುವೆ ಈ ಬಿಸಿತುಪ್ಪದ ಡಿಸಿಎಂ ಬಗ್ಗೆ ಸುದ್ದಿಗಳು ಹರಿದಾಡುತ್ತಿರೋದು ರಾಮುಲು ಅವರಿಗೆ ಪಕ್ಷದಲ್ಲಿ ಇರುಸುಮುರುಸಿಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಬಿಜೆಪಿಯಲ್ಲಿ ಸ್ಥಾನಮಾನಕ್ಕಾಗಿ ಹೋರಾಟ ಮಾಡಿದ ಜನ ನಾವಲ್ಲ. ಯಾವುದೇ ಖಾತೆಯಲ್ಲಿ ಅಪೇಕ್ಷೆ ಪಟ್ಟವನು ನಾನಲ್ಲ. ಆದರೆ ಶ್ರೀರಾಮುಲುಗೆ ಡಿಸಿಎಂ ಕೊಡಬೇಕು ಅಂತಾ ಜನರ ಒತ್ತಾಯ ಇದೆ. ಜನರ ಒತ್ತಾಯ ಇರುವಾಗ ನಾನು ಅದನ್ನು ಬೇಡ ಎನ್ನಲು ಹೋಗುವುದಿಲ್ಲ. ಎಲ್ಲಾ ದೇವರ ಇಚ್ಛೆ ಎಂದು ಹೇಳುವ ಮೂಲಕ ಡಿಸಿಎಂ ಗದ್ದಲಕ್ಕೆ ತೇಪೆ ಹಚ್ಚಲು ಶ್ರೀರಾಮುಲು ಯತ್ನಿಸಿದ್ದಾರೆ.

  • ಇನ್ನೆರಡು ಡಿಸಿಎಂ ಹುದ್ದೆ ಸೃಷ್ಟಿ ಕೇವಲ ಊಹಾಪೋಹ: ಲಕ್ಷ್ಮಣ ಸವದಿ

    ಇನ್ನೆರಡು ಡಿಸಿಎಂ ಹುದ್ದೆ ಸೃಷ್ಟಿ ಕೇವಲ ಊಹಾಪೋಹ: ಲಕ್ಷ್ಮಣ ಸವದಿ

    ರಾಯಚೂರು: ಇನ್ನೆರಡು ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಅಥವಾ ಗೊಂದಲ ಎಲ್ಲಾ ಸುಳ್ಳು. ಯಾವ ಸಚಿವರಲ್ಲೂ ಗೊಂದಲ ಇಲ್ಲ. ಊಹಾಪೋಹ ಅಷ್ಟೆ ಅಂತ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

    ನಗರದಲ್ಲಿ ನಡೆಯುತ್ತಿರುವ ಕೃಷಿ ಮೇಳ ಉದ್ಘಾಟನೆಗೆ ಆಗಮಿಸಿದ ಅವರು, ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

    ಪೌರತ್ವ ಕಾಯ್ದೆ ಜಾರಿಗೆ ಬಂದಾಗಿದೆ. ಇದರಿಂದ ಯಾವ ಸಮುದಾಯಕ್ಕೆ ತೊಂದರೆ ಆಗದು. ಕೆಲವರು ಜನರ ದಾರಿ ತಪ್ಪಿಸಿ ಗೊಂದಲ ಮೂಡಿಸುತ್ತಿದ್ದಾರೆ ಅಂತ ಅಸಮಾಧಾನ ಹೊರಹಾಕಿದರು.

    ರೈತರ ಆತ್ಮಹತ್ಯೆಯ ಪ್ರಕರಣಗಳು ತಗ್ಗಿಸುವ ಬಗ್ಗೆ ರೈತರಿಗೆ ಆತ್ಮಸ್ಥೈರ್ಯ ತುಂಬಲಾಗುತ್ತದೆ. ನೆರೆಯಿಂದ ಹಾಳಾದ ಬೆಳೆ ಹಾಗೂ ಮನೆಗಳ ಹಾನಿಗೆ ಕೇಂದ್ರದ 2 ನೇ ಹಂತದ ಪರಿಹಾರ ಬಂದಾಕ್ಷಣ ಉಳಿದವರಿಗೆ ಜಮೆ ಮಾಡಲಾಗುವುದು. ಬೆಳೆ ವಿಮೆ ಪರಿಹಾರಕ್ಕೆ ವಿಮಾ ಕಂಪನಿಗಳಿಂದ ಲಂಚದ ಬೇಡಿಕೆ ಆರೋಪ ಸುಳ್ಳು ಅಂತ ತಳ್ಳಿಹಾಕಿದ ಅವರು, ಬೇಗ ಪರಿಹಾರದ ವಿತರಣೆಗೆ ಸಭೆ ಮಾಡಿ ಸೂಚನೆ ನೀಡಲಾಗಿದೆ ಎಂದರು.

