Tag: DCM

  • ರಾಮನಗರ ಜೈಲಿನಲ್ಲಿ ಐವರಿಗೆ ಕೊರೊನಾ ದೃಢ: ಅಶ್ವತ್ಥನಾರಾಯಣ

    ರಾಮನಗರ ಜೈಲಿನಲ್ಲಿ ಐವರಿಗೆ ಕೊರೊನಾ ದೃಢ: ಅಶ್ವತ್ಥನಾರಾಯಣ

    – ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಸಲ್ಲದು
    – ಡಿಕೆಶಿಗೆ ಡಿಸಿಎಂ ಟಾಂಗ್

    ಬೆಂಗಳೂರು: ರಾಮನಗರ ಜೈಲಿನಲ್ಲಿ ಐವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಉಪಮುಖ್ಯಮಂತ್ರಿ, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಹೇಳಿದ್ದಾರೆ.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭೇಟಿ ಬಳಿಕ ಮಾತನಾಡಿದ ಅವರು, ರಾಮನಗರದಲ್ಲಿರುವ ಖೈದಿಗಳನ್ನು ವರ್ಗಾಯಿಸುವ ವೇಳೆ ವಿರೋಧ ಇತ್ತು. ಪರಪ್ಪನ ಅಗ್ರಹಾರ ದೊಡ್ಡ ಜೈಲು, ರಾಮನಗರ ಚಿಕ್ಕ ಜೈಲು. ಹಾಗಾಗಿ ಪಾದರಾಯನಪುರದ ಆರೋಪಿಗಳನ್ನು ರಾಮನಗರ ಜೈಲಿನಲ್ಲಿ ಇಡಲಾಯ್ತು. ಅವರನ್ನು ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ 5 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಮಾಹಿತಿ ನೀಡಿದರು.

    ರಾಮನಗರ ಜೈಲಿನ 19 ಮಂದಿ ಖೈದಿಗಳನ್ನು ಹಾಗೂ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡುತ್ತೇವೆ. ಪಾಸಿಟಿವ್ ಬಂದಿರುವ 5 ಮಂದಿಯನ್ನು ಆಸ್ಪತ್ರೆಗೆ ಶಿಫ್ಟ್ ಮಾಡುತ್ತೇವೆ. ಉಳಿದವರನ್ನು ಹಜ್ ಭವನಕ್ಕೆ ಕಳುಹಿಸುತ್ತೇವೆ ಎಂದು ತಿಳಿಸಿದರು.

    ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ, ನಾವು ಮುನ್ನೆಚ್ಚಿರಕ ಕ್ರಮಗಳನ್ನು ಕೈಗೊಂಡೇ ಆರೋಪಿಗಳನ್ನು ರಾಮನಗರ ಜೈಲಿನಲ್ಲಿ ಇರಿಸಿದ್ದೆವು. ಇಂತಹ ಪರಿಸ್ಥಿತಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸರ್ಕಾರಕ್ಕೆ ಸಲಹೆ ನೀಡಿಬೇಕೇ ಹೊರತು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು. ಯಾವುದೇ ಕಾರಣಕ್ಕೂ ಜನರನ್ನು ಪ್ರಚೋದನೆ ಮಾಡಬಾರದು. ಈವರೆಗೂ ಸಹಕಾರ ಕೊಟ್ಟಿದ್ದಾರೆ. ಅವರು ಒಂದು ಪಕ್ಷದ ರಾಜ್ಯಾಧ್ಯಕ್ಷರು, ಪ್ರಚೋದನೆ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಟಾಂಗ್ ಕೊಟ್ಟರು.

    121 ಆರೋಪಿಗಳನ್ನ ರಾಮನಗರ ಜೈಲಿಗೆ ಶಿಫ್ಟ್ ಮಾಡಿದ್ದು, ಅದರಲ್ಲಿ ಇಬ್ಬರು ಆರೋಪಿಗಳಿಗೆ ಸೋಂಕಿನ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಗುರುವಾರ ತಡರಾತ್ರಿಯೇ ಇಬ್ಬರು ಸೋಂಕಿತ ಆರೋಪಿಗಳನ್ನು ಆರೋಗ್ಯ ಸಿಬ್ಬಂದಿ ಶಿಫ್ಟ್ ಮಾಡಿದ್ದರು. ಜೈಲಿನಿಂದ ನೇರವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸೋಂಕಿತರ ಶಿಫ್ಟ್ ಮಾಡಿದ್ದು, ಆರೋಗ್ಯ ಸಿಬ್ಬಂದಿ ಮತ್ತು ಜಿಲ್ಲಾಡಳಿತ ಜೈಲಿನ ಸುತ್ತಮುತ್ತ ಸೀಲ್‍ಡೌನ್ ಮಾಡಿದ್ದಾರೆ. ಈ ಬೆನ್ನಲ್ಲೇ ಐವರಿಗೆ ಸೋಂಕು ತಗುಲಿರುವುದನ್ನು ಅಶ್ವತ್ಥನಾರಾಯಣ ಅವರು ದೃಢಪಡಿಸಿದ್ದಾರೆ.

    ರಾಮನಗರ ಜೈಲಿನಲ್ಲಿರುವ ಕೈದಿಗಳಿಗೆ ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಇತ್ತ ಬೆಂಗಳೂರು ಪೊಲೀಸರಿಗೂ ಆತಂಕ ಶುರುವಾಗಿದೆ. ಹೀಗಾಗಿ ಪಾದರಾಯನಪುರ ಗಲ್ಲಿ ಗಲ್ಲಿಗಳಲ್ಲಿ ಆರೋಪಿಗಳನ್ನು ಅಟ್ಟಾಡಿಸಿ ಸೆರೆ ಹಿಡಿದಿದ್ದಾರೆ. ಮೂರು ರಾತ್ರಿ- ಹಗಲು ಕಾರ್ಯಚರಣೆ ನಡೆಸಿ ಸುಮಾರು 135 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ಎಲ್ಲಾ ಆರೋಪಿಗಳನ್ನು ರಾಮನಗರ ಜೈಲಿಗೆ ಬಿಟ್ಟು ಬಂದಿದ್ದರು. ಸದ್ಯ ರಾಮನಗರ ಜೈಲಿನಲ್ಲಿರುವ ಇಬ್ಬರು ಆರೋಪಿಗಳಿಗೆ ಪಾಸಿಟಿವ್ ಬಂದಿದ್ದು, ಇದೀಗ ಮತ್ತೆ ಮೂವರಿಗೆ ಕೊರೊನಾ ಪಾಸಿಟಿವ್ ಇರೋ ಶಂಕೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಆರೋಪಿಗಳನ್ನು ಬೆಂಗಳೂರಿಗೆ ವಾಪಸ್ ಕರೆ ತರೋ ಸಾಧ್ಯತೆಗಳಿವೆ.

