Tag: DCM

  • ಪ್ರಧಾನಿಗೆ ನಮಿಸಿದ್ದ ಡಿಸಿಎಂ- ವೈರಲ್ ವಿಡಿಯೋಗೆ ಅಶ್ವಥ್ ನಾರಾಯಣ ಸ್ಪಷ್ಟನೆ

    ಪ್ರಧಾನಿಗೆ ನಮಿಸಿದ್ದ ಡಿಸಿಎಂ- ವೈರಲ್ ವಿಡಿಯೋಗೆ ಅಶ್ವಥ್ ನಾರಾಯಣ ಸ್ಪಷ್ಟನೆ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ನಗರಕ್ಕೆ ಬಂದಾಗ ನಾನು ಅವರಿಗೆ ನಮಿಸಿದ್ದೆ. ಆಗ ಅವರು ನನಗೆ ಅಮೂಲ್ಯವಾದ ಸಲಹೆ ನೀಡಿದರು ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ತಿಳಿಸಿದ್ದಾರೆ.

    ವೈರಲ್ ವಿಡಿಯೋ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಸ್ಪಷ್ಟನೆ ನೀಡಿದ ಡಿಸಿಎಂ, ಪ್ರಧಾನಿಯವರು ನಗರಕ್ಕೆ ಬಂದಾಗ ನಾನು ಅವರಿಗೆ ನಮಿಸಿದ್ದೆ. ಆಗ ಪ್ರಧಾನಿಗಳು ತಲೆ ಬಗ್ಗಿಸುವಂಥದ್ದೇನೂ ಬೇಡ, ನೀವೆಲ್ಲ ಯಾವಾಗಲೂ ತಲೆ ಎತ್ತಿಟ್ಟುಕೊಳ್ಳಬೇಕು ಎಂದು ಅಮೂಲ್ಯ ಸಲಹೆ ಕೊಟ್ಟಿರುವುದಾಗಿ ತಿಳಿಸಿದರು.

    ಈ ಮೂಲಕ ಪ್ರಧಾನಿಯವರು ಒಳ್ಳೆಯ ಮಾತನ್ನು ಹೇಳಿದ್ದಾರೆ. ಹೀಗಾಗಿ ಹಿರಿಯರಾದ ಪ್ರಧಾನಿಯವರ ಕಿವಿ ಮಾತು ಪಾಲಿಸುತ್ತೇನೆ. ಇದರಲ್ಲಿ ವೈರಲ್ ಆಗುವಂಥದ್ದು ಏನಿಲ್ಲ ಎಂದು ಸ್ಪಷ್ಟನೆ ನೀಡಿದರು.

    ವೈರಲ್ ವಿಡಿಯೋದಲ್ಲೇನಿದೆ?
    ಚಂದ್ರಯಾನ 2 ಲ್ಯಾಂಡಿಂಗ್ ವೀಕ್ಷಿಸಲೆಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದು ಇಸ್ರೋಗೆ ತೆರಳುವವರಿದ್ದರು. ಹೀಗಾಗಿ ಅವರನ್ನು ನಗರಕ್ಕೆ ಬರಮಾಡಿಕೊಳ್ಳಲು ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಡಿಸಿಎಂ ಅಶ್ವಥ್ ನಾರಾಯಣ ಮೊದಲಾದ ನಾಯಕರು ಬಂದಿದ್ದರು. ಮೋದಿಯವರು ಯಲಹಂಕ ವಾಯುನೆಲೆಗೆ ಬರುತ್ತಿದ್ದಂತೆಯೇ ಸಿಎಂ ಅವರು ಹೂಗುಚ್ಛ ನೀಡಿ ಬರಮಾಡಿಕೊಂಡರು. ಹೀಗೆ ಸ್ವಾಗತಿಸುವ ವೇಳೆ ಅಶ್ವಥ್ ನಾರಾಯಣ ಅವರು ಪ್ರಧಾನಿಯವರ ಕಾಲು ಮುಟ್ಟಿ ನಮಸ್ಕರಿಸಿದ್ದರು. ಈ ವೇಳೆ ಪ್ರಧಾನಿಯವರು ಕೆಲ ಹೊತ್ತು ಮಾತನಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

