Tag: DCM

  • ಬೆಳ್ಳಂಬೆಳಗ್ಗೆ ಬಿಎಸ್‍ವೈ ಮನೆಗೆ ರಾಮುಲು ಭೇಟಿ

    ಬೆಳ್ಳಂಬೆಳಗ್ಗೆ ಬಿಎಸ್‍ವೈ ಮನೆಗೆ ರಾಮುಲು ಭೇಟಿ

    ಬೆಂಗಳೂರು: ಬಯಸಿದ ಖಾತೆ ಸಿಗದಿದ್ದಕ್ಕೆ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಬೆಳ್ಳಂಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಸಚಿವ ಶ್ರೀರಾಮುಲು ಭೇಟಿ ನೀಡಿದ್ದಾರೆ.

    ಲಕ್ಷ್ಮಣ್ ಸವದಿಗೆ ಡಿಸಿಎಂ ಖಾತೆ ನೀಡಿರುವುದಕ್ಕೆ ಶ್ರೀರಾಮುಲು ಬೇಸರಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಜೊತೆ ಸುಮಾರು ಅರ್ಧಗಂಟೆಯಿಂದ ಡಿಸಿಎಂ ವಿಚಾರವಾಗಿ ಶ್ರೀ ರಾಮುಲು ಚರ್ಚಿಸುತ್ತಿದ್ದಾರೆ. ಇತ್ತ ಸಿಎಂ ಕೂಡ ಹೈಕಮಾಂಡ್ ತೀರ್ಮಾನದ ಬಗ್ಗೆ ಸ್ಪಷ್ಟನೆ ಕೊಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ಅಷ್ಟೇ ಅಲ್ಲದೆ ವಾಲ್ಮೀಕಿ ಸಮುದಾಯದಲ್ಲಿ ಭುಗಿಲೆದ್ದ ಆಕ್ರೋಶದ ಬಗ್ಗೆ ಮತ್ತು ಸಚಿವ ಸಿ.ಟಿ ರವಿ ಹಾಗೂ ಮತ್ತು ಆರ್. ಅಶೋಕ್ ಅಸಮಾಧಾನದ ಬಗ್ಗೆಯೂ ಮಾತುಕತೆ ನಡೆಸುತ್ತಿದ್ದಾರೆ. ಶ್ರೀರಾಮುಲು ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ಹೊರಹಾಕಿದ್ದಾರೆ.

    ಶ್ರೀರಾಮುಲು ಒಬ್ಬರೇ ಡಿಸಿಎಂ ಹುದ್ದೆ ಬೇಡಿದ್ದರು. ಆದರೆ ಡಿಸಿಎಂ ಪಟ್ಟ ಕೇಳದವರಿಗೆ ನೀಡಲಾಗಿದೆ. 80ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಶ್ರೀರಾಮುಲು ಪ್ರಚಾರ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ. ಶ್ರೀರಾಮುಲು ಅವರೇ ದಯಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕೇವಲ ಶಾಸಕರಾಗಿರಿ. ಇಡೀ ವಾಲ್ಮೀಕಿ, ಎಸ್‍ಸಿ, ಎಸ್‍ಟಿ, ಓಬಿಸಿ ಸಮುದಾಯ ನಿಮ್ಮ ಬೆಂಬಲಕ್ಕಿದೆ ಎಂದು ಹೈಕಮಾಂಡ್ ವಿರುದ್ಧ ಕಿಡಿಕಾರಿದ್ದಾರೆ.

  • ಜನರ ನಿರೀಕ್ಷೆಗಳು ಏನೇ ಇರಲಿ, ನಾನು ಪಕ್ಷದ ತೀರ್ಮಾನಕ್ಕೆ ಬದ್ಧ: ಶ್ರೀರಾಮುಲು

    ಜನರ ನಿರೀಕ್ಷೆಗಳು ಏನೇ ಇರಲಿ, ನಾನು ಪಕ್ಷದ ತೀರ್ಮಾನಕ್ಕೆ ಬದ್ಧ: ಶ್ರೀರಾಮುಲು

    -ರಮೇಶ್ ಜಾರಕಿಹೋಳಿಗೆ ಡಿಸಿಎಂ ಸ್ಥಾನ ಕೊಟ್ಟರೂ ಓಕೆ

    ನವದೆಹಲಿ: ಜನರ ನಿರೀಕ್ಷೆಗಳು ಏನೇ ಇರಬಹುದು. ನಾವು ಕೂಡಾ ಪಕ್ಷದ ಒಂದು ಭಾಗ. ಹಾಗಾಗಿ ಪಕ್ಷದ ತೀರ್ಮಾನಕ್ಕೆ ನಾನು ಬದ್ಧ ಎಂದು ಬಿಜೆಪಿ ಸಚಿವ ಶ್ರೀರಾಮುಲು ಹೇಳಿದ್ದಾರೆ.

    ಇಂದು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ಡಿಸಿಎಂ ಆಗಬೇಕು ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಸುದ್ದಿ ಹರಿದಾಡುತಿದೆ. ವೈಯಕ್ತಿಕವಾಗಿ ನನಗೆ ಆಸೆಗಳಿರಬಹುದು. ಆದರೆ ನಾನು ಪಾರ್ಟಿ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.

    ರಾಷ್ಟ್ರೀಯ ಅಧ್ಯಕ್ಷರು ಮತ್ತು ಸಿಎಂ ಯಡಿಯೂರಪ್ಪ ಈ ವಿಚಾರದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು. ಪಕ್ಷದ ನಿರ್ಧಾರವೇ ಅಂತಿಮ ನಿರ್ಧಾರ. ಪಕ್ಷಕ್ಕಾಗಿ ಕಾಯ ವಾಚ ಮನಸ್ಸು ಕೆಲಸ ಮಾಡುತ್ತೇವೆ. ಸ್ಥಾನಮಾನಕ್ಕೆ ರಾಜಕೀಯ ಮಾಡಿಲ್ಲ, ಸಿದ್ಧಾಂತಕ್ಕಾಗಿ ರಾಜಕಾರಣ ಮಾಡುತ್ತಿದ್ದೇವೆ. ಪಕ್ಷಕ್ಕಾಗಿ ನಮ್ಮ ಆಸೆಗಳನ್ನು ಕುಗ್ಗಿಸಿಕೊಳ್ಳಬೇಕಾಗುತ್ತೆ ಎಂದು ಹೇಳಿದರು.

    ಅನರ್ಹ ಶಾಸಕ ರಮೇಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ಕೊಟ್ಟರೂ ಪಾರ್ಟಿ ತೀರ್ಮಾನಕ್ಕೆ ನಾನು ಬದ್ಧ. ನಮ್ಮ ಸ್ವಾರ್ಥಕ್ಕಾಗಿ ಪಕ್ಷಕ್ಕೆ ಇರಿಸು ಮುರಿಸು ಉಂಟು ಮಾಡಬಾರದು. 100% ಪಕ್ಷಕ್ಕಾಗಿ ನಾನು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಹೇಳಿದ್ದಾರೆ.

