Tag: dcc bank

  • ಡಿಸಿಸಿ ಬ್ಯಾಂಕಿನಲ್ಲಿ ಕೆಲಸ ಕೊಡಿಸೋದಾಗಿ 24 ಲಕ್ಷ ರೂ. ಪಂಗನಾಮ

    ಡಿಸಿಸಿ ಬ್ಯಾಂಕಿನಲ್ಲಿ ಕೆಲಸ ಕೊಡಿಸೋದಾಗಿ 24 ಲಕ್ಷ ರೂ. ಪಂಗನಾಮ

    – ಬಿಜೆಪಿ ಮುಖಂಡನ ಮೇಲೆ ಆರೋಪ

    ಬಾಗಲಕೋಟೆ: ಡಿಸಿಸಿ ಬ್ಯಾಂಕಿನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಬಿಜೆಪಿ ಮುಖಂಡನೋರ್ವ ಆರು ಜನರಿಂದ 20 ಲಕ್ಷ ರೂ. ಲಪಾಟಿಯಿಸಿ ವಂಚಿಸಿದ್ದಾನೆಂಬ ಆರೋಪ ಕೇಳಿಬಂದಿದೆ.

    ಬಾಗಲಕೋಟೆಯಲ್ಲಿ ಈ ಘಟನೆ ನಡೆದಿದ್ದು, ಬಿಜೆಪಿ ಮುಖಂಡ ರಾಘವೇಂದ್ರ ನಾಗೂರ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ರಾಘವೇಂದ್ರ ನಾಗೂರು ಬಾಗಲಕೋಟೆ ಬಿಜೆಪಿ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕರಾಗಿದ್ದು, ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಅವರ ಆಪ್ತ ಎಂದು ಹೇಳಿಕೊಂಡು ಮೋಸಮಾಡಿದ್ದಾನೆ. ಮಧ್ಯವರ್ತಿ ಅಶೋಕ್ ಚಿಲ್ಲಾ ಕಡೆಯಿಂದ ಹಣ ಪಡೆದು ಮೋಸಮಾಡಿದ್ದಾನೆ ಎಂದು ಹೇಳಲಾಗಿದೆ.

    ಹಣ ಕೊಟ್ಟವರ ಕಾಟ ತಾಳಲಾರದೆ ಅಶೋಕ್ ಚಿಲ್ಲಾ ತನ್ನ ಅಳಲನ್ನು ಪತ್ರದಲ್ಲಿ ಬರೆದು, ಸೆಲ್ಫಿ ವಿಡಿಯೋ ಮಾಡಿ ನಾಪತ್ತೆಯಾಗಿದ್ದಾನೆ. ಆರು ಜನ ಯುವಕರಿಂದ 20.50 ಲಕ್ಷ ರೂ. ಹಾಗೂ ಮಧ್ಯವರ್ತಿ ಅಶೋಕ್ ಚಿಲ್ಲಾರಿಂದ ನಾಲ್ಕು ಲಕ್ಷ ರೂ. ಸೇರಿ ಒಟ್ಟು 24.50 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾನೆ ಎಂದು ಅಶೋಕ್ ಚಿಲ್ಲಾ ತನ್ನ ಸೆಲ್ಫಿ ವಿಡೋದಲ್ಲಿ ಆರೋಪಿಸಿದ್ದಾನೆ.

    ಆದರೆ ರಾಘವೇಂದ್ರ ನಾಗೂರು ಆರೋಪ ತಳ್ಳಿ ಹಾಕಿದ್ದು, ಹಣ ಕೊಟ್ಟವರಿಗೆ ತನ್ನ ಖಾತೆಯ ಚೆಕ್ ಬರೆದುಕೊಟ್ಟಿರುವ ಅಶೋಕ್ ಚಿಲ್ಲಾನೇ ವಂಚಕ. ನನಗೆ ಕೊಡುವ ಹಣ ಕೇಳಲು ಹೋದಾಗ ಕನ್ಫರ್ಮೇಶನ್ ಗೆಂದು ಅಶೋಕ್ ವಿಡಿಯೋ ಮಾಡಿಕೊಂಡಿದ್ದಾನೆ. ಈಗ ಈ ರೀತಿ ಸುಳ್ಳು ಆರೋಪ ಹೊರಿಸಿದ್ದಾನೆ ಎಂದು ರಾಘವೇಂದ್ರ ಹೇಳುತ್ತಿದ್ದಾರೆ. ಇತ್ತ ಅಶೋಕ್ ಸೆಲ್ಫಿ ವಿಡಿಯೋವನ್ನು ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಮಾರ್ಚ್ 3ರಿಂದ ನಾಪತ್ತೆಯಾಗಿದ್ದಾನೆ. ಸದ್ಯ ಅಶೋಕ್ ಬಗ್ಗೆ ನವನಗರ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು ದೂರು ದಾಖಲಾಗಿದ್ದು, ಅಶೋಕ್ ಪತ್ತೆಗಾಗಿ ಪೊಲೀಸರು ತನಿಖೆ ನಡೆಸಿದ್ದಾರೆ.

  • ಪಿಎಲ್‍ಡಿ ಬ್ಯಾಂಕ್ ನಂತರ, ಇದೀಗ ಡಿಸಿಸಿ ಬ್ಯಾಂಕ್ ಚುನಾವಣೆ- ಕುಂದಾ ನಗರದ ಕದನ

    ಪಿಎಲ್‍ಡಿ ಬ್ಯಾಂಕ್ ನಂತರ, ಇದೀಗ ಡಿಸಿಸಿ ಬ್ಯಾಂಕ್ ಚುನಾವಣೆ- ಕುಂದಾ ನಗರದ ಕದನ

    ಬೆಂಗಳೂರು: ಒಂದು ವರ್ಷದ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬೆಳಗಾವಿ ಕಾಂಗ್ರೆಸ್ ಶಾಸಕರ ನಡುವೆ ಪಿಎಲ್‍ಡಿ ಬ್ಯಾಂಕ್ ಚುನಾವಣೆ ಕದನ ಜೋರಾಗಿತ್ತು. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಜಾರಕಿಹೋಳಿ ಸಹೋದರರ ನಡುವೆ ಶುರುವಾದ ಜಟಾಪಟಿ ಅಂತಿಮವಾಗಿ ಸಮ್ಮಿಶ್ರ ಸರ್ಕಾರದ ಪಥನಕ್ಕೆ ಕಾರಣವಾಗಿತ್ತು.

