Tag: dcm Ashwath Narayana

  • ಹುಟ್ಟು ಹಬ್ಬದ ಸಂಭ್ರಮದಲ್ಲಿ ಡಿಸಿಎಂ – 52 ಕೆಜಿ ಕೇಕ್ ಕತ್ತರಿಸಿ ಬರ್ತ್‍ಡೇ ಆಚರಣೆ

    ಹುಟ್ಟು ಹಬ್ಬದ ಸಂಭ್ರಮದಲ್ಲಿ ಡಿಸಿಎಂ – 52 ಕೆಜಿ ಕೇಕ್ ಕತ್ತರಿಸಿ ಬರ್ತ್‍ಡೇ ಆಚರಣೆ

    ಬೆಂಗಳೂರು: ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣರವರು ಇಂದು 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬವನ್ನು ಪಕ್ಷದ ಕಾರ್ಯಕರ್ತರು ಹಾಗೂ ಮಲ್ಲೇಶ್ವರಂ ಕ್ಷೇತ್ರದ ಜನರು ಅದ್ಧೂರಿಯಿಂದ ಆಚರಿಸಿದರು. ಅಶ್ವತ್ ನಾರಾಯಣರವರ ಸ್ವಕ್ಷೇತ್ರ ಮಲ್ಲೇಶ್ವರಂ ಸೇರಿದಂತೆ ರಾಜ್ಯದ ಅನೇಕ ಕಡೆಯಿಂದ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಗಮಿಸಿ 52 ಕೆ.ಜಿ. ತೂಕದ ಕೇಕ್ ಕತ್ತರಿಸುವ ಮೂಲಕ ಡಿಸಿಎಂ ಅವರ ಹುಟ್ಟುಹಬ್ಬವನ್ನು ಸಂಭ್ರಮಿಸಿದರು. ಜೊತೆಗೆ 5,000 ಕುಕ್ಕರ್ ಹಾಗೂ ಲಾಡುಗಳನ್ನು ವಿತರಣೆ ಮಾಡಿದರು.

    ಬೆಳಗ್ಗೆ 6 ಗಂಟೆ ಹೊತ್ತಿಗೆ ಆದಿಚುಂಚನಗಿರಿ ಮಠ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಕರೆ ಮಾಡಿ ಡಿಸಿಎಂ ಅಶ್ವತ್ ನಾರಾಯಣರಿಗೆ ಆಶೀರ್ವದಿಸಿದರು. ಪಕ್ಷದ ಹಿರಿಯ ನಾಯಕರು, ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು ಕೂಡ ಡಿಸಿಎಂಗೆ ಜನ್ಮದಿನಕ್ಕೆ ಶುಭಾಶಯ ಕೋರಿದರು.

    ಜೊತೆಗೆ ಮಲ್ಲೇಶ್ವರಂ ಮಿಲ್ಕ್ ಕಾಲೋನಿಯಲ್ಲಿ ಕಾರ್ಯಕರ್ತರ ಜೊತೆ ಕೇಕ್ ಕತ್ತರಿಸುತ್ತಿದ್ದ ಡಿಸಿಎಂ ಅವರನ್ನು ಭೇಟಿಯಾದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಶುಭ ಕೋರಿದರು. ಅನೇಕ ಕಡೆ ಕೇಕ್ ಕಟಿಂಗ್ ಹಾಗೂ ತಿಂಡಿ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಮಲ್ಲೇಶ್ವರಂನಲ್ಲಿ ಬೃಹತ್ ಸೇಬುಮಾಲೆ ಅರ್ಪಿಸಿದರು, ಇನ್ನು ಕೆಲವೆಡೆ ಭಾರೀ ಪ್ರಮಾಣ ಹೂಮಾಲೆಗಳನ್ನು ಹಾಕಿ ಶುಭ ಕೋರಲಾಯಿತು.