  • ರಮೇಶ್ ಜಾರಕಿಹೊಳಿ ಮಾಡಿದ್ದ ಪ್ರತಿಜ್ಞೆಗೆ ಭಗ್ನ

    ರಮೇಶ್ ಜಾರಕಿಹೊಳಿ ಮಾಡಿದ್ದ ಪ್ರತಿಜ್ಞೆಗೆ ಭಗ್ನ

    ಬೆಳಗಾವಿ: ಅನರ್ಹಗೊಂಡ ಆಪರೇಷನ್ ಕಮಲದ ನಾಯಕ ರಮೇಶ್ ಜಾರಕಿಹೊಳಿ ನಾನು ಉಪಮುಖ್ಯಮಂತ್ರಿ ಆಗದೇ ಬೆಳಗಾವಿ ಜಿಲ್ಲೆಗೆ ಕಾಲಿಡಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.

    ಬಿಜೆಪಿ ಸರ್ಕಾರದಲ್ಲಿ ನಾನು ಡಿಸಿಎಂ ಆಗೇ ಆಗುತ್ತೇನೆ. ಉಪಮುಖ್ಯಮಂತ್ರಿ ಆಗಿಯೇ ಬೆಳಗಾವಿ ಜಿಲ್ಲೆಗೆ ಕಾಲಿಡುವುದಾಗಿ ರಮೇಶ್ ಜಾರಕಿಹೊಳಿ ಆಪ್ತರ ಮುಂದೆ ಹೇಳಿ ಅತೃಪ್ತ ಶಾಸಕರ ಜೊತೆ ಮುಂಬೈ ಸೇರಿದ್ದರು. ಆದರೆ ರಮೇಶ್ ಜಾರಕಿಹೊಳಿ ಶಾಸಕತ್ವ ಇದೀಗ ಅರ್ನಹಗೊಂಡಿದೆ. ಶಾಸಕ ಸ್ಥಾನದಿಂದ ಒಮ್ಮೆ ಅರ್ನಹಗೊಂಡರೆ ಚುನಾವಣೆಯಲ್ಲಿ ಗೆದ್ದು ಬಂದ ನಂತರವಷ್ಟೇ ಸಚಿವ ಸ್ಥಾನ ಅಲಂಕರಿಸಬಹುದು. ಹೀಗಾಗಿ ರಮೇಶ್ ಜಾರಕಿಹೊಳಿ ಇದೀಗ ಏನು ಮಾಡುತ್ತಾರೆ ಅನ್ನೋದೆ ಕುತೂಹಲ ಮೂಡಿಸಿದೆ.

    ಅನರ್ಹಗೊಂಡ ಶಾಸಕರಿಗೆ ಸಚಿವ ಸ್ಥಾನ ಸೇರಿದಂತೆ ಯಾವುದೇ ಸರ್ಕಾರಿ ಹುದ್ದೆಗಳನ್ನು ಅನುಭವಿಸುವಂತಿಲ್ಲ. ಅಷ್ಟೇ ಅಲ್ಲದೆ ಡಿ.ಕೆ ಶಿವಕುಮಾರ್ ಬಳಿಯಿದ್ದ ಬೃಹತ್ ನೀರಾವರಿ ಖಾತೆ ಸಚಿವ ಸ್ಥಾನ ಸಹ ಅಲಂಕರಿಸಲು ಹಿನ್ನಡೆಯಾಗಿದೆ. ಹೀಗಾಗಿ ರಮೇಶ್ ಜಾರಕಿಹೊಳಿ ಮುಂದೇನು ಮಾಡುತ್ತಾರೆ ಅನ್ನೋದು ಇದೀಗ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

    ಗುರುವಾರ ಸಂಜೆ ಸ್ಪೀಕರ್ ರಮೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ, ರಾಣೇಬೆನ್ನೂರು ಶಾಸಕ ಆರ್.ಶಂಕರ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮೂವರನ್ನು ಅನರ್ಹಹೊಳಿಸಿ ಅದೇಶಿಸಿದ್ದರು. ಇನ್ನುಳಿದ ರಾಜೀನಾಮೆ ನೀಡಿರುವ ಶಾಸಕರ ಪ್ರಕರಣಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಸವಿವರವಾಗಿ ಮಾಹಿತಿ ನೀಡುತ್ತೇನೆ. ಅನರ್ಹಗೊಂಡಿರುವ ಶಾಸಕರು 15 ವಿಧಾನಸಭೆ ಅವಧಿ ಅಂದರೆ 3 ವರ್ಷ 10 ತಿಂಗಳು ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂಬುದನ್ನು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದರು.

  • ಶ್ರೀರಾಮುಲುಗೆ ಡಿಸಿಎಂ ಪಟ್ಟ ನೀಡುವಂತೆ ಅಭಿಮಾನಿಗಳಿಂದ ಪೋಸ್ಟ್

    ಶ್ರೀರಾಮುಲುಗೆ ಡಿಸಿಎಂ ಪಟ್ಟ ನೀಡುವಂತೆ ಅಭಿಮಾನಿಗಳಿಂದ ಪೋಸ್ಟ್

    ಬಳ್ಳಾರಿ: ಸುಪ್ರೀಂ ಕೋರ್ಟಿನಿಂದ ಮಧ್ಯಂತರ ಆದೇಶ ಪ್ರಕಟವಾಗುತ್ತಿದ್ದಂತೆ ಬಿಜೆಪಿ ನಾಯಕರು ಸರ್ಕಾರ ರಚಿಸುವ ಕನಸು ಕಾಣುತ್ತಿದ್ದಾರೆ. ಈ ಮಧ್ಯೆ ಸರ್ಕಾರ ರಚನೆಯಾದರೆ ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಶಾಸಕ ಶ್ರೀರಾಮುಲುಗೆ ಡಿಸಿಎಂ ಪಟ್ಟ ನೀಡುವಂತೆ ಅಭಿಮಾನಿಗಳಿಂದ ಪೋಸ್ಟ್ ಅಭಿಯಾನ ಶುರುವಾಗಿದೆ.

    ಬಳ್ಳಾರಿಯಲ್ಲಿ ಶಾಸಕ ಶ್ರೀರಾಮುಲು ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಅಭಿಯಾನ ಶುರುವಾಗಿದ್ದು, ಗುರುವಾರ ರಾಜ್ಯ ಸಮ್ಮಿಶ್ರ ಸರ್ಕಾರ ಬಹುಮತ ಸಾಬೀತು ಮಾಡಲು ವಿಫಲವಾಗುತ್ತದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ ಎನ್ನುವ ವಿಶ್ವಾಸವನ್ನು ಬಿಜೆಪಿಗರು ವ್ಯಕ್ತಪಡಿಸಿದ್ದಾರೆ.