  • ಯಾವ ಕಾರಣಕ್ಕೆ ನನ್ನ ಡಿಸಿಎಂ ಮಾಡಿದ್ದಾರೆಂದು ಗೊತ್ತಿಲ್ಲ: ಲಕ್ಷ್ಮಣ ಸವದಿ

    ಯಾವ ಕಾರಣಕ್ಕೆ ನನ್ನ ಡಿಸಿಎಂ ಮಾಡಿದ್ದಾರೆಂದು ಗೊತ್ತಿಲ್ಲ: ಲಕ್ಷ್ಮಣ ಸವದಿ

    – ದಂಡಕ್ಕೂ ರಸ್ತೆಯ ದುಸ್ಥಿತಿಗೂ ಸಂಬಂಧವಿಲ್ಲ

    ಮೈಸೂರು: ಪಕ್ಷದ ವರಿಷ್ಠರು ಹಲವು ದೂರದೃಷ್ಟಿಯಿಂದ ಅಧಿಕಾರ ನೀಡಿದ್ದಾರೆ. ಅದು ಯಾವ ಕಾರಣಕ್ಕೆ ಅನ್ನೋದು ನನಗೂ ಗೊತ್ತಿಲ್ಲ. ಇದು ಬಯಸದೇ ಬಂದ ಭಾಗ್ಯ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಚುನಾವಣೆಯಲ್ಲಿ ನನಗೆ ಪಶ್ಚಿಮ ಮಹಾರಾಷ್ಟ್ರದ ಜವಾಬ್ದಾರಿ ನೀಡಲಾಗಿದೆ. ಅಲ್ಲಿನ 6 ರಿಂದ 7 ಜಿಲ್ಲೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಪ್ರತಿಪಕ್ಷಗಳು ಸವದಿಯ ಬಗ್ಗೆ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಿಪಕ್ಷದವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಅದಕ್ಕಾಗಿ ಅವರು ಮಾತನಾಡುತ್ತಿದ್ದಾರೆ. ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.

    ದಂಡಕ್ಕೂ ರಸ್ತೆಯ ದುಸ್ಥಿತಿಗೂ ಸಂಬಂಧವಿಲ್ಲ. ದಂಡ ಹಾಕುವುದು ರಸ್ತೆ ಸರಿಯಿಲ್ಲ ಎಂದು ಅಲ್ಲ. ಸಂಚಾರಿ ನಿಯಮ ಉಲ್ಲಂಘನೆಗಾಗಿ ದಂಡ ಹಾಕುವುದು. ದಂಡಕ್ಕೂ ರಸ್ತೆಯ ದುಸ್ಥಿತಿಗೂ ಸಂಬಂಧ ಕಲ್ಪಿಸಬೇಡಿ. ಯಾರು ತಪ್ಪು ಮಾಡುತ್ತಾರೆ ಅವರಿಗೆ ದಂಡ ಹಾಕುತ್ತಾರೆ. ಅದರಲ್ಲಿ ಹೆಚ್ಚು ಕಮ್ಮಿ ಏನು ಇಲ್ಲ. ಸಂಚಾರ ನಿಯಮ ಪಾಲಿಸಿದರೆ ದಂಡ ಕಟ್ಟುವ ಪ್ರಶ್ನೆಯೇ ಇರುವುದಿಲ್ಲ ಎಂದು ಸವದಿ ಹೇಳಿದರು.

    ರಾಜ್ಯದಲ್ಲಿ ಎಲೆಕ್ಟ್ರಿಕಲ್ ಬಸ್ ಸಂಚಾರ ಜಾರಿಗೆ ಚಿಂತನೆ ಮಾಡಲಾಗಿದೆ. ಹೊರದೇಶಗಳಿಂದ ಪ್ರಪೋಸಲ್ ಬಂದಿದೆ. ಶೂನ್ಯ ಬಂಡವಾಳ ಹೂಡಿಕೆ ಮಾಡಿ 40% ಮತ್ತು 60% ರಂತೆ ಆದಾಯದಲ್ಲಿ ನಮಗೆ ಕೊಡುತ್ತಾರೆ. ಬಸ್‍ಗಳನ್ನು ಅವರೇ ಸಂಪೂರ್ಣವಾಗಿ ನಿರ್ವಹಣೆ ಮಾಡುತ್ತಾರೆ. ಈ ಬಗ್ಗೆ ಈಗಾಗಲೇ ಚರ್ಚೆ ಮಾಡಲಾಗಿದೆ. ತೈಲ ಬೆಲೆ ಹೆಚ್ಚಳವಾದ ಹಿನ್ನೆಲೆ ಬಸ್ ದರ ಏರಿಸುವ ಪ್ರಸ್ತಾವಣೆ ನನ್ನ ಮುಂದಿದೆ. ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳದ ಉದ್ದೇಶ ಇಲ್ಲ ಎಂದು ತಿಳಿಸಿದರು.

  • ಮಳೆಯಲ್ಲೇ ಕೂತು ಬಯಲಲ್ಲಿ ಪಾಠ ಕೇಳ್ಬೇಕು- ಗೋವಿಂದ ಕಾರಜೋಳ ಸ್ವಕ್ಷೇತ್ರದ ಕಥೆ

    ಮಳೆಯಲ್ಲೇ ಕೂತು ಬಯಲಲ್ಲಿ ಪಾಠ ಕೇಳ್ಬೇಕು- ಗೋವಿಂದ ಕಾರಜೋಳ ಸ್ವಕ್ಷೇತ್ರದ ಕಥೆ

    ಬಾಗಲಕೋಟೆ: ನೂತನ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳಲಿಲ್ಲದೆ ಸಂತ್ರಸ್ತರು ಪರದಾಡುತ್ತಿದ್ದು, ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಇತ್ತ ಮುಧೋಳ ತಾಲೂಕಿನ ಒಂಟಗೋಡಿಯಲ್ಲಿ ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಘಟಪ್ರಭಾ ನದಿ ಪ್ರವಾಹದದಿಂದಾಗಿ ಸರ್ಕಾರಿ ಶಾಲೆ ಮುಳುಗಡೆಯಾಗಿದ್ದು, ಬಿದ್ದು ಹೋಗುವ ಸ್ಥಿತಿಯಲ್ಲಿದೆ. ಆದರೂ ಮಕ್ಕಳಿಗೆ ಪಾಠ ಮಾಡಲು ಬೇರೆ ಕಟ್ಟಡವಿಲ್ಲ. ಹೀಗಾಗಿ ಮಕ್ಕಳು ಬಯಲಲ್ಲೇ ಕುಳಿತು ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ.