  • ತೊಗರಿ ಕಣಜದಲ್ಲಿ ನಿಲ್ಲದ ಕೊರೊನಾ ಅಟ್ಟಹಾಸ- ಜಿಲ್ಲಾಡಳಿತದ ನಿದ್ದೆಗೆಡಿಸಿದ ಜಮಾತ್ ನಂಟು

    ತೊಗರಿ ಕಣಜದಲ್ಲಿ ನಿಲ್ಲದ ಕೊರೊನಾ ಅಟ್ಟಹಾಸ- ಜಿಲ್ಲಾಡಳಿತದ ನಿದ್ದೆಗೆಡಿಸಿದ ಜಮಾತ್ ನಂಟು

    ಕಲಬುರಗಿ: ದೇಶದಲ್ಲೇ ಮೊದಲ ಕೊರೊನಾ ಸಾವಾಗಿದ್ದು ಕಲಬುರಗಿ ಜಿಲ್ಲೆಯಲ್ಲಿ. ಈವರೆಗೂ ಜಿಲ್ಲೆಯಲ್ಲಿ ಮೂವರು ಮೃತಪಟ್ಟಿದ್ದು ಜನತೆಯನ್ನ ಮತ್ತಷ್ಟು ಆತಂಕಕ್ಕೆ ದೂಡಿದೆ.

    ಹೌದು. ದೇಶದಲ್ಲೇ ಕೊರೊನಾ ಮಹಾಮಾರಿಗೆ ಮೊದಲ ಸಾವು ಸಂಭವಿಸಿದ್ದು ಇದೇ ಕಲಬುರಗಿ ಜಿಲ್ಲೆಯಲ್ಲಿ. ಈವರೆಗೂ ಮೂವರು ಸಾವನ್ನಪ್ಪಿದ್ದು, 16 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಕೊರೊನಾಗೆ ಸಾವನ್ನಪ್ಪಿದ್ದ ಮೊದಲ ವ್ಯಕ್ತಿ ದುಬೈನಿಂದ ಸೋಂಕು ತಗುಲಿ ಸಾವನ್ನಪ್ಪಿದ್ರು. ಇನ್ನುಳಿದ ಇಬ್ಬರು ದೆಹಲಿಯ ಜಮಾತ್‍ಗೆ ಹೋಗಿ ಬಂದವರಿಂದ ಸೋಂಕು ತಗುಲಿ ಸಾವನ್ನಪ್ಪಿದ್ರು. ಈ ಮೂಲಕ ಕರ್ನಾಟಕದಲ್ಲಿ ಕೊರೊನಾಗೆ ಅತೀ ಹೆಚ್ಚು ಸಾವನ್ನಪ್ಪಿದ ಜಿಲ್ಲೆ ಎಂಬ ಕುಖ್ಯಾತಿಗೆ ತೊಗರಿ ಕಣಜ ಕಲಬುರಗಿ ಜಿಲ್ಲೆ ಸೇರಿಕೊಂಡಿದೆ.

    ಡಿಸಿಎಂ ಖಡಕ್ ವಾರ್ನಿಂಗ್:
    ಕೊರೊನಾ ತಡೆಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಜಿಲ್ಲಾ ಉಸ್ತುವಾರಿಗಳನ್ನ ನೇಮಕ ಮಾಡಿದ್ದಾರೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಗೋವಿಂದ ಕಾರಜೋಳ ಜಿಲ್ಲೆಯಲ್ಲಿ ಕೊರೊನಾ ತಡೆಗೆ ಕ್ರಮಕೈಗೊಳ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಪ್ರತಿಯೊಬ್ಬರ ಸ್ಕ್ರೀನಿಂಗ್ ನಡೆಸಬೇಕು ಅಂತ ಜಿಲ್ಲಾಧಿಕಾರಿಗೆ ಡಿಸಿಎಂ ಗೋವಿಂದ ಕಾರಜೋಳ ಖಡಕ್ ಸೂಚನೆ ನೀಡಿದ್ದಾರೆ.

    ಈವೆರೆಗೂ ಮೃತಪಟ್ಟ ಮೂವರು ಕೂಡ ಕಲಬುರಗಿ ಉತ್ತರ ಕ್ಷೇತ್ರದವರೇ ಆಗಿದ್ದಾರೆ. ಅಷ್ಟೇ ಅಲ್ಲ ಇನ್ನುಳಿದ ಬಹುತೇಕ ಕೊರೋನಾ ಪಾಸಿಟಿವ್ ಪ್ರಕರಣಗಳೂ ಸಹ ಇದೇ ಕ್ಷೇತ್ರದಲ್ಲಿ ದಾಖಲಾಗಿರೋದು.

    ಒಟ್ಟಾರೆ ದಿನೇ ದಿನೇ ಕೊರೊನಾ ಕೇಸ್ ಹೆಚ್ಚಾಗ್ತಿರೋದಕ್ಕೆ ತಕ್ಷಣವೇ ಇಡೀ ಕ್ಷೇತ್ರವನ್ನ ಸೀಲ್‍ಡೌನ್ ಮಾಡಬೇಕಿದೆ. ಆಗ ಮಾತ್ರ ಕೊರೋನಾ ಶರವೇಗದಲ್ಲಿ ಹರಡ್ತಿರೋದಕ್ಕೆ ಕೊಂಚ ಬ್ರೇಕ್ ಹಾಕಬಹುದಾಗಿದೆ.

  • ರೈತರಿಗಾಗಿ ಸಹಾಯವಾಣಿ ತೆರೆಯಲಾಗಿದ್ದು ಚಿಂತಿಸೋ ಅಗತ್ಯವಿಲ್ಲ: ಲಕ್ಷ್ಮಣ ಸವದಿ

    ರೈತರಿಗಾಗಿ ಸಹಾಯವಾಣಿ ತೆರೆಯಲಾಗಿದ್ದು ಚಿಂತಿಸೋ ಅಗತ್ಯವಿಲ್ಲ: ಲಕ್ಷ್ಮಣ ಸವದಿ

    ರಾಯಚೂರು: ಸಾರಿಗೆ ಇಲಾಖೆಯಿಂದ ಕಂಟ್ರೋಲ್ ರೂಂ ತೆರೆಯಲಾಗಿದೆ. ದಿನದ 24 ಗಂಟೆಗಳ ಕಾಲ ಅದು ರೈತರು, ಸಾರ್ವಜನಿಕರಿಗಾಗಿ ಕಾರ್ಯ ನಿರ್ವಹಿಸುತ್ತೆ. ಪ್ರತಿಯೊಬ್ಬರಿಗೂ ಅವಶ್ಯಕತೆಗೆ ಅನುಗುಣವಾಗಿ ವಾಹನಗಳ ಸೌಲಭ್ಯ ಒದಗಿಸಲಾಗುತ್ತದೆ ಅಂತ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷಣ ಸವದಿ ಹೇಳಿದ್ದಾರೆ.

