Tag: DCM

  • ಡಿಕೆ ಶಿವಕುಮಾರ್ ಪ್ರಾಮಾಣಿಕ ಶಿಸ್ತಿನ ಸಿಪಾಯಿ: ಪರಮೇಶ್ವರ್

    ಡಿಕೆ ಶಿವಕುಮಾರ್ ಪ್ರಾಮಾಣಿಕ ಶಿಸ್ತಿನ ಸಿಪಾಯಿ: ಪರಮೇಶ್ವರ್

    ತುಮಕೂರು: ಡಿಕೆ ಶಿವಕುಮಾರ್ ಒಬ್ಬ ಪಕ್ಷದ ಪ್ರಾಮಾಣಿಕ ಶಿಸ್ತಿನ ಸಿಪಾಯಿ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ.

    ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರಿಗೆ ಯಾವುದೇ ಅಸಮಾಧಾನ ಇಲ್ಲ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನ ಅವರು ನಿಭಾಯಿಸುತ್ತಾರೆ ಎಂದು ಹೊಗಳಿದರು.

    5 ವರ್ಷ ನಾವು ಸುಭದ್ರವಾಗಿ ಸರ್ಕಾರ ನಡೆಸ್ತೀವಿ ಅನ್ನೋ ವಿಶ್ವಾಸ ಇದೆ, ಬುಧವಾರ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಯಾರಿಗೆ ಯಾವ ಖಾತೆ ಎನ್ನುವುದು ಜೂನ್ 6 ರಂದು ಗೊತ್ತಾಗಲಿದೆ. ಎಲ್ಲಾ ವರ್ಗದವರನ್ನೂ ಗಮನದಲ್ಲಿಟ್ಟುಕೊಂಡು ಸಚಿವ ಸ್ಥಾನ ಹಂಚಲಾಗುತ್ತದೆ ಎಂದು ತಿಳಿಸಿದರು.

    ರಾಜ್ಯದಲ್ಲಿ ಕಾನೂನು ಚೌಕಟ್ಟಿನೊಳಗೆ ಸಮ್ಮಿಶ್ರ ಸರ್ಕಾರವನ್ನು ವಿಶ್ವಾಸಮತದಿಂದ ರಚನೆ ಮಾಡಿದ್ದೇವೆ. ಈ ಕುರಿತು ರಾಜ್ಯಪಾಲರಿಗೆ ಅನುಮತಿ ಕೋರಿದ್ದೆವು. ರಾಜ್ಯಪಾಲರು ಕಾನೂನನ್ನ ಸ್ವಲ್ಪ ಬದಲಿಸಿ ಬಿಜೆಪಿಗೆ ಅವಕಾಶ ನೀಡಿದ್ದರು. ನಾವು ಇದರ ವಿರುದ್ದ ಸುಪ್ರಿಂಕೋರ್ಟ್ ಗೆ ಮೊರೆಹೋಗಿದ್ದೆವು. ವಿಶ್ವಾಸಮತದಿಂದ ಸರ್ಕಾರ ಆಯ್ಕೆ ಮಾಡಿ ಎಂದು ಸುಪ್ರಿಂ ಕೋರ್ಟ್ ಆದೇಶ ನೀಡಿತು ಎಂದು ತಿಳಿಸಿದರು.

    ಅಧಿಕಾರಿಗಳೊಟ್ಟಿಗೆ ನಾವು ಯಾವುದೇ ಲೋಪ ಇಲ್ಲದೇ ಆಡಳಿತ ನಡೆಸುತ್ತೇವೆ. ಸರಿಯಾದ ಸಮಯಕ್ಕೆ ಮುಂಗಾರು ಬಂದಿದೆ. ರೈತರಿಗೆ ಸಮರ್ಪಕವಾಗಿ ಗೊಬ್ಬರ, ಬೀಜ ವಿತರಣೆಗೆ ನಾವು ಸೂಚನೆ ನೀಡಿದ್ದೇವೆ. ರೈತರಿಗೆ ಎಷ್ಟು ಅಗತ್ಯ ಇದೆ ಅದೆಲ್ಲಾ ಪೂರೈಕೆಯಾಗುತ್ತಿದೆ. ಯಾವುದೇ ಲೋಪವಿಲ್ಲದೇ ರೈತರ ಏಳಿಗೆಗಾಗಿ ಕೆಲಸ ಮಾಡುತ್ತೇವೆ. ಪ್ರತಿಯೊಂದು ಜಿಲ್ಲೆಗೆ ಸಚಿವರನ್ನ ನೇಮಕ ಮಾಡಲಾಗುತ್ತದೆ ಎಂದು ಹೇಳಿದರು.

    ತುಮಕೂರು ಜಿಲ್ಲೆಗೆ ಡಿಸಿಎಂ ಆಗಿ ಪ್ರಥಮ ಬಾರಿಗೆ ಗೌರವ ಸಿಕ್ಕಿದೆ. ಈ ಅವಕಾಶವನ್ನು ವಿನಿಯೋಗ ಮಾಡಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಇನ್ನೂ ಹೆಚ್ಚಿನ ಯೋಜನೆಗಳು ಕಾರ್ಯಕ್ರಮಗಳನ್ನ ಜಿಲ್ಲೆಗೆ ತರುತ್ತೇನೆ ಎಂದು ಹೇಳಿದರು.

    ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಒಟ್ಟಿಗೆ ಹೋಗುತ್ತೇವೆ. ಆದರೆ ಸೀಟುಗಳ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಐದು ವರ್ಷ ಹೆಚ್‍ಡಿಕೆ ಸಿಎಂ ಆಗಿ ಮುಂದುವರಿಯುತ್ತಾರ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಅದು ನಮ್ಮ ಪಕ್ಷದ ಸಮಸ್ಯೆ, ಮಾಧ್ಯಮದವರ ಸಮಸ್ಯೆ ಅಲ್ಲ. ಈಗಾಗಲೇ ಅದರ ಬಗ್ಗೆ ನಮ್ಮ ಪ್ರಧಾನ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ ಎಂದು ಪ್ರತಿಕ್ರಿಯಿಸಿದರು.

  • ಡಿಕೆಶಿಗಿಲ್ಲ ಉಪ ಮುಖ್ಯಮಂತ್ರಿ ಪಟ್ಟ – ಎರಡನೇ ಡಿಸಿಎಂ ಹುದ್ದೆ ಸೃಷ್ಟಿಯೂ ಡೌಟು

    ಡಿಕೆಶಿಗಿಲ್ಲ ಉಪ ಮುಖ್ಯಮಂತ್ರಿ ಪಟ್ಟ – ಎರಡನೇ ಡಿಸಿಎಂ ಹುದ್ದೆ ಸೃಷ್ಟಿಯೂ ಡೌಟು

    ಬೆಂಗಳೂರು: ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರಿಗೆ ಡಿಸಿಎಂ ಪಟ್ಟ ನೀಡಲು ಹಿಂದೇಟು ಹಾಕಲಾಗಿದೆ ಎಂಬುದಾಗಿ ತಿಳಿದುಬಂದಿದೆ.

    ಶನಿವಾರ ರಾತ್ರಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮತ್ತೊಂದು ಡಿಸಿಎಂ ಹುದ್ದೆ ನೀಡುವ ಕುರಿತು ಚರ್ಚೆ ನಡೆಸಲಾಗಿತ್ತು. ಈ ವೇಳೆ ಡಿಕೆಶಿಗೆ ಡಿಸಿಎಂ ಪಟ್ಟ ಕೊಡಲು ಹಿಂದೇಟು ಹಾಕಲಾಗಿದೆ ಎನ್ನುವ ಮಾಹಿತಿಯೊಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಡಿಕೆಶಿ ಜೊತೆ ರಾಹುಲ್, ಸೋನಿಯಾ ಗಾಂಧಿ ಪ್ರತ್ಯೇಕ ಚರ್ಚೆ

    ಜಾತಿ ಲೆಕ್ಕಾಚಾರದ ಹಿನ್ನಲೆ ಡಿಸಿಎಂ ಹುದ್ದೆ ನೀಡಲು ನಿರಾಕರಿಸಲಾಗಿದೆ. ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಗೂ ಡಿ.ಕೆ ಶಿವಕುಮಾರ್ ಇಬ್ಬರು ಒಕ್ಕಲಿಗರಾದ ಹಿನ್ನೆಲೆಯಲ್ಲಿ ಎರಡು ಪ್ರಮುಖ ಹುದ್ದೆ ಒಂದೇ ಸಮುದಾಯಕ್ಕೆ ನೀಡಲು ವಿರೋಧ ವ್ಯಕ್ತವಾಗಿದೆ. ಇತರೆ ಸಮುದಾಯಕ್ಕೆ ಮತ್ತೊಂದು ಡಿಸಿಎಂ ಹುದ್ದೆ ನೀಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಇದನ್ನೂ ಓದಿ: ನಾನು ಫುಟ್ಬಾಲ್ ಆಡೋನಲ್ಲ, ಚೆಸ್ ಆಡಿ ಚೆಕ್ ಕೊಡುವವನು: ಹೈಕಮಾಂಡ್‍ಗೆ ಡಿಕೆಶಿ ಟಾಂಗ್

    ಈ ವೇಳೆ ರಾಹುಲ್ ಗಾಂಧಿ ಮತ್ತೊಂದು ಡಿಸಿಎಂ ಹುದ್ದೆ ಅವಶ್ಯಕತೆಯ ಕುರಿತು ಪ್ರಶ್ನಿಸಿದ್ದಾರೆ. ಮತ್ತೊಂದು ಡಿಸಿಎಂ ಹುದ್ದೆಯಿಂದ ಆಗುವ ಲಾಭ ನಷ್ಟ ಕುರಿತು ಲೆಕ್ಕಾಚಾರ ಹಾಕಿದ ಅವರು, ಮತ್ತೊಂದು ಡಿಸಿಎಂ ಹುದ್ದೆ ವಿಚಾರ ಅಂತಿಮಕ್ಕೆ ಬರಲಿಲ್ಲ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಕಪ್ ಎಚ್‍ಡಿಕೆ ಗೆದ್ರೂ ಮ್ಯಾನ್ ಆಫ್ ದಿ ಮ್ಯಾಚ್ ಡಿಕೆಶಿ!

