Tag: DCM Ashwaththa Narayana

  • 4 ಜಿಲ್ಲೆಗಳಿಗೆ ವಿಜ್ಞಾನ ಲ್ಯಾಬ್ ಕಿಟ್-ಡಿಸಿಎಂ ಹಸಿರು ನಿಶಾನೆ

    4 ಜಿಲ್ಲೆಗಳಿಗೆ ವಿಜ್ಞಾನ ಲ್ಯಾಬ್ ಕಿಟ್-ಡಿಸಿಎಂ ಹಸಿರು ನಿಶಾನೆ

    ಧಾರವಾಡ: ಬಳ್ಳಾರಿ, ಬೀದರ್, ಕಲಬುರಗಿ ಮತ್ತು ಬೆಳಗಾವಿಯ ಸರ್ಕಾರಿ ಪ್ರೌಢಶಾಲೆಗಳಿಗೆ ಧಾರವಾಡ ವಿಶ್ವವಿದ್ಯಾಲಯದಿಂದ ವಿಜ್ಞಾನ ಉಪಕರಣಗಳ ಕಿಟ್‍ಗಳನ್ನು ಕಳಿಸಲು ಉನ್ನತ ಶಿಕ್ಷಣ ಸಚಿವರೂ ಆದ ಡಿಸಿಎಂ ಅಶ್ವತ್ಥನಾರಾಯಣ ಹಸಿರು ನಿಶಾನೆ ತೋರಿದರು.

    ಧಾರವಾಡ ವಿವಿ ವಿಶ್ವವಿದ್ಯಾಲಯದ ವಿಜ್ಞಾನ ಉಪಕರಣ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ಬಳ್ಳಾರಿ ಜಿಲ್ಲೆ ಸರ್ಕಾರಿ ಪ್ರೌಢಶಾಲೆಗಳಿಗೆ 1.11 ಕೋಟಿ ರೂ. ವೆಚ್ಚದ 199 ಲ್ಯಾಬ್ ಕಿಟ್‍ಗಳನ್ನು ಕಳಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ, ಬೀದರ್ ಜಿಲ್ಲೆಯ ಶಾಲೆಗಳಿಗೆ 45 ಲಕ್ಷ ರೂ. ವೆಚ್ಚದಲ್ಲಿ 46 ಲ್ಯಾಬ್ ಕಿಟ್‍ಗಳನ್ನು ಹಾಗೂ ಬೆಳಗಾವಿ ಜಿಲ್ಲೆಯ 20 ಸರ್ಕಾರಿ ಪ್ರೌಢಶಾಲೆಗಳಿಗೆ ಹಾಗೂ ಕಲಬುರಗಿ ವಿಭಾಗದ 10 ಸರ್ಕಾರಿ ಪ್ರೌಢಶಾಲೆಗಳಿಗೆ 30ಲಕ್ಷ ರೂ. ವೆಚ್ಚದಲ್ಲಿ ಲ್ಯಾಬ್ ಕಿಟ್‍ಗಳನ್ನು ಕಳಿಸಲಾಗುತ್ತಿದೆ ಎಂದು ತಿಳಿಸಿದರು.

    ಇದೇ ವೇಳೆ ವಿವಿಯ ಕ್ಯಾಂಪಸ್‍ನಲ್ಲಿ ನಡೆಯುತ್ತಿರುವ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಡಿಸಿಎಂ ಪರಿಶೀಲನೆ ನಡೆಸಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಅರವಿಂದ ಬೆಲ್ಲದ, ಎಸ್. ವಿ.ಸಂಕನೂರು ಮತ್ತಿತರರು ಇದ್ದರು. ಇದನ್ನೂ ಓದಿ: ದರ್ಶನ್ 25 ಕೋಟಿ ಲೋನ್ ಕೇಸ್‍ಗೆ ಬಿಗ್ ಟ್ವಿಸ್ಟ್ – ಆರೋಪಿ ಜೊತೆ ನಿರ್ಮಾಪಕ ಉಮಾಪತಿಗೆ ನಂಟು!

  • 2022ರಿಂದ 3 ದಿನ ‘ಬೆಂಗಳೂರು ಹಬ್ಬ’ವಾಗಿ ಕೆಂಪೇಗೌಡ ಜಯಂತಿ ಆಚರಣೆ: ಡಿಸಿಎಂ

    2022ರಿಂದ 3 ದಿನ ‘ಬೆಂಗಳೂರು ಹಬ್ಬ’ವಾಗಿ ಕೆಂಪೇಗೌಡ ಜಯಂತಿ ಆಚರಣೆ: ಡಿಸಿಎಂ

    ಬೆಂಗಳೂರು: ಮುಂದಿನ ವರ್ಷದಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಮೂರು ದಿನಗಳ ಕಾಲ ‘ಬೆಂಗಳೂರು ಹಬ್ಬ’ವನ್ನಾಗಿ ಆಚರಿಸಲಾಗುವುದು ಎಂದು ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ ನಿಮಿತ್ತ ವಿಧಾನಸೌಧ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಜಯಂತಿ ಆಚರಣೆಯಲ್ಲಿ ಅಂಚೆ ಲಕೋಟೆ ಲೋಕಾರ್ಪಣೆ ಹಾಗೂ ಅಧ್ಯಯನ ಕೇಂದ್ರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿ ವರ್ಷ ಜೂನ್ 27ರಂದು ನಾಡಪ್ರಭುಗಳ ಜಯಂತಿಯನ್ನು ಆಚರಿಸಲಾಗುತ್ತದೆ. ಜೂನ್ 26, 27 ಮತ್ತು 28ರಂದು, ಅಂದರೆ 3 ದಿನಗಳ ಕಾಲ ಅವರ ಜಯಂತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಬೆಂಗಳೂರು ಹಬ್ಬ’ದ ಹೆಸರಿನಲ್ಲಿ ಆಚರಿಸಲಾಗುವುದು. ಆ ಮೂರೂ ದಿನಗಳ ಕಾಲ ಬೆಂಗಳೂರು ನಗರದಲ್ಲಿನ ಎಲ್ಲ ಪಾರಂಪರಿಕ ತಾಣ, ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ವಿಶ್ವವಿಖ್ಯಾತ ಹಬ್ಬದ ಮಾದರಿಯಲ್ಲಿ ಆಚರಿಸಲಾಗುವುದು ಎಂದು ಡಿಸಿಎಂ ಹೇಳಿದರು.

    ಮುಂದಿನ ವರ್ಷ ಲೋಕಾರ್ಪಣೆ
    ಬೆಂಗಳೂರು ಆಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದಿನ 23 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಸೆಂಟ್ರಲ್ ಪಾರ್ಕ್ ನಡುವೆ ಸ್ಥಾಪನೆಯಾಗುತ್ತಿರುವ 108 ಎಡಿ ಎತ್ತರದ ಲೋಹ ಪ್ರತಿಮೆ ಲೋಕಾರ್ಪಣೆ ಮುಂದಿನ ವರ್ಷದ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಡಿಸಿಎಂ ಡಾ.ಅಶ್ವತ್ಥನಾರಾಯಣ ಪ್ರಕಟಿಸಿದರು.