    ಶಾಲೆಯ ಕಟ್ಟಡ ಬೀಳುವ ಭಯದಿಂದ ಸಿಬ್ಬಂದಿ ಈಗಾಗಲೇ ಕಟ್ಟಡಕ್ಕೆ ಬೀಗ ಜಡಿದಿದ್ದಾರೆ. ಹೀಗಾಗಿ ಮಳೆ ಬಂದರೆ ಶಾಲೆಯ ಹೊರಗಡೆ ತಲೆ ಮೇಲೆ ಟಾರ್ಪಲ್ ಹಾಕಿಕೊಂಡು ಪಾಠ ಕೇಳುವ ಅನಿವಾರ್ಯ ಮಕ್ಕಳದ್ದಾಗಿದೆ.

    ಶಾಲಾ ಕಟ್ಟಡ ನೀರಲ್ಲಿ ಮುಳುಗಿ ಹಾಳಾಗಿ ಹೋಗಿದ್ದರಿಂದ ಯಾವಾಗ ಬೀಳುತ್ತೋ ಅನ್ನೋ ಆತಂಕದಲ್ಲಿರುವ ಸ್ಥಳೀಯರು ಇಷ್ಟೆಲ್ಲ ಆದರೂ ಯಾವೊಬ್ಬ ನಾಯಕರು ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಸ್ಥಿತಿ ಆಲಿಸಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಅಲ್ಲದೆ ಕೂಡಲೇ ಮಕ್ಕಳಿಗೆ ಶಾಲಾ ಕಟ್ಟಡದ ವ್ಯವಸ್ಥೆ ಮಾಡಿಸುವಂತೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

  • ಅಮಿತ್ ಶಾ ತಿಳುವಳಿಕೆಯನ್ನು ಪ್ರಶ್ನಿಸುವ ಹಾಗಿಲ್ಲ- ಮಾಧುಸ್ವಾಮಿ

    ಅಮಿತ್ ಶಾ ತಿಳುವಳಿಕೆಯನ್ನು ಪ್ರಶ್ನಿಸುವ ಹಾಗಿಲ್ಲ- ಮಾಧುಸ್ವಾಮಿ

    ಮಂಡ್ಯ: ರಾಜ್ಯದಲ್ಲಿ ಮೂವರು ಉಪಮುಖ್ಯಮಂತ್ರಿಗಳಿರುವುದಕ್ಕೆ ಒಬ್ಬೊಬ್ಬರು ಒಂದೊಂದು ಅಭಿಪ್ರಾಯವನ್ನು ಹೇಳುತ್ತಿದ್ದಾರೆ. ಮೇಲಿನವರು ಏನೋ ಒಂದು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರೆ, ಅವರಿಗೆ ನಮಗಿಂತ ಜಾಸ್ತಿ ತಿಳುವಳಿಕೆ ಇದೆ ಎಂದು ಭಾವಿಸುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀನಿವಾಸ್ ಪ್ರಸಾದ್ ಅವರು ನೀಡುರುವುದು ವೈಯಕ್ತಿಕ ಅಭಿಪ್ರಾಯವಾಗಿದೆ. ಒಬ್ಬೊಬ್ಬರ ಅಭಿಪ್ರಾಯಗಳು ಒಂದು ರೀತಿ ಇರುತ್ತವೆ. ಮೇಲೆ ಇರುವವರು ತೀರ್ಮಾನ ತೆಗೆದುಕೊಂಡಾಗ ನಮಗಿಂತ ಜಾಸ್ತಿ ತಿಳುವಳಿಕೆ ಇದೆ ಎಂದು ಭಾವಿಸುತ್ತೇನೆ ಎಂದರು.

    ನಾವು ಅಮಿತ್ ಶಾ ಅವರ ತಿಳುವಳಿಕೆಯನ್ನು ಪ್ರಶ್ನಿಸುವ ಹಾಗೆ ಇಲ್ಲ. ಮೇಲಿನವರು ಯಾವ ಯಾವ ಕಾರಣಕ್ಕೆ ಮಾಡುತ್ತಾರೆ ಎಂದು ಗೊತ್ತಿಲ್ಲ. ಅವರು ತೀರ್ಮಾನ ತೆಗೆದುಕೊಂಡಿರುವುದು ಪಕ್ಷಕ್ಕೆ ಒಳ್ಳೆಯಾದಾಗುತ್ತದೆ ಎಂದು ನಾನು ತಿಳಿದುಕೊಂಡಿದ್ದೇನೆ. ಇದೇ ವೇಳೆ ಮೂವರು ಡಿಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ಭಿನ್ನಮತ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪಂಚಾಯ್ತಿ ಸದಸ್ಯ ಆದಾಗ ಅಧ್ಯಕ್ಷ ಆಗಬೇಕು ಎಂದು ಇರುತ್ತದೆ. ಹಾಗೆಯೇ ಶಾಸಕನಾದಾಗ ಮಂತ್ರಿ ಆಗಬೇಕು ಅನ್ನೋದು ಸಹಜ ಎಂದು ಹೇಳಿದರು.