    ರಾಯಚೂರು ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಮೇಲೆ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಲಕ್ಷಣ ಸವದಿ ಸಹಾಯವಾಣಿ ಸಂಖ್ಯೆ 08022236698, 9449863214ಕ್ಕೆ ಅವಶ್ಯಕತೆ ಇರುವವರು ಕರೆ ಮಾಡಲು ತಿಳಿಸಿದರು. ಮುಖ್ಯಮಂತ್ರಿಗಳ ಆದೇಶದ ಹಿನ್ನೆಲೆ ನಾನು ಉಸ್ತುವಾರಿ ವಹಿಸಿಕೊಂಡು ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ್ದೇನೆ. ಕೊರೊನಾದ ಇಲ್ಲಿನ ವಸ್ತುಸ್ಥಿತಿ ಹಾಗೂ ಮುಂಜಾಗ್ರತೆ ಕ್ರಮಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

    ನಾಳೆಗೆ ಮೊದಲ ಹಂತದ ಲಾಕ್ ಡೌನ್ ಮುಗಿಯುತ್ತೆ. ಈ ಲಾಕ್ ಡೌನ್ ಮುಗಿಯುತ್ತೋ ಇಲ್ವೊ ಅನ್ನೋ ಚರ್ಚೆ ನಡೆಯುತ್ತಿದೆ. ಪ್ರಧಾನಿಗಳು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಮಾಡಿದ್ದಾರೆ. ಎಲ್ಲಾ ಮುಖ್ಯಮಂತ್ರಿಗಳು ಮುಂದುವರಿಸುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂದು ಅಥವಾ ನಾಳೆ ಪ್ರಧಾನಿಗಳು ಅದರ ತೀರ್ಮಾನ ತಗೋತಾರೆ. ಕೇಂದ್ರ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರ್ತೀವಿ ಅಂತ ಡಿಸಿಎಂ ಸವದಿ ಹೇಳಿದರು.

    ಚೀನಾದಲ್ಲಿ ಹತೋಟಿಗೆ ಬಂದಿದ್ದ ಕೊರೊನಾ ಮತ್ತೆ ಪ್ರಾರಂಭವಾಗಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪಾಸಿಟಿವ್ ಪ್ರಕರಣ ಇರಲಿಲ್ಲ. ಸದ್ಯ ಈಗ ಸಾಕಷ್ಟು ಜಿಲ್ಲೆಗಳಲ್ಲಿ ಪಾಸಿಟಿವ್ ಕೇಸಸ್ ಬರ್ತಿವೆ. ಈ ಸವಾಲನ್ನ ಅತ್ಯಂತ ಸಮರ್ಪಕವಾಗಿ ಎದುರಿಸಬೇಕಿದೆ. ರೈತರು ಸದ್ಯದ ಪರಿಸ್ಥಿಯಲ್ಲಿ ಕೃಷಿ ಯಂತ್ರೋಪಕರಣಗಳನ್ನ ಬಳಕೆ ಮಾಡಿಕೊಳ್ಳಬೇಕು. ರೈತ ಬೆಳೆದಿರುವ ಬೆಳೆಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ ಎಂದರು.

    ಸಾರಿಗೆ ವ್ಯವಸ್ಥೆ ಪ್ರಾರಂಭಿಸುವ ವಿಚಾರ ಒಂದು ಹಂತದಲ್ಲಿ ಚರ್ಚೆ ನಡೆದಿದೆ. ಲಾಕ್ ಡೌನ್ ಎಲ್ಲಿ ಮಾಡಬೇಕು ಹಾಗೂ ಎಲ್ಲಿ ಮಾಡಬಾರದು ಅನ್ನೋದು ಚರ್ಚೆ ನಡಿತಿದೆ. ಪಾಸಿಟಿವ್ ಇಲ್ಲದ ಜಿಲ್ಲೆಗಳಲ್ಲಿ ಸಡಿಲಗೊಳಿಸುವ ಬಗ್ಗೆ ಚರ್ಚೆ ಯೋಚನೆಯಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದ ಆಧಾರದಲ್ಲಿ ಚಿಂತಿಸಲಾಗುವುದು ಅಂತ ಹೇಳಿದರು.

    ಜಿಲ್ಲೆಯ ಲಿಂಗಸುಗೂರು ತಾಲೂಕಿನ ದೇವರಭೂಪುರು ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಓರ್ವ ಸಾವನ್ನಪ್ಪಿರುವ ಘಟನೆ ಬಗ್ಗೆ ಮಾಹಿತಿಯಿಲ್ಲ, ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ಕೂಡಲೇ ಕ್ರಮ ತೆಗೆದುಕೊಳ್ಳುತ್ತೇನೆ. ಕುಡಿಯುವ ನೀರು ಹಾಗೂ ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸಚಿವ ಹೇಳಿದ್ದಾರೆ.

  • ಎಚ್‍ಡಿಕೆ, ಡಿಕೆಶಿ ಒತ್ತಾಯದ ಮೇರೆಗೆ ರೇಷ್ಮೆ ಮಾರುಕಟ್ಟೆ ತೆರೆಯಲಾಗಿದೆ: ಡಿಸಿಎಂ

    ಎಚ್‍ಡಿಕೆ, ಡಿಕೆಶಿ ಒತ್ತಾಯದ ಮೇರೆಗೆ ರೇಷ್ಮೆ ಮಾರುಕಟ್ಟೆ ತೆರೆಯಲಾಗಿದೆ: ಡಿಸಿಎಂ

    ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ ಒತ್ತಾಯ ಹಾಗೂ ರೈತರ ಹಿತದೃಷ್ಟಿಯಿಂದ ರಾಮನಗರ ಜಿಲ್ಲೆಯ ರೇಷ್ಮೆ ಮಾರುಕಟ್ಟೆಗಳನ್ನು ತೆರೆದು ವಹಿವಾಟು ನಡೆಸಲು ಸರ್ಕಾರ ಹಾಗೂ ರೇಷ್ಮೆ ಸಚಿವರು ಆದೇಶಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಸ್ಪಷ್ಟಪಡಿಸಿದ್ದಾರೆ.

    ಕೊರೊನಾ ತಡೆಗೆ ರಾಮನಗರ ಜಿಲ್ಲಾಡಳಿತ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮವನ್ನು ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಅಲ್ಲದೆ ಕೋವಿಡ್-19 ಐಸೋಲೇಷನ್ ವಾರ್ಡ್ ಗೆ ಭೇಟಿ ನೀಡಿ ಪರಿಶೀಲಿಸಿದರು.