    ಈ ವರ್ಷದ ಜಯಂತಿ ದಿನವೇ ಪ್ರತಿಮೆ ಲೋಕಾರ್ಪಣೆ ಆಗಬೇಕಿತ್ತು. ಕೋವಿಡ್ ಕಾರಣದಿಂದ ತಡವಾಯಿತು. ಈಗಾಗಲೇ ನೋಯಿಡಾದಲ್ಲಿ ಪ್ರತಿಮೆ ಭರದಿಂದ ತಯಾರಾಗುತ್ತಿದೆ. ಏರ್‍ಪೋರ್ಟ್ ನಲ್ಲೂ ಕಾಮಗಾರಿ ಪುನಾ ಆರಂಭವಾಗಿದೆ. ಈ ಯೋಜನೆ ಕಾರ್ಯಗತವಾದ ಮೇಲೆ ಅದು ಬೆಂಗಳೂರಿನ ದೊಡ್ಡ ಹೆಗ್ಗುರುತಾಗಿ ಕಾಣಲಿದೆ ಎಂದು ಅವರು ವಿವರಿಸಿದರು.

    ಕೆಂಪೇಗೌಡ ಪ್ರವಾಸೋದ್ಯಮ ಸರ್ಕ್ಯೂಟ್
    ಬೃಹತ್ತಾಗಿ ಬೆಂಗಳೂರು ನಗರದ ಸುತ್ತಮುತ್ತ ಈಗಲೂ 15,000 ಹೆಕ್ಟೇರ್ ದಟ್ಟ ಅರಣ್ಯವಿದೆ. ಅದರ ಜತೆಗೆ ರಾಜಧಾನಿಯ ಸುತ್ತಮುತ್ತಲಿನಲ್ಲಿ ಕೆಂಪೇಗೌಡರಿಗೆ ಸಂಬಂಧಿಸಿದ 46 ಪಾರಂಪರಿಕ ತಾಣಗಳಿವೆ. ಇವೆಲ್ಲವನ್ನೂ ಅನುಸಂಧಾನಗೊಳಿಸಿ ಒಂದು ಬೃಹತ್ತಾದ ಪ್ರವಾಸೋದ್ಯಮ ಸರ್ಕ್ಯೂಟ್ ಅನ್ನು ಮಾಡಲು ಉದ್ದೇಶಿಸಲಾಗಿದೆ. ಈ ಮೂಲಕ ಕೆಂಪೇಗೌಡರ ಬಗ್ಗೆ ಇಡೀ ಜಗತ್ತಿಗೆ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಇನ್ನೆರಡು ವರ್ಷದೊಳಗೆ ಈ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೆ ತರಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.

    ಉಳಿದಂತೆ ಕೆಂಪೇಗೌಡರು ಐಕ್ಯರಾಗಿರುವ, ಅವರ ವೀರ ಸಮಾಧಿ ಇರುವ ಮಾಗಡಿ ತಾಲೂಕಿನ ಕೆಂಪಾಪುರವನ್ನು ಜಾಗತಿಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದು ಭೂಸ್ವಾಧೀನ ನಡೆಯುತ್ತಿದೆ. ಮುಂದಿನ ವರ್ಷದ ಜಯಂತಿ ಕಾರ್ಯಕ್ರಮವನ್ನು ನಾಡಪ್ರಭುಗಳ ವೀರ ಸಮಾಧಿ ಮುಂದೆ ಆಚರಿಸುವ ಸಂಕಲ್ಪ ಸರ್ಕಾರದ್ದಾಗಿದೆ ಎಂದು ಅವರು ನುಡಿದರು.

    ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜ್ಞಾನಭಾರತಿಯಲ್ಲಿ ನಿರ್ಮಾಣ ಆಗುತ್ತಿರುವ ಕೆಂಪೇಗೌಡ ಅಧ್ಯಯನ ಕೇಂದ್ರದ ನಿರ್ಮಾಣ ಕಾಮಗಾರಿಗೆ ವರ್ಚುಯಲ್ ಮೂಲಕ ಚಾಲನೆ ನೀಡಿ, ನಾಡಪ್ರಭುಗಳ ಅಂಚೆ ಲಕೋಟೆಯನ್ನು ಲೋಕಾರ್ಪಣೆ ಮಾಡಿದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಡೆಯುತ್ತಿರುವ ಸೆಂಟ್ರಲ್ ಪಾರ್ಕ್-ಕೆಂಪೇಗೌಡ ಪ್ರತಿಮೆ ನಿರ್ಮಾಣ ಕಾಮಗಾರಿ ಪ್ರಗತಿಯ ವಿಡಿಯೋ ಹಾಗೂ ಅಧ್ಯಯನ ಕೇಂದ್ರದ ಪ್ರಾತ್ಯಕ್ಷಿಕೆಯನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಇದನ್ನೂ ಓದಿ: ಸಮಸ್ತ ಕನ್ನಡಿಗರ ಪಾಲಿಗೆ ಕೆಂಪಾಪುರವೂ ಒಂದು ಶ್ರದ್ಧಾಕೇಂದ್ರ: ಡಿಸಿಎಂ

    ಆದಿಚುಂನಗಿರಿ ಮಠದ ಶ್ರೀ ಡಾ.ನಿರ್ಮಲಾನಂದ ನಾಥ ಮಹಾಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಬ್ರಹ್ಮಗುಂಡ ಸ್ಫಟಿಕಪುರಿ ಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಇದನ್ನೂ ಓದಿ: ಬಿಜೆಪಿಯವರು ಕಾಂಗ್ರೆಸ್‍ಗೆ ಸಪೋರ್ಟ್ ಮಾಡ್ತೀವಿ ಸಿಎಂ ಆಗಿ ಎಂದಿದ್ದಾರೆ: ಎಸ್.ಎಸ್ ಮಲ್ಲಿಕಾರ್ಜುನ್

    ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಕೆ.ಸಿ.ನಾರಾಯಣ ಗೌಡ, ಗೋಪಾಲಯ್ಯ, ಶಾಸಕರಾದ ಎಸ್.ಆರ್.ವಿಶ್ವನಾಥ್, ಮಂಜುನಾಥ್, ರಿಜ್ವಾನ್ ಅರ್ಷದ್, ವೈ.ಎ.ನಾರಾಯಣ ಸ್ವಾಮಿ, ಸಂಸದ ಪಿ.ಸಿ.ಮೋಹನ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಾಗಡಿಯ ಕೃಷ್ಣಮೂರ್ತಿ ಅವರು ಇದೇ ಸಂದರ್ಭದಲ್ಲಿ ಕೆಂಪಾಪುರದಿಂದ ತಂದ ಆತ್ಮಜ್ಯೋತಿಯನ್ನು ಮುಖ್ಯಮಂತ್ರಿಯವರಿಗೆ ಹಸ್ತಾಂತರ ಮಾಡಿದರು.

