Tag: DC

  • ತುಮಕೂರಲ್ಲಿ ಮೇವು ಹಗರಣವಾಗಿಲ್ಲ: ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ವರದಿ ಸಲ್ಲಿಕೆ

    ತುಮಕೂರಲ್ಲಿ ಮೇವು ಹಗರಣವಾಗಿಲ್ಲ: ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ವರದಿ ಸಲ್ಲಿಕೆ

    ತುಮಕೂರು: ಜಿಲ್ಲೆಯ ಗೋ ಶಾಲೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ಜಿಲ್ಲಾಧಿಕಾರಿ ಕೆಪಿ ಮೋಹನ್ ರಾಜ್ ಸರ್ಕಾರಕ್ಕೆ ವರದಿ ನೀಡಿದ್ದಾರೆ.

    ಅಕ್ರಮ ನಡದಿದೆ ಎಂಬ ಹಿನ್ನಲೆಯಲ್ಲಿ ಅಧಿಕಾರಿಗಳಿಗೆ ಲೋಕಾಯುಕ್ತ ಸಂಸ್ಥೆಯಿಂದ ನೋಟಿಸ್ ನೀಡಲಾಗಿದೆ ಎಂಬ ವಿಚಾರವೂ ಸುಳ್ಳು ಎಂದು ಜಿಲ್ಲಾಧಿಕಾರಿ ತಾವು ನೀಡಿದ ವರದಿಯಲ್ಲಿ ಹೇಳಿದ್ದಾರೆ. ಅಲ್ಲದೆ ಜಿಲ್ಲೆಯ 8 ತಾಲೂಕುಗಳಲ್ಲಿ 33 ಗೋ ಶಾಲೆ ಹಾಗೂ 2 ಮೇವು ಬ್ಯಾಂಕ್ ತೆರೆಯಲಾಗಿದೆ. ಟೆಂಡರ್ ಮೂಲಕವೇ ಮೇವು ಖರೀದಿ ಮಾಡಲಾಗಿದೆ. ಇಲ್ಲಿವರೆಗೆ 34 ಕೋಟಿ ರೂ. ಮಾತ್ರ ಖರ್ಚಾಗಿದ್ದು ಜಿಲ್ಲಾಡಳಿತ 15.75 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಟೆಂಡರ್‍ದಾರರಿಗೆ ಇನ್ನೂ 18.25 ಕೋಟಿ ರೂ. ಬಾಕಿ ನೀಡಬೇಕಿದೆ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ವರದಿ ನೀಡಿದ್ದಾರೆ.

    ಈ ಮೂಲಕ ಜಿಲ್ಲೆಯೊಂದರಲ್ಲೇ ಗೋ ಶಾಲೆಯಲ್ಲಿ ಮೇವು ಖರೀದಿಯಲ್ಲಿ 22 ಕೋಟಿ ರೂ. ಅವ್ಯವಹಾರವಾಗಿದೆ ಎಂದು ದೃಢಪಡಿಸಿದ ಉಪಲೋಕಾಯುಕ್ತರ ವರದಿಯೇ ಸುಳ್ಳು ಅಂತ ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

    ಏನಿದು ಪ್ರಕರಣ?: ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ನಿವಾಸಿ ಮಲ್ಲಿಕಾರ್ಜುನ್ ಎನ್ನುವವರು ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಉಪಲೋಕಾಯುಕ್ತ ನ್ಯಾ. ಅಡಿಯವರು ಬರಗಾಲದ ಹಿನ್ನಲೆಯಲ್ಲಿ ಪ್ರಾರಂಭಿಸಿದ ಗೋ ಶಾಲೆಗಳಿಗೆ ಖುದ್ದು ಭೆಟಿ ನೀಡಿ ಪರಿಶೀಲಿಸಿದ್ದರು. ಇಲ್ಲಿ ಭಾರಿ ಅಕ್ರಮ ನಡೆದಿರುವುದು ಪತ್ತೆಯಾಗಿತ್ತು. ಮೇವು ಖರಿದಿಸಿರುವ ರಸೀದಿಗಳಿಗೂ, ದಾಸ್ತಾನು ನಿರ್ವಹಣೆ ಪುಸ್ತಕದಲ್ಲಿರುವ ಮಾಹಿತಿಗೂ ವ್ಯತ್ಯಾಸ ಕಂಡುಬಂದಿತ್ತು.

    ತುಮಕೂರು ಜಿಲ್ಲೆಯ 7 ತಾಲೂಕುಗಳ ಗೋಶಾಲೆ ನಿರ್ವಹಣೆಗೆ ಬಿಡುಗಡೆ ಮಾಡಿದ 33.96 ಲಕ್ಷ ರೂ. ಅಕ್ರಮ ನಡೆದಿದೆ. ಅದೇ ರೀತಿ ಮೇವು ಖರೀದಿಯಲ್ಲೂ 21.98 ಕೋಟಿ ರೂ ದುರ್ಬಳಕೆ ಅಗಿದೆ. ಕಾನೂನು ಸಚಿವ ಟಿ.ಬಿ.ಜಯಚಂದ್ರರ ಸ್ವಕ್ಷೇತ್ರ ಶಿರಾದಲ್ಲಿ ಬರೋಬ್ಬರಿ 6.55 ಕೋಟಿ ರೂ. ಅಕ್ರಮವಾಗಿದೆ. ಉಳಿದಂತೆ ಗುಬ್ಬಿಯಲ್ಲಿ 1 ಕೋಟಿ, ಗೃಹಸಚಿವರ ಕ್ಷೇತ್ರ ಕೊರಟಗೆರೆಯಲ್ಲಿ 1.55 ಕೋಟಿ, ತಿಪಟೂರಲ್ಲಿ 2.99 ಕೋಟಿ, ತುರುವೇಕೆರೆಯಲ್ಲಿ 1.49 ಕೋಟಿ, ಪಾವಗಡದಲ್ಲಿ 3.10 ಕೋಟಿ, ಚಿಕ್ಕನಾಯಕನ ಹಳ್ಳಿಯಲ್ಲಿ 4.92 ಕೋಟಿ ರೂ ಅವ್ಯವಹಾರ ನಡೆದಿದೆ ಎಂದು ಉಪಲೋಕಾಯುಕ್ತರ ವರದಿಯಲ್ಲಿ ಹೇಳಲಾಗಿದೆ.

  • ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಯತ್ನ

    ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಯತ್ನ

    ಹಾವೇರಿ: ಕಳಪೆ ಗುಣಮಟ್ಟದ ಬಿತ್ತನೆ ಬೀಜದಿಂದ ಫಸಲು ಬಾರದ ಹಿನ್ನಲೆಯಲ್ಲಿ ರೈತರೊಬ್ಬರು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಯತ್ನಿಸಿದ ರೈತನನ್ನು 52 ವರ್ಷ ವಯಸ್ಸಿನ ಪ್ರಕಾಶ ಯರಬಾಳ್ ಎಂದು ಗುರುತಿಸಲಾಗಿದೆ. ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ವಡೇರಾಯನಹಳ್ಳಿ ಗ್ರಾಮದ ರೈತ ಮೂರು ಎಕರೆ ಜಮೀನಿನಲ್ಲಿ ಸೂರ್ಯಕಾಂತಿ ಬೆಳೆಯನ್ನು ಹಾಕಿದ್ದರು. ಆದರೆ ಬೆಳೆ ಬೆಳೆದರೂ ಫಸಲು ಮಾತ್ರ ಬಂದಿಲ್ಲ. ಇದರಿಂದ ಬೇಸತ್ತ ರೈತ ಕಾವೇರಿ ಕಂಪನಿಗೆ ದೂರು ನೀಡಿದ್ದರು. ಕೃಷಿ ಸಂಶೋಧಕರು ಜಮೀನಿಗೆ ಭೇಟಿ ಪರಿಶೀಲನೆ ನಡೆಸಿ ವರದಿ ನೀಡಿದ್ದರು. ವರದಿಯಲ್ಲಿ ವಾತಾವರಣ ಸರಿ ಇಲ್ಲದ ಕಾರಣ ಫಸಲು ಬಂದಿಲ್ಲ ಅಂತಾ ಹೇಳಲಾಗಿದೆ.

    ಇದರಿಂದಾಗಿ ಪರಿಹಾರ ಸಿಗೋದಿಲ್ಲ ಎಂದು ತಿಳಿದ ರೈತ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡ ರೈತನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

  • ರೈತರೇ ಈಗಲೇ ಬಿತ್ತನೆ ಮಾಡಿ, ಇಲ್ಲವಾದ್ರೆ ಸೂಕ್ತ ಕ್ರಮ: ಚಾಮರಾಜನಗರ ಡಿಸಿ ಆದೇಶ

    ರೈತರೇ ಈಗಲೇ ಬಿತ್ತನೆ ಮಾಡಿ, ಇಲ್ಲವಾದ್ರೆ ಸೂಕ್ತ ಕ್ರಮ: ಚಾಮರಾಜನಗರ ಡಿಸಿ ಆದೇಶ

    ಚಾಮರಾಜನಗರ: ಈಗ ಮಳೆ ಬರ್ತಿದೆ. ಈಗಲೇ ಬಿತ್ತನೆ ಕಾರ್ಯ ಶುರು ಮಾಡಿ. ಒಂದು ವೇಳೆ ಬಿತ್ತನೆ ಮಾಡಿಲ್ಲ ಅಂದ್ರೆ ನಿಮ್ಮ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಚಾಮರಾಜನಗರದ ಜಿಲ್ಲಾಧಿಕಾರಿ ಬಿ.ರಾಮು ಆದೇಶ ಹೊರಡಿಸಿದ್ದಾರೆ.

    ಬರಗಾಲದಲ್ಲಿ ರೈತರ ನೆರವಿಗೆ ಬಾರದ ಜಿಲ್ಲಾಡಳಿತ ಇದೀಗ ಎರಡು ಮೂರು ಬಾರಿ ಮಳೆ ಬಿದ್ದ ತಕ್ಷಣವೇ ಬಿತ್ತನೆ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದು ಆದೇಶ ನೀಡಿದೆ. ಒಂದು ವೇಳೆ ಬಿತ್ತನೆ ಕಾರ್ಯದಲ್ಲಿ ತೊಡಿಗಿಕೊಳ್ಳದಿದ್ದರೆ ರೈತರಿಗೆ ಭೂ ಸುಧಾರಣೆ ಕಾಯ್ದೆಯಡಿ ನೋಟಿಸ್ ಜಾರಿ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ರೈತರ ಮೇಲೆ ಜಿಲ್ಲಾಧಿಕಾರಿಗಳು ಹಕ್ಕು ಚಲಾವಣೆ ಮಾಡಿದ್ದಾರೆ.

    ಡಿಸಿ ಒಬ್ಬ ಮೂರ್ಖ: ಇವಾಗ್ಲೇ ಬಿತ್ತನೆ ಮಾಡಿ ಎಂಬುವುದು ದುರಂಹಕಾರ ಆದೇಶ. ಬಿತ್ತನೆ ಮಾಡದೇ ಇದ್ದರೆ ಕ್ರಮ ತೆಗೆದುಕೊಳ್ಳುವುದಾಗಿ ಆದೇಶ ನೀಡಿದ್ದಾರೆ. ಕೂಡಲೇ ಅದನ್ನ ಹಿಂಪಡೆಯಬೇಕು. ಇದೊಂದು ನಾಚಿಕೆಗೇಡಿತನದ ಕೆಲಸ. ಡಿಸಿ ಒಬ್ಬ ಮೂರ್ಖ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಚಾಮರಾಜನಗರದಲ್ಲಿ ಕಳೆದ ಐದು ವರ್ಷಗಳಿಂದ ಭೀಕರ ಬರಗಾಲ ಆವರಿಸಿದ್ದು, ಇದರಿಂದ ಮಣ್ಣಿನ ಸತ್ವ ಸಂಪೂರ್ಣ ಕಳೆದುಕೊಂಡಿದೆ. ಇದೀಗ ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ತಕ್ಕ ಮಟ್ಟಿಗೆ ಮಳೆ ಆಗುತ್ತಿದೆ. ಹೀಗಾಗಿ ರೈತರು ತಮ್ಮ ಜಮೀನನ್ನು ಉತ್ತು ಹದ ಮಾಡಿಕೊಂಡು ಮಣ್ಣನ್ನು ಫಲವತ್ತುಗೊಳಿಸುತ್ತಿದ್ದಾರೆ. ಹೀಗಿರುವಾಗ ಏಕಾ ಏಕಿ ಜಿಲ್ಲಾಧಿಕಾರಿಗಳು ಹೊರಡಿಸಿರುವ ಈ ಆದೇಶದಿಂದ ರೈತರು ಆಕ್ರೋಶಗೊಂಡಿದ್ದು, ಡಿಸಿ ತಮ್ಮ ಆದೇಶವನ್ನು ವಾಪಸ್ಸು ಪಡೆದು ರೈತರ ಕ್ಷಮೆ ಯಾಚನೆ ಮಾಡಬೇಕೆಂದು ಜಿಲ್ಲೆಯ ರೈತರು ಆಗ್ರಹಿಸಿದ್ದಾರೆ.

     

  • ಕೆರೆಯಲ್ಲಿ ಶ್ರಮದಾನ ಮಾಡಿದ ಹಾವೇರಿಯ ಜಿಲ್ಲಾಧಿಕಾರಿ

    ಕೆರೆಯಲ್ಲಿ ಶ್ರಮದಾನ ಮಾಡಿದ ಹಾವೇರಿಯ ಜಿಲ್ಲಾಧಿಕಾರಿ

    ಹಾವೇರಿ: ಜಿಲ್ಲಾಧಿಕಾರಿಗಳು ಅಂದ್ರೆ ಕಚೇರಿ ಕೆಲಸ ಮಾಡಿಕೊಂಡು ಅಧಿಕಾರಿಗಳ ಸಭೆ ನಡೆಸಿ ಕ್ರಮ ತೆಗೆದುಕೊಳ್ಳುವುದು ಕಾಮನ್. ಆದ್ರೆ ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವ್ಹಿ.ವೆಂಕಟೇಶ್ ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಾವು ಹಾಗೂ ತಮ್ಮ ಸಿಬ್ಬಂದಿಯ ಜೊತೆ ಸೇರಿಕೊಂಡು ಶ್ರಮದಾನ ಮಾಡಿ, ಅವರ ಕುಂದು-ಕೊರತೆಗಳನ್ನ ಕೇಳಿದ್ದಾರೆ.

    ಹಾವೇರಿ ತಾಲೂಕಿನ ದೇವಿಹೊಸೂರು ಗ್ರಾಮದ ಕೆರೆಯಲ್ಲಿ ನಡೆಯುತ್ತಿರುವ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಕೆರೆಯಲ್ಲಿ ಹೂಳು ಎತ್ತಲಾಗುತ್ತಿತ್ತು. ಶ್ರಮದಾನದಲ್ಲಿ ಜಿಲ್ಲಾಧಿಕಾರಿಗಳು ಭಾಗವಾಹಿಸುವದರ ಜೊತೆ ಕಾರ್ಮಿಕರ ತೊಂದರೆಗಳನ್ನು ಆಲಿಸಿದರು.

    ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಪ್ರತಿಯೊಬ್ಬರ ಸಮಸ್ಯೆಗಳನ್ನು ಕೇಳಿದರು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸದ್ಯ ಪ್ರತಿ 15 ದಿನಕ್ಕೆ ವೇತನವನ್ನ ನೀಡಲಾಗುತ್ತದೆ. ಅದನ್ನ ಕಡಿಮೆ ಮಾಡಿ ಪ್ರತಿವಾರ ತಮ್ಮ ಖಾತೆಗೆ ಹಣಬರುವಂತೆ ಮಾಡಬೇಕು ಎಂದು ಕಾರ್ಮಿಕರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

    ಪ್ರಸ್ತಕ ವರ್ಷ ಬರಗಾಲ ಇರೋದ್ರಿಂದ ಬೇರೆ ಕಡೆ ಕೆಲಸ ಸಿಗುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ 100 ರಿಂದ 150 ದಿನಗಳ ಕಾಲ ಬಡಕೂಲಿಕಾರ್ಮಿಕರಿಗೆ ಉದ್ಯೋಗ ಸಿಗುತ್ತಿದೆ. ನಮ್ಮ ಜೊತೆಗೆ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಜೊತೆಗೆ ಆರೋಗ್ಯ ತಪಾಸಣೆ ಮಾಡಿಸಿದ್ರು. ನಮಗೆ ಬಹಳ ಸಂತೋಷವಾಗಿದೆ. ಅಲ್ಲದೆ ನಮ್ಮ ವೇತನವನ್ನ ವಾರಕ್ಕೆ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ಕೂಲಿ ಕಾರ್ಮಿಕೆ ಸರೋಜಮ್ಮ ಸುಣಗಾರ ಹೇಳಿದರು.

  • ಉಡುಪಿ ಜಿಲ್ಲಾಧಿಕಾರಿ ಕೊಲೆಯತ್ನ ಪ್ರಕರಣ- 5 ಮರಳು ದಂಧೆಕೋರರ ಗಡಿಪಾರು

    ಉಡುಪಿ ಜಿಲ್ಲಾಧಿಕಾರಿ ಕೊಲೆಯತ್ನ ಪ್ರಕರಣ- 5 ಮರಳು ದಂಧೆಕೋರರ ಗಡಿಪಾರು

    ಉಡುಪಿ: ಜಿಲ್ಲಾಧಿಕಾರಿ ಮತ್ತು 6 ಮಂದಿಯ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ 14 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅದರಲ್ಲಿ ಐದು ಮಂದಿಯನ್ನು ಗಡಿಪಾರು ಮಾಡಿದ್ದಾರೆ.

    ಉಡುಪಿ ಎಸ್‍ಪಿ ಕೆಟಿ ಬಾಲಕೃಷ್ಣ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು. ಘಟನೆ ನಡೆದ ನಂತರ ಈವರೆಗೆ 150 ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ. 8 ಮರಳುಗಾರಿಕಾ ಬೋಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಂಡ್ಲೂರು ಮರಳು ಧಕ್ಕೆ ಯಾರಿಗೆ ಸೇರಿದ್ದು ಎನ್ನುವುದರ ಬಗ್ಗೆ ತನಿಖೆಯಾಗುತ್ತಿದೆ ಎಂದರು.

    ಪ್ರಕರಣ ಸಂಬಂಧ 60 ಮಂದಿಯ ಮೇಲೆ ಐಪಿಸಿ ಸೆಕ್ಷನ್ 107 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. 4 ಮಂದಿಯ ಮೇಲೆ ಐಪಿಸಿ ಸೆಕ್ಷನ್ 110ರ ಅನ್ವಯ ಕೇಸು ದಾಖಲು ಮಾಡಲಾಗಿದೆ. ಈ ಹಿಂದಿನ ಎಲ್ಲಾ ಪ್ರಕರಣಕ್ಕೆ ಸಂಬಂಧಪಟ್ಟಂತೆ 5 ಮಂದಿ ಅಕ್ರಮ ಮರಳು ದಂಧೆಕೋರರನ್ನು ಗಡಿಪಾರು ಮಾಡುವ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.

    ಜಿಲ್ಲಾಧಿಕಾರಿಗಳಿಗೆ ಹಲ್ಲೆ ಮತ್ತು ಕೊಲೆಯತ್ನ ನಡೆಸಿದ ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಅಂದು ಸ್ಥಳದಲ್ಲಿದ್ದವರು ತಲೆಮರೆಸಿಕೊಂಡಿದ್ದಾರೆ ಎಂದು ಎಸ್‍ಪಿ ಕೆಟಿ ಬಾಲಕೃಷ್ಣ ಮಾಹಿತಿ ನೀಡಿದರು.

  • ಇದು ಅಂತ್ಯವಲ್ಲ. ಅಕ್ರಮ ವಿರುದ್ಧ ಹೋರಾಟದ ಆರಂಭ: ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ

    ಇದು ಅಂತ್ಯವಲ್ಲ. ಅಕ್ರಮ ವಿರುದ್ಧ ಹೋರಾಟದ ಆರಂಭ: ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ

    ಉಡುಪಿ: ಇದು ಅಂತ್ಯ ಅಲ್ಲ.., ಮರಳುಗಾರಿಕೆ ವಿರುದ್ಧದ ಹೊರಾಟದ ಆರಂಭ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳುವ ಮೂಲಕ ಮರಳು ಕಳ್ಳರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಜಿಲ್ಲಾಧಿಕಾರಿಗಳು ಮಾತನಾಡಿ, ಅಕ್ರಮದ ವಿರುದ್ಧದ ಹೋರಾಟದ ಆರಂಭ ಮಾಡಿದ್ದೇವೆ. ಪೊಲೀಸ್ ಇಲಾಖೆಯ ಜೊತೆಗೆ ಮುಂದಿನ ದಿನಗಳಲ್ಲಿ ಸ್ಪೆಷಲ್ ಸ್ಕ್ವಾಡ್ ರಚನೆ ಮಾಡಲಾಗುವುದು. ಸ್ಕ್ವಾಡ್ ಮೂಲಕ ಜಿಲ್ಲೆಯ ಎಲ್ಲೆಲ್ಲಾ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಅಲ್ಲೆಲ್ಲಾ ದಾಳಿ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

    ಜಿಲ್ಲಾಧಿಕಾರಿ- ಎಸಿಯ ಮೇಲೆ ಇಂತಹ ಅಮಾನವೀಯ ಘಟನೆ ಉಡುಪಿಯಂತಹ ಜಿಲ್ಲೆಯಲ್ಲಿ ನಡೆದದ್ದು ವಿಷಾದನೀಯ. ಇದರ ಹಿಂದೆ ಮರಳು ಮಾಫಿಯಾದ ಕೈವಾಡ ಇರಬಹುದು. ಪೊಲೀಸರ ತನಿಖೆಯಲ್ಲಿ ಸತ್ಯ ಹೊರಗೆ ಬರುತ್ತದೆ ಎಂದು ಹೇಳಿದರು. ನಿನ್ನೆ ರಾತ್ರಿ ಕಂಡ್ಲೂರಿನ ಭಯಾನಕ ವಾತಾವರಣ ನನ್ನನ್ನು ಕೆಲಕಾಲ ಕಂಗೆಡುವಂತೆ ಮಾಡಿತು ಎಂದು ತಡರಾತ್ರಿಯ ಭಯಾನಕ ಸನ್ನಿವೇಶವನ್ನು ನೆನಪಿಸಿಕೊಂಡರು.

    ಸ್ಥಳೀಯ ಪೊಲೀಸ್ ಠಾಣೆಗಳಿಗೆ, ತಹಶೀಲ್ದಾರ್, ಎಸಿ ಕಚೇರಿಗೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮಾಹಿತಿ ನೀಡಿ ದಾಳಿ ಮಾಡಿದ ಎಲ್ಲಾ ಪ್ರಕರಣಗಳು ಫೇಲ್ ಆಗಿತ್ತು. ಹೀಗಾಗಿ ಈ ಬಾರಿ ಗೌಪ್ಯವಾಗಿ ದಾಳಿ ನಡೆಸಿದ್ದೇವೆ ಎಂದರು.

    ಕುಂದಾಪುರದ ತನಕ ಸುಮಾರು 20 ಬೈಕ್‍ಗಳಲ್ಲಿ ನಮ್ಮನ್ನು ಹಿಂಭಾಲಿಸಿಕೊಂಡು ದುಷ್ಕರ್ಮಿಗಳು ಬಂದರು. ಅವರಿಂದ ತಪ್ಪಿಸಿಕೊಂಡು ಉಡುಪಿಯ ತನಕ ಬಂದಿದ್ದೇವೆ. ಈ ಘಟನೆ ದುರಾದೃಷ್ಟಕರ ಎಂದರು. ಉಡುಪಿ ಜಿಲ್ಲೆಯ ಸಚಿವ ಪ್ರಮೋದ್ ಮಧ್ವರಾಜ್, ಜನಪ್ರತಿನಿಧಿಗಳು ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ನಮ್ಮ ಕಂದಾಯ ಇಲಾಖೆಯ ಸಿಬ್ಬಂದಿಯಿಂದ ಬೆಂಬಲ ಸಿಕ್ಕಿದೆ. ಸಾರ್ವಜನಿಕರಿಂದ ಕೂಡಾ ಬೆಂಬಲ ಸಿಕ್ಕಿದೆ. ಜಿಲ್ಲೆಯ ಜನ ಕಾನೂನಿನ ಹೋರಾಟದ ಜೊತೆ ಇದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಹೇಳಿದರು.

    https://www.youtube.com/watch?v=NKGXeOVp68g

     

  • ಉಡುಪಿಯಲ್ಲಿ ಮರಳು ಮಾಫಿಯಾ ಅಟ್ಟಹಾಸ – ಡಿಸಿ ಕೊಲೆಗೆ ಯತ್ನಿಸಿದ ದುಷ್ಕರ್ಮಿಗಳು

    ಉಡುಪಿಯಲ್ಲಿ ಮರಳು ಮಾಫಿಯಾ ಅಟ್ಟಹಾಸ – ಡಿಸಿ ಕೊಲೆಗೆ ಯತ್ನಿಸಿದ ದುಷ್ಕರ್ಮಿಗಳು

    ಉಡುಪಿ: ಮರಳು ಮಾಫಿಯಾ ಗ್ಯಾಂಗ್ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರ ಕೊಲೆಗೆ ಯತ್ನ ನಡೆಸಿದ್ದಾರೆ.

    ಕುಂದಾಪುರ ತಾಲೂಕಿನ ಕಂಡ್ಲೂರು ಗ್ರಾಮದಲ್ಲಿ ರಾತ್ರೋ ರಾತ್ರಿ ಭಾರೀ ಮರಳು ಕಳ್ಳಸಾಗಣೆ ನಡೆಯುತ್ತಿದೆ ಎಂಬ ಮಾಹಿತಿ ಜಿಲ್ಲಾಧಿಕಾರಿಗಳಿಗೆ ಸಿಕ್ಕಿತ್ತು. ರಾತ್ರಿ 10 ಗಂಟೆ ಸುಮಾರಿಗೆ ಕಾರ್ಯಾಚರಣೆಗೆ ಹೊರಟ ಜಿಲ್ಲಾಧಿಕಾರಿ ಪ್ರಿಯಾಂಕ, ತಮ್ಮ ಗನ್ ಮ್ಯಾನ್ ಜೊತೆ ಜಿಲ್ಲಾ ಪಂಚಾಯತ್‍ನ ಕಾರನ್ನು ತೆಗೆದುಕೊಂಡು ತೆರಳಿದ್ದರು. ಅಕ್ರಮ ಮರಳುಗಾರಿಕೆ ದಾಳಿಗೆ ಕುಂದಾಪುರ ಎಸಿ ಶಿಲ್ಪಾ ನಾಗ್, ಸ್ಥಳೀಯ ಅಂಪಾರು ಗ್ರಾಮದ ಲೆಕ್ಕಾಧಿಕಾರಿ ಜೊತೆಯಾಗಿ ತೆರಳಿದ್ದರು. ಅಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಮರಳು ಕದಿಯುತ್ತಿದ್ದ ಕಳ್ಳರನ್ನು ಬಂಧಿಸಲು ಯತ್ನಿಸಿದಾಗ ಸ್ಥಳದಲ್ಲಿದ್ದ ಸುಮಾರು 40 ಜನ ಒಟ್ಟಾಗಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಎಸಿಯವರನ್ನು ಸುತ್ತುವರೆದಿದ್ದಾರೆ. ಈ ಸಂದರ್ಭ ಮಾತಿನ ಚಕಮಕಿ ನಡೆದಿದೆ.

    ಮರಳುಗಾರಿಕೆ ನಡೆಸಲು ಯತ್ನಿಸುತ್ತಿದ್ದವರು ಸ್ಥಳೀಯ ಮನೆಗಳಲ್ಲಿ ತಲೆಮರೆಸಿಕೊಳ್ಳಲು ಯತ್ನಿಸಿದ್ದಾರೆ. ಅವರನ್ನು ಬೆನ್ನತ್ತಿದ ಜಿಲ್ಲಾಧಿಕಾರಿ ಹಾಗು ಗನ್‍ಮ್ಯಾನ್ ಮೇಲೆ ಹಲ್ಲೆ ನಡೆದಿದೆ. ಮನೆಯೊಳಗೆ ಜಿಲ್ಲಾಧಿಕಾರಿ ಮತ್ತು ಎಸಿ ಹೋಗಿದ್ದಾಗ ಅವರನ್ನ ಕೂಡಿಹಾಕಿ ಸ್ಥಳೀಯ ಮಹಿಳೆಯರು ಹಲ್ಲೆಗೆ ಯತ್ನ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ ಮರಳು ಕಳ್ಳರು, ಈ ಕಡೆ ಬಂದ್ರೆ ಕೊಂದು ಮುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಇಬ್ಬರು ಮಹಿಳಾ ಅಧಿಕಾರಿಗಳು, ಗನ್ ಮ್ಯಾನ್, ಗ್ರಾಮ ಲೆಕ್ಕಾಧಿಕಾರಿ ಹಾಗೂ ವಾಹನ ಚಾಲಕರು ತಪ್ಪಿಸಿಕೊಂಡು ಬಂದಿದ್ದಾರೆ. ಈ ಸಂದರ್ಭ ಸ್ಥಳೀಯರು ಅಂಪಾರು ಗ್ರಾಮ ಲೆಕ್ಕಾಧಿಕಾರಿ ಕಾಂತರಾಜುಗೆ ಥಳಿಸಿದ್ದಾರೆ. ಕಾರನ್ನು ಬೆನ್ನತ್ತಿ ಪೆಟ್ರೋಲ್ ಹಾಕಿ ಸುಡಲು ಪ್ರಯತ್ನಿಸಿದ್ದಾರೆ. ಸುಮಾರು 20 ಬೈಕ್‍ಗಳಲ್ಲಿ ದುಷ್ಕರ್ಮಿಗಳು ಕುಂದಾಪುರ ಸಿಟಿಯವರೆಗೆ ಬೆನ್ನತ್ತಿದ್ದಾರೆ.

    ಉಡುಪಿ ನಗರ ಠಾಣೆಗೆ ಬಂದ ಜಿಲ್ಲಾಧಿಕಾರಿಗಳು ಮತ್ತು ಎಸಿ, ಕೊಲೆ ಯತ್ನ, ಕರ್ತವ್ಯಕ್ಕೆ ಅಡ್ಡಿ, ಅವಾಚ್ಯ ಶಬ್ದಗಳಿಂದ ನಿಂದನೆ, ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ- ಈ ಎಲ್ಲಾ ಆರೋಪದ ಮೇಲೆ ದುಷ್ಕರ್ಮಿಗಳ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗುವವರೆಗೆ ಸುಮ್ಮನಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಗುಡುಗಿದ್ದಾರೆ.