Tag: DCM Parameshwar

  • ಪರಮೇಶ್ವರ್ ಪಿಎ ರಮೇಶ್ ವಿಚಾರಣೆ ನಡೆಸಿಲ್ಲ: ಐಟಿ ಸ್ಪಷ್ಟನೆ

    ಪರಮೇಶ್ವರ್ ಪಿಎ ರಮೇಶ್ ವಿಚಾರಣೆ ನಡೆಸಿಲ್ಲ: ಐಟಿ ಸ್ಪಷ್ಟನೆ

    ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಬಗ್ಗೆ ಸ್ಪಷ್ಟನೆ ನೀಡಿರುವ ಐಟಿ ಇಲಾಖೆ, ರಮೇಶ್ ಅವರನ್ನು ಯಾವುದೇ ವಿಚಾರಣೆಗೆ ಒಳಪಡಿಸಿಲ್ಲ ಎಂದು ತಿಳಿಸಿದೆ.

    ಪ್ರಕರಣದ ಸಂಬಂಧ ಐಟಿ ಇಲಾಖೆಯಿಂದ ಮಾಧ್ಯಮಗಳಿಗೆ ಸ್ಪಷ್ಟನೆ ಲಭಿಸಿದ್ದು, ಮೃತ ರಮೇಶ್ ಅವರ ಮನೆಯಲ್ಲಿ ನಮ್ಮ ತಂಡ ಶೋಧ ಕಾರ್ಯ ನಡೆಸಿಲ್ಲ. ಅಲ್ಲದೇ ರಮೇಶನಿಂದ ಯಾವುದೇ ರೀತಿಯ ಹೇಳಿಕೆಯನ್ನು ಸಹ ಪಡೆದಿಲ್ಲ. ಐಟಿ ಆಕ್ಟ್ ಸೆಕ್ಷನ್ 131, 132 ರ ಅಡಿಯಲ್ಲಿ ಯಾವುದೇ ಹೇಳಿಕೆಯನ್ನು ಕೂಡ ಪಡೆದಿಲ್ಲ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಐಟಿಯವ್ರ ಬಳಿಯೇ ಆತ್ಮಹತ್ಯೆ ಮಾಡ್ಕೊಳ್ಳೋದಾಗಿ ಹೇಳಿದ್ದರು: ರಮೇಶ್ ಪತ್ನಿ

    ಅಕ್ಟೋಬರ್ 10ರಂದು ಪರಮೇಶ್ವರ್ ನಿವಾಸಕ್ಕೆ ನಮ್ಮ ಅಧಿಕಾರಿಗಳ ತಂಡ ಪರಿಶೀಲನೆಗೆ ತೆರಳಿತ್ತು. ಈ ವೇಳೆ ಪರಮೇಶ್ವರ್ ಕಾರ್ಯಕ್ರಮದ ನಿಮಿತ್ತ ಕೊರಟಗೆರೆಗೆ ತೆರಳಿದ್ದಾರೆ ಎಂದು ಮಾಜಿ ಡಿಸಿಎಂ ಪತ್ನಿ ತಿಳಿಸಿದರು. ಮಾಹಿತಿ ತಿಳಿದ ಕೂಡಲೇ ನಮ್ಮ ತಂಡ ಕೊರಟಗೆರೆಗೆ ತೆರಳಿ ಭದ್ರತೆಯೊಂದಿಗೆ ಬೆಂಗಳೂರಿನ ನಿವಾಸಕ್ಕೆ ಕರೆತರಲಾಗಿತ್ತು. ಪರಮೇಶ್ವರ್ ಅವರ ನಿವಾಸದಲ್ಲಿ ಶೋಧ ಕಾರ್ಯ ನಡೆಸುತ್ತಿರುವ ವೇಳೆ ಪಿಎ ರಮೇಶ್ ಉಪಸ್ಥಿತರಿದ್ದರು. ಸಂಪೂರ್ಣ ತಪಾಸಣೆಯ ವೇಳೆ ಅವರು ಅಲ್ಲಿಯೇ ಇದ್ದರು. ಆ ವೇಳೆ ಪಂಚನಾಮೆಗೆ ರಮೇಶ್ ಹೇಳಿಕೆಯನಷ್ಟೇ ಪಡೆದುಕೊಂಡಿದ್ದೇವೆ ಎಂದು ಐಟಿ ಹೇಳಿದೆ. ಇದನ್ನು ಓದಿ: ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದೇನೆ, ಪತ್ನಿ-ಮಕ್ಕಳಿಗೆ ಟಾರ್ಚರ್ ಕೊಡ್ಬೇಡಿ: ರಮೇಶ್

    ಪರಮೇಶ್ವರ್ ಮನೆಯಲ್ಲಿ ಅಕ್ಟೋಬರ್ 10 ರಂದು ಆರಂಭವಾದ ತಪಾಸಣೆ ಅ.12 ಬೆಳಗಿನ 2:45 ರ ಜಾವದವರೆಗೆ ನಡೆದಿದೆ. ಅಲ್ಲಿಯವರೆಗೂ ರಮೇಶ್ ಅವರ ಮನೆಯಲ್ಲಿಯೇ ಇದ್ದರು ಎಂದು ವಿವರಗಳನ್ನು ನೀಡಿದೆ.

    ಇತ್ತ ಪರಮೇಶ್ವರ್ ಆಪ್ತ ಆತ್ಮಹತ್ಯೆ ಹಿನ್ನೆಲೆಯಲ್ಲಿ ಐಟಿ ಕೇಂದ್ರ ಕಚೇರಿಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಡಿಸಿಎಂ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕುವ ಮುನ್ನೆಚ್ಚರಿಕೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಬೆಂಗಳೂರಿನ ಕ್ವೀನ್ಸ್ ರೋಡ್ ನಲ್ಲಿರೋ ಐಟಿ ಕಚೇರಿ ಎದುರು ಒಂದು ಸಿಆರ್ ತುಕಡಿ ನಿಯೋಜಿಸಲಾಗಿದ್ದು, ಗೇಟ್ ಗಳಿಗೆ ಬೀಗ ಹಾಕಲಾಗಿದ್ದು, ಇಂದು ಐಟಿ ಕಚೇರಿ ರಜೆ ಎಂಬ ಬೋರ್ಡ್ ಕೂಡ ಗೇಟ್‍ಗೆ ಹಾಕಿದ್ದಾರೆ. ಇದನ್ನು ಓದಿ: ಪರಮೇಶ್ವರ್ ಆಪ್ತ ಸಹಾಯಕ ಆತ್ಮಹತ್ಯೆಗೆ ಐಟಿ ಅಧಿಕಾರಿಗಳೇ ಹೊಣೆ: ಸಿದ್ದರಾಮಯ್ಯ