  • ಹೊಂಬಾಳೆ ಸಮೂಹದ ಆರ್ಥಿಕ ನೆರವು – ಮಂಡ್ಯ ಮೆಡಿಕಲ್ ಕಾಲೇಜ್‍ನಲ್ಲಿ ಅತ್ಯಾಧುನಿಕ ಐಸಿಯು

    ಹೊಂಬಾಳೆ ಸಮೂಹದ ಆರ್ಥಿಕ ನೆರವು – ಮಂಡ್ಯ ಮೆಡಿಕಲ್ ಕಾಲೇಜ್‍ನಲ್ಲಿ ಅತ್ಯಾಧುನಿಕ ಐಸಿಯು

    – ಐಸಿಯು ವೈಶಿಷ್ಟ್ಯಗಳೇನು?

    ಮಂಡ್ಯ: ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರತಿಷ್ಠಿತ ಹೊಂಬಾಳೆ ಸಮೂಹದ ಆರ್ಥಿಕ ನೆರವಿನಿಂದ ಸ್ಥಾಪನೆ ಮಾಡಲಾಗಿರುವ 20 ಹಾಸಿಗೆಗಳ ಅತ್ಯಾಧುನಿಕ ಐಸಿಯು ಘಟಕವನ್ನು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಗುರುವಾರ ಉದ್ಘಾಟನೆ ನೆರೆವೇರಿಸಿದರು.

    ಕಟ್ಟಡ ನಿರ್ಮಾಣ, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವಿಜಯ್ ಕಿರಗಂದೂರು ಅವರ ನೇತೃತ್ವದ ಹೊಂಬಾಳೆ ಸಮೂಹವು, ಮಂಡ್ಯ ಜಿಲ್ಲೆಯಲ್ಲಿ ವೈದ್ಯಕೀಯ ಮೂಲಸೌಕರ್ಯಗಳನ್ನು ಒದಗಿಸಲು ಸುಮಾರು 2.35 ಕೋಟ ರೂ. ದೇಣಿಗೆ ನೀಡಿದೆ.

    ಈ ನೆರವಿನ ಮೂಲಕ ಜಿಲ್ಲೆಯ ವೈದ್ಯಕೀಯ ಕಾಲೇಜಿನಲ್ಲಿ 55 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಐಸಿಯು ಸ್ಥಾಪಿಸಲಾಗಿದೆ. ಇನ್ನು ತಲಾ 90 ಲಕ್ಷ ರೂ. ವೆಚ್ಚದಲ್ಲಿ ಪಾಂಡವಪುರ ಮತ್ತು ಕೆ.ಆರ್.ಪೇಟೆ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಜನರೇಟರ್ ಘಟಕಗಳನ್ನು ಅಳವಡಿಸಲಾಗುತ್ತಿದೆ.

    ಪಾಂಡವಪುರ ಆಸ್ಪತ್ರೆಯ ಆಕ್ಸಿಜನ್ ಘಟಕಕ್ಕೆ ಭೂಮಿ ಪೂಜೆ ನೆರೆವರಿಸಲಾಗಿದೆ. ಕೆ.ಆರ್.ಪೇಟೆ ಆಸ್ಪತ್ರೆಯಲ್ಲಿ ಈಗಾಗಲೇ ಯಂತ್ರಗಳನ್ನು ಅಳವಡಿಸಲಾಗುತ್ತಿದ್ದು, 15 ದಿನಗಳಲ್ಲಿ ಕಾಮಗಾರಿ ಪೂರ್ಣ ವಾಗಲಿದೆ. ಎರಡೂ ಆಮ್ಲಜನಕ ಘಟಕಗಳು ನಿಮಿಷಕ್ಕೆ 500 ಲೀಟರ್ ಆಮ್ಲಜನಕ ಉತ್ಪಾದಿಸಿ ಪೂರೈಕೆ ಮಾಡುವ ಸಾಮರ್ಥ್ಯ ಹೊಂದಿವೆ.

    ಐಸಿಯು ವೈಶಿಷ್ಟ್ಯಗಳೇನು?
    ಹೊಂಬಾಳೆ ಸಮೂಹದ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕಿರಗಂದೂರು ಅವರು ತಮ್ಮ ತವರು ಜಿಲ್ಲೆ ಮಂಡ್ಯದಲ್ಲಿ ಆರೋಗ್ಯ ಮೂಲಭೂತ ಸೌಕರ್ಯ ಹೆಚ್ಚಿಸಲು ಸರ್ಕಾರದ ಜತೆ ಕೈ ಜೋಡಿಸಿ ದೇಣಿಗೆ ನೀಡಿದ್ದಾರೆ.

    ಅವರ ಆಶಯದಂತೆ ನೂತನ ಐಸಿಯುನಲ್ಲಿ ಜಾಗತಿಕ ಗುಣಮಟ್ಟದ ವೆಂಟಿಲೇಟರ್‍ಗಳು, ಮಾನಿಟರ್‍ಗಳನ್ನು ಅಳವಡಿಸಲಾಗಿದೆ. ಮುಖ್ಯವಾಗಿ ರಿಮೋಟ್ ಕಂಟ್ರೋಲ್ ವ್ಯವಸ್ಥೆ ಇದ್ದು, ವೈದ್ಯರು ಯಾವುದೇ ಭಾಗದಲ್ಲಿದ್ದರೂ ರೋಗಿಗೆ ಅತ್ಯುತ್ತಮ ಚಿಕಿತ್ಸೆ ನೀಡಬಹುದು. ಚತುಷ್ಮುಖಿ (four way communication system) ಸಂಪರ್ಕ ಜಾಲದ ಸೌಲಭ್ಯವನ್ನು ಈ ಐಸಿಯು ಹೊಂದಿದೆ. ಮಂಡ್ಯದಲ್ಲಿ ಇದೇ ಮೊದಲಿಗೆ ಇಂಥ ಆಧುನಿಕ ಐಸಿಯು ಸ್ಥಾಪನೆ ಆಗಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಜಯ್ ಕಿರಗಂದೂರು ಅವರು, ಕೋವಿಡ್ ಬಂದು ಇಡೀ ಜಗತ್ತಿನ ಆದ್ಯತೆಗಳು ಬದಲಾಗಿವೆ. ಆರೋಗ್ಯ ಎನ್ನುವುದು ಬಹಳ ಮುಖ್ಯ ಎನ್ನುವ ಅರಿವಾಗಿದೆ. ಹೀಗಾಗಿ ಬಡವ-ಬಲ್ಲಿದನೆಂಬ ಬೇಧವಿಲ್ಲದೆ ಪ್ರತಿಯೊಬ್ಬರಿಗೂ ಗುಣಮಟ್ಟದ ಚಿಕಿತ್ಸೆ ಸಿಗಬೇಕು ಎನ್ನುವುದು ನನ್ನ ಕಾಳಜಿ. ಆದ್ದರಿಂದ ನನ್ನ ತವರು ಜಿಲ್ಲೆ ಮಂಡ್ಯದಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಒಂದು ಅಳಿಲು ಸೇವೆಯನ್ನು ಸಲ್ಲಿಸಿದ್ದೇನೆ ಎಂದರು.

    ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಶಾಸಕರಾದ ಎಂ.ಶ್ರೀನಿವಾಸ, ಕೆ.ಟಿ.ಶ್ರೀಕಂಠೇಗೌಡ, ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಸಿ.ಪಿ.ಉಮೇಶ್, ಜಿಲ್ಲಾಧಿಕಾರಿ ಅಶ್ವತಿ, ಹೊಂಬಾಳೆ ಸಮೂಹದ ನಿರ್ದೇಶಕ ಚೆಲುವೇಗೌಡ, ವಿಮ್ಸ್ ನಿರ್ದೇಶಕ ಹರೀಶ ಜಿಲ್ಲೆಯ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.

  • ರಾಜ್ಯದಲ್ಲೇ ಪ್ರಥಮ ಮಾಗಡಿ ಆಸ್ಪತ್ರೆಯಲ್ಲಿ ಮಾಡ್ಯೂಲರ್ ಐಸಿಯು ಲೋಕಾರ್ಪಣೆ

    ರಾಜ್ಯದಲ್ಲೇ ಪ್ರಥಮ ಮಾಗಡಿ ಆಸ್ಪತ್ರೆಯಲ್ಲಿ ಮಾಡ್ಯೂಲರ್ ಐಸಿಯು ಲೋಕಾರ್ಪಣೆ

    – ತಾಲೂಕಿನ ಎಲ್ಲ ಆರೋಗ್ಯ ಕೇಂದ್ರಗಳಲ್ಲೂ ಆಕ್ಸಿಜನ್ ಘಟಕ
    – ಕೊರತೆ ಸಿಬ್ಬಂದಿ ತಕ್ಕಣವೇ ನೇಮಕ
    – ಎರಡು ತಿಂಗಳಲ್ಲೇ ಮಾಗಡಿ ಆಸ್ಪತ್ರೆಗೆ ಆಕ್ಸಿಜನ್ ಘಟಕ

    ಬೆಂಗಳೂರು: ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ತಾಲೂಕು ಆಸ್ಪತ್ರೆಯೊಂದರ ಆವರಣದಲ್ಲಿ ಸ್ಥಾಪನೆ ಮಾಡಲಾಗಿರುವ ಅತ್ಯಾಧುನಿಕ ಮಾಡ್ಯೂಲರ್ ಐಸಿಯು ಅನ್ನು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಗುರುವಾರ ಲೋಕಾರ್ಪಣೆ ಮಾಡಿದರು.

    ಕೋವಿಡ್ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಅನುಕೂಲವಾಗುವ ಈ ಮಾಡ್ಯೂಲರ್ ಐಸಿಯು ಅನ್ನು ಆ್ಯಕ್ಟ್ ಗ್ರಾಂಟ್ ಮತ್ತು ರೆನಾಕ್ ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಈ ರೀತಿಯ ಐಸಿಯುಗಳನ್ನು ಈಗಾಗಲೇ ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಬಳಕೆ ಮಾಡಲಾಗುತ್ತಿದೆ.

    ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಅಶ್ವತ್ಥನಾರಾಯಣ ಅವರು, “ಎಸಿಟಿ (ಆಕ್ಷನ್ ಕೋವಿಡ್ ಟೀಂ) ಗ್ರಾಂಟ್ಸ್ ಈ ಮಾಡ್ಯೂಲರ್ ಐಸಿಯು ಅನ್ನು ಮಾಗಡಿ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದೆ. ಅದಕ್ಕೆ ಅಗತ್ಯವಾದ ಮಾನಿಟರ್‍ಗಳನ್ನು ಬಿಡದಿಯ ಟೊಯೊಟ ಕಿರ್ಲೋಸ್ಕರ್ ಕಂಪನಿ ನೀಡಿದ್ದು, ವೆಂಟಿಲೇಟರ್‍ಗಳು ಪಿ.ಎಂ ಕೇರ್‍ನಿಂದ ಬಂದಿವೆ. ಈ ಐಸಿಯುನಿಂದ ಹೊರಗಿನಿಂದ ಒಳ ಬರುವ ಅಥವಾ ಒಳಗಿನಿಂದ ಹೊರ ಬರುವ ಗಾಳಿಯು ಸಂಪೂರ್ಣವಾಗಿ ಶುದ್ಧೀಕರಣಗೊಳ್ಳುತ್ತದೆ. ಜೊತೆಗೆ, ಪ್ರತ್ಯೇಕ ಆಕ್ಸಿಜನ್ ಸಂಪರ್ಕದ ಜತೆಗೆ, ನೀರು ಹಾಗೂ ಒಳಚರಂಡಿ ಪ್ರತ್ಯೇಕ ಸಂಪರ್ಕ ಇರುತ್ತದೆ. ಇಡೀ ರಾಜ್ಯದಲ್ಲೇ ಇಂಥ ಆಧುನಿಕ ಐಸಿಯು ಅನ್ನು ಮಾಗಡಿ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ” ಎಂದರು.

    ಇಲ್ಲಿಗೆ ಅಗತ್ಯವಾದ ಎಲ್ಲ ಔಷಧಿ, ಆಮ್ಲಜನಕ, ವೈದ್ಯಕೀಯ ಸರಂಜಾಮುಗಳು, ಸಿಬ್ಬಂದಿ ಕೊರತೆ ಇಲ್ಲದಂತೆ ಎಚ್ಚರಿಕೆ ವಹಿಸಲಾಗಿದೆ. ನಾಲ್ವರಿಗೆ ಈ ಐಸಿಯುವಿನಲ್ಲಿ ಅತ್ಯುತ್ತಮ ಚಿಕಿತ್ಸೆ ಸಿಗುತ್ತದೆ ಎಂದು ಹೇಳಿದರು.