    ನಂತರ ಮಾತನಾಡಿದ ಅವರು, ಕೋವಿಡ್- 19 ವಿಚಾರದಲ್ಲಿ ಈಗಾಗಲೇ ಜಿಲ್ಲಾಡಳಿತ ಪೂರ್ವಭಾವಿ ತಯಾರಿ ನಡೆಸಿದೆ. ಇನ್ನೂ ಹೆಚ್ಚು ನಿಯಂತ್ರಣ ಮಾಡಲು ಮುನ್ನೆಚರಿಕಾ ದೃಷ್ಟಿಯಿಂದ ರೇಷ್ಮೆ ಮಾರುಕಟ್ಟೆಯನ್ನು ಮೂರು ಕಡೆ ವಿಸ್ತರಿಸಲಾಗುವುದು. ರೈತರಿಗೆ ಫಿವರ್ ಪರೀಕ್ಷೆ, ಮಾಸ್ಕ್ ಹಾಕಿ ಬರುವಂತೆ ಸೂಚನೆ ನೀಡಲಾಗಿದೆ. ರೋಗದ ಲಕ್ಷಣಗಳ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಇಡೀ ತಿಂಗಳ ಪೂರ್ತಿ ಮೂರು ಕಡೆ ರೇಷ್ಮೆ ಮಾರುಕಟ್ಟೆ ನಡೆಯಲಿದೆ ಎಂದು ತಿಳಿಸಿದರು.

    ಮುಂದಿನ ಮೂರು ತಿಂಗಳ ಕಾಲ ನಮ್ಮ ಹುಷಾರಿನಲ್ಲಿ ನಾವು ಇರಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಹ ಎಚ್ಚರದಿಂದ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ ಎಲ್ಲರಿಗೂ ಮಾಸ್ಕ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ನಾಲ್ಕು ತಿಂಗಳು ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ಕಂಟ್ರೋಲ್ ರೂಂ ಮೂಲಕ ಮಾಹಿತಿ ಪಡೆಯುವ ಕೆಲಸವೂ ನಾಲ್ಕು ತಿಂಗಳ ಕಾಲ ನಡೆಯಲಿದೆ. ಔಷಧಿ ಸಿಂಪಡಣೆ ವಾಹನಗಳು ಪ್ರಸ್ತುತ ಎರಡಿದ್ದು, ಅವುಗಳನ್ನು ಐದಕ್ಕೆ ಹೆಚ್ಚಿಸಲಾಗುವುದು. ಜನ ಸಂದಣಿ ಪ್ರದೇಶಗಳಲ್ಲಿ ನಿತ್ಯ ಔಷಧ ಸಿಂಪಡಿಸಲಾಗುವುದು ಎಂದರು.

    ಜಿಲ್ಲೆಯ ಹಳೆ ಕಂದಾಯ ಭವನದಲ್ಲಿ ನಿರ್ಮಿಸಿರುವ ಕೋವಿಡ್-19 ಆಸ್ಪತ್ರೆಯಲ್ಲಿ ಸದ್ಯ ನೂರು ಹಾಸಿಗೆ ವ್ಯವಸ್ಥೆ ಇದೆ. 200 ಹಾಸಿಗೆಗಳಿಗೆ ವಿಸ್ತರಿಸುವುದರ ಜೊತೆಗೆ ಅಗತ್ಯ ಕ್ರಮ ಕೈಗೊಳ್ಳುವದಲ್ಲದೇ 10 ವೆಂಟಿಲೇಟರ್ ಗಳ ವ್ಯವಸ್ಥೆ ಹಾಗೂ ಪಿಪಿ ಕಿಟ್, ಮಾಸ್ಕ್, ಸೇರಿದಂತೆ ಎಲ್ಲವನ್ನೂ ನೀಡಲಾಗುವುದು.

    ರೇಷ್ಮೆ ಮಾರುಕಟ್ಟೆ ಸಂಬಂಧ ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು. ಎರಡು ದಿನ ಮುನ್ನವೇ ಮೂರು ಕಡೆ ಮಾರಾಟಕ್ಕೆ ಅವಕಾಶ ನೀಡಬೇಕಿತ್ತು. ಭಾನುವಾರದಿಂದ ಮೂರು ಕಡೆ ರೇಷ್ಮೆ ಮಾರುಕಟ್ಟೆಗೆ ಅವಕಾಶ ನೀಡಲಾಗುವುದು. ಅಲ್ಲದೆ ಜಿಲ್ಲೆಯಲ್ಲಿ ಒಟ್ಟು ಮೂರು ಮಾವು ಮಾರುಕಟ್ಟೆ ತೆರೆಯಲಾಗುವುದು. ಖಾಸಗಿ ಕಂಪನಿಯು ಇದಕ್ಕೆ ಉತ್ಸಕತೆ ತೋರಿದೆ. ಹೀಗಾಗಿ ಮುನ್ನೆಚರಿಕಾ ಕ್ರಮ ವಹಿಸಿಯೇ, ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

  • ಈಗ ಕೊರೊನಾ ಮೂರನೇ ಹಂತಕ್ಕೆ ತಲುಪಿದೆ: ಸರ್ಕಾರದಿಂದ ಅಧಿಕೃತ ಹೇಳಿಕೆ

    ಈಗ ಕೊರೊನಾ ಮೂರನೇ ಹಂತಕ್ಕೆ ತಲುಪಿದೆ: ಸರ್ಕಾರದಿಂದ ಅಧಿಕೃತ ಹೇಳಿಕೆ

    ಬಾಗಲಕೋಟೆ: ಕೊರೊನಾ ಈಗ ಮೂರನೇ ಹಂತಕ್ಕೆ ತಲುಪಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ.

    ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಕಾರಜೋಳ, ದೇಶದಲ್ಲಿ ಕೊರೊನಾ ಇಡೀ ದೇಶದಲ್ಲಿ ತಲುಪಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ 144 ಸೆಕ್ಷನ್ ಹಾಕಿದ್ದು, ಕೆಲವರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಕೆಲವು ಕಿಡಿಗೇಡಿಗಳು ಎಷ್ಟು ಹೇಳಿದರೂ ಪಾಲಿಸುತ್ತಿಲ್ಲ. ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಡಳಿತ ಹಾಗೂ ಪೊಲೀಸರಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