    ಕೇಂದ್ರದಿಂದ ಪ್ರವಾಹದ ಪರಿಹಾರ ಕುರಿತು ಇದೇ ವೇಳೆ ಮಾತನಾಡಿದ ಅವರು, ಪ್ರವಾಹ ಪೀಡಿತರಿಗೆ ನೆರವು ನೀಡಲು ಕಮಿಟಿ ಮಾಡಿ ತೀರ್ಮಾನ ಮಾಡಲಾಗಿದೆ. ತುರ್ತಾಗಿ ಮಾಡಬೇಕಾದದ್ದನ್ನು ರಾಜ್ಯ ಸರ್ಕಾರ ಮಾಡಿದೆ. 32 ಸಾವಿರ ಕೋಟಿ ನಷ್ಟ ಆಗಿದೆ ಎಂದು ಸಮೀಕ್ಷೆ ಮಾಡಿದ್ದೇವೆ. 7 ರಂದು ಮೋದಿ ಅವರು ಬೆಂಗಳೂರಿಗೆ ಬರಲಿದ್ದಾರೆ. ಅಂದು ನಾವು ಈ ಬಗ್ಗೆ ಪ್ರಸ್ತಾಪ ಮಾಡುತ್ತೇವೆ ಎಂದು ತಿಳಿಸಿದರು.

  • ಡಿಸಿಎಂ ಹುದ್ದೆ ಬಯಸದೇ ಬಂದ ಭಾಗ್ಯ: ಲಕ್ಷ್ಮಣ ಸವದಿ

    ಡಿಸಿಎಂ ಹುದ್ದೆ ಬಯಸದೇ ಬಂದ ಭಾಗ್ಯ: ಲಕ್ಷ್ಮಣ ಸವದಿ

    ವಿಜಯಪುರ: ಉಪಮುಖ್ಯಮಂತ್ರಿ ಹುದ್ದೆ ನನಗೆ ಬಯಸದೇ ಬಂದ ಭಾಗ್ಯ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ನನ್ನನ್ನು ಗುರುತಿಸಿ ಪಕ್ಷ ಸಾರಿಗೆ ಇಲಾಖೆ ಜೊತೆಗೆ ಡಿಸಿಎಂ ಹುದ್ದೆ ನೀಡಿದೆ. 2023ರ ವಿಭಾನಸಭಾ ಚುನಾವಣೆಯಲ್ಲಿ ಬಿಜೆಪಿಯು 150 ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ರಾಜ್ಯದ ಜನರ ಅಭಿವೃದ್ಧಿಗೆ ಬಿಜೆಪಿ ಸರ್ಕಾರವು ಶ್ರಮಿಸಲಿದ್ದೇವೆ. ಬಿಎಸ್ ಯಡಿಯೂರಪ್ಪ ಅವರ ಸಂಪುಟದಲ್ಲಿ ಇನ್ನೂ ಎರಡು ಅಥವಾ ಮೂರು ಜನರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ತಿಳಿಸಿದರು.

    ಮುಂಬರುವ ಉಪಚುನಾವಣೆಯಲ್ಲಿ ಎಲ್ಲ ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ. ಮುಂದಿನ 20 ವರ್ಷ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸಿ ಕಲ್ಯಾಣ ಕರ್ನಾಟಕ ಮಾಡುತ್ತೇವೆ. ಉತ್ತರ ಕರ್ನಾಟಕದ ಅಭಿವೃದ್ಧಿ ಉದ್ದೇಶದಿಂದ ನನಗೆ ಹಾಗೂ ಗೋವಿಂದ ಕಾರಜೋಳ ಅವರಿಗೆ ಡಿಸಿಎಂ ಹುದ್ದೆ ನೀಡಲಾಗಿದೆ ಎಂದು ಹೇಳಿದರು.

    ಉತ್ತರ ಕರ್ನಾಟಕದ ಪ್ರವಾಹ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಲಕ್ಷ್ಮಣ ಸವದಿ ಅವರು, ಪ್ರವಾಹದಿಂದ ಸುಮಾರು 30 ಸಾವಿರ ಕೋಟಿ ರೂ. ನಷ್ಟು ಆಸ್ತಿಪಾಸ್ತಿ ಹಾನಿಯಾಗಿದೆ. ಇದು ಪ್ರಾಥಮಿಕ ಅಂದಾಜು ಅಷ್ಟೇ. ಕೇಂದ್ರ ಸರ್ಕಾರದ ತಂಡಗಳು ಈಗಾಗಲೇ ಭೇಟಿ ನೀಡಿ ದೆಹಲಿಗೆ ತೆರಳಿವೆ. ಶೇ.90 ರಷ್ಟು ಪ್ರವಾಹ ಸಂತ್ರಸ್ತರಿಗೆ ಈಗಾಗಲೇ ಪ್ರಾಥಮಿಕ ಹಂತದಲ್ಲಿ ಪರಿಹಾರದ ಹಣ ನೀಡಲಾಗಿದೆ. ಬೆಳೆಹಾನಿ ಸಮೀಕ್ಷೆ ಈಗ ಆರಂಭವಾಗಿದೆ ಎಂದು ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ರಾಜ್ಯದ ಬಿಜೆಪಿ ನಾಯಕರು ಭೇಟಿಯಾಗಿ ಹೆಚ್ಚಿನ ಪರಿಹಾರ ಹಣಕ್ಕೆ ಮನವಿ ಸಲ್ಲಿಸುತ್ತೇವೆ. ಆದರೆ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗುವ ಯೋಚನೆ ಇಲ್ಲ ಎಂದರು.