    ಎರಡು ತಿಂಗಳಲ್ಲಿ ಆಕ್ಸಿಜನ್ ಘಟಕ: ಮಾಗಡಿ ಆಸ್ಪತ್ರೆಯಲ್ಲಿ ಈಗಾಗಲೇ 100 ಹಾಸಿಗೆಗಳಿದ್ದು, ಈ ಪೈಕಿ 50 ಬೆಡ್‍ಗಳಿಗೆ ಆಕ್ಸಿಜನ್ ಸೌಲಭ್ಯವಿದೆ. ಇನ್ನು ಕೆಲ ದಿನಗಳಲ್ಲಿಯೇ ಉಳಿದ 50 ಹಾಸಿಗೆಗಳನ್ನೂ ಆಕ್ಸಿಜನ್ ಬೆಡ್‍ಗಳನ್ನಾಗಿ ಪರಿವರ್ತನೆ ಮಾಡಲಾಗುವುದು. ಅಲ್ಲದೆ, ನಿಮಿಷಕ್ಕೆ 600 ಕೆಎಲ್ ಪೂರೈಕೆ ಸಾಮಥ್ರ್ಯದ ಆಮ್ಲಜನಕ ಉತ್ಪಾದಕ ಘಟಕವನ್ನೂ ಎರಡು ತಿಂಗಳಲ್ಲಿ ಸ್ಥಾಪನೆ ಮಾಡಲಾಗುವುದು. ಜೊತೆಗೆ, ಒಟ್ಟು ಬೆಡ್‍ಗಳಲ್ಲಿ 25% ಐಸಿಯು ಬೆಡ್‍ಗಳ ವ್ಯವಸ್ಥೆ ಮಾಡುವ ಉದ್ದೇಶವೂ ಇದೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಆಕ್ಸಿಜನ್ ಘಟಕಗಳನ್ನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.

    ಇದಲ್ಲದೆ, ಪ್ರಾಥಮಿಕ & ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸುಸಜ್ಜಿತ ಲ್ಯಾಬ್ ಹಾಗೂ ತುರ್ತು ಸಂದರ್ಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಆಮ್ಲಜನಕ ಸಾಂದ್ರಕಗಳನ್ನೂ ಒದಗಿಸಲಾಗುವುದು ಎಂದರು.

    ತಕ್ಷಣವೇ ಸಿಬ್ಬಂದಿ ನೇಮಕ: ಎಲ್ಲ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕೂಡಲೇ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಲಾಗುವುದು. ಮುಖ್ಯವಾಗಿ ಸೋಲೂರು ಮತ್ತು ತಿಪ್ಪಸಂದ್ರ ಸಮುದಾಯ ಆರೋಗ್ಯ ಕೇಂದ್ರಗಳಿಗೆ ತಕ್ಷಣವೇ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಇದಾದ ಮೇಲೆ ಉಪ ಮುಖ್ಯಮಂತ್ರಿಗಳು ಸಿದ್ಧಾರೂಢ ಮಠದ ಆಶ್ರಮದಲ್ಲಿ ಮುಂಚೂಣಿ ವಾರಿಯರ್ಸ್ ಹಾಗೂ ಆದ್ಯತಾ ಗುಂಪಿಗೆ ಲಸಿಕೆ ನೀಡುತ್ತಿರುವುದನ್ನು ವೀಕ್ಷಿಸಿದರು. ಬಳಿಕ ಹುಲಿಕೋಟೆಯ ಕೋವಿಡ್ ಕೇರ್ ಸೆಂಟರ್‍ಗೆ ಭೇಟಿ ನೀಡಿ ಅಲ್ಲಿ ನೇರವಾಗಿ ಸೋಂಕಿತರ ಯೋಗ ಕ್ಷೇಮ ವಿಚಾರಿಸಿದರು. ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ, ಔಷಧಿ, ಆಹಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.

    ಅಂತಿಮವಾಗಿ ವಿಜಿ ದೊಡ್ಡಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಟಿ ಪರಿಶೀಲನೆ ನಡೆಸಿದರಲ್ಲದೆ, ಕೊರತೆ ಇರುವ ಸಿಬ್ಬಂದಿ ನೇಮಕಕ್ಕೆ ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಹಾಗೂ ಕೆಲ ದಿನಗಳಲ್ಲಿಯೇ ಇಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಅಳವಡಿಸಲಾಗುವುದು ಎಂದರು.

    ಮಾಗಡಿ ಶಾಸಕ ಮಂಜುನಾಥ್, ಜಿಲ್ಲಾಧಿಕಾರಿ ರಾಕೇಶ ಕುಮಾರ, ಸಿಇಒ ಇಕ್ರಂ,ಡಿಎಚ್ ಒ ಡಾ.ನಿರಂಜನ್, ರೆನಾಕ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಸಾಜಿ ಅಬ್ರಹಾಂ, ಹಿರಿಯ ಪ್ರಧಾನ ವ್ಯವಸ್ಥಾಪಕ ಸುಧೀರ್ ಮೆನನ್, ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜ್, ಬಿಜೆಪಿ ಮುಖಂಡ ಕೃಷ್ಣಮೂರ್ತಿ, ಮಂಡಲಾಧ್ಯಕ್ಷ ಧನಂಜಯ, ತಾಲೂಕು ವೈದ್ಯಾಧಿಕಾರಿ ಮತ್ತಿತರರು ಡಿಸಿಎಂ ಜೊತೆಯಲ್ಲಿ ಉಪಸ್ಥಿತಿಯಲ್ಲಿದ್ದರು.

  • ಬ್ಲ್ಯಾಕ್ ಫಂಗಸ್‍ಗೆ ರಾಜ್ಯದ ಆರು ಕಡೆ ಉಚಿತ ಚಿಕಿತ್ಸೆ: ಅಶ್ವಥ್ ನಾರಾಯಣ್

    ಬ್ಲ್ಯಾಕ್ ಫಂಗಸ್‍ಗೆ ರಾಜ್ಯದ ಆರು ಕಡೆ ಉಚಿತ ಚಿಕಿತ್ಸೆ: ಅಶ್ವಥ್ ನಾರಾಯಣ್

    – ಈಗಾಗಲೇ ಕಪ್ಪು ಶಿಲೀಂಧ್ರಕ್ಕೆ 1000 ವೈಲ್ಸ್ ಔಷಧಿ ಬಂದಿದೆ

    ಬೆಂಗಳೂರು: ಬ್ಲ್ಯಾಕ್ ಫಂಗಸ್ ಕಾಯಿಲೆಗೆ ಬಳಸಲಾಗುವ ಔಷಧಿಗೆ ಕೊರತೆ ಇಲ್ಲ. ಈಗಾಗಲೇ ಕೇಂದ್ರದಿಂದ 1,000 ವೈಲ್ಸ್ ಬಂದಿದೆ. ಈ ಔಷಧಿಯ ಕೊರತೆ ನೀಗಿಸಲು ಸರಕಾರ ಸರ್ವ ಪ್ರಯತ್ನವನ್ನು ಮಾಡುತ್ತಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ತಿಳಿಸಿದರು.

    ಬೆಂಗಳೂರಿನಲ್ಲಿ ಬುಧವಾರ ಬಂಟರ ಸಂಘವು ಹೋಮ್ ಐಸೋಲೇಷನ್ ಆಗಿರುವ ಕೋವಿಡ್ ಸೋಂಕಿತರಿಗಾಗಿ ವ್ಯವಸ್ಥೆ ಮಾಡಿರುವ 20 ಆಮ್ಲಜನಕ ಸಾಂದ್ರಕಗಳ ವ್ಯವಸ್ಥೆಗೆ ಚಾಲನೆ ಕೊಟ್ಟ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಸೇರಿದಂತೆ ರಾಜ್ಯದ ಆರು ಕಡೆಗಳಲ್ಲಿ ಬ್ಲ್ಯಾಕ್ ಫಂಗಸ್‍ಗೆ ಉಚಿತ ಚಿಕಿತ್ಸೆ ಕೊಡಲಾಗುತ್ತಿದೆ. ಎಲ್ಲಿಯೂ ಔಷಧಿ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಕೇಂದ್ರದಿಂದ ಇನ್ನೂ ಹೆಚ್ಚಿನ ಔಷಧಿ ಪಡೆಯಲು ಯತ್ನಿಸಲಾಗುತ್ತಿದೆ ಎಂದು ಹೇಳಿದರು.

    ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಕಾರ್ಯದರ್ಶಿ ಮಧುಕರ ಶೆಟ್ಟಿ, ಉಮೇಶ ಶೆಟ್ಟಿ, ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಬೇಲೂರು, ಸಂಘದ ವೈದ್ಯಕೀಯ ವಿಭಾಗದ ಅಧ್ಯಕ್ಷ ಡಾ. ನಿಶಾಕಾಂತ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

  • ಕೋವಿಡ್ ಸಂಕಷ್ಟ ಕಾಲದಲ್ಲಿ ಹಣ ಸುಲಿಗೆ ಮಾಡಿದರೆ ಜೈಲಿಗಟ್ಟುತ್ತೇವೆ: ಅಶ್ವಥ್ ನಾರಾಯಣ್ ಎಚ್ಚರಿಕೆ

    ಕೋವಿಡ್ ಸಂಕಷ್ಟ ಕಾಲದಲ್ಲಿ ಹಣ ಸುಲಿಗೆ ಮಾಡಿದರೆ ಜೈಲಿಗಟ್ಟುತ್ತೇವೆ: ಅಶ್ವಥ್ ನಾರಾಯಣ್ ಎಚ್ಚರಿಕೆ

    – ರಾಮನಗರ ಜಿಲ್ಲಾಸ್ಪತ್ರೆಯಲ್ಲಿ 10 ದಿನದಲ್ಲಿ ಆಕ್ಸಿಜನ್ ಟ್ಯಾಂಕ್ ಅಳವಡಿಕೆ

    ಬೆಂಗಳೂರು: ಯಾರಾದರೂ ಕೋವಿಡ್ ಪರಿಸ್ಥಿತಿಯ ದುರ್ಲಾಭವನ್ನು ಪಡೆದುಕೊಂಡು ಹಣ ಸುಲಿಗೆ ಮಾಡಲು ಪ್ರಯತ್ನಿಸಿದರೆ ಮುಲಾಜಿಲ್ಲದೆ ಕ್ರಮ ಕೈಕೊಳ್ಳಲಾಗುವುದು ಹಾಗೂ ಬಂಧಿಸಿ ಜೈಲಿಗಟ್ಟಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ, ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಎಚ್ಚರಿಕೆ ನೀಡಿದ್ದಾರೆ.

    ಬುಧವಾರ ಬೆಳಗ್ಗೆಯೇ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದ ಕೋವಿಡ್ ಪರಿಸ್ಥಿತಿಯನ್ನು ಅವಲೋಕನ ಮಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಬಗ್ಗೆ ಪೊಲೀಸ್ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಯಾರಾದರೂ ಆಮ್ಲಜನಕ, ಹಾಸಿಗೆಗಳು, ರೆಮಿಡಿಸ್ವಿರ್, ಅಂಬುಲೆನ್ಸ್, ಚಿತಾಗಾರ ಮತ್ತಿತರೆ ಯಾವುದೇ ಇರಲಿ, ಪರಿಸ್ಥಿತಿಯ ದುರ್ಲಾಭ ಮಾಡಿಕೊಳ್ಳಲು ಯತ್ನಸಿದರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಅತ್ಯಂತ ಕಠಿಣ ಕ್ರಮ ಜರುಗಿಸುತ್ತೇವೆ ಎಂದರು.

    ಯಾರಿಗೆ ಸಮಸ್ಯೆಯಾದರೂ ಹೆಲ್ಪ್‌ಲೈನ್‌ ಸಂಖ್ಯೆ 112ಕ್ಕೆ ಕರೆ ಮಾಡಿದರೆ ಸಾಕು. ತತ್‍ಕ್ಷಣವೇ ಸ್ಪಂದನೆ ಸಿಗುತ್ತದೆ. ಯಾರಾದರೂ ಹಣಕ್ಕೆ ಡಿಮಾಂಡ್ ಮಾಡಿದರೆ ದೂರು ನೀಡಬಹುದು. ಅಲ್ಲಿ ದೂರು ನೀಡಿದರೆ ಖಂಡಿತವಾಗಿಯೂ ಕ್ರಮ ಜರುಗಿಸಲಾಗುವುದು ಎಂದು ನಾನು ಖಾತರಿ ಕೊಡುತ್ತೇನೆ ಎಂದು ಹೇಳಿದ್ದಾರೆ.

    ಪ್ರಾಥಮಿಕ ಹಂತದಲ್ಲಿ ರೆಮಿಡಿಸ್ವಿರ್ ಬೇಡ: ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ಪಾಸಿಟಿವ್ ಬಂದರೆ ಅವರಿಗೆ ಕೂಡಲೇ ರೆಮಿಡಿಸ್ವಿರ್ ಕೊಡುವ ಅಗತ್ಯವಿಲ್ಲ. ಅನಗತ್ಯ ಗಾಬರಿ ಬೇಡ. ಆರಂಭದಿಂದಲೇ ಚಿಕಿತ್ಸೆ ಪಡೆದರೆ ಯಾವ ಸಮಸ್ಯೆಯೂ ಆಗುವುದಿಲ್ಲ ಎಂದು ಜನರಿಗೆ ಧೈರ್ಯ ತುಂಬಿದರು.

    ಸದ್ಯದ ಸ್ಥಿತಿಯಲ್ಲಿ ಪ್ರತಿದಿನ 24,000 ವೈಲ್ ರೆಮಿಡಿಸ್ವಿರ್ ಕೊಡಲು ಸಾಧ್ಯವಾಗುತ್ತದೆ. ಅದು ಸದ್ಬಳಕೆ ಆಗುವ ಹಾಗೂ ಅಗತ್ಯವಿರುವವರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಔಷಧಿ ಕೊರತೆ ಆಗದಂತೆ ಎಚ್ಚರಿಕೆ ವಹಿಸಿದ್ದೇವೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ರಾಮನಗರ ಜಿಲ್ಲಾಸ್ಪತ್ರೆಗೆ 10 ದಿನದಲ್ಲಿ ಆಕ್ಸಿಜನ್ ಸಂಗ್ರಹ ಘಟಕ: ರಾಮನಗರ ಜಿಲ್ಲೆಯಲ್ಲಿ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದ್ದು, ಆಮ್ಲಜನಕದ ಕೊರತೆ ಆಗುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರು ಹೇಳಿರುವ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣರವರು, ನಿನ್ನೆ ಒಂದೇ ದಿನ 550 ಸೋಂಕಿತರು ಪತ್ತೆಯಾಗಿದ್ದಾರೆ. ಇಡೀ ಜಿಲ್ಲೆಯಲ್ಲಿ 3,000 ಸೋಂಕಿತರು ಇದ್ದಾರೆ. ಈ ಪ್ರಮಾಣದಲ್ಲಿ ಕೇವಲ ಶೇ.10ರಷ್ಟು ಸೋಂಕಿತರಿಗೆ ಆಕ್ಸಿಜನ್ ಬೆಡ್‍ಗಳ ಅಗತ್ಯವಿದೆ. ಆದರೆ, ಸರಕಾರ ಶೇ.20-30ರಷ್ಟು ಸೋಂಕಿತರಿಗೂ ಆಕ್ಸಿಜನ್ ಬೆಡ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಪ್ರತಿಕ್ರಿಯಿಸಿದರು.

    ರಾಮನಗರ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಕೋವಿಡ್ ಕಾಲ್ ಸೆಂಟರ್ ಮಾಡುತ್ತಿದ್ದೇವೆ. ಇನ್ನು ಹತ್ತೇ ದಿನದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಸಂಗ್ರಹಕ್ಕೆ ಟ್ಯಾಂಕ್‍ನ್ನು ಅಳವಡಿಸಲಾಗುತ್ತಿದೆ ಹಾಗೂ ಪ್ರತಿ ನಿಮಿಷಕ್ಕೆ 1000 ಕೆಎಲ್ ಆಮ್ಲಜನಕ ಪೂರೈಕೆ ಮಾಡುವ ಆಕ್ಸಿಜನ್ ಜನರೇಟರ್ ಹಾಕಲಿಕ್ಕೂ ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಕೆಲ ದಿನಗಳಲ್ಲೇ ಇವೆಲ್ಲ ಸೌಲಭ್ಯಗಳು ಕಾರ್ಯಾಚರಣೆಗೆ ಬರಲಿವೆ.

  • ಕೋವಿಡ್ ಸಂಕಷ್ಟದಿಂದ ಹೊರಬರಲು ರಾಜ್ಯದಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ: ಡಿಸಿಎಂ ಅಶ್ವತ್ಥನಾರಾಯಣ

    ಕೋವಿಡ್ ಸಂಕಷ್ಟದಿಂದ ಹೊರಬರಲು ರಾಜ್ಯದಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ: ಡಿಸಿಎಂ ಅಶ್ವತ್ಥನಾರಾಯಣ

    -ಸಾಗರೋತ್ತರ ಕನ್ನಡಿಗರೊಂದಿಗೆ ಸಂವಾದದಲ್ಲಿ ಡಿಸಿಎಂ ಹೇಳಿಕೆ

    ಬೆಂಗಳೂರು: ಕೋವಿಡ್ ಸೇರಿದಂತೆ ಇತರ ಸಮಸ್ಯೆಗಳಿಂದ ನಿಂದ ಉಂಟಾಗಿರುವ ಉದ್ಯೋಗ ಮತ್ತು ಆರ್ಥಿಕ ನಷ್ಟವನ್ನು ಭರ್ತಿ ಮಾಡಲು ಇನ್ನು ಕೆಲ ವರ್ಷಗಳಲ್ಲಿ ಹಂತ ಹಂತವಾಗಿ ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಕೌಶಲ್ಯಾಭಿವೃದ್ಧಿ & ಉದ್ಯಮಶೀಲತಾ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ಸ್ವ ಉದ್ಯೋಗಕ್ಕೆ ಶಕ್ತಿ ನೀಡುವ ಹಿನ್ನೆಲೆಯಲ್ಲಿ ಶನಿವಾರ ಸಾಗರೋತ್ತರ ಕನ್ನಡಿಗರೊಂದಿಗೆ ಕರಕುಶಲ ಕಾಯಕ, ಕನ್ನಡ ಮತ್ತು ನಾವು ಎಂಬ ವಿಷಯದ ಕುರಿತು ಸಂವಾದ ನಡೆಸಿದ ಅವರು, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಇಲಾಖೆಗಳ ಮೂಲಕ ಇಷ್ಟು ಪ್ರಮಾಣದ ಉದ್ಯೋಗಾವಕಾಶಗಳನ್ನು ನಗರ, ಗ್ರಾಮೀಣ ಪ್ರದೇಶದಲ್ಲಿ ಸೃಷ್ಟಿ ಮಾಡುವ ಗುರಿ ಹೊಂದಲಾಗಿದೆ ಎಂದರು.

    ಈ ನಿಟ್ಟಿನಲ್ಲಿ ಯುವಜನರಿಗೆ ಕೌಶಲ್ಯ ತರಬೇತಿ ಕೊಡುವುದರ ಜತೆಗೆ, ಈಗಾಗಲೇ ಈ ವಲಯದಲ್ಲಿ ತೊಡಗಿಸಿಕೊಂಡಿರುವವರ ಕೌಶಲತೆಯನ್ನು ಉತ್ತಮಪಡಿಸುವ ಕೆಲಸವನ್ನೂ ಸರಕಾರ ಕೈಗೆತ್ತಿಕೊಂಡಿದೆ. ಅಲ್ಲದೆ, ಕರಕುಶಲ ವಲಯವೂ ಸೇರಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ದಾರಿಯಲ್ಲಿ ಸಾಗುತ್ತಿರುವವರಿಗೆ ತಾಂತ್ರಿಕವಾಗಿ ಬಲ ತುಂಬುವುದು ಹಾಗೂ ಆರ್ಥಿಕ, ಮಾರುಕಟ್ಟೆ ವಿಸ್ತಾರಕ್ಕೆ ಸಾಥ್ ಕೊಡುವುದು ಮಾಡಲಾಗುತ್ತಿದೆ. ಕ್ರಮೇಣವಾಗಿ ಅವರ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗುವಂತೆ ಕ್ರಮ ವಹಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

    ಮಾರುಕಟ್ಟೆ ಮುಖ್ಯವಾಹಿನಿಗೆ: ರಾಜ್ಯದ ಉದ್ದಗಲಕ್ಕೂ ಕಾರ್ಯ ನಿರತವಾಗಿರುವ ಪ್ರತಿ ಸಣ್ಣ ವ್ಯಾಪಾರಿಯನ್ನೂ ಇ-ಕಾಮರ್ಸ್ ಮೂಲಕ ಮಾರುಕಟ್ಟೆಯ ಮುಖ್ಯವಾಹಿನಿಗೆ ತರುವ ಕೆಲಸವನ್ನು ಸರಕಾರ ಮಾಡುತ್ತಿದೆ. ಪ್ಲಿಪ್ಕಾರ್ಟ್, ಅಮೆಜಾನ್ನಂಥ ಇ-ಕಾಮರ್ಸ್ ಪೋರ್ಟಲ್ ಗಳ ಮೂಲಕ ಅವರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವ ರೀತಿಯಲ್ಲಿ ಅನುಕೂಲ ಮಾಡಿಕೊಡಲಾಗಿದೆ. ಈಗಾಗಲೇ ಇಂಥ ಅನೇಕ ದೈತ್ಯ ಕಂಪನಿಗಳ ಸರಕಾರ ಒಡಂಬಡಿಕೆ ಮಾಡಿಕೊಂಡಿದೆ ಎಂದು ಅವರು ಹೇಳಿದರು.