    ಇದು ಮಾನವ ಕುಲಕ್ಕೆ ಬಂದ ವಿಪತ್ತು. ಸಾಮೂಹಿಕವಾಗಿ ಜನ ಸೇರಬಾರದು ಎಂದು ಮನವಿ ಮಾಡಿಕೊಂಡರೆ, ಎಲ್ಲರೂ ಅದನ್ನು ಸಹಕರಿಸಬೇಕು. 130 ಜನಸಂಖ್ಯೆ ಹೊಂದಿರುವ ದೇಶ ಭಾರತ. ಆದರೆ ಇಲ್ಲಿ ಕೊರೊನಾ ಹರಡಿದರೆ ಕ್ರಮಕೈಗೊಳ್ಳಲು ಕಂಟ್ರೋಲ್ ಮಾಡಲು ಕಷ್ಟವಾಗುತ್ತೆ. ಹಾಗಾಗಿ ಬಿಗಿಯಾದಂತ ಕ್ರಮ ತೆಗೆದುಕೊಳ್ಳಿ ಎಂದು ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪ ಅವರಿಗೆ ಜನರು ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

    ಜಿಲ್ಲೆಯಲ್ಲಿ ಈಗಾಗಲೇ ದಿನಸಿ, ತರಕಾರಿ ಮನೆ ಮನೆಗೆ ತಲುಪಿಸಲಾಗುತ್ತಿದೆ. ಇದರಿಂದ ಜನದಟ್ಟಣೆಯಾಗೋದು ಕಡಿಮೆ ಆಗಿದೆ. ನಮ್ಮ ಜಿಲ್ಲೆಯಿಂದ ಗುಳೆ ಹೋದವರು ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದಾರೆ. ಅವರ ಮೇಲೆ ನಿಗಾ ವಹಿಸಲು ಸೂಚಿಸಲಾಗಿದೆ. ಬಾರ್, ವೈನ್ ಶಾಪ್ ಬಂದ್ ಮಾಡಿಸಲಾಗಿದೆ. ಬಂದ್ ಇರುವ ಕಾರಣ ಕಳ್ಳಬಟ್ಟಿ ಜೋರಾಗಿದೆ. ಶುಕ್ರವಾರ ಕೆಲ ಊರಲ್ಲಿ ಗಮನಕ್ಕೆ ಬಂದ ಬಗ್ಗೆ ಜಿಲ್ಲಾಧಿಕಾರಿಗೆ ಹೇಳಿ ಬಂದ್ ಮಾಡಿಸಿದ್ದಾರೆ. ಕಳ್ಳಬಟ್ಟಿಗಾಗಿ ಒಂದೊಂದು ಊರಲ್ಲಿ ಹತ್ತು ಊರಿನ ಜನ ಮುಗಿಬಿದ್ದಿದ್ದಾರೆ ಎಂದರು.

  • ಕೊರೊನಾ ಭೀತಿ- ಜಿಲ್ಲಾಧಿಕಾರಿಯೊಂದಿಗೆ ಡಿಸಿಎಂ ವಿಡಿಯೋ ಕಾನ್ಫರೆನ್ಸ್

    ಕೊರೊನಾ ಭೀತಿ- ಜಿಲ್ಲಾಧಿಕಾರಿಯೊಂದಿಗೆ ಡಿಸಿಎಂ ವಿಡಿಯೋ ಕಾನ್ಫರೆನ್ಸ್

    ಬೆಂಗಳೂರು: ಕೊರೊನಾ ಮಹಾಮಾರಿಯಿಂದ ತತ್ತರಿಸಿರುವ ಕಲಬುರಗಿ ಜಿಲ್ಲೆಯ ಪರಿಸ್ಥಿತಿಯನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅವಲೋಕಿಸಿದರು. ಅಲ್ಲದೆ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು.

    ಬೆಂಗಳೂರಿನಲ್ಲಿ ಗುರುವಾರ ಕಲಬುರಗಿ ಜಿಲ್ಲಾಧಿಕಾರಿ ಶರತ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ಜಿಲ್ಲೆಗೆ ಅಗತ್ಯವಿರುವ ವೈದ್ಯಕೀಯ ಸಲಕರಣೆಗಳು, ಮಾಸ್ಕುಗಳನ್ನು ಕೂಡಲೇ ಒದಿಗಿಸುವುದಾಗಿ ತಿಳಿಸಿದ್ದಾರೆ.

    ಪರೀಕ್ಷೆ ನಡೆಸುವ ಸಂದರ್ಭದಲ್ಲಿ ವೈದ್ಯರು ಧರಿಸುವ 900 ರಕ್ಷಾ ಕವಚಗಳು (ಪರ್ಸನಲ್ ಪ್ರೊಟೆಕ್ಷನ್ ಗೇರ್), 1000 ಎನ್ 95 ಮಾಸ್ಕುಗಳು ಹಾಗೂ ಸಾರ್ವಜನಿಕರು ಬಳಸುವ ಮೂರು ಪದರಗಳ 3000 ಮಾಸ್ಕುಗಳನ್ನು ಶುಕ್ರವಾರ ಬೆಳಗ್ಗೆ ಹೊತ್ತಿಗೆ ಕಲಬುರಗಿಗೆ ತಲುಪಿಸಲಾಗುವುದು. ಅಲ್ಲದೆ ಜಿಲ್ಲಾಧಿಕಾರಿಗಳ ಮನವಿಯ ಮೇರೆಗೆ ಪ್ರೊಬೇಷನರಿ ಐಎಎಸ್ ಅಧಿಕಾರಿ ಡಾ.ಗೋಪಾಲಕೃಷ್ಣ ಅವರನ್ನು ಕೂಡಲೇ ಕಲಬುರಗಿ ಜಿಲ್ಲೆಗೆ ನಿಯೋಜಿಸುತ್ತಿರುವುದಾಗಿ ಉಪ ಮುಖ್ಯಮಂತ್ರಿಗಳು ಹೇಳಿದ್ದಾರೆ.

    ಸೋಮವಾರದ ವೇಳೆಗೆ ರೋಗ ಪತ್ತೆ ಮಾಡುವ ಪ್ರಯೋಗಾಲಯವನ್ನು ಕಲಬುರ್ಗಿಯಲ್ಲಿ ಸ್ಥಾಪಿಸಲಾಗುವುದು ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಈ ವೇಳೆ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೆಲ್ಕೂರ, ಬಸವರಾಜ ಮತ್ತಿಮೂಡ, ಬಿ.ಜಿ.ಪಾಟೀಲ ಇದ್ದರು.

  • ಶೀಘ್ರದಲ್ಲೇ ಶಿವಮೊಗ್ಗದಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ: ಡಾ.ಅಶ್ವತ್ಥನಾರಾಯಣ

    ಶೀಘ್ರದಲ್ಲೇ ಶಿವಮೊಗ್ಗದಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ: ಡಾ.ಅಶ್ವತ್ಥನಾರಾಯಣ

    ಬೆಂಗಳೂರು: ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ವಸತಿ ಸಹಿತ ಕೌಶಲ ಅಭಿವೃದ್ಧಿ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಶಿವಮೊಗ್ಗದಲ್ಲಿ ಕೌಶಲ ಕೇಂದ್ರ ಸ್ಥಾಪನೆ ಸಂಬಂಧ ಡಾ.ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿವಮೊಗ್ಗದ ಸಂಸದ ಬಿ.ವೈ ರಾಘವೇಂದ್ರ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕರಿಸಿದ್ದಪ್ಪ, ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಭಾಗವಹಿಸಿದ್ದರು.