  • ಮಂಗಳವಾರ ರಾತ್ರಿಯಿಂದ ಹೋಟೆಲ್ ಕಡೆ ತಲೆ ಹಾಕದ ಡಿಕೆ ಬ್ರದರ್ಸ್!

    ಮಂಗಳವಾರ ರಾತ್ರಿಯಿಂದ ಹೋಟೆಲ್ ಕಡೆ ತಲೆ ಹಾಕದ ಡಿಕೆ ಬ್ರದರ್ಸ್!

    ಬೆಂಗಳೂರು: ಹೊಸ ಸರ್ಕಾರದ ರಚನೆ ಮುನ್ನವೇ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದ್ದು, ಸಮ್ಮಿಶ್ರ ಸರ್ಕಾರದ ಡಿಸಿಎಂ ಹುದ್ದೆ ಸಿಗದ ಕಾರಣ ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಹೈಕಮಾಂಡ್ ವಿರುದ್ಧ ಸಮಾಧಾನಗೊಂಡಿದ್ದಾರೆ.

    ಆಪರೇಷನ್ ಕಮಲ ಭೀತಿಗೆ ಒಳಗಾಗಿದ್ದ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್ ನಲ್ಲಿಟ್ಟು ರಕ್ಷಿಸಿದ್ದ ಡಿಕೆ ಶಿವಕುಮಾರ್, ಪಕ್ಷ ಸಂಕಷ್ಟದಲ್ಲಿದ್ದ ಹಲವು ಸಂದರ್ಭದಲ್ಲಿ ಯಶಸ್ವಿಯಾಗಿ ನಿಭಾಯಿಸಿದ್ದರು. ಇಷ್ಟು ದಿನ ಜವಾಬ್ದಾರಿ ಹೊತ್ತಿದ್ದ ಡಿಕೆ ಬ್ರದರ್ಸ್ ಸದ್ಯ ಶಾಸಕರು ತಂಗಿದ್ದ ಹೋಟೆಲ್ ಕಡೆ ಮುಖ ಮಾಡದೇ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.

    ನಿನ್ನೆ ರಾತ್ರಿಯಿಂದ ಡಿಕೆ ಬ್ರದರ್ಸ್ ಹೋಟೆಲ್ ನತ್ತ ಮುಖ ಮಾಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯ ಮಂತ್ರಿಯಾಗಿ ಎಚ್‍ಡಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಆಗಮಿಸುತ್ತಿದ್ದರೂ ಶಾಸಕರು ತಂಗಿರುವ ಹಿಲ್ಟನ್ ಹೊಟೇಲ್ ನಲ್ಲಿ ಇಬ್ಬರು ಕಾಣಿಸಿಕೊಂಡಿಲ್ಲ.

    ಸರ್ಕಾರ ರಚನೆ ವೇಳೆ ಉಪಮುಖ್ಯಮಂತ್ರಿ ಸ್ಥಾನದ ಕುರಿತು ಡಿಕೆ ಶಿವಕುಮಾರ್ ಕಣ್ಣಿಟ್ಟಿದ್ದರು. ಆದರೆ ಹೈಕಮಾಂಡ್ ಡಿಸಿಎಂ ಸ್ಥಾನಕ್ಕೆ ಪರಮೇಶ್ವರ್ ಅವರನ್ನು ನೇಮಕ ಮಾಡಿ ಅಂತಿಮಗೊಳಿಸಿದ್ದರಿಂದ ಯಾವ ಜವಾಬ್ದಾರಿ ಸಹ ಬೇಡ ಎಂದು ಶಾಸಕರೊಂದಿಗೆ ಹಾಗೂ ಹಿರಿಯ ಮುಖಂಡರೊಂದಿಗೆ ರೇಗಾಡಿ ಹೊಟೇಲ್ ನಿಂದ ತೆರಳಿದ್ದರು ಎಂಬ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.

    ಅರಂಭದಿಂದಲೂ ಆಪರೇಷನ್ ಕಮಲದ ಭೀತಿಗೆ ಒಳಗಾಗಿದ್ದ ಕಾಂಗ್ರೆಸ್ಸನ್ನು ರಕ್ಷಿಸಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಲ್ಲಿ ಬಹಳ ಮುಖ್ಯ ಪಾತ್ರವನ್ನು ಡಿಕೆ ಶಿವಕುಮಾರ್ ಯಶಸ್ವಿಯಾಗಿ ನಿಭಾಯಿಸಿದ್ದರು. ಬಿಜೆಪಿ ಕೈ ಶಾಸಕರನ್ನು ಸೆಳೆಯಲು ಮುಂದಾಗುತ್ತಿದೆ ಎನ್ನುವ ಸುಳಿವು ಸಿಕ್ಕ ಕೂಡಲೇ ಬಿಡದಿಯ ಈಗಲ್ ಟನ್ ರೆಸಾರ್ಟ್ ಗೆ ಕರೆದುಕೊಂಡು ಹೋಗಿದ್ದರು. ರೆಸಾರ್ಟ್ ಗೆ ನೀಡಿದ್ದ ಪೊಲೀಸ್ ರಕ್ಷಣೆಯನ್ನು ಸರ್ಕಾರ ವಾಪಸ್ ಪಡೆದ ಬಳಿಕ ಇಲ್ಲೂ ಶಾಸಕರನ್ನು ಸೆಳೆಯಬಹುದು ಎನ್ನುವ ಭೀತಿಯಿಂದ ಎಲ್ಲರನ್ನೂ ಹೈದರಾಬಾದ್‍ಗೆ ಡಿಕೆಶಿ ಕರೆದುಕೊಂಡು ಹೋಗಿದ್ದರು.