    ಬೆಳಗ್ಗೆಯೇ ಆರು ಗಂಟೆಗೆಲ್ಲ ಆರ್‍ಎಂವಿ ಎಕ್ಸ್‍ಟೆನ್ಷನ್ ಪಾರ್ಕ್‍ನಲ್ಲಿ ಸಸಿ ನೆಡುವ ನೆಡುವ ಮೂಲಕ ಬರ್ತ್‍ಡೇ ಆಚರಿಸಿದ ಅಶ್ವತ್ ನಾರಾಯಣರವರು ಅಲ್ಲೇ ಕೇಕ್ ಕತ್ತರಿಸಿದರು. ಸ್ಥಳೀಯರು, ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಈ ಸಂದರ್ಭದಲ್ಲಿ ಹಾಜರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಮೊದಲಿಂದಲೂ ನಾನು ಸರಳವಾಗಿಯೇ ಹುಟ್ಟುವನ್ನು ಆಚರಿಸಿಕೊಳ್ಳುತ್ತೇನೆ. ಈ ವರ್ಷ ಕೋವಿಡ್ ಬೇರೆ ಇನ್ನೂ ಹೋಗದಿರುವುದರಿಂದ ಪಕ್ಷದ ಕಾರ್ಯಕರ್ತರು, ಕ್ಷೇತ್ರದ ಜನರು ಅತ್ಯಂತ ಅರ್ಥಪೂರ್ಣವಾಗಿ ಜನ್ಮದಿನ ಆಚರಿಸಿ ನನ್ನನ್ನು ಹಾರೈಸಿದ್ದಾರೆ. ಎಲ್ಲರಿಗೂ ಕೃತಜ್ಞನಾಗಿದ್ದೇನೆ. ಅದರಲ್ಲೂ ಗಿಡ ನೆಡುವ ಮೂಲಕ ಮತ್ತೊಂದು ವರ್ಷಕ್ಕೆ ಕಾಲಿಟ್ಟಿದ್ದು ನನ್ನಲ್ಲಿ ಸಾರ್ಥಕ ಭಾವ ಮೂಡಿಸಿದೆ” ಎಂದರು.

    ಡಾ.ಅಶ್ವತ್ಥನಾರಾಯಣ ಅವರ ಹುಟ್ಟುಹಬ್ಬದ ನಿಮಿತ್ತ, ಚಲನಚಿತ್ರ ನಿರ್ಮಾಪಕ, ಸಮಾಜ ಸೇವಕ ಸುರೇಶ ಗೌಡ, ಸುಬ್ರಮಣ್ಯ ನಗರದ ಮಿಲ್ಕ್ ಕಾಲೋನಿಯ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 5,000 ಕುಕ್ಕರ್‍ಗಳು, 5,000 ಸಿಹಿ ತಿನಿಸುಗಳ ಬಾಕ್ಸ್‍ಗಳನ್ನು ಜನರಿಗೆ ವಿತರಿಸಿದರು. ಸಾರ್ವಜನಿಕರು ಉಪ ಮುಖ್ಯಮಂತ್ರಿಗಳನ್ನು ಅಕ್ಕರೆಯಿಂದ ಬರಮಾಡಿಕೊಂಡು ಶುಭ ಹಾರೈಸಿದರಲ್ಲದೆ, ಬೃಹತ್ ಹೂಮಾಲೆಗಳನ್ನು ಹಾಕಿ ಸಂಭ್ರಮಿಸಿದರು.

    ಮತ್ತಿಕೆರೆಯ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ತೆರಳಿ ಡಿಸಿಎಂ ಅಶ್ವತ್ ನಾರಾಯಣರವರು ಅಮ್ಮನವರಿಗೆ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಡೊಳ್ಳು ಕುಣಿತ ಮತ್ತಿತರೆ ಜಾನಪದ ಕಲಾವಿದರು ಡಾ.ಅಶ್ವತ್ಥನಾರಾಯಣ ಅವರನ್ನು ಬರಮಾಡಿಕೊಂಡರು. ಸುಬೇದಾರಪಾಳ್ಯದಲ್ಲಿಯೂ ಇದೇ ರೀತಿಯ ಸಂಭ್ರಮ ಮನೆ ಮಾಡಿತ್ತು. ಡೊಳ್ಳು ಕುಣಿತ ಕಲಾವಿದರೂ ಎಲ್ಲರ ಗಮನ ಸೆಳೆದರು. ಈ ಸಂದರ್ಭದಲ್ಲಿ ಡಿಸಿಎಂ ಅವರು ಅಂಗನವಾಡಿ ಕೇಂದ್ರವನ್ನು ಉದ್ಘಾಟನೆ ಮಾಡಿದರು. ಅಲ್ಲದೆ ಗುಟ್ಟಹಳ್ಳಿಯ ರಾಮದೇವರ ಪಾರ್ಕ್‍ನಲ್ಲಿಯೂ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕೇಕ್ ಕತ್ತರಿಸಿ ಡಿಸಿಎಂ ಹುಟ್ಟುಹಬ್ಬವನ್ನ ಆಚರಿಸಿದರು. ಈ ಸಂದರ್ಭದಲ್ಲಿ ಡೊಳ್ಳು ಕುಣಿತದ ಆಕರ್ಷಣೆಯ ಜತೆಗೆ, ಸಾರ್ವಜನಿಕರಿಗೆ ತಿಂಡಿ ವ್ಯವಸ್ಥೆ ಮಾಡಲಾಗಿತ್ತು.