    ಉದ್ದಿಮೆಗಳಿಗೆ ಎದುರಾಗಿರುವ ಮಾನವ ಸಂಪನ್ಮೂಲ ಸಮಸ್ಯೆ ನಿವಾರಣೆ ಹಾಗೂ ಯುವಜನರಿಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸುವುದು ಈ ಕೇಂದ್ರ ಸ್ಥಾಪನೆಯ ಉದ್ದೇಶವಾಗಿದ್ದು, ಶಿವಮೊಗ್ಗ ನಗರ ಅಥವಾ ಸಮೀಪದಲ್ಲೇ ಜಾಗ ಹುಡುಕಿ ಕೊಡುವುದಾಗಿ ಸಂಸದರು ಭರವಸೆ ನೀಡಿದರು. ಜಿಲ್ಲಾಧಿಕಾರಿ ಕೂಡ ಇದಕ್ಕೆ ಒಪ್ಪಿದರು.

    ಕೇಂದ್ರ ಸರ್ಕಾರ ಕೌಶಲ ಅಭಿವೃದ್ಧಿ ಮತ್ತು ಉದ್ಯಮ ಶೀಲತೆಗೆ ಹೆಚ್ಚಿನ ಒತ್ತು ನೀಡಿದ್ದು, ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವೂ ಕೌಶಲ ಕೇಂದ್ರಗಳ ಸ್ಥಾಪನೆಗೆ ಮುಂದಾಗಿದೆ. ದಾಂಡೇಲಿಯಲ್ಲಿ ವಿಟಿಯು ಕೌಶಲ ಕೇಂದ್ರ ಇದ್ದು, ಶಿವಮೊಗ್ಗದಲ್ಲಿ ಇನ್ನೋವೇಶನ್ ಹಬ್ ರೀತಿಯಲ್ಲಿ ಕೇಂದ್ರವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಅಲ್ಲೇ ಯುವಜನರಿಗೆ ಕೌಶಲ ತರಬೇತಿ ನೀಡಲಾಗುವುದು ಎಂದು ಸಚಿವರು ಹೇಳಿದರು.

    ಎಲ್ಲ ಪದವೀಧರರಿಗೂ ತರಬೇತಿ:
    ಎಂಜನಿಯರಿಂಗ್ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲದೇ ಅರ್ಧದಲ್ಲೇ ಕಲಿಕೆ ಬಿಟ್ಟವರಿಗೂ ಕೌಶಲ ತರಬೇತಿ ನೀಡುವ ಚಿಂತನೆ ಇದೆ. ವಿಟಿಯು ಮೂಲಕ ಕೇಂದ್ರದಲ್ಲಿ 1-3 ವಾರಗಳಿಂದ 5 ತಿಂಗಳವರೆಗಿನ ತರಬೇತಿ ಕಾರ್ಯಕ್ರಮಗಳು ನಡೆಯಲಿವೆ. ತಾಂತ್ರಿಕ ಮತ್ತು ತಾಂತ್ರಿಕೇತರ ಕೌಶಲ ಕಲಿಕೆಗೆ ಅವಕಾಶ ಕಲ್ಪಿಸಲಾಗುವುದು. ಡಿಆರ್‍ಎಫ್ ಮತ್ತು ಸಿಎಸ್‍ಆರ್ ಹಣದಿಂದ ಈ ಕೇಂದ್ರ ನಡೆಸಲಾಗುವುದು’ ಎಂದು ಅವರು ವಿವರಿಸಿದರು.

  • ರಾಯಚೂರು ಐಐಐಟಿಗೆ ನೂರೆಂಟು ವಿಘ್ನ: ಶೈಕ್ಷಣಿಕ ವರ್ಷದಿಂದ ತರಗತಿ ಆರಂಭ?

    ರಾಯಚೂರು ಐಐಐಟಿಗೆ ನೂರೆಂಟು ವಿಘ್ನ: ಶೈಕ್ಷಣಿಕ ವರ್ಷದಿಂದ ತರಗತಿ ಆರಂಭ?

    ರಾಯಚೂರು: ಜಿಲ್ಲೆಗೆ ಐಐಐಟಿ ಘೋಷಣೆಯಾಗಿ ಮೂರು ವರ್ಷಗಳೇ ಕಳೆದಿವೆ. ಆದರೆ ತರಗತಿಗಳು ಆರಂಭವಾಗುವುದು ಯಾವಾಗ, ಕಟ್ಟಡ ನಿರ್ಮಾಣ, ಸಿಬ್ಬಂದಿ ನೇಮಕ, ಅನುದಾನ ಬಿಡುಗಡೆ ಎಲ್ಲವೂ ಮರೀಚಿಕೆಯಾಗೆ ಉಳಿದಿದೆ.

    ರಾಯಚೂರು ಜಿಲ್ಲೆಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಬೇಕು ಎನ್ನುವ ನಿಟ್ಟಿನಲ್ಲಿ ಐಐಟಿಗಾಗಿ ಐತಿಹಾಸಿಕ ಹೋರಾಟವನ್ನೇ ಜಿಲ್ಲೆಯ ಜನ ನಡೆಸಿದರು. ಆದರೆ ಐಐಟಿ ಸಿಗಲಿಲ್ಲ ಬದಲಾಗಿ ಮೂರು ವರ್ಷಗಳ ಕೆಳಗೆ ಐಐಐಟಿಯನ್ನು ರಾಯಚೂರಿಗೆ ಕೇಂದ್ರ ಸರ್ಕಾರ ಘೋಷಿಸಿತ್ತು. ಮೂರು ವರ್ಷ ಕಳೆದರೂ ರಾಯಚೂರಿನಲ್ಲಿ ತರಗತಿಗಳು ಆರಂಭವಾಗಿಲ್ಲ.

    ಹೈದರಾಬಾದ್‍ನ ಕಾಂಡಿಯಾ ಐಐಟಿ ಕ್ಯಾಂಪಸ್‍ನಲ್ಲಿ ಬಿಟೆಕ್ ಆರಂಭಿಸಲಾಗಿದ್ದು, 35 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅಲ್ಲಿ ರಾಯಚೂರು ಐಐಐಟಿಗಾಗಿ ವಿಶೇಷಾಧಿಕಾರಿಯನ್ನ ನೇಮಿಸಲಾಗಿದೆ. ಇದು ಬಿಟ್ಟರೆ ರಾಯಚೂರಿನಲ್ಲಿ ಯಾವುದೇ ಬೆಳವಣಿಗೆಗಳು ಚುರುಕಾಗಿ ನಡೆಯುತ್ತಿಲ್ಲ.