  • ಬ್ಲೂ ಫಿಲಂ ನೋಡಿದವರು ಈಗ ಡಿಸಿಎಂ – ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

    ಬ್ಲೂ ಫಿಲಂ ನೋಡಿದವರು ಈಗ ಡಿಸಿಎಂ – ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

    ಚಿಕ್ಕೋಡಿ/ಬೆಳಗಾವಿ: ಬಿಜೆಪಿಯವರಿಗೆ ಮಾನ ಮರ್ಯಾದೆನೇ ಇಲ್ಲ. ಬ್ಲೂ ಫಿಲಂ ನೋಡಿದವರನ್ನು ಡಿಸಿಎಂ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಹೇಳಿದ್ದಾರೆ.

    ಸಿದ್ದರಾಮಯ್ಯ ಅವರು ಇಂದು ಪ್ರವಾಹ ಪೀಡಿತ ಬೆಳಗಾವಿ ಜಿಲ್ಲೆಯ ಹಲವೆಡೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು, ಬಿಜೆಪಿಯವರಿಗೆ ಮಾನ ಮರ್ಯಾದೆನೇ ಇಲ್ಲ. ಬ್ಲೂ ಫಿಲಂ ನೋಡಿದವರನ್ನು ಡಿಸಿಎಂ ಮಾಡಿದ್ದಾರೆ. ಅದೂ ಸದನದಲ್ಲಿ ನೋಡಿದಂತವರನ್ನು ಉಪ ಮುಖ್ಯಮಂತ್ರಿ ಮಾಡಿದೆ. ಹಾಲು ಕುಡಿದ ಮಕ್ಕಳೇ ಬದುಕೋದಿಲ್ಲ, ಇನ್ನೂ ವಿಷ ಕುಡಿದ ಮಕ್ಕಳು ಬದುಕುತ್ತಾರಾ? ಹಾಗಾಗಿದೆ ಬಿಜೆಪಿ ಸರ್ಕಾರದ ಸ್ಥಿತಿ ಎಂದು ವ್ಯಂಗ್ಯ ಮಾಡಿದರು.

    ಉಮೇಶ್ ಕತ್ತಿ ಅವರು ನನಗೆ ಕರೆ ಮಾಡಿದ್ದರು, ನಾನು ಅವರಿಗೆ ಕರೆ ಮಾಡಿಲ್ಲ. ನನಗೆ ಕಣ್ಣು ಆಪರೇಷನ್ ಆಗಿದ್ದ ಕಾರಣದಿಂದ ವಿಚಾರಿಸಲು ಫೋನ್ ಮಾಡಿದ್ದರು. ಆಗ ನಾನು ಬಾರಪ್ಪ ಮಾತಾಡೋಣ ಅಂದಿದ್ದೆ, ಆದರೆ ಬರಲಿಲ್ಲ ಎಂದರು.

    ಇದೇ ವೇಳೆ ಅನರ್ಹ ಶಾಸಕರಿಗೂ ಮತ್ತು ಶ್ರೀಮಂತ ಪಾಟೀಲ್ ಜನರು ಪಾಠ ಕಲಿಸುತ್ತಾರೆ ಎಂದರು. ಕೆಪಿಸಿಸಿಯಲ್ಲಿ ಒಡಕಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್ ಹಾಗೂ ನನ್ನ ನಡುವೆ ಯಾವುದೇ ಒಡಕಿಲ್ಲ. ನನಗೆ ಎಲ್ಲರೂ ವಿಶ್ವಾಸಿಗಳೇ ಇದ್ದಾರೆ. ವೈರಿಗಳು ಯಾರು ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