    ಉಪ ಮುಖ್ಯಮಂತ್ರಿಗಳ ಕ್ಷೇತ್ರ ಮಲ್ಲೇಶ್ವರದಲ್ಲಿ ಅನೇಕ ಕಡೆ ಹುಟ್ಟುಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ತಮ್ಮ ಕಚೇರಿಯಲ್ಲಿ ಬೆಳಗ್ಗೆಯಿಂದಲೇ ಜನರಿಗೆ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿಯೂ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಇಲ್ಲಿ ಡಿಸಿಎಂ ಅವರು ವಿಶೇಷ ಪೂಜೆ ನೆರವೇರಿಸಿದರು. ಕ್ಷೇತ್ರದ ಇನ್ನೂ ಅನೇಕ ಕಡೆ ಹಾಗೂ ನಗರದ ವಿವಿಧೆಡೆ ಉಪ ಮುಖ್ಯಮಂತ್ರಿಗಳು ತಮ್ಮ ಜನ್ಮದಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ರಾತ್ರಿವರೆಗೆ ನಡೆಯಿತು. ಮಾಜಿ ಪಾಲಿಕೆ ಸದಸ್ಯ ಮಂಜುನಾಥ ರಾಜು ಅವರು 20 ಸಾವಿರಕ್ಕೂ ಹೆಚ್ಚು ಲಾಡುಗಳನ್ನು ಹಂಚಿದರು.

  • ಅಂಬುಲೆನ್ಸ್ ಓವರ್ ಟೇಕ್ ಮಾಡಿದ ಡಿಸಿಎಂ ಅಶ್ವಥ್ ನಾರಾಯಣ

    ಅಂಬುಲೆನ್ಸ್ ಓವರ್ ಟೇಕ್ ಮಾಡಿದ ಡಿಸಿಎಂ ಅಶ್ವಥ್ ನಾರಾಯಣ

    ಬೆಂಗಳೂರು: ಅಂಬುಲೆನ್ಸ್ ಬರುತ್ತಿದೆ ಅಂದರೆ ಸಾಮಾನ್ಯವಾಗಿ ಅದಕ್ಕೆ ದಾರಿ ಮಾಡಿಕೊಡುತ್ತೇವೆ. ಆದರೆ ಅದನ್ನು ಪಾಲಿಸಿ ಮಾದರಿಯಾಗಬೇಕಿದ್ದ ನಮ್ಮ ಡಿಸಿಎಂ ಅಶ್ವಥ್ ನಾರಾಯಣ ಮುಂದೆ ಬರುತ್ತಿದ್ದ ಅಂಬುಲೆನ್ಸ್ ಹಿಂದಿಕ್ಕಿ ಅಡ್ಡ ಬಂದಿದ್ದಾರೆ.

    ಸಂಜೆ 4:30ಕ್ಕೆ ಬೆಂಗಳೂರಿನ ಕಾವೇರಿ ಜಂಕ್ಷನ್ ಬಳಿ ಯಾವ ಮಟ್ಟಿಗೆ ಜಾಮ್ ಅನ್ನೋದು ಆ ರಸ್ತೆಯಲ್ಲಿ ಓಡಾಡೋರಿಗೆ ಗೊತ್ತೆ ಇರುತ್ತೆ. ಆ ರೀತಿಯ ಜಾಮ್ ರಸ್ತೆಯಲ್ಲೂ ಸಾಮಾನ್ಯ ಜನ ಅಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟಿದ್ದರೂ ಡಿಸಿಎಂ ಸಾಹೇಬ್ರು ದಾರಿಬಿಡದೇ ಫೋನ್ ನಲ್ಲಿ ಬ್ಯುಸಿಯಾಗಿದ್ದಾರೆ.

