Tag: DC

  • ರೋಹಿಣಿ ಸಿಂಧೂರಿ ನನ್ನ ಮಗಳ ಸಮಾನ, ನನಗೂ ಕಾನೂನು ಗೊತ್ತಿದೆ: ಎ ಮಂಜು

    ರೋಹಿಣಿ ಸಿಂಧೂರಿ ನನ್ನ ಮಗಳ ಸಮಾನ, ನನಗೂ ಕಾನೂನು ಗೊತ್ತಿದೆ: ಎ ಮಂಜು

    ಹಾಸನ: ನಾನು ಕಾನೂನು ಪದವೀಧರನಾಗಿದ್ದು ನನಗೆ ಕಾನೂನು ಗೊತ್ತಿದೆ. ನಾನು ನೀತಿ ಸಂಹಿತೆ ಉಲ್ಲಂಘನೆ ಮಾಡಿಲ್ಲ ಎಂದು ಪಶು ಸಂಗೋಪನಾ ಸಚಿವ ಎ ಮಂಜು ಹೇಳಿದ್ದಾರೆ.

    ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನನ್ನ ಮಗಳ ಸಮಾನ. ನನಗೆ ಅವರ ವಯಸ್ಸಿನ ಮಗಳಿದ್ದಾಳೆ. ಯಾರದೋ ಕುಮ್ಮಕ್ಕಿನಿಂದ ಅವರು ಹೀಗೆಲ್ಲಾ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.  ಇದನ್ನೂ ಓದಿ: ಸಚಿವ ಎ.ಮಂಜು ವಿರುದ್ಧ ಡಿಸಿ ರೋಹಿಣಿ ಸೆಡ್ಡು – ಹಾಸನದ ಮಂತ್ರಿಗಳ ಕಚೇರಿಗೆ ಬೀಗ

    ಬಗರ್ ಹುಕುಂ ಸಾಗುವಳಿ ಪತ್ರಗಳನ್ನು ಕಾನೂನು ಬದ್ಧವಾಗಿಯೇ ಹಂಚಿಕೆ ಮಾಡಿದ್ದೇನೆ. ಅವರ ವಿರುದ್ಧ ಹಗೆತನ ಸಾಧಿಸುತ್ತಿಲ್ಲ. ಅವರೇ ದುರುದ್ದೇಶದಿಂದ ಹೀಗೆ ನಡೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ಸವಿವರ ದೂರು ನೀಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ: ಸಚಿವ ಎ.ಮಂಜು ವಿರುದ್ಧ ಎಫ್‍ಐಆರ್ ದಾಖಲು

    ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು ಹಿಂದೆ ಅವರು ಮಾಡಿರುವ ತಪ್ಪನ್ನು ನನಗೆ ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

  • ನೀತಿ ಸಂಹಿತೆ ಉಲ್ಲಂಘನೆ: ಸಚಿವ ಎ.ಮಂಜು ವಿರುದ್ಧ ಎಫ್‍ಐಆರ್ ದಾಖಲು

    ನೀತಿ ಸಂಹಿತೆ ಉಲ್ಲಂಘನೆ: ಸಚಿವ ಎ.ಮಂಜು ವಿರುದ್ಧ ಎಫ್‍ಐಆರ್ ದಾಖಲು

    ಹಾಸನ: ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವ ಎ. ಮಂಜು ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ನೀತಿಸಂಹಿತೆ ಜಾರಿ ಬಳಿಕವೂ ಎ ಮಂಜು ಅವರು ಸರ್ಕಾರಿ ಕಟ್ಟಡ ಬಳಸಿದ್ದಾರೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಸೂಚನೆಯ ಮೇರೆಗೆ ಚುನಾವಣಾಧಿಕಾರಿ ರಾಜೇಶ್ ದೂರು ನೀಡಿದ್ದರು.

    ಮಾರ್ಚ್ 26 ರಂದು ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಅಂದೇ ನೀತಿ ಸಂಹಿತೆ ಜಾರಿಯಾಗಿತ್ತು. ಹೀಗಾಗಿ ನೀತಿ ಸಂಹಿತೆ ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರಾಗಿರುವ ಮಂಜು ವಿರುದ್ಧ ಹಾಸನ ನಗರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ದೂರು ಏನಿತ್ತು?
    ಸಚಿವರ ಕಚೇರಿ ಇದ್ದ ಕಟ್ಟಡದಲ್ಲಿ ಅನಧಿಕೃತವಾಗಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೀತಿಸಂಹಿತೆ ಜಾರಿ ಬಳಿಕವೂ ಕಚೇರಿಯ ಬಾಗಿಲನ್ನು ಹೊರಗಿನಿಂದ ಬಂದ್ ಮಾಡಿ ಕೆಲ ಸಿಬ್ಬಂದಿ ಒಳಗೆ ಕೆಲಸಮಾಡುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಕೇಳಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ರೋಹಿಣಿ ಸಿಂಧೂರಿ ಅವರು ನೋಟೀಸ್ ನೀಡಿದ್ದರು.

  • ಅಪಘಾತಕ್ಕೀಡಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಬೀದರ್ ಡಿಸಿ

    ಅಪಘಾತಕ್ಕೀಡಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಬೀದರ್ ಡಿಸಿ

    ಬೀದರ್: ಅಫಘಾತಕ್ಕೀಡಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಜಿಲ್ಲಾಧಿಕಾರಿ ತಮ್ಮ ಕಾರಿನಲ್ಲಿ ಜಿಲ್ಲಾಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಘಟನೆ ಬೀದರ್ ತಾಲೂಕಿನ ಅಮಿಲಾಪೂರ್ ಗ್ರಾಮದ ಬಳಿ ನಡೆದಿದೆ.

    ಶಿವಕುಮಾರ್ (40) ಟ್ರ್ಯಾಕ್ಟರ್ ಡಿಕ್ಕಿಯಾಗಿ ಬಿದ್ದು ರಸ್ತೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಬಂದ ಡಿಸಿ ಎಚ್.ಆರ್ ಮಹದೇವ ಆಂಬುಲೆನ್ಸ್ ಗೆ ಕರೆ ಮಾಡಿದ್ರು. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ನಂತರ ತಮ್ಮ ಕಾರಿನಲ್ಲಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

    ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದ್ರೆ ಸಿಬ್ಬಂದಿಗಳು ರೋಗಿಯನ್ನು ಕರೆದುಕೊಂಡು ಹೋಗಲು ಸ್ಟ್ರೆಚರ್ ನೀಡಲಿಲ್ಲ. ಈ ವೇಳೆ ಆಸ್ಪತ್ರೆಯ ಸಿಬ್ಬಂದಿಗಳನ್ನು ಡಿಸಿ ತರಾಟೆ ತೆಗೆದುಕೊಂಡಿದ್ದಾರೆ. ಜಿಲ್ಲಾಧಿಕಾರಿ ತರಾಟೆಯ ಬಳಿಕ ಚಿಕಿತ್ಸೆ ನೀಡಿ ವ್ಯಕ್ತಿಯನ್ನು ಪ್ರಾಣ ಅಪಾಯದಿಂದ ಪಾರು ಮಾಡಲಾಗಿದೆ.

    ಒಟ್ಟಿನಲ್ಲಿ ಸರಿಯಾದ ಸಮಯಕ್ಕೆ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದ ಜಿಲ್ಲಾಧಿಕಾರಿಗೆ ಜಿಲ್ಲೆಯ ಜನರು ಸಲಾಂ ಹಾಕುತ್ತಿದ್ದಾರೆ.

  • ಸರ್ಕಾರಕ್ಕೆ ಮತ್ತೊಮ್ಮೆ ಭಾರೀ ಮುಖಭಂಗ- ಕೊಪ್ಪಳ ಎಸ್‍ಪಿ ಅನೂಪ್ ಶೆಟ್ಟಿ ವರ್ಗಾವಣೆಗೂ ಸಿಎಟಿ ತಡೆ

    ಸರ್ಕಾರಕ್ಕೆ ಮತ್ತೊಮ್ಮೆ ಭಾರೀ ಮುಖಭಂಗ- ಕೊಪ್ಪಳ ಎಸ್‍ಪಿ ಅನೂಪ್ ಶೆಟ್ಟಿ ವರ್ಗಾವಣೆಗೂ ಸಿಎಟಿ ತಡೆ

    ಕೊಪ್ಪಳ: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರದಲ್ಲಿ ಸಾರ್ವಜನಿಕರಿಂದ ಟೀಕೆಗೆ ಗುರಿಯಾದ ಬಳಿಕ ಇದೀಗ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆ ಕುರಿತಂತೆ ರಾಜ್ಯ ಸಕಾರಕ್ಕೆ ಮತ್ತೊಮ್ಮೆ ಭಾರೀ ಮುಖಭಂಗವಾಗಿದೆ.

    ತಮ್ಮ ದಿಢೀರ್ ವರ್ಗಾವಣೆ ಪ್ರಶ್ನಿಸಿ ಎಸ್‍ಪಿ ಡಾ.ಅನೂಪ್ ಎ. ಶೆಟ್ಟಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ) ಮೊರೆ ಹೋಗಿದ್ದರು. ಇದೀಗ ಅನೂಪ್ ಶೆಟ್ಟಿ ವರ್ಗಾವಣೆಗೂ ತಾತ್ಕಾಲಿಕ ತಡೆ ನಿಡಿದೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೊಮ್ಮೆ ಮುಖಭಂಗ

    ಒಂದು ವರ್ಷಕ್ಕೂ ಮುನ್ನ ವರ್ಗಾವಣೆ ಮಾಡಲಾಗಿದೆ. ಇದು ನಿಯಮಬಾಹಿರ ಎಂದು ಅನೂಪ್ ಶೆಟ್ಟಿ ಅವರು ಅರ್ಜಿಯಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಸದ್ಯ ಅನೂಪ್ ವರ್ಗಾವಣೆಗೆ ನ್ಯಾಯಮಂಡಳಿಯಿಂದ ತಡೆ ನಿಡಿದ್ದು, ಮಾರ್ಚ್ 22ರಂದು ಮುಂದಿನ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿಚಾರವನ್ನು ಕೇಳಿದ್ದಕ್ಕೆ ಹಾದಿಬೀದಿಯಲ್ಲಿ ಚರ್ಚೆ ಮಾಡೋಕ್ಕಾಗಲ್ಲ ಎಂದ ಸಿಎಂ

    ಕಳೆದ 8 ತಿಂಗಳ ಹಿಂದಷ್ಟೇ ಜಿಲ್ಲೆಗೆ ಆಗಮಿಸಿದ ಡಾ.ಅನೂಪ್ ಶೆಟ್ಟಿ ಅಕ್ರಮಗಳಿಗೆ ಕಡಿವಾಣ ಹಾಕಿ ಹೆಸರು ಮಾಡಿದ್ದರು. ಇದೀಗ ಸರ್ಕಾರ ಅವರನ್ನು ಬೆಂಗಳೂರು ಗುಪ್ತಚರ ಇಲಾಖೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಅನೂಪ್ ಶೆಟ್ಟಿ ಸಿಎಟಿ ಮೊರೆ ಹೋಗಿದ್ದರು.

  • ಉಡುಪಿ ಜಿಲ್ಲಾಧಿಕಾರಿ ವಿರುದ್ಧ ಅರೆಸ್ಟ್ ವಾರೆಂಟ್!

    ಉಡುಪಿ ಜಿಲ್ಲಾಧಿಕಾರಿ ವಿರುದ್ಧ ಅರೆಸ್ಟ್ ವಾರೆಂಟ್!

    ಉಡುಪಿ: ವಿಶೇಷ ನ್ಯಾಯಾಲಯದಿಂದ ಉಡುಪಿ ಜಿಲ್ಲಾಧಿಕಾರಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.

    ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸರ್ಕಾರಿ ಭೂಮಿ ಒತ್ತುವರಿ ಬಗ್ಗೆ ಮಾಹಿತಿ ನೀಡಲು ವಿಫಲರಾಗಿದ್ದರಿಂದ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಬೆಂಗಳೂರಲ್ಲಿರುವ ಭೂ ಒತ್ತುವರಿ ಕುರಿತ ವಿಶೇಷ ನ್ಯಾಯಾಲಯ ಬಂಧನದ ಆದೇಶ ನೀಡಿದೆ.

    ಸರ್ಕಾರಿ ಕೆರೆ ಸೇರಿದಂತೆ ಭೂ ಒತ್ತುವರಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ನಡೆದ ಸರ್ಕಾರಿ ಭೂಮಿಗಳ ಒತ್ತುವರಿ ಮತ್ತು ಅದರ ತೆರವಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡುವಂತೆ ಕೋರ್ಟ್ ಸೂಚಿಸಿತ್ತು. ಆದರೆ ಡಿಸಿ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿ ಮಾಹಿತಿ ನೀಡಿರಲಿಲ್ಲ. ಕೆರೆ, ಸರಕಾರಿ ಭೂಮಿ, ರಸ್ತೆಯ ಇಕ್ಕೆಲ ಒತ್ತುವರಿ ಬಗ್ಗೆ ವಿಶೇಷ ಭೂ ನ್ಯಾಯಾಲಯದಲ್ಲಿ ಪ್ರಕರಗಳು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಕೇಳಿತ್ತು.

    ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಉತ್ತರ ನೀಡದ ಹಿನ್ನೆಲೆ ಬಂಧನ ವಾರೆಂಟ್ ಹೊರಡಿಸಿದೆ. ಆದ್ದರಿಂದ ಜಿಲ್ಲಾ ಎಸ್‍ಪಿ ಕಚೇರಿಗೆ ವಾರೆಂಟ್ ತಲುಪಿದೆ. ಇತ್ತ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಜಾಮೀನಿಗೆ ಪ್ರಯತ್ನಿಸಿದ್ದು, ಮಾರ್ಚ್ 13ರಂದು ಖುದ್ದು ನ್ಯಾಯಾಲಯದಲ್ಲಿ ಹಾಜರಾಗಲು ಡಿಸಿ ನಿರ್ಧರಿಸಿದ್ದಾರೆ.

  • ಚುನಾವಣೆ ಹೊಸ್ತಿಲಲ್ಲಿ ಆಡಳಿತ ಯಂತ್ರಕ್ಕೆ ಸರ್ಜರಿ- ಹಾಸನ, ಮೈಸೂರು ಡಿಸಿಗಳ ಎತ್ತಂಗಡಿ

    ಚುನಾವಣೆ ಹೊಸ್ತಿಲಲ್ಲಿ ಆಡಳಿತ ಯಂತ್ರಕ್ಕೆ ಸರ್ಜರಿ- ಹಾಸನ, ಮೈಸೂರು ಡಿಸಿಗಳ ಎತ್ತಂಗಡಿ

    ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದೆ. ರಾಜ್ಯದ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

    ಹಾಸನ ಡಿಸಿ ರೋಹಿಣಿ ಸಿಂಧೂರಿ, ಮೈಸೂರು ಡಿಸಿ ರಂದೀಪ್, ಬೆಂಗಳೂರು ನಗರ ಡಿಸಿ ಶಂಕರ್ ಸೇರಿದಂತೆ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ರೋಹಿಣಿ ಸಿಂಧೂರಿಯವರನ್ನು ಉದ್ಯೋಗ ತರಬೇತಿ ಆಯುಕ್ತೆಯಾಗಿ ವರ್ಗ ಮಾಡಲಾಗಿದ್ದು, ಹಾಸನ ಡಿಸಿಯಾಗಿ ಮೈಸೂರಿನ ಡಿಸಿಯಾಗಿದ್ದ ರಂದೀಪ್‍ರನ್ನು ನೇಮಿಸಲಾಗಿದೆ.

    ಮೈಸೂರಿಗೆ ನೂತನ ಡಿಸಿಯಾಗಿ ಶಿವಕುಮಾರ್ ಅವರನ್ನು ವರ್ಗಾವಣೆ ಮಾಡಿದೆ. ಬೆಂಗಳೂರು ಜಿಲ್ಲಾಧಿಕಾರಿಯಾಗಿ ದಯಾನಂದ, ವಿಜಯಪುರ ಜಿಲ್ಲಾಧಿಕಾರಿಯಾಗಿ ಶೆಟ್ಟಣ್ಣನವರ್, ರಾಮನಗರ ಜಿಲ್ಲಾಧಿಕಾರಿಯಾಗಿ ಕ್ಯಾಪ್ಟನ್ ರಾಜೇಂದ್ರ, ಯುವಜನ ಸೇವೆ ಆಯುಕ್ತೆಯಾಗಿ ಮಮತಾ, ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ಕಾವೇರಿ ವರ್ಗಾವಣೆ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.

  • ಸಚಿವ ಜಾರ್ಜ್ ಕ್ಷೇತ್ರದಲ್ಲಿ ಟ್ರಸ್ಟ್ ಸ್ಥಳವನ್ನು ಸರ್ಕಾರಿ ಜಾಗವನ್ನಾಗಿ ಮಾಡಲು ಮುಂದಾದ ಅಧಿಕಾರಿಗಳು!

    ಸಚಿವ ಜಾರ್ಜ್ ಕ್ಷೇತ್ರದಲ್ಲಿ ಟ್ರಸ್ಟ್ ಸ್ಥಳವನ್ನು ಸರ್ಕಾರಿ ಜಾಗವನ್ನಾಗಿ ಮಾಡಲು ಮುಂದಾದ ಅಧಿಕಾರಿಗಳು!

    ಬೆಂಗಳೂರು: ಮಠದ ಜಾಗವನ್ನು ಹೊಡೆಯಲು ಕಾಂಗ್ರೆಸ್ ನ ಮಾಜಿ ಕಾರ್ಪೊರೇಟರ್ ಪ್ರಯತ್ನಿಸಿದ್ದಾಯ್ತು. ಇದೀಗ ಸಚಿವ ಕೆಜೆ ಜಾರ್ಜ್ ಕ್ಷೇತ್ರದಲ್ಲಿ ಬರುವ ಶ್ರೀರಾಮ ಮಂದಿರದ ಟ್ರಸ್ಟ್ ಗೆ ಸೇರಿದ ಜಾಗವನ್ನು ಸರ್ಕಾರಿ ಜಾಗವನ್ನಾಗಿ ಮಾಡಲು ಅಧಿಕಾರಿಗಳು ಮುಂದಾಗಿರೋದು ಬೆಳಕಿಗೆ ಬಂದಿದೆ.

    ಬೆಂಗಳೂರಿನ ಕಾಚರಕನಹಳ್ಳಿಯಲ್ಲಿರುವ ರಾಮಮಂದಿರದ ಸುತ್ತಮುತ್ತಲಿನ ಜಾಗ ಶ್ರೀರಾಮ ಚೈತನ್ಯ ವರ್ಧಿನಿ ಟ್ರಸ್ಟ್ ಗೆ ಸೇರಿದ್ದು ಅಂತ ಕೋರ್ಟ್ ಆದೇಶಿಸಿದೆ. ಆದ್ರೆ ಈ ಜಾಗ ಸರ್ಕಾರದ್ದು ಅಂತ ತಹಶೀಲ್ದಾರ್ ಮತ್ತು ಅಧಿಕಾರಿಗಳು ತಡೆಗೋಡೆ ನಿರ್ಮಿಸಲು ಮುಂದಾಗಿದ್ದಾರೆ.

    ಈ ಕುರಿತು ಆದೇಶ ಎಲ್ಲಿದೆ ಅಂತ ಪ್ರಶ್ನಿಸಿದ್ರೆ ನಮಗೆ ಮೇಲಿಂದ ಒತ್ತಡ ಇದೆ ಅಂತ ಹೇಳುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಸರ್ಕಾರದ ಕ್ರಮಕ್ಕೆ ದೇವಸ್ಥಾನದ ಟ್ರಸ್ಟಿಗಳು ಮತ್ತು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಚಿವ ಕೆಜೆ ಜಾರ್ಜ್ ಅವರೇ ಪರೋಕ್ಷವಾಗಿ ಒತ್ತಡ ಹೇರಿ ತಡೆಗೋಡೆ ನಿರ್ಮಿಸಲು ಸೂಚಿಸಿದ್ದಾರೆ ಅಂತ ಟ್ರಸ್ಟಿಗಳು ಆರೋಪಿಸಿದ್ದಾರೆ.

    ಈ ಬಗ್ಗೆ ಅಪರ ಜಿಲ್ಲಾಧಿಕಾರಿಗಳನ್ನು ಕೇಳಿದ್ರೆ ನಮಗೆ ಯಾರ ಒತ್ತಡವೂ ಇಲ್ಲ ಅಂತ ಹೇಳುತ್ತಿದ್ದಾರೆ. ಆದ್ರೆ ದಾಖಲೆಗಳನ್ನು ಕೇಳಿದ್ರೆ ಮಾತ್ರ ತೋರಿಸಲು ಮುಂದಾಗುತ್ತಿಲ್ಲ.

  • ತೋಟದ ಮನೆಗೆ ನುಗ್ಗಿ 40 ಕೆಜಿ ಅಕ್ಕಿ, ಅಡುಗೆ ಸಾಮಗ್ರಿ ಕೊಂಡೊಯ್ದ ನಕ್ಸಲರು!

    ತೋಟದ ಮನೆಗೆ ನುಗ್ಗಿ 40 ಕೆಜಿ ಅಕ್ಕಿ, ಅಡುಗೆ ಸಾಮಗ್ರಿ ಕೊಂಡೊಯ್ದ ನಕ್ಸಲರು!

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ. ಮಡಿಕೇರಿ ತಾಲೂಕಿನ ನಾಲಡಿ ಗ್ರಾಮದ ಬ್ರಿಗೇಡಿಯರ್ ಮುತ್ತಣ್ಣ ಎಂಬವರ ತೋಟಕ್ಕೆ ಸೋಮವಾರ ಸಂಜೆ ಆಗಮಿಸಿದ್ದ ಮೂವರು ಶಸ್ತ್ರಧಾರಿ ನಕ್ಸಲರು, ಲೈನ್‍ಮನೆಯಲ್ಲಿ ವಾಸವಿದ್ದ ರಘು ಪೆಮ್ಮಯ್ಯ ಎಂಬವರಿಂದ ದವಸ ಧಾನ್ಯ ಕೊಂಡೊಯ್ದಿದ್ದಾರೆ.

    ಬೆಳಗ್ಗೆ 6 ಗಂಟೆ ವೇಳೆಗೆ ಆಗಮಿಸಿದ್ದ ನಕ್ಸಲರು ಆರಂಭದಲ್ಲಿ ಅಲ್ಲಿದ್ದವರ ಜೊತೆ ಮಾತನಾಡಿದ್ದಾರೆ. ಮೂವರ ಪೈಕಿ ನಕ್ಸಲ್ ನಾಯಕ ವಿಕ್ರಂ ಗೌಡ, ಮತ್ತೊಬ್ಬನನ್ನು ಚಂದ್ರು ಎಂದು ಗುರುತಿಸಲಾಗಿದೆ. ಮನೆಗೆ ಭೇಟಿ ನೀಡಿದ ಅವರು ಮನೆಯಲ್ಲಿ ಹಂದಿ ಮಾಂಸ ಹಾಗೂ ಕೋಳಿ ಮಾಂಸದೂಟ ಮಾಡಿ 10 ಗಂಟೆ ಸುಮಾರಿಗೆ ವಾಪಸ್ಸಾಗಿದ್ದಾರೆ. ಈ ವೇಳೆ 40 ಕೆ.ಜಿ ಅಕ್ಕಿ, ಮೆಣಸಿನ ಪುಡಿ, ಬದನೆಕಾಯಿ, ಟೊಮೇಟೋ ಕೇಳಿ ಪಡೆದುಕೊಂಡು ಹೋಗಿದ್ದಾರೆ.

    ನಾವು ನಿಮಗಾಗಿ ಬಂದಿರೋದು. ನಾವು ಬಂದಿರುವ ವಿಚಾರವನ್ನು ಪೊಲೀಸರಿಗೆ ಹೇಳಿದ್ರೆ ಸುಮ್ಮನೆ ಬಿಡೋದಿಲ್ಲ ಅಂತ ಎಚ್ಚರಿಸಿ ತೆರಳಿದ್ದಾರೆ. ಹೀಗಾಗಿ ರಘು ಪೆಮ್ಮಯ್ಯ ಭಯದಿಂದ ಯಾರಿಗೂ ಹೇಳಿರಲಿಲ್ಲ. ಮಂಗಳವಾರ ಬೆಳಗ್ಗೆ ತೋಟದ ಮ್ಯಾನೇಜರ್ ಚಂಗಪ್ಪ ಅವರಿಗೆ ವಿಚಾರ ತಿಳಿಸಿ, ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

    ಸಂಜೆ 5 ಗಂಟೆ ಸುಮಾರಿಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು 45 ನಿಮಿಷ ಕಾಲ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆ ಹಾಕಿದರು. ಎಎನ್‍ಎಫ್ ತಂಡದವರು ಮನೆ ಸುತ್ತಮುತ್ತ ಪರಿಶೀಲಿಸಿ ವಾಪಸ್ಸಾದರು. ರಾತ್ರಿ ವೇಳೆ ಅಲ್ಲಿ ರಕ್ಷಣೆಗೆ ಯಾರೂ ಇರಲಿಲ್ಲ. ದಟ್ಟಾರಣ್ಯದ ನಡುವೆ ತೋಟದೊಳಗಿನ ಲೈನ್ ಮನೆಯಲ್ಲಿ ವಾಸವಿರುವ ನಾಲ್ಕು ಕುಟುಂಬಗಳು ಆತಂಕದಿಂದ ಇದ್ದಾರೆ. ಮಾಧ್ಯಮದವರಿಗೆ ಯಾವುದೇ ಹೇಳಿಕೆ ನೀಡದಂತೆ ಜಿಲ್ಲಾ ಎಸ್‍ಪಿ ರಾಜೇಂದ್ರ ಪ್ರಸಾದ್ ಪೊಲೀಸರಿಗೆ ಒತ್ತಡವನ್ನೂ ಹೇರಿದ್ದರು ಎನ್ನಲಾಗಿದೆ.

  • ಸಂಸದ ಪ್ರತಾಪ್ ಸಿಂಹ ವಿರುದ್ಧ ದೂರು ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ

    ಸಂಸದ ಪ್ರತಾಪ್ ಸಿಂಹ ವಿರುದ್ಧ ದೂರು ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ

    ಮೈಸೂರು: ಇತ್ತೀಚೆಗೆ ಇಲ್ಲಿನ ಹುಣಸೂರಿನಲ್ಲಿ ನಡೆದ ಹನುಮಜಯಂತಿ ಮೆರವಣಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ವಿರುದ್ಧ ದೂರು ದಾಖಲಿಸುವಂತೆ ಸೂಚನೆ ನೀಡಿರುವುದಾಗಿ ಜಿಲ್ಲಾಧಿಕಾರಿ ಡಿ.ರಂದೀಪ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆರವಣಿಗೆ ವೇಳೆ ಸಂಸದ ಪ್ರತಾಪ್ ಸಿಂಹ ಅವರು ನಿಬಂಧನೆ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ನಿಯಮ ಉಲ್ಲಂಘನೆ ವಿಚಾರವಾಗಿ ಮೋಟಾರ್ ಕಾಯ್ದೆಯಡಿ ದೂರು ದಾಖಲು ಮಾಡಲು ಸೂಚಿಸಿದ್ದೇನೆ ಅಂದ್ರು. ಇದನ್ನೂ ಓದಿ: ಪ್ರತಾಪ್ ಸಿಂಹ ವಿರುದ್ಧ ಐಪಿಸಿ ಸೆಕ್ಷನ್ 188 ಸೇರಿಸಿ ಪೇಚಿಗೆ ಸಿಲುಕಿದ ಖಾಕಿಗಳು!

    ಮೆರವಣಿಗೆ ವೇಳೆ ಸಂಸದ ಪ್ರತಾಪ್ ಸಿಂಹ ಅವರು ವಿಶೇಷ ವಾಹನ ಬಳಸಿದ್ದರು. ಹನುಮ ಜಯಂತಿ ಮೆರವಣಿಗೆ ಅನುಮತಿ ನೀಡುವ ವೇಳೆ ವಿಶೇಷ ವಾಹನ ಬಳಸುವಂತಿಲ್ಲ ಎಂದು ನಿಬಂಧನೆ ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಿಬಂಧನೆ ಉಲ್ಲಂಘನೆಗೆ ಕೇಸು ದಾಖಲಿಸಲು ಸೂಚಿಸಲಾಗಿದೆ. ಇದನ್ನೂ ಓದಿಪೊಲೀಸ್ ಪಂಜರದಲ್ಲೇ ಸಿಂಹ ಘರ್ಜನೆ-ಈದ್ ಮಿಲಾದ್ ಆಚರಣೆಯೂ ಹಿಂಗೇ ಇರಬೇಕೆಂದು ಆಗ್ರಹ

     

    ಹನುಮಜಯಂತಿಯನ್ನ ವಿಶೇಷ ಪ್ರಕರಣವಾಗಿ ಪರಿಗಣಿಸಿಲಾಗಿತ್ತು. ಇನ್ಯಾವುದೇ ಧರ್ಮದ ಜಯಂತಿಗೆ ಈ ರೀತಿಯ ವ್ಯವಸ್ಥೆ ಇರೋದಿಲ್ಲ. ಸಮಸ್ಯೆಯಾಗಿದ್ದಕ್ಕೆ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿತ್ತು. ಇತರೆ ಜಯಂತಿಗಳು ಶಾಂತಿಯುತವಾಗಿ ನಡೆಯಲಿವೆ ಅಂತ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.  

  • ರೋಹಿಣಿ ಸಿಂಧೂರಿ ಎತ್ತಂಗಡಿ ಕೇಸ್‍ನಲ್ಲಿ ಟ್ವಿಸ್ಟ್- ಡಿಸಿ ವರ್ಗಾವಣೆಗೆ ನಾನೇ ಕಾರಣ ಎಂದ `ಕೈ’ ನಾಯಕ!

    ರೋಹಿಣಿ ಸಿಂಧೂರಿ ಎತ್ತಂಗಡಿ ಕೇಸ್‍ನಲ್ಲಿ ಟ್ವಿಸ್ಟ್- ಡಿಸಿ ವರ್ಗಾವಣೆಗೆ ನಾನೇ ಕಾರಣ ಎಂದ `ಕೈ’ ನಾಯಕ!

    ಹಾಸನ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆಗೆ ನಾನೇ ಕಾರಣ ಅಂತ ಹಾಸನದ ಕಾಂಗ್ರೆಸ್ ನಾಯಕರೊಬ್ಬರು ಮಾತನಾಡಿರುವ ಆಡಿಯೋ ಕ್ಲಿಪ್ ಇದೀಗ ವಾಟ್ಸಪ್ ಮುಖಾಂತರ ಹರಿದಾಡುತ್ತಿದೆ.

    ಬೇಲೂರು ತಾಲೂಕಿನ ಪಕ್ಷದ ಕಾರ್ಯಕರ್ತರೊಬ್ಬರೊಂದಿಗೆ ಸಂಭಾಷಣೆ ನಡೆಸಿರುವುದು ಮಾಜಿ ಸಚಿವ ಬಿ ಶಿವರಾಂ ಎನ್ನಲಾಗಿದೆ. ಬೇಲೂರು ಕನಾಯಕನ ಹಳ್ಳಿಯ ಸ್ಮಶಾನಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಶಿವರಾಂ, ಜಿಲ್ಲಾಧಿಕಾರಿ ವಿರುದ್ಧ ಅಸಮಾಧಾನದಿಂದ ಮಾತನಾಡಿದ್ದಾರೆ. ಆಯಮ್ಮನ ವರ್ಗಾವಣೆಯವರೆಗೆ ನಿನ್ನ ವಿಚಾರ ಹೋಗಿದೆ ನೋಡು ಎಂದು ಹೇಳುವ ಶಿವರಾಂ ಅವರ ಆಡಿಯೋ ಕ್ಲಿಪ್ ನಿಂದಾಗಿ ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಇನ್ನೊಂದು ಕಾರಣ ಸಿಕ್ಕಂತಾಗಿದೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ವರ್ಗಾವಣೆಗೆ ಚುನಾವಣಾ ಆಯೋಗ ಬ್ರೇಕ್

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಿ ಶಿವರಾಮ್ ಅವರು, ನಾವು ಸಮಾಜದಲ್ಲಿ ತುಳಿತಕ್ಕೆ ಒಳಗಾದವರಿಗೆ, ಧ್ವನಿ ಇಲ್ಲದವರಿಗೆ ಧ್ವನಿ ಕೊಡಬೇಕಾದಂತವರು. ಈ ರೀತಿಯ ದಲಿತರ ಮೇಲೆ ದೌರ್ಜನ್ಯ ನಡೆದಂತಹ ಘಟನೆಗಳಾದಾಗ ಸರ್ಕಾರದ ಮೇಲೆ ಯಾವ ಪರಿಣಾಮ ಬೀರುತ್ತೆ ಎನ್ನುವುದನ್ನು ನಾವು ಯೋಚನೆ ಮಾಡಬೇಕಾಗುತ್ತದೆ ಅಂದ್ರು. ಇದನ್ನೂ ಓದಿ: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಸಿಎಂ ಸಮರ್ಥನೆ

    ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿ ಅಂತ ನಾನು ಅಲ್ಲಿ ಪ್ರಸ್ತಾಪ ಮಾಡಿಲ್ಲ. ಜಿಲ್ಲೆಯಲ್ಲಿಯ ಸಮಸ್ಯೆಗಳನ್ನು ತೆಗೆದುಕೊಂಡಾಗ ಇಟ್ ಈಸ್ ಎ ಮ್ಯಾಟರ್ ಆಫ್ ಸೆನ್ಸಿಟೀವ್. ಆ ಸಮಸ್ಯೆಗಳು ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ರಾಜಕಾರಣಿಗಳು ಯೋಚನೆ ಮಾಡಬೇಕಾಗುತ್ತದೆ ಅಂದ್ರು. ಇದನ್ನೂ ಓದಿ: ಕೈ ನಾಯಕರ ದೂರಿನ ಬೆನ್ನಲ್ಲೇ ಹಾಸನ ಡಿಸಿ ರೋಹಿಣಿ ಸಿಂಧೂರಿ ಎತ್ತಂಗಡಿ

    ಇದಕ್ಕೆಲ್ಲಾ ವರ್ಗಾವಣೆಯೇ ದಾರಿ ಅಂತ ಹೇಳುತ್ತಿಲ್ಲ. ತಿದ್ದಿಕೊಳ್ಳಬೇಕಾದುದು ಅನಿವಾರ್ಯ. ಮುಖ್ಯಮಂತ್ರಿಗಳು ತಿದ್ದಿಕೊಂಡು ಹೋಗಬೇಕು ಅಂತಾ ಹೇಳಿರ್ತಾರೆ. ಅದನ್ನು ನೋಡಿಕೊಂಡು ಅವರು ಮುಂದಿನ ಹೆಜ್ಜೆ ಇಟ್ಟಿರ್ತಾರೆ. ಇದು ಆಡಳಿತಾತ್ಮಕವಾದ ವಿಚಾರ. ಆದ್ರೆ ಸಮಸ್ಯೆ ಇತ್ತಲ್ಲ. ಅದು ಒಂದೇ ಅಲ್ಲ. ಅದರ ಜೊತೆಗೆ ಚೆನ್ನಪಟ್ಟಣದಲ್ಲಿ ನಡೆದಂತಹ ಜಗಜೀವನ್ ರಾವ್ ಸಂಘದವರ ನಿವೇಶನದ ಬೇಡಿಕೆಗೆ ಇವರು ಅವರ ಜೊತೆ ಯಾವ ರೀತಿಯಾಗಿ ನಡೆದುಕೊಂಡಿದ್ದಾರೆ ಅಂತ ಹೇಳಿದ್ರು. ಇದನ್ನೂ ಓದಿ: ಹಣ ಹೊಡೆಯಲು ಬಿಟ್ಟಿಲ್ಲ ಅಂತ ಹೆಣ್ಮಗಳ ವರ್ಗ, ಸಿಎಂ ಜೊತೆ ವೇದಿಕೆ ಏರಲ್ಲ- ಸರ್ಕಾರಕ್ಕೆ ಥೂ ಎಂದು ಉಗಿದ ಹೆಚ್‍ಡಿಡಿ

    ಅಧಿಕಾರಿಗಳು ಜನರ ಜೊತೆ ಯಾವ ರೀತಿ ಇರಬೇಕು? ಯಾವುದಕ್ಕೆ ಸ್ಪಂದಿಸಬೇಕು? ಸಾಮಾಜಿಕ ನ್ಯಾಯ ಕಾಪಾಡಬೇಕು. ನಾನಾ ಸಮಸ್ಯೆಗಳು ಇಂದು ಜಿಲ್ಲೆಯಲ್ಲಿವೆ. ಜಮೀನುಗಳ ಮಂಜೂರಾತಿ ಆಗಿಲ್ಲ. ಒಂದು ದಿನ ಜನತಾ ದರ್ಶನ ಮಾಡಲ್ಲ. ಅವರ ಪ್ರಮುಖವಾದ ಗೇಟಿಗೆ ಬೀಗ ಹಾಕಿರ್ತಾರೆ. ಜನರನ್ನು ನೇರವಾಗಿ ಮಾತನಾಡಿಸಿ ಅವರಿಗೆ ಸ್ಪಂದಿಸಿ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿಲ್ಲ ಅಂತ ಆರೋಪಿಸಿದ್ರು. ಇದನ್ನೂ ಓದಿ: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬಗ್ಗೆ ಸಿಎಂಗೆ ದೂರು ಹೇಳಿದ ಕಾಂಗ್ರೆಸ್ ನಾಯಕರು

    https://www.youtube.com/watch?v=X0-j4yrhca0&feature=youtu.be