    ಇನ್ನೂ ಸಾರಿಗೆ ಇಲಾಖೆಯಿಂದ 1,200 ಹೊಸ ಬಸ್ ಖರೀದಿಗೆ ಚಿಂತನೆ ಮಾಡಲಾಗುತ್ತದೆ ಅಂತ ಸಚಿವ ಲಕ್ಷ್ಮಣ ಸವದಿ ಹೇಳಿದರು. ಇದಕ್ಕೂ ಮುನ್ನ ಮಂತ್ರಾಲಯಕ್ಕೆ ತೆರಳಿದ ಸಚಿವ ಲಕ್ಷ್ಮಣ ಸವದಿ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು. ಲಕ್ಷ್ಮಣ ಸವದಿಗೆ ಸಚಿವ ಪ್ರಭು ಚವ್ಹಾಣ್ ಸೇರಿ ಹಲವಾರು ಮುಖಂಡರು ಸಾಥ್ ನೀಡಿದರು.

  • ಲಕ್ಷ್ಮಣ ಸವದಿ ಶಾಂತ, ಆಪರೇಷನ್ ಡಿಸಿಎಂ ಕೈ ಬಿಟ್ಟ ಕಾಂಗ್ರೆಸ್

    ಲಕ್ಷ್ಮಣ ಸವದಿ ಶಾಂತ, ಆಪರೇಷನ್ ಡಿಸಿಎಂ ಕೈ ಬಿಟ್ಟ ಕಾಂಗ್ರೆಸ್

    ಬೆಂಗಳೂರು: ಅಥಣಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಾಗಿ ಆಪರೇಷನ್ ಡಿಸಿಎಂಗೆ ಮುಂದಾಗಿದ್ದ ಕಾಂಗ್ರೆಸ್, ಸದ್ಯ ಎಲ್ಲ ಕಾರ್ಯಾಚರಣೆಯನ್ನು ಕೈ ಬಿಟ್ಟಿದೆ.

    ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಅಥಣಿ ಕ್ಷೇತ್ರದಿಂದ ತಮ್ಮ ಪಕ್ಷದ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಸಲು ಕಾಂಗ್ರೆಸ್ ಪ್ಲ್ಯಾನ್ ರೂಪಿಸಿತ್ತು. ಆದರೆ ಬಿಜೆಪಿ ಟಿಕೆಟ್ ತಪ್ಪಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಲಕ್ಷ್ಮಣ ಸವದಿ ಸದ್ಯ ಶಾಂತರಾಗಿದ್ದಾರೆ. ಹೀಗಾಗಿ ಕೊನೆ ಗಳಿಗೆಯಲ್ಲಿ  ಲಕ್ಷ್ಮಣ ಸವದಿ ಅವರು ಪಕ್ಷಕ್ಕೆ ಬರದಿದ್ದರೆ ಹೇಗೆ ಎಂಬ ಯೋಚನೆ ಕಾಂಗ್ರೆಸ್ ವಲಯದಲ್ಲಿ ಶುರುವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಉಪಚುನಾವಣೆ ರಣಕಣ – ಯಾರ ವಿರುದ್ಧ ಯಾರು ಸ್ಪರ್ಧೆ? ಇಲ್ಲಿದೆ ಪೂರ್ಣ ಪಟ್ಟಿ

    ಈ ಎಲ್ಲ ಬೆಳವಣಿಗೆಯಿಂದಾಗಿ ಲಕ್ಷ್ಮಣ ಸವದಿ ಅವರನ್ನು ಸೆಳೆಯುವ ಯತ್ನವನ್ನು ಕಾಂಗ್ರೆಸ್ ಪಡೆ ಕೈ ಬಿಟ್ಟಿದೆ. ಜೊತೆಗೆ ಅಥಣಿ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಗಜಾನನ ಮನಸೂಳಿ, ಸದಾಶಿವ ಬೂತಾಳಿ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡಲು ರಾಜ್ಯ ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಇದನ್ನೂ ಓದಿ:  ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಗೆ ತ್ರಿಸದಸ್ಯ ಸಮಿತಿ ರಚನೆ

    ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಪಕ್ಷಕ್ಕೆ ಸೆಳೆಯುವ ತಂತ್ರವನ್ನು ಬೆಳಗಾವಿ ಕಾಂಗ್ರೆಸ್ ನಾಯಕರು ರೂಪಿಸಿದ್ದರು. ಈ ಸಂಬಂಧ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮುಂದೆ ಪ್ರಸಾಪಿಸಿದ್ದರು. ಈ ನಿಟ್ಟಿನಲ್ಲಿ ಲಕ್ಷ್ಮಣ ಸವದಿ ಜೊತೆಗೆ ಮಾತುಕತೆ ನಡೆಸಲು ಬೆಳಗಾವಿ ನಾಯಕರು ಮೆಗಾ ಪ್ಲ್ಯಾನ್ ರೂಪಿಸಿದ್ದರು.

    ಆಪರೇಷನ್ ಹಸ್ತದ ಸುದ್ದಿ ತಿಳಿದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೈ ಅಲರ್ಟ್ ಆಗಿದ್ದರು. ಲಕ್ಷ್ಮಣ ಸವದಿ ಅವರ ಮನವೊಲಿಸಲು ಮುಂದಾಗಿದ್ದ ಸಿಎಂ, ತುರ್ತಾಗಿ ಸವದಿ ಅವರಿಗೆ ಬುಲಾವ್ ಕೊಟ್ಟಿದ್ದರು. ಹೀಗಾಗಿ ಗುರುವಾರ ತಡರಾತ್ರಿ ಧವಳಗಿರಿಯ ಸಿಎಂ ನಿವಾಸದಕ್ಕೆ ಡಿಸಿಎಂ ಬಸರಾಜ್ ಬೊಮ್ಮಾಯಿ ಅವರೊಂದಿಗೆ ಲಕ್ಷ್ಮಣ ಸವದಿ ಆಗಮಿಸಿದ್ದರು. ಮಾತುಕತೆ ಬಳಿಕ ಅಲ್ಲಿಂದ ತೆರಳಿದ್ದ ಲಕ್ಷ್ಮಣ ಸವದಿ ಇಂದು ಕೂಡ ಸಿಎಂ ನಿವಾಸಕ್ಕೆ ಆಗಮಿಸಿದ್ದಾರೆ. ಈ ಮೂಲಕ ರೆಬಲ್ ಲಕ್ಷ್ಮಣ ಸವದಿ ಶಾಂತರಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ.

  • ಆಪರೇಷನ್ ಡಿಸಿಎಂಗೆ ಕೈ ಹಾಕಿತಾ ಕಾಂಗ್ರೆಸ್?

    ಆಪರೇಷನ್ ಡಿಸಿಎಂಗೆ ಕೈ ಹಾಕಿತಾ ಕಾಂಗ್ರೆಸ್?

    – ಅಥಣಿ ಟಿಕೆಟ್ ಕೈತಪ್ಪಿದ್ದಕ್ಕೆ ಲಕ್ಷ್ಮಣ ಸವದಿ ರೆಬೆಲ್
    – ತಡರಾತ್ರಿ ಸಿಎಂ ಮನೆಯಲ್ಲಿ ಸವದಿ ಪ್ರತ್ಯಕ್ಷ
    – ಮನವೊಲಿಕೆಗೆ ಬಿಎಸ್‍ವೈ ಕಸರತ್ತು

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ನಡೆದಿದ್ದು, ಅಥಣಿ ಕ್ಷೇತ್ರದ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದ್ದ ಕಾಂಗ್ರೆಸ್ ಭರ್ಜರಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.

    ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಸೆಳೆಯುವ ತಂತ್ರವನ್ನು ಬೆಳಗಾವಿ ಕಾಂಗ್ರೆಸ್ ನಾಯಕರು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮುಂದೆ ಪ್ರಸಾಪಿಸಿದ್ದಾರೆ. ಹೀಗಾಗಿ ಲಕ್ಷ್ಮಣ ಸವದಿ ಜೊತೆಗೆ ಮಾತುಕತೆ ನಡೆಸಲು ಬೆಳಗಾವಿ ನಾಯಕರು ಮೆಗಾ ಪ್ಲ್ಯಾನ್ ರೂಪಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

    ಮಹೇಶ್ ಕುಮಟಳ್ಳಿ ಅವರಿಗೆ ಅಥಣಿ ಟಿಕೆಟ್ ಕೊಟ್ಟಿದ್ದಕ್ಕೆ ಲಕ್ಷ್ಮಣ ಸವದಿ ಮುನಿಸಿಕೊಂಡಿದ್ದಾರೆ. ಹೀಗಾಗಿ ಗುರುವಾರ ನಡೆದ ಅನರ್ಹರ ಬಿಜೆಪಿ ಸೇರ್ಪಡೆ ಸಮಾರಂಭಕ್ಕೂ ಗೈರಾಗಿದ್ದರು. ಅಷ್ಟೇ ಅಲ್ಲದೆ ಬುಧವಾರ ಬಿಜೆಪಿ ನಾಯಕರ ಕೈಗೆ ಸಿಗದೆ ತಿರುಗಾಡಿದ್ದರು. ಉಪ ಚುನಾವಣೆ ಬಳಿಕ ಡಿಸಿಎಂ ಸ್ಥಾನದಿಂದ ಕೆಳಗಿಳಿಸುವ ಆತಂಕ ಲಕ್ಷ್ಮಣ ಸವದಿ ಅವರಿಗೆ ಶುರುವಾಗಿದೆ. ಬಿಜೆಪಿ ಮುಖಂಡ ಉಮೇಶ್ ಕತ್ತಿ ಅವರಿಗೆ ಮಂತ್ರಿಗಿರಿ ನೀಡಿದರೆ ಸವದಿ ಅವರ ರಾಜಕೀಯ ಭವಿಷ್ಯ ಮುಕ್ತಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಆಪರೇಷನ್ ಡಿಸಿಎಂ ರಾಜಕೀಯ ಚಟುವಟಿಕೆ ಗರಿಗೆದರಿದೆ ಎಂಬ ಮಾತು ಕೇಳಿ ಬರುತ್ತಿದೆ.

    ಬಿಜೆಪಿ ಬಿಟ್ಟಿದ್ದ ಬಾಣವೇ ಈಗ ಕಾಂಗ್ರೆಸ್ ಅಸ್ತ್ರವಾಗಿ ಬಳಿಸಿಕೊಳ್ಳುತ್ತಿದೆ. ಈ ಹಿಂದೆ ಕಾಂಗ್ರೆಸ್ ಸಚಿವರಿಗೆ ಬಿಜೆಪಿ ಗಾಳ ಹಾಕಿತ್ತು. ಆದರೆ ಇಂದು ಕಾಂಗ್ರೆಸ್ ಡಿಸಿಎಂಗೆ ಗಾಳ ಹಾಕಲು ಮುಂದಾಗಿದೆ. ಹೀಗಾಗಿ ಬೆಳಗಾವಿ ಕಾಂಗ್ರೆಸ್ ನಾಯಕರಿಂದ ಶುರು ಆಪರೇಷನ್ ಶುರುವಾಗಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಇತ್ತ ಆಪರೇಷನ್ ಹಸ್ತದ ಸುದ್ದಿ ತಿಳಿದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೈ ಅಲರ್ಟ್ ಆಗಿದ್ದಾರೆ. ಈ ನಿಟ್ಟಿನಲ್ಲಿ ರೆಬೆಲ್ ಲಕ್ಷ್ಮಣ ಸವದಿ ಅವರ ಮನವೊಲಿಸಲು ಮುಂದಾಗಿದ್ದಾರೆ. ಸಿಎಂ ಯಡಿಯೂರಪ್ಪ ಅವರು ತುರ್ತಾಗಿ ಸವದಿ ಅವರಿಗೆ ಬುಲಾವ್ ಕೊಟ್ಟಿದ್ದಾರೆ. ಹೀಗಾಗಿ ತಡರಾತ್ರಿ ಧವಳಗಿರಿ ನಿವಾಸದಲ್ಲಿ ಡಿಸಿಎಂ ಬಸರಾಜ್ ಬೊಮ್ಮಾಯಿ ಅವರೊಂದಿಗೆ ಲಕ್ಷ್ಮಣ ಸವದಿ ಆಗಮಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಪ್ಲ್ಯಾನ್ ಅನ್ನು ಬುಡಮೇಲು ಮಾಡಲು ಸಿಎಂ ಯಡಿಯೂರಪ್ಪ ಅವರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.