    2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶ್ರೀರಾಮುಲು ಸಂಸದರಾಗಿದ್ದರು. ಬಳಿಕ ಶ್ರೀರಾಮುಲು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

    ರಾಜ್ಯದ ಪ್ರಭಾವ ಬಿಜೆಪಿ ನಾಯಕರಾಗಿರುವ ಶ್ರೀರಾಮುಲು ಅವರನ್ನು ಡಿಸಿಎಂ ಮಾಡುವಂತೆ ಅಭಿಮಾನಿಗಳು ಪಟ್ಟು ಹಿಡಿದಿದ್ದರು. ಆದರೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಅಭಿಮಾನಿಗಳ ಆಸೆ ಕಮರಿ ಹೋಗಿತ್ತು. ಆದರೆ ಈಗ ಸುಪ್ರೀಂ ಕೋರ್ಟ್ ತೀರ್ಪು ಬಂದ ತಕ್ಷಣ ಅಭಿಮಾನಿಗಳ ಕನಸು ಮತ್ತೆ ಮೊಳಕೆಯೊಡೆದಿದೆ.

    ಶಾಸಕ ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿ ಮಾಡಲು ಎಲ್ಲಾ ಗ್ರೂಪ್‍ಗಳಿಗೆ ಶೇರ್ ಮಾಡುವಂತೆ ಶ್ರೀರಾಮುಲು ಬೆಂಬಲಿಗರು ಪೋಸ್ಟ್ ಹಾಕುತ್ತಿದ್ದಾರೆ.

  • ಡಿಕೆಶಿ ನಂತ್ರ ಡಿಸಿಎಂ ಸರದಿ- ಆನಂದ್ ಸಿಂಗ್ ಸಂಪರ್ಕಿಸುವ ಪ್ರಯತ್ನ ಮಾಡಿಲ್ಲ ಅಂದ್ರು ಪರಮೇಶ್ವರ್

    ಡಿಕೆಶಿ ನಂತ್ರ ಡಿಸಿಎಂ ಸರದಿ- ಆನಂದ್ ಸಿಂಗ್ ಸಂಪರ್ಕಿಸುವ ಪ್ರಯತ್ನ ಮಾಡಿಲ್ಲ ಅಂದ್ರು ಪರಮೇಶ್ವರ್

    – ದಿನೇಶ್ ಗುಂಡೂರಾವ್ ಗೆ ಪರೋಕ್ಷ ಟಾಂಗ್
    – ಶಾಸಕರು ಮೀಡಿಯಾ ಮುಂದೆ ಬಹಿರಂಗಪಡಿಸಬೇಡಿ

    ಬೆಂಗಳೂರು: ಅತೃಪ್ತರನ್ನು ಕಾಂಗ್ರೆಸ್ ಕೈಬಿಟ್ಟಂತೆ ಕಾಣುತ್ತಿದೆ. ಯಾಕಂದರೆ ಇತ್ತೀಚೆಗಷ್ಟೇ ಸಚಿವ ಡಿಕೆಶಿವಕುಮಾರ್, ನಾವು ರಾಜೀನಾಮೆ ನೀಡುವವರನ್ನು ತಡೆಯುವುದಿಲ್ಲ. ಅವರ ಮನವೊಲಿಸುವ ಕೆಲಸಕ್ಕೂ ಕೈ ಹಾಕಲ್ಲ ಎಂದಿದ್ದರು. ಇದೀಗ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರು ಕೂಡ ಶಾಸಕ ಆನಂದ್ ಸಿಂಗ್ ಸಂಪರ್ಕಿಸುವ ಪ್ರಯತ್ನ ನಾನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಿವರ್ಸ್ ಆಪರೇಷನ್ ವಿಚಾರವನ್ನ ದಿನೇಶ್ ಗುಂಡೂರಾವ್ ಅವರನ್ನೇ ಕೇಳಿ. ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷರಲ್ವಾ ಎಂದು ಪ್ರಶ್ನಿಸಿದರು. ಅಲ್ಲದೆ ಅವರು ಹೇಳಿದ್ರೆ ಒಂದು ರೀತಿಯ ವಿಶೇಷ ಅರ್ಥ ಇರುತ್ತದೆ ಎಂದು ಹೇಳಿ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.

    ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ನಮಗೆ ಆಘಾತ ತಂದಿದೆ. ಮುಂದಿನ ವಾರ ನಾನು ದೆಹಲಿಗೆ ಹೋಗಿ ರಾಹುಲ್ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸುವುದಾಗಿ ತಿಳಿಸಿದರು. ಅಲ್ಲದೆ ಶಾಸಕ ಆನಂದ್ ಸಿಂಗ್ ಸಂಪರ್ಕಿಸುವ ಪ್ರಯತ್ನ ನಾನು ಮಾಡಿಲ್ಲ. ಒಂದು ಹಂತದವರೆಗೆ ಅತೃಪ್ತರನ್ನು ಮನವೊಲಿಸಬಹುದು. ಆ ಹಂತ ದಾಟಿದ ಮೇಲೆ ಅವರ ನಿರ್ಧಾರ ಅವರಿಗೆ ಬಿಟ್ಟಿದ್ದು ಎಂದು ಖಡಕ್ ಆಗಿ ಹೇಳಿದ್ದಾರೆ.

    ಸಿಎಂ ಅಮೇರಿಕ ಪ್ರವಾಸ ಮುಗಿಸಿ ಬಂದ ಬಳಿಕ ಜೆಡಿಎಸ್ ಕಾಂಗ್ರೆಸ್ ಶಾಸಕರೊಂದಿಗೆ ಚರ್ಚೆ ನಡೆಸುತ್ತೇವೆ. ನಾನು ಸಿಎಂ ಇಬ್ಬರು ಒಬ್ನೊಬ್ಬರೇ ಶಾಸಕರನ್ನ ಕರೆದು ಅವರ ಸಮಸ್ಯೆಗಳ ಬಗ್ಗೆ ಪ್ರತ್ಯೇಕ ಮಾತುಕತೆ ನಡೆಸುತ್ತೇವೆ. ಈ ಹಿಂದೆ ಜೆಡಿಎಸ್ ಕಾಂಗ್ರೆಸ್ ಜಂಟಿ ಶಾಸಕಾಂಗ ಸಭೆ ನಡೆಸುವ ಬಗ್ಗೆ ತೀರ್ಮಾನಿಸಿದ್ದೆವು. ಆದರೆ ಸಿಎಲ್‍ಪಿ (ಕಾಂಗ್ರೆಸ್ ಶಾಸಕಾಂಗ ಸಭೆ) ಯಲ್ಲಿ ಶಾಸಕರು ತಮ್ಮ ಎಲ್ಲ ಸಮಸ್ಯೆಗಳನ್ನ ಹೇಳಿಕೊಳ್ಳಲು ಆಗಲ್ಲ. ಪ್ರತ್ಯೇಕವಾಗಿಯೇ ಶಾಸಕರ ಜೊತೆ ಮಾತಾಡಲು ನಾನು ಸಿಎಂ ನಿರ್ಧರಿಸಿದ್ದೇವೆ ಎಂದರು.