    https://www.youtube.com/watch?v=leX5_YpaTpc

  • ಪರಮೇಶ್ವರ್ ಆಪ್ತ ಸಹಾಯಕ ಆತ್ಮಹತ್ಯೆಗೆ ಐಟಿ ಅಧಿಕಾರಿಗಳೇ ಹೊಣೆ: ಸಿದ್ದರಾಮಯ್ಯ

    ಪರಮೇಶ್ವರ್ ಆಪ್ತ ಸಹಾಯಕ ಆತ್ಮಹತ್ಯೆಗೆ ಐಟಿ ಅಧಿಕಾರಿಗಳೇ ಹೊಣೆ: ಸಿದ್ದರಾಮಯ್ಯ

    ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಕಿರುಕುಳ ಕಾರಣ ಎನ್ನಲಾಗಿದ್ದು, ಇದು ನಿಜವಾದರೆ ಅವರ ಆತ್ಮಹತ್ಯೆಗೆ ಐಟಿ ಅಧಿಕಾರಿಗಳೇ ಹೊಣೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಕಾಂಗ್ರೆಸ್ ಶಾಸಕರೊಂದಿಗೆ ನಡೆದ ಸಭೆಯ ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ರಮೇಶ್ ಅವರ ಆತ್ಮಹತ್ಯೆ ಬಗ್ಗೆ ನನಗೆ ಮಾಹಿತಿ ಲಭಿಸಿದೆ. ಆತ್ಮಹತ್ಯೆಗೂ ಮುನ್ನ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದರು ಎಂದು ತಿಳಿದಿದ್ದೇನೆ. ಅಲ್ಲದೇ 2-3 ದಿನಗಳಿಂದ ಐಟಿ ಅಧಿಕಾರಿಗಳು ವಿಚಾರಣೆ ಮಾಡುವ ವೇಳೆ ಕಿರುಕುಳ ನೀಡಿದ್ದು, ಈ ಕಿರುಕುಳ ತಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಅವರ ಕುಟುಂಬಕ್ಕೆ ಸಾಂತ್ವನವನ್ನು ಹೇಳುತ್ತೇನೆ. ಅವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಹೇಳಿದರು.

    ನಾನು ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿರುವ ಬಗ್ಗೆ ಯಾವುದೇ ಆಕ್ಷೇಪವನ್ನು ವ್ಯಕ್ತಪಡಿಸುತ್ತಿಲ್ಲ. ಆದರೆ ರಾಜಕೀಯ ದುರುದ್ದೇಶದಿಂದ ಕೇವಲ ಕಾಂಗ್ರೆಸ್ ಪಕ್ಷದ ನಾಯಕರನ್ನೇ ಟಾರ್ಗೆಟ್ ಮಾಡಿಕೊಂಡು ದಾಳಿ ನಡೆಸುತ್ತಿರುವುದು ಸರಿಯಲ್ಲ ಎಂಬುವುದು ನನ್ನ ಅಭಿಪ್ರಾಯವಾಗಿದೆ. ಕಾಂಗ್ರೆಸ್ ನಾಯಕರು ಮಾತ್ರ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರಾ? ಬಿಜೆಪಿಯ ಯಾವುದೇ ನಾಯಕರು ಶಿಕ್ಷಣ ಸಂಸ್ಥೆಗಳನ್ನು ಹೊಂದಿಲ್ಲವಾ ಎಂದು ಪ್ರಶ್ನೆ ಮಾಡಿದರು.

    https://www.youtube.com/watch?v=h8eKCo5zXfI

    ಇದೇ ವೇಳೆ 15 ಕ್ಷೇತ್ರಗಳಿಗೆ ಉಪಚುನಾವಣೆ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿದ್ದು, ಚುನಾವಣೆ ಎದುರಿಸಲು ಬೇಕಾದ ಹೆಚ್ಚಿನ ಸಿದ್ಧತೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ. ಚುನಾವಣೆಗೆ ಈಗಾಗಲೇ ತಯಾರಿ ನಡೆಸಿದ್ದು, ಗೆಲುವಿನ ದೃಷ್ಟಿಯಿಂದ ಅಭ್ಯರ್ಥಿಗಳ ಆಯ್ಕೆ, ಪಕ್ಷ ಸಂಘಟನೆಗೆ ಕೈಗೊಳ್ಳ ಬೇಕಾದ ಮತ್ತಷ್ಟು ಕಾರ್ಯಕ್ರಮಗಳ ಬಗ್ಗೆ ಈ ವೇಳೆ ಚರ್ಚೆ ನಡೆಸಿದ್ದೇವೆ ಎಂದರು. ಸಭೆಯಲ್ಲಿ ದಿನೇಶ್ ಗುಂಡೂರಾವ್, ಮಾಜಿ ಸಚಿವ ಹೆಚ್.ಕೆ.ಪಾಟೀಲ್, ಶಿವಶಂಕರರೆಡ್ಡಿ, ವಿ.ಮುನಿಯಪ್ಪ, ಆರ್.ವಿ.ದೇವರಾಜ್, ಟಿ.ಬಿ.ಜಯಚಂದ್ರ, ಮಹದೇವಪ್ಪ, ಲಕ್ಷ್ಮಿ ಹೆಬ್ಬಾಳ್ಕರ್, ಅಶೋಕ್ ಪಟ್ಟಣ್, ಬಿ.ಎಲ್.ಶಂಕರ್, ವಿ.ಆರ್.ಸುದರ್ಶನ್ ಸೇರಿ ಹಲವರು ಭಾಗಿಯಾಗಿದ್ದರು.

    ಇತ್ತ ರಮೇಶ್ ಆತ್ಮಹತ್ಯೆ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, “ಆದಾಯ ತೆರಿಗೆ ಇಲಾಖೆಯ ಅಮಾನವೀಯ ಕಿರುಕುಳಕ್ಕೆ ಮತ್ತೊಂದು ಬಲಿ. ರಾಜ್ಯದ ಜನ ಬಿಜೆಪಿ ಸರ್ಕಾರವನ್ನು, ಆದಾಯ ತೆರಿಗೆ ಇಲಾಖೆಯನ್ನು ಪ್ರಶ್ನಿಸುತ್ತಿದ್ದಾರೆ ಈ ಸಾವು ನ್ಯಾಯವೇ? ರಮೇಶ್ ಅವರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ” ಎಂದು ಬರೆದುಕೊಂಡಿದೆ.