    ಈ ನಡುವೆ ಕರ್ನಾಟಕ ರಾಜಕೀಯದಲ್ಲಿ ನಡೆದ ಸಂಪೂರ್ಣ ಬೆಳವಣಿಗೆಯಲ್ಲೂ ಡಿಕೆಶಿ ಬಹಳ ಮುಖ್ಯ ಪಾತ್ರವಹಿಸಿದ್ದರು. ಅಲ್ಲದೇ ಬಿಎಸ್‍ವೈ ಪ್ರಮಾಣ ಸ್ವೀಕರ ಕಾರ್ಯಕ್ರಮಕ್ಕೆ ಗೈರಾದ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಪಾಟೀಲ್ ಹುಡುಕಾಟ ನಡೆದಿತ್ತು. ಹೋಟೆಲ್ ನಲ್ಲಿ ಪತ್ತೆಯಾದ ವಿಚಾರ ತಿಳಿದ ಡಿಕೆಶಿ ಅಂದು ಸುಮಾರು ಒಂದು ಗಂಟೆ ವಿಧಾನಸೌಧದ ಹೊರಗಡೆಯೇ ಶಾಸಕರಿಗೆ ಕಾದಿದ್ದರು. ಪ್ರತಾಪ್ ಗೌಡ ವಿಧಾನಸೌಧ ಪ್ರವೇಶಿಸುತ್ತಿದ್ದಂತೆ ಅವರ ಶರ್ಟ್ ಕಿಸೆಗೆ ಡಿಕೆಶಿ ವಿಪ್ ಹಾಕಿದ್ದರು. ಬಳ್ಳಾರಿಯ ವಿಜಯನಗರ ಶಾಸಕರ ಆನಂದ್ ಸಿಂಗ್ ಅವರನ್ನು ಡಿಕೆಶಿ ವಿಧಾನಸೌಧಕ್ಕೆ ಕರೆದುಕೊಂಡು ಬಂದಿದ್ದರು.

    ವಹಿಸಿದ್ದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕೆ ಹೈ ಕಮಾಂಡ್ ಗೆ ಮೆಚ್ಚುಗೆ ಆಗಿತ್ತು. ಹೀಗಾಗಿ ಡಿಕೆಶಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುವ ಸಾಧ್ಯತೆಯಿದೆ. ಈ ವಿಚಾರದ ಬಗ್ಗೆ ಮಾತುಕತೆ ನಡೆಯುತ್ತಿದೆ ಎನ್ನುವ ಮಾತು ಕಾಂಗ್ರೆಸ್ ವಲಯದಿಂದ ಕೇಳಿಬಂದಿತ್ತು.

  • ನಾನು ಫುಟ್ಬಾಲ್ ಆಡೋನಲ್ಲ, ಚೆಸ್ ಆಡಿ ಚೆಕ್ ಕೊಡುವವನು: ಹೈಕಮಾಂಡ್‍ಗೆ ಡಿಕೆಶಿ ಟಾಂಗ್

    ನಾನು ಫುಟ್ಬಾಲ್ ಆಡೋನಲ್ಲ, ಚೆಸ್ ಆಡಿ ಚೆಕ್ ಕೊಡುವವನು: ಹೈಕಮಾಂಡ್‍ಗೆ ಡಿಕೆಶಿ ಟಾಂಗ್

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದ ಹಿನ್ನೆಲೆಯಲ್ಲಿ ಪರೋಕ್ಷವಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.

    ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಸಿಗಬೇಕೆಂದು ಪಟ್ಟು ಹಿಡಿದಿದ್ದ ಎಂದು ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಹೈ ಕಮಾಂಡ್ ನಡೆಯ ಬಗ್ಗೆ ಪರೋಕ್ಷವಾಗಿ ಅಸಮಾಧಾನವನ್ನು ಪ್ರಕಟಿಸಿದ್ದಾರೆ.

    ಒಂದು ಸ್ಥಾನ ಗೆದ್ದವರಿಗೂ, ಇಡೀ ರಾಜ್ಯ ಸುತ್ತಿ ಗೆಲ್ಲಿಸಿಕೊಂಡು ಬಂದವರಿಗೂ ಒಂದೆನಾ? ಪರಮೇಶ್ವರ್ 8 ವರ್ಷದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದಾರೆ. ಬಹಳ ದಿನಗಳಿಂದ ಪರಮೇಶ್ವರ್ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯುತ್ತೇನೆ ಅಂತಾ ಹೇಳುತ್ತಾ ಬಂದಿದ್ದಾರೆ. 8 ವರ್ಷದಿಂದ ಕೆಲವರು ಆ..ಆ…ಆ.. ಬಾಯಿ ಬಿಟ್ಟುಕೊಂಡು ಕೂತಿದ್ದಾರೆ. ನಾನು ಬಾಯಿ ಬಿಟ್ಟುಕೊಂಡು ಕಾಯುವ ವ್ಯಕ್ತಿತ್ವ ನನ್ನದಲ್ಲ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