    ಇದೇ ವೇಳೆ ಶಾಸಕರು ಬಹಿರಂಗವಾಗಿ ಮಾಧ್ಯಮಗಳಿಗೆ ಮಾತಾಡೋದು ಬೇಡ. ಅವರ ಸಮಸ್ಯೆಗಳು, ಭಿನ್ನಾಭಿಪ್ರಾಯಗಳನ್ನ ನಮ್ಮ ಎದುರೇ ಹೇಳಿಕೊಳ್ಳಲಿ ಎಂದು ಮನವಿ ಮಾಡಿಕೊಂಡರು.

  • 4 ದಿನದ ಗ್ರಾಮವಾಸ್ತವ್ಯಕ್ಕೆ ಸುಸ್ತಾಗಿ ಸಿಎಂ ಅಮೆರಿಕ ಪ್ರಯಾಣ – ದುರ್ಯೋಧನ ಐಹೊಳೆ

    4 ದಿನದ ಗ್ರಾಮವಾಸ್ತವ್ಯಕ್ಕೆ ಸುಸ್ತಾಗಿ ಸಿಎಂ ಅಮೆರಿಕ ಪ್ರಯಾಣ – ದುರ್ಯೋಧನ ಐಹೊಳೆ

    – ಸಿಎಂ ಮಾನಸಿಕ ಸ್ಥಿತಿ ಸರಿಯಿಲ್ಲದ್ದಕ್ಕೆ ಬಿಜೆಪಿ ಮೇಲೆ ಆರೋಪ
    – ತಂದೆ, ಮಗ ಸೋತಿದ್ದಕ್ಕೆ ಸಿಟ್ಟು

    ಬೆಳಗಾವಿ: ನಾಲ್ಕು ದಿನ ಗ್ರಾಮವಾಸ್ತವ್ಯ ಮಾಡಿ ಈಗ ರೆಸ್ಟ್ ಮಾಡಲು ಅಮೆರಿಕಕ್ಕೆ ಸಿಎಂ ಹೋಗುತ್ತಿದ್ದಾರೆ ಎಂದು ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ವ್ಯಂಗ್ಯವಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂಗೆ ಇಲ್ಲಿ ಇದ್ದರೆ ವಿಶ್ರಾತಿ ಸಿಗುವುದಿಲ್ಲ. ಹೀಗಾಗಿ ಅಮೆರಿಕಕ್ಕೆ ರೆಸ್ಟ್ ಪಡೆಯಲು ಹೋಗುತ್ತಿದ್ದಾರೆ. ಎಂಟು ದಿನ ಗ್ರಾಮ ವಾಸ್ತವ್ಯ ಮಾಡಿದ್ದಕ್ಕೆ ಸುಸ್ತಾಗಿದ್ದಾರೆ. ಅವರ ಆರೋಗ್ಯ ಸರಿಯಿಲ್ಲ, ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಖಾಯಂ ರೆಸ್ಟ್ ತೆಗೆದುಕೊಳ್ಳುವುದು ಉತ್ತಮ ಎಂದು ತಿಳಿಸಿದರು. ಇದನ್ನೂ ಓದಿ:ಇಂದು ರಾತ್ರಿ ಅಮೆರಿಕಾಗೆ ಸಿಎಂ- ನನ್ನ ದುಡ್ಡಲ್ಲಿ ಫಾರಿನ್ ಟ್ರಿಪ್ ಎಂದ ಮುಖ್ಯಮಂತ್ರಿ

    ಕೇಂದ್ರದಲ್ಲಿ ಬಿಜೆಪಿ ಗೆದ್ದು ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಿದಕ್ಕೆ, ಅವರ ಮಗ ಚುನಾವಣೆ ಸೋತಿದ್ದಕ್ಕೆ ಸಿಎಂ ಮಾನಸಿಕ ಸ್ಥಿತಿ ಸರಿಯಿಲ್ಲ. ಅದಕ್ಕೆ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.

    ಗ್ರಾಮ ವಾಸ್ತವ್ಯಕ್ಕೆ ಬಿಜೆಪಿ ಅಡ್ಡಿ ಮಾಡುವ ಪ್ರಯತ್ನ ಮಾಡುತ್ತಿದೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಗ್ರಾಮವಾಸ್ತವ್ಯ ತಡೆಯುವ ಕೆಲಸ ನಾವು ಮಾಡಿಲ್ಲ. ಕೇಂದ್ರದಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸೀಟು ಗೆದ್ದು ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಿದಕ್ಕೆ, ಅವರ ಮಗ ಚುನಾವಣೆ ಸೋತಿದ್ದಕ್ಕೆ ಸಿಎಂ ಮಾನಸಿಕ ಸ್ಥಿತಿ ಸರಿಯಿಲ್ಲ. ಅದಕ್ಕೆ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ:ಕೆಲಸ ಮಾಡೋರಿಗೆ ಓಟು ಹಾಕಿ, ನಿದ್ದೆ ಮಾಡೋರಿಗೆ ಓಟು ಹಾಕಬೇಡಿ ಅಂದಿದ್ದೆ – ಸಿದ್ದರಾಮಯ್ಯ

    ಯಾರು ಸರ್ಕಾರ ನಡೆಸುತ್ತಿರಿ ನಡೆಸಿ ಎಂದು ಹೇಳಿ ರಾಜೀನಾಮೆ ಕೊಡುವುದು ಒಳ್ಳೆಯದು. ನೀವು 105 ಸೀಟ್ ಗೆದ್ದಿದ್ದೀರಿ ಎಂದು ಬಿಜೆಪಿ ಅವರಿಗೆ ಹೇಳಿ ಬಿಟ್ಟು ಕೊಡಬೇಕು. ಎಲ್ಲಾ ಜಿಲ್ಲೆಗಳಲ್ಲಿ ಬರಗಾಲ ಇದ್ದಾಗ ಸಿಎಂ ಹೊರಗೆ ಬರಲಿಲ್ಲ. ಈಗ ಮಾನ್ಸೂನ್ ಆರಂಭವಾಗಿದೆ. ಈಗ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ದೇವೆಗೌಡರು ಬಿಜೆಪಿ ಮೇಲೆ ಗೂಬೆ ಕುರಿಸುವ ಕೆಲಸ ಮಾಡುತ್ತಾರೆ. ಕಾಂಗ್ರೆಸ್ ಜೆಡಿಎಸ್ ಕಚ್ಚಾಟ ಆರಂಭವಾಗಿದ್ದ ಅದನ್ನ ನಮ್ಮ ಮೇಲೆ ಹಾಕಿ ಹೇಳುತ್ತಾರೆ. ಕಾಂಗ್ರೆಸ್ ಮೇಲೆ ಗೂಬೆ ಕುರಿಸಿದರೆ ಮಗನ ಸಿಎಂ ಸ್ಥಾನ ಹೋಗುತ್ತೆ ಅಂತ ನಮ್ಮ ಮೇಲೆ ಆರೋಪ ಹಾಕಿ ಕಾಂಗ್ರೆಸ್ ನವರಿಗೆ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

    ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಬಿಜೆಪಿಗೆ ವೋಟ್ ಹಾಕಿ ನಮ್ಮ ಬಳಿ ಕೆಲಸ ಹೇಳುತ್ತೀರಾ ಎಂದ ಹೇಳಿಕೆ ಹಾಗೂ ಡಿಸಿಎಂ ಪರಮೇಶ್ವರ್ ಬಿಜೆಪಿ ವಿರುದ್ಧ ಆಡಿದ ಮಾತಿಗೆ ಬಿಜೆಪಿ ಶಾಸಕ ಮಾತಿನ ಚಾಟಿ ಬೀಸಿದರು. ಸಿದ್ದರಾಮಯ್ಯ, ಡಿಸಿಎಂ ಕೂಡ ಲೋಕಸಭಾ ಚುನಾವಣೆಯಲ್ಲಿ ತಮಗೆ 1 ಸೀಟು ಮಾತ್ರ ಬಂದಿದೆ ಎಂದು ಮಾನಸಿಕ ಸ್ಥಿತಿ ಕಳೆದುಕೊಂಡಿದ್ದಾರೆ. ಅದಕ್ಕೆ ಈ ರೀತಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.