  • ಒಂದು ಧ್ವಜ ತೆಗೆಸಿದ್ರೆ ಲಕ್ಷಾಂತರ ಧ್ವಜ ಹಾರಿಸುತ್ತೇವೆ: ಡಿಸಿಎಂಗೆ ಬಿಜೆಪಿ ನಾಯಕ ಎಚ್ಚರಿಕೆ

    ಒಂದು ಧ್ವಜ ತೆಗೆಸಿದ್ರೆ ಲಕ್ಷಾಂತರ ಧ್ವಜ ಹಾರಿಸುತ್ತೇವೆ: ಡಿಸಿಎಂಗೆ ಬಿಜೆಪಿ ನಾಯಕ ಎಚ್ಚರಿಕೆ

    ಶಿವಮೊಗ್ಗ: ನೀವು ಒಂದು ಧ್ವಜ ತೆಗೆಸಿದರೆ ನಾವು ಲಕ್ಷಾಂತರ ಧ್ವಜ ಹಾರಿಸುತ್ತೇವೆ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಉಪಮೇಯರ್ ಚನ್ನಬಸಪ್ಪ ಅವರು ಡಿಸಿಎಂ ಪರಮೇಶ್ವರ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

    ಕೊರಟಗೆರೆಯಲ್ಲಿ ಬಿಜೆಪಿ ಧ್ವಜ ತೆಗೆದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಗ್ರಾಮ ವಾಸ್ತವ್ಯ, ಜನ ಸಂಪರ್ಕ ಮಾಡಿಕೊಳ್ಳಿ ಆದರೆ ಬಿಜೆಪಿ ಧ್ವಜ ಕೀಳಿಸುವ ಕೆಲಸ ಮಾಡಬೇಡಿ ಎಂದು ದೋಸ್ತಿ ಸರ್ಕಾರದ ವಿರುದ್ಧ ಕಿಡಿಕಾರಿದರು.

    ಇಷ್ಟು ವರ್ಷಗಳ ಕಾಲ ಅಲ್ಲಿನ ಶಾಸಕರಾಗಿದ್ದು, ಜನರ ಸಮಸ್ಯೆಗಳ ಅರಿವು ನಿಮಗಿಲ್ಲ. ಈಗ ರಾಜಕೀಯಕ್ಕಾಗಿ ಕಾರ್ಯಕ್ರಮ ಮಾಡಲು ಹೊರಟಿದ್ದೀರಿ. ನೀವು ಒಂದು ಧ್ವಜ ತೆಗೆಸಿದರೆ ನಾವು ಲಕ್ಷಾಂತರ ಧ್ವಜ ಹಾರಿಸುತ್ತೇವೆ ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದರು.

    ನೀವು ಹೋಗುವ ಮಾರ್ಗದಲ್ಲಿ ಬಿಜೆಪಿ ಕಾರ್ಯಕರ್ತರು ಕಾಣಬಾರದು, ಬಿಜೆಪಿ ಧ್ವಜ ಕಾಣಬಾರದು ಎಂದರೆ ಏನರ್ಥ? ಧ್ವಜ ಕೀಳಿಸುವುದಕ್ಕಾಗಿಯೇ ಜನಸಂಪರ್ಕ ಸಭೆ ಮಾಡುತ್ತೀದ್ದೀರಾ? ಇದು ಸರ್ವಾಧಿಕಾರಿ ಧೋರಣೆ ದಬ್ಬಾಳಿಕೆ ನೀತಿ ಎಂದು ವಾಗ್ದಾಳಿ ನಡೆಸಿದರು.

    ಏನಿದು ಪ್ರಕರಣ?
    ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆಯಲ್ಲಿರುವ ಪ್ರಧಾನಮಂತ್ರಿ ಜನರಿಕ್ ಔಷಧ ಅಂಗಡಿ ಮಾಲೀಕ ಕೆ.ಎನ್ ರವಿ ಎಂಬುವವರು ತಮ್ಮ ಅಂಗಡಿ ಮುಂದೆ ಬಿಜೆಪಿ ಬಾವುಟ ಹಾಕಿದ್ದಕ್ಕೆ ಗ್ರಾಮ ಪಂಚಾಯತಿಯ ಪಿಡಿಓ ನೋಟಿಸ್ ನೀಡಿದ್ದಾರೆ. ಇದಕ್ಕೆ ಶನಿವಾರ ಡಿಸಿಎಂ ಪರಮೇಶ್ವರ್ ಅವರು ತೋವಿನಕೆರೆಯಲ್ಲಿ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಈ ಸಂದರ್ಭದಲ್ಲಿ ತುಮಕೂರಿನ ಕೆಸ್ತೂರು ರಸ್ತೆಯಲ್ಲಿರುವ ಔಷಧಿ ಅಂಗಡಿಯ ಮುಂದೆ ಡಿಸಿಎಂ ವಾಹನ ಹೋಗಬೇಕಿತ್ತು. ಹೀಗಾಗಿ ಅಂಗಡಿಯ ಮುಂದೆ ಇದ್ದ ಬಾವುಟವನ್ನು ನೋಡಿ ಡಿಸಿಎಂ ಮುಜಗರಗೊಂಡಿದ್ದರು ಎಂದು ತಿಳಿದು ಬಂದಿದೆ. ಇದರಿಂದ ಬಾವುಟ ತೆರವು ಮಾಡುವಂತೆ ಕಾಂಗ್ರೆಸ್ ಕಾರ್ಯಕರ್ತರು ಅಂಗಡಿ ಮಾಲೀಕನಿಗೆ ನೋಟಿಸ್ ನೀಡುವಂತೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು.