    ಅದೇ ಬೆಳಗಾವಿಯಲ್ಲಿ ಈಗ ಡಿಸಿಸಿ ಬ್ಯಾಂಕ್ ಚುನಾವಣೆ ಗಲಾಟೆ ಗರಿಗೆದರಿದೆ. ಅಂದು ಕಾಂಗ್ರೆಸ್ ಶಾಸಕರ ನಡುವೆ ನಡೆದ ಕದನದ ರೀತಿಯಲ್ಲೇ ಬಿಜೆಪಿ ಶಾಸಕರ ನಡಯವೆಯೂ ಇದೀಗ ಫೈಟ್ ಆರಂಭವಾಗಿದೆ. ಬಿಜೆಪಿ ನಾಯಕರಾದ ಡಿಸಿಎಂ ಲಕ್ಷ್ಮಣ ಸವದಿ, ಪ್ರಭಾಕರ್ ಕೋರೆ ಹಾಗೂ ಸಂಸದ ಸುರೇಶ್ ಅಂಗಡಿ ಒಂದು ಕಡೆಯಾದರೆ ಬಿಜೆಪಿ ಶಾಸಕರು ಸಚಿವರಾದ ರಮೇಶ್ ಜಾರಕಿಹೊಳಿ, ಉಮೇಶ್ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೋಳಿ ಮತ್ತೊಂದು ಕಡೆ ನಿಂತಿದ್ದಾರೆ.

    ಎರಡೂ ಬಣದವರು ಬಿಜೆಪಿಯವರೇ ಆಗಿದ್ದರೂ, ಮಾರ್ಚ್ ತಿಂಗಳಲ್ಲಿ ನಡೆಯುವ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ತಮ್ಮ ಬಣವೇ ಗೆಲ್ಲಬೇಕು ಎನ್ನುವ ಜಿದ್ದಿಗೆ ಬಿದ್ದಿದ್ದಾರೆ. ಇದರ ಮಧ್ಯೆ ಲಕ್ಷಣ ಸವದಿಯವರನ್ನು ಡಿಸಿಎಂ ಆಗಿ ಮುಂದುವರಿಸಿದ್ದು ಜಾರಕಿಹೊಳಿ ಬಣಕ್ಕೆ ಇಷ್ಟ ಇರಲಿಲ್ಲ. ಅಲ್ಲದೆ ಉಮೇಶ್ ಕತ್ತಿಯವರನ್ನು ಸಚಿವರನ್ನಾಗಿ ಮಾಡದಿರುವುದು ಕತ್ತಿ ಬಣದ ಸಿಟ್ಟಿಗೆ ಕಾರಣವಾಗಿದೆ.

    ತಮ್ಮ ವಿರೋಧಿಗಳ ಸಿಟ್ಟನ್ನು ಅರಿತ ಡಿಸಿಎಂ ಲಕ್ಷ್ಮಣ್ ಸವದಿ ಪ್ರಭಾಕರ್ ಕೋರೆ ಹಾಗೂ ಸುರೇಶ್ ಅಂಗಡಿ ಜೊತೆ ಸೇರಿ ಶತಾಯಗತಾಯ ಕತ್ತಿ ಹಾಗೂ ಜಾರಕಿಹೋಳಿ ಗುಂಪಿಗೆ ಮುಖಭಂಗ ಮಾಡುವ ಪಣ ತೊಟ್ಟಿದ್ದಾರೆ. ಹೀಗೆ ಬೆಳಗಾವಿ ಅಖಾಡದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ಗಲಾಟೆ ಜೋರಾಗುವ ಲಕ್ಷಣಗಳು ಕಾಣತೊಡಗಿವೆ. ಮೊದಲೇ ಸಚಿವ ಸ್ಥಾನ ಸಿಗದ ಸಿಟ್ಟು. ಡಿಸಿಎಂ ಪೋಸ್ಟ್ ಗಲಾಟೆ ಎಲ್ಲವೂ ಸೇರಿಕೊಂಡು ಪಿಎಲ್‍ಡಿ ಬ್ಯಾಂಕ್ ಗಲಾಟೆ ಮಾದರಿಯಲ್ಲೇ ಡಿಸಿಸಿ ಬ್ಯಾಂಕ್ ಚುನಾವಣೆ ಸರ್ಕಾರದ ಪಾಲಿಗೆ ಮಗ್ಗಲ ಮುಳ್ಳಾಗುತ್ತಾ ಎನ್ನುವ ಆತಂಕವಂತೂ ಬಿಜೆಪಿ ಪಾಳಯದಲ್ಲಿ ಮನೆ ಮಾಡಿದೆ.

  • ಯಾರನ್ನು ಬೇಕಾದರೂ ಸೋಲಿಸಬಹುದು ಅನ್ನೋದನ್ನು ನಾವು ತೋರಿಸಿಕೊಟ್ಟಿದ್ದೇವೆ- ಎಚ್‍ಡಿಡಿಗೆ ರಾಜಣ್ಣ ಟಾಂಗ್

    ಯಾರನ್ನು ಬೇಕಾದರೂ ಸೋಲಿಸಬಹುದು ಅನ್ನೋದನ್ನು ನಾವು ತೋರಿಸಿಕೊಟ್ಟಿದ್ದೇವೆ- ಎಚ್‍ಡಿಡಿಗೆ ರಾಜಣ್ಣ ಟಾಂಗ್

    ತುಮಕೂರು: ನನ್ನ ಬಲವೇನು, ಯಾರನ್ನು ಬೇಕಾದರೂ ಸೋಲಿಸಬಹುದು ಎಂಬುದನ್ನು ನಾವು ತೋರಿಸಿಕೊಟ್ಟಿದ್ದೇವೆ ಎಂದು ಪರೋಕ್ಷವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸೋಲನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಪ್ರಸ್ತಾಪಿಸಿ ಟಾಂಗ್ ನೀಡಿದ್ದಾರೆ.

    ನಗರದಲ್ಲಿ ನಡೆದ ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಸುಪರ್ ಸೀಡ್ ಆದ ಸಂದರ್ಭದಲ್ಲಿ ನನ್ನ ಪರವಾಗಿ ನಿಂತು, ಸಾಕಷ್ಟು ಜನ ಪ್ರತಿಭಟಿಸಿದ್ದೀರಿ. ಆಗಲೇ ನನಗೆ ಧೈರ್ಯ ಬಂತು ಜಿಲ್ಲೆಯಾದ್ಯಂತ ನನ್ನೊಂದಿಗೆ ಜನ ಇದ್ದಾರೆ ಎಂದು ತಿಳಿಯಿತು. ಯಾರನ್ನು ಬೇಕಾದರೂ ಸೋಲಿಸುವ ಶಕ್ತಿ ನನಗಿದೆ ಎಂದು ತಿಳಿಯಿತು ಎನ್ನುವ ಮೂಲಕ ಪರೋಕ್ಷವಾಗಿ ದೇವೇಗೌಡರಿಗೆ ಟಾಂಗ್ ನೀಡಿದರು.

    ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನಾಡಿನ ದೊರೆ ಎಂದು ಸಂಭೋದಿಸಿದ ಅವರು, ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ವೇಳೆ ಸಿಎಂ ಯಡಿಯೂರಪ್ಪ ನಾನು ಇದ್ದೇನೆ ತಲೆ ಕೆಡಿಸಿಕೊಳ್ಳಬೇಡ ಎಂದು ಅಭಯ ಹಸ್ತ ನೀಡಿದರು. ಮನೆ ಮುರುಕರು ಸಹಕಾರ ಕ್ಷೇತ್ರದಿಂದ ನನ್ನನ್ನು ತೆಗೆಯಬೇಕೆಂದು ನೋಡಿದರು ಎಂದು ವಾಗ್ದಾಳಿ ನಡೆಸಿದರು.

