Tag: dcc bank

  • ಪಠ್ಯಪುಸ್ತಕ ವಿಚಾರದಲ್ಲಿ ಗೊಂದಲವಿಲ್ಲ: ಮುನಿರತ್ನ

    ಪಠ್ಯಪುಸ್ತಕ ವಿಚಾರದಲ್ಲಿ ಗೊಂದಲವಿಲ್ಲ: ಮುನಿರತ್ನ

    ಕೋಲಾರ: ಪಠ್ಯಪುಸ್ತಕ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಈ ಬಗ್ಗೆ ಶಿಕ್ಷಣ ಸಚಿವರಿಂದ ಸಿಎಂ ವರದಿ ಕೇಳಿದ್ದಾರೆ. ವರದಿ ಬಂದ ಬಳಿಕ ಅವರೇ ಉತ್ತರ ನೀಡಲಿದ್ದಾರೆ ಎಂದು ಸಚಿವ ಮುನಿರತ್ನ ಹೇಳಿದರು.

    ಕೆಜಿಎಫ್ ಮಾಜಿ ಶಾಸಕ ವೈ.ಸಂಪಂಗಿ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪಠ್ಯಪುಸ್ತಕ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ವರದಿ ಕೇಳಿದ್ದಾರೆ. ವರದಿ ಬಂದ ಬಳಿಕ ನಾನೂ ಮಾತನಾಡುವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಪುಷ್ಪ ಸಿನಿಮಾ ಮಾದರಿಯಲ್ಲಿ ರಕ್ತಚಂದನ ಸಾಗಾಟ- ಶ್ವಾನದೊಂದಿಗೆ ರೋಚಕ ಆಪರೇಷನ್

    munirathna

    ಇದೆ ವೇಳೆ ಡಿಸಿಸಿ ಬ್ಯಾಂಕ್ ವಿಚಾರವಾಗಿ ಮಾತನಾಡಿದ ಅವರು, ಕೋಲಾರದ ಡಿಸಿಸಿ ಬ್ಯಾಂಕ್‌ನಲ್ಲಿ ಭಾರೀ ಭ್ರಷ್ಟಾಚಾರ ಆಗಿದೆ. ಡಿಸಿಸಿ ಬ್ಯಾಂಕ್ ಅಕ್ರಮಗಳ ತನಿಖೆಗೆ ಸಿಎಂ ಅವರಿಗೆ ಮನವಿ ಮಾಡಿದ್ದೇನೆ. ಕೆಲವರು ಅವರ ಸ್ವಂತ ಆಸ್ತಿಯಂತೆ ಬ್ಯಾಂಕ್ ಬಳಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕರು ಹಾಗೂ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಎಂಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ದಯವಿಟ್ಟು ನನ್ನ ಹೆಂಡತಿಯನ್ನು ನನಗೆ ಕೊಡಿ- ಕಣ್ಣೀರು ಹಾಕಿದ ವರ

    ಚುನಾವಣಾ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಶಾಂತಿ ಕದಡುತ್ತಿದ್ದಾರೆ. ಈ ಬಾರಿಯೂ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಬರಲಿದೆ. 5 ವರ್ಷ ಅಪೂರ್ಣವಾಗಿ ಅಧಿಕಾರ ಪೂರೈಸಿ ಸಿಎಂ ಅವರ ಸಮ್ಮುಖದಲ್ಲಿ ಚುನಾವಣೆಗೆ ತೆರಳುತ್ತೇವೆ. ಅವಧಿ ಪೂರ್ಣ ಚುನಾವಣೆ ಬಂದ್ರೂ ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದು ಹೇಳಿದರು.

  • DCC ಬ್ಯಾಂಕ್‌ನಲ್ಲಿ ಕಳ್ಳತನ- 4.37ಕೋಟಿ ನಗದು, 1.63ಕೋಟಿ ಮೌಲ್ಯದ ಚಿನ್ನಾಭರಣ ವಶ

    DCC ಬ್ಯಾಂಕ್‌ನಲ್ಲಿ ಕಳ್ಳತನ- 4.37ಕೋಟಿ ನಗದು, 1.63ಕೋಟಿ ಮೌಲ್ಯದ ಚಿನ್ನಾಭರಣ ವಶ

    ಬೆಳಗಾವಿ: ಮುರಗೋಡ ಡಿಸಿಸಿ ಬ್ಯಾಂಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿಧ ಪೊಲೀಸರು, ಅವರಿಂದ 4.37 ಕೋಟಿ ನಗದು, 1.63ಕೋಟಿ ಮೌಲ್ಯದ ಚಿನ್ನಾಭರಣವನ್ನು ವಶ ಪಡಿಸಿಕೊಂಡಿದ್ದಾರೆ.

    ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರನಗಟ್ಟಿ ಗ್ರಾಮದ ಬಸವರಾಜ ಹುಣಶಿಕಟ್ಟಿ (30), ಸವದತ್ತಿ ತಾಲೂಕಿನ ಯರಗಟ್ಟಿ ಗ್ರಾಮದ ಸಂತೋಷ ಕಂಬಾರ (31) ಹಾಗೂ ಜೀವಾಪೂರ ಗ್ರಾಮದ ಗಿರೀಶ್ ಬೆಳವಲ (26) ಬಂಧಿತರು. ಮುರಗೋಡ ಪೊಲೀಸರು ಬಂಧಿತ ಆರೋಪಿಗಳಿಂದ 4.37 ಕೋಟಿ ನಗದು ಹಣ, 1.63 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ.

    ಪ್ರಕರಣ ಹಿನ್ನೆಲೆ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುತಗೋಡ ಗ್ರಾಮದಲ್ಲಿ ಮಾ.6ರಂದು ಮುರಗೋಡ ಡಿಸಿಸಿ ಬ್ಯಾಂಕ್‍ನಲ್ಲಿ 6 ಕೋಟಿ ನಗದು ಹಣ, ಚಿನ್ನಾಭರಣ ಕಳ್ಳತನ ಆಗಿತ್ತು. ಈ ಕುರಿತು ಮುರಗೋಡ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಕೃಷ್ಣಪ್ಪ ಯಲಿಗಾರ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಸೋಲಿಗೆ ಗಾಂಧಿ ಕುಟುಂಬದವರಷ್ಟೇ ಹೊಣೆ ಅಲ್ಲ: ಮಲ್ಲಿಕಾರ್ಜುನ ಖರ್ಗೆ

    ಪ್ರಕರಣ ದಾಖಲಿಸಿಕೊಂಡ ಪೊಲೀಸರು ಒಂದೇ ವಾರದಲ್ಲಿ ಕಳ್ಳತನ ಪ್ರಕರಣ ಭೇದಿಸುವಲ್ಲಿ ಯಶಸ್ವಿ ಆಗಿದ್ದು, ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಆ ಪೈಕಿ ಡಿಸಿಸಿ ಬ್ಯಾಂಕ್‍ನಲ್ಲಿ ಕ್ಲರ್ಕ್ ಕಮ್ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಬಸವರಾಜ ಹುಣಸಿಕಟ್ಟಿ ಎಂಬಾತನೇ ನಕಲಿ ಕೀ ಬಳಸಿ ಆತನ ಇಬ್ಬರು ಸ್ನೇಹಿತರ ಜೊತೆಗೂಡಿ 4.37ಕೋಟಿ ಹಣ, 1.63ಕೋಟಿ ಮೌಲ್ಯದ ಚಿನ್ನಾಭರಣ ಕದ್ದುಕೊಂಡು ಪರಾರಿ ಆಗಿದ್ದರು.

    ಕದ್ದ ಹಣವನ್ನು ರಾಮದುರ್ಗ ತಾಲೂಕಿನ ತೋರನಗಟ್ಟಿ ಗ್ರಾಮದ ತನ್ನ ಕಬ್ಬಿನ ಗದ್ದೆಯಲ್ಲಿ ಆರು ಅಡಿ ತೆಗ್ಗು ತೆಗೆದು ಹೂತಿಟ್ಟಿದ್ದನು. ಬಳಿಕ ಯಾರಿಗೂ ಅನುಮಾನ ಬಾರದಂತೆ ನೀರು ಹಾಯಿಸಿದ್ದನು. ಇತ್ತ ಪ್ರಕರಣ ಬೆಳಕಿಗೆ ಬಂದ ನಂತರ ಬ್ಯಾಂಕ್ ಸಿಬ್ಬಂದಿಗೆ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಯುದ್ಧಪೀಡಿತ ಉಕ್ರೇನ್‍ನಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ 24ರ ಭಾರತೀಯ ಪೈಲಟ್

    ಈ ವೇಳೆ ಬಸವರಾಜ ಅವರು ತನ್ನ ಗೆಳೆಯರೊಂದಿಗೆ ಸೇರಿಕೊಂಡು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಕದ್ದು ಹೂತಿಟ್ಟಿದ್ದ ಸ್ಥಳದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಎಲ್ಲಾ ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • ಮುರಗೋಡ ಡಿಸಿಸಿ ಬ್ಯಾಂಕ್‍ಗೆ ಕನ್ನ –  6 ಕೋಟಿ ರೂ. ಮೌಲ್ಯದ ವಸ್ತು ಕಳ್ಳತನ

    ಮುರಗೋಡ ಡಿಸಿಸಿ ಬ್ಯಾಂಕ್‍ಗೆ ಕನ್ನ – 6 ಕೋಟಿ ರೂ. ಮೌಲ್ಯದ ವಸ್ತು ಕಳ್ಳತನ

    ಬೆಳಗಾವಿ: ಡಿಸಿಸಿ ಬ್ಯಾಂಕಿನ ಮುರಗೋಡ ಶಾಖೆಗೆ ಕನ್ನ ಹಾಕಿರುವ ಕಳ್ಳರು ನಗದು, ಚಿನ್ನ ಸೇರಿ 6 ಕೋಟಿ ಮೌಲ್ಯದ ವಸ್ತುಗಳನ್ನು ಎಗರಿಸಿ ಪರಾರಿಯಾಗಿದ್ದಾರೆ. ರಾತ್ರಿ ಬೀಗ ಮುರಿದು ಕಳ್ಳರು ಈ ಕೃತ್ಯ ಎಸಗಿದ್ದಾರೆ ಎಂದು ದೂರು ದಾಖಲಾಗಿದೆ.

    4.41 ಕೋಟಿ ರೂ. ನಗದು, 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿವೆ. ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಹಾಗೂ ಮುರಗೋಡ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಗಟ್ಸ್ ಇಲ್ಲ ಅನ್ನೋರು ಮೊದಲು ಉಕ್ರೇನ್ ಗಡಿವರೆಗೆ ತಲುಪಿ ಧಮ್ ತೋರಿಸಬೇಕಿತ್ತು: ಸುಜಯ್

    ರಾಜ್ಯದ ಜಿಲ್ಲಾ ಸಹಕಾರ ಬ್ಯಾಂಕ್‍ಗಳ ಪೈಕಿ ಬೆಳಗಾವಿ ಬಿಡಿಸಿಸಿ ಬ್ಯಾಂಕ್ ಅತಿ ಹೆಚ್ಚು ಲಾಭದಲ್ಲಿದೆ. ನೂರು ವರ್ಷ ಪೂರೈಸಿರುವ ಈ ಬ್ಯಾಂಕ್ ಜಿಲ್ಲೆಯಲ್ಲಿ 100 ಶಾಖೆಗಳಿವೆ. ರೈತರ ಪಾಲಿನ ಆಶಾಕಿರಣವಾಗಿರುವ ಈ ಬ್ಯಾಂಕ್ ಠೇವಣಿ ಸಂಗ್ರಹ ಹಾಗೂ ಚಿನ್ನದ ಮೇಲೂ ಸಾಲ ನೀಡುತ್ತಿದೆ. ಠೇವಣಿ ಇಟ್ಟಿದ್ದ 4 ಕೋಟಿ 41 ಲಕ್ಷ ರೂಪಾಯಿ ನಗದು, ಅಡವಿಟ್ಟಿದ್ದ 1.5 ಕೋಟಿ ಮೌಲ್ಯದ ಚಿನ್ನಾಭರಣಗಳೀಗ ಕಳ್ಳತನವಾಗಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ಮುಗಿಬಿದ್ದ ರಷ್ಯಾ – ಬಾಂಬ್, ಕ್ಷಿಪಣಿ ದಾಳಿಗೆ ಕೀವ್ ನಗರ ತತ್ತರ

    ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿರುವ ಬಿಡಿಸಿಸಿ ಬ್ಯಾಂಕ್‍ನಲ್ಲಿ ಆಗಿರುವ ಕಳ್ಳತನ ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಳ್ಳತನವಾದ ಬ್ಯಾಂಕ್‍ನಲ್ಲಿ ಯಾವುದೇ ಕೀ ಗಳನ್ನು ಒಡೆಯದೇ ಇರುವುದು ಪತ್ತೆಯಾಗಿದೆ. ಇತ್ತ ಬ್ಯಾಂಕ್‍ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದ ಡಿವೈಸ್‍ನ್ನು ಕಳ್ಳತನ ಮಾಡಲಾಗಿದೆ. ಇತ್ತ ಮುರಗೋಡ ಡಿಸಿಸಿ ಬ್ಯಾಂಕ್‍ನಲ್ಲಿ 50 ಲಕ್ಷ ಹಣ ಮಿತಿ ಇರಿಸಲಾಗಿತ್ತು. 50 ಲಕ್ಷಕ್ಕೆ ಮಾತ್ರ ಇನ್ಸುರೆನ್ಸ್ ಮಾಡಿಸಲಾಗಿತ್ತು. ಆದರೆ, ಬ್ಯಾಂಕ್‍ನಲ್ಲಿ ಇಷ್ಟು ಹಣವನ್ನು ಹೇಗೆ ಇಟ್ಟುಕೊಂಡಿದ್ದರು ಎಂಬ ಪ್ರಶ್ನೆ ಉದ್ಭವಾಗಿದೆ.

  • ಡಿಸಿಸಿ ಬ್ಯಾಂಕ್ ನಿಮ್ಮಪ್ಪನ ಮನೆ ಆಸ್ತಿನಾ? – ರಮೇಶ್ ಕುಮಾರ್ ವಿರುದ್ಧ ಸುಧಾಕರ್ ವಾಗ್ದಾಳಿ

    ಡಿಸಿಸಿ ಬ್ಯಾಂಕ್ ನಿಮ್ಮಪ್ಪನ ಮನೆ ಆಸ್ತಿನಾ? – ರಮೇಶ್ ಕುಮಾರ್ ವಿರುದ್ಧ ಸುಧಾಕರ್ ವಾಗ್ದಾಳಿ

    ಚಿಕ್ಕಬಳ್ಳಾಪುರ: ಡಿಸಿಸಿ ಬ್ಯಾಂಕ್ ನಿಮ್ಮ ಅಪ್ಪನ ಅಸ್ತಿನಾ..? ಹೀಗಂತ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 15 ವರ್ಷ ಆಗಿದೆ. ಈಗಲೂ ಕೆಲ ಸ್ವಾರ್ಥಿಗಳು ಡಿಸಿಸಿ ಬ್ಯಾಂಕ್ ಕೋಚಿಮುಲ್ ಕಪಿಮುಷ್ಠಿಯಲ್ಲಿ ಇಟ್ಕೊಂಡು ರಾಜಕಾರಣ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ. ಇದಕ್ಕೆ ನಮ್ಮ ಸರ್ಕಾರ ಇರೋವರೆಗೂ ಅವಕಾಶ ಕೊಡೋದಿಲ್ಲ ಅಂತ ನೇರವಾಗಿ ಹೇಳ್ತೇನೆ ಅಂತ ಸವಾಲು ಹಾಕಿದರು. ಇದನ್ನೂ ಓದಿ: ರಮೇಶ್‌ ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ

    ಇವತ್ತು ಜಿಲ್ಲಾ ಸಹಕಾರಿ ಬ್ಯಾಂಕಿಗೆ 2500 ಸಂಘಗಳನ್ನು ಮಾಡಿದ್ದೀವಿ. ಎಷ್ಟು ಕೋಟಿ ಸಾಲ ಕೊಟ್ಟಿದ್ದೀರಿ..? ತಾರತಮ್ಯ ಯಾಕೆ..? ಕೆಜಿಎಫ್ ಶ್ರೀನಿವಾಸಪುರಕ್ಕೆ ಮಾತ್ರನಾ..? ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆನಾ..? ನಿಮ್ಮ ಅಪ್ಪನಾ ಆಸ್ತಿನಾ ಡಿಸಿಸಿ ಬ್ಯಾಂಕ್..? ಇದು ಕೇಂದ್ರ ಸರ್ಕಾರದ ಹಣ. ಇದು ಗೋವಿಂದೇ ಗೌಡರದು ಅಲ್ಲ, ರಮೇಶ್ ಕುಮಾರ್ ದು ಅಲ್ಲ ಅಂತ ಹೇಳಬಯಸುತ್ತೇನೆ ಎಮದು ಕಿಡಿಕಾರಿದರು.

    ಅಲ್ಲದೆ ಸದ್ಯದಲ್ಲಿ ಎಲ್ಲಾ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ ಎಳೆಯುತ್ತೇವೆ ಎಂದರು.

  • ರಮೇಶ್‌ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ

    ರಮೇಶ್‌ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ

    – ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲು ಮಾಡುತ್ತೇನೆ
    – ನೀವು ಸಾಚಾ ಆಗಿದ್ರೆ ನ್ಯಾಯಾಲಯಕ್ಕೆ ಹೋಗಿದ್ದು ಯಾಕೆ?

    ಚಿಕ್ಕಬಳ್ಳಾಪುರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದ ಶಾಸಕ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಡಿಸಿಸಿ ಬ್ಯಾಂಕ್‍ನ ಬ್ರಹ್ಮಾಂಡ ಭ್ರಷ್ಟಾಚಾರವನ್ನ ಬಯಲಿಗೆ ಎಳೆಯುತ್ತೇನೆ ಎಂದು ಪರೋಕ್ಷವಾಗಿ ಜೈಲಿಗೆ ಹಾಕಿಸೋವರೆಗೂ ನಾನು ವಿರಮಿಸೋದಿಲ್ಲ ಎಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸವಾಲು ಹಾಕಿದ್ದಾರೆ.

    ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜರಬಂಡಹಳ್ಳಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ಸಾಲ ವಿತರಣಾ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್‍ನ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಮಹಾಭಾರತದಂತಹ ಪುಸ್ತಕ ಬರೆಯಬಹದು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಡಿಸಿಸಿ ಬ್ಯಾಂಕ್ ರಿಂಗ್ ಮಾಸ್ಟರ್ ಆಗಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದೇಗೌಡ ಕೇವಲ ಆಕ್ಟರ್ ಅಷ್ಟೇ. ಶ್ರೀನಿವಾಸಗೌಡರಿಗೂ ಡೈರೆಕ್ಷನ್ ಮಾಡೋಕೆ ಗೊತ್ತಿಲ್ಲ. ಡೈರೆಕ್ಟರ್ ಪ್ರೊಡ್ಯೂಸರ್ ಎಲ್ಲ ರಮೇಶ್ ಕುಮಾರ್ ಎಂದು ಆರೋಪಿಸಿದರು. ಇದನ್ನೂ ಓದಿ:  ಎರಡು ಕ್ಷೇತ್ರಗಳಲ್ಲಿ ಹೆಚ್ಚಿನ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ: ಸಿಎಂ

    ಯಾರೇ ಬಂದ್ರೂ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ(ಕೋಚಿಮುಲ್) ವಿಭಜನೆ ಮಾಡೇ ಮಾಡ್ತೇನೆ. ರಮೇಶ್ ಕುಮಾರ್, ಗೌರಿಬಿದನೂರು ಶಾಸಕ ಹಾಗೂ ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅಂತಹ 100 ಜನ ಬಂದರೂ ನಾನು ಬಿಡಲ್ಲ, ಮಾಡೇ ಮಾಡ್ತೇನೆ. ಇದು ನನ್ನ ಘೋಷಣೆ ಎಂದು ಪ್ರಕಟಿಸಿದರು.

    ಡಿಸಿಸಿ ಬ್ಯಾಂಕ್ ಮೂಲಕ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ರಮೇಶ್ ಕುಮಾರ್ ಯತ್ನಿಸುತ್ತಿದ್ದು, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ಎಂಎಲ್‍ಎಗಳು ಅವರ ಮಾತು ಕೇಳಬೇಕು ಅನ್ನೋದು ಅವರ ಆಸೆ. ಶ್ರೀನಿವಾಸಗೌಡರ ತಲೆ ಕೆಡಿಸಿ ದಳದಿಂದ ಕಾಂಗ್ರೆಸ್ ಗೆ ಕರೆತರುತ್ತಿದ್ದಾರೆ. ಈ ಮೊದಲು ಕಾಂಗ್ರೆಸ್ ನಲ್ಲಿದ್ದವರು ರಮೇಶ್ ಕುಮಾರ್ ಅವರಿಂದಲೇ ದಳಕ್ಕೆ ಹೋಗಿದ್ದವರು. ಈಗ ಮತ್ತೆ ಕಾಂಗ್ರೆಸ್ ಗೆ ಬಂದು ಮಕ್ಮಲ್ ಟೋಪಿ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

    ಡಿಸಿಸಿ ಬ್ಯಾಂಕ್ ನಿಂದ ಕೆಜಿಎಫ್, ಶ್ರೀನಿವಾಸಪುರದಲ್ಲಿ 400-500 ಕೋಟಿ ರೂ. ಸಾಲ ಕೊಡ್ತಾರೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆ ಅವರು ಏನು ಮಾಡಿದ್ರು? ಸಹಕಾರ ಕ್ಷೇತ್ರ ಸರ್ವರಿಗೂ ಸಮಪಾಲು ಸಮಬಾಳು. ಎಲ್ಲರಿಗೂ ಕೊಡಲು ಇರೋದು. ಆದರೆ ಡಿಸಿಸಿ ಬ್ಯಾಂಕನ್ನು ರಾಜಕೀಯ ಬೆರೆಸಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್ ನ್ನ ರಾಜಕೀಯ ವಾಗಿ ದುರ್ಬಳಕೆ ಮಾಡಿಕೊಳ್ಳೋದ್ರಲ್ಲಿ ಮೊದಲ ಬ್ಯಾಂಕ್ ಆಗಿದೆ ಎಂದು ಟೀಕಿಸಿದರು.

    ಪಾರದರ್ಶಕ ತನಿಖೆ ಆಗಬೇಕು

    ನಾನು ಡಿಸಿಸಿ ಬ್ಯಾಂಕ್ ನ ಅವ್ಯವಹಾರಗಳ ಬಗ್ಗೆ ಪಾರದರ್ಶಕ ತನಿಖೆ ಆಗಬೇಕು ಎಂದು ಅಗ್ರಹಿಸಿದ್ದೇನೆ. ಆದರೆ ನ್ಯಾಯಾಲಯಕ್ಕೆ ಹೋಗಿ ತನಿಖೆ ಬೇಡ ಅಂತ ತಡೆಯಾಜ್ಞೆ ತಂದಿದ್ದಾರೆ. ಸತ್ಯ ಹರಿಶ್ಚಂದ್ರ ಆಗಿದ್ರೆ ಯಾಕೆ ತಡೆಯಾಜ್ಞೆ ತಂದ್ರು? ಇದರಲ್ಲಿ ಗೊತ್ತಾಗುದಿಲ್ವೇ ಕಳ್ಳ ಯಾರು ಅಂತ? ನೀವು ಸಾಚಾ ಆಗಿದ್ರೆ ನ್ಯಾಯಾಲಯಕ್ಕೆ ಯಾಕೆ ಹೋಗ್ತಿದ್ರೀ ಎಂದು ಪ್ರಶ್ನೆಗಳನ್ನು ಕೇಳಿದರು. ಇದನ್ನೂ ಓದಿ: ಉತ್ತರಾಖಂಡ್ ಪ್ರವಾಹಪೀಡಿತ ಭಾಗದಲ್ಲಿ 10 ಕನ್ನಡಿಗರಿಗೆ ಸಂಕಷ್ಟ

    ಸತ್ಯ ಆಚೆ ಬಂದರೆ ಜೈಲಿಗೆ ಹೋಗ್ತೀರಿ ಎಂದು ನಿಮಗೆ ಗೊತ್ತಿದೆ. ಅದಕ್ಕೆ ತಡೆಯಾಜ್ಞೆ ತಂದಿದ್ದೀರಿ. ಆದರೆ ನಾನು ಬಿಡೋದಿಲ್ಲ ತಿಳ್ಳೊಳ್ಳಿ, ಸುಧಾಕರ್ ಬಿಡೋದಿಲ್ಲ. ನಿಮ್ಮ ಅನಿಷ್ಟ ಭ್ರಷ್ಟಾಚಾರದ ಕೂಪವನ್ನು ಹೊರೆಗೆ ಎಳೆಯೋವರೆಗೂ ನಾನು ಬಿಡೋದಿಲ್ಲ. ನಾನು ವಿರಮಿಸೋದಿಲ್ಲ ಎಂದು ಸವಾಲು ಹಾಕಿದ್ದಾರೆ.

    ರಮೇಶ್ ಕುಮಾರ್ ಭ್ರಷ್ಟಾಚಾರಕ್ಕೆ ಸಹಕಾರ ಇಲಾಖೆಯ ಅಧಿಕಾರಿಗಳು ಸಹ ಸಾಥ್ ನೀಡಿದ್ದು, ತನಿಖೆಯಾಗಲಿ ಎಂದು ನಾನು ಸಿಎಂ ಬೊಮ್ಮಾಯಿ ಹಾಗೂ ಸಹಕಾರ ಇಲಾಖೆ ಸಚಿವ ಎಸ್.ಟಿ.ಸೋಮಶೇಖರ್ ಬಳಿ ಒತ್ತಾಯಿಸಿದ್ದೇನೆ ಎಂದರು.

  • ಕೊರೊನಾದಿಂದ ಮೃತ 10,187 ರೈತರ 79.47 ಕೋಟಿ ರೂ. ಸಾಲಮನ್ನಾಕ್ಕೆ ಚಿಂತನೆ: ಎಸ್‍ಟಿಎಸ್

    ಕೊರೊನಾದಿಂದ ಮೃತ 10,187 ರೈತರ 79.47 ಕೋಟಿ ರೂ. ಸಾಲಮನ್ನಾಕ್ಕೆ ಚಿಂತನೆ: ಎಸ್‍ಟಿಎಸ್

    ಬೆಂಗಳೂರು: ಅಪೆಕ್ಸ್, ಡಿಸಿಸಿ ಬ್ಯಾಂಕ್ ಹಾಗೂ ಪ್ಯಾಕ್ಸ್ ಗಳಲ್ಲಿ ಸಾಲ ಪಡೆದು, ಕೊರೊನಾದಿಂದ ಮೃತಪಟ್ಟಿರುವ 10187 ರೈತರ 79.47 ಕೋಟಿ ರೂಪಾಯಿ ಸಾಲಮನ್ನಾ ಮಾಡಲು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಚಿಂತನೆ ನಡೆಸಿದ್ದು, ಇನ್ನು ಮೂರ್ನಾಲ್ಕು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸೋಮಶೇಖರ್ ಅವರು, ಇನ್ನು ಮೂರರಿಂದ ನಾಲ್ಕು ದಿನದಲ್ಲಿ ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿ ಸಭೆ ಸೇರಿ ಸಾಲಮನ್ನಾದ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಿದ್ದೇವೆ. ಕೋವಿಡ್ ಸಂಕಷ್ಟ ಕಾಲದಲ್ಲಿ ರೈತರ ಸಹಾಯಕ್ಕೆ ಬರಲು ಮುಖ್ಯಮಂತ್ರಿಗಳು ಹಾಗೂ ನಮ್ಮ ಸರ್ಕಾರವು ಸದಾ ಬದ್ಧವಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಇನ್ನು ಮುಂದೂ ಸಹ ಸಾಲ ಸೌಲಭ್ಯಗಳು ಸುಲಭವಾಗಿ ಸಿಗುವಂತೆ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಯಡಿಯೂರಪ್ಪ ಅವ್ರದು ರಾಕ್ಷಸ ಸರ್ಕಾರ: ಸಿದ್ದರಾಮಯ್ಯ

    ಕಳೆದ ವರ್ಷ ಸಾಲ ಪಡೆದವರ ಮಾಹಿತಿ
    ಕಳೆದ ವರ್ಷ ಅಂದರೆ, 2020-21ನೇ ಸಾಲಿನಲ್ಲಿ 24.50 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಅಲ್ಪಾವಧಿ, ಮಧ್ಯಮಾವಧಿ ಬೆಳೆ ಸಾಲ ನೀಡುವ ಗುರಿಯನ್ನು ಹೊಂದಲಾಗಿತ್ತು. ಈ ನಿಟ್ಟಿನಲ್ಲಿ ಗುರಿ ಮೀರಿ ಸಾಧನೆ ಮಾಡಿದ್ದು, 25.67 ಲಕ್ಷ ರೈತರಿಗೆ 17,108 ಕೋಟಿ ರೂಪಾಯಿ ಸಾಲ ನೀಡುವ ಮೂಲಕ ಶೇ.114 ಗುರಿ ಸಾಧನೆಯನ್ನು ಮಾಡಲಾಗಿತ್ತು. ಈಗ 25.67 ಲಕ್ಷ ರೈತರಲ್ಲಿ ಕೋವಿಡ್ ನಿಂದ ಮೃತಪಟ್ಟಿರುವ 10,187 ರೈತರ 79.47 ಕೋಟಿ ರೂಪಾಯಿ ಸಾಲಮನ್ನಾ ಮಾಡುವ ಸಂಬಂಧ ಮುಖ್ಯಮಂತ್ರಿಗಳು ಚಿಂತನೆಯನ್ನು ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.

    ಜಿಲ್ಲೆಯ ಡಿಸಿಸಿ ಬ್ಯಾಂಕ್‍ಗಳಲ್ಲಿ ರೈತರು ಮತ್ತು ಸಾಲ ಮನ್ನಾ ವಿವರ:

    1. ಬಾಗಲಕೋಟೆ – 672 ರೈತರ 54,226,261 ರೂಪಾಯಿ ಸಾಲ
    2. ಬೆಳಗಾವಿ – 3,334 ರೈತರ 23,84,51,700 ರೂಪಾಯಿ ಸಾಲ
    3. ಬಳ್ಳಾರಿ – 357 ರೈತರ 36,598,411 ರೂಪಾಯಿ ಸಾಲ
    4. ಬೆಂಗಳೂರು – 381 ರೈತರ 23,672,500 ರೂಪಾಯಿ ಸಾಲ
    5. ಬೀದರ್ – 824 ರೈತರ 5,47,68,271 ರೂಪಾಯಿ ಸಾಲ
    6. ಚಿಕ್ಕಮಗಳೂರು – 113 ರೈತರ 20,386,020 ರೂಪಾಯಿ ಸಾಲ
    7. ಚಿತ್ರದುರ್ಗ – 156 ರೈತರ 16,371,000 ರುಪಾಯಿ ಸಾಲ

    8. ದಾವಣಗೆರೆ – 402 ರೈತರ 26,622,071 ರುಪಾಯಿ ಸಾಲ
    9. ಹಾಸನ – 454 ರೈತರ 28,642,000 ರುಪಾಯಿ ಸಾಲ
    10. ಕಲಬುರಗಿ – 224 ರೈತರ 87,387,76.43 ರೂಪಾಯಿ ಸಾಲ
    11. ಕೆನರಾ ಶಿರಸಿ (ಉತ್ತರ ಕನ್ನಡ)- 186 ರೈತರ 17,098,364 ರೂಪಾಯಿ ಸಾಲ
    12. ಕೆಸಿಸಿ ಬ್ಯಾಂಕ್ ಧಾರವಾಡ – 376 ರೈತರ 20,710,455 ರೂಪಾಯಿ ಸಾಲ
    13. ಕೊಡಗು – 113 ರೈತರ 18,299,040 ರೂಪಾಯಿ ಸಾಲ
    14. ಕೋಲಾರ – 147 ರೈತರ 25,409,639 ರೂಪಾಯಿ ಸಾಲ

    15. ಮಂಡ್ಯ – 410 ರೈತರ 27,328,268 ರೂಪಾಯಿ ಸಾಲ
    16. ಮೈಸೂರು – 281 ರೈತರ 31,399,000 ರೂಪಾಯಿ ಸಾಲ
    17. ರಾಯಚೂರು- 237 ರೈತರ 19,203,700 ರೂಪಾಯಿ ಸಾಲ
    18. ಶಿವಮೊಗ್ಗ – 307 ರೈತರ 32,701,000 ರೂಪಾಯಿ ಸಾಲ
    19. ದಕ್ಷಿಣ ಕನ್ನಡ – 152 ರೈತರ 24,063,450 ರೂಪಾಯಿ ಸಾಲ
    20. ತುಮಕೂರು – 307 ರೈತರ 18,722,000 ರೂಪಾಯಿ ಸಾಲ
    21. ವಿಜಯಪುರ – 754 ರೈತರ 51,340,000 ರೂಪಾಯಿ ಸಾಲ

    ಒಟ್ಟಾರೆಯಾಗಿ 10187 ರೈತರ 794751926.43 ರೂಪಾಯಿ ಸಾಲ ಮನ್ನಾ ಪ್ರಕ್ರಿಯೆ ಪಟ್ಟಿ ಸಿದ್ಧವಾಗಿದೆ.

  • ಕೋವಿಡ್ ನಿಯಮ ಉಲ್ಲಂಘಿಸಿ ತರಬೇತಿ- ಬ್ಯಾಂಕ್ ವಿರುದ್ಧ ಎಫ್‍ಐಆರ್

    ಕೋವಿಡ್ ನಿಯಮ ಉಲ್ಲಂಘಿಸಿ ತರಬೇತಿ- ಬ್ಯಾಂಕ್ ವಿರುದ್ಧ ಎಫ್‍ಐಆರ್

    ಮಡಿಕೇರಿ: ಕೋವಿಡ್ ನಿಯಮ ಮೀರಿ ತರಬೇತಿ ಕಾರ್ಯಾಗಾರ ನಡೆಸಿದ ಡಿಸಿಸಿ ಬ್ಯಾಂಕ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಮಡಿಕೇರಿ ನಗರದ ಕಾಲೇಜು ರಸ್ತೆಯಲ್ಲಿ ಇರುವ ಡಿಸಿಸಿ ಬ್ಯಾಂಕ್ ಸಿಬ್ಬಂದಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದೆ. ನೂತನವಾಗಿ ಅಯ್ಕೆಯಾದ ಕ್ಲರಿಕಕ್ ಪೋಸ್ಟ್ ಗಳ ಅಭ್ಯರ್ಥಿಗಳಿಗೆ ಡಿಸಿಸಿ ಬ್ಯಾಂಕ್ ಒಳಗಿನ ಸಂಭಾಗಣದಲ್ಲಿ 25 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ನಗರಸಭೆಯ ಅಯುಕ್ತ ರಾಮದಾಸ್ ಹಾಗೂ ನಗರಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಂದರ್ಭ ಕೋವಿಡ್ ನಿಯಮ ಉಲ್ಲಂಘನೆ ಮಾಡಿ ತರಬೇತಿ ನೀಡುತ್ತಿರುವುದು ಬೆಳಕಿಗೆ ಬಂದಿದೆ.

    ಡಿಸಿಸಿ ಬ್ಯಾಂಕ್ ಅಡಳಿತ ಮಂಡಳಿ ವಿರುದ್ಧ ನಗರಸಭೆ ಅಧಿಕಾರಿಗಳು ಎಫ್‍ಐಆರ್ ದಾಖಲು ಮಾಡಿದ್ದಾರೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇಂದು ಕೂಡ ಜಿಲ್ಲೆಯಲ್ಲಿ 516 ಪ್ರಕರಣಗಳು ದಾಖಲು ಅಗಿದೆ.

  • ಬಿಜೆಪಿ-ಜೆಡಿಎಸ್ ಮೈತ್ರಿಗೆ ಸಹಕರಿಸಿದ ಸಿಎಂ ಬಿಎಸ್‍ವೈಗೆ ಧನ್ಯವಾದ: ನಿಖಿಲ್ ಕುಮಾರಸ್ವಾಮಿ

    ಬಿಜೆಪಿ-ಜೆಡಿಎಸ್ ಮೈತ್ರಿಗೆ ಸಹಕರಿಸಿದ ಸಿಎಂ ಬಿಎಸ್‍ವೈಗೆ ಧನ್ಯವಾದ: ನಿಖಿಲ್ ಕುಮಾರಸ್ವಾಮಿ

    – ಸುಮಲತಾ, ಪ್ರತಾಪ್ ಸಿಂಹ ನಡುವಿನ ಕೆಸರೆರೆಚಾಟಕ್ಕೆ ನಾನು ಮಧ್ಯಬರಲ್ಲ

    ಮಂಡ್ಯ: ಜಿಲ್ಲೆಯ ಅಭಿವೃದ್ಧಿಗಾಗಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಸಹಕರಿಸಿದ ಸಿಎಂ ಬಿಎಸ್‍ವೈಗೆ ಧನ್ಯವಾದ ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿಯವರು ಹೇಳಿದ್ದಾರೆ.

    ತೀವ್ರ ಕುತೂಹಲ ಮೂಡಿಸಿದ್ದ ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ತೆರೆ ಬಿದ್ದಿದೆ. ಆಡಳಿತರೂಢ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿಯೊಂದಿಗೆ ಅಧಿಕಾರದ ಗದ್ದುಗೆ ಏರುವಲ್ಲಿ ಯಶಸ್ವಿಯಾಗಿವೆ. ಅದರಂತೆ ಬಿಜೆಪಿಯ ಸಿ.ಪಿ.ಅಶೋಕ್ ಅಧ್ಯಕ್ಷರಾಗಿ ಆಯ್ಕೆಯಾದರೆ, ಜೆಡಿಎಸ್ ಬೆಂಬಲಿತ ಅಶೋಕ್ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರ ತಳ್ಳಿವೆ.

    ಈ ವಿಚಾರವಾಗಿ ಇಂದು ಮಾಧ್ಯಮಗಳ ಜೊತೆ ಮಾತನಾಡಿರುವ ನಿಖಿಲ್, ಮೈತ್ರಿಕೂಟದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆ. ಶಾಸಕ ಸಿಎಸ್ ಪುಟ್ಟರಾಜು ನೇತೃತ್ವದಲ್ಲಿ ಈ ಗೆಲುವು ಸಿಕ್ಕಿದೆ. ಜಿಲ್ಲೆಯ ಅಭಿವೃದ್ಧಿಗಾಗಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಸಹಕರಿಸಿದ ಸಿಎಂ ಬಿಎಸ್‍ವೈಗೆ ಧನ್ಯವಾದ. ಮಂಡ್ಯದ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಸಂಸದರಾದ ಸುಮಲತಾ ಮತ್ತು ಪ್ರತಾಪ್ ಸಿಂಹ ನಡುವಿನ ಕೆಸರೆರೆಚಾಟದಲ್ಲಿ ನಾನು ಮಧ್ಯಬರಲ್ಲ ಎಂದು ಹೇಳಿದ್ದಾರೆ. ಮಂಡ್ಯದ ರಾಜಕೀಯದಲ್ಲಿ ಸದ್ಯ ಸಕ್ರಿಯವಾಗಿ ಇರುವ ನಿಖಿಲ್, ಇಂದು ಮಂಡ್ಯಕ್ಕೆ ಬಂದು ನೂತನ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದವರಿಗೆ ಅಭಿನಂದಿಸಿದರು. ನಂತರ ಜಿಲ್ಲಾ ಕಾಂಗ್ರೆಸ್ ಖಜಾಂಚಿ ಅಮರಾವತಿ ಚಂದ್ರಶೇಖರ್ ಅವರ ನಿವಾಸಕ್ಕೆ ಭೇಟಿ ಕೊಟ್ಟರು.

  • ಮಂಡ್ಯ ಡಿಸಿಸಿ ಬ್ಯಾಂಕಲ್ಲಿ ತೆನೆ-ಕಮಲ ದೋಸ್ತಿ ಆಗುತ್ತಾ?

    ಮಂಡ್ಯ ಡಿಸಿಸಿ ಬ್ಯಾಂಕಲ್ಲಿ ತೆನೆ-ಕಮಲ ದೋಸ್ತಿ ಆಗುತ್ತಾ?

    – ‘ಕೈ’ಗೆ ತಿರುಗೇಟು ನೀಡಲು ‘ದಳ’ ಪ್ಲಾನ್

    ಮಂಡ್ಯ: ಇತ್ತೀಚಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಮಂಗಳವಾರ ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ಚುನಾವಣೆ ನಡೆಯಲಿದೆ. ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಕಾಂಗ್ರೆಸ್ ವಿರುದ್ಧ ಕಳೆದ ಲೋಕಸಭೆ ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಲು ಜೆಡಿಎಸ್ ಮುಂದಾಗಿದೆ.

    ಒಟ್ಟು 12 ಸದಸ್ಯ ಬಲದ ಡಿಸಿಸಿ ಬ್ಯಾಂಕ್‍ನಲ್ಲಿ 8 ಮಂದಿ ಕಾಂಗ್ರೆಸ್ ಸದಸ್ಯರು, ನಾಲ್ವರು ಜೆಡಿಎಸ್ ಸದಸ್ಯರಿದ್ದಾರೆ. ಆದರೆ ಬಿಜೆಪಿ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯಲು ಜೆಡಿಎಸ್ ರಣತಂತ್ರ ರೂಪಿಸಿದೆ ಎನ್ನಲಾಗಿದೆ. ಸರ್ಕಾರದಿಂದ ನಾಮನಿರ್ದೇಶನಗೊಂಡ ಓರ್ವ ಸದಸ್ಯ ಮತ್ತು ಇಬ್ಬರು ಅಧಿಕಾರಿಗಳು ಮತ ಚಲಾಯಿಸಲು ಅವಕಾಶ ಇದೆ. ಈ ಮೂರು ಮತ ಮತ್ತು ಕಾಂಗ್ರೆಸ್‍ನ ಒಬ್ಬರ ಮತ ಸಿಕ್ಕಲ್ಲಿ ಜೆಡಿಎಸ್ ಗೆಲ್ಲಲು ಅವಕಾಶ ಇದೆ. ಹೀಗಾಗಿಯೇ ಮಾಜಿ ಸಿಎಂ ಕುಮಾರಸ್ವಾಮಿ, ಸಿಎಂ ಬಿಎಸ್‍ವೈ ಭೇಟಿ ಮಾಡಿ ಬೆಂಬಲ ಕೇಳಿದ್ದರು ಎಂದು ಹೇಳಲಾಗುತ್ತಿದೆ.

    ಬಿಜೆಪಿ ಬೆಂಬಲ ಸಿಗೋ ಸಾಧ್ಯತೆ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ ಓರ್ವ ಸದಸ್ಯನನ್ನು ಸೆಳೆದು ರೆಸಾರ್ಟ್ ಗೆ ಜೆಡಿಎಸ್ ಶಿಫ್ಟ್ ಮಾಡಿದೆ. ಕುಮಾರಸ್ವಾಮಿ ಲೆಕ್ಕಾಚಾರ ನಿಜವಾದಲ್ಲಿ ಜೆಡಿಎಸ್ ಸುಲಭವಾಗಿ ಮಂಡ್ಯ ಡಿಸಿಸಿ ಗದ್ದುಗೆ ಏರಲಿದೆ. ಆದರೆ ಯಾವುದೇ ಕಾರಣಕ್ಕೂ ಜೆಡಿಎಸ್‍ಗೆ ಬೆಂಬಲ ನೀಡಬಾರದುಇ ಅಂತಾ ಸಚಿವ ನಾರಾಯಣಗೌಡ ಮತ್ತು ಸಂಸದೆ ಸುಮಲತಾ ಸಿಎಂ ಭೇಟಿ ಮಾಡಿ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

    ಸಿಎಂ ಭೇಟಿ ಬಳಿಕ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಬಿಜೆಪಿ ಜೆಡಿಎಸ್ ಮೈತ್ರಿ ಆಗುತ್ತೋ ಬಿಡುತ್ತೋ? ಅದ್ರ ಬಗ್ಗೆ ನಾನು ಮಾತನಾಡಲ್ಲ ಅಂದ್ರು. ಇದರ ಹಿಂದೆ ಏನೇನು ನಡೀತಿದೆ ಅನ್ನೋದು ಗೊತ್ತಿದೆ. ಮುಖ್ಯಮಂತ್ರಿಗಳು ಎಲ್ಲವನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿ ಎಂದು ತಿಳಿಸಿದರು.

  • ಹೆಚ್‍ಡಿಡಿ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ

    ಹೆಚ್‍ಡಿಡಿ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ

    ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು, ಎಚ್‍ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಹಿರಿಯ ಪುತ್ರ ಸೂರಜ್ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ.

    ಎಚ್.ಡಿ.ರೇವಣ್ಣ ಹಿರಿಯ ಪುತ್ರ ಡಾ.ಸೂರಜ್ ರೇವಣ್ಣ ಹಾಸನದ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಇದೀಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಡಾ.ಸೂರಜ್ ರೇವಣ್ಣ ಹೊಳೆನರಸೀಪುರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಅವರ ವಿರುದ್ಧ ಯಾರೊಬ್ಬರೂ ನಾಮಪತ್ರ ಸಲ್ಲಿಸದಿದ್ದರಿಂದ ಸೂರಜ್ ರೇವಣ್ಣ ಹೆಚ್‍ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

    ಡಿಸಿಸಿ ಬ್ಯಾಂಕ್ ನಿರ್ದೇಶಕರಾಗುವ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ನೇರವಾಗಿ ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಟ್ಟಿದೆ. ಪ್ರಜ್ವಲ್ ರೇವಣ್ಣ ಬಳಿಕ ಸೂರಜ್ ರೇವಣ್ಣ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.