    ಇಲ್ಲಿನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ವರ್ಷವೇ ತರಗತಿಗಳನ್ನು ಆರಂಭಿಸಬೇಕು ಎನ್ನುವ ಒತ್ತಡ ಹೆಚ್ಚಾಗಿದೆ. ಅಲ್ಲದೆ ಹೆಚ್‍ಕೆಆರ್ ಡಿಬಿಯ ಎರಡು ಕೋಟಿ ಅನುದಾನದಲ್ಲಿ ರಸ್ತೆ, ವಿದ್ಯುತ್ ಸೇರಿ ಮೂಲ ಸೌಕರ್ಯಗಳನ್ನು ಎಂಜಿನಿಯರಿಂಗ್ ಕಾಲೇಜಿಗೆ ಒದಗಿಸಲು ರೂಪಿಸಲಾದ ಯೋಜನೆಯೂ ಪೂರ್ಣಗೊಂಡಿಲ್ಲ.

    ಐಐಐಟಿ ಕ್ಯಾಂಪಸ್ ನಿರ್ಮಿಸಲು ಅಂತಿಮಗೊಳಿಸಿರುವ ರಾಯಚೂರು ತಾಲೂಕಿನ ವಡವಟ್ಟಿ ಸೀಮಾಂತರದ 65 ಎಕರೆ ಜಮೀನಿನಲ್ಲಿ ದಲಿತ ಕುಟುಂಬಗಳು ಬೇಸಾಯ ಮಾಡುತ್ತಿವೆ. 1978 -79ರಲ್ಲಿ ಸರ್ಕಾರದಿಂದಲೇ ಜಮೀನು ಪಡೆದು ಸುಮಾರು 10 ಕುಟುಂಬಗಳು 40 ಎಕರೆ ಪ್ರದೇಶದಲ್ಲಿ ಉಳುಮೆ ಮಾಡುತ್ತಿವೆ. ಈಗ ರೈತರಿಗೆ ತೋರಿಸಿರುವ ಭೂಮಿ ಕಲ್ಲು ಗುಡ್ಡಗಳಿಂದ ಕೂಡಿರುವುದರಿಂದ ರೈತರು ಜಮೀನುಗಳನ್ನ ಬಿಟ್ಟುಕೊಡಲ್ಲ ಅಂತ ಹಠ ಹಿಡಿದಿದ್ದಾರೆ. ಹೀಗಾಗಿ ಜಮೀನು ವಶಪಡಿಸಿಕೊಳ್ಳುವ ಪ್ರಕ್ರೀಯೆ ಇನ್ನೂ ಬಗೆಹರಿದಿಲ್ಲ. ಉನ್ನತ ಶಿಕ್ಷಣ ಸಚಿವ ಡಿಸಿಎಂ ಡಾ.ಅಶ್ವಥನಾರಾಯಣ ಅವರು ಇತ್ತೀಚೆಗೆ ರಾಯಚೂರಿಗೆ ಭೇಟಿ ನೀಡಿದಾಗ ಜಮೀನಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

    ಒಟ್ಟಿನಲ್ಲಿ ಏನೇ ಸಮಸ್ಯೆಗಳಿದ್ದರೂ ಮೊದಲು ರಾಯಚೂರಿನಲ್ಲೇ ಐಐಐಟಿ ತರಗತಿಗಳನ್ನು ಆರಂಭಿಸಿ, ಇನ್ನೊಂದೆಡೆ ಕಟ್ಟಡ, ಸಿಬ್ಬಂದಿ ನೇಮಕ ಸೇರಿದಂತೆ ಇತರ ಸೌಲಭ್ಯಗಳನ್ನ ಒದಗಿಸುವ ಕೆಲಸ ಪರ್ಯಾಯವಾಗಿ ಸಾಗಬೇಕು ಎನ್ನುವುದು ಜಿಲ್ಲೆಯ ಜನರ ಒತ್ತಾಯವಾಗಿದೆ.

  • ಕೂಡಲ ಸಂಗಮನ ಮೇಲೆ ಆಣೆ ಮಾಡಿದ್ರೂ ಸಿದ್ದರಾಮಯ್ಯ ನಯಾಪೈಸೆ ಕೊಡಲಿಲ್ಲ: ಕಾರಜೋಳ

    ಕೂಡಲ ಸಂಗಮನ ಮೇಲೆ ಆಣೆ ಮಾಡಿದ್ರೂ ಸಿದ್ದರಾಮಯ್ಯ ನಯಾಪೈಸೆ ಕೊಡಲಿಲ್ಲ: ಕಾರಜೋಳ

    ರಾಯಚೂರು: ಕೃಷ್ಣ ಮೇಲ್ದಂಡೆ ನೀರಾವರಿ ಯೋಜನೆ ಹೆಸರಲ್ಲಿ ಸುಳ್ಳು ಹೇಳಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ್ರು, ಪ್ರತಿ ವರ್ಷ 10,000 ಕೋಟಿ ಹಣ ಕೊಡುತ್ತೀವಿ ಎಂದು ಆಣೆ ಮಾಡಿ ನಯಾಪೈಸೆ ಕೊಡಲಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

    ರಾಯಚೂರಿನ ಸಿಂಧನೂರಲ್ಲಿ ಮಾತನಾಡಿದ ಡಿಸಿಎಂ ಕಾರಜೋಳ ಸಿದ್ದರಾಮಯ್ಯ ವಿರುದ್ಧ ವಾಕ್ಪ್ರಹಾರ ನಡೆಸಿದರು. ಹೊಸಪೇಟೆಯಿಂದ ಕೂಡಲ ಸಂಗಮದವರೆಗೂ ಪಾದಯಾತ್ರೆ ಮಾಡಿದರು. ಕೂಡಲ ಸಂಗಮನ ಮೇಲೆ ಸಿದ್ದರಾಮಯ್ಯ ಆಣೆ ಮಾಡಿ ನಯಾಪೈಸೆ ಕೊಡಲಿಲ್ಲ. ಹೀಗಾಗಿ ಕೃಷ್ಣ ಮೇಲ್ದಂಡೆ ಯೋಜನೆ ವಿಳಂಬವಾಗಿದೆ ಎಂದು ವಾಗ್ದಾಳಿ ನಡೆಸಿದರು.