    ತುಮಕೂರು ಜಿಲ್ಲೆಯಲ್ಲಿ ಸಾಲ ಮಾಡಿದ ರೈತರು ನಿಧನವಾದರೆ ಅವರ 1 ಲಕ್ಷ ರೂ. ಸಾಲ ಮನ್ನಾ ಮಾಡಲು ಸಿಎಂ ಅನುಮತಿ ನೀಡಿದ್ದಾರೆ. ಅದೂ ಸಹ ಬ್ಯಾಂಕ್‍ನ ಲಾಭದ ಹಣದಲ್ಲಿ. ಅಲ್ಲದೆ ಬಜೆಟ್ ನಲ್ಲಿ ತುಮಕೂರು ಜಿಲ್ಲೆಗೆ ಮೆಗಾ ಡೈರಿ ಮಂಜೂರಾತಿ ಘೋಷಣೆ ಮಾಡಬೇಕೆಂದು ಮನವಿ ಮಾಡಿದ್ದೇನೆ. ಈ ಬಜೆಟ್‍ನಲ್ಲಿ ಆಗದಿದ್ದರೂ ಮುಂದಿನ ಬಜೆಟ್ ನಲ್ಲಾದರೂ ಸಿಎಂ ಮಾಡಿಕೊಡುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

    ಖಾಸಗಿ ಕಂಪನಿಗಳು ರೈತರ ಚಿನ್ನವನ್ನು ಲೂಟಿ ಮಾಡುತ್ತಿದ್ದಾರೆ. ಅವರಿಗೆ ಕಡಿವಾಣ ಹಾಕಬೇಕಿದೆ. ಅಲ್ಲದೆ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಬೇಕು. ಸಿಎಂ ಯಶಸ್ವಿನಿ ಯೋಜನೆ ಘೋಷಣೆ ಮಾಡಬೇಕು ಎಂದು ರಾಜಣ್ಣ ಈ ವೇಳೆ ಒತ್ತಾಯಿಸಿದರು.

  • ಸಿಎಂ ಬಿಎಸ್‍ವೈರನ್ನ ಭೇಟಿ ಮಾಡಿದ ‘ಕೈ’ ಮಾಜಿ ಶಾಸಕ ಕೆ.ಎನ್.ರಾಜಣ್ಣ

    ಸಿಎಂ ಬಿಎಸ್‍ವೈರನ್ನ ಭೇಟಿ ಮಾಡಿದ ‘ಕೈ’ ಮಾಜಿ ಶಾಸಕ ಕೆ.ಎನ್.ರಾಜಣ್ಣ

    ಬೆಂಗಳೂರು: ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿ, ಬಿಎಸ್ ಯಡಿಯೂರಪ್ಪ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಇಂದು ಸಿಎಂ ಬಿಎಸ್‍ವೈರನ್ನ ಭೇಟಿ ಮಾಡಿದ್ದರು.

    ಜಿಲ್ಲಾಧಿಕಾರಿಗಳು ಸೇರಿದಂತೆ ಸಿಇಓಗಳ ಸಭೆಯಲ್ಲಿ ಭಾಗವಹಿಸಿದ್ದ ಬಿಎಸ್ ಯಡಿಯೂರಪ್ಪ ಅವರು, ಸಭೆ ನಡುವೆ ಬಿಡುವು ಮಾಡಿಕೊಂಡು ರಾಜಣ್ಣರನ್ನು ಭೇಟಿಯಾಗಲು ಬಂದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯುತ್ತಿದ್ದ ಸಭೆಯ ನಡುವೆ ಹೊರ ಬಂದು ಪಡಸಾಲೆಯಲ್ಲಿ ಸುಮಾರು 15 ನಿಮಿಷ ಮಾತುಕತೆ ನಡೆಸಿದರು.

    ಈ ಸಂದರ್ಭದಲ್ಲಿ ರಾಜಣ್ಣ ಅವರು ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ವಿಚಾರವಾಗಿ ಸಿಎಂ ಜೊತೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಈ ಮಾತುಕತೆ ವೇಳೆಯೇ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಲಾಂಬಿಕಾದೇವಿ ಅವರನ್ನು ಕರೆಸಿದ ಸಿಎಂ, ಅವರಿಂದ ಮಾಹಿತಿ ಸಂಗ್ರಹ ಮಾಡಿದರು. ಸಿಎಂ ಭೇಟಿ ಸಂದರ್ಭದಲ್ಲಿ ರಾಜಣ್ಣ ಅವರಿಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಸಾಥ್ ನೀಡಿದರು.

    ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ರಾಜಣ್ಣ ಅವರು ತೆರಳಿದರು. ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ವಿಚಾರದಲ್ಲಿ ಸಿಎಂ ಜೊತೆ ಚರ್ಚೆ ಮಾಡಿದ್ದು, ಈ ಸಂಬಂಧ ಏನಾದರು ಬದಲಾವಣೆ ಆಗಲಿದೆಯಾ ಎಂಬ ಕುತೂಹಲ ಈ ಭೇಟಿಯಿಂದ ಮೂಡಿದೆ.

  • ಮತ್ತೆ ಡಿಸಿಸಿ ಬ್ಯಾಂಕ್ ಗದ್ದುಗೆ ಏರಿದ ಕೆ.ಎನ್.ರಾಜಣ್ಣ

    ಮತ್ತೆ ಡಿಸಿಸಿ ಬ್ಯಾಂಕ್ ಗದ್ದುಗೆ ಏರಿದ ಕೆ.ಎನ್.ರಾಜಣ್ಣ

    ತುಮಕೂರು: ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಆದ ಒಂದೇ ವಾರದಲ್ಲಿಯೇ ಮಾಜಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ಕೆ.ಎನ್.ರಾಜಣ್ಣ ಮತ್ತೆ ತಮ್ಮ ಹಿಡಿತವನ್ನು ಸಾಧಿಸಿದ್ದಾರೆ. ಜುಲೈ 20ರಂದು ಮೈತ್ರಿ ಸರ್ಕಾರ ಡಿಸಿಸಿ ಬ್ಯಾಂಕ್ ನ್ನು ಸೂಪರ್ ಸೀಡ್ ಮಾಡಿ ಆದೇಶ ಹೊರಡಿಸಿತ್ತು. ಸೂಪರ್‍ಸೀಡ್ ನಂತರ ಸರ್ಕಾರದಿಂದ ಒಂದು ವರ್ಷ ಅವಧಿಗಾಗಿ ಬ್ಯಾಂಕಿನ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಅಧಿಕಾರ ಸ್ವೀಕರಿಸಿದ್ದರು.