    ಕರಕುಶಲ ಹಾಗೂ ಗ್ರಾಮೀಣ ಪ್ರದೇಶದಲ್ಲಿ ತಯಾರಾಗುವ ಅಥವಾ ಬೆಳೆಯುವ ಕೃಷಿ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಮಾರಾಟ ಮಾಡುವುದಕ್ಕೆ ಪೂರಕವಾಗುವಂತೆ ಕೇಂದ್ರ ಸರಕಾರವು ಒಂದು ಜಿಲ್ಲೆ-ಒಂದು ಉತ್ಪನ್ನ ಎಂಬ ಯೋಜನೆಯನ್ನು ಪರಿಚಯಿಸಿದೆ. ಆ ಯೋಜನೆಯ ಮೂಲಕ ನಮ್ಮ ರಾಜ್ಯದಲ್ಲಿ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸಲಾಗುತ್ತಿದೆ. ಇದರ ವ್ಯಾಪ್ತಿಗೆ ಚನ್ನಪಟ್ಟಣದ ಗೊಂಬೆಗಳು ಸೇರಿದಂತೆ ರಾಜ್ಯದ ವಿವಿಧೆಡೆ ತಯಾರಾಗುತ್ತಿರುವ ಉತ್ಪನ್ನಗಳು ಸೇರಲಿವೆ. ಗ್ರಾಮೀಣ ಆರ್ಥಿಕತೆಗೆ ಬಲ ತುಂಬಲು ಈ ಯೋಜನೆ ಸಹಕಾರಿಯಾಗುತ್ತದೆ ಎಂದು ಡಿಸಿಎಂ ನುಡಿದರು.

    ಮುಖ್ಯಮಂತ್ರಿ ಜತೆ ಚರ್ಚೆ: ಅನಿವಾಸಿ ಕರಕುಶಲ ವೇದಿಕೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ನೇಮಕ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಚರ್ಚೆ ನಡೆಸಲಾಗುವುದು. ಆದಷ್ಟು ಬೇಗ ಈ ನೇಮಕಾತಿಯನ್ನು ಮಾಡಲಾಗುವುದು. ಈ ಕ್ಷೇತ್ರಕ್ಕೆ ಅಗತ್ಯವಾದ ಎಲ್ಲ ಸಹಕಾರವನ್ನೂ ಕೊಡಲು ಸರಕಾರ ಸಿದ್ಧವಿದೆ ಎಂದು ಡಾ.ಅಶ್ವತ್ಥನಾರಾಯಣ ಭರವಸೆ ನೀಡಿದರು.

    ವಿದೇಶಗಳಿಂದ ರಾಜ್ಯಕ್ಕೆ ವಾಪಸ್ಸಾಗಿ ಇಲ್ಲಿಯೇ ಕೌಶಲ್ಯ ಕ್ಷೇತ್ರದ ಉದ್ಯಮದಲ್ಲಿ ತೊಡಗಿಸಿಕೊಳ್ಳುವವರಿಗೆ ಎಲ್ಲ ಸಹಕಾರ ನೀಡಲಾಗುತ್ತಿದೆ. ಅದಕ್ಕೆ ಪ್ರತ್ಯೇಕವಾದ ಪೋರ್ಟಲ್ ಇದ್ದು, ಕಳೆದ ವರ್ಷ 10,000 ಜನ ನೋಂದಣಿ ಮಾಡಿಕೊಂಡಿದ್ದಾರೆ. ಇವರೆಲ್ಲರಿಗೂ ಸರಕಾರ ವಿವಿಧ ರೀತಿಯಲ್ಲಿ ನೆರವು ಕೊಡುತ್ತಿದೆಯಲ್ಲದೆ, ವಿವಿಧ ಕಂಪನಿಗಳ ಜತೆ ಸಂಪರ್ಕ ವ್ಯವಸ್ಥೆ ಮಾಡಿದೆ. ಮುಂದೆ ಕೂಡ ಯಾರಾದರೂ ಬಂದರೆ ನಮ್ಮ ನೆರವು ಇದ್ದೇ ಇರುತ್ತದೆ ಎಂದು ಅವರು ತಿಳಿಸಿದರು.

    ಕೋವಿಡ್ ನಿಯಂತ್ರಣಕ್ಕೆ ಕ್ರಮ: ರಾಜ್ಯದ ಕೋವಿಡ್ ಪರಿಸ್ಥಿತಿಯ ಬಗ್ಗೆ ಕಳವಳ ಬೇಡ. ಈಗಾಗಲೇ ರಾಜ್ಯದಲ್ಲಿ ಕೋವಿಡ್ ಸೋಂಕಿತರಿಗೆ 55,000 ಬೆಡ್ ಗಳಿವೆ. 30,000 ಆಕ್ಸಿಜನ್ ಬೆಡ್‍ಗಳಿವೆ. ರಾಜ್ಯದಲ್ಲಿ ಶೇ.92ಕ್ಕೂ ಹೆಚ್ಚು ಸೋಂಕಿತರು ಮನೆಗಳಲ್ಲೇ ಕ್ವಾರಂಟೈನ್ ಆಗಿದ್ದಾರೆ. ಉಳಿದವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕೆಲ ದಿನಗಳಲ್ಲೇ 10,000 ಆಕ್ಸಿಜನ್ ಬೆಡ್‍ಗಳನ್ನು ಹೊಸದಾಗಿ ಮಾಡಲಾಗುವುದು ಎಂದು ಡಿಸಿಎಂ ಹೇಳಿದರು.

    ರಾಜ್ಯ ಕರಕುಶಲ ನಿಗಮದ ಅಧ್ಯಕ್ಷ ಬೇಲೂರು ರಾಘವೇಂದ್ರ ಶೆಟ್ಟಿ, ಅನಿವಾಸಿ ಕನ್ನಡಿಗರಾದ ಚಂದ್ರಶೇಖರ ಲಿಂಗದಳ್ಳಿ (ಅಮೆರಿಕ), ಗೋಪಾಲ್ ಕುಲಕರ್ಣಿ (ಇಂಗ್ಲೆಂಡ್), ಹೇಮಗೌಡ ಮಧು (ಇಟಲಿ), ರವಿ ಮಹಾದೇವ (ಸೌದಿ ಅರೆಬಿಯಾ), ಬಸವ ಪಾಟೀಲ್ (ಇಂಗ್ಲೆಂಡ್) ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.