Tag: DCM Govinda Karajola

  • ಸಿಎಂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಕನಸುಗಾರ: ಡಿಸಿಎಂ ಗೋವಿಂದ ಕಾರಜೋಳ

    ಸಿಎಂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಕನಸುಗಾರ: ಡಿಸಿಎಂ ಗೋವಿಂದ ಕಾರಜೋಳ

    ಕಲಬುರಗಿ: ಬಡವರು, ಗುಳೆಹೋಗುವವರು ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚಾಗಿದ್ದಾರೆ. ಹೀಗಾಗಿ ಈ ಪ್ರದೇಶದ ಅಭಿವೃದ್ಧಿಗೆ ನಮ್ಮ ಸರ್ಕಾರ ವಿಶೇಷ ಒತ್ತು ನೀಡಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

    ಕಲಬುರಗಿಯಲ್ಲಿ ಇಂದು ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಹಿಂದಿನ ಅವಧಿಯಲ್ಲಿ ಕಲಬುರಗಿಯಲ್ಲಿ ಸಂಪುಟ ಸಭೆ ನಡೆಸಿ, ಈ ಭಾಗದ ಯೋಜನೆಗಳಿಗೆ ಅನುದಾನ ನೀಡಿದ್ದರು. ಗುಲಾಮಗಿರಿಯ ಸಂಕೇತ ಕಳಚಲು ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ವರ್ಷದ ಹಿಂದೆ ನಾಮಕರಣ ಮಾಡಿದ್ದಾರೆ. ಅವರು ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಕನಸುಗಾರ ಎಂದು ಬಣ್ಣಿಸಿದರು.

    ಸಮಾಜ ಕಲ್ಯಾಣ ಇಲಾಖೆಯಿಂದ ಈ ಭಾಗದಲ್ಲಿ 30 ಕೋಟಿ ವೆಚ್ಚದಲ್ಲಿ ವಸತಿ ನಿಲಯ ನಿರ್ಮಿಸಿದ್ದು, ಕೆಲವೊಂದು ಪೂರ್ಣಗೊಂಡಿವೆ. ಅವುಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಮುಖ್ಯಮಂತ್ರಿ ನೆರವೇರಿಸಿದರು. ಕಳೆದ ವರ್ಷ ರಾಜ್ಯದಲ್ಲಿ ಬರ, ನೆರೆ ಮತ್ತು ಪ್ರವಾಹದ ಸಂಕಷ್ಟ ಇತ್ತು. ಈ ವರ್ಷ ನೆರೆ ಮತ್ತು ಕೊರೊನಾ ಸಂಕಷ್ಟ ಎದುರಾಗಿದೆ. ಈ ಸಂಕಷ್ಟಗಳ ಮಧ್ಯೆಯೂ ನಮ್ಮ ಸರ್ಕಾರ ಅಭಿವೃದ್ಧಿಗೆ ಒತ್ತು ನೀಡುತ್ತಿದೆ ಎಂದು ಹೇಳಿದರು.

    ಕಲ್ಯಾಣ ಕರ್ನಾಟಕ ಪ್ರದೇಶ ಸೇರಿದಂತೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಈ ಭಾಗದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು. ಮಾನ್ಯ ಮುಖ್ಯಮಂತ್ರಿಗಳು ಇಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಕಲಬುರಗಿಯಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

  • ರಾಜ್ಯದಲ್ಲಿ ಪೌರತ್ವ ಕಾಯ್ದೆ ಕಿಚ್ಚು- ಕಾಂಗ್ರೆಸ್, ಕೆಲ ಸಂಘಟನೆಗಳ ವಿರುದ್ಧ ಡಿಸಿಎಂ ಗರಂ

    ರಾಜ್ಯದಲ್ಲಿ ಪೌರತ್ವ ಕಾಯ್ದೆ ಕಿಚ್ಚು- ಕಾಂಗ್ರೆಸ್, ಕೆಲ ಸಂಘಟನೆಗಳ ವಿರುದ್ಧ ಡಿಸಿಎಂ ಗರಂ

    ಬಾಗಲಕೋಟೆ: ರಾಜ್ಯದಲ್ಲಿ ಪೌರತ್ವ ಕಾಯ್ದೆ ಪರ-ವಿರೋಧ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕಾಂಗ್ರೆಸ್ ಹಾಗೂ ಕೆಲ ಸಂಘಟನೆಗಳ ವಿರುದ್ಧ ಗರಂ ಆಗಿದ್ದಾರೆ.

    ಬಾಗಲಕೋಟೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪೌರತ್ವ ಕಾಯ್ದೆಯಲ್ಲಿ ಕಾಂಗ್ರೆಸ್ ಮತ್ತು ಕೆಲವು ಸಂಘಟನೆಗಳು ದೇಶದ ಕೆಲ ಸಮುದಾಯ ಹಾಗೂ ಧರ್ಮಿಯರಿಗೆ ಗೊಂದಲ ಸೃಷ್ಟಿಮಾಡುತ್ತಿವೆ ಎಂದು ದೂರಿದರು. ಕಾಂಗ್ರೆಸ್ ಹಾಗೂ ಕೆಲವು ಸಂಘಟನೆಗಳು ಭಾವನಾತ್ಮಕವಾಗಿ ವಿಷಯಗಳನ್ನ ಕೆದಕುವ ಪ್ರಯತ್ನ ಮಾಡಿ, ದೇಶದ್ರೋಹಿ ಕೆಲಸ ಮಾಡ್ತಿದ್ದಾರೆಂದು ಆರೋಪಿಸಿದರು.

    ಪೌರತ್ವ ಕಾಯ್ದೆಯನ್ನ ಕೇವಲ ಭಾರತ ದೇಶದಲ್ಲಿ ಅಷ್ಟೇ ತಂದಿಲ್ಲ, ಇಡೀ ಪ್ರಪಂಚದ ಎಲ್ಲಾ ದೇಶಗಳಲ್ಲಿ ಆಯಾ ದೇಶಗಳ ಸುರಕ್ಷತೆ ಹಾಗೂ ಭದ್ರತೆಗಾಗಿ ಇರುವ ಕಾನೂನು ಅದು. ಇಡೀ ಸಂಸತ್ ಕಾನೂನಿಗೆ ತಿದ್ದುಪಡಿಕೊಟ್ಟು, ಒಪ್ಪಿಗೆ ಕೊಟ್ಟಿದೆ. ಆದರೆ ಮುಸಲ್ಮಾನರಿಗೆ ಅನ್ಯಾಯವಾಗ್ತಿದೆ ಎಂದು ಕಾಂಗ್ರೆಸ್ಸಿನವರು ದೇಶದ ಉದ್ದಗಲಕ್ಕೂ ಬೊಬ್ಬೆ ಹಾಕ್ತಿದ್ದಾರೆ ಎಂದು ಕಿಡಿಕಾರಿದರು.

    ಈ ದೇಶದಲ್ಲಿರುವ ಯಾವುದೇ ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ ಹಾಗೂ ಪಾರ್ಸಿ ಧರ್ಮಿಯರಿಗೆ ಅನ್ಯಾಯವಾಗಲ್ಲ. ಯಾರು ನಮ್ಮ ವೈರಿ ದೇಶದಿಂದ ಬಂದು ಅಕ್ರಮವಾಗಿ ವಲಸಿದ್ದಾರೋ, ಅವರನ್ನ ಪತ್ತೆ ಹಚ್ಚಿ, ಅವರನ್ನ ಇಲ್ಲಿ ಇಡಬೇಕೋ, ಇಡಬಾರದೋ ಅನ್ನುವುದರ ಬಗ್ಗೆ ತೀರ್ಮಾನ ಮಾಡಲಾಗುವುದು. ಅಂತವರನ್ನ ಪತ್ತೆ ಹಚ್ತೀವಿ ಅಂದರೆ ಕಾಂಗ್ರೆಸ್ಸಿನವರು ಯಾಕೆ ಅಡ್ಡಿ ಮಾಡುತ್ತಿದ್ದಾರೆಂದು ಖಾರವಾಗಿ ಪ್ರಶ್ನಿಸಿದರು.

    ಅಕ್ರಮ ವಲಸಿಗರಿಂದ ಆರ್ಥಿಕ ವ್ಯವಸ್ಥೆ ಹಾಳು ಮಾಡುವ ಕೆಲಸ ಆಗುತ್ತಿದೆ. ದೇಶದಲ್ಲಿ ಭಯೋತ್ಪಾದನೆ ಚಟುವಟಿಕಗಳು ಆಗುತ್ತಿವೆ. ಇದನ್ನ ನಿಯಂತ್ರಣ ಮಾಡಬಾರದು ಅಂದರೆ ಯಾವ ನ್ಯಾಯ ಎಂದು ಪ್ರಶ್ನಿಸಿದರು. ಜೊತೆಗೆ ಕಾಂಗ್ರೆಸ್ಸಿಗೆ ಒಂದೇ ಚಿಂತೆ, ಅದು ಓಟ್ ಬ್ಯಾಂಕ್ ಚಿಂತೆ ಎಂದು ಡಿಸಿಎಂ ಟಾಂಗ್ ಕೊಟ್ಟರು. ಮುಸಲ್ಮಾನರು ಹಾಗೂ ಹರಿಜನ, ಗಿರಿಜನರನ್ನ ಓಟ್ ಬ್ಯಾಂಕ್ ಮಾಡಿದ್ದಾರೆ ಹೊರತು ಮತ್ತೇನು ಮಾಡಿಲ್ಲ ಎಂದು ಕೈ ವಿರುದ್ಧ ಕಿಡಿಕಾರಿದರು.

  • ಇನ್ನಾದ್ರೂ ರಸ್ತೆ ಸರಿ ಮಾಡ್ರಪ್ಪ – ಹದಗೆಟ್ಟ ರಸ್ತೆ ದುಸ್ಥಿತಿ ಬಗ್ಗೆ ದಂಪತಿ, ಮಗನ ಫೋಟೋಶೂಟ್

    ಇನ್ನಾದ್ರೂ ರಸ್ತೆ ಸರಿ ಮಾಡ್ರಪ್ಪ – ಹದಗೆಟ್ಟ ರಸ್ತೆ ದುಸ್ಥಿತಿ ಬಗ್ಗೆ ದಂಪತಿ, ಮಗನ ಫೋಟೋಶೂಟ್

    ಹಾವೇರಿ: ಜಿಲ್ಲೆಯ ಬ್ಯಾಡಗಿ ನಗರದ ರಸ್ತೆಗಳ ದುಸ್ಥಿತಿ ಬಗ್ಗೆ ತಿಳಿಸಲು ದಂಪತಿ ಹಾಗೂ ಮಗ ವಿಭಿನ್ನ ಫೋಟೋಶೂಟ್ ಮಾಡಿಸಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

    ಬ್ಯಾಡಗಿ ನಗರದ ರಸ್ತೆಯ ತಗ್ಗುಗುಂಡಿಗಳ ಬಗ್ಗೆ ವಿಭಿನ್ನ ಫೋಟೋಶೂಟ್ ಮಾಡಿಸಿ ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಗಮನ ಸೆಳೆಯಲು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಬ್ಯಾಡಗಿ ನಗರದ ನಿವಾಸಿಗಳಾದ ಕಿರಣ್ ಕುಮಾರ್, ಅವರ ಪತ್ನಿ ಹಾಗೂ ಮಗ ಮೂವರು ಸೇರಿ ಹದಗೆಟ್ಟ ರಸ್ತೆಗಳ ಬಗ್ಗೆ ವಿಡಂಭನಾತ್ಮಕ ಫೋಟೋಶೂಟ್ ಮಾಡಿರುವುದು ಎಲ್ಲರ ಗಮನ ಸೆಳೆಸಿದೆ. ಇದನ್ನು ನೋಡಿ ಇನ್ನಾದರೂ ರಸ್ತೆ ಸರಿಮಾಡ್ರಪ್ಪ ಎಂದು ಜನರು ಜನಪ್ರತಿನಿಧಿಗಳ ಕಾಲೆಳೆಯುತ್ತಿದ್ದಾರೆ. ಇದನ್ನೂ ಓದಿ:ನಿಮ್ಮ ಬೇಜವಾಬ್ದಾರಿಯಿಂದ ಒಂದು ಹೆಣ್ಣುಮಗಳ ಪ್ರಾಣ ಹೋಯ್ತು – ಸಿಟಿ ರವಿಗೆ ಜನಸಾಮಾನ್ಯರ ತರಾಟೆ