  • ಮೂವರು ಡಿಸಿಎಂಗಳಿಂದ ಉಪಯೋಗ ಏನಿದೆ- ಶ್ರೀನಿವಾಸ್ ಪ್ರಸಾದ್ ಪ್ರಶ್ನೆ

    ಮೂವರು ಡಿಸಿಎಂಗಳಿಂದ ಉಪಯೋಗ ಏನಿದೆ- ಶ್ರೀನಿವಾಸ್ ಪ್ರಸಾದ್ ಪ್ರಶ್ನೆ

    ಮೈಸೂರು: ಕೊನೆಗೂ ರಾಜ್ಯ ಸರ್ಕಾರ ಖಾತೆ ಹಂಚಿಕೆ ಮಾಡಿದ್ದು, ಈ ಬೆನ್ನಲ್ಲೇ ಪಕ್ಷದ ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಇಷ್ಟು ಮಾತ್ರವಲ್ಲದೇ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಿರುವುದು ಕೂಡ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್, ಮೂವರು ಡಿಸಿಎಂಗಳನ್ನು ಮಾಡಿರುವುದರಿಂದ ಉಪಯೋಗ ಏನಿದೆ ಎಂದು ಪಕ್ಷದ ಆಯ್ಕೆಯ ಬಗ್ಗೆಯೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಇವತ್ತಿನ ಪರಿಸ್ಥಿತಿಯಲ್ಲಿ ಮೂವರು ಡಿಸಿಎಂ ಅವಶ್ಯಕತೆ ಇಲ್ಲ. ಹೈಕಮಾಂಡ್ ಮಾಡಿದರೆ ಅದು ಹೈಕಮಾಂಡ್ ತಪ್ಪು. ಜನರು ಎಲ್ಲವನ್ನೂ ನೋಡುತ್ತಾ ಇದ್ದಾರೆ. ಹೈಕಮಾಂಡ್‍ಗೆ ಸರಿಯಾದ ಮಾಹಿತಿ ನೀಡಬೇಕಿತ್ತು. ಹೈಕಮಾಂಡ್ ತೆಗೆದುಕೊಂಡಿರೋ ನಿರ್ಧಾರ ಸರಿಯಲ್ಲ. ಪಕ್ಷವನ್ನು ಇನ್ನೂ ಚೆನ್ನಾಗಿ ನಡೆಸಬಹುದಿತ್ತು ಎಂದು ಹೇಳಿದ್ದಾರೆ.

    ಮೊದಲು ಹೊಂದಾಣಿಕೆ ಮಾಡಿಕೊಂಡು ಹೋಗಿ. ರಾಜ್ಯದ ಮುಖಂಡರು ತೀರ್ಮಾನ ಮಾಡಿಕೊಂಡು ನಿರ್ಧಾರ ಮಾಡಿ. ಈ ರೀತಿ ಕಚ್ಚಾಟದಿಂದ ಜನರಿಗೆ ತಪ್ಪು ಸಂದೇಶ ಹೋಗುತ್ತಿದೆ. ಹೀಗಾಗಿ ಡಿಸಿಎಂ ಸ್ಥಾನ, ಖಾತೆಗಾಗಿ ಜಗಳ ಬಿಡಿ. ಅತೃಪ್ತ ಶಾಸಕರ ಭವಿಷ್ಯದ ಬಗ್ಗೆ ನಿಮಗೆ ಗಮನ ಬೇಡ್ವಾ ಎಂದು ಪ್ರಶ್ನಿಸಿದ ಸಂಸದರು, ಅತೃಪ್ತರ ರಾಜೀನಾಮೆಯಿಂದ ನಿಮಗೆ ಅಧಿಕಾರ ಸಿಕ್ಕಿದೆ. ಇದನ್ನು ನೆನಪಿಟ್ಟುಕೊಂಡು ಒಳ್ಳೆಯ ಸರಕಾರ ಕೊಡಿ ಎಂದು ಸಲಹೆ ನೀಡಿದರು.

    ಸಿದ್ದರಾಮಯ್ಯನು ಕೂಡ ಅತೃಪ್ತ ಶಾಸಕನೇ. ಸಿಎಂಗೆ ಕೆಲಸ ಮಾಡಿಕೊಡಿ ಎಂದು 20 ಪತ್ರ ಬರೆದಿದ್ದರು. ಆದರೆ ಅದರಲ್ಲಿ ಒಂದು ಕೆಲಸವೂ ಮಾಡಿಕೊಡಲಿಲ್ಲ. ಇದನ್ನ ಸ್ವತಃ ಸಿದ್ದರಾಮಯ್ಯನವರೇ ಹೇಳಿಕೊಂಡಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಕೂಡ ಅತೃಪ್ತ ಶಾಸಕರಾಗುತ್ತಾರೆ ಎಂದು ಸಂಸದರು ವ್ಯಂಗ್ಯವಾಡಿದರು.

  • ಶೆಟ್ಟರ್ ಹೇಳಿಕೆಯನ್ನು ಒಪ್ಪುತ್ತೇನೆ ಎಂದ ರಾಘವೇಂದ್ರ

    ಶೆಟ್ಟರ್ ಹೇಳಿಕೆಯನ್ನು ಒಪ್ಪುತ್ತೇನೆ ಎಂದ ರಾಘವೇಂದ್ರ

    ಬೆಂಗಳೂರು: ಉಪ ಮುಖ್ಯಮಂತ್ರಿ ಹುದ್ದೆ ಸಾಂವಿಧಾನಿಕ ಹುದ್ದೆಯಲ್ಲ ಎನ್ನುವುದು ನಿಜ. ಒಂದು ಗೌರವಯುತ ಹುದ್ದೆ ಎಂಬ ಜಗದೀಶ್ ಶಟ್ಟರ್ ಅವರ ಹೇಳಿಕೆಯನ್ನು ನಾನು ಒಪ್ಪುತ್ತೇನೆ ಎಂದು ಬಿ.ವೈ.ರಾಘವೇಂದ್ರ ಅವರು ಶೆಟ್ಟರ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇಡೀ ದೇಶದಲ್ಲಿ ಎಲ್ಲೂ ಉಪಮುಖ್ಯಮಂತ್ರಿ ಹುದ್ದೆ ಸಾಂವಿಧಾನಿಕ ಬದ್ಧ ಸ್ಥಾನವಲ್ಲ. ಮೂರು ಡಿಸಿಎಂ ಮಾಡಿರುವುದು ಇದೇ ಮೊದಲಲ್ಲ. ಹಿಂದೆ ಉತ್ತರ ಪ್ರದೇಶ ಹಾಗೂ ಇತರೇ ರಾಜ್ಯಗಳಲ್ಲೂ ಮೂರು ಡಿಸಿಎಂ ಮಾಡಿದ್ದಾರೆ. ಹೀಗಾಗಿ ಇದರಲ್ಲಿ ವಿಶೇಷವೇನೂ ಇಲ್ಲ. ಮುಂದಿನ ಉತ್ತರಾಧಿಕಾರಿಗಳು ಎಂಬ ದೃಷ್ಟಿಯಿಂದ ಈ ರೀತಿ ಮಾಡಿದ್ದಲ್ಲ. ಆಯಾ ಸಂದರ್ಭಕ್ಕೆ ತಕ್ಕಂತೆ ಹೈ ಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

    ಸಂಘಟನೆಯ ದೂರದೃಷ್ಟಿಯಿಂದ ಈ ರೀತಿ ತೀರ್ಮಾನ ಕೈಗೊಂಡಿದ್ದಾರೆ. ಲಕ್ಷ್ಮಣ ಸವದಿಯವರನ್ನು ಡಿಸಿಎಂ ಮಾಡಿರುವ ಕುರಿತು ಪಕ್ಷದಲ್ಲಿ ಯಾರಿಗೂ ಅಸಮಾಧಾನವಿಲ್ಲ. ಮಾಧ್ಯಮಗಳಲ್ಲಿ ಈ ಕುರಿತು ಬಂದಿರುವುದು ಬಿಟ್ಟರೆ, ಪಕ್ಷದ ನಾಯಕರಲ್ಲಿ ಯಾವುದೇ ಅಸಮಾಧಾನವಿಲ್ಲ. ಇದೀಗ ಸಿಎಂ ಜೊತೆಯಲ್ಲೇ ಸಿ.ಟಿ.ರವಿ ಅವರು ಚಿಕ್ಕಮಗಳೂರು ಪ್ರವಾಸಕ್ಕೆ ತೆರಳಿದ್ದಾರೆ ಎಂದು ಸ್ಪಷ್ಟಪಡಿಸಿದರು.

    ನಿಮ್ಮ ಮಕ್ಕಳನ್ನು ಹಿಡಿತದಲ್ಲಿಟ್ಟುಕೊಳ್ಳಿ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಕುಮಾರಸ್ವಾಮಿ ಅವರ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಅಂತಹ ಸಂಕಷ್ಟ ಎದುರಾದರೆ ಅವರ ಮಗನಿಂದಲೇ ಬರಬಹುದು. ಈ ಕುರಿತು ಅವರಿಗೆ ಕನಸು ಬಿದ್ದಿರಬೇಕು ಇಲ್ಲವೇ ಅವರ ಅನುಭವ ಆ ರೀತಿ ಇರಬಹುದು ಹೀಗಾಗಿ ನಮ್ಮ ಮೇಲೆ ಆರೋಪ ಮಾಡಿದ್ದಾರೆ. ನಾನು ಸಂಸದನಾಗಿ ಶಿವಮೊಗ್ಗ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅನಾವಶ್ಯಕವಾಗಿ ಮೂಗು ತೂರಿಸುವ ಕೆಲಸವನ್ನು ಮಾಡಿಲ್ಲ, ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿಲ್ಲ. ಇತರೆ ವಿಷಯಗಳ ಕುರಿತು ತಲೆ ಕೆಡಿಸಿಕೊಂಡಿಲ್ಲ. ಮುಖ್ಯಮಂತ್ರಿಗಳು ಅಧಿಕಾರಿಗಳೊಣಂದಿಗೆ ಚರ್ಚಿಸಿ ವರ್ಗಾವಣೆ ತೀರ್ಮಾನ ಕೈಗೊಳ್ಳುತ್ತಾರೆ. ನಮ್ಮೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಗೂಳಿಹಟ್ಟಿ ಶೇಖರ್ ಅವರೂ ಯಾಕೆ ಈ ರೀತಿ ಮಾತನಾಡಿದ್ದಾರೋ ಗೊತ್ತಿಲ್ಲ. ಅವರಿಗೂ ಸಹ ಈ ಕುರಿತು ತಪ್ಪು ಕಲ್ಪನೆ ಮೂಡಿರಬಹುದು. ನಾನೇ ಖುದ್ದು ಕರೆ ಮಾಡಿ ಅವರೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು.