    ನೋಟಿಸ್‍ನಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಇಲ್ಲದೇ ಬಾವುಟ ಹಾಕಿದ್ದಕ್ಕೆ ತೆರವು ಮಾಡಿ ಎಂದು ತಿಳಿಸಲಾಗಿದೆ. ಆದರೆ ಕಾಂಗ್ರೆಸ್ ಕಾರ್ಯಕರ್ತರು ಡಿಸಿಎಂ ಬರುವ ಮಾರ್ಗದಲ್ಲಿ ಬಾವುಟ ಹಾಕಬಾರದು. ಒಂದು ವೇಳೆ ಬಾವುಟ ತೆರವುಗೊಳಿಸಿದ್ದರೆ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಜೊತೆಗೆ ಡಿಸಿಎಂ ಬರುವಾಗ ಬಾವುಟ ತೆಗೆದಿಟ್ಟುಕೊಂಡು ಅವರು ಹೋದ ಮೇಲೆ ಮತ್ತೆ ಹಾಕಿಕೊಳ್ಳಿ ಎಂದು ಸಲಹೆಯನ್ನು ನೀಡಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಡಿಸಿಎಂ ಸಣ್ಣತನದ ಮನುಷ್ಯ ಅಲ್ಲ, ವಿಶಾಲ ಆಲೋಚನೆ ಹೊಂದಿರುವ ವ್ಯಕ್ತಿ – ಖಾದರ್

    ಡಿಸಿಎಂ ಸಣ್ಣತನದ ಮನುಷ್ಯ ಅಲ್ಲ, ವಿಶಾಲ ಆಲೋಚನೆ ಹೊಂದಿರುವ ವ್ಯಕ್ತಿ – ಖಾದರ್

    ಬಳ್ಳಾರಿ: ಡಿಸಿಎಂ ಪರಮೇಶ್ವರ್ ಅವರು ಸಣ್ಣತನದ ಮನುಷ್ಯ ಅಲ್ಲ. ಅವರು ಬಹಳ ವಿಶಾಲ ಆಲೋಚನೆ ಹೊಂದಿರುವ ವ್ಯಕ್ತಿ ಎಂದು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಡಿಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ.

    ಡಿಸಿಎಂ ಪರಮೇಶ್ವರ್ ಅವರು ತೆರಳುತ್ತಿದ್ದ ದಾರಿಯಲ್ಲಿ ಬಿಜೆಪಿ ಬಾವುಟ ಹಾಕಿದವರಿಗೆ ನೋಟಿಸ್ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಅಧಿಕಾರಿಗಳು ನೋಟಿಸ್ ಕೊಟ್ಟಿರಬಹುದು. ಅದನ್ನು ಡಿಸಿಎಂ ಮೇಲೆ ಹಾಕುವುದು ಸರಿಯಲ್ಲ. ಡಿಸಿಎಂ ಸಣ್ಣತನದ ಮನುಷ್ಯ ಅಲ್ಲ. ಅವರು ಬಹಳ ವಿಶಾಲ ಆಲೋಚನೆ ಹೊಂದಿರುವ ವ್ಯಕ್ತಿ. ಈ ಬಗ್ಗೆ ಹೆಚ್ಚು ವಿಚಾರ ನನಗೆ ಗೊತ್ತಿಲ್ಲ ಎಂದು ಡಿಸಿಎಂ ಅವರನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಡಿಸಿಎಂ ಬರುವ ಮಾರ್ಗದಲ್ಲಿ ಬಿಜೆಪಿ ಬಾವುಟ ಹಾರುವಂತಿಲ್ಲ

    ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಮಾತೇ ಇಲ್ಲ. ಈ ಸರ್ಕಾರ ಭದ್ರವಾಗಿ ಇರುತ್ತದೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಸಿಎಂ ಆಗಿ ಹೆಚ್.ಡಿ ಕುಮಾರಸ್ವಾಮಿ ಅವರೇ ಇರುತ್ತಾರೆ. ಡಿಸಿಎಂ ಪರಮೇಶ್ವರ್ ಅವರೇ ಆಗಿರುತ್ತಾರೆ ಎಂದರು. ನಮ್ಮ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಹಾಗೂ ಹಿರಿಯರ ನೇತೃತ್ವದಲ್ಲಿ ಈ ಸರ್ಕಾರ ಮುನ್ನಡೆಯುತ್ತದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವರಿಷ್ಠರಾದ ದೇವೇಗೌಡರ ಒಪ್ಪಂದದ ಮೇಲೆ ಮೈತ್ರಿ ಸರ್ಕಾರ ರಚನೆಯಾಗಿದೆ ಎಂದರು.

    ದೇವೇಗೌಡರು ಹಾಗೂ ವೀರಪ್ಪ ಮೊಯ್ಲಿ ಹೇಳಿಕೆಗಳಿಗೆ ನಾವು ಪ್ರತಿಕ್ರಿಯೆ ನೀಡುವುದಿಲ್ಲ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ನಾಯಕರೆಲ್ಲ ವಿರೋಧಿಗಳಲ್ಲ. ಆದರೆ ಅವರ ಸಿದ್ಧಾಂತಗಳಿಗೆ ವಿರೋಧವಿದೆ. ನಾವೆಲ್ಲ ಜೊತೆಯಾಗಿಯೇ ಇದ್ದೇವೆ. ನೀವು ನಮ್ಮನ್ನು ಬೇರೆ, ಬೇರೆ ಮಾಡಬೇಡಿ ಎಂದು ಕೊನೆಗೆ ಹಾಸ್ಯ ಚಟಾಕಿ ಹಾರಿಸಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಉತ್ತರ ಕರ್ನಾಟಕ ನಿರ್ಲಕ್ಷ್ಯ – ಸಿಎಂ, ಡಿಸಿಎಂಗೆ ಪತ್ರ ಬರೆದು ಹೊರಟ್ಟಿ ಅಸಮಾಧಾನ

    ಉತ್ತರ ಕರ್ನಾಟಕ ನಿರ್ಲಕ್ಷ್ಯ – ಸಿಎಂ, ಡಿಸಿಎಂಗೆ ಪತ್ರ ಬರೆದು ಹೊರಟ್ಟಿ ಅಸಮಾಧಾನ

    ಬೆಂಗಳೂರು: ಉನ್ನತ ಅಧಿಕಾರಿಗಳ ನೇಮಕ, ಸಚಿವ ಸ್ಥಾನ, ಅನುದಾನ ಹಂಚಿಕೆಯಲ್ಲಿ ಸದಾ ರಾಜ್ಯ ಸರ್ಕಾರದಿಂದ ಉತ್ತರ ಕರ್ನಾಟಕದ ಭಾಗಕ್ಕೆ ಅನ್ಯಾಯವಾಗುತ್ತಿದೆ. ಉತ್ತರ ಕರ್ನಾಟಕ್ಕೆ ಅನ್ಯಾವಾಗುತ್ತ ಬಂದರು ಕೂಡ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ ಎಂದು ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಸವರಾಜ್ ಹೊರಟ್ಟಿ ಅವರು ಸಿಎಂ ಹಾಗೂ ಡಿಸಿಎಂ ಅವರಿಗೆ ಪತ್ರ ಬರೆದಿದ್ದಾರೆ.