    ದಂಪತಿ ತಗ್ಗು ಗುಂಡಿಗಳಲ್ಲಿ ಬೈಕ್ ನಿಲ್ಲಿಸಿ, ಬೈಕ್ ಮೇಲೆ ತಗ್ಗುಗುಂಡಿಗಳಲ್ಲಿ ಅಪಾಯಕಾರಿ ಪ್ರಯಾಣ ಬಿಂಬಿಸುವ ಫೋಟೋ, ತಾಯಿ ಮಗನೊಂದಿಗೆ ಬೈಕಿನಲ್ಲಿ ಕಿತ್ತು ಹೋಗಿರುವ ಡಾಂಬರ್ ರಸ್ತೆ ಹೋಗುತ್ತಿರುವ ಫೋಟೋ, ರಸ್ತೆ ತಗ್ಗು ಗುಂಡಿಯ ಅಕ್ಕಪಕ್ಕ ಕೈ ಹಿಡಿದು ನಿಂತ ದಂಪತಿ, ಹದಗೆಟ್ಟ ರಸ್ತೆ ಮೇಲೆ ಕುಳಿತ ಪೋಸ್, ತಗ್ಗು ಗುಂಡಿ ಮುಂದೆ ಮಲಗಿದ ಫೋಟೋ ಹಾಗೂ ತಂದೆ-ಮಗ ಒಳಚರಂಡಿ ಮ್ಯಾನ್ ಹೋಲ್ ಮೇಲೆ ಕೈ ಮುಗಿದು ನಿಂತಿರುವುದು, ಮಕ್ಕಳ ಜೊತೆ ಮಗ ರಸ್ತೆಯಲ್ಲಿ ನಿಂತ ನೀರಲ್ಲಿ ದೋಣಿ ಬಿಡುತ್ತಿರುವ ಹಾಗೆ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದನ್ನೂ ಓದಿ:ಕಿತ್ತುಹೋಗಿರುವ ರಸ್ತೆ, ಪ್ರತಿನಿತ್ಯ ಅಪಘಾತ- ರಾಷ್ಟ್ರೀಯ ಹೆದ್ದಾರಿ ದುಸ್ಥಿತಿಗೆ ಸವಾರರು ಸುಸ್ತು

    ಈ ಫೋಟೋಗಳನ್ನು ಕಿರಣ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ದಂಪತಿಯ ವಿಭಿನ್ನ ಫೋಟೋಶೂಟ್ ಎಲ್ಲರ ಗಮನ ಸೆಳೆದಿದೆ.

  • ಪ್ರವಾಹ ನೀರಲ್ಲಿ ನಿಂತು ಪತ್ರ ಓದಿ ಕಾರಜೋಳರ ವಿರುದ್ಧ ಬಾಲಕಿಯ ಆಕ್ರೋಶ

    ಪ್ರವಾಹ ನೀರಲ್ಲಿ ನಿಂತು ಪತ್ರ ಓದಿ ಕಾರಜೋಳರ ವಿರುದ್ಧ ಬಾಲಕಿಯ ಆಕ್ರೋಶ

    – ಒಂದು ರಸ್ತೆಯನ್ನು ಮಾಡದ ನೀವೆಂಥ ಜನಪ್ರತಿನಿಧಿಗಳು?
    – ಭಾರೀ ಚರ್ಚೆಗೆ ಗ್ರಾಸವಾಯ್ತು ವಿಡಿಯೋ

    ಬಾಗಲಕೋಟೆ: ಪ್ರವಾಹದ ನೀರಲ್ಲಿ ನಿಂತು ಪತ್ರದ ಮೂಲಕ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಬಾಲಕಿಯೊಬ್ಬಳು ಸವಾಲು ಹಾಕಿದ್ದಾಳೆ.

    ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿಯ ಬಾಲಕಿ ಅನ್ನಪೂರ್ಣ ಈ ಪತ್ರವನ್ನು ನೀರಿನಲ್ಲಿಯೇ ನಿಂತುಕೊಂಡು ಓದಿದ್ದಾಳೆ. ನಮ್ಮ ಗ್ರಾಮದ ರಸ್ತೆ ಜಲಾವೃತವಾಗಿವೆ. ಮೂರು ದಿನದಿಂದ ನೀರು ಹರಿದು ಬರುತ್ತಿದೆ. ಯಾರೂ ಕೂಡ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ನೀವು ನಿಜವಾಗಿಯೂ ಜನಸೇವೆ ಮಾಡಲು ಪ್ರಮಾಣ ಮಾಡಿದ್ದರೆ ಹೀಗ್ಯಾಕೆ ಆಗುತಿತ್ತು. ಒಂದು ರಸ್ತೆಯನ್ನೂ ಮಾಡದಿದ್ದರೆ ನೀವ್ಯಾಕೆ ಜನಪ್ರತಿನಿಧಿಗಳಾಗಬೇಕು ಎಂದು ಬಾಲಕಿ ತರಾಟೆಗೆ ತೆಗೆದುಕೊಂಡಿದ್ದಾಳೆ.