    ಎಲ್ಲದಕ್ಕೂ ಮುಹೂರ್ತ, ಕಾಲ ಕೂಡಿ ಬರಬೇಕು. ರಾಜಕಾರಣಕ್ಕೆ ಬಂದಿದ್ದೂ ಸನ್ಯಾಸತ್ವ ತೆಗೆದುಕೊಳ್ಳಕ್ಕೆ ಅಲ್ಲ, ರಾಜಕಾರಣ ಮಾಡಲಿಕ್ಕೆ ಬಂದಿದ್ದೇನೆ. ಪಕ್ಷದ ಹೈಕಮಾಂಡ್ ಯಾವ ನಿರ್ಣಯ ತೆಗೆದುಕೊಳ್ಳುತ್ತೆ ಅಂತಾ ಕಾದು ನೋಡೋಣ ಅಂತಾ ತಿಳಿಸಿದ್ದಾರೆ.

    ಉತ್ತರ ಕರ್ನಾಟಕ ಭಾಗದ ಲಿಂಗಾಯತ ಮುಖಂಡರೊಬ್ಬರಿಗೆ ಡಿಸಿಎಂ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಚಿಂತಿಸಿತ್ತು. ಆದ್ರೆ ಡಿ.ಕೆ.ಶಿವಕುಮಾರ್ ಅವರ ಬಿಗಿ ಪಟ್ಟಿನಿಂದಾಗಿ ಒಬ್ಬರೇ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ಅನುಮತಿ ನೀಡಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

    ಪಕ್ಷದ ಪವರ್ ಫುಲ್ ಮುಖಂಡರಾಗಿರುವ ಡಿ.ಕೆ.ಶಿವಕುಮಾರ್ ಅಸಮಾಧಾನಗೊಂಡಿರುವ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನದ ಜೊತೆಗೆ ಸಚಿವರಾಗುವ ಅವಕಾಶ ನೀಡಲಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪರಮೇಶ್ವರ್ ರಾಜೀನಾಮೆ ನೀಡಿದ್ದು ಈ ಸ್ಥಾನ ಡಿಕೆ ಶಿವಕುಮರ್ ಅವರಿಗೆ ಸಿಗುವ ಸಾಧ್ಯತೆಯಿದೆ.

  • ಸುಗಮ ಆಡಳಿತಕ್ಕೆ ಸಮನ್ವಯ ಸಮಿತಿ ರಚನೆ- ಜಿ.  ಪರಮೇಶ್ವರ್

    ಸುಗಮ ಆಡಳಿತಕ್ಕೆ ಸಮನ್ವಯ ಸಮಿತಿ ರಚನೆ- ಜಿ. ಪರಮೇಶ್ವರ್

    ಬೆಂಗಳೂರು: ರಾಜ್ಯದ ಜನತೆಯ ಸೇವೆ ಮಾಡಲು ಮತ್ತೊಂದು ಅವಕಾಶ ಸಿಕ್ಕಿದೆ. ಪಕ್ಷದ ಕಾರ್ಯಕರ್ತರಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ಸಂಘಟನೆ ಮಾಡಲು ಇದೊಂದು ಸ್ಫೂರ್ತಿಯಾಗಲಿ ಅಂತ ನೂತನ ಉಪಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸುತ್ತಿರುವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

    ತಮ್ಮ ನಿವಾಸ ಸದಾಶಿವನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇದೇ ತಿಂಗಳ 25ರಂದು ಬಹುಮತ ಸಾಬೀತುಪಡಿಸಿದ ಬಳಿಕ ರಾಜ್ಯದ ಜನತೆಯ ಹಿತದೃಷ್ಟಿಗೆ ಮುಂದಿನ ಯೋಜನೆಗಳನ್ನು ಕೈಗೊಳ್ಳುವುದಾಗಿ ಹೇಳಿದ್ರು.

    ಒಟ್ಟಿನಲ್ಲಿ ಬಹುಮತ ಸಾಬೀತಿನ ಬಳಿಕವೇ ಮುಖ್ಯಮಂತ್ರಿ, ಸಂಪುಟ ರಚನೆ ಹಾಗೂ ಖಾತೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಇನ್ನು ತಾಂತ್ರಿಕ ಕಾರಣದಿಂದಾಗಿ ವಿಶ್ವಾಸಮತ ಸಾಬೀತು ಮಾಡುವ ದಿನಾಂಕ ಮುಂದೆ ಹೋಗಿದೆ. ಸ್ಪೀಕರ್ ಎಲೆಕ್ಷನ್ ಆದ ಬಳಿಕ ವಿಶ್ವಾಸಮತ ಸಾಬೀತು ಪಡಿಸಬೇಕಾಗಿದೆ. ಹೀಗಾಗಿ ಸ್ಪೀಕರ್ ಎಲೆಕ್ಷನ್ ಮೊದಲು ಆಗಬೇಕು ಅಂತ ಅವರು ಹೇಳಿದ್ರು.

