Tag: DC

  • ನದಿ ತೀರದ ಜನ ಧೈರ್ಯವಾಗಿರಬೇಕು, ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಿದ್ಧ: ಡಾ.ರಾಗಾಪ್ರಿಯಾ

    ನದಿ ತೀರದ ಜನ ಧೈರ್ಯವಾಗಿರಬೇಕು, ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಿದ್ಧ: ಡಾ.ರಾಗಾಪ್ರಿಯಾ

    – ಯಾದಗಿರಿ ಕೃಷ್ಣಾ ನದಿ ತೀರದ ಜನರಿಗೆ ಡಿಸಿ ಅಭಯ

    ಯಾದಗಿರಿ: ಜನರು ಯಾವುದೇ ಕಾರಣಕ್ಕೂ ನದಿ ತೀರಕ್ಕೆ ತೆರಳಬಾರದು, ನದಿ ತೀರದ ಜನ ಧೈರ್ಯವಾಗಿರಬೇಕು, ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಾಪ್ರಿಯಾ ಜನರಿಗೆ ಧೈರ್ಯ ತುಂಬಿದ್ದಾರೆ.

    ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹೊರ ಹರಿವು ಹೆಚ್ಚಳ ಹಿನ್ನೆಲೆಯಲ್ಲಿ ವೀಡಿಯೋ ಸಂವಾದ ನಡೆಸಿ ಮಾತನಾಡಿದ ರಾಗಾಪ್ರಿಯಾ, ಜಲಾಶಯದಿಂದ ಕೃಷ್ಣಾ ನದಿಗೆ ಇಂದು ಸಂಜೆ 3 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಪ್ರವಾಹ ಹೆಚ್ಚಾದರೆ ನದಿ ತೀರದ 16 ಗ್ರಾಮಗಳ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಕ್ಕೆ ನಿರ್ಧಾರ ಮಾಡಲಾಗಿದೆ. ಒಟ್ಟು 13 ಕಾಳಜಿ ಕೇಂದ್ರ ಆರಂಭ ಮಾಡಲಾಗುತ್ತದೆ, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಡಿಸಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಯಾದಗಿರಿಯಲ್ಲಿ ಭಾರೀ ಮಳೆ- ಕೊಚ್ಚಿಹೋದ ಮಲಕಪ್ಪನಳ್ಳಿ ರಸ್ತೆ

    ಕೃಷ್ಣಾ ನದಿಪಾತ್ರದಲ್ಲಿರುವ 16 ಗ್ರಾಮದಲ್ಲಿ ಪ್ರವಾಹ ಆತಂಕ ಹಿನ್ನೆಲೆಯಲ್ಲಿ ನದಿ ದಡಕ್ಕೆ ಯಾರು ಹೋಗದಂತೆ ಮತ್ತು ಪಂಪ್ ಸೆಟ್, ಪೈಪ್ ಹಾಗೂ ಯಾವುದೇ ಕೃಷಿ ಉಪಕರಣಗಳಿಗಾಗಿ ನದಿ ದಡಕ್ಕೆ ಹೋಗಬಾರದೆಂದು ಡಂಗೂರ ಸಾರುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಜನ ಎಚ್ಚರಿಕೆಯಿಂದ ಇರಬೇಕು ಜಿಲ್ಲಾಡಳಿತ ಸದಾ ನಿಮ್ಮೊಂದಿಗೆ ಇದೆ ಎಂದು ಅಭಯ ನೀಡಿದರು.

  • ಬೆಳಗಾವಿಯಲ್ಲಿ ಭಾರೀ ಮಳೆ- ಮನೆಗಳ ಕುಸಿತ

    ಬೆಳಗಾವಿಯಲ್ಲಿ ಭಾರೀ ಮಳೆ- ಮನೆಗಳ ಕುಸಿತ

    ಬೆಳಗಾವಿ: ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಖಡೇ ಬಜಾರ್‍ನಲ್ಲಿ ಮನೆ ಕುಸಿದು ಬಿದ್ದಿದೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಬೆಳಗಾವಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಬಿಟ್ಟು ಬಿಡದೇ ಮಳೆ ಸುರಿಯುತ್ತಿರುವುದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬೆಳಗಾವಿ ಕಂಗ್ರಾಳ ಗಲ್ಲಿಯಲ್ಲಿ ಒಂದು ಮನೆ, ನಂದಗಡದಲ್ಲಿ ಎರಡು ಮನೆಗಳು ಕುಸಿದಿವೆ. ಸತತ ಮಳೆಯಿಂದ ಶಿಥಿಲಗೊಂಡ ಕಟ್ಟಡಗಳಿಗೆ ಅಪಾಯ ಒದಗುವ ಶಂಕೆ ವ್ಯಕ್ತವಾಗುತ್ತಿದ್ದು, ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

    ಸಧ್ಯಕ್ಕಿಲ್ಲ ಪ್ರವಾಹ ಭೀತಿ
    ಕೊಯ್ನಾ ಡ್ಯಾಂ ಸಾಮಥ್ರ್ಯ 100 ಟಿಎಂಸಿ ಇದ್ದು, ಸದ್ಯ ಡ್ಯಾಂನಲ್ಲಿ 60 ಟಿಎಂಸಿ ನೀರು ತುಂಬಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯಲ್ಲಿ ಸಧ್ಯಕ್ಕೆ ಪ್ರವಾಹ ಭೀತಿ ಇಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ತಿಳಿಸಿದರು. ಗುರುವಾರ ಎಸ್‍ಎಸ್‍ಎಲ್‍ಸಿ 2ನೇ ಪರೀಕ್ಷೆ ಹಿನ್ನೆಲೆ ಬೆಳಗಾವಿಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಹಿರೇಮಠ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ನಿನ್ನೆಯಿಂದ ಬೆಳಗಾವಿ ಜಿಲ್ಲೆಯಾಧ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದೆ. ಚಿಕ್ಕೋಡಿ ಡಿಡಿಪಿಐ ಮನ್ನಿಕೇರಿ ಅವರ ಜೊತೆಗೆ ಮಾತನಾಡಿದ್ದೇನೆ. ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ, ಉತ್ತರಪತ್ರಿಕೆ ತಲುಪಿದೆ. ಹೀಗಾಗಿ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿಸಿದರು.

    ಸರ್ದಾರ್ ಹೈಸ್ಕೂಲ್‍ನಲ್ಲಿ ಬೇರೆ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಕೊಯ್ನಾದಲ್ಲಿ ನಿನ್ನೆ ಜಾಸ್ತಿ ಮಳೆ ಆಗಿರುವುದರಿಂದ ಸುಮಾರು 6.5 ಟಿಎಂಸಿ ನೀರು ಕೊಯ್ನಾ ಡ್ಯಾಂಗೆ ಬಂದಿದೆ. ಸದ್ಯ 60 ಟಿಎಂಸಿ ನೀರು ಇರುವುದರಿಂದ ನೀರು ಬಿಡುಗಡೆ ಮಾಡಿಲ್ಲ. ಕೊಯ್ನಾ ಡ್ಯಾಂ ಸಾಮಥ್ರ್ಯ 100 ಟಿಎಂಸಿ ಇದೆ. ಹೀಗಾಗಿ ಸದ್ಯಕ್ಕೆ ನೀರು ಬಿಡುಗಡೆ ಮಾಡುವುದಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಭೀತಿ ಇಲ್ಲ. ಆದರೂ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.

  • ಚಿಕ್ಕಬಳ್ಳಾಪುರದಲ್ಲಿ ಕೆಆರ್‌ಎಸ್‌ ಬೃಂದಾವನ ಮಾದರಿಯ ಎಕೋ ಥೀಮ್ ಪಾರ್ಕ್

    ಚಿಕ್ಕಬಳ್ಳಾಪುರದಲ್ಲಿ ಕೆಆರ್‌ಎಸ್‌ ಬೃಂದಾವನ ಮಾದರಿಯ ಎಕೋ ಥೀಮ್ ಪಾರ್ಕ್

    ಚಿಕ್ಕಬಳ್ಳಾಪುರ: ನಗರಕ್ಕೆ ಹೊಂದಿಕೊಂಡಿರುವ ಕಂದವಾರ ಕೆರೆ ಬಳಿ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 8.10 ಕೋಟಿ ರೂ. ವೆಚ್ಚದಲ್ಲಿ ಕೆಆರ್‍ಎಸ್ ನ ಬೃಂದಾವನ ಮಾದರಿಯಲ್ಲಿಯೇ ಪರಿಸರ ಸ್ನೇಹಿ ಎಕೋ ಥೀಮ್ ಪಾರ್ಕ್ ನ್ನು ಸದ್ಯದಲ್ಲೇ ನಿರ್ಮಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿ ಬಳಿಯ ಗೋಪಾಲಕೃಷ್ಣ ಅಮಾನಿಕೆರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ಎಚ್‍ಎನ್ ವ್ಯಾಲಿ ನೀರಿನಿಂದ ಗೋಪಾಲಕೃಷ್ಣ ಅಮಾನಿಕರೆ ಭಾಗಶಹಃ ತುಂಬಿದ್ದು, ಜಿಲ್ಲಾಡಳಿತ ಭವನಕ್ಕೆ ಬಹಳ ಹತ್ತಿರವಿರುವುದರಿಂದ ಈ ಕೆರೆ ಅತಿ ಸುಂದರವಾಗಿ ಕಾಣುತ್ತದೆ. ಹೀಗಾಗಿ ಇದನ್ನು ಪ್ರವಾಸೋದ್ಯಮ ಕೇಂದ್ರವಾಗಿ ಪರಿವರ್ತಿಸಿದರೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ ನಗರದ ಸೌಂದರ್ಯ ಹೆಚ್ಚಲು ಕಾರಣವಾಗಲಿದೆ ಈ ನಿಟ್ಟಿನಲ್ಲಿ ಕೆರೆಯ ಅಂದ ಹೆಚ್ಚಿಸಲು ಏನೇನು ಮಾಡಬಹುದು ಎಂಬುದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ಅಶಯದಂತೆ ಜಿಲ್ಲೇಯಲ್ಲಿ ಪ್ರಾವಾಸೊದ್ಯಮ ಕ್ಷೇತ್ರವನ್ನು ಅಭಿವೃದ್ಧಿಗೋಳಿಸಲು ಸರ್ಕಾರ ಒಲವು ತೊರಿದ್ದು, ಕಂದವಾರ ಕೆರೆ ಬಳಿ ಪರಿಸರ ಸ್ನೇಹಿ ಎಕೋ ಥೀಮ್ ಪಾರ್ಕ್ ನ್ನು ನಿರ್ಮಿಸಲು ಅನುಮತಿ ನೀಡಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈಗಾಗಲೇ ಆರ್ಥಿಕ ಬಿಡ್ ನ್ನ ಸಹ ತೆರೆಯಲಾಗಿದೆ. ಪರಿಸರ ಸ್ನೇಹಿ ಈ ಉದ್ಯಾನವನ ಪ್ರವಾಸಿಗರ ಮನಸೆಳೆಯುವ ಹಲವು ವೈಶಿಷ್ಟ್ಯಗಳನ್ನೊಳಗೊಂಡ ವಿಶಿಷ್ಟ ಮಾದರಿಯ ಕಂದವಾರ ಎಕೋ ಥೀಮ್ ಪಾರ್ಕ್ ನಿರ್ಮಾಣವಾಗಲಿದೆ.

    ಉದ್ಯಾನದಲ್ಲಿ ಏನೇನಿರಲಿದೆ?
    ಈ ಉದ್ಯಾನವನದಲ್ಲಿ ಸಂಗೀತ ಕಾರಂಜಿ, ಸರಳ ಜಿಮ್, ಮಕ್ಕಳ ಆಟದ ಮೈದಾನ, ಹಿರಿಯ ನಾಗರಿಕರ ವಿಶ್ರಾಂತಿ ಧಾಮ, ಬೋಟಿಂಗ್, ಕಲಾಗ್ರಾಮದ ಮಳಿಗೆಗಳು, ಪಾದಚಾರಿ ಸೇತುವೆ, ಪಾರ್ಕಿಂಗ್ ವ್ಯವಸ್ಥೆ, ವನೌಷಧಿ ಸಸ್ಯಗಳ ಹರ್ಬಲ್ ಪ್ಲಾಂಟೇಶನ್ ಇತ್ಯಾದಿ ವಿಶೇಷ ಆಕರ್ಷಣೆಯೊಂದಿಗೆ ಪ್ರವಾಸಿಗರಿಗೆ ಮುದ ನೀಡಲಿದೆ. ಅತಿ ಶೀಘ್ರದಲ್ಲೇ ಈ ಉದ್ಯಾನವನದ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ ಎಂದರು.

    ಎಚ್‍ಎನ್ ವ್ಯಾಲಿ ಮೂಲಕ ಜಿಲ್ಲೆಯ ಕೆರೆಗಳ ಅಂತರ್ಜಲ ಹೆಚ್ಚಿಸಲು ಕೆರೆಗಳನ್ನು ಸಂಸ್ಕರಿತ ನೀರಿನಿಂದ ತುಂಬಿಸುವ ಯೋಜನೆಯಡಿ 44 ಕೆರೆಗಳನ್ನು ಆಯ್ಕೆ ಮಾಡಿದ್ದು, ಈ ಪೈಕಿ ಸಣ್ಣ ನೀರಾವರಿಯ ಇಲಾಖೆ ವ್ಯಾಪ್ತಿಯಡಿ 32 ಕೆರೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಲ್ಲಿ ಈ ವರೆಗೆ 17 ಕೆರೆಗಳಿಗೆ ಶೇ.30ರಷ್ಟು ನೀರು ಹರಿಸಿದ್ದು, 6 ಕೆರೆಗಳಿಗೆ ಶೇ.50ರಷ್ಟು ಹಾಗೂ 7 ಕೆರೆಗಳಿಗೆ ಶೇ.51 ರಿಂದ 99 ರಷ್ಟು ನೀರನ್ನು ತುಂಬಿಸಲಾಗಿದೆ. 2 ಕೆರೆಗಳನ್ನು ತುಂಬಿಸಬೇಕಾಗಿದೆ. ಅಲ್ಲದೆ ಈ ಯೊಜನೆಯಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 12 ಕೆರೆಗಳನ್ನು ಆಯ್ಕೆ ಮಾಡಿ ಅವುಗಳಲ್ಲಿ 6 ಕೆರಗಳಿಗೆ ಶೆ.30ರಷ್ಟು, ಶೇ.99ರಷ್ಟು 5 ಕೆರೆಗಳನ್ನು ತುಂಬಿಸಲಾಗಿದೆ. ಒಂದು ಕೆರೆಯನ್ನು ತುಂಬಿಸಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಡಾ.ಭಾಸ್ಕರ್ ಹಾಗೂ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ನರೇಂದ್ರಬಾಬು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.

  • ನೆರೆ ಪೀಡಿತ ಜಿಲ್ಲೆಗಳ ಡಿಸಿಗಳೊಂದಿಗೆ ಸಿಎಂ ಸಭೆ

    ನೆರೆ ಪೀಡಿತ ಜಿಲ್ಲೆಗಳ ಡಿಸಿಗಳೊಂದಿಗೆ ಸಿಎಂ ಸಭೆ

    ಬೆಂಗಳೂರು: ನೆರೆ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಡಿಯೋ ಸಂವಾದ ನಡೆಸಿದರು. ಮಳೆಯಿಂದ ಆಗುತ್ತಿರುವ ಹಾನಿ ಹಾಗೂ ಕೈಗೊಳ್ಳಲಾಗಿರುವ ಪರಿಹಾರ ಕ್ರಮಗಳ ಕುರಿತು ಮಾಹಿತಿ ಪಡೆದು ಸೂಚನೆಗಳನ್ನು ನೀಡಿದರು.

    ಕೊಡಗು, ಬಳ್ಳಾರಿ, ಹಾಸನ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ಮಂಗಳೂರು, ಚಿಕ್ಕಮಗಳೂರು, ವಿಜಯಪುರ, ಕಲಬುರಗಿ, ಮೈಸೂರು, ಕೊಪ್ಪಳ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಕಳೆದ 8 ದಿನಗಳಿಂದ ಹೆಚ್ಚಿನ ಮಳೆಯಾಗುತ್ತಿದ್ದು, ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ ಪರಿಹಾರ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಸೂಚಿಸಿದರು.

    ಪ್ರವಾಹ ತಡೆಗಟ್ಟಲು ಅತ್ಯಾಧುನಿಕ ಉಪಕರಣಗಳನ್ನು ಖರೀದಿಸಲು ಹಣ ಬಿಡುಗಡೆ ಮಾಡಲಾಗುವುದು. ಜಿಲ್ಲಾಧಿಕಾರಿಗಳ ಪಿಡಿ ಖಾತೆಗಳಲ್ಲಿ ಈಗಾಗಲೇ ಲಭ್ಯವಿರುವ ಮೊತ್ತವನ್ನು ಪ್ರವಾಹ ಪರಿಸ್ಥಿತಿ ನಿಭಾಯಿಸಲು ಬಳಕೆ ಮಾಡಬೇಕು. ನದಿ ಮತ್ತು ಭೂಕುಸಿತ ಉಂಟಾಗುವ ಸ್ಥಳಗಳನ್ನು ಗುರುತಿಸಲು ವಿಶೇಷ ತಂಡವನ್ನು ರಚಿಸಲು ಕ್ರಮಕೈಗೊಳ್ಳಬೇಕು. ಭೂಕುಸಿತ ಉಂಟಾಗಬಹುದಾದ ಪ್ರದೇಶಗಳಲ್ಲಿರುವ ಜನರನ್ನು ಮುಂಚಿತವಾಗಿಯೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಬೇಕು ಎಂದು ತಿಳಿಸಿದರು.

    ಬೆಳೆ ನಷ್ಟ ಉಂಟಾಗಿರುವ ಬಗ್ಗೆ ಸಮೀಕ್ಷೆ ನಡೆಸಿ, ವರದಿ ಪಡೆದು, ಪರಿಹಾರ ವಿತರಣೆಗೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಂದಾಯ ಸಚಿವ ಆರ್.ಅಶೋಕ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು.

  • ಪ್ರವಾಸಿಗರೇ ಶನಿವಾರ, ಭಾನುವಾರ ನಂದಿಬೆಟ್ಟಕ್ಕೆ ಬರಬೇಡಿ

    ಪ್ರವಾಸಿಗರೇ ಶನಿವಾರ, ಭಾನುವಾರ ನಂದಿಬೆಟ್ಟಕ್ಕೆ ಬರಬೇಡಿ

    ಚಿಕ್ಕಬಳ್ಳಾಪುರ: ಕೊರೊನಾ ಮೂರನೇ ಅಲೆ ತಡೆಯುವ ಸಲುವಾಗಿ ವಿಕೇಂಡ್ ಶನಿವಾರ ಮತ್ತು ಭಾನುವಾರ ನಂದಿಬೆಟ್ಟ ಸಂಪೂರ್ಣ ಬಂದ್ ಮಾಡಲಿದ್ದು, ಪ್ರವಾಸಿಗರೇ ನಂದಿಬೆಟ್ಟಕ್ಕೆ ಬರಬೇಡಿ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಮನವಿ ಮಾಡಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಲತಾ ಅವರು, ಕಳೆದ ಶನಿವಾರ ಹಾಗೂ ಭಾನುವಾರ ಸಾವಿರಾರು ಮಂದಿ ಪ್ರವಾಸಿಗರು ನಂದಿಬೆಟ್ಟಕ್ಕೆ ಆಗಮಿಸಿದ್ದು, ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಿದ್ದರು. ನಂದಿಬೆಟ್ಟದಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿ ಪ್ರವಾಸಿಗರು ಪರದಾಡುವಂತಾಯಿತು. ಭಾನುವಾರ 12,000 ಮಂದಿ ಪ್ರವಾಸಿಗರು ನಂದಿಬೆಟ್ಟಕ್ಕೆ ಬಂದು ಹೋಗಿದ್ದು, ಪ್ರವಾಸಿಗರ ದಟ್ಟಣೆ ಹೆಚ್ಚಾಗಿ ಕೊರೊನಾ ನಿಯಮಗಳನ್ನು ಪ್ರವಾಸಿಗರು ಗಾಳಿಗೆ ತೂರಿದ್ರು. ಹೀಗಾಗಿ ಪ್ರವಾಸಿಗರೇ ವಿಕೇಂಡ್ ಶನಿವಾರ-ಭಾನುವಾರ ನಂದಿಬೆಟ್ಟದತ್ತ ಬಂದು ಬೇಜಾರು ಮಾಡಿಕೊಂಡು ವಾಪಾಸ್ ಹೋಗಬೇಡಿ. ವಾರದ ಇತರ ದಿನಗಳಲ್ಲೂ ಪ್ರವಾಸಿಗರ ಪ್ರವೇಶಕ್ಕೆ ಅವಕಾಶವಿದೆ. ಆದರೆ ನಂದಿಬೆಟ್ಟದ ಮೇಲ್ಭಾಗದಲ್ಲಿ 550 ಬೈಕ್ ಹಾಗೂ 310 ಕಾರುಗಳಿಗಷ್ಟೇ ಪಾರ್ಕಿಂಗ್  ಸೌಲಭ್ಯವಿದ್ದು, ಇಷ್ಟು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ನಂದಿಬೆಟ್ಟದಲ್ಲಿ ಶ್ವಾನ-ಕೋತಿಗಳ ಸ್ನೇಹಕ್ಕೆ ಪ್ರವಾಸಿಗರು ಫಿದಾ

    ನಂದಿಬೆಟ್ಟದ ತಪ್ಪಲಿನ ಕೆಳಭಾಗದ ಚೆಕ್ ಪೋಸ್ಟ್ ನಲ್ಲೇ ಟೋಕನ್ ವಿತರಣೆ ಮಾಡಿ ಪ್ರವಾಸಿಗರಿಗೆ ಅವಕಾಶ ಕಲ್ಪಿಸುವ ಪ್ರಾಯೋಗಿಕ ಪ್ರಯತ್ನವನ್ನು ಮಾಡಲಾಗುವುದು. ಟೋಕನ್ ವಿತರಣೆ ಮಾಡುವ ಮೂಲಕ ವಾಹನಗಳ ದಟ್ಟಣೆ ಹಾಗೂ ಜನದಟ್ಟಣೆ ತಡೆಯುವ ಮೂಲಕ ಕೊರೊನಾ ಮೂರನೇ ಅಲೆ ತಡೆಯಲಾಗುವುದು. ಜೊತೆಗೆ ಈ ಟೋಕನ್ ವಿತರಣೆಯನ್ನು ಮುಂದಿನ ದಿನಗಳಲ್ಲಿ ಆನ್‍ಲೈನ್ ಮೂಲಕ ತಂತ್ರಜ್ಞಾನ ಬಳಸಿಕೊಂಡು ಟೋಕನ್ ನೀಡುವ ಕಾರ್ಯಕ್ಕೆ ಕೆಎಸ್‍ಟಿಡಿಸಿ ಆ್ಯಪ್ ತಯಾರಿ ಮಾಡಲಿದೆ. ಮತ್ತೊಂದೆಡೆ ಬೆಟ್ಟದ ಕೆಳಭಾಗದಲ್ಲಿ ಪಾರ್ಕಿಂಗ್ ಗೆ 7 ಎಕರೆ ಜಾಗ ಮೀಸಲಿಟ್ಟಿದ್ದು, ಅದಷ್ಟು ಬೇಗ ಪಾರ್ಕಿಂಗ್ ಸೌಲಭ್ಯ ಕಲ್ಪಿಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರ ಪ್ರವೇಶಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.

  • ಲೋಕಾಯುಕ್ತ ಸಂಪೂರ್ಣ ಅಧಿಕಾರಕ್ಕೆ ಏಕಾಂಗಿ ಧರಣಿ

    ಲೋಕಾಯುಕ್ತ ಸಂಪೂರ್ಣ ಅಧಿಕಾರಕ್ಕೆ ಏಕಾಂಗಿ ಧರಣಿ

    ಹಾಸನ: ರಾಜ್ಯದಲ್ಲಿ ಭ್ರಷ್ಟಾಚಾರವನ್ನು ತೊಲಗಿಸಲು ಲೋಕಾಯುಕ್ತ ಸಂಸ್ಥೆಗೆ ಸಂಪೂರ್ಣ ಅಧಿಕಾರ ನೀಡಬೇಕು ಎಂದು ಒತ್ತಾಯಿಸಿ ಅರಸೀಕೆರೆ ತಾಲೂಕಿನ ಹೆಚ್.ಜಿ ವೀರಭದ್ರಪ್ಪ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಏಕಾಂಗಿಯಾಗಿ ಧರಣಿ ನಡೆಸಿದರು.

    ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ಸಂಪೂರ್ಣ ಅಧಿಕಾರವನ್ನು ನೀಡಿ ಭ್ರಷ್ಟಾಚಾರವನ್ನು ನಿರ್ಮೂಲನೆಗೆ ಸಹಕಾರ ಮಾಡಬೇಕು ಎಂದು ಏಕಾಂಗಿಯಾಗಿ ಧರಣಿ ಕುಳಿತು ಆಗ್ರಹಿಸಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆಗೆ ಕರ್ನಾಟಕ ಲೋಕಾಯುಕ್ತ ಸಂಸ್ಥೆಯನ್ನು ಸ್ಥಾಪನೆ ಮಾಡಲಾಗಿದೆ. ಆದರೆ ಈ ಸಂಸ್ಥೆಗೆ ಹೆಚ್ಚಿನ ಅಧಿಕಾರವನ್ನು ನೀಡಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಾದರೂ ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಗೆ ಸಂಪೂರ್ಣ ಅಧಿಕಾರ ನೀಡುವ ಮೂಲಕ ಭ್ರಷ್ಟಾಚಾರ ನಿರ್ಮೂಲನಾ ರಾಜ್ಯವನ್ನಾಗಿ ಮಾಡಬೇಕು ಎಂದು ಮನವಿಮಾಡಿಕೊಂಡರು. ಇದನ್ನೂ ಓದಿ: ಬೇಲೂರು ಚೆನ್ನಕೇಶವ ದೇಗುಲ ಓಪನ್ – ಭಕ್ತರ ದರ್ಶನಕ್ಕೆ ಅವಕಾಶ

    ಧರಣಿಯೊಂದಿಗೆ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿಗಳು, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆಯಲಾಗಿದ್ದು, ಜಿಲ್ಲಾಧಿಕಾರಿಗಳ ಮೂಲಕ ಮನವಿ ಕೂಡ ಸಲ್ಲಿಸಿದ್ದಾರೆ.

  • ಕೊಡಗು ಜಿಲ್ಲೆಯಲ್ಲಿ ಭಾರೀ ವಾಹನಗಳ ನಿರ್ಬಂಧ ಸಡಿಲಿಕೆ

    ಕೊಡಗು ಜಿಲ್ಲೆಯಲ್ಲಿ ಭಾರೀ ವಾಹನಗಳ ನಿರ್ಬಂಧ ಸಡಿಲಿಕೆ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮರಳುಗಾರಿಕೆ, ಮರದ ದಿಮ್ಮಿಗಳ ಸಾಗಾಣಿಕೆ ಹಾಗೂ ಭಾರೀ ವಾಹನ ಸಂಚಾರದ ನಿರ್ಬಂಧ ವಿಧಿಸಿ ಹೊರಡಿಸಲಾದ ಆದೇಶವನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾರ್ಪಾಡು ಮಾಡಿದ್ದಾರೆ.

    ವಾಹನದ ನೋಂದಣಿ ತೂಕ 16,200 ಕೆ.ಜಿ.ಗಿಂತ ಹೆಚ್ಚಿನ ತೂಕದ ಸರಕು ಸಾಗಾಣಿಕೆ ಮಾಡುವ ವಾಹನಗಳನ್ನು ಮಾತ್ರ ನಿರ್ಭಂದಿಸಲಾಗಿದೆ. ಉಳಿದ ವಾಹನಗಳು ಸಂಚರಿಸಬಹುದಾಗಿದೆ. ಈ ಆದೇಶ ತಕ್ಷಣದಿಂದ ಜಾರಿಗೆ ಬರಲಿದೆ ಹಾಗೂ ಆಗಸ್ಟ್ 16ರವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

    ಉಳಿದಂತೆ ಅಡುಗೆ ಅನಿಲ, ಇಂಧನ, ಹಾಲು ಪೂರೈಕೆ, ಸರ್ಕಾರಿ ಕೆಲಸದ ನಿಮಿತ್ತ ಉಪಯೋಗಿಸುವ ವಾಹನಗಳು, ಶಾಲಾ ಕಾಲೇಜು ಮತ್ತು ಸಾರ್ವಜನಿಕ ಪ್ರಯಾಣಿಕರ ವಾಹನಗಳ(ಮಲ್ಟಿ ಆಕ್ಸಿಲ್ ಬಸ್‍ಗಳು ಸೇರಿದಂತೆ) ಸಂಚಾರಕ್ಕೆ ಯಾವುದೇ ನಿರ್ಬಂಧ ಇಲ್ಲ. ಸಂಬಂಧಪಟ್ಟ ಇಲಾಖೆಗಳು ಹೊರಡಿಸಿರುವ ಅಥವಾ ಇಲಾಖೆ ವತಿಯಿಂದ ಚಾಲ್ತಿಯಲ್ಲಿರುವ ಆದೇಶ, ನಿಯಮ, ನಿರ್ಬಂದ, ಮಾರ್ಗಸೂಚಿಗಳು ಜಾರಿಯಲ್ಲಿರುತ್ತವೆ. ಉಲ್ಲಂಘನೆಯು ಸಂಬಂಧಪಟ್ಟ ಕಾಯ್ದೆಯಡಿ ದಂಡನೀಯವಾಗಿದೆ ಎಂದು ಹೇಳಿದ್ದಾರೆ.

  • ಕಲಬುರಗಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಸಜ್ಜಾಗಿ: ಡಿಸಿ

    ಕಲಬುರಗಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಸಜ್ಜಾಗಿ: ಡಿಸಿ

    ಕಲಬುರಗಿ: ಜಿಲ್ಲೆಯಲ್ಲಿ ಭಾರೀ ಮಳೆ ಉಂಟಾಗುವ ಸಂಭವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಜುಲೈ 8 ರಿಂದ 15 ರವರೆಗೆ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಿದ್ದಾರೆ.

    ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಕೈಗೊಂಡಿರುವ ಮುನ್ನೆಚರಿಕೆ ಕ್ರಮಗಳ ಕುರಿತು ಚರ್ಚಿಸಲು ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಲ್ಲೆಯಲ್ಲಿ ಈಗಾಗಲೇ ಮಳೆ ಸುರಿಯುತ್ತಿದ್ದು, ಗ್ರಾಮೀಣ ಭಾಗದ ನದಿಪಾತ್ರದ ಹಳ್ಳಿಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ಹಳ್ಳಿಗಳಲ್ಲಿ ಟಾಸ್ಕ್ ಫೋರ್ಸ್ ತಂಡಗಳನ್ನು ರಚಿಸಬೇಕು. ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟುಹೋಗದೆ, ಸ್ಥಳದಲ್ಲಿಯೇ ಇದ್ದು ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಸೂಚಿಸಿದ್ದಾರೆ.

    ಪ್ರವಾಹಕ್ಕೀಡಾಗುವ ಗ್ರಾಮಗಳಲ್ಲಿ ಕಾಳಜಿ ಕೇಂದ್ರ ತೆರೆದು ಸೂಕ್ತ ಊಟ, ವಸತಿ, ವಿದ್ಯುತ್, ನೀರಿನ ಸೌಲಭ್ಯ ಒದಗಿಸಬೇಕು. ಮಕ್ಕಳಿಗೆ ಹಾಲು ಹಾಗೂ ಬಿಸ್ಕೆಟ್ ನೀಡಬೇಕು. ಹಾಲು ಪೂರೈಕೆಯಲ್ಲಿ ವಿಳಂಬವಾದರೆ ಹಾಲಿನ ಪೌಡರ್ ವ್ಯವಸ್ಥೆ ಸಹ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿರುವ ಎಲ್ಲ ಗರ್ಭಿಣಿ ಸ್ತ್ರೀಯರ ಪಟ್ಟಿಯನ್ನು ಅಂಗನವಾಡಿ ಕಾರ್ಯಕರ್ತರಿಂದ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

    ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

    ಗ್ರಾಮಗಳಲ್ಲಿರುವ ಸಣ್ಣ-ಪುಟ್ಟ ನಾಲೆಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಬೇಕು. ಬ್ಯಾರೇಜ್‍ಗಳ ಎಲ್ಲ ಗೇಟ್ ಗಳು ಸೂಕ್ತವಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂಬ ಮಾಹಿತಿ ಅರಿಯಬೇಕು. ಪ್ರತಿ ತಾಲೂಕಿನಲ್ಲಿಯೂ ಒಂದೊಂದು ಜೆಸಿಬಿ ವಾಹನವನ್ನು ಸನ್ನದ್ಧವಾಗಿರಿಸಿರಬೇಕು. ಒಂದು ವೇಳೆ ಪ್ರವಾಹ ಪರಿಸ್ಥಿತಿ ಉಂಟಾದರೆ ಹಳ್ಳಿಗಳಲ್ಲಿ ಕುಡಿಯುವ ನೀರಿನ ಟ್ಯಾಂಕರ್, ವಿದ್ಯುತ್ ಸೇರಿದಂತೆ ಅತ್ಯಾವಶ್ಯಕ ಸೌಕರ್ಯಗಳನ್ನು ತಕ್ಷಣಕ್ಕೆ ಕಲ್ಪಿಸುವಂತಾಗಬೇಕು ಎಂದು ಅವರು ಸಲಹೆ ನೀಡಿದರು.

    ತಾಲೂಕು ಆಸ್ಪತ್ರೆಗಳಲ್ಲಿ ವಿದ್ಯುತ್ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು. ಜನರೇಟರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರೀಕ್ಷಿಸಿ, ಜನರೇಟರಗೆ ಅಗತ್ಯವಿರುವಷ್ಟು ಇಂಧನ ವ್ಯವಸ್ಥೆ ಮಾಡಬೇಕು. ಹಾಗೆಯೇ ಪ್ರಥಮ ಚಿಕೆತ್ಸೆಯ ವ್ಯವಸ್ಥೆ ಮಾಡಬೇಕು ಎಂದು ಡಿಹೆಚ್‍ಓ ಅವರಿಗೆ ತಿಳಿಸಿದ್ದಾರೆ.

    ತಾಲೂಕು ಮಟ್ಟ ಹಾಗೂ ಪ್ರತಿ ಹಳ್ಳಿ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು. ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್‍ಗಳೊಂದಿಗೆ ಈ ನೋಡಲ್ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿರಬೇಕು. ಸಹಾಯಕ ಆಯುಕ್ತರು, ತಹಸೀಲ್ದಾರರು ಸೇರಿ ಜೆಸ್ಕಾಂ, ಪೆÇಲೀಸ್, ಅಗ್ನಿಶಾಮಕ ಇಲಾಖೆಯ ಮುಂತಾದ ಇಲಾಖೆಗಳು ಪರಿಸ್ಥಿತಿಗೆ ಅನುಗುಣವಾಗಿ ಶ್ರಮವಹಿಸಿ ಕಾರ್ಯನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.

  • ಹಾಸನದಲ್ಲಿ ಜುಲೈ 12ರವರೆಗೆ ಲಾಕ್‍ಡೌನ್ ವಿಸ್ತರಣೆ

    ಹಾಸನದಲ್ಲಿ ಜುಲೈ 12ರವರೆಗೆ ಲಾಕ್‍ಡೌನ್ ವಿಸ್ತರಣೆ

    ಹಾಸನ: ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಇನ್ನೂ ಒಂದು ವಾರ ಲಾಕ್‍ಡೌನ್ ವಿಸ್ತರಣೆ ಮಾಡಿ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ಹೊರಡಿಸಿದ್ದಾರೆ.

    ಸೋಮವಾರ, ಬುಧವಾರ, ಶುಕ್ರವಾರ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ವಹಿವಾಟು, ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ. ವಾರದ ಉಳಿದ ನಾಲ್ಕುದಿನ ಸಂಪೂರ್ಣ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ಜೂನ್ 5 ರಿಂದ 12ರ ವರೆಗೆ ಲಾಕ್‍ಡೌನ್ ವಿಸ್ತರಣೆ ಮಾಡಿ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶಿಸಿದ್ದಾರೆ.

    ಬ್ಯಾಂಕ್ ಹಾಗೂ ಅಂಚೆ ಕಚೇರಿಗೂ ಮೂರು ದಿನ ಸಾರ್ವಜನಿಕ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ದೇವಾಲಯ ಹಾಗೂ ಪೂಜಾ ಸ್ಥಳಗಳಿಗೆ ಭಕ್ತರಿಗೆ ಅವಕಾಶ ನೀಡದೇ ಪೂಜೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮದುವೆಗೆ ಕೇವಲ 40 ಜನರಿಗೆ ಮಾತ್ರ ಅವಕಾಶ, ಟ್ಯಾಕ್ಸಿ ಮತ್ತು ಆಟೋದಲ್ಲಿ ಇಬ್ಬರು ಓಡಾಡಲು ಅವಕಾಶ ಕಲ್ಪಿಸಿ, ಹಾಸನ ಜಿಲ್ಲೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

  • ಕೃಷ್ಣಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಕುಟುಂಬ ವರ್ಗಕ್ಕೆ ಡಿಸಿ ಸಾಂತ್ವನ

    ಕೃಷ್ಣಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಕುಟುಂಬ ವರ್ಗಕ್ಕೆ ಡಿಸಿ ಸಾಂತ್ವನ

    ಚಿಕ್ಕೋಡಿ: ಹಾಸಿಗೆ ತೊಳೆಯಲು ಹೋಗಿ ಕೃಷ್ಣಾನದಿಯಲ್ಲಿ ಮುಳುಗಿ ಸಾವನ್ನಪ್ಪಿದ ನಾಲ್ವರು ಸಹೋದರರ ಮನೆಗೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸಾಂತ್ವನ ಹೇಳಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

    ಈ ಸಂದರ್ಭದಲ್ಲಿ ಮಾಧ್ಯಮಗಳೊಂದೊಗೆ ಮಾತನಾಡಿದ ಡಿಸಿ, ಈ ದುರ್ಘಟನೆ ವಿಪತ್ತು ಪರಿಹಾರ ನಿಧಿ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಸರ್ಕಾರದ ಯಾವುದಾದರೊಂದು ಯೋಜನೆಯಡಿ ಖಂಡಿತವಾಗಿ ಬನಸೋಡೆ ಕುಟುಂಬಕ್ಕೆ ಪರಿಹಾರ ಕೊಡಿಸುತ್ತೇವೆ. ಈ ಕುಟುಂಬಕ್ಕೆ ಖಂಡಿತವಾಗಿ ಪರಿಹಾರದೊಂದಿಗೆ ಅವರ ಮಕ್ಕಳ ವಿದ್ಯಾಭ್ಯಾಸವನ್ನು ಸರ್ಕಾರಿ ವಸತಿ ಶಾಲೆಯಲ್ಲಿ ಉನ್ನತ ಶಿಕ್ಷಣದವರೆಗೆ ಶಿಕ್ಷಣ ಕೊಡಿಸುವ ಜವಾಬ್ದಾರಿ ನಮ್ಮದು, ಮೇಲಾಗಿ ಈ ಕುಟುಂಬದ ಹಿನ್ನೆಲೆ ಕೇಳಿ ಬಹಳ ದುಖಃವಾಗಿದೆ ಎಂದರು. ಇದನ್ನೂ ಓದಿ: ಕೃಷ್ಣಾ ನದಿ ಪಾಲಾಗಿದ್ದ ನಾಲ್ವರು ಸಹೋದರರ ಶವ ಪತ್ತೆ

    ಈ ಘಟನೆ ಸಂಭವಿಸಿದ ಕ್ಷಣದಿಂದ ಜಿಲ್ಲಾ ಆಡಳಿತ ಹಾಗೂ ತಾಲೂಕು ಆಡಳಿತದ ಜೊತೆ ಅಥಣಿ ತಾಲೂಕಿನ ಶಾಸಕರು ಹಾಗೂ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ್ ಸವದಿ ಅವರು ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿದ್ದರು, ಈ ವಿಷಯ ತಿಳಿಸುತ್ತಿದ್ದಂತೆ ನಾವು ಮಹಾರಾಷ್ಟ್ರದ ಕೊಲ್ಲಾಪುರ್ ಜಿಲ್ಲಾಧಿಕಾರಿ ಜೊತೆಯಲ್ಲಿ ಮಾತನಾಡಿ ಸ್ಥಳಕ್ಕೆ ನುರಿತ ಈಜುಗಾರರನ್ನು ಕಳುಹಿಸಿದ್ದೇವು ಎಂದು ಮಾಹಿತಿ ನೀಡಿ ಪರಿಹಾರ ಕೊಡಿಸುವ ಭರವಸೆ ನೀಡಿದರು.

    ತಾಲೂಕು ದಂಡಾಧಿಕಾರಿ ದುಂಡಪ್ಪ ಕೋಮಾರ್, ಉಪ ತಹಶೀಲ್ದಾರ್ ಮಹಾದೇವ್ ಬಿರಾದಾರ್, ಡಿವೈಎಸ್ಪಿ ಎಸ್ ವಿ ಗಿರೀಶ್, ಕುಮಾರ್ ಹಾಡಕರ್, ಗ್ರಾಮ ಪಂಚಾಯತ್ ಅಧ್ಯಕ್ಷ ಮುದುಕನ ಸೇಗುಣಸಿ, ಯಲ್ಲಾಲಿಂಗ್ ಪಾಟೀಲ್, ರಮೇಶ್ ಮಾಂಗ್, ಅಪ್ಪಣ್ಣ ಸನದಿ, ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ಜಾಯಗೋಣಿ, ಸಂತೋಷ ಪಾರ್ಥನಳ್ಳಿ, ವಿಠ್ಠಲ ಕಾಂಬಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.