    ಬಾಲಕಿ ಪತ್ರ ಓದುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಮುಧೋಳ ರೈತರು, ಸಂತ್ರಸ್ತರು ಸಂಕಷ್ಟದಲ್ಲಿದ್ದರೆ, ಡಿಸಿಎಂ ಗೋವಿಂದ ಕಾರಜೋಳ ಬೆಂಗಳೂರಿನಲ್ಲಿದ್ದಾರೆ. ಮುಧೋಳ ತಾಲೂಕಿನ 20ಕ್ಕೂ ಹೆಚ್ಚು ಗ್ರಾಮಗಳ ಜನರು ಘಟಪ್ರಭಾ ನದಿಯ ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ಮೂರು ದಿನಗಳಿಂದ ಸುರಿದ ಭಾರಿ ಮಳೆಗೆ ಮುಧೋಳ ತಾಲೂಕಿನಲ್ಲಿ 210 ಮನೆಗಳು ನೆಲಸಮವಾಗಿವೆ.

    ಅಪಾರ ಪ್ರಮಾಣದ ಕಬ್ಬು, ಅರಿಶಿನ, ಈರುಳ್ಳಿ ಬೆಳೆಗಳು ಜಲಾವೃತವಾಗಿ ಹಾನಿಯಾಗಿವೆ. ಇದೀಗ ಮತ್ತೆ ಪ್ರವಾಹದಿಂದ ರೈತರು, ಸಂತ್ರಸ್ತರು ಸಂಕಷ್ಟ ಎದುರಿಸುತ್ತಿದ್ದಾರೆ. ಮುಧೋಳ ತಾಲೂಕಿನಲ್ಲೇ ಅತೀ ಹೆಚ್ಚು ಮಳೆ ಹಾನಿಯಾಗಿದ್ದರೂ ಸಹ ಸ್ವಕ್ಷೇತ್ರದತ್ತ ಡಿಸಿಎಂ ಗೋವಿಂದ ಕಾರಜೋಳ ತಿರುಗಿಯೂ ನೋಡದ್ದಕ್ಕೆ ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ.

    ಬಾಲಕಿ ಹೇಳಿದ್ದೇನು?
    ರನ್ನ ಬೆಳಗಲಿ ಪಟ್ಟಣದ ಮುಖ್ಯ ಅಧಿಕಾರಿಗಳು ಹಾಗೂ ಮುಧೋಳ ತಾಲೂಕಿನ ಹಾಲಿ ಶಾಸಕರಿಗೆ ಹಾಗೂ ಬೆಳಗಲಿ ಪಟ್ಟಣದ ಪಂಚಾಯ್ತಿ ಅಧಿಕಾರಿಗಳು, ಚೇರ್ಮನ್ ಹಾಗೂ ಸದಸ್ಯರು, 17ನೇ ವಾರ್ಡ್ ಸದಸ್ಯರಿಗೆ ತಿಳಿಸುವುದೇನೆಂದರೆ ನಮ್ಮ ಬೀದಿ, ರಸ್ತೆ ಜಲಾವೃತವಾಗಿದೆ. ಬೆಳಗಲಿಯಿಂದ ಚಿಮ್ಮಡ ರಸ್ತೆ ಹಾಳಾಗಿದೆ. 3 ದಿನಗಳಿಂದ ನೀರು ಸತತವಾಗಿ ಹರಿದು ಬರುತ್ತಿದೆ. ಯಾರೂ ಕೂಡ ಈ ರಸ್ತೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನೀವು ನಿಜವಾಗಲು ಜನ ಸೇವೆ ಮಾಡಲು ಪ್ರಮಾಣ ಮಾಡಿದ್ದರೆ, ನೀವು ರಾಜಕಾರಣಿಗಳಾಗಿದ್ದರೆ ಒಂದು ರಸ್ತೆ ಕೂಡ ಮಾಡಲು ಆಗದವರು ನೀವ್ಯಾಕೆ ಯಾಕೆ ಜನಪ್ರತಿನಿಧಿಯಾಗಬೇಕು? ದಯವಿಟ್ಟು ಇದನ್ನ ಎಲ್ಲರಿಗೂ ಶೇರ್ ಮಾಡಿ, ಎಂಎಲ್‍ಎ ಅವರಿಗೆ ತಲುಪುವ ತನಕ ಶೇರ್ ಮಾಡಿ.