    ಈ ಸರ್ಕಾರ ಸಂಪೂರ್ಣವಾಗಿ 5 ವರ್ಷ ಪೂರೈಸುವ ಭರವಸೆ ಇದೆ. ಸಮನ್ವಯ ಸಮಿತಿ ಮಾಡಬೇಕೆನ್ನುವ ಯೋಚನೆ ಮಾಡಿದ್ದೇವೆ. ಈ ಂದ್ಯೆ ಸಣ್ಣಪುಟ್ಟ ವ್ಯತ್ಯಾಸಗಳು ಬಂದ್ರೆ ಅದನ್ನು ಸರಿಪಡಿಸಕೊಂಡು ಹೋಗುತ್ತೇವೆ. 5 ವರ್ಷ ಜನರ ಸೇವೆಯನ್ನು ಮಾಡಬೇಕೆನ್ನುವುದು ಎರಡೂ ಪಕ್ಷಗಳ ಉದ್ದೇಶವಾಗಿದೆ ಅಂತ ಅವರು ಭರವಸೆ ನೀಡಿದ್ರು.

    ಸದ್ಯ ಪರಮೇಶ್ವರ್ ನಿವಾಸದ ಮುಂದೆ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಂಭ್ರಮ ಮನೆ ಮಾಡಿದೆ.

  • ನೂತನ ಡಿಸಿಎಂಗೆ ವಿಶ್ ಮಾಡಿ ಕುತೂಹಲ ಮೂಡಿಸಿದ್ರು ಪ್ರತಾಪ್ ಸಿಂಹ!

    ನೂತನ ಡಿಸಿಎಂಗೆ ವಿಶ್ ಮಾಡಿ ಕುತೂಹಲ ಮೂಡಿಸಿದ್ರು ಪ್ರತಾಪ್ ಸಿಂಹ!

    ಮೈಸೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿಯಾಗಿ ಜಿ. ಪರಮೆಶ್ವರ್ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ನೂತನ ಡಿಸಿಎಂ ಗೆ ಶುಭಾಶಯ ತಿಳಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ, `ಡಿಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿರುವ ಜಿ ಪರಮೇಶ್ವರ್ ಅವರಿಗೆ ಶುಭಾಶಯಗಳು. ಅಲ್ಲದೆ ಡಿಸಿಎಂ ಆಗಲು ಪರಮೇಶ್ವರ್ ಅವರೇ ಸರಿಯಾದ ವ್ಯಕ್ತಿ ಅಂತ ಹೇಳಿದ್ದಾರೆ. ಒಟ್ಟಿನಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಪರಮೇಶ್ವರ್ ಅವರಿಗೆ ಪ್ರತಾಪ್ ಸಿಂಹ ಶುಭಾಶಯ ಕೋರಿರುವುದು ಇದೀಗ ಅಚ್ಚರಿ ಮೂಡಿಸಿದೆ.

    ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಭಾರೀ ಹೈಡ್ರಾಮಾವೇ ನಡೆದುಹೋಗಿದ್ದು, ಇದೀಗ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಅವರು ನೂತನ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ಸ್ವೀರಿಸುವ ಮೂಲಕ ಫುಲ್ ಸ್ಟಾಪ್ ಬಿದ್ದಿದೆ.

    ರಾಜ್ಯ ವಿಧಾನಸಭಾ ಫಲಿತಾಂಶದಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ರೂ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಿಂದಾಗಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ವಿಫಲವಾಯಿತು. ಆದ್ರೂ ನಾನೇ ಸಿಎಂ ಎಂದು ಹೇಳಿಕೊಂಡು ಬಂದಿದ್ದ ಯಡಿಯೂರಪ್ಪ ಅವರು ರಾಜ್ಯಪಾಲರ ಅನುಮತಿ ಪಡೆದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಈ ಮಧ್ಯೆ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಹೀಗಾಗಿ ಎರಡು ಪಕ್ಷಗಳ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ವಿಶ್ವಾಸಮತ ಸಾಬೀತುಪಡಿಸುವಂತೆ ಸೂಚನೆ ನೀಡಿತ್ತು.

    ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಬಿಜೆಪಿಯವರು ತಮ್ಮ ತೆಕ್ಕೆಗೆ ಎಳೆದುಕೊಳ್ಳಲು ಪ್ರಯತ್ನಿಸಿದ್ದರು. ಹೀಗಾಗಿ ಭಾರೀ ಹೈಡ್ರಾಮಾವೇ ನಡೆದಿತ್ತು. ಆದ್ರೆ ಸಂಜೆ ನಡೆದ ವಿಧಾನ ಸಭಾ ಕಲಾಪದಲ್ಲಿ ಯಡಿಯೂರಪ್ಪ ಅವರು ಭಾವನಾತ್ಮಕ ಭಾಷಣ ಮಾಡಿ ಬಳಿಕ ನೇರವಾಗಿ ರಾಜ್ಯಪಾಲರ ಬಳಿ ತೆರಳಿ ತನ್ನ ರಾಜೀನಾಮೆ ಪತ್ರವನ್ನು ನೀಡಿದ್ದರು.

  • ಎಂ.ಬಿ.ಪಾಟೀಲ್‍ಗೆ ಡಿಸಿಎಂ, ಸಚಿವ ಸ್ಥಾನ ನೀಡಬೇಡಿ-ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಭಿನ್ನಮತ

    ಎಂ.ಬಿ.ಪಾಟೀಲ್‍ಗೆ ಡಿಸಿಎಂ, ಸಚಿವ ಸ್ಥಾನ ನೀಡಬೇಡಿ-ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಭಿನ್ನಮತ

    ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಇವತ್ತು ಕೂಡ ಅಸಮಾಧಾನಗೊಂಡಿದೆ. ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲರಿಗೆ ಯಾವುದೇ ಸ್ಥಾನ ನೀಡಬಾರದು ಅಂತ ಲಿಂಗಾಯತ ಶಾಸಕರಾದ ಇಂಡಿಯ ಯಶವಂತರಾಯಗೌಡ ಪಾಟೀಲ್ ಹಾಗೂ ಬಸವನಬಾಗೇವಾಡಿಯ ಶಿವಾನಂದ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

    ಕಾಂಗ್ರೆಸ್ ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ, ಆರ್.ವಿ. ದೇಶಪಾಂಡೆ ಹಾಗೂ ರಮೇಶ್ ಕುಮಾರ್ ಸ್ಪೀಕರ್ ಸ್ಥಾನಕ್ಕೆ ಒಪ್ಪಿಕೊಳ್ಳದಿದ್ದರಿಂದ, ಜೆಡಿಎಸ್‍ಗೇನೆ ಸ್ಪೀಕರ್ ಸ್ಥಾನ ಬಿಟ್ಟು ಕೊಡುವಂತೆ ಸಲಹೆ ವ್ಯಕ್ತವಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಗುರುವಾರ ವಿಶ್ವಾಸಮತ ಯಾಚನೆಯಾಗಲಿದ್ದು ಯಾವುದೇ ಕಾರಣಕ್ಕೂ ಆಸೆ ಅಮಿಷಕ್ಕೆ ಒಳಗಾಗದಂತೆ ಶಾಸಕರಿಗೆ ಮುಖಂಡರು ಕರೆ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆಗೆ ಎಲ್ಲರೂ ಸಹಕಾರ ನೀಡುವಂತೆಯೂ ಸಭೆಯಲ್ಲಿ ಮುಖಂಡರು ಮನವಿ ಮಾಡಿದ್ದಾರೆ.

    ಮಾಜಿ ಸಚಿವ ಪಾಟೀಲ್ ಮೇಲೇಕೆ ಸಿಟ್ಟು?
    * ಲಿಂಗಾಯತ ಧರ್ಮದ ಹೆಸರಲ್ಲಿ ಸಮುದಾಯ ಒಡೆದ್ರು.
    * ಇವತ್ತಿನ ಕಾಂಗ್ರೆಸ್ ಸ್ಥಿತಿಗೆ ಎಂ.ಬಿ. ಪಾಟೀಲೇ ನೇರ ಕಾರಣ!
    * ಪ್ರತ್ಯೇಕ ಧರ್ಮಕ್ಕೆ ಸಹಕರಿಸದಿದ್ದಕ್ಕೆ ಬೇರೆ ಅಭ್ಯರ್ಥಿಗಳಿಗೆ ಸಹಕಾರ.
    * ಹಣಕಾಸಿನ ನೆರವು ನೀಡಿ ಸೋಲಿಸಲು ಎಂ.ಬಿ. ಪಾಟೀಲ್ ಯತ್ನಿಸಿದ್ದಾರೆ.
    * ಎಂ.ಬಿ. ಪಾಟೀಲ್‍ಗೆ ಡಿಸಿಎಂ ಇರಲಿ, ಸಚಿವ ಸ್ಥಾನ ನೀಡಬೇಡಿ.
    * ಒಂದು ವೇಳೆ ನೀಡಿದರೆ ಲಿಂಗಾಯತ ಶಾಸಕರ ರಾಜೀನಾಮೆ.
    * ಕಾಂಗ್ರೆಸ್ಸಿನಲ್ಲಿ 17 ಲಿಂಗಾಯತ ಶಾಸಕರು ಗೆದ್ದಿದ್ದಾರೆ.
    * ಶಾಮನೂರು ಶಿವಶಂಕರಪ್ಪಗೆ ಆರೋಗ್ಯದ ಸಮಸ್ಯೆ.
    * ಅವರನ್ನು ಬಿಟ್ಟು ಯಾರನ್ನಾದರೂ ಡಿಸಿಎಂ, ಸಚಿವ ಸ್ಥಾನ ನೀಡಿ.

    ಈ ಮೇಲಿನ ಎಲ್ಲ ಅಂಶಗಳಿಂದ ಕಾಂಗ್ರೆಸ್‍ನಲ್ಲಿಯೇ ಭಿನ್ನಮತ ಕಾಣಿಸಿಕೊಂಡಿದೆ ಅಂತಾ ಹೇಳಲಾಗುತ್ತಿದೆ. ವಿಜಯಪುರ ಜಿಲ್ಲೆಯ ಇಂಡಿ ಮತ್ತು ಬಸವನ ಬಾಗೇವಾಡಿ ಶಾಸಕರಿಬ್ಬರನ್ನು ಸೋಲಿಸಲು ಎಂ.ಬಿ.ಪಾಟೀಲ್ ಷಡ್ಯಂತ್ರ ರಚಿಸಿದ್ರು ಎನ್ನಲಾಗಿದೆ. ಈ ಕಾರಣದಿಂದಲೇ ಶಿವಾನಂದ್ ಪಾಟೀಲ್ ಮತ್ತು ಯಶವಂತರಾಯ ಗೌಡ ಪಾಟೀಲ್ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ ಎಂದು ಪಬ್ಲಿಕ್ ಟಿವಿ ಮೂಲಗಳು ತಿಳಿಸಿವೆ.

  • ನನಗೆ ಡಿಸಿಎಂ ಸ್ಥಾನ ನೀಡುವುದು ರಾಹುಲ್ ಗಾಂಧಿಗೆ ಬಿಟ್ಟಿದ್ದು: ಜಿ.ಪರಮೇಶ್ವರ್

    ನನಗೆ ಡಿಸಿಎಂ ಸ್ಥಾನ ನೀಡುವುದು ರಾಹುಲ್ ಗಾಂಧಿಗೆ ಬಿಟ್ಟಿದ್ದು: ಜಿ.ಪರಮೇಶ್ವರ್

    ಬೆಂಗಳೂರು: ನನಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡೋದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಿರ್ಧರಿಸುತ್ತಾರೆ ಅಂತಾ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ತಿಳಿಸಿದ್ದಾರೆ.

    ಸಚಿವ ಖಾತೆಗಳ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳೆಲ್ಲಾ ಸುಳ್ಳು. ಇನ್ನೂ ಅದರ ಬಗ್ಗೆ ಯಾವುದೇ ಚರ್ಚೆಗಳು ಸಹ ನಡೆದಿಲ್ಲ. ಎಲ್ಲ ಶಾಸಕರು ಬೆಂಗಳೂರಿನಲ್ಲಿಯೇ ಇರಲಿದ್ದು, ನಾಳೆ ನಡೆಯುವ ಸಭೆಯಲ್ಲಿ ಸಚಿವ ಸ್ಥಾನದ ಬಗ್ಗೆ ಚರ್ಚೆಗಳು ನಡೆಯಲಿವೆ. ಸೋಮವಾರ ದೆಹಲಿಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಜೊತೆಯಲ್ಲಿ ಚರ್ಚೆಗಳು ನಡೆದ ಬಳಿಕವೇ ಡಿಸಿಎಂ ಸ್ಥಾನ ಮತ್ತು ಕುಮಾರಸ್ವಾಮಿ ಜೊತೆ ಯಾರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದು ಗೊತ್ತಾಗಲಿದೆ ಅಂತಾ ಸ್ಪಷ್ಟನೆ ನೀಡಿದ್ದಾರೆ.

    ಆರ್.ಆರ್.ನಗರ ಮತ್ತು ಜಯನಗರಗಳಲ್ಲಿ ನಾವು ಈಗಾಗಲೇ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದೇವೆ. ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕೋ ಅಥವಾ ಬೇಡ್ವಾ ಎಂಬುವು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ತಗೆದುಕೊಳ್ಳಲಿದೆ ಅಂತಾ ಹೇಳಿದ್ರು.

    ಈಗಾಗಲೇ ಒಕ್ಕಲಿಗ ಸಮುದಾಯದ ಕುಮಾರಸ್ವಾಮಿ ಸಿಎಂ ಆಗುತ್ತಿದ್ದಾರೆ. ಹೀಗಾಗಿ ಲಿಂಗಾಯತ ಸಮುದಾಯಕ್ಕೆ ಡಿಸಿಎಂ ಪಟ್ಟ ಕೊಡಲೇಬೇಕು. ಇಲ್ಲ ಎಂದರೆ ಕಾಂಗ್ರೆಸ್ ನಿಂದ ಲಿಂಗಾಯತರು ಶಾಶ್ವತವಾಗಿ ದೂರ ಆಗುತ್ತಾರೆ. ಜೊತೆಗೆ ಬಿ.ಎಸ್ ಯಡಿಯೂರಪ್ಪರನ್ನು ಇಳಿಸಿದ ಅಪಕೀರ್ತಿಗೆ ಕಾಂಗ್ರೆಸ್ ತುತ್ತಾಗುತ್ತೆ ಎಂದು ಲಿಂಗಾಯುತ ಸಮುದಾಯ ಹೇಳುತ್ತಿದೆ.

    ಅಪಕೀರ್ತಿಯನ್ನು ಸರಿದೂಗಿಸಲು ಶಾಮನೂರು ಶಿವಶಂಕರಪ್ಪ ಅಥವಾ ಎಂಬಿ ಪಾಟೀಲ್ ಇಬ್ಬರಲ್ಲಿ ಒಬ್ಬರನ್ನ ಡಿಸಿಎಂ ಮಾಡಬೇಕು. ದಲಿತ ಸಮುದಾಯದ ಜೊತೆಗೆ ಲಿಂಗಾಯತ ಸಮುದಾಯದ ಒಬ್ಬರನ್ನು ಉಪಮುಖ್ಯಮಂತ್ರಿ ಮಾಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಮುಂದೆ ಲಿಂಗಾಯತ ಸಮುದಾಯ ಬೇಡಿಕೆ ಇಟ್ಟಿದೆ ಎಂದು ಮಾಹಿತಿ ಲಭ್ಯವಾಗಿದೆ.