    ಅಂಬುಲೆನ್ಸ್ ಓವರ್ ಟೆಕ್ ಮಾಡಿದ್ದರೆ ದಂಡ ಇದೆ. ಆ ದಂಡವನ್ನ ಡಿಸಿಎಂ ಸಾಹೇಬ್ರಿಗೆ ಹಾಕಬೇಕಬೇಕು. ಸಾಮಾನ್ಯ ಜನ ಈ ತಪ್ಪನ್ನು ಮಾಡಿದರೆ ಹೇಗೆ ಬೆಲೆ ತೆರುತ್ತಾರೋ ಅದೇ ರೀತಿ ಡಿಸಿಎಂ ಬೆಲೆ ತೆತ್ತು ದಂಡ ಕಟ್ಟುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.

  • ಸಿಲಿಕಾನ್ ಸಿಟಿಯಲ್ಲಿ ಉಚಿತ ವೈಫೈಗೆ ಚಿಂತನೆ- ಡಿಸಿಎಂ

    ಸಿಲಿಕಾನ್ ಸಿಟಿಯಲ್ಲಿ ಉಚಿತ ವೈಫೈಗೆ ಚಿಂತನೆ- ಡಿಸಿಎಂ

    ಬೆಂಗಳೂರು: ನಗರದ ಎಲ್ಲ ಕಡೆ ವೈಫೈ ಹಾಟ್ ಸ್ಪಾಟ್ ಮೂಲಕ ಪ್ರತಿ ದಿನ ಒಂದು ಜಿಬಿ ಉಚಿತ ಇಂಟರ್ ನೆಟ್ ಸೇವೆ ಒದಗಿಸಬೇಕೆಂಬ ಉದ್ದೇಶ ಇದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ತಿಳಿಸಿದ್ದಾರೆ.

    ಬೆಂಗಳೂರು ಟೆಕ್ ಸಮ್ಮಿಟ್ ಇಂದು ಕಡೆಯ ದಿನವಾದ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ವೈಫೈ ಹಾಟ್ ಸ್ಪಾಟ್ ಮೂಲಕ ಬೆಂಗಳೂರಿನ ಎಲ್ಲ ಕಡೆ ಪ್ರತಿ ದಿನ ಒಂದು ಗಂಟೆ ಉಚಿತ ಇಂಟರ್ ನೆಟ್ ಸೇವೆ ಒದಗಿಸಲು ಚಿಂತಿಸಲಾಗುತ್ತಿದೆ. ಈ ಯೋಜನೆಗೆ 100 ಕೋಟಿ ರೂ. ವೆಚ್ಚವಾಗಲಿದ್ದು, ಈ ಕುರಿತು ರಾಜ್ಯ ಸರ್ಕಾರ ಆಕ್ಟ್(ACT) ಕಂಪನಿ ಜೊತೆ ಮಾತನಾಡಿದೆ. ನಗರದಲ್ಲಿ ಈ ಸೌಲಭ್ಯ ಅಗತ್ಯವಿದೆ ಎಂದರು.

    ಇನ್ನೂ ಚರ್ಚೆಯ ಹಂತದಲ್ಲಿದ್ದು, ಕಾನೂನು ಕ್ರಮಗಳನ್ನು ಅನುಸರಿಸಿ ಕೆಲವೇ ತಿಂಗಳುಗಳಲ್ಲಿ ನಗರಾದ್ಯಂತ ವೈಫೈ ಇಂಟರ್ ನೆಟ್ ಜಾರಿಗೆ ತರುತ್ತೇವೆ. ಈ ಯೋಜನೆ ಪೂರ್ಣ ಆಗಲು ವಂಭತ್ತು ತಿಂಗಳು ಬೇಕಾಗುತ್ತದೆ. ಇದಕ್ಕಾಗಿ ಆಕ್ಟ್ ಕಂಪನಿಯವರು ಮುಂದೆ ಬಂದಿದ್ದಾರೆ. ಯೋಜನೆಗೆ ತಗಲುವ 100 ಕೋಟಿ ರೂ. ವೆಚ್ಚವನ್ನು ಕಂಪನಿಯವರೇ ಭರಿಸುತ್ತಾರೆ. ಆದರೆ ಇದಕ್ಕಾಗಿ ವಿದ್ಯುತ್ ಅಗತ್ಯವಿದ್ದು, ಇದನ್ನು ಮಾತ್ರ ಅವರು ಕೇಳುತ್ತಿದ್ದಾರೆ. ವಿದ್ಯುತ್ ಪೂರೈಸುವ ಪ್ರಕ್ರಿಯೆ ನಡೆಯಬೇಕಿದೆ ಎಂದರು.