    ಅಡ್ವಕೇಟ್ ಜನರಲ್ ನೇಮಕ ವಿಚಾರ ಮುಂದಿಟ್ಟು ಮೈತ್ರಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಬಸವರಾಜ್ ಹೊರಟ್ಟಿ ಅವರು, ಈ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾವಾಗುತ್ತಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಸರ್ಕಾರದ ನಡೆಯನ್ನು ಸವಿವರವಾಗಿ ತಿಳಿಸಿ ಹೇಳಿದ್ದಾರೆ. ಉತ್ತರ ಕರ್ನಾಟಕಕ್ಕೆ ಅನುದಾನ ಬಿಡುಗಡೆ, ಉನ್ನತ ಅಧಿಕಾರಿಗಳ ನೇಮಕಾತಿ, ಉಪಕುಲಪತಿ, ನೇಮಕಾತಿಯಲ್ಲಿ ಎಲ್ಲವೂ ದಕ್ಷಿಣ ಕರ್ನಾಟಕದವರ ಪಾಲಾಗುತ್ತಿದೆ. ನಮ್ಮಲ್ಲಿ 50 ಪಿಎಚ್‍ಡಿ ಮಾಡಿದ ಪ್ರಾಧ್ಯಾಪಕರಿದ್ದರು ನಮ್ಮ ಭಾಗದ ಜನರಿಗೆ ಅವಕಾಶ ದಕ್ಕುತ್ತಿಲ್ಲ ಎಂದಿದ್ದಾರೆ.

    ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಉತ್ತರ ಕರ್ನಾಟಕದ ಕಾಳಜಿ ವಹಿಸುತ್ತಾರೆಂದು ನಾವು ಪದೇ ಪದೇ ವೇದಿಕೆಗಳ ಮೂಲಕ ಹೇಳುತ್ತೇವೆ. ಆದರೆ ನಮ್ಮ ಹೇಳಿಕೆಗಳು ಹೇಳಿಕೆಗಳಾಗಿಯೇ ಉಳಿದಿವೆ. ಈ ರೀತಿ ಅನ್ಯಾವನ್ನು ಪದೇ ಪದೇ ಮಾಡುವುದು ಸರಿಯಾದುದಲ್ಲವೆಂದು ನನ್ನ ಭಾವನೆ. ಆದ್ದರಿಂದ ಉತ್ತರ ಕರ್ನಾಟಕದವರ ಪರವಾಗಿ ತಮ್ಮಲ್ಲಿ ವಿನಂತಿಸುವುದೇನೆಂದರೆ ಈ ಅನ್ಯಾಯವನ್ನು ಸರಿಪಡಿಸಿ ತಕ್ಷಣ ಯೋಗ್ಯರಾದವರನ್ನು ನೇಮಿಸಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

  • ನಾಮಪತ್ರ ವಾಪಸ್ ಪಡೆಯಲು 3.5 ಕೋಟಿ ರೂ. ಪಡೆದ್ರಾ ಮುದ್ದಹನುಮೇಗೌಡ?

    ನಾಮಪತ್ರ ವಾಪಸ್ ಪಡೆಯಲು 3.5 ಕೋಟಿ ರೂ. ಪಡೆದ್ರಾ ಮುದ್ದಹನುಮೇಗೌಡ?

    ತುಮಕೂರು: ಮೈತ್ರಿ ಅಭ್ಯರ್ಥಿ ವಿರುದ್ಧ ಬಂಡಾಯ ಎದ್ದಿದ್ದ ಸಂಸದ ಮುದ್ದಹನುಮೇಗೌಡ ಹಾಗೂ ಮಾಜಿ ಶಾಸಕ ರಾಜಣ್ಣ ನಾಮಪತ್ರ ವಾಪಸ್ ಪಡೆಯಲು ತಲಾ 3.5 ಕೋಟಿ ಹಣ ಪಡೆದಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ ಈ ಬಗ್ಗೆ ಮಾತುಕತೆ ನಡೆಸಿರುವ ಆಡಿಯೋವೊಂದು ಇದೀಗ ವೈರಲ್ ಆಗಿದೆ.

    ಹೌದು. ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಬೆಂಬಲಿಗ ದರ್ಶನ್, ಕಾಂಗ್ರೆಸ್ ಕಾರ್ಯಕರ್ತನೊಂದಿಗೆ ಸಂಭಾಷಣೆ ನಡೆಸಿದ ಆಡಿಯೋ ಈಗ ಲೀಕ್ ಆಗಿದೆ. ಈ ಸಂಭಾಷಣೆಯಲ್ಲಿ ರಾಜಣ್ಣ ಮತ್ತು ಮುದ್ದಹನುಮೇಗೌಡ ತಲಾ 3.5 ಕೋಟಿ ರೂ. ಪಡೆದಿದ್ದಾರೆ. ಆದರೂ ಪ್ರಚಾರಕ್ಕೆ ಬಾರದೆ ಮೋಸ ಮಾಡಿದ್ದಾರೆ ಎಂದು ಆಡಿಯೋದಲ್ಲಿ ಹೇಳಿದ್ದಾರೆ.

    ದೇವೇಗೌಡರು ಗೆದ್ದರೆ ಡಿಸಿಎಂ ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗುತ್ತಾರೆ. ಸಚಿವ ರೇವಣ್ಣ ಡಿಸಿಎಂ ಆಗುತ್ತಾರೆ. ಸಿಎಂ ಕುಮಾರಸ್ವಾಮಿ ಅವರು ಆರೋಗ್ಯ ಸಮಸ್ಯೆಯಿಂದ ವಿಶ್ರಾಂತಿಯಲ್ಲಿ ಇರಲಿದ್ದಾರೆ ಎಂದೆಲ್ಲ ದರ್ಶನ್ ಮಾತನಾಡಿದ್ದಾರೆ. ಜೊತೆಗೆ ದೇವೇಗೌಡರು ಸೋತರೆ ರಾಜಣ್ಣ ಮತ್ತು ಮುದ್ದಹನುಮೇಗೌಡರು ಪಕ್ಷದಿಂದ ಅಮಾನತು ಆಗ್ತಾರೆ ಎಂದು ಸಂಭಾಷಣೆ ನಡೆಸಿದ್ದಾರೆ.

    ಈ ಸಂಭಾಷಣೆಯ ಆಡಿಯೋ ಈಗ ಬಹಿರಂಗವಾಗಿದ್ದು, ಮತ್ತೊಂದು ವಿವಾದಕ್ಕೆ ದರ್ಶನ್ ಸಿಲುಕಿಕೊಂಡಿದ್ದಾರೆ. ಇವರು ಗುರುವಾರವಷ್ಟೆ ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿ ಜಾರಕಿಹೊಳಿ ಬೆಂಬಲಿಗರಿಂದ ಥಳಿಸಿಕೊಂಡಿದ್ದು, ಇದೀಗ ಇನ್ನೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

    ಸಂಭಾಷಣೆಯ ಆಡಿಯೋ ಇಲ್ಲಿದೆ:

  • ಎಫ್‍ಬಿ ವಾರ್ – ಡಿಸಿಎಂ ಬೆಂಬಲಿಗನ ಮೇಲೆ ಹಲ್ಲೆ

    ಎಫ್‍ಬಿ ವಾರ್ – ಡಿಸಿಎಂ ಬೆಂಬಲಿಗನ ಮೇಲೆ ಹಲ್ಲೆ

    ತುಮಕೂರು: ಮಾಜಿ ಸಚಿವ ರಮೇಶ್ ಜಾರಕಿಹೋಳಿಯನ್ನು ಫೇಸ್‍ಬುಕ್‍ನಲ್ಲಿ ನಿಂದಿಸಿದ್ದ ಡಿಸಿಎಂ ಜಿ. ಪರಮೇಶ್ವರ್ ಅವರ ಬೆಂಬಲಿಗನಿಗೆ ಜಾರಕಿಹೊಳಿ ಬೆಂಬಲಿಗರು ಗೂಸಾ ನೀಡಿದ್ದಾರೆ.

    ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಉಸ್ತುವಾರಿಯಾದ ಡಿಸಿಎಂ ಬೆಂಬಲಿಗ ದರ್ಶನ್ ಹಲ್ಲೆಗೊಳಗಾದ ವ್ಯಕ್ತಿ. ರಾಜೀನಾಮೆ ವಿಚಾರವಾಗಿ ಪೋಸ್ಟ್ ಮಾಡಿದ್ದ ದರ್ಶನ್, ರಮೇಶ್ ಜಾರಕಿಹೊಳಿ ಅವರನ್ನು ವೇಶ್ಯೆಗೆ ಹೋಲಿಕೆ ಮಾಡುವ ಮೂಲಕ ಟೀಕಿಸಿದ್ದರು.

    ಪೋಸ್ಟ್ ನಲ್ಲಿ ಏನಿದೆ?
    ಕಾಂಗ್ರೆಸ್ ಪಕ್ಷದಿಂದ ನೀನು ಅಷ್ಟೆ. ನಿನ್ನಿಂದ ಕಾಂಗ್ರೆಸ್ ಪಕ್ಷ ಅಲ್ಲಾ. ಅಲ್ಲದೆ ನೀನು ತುಕಾಲಿ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಲಾಗಿತ್ತು. ಬಳಿಕ ಎಂಜಲು ಕಾಸಿಗೆ ವೇಶ್ಯೆಯಂತೆ ಮೈಮಾರಿಕೊಳ್ತಿಯಾ ಎಂದು ಬರೆದು ಪೋಸ್ಟ್ ಮಾಡಲಾಗಿತ್ತು.

    ಈ ಪೋಸ್ಟ್ ನಿಂದ ರೊಚ್ಚಿಗೆದ್ದ ಜಾರಕಿಹೊಳಿ ಬೆಂಬಲಿಗರು ದರ್ಶನ್ ಮೇಲೆ ಹಲ್ಲೆ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಹಲ್ಲೆ ನಡೆಸಿ ಕ್ಷಮೆ ಕೇಳಿಸಿ ಜಾರಕಿಹೊಳಿ ಬೆಂಬಲಿಗರು ಫೇಸ್‍ಬುಕ್‍ನಲ್ಲಿ ಮತ್ತೆ ಪೋಸ್ಟ್ ಮಾಡಿದ್ದಾರೆ.

  • ‘ಸುರೇಶ್ ಗೌಡ ತಿಕ್ಲ, ಬಸವರಾಜು ಬಾಯಿ ಬಡಕಾ..’: ನಾಲಿಗೆ ಹರಿಬಿಟ್ಟ ಸಚಿವ ಎಸ್.ಆರ್ ಶ್ರೀನಿವಾಸ್

    ‘ಸುರೇಶ್ ಗೌಡ ತಿಕ್ಲ, ಬಸವರಾಜು ಬಾಯಿ ಬಡಕಾ..’: ನಾಲಿಗೆ ಹರಿಬಿಟ್ಟ ಸಚಿವ ಎಸ್.ಆರ್ ಶ್ರೀನಿವಾಸ್

    ತುಮಕೂರು: ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಹಾಗೂ ಬಿಜೆಪಿ ಅಭ್ಯರ್ಥಿ ಬಸವರಾಜು ವಿರುದ್ಧ ವಾಗ್ದಾಳಿ ನಡೆಸಿರುವ ಸಚಿವ ಎಸ್.ಆರ್ ಶ್ರೀನಿವಾಸ್ ಅವರು ‘ಸುರೇಶ್ ಗೌಡ ತಿಕ್ಲ..! ಬಸವರಾಜು ಬಾಯಿ ಬಡಕಾ..!’ ಎಂದು ವಾಗ್ದಾಳಿ ನಡೆಸಿದ್ದಾರೆ.

    ತುಮಕೂರು ಕ್ಷೇತ್ರದಲ್ಲಿ ಚುಣಾವಣೆ ಕಾವು ಹೆಚ್ಚಳವಾಗುತ್ತಿದಂತೆ ನಾಯಕರ ಆರೋಪ ಪ್ರತ್ಯಾರೋಪ ಹೆಚ್ಚಾಗುತ್ತಿದ್ದು, ಡಿಸಿಎಂ ಪರಮೇಶ್ವರ್ ಅವರು ಭಾಗವಹಿಸಿದ್ದ ಸಭೆಯಲ್ಲಿ ಮಾತನಾಡಿ ಸಚಿವ ಎಸ್.ಆರ್ ಶ್ರೀನಿವಾಸ್ ಎದುರಾಳಿ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಹೇಮಾವತಿ ನೀರಿನ ಬಗ್ಗೆ ಗೊತ್ತಿಲ್ಲದೆ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಸುರೇಶ್ ಗೌಡ ಒಬ್ಬ ತಿಕ್ಲ, ಬಸವರಾಜು ಬಾಯಿ ಬಡಕಾ ಎಂದು ನಿಂದನೆ ಮಾಡಿದರು.

    ಇದೇ ವೇಳೆ ಪಕ್ಷದ ನಾಯಕ ಎ.ಕೃಷ್ಣಪ್ಪರ ಸಾವಿಗೆ ನಾನು ಕಾರಣ ಎನ್ನುತ್ತಾರೆ. ಕಳೆದ ಬಾರಿ ಲೋಕಸಭಾ ಜೆ.ಡಿ.ಎಸ್ ಅಭ್ಯರ್ಥಿಯಾಗಿದ್ದ ಎ.ಕೃಷ್ಣಪ್ಪ ಅವರು ಗೊಲ್ಲ ಸಮುದಾಯದ ವ್ಯಕ್ತಿ ಆಗಿದ್ದರಿಂದ ಒಕ್ಕಲಿಗರು ಮತ ಹಾಕಿಲ್ಲ. ಈ ಬಾರಿಯೂ ಅಷ್ಟೇ ಒಕ್ಕಲಿಗರು ಇರುವ ಮತಗಟ್ಟೆಗಳಲ್ಲಿ ಒಂದೇ ಒಂದು ಮತ ಕಾಂಗ್ರೆಸ್‍ಗೆ ಹೆಚ್ಚು ಬಿದ್ದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದು ಸವಾಲು ಎಸೆದರು.

    ಊಟಕ್ಕೆ ಬ್ರೇಕ್: ಇದೇ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ಸಮುದಾಯದ ಕಾರ್ಯಕರ್ತರಿಗೆ ಊಟವನ್ನು ವ್ಯವಸ್ಥೆ ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಚುನಾವಣಾ ಅಧಿಕಾರಿಗಳು ಊಟ ವಿತರಣೆ ಮಾಡದಂತೆ ಬ್ರೇಕ್ ಹಾಕಿದರು. ಆದರೆ ಸ್ಥಳದಿಂದ ಅಧಿಕಾರಿಗಳು ತೆರಳುತ್ತಿದಂತೆ ಊಟ ವಿತರಣೆ ಮಾಡಲಾಯಿತು. ಡಿಸಿಎಂ ಜಿ.ಪರಮೇಶ್ವರ್, ಸಚಿವ ಎಸ್.ಆರ್.ಶ್ರೀನಿವಾಸ್ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿತ್ತು.

  • ಡಿಸಿಎಂ ಪರಮೇಶ್ವರ್ ಮುನಿಸು – ಮನವೊಲಿಸಲು ಮುಂದಾದ ಕಾಂಗ್ರೆಸ್ ನಾಯಕರು

    ಡಿಸಿಎಂ ಪರಮೇಶ್ವರ್ ಮುನಿಸು – ಮನವೊಲಿಸಲು ಮುಂದಾದ ಕಾಂಗ್ರೆಸ್ ನಾಯಕರು

    ಬೆಂಗಳೂರು: ತುಮಕೂರು ಜೆಡಿಎಸ್ ತೆಕ್ಕೆಗೆ ಹೋಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಡಿಸಿಎಂ ಡಾ.ಜಿ.ಪರಮೇಶ್ವರ್ ಮುನಿಸಿಕೊಂಡಿದ್ದು, ಸದ್ಯ ಪರಮೇಶ್ವರ್ ಮನವೊಲಿಕೆಗೆ ಕೈ ನಾಯಕರು ಮುಂದಾಗಿದ್ದಾರೆ.

    ಸದಾಶಿವ ನಗರದಲ್ಲಿರುವ ಪರಮೇಶ್ವರ್ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭೇಟಿ ಮಾಡಿ ಮಾತುಕತೆ ನಡೆಸಿದರು. ಇತ್ತ ಇಂದು ಅಥವಾ ನಾಳೆ ಪರಮೇಶ್ವರ್ ದೆಹಲಿಗೆ ತೆರಳುವ ಸಾಧ್ಯತೆ ಇದ್ದು, ಎಐಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.

    ಪರಮೇಶ್ವರ್ ಭೇಟಿ ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್, ನಮ್ಮಿಬ್ಬರ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಪರಮೇಶ್ವರ್ ನಮ್ಮ ನಾಯಕರಾಗಿದ್ದು, ಚುನಾವಣಾ ಸಿದ್ಧತೆ ಸಂಬಂಧ ಚರ್ಚೆಗೆ ಬಂದಿದ್ದೇನೆ ಅಷ್ಟೇ. ಲೋಕಸಭಾ ಸ್ಥಾನದ ಬಗ್ಗೆ ಎರಡು ಪಕ್ಷದ ನಾಯಕರು ಮಾತನಾಡುತ್ತೇವೆ. ಕೊನೆಯ ಘಳಿಗೆಯಲ್ಲಿ ಏನಾದರೂ ಆಗಬಹುದು ಎಂದು ತಿಳಿಸಿದರು.

    ನಾವೆಲ್ಲ ಮುದ್ದಹನುಮೇಗೌಡರ ಪರ ಇದ್ದೇವೆ, ಅವರಿಗೆ ಅನ್ಯಾಯ ಆಗಿದೆ. ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇವೆ. ನಾನೂ ಕೂಡ ದೇವೇಗೌಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಪರಮೇಶ್ವರ್ ಅವರೊಂದಿಗೆ ಎಲ್ಲರೂ ಈ ಕುರಿತು ಪ್ರಯತ್ನದಲ್ಲಿದ್ದೇವೆ. ಇನ್ನೂ ಸಿಇಸಿ ಸಭೆ ಆಗಿಲ್ಲ, ನಾಳೆ ರಾಜ್ಯಕ್ಕೆ ರಾಹುಲ್ ಗಾಂಧಿ ಆಗಮಿಸಲಿರುವ ಕಾರಣ ಅವರೊಂದಿಗೆ ಚರ್ಚೆ ನಡೆಸುತ್ತೇವೆ ಎಂದರು.