    ಸರ್ಕಾರದ ಆದೇಶವನ್ನು ಪ್ರಶ್ನಿಸಿ ಕೆ.ಎನ್.ರಾಜಣ್ಣ, ಸಹಕಾರ ಸಂಘಗಳ ಅಪರ ನಿಬಂಧಕರ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಸಹಕಾರ ಇಲಾಖೆಯ ಹೆಚ್ಚುವರಿ ನಿಬಂಧಕರು, ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಆದೇಶದ ಹಿನ್ನೆಲೆಯಲ್ಲಿ ಕೆ.ಎನ್.ರಾಜಣ್ಣ ನೇತೃತ್ವದ ಆಡಳಿತ ವರ್ಗ ಮತ್ತೆ ಅಧಿಕಾರಕ್ಕೆ ಬರಲಿದೆ.

    ಸಹಕಾರ ಇಲಾಖೆಯ ಹೆಚ್ಚುವರಿ ನಿಬಂಧಕರ ಆದೇಶದ ಕುರಿತು ಪ್ರತಿಕ್ರಿಯಿಸಿರುವ ಕೆ.ಎನ್.ರಾಜಣ್ಣ, 2003 ಸೆಪ್ಟೆಂಬರ್ ನಿಂದ 2004 ಮೇವರೆಗೂ ಇದೇ ರೀತಿಯ ಕಾರ್ಯ ನಡೆದಿತ್ತು. ಆದ್ರೆ ನಾನೇ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷನಾಗಿರುತ್ತೇನೆ. ಉಪ ಜಿಲ್ಲಾಧಿಕಾರಿಗಳು ಚಾರ್ಜ್ ಕೊಟ್ಟಿದ್ದು, ಅಧಿಕಾರ ವಹಿಸಿಕೊಂಡಿದ್ದೇನೆ. ಸದ್ಯ ಪ್ರಕರಣ ವಿಚಾರಣೆ ಹಂತದಲ್ಲಿದೆ. ರಾಜ್ಯದ 21 ಜಿಲ್ಲೆಗಳಲ್ಲಿ ಬ್ಯಾಂಕ್ ನಡೆಯುತ್ತಿದ್ದು, ಅಲ್ಲಲ್ಲಿ ಸಣ್ಣ ನಿಯಮಗಳ ಉಲ್ಲಂಘನೆ ಆಗಿರುತ್ತದೆ. ಸಂಸ್ಥೆಗೆ ನಷ್ಟ ಮತ್ತು ಹಣಕಾಸಿನ ವಿಷಯದಲ್ಲಿ ಲೋಪಗಳಾದ್ರೆ ಒಪ್ಪಿಕೊಳ್ಳುತ್ತೇವೆ. ಆಡಳಿತಾತ್ಮಕ ವಿಚಾರದಲ್ಲಿ ಸಣ್ಣ ಪ್ರಮಾಣದ ತಪ್ಪುಗಳು ನಡೆದಿರುತ್ತವೆ. ಬ್ಯಾಂಕ್‍ನಲ್ಲಿ ಯಾವುದೇ ತಪ್ಪು ನಡೆದಿಲ್ಲ ಎಂದು ನಾನು ಹೇಳಲ್ಲ. ಬ್ಯಾಂಕ್ ಬಗ್ಗೆ ಮಾತನಾಡುವವರು ಯಾರು ಬಂಡಾವಳ ಹಾಕಿಲ್ಲ ಮತ್ತು ಸರ್ಕಾರದ ಯಾವುದೇ ಠೇವಣಿಗಳು ಇಲ್ಲ. ಬಡವರು ಹಾಕಿದ ಬಂಡವಾಳ ಮತ್ತು ಸಾಲಗಾರರು ಪ್ರಾಮಾಣಿಕವಾಗಿ ನೀಡುವ ಬಡ್ಡಿಯಿಂದ ಬ್ಯಾಂಕ್ ನಡೆಯುತ್ತಿದೆ ಎಂದು ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡರು.

    ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ರಾಜಣ್ಣ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದರು. ಕಾಂಗ್ರೆಸ್ ಉಳಿಯಬೇಕಾದರೆ ಜೆಡಿಎಸ್‍ನಿಂದ ಹೊರ ಬರಬೇಕು ಎಂದು ಹೇಳಿದ್ದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಸೋಲಲು ರಾಜಣ್ಣ ನೀಡಿದ ಹೇಳಿಕೆಗಳು ಕಾರಣ ಎನ್ನುವ ವಿಚಾರ ಚರ್ಚೆಯಾಗಿತ್ತು. ಅಷ್ಟೇ ಅಲ್ಲದೇ ಪರಮೇಶ್ವರ್ ವಿರುದ್ಧವೂ ರಾಜಣ್ಣ ಹೇಳಿಕೆಗಳನ್ನು ನೀಡುತ್ತಿದ್ದರು. ಹೀಗಾಗಿ ಸರ್ಕಾರ ಸೂಪರ್ ಸೀಡ್ ಮಾಡಿರಬಹುದಾ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿತ್ತು.

  • ಎಚ್‍ಡಿಡಿ ಕುಟುಂಬದ ಸೇಡಿನ ರಾಜಕೀಯಕ್ಕೆ ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ – ರಾಜಣ್ಣ ಕಿಡಿ

    ಎಚ್‍ಡಿಡಿ ಕುಟುಂಬದ ಸೇಡಿನ ರಾಜಕೀಯಕ್ಕೆ ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ – ರಾಜಣ್ಣ ಕಿಡಿ

    ತುಮಕೂರು: ತುಮಕೂರು ಡಿಸಿಸಿ ಬ್ಯಾಂಕ್ ಅನ್ನು ಸೂಪರ್ ಸೀಡ್ ಮಾಡುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸೋಲಿನ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಕುರಿತು ಕ್ಯಾತಸಂದ್ರದ ತಮ್ಮ ನಿವಾಸದಲ್ಲಿ ಪಬ್ಲಿಕ್ ಟಿ.ವಿ ಜೊತೆ ಮಾತನಾಡಿದ ಅವರು, ದೇವೇಗೌಡರು ಲೋಕಸಭಾ ಚುನಾವಣೆಯಲ್ಲಿ ತಾವು ಸೋತಿದ್ದರಿಂದ ಈ ಮೂಲಕ ಸೇಡು ತೀರಿಸಿಕೊಂಡಿದ್ದಾರೆ. ಅವರ ಕುಟುಂಬ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.

    ಇದರಿಂದ ನಾನು ಕುಗ್ಗಲ್ಲ. ಮತ್ತೇ ಒಂದು ವಾರದಲ್ಲಿ ಅಧಿಕಾರಕ್ಕೆ ಬರುತ್ತೇನೆ. ನನ್ನ ಮೇಲೆ ಯಾವುದೇ ಅವ್ಯವಹಾರದ ಆರೋಪಗಳಿಲ್ಲ. ಸೂಪರ್ ಸೀಡ್ ಕುರಿತು ಯಾವುದೇ ನೋಟೀಸ್ ನೀಡಿಲ್ಲ. ಏಕಾಏಕಿ ಸೂಪರ್ ಸೀಡ್ ಮಾಡಿದ್ದಾರೆ ಎಂದು ರಾಜಣ್ಣ ಕಿಡಿ ಕಾರಿದರು.

    ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಸಚಿವ ರೇವಣ್ಣ ಅವರ ಅವ್ಯಹಾರವನ್ನು ಕೆಲವೇ ದಿನಗಳಲ್ಲಿ ಬಿಚ್ಚಿಡುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಸೋಲಿಗೆ ನಾನೊಬ್ಬನೇ ಕಾರಣ ಎನ್ನುವುದು ಸುಳ್ಳು. ಜಿಲ್ಲೆಯ ಬೇರೆ ನಾಯಕರೂ ದೇವೇಗೌಡರ ಸೋಲಿಗೆ ಕಾರಣರಾಗಿದ್ದಾರೆ. ಸೋಮವಾರ ಸಂಜೆ ಈ ಸರ್ಕಾರ ಹಾಳಾಗಿ ಹೋಗಲಿದ್ದು, ಮಂಗಳವಾರ ಅಥವಾ ಬುಧವಾರದೊಳಗೆ ನಾನು ಮತ್ತೆ ಅಧಿಕಾರ ಹಿಡಿಯುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

    ನನಗೆ ಇದೇನು ಹೊಸದಲ್ಲಿ ಕಳೆದ 50 ವರ್ಷಗಳಿಂದ ಸಹಕಾರ ವಲಯದಲ್ಲಿ ಕೆಲಸ ಮಾಡಿದ್ದೇನೆ. ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು, ದೇವೇಗೌಡರ ಕುಟುಂಬ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಈ ರೀತಿ ಮಾಡಿದ್ದಾರೆ. ಹಣಕಾಸು ಸಂಸ್ಥೆಗಳಲ್ಲಿ ಯಾವುದೇ ರೀತಿ ಆರೋಪ ಬಂದಲ್ಲಿ ಕೋರ್ಟ್‍ನಲ್ಲಿ ಪ್ರಕರಣ ದಾಖಲಿಸಬೇಕು. ಬ್ಯಾಂಕ್‍ನಲ್ಲಿ ಯಾವುದೇ ರೀತಿಯ ಹಗರಣ ನಡೆದಿಲ್ಲ. ಕೆಲವೇ ದಿನಗಳಲ್ಲಿ ಡಿಸಿಎಂ, ಎಚ್‍ಡಿಡಿ, ರೇವಣ್ಣ ಅವರ ಹಗರಣವನ್ನು ದಾಖಲೆ ಸಮೇತ ಬಿಚ್ಚಿಡುತ್ತೇನೆ.

    ಸೋಮವಾರ ಸರ್ಕಾರ ಹಾಳಾಗಿ ಹೋಗುತ್ತದೆ. ನಾನು ಸುಪ್ರೀಂ ಕೋರ್ಟ್‍ಗೆ ಈ ಕುರಿತು ಅರ್ಜಿ ಹಾಕುತ್ತೇನೆ. ನಂತರ ನಾನೇ ಅಧಿಕಾರಕ್ಕೆ ಬರುತ್ತೇನೆ ಎಂದು ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    2003 ರಿಂದ ಮಾಜಿ ಶಾಸಕ ರಾಜಣ್ಣ ಸತತ 5 ವರ್ಷಗಳ ಡಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಆರ್. ಶ್ರೀನಿವಾಸ ಪ್ರಸಾದ್ ಉಪಾಧ್ಯಕ್ಷರಾಗಿದ್ದರೂ ರಾಜಣ್ಣ ಅವರು ಬ್ಯಾಂಕಿನಲ್ಲಿ ಹಿಡಿತ ಹೊಂದಿದ್ದರು. ಡಿಸಿಸಿ ಬ್ಯಾಂಕ್ ಈ ರೀತಿ ಸೂಪರ್ ಸೀಡ್ ಆಗುವುದು ಇದೇ ಮೊದಲಲ್ಲ. 2004ರಲ್ಲೂ ಸೂಪರ್ ಸೀಡ್ ಆಗಿತ್ತು.

    ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ರಾಜಣ್ಣ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದರು. ಕಾಂಗ್ರೆಸ್ ಉಳಿಯಬೇಕಾದರೆ ಜೆಡಿಎಸ್‍ನಿಂದ ಹೊರ ಬರಬೇಕು ಎಂದು ಹೇಳಿದ್ದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಸೋಲಲು ರಾಜಣ್ಣ ನೀಡಿದ ಹೇಳಿಕೆಗಳು ಕಾರಣ ಎನ್ನುವ ವಿಚಾರ ಚರ್ಚೆಯಾಗಿತ್ತು. ಅಷ್ಟೇ ಅಲ್ಲದೇ ಪರಮೇಶ್ವರ್ ವಿರುದ್ಧವೂ ರಾಜಣ್ಣ ಹೇಳಿಕೆಗಳನ್ನು ನೀಡುತ್ತಿದ್ದರು. ಹೀಗಾಗಿ ಸರ್ಕಾರ ಸೂಪರ್ ಸೀಡ್ ಮಾಡಿರಬಹುದಾ ಎನ್ನುವ ಪ್ರಶ್ನೆ ಎದ್ದಿದೆ.

     

    ವಿಶೇಷ ಏನೆಂದರೆ ಶನಿವಾರ ಬೆಳಗ್ಗೆ ರಾಜಣ್ಣ ಸುದ್ದಿಗೋಷ್ಠಿ ನಡೆಸಿ ಸಿಎಂ, ದೇವೇಗೌಡರ ವಿರುದ್ಧ ಗುಡುಗಿದ್ದರು. ಆದರೆ ಸಂಜೆ 5 ಗಂಟೆಯ ವೇಳೆಗೆ ಪೊಲೀಸರು ಭದ್ರತೆಗಾಗಿ ಡಿಸಿಸಿ ಬ್ಯಾಂಕಿಗೆ ನಿಯೋಜನೆ ಗೊಂಡಿದ್ದರು.

  • ಸಾಲ ಮನ್ನಾ ದುಡ್ಡನ್ನ ಡಿಸಿಸಿ ಬ್ಯಾಂಕ್ ಸಾಲಕ್ಕೆ ವಜಾ

    ಸಾಲ ಮನ್ನಾ ದುಡ್ಡನ್ನ ಡಿಸಿಸಿ ಬ್ಯಾಂಕ್ ಸಾಲಕ್ಕೆ ವಜಾ

    ಕಲಬುರಗಿ: ರಾಜ್ಯದ ಮೈತ್ರಿ ಸರ್ಕಾರ ರೈತರ ಸಾಲಮನ್ನಾ ಮಾಡಿದ್ದೇವೆ ಎಂದು ಬಹುತೇಕ ರೈತರಿಗೆ ಋಣಮುಕ್ತ ಪತ್ರ ನೀಡಿದೆ. ಆದರೆ ಕಲಬುರಗಿ ಹಾಗೂ ಬೀದರ್ ಜಿಲ್ಲೆಯಲ್ಲಿ ಸಾಲ ಮನ್ನಾ ಮಾಡಿದರೂ ರೈತರ ಖಾತೆಗಳಿಗೆ ಇಂದಿಗೂ ಹಣ ತಲುಪಿಲ್ಲ.

    ಹೌದು. ಕಲಬುರಗಿ ಮತ್ತು ಬೀದರ್ ಜಿಲ್ಲೆಗಳ ರೈತರು ಡಿಸಿಸಿ ಬ್ಯಾಂಕ್‍ನಲ್ಲಿ ಸಾಲ ಪಡೆದಿದ್ದರು. ಸರ್ಕಾರ ರೈತರ ಸಾಲಮನ್ನಾಕ್ಕಾಗಿ 150 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ಆದರೆ ಡಿಸಿಸಿ ಬ್ಯಾಂಕ್‍ನ ಅಧಿಕಾರಿಗಳು ನಕಲಿ ರೈತರನ್ನು ಸೃಷ್ಟಿಸಿ ಅಪೆಕ್ಸ್ ಬ್ಯಾಂಕ್‍ನಲ್ಲಿ ಸಾಲ ಎತ್ತಿದ್ದಾರೆ. ಹೀಗಾಗಿ ಇದೀಗ ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ಅಪೆಕ್ಸ್ ಬ್ಯಾಂಕ್ ಡಿಸಿಸಿ ಬ್ಯಾಂಕ್ ಮಾಡಿದ್ದ ಸಾಲಕ್ಕೆ ವಜಾ ಮಾಡಿಕೊಂಡಿದೆ ಎಂದು ಬಿಜೆಪಿ ಶಾಸಕ ರಾಜಕುಮಾರ್ ತೇಲ್ಕೂರ್ ತಿಳಿಸಿದ್ದಾರೆ.

    ಈ ಹಿಂದೆ ಡಿಸಿಸಿ ಬ್ಯಾಂಕ್‍ನ ಅಧ್ಯಕ್ಷರು ಮತ್ತು ನಿರ್ದೇಶಕರು ರೈತರ ಹೆಸರಿನಲ್ಲಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿದರು. ಇಲ್ಲಿವರೆಗೂ ಭ್ರಷ್ಟರ ವಿರುದ್ಧ ಕ್ರಮ ಆಗಿಲ್ಲ. ಇನ್ನು ಈ ಬಗ್ಗೆ ಸಿಎಂ ಗಮನಕ್ಕೆ ತಂದಾಗ ಈ ಎರಡೂ ಜಿಲ್ಲೆಯ ರೈತರ ಸಾಲಮನ್ನಾ ಮಾಡಲು ಹೆಚ್ಚುವರಿ 200 ಕೋಟಿ ಹಣ ಬಿಡುಗಡೆ ಮಾಡುತ್ತೇನೆ. ರೈತರ ಹೆಸರಲ್ಲಿ ಗೋಲ್ಮಾಲ್ ಮಾಡಿದವರನ್ನು ಜೈಲಿಗೆ ಕಳುಹಿಸುತ್ತೀನಿ ಎಂದು ಸಿಎಂ ಭರವಸೆ ಕೊಟ್ಟಿದ್ದಾರೆ.

    ದುರಂತ ಅಂದ್ರೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ತವರಲ್ಲೇ ಈ ಗೋಲ್ಮಾಲ್ ನಡೆದಿದೆ. ಹೀಗಿರುವಾಗ ಭ್ರಷ್ಟರ ಮೇಲೆ ಸರ್ಕಾರ ಕ್ರಮ ಜರುಗಿಸುತ್ತಾ ಕಾದು ನೋಡಬೇಕಿದೆ.

  • ಜೆಡಿಎಸ್ ಬೆಂಬಲಿಸಿದವರಿಗೆ ಡಿಸಿಸಿ ಬ್ಯಾಂಕ್‍ನಲ್ಲಿ ಸಿಗಲ್ಲ ಲೋನ್

    ಜೆಡಿಎಸ್ ಬೆಂಬಲಿಸಿದವರಿಗೆ ಡಿಸಿಸಿ ಬ್ಯಾಂಕ್‍ನಲ್ಲಿ ಸಿಗಲ್ಲ ಲೋನ್

    ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ಆರಂಭವಾದ ನಂತರ ಹೊಸ ವರಸೆ ಶುರುವಾಗಿದೆ. ಇಲ್ಲಿನ ಜನರು ಜೆಡಿಎಸ್‍ಗೆ ವೋಟ್ ಹಾಕಿದವರಾದರೆ ಅಂತಹವರಿಗೆ ಲೋನ್ ಕ್ಯಾನ್ಸಲ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

    ಮಧುಗಿರಿ ತಾಲೂಕಿನ ಡಿಸಿಸಿ ಬ್ಯಾಂಕ್‍ನಲ್ಲಿ ಲೋನ್ ಬೇಕು ಎಂದು ಯಾರಾದರೂ ಹೋದರೆ ಅವರ ಪೂರ್ವಾಪರ ವಿಚಾರಿಸಲಾಗುತ್ತಿದೆಯಂತೆ. ಒಂದು ವೇಳೆ ಅವರು ಜೆಡಿಎಸ್‍ಗೆ ವೋಟ್ ಹಾಕಿದವರಾದರೆ ಅಂತಹವರಿಗೆ ಲೋನ್ ನೀಡಲು ಬ್ಯಾಂಕ್ ಸಿಬ್ಬಂದಿ ನಿರಾಕರಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

    ಕಳೆದ ವಿಧಾಸಭಾ ಚುನಾವಣೆಯಲ್ಲಿ ತುಮಕೂರಿನ ಮಧುಗಿರಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದ ಮಾಜಿ ಶಾಸಕ ಕೆ.ಎನ್. ರಾಜಣ್ಣ ಸೋಲಿನ ಪ್ರತಿಕಾರವನ್ನು ಮತದಾರರ ಮೇಲೆ ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಮಧುಗಿರಿಯ ಅಪೆಕ್ಸ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್‍ನ ಅಧ್ಯಕ್ಷರಾಗಿರೋ ಕೆ.ಎನ್.ರಾಜಣ್ಣ ಜೆಡಿಎಸ್ ಬೆಂಬಲಿಸಿದವರಿಗೆ ಡಿಸಿಸಿ ಬ್ಯಾಂಕಲ್ಲಿ ಸಾಲ ಕೊಡದಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

    ಮಧುಗಿರಿ ತಾಲೂಕು ಗುಟ್ಟೆ ಗ್ರಾಮದ ಮಹಿಳಾ ಸಂಘದ ಸದಸ್ಯೆಯರಿಗೆ ಕೊಡಿಗೇನಹಳ್ಳಿಯ ಡಿಸಿಸಿ ಬ್ಯಾಂಕ್‍ನಲ್ಲಿ ಸಾಲ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಬಳಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ರಾಜಣ್ಣ ಪತ್ನಿ ಶಾಂತಲಾ ಕೂಡ ನೀವು ನಮಗೆ ಬೆಂಬಲಿಸಿಲ್ಲ, ಜೆಡಿಎಸ್‍ಗೆ ಬೆಂಬಲಿಸಿದ್ದೀರಿ ಹೀಗಾಗಿ ನಿಮಗೆ ಸಾಲ ಕೊಡಲು ಸಾಧ್ಯವಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ ಎಂದು ಮಹಿಳಾ ಸಂಘದ ಸದಸ್ಯೆಯರು ಆರೋಪಿಸಿದ್ದಾರೆ.

    ಮಧುಗಿರಿ ಕ್ಷೇತ್ರದಲ್ಲಿ ಯಾರೇ ಡಿಸಿಸಿ ಬ್ಯಾಂಕಲ್ಲಿ ಲೋನ್ ಕೇಳಲು ಹೋದರೂ ಮೊದಲು ಆ ವ್ಯಕ್ತಿಯ ಫೋಟೋವನ್ನು ವಾಟ್ಸಾಪ್ ಮೂಲಕ ಅಧ್ಯಕ್ಷ ರಾಜಣ್ಣ ಅವರಿಗೆ ಕಳುಹಿಸಬೇಕಂತೆ. ಆಗ ರಾಜಣ್ಣ ಆ ವ್ಯಕ್ತಿಯ ಪೂರ್ವಾಪರ ವಿಚಾರಿಸಿ, ಯಾವ ಬೂತ್ ಹಾಗೂ ಆ ಬೂತಲ್ಲಿ ಎಷ್ಟು ಮತ ತಮಗೆ ಬಂದಿದೆ ಎಂಬುದನ್ನು ತಾಳೆ ಹಾಕುತ್ತಾರೆ. ಬಳಿಕ ಆ ಊರಿನ ತಮ್ಮ ಮುಖಂಡರ ಬಳಿ ಚರ್ಚಿಸಿ ಬಳಿಕ ಲೋನ್ ಮಂಜೂರು ಮಾಡುತ್ತಿದ್ದಾರೆ. ಜೆಡಿಎಸ್‍ಗೆ ಮತ ಹಾಕಿದ್ದಾರೆ ಅನ್ನೋದು ಗೊತ್ತಾದರೆ ಅವರಿಗೆ ಲೋನ್ ಸಿಗಲ್ಲ. ಬಳಿಕ ಮನೆಗೆ ಕರೆಯಿಸಿಕೊಂಡು ನೀವು ಜೆಡಿಎಸ್ ಪರ ಕೆಲಸ ಮಾಡಿದ್ದೀರಾ? ಲೋನ್ ಕೋಡೊಕೆ ಮಾತ್ರ ನಾವು ಬೇಕಾ ಎಂದು ಅವಮಾನಿಸುತ್ತಾರೆ ಎನ್ನುವ ದೂರುಗಳು ಕೇಳಿ ಬಂದಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಗ್ರಾಮಸ್ಥರು, ಅಧಿಕಾರಿಗಳ ಕಿತ್ತಾಟಕ್ಕೆ ಕಾರಣವಾಯ್ತು ಡಿಸಿಸಿ ಬ್ಯಾಂಕ್ ಸಭೆ – ಪೊಲೀಸರಿಂದ ಲಾಠಿಚಾರ್ಜ್

    ಗ್ರಾಮಸ್ಥರು, ಅಧಿಕಾರಿಗಳ ಕಿತ್ತಾಟಕ್ಕೆ ಕಾರಣವಾಯ್ತು ಡಿಸಿಸಿ ಬ್ಯಾಂಕ್ ಸಭೆ – ಪೊಲೀಸರಿಂದ ಲಾಠಿಚಾರ್ಜ್

    ದಾವಣಗೆರೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭೆ ಮುಂದೂಡುವ ವಿಚಾರವಾಗಿ ಗ್ರಾಮಸ್ಥರ ಹಾಗೂ ಅಧಿಕಾರಿಗಳ ನಡುವೆ ನಡೆದ ಗಲಾಟೆಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯ ಆಸಗೋಡು ಗ್ರಾಮದಲ್ಲಿ ನಡೆದಿದೆ.

    ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಆಡಳಿತ ಮಂಡಳಿಯ ಸಭೆ ಆಯೋಜಿಸಲಾಗಿತ್ತು. ಆದರೆ ಗ್ರಾಮದ ಕೆಲ ಮುಖಂಡರ ಗುಂಪು ಗ್ರಾಮದಲ್ಲಿ ಮಾರಮ್ಮ ದೇವಿ ಜಾತ್ರೆ ಇರುವ ಹಿನ್ನೆಲೆ ಚುನಾವಣೆ ನಡೆಸಬಾರದು. ಸಭೆ ನಡದರೆ ಗಲಾಟೆ ಆಗುತ್ತದೆ ಎಂದು ಸಭೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಡಿಸಿಸಿ ಬ್ಯಾಂಕ್ ಸಹಕಾರ ಅಭಿವೃದ್ಧಿ ಅಧಿಕಾರಿ ಗೋಪಾಲ್ ಸಭೆ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಆದರೂ ಸಹ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.

    ಈ ಸನ್ನಿವೇಶದಲ್ಲಿ ಪ್ರಾಣ ಹೋದರೂ ಸಭೆ ನಡೆಸಲು ಬಿಡುವುದಿಲ್ಲವೆಂದು ಗ್ರಾಮಸ್ಥರು ಕೂಗಾಡಿ ಗೊಂದಲ ಸೃಷ್ಟಿಸಿದರು. ಇದನ್ನು ತಡೆಯಲು ಬಂದ ಪೊಲೀಸರ ನಡುವೆಯೂ ಗ್ರಾಮಸ್ಥರ ಮಾತಿನ ಚಕಮಕಿ ನಡೆಯಿತು. ಸನ್ನಿವೇಶವನ್ನು ನಿಯಂತ್ರಿಸಲು ಪ್ರಯತ್ನಿಸಿದ ಪೊಲೀಸರು ಅಂತಿಮವಾಗಿ ಲಾಠಿ ಬೀಸಿದರು. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮದ ಮಹಿಳೆಯರು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಹಕಾರಿ ಸಾಲಮನ್ನಾಕ್ಕೆ ಕ್ಯಾಬಿನೆಟ್ ಸಿಗ್ನಲ್: ಮಾರ್ಗಸೂಚಿ ಏನು?ಯಾರಿಗೆ ಅನ್ವಯ ಆಗಲ್ಲ?

    ಸಹಕಾರಿ ಸಾಲಮನ್ನಾಕ್ಕೆ ಕ್ಯಾಬಿನೆಟ್ ಸಿಗ್ನಲ್: ಮಾರ್ಗಸೂಚಿ ಏನು?ಯಾರಿಗೆ ಅನ್ವಯ ಆಗಲ್ಲ?

    ಬೆಂಗಳೂರು: ಸಾಲಮನ್ನಾ ವಿಚಾರದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ಮೊದಲ ಹಂತದ ಸಾಲಮನ್ನಾಕ್ಕೆ ಅಧಿಕೃತ ಆದೇಶ ಹೊರಡಿಸಿದ್ದಾರೆ. ಇಂದು ನಡೆದ ಸಂಪುಟ ಸಭೆಯಲ್ಲಿ ಸಹಕಾರಿ ಸಂಘಗಳಲ್ಲಿನ ರೈತರ ಚಾಲ್ತಿ ಸಾಲಮನ್ನಾಕ್ಕೆ ಒಪ್ಪಿಗೆ ಪಡೆದಿದ್ದಾರೆ.

    ಒಂದು ಕುಟುಂಬದಲ್ಲಿ ಎಷ್ಟು ಮಂದಿ ಸಾಲಪಡೆದಿರುತ್ತಾರೋ ಅವರ ಸಾಲಮನ್ನಾವನ್ನೂ ಕೂಡ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ. ಶುಕ್ರವಾರದಿಂದಲೇ ಸಾಲಮನ್ನಾ ಯೋಜನೆ ಜಾರಿಯಾಗಲಿದೆ. ರೈತರಿಗೆ ಯಾವುದೇ ಒತ್ತಡ ಹೇರದಂತೆ ಬ್ಯಾಂಕ್‍ಗಳಿಗೆ ಸೂಚನೆ ನೀಡಲಾಗಿದೆ.

    ಒತ್ತಾಯ ಪೂರ್ವಕವಾಗಿ ಮರುಪಾವತಿ ಮಾಡಿದವರಿಗೂ ಹಾಗೂ ಸಾಲ ಕಟ್ಟಿದವರಿಗೂ ಸಾಲಮನ್ನ ಯೋಜನೆ ಅನ್ವಯ ಆಗಲಿದೆ. ಆದರೆ, ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲಮನ್ನಾ ಒಂದು ವಾರ ವಿಳಂಬವಾಗಲಿದೆ. ಆಗಸ್ಟ್ 15 ಅಥವಾ ಗಣೇಶ ಹಬ್ಬಕ್ಕೆ 2ನೇ ಹಂತದ ಸಾಲಮನ್ನಾವಾಗಲಿದೆ ಅಂತ ಕ್ಯಾಬಿನೆಟ್ ನಿರ್ಧರಿಸಿದೆ.  ಇದನ್ನು ಓದಿ: ರಾತ್ರೋರಾತ್ರಿ ಸಾಲಮನ್ನಾ ಹಣವನ್ನ ಜಮೆ ಮಾಡಲು ದುಡ್ಡಿನ ಮರ ಬೆಳೆದಿಲ್ಲ: ಎಚ್‍ಡಿಕೆ

     

     

    ಸಾಲಮನ್ನಾ ಹೇಗೆ?
    ಒಟ್ಟು 20.38 ಲಕ್ಷ ರೈತರ ಸಹಕಾರಿ ಬ್ಯಾಂಕ್‍ನ 1 ಲಕ್ಷ ರೂಪಾಯಿವರೆಗಿನ ರೈತರ ಚಾಲ್ತಿ ಸಾಲ ಮನ್ನಾವಾಗಲಿದೆ. 10,734 ಕೋಟಿ ಸಾಲದಲ್ಲಿ 9,448 ಕೋಟಿ ರೂ. ಸಾಲಮನ್ನಾ ಆಗುತ್ತದೆ.

    ಮಾರ್ಗಸೂಚಿ ಏನು?
    * ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಲ್ಯಾಂಪ್ಸ್, ಡಿಸಿಸಿ ಬ್ಯಾಂಕ್‍ಗಳು, ಪಿಕಾರ್ಡ್ ಬ್ಯಾಂಕ್‍ಗಳು ವಿತರಿಸಿದ ಅಲ್ಪಾವಧಿ ಸಾಲದ ಪೈಕಿ 10.07.2018ಕ್ಕೆ ಹೊಂದಿರುವ ಹೊರಬಾಕಿ ಸಾಲಕ್ಕೆ ಮಾತ್ರ ಅನ್ವಯ
    * ಒಂದು ರೈತ ಕುಟುಂಬಕ್ಕೆ ಗರಿಷ್ಠ 1 ಲಕ್ಷ ರೂ.ವರೆಗಿನ ಸಾಲ ಮಾತ್ರ ಮನ್ನಾ
    * 10.07.2018 ಅವಧಿಯಲ್ಲಿ ಸಾಲ ಪಡೆದು ರೈತ ಮೃತ ಪಟ್ಟಿದ್ದರೆ ವಾರಸುದಾರರಿಗೂ ಈ ಸೌಲಭ್ಯ
    * ಹೊರಬಾಕಿ ಮೊತ್ತವನ್ನು ಪೂರ್ಣವಾಗಿ ಮರುಪಾವತಿಸಿದ್ದಲ್ಲಿ ಮನ್ನಾ ಆಗಬೇಕಾದ ಮೊತ್ತ ರೈತರ ಖಾತೆಗೆ ಜಮೆ
    * ಸಾಲಮನ್ನಾ ಆಗುವ ಅನುದಾನವನ್ನು ಡಿಬಿಟಿ ಮೂಲಕ ರೈತರ ಉಳಿತಾಯ ಖಾತೆಗೆ ಬಿಡುಗಡೆ

    ಯಾರಿಗೆ ಅನ್ವಯ ಆಗಲ್ಲ?
    * ಬೆಳೆಸಾಲ ಪಡೆದ ರೈತರು ಸರ್ಕಾರಿ, ಸಹಕಾರಿ ಇತರೆ ಕ್ಷೇತ್ರದ ನೌಕರರಾಗಿಬಾರದು
    * 20 ಸಾವಿರಕ್ಕಿಂತ ಹೆಚ್ಚಿನ ವೇತನ, ಪಿಂಚಣಿ ಪಡೆಯುತ್ತಿದ್ದಲ್ಲಿ ಅಂಥಹ ರೈತರಿಗೆ ಅನ್ವಯಿಸಲ್ಲ
    * 3 ವರ್ಷಗಳಲ್ಲಿ 1 ವರ್ಷ ಆದಾಯ ತೆರಿಗೆ ಪಾವತಿಸಿದ್ದಲ್ಲಿ ಅಂಥವರಿಗೆ ಅನ್ವಯವಾಗಲ್ಲ
    * ಕೃಷಿ ಉತ್ಪನ್ನ, ಚಿನ್ನಾಭರಣ, ವಾಹನ ಖರೀದಿ, ಪಶು ಭಾಗ್ಯ ಯೋಜನೆ, ಮೀನುಗಾರಿಕೆ ಉದ್ದೇಶಗಳಿಗೆ ನೀಡುವ ಸಾಲಗಳಿಗೆ ಅನ್ವಯ ಆಗಲ್ಲ
    * ಸಹಕಾರ ಸಂಘ, ಬ್ಯಾಂಕ್‍ಗಳಲ್ಲಿ ಒಂದಕ್ಕಿಂತ ಹೆಚ್ಚು ಸಾಲ ಪಡೆದಿವರಿಗೆ ಇದು ಅನ್ವಯಿಸಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews