Tag: DC

  • ಕೆಕೆಆರ್‌ಗೆ ಪಂಚ್‌ ಕೊಟ್ಟ ಪೋವೆಲ್‌- ಡೆಲ್ಲಿ ತಂಡಕ್ಕೆ 4 ವಿಕೆಟ್‌ಗಳ ಜಯ

    ಕೆಕೆಆರ್‌ಗೆ ಪಂಚ್‌ ಕೊಟ್ಟ ಪೋವೆಲ್‌- ಡೆಲ್ಲಿ ತಂಡಕ್ಕೆ 4 ವಿಕೆಟ್‌ಗಳ ಜಯ

    ಮುಂಬೈ: ಕೋಲ್ಕತ್ತಾ ನೈಟ್‌ರೈಡರ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ರೋವ್ಮನ್ ಪೋವೆಲ್ ಹಾಗೂ ಡೇವಿಡ್ ವಾರ್ನರ್ ಅವರ ಬ್ಯಾಟಿಂಗ್ ಅಬ್ಬರದಿಂದ ಡೆಲ್ಲಿ ತಂಡವು ಗೆದ್ದು ಬೀಗಿತು.

    IPL DC VS KKR

    ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 9 ವಿಕೆಟ್ ನಷ್ಟಕ್ಕೆ 146 ರನ್‌ ಗಳಿಸಿದ್ದು, ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 147 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾಗಿರುವ ಡೆಲ್ಲಿ ಕ್ಯಾಪಿಟಲ್ಸ್ 19 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150 ರನ್ ಕಲೆಹಾಕಿ 4 ವಿಕೆಟ್‍ಗಳ ಜಯವನ್ನು ಸಾಧಿಸಿದೆ.

    IPL DC VS KKR 7

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) 7.3 ಓವರ್‌ಗಳಲ್ಲಿ 35 ರನ್‌ಗಳಿಗೆ ತನ್ನ ಮೊದಲ 4 ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಆರನ್ ಫಿಂಚ್ 3 ರನ್, ವೆಂಕಟೇಶ್ ಐಯ್ಯರ್ 6 ರನ್, ಸುನೀಲ್ ನರೈನ್ ಗೋಲ್ಡನ್ ಡಕ್ ಔಟ್ ಮತ್ತು ಬಾಬಾ ಇಂದ್ರಜಿತ್ 6 ರನ್ ಗಳಿಸಿ ಔಟ್ ಆದರು.

    IPL DC VS KKR 9

    ಹೀಗೆ ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೆ, ಮತ್ತೊಂದೆಡೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತಂಡದ ನಾಯಕ ಶ್ರೇಯಸ್ ಐಯ್ಯರ್ 37 ಎಸೆತಗಳಲ್ಲಿ 42 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಭರವಸೆಯ ಆಟಗಾರ ಆಂಡ್ರೆ ರಸೆಲ್ ಶೂನ್ಯಕ್ಕೆ ನಿರ್ಗಮಿಸಿದ್ದು, ತಂಡಕ್ಕೆ ಮತ್ತಷ್ಟು ಆಘಾತ ತಂದೊಡ್ಡಿತು. ಟಿಮ್ ಸೌಥಿ ಹಾಗೂ ಹರ್ಷಿತ್ ರಾಣಾ ಇಬ್ಬರೂ ಇದೇ ಸಮಯಕ್ಕೆ ಡಕ್ ಔಟ್ ಆದರು. 6 ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿತೀಶ್ ರಾಣಾ 34 ಎಸೆತಗಳಲ್ಲಿ 57 ರನ್ ಆಕರ್ಷಕ ಅರ್ಧಶತಕ ಗಳಿಸಿದರು. ನಿತೀಶ್ ರಾಣಾರ ಜವಾಬ್ದಾರಿಯುತ ಆಟವು ತಂಡದ ಮೊತ್ತವನ್ನು 140 ಗಡಿದಾಟಿಸುವಲ್ಲಿ ಯಶಸ್ವಿಯಾಯಿತು.

    IPL DC VS KKR 5

    ಆರಂಭದಲ್ಲೇ ಟಾಸ್ ಗೆದ್ದು ಫೀಲ್ಡಿಂಗ್‌ಗೆ ಇಳಿದ ಡೆಲ್ಲಿ ತಂಡವು ಭರ್ಜರಿ ಕೆಕೆಆರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ತಂಡದ ಬೌಲರ್‌ಗಳು 150 ರನ್ ಗಡಿಯೊಳಗೆ ಕೆಕೆಆರ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಬೌಲಿಂಗ್‌ನಲ್ಲಿ ಮುಸ್ತಾಫಿಜೋರ್ ರೆಹಮಾನ್ 3, ಚೇತನ್ ಸಕರ್ಯ, ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್‌ಗಳಿಸಿದರೆ, ಕುಲದೀಪ್ 3 ಓವರ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿದರು.

    IPL DC VS KKR 8

    ಇನ್ನೂ ಬ್ಯಾಟಿಂಗ್‌ನಲ್ಲು ಅಬ್ಬರಿಸಿದ ಡೆಲ್ಲಿ ತಂಡ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಿದ್ದರೂ ರನ್‌ಗಳ ಕೊರತೆಯಾಗದಂತೆ ನೋಡಿಕೊಂಡಿತು.‌ ಪೃಥ್ವಿಶಾ ಔಟಾದ ಬಳಿಕವು ಕೆಕೆಆರ್ ಬೌಲರ್‌ಗಳನ್ನು ಬೆಂಡೆತ್ತಿದ ಡೇವಿಡ್ ವಾರ್ನರ್ 26 ಎಸೆತಗಳಲ್ಲಿ 42 ರನ್‌ಗಳಿಸಿದರು. ಮಿಚೇಲ್ ಮಾರ್ಶ್ 13 ರನ್, ಲಲಿತ್ ಯಾದವ್ 22 ರನ್‌ಗಳನ್ನು ಪೇರಿಸುವ ಮೂಲಕ ರನ್ ಸ್ಥಿರತೆ ಕಾಯ್ದುಕೊಂಡರು. ಈ ನಡುವೆ ನಾಯಕ ರಿಷಬ್ ಪಂತ್ 2ನೇ ರನ್ನಿಗೆ ಔಟಾಗಿದ್ದು, ತಂಡಕ್ಕೆ ಪೆಟ್ಟು ನೀಡಿದಂತಿತ್ತು. ಇನ್ನೇನು ಡೆಲ್ಲಿ ತಂಡವು ಸೋಲುವುದು ಖಚಿತ ಎಂದೇ ಭಾವಿಸಲಾಗಿತ್ತು.

    IPL DC VS KKR 4

    ಆದರೆ, ಡೆಲ್ಲಿ ತಂಡಕ್ಕೆ ಗೆಲುವಿನ ಕನಸು ಚಿಗುರಿಸಿದ ರೊವ್ಮನ್ ಪೋವೆಲ್ ತಮ್ಮ ಭರ್ಜರಿ ಬ್ಯಾಟಿಂಗ್‌ನಿಂದ ಡೆಲ್ಲಿ ತಂಡವನ್ನು ಗೆಲುವಿನ ಮೆಟ್ಟಿಲೇರಿಸಿದರು. 7ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಪೋವೆಲ್ ಕೇವಲ 16 ಎಸೆತಗಳಲ್ಲಿ 33 ರನ್‌ಗಳ (1 ಫೋರ್, 3 ಸಿಕ್ಸರ್) ಸಿಡಿಸುವ ಮೂಲಕ ತಮ್ಮ ಡೆಲ್ಲಿ ತಂಡದ ಗೆಲುವಿಗೆ ಕಾರಣರಾದು. ಇದಕ್ಕೆ ಬ್ಯಾಟಿಂಗ್ ಸಾಥ್ ನೀಡಿದ ಶಾರ್ದೂಲ್‌ ಠಾಕೂರ್ ಸಹ 17 ಎಸೆತಗಳಲ್ಲಿ 24 ರನ್ ಪೇರಿಸಿ ಜವಾಬ್ದಾರಿ ಮೆರೆದರು. ಇದೆಲ್ಲರ ಫಲವಾಗಿ 147 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ತಂಡವು 19ನೇ ಓವರ್‌ಗೆ 150 ರನ್‌ಗಳಿಸುವ ಮೂಲಕ ತನ್ನ ಗೆಲುವು ದಾಖಲಿಸಿತು.

  • ನೀನು ದನ ಕಾಯೋನು, EO ಕೆಲಸದಲ್ಲಿ ಇದ್ದೀಯ – ಅಧಿಕಾರಿ ವಿರುದ್ಧ ಎಚ್‍.ಡಿ.ರೇವಣ್ಣ ಗರಂ

    ನೀನು ದನ ಕಾಯೋನು, EO ಕೆಲಸದಲ್ಲಿ ಇದ್ದೀಯ – ಅಧಿಕಾರಿ ವಿರುದ್ಧ ಎಚ್‍.ಡಿ.ರೇವಣ್ಣ ಗರಂ

    ಹಾಸನ: ನೀನು ದನ ಕಾಯೋನು ಇಓ ಕೆಲಸದಲ್ಲಿ ಇದ್ದೀಯ. ದನಗೆ ಇಂಜೆಕ್ಷನ್ ಕೊಡೋಕೆ ಹೋಗು ಎಂದು ತಾ.ಪಂ ಇಓಗೆ ಏಕವಚನದಲ್ಲೇ ಮಾಜಿ ಸಚಿವ ಎಚ್.ಡಿ.ರೇವಣ್ಣ ತರಾಟೆಗೆ ತೆಗೆದುಕೊಂಡ ಘಟನೆ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ.

    ಹಾಸನದ ಕೆಂಚಟ್ಟಹಳ್ಳಿ ಬಳಿ ಇರುವ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಮುಂಭಾಗ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ವಿದ್ಯಾರ್ಥಿಗಳು, ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕಾಮಗಾರಿ ವಿಚಾರವಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಆಗಮಿಸಿ ಜಿಲ್ಲಾಧಿಕಾರಿ ಮತ್ತು ತಾಪಂ ಇಒ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಎಚ್.ಡಿ.ರೇವಣ್ಣ, ತಾಪಂ ಇಒ ಕುರಿತು ನೀನು ದನ ಕಾಯೋನು, ಇಓ ಕೆಲಸದಲ್ಲಿ ಇದ್ದೀಯ. ಹೆಣ್ಣುಮಕ್ಕಳನ್ನು ಹೆದರಿಸ್ತೀಯಾ, ದನ ಕಾಯಕೆ ಹೋಗು ಎಂದು ಗದರಿದ್ರು. ಅದಕ್ಕೆ ಇಒ ಕಾಮಗಾರಿ ನಡೆಸಲು ಡಿಸಿ ನಿರ್ದೇಶನ ನೀಡಿದ್ದರು ಹಾಗಾಗಿ ಕಾಮಗಾರಿ ನಡೆಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಭು ಚವ್ಹಾಣ್ ಬಳಿ ಸಾಕ್ಷ್ಯ ಕೇಳಲ್ಲ ಯಾಕೆ – ಆರಗಗೆ ಪ್ರಿಯಾಂಕ್‌ ಖರ್ಗೆ ಸವಾಲು

    ಈ ಉತ್ತರ ಕೇಳಿ ಮತ್ತಷ್ಟು ಕೆರಳಿದ ರೇವಣ್ಣ, ಡಿಸಿ ಮನೆಗೆ ನುಗ್ಗು ಅಂತಾನೆ ಹೋಗಿ ನುಗ್ಗು ನೀನು. ಏ ಪಿಎ ಕರೆಯೋ ಅವನ್ಯಾರು? ಡಿಸಿ. ಇವರಿಬ್ಬರು ಸೇರಿಕೊಂಡು ಅದೇನ್ ಮಾಡ್ತರೆ ಮಾಡ್ಲಿ. ಎಷ್ಟು ಹೆಣ ಉರುಳಿಸುತ್ತಾರೆ ಉರುಳಿಸಲಿ. ವರ್ಗಾವಣೆಗೋಸ್ಕರ ಈ ರೀತಿ ಮಾಡ್ತೀರ ಎಂದು ಕಿಡಿಕಾರಿದರು. ಇದನ್ನೂ ಓದಿ: ಭಾರತದ 10, ಪಾಕಿಸ್ತಾನದ 6 ಯೂಟ್ಯೂಬ್ ಚ್ಯಾನೆಲ್‌ಗಳು ಬ್ಯಾನ್

    ಈ ವೇಳೆ ಜಿಲ್ಲಾಧಿಕಾರಿ ಆರ್.ಗಿರೀಶ್, ಸ್ವಲ್ಪ ಸಮಾಧಾನವಾಗಿ ಕೇಳಿ ಸರ್ ಎಂದು ರೇವಣ್ಣ ಅವರಿಗೆ ತಿಳಿಸಿದ್ರು. ಆಗ ರೇವಣ್ಣ ಜನ ವಿರೋಧ ಮಾಡುತ್ತಿದ್ದಾರೆ. ಟ್ರಕ್ ಟರ್ಮಿನಲ್ ಕಾಮಗಾರಿ ನಿಲ್ಲಿಸಿ. ಟ್ರಕ್ ಟರ್ಮಿನಲ್‍ಗೆ ಬೇರೆ ಕಡೆ ಜಾಗ ಕೊಡಿ. ಮಿನಿಸ್ಟರ್ ಹೇಳ್ತಾರೆ ಡಿಸಿ ಕಚೇರಿ ಎಂಎಲ್‍ಎಗೆ ಬರೆದು ಕೊಡಿ ಅಂತ, ಬರೆದು ಕೊಡುತ್ತೀರಾ? ಹಾಸನನ ಏನ್ ಎಂಎಲ್‍ಎಗೆ ಬರೆದುಕೊಟ್ಟಿದ್ದಾರ ಎಂದು ಪ್ರಶ್ನಿಸಿದರು. ಈ ವೇಳೆ ರೇವಣ್ಣ ಅವರಲ್ಲಿ ಮನವಿ ಮಾಡಿದ ಜಿಲ್ಲಾಧಿಕಾರಿ ಆರ್.ಗಿರೀಶ್, ನಾಳೆ, ನಾಡಿದ್ದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ಕರೆಯುತ್ತೇನೆ ಎಂದು ತಿಳಿಸಿದರು.

  • ನೋ ಬಾಲ್ ವಿವಾದದ ನಡುವೆ ಕುಲ್ಚಾ ಜೋಡಿಯ ಕೀಟ್ಲೆ

    ನೋ ಬಾಲ್ ವಿವಾದದ ನಡುವೆ ಕುಲ್ಚಾ ಜೋಡಿಯ ಕೀಟ್ಲೆ

    ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಮತ್ತು ರಾಜಸ್ಥಾನ ನಡುವಿನ ಪಂದ್ಯದ ನಡುವೆ ನಡೆದ ನೋ ಬಾಲ್ ವಿವಾದ ಬಾರಿ ಚರ್ಚೆಯಾಗುತ್ತಿದೆ. ಈ ನಡುವೆ ಕುಲ್ಚಾ ಜೋಡಿ ಖ್ಯಾತಿಯ ಯಜುವೇಂದ್ರ ಚಹಲ್ ಮತ್ತು ಕುಲ್‍ದೀಪ್ ಯಾದವ್ ನಡುವಿನ ಮಾತುಕತೆ ವೈರಲ್ ಆಗುತ್ತಿದೆ.


    ರಾಜಾಸ್ಥಾನ್ ರಾಯಲ್ಸ್ ನೀಡಿದ 222 ರನ್‍ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರಂಭದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿತ್ತಾದರೂ ನಂತರದಲ್ಲಿ ಪ್ರಮುಖ ವಿಕೆಟ್‍ಗಳನ್ನು ಕಳೆದುಕೊಂಡಿತು. ಕೊನೆಯಲ್ಲಿ ರೋವ್ಮನ್ ಪೋವೆಲ್ ಅವರ ಆಟ ತಂಡಕ್ಕೆ ಗೆಲುವಿನ ಆಸೆ ಚಿಗುರುವಂತೆ ಮಾಡಿತ್ತು. ಅಂತಿಮ ಓವರ್‌ನಲ್ಲಿ ಡೆಲ್ಲಿ ಗೆಲುವಿಗೆ 36 ರನ್‍ಗಳು ಬೇಕಾಗಿತ್ತು. ಆರು ಬಾಲ್‍ನಲ್ಲಿ 6 ಸಿಕ್ಸರ್ ಸಿಡಿಸುವ ಸವಾಲು ಎದುರಾಗಿತ್ತು. ಶೇ.90 ರಷ್ಟು ಗೆಲುವು ಅಸಾಧ್ಯ ಎಂಬುದೂ ಗೊತ್ತಿತ್ತು. ಈ ವೇಳೆ ಕ್ರೀಸ್‍ನಲ್ಲಿದ್ದ ಪೋವೆಲ್ ಸತತ 3 ಎಸೆತಗಳನ್ನೂ ಸಿಕ್ಸರ್‌ಗೆ ಅಟ್ಟಿದರು. ಇನ್ನೂ ಮೂರು ಎಸೆತಗಳು ಬಾಕಿ ಇರುವ ವೇಳೆ ದೊಡ್ಡ ಹೈಡ್ರಾಮವೇ ನಡೆದು ಹೋಯಿತು. ಇದನ್ನೂ ಓದಿ: ಅಂಪೈರ್ ವಿರುದ್ಧ ಸಿಟ್ಟಾಗಿ ಬ್ಯಾಟರ್‌ಗಳನ್ನು ಕರೆದ ಪಂತ್ – ನಿಜಕ್ಕೂ ನಡೆದಿದ್ದು ಏನು?

    Rishabh-Pant-1 ipl

    ಮೆಕಾಯ್ ಅವರ 3 ಎಸೆತಗಳನ್ನೂ ಸಿಕ್ಸ್ ಬಾರಿಸಿದ್ದರು. ಆದರೆ, 3ನೇ ಎಸೆತ ಫುಲ್‍ಟಾಸ್ ಆಗಿದ್ದು ಇದನ್ನು ಕೂಡ ಪೋವೆಲ್ ಸಿಕ್ಸರ್‌ಗಟ್ಟಿದರು. ಈ ಎಸೆತ ವಿವಾದಕ್ಕೆ ಎಡೆಮಾಡಿಕೊಟ್ಟಿತು. ಅಂಪೈರ್ ನೋಬಾಲ್ ಕೊಡದೇ ಇದ್ದರೂ ಡೆಲ್ಲಿ ಆಟಗಾರರು ಕುಳಿತಲ್ಲಿಂದಲೇ ನೋಬಾಲ್ ಸಿಗ್ನಲ್ ತೋರಿಸಿದರು. ಅಂಪೈರ್ ಇದು ನೋ ಬಾಲ್ ಅಲ್ಲ ಎಂದು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಇದರಿಂದ ಸಿಟ್ಟಾದ ಡೆಲ್ಲಿ ನಾಯಕ ರಿಷಭ್ ಪಂತ್ ಇದು ಅನ್ಯಾಯ ಎಂದು ಮೈದಾನದಲ್ಲಿದ್ದ ಪೋವೆಲ್ ಮತ್ತು ಕುಲ್‍ದೀಪ್ ಯಾದವ್ ಅವರನ್ನು ಉದ್ದೇಶಿಸಿ ಬೌಂಡರಿ ಗೆರೆ ಬಳಿ ನಿಂತು ಪೆವಿಲಿಯನ್‍ಗೆ ಬನ್ನಿ ಎಂದು ಕರೆದರು. ಇದನ್ನೂ ಓದಿ: ಡೆಲ್ಲಿಯ ಪ್ರವೀಣ್‌ಗೆ ದಂಡದೊಂದಿಗೆ ಒಂದು ಪಂದ್ಯ ಬ್ಯಾನ್

    ಈ ವೇಳೆ ಕುಲ್‍ದೀಪ್ ಯಾದವ್ ಅಂಪೈರ್ ಜೊತೆ ನೋ ಬಾಲ್ ವಾಗ್ವಾದಕ್ಕೆ ಇಳಿದರು. ಈ ಸಂದರ್ಭ ಪಕ್ಕದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಚಹಲ್ ಬಂದು ಕುಲ್‍ದೀಪ್ ಯಾದವ್‍ರನ್ನು ಸಮಾಧಾನ ಪಡಿಸಲು ಮುಂದಾದರು. ಈ ವೇಳೆ ಕುಲ್‍ದೀಪ್ ಮತ್ತೆ ಅಂಪೈರ್ ಕಡೆ ಮಾತನಾಡಲು ಯತ್ನಿಸುತ್ತಿದ್ದಂತೆ, ಚಹಲ್, ಕುಲ್‍ದೀಪ್‍ರನ್ನು ಹೋಗು ಬ್ಯಾಟಿಂಗ್ ಮಾಡು ಎನ್ನುವಂತೆ ಕೈ ಹಿಡಿದು ತಳ್ಳಿದರು. ಇವರಿಬ್ಬರೂ ಕೂಡ ಟೀಂ ಇಂಡಿಯಾದಲ್ಲಿ ಜೊತೆಯಾಗಿ ಆಡುತ್ತಿದ್ದಾಗ ಉತ್ತಮ ಸ್ನೇಹಿತರಾಗಿದ್ದರು. ಹಾಗಾಗಿ ಈ ಕಿರಿಕ್ ನಡುವೆ ಇವರಿಬ್ಬರು ತಮಾಷೆಗಿಳಿದು ಎಲ್ಲರನ್ನೂ ನಗಿಸಿದ್ದಾರೆ.

  • ಬಟ್ಲರ್‌ ಬಿರುಗಾಳಿ ಬೆದರಿದ ಡೆಲ್ಲಿ – ಅಂಕಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ ರಾಜಸ್ಥಾನ

    ಬಟ್ಲರ್‌ ಬಿರುಗಾಳಿ ಬೆದರಿದ ಡೆಲ್ಲಿ – ಅಂಕಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ ರಾಜಸ್ಥಾನ

    ಮುಂಬೈ: ಜೋಸ್ ಬಟ್ಲರ್ ಬ್ಯಾಟಿಂಗ್ ಮತ್ತು ಪ್ರಸಿದ್ಧ್ ಕೃಷ್ಣ ಬೌಲಿಂಗ್ ನೆರವಿನಿಂದ ಡೆಲ್ಲಿ ವಿರುದ್ಧ ರಾಜಸ್ಥಾನ 15 ರನ್‍ಗಳ ಭರ್ಜರಿ ಜಯ ಸಾಧಿಸಿದೆ.


    223 ರನ್‍ಗಳ ಬೃಹತ್ ಗುರಿ ಪಡೆದ ಡೆಲ್ಲಿ ತಂಡದ ಗೆಲುವಿಗಾಗಿ ರೋವ್ಮನ್ ಪೊವೆಲ್ ಕಡೆಯ ವರೆಗೆ ಹೋರಾಡಿ 36 ರನ್ (15 ಎಸೆತ, 5 ಬೌಂಡರಿ) ಚಚ್ಚಿ ಔಟ್ ಆಗುವುದರೊಂದಿಗೆ ಸೋಲಿನಲ್ಲೂ ಗಮನ ಸೆಳೆದರು. ಅಂತಿಮವಾಗಿ ಡೆಲ್ಲಿ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 207 ರನ್ ಗಳಿಸಲಷ್ಟೇ ಶಕ್ತವಾಯಿತು.

    ಬೃಹತ್ ಮೊತ್ತದ ಗುರಿ ಪಡೆದ ಡೆಲ್ಲಿಗೆ ಆರಂಭಿಕ ಆಟಗಾರರಾದ ಪೃಥ್ವಿ ಶಾ 37 ರನ್ (27 ಎಸೆತ, 5 ಬೌಂಡರಿ, 1 ಸಿಕ್ಸ್) ಮತ್ತು ಡೇವಿಡ್ ವಾರ್ನರ್ 28 ರನ್ (14 ಎಸೆತ, 5 ಬೌಂಡರಿ, 1 ಸಿಕ್ಸ್) ಕೊಡುಗೆ ನೀಡಿ ಔಟ್ ಆದರು. ಆ ಬಳಿಕ ಪಂತ್ 44 ರನ್ (24 ಎಸೆತ, 4 ಬೌಂಡರಿ, 2 ಸಿಕ್ಸ್) ಮತ್ತು ಲಲಿತ್ ಯಾದವ್ 37 ರನ್ (24 ಎಸೆತ, 3 ಬೌಂಡರಿ, 2 ಸಿಕ್ಸ್) ಚಚ್ಚಿ ಪೆವಿಲಿಯನ್ ಸೇರಿಕೊಂಡರು.

    ಈ ಮೊದಲು ಟಾಸ್ ಗೆದ್ದ ಡೆಲ್ಲಿ ನಾಯಕ ರಿಷಭ್ ಪಂತ್ ಎದುರಾಳಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಅವರ ಆ ಲೆಕ್ಕಾಚಾರ ಆರಂಭದಿಂದಲೇ ತಲೆಕೆಳಗಾಯಿತು. ರಾಜಸ್ಥಾನದ ಆರಂಭಿಕ ಆಟಗಾರರಾದ ಜೋಸ್ ಬಟ್ಲರ್ ಮತ್ತು ದೇವದತ್ ಪಡಿಕ್ಕಲ್ ರನ್ ಮಳೆ ಸುರಿಸಿದರು. ಆರಂಭದಿಂದಲೇ ಸ್ಫೋಟಕ ಆಟಕ್ಕೆ ಮುಂದಾದ ಇವರಿಬ್ಬರು ಮನಬಂದಂತೆ ಬ್ಯಾಟ್‍ಬೀಸಿ ರನ್ ಪ್ರವಾಹ ಹರಿಸಿದರು.

    ಬಟ್ಲರ್ ಬಿರುಗಾಳಿ
    ಒಂದು ಕಡೆ ಪಡಿಕ್ಕಲ್ ಇನ್ನೊಂದು ಕಡೆ ಬಟ್ಲರ್ ಬ್ಯಾಟಿಂಗ್ ಬಿರುಗಾಳಿಗೆ ಡೆಲ್ಲಿ ಬೌಲರ್‌ಗಳು ಹೈರಾಣಾದರು. ಸಿಕ್ಕ ಸಿಕ್ಕ ಬೌಲರ್‌ಗಳಿಗೆ ಬೌಂಡರಿ, ಸಿಕ್ಸರ್ ಚಚ್ಚಿದ ಈ ಜೋಡಿಯನ್ನು ಬೇರ್ಪಡಿಸಲು 15ನೇ ಓವರ್‌ನಲ್ಲಿ ಖಲೀಲ್ ಅಹಮ್ಮದ್ ಸಫಲರಾದರು. ಪಡಿಕ್ಕಲ್ 54 ರನ್ (35 ಎಸೆತ, 7 ಬೌಂಡರಿ, 2 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಈ ಮೊದಲು ಬಟ್ಲರ್ ಜೊತೆ ಮೊದಲ ವಿಕೆಟ್‍ಗೆ 155 ರನ್ (91 ಎಸೆತ) ಜೊತೆಯಾಟವಾಡಿ ಡೆಲ್ಲಿಗೆ ಮುಳುವಾದರು.

    ಆ ಬಳಿಕ ಬಟ್ಲರ್ ಜೊತೆಗೂಡಿದ ಸಂಜು ಸ್ಯಾಮ್ಸನ್ ನಾನೇನು ಕಮ್ಮಿ ಇಲ್ಲ ಎಂಬಂತೆ ಬೌಂಡರಿ, ಸಿಕ್ಸ್ ಸಿಡಿಸಿ ಮೆರೆದಾಡಿದರು. ಇತ್ತ ಬಟ್ಲರ್ ಐಪಿಎಲ್‍ನ ಕಳೆದ 8 ಇನ್ನಿಂಗ್ಸ್‌ಗಳ ಪೈಕಿ 4ನೇ ಶತಕ ಬಾರಿಸಿ ಎದುರಾಳಿ ತಂಡದಲ್ಲಿ ನಡುಕ ಹುಟ್ಟಿಸಿದರು. ಅಂತಿಮವಾಗಿ ಬಟ್ಲರ್ 116 ರನ್ (65 ಎಸೆತ, 9 ಬೌಂಡರಿ, 9 ಸಿಕ್ಸ್) ಸಿಡಿಸಿ ಔಟ್ ಆದರು. ನಂತರ ಸ್ಯಾಮ್ಸನ್ ಅಜೇಯ 46 ರನ್ (19 ಎಸೆತ, 5 ಬೌಂಡರಿ, 3 ಸಿಕ್ಸ್) ಬಾರಿಸಿ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು. ಅಂತಿಮವಾಗಿ 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 222 ರನ್‍ಗಳ ಬೃಹತ್ ಮೊತ್ತ ಪೇರಿಸಿತು.

    ರನ್ ಏರಿದ್ದು ಹೇಗೆ?
    41 ಎಸೆತ 50 ರನ್
    66 ಎಸೆತ 100 ರನ್
    87 ಎಸೆತ 150 ರನ್
    112 ಎಸೆತ 200 ರನ್
    120 ಎಸೆತ 222 ರನ್

  • ರಾಜಸ್ಥಾನ ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿಗೆ ಆಘಾತ – ತಂಡದೊಂದಿಗಿಲ್ಲ ಕೋಚ್ ಪಾಟಿಂಗ್

    ರಾಜಸ್ಥಾನ ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿಗೆ ಆಘಾತ – ತಂಡದೊಂದಿಗಿಲ್ಲ ಕೋಚ್ ಪಾಟಿಂಗ್

    ಮುಂಬೈ: ಐಪಿಎಲ್‍ಗೆ ಕೊರೊನಾ ಕಾರ್ಮೋಡ ಆವರಿಸುತ್ತಿದೆ. ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ನಡುವಿನ ಪಂದ್ಯಕ್ಕೂ ಮುನ್ನ ಡೆಲ್ಲಿ ತಂಡದ ಕೋಚ್ ರಿಕಿ ಪಾಟಿಂಗ್ ತಂಡದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಹಾಗಾಗಿ ಮುಖ್ಯ ಕೋಚ್ ಇಲ್ಲದೆ ಡೆಲ್ಲಿ ತಂಡ ಕಣಕ್ಕಿಳಿಯುತ್ತಿದೆ.

    ಡೆಲ್ಲಿ ತಂಡ ಸಹಾಯಕ ಸಿಬ್ಬಂದಿಗೆ ಕೊರೊನಾ ಕಾಣಿಸಿಕೊಂಡ ಕಾರಣ ಡೆಲ್ಲಿ ತಂಡದೊಂದಿಗಿದ್ದ ಆಟಗಾರರು ಮತ್ತು ಕುಟುಂಬ ಸದಸ್ಯರನ್ನು ಟೆಸ್ಟ್ ಮಾಡಿದಾಗ ಪಾಟಿಂಗ್ ಕುಟುಂಬ ಸದಸ್ಯರಲ್ಲಿ ಕೊರೊನಾ ಪಾಸಿಟಿವ್ ದಾಖಲಾಗಿದೆ. ಹಾಗಾಗಿ ಪಾಟಿಂಗ್ 5 ದಿನ ಐಸೋಲೇಷನ್‍ನಲ್ಲಿ ಇರಲು ನಿರ್ಧರಿಸಿದ್ದು, ಇಂದಿನ ಡೆಲ್ಲಿ ವಿರುದ್ಧದ ಪಂದ್ಯದಿಂದ ಪಾಟಿಂಗ್ ಹೊರಗುಳಿಯಲಿದ್ದಾರೆ. ಇದನ್ನೂ ಓದಿ: IPL ಶತಕ ಸಿಡಿಸಿ ಮೆರೆದವರು ಯಾರು – ಇಲ್ಲಿದೆ ಟಾಪ್ 10 ಸಿಕ್ಸರ್ ವೀರರ ಪಟ್ಟಿ

    ಡೆಲ್ಲಿ ತಂಡದಲ್ಲಿ ಮೊದಲು ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್‍ಗೆ ಕೊರೊನಾ ಕಾಣಿಸಿಕೊಂಡಿತು. ಆ ಬಳಿಕ ಆಟಗಾರರಾದ ಟಿಮ್ ಸೀಫರ್ಟ್ ಮತ್ತು ಮಿಚೆಲ್ ಮಾರ್ಷ್‍ಗೆ ಕೊರೊನಾ ಕಾಣಿಸಿಕೊಂಡಿತ್ತು. ಹಾಗಾಗಿ ತಂಡದ ಸದಸ್ಯರು ಕೊರೊನಾ ಕಾಟದ ನಡುವೆ ಆಡುತ್ತಿದ್ದಾರೆ. ಕೊರೊನಾ ಬಂದವರನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಫ್ರಾಂಚೈಸ್ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಪಠಾಣ್‌ Vs ಮಿಶ್ರಾ – ಭಾರತ ಶ್ರೇಷ್ಠ ದೇಶವಾಗಬಹುದು ಆದರೆ…

    ಡೆಲ್ಲಿ ತಂಡ ಈಗಾಗಲೇ 6 ಪಂದ್ಯಗಳಿಂದ 3 ಸೋಲು, 3 ಗೆಲುವಿನೊಂದಿಗೆ 6 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇಂದಿನ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಮುಖ್ಯ ಕೋಚ್ ಅನುಪಸ್ಥಿತಿಯಲ್ಲಿ ಸಹಾಯಕ ಕೋಚ್‍ಗಳಾದ ಅಜಿತ್ ಅರ್ಗರ್‍ಕರ್, ಜೇಮ್ಸ್ ಹೋಪ್, ಪ್ರವೀಣ್ ಆಮ್ರೆ ಮತ್ತು ಶೇನ್ ವಾಟ್ಸನ್ ನೇತೃತ್ವದಲ್ಲಿ ತಂಡ ಮೈದಾನಕ್ಕಿಳಿಯಲಿದೆ.

  • ಡಿಕೆ ಸ್ಫೋಟಕ ಫಿಫ್ಟಿ – ಕೊಹ್ಲಿ ಸ್ಟನ್ನಿಂಗ್ ಕ್ಯಾಚ್‌ –  ಡೆಲ್ಲಿ ವಿರುದ್ಧ ಆರ್​ಸಿಬಿಗೆ 16 ರನ್‍ಗಳ ಜಯ

    ಡಿಕೆ ಸ್ಫೋಟಕ ಫಿಫ್ಟಿ – ಕೊಹ್ಲಿ ಸ್ಟನ್ನಿಂಗ್ ಕ್ಯಾಚ್‌ – ಡೆಲ್ಲಿ ವಿರುದ್ಧ ಆರ್​ಸಿಬಿಗೆ 16 ರನ್‍ಗಳ ಜಯ

    ಮುಂಬೈ: ಆರ್​ಸಿಬಿ ನೀಡಿದ ಬೃಹತ್ ಮೊತ್ತ ಬೆನ್ನಟ್ಟಿದ ಡೆಲ್ಲಿ ಒಂದು ಹಂತದಲ್ಲಿ ಗೆಲ್ಲುವ ವಿಶ್ವಾಸದಲ್ಲಿತ್ತು. ಈ ವೇಳೆ ರಿಷಭ್ ಪಂತ್ ಅವರ ಅದ್ಭುತ ಕ್ಯಾಚ್ ಒಂದನ್ನು ಹಿಡಿದ ವಿರಾಟ್ ಕೊಹ್ಲಿ ಡೆಲ್ಲಿ ಗೆಲುವಿನ ಆಸೆಗೆ ತಣ್ಣಿರೇರಚಿದರು.

    ಆರ್​ಸಿಬಿ ಪರ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಬೌಲರ್‌ಗಳ ಆಟಕ್ಕೆ ತಲೆ ಬಾಗಿದ ಡೆಲ್ಲಿ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 173 ರನ್ ಗಳಿಸಲಷ್ಟೆ ಶಕ್ತವಾಗಿ ಸೋಲಿಗೆ ಶರಣಾಯಿತು. ಆರ್‌ಸಿಬಿ 16 ರನ್‌ಗಳ ಗೆಲುವಿನ ನಗೆ ಬೀರಿತು.

    190 ರನ್‍ಗಳ ಟಾರ್ಗೆಟ್ ಪಡೆದ ಡೆಲ್ಲಿಗೆ ಡೇವಿಡ್ ವಾರ್ನರ್ ಸ್ಫೋಟಕ 66 ರನ್ (38 ಎಸೆತ, 4 ಬೌಂಡರಿ, 5 ಸಿಕ್ಸ್) ಚಚ್ಚಿ ಗೆಲುವಿನ ಭರವಸೆ ಮೂಡಿಸಿದರು. ವಾರ್ನರ್ ವಿಕೆಟ್ ಕಳೆದುಕೊಂಡ ಬಳಿಕ ಪೆವಿಲಿಯನ್ ಪರೇಡ್ ನಡೆಸಿದ ಡೆಲ್ಲಿ ತಂಡಕ್ಕೆ ರಿಷಭ್ ಪಂತ್ ಕೊನೆಯಲ್ಲಿ 34 ರನ್ (17 ಎಸೆತ, 3 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆಗುವುದರೊಂದಿಗೆ ಗೆಲುವಿನ ಬಾಗಿಲು ಮುಚ್ಚಿಕೊಂಡಿತು.

    ಮಾಕ್ಸಿ,ಕಾರ್ತಿಕ್ ಬೊಂಬಾಟ್ ಬ್ಯಾಟಿಂಗ್
    ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬೆಂಗಳೂರು ತಂಡ ಆರಂಭಿಕ ಅಘಾತ ಅನುಭವಿಸಿತು. ಆರಂಭಿಕ ಆಟಗಾರ ಅನುಜ್ ರಾವತ್ ಸೊನ್ನೆ ಸುತ್ತಿದರೆ, ಡು ಪ್ಲೆಸಿಸ್ ಗಳಿಗೆ 8 ರನ್ (11 ಎಸೆತ, 2 ಬೌಂಡರಿ)ಗೆ ಅಂತ್ಯವಾಯಿತು. ಮತ್ತೆ ಬಂದ ವಿರಾಟ್ ಕೊಹ್ಲಿ 12 ರನ್ (14 ಎಸೆತ, 1 ಬೌಂಡರಿ) ಸಿಡಿಸಿ ರನೌಟ್ ಆಗಿ ಹೊರನಡೆದರು.


    ಆ ಬಳಿಕ ಗ್ಲೇನ್ ಮ್ಯಾಕ್ಸ್‌ವೆಲ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಚೇತರಿಕೆ ನೀಡಿದರು. ಅಲ್ಲದೆ ವೈಯಕ್ತಿಕ 55 ರನ್ (34 ಎಸೆತ, 7 ಬೌಂಡರಿ, 2 ಸಿಕ್ಸ್) ಸಿಡಿಸಿ ಬಿಗ್ ಹಿಟ್ ಸಿಡಿಸಲು ಹೋಗಿ ಕೈ ಸುಟ್ಟುಕೊಂಡರು. ನಂತರ ಜೊತೆಯಾದ ದಿನೇಶ್ ಕಾರ್ತಿಕ್ ಮತ್ತು ಶಹಬಾಜ್ ಅಹಮದ್ ಆರ್‌ಸಿಬಿ ತಂಡದ ರನ್ ಏರಿಕೆಯ ಜವಾಬ್ದಾರಿ ಹೊತ್ತರು. ಈ ಜೋಡಿ ಸ್ಲಾಗ್ ಓವರ್‌ಗಳಲ್ಲಿ ಬೌಂಡರಿ, ಸಿಕ್ಸರ್‌ಗಳನ್ನು ಸರಾಗವಾಗಿ ಸಿಡಿಸಿ ನೋಡ ನೋಡುತ್ತಿದ್ದಂತೆ ತಂಡದ ಮೊತ್ತವನ್ನು 180ರ ಗಡಿದಾಟಿಸಿದರು. ಈ ಜೋಡಿ 6ನೇ ವಿಕೆಟ್‍ಗೆ 97 ರನ್ (52 ಎಸೆತ)ಗಳ ಜೊತೆಯಾಟವಾಡಿ ಡೆಲ್ಲಿ ಬೌಲರ್‌ಗಳನ್ನು ಡಲ್ ಹೊಡೆಸಿತು. ಅಂತಿಮವಾಗಿ ಶಹಬಾಜ್ ಅಹಮದ್ ಅಜೇಯ 32 ರನ್ (21 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ದಿನೇಶ್ ಕಾರ್ತಿಕ್ 66 ರನ್ (34 ಎಸೆತ, 5 ಬೌಂಡರಿ, 5 ಸಿಕ್ಸ್) ಸಿಡಿಸಿ ಬ್ಯಾಟಿಂಗ್ ದರ್ಬಾರ್ ನಡೆಸಿದರು. ಅಂತಿಮವಾಗಿ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 189 ಪೇರಿಸಿತು.

    ಡೆಲ್ಲಿ ಪರ ಶಾರ್ದೂಲ್ ಠಾಕೂರ್, ಖಲೀಲ್ ಅಹಮದ್, ಅಕ್ಷರ್ ಪಟೇಲ್ ಮತ್ತು ಕುಲ್‍ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.

  • ಡೆಲ್ಲಿಗೆ ಡಿಚ್ಚಿ ಹೊಡೆದ ಡಿಕಾಕ್ – ಲಕ್ನೋಗೆ 6 ವಿಕೆಟ್‌ಗಳ ಭರ್ಜರಿ ಜಯ

    ಡೆಲ್ಲಿಗೆ ಡಿಚ್ಚಿ ಹೊಡೆದ ಡಿಕಾಕ್ – ಲಕ್ನೋಗೆ 6 ವಿಕೆಟ್‌ಗಳ ಭರ್ಜರಿ ಜಯ

    ಮುಂಬೈ: ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಲಕ್ನೋ ಪರ ಕ್ವಿಂಟನ್ ಡಿ ಕಾಕ್ ಅಬ್ಬರದ ಆಟದ ನಡುವೆಯೂ ಗೆಲುವಿಗಾಗಿ ಪರದಾಡಿದ ಲಕ್ನೋ ಅಂತಿಮವಾಗಿ 2 ಎಸೆತ ಬಾಕಿ ಇರುವಂತೆ 6 ವಿಕೆಟ್ ಅಂತರದಿಂದ ಗೆದ್ದು ಬೀಗಿತು.

    159 ರನ್‍ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಲಕ್ನೋ ತಂಡ ಉತ್ತಮ ಆರಂಭ ಪಡೆಯಿತು. ನಾಯಕ ಕೆ.ಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಮೊದಲ ವಿಕೆಟ್‍ಗೆ 73 ರನ್ (58 ಎಸೆತ)ಗಳ ಭರ್ಜರಿ ಆರಂಭ ನೀಡಿದರು. ರಾಹುಲ್ 24 ರನ್ (25 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಆದರೂ ಡಿ ಕಾಕ್ ಆರ್ಭಟ ಮಾತ್ರ ನಿಲ್ಲಿಸಲಿಲ್ಲ. ಆದರೆ ಡಿ ಕಾಕ್ ಅಬ್ಬರದ ಬ್ಯಾಟಿಂಗ್ 80 ರನ್ (52 ಎಸೆತ, 9 ಬೌಂಡರಿ, 2 ಸಿಕ್ಸ್) ಬಾರಿಸಿ ಔಟ್ ಆದರು. ಅಂತಿಮವಾಗಿ ಬದೋನಿ ಮತ್ತು ಕೃನಾಲ್ ಪಾಂಡ್ಯ 19.4 ಓವರ್‌ಗಳಲ್ಲಿ ಅಂತ್ಯಕ್ಕೆ 155 ರನ್ ಸಿಡಿಸಿ ಲಕ್ನೋಗೆ 6 ವಿಕೆಟ್‍ಗಳ ಜಯ ತಂದುಕೊಟ್ಟರು.

    ಸಾಧಾರಣ ಮೊತ್ತ ಬೆನ್ನಟ್ಟಿದ ಲಕ್ನೋ ತಂಡ ಉತ್ತಮ ಆರಂಭ ಪಡೆಯಿತು. ನಾಯಕ ಕೆ.ಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಮೊದಲ ವಿಕೆಟ್‍ಗೆ 73 ರನ್ (58 ಎಸೆತ)ಗಳ ಭರ್ಜರಿ ಆರಂಭ ನೀಡಿದರು. ರಾಹುಲ್ 24 ರನ್ (25 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಆದರೂ ಡಿ ಕಾಕ್ ಆರ್ಭಟ ಮಾತ್ರ ನಿಲ್ಲಿಸಲಿಲ್ಲ.

    ಈ ಮೊದಲು ಟಾಸ್ ಗೆದ್ದ ಲಕ್ನೋ ನಾಯಕ ಕೆಎಲ್ ರಾಹುಲ್ ಎದುರಾಳಿ ತಂಡ ಡೆಲ್ಲಿಯನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಡೆಲ್ಲಿ ಪರ ಪೃಥ್ವಿ ಶಾ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್‍ಗೆ ಮುಂದಾದರು. ಅಲ್ಲದೆ ಮೊದಲ ವಿಕೆಟ್‍ಗೆ ಡೇವಿಡ್ ವಾರ್ನರ್ ಜೊತೆ 67 ರನ್ (45 ಎಸೆತ)ಗಳ ಜೊತೆಯಾಟವಾಡಿದರು. ಆದರೆ ಇದರಲ್ಲಿ ವಾರ್ನರ್ ಗಳಿಕೆ 4 ಮಾತ್ರ ಅಷ್ಟರಲ್ಲೇ ವಾರ್ನರ್ ಸುಸ್ತಾದರು. ಬಳಿಕ ಬಂದ ರೋವ್ಮನ್ ಪೋವೆಲ್ 3 ರನ್‍ಗಳಿಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.

    ನಂತರ ರಿಷಭ್ ಪಂತ್ ಮತ್ತು ಸರ್ಫರಾಜ್ ಖಾನ್ 4ನೇ ವಿಕೆಟ್‍ಗೆ ಜೊತೆಯಾಗಿ ನಿಧಾನಗತಿಯಲ್ಲಿ ರನ್ ಸೇರಿಸಿದರು. ಕೊನೆಯ ಎಸೆತದ ವರೆಗೂ ಬ್ಯಾಟಿಂಗ್ ಮುಂದುವರಿಸಿದ ಈ ಜೋಡಿ 4ನೇ ವಿಕೆಟ್‍ಗೆ ಮುರಿಯದ 75 ರನ್ (57 ಎಸೆತ)ಗಳ ಜೊತೆಯಾಟವಾಡಿತು. ಪಂತ್ ಅಜೇಯ 39 ರನ್ (36 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ಸರ್ಫರಾಜ್ ಖಾನ್ 36 ರನ್ (28 ಎಸೆತ, 3 ಬೌಂಡರಿ) ಸಿಡಿಸಿ ಮಿಂಚಿದರು. ಅಂತಿಮವಾಗಿ ಡೆಲ್ಲಿ ನಿಗದಿತ ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 149 ರನ್ ಪೇರಿಸಿತು.

  • ಡೆಲ್ಲಿಗೆ ಟಕ್ಕರ್ ನೀಡಿದ ಟೈಟಾನ್ಸ್ – ಗುಜರಾತ್‍ಗೆ ಭರ್ಜರಿ ಜಯ

    ಡೆಲ್ಲಿಗೆ ಟಕ್ಕರ್ ನೀಡಿದ ಟೈಟಾನ್ಸ್ – ಗುಜರಾತ್‍ಗೆ ಭರ್ಜರಿ ಜಯ

    ಪುಣೆ: ಗುಜರಾತ್ ಟೈಟಾನ್ಸ್ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ನೀಡಿದ ಉತ್ತಮ ಪ್ರದರ್ಶನದ ಫಲವಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 14 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

    ಗೆಲ್ಲಲು 172 ರನ್‍ಗಳ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ನಾಯಕ ರಿಷಭ್ ಪಂತ್ 43 ರನ್ (29 ಎಸೆತ, 7 ಬೌಂಡರಿ) ಮತ್ತು ಲಲಿತ್ ಯಾದವ್ 25 ರನ್ (22 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ಹೋರಾಡಿದ್ದನ್ನು ಹೊರತುಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್‌ ಕೂಡ ಡೆಲ್ಲಿ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಲು ಎಡವಿದರು. ಅಂತಿಮವಾಗಿ ಡೆಲ್ಲಿ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 157 ರನ್‌ಗಳಿಸಲಷ್ಟೆ ಶಕ್ತವಾಗಿ ಸೋಲು ಕಂಡಿತು.

    ಡೆಲ್ಲಿ ನಾಯಕನ ನಿರ್ಧಾರದಂತೆ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ಪಡೆದ ಗುಜರಾತ್ ಟೈಟಾಟ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮ್ಯಾಥ್ಯೂ ವೇಡ್ 1 ರನ್‍ಗೆ ಸುಸ್ತಾದರು. ನಂತರ ವಿಜಯ್ ಶಂಕರ್ 13 ರನ್ (20 ಎಸೆತ, 1 ಬೌಂಡರಿ) ಬಾರಿಸಿ ನಿರಾಸೆ ಮೂಡಿಸಿದರು.

    ನಂತರ ಜೊತೆಯಾದ ಶುಭಮನ್ ಗಿಲ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ 3ನೇ ವಿಕೆಟ್‍ಗೆ 65 ರನ್ (47 ಎಸೆತ) ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಹಾರ್ದಿಕ್ ಪಾಂಡ್ಯ 31 ರನ್ (27 ಎಸೆತ, 4 ಬೌಂಡರಿ) ಸಿಡಿಸಿ ಔಟ್ ಆದರು. ಆದರೆ ಗಿಲ್ ಮಾತ್ರ ತಮ್ಮ ಬ್ಯಾಟಿಂಗ್ ಆರ್ಭಟ ಮುಂದುವರಿಸಿ 84 ರನ್ (46 ಎಸೆತ 6 ಬೌಂಡರಿ, 4 ಸಿಕ್ಸ್) ಬಾರಿಸಿ ಕ್ಯಾಚ್ ನೀಡಿ ಔಟ್ ಆದರು. ಅಂತಿಮವಾಗಿ ಟೈಟಾನ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 171 ರನ್ ಪೇರಿಸಿತು.

    ಡೆಲ್ಲಿ ಪರ ಮುಸ್ತಫಿಜುರ್ ರೆಹಮಾನ್ 3 ವಿಕೆಟ್ ಮಿಂಚಿದರೆ, ಖಲೀಲ್ ಅಹಮದ್ 2 ಮತ್ತು ಕುಲ್‍ದೀಪ್ ಯಾದವ್ 1 ವಿಕೆಟ್ ಕಿತ್ತರು.

  • ಹಿಜಬ್ ತೀರ್ಪು – ರಾಯಚೂರಿನಲ್ಲಿ 2 ದಿನ ನಿಷೇಧಾಜ್ಞೆ

    ಹಿಜಬ್ ತೀರ್ಪು – ರಾಯಚೂರಿನಲ್ಲಿ 2 ದಿನ ನಿಷೇಧಾಜ್ಞೆ

    ರಾಯಚೂರು: ಉಚ್ಛ ನ್ಯಾಯಾಲಯದಲ್ಲಿ ಹಿಜಾಬ್ ಅಂತಿಮ ತೀರ್ಪು ಹಿನ್ನೆಲೆ ಇಂದು ಬೆಳಗ್ಗೆ 6 ಗಂಟೆಯಿಂದ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. 48 ಗಂಟೆಗಳ ಕಾಲ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

    ಜಿಲ್ಲೆಯಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಆದೇಶ ಹೊರಡಿಸಿದ್ದಾರೆ. ವಿವಿಗಳ ಪರೀಕ್ಷೆ ಹೊರತುಪಡಿಸಿ ಉಳಿದಂತೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ಮಂಗಳವಾರ ಬೆಳಗ್ಗೆ 10:30ಕ್ಕೆ ಹಿಜಬ್‌ ಹೈಕೋರ್ಟ್‌ ತೀರ್ಪು

    ರಾಯಚೂರು, ಲಿಂಗಸೂಗೂರು, ಸಿಂಧನೂರು ನಗರ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ತೀವ್ರ ನಿಗಾ ವಹಿಸಲು ಸೂಚನೆ ನೀಡಲಾಗಿದೆ. ಮೆರವಣಿಗೆ, ಸಂಭ್ರಮಾಚರಣೆ ಮತ್ತು ಹೋರಾಟಗಳಿಗೆ ಎರಡು ದಿನಗಳ ಕಾಲ ನಿಷೇಧ ಹೇರಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಬಿತ್ತು ಭಾರತದ ಕ್ಷಿಪಣಿ- ಭಾರತ ಹೇಳಿದ್ದೇನು?

    200ಕ್ಕೂ ಹೆಚ್ಚು ಪೊಲೀಸರಿಂದ ನಗರ, ಪಟ್ಟಣ ಪ್ರದೇಶಗಳಲ್ಲಿ ಭದ್ರತೆ ಒದಗಿಸಲಾಗಿದೆ. ಸೂಕ್ಷ್ಮವಾಗಿ ಕಾಲೇಜುಗಳ ಬಳಿ 10 ಜನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಜಿಲ್ಲಾಡಳಿತದ ತಡರಾತ್ರಿ ವೇಳೆ ರಜೆ ಘೋಷಣೆ ತೀರ್ಮಾನ ಮಾಡಿದ್ದರಿಂದ ಮಾಹಿತಿ ಕೊರತೆಯಿಂದಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬಂದು ವಾಪಸ್ಸಾಗುತ್ತಿದ್ದಾರೆ.

  • ಸಕಾಲ ಯೋಜನೆ ಅನುಷ್ಠಾನದಲ್ಲಿ ರಾಜ್ಯದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆ ಮತ್ತೊಮ್ಮೆ ಪ್ರಥಮ: ಆರ್. ಲತಾ

    ಸಕಾಲ ಯೋಜನೆ ಅನುಷ್ಠಾನದಲ್ಲಿ ರಾಜ್ಯದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆ ಮತ್ತೊಮ್ಮೆ ಪ್ರಥಮ: ಆರ್. ಲತಾ

    ಚಿಕ್ಕಬಳ್ಳಾಪುರ: ಸಕಾಲ ಯೋಜನೆ ಅನುಷ್ಠಾನದಲ್ಲಿ ರಾಜ್ಯದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆ ಮತ್ತೊಮ್ಮೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ ಎಂದು ಜಿಲ್ಲಾಧಿಕಾರಿ ಆರ್. ಲತಾ ಹೇಳಿದರು.

    ನಿಗದಿತ ಕಾಲಮಿತಿಯೊಳಗೆ ಸಾರ್ವಜನಿಕ ಅರ್ಜಿಗಳನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಕಾಲ ಯೋಜನೆ 2022ರ ಫೆಬ್ರವರಿ ತಿಂಗಳ ಪ್ರಗತಿಯ ಅಂಕಿ ಅಂಶಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆ 2022ರ ಫೆಬ್ರವರಿ ತಿಂಗಳಿನಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದೆ. ಕಳೆದ ಜನವರಿ ಮಾಹೆಯಲ್ಲಿಯೂ ಸಹ ಪ್ರಥಮ ಸ್ಥಾನಗಳಿಸಿ ಉತ್ತಮ ಸಾಧನೆ ಮಾಡಿತ್ತು ಎಂದು ತಿಳಿಸಿದ್ದಾರೆ.

    ಈ ಕುರಿತು ಅವರು ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಫೆಬ್ರವರಿ ಮಾಹೆಯಲ್ಲಿ ಒಟ್ಟು 83,034 ಅರ್ಜಿಗಳನ್ನು ಸಕಾಲ ಯೋಜನೆಯಡಿ ಸ್ವೀಕರಿಸಿ, ಈ ಪೈಕಿ 74,968 ಅರ್ಜಿಗಳನ್ನು ಸಕಾಲ ನಿಯಮಗಳನ್ವಯ ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಲಾಗಿದೆ. 4,347 ಅರ್ಜಿಗಳು ಸೂಕ್ತ ದಾಖಲೆಗಳಿಲ್ಲದ ಕಾರಣ ತಿರಸ್ಕøತಗೊಂಡಿವೆ. ಇನ್ನೂ 6,522 ಅರ್ಜಿಗಳು ವಿಲೇವಾರಿಯಾಗುವುದು ಬಾಕಿಯಿದೆ. ನಿಗದಿತ ಕಾಲಮಿತಿಯೊಳಗೆ ಅರ್ಜಿಗಳು ವಿಲೇವಾರಿಯಾಗುವುದರಿಂದ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಅಲೆಯುವುದು ತಪ್ಪುತ್ತದೆ. ಜೊತೆಗೆ ಆಡಳಿತವೂ ಪಾರದರ್ಶಕವಾಗಿ ನಡೆಯಲು ಈ ಯೋಜನೆ ಸಹಕಾರಿಯಾಗಿದೆ. ಸಕಾಲ ಯೋಜನೆ ಅನುಷ್ಠಾನದಲ್ಲಿ ಫೆಬ್ರವರಿ ಮಾಹೆಯಲ್ಲೂ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದುಕೊಂಡಿರುವುದು ಸಂತಸ ತಂದಿದೆ ಎಂದರು. ಇದನ್ನೂ ಓದಿ: ವೆಲ್ ಕಮ್ ಬ್ಯಾಕ್! ನಿಮ್ಮ ಕುಟುಂಬಗಳು ನಿಮಗಾಗಿ ಉಸಿರು ಬಿಗಿಹಿಡಿದು ಕಾಯುತ್ತಿವೆ: ಸ್ಮೃತಿ ಇರಾನಿ

    ಸಕಾಲ ಯೋಜನೆಯ ಅನುಷ್ಠಾನದಲ್ಲಿ ಜಿಲ್ಲೆ ಯಾವಾಗಲೂ ಮುಂಚೂಣಿಯಲ್ಲಿದ್ದು, ಸದರಿ ಯೋಜನೆ ಆರಂಭವಾದಾಗಿನಿಂದ (2012 ರಿಂದ) ಈ ವರೆಗೆ ಸರ್ಕಾರ ಈ ಯೋಜನೆಯ ಪ್ರಗತಿಯ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ ಮಾಹೆಗಳ ಪೈಕಿ ಜಿಲ್ಲೆಯು ರಾಜ್ಯದಲ್ಲಿಯೇ 48 ಬಾರಿ ಪ್ರಥಮ ಸ್ಥಾನ ಗಳಿಸಿರುವುದು ಜಿಲ್ಲಾಡಳಿತದ ಪಾರದರ್ಶಕ, ಯುಕ್ತ, ತ್ವರಿತ ಆಡಳಿತಕ್ಕೆ ಹಾಗೂ ಸರ್ಕಾರದ ಎಲ್ಲಾ ಯೋಜನೆಗಳ ದಕ್ಷ ಅನುಷ್ಠಾನಕ್ಕೆ ಕೈಗನ್ನಡಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

    ಸಕಾಲ ಯೋಜನೆಯಡಿ ಅರ್ಜಿಗಳ ವಿಲೇವಾರಿ ಕುರಿತಂತೆ ರಾಜ್ಯ ಸರ್ಕಾರ ಪ್ರತಿ ತಿಂಗಳು ರ್ಯಾಂಕಿಂಗ್ ಪಟ್ಟಿ ಪ್ರಕಟಿಸುತ್ತದೆ. ಜಿಲ್ಲೆಗಳ ಸಾಧನೆಗೆ ಅನುಗುಣವಾಗಿ ಸ್ಥಾನ ನೀಡಲಾಗುತ್ತದೆ. ಕಾಲ ಮಿತಿಯಲ್ಲಿ ಕಡತ ವಿಲೇವಾರಿಯಾಗಬೇಕು ಹಾಗೂ ನಾಗರೀಕರು ಸರ್ಕಾರಿ ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸಕಾಲ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ಸಾರ್ವಜನಿಕರಿಗೆ ನಿಗದಿತ ಅವಧಿಯೊಳಗೆ ಸರ್ಕಾರದ ಸೇವೆಗಳು ಲಭ್ಯವಾಗಲಿವೆ ಎಂದರು.

    ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮದಡಿ ಸಕಾಲ ಯೋಜನೆ ಆರಂಭದಿಂದ ಈ ವರೆಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತವು ಒಟ್ಟು 21,81,415 ಅರ್ಜಿಗಳನ್ನು ಸ್ವೀಕರಿಸಿ 21,51,254 ಅರ್ಜಿಗಳನ್ನು ವಿಲೇವಾರಿ ಮಾಡಿದೆ. ಈ ಪೈಕಿ 48 ಬಾರಿ ಪ್ರಥಮ, 14 ಬಾರಿ ದ್ವಿತೀಯ ಹಾಗೂ 10 ಬಾರಿ ತೃತೀಯ ಸ್ಥಾನ ಗಳಿಸಿದೆ. ಒಟ್ಟಾರೆ 48 ಬಾರಿ (ಮಾಹೆ) ರಾಜ್ಯ ದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ ಸ್ಥಾನ ಗಳಿಸಿ ಜಿಲ್ಲಾಡಳಿತ ಗಮನಾರ್ಹ ಸಾಧನೆ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದಲ್ಲಿ ಮಾನ್ಯ ಸಕಾಲ ಸಚಿವರಿಂದ ಪ್ರಶಂಸೆ ಪಡೆದಿರುವ ಕೀರ್ತಿಯು ಜಿಲ್ಲೆಗೆ ಸಲ್ಲುತ್ತದೆ. ಇದನ್ನೂ ಓದಿ: ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ – ರಷ್ಯನ್ ಉದ್ಯಮಿ ಘೋಷಣೆ!

    ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವು ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಸರ್ಕಾರಿ ಯೋಜನೆಗಳ ಅನುಷ್ಟಾನ ಹಾಗೂ ಸೇವೆ ನೀಡುವಲ್ಲಿ ಸಹಕಾರಿಯಾಗಿ ನಿಂತಿದೆ. ಈ ಅಭೂತಪೂರ್ವ ಸಾಧನೆಗೆ ಸಹಕಾರ ನೀಡಿದ ಹಾಗೂ ಅಹರ್ನಿಶಿ ಶ್ರಮಿಸಿದ ಜಿಲ್ಲಾಡಳಿತದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಭಿನಂದನೆಗಳು.

    ಮುಂದಿನ ದಿನಗಳಲ್ಲಿಯೂ ತಾವೆಲ್ಲರೂ ತಮ್ಮ ಕಾರ್ಯ ವೈಖರಿಯನ್ನು ಹೀಗೆಯೇ ಯಶಸ್ವಿಯಾಗಿ ನಿರ್ವಹಿಸಿ ಪ್ರಥಮ ಸ್ಥಾನವನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು. ಇದೇ ವೇಳೆ ಈ ಸಾಧನೆಗೆ ಕೈಜೋಡಿಸಿದ ಜಿಲ್ಲೆಯ ಸಮಸ್ತ ಜನತೆಗೆ ಹಾಗೂ ಎಲ್ಲಾ ಜನಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿಗಳು ಕೃತಜ್ಞತೆಯನ್ನು ತಿಳಿಸಿದರು.