Tag: DC

  • ಗಮನಿಸಿ, ಬುಧವಾರದಿಂದ ಶಿರಾಡಿ ಘಾಟ್ ಬಸ್ ಸಂಚಾರಕ್ಕೆ ಮುಕ್ತ

    ಗಮನಿಸಿ, ಬುಧವಾರದಿಂದ ಶಿರಾಡಿ ಘಾಟ್ ಬಸ್ ಸಂಚಾರಕ್ಕೆ ಮುಕ್ತ

    ಮಂಗಳೂರು: ಭೂ-ಕುಸಿತ ಹಾಗೂ ಭಾರೀ ಮಳೆಯಿಂದಾಗಿ ಬಂದ್ ಆಗಿದ್ದ ಶಿರಾಡಿ ಘಾಟಿ ರಸ್ತೆಯಲ್ಲಿ ಅಕ್ಟೋಬರ್ 3(ಬುಧವಾರ)ರಿಂದ ಬಸ್ ಸಂಚಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಸಸಿಕಾಂತ್ ಸೆಂಥಿಲ್ ಅನುಮತಿ ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಯವರು, ಭಾರಿ ಮಳೆಯಿಂದ ರಸ್ತೆ ಮೇಲೆ ಗುಡ್ಡ ಕುಸಿತ ಉಂಟಾಗಿದ್ದ ಕಾರಣ ಶಿರಾಡಿ ಘಾಟ್‍ನ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿತ್ತು. ಸದ್ಯ ತೆರವು ಕಾರ್ಯಾಚರಣೆ ಪೂರ್ಣಗೊಂಡಿದೆ. ಈ ಮೊದಲು ಸೆಪ್ಟೆಂಬರ್ 5 ರಿಂದ ಲಘು ವಾಹನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಈಗ ಅಕ್ಟೋಬರ್ 3 ರಿಂದ ಸಾರಿಗೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಅಲ್ಲದೇ ಇನ್ನೆರಡು ವಾರಗಳ ಬಳಿಕ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ. ಘಾಟ್ ರಸ್ತೆಯ ಕುಸಿತ ಸ್ಥಳಗಳಲ್ಲಿ 24 ಗಂಟೆ ಪೊಲೀಸ್ ನಿಯೋಜನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಇದಲ್ಲದೇ ಜಿಲ್ಲಾಡಳಿತ ಹೆದ್ದಾರಿ ಪರಿಸ್ಥಿತಿ ಅವಲೋಕಿಸಲು ತಜ್ಞರ ಮೊರೆ ಹೋಗಿದ್ದು, ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರಾದ ತಂಗವೇಲುರವರು ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಇನ್ನೊಂದು ವಾರದಲ್ಲಿ ಸ್ಥಳ ಪರಿಶೀಲನೆ ನಡೆಸುತ್ತಾರೆ ಎಂದು ತಿಳಿದು ಬಂದಿದೆ. ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

    ಶಿರಾಡಿ ಘಾಟ್ ಕಾಂಕ್ರೀಟ್ ಆದ ಬಳಿಕ ಕಳೆದ ಜುಲೈ 15ರಂದು ಅಧಿಕೃತ ಉದ್ಘಾಟನೆ ಆಗಿತ್ತು. ಆದರೆ ಭೂಕುಸಿತ ಕಾರಣದಿಂದಾಗಿ ಶಿರಾಡಿ ಘಾಟ್ ಹೆದ್ದಾರಿ ಸ್ಥಗಿತಗೊಳಿಸಲಾಗಿತ್ತು. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಜೊತೆಗೆ ಸಂಪಾಜೆ ಘಾಟಿಯಲ್ಲಿ ಗುಡ್ಡ ಕುಸಿತ ಸಂಭವಿದ್ದ ಪರಿಣಾಮ ರಸ್ತೆ ಸಂಪರ್ಕ ಬಂದ್ ಆಗಿತ್ತು. ಚಾರ್ಮಾಡಿ ರಸ್ತೆಯಲ್ಲಿ ವಾಹನಗಳ ದಟ್ಟನೆ ಜಾಸ್ತಿಯಾಗಿ ಭಾರೀ ಟ್ರಾಫಿಕ್ ಜಾಮ್ ಆಗುತ್ತಿರುವ ಹಿನ್ನಲೆಯಲ್ಲಿ ಲಘು ವಾಹನಗಳಿಗೆ ಶಿರಾಡಿ ಘಾಟಿ ರಸ್ತೆಯಲ್ಲಿ ಸಂಚರಿಸಲು ಅನುಮತಿ ನೀಡಬೇಕೆಂಬ ಬೇಡಿಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆಗಸ್ಟ್ ಕೊನೆಯ ವಾರ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ತಿಳಿಸಿದ್ದರು. ಈ ವೇಳೆ ಗಡ್ಕರಿ ಒಂದು ವಾರದ ಒಳಗಡೆ ರಸ್ತೆಯನ್ನು ದುರಸ್ತಿ ಮಾಡಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಬೇಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದರು. ಹೀಗಾಗಿ ಸೆಪ್ಟೆಂಬರ್ 5 ರಿಂದ ಹಾಸನ ಜಿಲ್ಲಾಡಳಿತ ಲಘು ವಾಹನಗಳಿಗೆ ಈ ರಸ್ತೆಯಲ್ಲಿ ಸಂಚರಿಸಲು ಅನುಮತಿ ನೀಡಿತ್ತು.


    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿರಾಶ್ರಿತ ಕೇಂದ್ರದಲ್ಲಿ ತಹಶೀಲ್ದಾರ್ ವಿರುದ್ಧ ಸಂತ್ರಸ್ತರು ಕಿಡಿ

    ನಿರಾಶ್ರಿತ ಕೇಂದ್ರದಲ್ಲಿ ತಹಶೀಲ್ದಾರ್ ವಿರುದ್ಧ ಸಂತ್ರಸ್ತರು ಕಿಡಿ

    ಕೊಡಗು: ಪ್ರವಾಹಕ್ಕೆ ತತ್ತರಿಸಿ ನಿರಾಶಿತ್ರ ಕೇಂದ್ರ ಸೇರಿದ್ದ ಸಂತ್ರಸ್ತರನ್ನು ತಹಶೀಲ್ದಾರ್ ಕೀಳಾಗಿ ಕಾಣುತ್ತಿದ್ದಾರೆ ಎನ್ನುವ ಕಾರಣಕ್ಕೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದ ವಾಲ್ಮೀಕಿ ಭವನದ ಮುಂದೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕುಶಾಲನಗರದ ವಾಲ್ಮೀಕಿ ಭವನದಲ್ಲಿ ನಿರಾಶ್ರಿತ ಕೇಂದ್ರ ಶುರುವಾದ ದಿನದಿಂದಲೂ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ. ಮಂಗಳವಾರ ತಡರಾತ್ರಿಯು ಸಹ ಸಂತ್ರಸ್ತರು ತಹಶೀಲ್ದಾರ್ ಮಹೇಶ್ ವಿರುದ್ಧ ರೊಚ್ಚಿಗೆದ್ದು, ಪತ್ರಿಭಟನೆ ನಡೆಸುತ್ತಿದ್ದರು. ಅಲ್ಲದೇ ನಿರಾಶ್ರಿತ ಕೇಂದ್ರದಲ್ಲಿ ಶೌಚಾಲಯ ವ್ಯವಸ್ಥೆಯಿಲ್ಲ. ಸರಿಯಾಗಿ ಊಟ ನೀಡುತ್ತಿಲ್ಲ ಹಾಗೂ ಎಲ್ಲಾ ಅಧಿಕಾರಿಗಳು ನಮ್ಮನ್ನು ಭಿಕ್ಷುಕರಂತೆ ನೋಡುತ್ತಾರೆ ಎಂದು ಆರೋಪಿಸಿದ್ದರು.

    ಈ ವೇಳೆ ತಹಶೀಲ್ದಾರ್ ಮಹೇಶ್‍ರವರು ಮಹಿಳೆಯೊಬ್ಬರ ಮೈಯನ್ನ ಮುಟ್ಟಿದರು ಎಂದು ಆರೋಪಿಸಿ ಅವರ ಮೇಲೆ ಮುತ್ತಿಗೆ ಹಾಕುವ ಯತ್ನ ಮಾಡಿದರು. ಕೂಡಲೇ ಪ್ರತಿಭಟನಾಕಾರರಿಂದ ತಪ್ಪಿಸಿಕೊಂಡು ತಹಶೀಲ್ದಾರ್ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು, ನಾನು ಏನು ತಪ್ಪು ಮಾಡಿಲ್ಲ ಅಂತ ಕ್ಷಮೆಯಾಚಿಸಿದರು.

    ಸುಮಾರು 400 ಜನರು ಇರುವ ನಿರಾಶ್ರಿತ ಕೇಂದ್ರದಲ್ಲಿ ಕೇವಲ ಮೂರೇ ಮೂರು ಶೌಚಾಲಯ. ಶೌಚಾಲಯದ ವ್ಯವಸ್ಥೆ ಸರಿಪಡಿಸಿ ಹಾಗೂ ಊಟವನ್ನು ಸರಿಯಾಗಿ ನೀಡಿ ಎಂದು ಪ್ರಾರಂಭವಾದಗಿನಿಂದಲೂ ಹೇಳುತ್ತಲೆ ಬಂದಿದ್ದರು. ಸಮಸ್ಯೆಗಳನ್ನು ಪರಿಹರಿಸದೇ ಕೀಳಾಗಿ ನೋಡಿದ್ದರಿಂದ ರೊಚ್ಚಿಗೆದ್ದು ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಂತ್ರಸ್ತ ಕೇಂದ್ರದಲ್ಲಿ ಪ್ರತಿಭಟನೆ ಜೋರಾದಾಗ ಪೊಲೀಸರು ಮಧ್ಯ ಪ್ರವೇಶಿಸಿದರು. ಈ ವೇಳೆ ಪ್ರತಿಭಟನೆ ವಿಕೋಪಕ್ಕೆ ತಿರುಗುವ ಲಕ್ಷಣ ಗೋಚರಿದ ತಕ್ಷಣ ಜಿಲ್ಲಾಧಿಕಾರಿ ಶ್ರೀವಿದ್ಯಾರವರು ತಡರಾತ್ರಿ 12.15ಕ್ಕೆ ಆಗಮಿಸಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. ಅಲ್ಲದೇ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ, ಸರಿಯಾಗಿ ವ್ಯವಸ್ಥೆ ಕೈಗೊಳ್ಳುತ್ತೇನೆ. ಒಂದು ವೇಳೆ ತಹಶೀಲ್ದಾರ್ ವಿರುದ್ಧ ತಪ್ಪು ಕಂಡುಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೀನಿ ಎನ್ನುವ ಭರವಸೆ ನೀಡಿದ ಮೇಲೆ ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಕೈ ಬಿಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಸ್ತೆ ದುರಸ್ತಿಗಾಗಿ ಡಿಸಿಗೆ ಮನವಿ ಸಲ್ಲಿಸಲು ಬಂದ ಸ್ವಾಮೀಜಿಗೆ ಹೃದಯಾಘಾತ

    ರಸ್ತೆ ದುರಸ್ತಿಗಾಗಿ ಡಿಸಿಗೆ ಮನವಿ ಸಲ್ಲಿಸಲು ಬಂದ ಸ್ವಾಮೀಜಿಗೆ ಹೃದಯಾಘಾತ

    ಬಾಗಲಕೋಟೆ: ರಸ್ತೆ ದುರಸ್ತಿ ಮಾಡುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ ನೀಡಲು ಬಂದಿದ್ದ ಸ್ವಾಮೀಜಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಜಿಲ್ಲಾಡಳಿತ ಭವನದಲ್ಲಿ ನಡೆದಿದೆ.

    ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಇನಾಮ್ ಹಂಚಿನಾಳ ಗ್ರಾಮದ ಜ್ಞಾನಸಿದ್ಧಾಶ್ರಮದ 74 ವರ್ಷದ ಸೋಮಲಿಂಗೇಶ್ವರ ಶ್ರೀ ಮೃತಪಟ್ಟ ಸ್ವಾಮೀಜಿಯಾಗಿದ್ದಾರೆ. ಇವರು ತಮ್ಮ ಜ್ಞಾನಾಶ್ರಮಕ್ಕೆ ಹೋಗುವ ಕಚ್ಚಾ ರಸ್ತೆಯನ್ನು ದುರಸ್ತಿಗೊಳಿಸಿ, ಸರಿ ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನ ಕೊಡಲು ಬಂದಿದ್ದರು. ಜಿಲ್ಲಾಡಳಿತ ಭವನದ ಚುನಾವಣಾ ಕೊಠಡಿಯ ಬಳಿ ತೆರಳುವಾಗ, ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದುಬಿದ್ದರು.

    ತಕ್ಷಣ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪ್ರಥಮ ಚಿಕಿತ್ಸೆ ನೀಡಲು ಮುಂದಾದ್ರು. ಆದ್ರೆ ಅಷ್ಟರಲ್ಲೇ ಸ್ವಾಮೀಜಿ ಕೊನೆಯುಸಿರೆಳೆದಿದ್ದಾರೆ. ಬಳಿಕ ಸ್ವಾಮೀಜಿ ಮೃತದೇಹವನ್ನ ಸರ್ಕಾರಿ ಶವಗಾರಕ್ಕೆ ಸಾಗಿಸಲಾಗಿದೆ. ಈ ಬಗ್ಗೆ ನವನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿಷೇಧವಿದ್ದರೂ ಪಿಒಪಿ ಗಣೇಶ ಮೂರ್ತಿಗಳ ಮಾರಾಟ- ಜಿಲ್ಲಾಧಿಕಾರಿ ದಾಳಿ

    ನಿಷೇಧವಿದ್ದರೂ ಪಿಒಪಿ ಗಣೇಶ ಮೂರ್ತಿಗಳ ಮಾರಾಟ- ಜಿಲ್ಲಾಧಿಕಾರಿ ದಾಳಿ

    ಬೆಂಗಳೂರು: ಗಣೆಶೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದ್ದು, ಇದೀಗ ನಿಷೇಧದ ಹೊರತಾಗಿಯೂ ಪಿಒಪಿ ಮೂರ್ತಿಗಳ ಮಾರಾಟ ಮಾಡುತ್ತಿರುವುದರಿಂದ ಜಿಲ್ಲಾಧಿಕಾರಿ ಎಸ್ ಬಿ ಶೆಟ್ಟೆಣ್ಣವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

    ನಗರದ ವಿವಿಧೆಡೆ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆದಿದೆ. ಪಿಒಪಿಯಿಂದ ನಿರ್ಮಾಣ ಮಾಡಿದ ಬೃಹತ್ ಮೂರ್ತಿಗಳಿಂದ ಹಿಡಿದು ಚಿಕ್ಕ ಮೂರ್ತಿಗಳನ್ನು ಕೂಡ ಜಿಲ್ಲಾಧಿಕಾರಿಗಳು ದಾಳಿ ವೇಳೆ ವಶಕ್ಕೆ ಪಡೆದಿದ್ದಾರೆ.

    ಟ್ರ್ಯಾಕ್ಟರ್ ಹಾಗೂ ಗೂಡ್ಸ್ ವಾಹನದಲ್ಲಿ ಹೇರಿಕೊಂಡ ಮೂರ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಒಟ್ಟಿನಲ್ಲಿ ಪಿಒಪಿಯಿಂದ ನಿರ್ಮಿಸಿರುವ ಗಣಪನ ಮೂರ್ತಿ ವಶಕ್ಕೆ ತೆಗೆದುಕೊಳ್ಳುವ ಮೂಲಕ ಜಿಲ್ಲಾಧಿಕಾರಿಯವರು ಪರಿಸರ ಕಾಳಜಿ ಮೆರೆದಿದ್ದಾರೆ. ಈ ವೇಳೆ ಮಹಾನಗರ ಪಾಲಿಕೆ ಅಯುಕ್ತ ಹರ್ಷ ಶೆಟ್ಟಿ ಸೇರಿದಂತೆ ಇತರ ಅಧಿಕಾರಿಗಳು ಡಿಸಿಗೆ ಸಾಥ್ ನೀಡಿದ್ರು.

    ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ) ಗಣಪನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ರೆ ಅನಿಷ್ಟ. ಪಿಒಪಿ ಗಣಪತಿ ಧರ್ಮಶಾಸ್ತ್ರಕ್ಕೆ ಅನಿಷ್ಟವಾಗಿದ್ದು, ಪೂಜೆಗೆ ನಿಷಿದ್ಧವಾಗಿದೆ. ಪಿಒಪಿ ಗಣಪತಿ ನೀರಿನಲ್ಲಿ ಕರಗಲ್ಲ, ಅದನ್ನ ಮಚ್ಚುಗಳಿಂದ ಒಡೆಯಲಾಗುತ್ತದೆ. ಹೀಗಾಗಿ ಪ್ರಕೃತಿಗೂ ಮಾರಕವಾಗಿದೆ ಎಂದು ಇತ್ತೀಚೆಗಷ್ಟೆ ಅರ್ಚಕರ ಒಕ್ಕೂಟದ ಮುಖ್ಯಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್ ದೀಕ್ಷಿತ್ ಹೇಳಿದ್ದರು.

    ಭಕ್ತಿಯ ಜೊತೆಗೆ ಜ್ಞಾನವೂ ಇರಬೇಕು, ಇಲ್ಲದಿದ್ದರೆ ಗಣಪ ಒಲಿಯಲ್ಲ. ಭಾರತೀಯ ಪೂಜಾ ಪದ್ಧತಿಯು ಆಧ್ಯಾತ್ಮ ವಿಜ್ಞಾನದ ತಳಹದಿಯಿಂದ ಕೂಡಿದೆ. ಪೃಥ್ವಿ ತತ್ವದ ಗಣಪತಿಯನ್ನು ಜೇಡಿ ಮಣ್ಣಿನಿಂದಲೇ ಮಾಡಬೇಕು. ದೇವತೆಗಳ ವಿಗ್ರಹಗಳನ್ನು, ಚಿತ್ರಗಳನ್ನು ತುಳಿದರೆ, ಕತ್ತರಿಸಿದರೆ ಮಹಾದೋಷ ಪ್ರಾಪ್ತಿಯಾಗುತ್ತದೆ ಎಂದು ಕೆ.ಎಸ್ ಉಮೇಶ್ ಶರ್ಮಾ ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಕ್ಷಿತಾರಣ್ಯದಲ್ಲೇ ಕಲ್ಲಿನ ಕ್ವಾರಿ ಮಾಫಿಯಾ- ರಮಾನಾಥ ರೈ ಆಪ್ತನಿಂದಲೇ ಅಕ್ರಮ

    ರಕ್ಷಿತಾರಣ್ಯದಲ್ಲೇ ಕಲ್ಲಿನ ಕ್ವಾರಿ ಮಾಫಿಯಾ- ರಮಾನಾಥ ರೈ ಆಪ್ತನಿಂದಲೇ ಅಕ್ರಮ

    ಮಂಗಳೂರು: ಮಾಜಿ ಅರಣ್ಯ ಸಚಿವ ರಮಾನಾಥ ರೈ ಆಪ್ತ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸದಸ್ಯ ಪದ್ಮಶೇಖರ್ ಜೈನ್ ಎಂಬವರು ರೈ ಪ್ರತಿನಿಧಿಸುತ್ತಿದ್ದ ಬಂಟ್ವಾಳ ತಾಲೂಕಿನಲ್ಲಿ ರಕ್ಷಿತಾರಣ್ಯವನ್ನೇ ಅತಿಕ್ರಮಿಸಿ ಕಲ್ಲಿನ ಕ್ವಾರಿ ನಡೆಸ್ತಿರೋದು ಬೆಳಕಿಗೆ ಬಂದಿದೆ.

    ಬಂಟ್ವಾಳ ತಾಲೂಕಿನ ಕೊಡ್ಯಮಲೆ ರಕ್ಷಿತಾರಣ್ಯ ವ್ಯಾಪ್ತಿಯ ಸರ್ವೆ ನಂಬರ್ 164 /2 ಮತ್ತು 172/2 ರಲ್ಲಿ ಕಳೆದ ಹತ್ತು ವರ್ಷಗಳಿಂದ ಕಲ್ಲಿನ ಕೋರೆ ನಡೆಸುತ್ತಿದ್ದು, ಇದೀಗ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ.

    ಅರಣ್ಯ ಇಲಾಖೆ, ಗಣಿ ಇಲಾಖೆ ಸೇರಿದಂತೆ ಸ್ಥಳೀಯ ಪಂಚಾಯತ್ ಮಟ್ಟದ ಅಧಿಕಾರಿಗಳೂ ಈ ಅಕ್ರಮದಲ್ಲಿ ಶಾಮೀಲಾಗಿರುವ ಆರೋಪ ಕೇಳಿಬಂದಿದೆ. ಕಳೆದ ಹತ್ತು ವರ್ಷಗಳಿಂದ ಇಲ್ಲಿ ಅಕ್ರಮ ಕ್ವಾರಿ ನಡೆಯುತ್ತಿದ್ದರೂ, ಈ ಬಗ್ಗೆ ಯಾವೊಬ್ಬ ಅಧಿಕಾರಿಯೂ ಕಾನೂನು ಉಲ್ಲಂಘನೆಯ ಆಕ್ಷೇಪ ಎತ್ತಿಲ್ಲ. ವಿಶೇಷ ಅಂದ್ರೆ, ಬಂಟ್ವಾಳದ ಆರ್ ಟಿಐ ಕಾರ್ಯಕರ್ತರೊಬ್ಬರು ಅಧಿಕಾರಿ ವರ್ಗದ ಮೇಲೆ ವಿಶ್ವಾಸ ಕಳೆದುಕೊಂಡು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ಮಂಗಳೂರಿನ ಗಣಿ ಇಲಾಖೆ ಅಧಿಕಾರಿಗಳು ಹೈಕೋರ್ಟಿಗೂ ತಪ್ಪು ಮಾಹಿತಿ ನೀಡಿದ್ದಾರೆ.

    ಅಕ್ರಮ ಕ್ವಾರಿ ಅರಣ್ಯ ಪ್ರದೇಶದ 10 ಎಕರೆಗೂ ಹೆಚ್ಚು ಪ್ರದೇಶದಲ್ಲಿ ನಡೀತಿದ್ದರೂ, ಅದರ ಬಗ್ಗೆ ಉಲ್ಲೇಖಿಸದೆ 2015ರ ಬಳಿಕ ಕ್ವಾರಿಗೆ ಅನುಮತಿಯನ್ನೇ ನೀಡಿಲ್ಲ ಎಂದು ಜುಲೈ 2ರಂದು ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಇದೇ ಗಣಿ ಅಧಿಕಾರಿಗಳು ಆರ್ ಟಿಐ ಮಾಹಿತಿಯಡಿ ಕೇಳಿದ ಪ್ರಶ್ನೆಗೆ, ಸದ್ರಿ ಸರ್ವೆ ನಂಬರಿನಲ್ಲಿ ಯಾವುದೇ ಕ್ವಾರಿ, ಕ್ರಷರ್ ಗೆ ಅನುಮತಿ ನೀಡಿಲ್ಲ ಎಂದಿದ್ದು ಅಧಿಕಾರಿಗಳ ಶಾಮೀಲಾತಿಯ ಶಂಕೆ ಮೂಡುವಂತಾಗಿದೆ. ಹೀಗಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಅಧಿಕಾರಿಗಳು ಮತ್ತು ಪರಿಸರ ಇಲಾಖೆ ಅಧಿಕಾರಿಗಳು ಈ ಅಕ್ರಮದಲ್ಲಿ ನೇರ ಶಾಮೀಲಾಗಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ.

    ಕ್ವಾರಿ ವಿರುದ್ಧ ಸ್ಥಳೀಯರು ಯಾವುದೇ ದೂರು ನೀಡಿದ್ರೂ, ಧಮ್ಕಿ ಮೂಲಕ ಬಾಯಿ ಮುಚ್ಚಿಸ್ತಾರೆಂಬ ಆರೋಪ ಕೂಡ ಕೇಳಿಬಂದಿದೆ.

  • ಲಂಚಕ್ಕಾಗಿ ಪೀಡಿಸೋ ಅಧಿಕಾರಿಗಳಿಗೆ ರಾಯಚೂರು ಜಿಲ್ಲಾಧಿಕಾರಿಯಿಂದ ಫುಲ್ ಕ್ಲಾಸ್

    ಲಂಚಕ್ಕಾಗಿ ಪೀಡಿಸೋ ಅಧಿಕಾರಿಗಳಿಗೆ ರಾಯಚೂರು ಜಿಲ್ಲಾಧಿಕಾರಿಯಿಂದ ಫುಲ್ ಕ್ಲಾಸ್

    ರಾಯಚೂರು: ಜಿಲ್ಲೆಯಲ್ಲಿ ಕೆಲಸ ಮಾಡದೇ ಸಾರ್ವಜನಿಕರಿಗೆ ಲಂಚ ಕೊಡುವಂತೆ ಪೀಡಿಸುವ ಅಧಿಕಾರಿಕಾರಿಗಳಿಗೆ ಜಿಲ್ಲಾಧಿಕಾರಿ ಬಗಾದಿ ಗೌತಮ್ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಲಂಚ ತೆಗೆದುಕೊಂಡಿರುವ ಆರೋಪದ ಮೇಲೆ ಸಭೆ ನಡೆಸಿದ ಜಿಲ್ಲಾಧಿಕಾರಿ, ಡಿಸಿ ಕಚೇರಿ ಹಾಗೂ ನಗರಸಭೆ ವಿವಿಧ ವಿಭಾಗದ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಬ್ಲಡಿ ಬೆಗ್ಗರ್ಸ್, ಬ್ರೋಕರ್ಸ್ ಅಂತ ಬೈದು ಅಧಿಕಾರಿಗಳ ಬಗ್ಗೆ ಕಿಡಿಕಾರಿದ್ದಾರೆ.

    ಪ್ರತಿಯೊಂದಕ್ಕೂ ಲಂಚಪಡೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಬೆಂಡೆತ್ತಿದ್ದಾರೆ. ಲಂಚಕ್ಕಾಗಿ ಜನರನ್ನ ಪೀಡಿಸುವ ಹಾಗೂ ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳ ಅಮಾನತಿಗೆ ಪಟ್ಟಿಯನ್ನ ರೆಡಿ ಮಾಡಿರುವುದಾಗಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ಎಚ್ಚರಿಸಿದ್ದಾರೆ.

     

  • Exclusive: ಲವ್ ಜಿಹಾದ್ ಕೇಸ್ ನಲ್ಲಿ ಕರ್ನಾಟಕ ಡಿಸಿ ಕುಟುಂಬವೇ ಭಾಗಿ!

    Exclusive: ಲವ್ ಜಿಹಾದ್ ಕೇಸ್ ನಲ್ಲಿ ಕರ್ನಾಟಕ ಡಿಸಿ ಕುಟುಂಬವೇ ಭಾಗಿ!

    ಬೆಂಗಳೂರು: ಲವ್ ಜಿಹಾದ್ ಕೇಸ್ ನಲ್ಲಿ ಕರ್ನಾಟಕ ಡಿಸಿ ಕುಟುಂಬವೇ ಭಾಗಿಯಾಗಿದ್ದು, ಮನೆ ಮೇಲೆ ದಾಳಿ ಮಾಡಿದಾಗ ಸ್ಫೋಟಕ ರಹಸ್ಯ ಹೊರ ಬಂದಿದೆ.

    ಜನವರಿಯಲ್ಲಿ ದಾಖಲಾದ ಕೇರಳ ಯುವತಿಯ ಲವ್ ಜಿಹಾದ್ ಕೇಸ್ ನಲ್ಲಿ ಕಲಬುರುಗಿಯ ಕಮರ್ಷಿಯಲ್ ಟ್ಯಾಕ್ಸ್ ನ ಡಿಸಿ ಇರ್ಷಾದುಲ್ಲಾ ಖಾನ್ ಪತ್ನಿ ಭಾಗಿಯಾಗಿರುವುದು ತಿಳಿದು ಬಂದಿದೆ. ಯುವತಿ ಕೇರಳದ ಕೊಚ್ಚಿಯಿಂದ ಬೆಂಗಳೂರಿಗೆ ಓದಲೆಂದು ಬಂದಿದ್ದಳು. ಆಗ ಬೆಂಗಳೂರಿನ ಬಿಸಿನೆಸ್‍ಮೆನ್ ನಜೀರ್ ಖಾನ್ ಯುವತಿಯನ್ನು ಪ್ರೀತಿಸಿದ್ದನು. ನಂತರ ಆ ಯುವತಿಯ ತಲೆಕೆಡಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ್ದ. ಮತಾಂತರ ಮಾಡಿ ಅತ್ಯಾಚಾರ ನಡೆಸಿದ್ದಾನೆ. ಅತ್ಯಾಚಾರ ನಡೆಸಿದ ಬಳಿಕ ನಜೀರ್ ಖಾನ್ ಯುವತಿಯನ್ನು ಡಿಸಿ ಇರ್ಷಾದುಲ್ಲಾ ಖಾನ್ ಮನೆಯಲ್ಲಿ ಇರಿಸಿದ್ದನು.

    ನಜೀರ್ ಯುವತಿಯನ್ನು 15 ದಿನಗಳ ಕಾಲ ಡಿಸಿ ಇರ್ಷಾದುಲ್ಲಾ ಖಾನ್ ಮನೆಯಲ್ಲಿಯೇ ಇರಿಸಿ, ಬಳಿಕ ಆಕೆಯನ್ನು ಸೌದಿಗೆ ಕರೆದುಕೊಂಡು ಹೋಗಿದ್ದನು. ಸೌದಿಯಲ್ಲೂ ಕೂಡ ಯವತಿಯ ಮೇಲೆ ಶೇಖ್ ಗಳಿಂದ ನಿರಂತರ ಅತ್ಯಾಚಾರ ನಡೆದಿದೆ. ಈ ಬಗ್ಗೆ ಯುವತಿ ಮನೆಯವರಿಗೆ ಮಾಹಿತಿ ನೀಡಿದ್ದಾಳೆ. ನಜೀರ್ ಸೌದಿಯಿಂದ ಬೆಂಗಳೂರಿಗೆ ಮಾರ್ಗ ಮಧ್ಯೆ ಬರುತ್ತಿದ್ದಾಗ ಎನ್‍ಐಎ ತಂಡ ಆತನನ್ನು ಬಂಧಿಸಿ ಯುವತಿ ರಕ್ಷಣೆ ಮಾಡಿ ವಿಚಾರಣೆ ನಡೆಸಿದ್ದಾರೆ.

    ವಿಚಾರಣೆ ನಡೆಸುವಾಗ ಯುವತಿ ಸ್ಫೋಟಕ ಮಾಹಿತಿಯೊಂದನ್ನು ಹೊರ ಹಾಕಿದ್ದು, ಇಡೀ ಲವ್ ಜಿಹಾದ್ ನ ಹಿಂದೆ ಡಿಸಿ ಇರ್ಷಾದುಲ್ಲಾ ಖಾನ್ ಕುಟುಂಬದ ಕೈವಾಡವಿತ್ತು ಎಂದು ತಿಳಿಸಿದ್ದಾಳೆ. ಕೊಚ್ಚಿ ಎನ್‍ಐಎ ಮಾಹಿತಿಯನ್ನು ಆಧರಿಸಿ ಎರಡು ದಿನಗಳ ಹಿಂದೆ ದಾಳಿ ನಡೆಸಿತ್ತು. ದೊಮ್ಮಲೂರು ಬಳಿಯ ಡೈಮಂಡ್ ಡಿಸ್ಟ್ರಿಕ್ಟ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಡಿಸಿ ಇರ್ಷಾದುಲ್ಲಾ ಖಾನ್ ಪತ್ನಿಯ ಅಸಲಿಯತ್ತು ಅನಾವರಣಗೊಂಡಿದೆ. ಡಿಸಿ ಪತ್ನಿಯೇ ಲವ್ ಜಿಹಾದ್ ನ ರೂವಾರಿಯೇ ಎಂದು ಎನ್‍ಐಎ ಮೂಲಗಳು ತಿಳಿಸಿವೆ.

    ಡಿಸಿ ಪತ್ನಿ ಹಿಂದೂ ಯುವತಿಯರ ಹೆಸರಲ್ಲಿ ಫೇಸ್ ಬುಕ್, ಇನ್‍ಸ್ಟಾಗ್ರಾಂ ಖಾತೆ ತೆರೆದಿದ್ದು, ಅಕೌಂಟ್ ಗಳ ಮೂಲಕ ಹಿಂದೂ ಯುವತಿಯರನ್ನು ಸೆಳೆದು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಳು ಎಂಬ ಸತ್ಯ ಬಯಲಿಗೆ ಬಂದಿದೆ. ಸದ್ಯ ಎನ್‍ಐಎ ತಂಡ ಡಿಸಿ ಇರ್ಷಾದುಲ್ಲಾ ಖಾನ್ ಪತ್ನಿಯಿಂದ 8 ಲ್ಯಾಪ್ ಟಾಪ್ ಹಾಗೂ 12 ಮೊಬೈಲ್ ಗಳ ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರೆಸುತ್ತಿದ್ದಾರೆ

    ಈ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಡಿಸಿ ಇರ್ಷಾದುಲ್ಲಾ ಖಾನ್, “ಈ ರೀತಿಯ ವಿಚಾರಗಳಿಗೆ ಹೋಗಬೇಡ ಎಂದು ಪತ್ನಿಗೆ ಈ ಹಿಂದೆ ತಿಳಿ ಹೇಳಿದ್ದೇನೆ. ಎನ್‍ಐಎ ತಂಡ ವಿಚಾರಣೆ ನಡೆಸಿದೆ ಹಾಗೂ ಯುವತಿ ನಮ್ಮ ಮನೆಗೆ ಬಂದು ಹೋಗಿದ್ದು ನಿಜ. ನನ್ನ ಪತ್ನಿ ಸಮಾಜ ಸೇವೆಯಲ್ಲಿ ತೊಡಗಿದ್ದು, ಆಕೆಯೇ ಸಹಾಯ ಮಾಡಿರಬಹುದು. ಸದ್ಯ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.

  • ತಮ್ಮ ಸೇವೆಯನ್ನ ಜನೋಪಯೋಗಿ ಕಾರ್ಯಕ್ಕೆ ಮೀಸಲಿಟ್ಟಿದ್ದಾರೆ ಹಾವೇರಿಯ ಡಿಸಿ ವೆಂಕಟೇಶ್

    ತಮ್ಮ ಸೇವೆಯನ್ನ ಜನೋಪಯೋಗಿ ಕಾರ್ಯಕ್ಕೆ ಮೀಸಲಿಟ್ಟಿದ್ದಾರೆ ಹಾವೇರಿಯ ಡಿಸಿ ವೆಂಕಟೇಶ್

    ಹಾವೇರಿ: ಅಧಿಕಾರಿಗಳು ಅದರಲ್ಲೂ ಜಿಲ್ಲಾಧಿಕಾರಿಗಳು ಮನಸು ಮಾಡಿದ್ರೆ ಜಿಲ್ಲೆಯ ಚಿತ್ರಣವೇ ಬದಲಾಗತ್ತದೆ ಅನ್ನೋದಕ್ಕೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಹಾವೇರಿ ಡಿ.ಸಿ. ವೆಂಕಟೇಶ್ ಅವರೇ ನಿದರ್ಶನ. ತಮ್ಮ ಜನಪರ ಕಾಳಜಿಯ ಸೇವೆಯಿಂದ ಜಿಲ್ಲೆಯ ಭವಿಷ್ಯವೇ ಬದಲಾಗುತ್ತಿದೆ.

    2 ವರ್ಷಗಳ ಹಿಂದೆ ಜಿಲ್ಲಾಧಿಕಾರಿಯಾಗಿ ಬಂದಿರೋ ವೆಂಕಟೇಶ್ ಅವರು, ಹತ್ತು-ಹಲವು ಜನೋಪಯೋಗಿ ಯೋಜನೆಗಳನ್ನ ರೂಪಿಸಿದ್ದಾರೆ. ಬಡಜನರ ಆರೋಗ್ಯಕ್ಕಾಗಿ `ಪುಣ್ಯಕೋಟಿ ಕುಠೀರ’ ಅನ್ನೋ ಆಸ್ಪತ್ರೆ ನಿರ್ಮಿಸಿದ್ದಾರೆ. ಪ್ರತಿದಿನ ಸಾವಿರಾರು ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗುವಂತೆ ಮಾಡಿದ್ದಾರೆ.

    ಬ್ಯಾಡಗಿ ತಾಲೂಕನ್ನ ರಾಜ್ಯದಲ್ಲಿಯೇ ಪೋಡಿಮುಕ್ತ ತಾಲೂಕಾಗಿ ಮಾಡಿದ್ದಾರೆ. ಹಾವೇರಿ ತಾಲೂಕಿನ ಪ್ರತಿ ಗ್ರಾಮದ ಸರ್ಕಾರಿ ಜಮೀನು ಗುರುತಿಸಿ ಸ್ಮಶಾನ ಕಲ್ಪಿಸಿದ್ದಾರೆ. ಶೌಚಾಲಯ ಜಾಗೃತಿ ಮೂಡಿಸ್ತಿದ್ದಾರೆ. ಸಿಬ್ಬಂದಿಯನ್ನೂ ಜೊತೆಗೆ ಕರೆದುಕೊಂಡು ಕೆರೆಯಲ್ಲಿ ಹೂಳೆತ್ತಿ ಶ್ರಮಾದಾನ ಮಾಡಿದ್ದಾರೆ. ವನ್ಯಜೀವಿಗಳು-ಪಕ್ಷಿಗಳು- ಜಾನುವಾರುಗಳಿಗೆ ನೀರಿನ ಬರ ಕಾಡದಿರಲೆಂದು ರಸ್ತೆಬದಿ ನೀರಿನ ತೊಟ್ಟಿಗಳನ್ನ ನಿರ್ಮಿಸಿದ್ದಾರೆ. ಜಿಲ್ಲಾ ಕಾರಾಗೃಹದ 10 ಎಕರೆ ಭೂಮಿಯಲ್ಲಿ ವಿವಿಧ ಕೆಲಸ ಮಾಡಿಸಿ ಕೈದಿಗಳ ಮನಪರಿವರ್ತನೆ ಮಾಡ್ತಿದ್ದಾರೆ.

    ಇಷ್ಟು ಮಾತ್ರವಲ್ಲದೇ ರಾಜ್ಯದಲ್ಲಿಯೇ ಅಟಲ್ ಜೀ ಸ್ನೇಹ ಕೇಂದ್ರದ ಮೂಲಕ ಜಿಲ್ಲೆಯ ಜನರಿಗೆ ಬೇಕಾದ ಸೇವೆಯನ್ನ ನೀಡಿ ಪ್ರಥಮ ರ್ಯಾಂಕ್ ಪಡೆಯುವಂತೆ ಮಾಡಿದ್ದಾರೆ.

    https://www.youtube.com/watch?v=rjJRaB7t9HI

  • ಮೆಕುನು ಚಂಡಮಾರುತ- ದಕ್ಷಿಣ ಕನ್ನಡ, ಉಡುಪಿ ಶಾಲಾ ಕಾಲೇಜುಗಳಿಗೆ ಇಂದು, ನಾಳೆ ರಜೆ

    ಮೆಕುನು ಚಂಡಮಾರುತ- ದಕ್ಷಿಣ ಕನ್ನಡ, ಉಡುಪಿ ಶಾಲಾ ಕಾಲೇಜುಗಳಿಗೆ ಇಂದು, ನಾಳೆ ರಜೆ

    ಉಡುಪಿ/ಮಂಗಳೂರು: ಮೆಕುನು ಚಂಡಮಾರುತದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಎರಡು ದಿನಗಳ ರಜೆಯನ್ನು ಜಿಲ್ಲೆಯ ಜಿಲ್ಲಾಧಿಕಾರಿಗಳು ಘೋಷಣೆ ಮಾಡಿದ್ದಾರೆ.

    ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಮೋಡ ಮುಸುಕಿದ ವಾತಾವರಣವಿದ್ದು ಮತ್ತೆರಡು ದಿನ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಶಾಲಾ ಆರಂಭದಲ್ಲಿ ವಿಪರೀತ ಮಳೆಯಾಗುತ್ತಿದ್ದು ಮಕ್ಕಳು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲೆಗಳಿಗೆ ಇಂದು ಮತ್ತು ನಾಳೆ ದಿನ ರಜೆ ನೀಡಲಾಗಿದೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಉಡುಪಿ ಡಿಸಿ ಪ್ರಿಯಾಂಕಾ ಮೇರಿ, ಶಾಲಾ ಮಕ್ಕಳಿಗೆ ಸಮಸ್ಯೆಯಾಗದತೆ, ಪೋಷಕರಿಗೆ ಆತಂಕವಾಗವಾರದೆಂಬ ಹಿನ್ನೆಲೆಯಲ್ಲಿ ರಜೆ ನೀಡಿರುವುದಾಗಿ ಹೇಳಿದ್ದಾರೆ.

    ಗ್ರಾಮೀಣ ಪ್ರದೇಶದ ತೊರೆಗಳು ತುಂಬಿ ತುಳುಕುತ್ತಿದ್ದು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಮುಂಜಾಗೃತಾ ಕ್ರಮವಾಗಿ ರಜೆ ಘೋಷಣೆ ಮಾಡಲಾಗಿದೆ. ಮೆಕುನು ಚಂಡಮಾರುತದ ಅಬ್ಬರ ಕಡಿಮೆಯಾದ ಕೂಡಲೇ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದೆ. ಹೀಗಾಗಿ ಒಂದು ವಾರದಿಂದ ಆಗಾಗ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ.

    ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಮತ್ತೆರಡು ದಿನ ಉಡುಪಿಯಲ್ಲಿ ಮಳೆಯಾಗುತ್ತದೆ ಎಂಬ ಸಂದೇಶವನ್ನು ಹವಾಮಾನ ಇಲಾಖೆ ರವಾನಿಸಿದೆ. ಮೂರು ದಿನ ಕಡ್ಡಾಯವಾಗಿ ಯಾರೂ ಕಡಲಿಗೆ ಇಳಿಯಬೇಡಿ ಅಂತ ಜಿಲ್ಲಾಡಳಿತ ಮೀನುಗಾರರಿಗೆ ಎಚ್ಚರಿಕೆ ರವಾನಿಸಿದೆ.

    ವಾಯುಭಾರ ಕುಸಿತವಾಗಿದ್ದು, ಜೂನ್ 1 ಕ್ಕೆ ಮುಂಗಾರು ಮಳೆ ಕರಾವಳಿಗೆ ಪ್ರವೇಶ ಮಾಡುತ್ತದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಸಮಸ್ಯೆಯಾಗದಂತೆ ರಜೆ ನೀಡಿರುವುದಾಗಿ ಡಿ.ಸಿ ಹೇಳಿದ್ದಾರೆ.

  • 700 ವರ್ಷದ ಆಲದ ಮರಕ್ಕೆ ಡ್ರಿಪ್ಸ್ ಹಾಕಿ ಚಿಕಿತ್ಸೆ!

    700 ವರ್ಷದ ಆಲದ ಮರಕ್ಕೆ ಡ್ರಿಪ್ಸ್ ಹಾಕಿ ಚಿಕಿತ್ಸೆ!

    ನವದೆಹಲಿ: 700 ವರ್ಷ ಹಳೆಯ ಆಲದ ಮರವನ್ನು ರಕ್ಷಿಸಲು ತೆಲಂಗಾಣದ ಅಧಿಕಾರಿಗಳು ಡ್ರಿಪ್ಸ್ ಹಾಕಿ ಚಿಕಿತ್ಸೆ ನೀಡುತ್ತಿದ್ದಾರೆ.

    ಮರದ ಕೆಲವು ಕೊಂಬೆಗಳಿಗೆ ಗೆದ್ದಲು ಹಿಡಿದಿದೆ. ಮರವನ್ನು ಗೆದ್ದಲಿನಿಂದ ಉಳಿಸಲು ಅಧಿಕಾರಿಗಳು ಕ್ರಿಮಿನಾಶಕವನ್ನು ಡ್ರಿಪ್ ಮೂಲಕ ಕೊಂಬೆಗಳಿಗೆ ನೀಡುತ್ತಿದ್ದಾರೆ.

    ಮಹಬೂಬ್ ನಗರದಲ್ಲಿರುವ ಪಿಳ್ಳಲಮರಿ ಅಥವಾ ಪೀರ್ಲಾ ಮರ್ರಿ ಎಂದು ಕರೆಯಲ್ಪಡುವ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಈ ಆಲದ ಮರ ಮೂರು ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಪ್ರಪಂಚದಲ್ಲೇ ಎರಡನೇ ದೊಡ್ಡ ಆಲದ ಮರ ಇದಾಗಿದೆ.

    ಕಳೆದ ಡಿಸೆಂಬರ್ ನಲ್ಲಿ ಗೆದ್ದಲು ಹುಳುಗಳ ಕಾಟದಿಂದ ಒಂದು ಕೊಂಬೆ ಮುರಿದು ಬಿದ್ದಿತ್ತು. ಇದಾದ ನಂತರ ಸಾರ್ವಜನಿಕ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗೆದ್ದಲು ಹುಳಗಳಿಂದ ಮರವನ್ನು ರಕ್ಷಿಸಲು ಪ್ರತಿ ಎರಡು ಮೀಟರ್ ಗೆ ರಾಸಾಯನಿಕ ಕ್ಲೋರಿಪಿರಿಫೊಸ್ ಕ್ರಿಮಿನಾಶಕವನ್ನು ಡ್ರಿಪ್ ಮೂಲಕ ಮರಕ್ಕೆ ಕೊಡಲಾಗುತ್ತಿದೆ. ರೋಗಿಗಳಿಗೆ ಡ್ರಿಪ್ ಹಾಕಿ ವೈದ್ಯರು ಗಮನಿಸುವಂತೆ ಆಲದ ಮರವನ್ನು ಗಮನಿಸಲಾಗುತ್ತಿದೆ ಎಂದು ತಿಳಿಸಿದರು.

    ಮೊದಲಿಗೆ ಮರದ ಕಾಂಡಕ್ಕೆ ತೂತುಗಳನ್ನು ಮಾಡಿ ನೇರವಾಗಿ ಕ್ರಿಮಿನಾಶಕವನ್ನು ಹಾಕಿದೆವು. ಆದರೆ ಈ ಪ್ರಯತ್ನ ಫಲ ಕೊಡದ ಹಿನ್ನೆಲೆಯಲ್ಲಿ ಈಗ ಕೊಂಬೆಗಳಿಗೆ ಕ್ರಿಮಿನಾಶಕದ ಡ್ರಿಪ್ಸ್ ಹಾಕಿಸಲಾಗುತ್ತಿದೆ ಎಂದು ತಿಳಿಸಿದರು.

    ರಾಸಾಯನಿಕ ಇರುವ ನೀರನ್ನು ಮರಕ್ಕೆ ಕೊಡಲಾಗುತ್ತಿದೆ. ಗೆದ್ದಲು ಹಿಡಿದು ಬೀಳುವಂತೆ ಆಗಿರುವ ದೊಡ್ಡ ಕೊಂಬೆಗಳಿಗೆ ಬೀಳದಂತೆ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾ ಅರಣ್ಯಾಧಿಕಾರಿ ಚುಕ್ಕಾ ಗಂಗಾ ರೆಡ್ಡಿ ಅವರು ತಿಳಿಸಿದ್ದಾರೆ.

    ಆಲದ ಮರದ ಆರೋಗ್ಯ ಈಗ ಸ್ಥಿರವಾಗಿದೆ. ಉನ್ನತ ಅಧಿಕಾರಿಗಳ ಜೊತೆ ಮಾತನಾಡಿ ಸ್ವಲ್ಪ ದಿನಗಳ ನಂತರ ಸಾರ್ವಜನಿಕ ವೀಕ್ಷಣೆ ಅನುವು ಮಾಡಿಕೊಡಲಾಗುತ್ತದೆ. ಆದರೆ ಈ ಸಮಯ ಪ್ರವಾಸಿಗರು ಸ್ವಲ್ಪ ದೂರದಿಂದ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.

    ಜಿಲ್ಲಾಧಿಕಾರಿ ರೊನಾಲ್ಡ್ ರೋಸ್ ಅವರೇ ಖುದ್ದು ಮರದ ಆರೋಗ್ಯವನ್ನು ಗಮನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

    https://www.youtube.com/watch?v=M681UNaVAO4