    ನಮ್ಮ ಸಂಘಟನೆಯಲ್ಲಿ ವಯಸ್ಸು ಮೀರಿ ಜವಾಬ್ದಾರಿಗೆ ಗೌರವ ಕೊಟ್ಟುಕೊಂಡು ಬಂದಿದ್ದೇವೆ. ಸಂತೋಷ್ ಅವರು ಸಂಘಟನಾ ಕಾರ್ಯದರ್ಶಿಯಾಗಿದ್ದು ಪಕ್ಷದ ಸಂಘಟನೆ ದೃಷ್ಟಿಯಿಂದ ಇಡೀ ದೇಶ ಹಾಗೂ ಪಕ್ಷ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಯಡಿಯೂರಪ್ಪನವರು ವಯಸ್ಸಿನಲ್ಲಿ ಹಿರಿಯರಿರಬಹುದು. ಆದರೆ, ಸಂಘಟನೆ ದೃಷ್ಟಿಯಿಂದ ಉನ್ನತ ಸ್ಥಾನದಲ್ಲಿರುವವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವುದು ನಮ್ಮ ಕರ್ತವ್ಯ. ಒಟ್ಟಾಗಿ ನಾವು ತೆಗೆದುಕೊಂಡು ಹೋಗುತ್ತೇವೆ ಎಂದು ಸ್ಪಷ್ಟಪಡಿಸಿದರು.

  • ನಾನು ಯಾಕೆ ಡಿಸಿಎಂ ಆಗಬೇಕು: ಸಚಿವ ಜಗದೀಶ್ ಶೆಟ್ಟರ್

    ನಾನು ಯಾಕೆ ಡಿಸಿಎಂ ಆಗಬೇಕು: ಸಚಿವ ಜಗದೀಶ್ ಶೆಟ್ಟರ್

    ಬೆಂಗಳೂರು: ನೂತನ ಸಚಿವ ಜಗದೀಶ್ ಶೆಟ್ಟರ್ ಅವರು ಇಂದು ವಿಧಾನಸೌಧದಲ್ಲಿರುವ ತನ್ನ ಕಚೇರಿಗೆ ಪೂಜೆ ನಡೆಸಿದ್ದಾರೆ. ಆ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಯಾಕೆ ಡಿಸಿಎಂ ಆಗಬೇಕು ಎಂದು ಪ್ರಶ್ನಿಸಿದರು.

    ತಮಗೆ ನೀಡಿದ ಸ್ಥಾನದ ಕುರಿತು ಅಸಮಾಧನವಿದೆ ಎಂಬ ಮಾತು ಕೇಳಿ ಬರುತ್ತಿದ್ದ ಕುರಿತು ಪ್ರಶ್ನಿಸಿದಾಗ, ನಾನು ನನ್ನ ಹಾಗೂ ನನ್ನ ಇಲಾಖೆ ಬಗ್ಗೆ ಮಾತನಾಡುತ್ತೇನೆ. ನಾನು ಈಗ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಕೈಗಾರಿಕೆ ಇಲಾಖೆ ಚೆನ್ನಾಗಿಯೇ ಇದೆ. ನಾನು ಇಂದು ಕಚೇರಿ ಪೂಜೆ ಮುಗಿಸಿ ಹೊರಡುತ್ತೇನೆ. ಉತ್ತರ ಕರ್ನಾಟಕದಲ್ಲಿ ಕೈಗಾರಿಕೆ ಬೆಳೆಸಲು ಅನುಕೂಲ ಆಗಲಿದೆ. ಈ ಖಾತೆಯಲ್ಲಿ ನಾನು ಚೆನ್ನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

    ಬಳಿಕ ಮಾತನಾಡಿದ ಅವರು, ನಾನು ಯಾಕೆ ಡಿಸಿಎಂ ಆಗಬೇಕು. ಡಿಸಿಎಂ ಎಂಬುದು ಸಂವಿಧಾನಿಕ ಹುದ್ದೆಯೇ ಅಲ್ಲ. ನಾನು ಸಿಎಂ ಆದವನು ಡಿಸಿಎಂ ಆಗಬಾರದು ಎಂದರು. ಬಳಿಕ ಬಿಜೆಪಿ ನಾಯಕರ ಅಸಾಮಾಧನದ ಬಗ್ಗೆ ಪ್ರಶ್ನಿಸಿದಾಗ, ಎಲ್ಲವೂ ಸರಿ ಹೋಗುತ್ತದೆ ಎಂದು ಪ್ರತಿಕ್ರಿಯಿಸಿದರು.

    ಜಗದೀಶ್ ಶೆಟ್ಟರ್ ಅವರು ಕಂದಾಯ ಅಥವಾ ಗ್ರಾಮೀಣಾಭಿವೃದ್ಧಿ ಖಾತೆಯನ್ನು ಬಯಸಿದ್ದರು. ಆದರೆ ಅವರ ಪಾಲಿಗೆ ಬೃಹತ್/ಮಧ್ಯಮ ಕೈಗಾರಿಕಾ ಖಾತೆ ಸಿಕ್ಕಿದೆ. ತಮ್ಮ ಜಾಯಮಾನಕ್ಕೆ ಒಗ್ಗದ ಖಾತೆ ಕೊಟ್ಟಿದ್ದಾರೆ ಎಂದು ಶೆಟ್ಟರ್ ಅಳಲು ತೋಡಿಕೊಂಡಿದ್ದರು ಎಂಬ ಮಾತು ಕೇಳಿಬಂದಿತ್ತು.