Tag: DC

  • ಚಾಮರಾಜನಗರ ಡಿಸಿಯಿಂದ ಧ್ವಜಾರೋಹಣ- ಸಚಿವರ ಬದಲಿಗೆ ಧ್ವಜ ಹಾರಿಸಿದ ಮೂರನೇ ಡಿಸಿ ಎಂಬ ಹೆಗ್ಗಳಿಕೆ

    ಚಾಮರಾಜನಗರ ಡಿಸಿಯಿಂದ ಧ್ವಜಾರೋಹಣ- ಸಚಿವರ ಬದಲಿಗೆ ಧ್ವಜ ಹಾರಿಸಿದ ಮೂರನೇ ಡಿಸಿ ಎಂಬ ಹೆಗ್ಗಳಿಕೆ

    ಚಾಮರಾಜನಗರ: ನಗರದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಪಡೆದರು. ಈ ಮೂಲಕ ಸಚಿವರ ಬದಲಿಗೆ ಧ್ವಜಾರೋಹಣ ನೆರವೇರಿಸಿದ ಮೂರನೇ ಡಿಸಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

    ಚಾಮರಾಜನಗರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ನೇಮಕವಾಗದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ನಗರದ ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಪಡೆದರು.

    ಕೋವಿಡ್ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸರಳ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಡಿಸಿ ರವಿ ಧ್ವಜಾರೋಹಣ ನೆರವೇರಿಸಿ, ಪೊಲೀಸ್ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಪ್ರಾಣದ ಹಂಗು ತೊರೆದು ತಮ್ಮ ಸರ್ವಸ್ವವನ್ನು ನಾಡಿಗೆ ಸಮರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರ ಶ್ರಮ ವ್ಯರ್ಥವಾಗದಂತೆ ಒಗ್ಗಟ್ಟಿನಿಂದ ನಾವು ಬದುಕಬೇಕಿದೆ. ರಾಷ್ಟ್ರೀಯ ಪ್ರಜ್ಞೆ ನಿರಂತರವಾಗಿ ಜಾಗೃತವಾಗಿರುವಂತೆ ಎಚ್ಚರ ವಹಿಸಬೇಕು ಎಂದರು.

    ಈ ವರೆಗೆ ಜಿಲ್ಲೆಯಲ್ಲಿ 4.75 ಲಕ್ಷ ಮಂದಿಗೆಗೆ ಲಸಿಕೆ ನೀಡಲಾಗಿದ್ದು, 3.5 ಕೋಟಿ ರೂ. ವೆಚ್ಚದಲ್ಲಿ 6 ಅಂಬುಲೆನ್ಸ್, ಮಕ್ಕಳ ವೆಂಟಿಲೇಟರ್ ಗಳನ್ನು ಖರೀದಿಸಲಾಗಿದೆ. ಗ್ರಾ.ಪಂ. ಗಳು ತಯಾರಿಸುವ ದೂರದೃಷ್ಟಿ ಯೋಜನೆಯನ್ನು ‘ಜನರ ಯೋಜನೆ’ ಎಂಬ ಹೆಸರಿನಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

    ಮೂರನೇ ಡಿಸಿ
    ಹರ್ಷ ಗುಪ್ತ, ಬಿ.ಬಿ.ಕಾವೇರಿ ಬಳಿಕ ಸಚಿವರ ಬದಲಿಗೆ ಧ್ವಜಾರೋಹಣ ನೆರವೇರಿಸಿದ ಮೂರನೇ ಡಿಸಿ ಎಂಬ ಹೆಗ್ಗಳಿಕೆಗೆ ಡಾ.ಎಂ.ಆರ್.ರವಿ ಪಾತ್ರರಾದರು. ರಾಷ್ಟ್ರಪತಿ ಆಡಳಿತದ ವೇಳೆ ಅಂದಿನ ಚಾಮರಾಜನಗರ ಡಿಸಿಯಾಗಿದ್ದ ಹರ್ಷ ಗುಪ್ತ ಧ್ವಜಾರೋಹಣ ಮಾಡಿದ್ದರು. ಇದಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ನೇಮಕವಾಗದಿದ್ದರಿಂದ ಡಿಸಿ ಬಿ.ಬಿ.ಕಾವೇರಿ, ಬಳಿಕ ಇದೀಗ ಡಾ.ಎಂ.ಆರ್.ರವಿ ಧ್ವಜಾರೋಹಣ ನೆರವೇರಿಸಿದರು.

  • ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಅಗತ್ಯ ಸೂಚನೆ: ಬಿ.ಸಿ ನಾಗೇಶ್

    ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಅಗತ್ಯ ಸೂಚನೆ: ಬಿ.ಸಿ ನಾಗೇಶ್

    ಬೆಂಗಳೂರು: ಆಗಸ್ಟ್-ಸೆಪ್ಟೆಂಬರ್‍ ನಲ್ಲಿ 2021ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ಮತ್ತು ದೋಷರಹಿತವಾಗಿ ನಡೆಸಲು ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಬಗ್ಗೆ ಅಗತ್ಯ ಸಲಹೆ ಸೂಚನೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

    ದ್ವಿತೀಯ ಪಿಯುಸಿ ಪರೀಕ್ಷೆ ಆಗಸ್ಟ್ 19ರಿಂದ ಸೆಪ್ಟೆಂಬರ್ 3ರವರೆಗೆ ನಡೆಯಲಿದೆ. ಈ ಸಂಬಂಧ ಇಂದು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ತಮ್ಮ ವಿಧಾನಸೌಧದ ಕಚೇರಿಯಲ್ಲಿ ಸಭೆ ನಡೆಸಿದ ಬಿ.ಸಿ ನಾಗೇಶ್, ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳು ಅಗತ್ಯವಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಿದರು. ರಾಜ್ಯದಲ್ಲಿ ಒಟ್ಟು 5,546 ಕಾಲೇಜುಗಳಿಂದ 18,414 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಲಿದ್ದಾರೆ. ಇದಕ್ಕಾಗಿ 187 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಕೇಂದ್ರಗಳಲ್ಲಿ ಆಗಸ್ಟ್ 17ರ ಒಳಗೆ ಪೂರ್ವಸಿದ್ಧತೆ ಆಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ಖಚಿತ ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

    ಕರ್ನಾಟಕ ಸೆಕ್ಯೂರ್ ಎಕ್ಸಾಮಿನೇಷನ್ ಸಿಸ್ಟಮ್ ಪ್ರಕಾರ ಪರೀಕ್ಷೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಪತಿಗೆ ದೇವಸ್ಥಾನ ನಿರ್ಮಿಸಿದ ಪತ್ನಿ

    ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್ ಉಮಾಶಂಕರ್, ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕರಾದ ಸ್ನೇಹಲ್ ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

    ವೀಡಿಯೋ ಕಾನ್ಫರೆನ್ಸ್:
    ಪರೀಕ್ಷೆಗೆ ಸಂಬಂಧಿಸಿದಂತೆ ವಿಕಾಸ ಸೌಧದದಲ್ಲಿ ಆಯೋಜಿಸಿದ್ದ ವೀಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ ಸಚಿವರು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿ ಅವರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಗತ್ಯ ಸಲಹೆ ಸೂಚನೆ ನೀಡಿದರು.

  • ಎರಡು ದಶಕಗಳ ಹಿಂದೆ ಬಂದ್ ಆಗಿದ್ದ ಇಎಸ್‍ಐ ಆಸ್ಪತ್ರೆಗೆ ಹೈಟೆಕ್ ಟಚ್

    ಎರಡು ದಶಕಗಳ ಹಿಂದೆ ಬಂದ್ ಆಗಿದ್ದ ಇಎಸ್‍ಐ ಆಸ್ಪತ್ರೆಗೆ ಹೈಟೆಕ್ ಟಚ್

    ಕಲಬುರಗಿ: ಕಳೆದ ಎರಡು ದಶಕಗಳ ಹಿಂದೆ ನಾನಾ ಕಾರಣಗಳಿಂದ ಬಂದ್ ಆಗಿದ್ದ ಶಹಬಾದ್ ಪಟ್ಟಣದಲ್ಲಿನ ಇಎಸ್‍ಐ ಆಸ್ಪತ್ರೆಗೆ ಇದೀಗ ಹೈಟೆಕ್ ಟಚ್ ನೀಡಲಾಗುತ್ತಿದ್ದು, ಇಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಆಸ್ಪತ್ರೆಗೆ ಭೇಟಿ ಕಾಮಗಾರಿ ಪರಿಶೀಲನೆ ನಡೆಸಿದರು.

    ನೀರು, ಆಂತರಿಕ ವಿದ್ಯುತ್ತೀಕರಣ ಸೇರಿದಂತೆ ಬಹುತೇಕ ಸಿವಿಲ್ ಕಾಮಗಾರಿ ಪೂರ್ಣಗೊಂಡಿವೆ ಎಂದು ಸ್ಥಳದಲ್ಲಿದ್ದ ಸೇಡಂ ಉಪವಿಭಾಗದ ಲೊಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ ಕೃಷ್ಣಾ ಅಗ್ನಿಹೋತ್ರಿ ಅವರು ಮಾಹಿತಿ ನೀಡಿದರು. ಗ್ಯಾಸ್ ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡಿದ್ದರಿಂದ ಪ್ರಾಯೋಗಿಕವಾಗಿ ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಡಿ.ಸಿ. ಸೂಚಿಸಿದರು.

    ನವೀಕರಣಗೊಂಡ ಆಸ್ಪತ್ರೆಗೆ ಬೇಕಾಗುವ ವೈದ್ಯಕೀಯ ಉಪಕರಣಗಳು, ಪೀಠೋಪಕರಣಗಳ ಇಂಡೆಂಟ್ ಸಲ್ಲಿಸಬೇಕು. ಅದರ ಜೊತೆಗೆ ಅಸ್ಪತ್ರೆಗೆ ಅವಶ್ಯಕವಿರುವ ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿ ವಿವರ ಸಹ ನೀಡಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಮರದೀಪ ಪವಾರ್ ಅವರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

    ಉಳಿದ ಕೆಲಸ-ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸಿ, ಅಸ್ಪತ್ರೆ ಪುನರಾರಂಭಕ್ಕೆ ಅಣಿಯಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಸುರೇಶ್ ವರ್ಮಾ, ನಗರಸಭೆಯ ಆಯುಕ್ತ ಕೆ.ಗುರುಲಿಂಗಪ್ಪ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಅಣ್ಣೆಪ್ಪ ಕುದ್ರಿ, ಸಹಾಯಕ ಅಭಿಯಂತ ಜಗನ್ನಾಥ್ ಮಾಳಗೆ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

  • ತಮಿಳುನಾಡಿನಿಂದ ಬಂದವರಿಗೂ ಕೊರೊನಾ ನೆಗೆಟಿವ್ ವರದಿ ಕಡ್ಡಾಯ: ಡಿಸಿ

    ತಮಿಳುನಾಡಿನಿಂದ ಬಂದವರಿಗೂ ಕೊರೊನಾ ನೆಗೆಟಿವ್ ವರದಿ ಕಡ್ಡಾಯ: ಡಿಸಿ

    ಚಾಮರಾಜನಗರ: ಕೇರಳ ನಂತರ ತಮಿಳುನಾಡಿನಿಂದ ಬರುವವರಿಗೂ ಆರ್‍ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿ ಜಿಲ್ಲಾಧಿಕಾರಿ ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ.

    ನೆರೆ ರಾಜ್ಯಗಳಿಂದ ಬರುವ ಪ್ರತಿಯೊಬ್ಬರಿಗೂ 72 ಗಂಟೆಯೊಳಗಿನ ಆರ್‍ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿದೆ. ಇದೀಗ ಪಾಲಾರ್, ಅರ್ಧನಾರಿಪುರ, ನಾಲ್ ರೋಡ್,ಪುಣಜನೂರು, ಕೆಕ್ಕನಹಳ್ಳ, ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಬಿಗಿ ಕ್ರಮ ಜರುಗಿಸಲಾಗಿದೆ. ಎರಡೂ ಡೋಸ್ ಲಸಿಕೆ ಪಡೆದವರಿಗೂ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

    ಗಡಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ತಿಳಿಸಲಾಗಿದ್ದು, ಪ್ರತಿಯೊಬ್ಬರನ್ನೂ ಪರಿಶೀಲಿಸಿ, ನೆಗೆಟಿವ್ ವರದಿ ಇದ್ದರೆ ಮಾತ್ರ ರಾಜ್ಯದೊಳಗೆ ಬಿಡಿ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಶುಕ್ರವಾರವಷ್ಟೇ ಜಿಲ್ಲೆಗೆ ಆಗಮಿಸಿದ್ದ ಸಚಿವ ಎಸ್.ಟಿ.ಸೋಮಶೇಖರ್, ಟೆಸ್ಟ್ ರಿಪೋರ್ಟ್ ಕಡ್ಡಾಯ ಮಾಡುವಂತೆ ನಿನ್ನೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು. ಅದರಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

  • ಜೋಗ ವೀಕ್ಷಣೆಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ

    ಜೋಗ ವೀಕ್ಷಣೆಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ

    ಶಿವಮೊಗ್ಗ: ಕೊರೊನಾ ಮೂರನೇ ಅಲೆ ಭೀತಿ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಬರಬೇಕಾದರೆ ಎರಡು ದಿನ ಮುಂಚಿತವಾಗಿ ಪಡೆದಿರುವ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿ ಜಿಲ್ಲಾಡಳಿತ ಆದೇಶಿಸಿದೆ.

    ಜಿಲ್ಲೆಯ ಪ್ರವಾಸಿ ತಾಣಗಳಾದ ಜೋಗ ಜಲಪಾತ, ಸಕ್ಕರೆ ಬೈಲು, ಹುಲಿ ಮತ್ತು ಸಿಂಹಧಾಮ ಸೇರಿದಂತೆ ಇತರೆ ಪ್ರವಾಸಿ ತಾಣಗಳಿಗೆ ವಾರಾಂತ್ಯದ ದಿನಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ರಾಜ್ಯದಲ್ಲಿ ಮೂರನೇ ಅಲೆ ಭೀತಿ ಈಗಾಗಲೇ ಆರಂಭವಾಗಿದ್ದು, ಪ್ರವಾಸಿಗರು ಇದು ಯಾವುದನ್ನು ಲೆಕ್ಕಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 1,785 ಕೊರೊನಾ ಕೇಸ್, 25 ಸಾವು

    ಇದೆಲ್ಲವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಕಠಿಣ ನಿಲುವು ಕೈಗೊಂಡಿದೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಇದ್ದರೆ ಮಾತ್ರ ಪ್ರವೇಶ ನೀಡಲಾಗುವುದು. ಇಲ್ಲದಿದ್ದರೆ ಮುಲಾಜಿಲ್ಲದೇ ವಾಪಸ್ ಕಳುಹಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ವಿಷಯುಕ್ತ ತ್ಯಾಜ್ಯ ನದಿಗಳಿಗೆ ಹರಿಬಿಡುವ ಕಾರ್ಖಾನೆಗಳ ವಿರುದ್ಧ ಕ್ರಮ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ವಿಷಯುಕ್ತ ತ್ಯಾಜ್ಯ ನದಿಗಳಿಗೆ ಹರಿಬಿಡುವ ಕಾರ್ಖಾನೆಗಳ ವಿರುದ್ಧ ಕ್ರಮ

    ಯಾದಗಿರಿ: ವಡಗೇರಾ ತಾಲೂಕಿನ ಕೋರ್ ಗ್ರೀನ್ ಶುಗರ್ ಫ್ಯಾಕ್ಟರಿಯಿಂದ ವಿಷಯುಕ್ತ ತ್ಯಾಜ್ಯವನ್ನು ಕೃಷ್ಣಾ ನದಿಗೆ ಹರಿಬಿಟ್ಟ ಹಿನ್ನೆಲೆ, ನದಿಯ ಹಿನ್ನೀರಿನಲ್ಲಿ ಲಕ್ಷಾಂತರ ಮೀನುಗಳು ಸಾವನ್ನಪ್ಪಿದ್ದವು. ಈ ಬಗ್ಗೆ ‘ಪಬ್ಲಿಕ್ ಟಿವಿ ವೆಬ್‌ಸೈಟ್‌’ ನಲ್ಲಿ ಸುದ್ದಿ ಪ್ರಸಾರವಾಗಿತ್ತು. ಸುದ್ದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ವಿಷಯುಕ್ತ ತ್ಯಾಜ್ಯವನ್ನು ನದಿ, ಹಳ್ಳ- ಕೊಳ್ಳಗಳಿಗೆ ಹರಿಬಿಡುವ ಕೆಮಿಕಲ್ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.

    ಈ ಬಗ್ಗೆ ಇಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ ಅವರ ಅಧ್ಯಕ್ಷತೆಯಲ್ಲಿ ಕಡೆಚೂರು ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಮತ್ತು ಇತರೆ ಫ್ಯಾಕ್ಟರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ವೇಳೆ ಜಿಲ್ಲಾಧಿಕಾರಿ ಮಾತನಾಡಿ, ಮಾಲಿನ್ಯಕಾರಕ ತ್ಯಾಜ್ಯವನ್ನು ಕಾರ್ಖಾನೆಗಳ ಬೇಜವಾಬ್ದಾರಿಯಿಂದ ಕೈಗಾರಿಕಾ ಪ್ರದೇಶದ ಸುತ್ತಲಿನ ನದಿಗಳಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ಜನತೆ ತೀವ್ರ ಆತಂಕ ವ್ಯಕ್ತ ಪಡಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಸಕ್ಕರೆ ಕಾರ್ಖಾನೆಯ ವಿಷಪೂರಿತ ನೀರು ಕೃಷ್ಣಾ ನದಿ ಹೀನ್ನಿರಿಗೆ- ಲಕ್ಷಾಂತರ ಮೀನುಗಳು ಸಾವು

    ಅಲ್ಲದೆ ಕೈಗಾರಿಕಾ ಪ್ರದೇಶದಿಂದ ನದಿ, ಹಳ್ಳ-ಕೊಳ್ಳಗಳಿಗೆ ಹರಿದ ಕಲುಷಿತ ರಾಸಾಯನಿಕವನ್ನು ಜಲಚರ, ಪಶು-ಪಕ್ಷಿಗಳು ಸೇವಿಸಿ ನಾಶವಾಗುತ್ತಿವೆ. ಹೀಗಾಗಿ ಮಾಲಿನ್ಯ ಎಸಗುತ್ತಿರುವ ಟೈರ್ ಘಟಕ, ಶುಗರ್ ಫ್ಯಾಕ್ಟರಿ ವಿರುದ್ಧ ಕೂಡಲೇ ಕಾನೂನು ಪ್ರಕಾರ ಕ್ರಮ ತೆಗೆದುಕೊಂಡು ಘಟಕವನ್ನು ಸ್ಥಗಿತಗೊಳಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

  • ಕಾಸರಗೋಡಿಗೆ ಸರ್ಕಾರಿ, ಖಾಸಗಿ ಬಸ್ ಸಂಚಾರವಿಲ್ಲ: ಕಟೀಲ್

    ಕಾಸರಗೋಡಿಗೆ ಸರ್ಕಾರಿ, ಖಾಸಗಿ ಬಸ್ ಸಂಚಾರವಿಲ್ಲ: ಕಟೀಲ್

    ಮಂಗಳೂರು: ನೆರೆಯ ಕೇರಳದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಕಾಸರಗೋಡಿಗೆ ಸಂಚರಿಸುವ ಸರ್ಕಾರಿ ಹಾಗೂ ಖಾಸಗಿ ಬಸ್‍ಗಳನ್ನು ಆಗಸ್ಟ್ 1 ರಿಂದ ಒಂದು ವಾರದ ಕಾಲ ಸ್ಥಗಿತಗೊಳಿಸಲಾಗುವುದು ಎಂದು ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.

    ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ನಳಿನ್ ಕುಮಾರ್ ಕಟೀಲ್ ಅವರು ಕೊರೊನಾ ಪಾಸಿಟಿವಿಟಿ ಪ್ರಕರಣಗಳು ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿಯೂ ಹೆಚ್ಚಾಗುತ್ತಿದೆ. ಜಿಲ್ಲೆಯ ಗಡಿಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕೊರೊನಾ ಸೋಂಕು ಹರಡದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದರೊಂದಿಗೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಆಗಸ್ಟ್ 1 ರಿಂದ 7 ದಿನ ಮಂಗಳೂರಿನಿಂದ ಕೇರಳ ರಾಜ್ಯದ ಕಾಸರಗೋಡಿಗೆ ಹೋಗುವ ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್‍ಗಳ ಸಂಚಾರವನ್ನು ನಿಲ್ಲಿಸಬೇಕು. ಕೇರಳದಿಂದ ಜಿಲ್ಲೆಗೆ ಬರುವ ವಿದ್ಯಾರ್ಥಿಗಳಲ್ಲಿ ಕಡ್ಡಾಯವಾಗಿ ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಇರಬೇಕು, ಮುಖ್ಯವಾಗಿ ಅಲ್ಲಿನ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ತಾವಿರುವ ವಿದ್ಯಾರ್ಥಿನಿಲಯಗಳಲ್ಲಿಯೇ ಒಂದು ವಾರ ಹೋಂ ಕ್ವಾರಂಟೈಂನಲ್ಲಿಯೇ ಇರಬೇಕು. ಪ್ರತಿ ದಿನ ಅವರುಗಳ ಬಗ್ಗೆ ನಿಗಾ ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಿ- ಸಿಎಂ ಸೂಚನೆ

    ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆ.ವಿ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ತಪಾಸಣೆಗೆ ಮತ್ತಷ್ಟು ಕ್ರಮಕೈಗೊಳ್ಳಬೇಕು. ಕೋವಿಡ್ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಿಸಬೇಕು. ಸೋಂಕಿತರು ಅನಗತ್ಯವಾಗಿ ಓಡಾಡುವುದು ಕಂಡುಬಂದಲ್ಲಿ ಅಂತವರ ವಿರುದ್ಧ ಎಫ್‍ಐಆರ್ ದಾಖಲಿಸಬೇಕು. ಒಂದೇ ಕುಟುಂಬದಲ್ಲಿ 2ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬಂದಲ್ಲಿ ಅಂತಹ ಮನೆಯನ್ನು ಮೈಕ್ರೋ ಕಂಟೈಂಮೆಂಟ್ ಝೋನ್ ಎಂದು ಪರಿಗಣಿಸಬೇಕು ಎಂದರು.

    ರಸ್ತೆಗಳಲ್ಲಿ ಮಾಸ್ಕ್ ಧರಿಸದೇ ಓಡಾಡುವಂತಹ ಸಾರ್ವಜನಿಕರ ಮೇಲೆ ದಂಡ ವಿಧಿಸಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿಸಬೇಕು ಮತ್ತು ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಅವರಲ್ಲಿ ಅರಿವು ಮೂಡಿಸಬೇಕು. ಕೋವಿಡ್ ಸೋಂಕಿತರು ಹೋಂ ಕ್ವಾರಂಟೈಂನ್‍ನಲ್ಲಿ ಇರುವ ಬಗ್ಗೆ ಸಂಬಂಧಿಸಿದ ತಹಶೀಲ್ದಾರ್‍ಗಳು ಮತ್ತು ತಾಲೂಕು ವೈದ್ಯಾಧಿಕಾರಿಗಳು ಸೂಕ್ತ ನಿರ್ಣಯ ಕೈಗೊಳ್ಳಬೇಕು. ಕೋವಿಡ್ ಲಸಿಕೆಯನ್ನು ತೆಗೆದುಕೊಳ್ಳುವಂತಹ ಸ್ಥಳಗಳಲ್ಲಿ ಜನಸಂದಣಿ ಕಂಡುಬರುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಶೇ.60 ಆನ್‍ಲೈನ್ ರಿಜಿಸ್ಟ್ರೇಷನ್ ಮತ್ತು ಶೇ.40 ನೇರವಾಗಿ ಹಾಗೂ 18 ವರ್ಷ ಮೇಲ್ಟಟ್ಟವರಿಗೆ ಶೇ. 80 ಆನ್‍ಲೈನ್ ರಿಜಿಸ್ಟ್ರೇಷನ್ ಮತ್ತು ಶೇ. 20 ನೇರವಾಗಿ ಲಸಿಕೆಯನ್ನು ನೀಡಬೇಕು ಎಂದು ತಿಳಿಸಿದರು.

    ಮಹಾನಗರಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖುಷಿಕೇಷ್ ಭಗವಾನ್ ಸೋನಾವಣೆ ಹಾಗೂ ಮಹಾನಗರಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ವೇದಿಕೆಯಲ್ಲಿದ್ದರು.

    ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಸೇರಿದಂತೆ ಅಪರ ಜಿಲ್ಲಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಕುಮಾರ್, ಉಪವಿಭಾಗಾಧಿಕಾರಿ, ತಹಶೀಲ್ದಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳಿದ್ದರು.

  • ದಕ್ಷಿಣ ಕನ್ನಡದಲ್ಲಿ ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಿ- ಸಿಎಂ ಸೂಚನೆ

    ದಕ್ಷಿಣ ಕನ್ನಡದಲ್ಲಿ ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಿ- ಸಿಎಂ ಸೂಚನೆ

    ಮಂಗಳೂರು: ಕೊರೊನಾ ಸೋಂಕು ನಿರ್ವಹಣೆಯಲ್ಲಿ ಜಿಲ್ಲಾಡಳಿತ ಕೈಗೊಂಡ ಉಪಯುಕ್ತ ಕ್ರಮಗಳಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆ.ವಿ ಅವರನ್ನು ಅಭಿನಂದಿಸಿದರು.

    ಕೋವಿಡ್‍ಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಅತ್ಯಂತ ಅಗತ್ಯವಿರುವ ಪ್ರಾಣವಾಯು ವೈದ್ಯಕೀಯ ಆಮ್ಲಜನಕದ 17 ಘಟಕಗಳು ಜಿಲ್ಲೆಯಲ್ಲಿ ಅನುಷ್ಠಾನವಾಗುತ್ತಿದ್ದು, ಅವುಗಳಲ್ಲಿ ಈಗಾಗಲೇ 8 ಆಮ್ಲಜನಕ ಘಟಕಗಳ ಅನುಷ್ಠಾನ ಕಾರ್ಯ ಪೂರ್ಣಗೊಂಡಿದೆ. ಉಳಿದ ಘಟಕಗಳನ್ನು ಮುಂದಿನ 2 ವಾರಗಳಲ್ಲಿ ಪೂರ್ತಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಯವರಿಂದ ಮಾಹಿತಿ ಪಡೆದ ಮುಖ್ಯಮಂತ್ರಿಗಳು ಡಿಸಿ ಡಾ.ರಾಜೇಂದ್ರ ಅವರ ಕೆಲಸಕ್ಕೆ ಅತೀವ ಶ್ಲಾಘನೆ ವ್ಯಕ್ತಪಡಿಸಿದರು.

    ಕೊರೊನಾ ನಿರ್ವಹಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯದ್ದು ಸವಾಲಿನ ಕೆಲಸವೇ ಆಗಿದೆ. ನೆರೆಯ ಕೇರಳದಲ್ಲಿ ಇದೀಗ ಕೋವಿಡ್ ಸೋಂಕಿನ ಪ್ರಕರಣಗಳೂ ವ್ಯಾಪಕವಾಗಿವೆ. ಅಲ್ಲಿಂದ ಪ್ರತಿನಿತ್ಯ ಹಲವು ಕಾರ್ಯಗಳಿಗೆ ರಸ್ತೆಯ ಮೂಲಕ ಜಿಲ್ಲೆಗೆ ಬರುವವರ ಸಂಖ್ಯೆ ಹೆಚ್ಚು. ಆದ ಕಾರಣ ಸೋಂಕು ನಿಯಂತ್ರಿಸಲು ಮುಂಬರುವ 15 ದಿನಗಳ ಕಾಲ ಕಠಿಣಾತಿ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಿದ ಮುಖ್ಯಮಂತ್ರಿಗಳು, ಜಿಲ್ಲೆಯ ಗಡಿ ಭಾಗಗಳಲ್ಲಿ ತೆರೆಯಾಗಿರುವ ಚೆಕ್‍ಪೋಸ್ಟ್‍ಗಳಲ್ಲಿ ತಪಾಸಣೆಯನ್ನು ಮತ್ತಷ್ಟು ತೀವ್ರಗೊಳಿಸಬೇಕು. ಅದಕ್ಕಾಗಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸುವಂತೆ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರಿಗೆ ನಿರ್ದೇಶನ ನೀಡಿದರು.

    ಗಡಿ ದಾಟುವ ಪ್ರತಿಯೊಬ್ಬರಲ್ಲಿಯೂ ನೆಗೆಟಿವ್ ವರದಿ ಇರಬೇಕು. ಎರಡು ಡೋಸ್ ಕೋವಿಡ್ ವ್ಯಾಕ್ಸಿನ್ ಪಡೆದಿರಬೇಕು ಹಾಗೂ ಅವರ ಸಂಪರ್ಕವನ್ನು ಪತ್ತೆ ಹಚ್ಚಬೇಕು. ಪ್ರತಿನಿತ್ಯ ಕೆಲಸ ಕಾರ್ಯಗಳಿಗಾಗಿ ಆಗಮಿಸುವವರಿಗೆ ಪ್ರತಿ 7 ದಿನಕ್ಕೊಮ್ಮೆ ಕಡ್ಡಾಯವಾಗಿ ಕೋವಿಡ್ ತಪಾಸಣಾ ಫಲಿತಾಂಶವನ್ನು ಪರಿಶೀಲಿಸಬೇಕು. ಪ್ರಮುಖವಾಗಿ ರೈಲು ನಿಲ್ದಾಣಗಳಲ್ಲಿ ಹೆಚ್ಚಿನ ತಪಾಸಣೆ ಮಾಡಬೇಕು. ಅಲ್ಲಿ ರಾಪಿಡ್ ಟೆಸ್ಟ್ ಮಾಡಬೇಕು, ಹೆಚ್ಚು ಜನರು ರೈಲಿನ ಮೂಲಕ ಬರುವ ಕಾರಣ ಅಲ್ಲಿ ಕೋವಿಡ್ ಟೆಸ್ಟ್ ಮಾಡುವ ಕೌಂಟರುಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಕೋವಿಡ್ ನಿಯಂತ್ರಿಸುವ ಸಲುವಾಗಿ ಜಿಲ್ಲೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದಿದದ್ರೇ ದಂಡ ವಿಧಿಸಬೇಕು. ಮಾಸ್ಕ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಗಡಿ ಭಾಗದ ತಪಾಸಣೆಗೆ ಪ್ರವಾಸ ಕೈಗೊಂಡು ಸ್ಥಿತಿ-ಗತಿಗಳನ್ನು ಅವಲೋಕಿಸುವುದಾಗಿಯೂ ಅವರು ಹೇಳಿದರು.

    ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿರುವ ವೀಡಿಯೋ ಕಾನ್ಫರೆನ್ಸ್ ಹಾಲ್‍ನಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮುಂಬರುವ ಒಂದು ವಾರ ಕೇರಳ ರಾಜ್ಯದ ಕಾಸರಗೋಡಿಗೆ ಸರ್ಕಾರಿ ಹಾಗೂ ಖಾಸಗಿ ಬಸ್‍ಗಳ ಸಂಚಾರವನ್ನು ನಿಷೇಧಿಸಲಾಗುತ್ತದೆ. ಅಲ್ಲಿಂದ ಬಂದಂತಹ ವಿದ್ಯಾರ್ಥಿಗಳನ್ನು ಒಂದು ವಾರ ಕ್ವಾರಂಟೈನ್ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಗಡಿ ಭಾಗದಲ್ಲಿ 12 ಕಡೆ ಚೆಕ್‍ಪೋಸ್ಟ್ ರಚಿಸಲಾಗಿದೆ. ಅದರಲ್ಲಿ 6 ರಸ್ತೆ ಹಾಗೂ 6 ರೈಲ್ವೇ ಸ್ಟೇಷನ್‍ಗಳಲ್ಲಿ, ಅವುಗಳಲ್ಲಿ ತಲಪಾಡಿ ಚೆಕ್‍ಪೋಸ್ಟ್ ಅತಿ ಮುಖ್ಯವಾದದ್ದಾಗಿದೆ. ಅಲ್ಲಿ 24*7 ಕಾಲ ತಪಾಸಣೆ ಮಾಡಲಾಗುತ್ತಿದೆ. ವೈದ್ಯಕೀಯ ತುರ್ತು ಸೇವೆಗೆ ಹೊರತು ಪಡಿಸಿ ಇತರೆ ಸಂಚಾರವನ್ನು ನಿಷೇಧಿಸಲಾಗುತ್ತಿದೆ ಎಂದರು.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ಸಹಾಯಕ ಆಯುಕ್ತ ಮದನ್ ಮೋಹನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಹಾಗೂ ಸಂಬಂಧಿಸಿದ ಅಧಿಕಾರಿಗಳು ವೀಡಿಯೋ ಕಾನ್ಫರೆನ್ಸ್‍ನಲ್ಲಿದ್ದರು.

  • ಉತ್ತರ ಕನ್ನಡದಲ್ಲಿ ಪ್ರವಾಹ ಇಳಿಮುಖ, 81 ಗ್ರಾಮಗಳು ಪ್ರವಾಹದಿಂದ ಬಾಧಿತ: ಡಿಸಿ

    ಉತ್ತರ ಕನ್ನಡದಲ್ಲಿ ಪ್ರವಾಹ ಇಳಿಮುಖ, 81 ಗ್ರಾಮಗಳು ಪ್ರವಾಹದಿಂದ ಬಾಧಿತ: ಡಿಸಿ

    – 4 ಜನ ಸಾವು, 3 ಜನ ನಾಪತ್ತೆ
    – 200 ಮನೆಗಳು ಸಂಪೂರ್ಣ ಹಾನಿ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹದ ಮಟ್ಟ ಕಡಿಮೆ ಆಗಿದ್ದು, ಪರಿಹಾರ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ತಿಳಿಸಿದ್ದಾರೆ.

    ಈ ಕುರಿತು ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿ 81 ಗ್ರಾಮಗಳು ಪ್ರವಾಹದಿಂದ ಭಾದಿತವಾಗಿವೆ. 9,673 ಜನ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. 113 ಕಾಳಜಿ ಕೇಂದ್ರ ತೆರೆಯಲಾಗಿದೆ. 12 ಸಾವಿರಕ್ಕೂ ಹೆಚ್ಚು ಜನ ಪ್ರವಾಹದಿಂದ ಭಾದಿತರಾದವರಾಗಿದ್ದು, 200 ಮನೆಗಳು ಸಂಪೂರ್ಣ ಹಾನಿಯಾಗಿವೆ. ಈ ವರೆಗೆ ಪ್ರವಾಹದಿಂದ 4 ಜನ ಸಾವನ್ನಪ್ಪಿದ್ದು, 3 ಜನ ಕಾಣೆಯಾಗಿದ್ದಾರೆ ಎಂದು ತಿಳಿಸಿದರು.

    ಸಚಿವ ಹೆಬ್ಬಾರ್ ಭೇಟಿ
    ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಯಲ್ಲಾಪುರ ಹಾಗೂ ಅಂಕೋಲ ಭಾಗದ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರವಾಹ ಪೀಡಿತ ಪ್ರದೇಶವಾದ ಮಂಜುಗುಣಿ, ಹಿಚ್ಕಡ್, ಶಿರೂರಿಗೆ ಭೇಟಿ ನೀಡಿ ನಂತರ ಇಲ್ಲಿನ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

    ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರವಾಹದಲ್ಲಿ ಮೃತರಾದವರಿಗೆ ತಲಾ ಐದು ಲಕ್ಷ ರೂ. ಪರಿಹಾರ ನೀಡಲಾಗಿದ್ದು, ಒಬ್ಬರಿಗೆ ಮಾತ್ರ ಪರಿಹಾರ ನೀಡಬೇಕಿದೆ. ಶೀಘ್ರದಲ್ಲಿ ಅದನ್ನು ನೀಡಲಾಗುತ್ತದೆ. ಮಳೆ ಇರುವುದರಿಂದ ಮನೆ, ಬೆಳೆ ಪರಿಹಾರದ ಸರ್ವೇ ಮಾಡಲು ತೊಡಕಾಗಿದೆ. ಶೀಘ್ರದಲ್ಲಿ ಸರ್ವೇ ಮಾಡಿ ಮನೆ ಹಾನಿ ಹಾಗೂ ಬೆಳೆ ಹಾನಿ ಗೆ ಪರಿಹಾರ ನೀಡಲಾಗುತ್ತದೆ. ನಾಳೆ ಜಿಲ್ಲೆಗೆ ಸರ್ಕಾರದ ವಿಶೇಷ ಅಧಿಕಾರಿಗಳ ತಂಡ ಬರಲಿದ್ದು, ಪರಿಶೀಲನೆ ಮಾಡುತ್ತಾರೆ ಎಂದರು.

  • ಚಾರ್ಮಾಡಿ ಘಾಟಿಯಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಸಂಚಾರ ಬಂದ್

    ಚಾರ್ಮಾಡಿ ಘಾಟಿಯಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಸಂಚಾರ ಬಂದ್

    ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟಿಯಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ.

    ಮಳೆಗಾಲ ಪ್ರಾರಂಭವಾದ ಬಳಿಕ ಚಾರ್ಮಾಡಿ ಘಾಟಿಯಲ್ಲಿ ಅಲ್ಲಲ್ಲಿ ಭೂಕುಸಿತ ಮತ್ತು ಮರಗಳು ಧರೆಗುರುಳುವ ಸಾಧ್ಯತೆಗಳಿದ್ದು, ಸದಾ ಇಬ್ಬನಿ ಕವಿದಿರುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗುವುದು ಸಹಜವಾಗಿದೆ. ಹಾಗಾಗಿ ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಎಲ್ಲಾ ರೀತಿಯ ವಾಹನ ಸಂಚಾರ ಬಂದ್ ಮಾಡುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಆದೇಶ ಹೊರಡಿಸಿದ್ದಾರೆ.

    ಶಿರಾಡಿ ಘಾಟ್ ಬಂದ್ ಹಿನ್ನೆಲೆ ಚಾರ್ಮಾಡಿ ಮಾರ್ಗವಾಗಿ ಸಂಚರಿಸುತ್ತಿರುವ ವಾಹನಗಳ ಸಂಖ್ಯೆ ಹೆಚ್ಚಳವಾಗಿದೆ. ಅದಲ್ಲದೆ ಘಣ ವಾಹನಗಳ ಓಡಾಟವು ಕೂಡ ಹೆಚ್ಚು ಕಂಡು ಬಂದಿದ್ದು, ಹಾಗಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ದಿನದ 24 ಗಂಟೆಯೂ ಬುಲೆಟ್ ಟ್ಯಾಂಕರ್, ಪಿಷ್ ಕಾರ್ಗೋ ಕಂಟೈನರ್ಸ್ ಸೇರಿದಂತೆ ಘಣವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಚಾರ್ಮಾಡಿಯಲ್ಲಿ ಎಲ್ಲೆಂದರಲ್ಲಿ ಪ್ರವಾಸಿಗರ ಡ್ಯಾನ್ಸ್- ವಾಹನ ಸವಾರರಿಗೆ ಕಿರಿಕಿರಿ

    ಸಾರ್ವಜನಿಕರು ಸಂಚರಿಸುವ ಕೆಎಸ್‍ಆರ್‍ ಟಿಸಿ ಕೆಂಪು ಬಸ್, ನಾಲ್ಕು ಚಕ್ರದ ವಾಹನಗಳು, ಕಾರು, ಜೀಪು, ದ್ವಿಚಕ್ರ ವಾಹನಗಳು ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ತುರ್ತು ವೈದ್ಯಕೀಯ ಆಂಬ್ಯುಲೆನ್ಸ್, ಆಕ್ಸಿಜನ್ ವಿತರಣಾ ವಾಹನಗಳ ಸಂಚಾರಕ್ಕೆ ಮಾತ್ರ 24 ಗಂಟೆಗಳ ಅವಕಾಶ ಕಲ್ಪಿಸಲಾಗಿದೆ. ಈ ಆದೇಶ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಡಿಸಿ ಆದೇಶ ಹೊರಡಿಸಿದ್ದಾರೆ.