    ರಾಜ್ಯಕ್ಕೆ ಹಂಚಿಕೆಯಾದ ಕೃಷ್ಣ ನದಿಯ ಹನಿ ನೀರು ಸಹ ಬಳಸಿಕೊಳ್ಳಲು ಆಗಿಲ್ಲ. ರಾಜ್ಯಕ್ಕೆ 173 ಟಿಎಂಸಿ ನೀರು ಬಳಸಿಕೊಳ್ಳಲು ಆಗಿಲ್ಲ. ಇದೀಗ ಈ ಎಲ್ಲಾ ಕಾಮಗಾರಿಗೆ 51,000 ಕೋಟಿ ಹಣದ ಅಗತ್ಯವಿದೆ. ಬಿಎಸ್‍ವೈ ನೇತೃತ್ವದ ಸರ್ಕಾರ ಕೃಷ್ಣ ನದಿ ನೀರು ಬಳಕೆಗೆ ಯೊಜನೆ ರೂಪಿಸುತ್ತಿದೆ. ತೆಲಂಗಾಣ ನದಿ ನೀರು ಹಂಚಿಕೆ ವಿಚಾರವಾಗಿ ಟ್ರಿಬುನಲ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಸುಪ್ರಿಂಕೋರ್ಟ್‍ನಲ್ಲಿ ಹೋರಾಟ ನಡೆಸಲಿದೆ. ಕೃಷ್ಣ ನ್ಯಾಯಾಧಿಕರಣದಲ್ಲಿ ಹಂಚಿಕೆಯಾದ ನೀರು ಬಳಕೆಗೆ ಸರ್ಕಾರ ಸರ್ವ ಪ್ರಯತ್ನ ನಡೆಸಲಿದೆ ಎಂದರು.

    ಸಿಎಎ ವಿರುದ್ಧದ ಹೋರಾಟದ ಹೆಸರಲ್ಲಿ ದೇಶದ್ರೋಹದ ಘೋಷಣೆ ಕೂಗುವುದನ್ನು ಸಹಿಸಲ್ಲ. ಯಾರೇ ಇದ್ರು ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ. ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಯುವ ಜನಾಂಗ ದಾರಿ ತಪ್ಪಬಾರದು. ಪ್ರತಿ ಪಕ್ಷದವರು ಸಹ ಜನರಿಗೆ ತಪ್ಪು ಸಂದೇಶ ಕೊಡುವ ಕೆಲಸ ಮಾಡಬಾರದು ಎಂದು ಗೋವಿಂದ ಕಾರಜೋಳ ಹೇಳಿದರು.

  • ದಕ್ಷಿಣ ಕೊರಿಯಾ ಕಂಪನಿ ಜೊತೆ ಡಾ. ಅಶ್ವಥ್ ನಾರಾಯಣ ಮಾತುಕತೆ

    ದಕ್ಷಿಣ ಕೊರಿಯಾ ಕಂಪನಿ ಜೊತೆ ಡಾ. ಅಶ್ವಥ್ ನಾರಾಯಣ ಮಾತುಕತೆ

    ಬೆಂಗಳೂರು: ದಕ್ಷಿಣ ಕೊರಿಯಾದ ಹೂಡಿಕೆ ಕಂಪನಿ ನಿಯೋಪ್ಲಕ್ಸ್ (Neoplux)ನಿಯೋಗದ ಜೊತೆ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಗುರುವಾರ ಬೆಳಗ್ಗೆ ಮಾತುಕತೆ ನಡೆಸಿದರು.

    ಭಾರತ ಹಾಗೂ ದಕ್ಷಿಣ ಕೊರಿಯಾ ನಡುವಿನ ಸಹಯೋಗಕ್ಕೆ ವೇದಿಕೆ ಕಲ್ಪಿಸುವ ಟಿಕೆಎನ್ ಅಡ್ವೈಸರ್ಸ್ ಹಾಗೂ ಸಿಟಿ ಪ್ರೆನ್ಯೂರ್ ಸಂಸ್ಥೆಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು. ಸ್ಟಾರ್ಟ್ ಅಪ್ ವಲಯದಲ್ಲಿ ಹೊಸ ಅವಕಾಶ ಹಾಗೂ ಸಹಯೋಗದ ಸಾಧ್ಯತೆ ಕುರಿತು ನಿಯೋಪ್ಲಕ್ಸ್ ನ ಸಿಇಓ ಸ್ಯಾಂಗ್ ಹಾ ಲೀ ನೇತೃತ್ವದ ತಂಡದ ಜೊತೆಗೆ ಮಾತುಕತೆ ನಡೆಸಲಾಗಿದೆ ಎಂದು ಡಾ. ಅಶ್ವಥ್ ನಾರಾಯಣ ತಿಳಿಸಿದ್ದಾರೆ.

    ಭಾರತದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 8 ಸ್ಟಾರ್ಟ್ ಅಪ್‍ಗಳ ಪೈಕಿ ಐದನ್ನು ಬೆಂಗಳೂರಿನಲ್ಲೇ ಸ್ಥಾಪಿಸುವ ಬಗ್ಗೆ ಚರ್ಚೆ ನಡೆಸಿದ ನಿಯೋಪ್ಲಕ್ಸ್, ನಗರದಲ್ಲೇ ಸಂಸ್ಥೆಯ ಕೇಂದ್ರ ಕಚೇರಿ ತೆರೆಯುವ ಇಂಗಿತವನ್ನೂ ವ್ಯಕ್ತಪಡಿಸಿದೆ. ಯುವ ಉದ್ಯಮಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಸಿಟಿಪ್ರೆನ್ಯೂರ್ಸ್, ಮುಂದಿನ ಆಗಸ್ಟ್ ನಲ್ಲಿ ಬೆಂಗಳೂರಿನಲ್ಲಿ ಸಮಾವೇಶ ಆಯೋಜಿಸುವ ಆಶಯ ವ್ಯಕ್ತಪಡಿಸಿದೆ.

    ಈ ಸಮಾವೇಶದಲ್ಲಿ 30ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಸ್ಥೆಯ ಪ್ರತಿನಿಧಿಗಳು ಸಭೆಯಲ್ಲಿ ತಿಳಿಸಿದರು. ನವೋದ್ಯಮಿಗಳಿಗೆ ಹೂಡಿಕೆದಾರರು, ಸರ್ಕಾರಿ ಅಧಿಕಾರಿಗಳು, ಖಾಸಗಿ ವಲಯದ ದಿಗ್ಗಜರೊಂದಿಗೆ ಸಂಪರ್ಕ ಕಲ್ಪಿಸಿ ಅಗತ್ಯ ನೆರವು ಒದಗಿಸುವ ಸಿಟಿಪ್ರೆನ್ಯೂರ್ಸ್, ವಿಶ್ವಸಂಸ್ಥೆಯ ಅರ್ಬನ್ ಇನ್ನೋವೇಶನ್ ಚಾಲೆಂಜ್‍ನಲ್ಲಿ ಭಾಗಿಯಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ.