Tag: DC

  • ಕೊಟ್ಟ ಮಾತು ಉಳಿಸಿಕೊಂಡ ಸಿಎಂ – ಶಿಗ್ಗಾಂವಿ ಅಜ್ಜಿ ಮನೆಗೆ ಡಿಸಿ ಭೇಟಿ, 3 ತಿಂಗಳಲ್ಲಿ ಮನೆ ಭರವಸೆ

    ಕೊಟ್ಟ ಮಾತು ಉಳಿಸಿಕೊಂಡ ಸಿಎಂ – ಶಿಗ್ಗಾಂವಿ ಅಜ್ಜಿ ಮನೆಗೆ ಡಿಸಿ ಭೇಟಿ, 3 ತಿಂಗಳಲ್ಲಿ ಮನೆ ಭರವಸೆ

    ಹಾವೇರಿ: ಪಬ್ಲಿಕ್ ಟಿವಿ ಸಂದರ್ಶನದ ವೇಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದಂತೆ ಇಂದು ಶಿಗ್ಗಾಂವಿಯ ಅಜ್ಜಿ ಮನೆಗೆ ಜಿಲ್ಲಾಧಿಕಾರಿ ಸಂಜಯ್ ಶೇಟ್ಟೆಣ್ಣವರ್ ಭೇಟಿ ನೀಡಿ 3 ತಿಂಗಳಲ್ಲಿ ಅಜ್ಜಿಗೆ ಮನೆ ಕಟ್ಟಿಸಿಕೊಡುವ ಭರವಸೆಯನ್ನು ನೀಡಿದ್ದಾರೆ.

    ಶುಕ್ರವಾರ ನಡೆದ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶಿಗ್ಗಾಂವಿಯ 70 ವರ್ಷದ ಅಜ್ಜಿ ಕಮಲಮ್ಮ ತಿಮ್ಮನಗೌಡರ ಅವರಿಗೆ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದರು. ಅಲ್ಲದೆ ಕಾರ್ಯಕ್ರಮದಲ್ಲೇ ಜಿಲ್ಲಾಧಿಕಾರಿ ಸಂಜಯ್ ಶೆಟ್ಟಣ್ಣವರ್ ಅವರನ್ನು ಸಂಪರ್ಕಿಸಿ ಸಿಎಸ್‍ಆರ್ ಫಂಡ್ ಅಡಿಯಲ್ಲಿ ಕಮಲಮ್ಮನವರಿಗೆ ಮನೆ ಕಟ್ಟಿಸಿಕೊಡುವ ವ್ಯವಸ್ಥೆ ಮಾಡಿ ಎಂದು ಸೂಚಿಸಿದ್ದರು. ಅದರಂತೆ ಇಂದು ಜಿಲ್ಲಾಧಿಕಾರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಮಂಚಿನಕೊಪ್ಪ ಗ್ರಾಮದ ಕಮಲಮ್ಮನವರ ಮನೆಗೆ ಭೇಟಿ ನೀಡಿ 3 ತಿಂಗಳಲ್ಲಿ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ಕಣ್ಣೀರಿಟ್ಟ ಸಿಎಂ ಬೊಮ್ಮಾಯಿ

    ಈ ಹಿಂದೆ ಸಿಎಂ ಭೇಟಿಯಾಗಲು ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಮಂಚಿನಕೊಪ್ಪ ಗ್ರಾಮದ ವಯೋವೃದ್ಧೆ ಕಮಲಮ್ಮನವರು ಹೂಗುಚ್ಚ ಹಿಡಿದು ಪರದಾಡಿದ್ದರು. ಆದರೆ ಶುಕ್ರವಾರ ಮುಖ್ಯಮಂತ್ರಿಯವರು ಪಬ್ಲಿಕ್ ಟಿವಿ ಕಾರ್ಯಕ್ರಮದಲ್ಲಿ ಅಜ್ಜಿಗೆ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದರು. ಇಂದು ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣವರ್, ಸಿಇಓ ಮಹಮ್ಮದ್ ರೋಷನ್ ಹಾಗೂ ಎಸಿ ಅನ್ನಪೂರ್ಣ ಮುದಕಮ್ಮನವರ ಭೇಟಿ ನೀಡಿ ಕಮಲಮ್ಮನವರ ಸಮಸ್ಯೆ ಆಲಿಸಿ, ಮನೆ ಕಟ್ಟಿಸಿಕೊಡುವ ಭರವಸೆ ನೀಡಿದರು. ಹ್ಯಾಬಿಟೈಟ್ ಕಂಪನಿಯ ಮೂಲಕ ಅಜ್ಜಿಗೆ ಹೊಸ ಮನೆ ನಿರ್ಮಾಣ ಮಾಡಲು ಸೂಚನೆ ನೀಡಲಾಗಿದೆ. ಎರಡ್ಮೂರು ತಿಂಗಳಲ್ಲಿನಲ್ಲಿ ಮನೆ ನಿರ್ಮಾಣ ಭರವಸೆಯನ್ನು ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣವರ್ ನೀಡಿದ್ದಾರೆ.

    ಮಕ್ಕಳು ತೀರಿಕೊಂಡರೂ ನಿಮ್ಮ ಇನ್ನೊಬ್ಬ ಮಗ ನಾನಿದ್ದೇನೆ. ನಾನು ನಿಮಗೆ ಮನೆ ಕಟ್ಟಿಸಿಕೊಡುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದರು. ಅದರಂತೆ ಇಂದು ಜಿಲ್ಲಾಧಿಕಾರಿಗಳು ಆಗಮಿಸಿ, ಮನೆ ಕಟ್ಟಿಸಿಕೊಡುತ್ತೇನೆಂದು ಭರವಸೆ ನೀಡಿದ್ದಾರೆ. ನನಗೆ ನಾಲ್ಕು ಮೊಮ್ಮಕ್ಕಳು ಇದ್ದಾರೆ. ಅವರ ಜವಾಬ್ದಾರಿ ನನ್ನ ಮೇಲಿದೆ. ಮನೆ ಕಟ್ಟಿಸಿಕೊಡುತ್ತಿರುವುದಕ್ಕೆ ಸಿಎಂಗೆ ಒಳ್ಳೆಯದಾಗಲಿ. ನಾನು ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಕಮಲಮ್ಮ ಭಾವುಕರಾದರು.

    ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣನವರ್, ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಸಿಎಂ ಅವರು ಕಮಲಮ್ಮ ಅವರ ಸಮಸ್ಯೆ ಬಗ್ಗೆ ಪರಿಶೀಲನೆ ಮಾಡಲು ಸೂಚಿಸಿದ್ದರು. ಇಂದು ಎಲ್ಲವೂ ಪರಿಶೀಲನೆ ನಡೆಸಿದ್ದೇವೆ. ಒಂದು ತಿಂಗಳಿನಲ್ಲಿ ಹೊಸ ಮನೆ ನಿರ್ಮಾಣ ಮಾಡಿ ಕೊಡುತ್ತೇವೆ. ಈಗಿನ ಮನೆ ಸಂಪೂರ್ಣ ದುರಸ್ಥಿಯಲ್ಲಿದೆ. ಹೀಗಾಗಿ, ಮನೆ ಬೀಳಿಸಿ, ಹೊಸ ಮನೆ ನಿರ್ಮಿಸುತ್ತೇವೆ. ಒಂದು ತಿಂಗಳ ಮಟ್ಟಿಗೆ ಬೇರೆ ವ್ಯವಸ್ಥೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

  • ಕುಕ್ಕೆ, ಧರ್ಮಸ್ಥಳದಲ್ಲಿ ತೀರ್ಥ, ಪ್ರಸಾದ, ಅನ್ನ ಸಂತರ್ಪಣೆ ಆರಂಭ

    ಕುಕ್ಕೆ, ಧರ್ಮಸ್ಥಳದಲ್ಲಿ ತೀರ್ಥ, ಪ್ರಸಾದ, ಅನ್ನ ಸಂತರ್ಪಣೆ ಆರಂಭ

    – ದಕ್ಷಿಣ ಕನ್ನಡದ ಪ್ರಮುಖ ದೇವಸ್ಥಾನಗಳ ದರ್ಶನಕ್ಕೆ ಪರಿಷ್ಕೃತ ಆದೇಶ
    – ಯಾವುದೇ ಸೇವೆಗಳಿಗೆ ಅವಕಾಶವಿಲ್ಲ

    ಮಂಗಳೂರು: ಕೊರೊನಾ ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಈ ಹಿಂದೆ ವಿಧಿಸಲಾಗಿದ್ದ ಕೆಲವು ನಿರ್ಬಂಧ, ಮಾರ್ಗಸೂಚಿಗಳನ್ನು ಹಿಂಪಡೆದು ಜಿಲ್ಲಾಡಳಿತ ಹೊಸ ಆದೇಶ ಹೊರಡಿಸಿದೆ.

    ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳು ಭಕ್ತಾದಿಗಳಿಗೆ ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಮಾತ್ರ ತೆರೆದಿರುತ್ತವೆ. ಈ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ, ಅಗತ್ಯ ಕೋವಿಡ್ ನಿಯಂತ್ರಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಭಕ್ತಾದಿಗಳು ದೇವರ ದರ್ಶನ, ತೀರ್ಥ, ಪ್ರಸಾದ, ಅನ್ನಸಂತರ್ಪಣೆಯಲ್ಲಿ ಪಾಲ್ಗೊಳ್ಳಬಹುದು. ಮುಂದಿನ ಆದೇಶದವರೆಗೆ ಅವಕಾಶ ನೀಡಲಾಗಿದ್ದು, ಯಾವುದೇ ಸೇವೆಗಳಿಗೆ ಅವಕಾಶ ನೀಡಿಲ್ಲ. ಇದನ್ನೂ ಓದಿ: ಇನ್ನೂ ಮುಗಿದಿಲ್ಲ ಗೊಂದಲ: ‘ಲಾಟರಿ’ ಮೂಲಕ ಗಣೇಶೋತ್ಸವಕ್ಕೆ ಅನುಮತಿ

    ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ಭಕ್ತಾದಿಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ವಸತಿ ಗೃಹಗಳಲ್ಲಿ ತಂಗುವುದಾಗಲೀ ಅಥವಾ ದೇವರ ದರ್ಶನಕ್ಕೆ ಅವಕಾಶವಿಲ್ಲ. ಶನಿವಾರ ಮತ್ತು ಭಾನುವಾರಗಳಂದು ಎಲ್ಲ ರೀತಿಯ ಉತ್ಸವ, ಸೇವೆಗಳು, ತೀರ್ಥ, ಪ್ರಸಾದ, ಮುಡಿ ಸೇವೆ, ವಸತಿಗಳನ್ನು ನಿರ್ಬಂಧಿಸಿ ಅರ್ಚಕರುಗಳಿಂದ ಸಾಂಪ್ರದಾಯಿಕ ಪೂಜೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

    ಜಾತ್ರೆಗಳು, ದೇವಾಲಯದ ಉತ್ಸವಗಳು, ಮೆರವಣಿಗೆಗಳು ಇತ್ಯಾದಿಗಳನ್ನು ನಿಷೇಧಿಸಿದೆ. ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005ರ ಕಲಂ 51 ರಿಂದ 60 ರನ್ವಯ, ಐಪಿಸಿ ಕಲಂ 188 ರಂತೆ ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020ರ ಕಲಂ 4, 5 ಮತ್ತು 10 ರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಆದೇಶ ಹೊರಡಿಸಿದ್ದಾರೆ.

  • ರಾತ್ರೋ ರಾತ್ರಿ ಡಿಸಿ ಭೇಟಿಯಾದ ಸೋತ MES ಅಭ್ಯರ್ಥಿಗಳು

    ರಾತ್ರೋ ರಾತ್ರಿ ಡಿಸಿ ಭೇಟಿಯಾದ ಸೋತ MES ಅಭ್ಯರ್ಥಿಗಳು

    ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಎಂಇಎಸ್ ಮತ್ತೊಮ್ಮೆ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದೆ.

    ಬೆಳಗಾವಿ ಪಾಲಿಕೆ ಇತಿಹಾಸದಲ್ಲಿಯೇ ಎಂಇಎಸ್ ತೀರಾ ಹೀನಾಯ ಸೋಲು ಕಂಡಿದೆ. ಹೀಗಾಗಿ ವಿವಿ ಪ್ಯಾಟ್ ಬಳಸದೇ ಚುನಾವಣೆಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ 40ಕ್ಕೂ ಹೆಚ್ಚು ಸೋತ ಎಂಇಎಸ್ ಅಭ್ಯರ್ಥಿಗಳು ರಾತ್ರೋ ರಾತ್ರಿ ಡಿಸಿ ಮಹಾಂತೇಶ ಹಿರೇಮಠ ಅವರ ನಿವಾಸಕ್ಕೆ ತೆರಳಿ ಮರು ಚುನಾವಣೆ ನಡೆಸುವಂತೆ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಬಿಜೆಪಿಯಿಂದ ಇತಿಹಾಸ ಸೃಷ್ಟಿ

    ಮನವಿ ಪತ್ರದಲ್ಲಿ ಕೆಲ ಕನ್ನಡ, ಉರ್ದು ಸೋತ ಅಭ್ಯರ್ಥಿಗಳು ಸಹಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೀನಾಯ ಸೋಲಿನಿಂದಾಗಿ ಕಂಗೆಟ್ಟಿರುವ ಎಂಇಎಸ್ ಅಭ್ಯರ್ಥಿಗಳು ರಾತ್ರಿಯೇ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ್ದಾರೆ.

    ಬಿಜೆಪಿ ಭರ್ಜರಿ ಗೆಲುವು
    ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಸೋಮವಾರ ಹೊರಬಿದ್ದಿದೆ. ಬಿಜೆಪಿ ಮೊದಲ ಬಾರಿಗೆ ಭರ್ಜರಿ ಗೆಲುವು ಸಾಧಿಸಿದೆ.ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 36 ವಾರ್ಡ್ ಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದು, ಮೊದಲ ಬಾರಿಗೆ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಂತಾಗಿದೆ. ಈ ಮೂಲಕ ಎಂಇಎಸ್ ಪುಂಡಾಟಕ್ಕೆ ಸಂಪೂರ್ಣ ಕಡಿವಾಣ ಬಿದ್ದಂತಾಗಿದೆ.

    ಬಿಜೆಪಿ 36, ಕಾಂಗ್ರೆಸ್ 10, ಎಂಇಎಸ್ 2, ಪಕ್ಷೇತರ 10 ಹಾಗೂ ಎಐಎಂಐಎಂ 1 ವಾರ್ಡ್ ನಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ಅಭ್ಯರ್ಥಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಬಿಜೆಪಿ ವಿಜಯೋತ್ಸವದ ವೇಳೆ ನೂಕು ನುಗ್ಗಲು ಹೆಚ್ಚಾಗಿದ್ದು, ಪೊಲೀಸರು ಲಾಠಿ ಚಾರ್ಜ್ ಸಹ ಮಾಡಿದ್ದರು.

  • ವಿಪ್ ಉಲ್ಲಂಘನೆ –   ಚಾಮರಾಜನಗರದ 7 ನಗರಸಭಾ ಸದಸ್ಯರು ಅನರ್ಹ

    ವಿಪ್ ಉಲ್ಲಂಘನೆ – ಚಾಮರಾಜನಗರದ 7 ನಗರಸಭಾ ಸದಸ್ಯರು ಅನರ್ಹ

    ಚಾಮರಾಜನಗರ: ಬಿಎಸ್‍ಪಿ ಪಕ್ಷದ ವಿಪ್ ಉಲ್ಲಂಘಿಸಿ ಬಿಜೆಪಿಯೊಂದಿಗೆ ಬಹಿರಂಗವಾಗಿ ಗುರುತಿಸಿಕೊಂಡು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮತ ಚಲಾಯಿಸಿದ ಕಾರಣ ಕೊಳ್ಳೇಗಾಲ ನಗರಸಭೆಯ 7 ಮಂದಿ ಬಿಎಸ್‍ಪಿ ಸದಸ್ಯರ ಸದಸ್ಯತ್ವವನ್ನು ಜಿಲ್ಲಾಧಿಕಾರಿಗಳ ನ್ಯಾಯಾಲಯ ರದ್ದುಗೊಳಿಸಿದೆ.

    ಕೊಳ್ಳೇಗಾಲ ನಗರಸಭೆಯ ಅಧ್ಯಕ್ಷೆ ಗಂಗಮ್ಮ, ಸದಸ್ಯರಾದ ಎಲ್. ನಾಗಮಣಿ, ನಾಸೀರ್ ಷರೀಫ್, ಎನ್. ಪವಿತ್ರಾ, ಪ್ರಕಾಶ್, ಎನ್. ರಾಮಕೃಷ್ಣ, ನಾಗಸುಂದ್ರಮ್ಮ ಅವರ ಸದಸ್ಯತ್ವವನ್ನು ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿನಿಯಮ 1987ರ ಸೆಕ್ಷನ್ 4ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ರದ್ದುಗೊಳಿಸಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಆದೇಶ ಹೊರಡಿಸಿದ್ದಾರೆ.

    ಬಿಎಸ್‍ಪಿಯ ನಗರಸಭಾ ಸದಸ್ಯರಾದ ಈ ಏಳು ಮಂದಿ ತಮ್ಮ ಪಕ್ಷದ ಅಧ್ಯಕ್ಷರು ನೀಡಿದ ನಿರ್ದೇಶನಕ್ಕೆ ವಿರುದ್ಧವಾಗಿ ಮತ ಚಲಾಯಿಸಿರುವುದು ಸಾಬೀತಾಗಿದೆ. 2020 ರ ಅಕ್ಟೋಬರ್ 29ರಂದು ಕೊಳ್ಳೇಗಾಲ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡಲು ನಡೆದ ಸಭೆಯಲ್ಲಿ ಪಕ್ಷದ ವಿಪ್ ಆದೇಶದ ವಿರುದ್ಧ ಮತ ಚಲಾಯಿಸಿದ್ದಾರೆ. ಸಭೆ ನಡೆದ 15 ದಿನಗಳ ಒಳಗೆ ಬಿಎಸ್‍ಪಿ ಈ ಸದಸ್ಯರನ್ನು ಮನ್ನಿಸದ ಕಾರಣ ಪಕ್ಷಾಂತರದ ಆಧಾರದ ಮೇಲೆ ಅನರ್ಹತೆಗೆ ಕಾರಣರಾಗಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.  ಇದನ್ನೂ ಓದಿ: ಒಗ್ಗಟ್ಟು ಇಲ್ಲದೆ 3 ಪಾಲಿಕೆಯಲ್ಲಿ ಸೋಲು – ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್‍ಗೆ ಡಿಕೆಶಿ ಚಾರ್ಜ್‍ಶೀಟ್

    ಪ್ರಕರಣದ ಹಿನ್ನೆಲೆ: ಕೊಳ್ಳೇಗಾಲ ನಗರಸಭೆಯು ಒಟ್ಟು 31 ಸದಸ್ಯರನ್ನು ಹೊಂದಿದೆ. ಕಳೆದ ಬಾರಿ ನಡೆದ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ 11, ಬಿಜೆಪಿಯಿಂದ 7, ಬಿಎಸ್‍ಪಿಯಿಂದ 9 ಹಾಗೂ ಪಕ್ಷೇತರರಾಗಿ 4 ಮಂದಿ ಗೆದ್ದಿದ್ದರು. ಇದನ್ನೂ ಓದಿ: ಬೇಬಿ ಹಾಡಿಗೆ ಹೆಜ್ಜೆ ಹಾಕಿದ ಯಥರ್ವ್, ಐರಾ- ವೀಡಿಯೋ ನೋಡಿ

    2020 ಅಕ್ಟೋಬರ್ 29ರಂದು ನಗರಸಭಾ ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ಬಿಎಸ್‍ಪಿಯ ಗಂಗಮ್ಮ, ಉಪಾಧ್ಯಕ್ಷರಾಗಿ ಬಿಜೆಪಿಯ ಕವಿತಾ 17 ಮತಗಳನ್ನು ಪಡೆದು ಆಯ್ಕೆಯಾದರು. ಈ ಚುನಾವಣೆಯಲ್ಲಿ ಬಿಎಸ್‍ಪಿಯಿಂದ ಗೆದ್ದಿದ್ದ 9 ಸದಸ್ಯರ ಪೈಕಿ 7 ಮಂದಿ ಸದಸ್ಯರು ಬಿಜೆಪಿ ಜೊತೆ ಕೈಜೋಡಿಸಿದ್ದರು. ಬಿಎಸ್‍ಪಿಯ 9 ಸದಸ್ಯರಿಗೂ ತಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವಂತೆ ವಿಪ್ ಜಾರಿ ಮಾಡಲಾಗಿತ್ತು. ಆದರೂ 7 ಮಂದಿ ಸದಸ್ಯರು ವಿಪ್ ಉಲ್ಲಂಘಿಸಿ ಮತ ಚಲಾಯಿಸಿದ್ದರು.

    ಅಧ್ಯಕ್ಷ ಸ್ಥಾನಕ್ಕೆ ಬಿಎಸ್‍ಪಿಯಿಂದ ಜಯಮರಿ, ಕಾಂಗ್ರೆಸ್‍ನಿಂದ ಪುಷ್ಪಲತಾ ಸ್ಪರ್ಧಿಸಿ ಸೋತಿದ್ದರು. ಜಯಮರಿ ಅವರಿಗೆ ಎರಡು ಮತಗಳು (ಜಯಮರಿ ಹಾಗೂ ಜಯಂತ್) ಬಂದಿದ್ದವು. 2020ರ ಡಿಸೆಂಬರ್ 1ರಂದು ಬಿಎಸ್‍ಪಿ ಸದಸ್ಯೆ ಜಯಮರಿ ಅವರು ಬಿಎಸ್‍ಪಿ ಸದಸ್ಯರು ಪಕ್ಷ ನೀಡಿದ ವಿಪ್ ಆದೇಶದ ನಿರ್ದೇಶನಗಳನ್ನು ಉಲ್ಲಂಸಿರುವ ಬಗ್ಗೆ ನಗರಸಭೆ ಪೌರಾಯುಕ್ತರಿಗೆ ಪಕ್ಷಾಂತರ ನಿಷೇಧ ಅಧಿನಿಯಮದ ಅಡಿಯಲ್ಲಿ ದೂರು ಸಲ್ಲಿಸಿದ್ದರು. ಈ ದೂರನ್ನು ನಗರಸಭೆ ಪೌರಾಯುಕ್ತರು ಡಿ.2ರಂದು ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ರವಾನಿಸಿದ್ದರು. ಜಿಲ್ಲಾಧಿಕಾರಿಗಳ ನ್ಯಾಯಾಲಯ ವಾದಿ ಪ್ರತಿವಾದಿಗಳಿಗೆ ನೋಟೀಸ್ ಜಾರಿ ಮಾಡಿ ಪ್ರಕರಣದ ವಿಚಾರಣೆ ನಡೆಸಿತು.

  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈಟ್, ವೀಕೆಂಡ್ ಕರ್ಫ್ಯೂ ಹೊಸ ಮಾರ್ಗಸೂಚಿಗಳು ಪ್ರಕಟ

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈಟ್, ವೀಕೆಂಡ್ ಕರ್ಫ್ಯೂ ಹೊಸ ಮಾರ್ಗಸೂಚಿಗಳು ಪ್ರಕಟ

    ಮಂಗಳೂರು: ಸರ್ಕಾರದ ಆದೇಶ ಹಾಗೂ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆ ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಕೆಲವು ನಿರ್ಬಂಧಗಳನ್ನು ಜಾರಿ ಮಾಡಿದ್ದಾರೆ.

    ಮುಂದಿನ ಆದೇಶದವರೆಗೆ ಜಿಲ್ಲೆಯಾದ್ಯಂತ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿದ್ದು, ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವಂತೆ ಚಾಲ್ತಿಯಲ್ಲಿರುವ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿ ಪರೀಕ್ಷೆಗಳಿಗೆ ಹಾಜರಾಗಲು ಅನುಮತಿ ನೀಡಲಾಗಿದೆ. ಪರೀಕ್ಷಾ ಪ್ರವೇಶ ಪತ್ರವನ್ನು ಅಧಿಕೃತವಾಗಿ ವಿದ್ಯಾರ್ಥಿಗಳ ಪ್ರಯಾಣಕ್ಕೆ ಪಾಸ್ ಎಂದು ಪರಿಗಣಿಸುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಸ್ವಸಹಾಯ ಗುಂಪುಗಳಿಗೆ 600 ಕೋಟಿ ರೂ. ಸಮುದಾಯ ನಿಧಿ

    ವಾರಾಂತ್ಯ ಕರ್ಫ್ಯೂ ಅವಧಿಯಲ್ಲಿ ಹಾಲು ಒಕ್ಕೂಟದ ನಂದಿನಿ ಹಾಲು ಮಾರಾಟ ಮಳಿಗೆಗಳಿಗೆ ಮಾತ್ರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ, ವಿವಾಹ ಅಥವಾ ಕೌಟುಂಬಿಕ ಕಾರ್ಯಗಳನ್ನು ಗರಿಷ್ಟ 50 ಜನರ ಪರಿಮಿತಿಗೊಳಪಟ್ಟು ಸ್ಥಳೀಯ ಆಡಳಿತದ ಪ್ರಾಧಿಕಾರಗಳಿಂದ ಪೂರ್ವಾನುಮತಿಯೊಂದಿಗೆ ಆಯೋಜಿಸಲು ಅನುಮತಿಸಿದೆ. ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಂದಾಯ ಅಧಿಕಾರಿಗಳು ಸಮಾರಂಭಕ್ಕೆ ಭೇಟಿ ನೀಡಿ ಕೋವಿಡ್ ನಿಯಮಾವಳಿ ಉಲ್ಲಂಘನೆ ಆಗದಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಆದೇಶಿಸಲಾಗಿದೆ. ಕೇರಳ ರಾಜ್ಯದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ವಿದ್ಯಾಭ್ಯಾಸಕ್ಕಾಗಿ ಆಗಮಿಸುವ ಎಲ್ಲಾ ವಿದ್ಯಾರ್ಥಿಗಳ 72 ಗಂಟೆಗಳಿಗಿಂತ ಮುಂಚಿತವಾಗಿ ಆರ್ ಟಿಪಿಸಿಆರ್ ನೆಗೆಟಿವ್ ವರದಿಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಲು ಅವಕಾಶವಿರುತ್ತದೆ. ಈ ಮಾರ್ಗಸೂಚಿಯು ಕೇರಳದಿಂದ ಜಿಲ್ಲೆಗೆ ಉದ್ಯೋಗದ ಸಲುವಾಗಿ ಅಥವಾ ಭೇಟಿ ಕಾರಣಕ್ಕಾಗಿ ಆಗಮಿಸುವ ಪ್ರತಿಯೊಬ್ಬರಿಗೆ ಅನ್ವಯವಾಗಲಿದೆ, ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶ ಸಂದರ್ಭದಲ್ಲಿ ಕಡ್ಡಾಯವಾಗಿ ಆರ್‍ ಟಿಪಿಸಿಆರ್ ನೆಗೆಟಿವ್ ವರದಿಯನ್ನು ಹಾಜರುಪಡಿಸತಕ್ಕದ್ದು ಹಾಗೂ ತಮ್ಮ ಸಿಬ್ಬಂದಿ ಆರ್‍ ಟಿಪಿಸಿಆರ್ ನೆಗೆಟಿವ್ ವರದಿಯನ್ನು ಹೊಂದಿರುವುದನ್ನು ಖಾತ್ರಿಪಡಿಸಿಕೊಳ್ಳುವ ಜವಬ್ದಾರಿಯು ಆಯಾ ಸಂಸ್ಥೆಗೆ ಸೇರಿರುತ್ತದೆ. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

    ರಾತ್ರಿ ಕರ್ಫ್ಯೂ ಮಾರ್ಗಸೂಚಿಗಳು
    ಸಾರ್ವಜನಿಕರ ಸಂಚಾರವನ್ನು ಆ.31ರಿಂದ ಜಾರಿಯಾಗುವಂತೆ ಮುಂದಿನ ಆದೇಶದ ವರೆಗೆ ಪ್ರತಿ ದಿನ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಅತ್ಯಾವಶ್ಯಕ ಹಾಗೂ ತುರ್ತು ಸಂದರ್ಭಗಳನ್ನು ಹೊರತು ಪಡಿಸಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ತುರ್ತು ಚಿಕಿತ್ಸೆಗಾಗಿ ಸಂಚರಿಸಬೇಕಾದ ಅಗತ್ಯವಿರುವ ರೋಗಿಗಳು ಮತ್ತು ಅವರ ಪರಿಚಾರಕರು ಅಥವಾ ವ್ಯಕ್ತಿಗಳಿಗೆ ಸಂಚರಿಸಲು ಅನುಮತಿ ಇದೆ. ರಾತ್ರಿ ವೇಳೆಯಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿರುವಂತಹ ಎಲ್ಲಾ ಕೈಗಾರಿಕೆಗಳು ಅಥವಾ ಕಂಪನಿಗಳಿಗೆ ಕಾರ್ಯನಿರ್ವಹಿಸಲು ಅನುಮತಿ ಇರುತ್ತದೆ. ಅಂತಹ ಸಂಸ್ಥೆಗಳ ನೌಕರರ ಸಂಚಾರಕ್ಕೆ, ಅವರ ಸಂಬಂಧಪಟ್ಟ ಸಂಸ್ಥೆ, ಕಂಪನಿಯು ನೀಡಿದ ಅಧಿಕೃತ ಗುರುತಿನ ಚೀಟಿಯನ್ನು ಹೊಂದಿ ಪ್ರಯಾಣಿಸಲು ಅನುಮತಿಸಲಾಗಿದೆ. ಇದನ್ನೂ ಓದಿ: ಇನ್ಸ್‌ಪೆಕ್ಟರ್‌ ಮಗನ ಸೈಕಲ್ ಕದ್ದ ಗ್ಯಾಂಗ್‍- ಜನ್ಮ ಜಾಲಾಡಿದ ಪೊಲೀಸರು

    ದೂರವಾಣಿ ಸಂಪರ್ಕ ಮತ್ತು ಅಂತರ್ಜಾಲ ಸೇವೆ ಒದಗಿಸುವ ಸಂಸ್ಥೆಗಳ ನೌಕರರು ಮತ್ತು ವಾಹನಗಳ ಸಂಚಾರಕ್ಕೆ ಅವರ ಸಂಬಂಧಪಟ್ಟ ಸಂಸ್ಥೆ, ಕಂಪನಿಯು ನೀಡಿದ ಅಧಿಕೃತ ಗುರುತಿನ ಚೀಟಿಯನ್ನು ಹೊಂದಿ ಪ್ರಯಾಣಿಸಲು ಅನುಮತಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳ ಕಂಪನಿಗಳು, ಸಂಸ್ಥೆಯ ಅತ್ಯಾವಶ್ಯಕ ಸಿಬ್ಬಂದಿ, ನೌಕರರು ಮಾತ್ರ ಕಚೇರಿಯಿಂದ ಕಾರ್ಯನಿರ್ವಹಿಸಬೇಕು, ಉಳಿದ ಸಿಬ್ಬಂದಿ ಮನೆಯಿಂದಲೇ ಕಾರ್ಯನಿರ್ವಹಿಸಬೇಕು.

    ಔಷಧ ಮಳಿಗೆಗಳು ಸೇರಿದಂತೆ ವೈದ್ಯಕೀಯ, ತುರ್ತು ಮತ್ತು ಅತ್ಯಾವಶ್ಯಕ ಸೇವೆಗಳು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ, ಉಳಿದಂತೆ ಇತರೆ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಖಾಲಿ ವಾಹನಗಳು ಸೇರಿದಂತೆ, ಟ್ರಕ್‍ಗಳು, ಸರಕು ಸಾಗಣೆ ವಾಹನಗಳು ಅಥವಾ ಯಾವುದೇ ಸರಕು ಸಾಗಣೆ ವಾಹನಗಳ ಮೂಲಕ ಎಲ್ಲಾ ಬಗೆಯ ಸರಕುಗಳನ್ನು ಸಾಗಿಸುವುದಕ್ಕೆ ಯಾವುದೇ ನಿಬರ್ಂಧವಿಲ್ಲ. ಇ-ವಾಣಿಜ್ಯ ಕಂಪನಿಗಳಿಂದ ಸರಕುಗಳ ಹೋಮ್ ಡೆಲಿವರಿಗೆ ಮತ್ತು ಅವುಗಳ ಕಾರ್ಯಾಚರಣೆಗಳಿಗೆ ಅನುಮತಿ ನೀಡಲಾಗಿದೆ. ಬಸ್, ರೈಲು ಮತ್ತು ವಿಮಾನ ಪ್ರಯಾಣಕ್ಕೆ ಅನುಮತಿಸಲಾಗಿದೆ. ವಿಮಾನ, ರೈಲು ಮತ್ತು ರಸ್ತೆ ಮೂಲಕ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗಲು ವಿಮಾನ ನಿಲ್ದಾಣಗಳಿಗೆ, ಬಸ್ ಟರ್ಮಿನಲ್, ಬಸ್ ಮತ್ತು ರೈಲ್ವೆ ನಿಲ್ದಾಣಗಳಿಗೆ ಹೋಗಿ ಬರುವುದಕ್ಕೆ ಸಾರ್ವಜನಿಕ ಸಾರಿಗೆ ವಾಹನಗಳು, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಅಧೀಕೃತ ಪ್ರಯಾಣ ದಾಖಲೆ ಅಥವಾ ಟಿಕೆಟ್ ಅನ್ನು ಪ್ರದರ್ಶಿಸಿದ ನಂತರವೇ ಅಂತಹ ಸಂಚಾರಕ್ಕೆ ಅನುಮತಿ ನೀಡಲಾಗುವುದು.

    ವಾರಾಂತ್ಯದ ಕರ್ಫ್ಯೂ ಮಾರ್ಗಸೂಚಿಗಳು:
    ಅತ್ಯಾವಶ್ಯಕ ಮತ್ತು ತುರ್ತು ಕಾರ್ಯ ಚಟುವಟಿಕೆಗಳನ್ನು ಹೊರತುಪಡಿಸಿ, ಶುಕ್ರವಾರ ಸಂಜೆ 9 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಜನರ ಓಡಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ತುರ್ತು, ಅತ್ಯವಶ್ಯಕ ಸೇವೆಗಳು ಮತ್ತು ಕೋವಿಡ್-19 ನಿಯಂತ್ರಣ ಮತ್ತು ನಿರ್ವಹಣಾ ಕಾರ್ಯಗಳನ್ನು ನಿರ್ವಹಿಸುವ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮಗಳು ಮುಂತಾದವುಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸತಕ್ಕದ್ದು ಮತ್ತು ಅವುಗಳ ಅಧಿಕಾರಿ ಅಥವಾ ಸಿಬ್ಬಂದಿಗಳಿಗೆ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಅರ್ಧ ಗಂಟೆ ಥರ್ಮಾಕೋಲ್ ಸಹಾಯದಿಂದ ಈಜು – ಬದುಕುಳಿದ ಮೀನುಗಾರ

    ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಮಾಂಸ ಮತ್ತು ಮೀನು ಮತ್ತು ಪ್ರಾಣಿಗಳ ಮೇವನ್ನು ಮಾರಾಟ ಮಾಡುವ ಅಂಗಡಿಗಳು, ಬೀದಿ ಬದಿ ವ್ಯಾಪಾರಸ್ಥರು, ನ್ಯಾಯಬೆಲೆ ಅಂಗಡಿಗಳು, ಮದ್ಯದಂಗಡಿಗಳು ಮತ್ತು ಮಳಿಗೆಗಳು ಪಾರ್ಸೆಲ್ ಕೊಂಡು ಹೋಗಲು ಮಾತ್ರವೇ ಅವಕಾಶ ನೀಡಲಾಗಿದೆ. ಜನರು ತಮ್ಮ ಮನೆಯ ಹೊರಗೆ ಓಡಾಡುವುದನ್ನು ಕಡಿಮೆ ಮಾಡುವುದು, ಈ ಅವಧಿಯಲ್ಲಿ ಎಲ್ಲಾ ಸಾಮಗ್ರಿಗಳನ್ನು ಹೋಮ್ ಡೆಲಿವೆರಿ ಮಾಡಬೇಕು. ಈ ಎಲ್ಲಾ ಕಾರ್ಯಾಚರಣೆಗಳು ಕೋವಿಡ್-19ರ ನಿರ್ವಹಣೆಯ ಸಂಬಂಧ ಹೊರಡಿಸಲಾದ ರಾಷ್ಟ್ರೀಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಕ್ಕೆ ಅನುಮತಿ ನೀಡಲಾಗಿದೆ. ರೆಸ್ಟೋರೆಂಟ್ ಮತ್ತು ಹೊಟೇಲ್‍ಗಳಲ್ಲಿ ಆಹಾರವನ್ನು ಮನೆಗೆ ತೆಗೆದುಕೊಂಡು ಹೋಗಲು ಮತ್ತು ಹೋಂ ಡೆಲಿವರಿ ನೀಡಲು ಮಾತ್ರ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆ.ವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಉಡುಪಿಗೆ ಕೂರ್ಮ ರಾವ್ ನೂತನ ಡಿಸಿ- ಜಿ.ಜಗದೀಶ್ ಮುಖ್ಯಮಂತ್ರಿಗಳಿಗೆ ಜಂಟಿ ಕಾರ್ಯದರ್ಶಿ

    ಉಡುಪಿಗೆ ಕೂರ್ಮ ರಾವ್ ನೂತನ ಡಿಸಿ- ಜಿ.ಜಗದೀಶ್ ಮುಖ್ಯಮಂತ್ರಿಗಳಿಗೆ ಜಂಟಿ ಕಾರ್ಯದರ್ಶಿ

    – ವರ್ಗಾವಣೆ ಮಾಡಿ ಆದೇಶಿಸಿದ ಸರ್ಕಾರ

    ಉಡುಪಿ: ಜಿಲ್ಲಾಧಿಕಾರಿ ಜಿ.ಜಗದೀಶ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಕೂರ್ಮ ರಾವ್ ಎಂ. ಅವರನ್ನು ಉಡುಪಿಯ ನೂತನ ಡಿಸಿಯಾಗಿ ನೇಮಿಸಲಾಗಿದೆ.

    ಎರಡು ವರ್ಷಗಳ ಕಾಲ ಉಡುಪಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ಜಗದೀಶ್ ಅವರನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ. ರಾಜ್ಯ ಸರ್ಕಾರದ ಅಧಿಕೃತ ಆದೇಶ ಹೊರಡಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ಮುಖ್ಯಮತ್ರಿ ಬಸವರಾಜ ಬೊಮ್ಮಾಯಿ ಅವರ ಜಂಟಿ ಕಾರ್ಯದರ್ಶಿಯಾಗಿ ಜಗದೀಶ್ ಬೆಂಗಳೂರಲ್ಲಿ ಸೇವೆ ಆರಂಭಿಸಲಿದ್ದಾರೆ. ಇದನ್ನೂ ಓದಿ: ಗೃಹ ಪ್ರವೇಶಕ್ಕೂ ಮುನ್ನವೇ ಮನೆ ಕಳ್ಳತನ

    ಈಶಾನ್ಯ ಸಾರಿಗೆಯ ಎಂಡಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೂರ್ಮ ರಾವ್.ಎಂ ಅವರನ್ನು ತಕ್ಷಣದಿಂದ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವರ್ಗ ಮಾಡಲಾಗಿದೆ. ಜಿ.ಜಗದೀಶ್ ಉಡುಪಿಯಲ್ಲಿ ಎರಡು ವರ್ಷಗಳಕಾಲ ಸೇವೆ ಮಾಡಿದ್ದರು.

  • ನಂದಿಬೆಟ್ಟಕ್ಕೆ ಶಾಶ್ವತ ರಸ್ತೆ ನಿರ್ಮಾಣ ಆಗೋವರೆಗೂ ಪ್ರವಾಸಿಗರಿಗೆ ನಿಷೇಧ

    ನಂದಿಬೆಟ್ಟಕ್ಕೆ ಶಾಶ್ವತ ರಸ್ತೆ ನಿರ್ಮಾಣ ಆಗೋವರೆಗೂ ಪ್ರವಾಸಿಗರಿಗೆ ನಿಷೇಧ

    – ಭಾರೀ ಮಳೆಯಿಂದಾಗಿ ನಂದಿ ಗಿರಿಧಾಮದದ ಬಳಿ ಭೂಕುಸಿತ

    ಚಿಕ್ಕಬಳ್ಳಾಪುರ: ಮಂಗಳವಾರ ರಾತ್ರಿ ಸುರಿದ ಭಾರೀ ಪ್ರಮಾಣದ ಮಳೆಯಿಂದಾಗಿ ನಂದಿ ಗಿರಿಧಾಮದ ಬಳಿ ಭೂಕುಸಿತ ಉಂಟಾಗಿ ನಂದಿಗಿರಿಧಾಮಕ್ಕೆ ಸಾಗುವ ರಸ್ತೆಗೆ ಒಂದು ಸ್ಥಳದಲ್ಲಿ ಹಾನಿಯಾಗಿದ್ದು, ಶಾಶ್ವತವಾಗಿ ರಸ್ತೆ ಪುನರ್ ನಿರ್ಮಾಣ ಆಗೋವರೆಗೂ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಲತಾ ತಿಳಿಸಿದರು.

    ನಂದಿ ಗಿರಿಧಾಮದಲ್ಲಿ ಭೂಕುಸಿತವಾಗಿರುವ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು. ಹೆಚ್ಚಿನ ಪ್ರಮಾಣದಲ್ಲಿ ನಿನ್ನೆ ರಾತ್ರಿ ಮಳೆ ಸುರಿದ ಪರಿಣಾಮ ಬೆಟ್ಟದ ಮೇಲಿನಿಂದ ನೀರು ಒಂದೇ ಭಾಗದಲ್ಲಿ ಇಳಿಜಾರಾಗಿ ನಿರಂತರವಾಗಿ ಹರಿಯುವ ವೇಳೆ ಒಂದೇ ಕಡೆ ನೀರು ಸಂಗ್ರಹಗೊಂಡಿದೆ. ಪರಿಣಾಮ ಅಲ್ಲಿದ್ದ ಮಣ್ಣು ಹಾಗೂ ಚಿಕ್ಕ ಗುಡ್ಡ ಇಳಿಮುಖವಾಗಿ ಕುಸಿದ ರಭಸ ಹಾಗೂ ಒತ್ತಡಕ್ಕೆ ನಂದಿಗಿರಿಧಾಮಕ್ಕೆ ಸಾಗುವ ರಸ್ತೆಗೆ ಒಂದು ಕಡೆ ಹಾನಿಯುಂಟಾಗಿದೆ. ಅಲ್ಲಿದ್ದ ಮರಗಿಡಗಳು ನಾಶವಾಗಿವೆ. ಭೂ ಕುಸಿತವಾದ ಕಾರಣ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದರು.

    ಇಂದೇ ತಾತ್ಕಾಲಿಕ ರಸ್ತೆಯನ್ನು ನಿರ್ಮಾಣ ಮಾಡಿ ಬೆಟ್ಟದ ಮೇಲಿರುವ ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗುತ್ತಿದೆ. ಮತ್ತೆ ಭೂ ಕುಸಿತ ಉಂಟಾಗದಂತೆ ತಡೆಗೋಡೆ ನಿರ್ಮಾಣ, ನೀರು ಹರಿಯಲು ವ್ಯವಸ್ಥೆ ಹಾಗೂ ಕಲ್ವರ್ಟ್ ನ್ನು ಮುಂದಿನ 15-20 ದಿವಸಗಳ ಒಳಗಡೆ ನಿರ್ಮಿಸಿ ಶಾಶ್ವತವಾಗಿ ಸುರಕ್ಷಿತ ರಸ್ತೆಯನ್ನು ನಿರ್ಮಿಸಲಾಗುವುದು. ರಸ್ತೆ ಕಾಮಗಾರಿ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಯವರಿಗೆ ಈಗಾಗಲೇ ಸೂಚಿಸಿದ್ದೇನೆ. ಅವರೂ ಸಹ ಈಗಾಗಲೇ ಕೆಲಸವನ್ನು ಆರಂಭಿಸಿದ್ದಾರೆ. ತಡೆಗೋಡೆ ಹಾಗೂ ಶಾಶ್ವತವಾಗಿ ರಸ್ತೆ ನಿರ್ಮಾಣವಾಗುವವರೆಗೂ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಭೂ ಕುಸಿತ – 10 ಅಡಿ ಆಳಕ್ಕೆ ಕುಸಿದ ರಸ್ತೆ

    ಜಿಲ್ಲೆಯಾದ್ಯಾಂತ ಹಲವಡೆ ಮಳೆ:
    ಚಿಕ್ಕಬಳ್ಳಾಪುರ ನಗರದಲ್ಲಿ ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಡಿಸಿ ಭೇಟಿ ನೀಡಿದ್ರು. ಈ ಬಗ್ಗೆ ಮಾತನಾಡಿದ ಡಿಸಿ, ಚಿಕ್ಕಬಳ್ಳಾಪುರ ನಗರದ ಕೆಲ ವಾರ್ಡ್ ಗಳನ್ನು ಭೇಟಿ ಮಾಡಿದ್ದೇನೆ. 8 ಮತ್ತು 9ನೇ ವಾರ್ಡ್‍ನಲ್ಲಿ ಚರಂಡಿಗಳು ಚಿಕ್ಕದಿವೆ. ಮನೆಗಳು ಸಹ ತಗ್ಗು ಪ್ರದೇಶದಲ್ಲಿವೆ. ಆದ ಕಾರಣ ನೀರು ಮನೆಗಳಿಗೆ ನುಗ್ಗಿದೆ. 20ರಿಂದ 25 ಮನೆಗಳಿಗೆ ನೀರು ನುಗ್ಗಿದ್ದು, ಸದ್ಯಕ್ಕೆ ಅದನ್ನು ತೆರವುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಶನಿ ಮಹಾತ್ಮ ದೇವಸ್ಥಾನದ ಬಳಿ ಕಟ್ಟೆ ಒಡೆದಿದೆ. ಆದ ಕಾರಣ ಆ ನೀರು ಬೇರೆ ಕಡೆಗೆ ನುಗ್ಗಿ ಸಮಸ್ಯೆಯಾಗುತ್ತಿದೆ. ಅದನ್ನು ಇಂದೇ ಸರಿಪಡಿಸಲು ಸೂಚನೆ ನೀಡಿದ್ದೇನೆ ಎಂದರು.

    ಜಕ್ಕಲಮಡುಗು ತುಂಬಿರುವುದು ಖುಷಿಯ ವಿಚಾರ:
    ಮೂರು ವರ್ಷದ ಚಿಕ್ಕಬಳ್ಳಾಪುರ ದೊಡ್ಡಬಳ್ಳಾಪುರ ನಗರಗಳ ಕುಡಿಯುವ ನೀರಿನ ಮೂಲ. ಜಕ್ಕಲಮಡುಗು ಈ ಹಿಂದೆ ಜಲಾಶಯ ಬರಿದಾಗಿತ್ತು. ಕಳೆದ ವರ್ಷ ಮತ್ತು ಈ ವರ್ಷ ತುಂಬಿದೆ. ಹೀಗಾಗಿ ಒಂದು ವರ್ಷ ನೀರಿನ ಸಮಸ್ಯೆ ಇರುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಕೆ.ಮಿಥುನ್ ಕುಮಾರ್, ಕಾರ್ಯಪಾಲಕ ಅಭಿಯಂತರ ತಿಮ್ಮರಾಯಪ್ಪ, ಜಿಲ್ಲಾ ಅರಣ್ಯಾಧಿಕಾರಿ ಅರ್ಸಲನ್, ನಂದಿಗಿರಿಧಾಮದ ವಿಶೇಷ ಅಧಿಕಾರಿ ಗೋಪಾಲ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿ ಹಾಜರಿದ್ದರು.

  • ವಿಪ್ ಉಲ್ಲಂಘಿಸಿದ ಪುರಸಭೆಯ ಮೂವರು ಕಾಂಗ್ರೆಸ್ ಸದಸ್ಯರ ಸದಸ್ಯತ್ವ ಅನರ್ಹ

    ವಿಪ್ ಉಲ್ಲಂಘಿಸಿದ ಪುರಸಭೆಯ ಮೂವರು ಕಾಂಗ್ರೆಸ್ ಸದಸ್ಯರ ಸದಸ್ಯತ್ವ ಅನರ್ಹ

    ಯಾದಗಿರಿ: ವಿಪ್ ಉಲ್ಲಂಘಿಸಿದ್ದ ಗುರಮಿಠಕಲ್ ಪುರಸಭೆಯ ಕಾಂಗ್ರೆಸ್ ಪಕ್ಷದ ಮೂವರು ಸದಸ್ಯರ ಸದಸ್ಯತ್ವ ಅನರ್ಹಗೊಂಡಿದೆ. ಸದಸ್ಯತ್ವ ಅನರ್ಹಗೊಳಿಸಿ ಡಿಸಿ ಡಾ.ರಾಗಪ್ರಿಯಾ ಆದೇಶ ಹೊರಡಿಸಿದ್ದಾರೆ.

    ಅಶನ್ನ ಬುದ್ಧ, ಅಶೋಕ ಕಲಾಲ, ಪವಿತ್ರ ಮನ್ನೆ ಅನರ್ಹಗೊಂಡ ಮೂವರು ಪುರಸಭೆ ಸದಸ್ಯರು. ಸೆಪ್ಟೆಂಬರ್ 2020ರಲ್ಲಿ ಗುರಮಿಠಕಲ್ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು, ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ನ ಮೂವರು ಗೈರಾಗಿದ್ದರು. ಕಾಂಗ್ರೆಸ್‍ನಿಂದ ಬಿ.ಫಾರ್ಮ್ ಪಡೆದು ಚುನಾವಣೆಯಲ್ಲಿ ಗೆದ್ದಿದ್ದರು, ಪುರಸಭೆ ಅಧ್ಯಕ್ಷ ಚುನಾವಣೆಯಲ್ಲಿ ವಿವಿಧ ಕಾರಣಗಳಿಂದ ಗೈರಾಗಿ, ವಿಪ್ ಉಲ್ಲಂಘಿಸಿದ್ದರು. ಇದನ್ನೂ ಓದಿ: ಹಳ್ಳಿಗರು ಹೇಳುವ ಸಮಯಕ್ಕೆ, ಹೇಳಿದ ಸ್ಥಳಕ್ಕೆ ಬರುತ್ತೆ ಕೋವಿಡ್ ಲಸಿಕೆ

    ಈ ಬಗ್ಗೆ ಪುರಸಭೆ ಸದಸ್ಯ ಖಾಜಾ ಮೈನೂದ್ದೀನ್ ವಿಪ್ ಉಲ್ಲಂಘಿಸಿದವರನ್ನು ಅನರ್ಹಗೊಳಿಸಲು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ಪಕ್ಷಾಂತರ ಕಾಯ್ದೆಯಡಿ ಮೂವರ ಸದಸ್ಯತ್ವ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್ ಕಂಪನಿಗಳ ಖಾಸಗೀಕರಣ ಇಲ್ಲ: ಸುನೀಲ್ ಕುಮಾರ್

  • ಚಾಮರಾಜನಗರದಲ್ಲಿ ಆ.30ರವರೆಗೆ ವೀಕೆಂಡ್ ಕರ್ಫ್ಯೂ ವಿಸ್ತರಣೆ – ಡಿಸಿ ಆದೇಶ

    ಚಾಮರಾಜನಗರದಲ್ಲಿ ಆ.30ರವರೆಗೆ ವೀಕೆಂಡ್ ಕರ್ಫ್ಯೂ ವಿಸ್ತರಣೆ – ಡಿಸಿ ಆದೇಶ

    ಚಾಮರಾಜನಗರ: ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗದ ಹಿನ್ನೆಲೆಯಲ್ಲಿ, ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಆಗಸ್ಟ್ 30ರ ಬೆಳಗ್ಗೆ 6 ಗಂಟೆ ತನಕ ವೀಕೆಂಡ್ ಕರ್ಫ್ಯೂ ಸೇರಿದಂತೆ ಕೆಲವು ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಲಾಗಿದೆ.

    ದೈನಂದಿನ ಬಳಕೆಗೆ ಅಗತ್ಯ ಇರುವ ಕೆಲವು ಚಟುವಟಿಕೆ ಹಾಗೂ ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿ ಉಳಿದ ಚಟುವಟಿಕೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರಕಾರ, ಥಿಯೇಟರ್, ಸಿನಿಮಾ ಹಾಲ್, ಪಬ್ ಗಳಿಗೆ ಅವಕಾಶ ಇರುವುದಿಲ್ಲ. ತರಬೇತಿ ಉದ್ದೇಶ ಹೊರತುಪಡಿಸಿ ಸ್ವಿಮ್ಮಿಂಗ್ ಪೂಲ್ ಗಳಿಗೂ ಸಹ ನಿರ್ಬಂಧ ಹೇರಲಾಗಿದೆ. ಸಾಮಾಜಿಕ, ಸಾಂಸ್ಕೃತಿಕ, ಮನರಂಜನೆ, ರಾಜಕೀಯ, ಧಾರ್ಮಿಕ ಸಭೆ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಮದುವೆಗಳಿಗೆ ನೂರು ಜನರು ಹಾಗೂ ಅಂತ್ಯಕ್ರಿಯೆಗೆ 20 ಜನರು ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಇದನ್ನೂ ಓದಿ:  ಡಾ.ಜಿ ಪರಮೇಶ್ವರ್ ಮುಂದಿನ ಮುಖ್ಯಮಂತ್ರಿಯಾಗಬೇಕು: ಜೆಡಿಎಸ್ ಶಾಸಕ

    ಜಿಲ್ಲೆಯ ಮಲೈ ಮಹದೇಶ್ವರ ಬೆಟ್ಟ, ಮುಜರಾಯಿ ಇಲಾಖೆ ಹಾಗೂ ಖಾಸಗಿ ಸೇರಿದಂತೆ ಎಲ್ಲಾ ದೇವಸ್ಥಾನಗಳಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಇರಲಿದೆ. ಎಲ್ಲಾ ರೀತಿಯ ಉತ್ಸವ, ಸೇವೆ, ತೀರ್ಥ ಪ್ರಸಾದ, ದಾಸೋಹ, ಮುಡಿ-ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಶನಿವಾರ ಮತ್ತು ಭಾನುವಾರ ಅರ್ಚಕರಿಂದ ಸಾಂಪ್ರದಾಯಿಕ ಪೂಜೆಗೆ ಅವಕಾಶ ನೀಡಲಾಗಿದ್ದು, ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಇದನ್ನೂ ಓದಿ: ಕೇಂದ್ರ ಸಚಿವ ಖೂಬಾಗೆ ಗನ್ ಸ್ವಾಗತ

    ಶನಿವಾರ ಭಾನುವಾರ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಾದ ಭರಚುಕ್ಕಿ ಜಲಪಾತ, ಹೊಗೇನಕಲ್ ಜಲಪಾತಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಬಂಡೀಪುರ ಹಾಗೂ ಬಿ.ಆರ್ .ಟಿ ಹುಲಿರಕ್ಷಿತಾರಣ್ಯಗಳಲ್ಲಿ ವಾರಾಂತ್ಯದಲ್ಲಿ ಸಫಾರಿ ನಿಷೇಧಿಸಲಾಗಿದೆ. ರೆಸಾರ್ಟ್, ಲಾಡ್ಜ್, ಹೋಂಸ್ಟೇ, ಅರಣ್ಯ ವಸತಿಗೃಹಗಳಲ್ಲಿ ತಂಗುವವರು, ಸಫಾರಿಗೆ ತೆರಳುವವರು 72 ಗಂಟೆಯೊಳಗೆ ಮಾಡಿಸಿರುವ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ಪ್ರಮಾಣ ಪತ್ರ ಹೊಂದಿರಬೇಕು.

    ಕೇರಳ ಹಾಗೂ ತಮಿಳುನಾಡಿನಿಂದ ಬರುವವರು ಸಹ ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿದ್ದರೂ 72 ಗಂಟೆಯೊಳಗಿನ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿ ಇದ್ದರೆ ಮಾತ್ರ ಪ್ರವೇಶಾವಕಾಶ ಇರಲಿದೆ. ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದಂತೆ ಶಂಕುಸ್ಥಾಪನೆ, ಉದ್ಘಾಟನೆ, ಸಭೆ ಸಮಾರಂಭಗಳನ್ನು ನಿರ್ಬಂಧಿಸಲಾಗಿದೆ.

  • ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಸಂತ್ರಸ್ತ ಬಾಲಕಿ ಪೋಷಕರಿಗೆ ಸಾಂತ್ವನ, 2 ಲಕ್ಷ ಪರಿಹಾರ: ಶ್ರೀರಾಮುಲು

    ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಸಂತ್ರಸ್ತ ಬಾಲಕಿ ಪೋಷಕರಿಗೆ ಸಾಂತ್ವನ, 2 ಲಕ್ಷ ಪರಿಹಾರ: ಶ್ರೀರಾಮುಲು

    ಚಿತ್ರದುರ್ಗ: ತಾಲೂಕಿನ ಭರಮಸಾಗರ ಹೋಬಳಿಯ ಗ್ರಾಮದಲ್ಲಿ ಕೆಲದಿನಗಳ ಹಿಂದೆ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಇಂದು ಸಂತ್ರಸ್ತೆಯ ಮನೆಗೆ ತೆರಳಿದ ರಾಜ್ಯ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಶ್ರೀರಾಮುಲು, ಆಕೆಯ ಪೋಷಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು ಜೊತೆಗೆ ವೈಯಕ್ತಿಕವಾಗಿ 2 ಲಕ್ಷ ರೂ. ನೀಡುವುದರೊಂದಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಭರವಸೆ ನೀಡಿದರು.

    ಸಂತ್ರಸ್ತ ಬಾಲಕಿಯ ಕುಟುಂಬಸ್ಥರನ್ನು ಭೇಟಿ ಮಾಡಿದ ಶ್ರೀರಾಮುಲು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಬಳಿಕ ಮಾತನಾಡಿದ ಸಚಿವರು, ಅಪ್ರಾಪ್ತ ಬಾಲಕಿಯ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲು, ಅವರ ನೋವುಗಳನ್ನು ಹಂಚಿಕೊಳ್ಳಲು ಭೇಟಿ ನೀಡಿದ್ದೇವೆ. ಯಾರಿಗೂ ಕೂಡ ಇಂತಹ ಪರಿಸ್ಥಿತಿ ಬರಬಾರದು. ಇಂತಹ ಪ್ರಕರಣಗಳು ಮರುಕಳಿಸಬಾರದು. ಇದೇ ಕೊನೆಯಾಗಬೇಕು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಟಾಲೆಸ್ಟ್ ಲೀಡರ್‌ಗಳ ಬಗ್ಗೆ ಹೇಳಿಕೆ ನೀಡುವುದನ್ನು ಎಲ್ಲರೂ ನಿಲ್ಲಿಸಿ: ಶ್ರೀರಾಮುಲು

    ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪಿಯನ್ನು ಈಗಾಗಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾನೂನಿನ ಪ್ರಕಾರ ಆರೋಪಿಯನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಮಾಹಿತಿ ಹಂಚಿಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಸಂತ್ರಸ್ತ ಬಾಲಕಿಯ ಪೋಷಕರು ಇದ್ದರು.