    ರಮೇಶ್ ಜಾರಕಿಹೊಳಿ ನಮ್ಮ ಸಂಪರ್ಕದಲ್ಲಿ ಇಲ್ಲ. ರಾಜ್ಯದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಸರ್ಕಾರ ಬರುತ್ತದೆ. ಇನ್ನೂ ಎರಡು ತಿಂಗಳು ಕಾಲ ತೆಗೆದುಕೊಳ್ಳುತ್ತದೆ. ಸಪ್ಟೆಂಬರ್ ನಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬರುತ್ತೆ. ಕಾಂಗ್ರೆಸ್-ಜೆಡಿಎಸ್ ಕಚ್ಚಾಡಿ ಸರ್ಕಾರ ಬಿದ್ದು, ನಾವು ಸರ್ಕಾರ ರಚನೆ ಮಾಡುತ್ತೇವೆ. ಡಿಸೆಂಬರ್ ನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಸುತ್ತದೆ ದುರ್ಯೋಧನ ಐಹೊಳೆ ವಿಶ್ವಾಸ ವ್ಯಕ್ತಪಡಿಸಿದರು.

  • ಬೆಂಗ್ಳೂರಿನಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ತಡೆ ಹಾಕಲು ಸರ್ಕಾರ ಚಿಂತನೆ

    ಬೆಂಗ್ಳೂರಿನಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ತಡೆ ಹಾಕಲು ಸರ್ಕಾರ ಚಿಂತನೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ 5 ವರ್ಷ ನಗರದಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ತಡೆ ಹೇರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಡಿಸಿಎಂ ಜಿ. ಪರಮೇಶ್ವರ್ ತಿಳಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತಮನಾಡಿದ ಅವರು, ಅಪಾರ್ಟ್‌ಮೆಂಟ್‌ ಸಂಸ್ಕೃತಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿರುವ ಬಗ್ಗೆ ತಿಳಿಸಿದರು. ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ ಗಳ ನಿರ್ಮಾಣಕ್ಕೆ ತಡೆ ಹಾಕಲು ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಅಪಾರ್ಟ್‌ಮೆಂಟ್‌ ಗಳಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಕುಡಿಯುವ ನೀರಿನ ಪೂರೈಕೆಯಲ್ಲಿ ಕೊರತೆಯಾಗುತ್ತಿದ್ದು, ಅಪಾರ್ಟ್‍ಮೆಂಟ್‍ ಗಳಿಗೆ ಕುಡಿಯುವ ನೀರು ಪೂರೈಸಲು ಕಷ್ಟವಾಗುತ್ತಿದೆ. ನಗರದಲ್ಲಿ ಇರುವ ನೀರಿನ ಕೊರತೆಯಿಂದ ಅಪಾರ್ಟ್‌ಮೆಂಟ್‌ ಗಳ ನಿರ್ಮಾಣಕ್ಕೆ ಕಡಿವಾಣ ಹಾಕಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಹೇಳಿದರು.

    ಇಂದು ಬೆಂಗಳೂರಿನಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸುವ ಮುನ್ನ ಸಾರಿಗೆ ನೌಕರರ ಮುಖಂಡರು ಸರ್ಕಾರಕ್ಕೆ ಬೇಡಿಕೆಗಳ ಈಡೇರಿಕೆಗೆ ಡಿಸಿಎಂಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಸದಾಶಿವನಗರದ ಡಿಸಿಎಂ ಗೃಹಕಚೇರಿಗೆ ಆಗಮಿಸಿದ ಸಿಐಟಿಯು ಉಪಾಧ್ಯಕ್ಷ ಅನಂತ ಸುಬ್ಬರಾವ್, ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ನೇತೃತ್ವದ ನಿಯೋಗದಿಂದ ಡಿಸಿಎಂಗೆ ಮನವಿ ಸಲ್ಲಿಸಲಾಗಿದೆ.

    ಸಾರಿಗೆ ನೌಕರರ ಮನವಿ ಸ್ವೀಕಾರ ಬಳಿಕ ಡಿಸಿಎಂ ಅವರು ಮಾತನಾಡಿ,  ಕೆಎಸ್ಆರ್‌ಟಿಸಿ  ವರ್ಕರ್ಸ್ ಫೆಡರೇಷನ್ ಅವರು ಅನೇಕ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಅವರ ಮನವಿಯನ್ನು ಸಿಎಂ ಮತ್ತು ಸಾರಿಗೆ ಸಚಿವರ ಗಮನಕ್ಕೆ ತರುತ್ತೇನೆ. ಸಾರಿಗೆ ಸಚಿವರ ವಿರುದ್ಧವೂ ಮುಖಂಡರು ಆರೋಪ ಮಾಡಿದ್ದಾರೆ. ಅದನ್ನೂ ಕೂಡ ಸಿಎಂ ಗಮನಕ್ಕೆ ತರುತ್ತೇನೆ. ಕೆಎಸ್‍ಆರ್‍ಟಿಸಿಗೆ ನಷ್ಟ ಆಗದಂತೆ ಸಾರಿಗೆ ಅನುಕೂಲ ಮಾಡುತ್ತೇವೆ ಎಂದು ಭರವಸೆ ನೀಡಿದರು.

    ಸ್ಟೀಲ್ ಫ್ಲೈಓವರ್ ಮಾಡಲ್ಲ ಎಂದು ಸರ್ಕಾರದಿಂದ ಹೈಕೋರ್ಟ್‍ಗೆ ಪ್ರಮಾಣಪತ್ರ ಸಲ್ಲಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, 2016 ರಲ್ಲೇ ಸರ್ಕಾರ ಈ ಯೋಜನೆ ನಿಲ್ಲಿಸುವ ತೀರ್ಮಾನ ಮಾಡಿತ್ತು. ಅದಾದ ಮೇಲೆ ನಾನು ಮತ್ತೆ ಪ್ರಸ್ತಾಪ ಮಾಡಿದ್ದೆ. ಸ್ಟೀಲ್ ಫ್ಲೈಓವರ್ ಬೇಡವಾದರೆ ಬೇರೆ ಪರ್ಯಾಯ ಮಾರ್ಗ ಬೇಕಲ್ಲ? ಸ್ಟೀಲ್ ಫ್ಲೈಓವರ್ ಬದಲು ಎಲಿವೇಟೆಡ್ ರಸ್ತೆ ಮಾಡುವ ಪ್ರಸ್ತಾಪವೂ ಇದೆ. ಈ ಕುರಿತು ಪರಿಶೀಲನೆ ನಡಿಯುತ್ತಿದೆ. ಪರಿಶೀಲಿಸಿ ಸಮಗ್ರ ಯೋಜನಾ ವರದಿ(ಡಿಪಿಆರ್) ಮಾಡುವ ಬಗ್ಗೆ ತೀರ್ಮಾನ ತೆಗೆಕೊಳ್ಳುತ್ತೇವೆ. ಎಲಿವೇಟೆಡ್ ರಸ್ತೆಗೂ ವಿರೋಧ ಇದೆ. ಆದರೆ ಸರ್ಕಾರ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮುಂದಾಗಬೇಕಲ್ಲ? ಜನರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

    ಸೋಲಿಗೆ ಮೈತ್ರಿ ಕಾರಣವೆಂದು ಕಾಂಗ್ರೆಸ್ ನಾಯಕ ಕೆ.ಸಿ ವೇಣುಗೋಪಾಲ್‍ಗೆ ಪರಾಜಿತ ಅಭ್ಯರ್ಥಿಗಳ ದೂರು ನೀಡಿರುವ ವಿಚಾರವಾಗಿ ಮಾತನಾಡಿ, ಸೋತ ಅಭ್ಯರ್ಥಿಗಳು ವೇಣುಗೋಪಾಲ್ ಅವರ ಮುಂದೆ ಹಲವು ಕಾರಣಗಳನ್ನು ಹೇಳಿದ್ದಾರೆ. ಸೋಲಿಗೆ ಮೈತ್ರಿಯೂ ಕಾರಣ ಎಂದು ಕೆಲವರು ಅಂದಿದ್ದಾರೆ. ವೇಣುಗೋಪಾಲ್ ಅವರು ಸೋತವರ ಅಭಿಪ್ರಾಯಗಳನ್ನು ಸಂಗ್ರಹ ಮಾಡಿದ್ದಾರೆ. ಈ ವಿಚಾರ ವರಿಷ್ಠರ ಮಟ್ಟದಲ್ಲಿ ತೀರ್ಮಾನ ಆಗುತ್ತದೆ ಎಂದು ಹೇಳಿದರು.

    ನಂತರ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಬರುವುದಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಮಧ್ಯಂತರ ಚುನಾವಣೆ ಬರಲು ಸಾಧ್ಯವಿಲ್ಲ. ಕೆಲವರು ಅಂತಹ ಹೇಳಿಕೆಗಳನ್ನು ಕೊಡುತ್ತಾರೆ, ಅದೆಲ್ಲ ಸ್ವಾಭಾವಿಕ. ಆದರೆ ಎರಡೂ ಪಕ್ಷಗಳೂ ಸರ್ಕಾರವನ್ನು ಉತ್ತಮವಾಗಿ ನಡೆಸಲು ತೀರ್ಮಾನಿಸಿದ್ದೇವೆ. ಮಧ್ಯಂತರ ಚುನಾವಣೆ ಬಗ್ಗೆ ಪಕ್ಷದ ಮಟ್ಟದಲ್ಲಿ ಚರ್ಚೆ ನಡಿಯುತ್ತಿಲ್ಲ. ವೈಯಕ್ತಿಕ ಹೇಳಿಕೆಗಳನ್ನು ಕೆಲವರು ಕೊಡುತ್ತಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯಗಳು ಎಂದು ಸ್ಪಷ್ಟಪಡಿಸಿದರು.

    ಕೊನೆಗೆ ಅಗತ್ಯ ಇದ್ದರೆ ನಾನು ಸಹ ಗ್ರಾಮವಾಸ್ತವ್ಯ ಮಾಡುತ್ತೇನೆ. ನಗರದಲ್ಲೂ ಕೊಳಚೆ ಪ್ರದೇಶಗಳಲ್ಲಿ ವಾಸ್ತವ್ಯ ಮಾಡೋಣ ಅದಕ್ಕೇನು? ಜನರ ಸಮಸ್ಯೆ ಎಲ್ಲಿದೆ ಅಲ್ಲಿ ಹೋಗಿ ಬಗೆಹರಿಸುವ ಕೆಲಸ ಮಾಡುತ್ತೇವೆ. ನಾನು ಈಗಾಗಲೇ ಜನಸ್ಪಂದನ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇನೆ ಎಂದರು.

  • ನನ್ನ ವಿರುದ್ಧ ಸುಳ್ಳು ಸುದ್ದಿ ಮಾಡಿದವರನ್ನು ಸುಮ್ಮನೆ ಬಿಡಲ್ಲ: ಡಿಸಿಎಂ ಕಿಡಿ

    ನನ್ನ ವಿರುದ್ಧ ಸುಳ್ಳು ಸುದ್ದಿ ಮಾಡಿದವರನ್ನು ಸುಮ್ಮನೆ ಬಿಡಲ್ಲ: ಡಿಸಿಎಂ ಕಿಡಿ

    ತುಮಕೂರು: ಸಿಎಂ ಆಯ್ತು ಈಗ ಡಿಸಿಎಂ ಸರದಿ. ಡಿಸಿಎಂ ಜಿ.ಪರಮೇಶ್ವರ್ ಕೂಡಾ ಮಾಧ್ಯಮದವರ ಮೇಲೆ ಕಿಡಿಕಾರಿದ್ದಾರೆ. ನನ್ನ ವಿರುದ್ಧ ಸುಳ್ಳು ಸುದ್ದಿ ಮಾಡಿದವರನ್ನು ಸುಮ್ಮನೆ ಬಿಡಲ್ಲ ಎಂದು ಕಿಡಿಕಾರಿದ್ದಾರೆ.

    ಭಾನುವಾರ ಕೊರಟಗೆರೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಮಾಧ್ಯಮದವರು ನಮ್ಮ ಜೊತೆನೆ ಇರುತ್ತಾರೆ, ಜೊತೆಯಲ್ಲಿ ಕಾಫಿ ಕುಡಿತಾರೆ, ಊಟ ಮಾಡ್ತಾರೆ ಹಾಗೂ ನಗುನಗುತ್ತಾ ಇರುತ್ತಾರೆ. ಆದರೂ ನಮ್ಮ ವಿರುದ್ಧವಾಗಿ ಸುದ್ದಿ ಮಾಡ್ತಾರೆ ಎಂದು ಕಿಡಿಕಾರಿದ್ದಾರೆ.

    ಯಾವ ಮಾಧ್ಯಮದವರು ಆ ಸುದ್ದಿಯನ್ನು ಕೊಟ್ಟಿದ್ದಾರೆ. ನನಗೆ ಮಾಹಿತಿ ನೀಡಿ ಎಂದು ಕೇಳಿದೆ. ಏಕೆಂದರೆ ಅವರು ಸುಳ್ಳು ಸುದ್ದಿ ಕೊಟ್ಟರೆ ನಾನು ಸುಮ್ಮನಿರಲ್ಲ. ನನ್ನ ತಪ್ಪು ಇದ್ದರೆ ಹೇಳಿ ತಿದ್ದಿಕೊಳ್ಳುತ್ತೇನೆ. ದಯವಿಟ್ಟು ಯಾರದ್ದೋ ತಪ್ಪನ್ನು ನನ್ನ ತಲೆಗೆ ಕಟ್ಟಿ ಅವಮಾನ ಮಾಡುವ ರೀತಿ ಮಾಡಬೇಡಿ. ನಾವು ಸಾರ್ವಜನಿಕರ ಬದುಕಿನಲ್ಲಿ ಹತ್ತಾರು ವರ್ಷ ನಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಂಡು ಬರುತ್ತೇವೆ. ಅದನ್ನು ನೀವು 2 ನಿಮಿಷದಲ್ಲೇ ಮಾನ ಹರಾಜು ಮಾಡಬೇಡಿ. ಇದು ನನ್ನ ಮನವಿ ಎಂದರು.

    ಆರಂಭದಲ್ಲಿ ವಿರುದ್ಧ ಸುದ್ದಿ ಮಾಡಿದವರಿಗೆ ಸುಮ್ಮನೆ ಬಿಡಲ್ಲ ಎಂದಿದ್ದ ಡಿಸಿಎಂ ಬಳಿಕ ಮನವಿ ಎಂದು ಸಮಾಧಾನ ಮಾಡಿದರು. ಡಿಸಿಎಂ ತೆರಳುವ ದಾರಿಯಲ್ಲಿದ್ದ ಬಿಜೆಪಿ ಬಾವುಟ ತೆರವುಗೊಳಿಸುವಂತೆ ಕೆಸ್ತೂರು ಪಿಡಿಒ ಬಿಜೆಪಿ ಕಾರ್ಯಕರ್ತನಿಗೆ ನೋಟಿಸ್ ನೀಡಿದ್ದ ಸುದ್ದಿ ಸುಳ್ಳು ಎನ್ನುವುದು ಡಿಸಿಎಂ ವಾದವಾಗಿತ್ತು. ಪಿಡಿಒ ಕೊಟ್ಟಿರುವ ನೋಟಿಸ್ ಪ್ರತಿ, ಪಿಡಿಒ ವನಜಾಕ್ಷಿ ಹೇಳಿಕೆಯ ಬೈಟ್ ಸಾಕ್ಷ್ಯ ಇದ್ದರೂ ಈ ಸುದ್ದಿ ಸುಳ್ಳು ಎಂದು ಜಿ. ಪರಮೇಶ್ವರ ತೀರ್ಮಾನಕ್ಕೆ ಬಂದು ಈ ರೀತಿ ಹೇಳಿಕೆ ಕೊಟ್ಟಿದ್ದಾರೆ.

  • ತಮ್ಮನ ಸರ್ಕಾರದಲ್ಲಿ ಅಣ್ಣ ಆಡಿದ್ದೇ ಆಟ- ರೇವಣ್ಣ ವಿರುದ್ಧ ಡಿಸಿಎಂ ಗರಂ

    ತಮ್ಮನ ಸರ್ಕಾರದಲ್ಲಿ ಅಣ್ಣ ಆಡಿದ್ದೇ ಆಟ- ರೇವಣ್ಣ ವಿರುದ್ಧ ಡಿಸಿಎಂ ಗರಂ

    ಬೆಂಗಳೂರು: ಸೂಪರ್ ಸಿಎಂ ಎಚ್.ಡಿ ರೇವಣ್ಣ ವಿರುದ್ಧ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಗರಂ ಆಗಿದ್ದಾರೆ. ಎಲಿವೆಟೇಡ್ ಕಾರಿಡಾರ್ ವಿಷಯದಲ್ಲಿ ರೇವಣ್ಣ ಅವರನ್ನು ಡಿಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಮಂಗಳವಾರ ನಡೆದ ಸಭೆಯಲ್ಲಿ ಸಿಎಂ ಸಮ್ಮುಖದಲ್ಲಿಯೇ ರೇವಣ್ಣಗೆ ಡಿಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾರ ಅಭಿಪ್ರಾಯವೂ ಪಡೆಯದೆ ಎಲಿವೆಟೇಡ್ ಕಾರಿಡಾರ್ ಕಾಮಗಾರಿಗೆ ರೇವಣ್ಣ ಮುಂದಾಗಿದ್ದರು. ರೇವಣ್ಣ ಅವರ ಈ ವರ್ತನೆಗೆ ಡಿಸಿಎಂ ಪರಮೇಶ್ವರ್ ಫುಲ್ ಗರಂ ಆಗಿದ್ದಾರೆ.

    ಅದು ಹೇಗ್ರಿ ನೀವು ಒಬ್ಬರೇ ಅದನ್ನು ಮಾಡುತ್ತೀರಾ, ನೀವು ಪಿಡಬ್ಲ್ಯೂಡಿ ಸಚಿವರಾಗಿದ್ದು ಹೀಗೆ ಮಾಡೋದು ಸರೀನಾ ಎಂದು ಡಿಸಿಎಂ ಪ್ರಶ್ನಿಸಿದ್ದಾರೆ. ಅಲ್ಲದೆ ನಾನು ಬೆಂಗಳೂರು ನಗರಾಭಿವೃದ್ದಿ ಸಚಿವನಿದ್ದೇನೆ. ಈ ಯೋಜನೆಗೆ ಬಗ್ಗೆ ನೀವು ನನ್ನ ಜೊತೆ ಚರ್ಚಿಸಬೇಕಿತ್ತು. ಕಾಮಗಾರಿ ಆರಂಭಿಸುವ ಬಗ್ಗೆ ನನ್ನ ಅಭಿಪ್ರಾಯ ಪಡೆಯಬಹುದಿತ್ತು. ನನ್ನ ಜೊತೆ ಚರ್ಚಿಸಿ ಬಿಡಿಎ, ಬಿಬಿಎಂಪಿ ಅಭಿಪ್ರಾಯ ಪಡೆಯಬೇಕಿತ್ತು. ಅದು ಬಿಟ್ಟು ನೀವೊಬ್ಬರೇ ಕಾಮಗಾರಿ ಆರಂಭಿಸಲು ಹೊರಟಿದ್ದೀರಿ. ನಿಮ್ಮ ಈ ನಿರ್ಧಾರ ಸರೀನಾ, ಅದು ಹೇಗೆ ನೀವು ಒಬ್ಬರೇ ನಿರ್ಧಾರ ಕೈಗೊಳ್ಳುತ್ತೀರಿ ಎಂದು ಪ್ರಶ್ನೆಗಳ ಸುರಿಮಳೆಯೇ ಸುರಿಸಿದ್ದಾರೆ ಎನ್ನಲಾಗಿದೆ.

    ರೇವಣ್ಣ ಅವರನ್ನು ಪರಮೇಶ್ವರ್ ತರಾಟೆಗೆ ತೆಗೆದುಕೊಂಡ ವೇಳೆಯಲ್ಲಿ ಮುಖ್ಯಮಂತ್ರಿಗಳು ಮಧ್ಯ ಪ್ರವೇಶ ಮಾಡಿ ಪರಮೇಶ್ವರ್ ಅವರನ್ನು ಸಮಾಧಾನಪಡಿಸಿದ್ದಾರೆ. ಎಲಿವೆಟೇಡ್ ಕಾರಿಡಾರ್ ಬಗ್ಗೆ ಶೀಘ್ರದಲ್ಲೇ ಸಭೆ ಕರೆಯುತ್ತೇನೆ. ಬೆಂಗಳೂರು ನಗರ ಶಾಸಕರು, ಬಿಬಿಎಂಪಿ, ಬಿಡಿಎ ಆಯುಕ್ತರ ಸಭೆ ಕರೆಯುತ್ತೇನೆ. ಆ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಒಂದು ತೀರ್ಮಾನಕ್ಕೆ ಬರೋಣ ಎಂದ ಸಿಎಂ ಹೇಳಿದ್ದಾರೆ.

  • ಆಂಧ್ರಕ್ಕೆ ಐವರು ಡಿಸಿಎಂ, ಎಲ್ಲ ಜಾತಿಗೂ ಅಧಿಕಾರ – ಭಾರತದಲ್ಲಿ ಜಗನ್ ದಾಖಲೆ

    ಆಂಧ್ರಕ್ಕೆ ಐವರು ಡಿಸಿಎಂ, ಎಲ್ಲ ಜಾತಿಗೂ ಅಧಿಕಾರ – ಭಾರತದಲ್ಲಿ ಜಗನ್ ದಾಖಲೆ

    ಅಮರಾವತಿ: ಮೇ 30 ರಂದು ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಜಗನ್ ಮೋಹನ್ ರೆಡ್ಡಿ ತಮ್ಮ ಸಂಪುಟದಲ್ಲಿ ಐವರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಿದ್ದಾರೆ.

    ಇಂದು ಸಿಎಂ ಜಗನ್ ತಮ್ಮ ಪಕ್ಷದ ಶಾಸಕಾಂಗ ಸಭೆಯನ್ನು ನಡೆಸಿದ್ದು, ಈ ವೇಳೆ ಎಲ್ಲಾ ಜಾತಿಗಳಿಗೆ ಪ್ರತಿನಿತ್ಯ ನೀಡುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಅಂದಹಾಗೇ ಈ ನಿರ್ಧಾರ ದಾಖಲೆ ಆಗಲಿದ್ದು, ಮೊಟ್ಟ ಮೊದಲ ಬಾರಿಗೆ ಐವರು ಡಿಸಿಎಂ ಗಳನ್ನು ನೇಮಿಸಿದ ಸಿಎಂ ಎನಿಸಿಕೊಳ್ಳಲಿದ್ದಾರೆ.

    ಸಿಎಂ ಜಗನ್ ಕ್ಯಾಬಿನೆಟ್ ನಲ್ಲಿ 25 ಸಚಿವರು ನೇಮಕವಾಗಿದ್ದು, ಶನಿವಾರ ನಡೆಯಲಿರುವ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇತ್ತ ಜಗನ್ ಆಯ್ಕೆ ಮಾಡಿರುವ ಡಿಸಿಎಂಗಳಲ್ಲಿ ಪರಿಶಿಷ್ಟ ಪಂಗಡ, ಪ.ಜಾತಿ, ಹಿಂದುಳಿದ ವರ್ಗಗಗಳು, ಅಲ್ಪ ಸಂಖ್ಯಾತರು ಹಾಗೂ ಕಾಪು ಸಮುದಾಯದ ನಾಯಕರಿಗೆ ಡಿಸಿಎಂ ಸ್ಥಾನ ನೀಡಲಾಗಿದೆ.

    ಆಂಧ್ರ ಸರ್ಕಾರದಲ್ಲಿ ರೆಡ್ಡಿ ಸಮುದಾಯಕ್ಕೆ ಸಿಂಹಪಾಲು ಸಿಗಲಿದೆ ಎಂಬ ನಿರೀಕ್ಷೆಗಳು ಹಾಗೂ ರಾಜಕೀಯ ಲೆಕ್ಕಾಚಾರಗಳು ತಲೆಕೆಳಗಾಗಿದೆ. ದುರ್ಬಲ ವರ್ಗಗಳ ಸಮುದಾಯದ ನಾಯಕರು ತನ್ನ ಕ್ಯಾಬಿನೆಟ್ ಸದಸ್ಯರಾಗಿರುತ್ತಾರೆ ಎಂದು ಜಗನ್ ತಿಳಿಸಿದ್ದಾರೆ. ಅಲ್ಲದೇ ಸಚಿವರ ಕಾರ್ಯ ಸಾಧನೆ ಮೇಲೆ ಮುಂದಿನ ಹಂತದಲ್ಲಿ ಬದಲಾವಣೆ ಆಗುವ ಸಾಧ್ಯತೆಗಳು ಇದೆ ಎಂದು ತಿಳಿಸಿದ್ದಾರೆ.

    46 ವರ್ಷದ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ರಾಜಶೇಖರ್ ರೆಡ್ಡಿ ಪಕ್ಷ ಆಂಧ್ರಪ್ರದೇಶ ಚುನಾವಣೆಯಲ್ಲಿ ಬಹುಮತ ಗಳಿಸಿ ಅಧಿಕಾರಗಳಿಸಿತ್ತು. 175 ವಿಧಾನಸಭಾ ಸ್ಥಾನಗಳ ಪೈಕಿ 151 ಸ್ಥಾನಗಳನ್ನು ಪಕ್ಷ ಪಡೆದಿತ್ತು. ಅಲ್ಲದೇ 25 ಲೋಕಸಭಾ ಸ್ಥಾನಗಳಲ್ಲಿ 22 ರಲ್ಲಿ ಗೆಲುವು ಪಡೆದಿತ್ತು. ಈ ಹಿಂದೆ ಆಂಧ್ರಪ್ರದೇಶ ಸಿಎಂ ಆಗಿದ್ದ ತೆಲುಗು ದೇಶಂ ಪಕ್ಷದ ಚಂದ್ರಬಾಬುನಾಯ್ಡು ಸರ್ಕಾರದಲ್ಲಿ ಇಬ್ಬರು ಡಿಸಿಎಂಗಳನ್ನು ನೇಮಕ ಮಾಡಲಾಗಿತ್ತು. ಒಬ್ಬರು ಕಾಪು ಸಮುದಾಯದ ನಾಯಕರಾಗಿದ್ದರೆ, ಮತ್ತೊಬ್ಬರು ಹಿಂದುಳಿದ ವರ್ಗಗಳಿಂದ ನೇಮಕವಾಗಿದ್ದರು.