    ಇದೇ ವೇಳೆ ರಾಹುಲ್ ಗಾಂಧಿ ನಮ್ಮ ರಾಜ್ಯದಿಂದ ಸ್ಪರ್ಧೆ ಮಾಡುವಂತೆ ಮನವಿ ಮಾಡಿಕೊಂಡಿದ್ದೇವೆ. ನಾಳೆಯೂ ಈ ಕುರಿತು ಚರ್ಚೆ ಮಾಡುತ್ತೇವೆ. ಉತ್ತರ ಕರ್ನಾಟಕ ಅಥವಾ ದಕ್ಷಿಣ ಕರ್ನಾಟಕ ಎಲ್ಲೇ ಸ್ಪರ್ಧೆ ಮಾಡಲಿ. ಎಲ್ಲರೂ ಒಟ್ಟಾಗಿ ಶ್ರಮಿಸಿ ಗೆಲ್ಲಿಸುತ್ತೇವೆ ಎಂದರು. ಶಿವಮೊಗ್ಗ ಚುನಾವಣಾ ಉಸ್ತುವಾರಿ ಬಗ್ಗೆ ಪ್ರತಿಕ್ರಿಯೆ ನೀಡಿ, ಚುನಾವಣಾ ಉಸ್ತುವಾರಿಗಳ ನೇಮಕ ಇನ್ನೂ ಪಕ್ಷದಿಂದ ತೀರ್ಮಾನ ಆಗಿಲ್ಲ. ಆದರೆ ಡಿ.ಕೆ ಶಿವಕುಮಾರ್ ಶಿವಮೊಗ್ಗಕ್ಕೆ ಏಕೆ ಹೋಗ್ತಾರೆ? ಅವರಿಗೆ ಬಳ್ಳಾರಿ, ಬೆಂಗಳೂರು ಗ್ರಾಮಾಂತರ ಚುನಾವಣಾ ಉಸ್ತುವಾರಿ ಇದೆ. ಹೀಗಿರುವಾಗ ಶಿವಮೊಗ್ಗಕ್ಕೆ ಅವರು ಏಕೆ ಹೋಗುತ್ತಾರೆ ಎಂದು ಪ್ರಶ್ನಿಸಿ ಪರೋಕ್ಷವಾಗಿ ಡಿಕೆ ಶಿವಕುಮಾರ್ ಶಿವಮೊಗ್ಗ ಉಸ್ತುವಾರಿ ಆಗುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

  • “ಸಿದ್ದರಾಮಯ್ಯ ಮೈಸೂರು ಮಾತ್ರ ಉಳಿಸಿಕೊಂಡ್ರು, ನನ್ನ ಜಿಲ್ಲೆ ಬಿಟ್ಟುಕೊಟ್ಟಿದ್ದು ಸರಿಯಲ್ಲ”

    “ಸಿದ್ದರಾಮಯ್ಯ ಮೈಸೂರು ಮಾತ್ರ ಉಳಿಸಿಕೊಂಡ್ರು, ನನ್ನ ಜಿಲ್ಲೆ ಬಿಟ್ಟುಕೊಟ್ಟಿದ್ದು ಸರಿಯಲ್ಲ”

    – ಆಪ್ತರ ಜೊತೆ ಪರಮೇಶ್ವರ್ ಬೇಸರ
    – ಪಕ್ಷದಲ್ಲಿ ನನ್ನ ಮಾತಿಗೆ ಬೆಲೆಯಿಲ್ಲ

    ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರ ಜೆಡಿಎಸ್‍ಗೆ ಬಿಟ್ಟುಕೊಟ್ಟ ವಿಚಾರವಾಗಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಅವರು ಹೇಳಿದ್ದಾರೆ.

    ತುಮಕೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟ ವಿಚಾರವಾಗಿ ಜಿ.ಪರಮೇಶ್ವರ್ ಅವರು ನನ್ನ ಜೊತೆಗೆ ಫೋನ್‍ನಲ್ಲಿ ಮಾತನಾಡಿದ್ದಾರೆ. ಸ್ವಲ್ಪ ಬೇಜಾರಿನಿಂದ ಮಾತನಾಡಿದರು. ಆದರೆ ಮೈತ್ರಿ ನಿಯಮ ಎಲ್ಲರಿಗೂ ಅನ್ವಯವಾಗುತ್ತದೆ. ಹೀಗಾಗಿ ಹೈಕಮಾಂಡ್ ನಿರ್ಧಾರಕ್ಕೆ ಮಣಿದಿದ್ದಾರೆ ಎಂದು ಎಸ್.ಟಿ.ಸೋಮಶೇಖರ್ ಹೇಳಿದರು.

    ನನ್ನ ಕ್ಷೇತ್ರವನ್ನೇ ಯಾಕೆ ಟಾರ್ಗೆಟ್ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಕ್ಷೇತ್ರವನ್ನು ಮಾತ್ರ ಉಳಿಸಿಕೊಂಡರು. ನನ್ನ ಜಿಲ್ಲೆ ಬಿಟ್ಟುಕೊಟ್ಟಿದ್ದು ಸರಿಯಲ್ಲವೆಂದು ಎಂದು ಜಿ.ಪರಮೇಶ್ವರ್ ಅವರು ಆಪ್ತರ ಮುಂದೆ ಅಸಮಾಧಾನ ಹೊರಹಾಕಿದ್ದಾರೆ ಅಂತ ಕಾಂಗ್ರೆಸ್ ಮೂಲಗಳು ತಿಳಿಸಿವೆ.

    ಪಕ್ಷದಲ್ಲಿ ನನ್ನ ಮಾತಿಗೆ ಬೆಲೆಯೇ ಇಲ್ಲದಂತಾಗಿದೆ. ನನ್ನ ಮೇಲೆ ಈ ಕೋಪವೇಕೆ? ತುಮಕೂರಿನ ಹಾಲಿ ಸಂಸದ ಮುದ್ದುಹನುಮೇಗೌಡ ಅವರು ಚೆನ್ನಾಗಿ ಕೆಲಸ ಮಾಡಿದ್ದರು. ಆದರೆ ಈ ಬಾರಿ ಅವರಿಗೆ ಯಾಕೆ ಅನ್ಯಾಯ ಮಾಡಿದರೋ ಗೊತ್ತಿಲ್ಲ. ಈ ರೀತಿ ಮಾಡಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv