Tag: DC

  • ಕೊರೊನಾ ಎಫೆಕ್ಟ್- 17 ಸಾವಿರ ಕೋಳಿಗಳ ಜೀವಂತ ಸಮಾಧಿ

    ಕೊರೊನಾ ಎಫೆಕ್ಟ್- 17 ಸಾವಿರ ಕೋಳಿಗಳ ಜೀವಂತ ಸಮಾಧಿ

    ರಾಮನಗರ: ಮಹಾಮಾರಿ ಕೊರೊನಾ ಎಫೆಕ್ಟ್ ಕೋಳಿ ಉದ್ಯಮದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಕೋಳಿ ಸಾಕಣಿಕೆದಾರರು ಕೋಳಿಗಳನ್ನು ಜೀವಂತವಾಗಿ ಸಮಾಧಿ ಮಾಡಲು ಮುಂದಾಗಿದ್ದು, 75 ಸಾವಿರ ಕೋಳಿಗಳ ಪೈಕಿ 17 ಸಾವಿರ ಕೋಳಿಗಳನ್ನು ಜೀವಂತವಾಗಿ ಗುಂಡಿಯಲ್ಲಿ ಸಮಾಧಿ ಮಾಡಿದ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ.

    ಚನ್ನಪಟ್ಟಣದ ಫಯಾಜ್ ಅಹಮದ್ ಹಾಗೂ ರಿಯಾಜ್ ಅಹಮದ್ ಎಂಬವರು ಚಿಕನ್ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ತಾವು ಸಾಕಾಣಿಕೆ ಮಾಡುತ್ತಿದ್ದ ಕೋಳಿ ಫಾರಂ ಬಳಿಯೇ ಜೆಸಿಬಿ ಯಂತ್ರದ ಸಹಾಯದಿಂದ ಗುಂಡಿ ತೆಗೆದು 17 ಸಾವಿರ ಕೋಳಿಗಳನ್ನು ಜೀವಂತವಾಗಿ ಸಮಾಧಿ ಮಾಡಿದ್ದಾರೆ.

    ಕಳೆದ ಒಂದು ವಾರದಿಂದ ಚಿಕನ್ ತಿಂದ್ರೆ ಕೊರೊನಾ ಬರುತ್ತೆ ಎಂಬ ವದಂತಿಯಿಂದ ಕೋಳಿ ಮಾಂಸವನ್ನೇ ಕೇಳುವವರಿಲ್ಲದಂತಾಗಿದೆ. ಮಾರುಕಟ್ಟೆಯಲ್ಲಿ 80ರಿಂದ 100 ರೂ. ಇದ್ದ ಕೆಜಿ ಕೋಳಿ ಮಾಂಸ ಮತ್ತೆ ಕುಸಿದಿದ್ದು, ಪೌಲ್ಟ್ರಿ ಸೆಂಟರ್ ಮಾಲೀಕರು ಕೋಳಿ ಮಾಂಸ ಮಾರಾಟದಿಂದ ಹಿಂದೆ ಸರಿಯುತ್ತಿದ್ದಾರೆ.

    ಕೋಳಿ ಸಾಕಣಿಕೆದಾರರು ಸಾಕಿದ ಕೋಳಿಗಳನ್ನು ಕೆಜಿಗೆ 2ರಿಂದ 3 ರೂ. ಕೇಳುತ್ತಿದ್ದಾರೆ. ಕಳೆದ ವಾರ 10ರಿಂದ 15 ರೂ. ಇತ್ತು, ಅಲ್ಪ ಸ್ವಲ್ಪನಾದ್ರೂ ಮಾರಾಟ ಮಾಡಬಹುದಿತ್ತು. ಆದರೆ ಇದೀಗ ಕೋಳಿಯನ್ನು ಕೇಳುವವರೇ ಇಲ್ಲದಂತಾಗಿದೆ.

    ಈ ಹಿನ್ನೆಲೆಯಲ್ಲಿ ಉಚಿತವಾಗಿ ಸಾರ್ವಜನಿಕರಿಗೆ ನೀಡಲು ಮುಂದಾದ್ರೂ ಸಹ ಕೋಳಿಯನ್ನು ತೆಗೆದುಕೊಂಡು ಹೋಗುವವರೇ ಇಲ್ಲದಂತಾಗಿದೆ. ಹೀಗಾಗಿ ಕೋಳಿ ಫಾರಂ ಬಳಿಯೇ ಜೆಸಿಬಿ ಯಂತ್ರದ ಮೂಲಕ 5 ಗುಂಡಿಗಳನ್ನು ತೆಗೆದು ಸುಮಾರು 17 ಸಾವಿರ ಕೋಳಿಗಳನ್ನು ಜೀವಂತವಾಗಿ ಸಮಾಧಿ ಮಾಡಿದ್ದಾರೆ.

    ಕೋಳಿ ತಿಂದರೆ ಕೊರೊನಾ ಬರಲ್ಲ ಎಂಬ ಬಗ್ಗೆ ಜಿಲ್ಲಾಡಳಿತದಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತಹ ಕೆಲಸವನ್ನು ಮಾಡಿಲ್ಲ. ಹಾಗಾಗಿ ಸಾರ್ವಜನಿಕರು ಸಹ ಚಿಕನ್ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಸುಮಾರು 80 ಲಕ್ಷ ರೂ. ಕೋಳಿ ಫಾರಂಗೆ ಹಾಕಿದ್ದು, ಇದೀಗ ಸಂಪೂರ್ಣವಾಗಿ ನಷ್ಟವಾಗಿದೆ. ಕೋಳಿಗಳನ್ನು ಜೀವಂತವಾಗಿ ಗುಂಡಿಗಳಲ್ಲಿ ಸಮಾಧಿ ಮಾಡ್ತಿದ್ದೇವೆ. ಸರ್ಕಾರ ಕುಕ್ಕುಟೋದ್ಯಮದ ಕಡೆಗೂ ಗಮನ ಹರಿಸಿ ಪರಿಹಾರ ನೀಡುವಂತಾಗಬೇಕು ಎಂದು ಫಾರಂ ಮಾಲೀಕ ಫಯಾಜ್ ಅಹಮದ್ ತಿಳಿಸಿದರು.

  • ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಬೆಳಗಾವಿ ಜಿಲ್ಲಾಡಳಿತ

    ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಬೆಳಗಾವಿ ಜಿಲ್ಲಾಡಳಿತ

    – ಮಹಾರಾಷ್ಟ್ರ ಗಡಿಯಲ್ಲಿ ತಪಾಸಣಾ ಕೇಂದ್ರ ಸ್ಥಾಪನೆ

    ಬೆಳಗಾವಿ/ಚಿಕ್ಕೋಡಿ: ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತುಕೊಂಡು ಬೆಳಗಾವಿ ಜಿಲ್ಲಾಡಳಿತ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿಯಲ್ಲಿ ಕೊರೊನಾ ತಪಾಸಣಾ ಕೇಂದ್ರ ಸ್ಥಾಪನೆ ಮಾಡಿದೆ.

    ಮಹಾರಾಷ್ಟ್ರ ಗಡಿಯಲ್ಲಿರುವ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೂಗನೊಳ್ಳಿ ಚೆಕ್ ಪೋಸ್ಟ್ ಬಳಿ ಕೊರೊನಾ ತಪಾಸಣಾ ಕೇಂದ್ರ ಸ್ಥಾಪನೆ ಮಾಡಲಾಗಿದ್ದು, ಮಹಾರಾಷ್ಟ್ರದಿಂದ ಬರುವ ಎಲ್ಲ ವಾಹನಗಳ ಪ್ರಯಾಣಿಕರನ್ನು ಥರ್ಮಲ್ ಯಂತ್ರದ ಮೂಲಕ ಸ್ಕ್ರೀನಿಂಗ್ ನಡೆಸಿ ತಪಾಸಣೆ ನಡೆಸಲಾಗುತ್ತಿದೆ.

    ಥರ್ಮಲ್ ಸ್ಕ್ರೀನಿಂಗ್ ಅಲ್ಲಿ ಜ್ವರ ಕಂಡು ಬಂದಲ್ಲಿ ಅಂಥವರಿಗೆ ಸಮೀಪದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಪ್ರಯಾಣಿಕರ ಕೊರೊನಾ ತಪಾಸಣೆ ನಡೆಯಲಿದೆ.

    ಮಹಾರಾಷ್ಟ್ರದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಮಂಗಳವಾರ ಗಡಿಯಲ್ಲಿ ಕೊರೊನಾ ವೈರಸ್ ತಪಾಸಣೆ ಇಲ್ಲ ಎಂದು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ವರದಿ ಹಿನ್ನೆಲೆಯಲ್ಲಿ ಇಂದು ಗಡಿಯಲ್ಲಿ ಕೊರೊನಾ ತಪಾಸಣಾ ಕೇಂದ್ರ ಸ್ಥಾಪನೆ ಮಾಡಲಾಗಿದೆ.

  • ‘ಕೊರೊನಾ ತುರ್ತು ಪರಿಸ್ಥಿತಿಯನ್ನೇ ಬಂಡವಾಳ ಮಾಡ್ಕೊಂಡ್ರೆ ಜೈಲಿಗೆ ಕಳಿಸ್ತೀವಿ’

    ‘ಕೊರೊನಾ ತುರ್ತು ಪರಿಸ್ಥಿತಿಯನ್ನೇ ಬಂಡವಾಳ ಮಾಡ್ಕೊಂಡ್ರೆ ಜೈಲಿಗೆ ಕಳಿಸ್ತೀವಿ’

    – ಎಚ್.ಆರ್ ಮಹಾದೇವ ಎಚ್ಚರಿಕೆ

    ಬೀದರ್: ಕೊರೊನಾ ತುರ್ತು ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಲಾಭ ಮಾಡಲು ಹೊರಟರೆ ಮುಲಾಜಿಲ್ಲದೆ ಜೈಲಿಗೆ ಕಳುಹಿಸುವುದಾಗಿ ಜಿಲ್ಲಾಧಿಕಾರಿ ಫಾರ್ಮಸಿ ಅಂಗಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಎಚ್.ಆರ್ ಮಹಾದೇವ, ವಿಶ್ವದಾದ್ಯಂತ ಕೊರೊನಾ ವೃಸ್ ಭೀತಿ ಹೆಚ್ಚಾಗುತ್ತಿದೆ. ಇದರಿಂದ ತಪ್ಪಿಸಿಕೊಳ್ಳಬೇಕು ಅಂತ ಎಲ್ಲರೂ ಮಾಸ್ಕ್ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಕೆಲ ಫಾರ್ಮಸಿ ಅಂಗಡಿಗಳು ಮಾಸ್ಕ್ ಗೆ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಯಾರಾದರೂ ಈ ಪರಿಸ್ಥಿತಿಯನ್ನ ದುರ್ಬಳಕೆ ಮಾಡಿಕೊಂಡು ಡಬಲ್ ರೇಟಿಗೆ ಮಾಸ್ಕ್ ಮಾರಿದ್ದು ಕಂಡು ಬಂದ್ರೆ ಅವರನ್ನ ಜೈಲಿಗೆ ಕಳಿಸುವುದಾಗಿ ತಿಳಿಸಿದ್ದಾರೆ.

    ಕೊರೊನಾ ವೈರಸನ್ನೇ ಬಂಡವಾಳ ಮಾಡಿಕೊಂಡು ಹೆಚ್ಚಿನ ಬೆಲೆ ಮಾಸ್ಕ್ ಮಾರಾಟ ಮಾಡಿದರೆ ಕೂಡಲೇ ನನ್ನ ಗಮನಕ್ಕೆ ತನ್ನಿ. ನಾನು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ. ಈಗಾಗಲೇ ನಮ್ಮ ಜಿಲ್ಲೆಗೆ ವಿದೇಶದಿಂದ 126 ಜನ ಬಂದಿದ್ದಾರೆ. ಅವರನ್ನು ಮನೆಯಿಂದಾನೆ ನಮ್ಮ ಸಿಬ್ಬಂದಿ ನಿಗಾ ವಹಿಸಿದ್ದಾರೆ. ಇನ್ನೂ 300 ಜನ ವಿದೇಶದಿಂದ ಬರಲಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸಿದ್ಧವಿದೆ. ಹಳ್ಳಿ-ಹಳ್ಳಿಗಳಲ್ಲಿ ಈಗಾಗಾಲೇ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ 6 ಬೆಂಗಾವಲು ಪಡೆಗಳು ಕಾರ್ಯನಿರ್ವಸುತ್ತಿವೆ ಎಂದು ತಿಳಿಸಿದರು.

  • ಅನಿವಾಸಿ ಭಾರತೀಯನ ಸಾವನ್ನು ಕೊರೊನಾ ಜೊತೆ ಲಿಂಕ್ ಮಾಡ್ಬೇಡಿ: ಉಡುಪಿ ಡಿಸಿ

    ಅನಿವಾಸಿ ಭಾರತೀಯನ ಸಾವನ್ನು ಕೊರೊನಾ ಜೊತೆ ಲಿಂಕ್ ಮಾಡ್ಬೇಡಿ: ಉಡುಪಿ ಡಿಸಿ

    – ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ

    ಉಡುಪಿ: ಕೆನಡಾ ದೇಶದಿಂದ ಬಂದು ಉಡುಪಿಯ ಹೂಡೆ ಗ್ರಾಮದಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು 82 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ಸಾವಿಗೆ ಕೊರೊನಾ ಕಾರಣವಲ್ಲವೆಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟಪಡಿಸಿದ್ದಾರೆ.

    ಮೃತ ವ್ಯಕ್ತಿ ಮೂಲತಃ ಪಂಜಾಬ್ ರಾಜ್ಯದವರಾಗಿದ್ದು, ಕಳೆದ ನವೆಂಬರ್‍ನಿಂದ ಹೊಡೆಯಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿದ್ದರು. ರಣವೀರ್ ಇವರ ಸಾವಿಗೆ ಕೊರೊನಾ ಕಾರಣವಲ್ಲವಾಗಿದ್ದು, ಈ ಬಗ್ಗೆ ಅನಗತ್ಯವಾಗಿ ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಸಾರ್ವಜನಿಕರು ಯಾವುದೇ ಅನಗತ್ಯ ವದಂತಿ ಗಳಿಗೆ ಕಿವಿಗೊಡದಂತೆ ತಿಳಿಸಿದ್ದಾರೆ.

    ಮೃತ ವ್ಯಕ್ತಿ ಉಡುಪಿಯ ತೋನ್ಸೆ ಹೆಲ್ತ್ ಸೆಂಟರ್ ನಲ್ಲಿ ಮೃತಪಟ್ಟಿದ್ದು, ಕೆನಡಾದಿಂದ ಬಂದಿರುವ ರಣವೀರ್ ಸಿಂಗ್ ವಿದೇಶಿ ಪ್ರಜೆಯೆಂಬ ಕಾರಣಕ್ಕೆ ಆತಂಕ ಎದುರಾಗಿತ್ತು. ಈ ಬಗ್ಗೆ ಸಾರ್ವಜನಿಕರಲ್ಲಿ ಯಾವುದೇ ಆತಂಕ ಬೇಡ. ರಣವೀರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪ್ರತೀ ಚಳಿಗಾಲಕ್ಕೆ ಸಿಂಗ್ ಚಿಕಿತ್ಸೆ ಪಡೆಯುತ್ತಿದ್ದರು. ಮೃತದೇಹವನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಮಾಡಿ ಸರಕಾರಕ್ಕೆ ವರದಿ ಕೊಡುತ್ತೇವೆ ಎಂದರು.

    ಮೃತ ವ್ಯಕ್ತಿಯಲ್ಲಿ ಕೊರೊನಾ ಲಕ್ಷಣ ಇರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಬೇಡ. ಸುಳ್ಳು ಪ್ರಚಾರ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿಕೆ ನೀಡಿದ್ದಾರೆ.

  • ತುರ್ತು ಪರಿಸ್ಥಿತಿ ಬಿಟ್ಟು ಮನೆಯಿಂದ ಹೊರ ಬರಬೇಡಿ- ಕಲಬುರಗಿ ಡಿಸಿ ಮನವಿ

    ತುರ್ತು ಪರಿಸ್ಥಿತಿ ಬಿಟ್ಟು ಮನೆಯಿಂದ ಹೊರ ಬರಬೇಡಿ- ಕಲಬುರಗಿ ಡಿಸಿ ಮನವಿ

    – ಕಲಬುರಗಿಯಲ್ಲಿ ಕೊರೊನಾ ಕರ್ಫ್ಯೂ
    – ಮದುವೆ ಬಗ್ಗೆ ನಮಗೆ ಮಾಹಿತಿ ಕೊಡಿ
    – ಚೀನಾ, ಇಟಲಿಯಂತೆ ಲಾಕ್ ಡೌನ್

    ಕಲಬುರಗಿ: ತುರ್ತು ಪರಿಸ್ಥಿತಿ ಬಿಟ್ಟು ಯಾರೂ ಮನೆಯಿಂದ ಸುಮ್ಮನೆ ಹೊರಗೆ ಬರಬೇಡಿ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ ಶರತ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಜಿಲ್ಲೆಯಲ್ಲಿ ಕೊರೊನಾ ವೈರಸ್ ಗೆ ವೃದ್ಧ ಬಲಿ ಹಾಗೂ 46 ಜನ ಶಂಕಿತರಿಗೆ ಚಿಕಿತ್ಸೆ ಹಿನ್ನೆಲೆಯಲ್ಲಿ ಇಂದು ಕಲಬುರಗಿಯ ವಾರ್ತಾ ಭವನದಲ್ಲಿ ಜಿಲ್ಲಾಧಿಕಾರಿ ಬಿ.ಶರತ್ ಸುದ್ದಿಗೋಷ್ಠಿ ನಡೆಸಿದರು. ಮೃತ ವ್ಯಕ್ತಿಯ ಜೊತೆ ಒಟ್ಟು 71 ಜನರಿಗೆ ಅದರಲ್ಲಿ ನಾಲ್ಕು ಜನ ನೇರ ಸಂಪರ್ಕ ಇರುವ ಹಿನ್ನೆಲೆಯಲ್ಲಿ ಅವರಿಗೆ ಇಎಸ್‍ಐ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ವ್ಯಕ್ತಿಗೆ ಚಿಕಿತ್ಸೆ ನೀಡಿದ ಕಲಬುರಗಿಯ ಖಾಸಗಿ ಆಸ್ಪತ್ರೆಯ ನರ್ಸ್ ನನ್ನು ಸಹ ಚಿಕಿತ್ಸೆಗೆ ಒಳಪಡಿಸಲಾಗಿದೆ. ಮೃತ ವ್ಯಕ್ತಿಯ ನಾಲ್ಕು ಜನರಲ್ಲಿ ಇಬ್ಬರು ಹೆಣ್ಣು ಮಕ್ಕಳು. ಓರ್ವ ವ್ಯಕ್ತಿ ಹಾಗೂ ಮೃತ ವ್ಯಕ್ತಿ ಮೊಮ್ಮಗ ಸಹ ಹೈ ರಿಸ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

    ಇದೇ ವೇಳೆ ಕೊರೊನಾ ಕಾಯಿಲೆಯಿದ್ದ ವ್ಯಕ್ತಿ ಮಗನನ್ನು ಸಂದರ್ಶನ ಮಾಡಿದ ಪತ್ರಕರ್ತರನ್ನು ಹೊರ ಹೋಗುವಂತೆ ಡಿಸಿ ಮನವಿ ಮಾಡಿದರು. ಖಾಸಗಿ ಚಾನಲ್ ಓರ್ವ ಕ್ಯಾಮೆರಾಮನ್ ಹಾಗೂ ಇಬ್ಬರು ವರದಿಗಾರರನ್ನು ಚಿಕಿತ್ಸೆಗೆ ಒಳಪಡಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಇಂತಹ ದುಸ್ಸಾಹಸಕ್ಕೆ ಯಾರೂ ಕೈ ಹಾಕಬೇಡಿ ಎಂದು ಡಿಸಿ ಮಾಧ್ಯಮದವರ ಬಳಿ ಮನವಿ ಮಾಡಿಕೊಂಡರು.

    ಮೃತ ವೃದ್ಧನ ಮಗ ಮೊದಲು ವಿಜಯಪುರಕ್ಕೆ ಹೋಗಿ ಬಂದಿರುವುದರ ಬಗ್ಗೆ ಮಾಹಿತಿ ಕಲೆ ಹಾಕುತ್ತೇನೆ. ಅಂತ್ಯಕ್ರಿಯೆಗೆ ಒಟ್ಟು 71 ಜನ ಭಾಗವಹಿಸಿದ್ದರು. ಇವರೆಲ್ಲರು ಸೆಕೆಂಡರಿ ಕಾಂಟ್ರ್ಯಾಕ್ಟ್ ನಲ್ಲಿದ್ದಾರೆ. ಹೀಗಾಗಿ ಎಲ್ಲರ ಮೇಲೆ ಕೂಡ ನಿಗಾ ಇಡಲಾಗಿದೆ. ತುರ್ತು ಪರಿಸ್ಥಿತಿ ಹೊರತು ಪಡಿಸಿ ಕಲಬುರಗಿ ನಗರದ ಜನ ಹೊರಗಡೆ ಬರಬಾರದು ಎಂದು ಜನರಲ್ಲಿ ಕೇಳಿಕೊಂಡರು.

    ತುರ್ತು ಪರಿಸ್ಥಿತಿ ಬಿಟ್ಟು ಸುಮ್ಮ ಸುಮ್ಮನೆ ಹೊರ ಬರಬೇಡಿ. ನಾವು ಏನು ಕರ್ಫ್ಯೂ ಹಾಕುತ್ತಿಲ್ಲ. ಯಾರಾದರೂ ಮನೆಯಿಂದ ಒಬ್ಬರು ಹೊರಬಂದು ಬೇಕಾದ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂದು ಡಿಸಿ ಸಲಹೆ ನೀಡಿದ್ದಾರೆ.

    ಯಾರು ಮನೆಯಲ್ಲಿ(ಹೋಂ ಐಸೋಲೇಷನ್) ಚಿಕಿತ್ಸೆ ಪಡೆಯುತ್ತಿದ್ದಾರೋ ಅವರಿಗೆಲ್ಲ ಮನೆಗೆ ಊಟ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಸದ್ಯ ಗಂಭೀರವಾದ ಪರಿಸ್ಥಿತಿಯಿದೆ. ಹೀಗಾಗಿ ಎಲ್ಲರೂ ಮನೆಯಲ್ಲಿಯೇ ಇರಬೇಕು. ಮದುವೆ ಸಹ ಎರಡು ಕುಟುಂಬಗಳ ಮಾತ್ರ ಅನುಮತಿ ಪಡೆದು ಮಾಡಬೇಕು. ಮೊದಲು ನಮಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ಕೊಡಬೇಕು. ನಂತರ ನಾವು ಅನುಮತಿ ನೋಡಿ ಕೊಡುತ್ತೇವೆ ಎಂದರು.

    ಹೊರ ದೇಶಗಳಿಗೆ ಹೋಗಿ ಬಂದವರು ಸ್ವಯಂಪ್ರೇರಣೆಯಿಂದ ಬಂದು ಪರೀಕ್ಷೆಗೆ ಒಳಪಡಿಸಬೇಕು. ಬೇರೆಯವರು ಅತಿ ತುರ್ತು ಕೆಲಸ ಇಲ್ಲ ಅಂದ್ರೆ ಈ ಕಡೆ ಬರಬೇಡಿ. ಕಾಲ್ ಸೆಂಟರ್ ಆರಂಭಿಸುತ್ತಿದ್ದೇವೆ. ಜನರಿಗೆ ಏನಾದರೂ ಹುಷಾರಿಲ್ಲ ಅಂದ್ರೆ ಅವರು ಮಾಹಿತಿ ಕೊಡದಿದ್ರೆ ಬೇರೆಯವರು ಮಾಹಿತಿ ಕೊಡಲು ಅವಕಾಶವಿದೆ. ಈ ಮೂಲಕ ಕೊರೋನಾ ಕಾಯಿಲೆ ತಡೆಗಟ್ಟಲು ಸಹಾಯವಾಗಲಿದೆ. 2 ವಾರಗಳ ಕಾಲ ಯಾರು ಅನಾವಶ್ಯಕ ಹೊರಗೆ ಬರಬೇಡಿ. ಆರ್‍ಟಿಓ, ಸಬ್ ರಿಜಿಸ್ಟರ್ ಸೇರಿದಂತೆ ಸರ್ವಿಸ್ ಓರಿಯಂಟೆಡ್ ವ್ಯವಸ್ಥೆ ಇರುವುದಿಲ್ಲ ಎಂದು ತಿಳಿಸಿದರು.

    ಕಚೇರಿಗಳು ಜನರಿಗೆ ಸೌಲಭ್ಯ ನೀಡುವುದಿಲ್ಲ. ತಂಬಾಕು ಪದಾರ್ಥದ ವಸ್ತುಗಳನ್ನು ಕೆಲ ದಿನಗಳ ಕಾಲ ಮಾರಾಟ ಮಾಡಲು ನಿಷೇಧಿಸುತ್ತಿದ್ದೇವೆ. ಕಲಬುರಗಿಯಿಂದ ಈಶಾನ್ಯ ಸಾರಿಗೆ ಬಸ್ ಸೌಲಭ್ಯಗಳಲ್ಲಿ ಸ್ವಲ್ಪ ಕಡಿತ ಮಾಡುತ್ತೇವೆ. ಈ ಬಗ್ಗೆ ಸಾರಿಗೆ ಇಲಾಖೆ ಎಂಡಿ ಜೊತೆ ಚರ್ಚಿಸಿ ಮಾಹಿತಿ ಕೊಡುತ್ತೇವೆ ಎಂದು ಹೇಳಿದರು.

  • ಒಂದು ಕೊರೊನಾ ಸಾವಿನಿಂದ ಡೇಂಜರ್ ಝೋನ್‍ನಲ್ಲಿ ಕಲಬುರಗಿ – ಅಧಿಕಾರಿಗಳು ಎಡವಿದ್ದು ಎಲ್ಲಿ?

    ಒಂದು ಕೊರೊನಾ ಸಾವಿನಿಂದ ಡೇಂಜರ್ ಝೋನ್‍ನಲ್ಲಿ ಕಲಬುರಗಿ – ಅಧಿಕಾರಿಗಳು ಎಡವಿದ್ದು ಎಲ್ಲಿ?

    ಕಲಬುರಗಿ: ಕೊರೊನಾ ವೈರಸ್‍ನಿಂದ ಕಲಬುರಗಿಯ ವ್ಯಕ್ತಿ ಮೃತಪಟ್ಟಿದ್ದು, ಇದರಿಂದ ಇಡೀ ಕಲಬುರಗಿ ಜಿಲ್ಲೆ ಡೇಂಜರ್ ಝೋನ್‍ನಲ್ಲಿ ಇದೆ ಎಂದು ಹೇಳಲಾಗುತ್ತಿದೆ.

    ಕೊರೊನಾ ಸೋಂಕಿತ ಅಂತ್ಯಸಂಸ್ಕಾರದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು. ಈ ವೇಳೆ ಜಿಲ್ಲಾಡಳಿತ ಯಾವುದೇ ಮುಂಜಾಗೃತ ಕ್ರಮಗಳನ್ನು ಕೈಗೊಂಡಿರಲಿಲ್ಲ. ಅಂತ್ಯಸಂಸ್ಕಾರಕ್ಕೆ ಬಂದ ಸಂಬಂಧಿಕರು ಮೃತ ವ್ಯಕ್ತಿಯ ಕಾಲು ಮುಟ್ಟಿ ನಮಸ್ಕರಿಸಿದ್ದರು. ಇದರಿಂದ ಬೇರೆಯವರಿಗೂ ಕೊರೊನಾ ಹರಡುವ ಸಾಧ್ಯತೆಗಳಿವೆ.

    ಮೃತ ವೃದ್ಧನ ಸಾವಿನ ನಂತರ ಆರೋಗ್ಯ ಇಲಾಖೆ ಸಂಪೂರ್ಣ ನಿರ್ಲಕ್ಷ್ಯವಹಿಸಿದೆ. ಹೈದರಾಬಾದ್‍ನಿಂದ ರಸ್ತೆ ಮಾರ್ಗವಾಗಿ ವೃದ್ಧ ಸಾವನಪ್ಪಿರುವ ಸುದ್ದಿ ತಿಳಿದ ತಕ್ಷಣ ಮೃತ ವ್ಯಕ್ತಿಯ ಶವವನ್ನು ಕಲಬುರಗಿಯ ಜೀಮ್ಸ್ ಶವಗಾರದಲ್ಲಿ ತಂದು ಇಡಲಾಗಿದೆ. ನಂತರ ಅಂಬುಲೆನ್ಸ್ ಮೂಲಕ ಶವವನ್ನು ಸಾಗಿಸಿ ಅಂತ್ಯಸಂಸ್ಕಾರ ಮಾಡಲಾಗಿದೆ. ಅಧಿಕಾರಿಗಳ ಈ ನಿರ್ಲಕ್ಷ್ಯತನದಿಂದ ಮೃತ ವ್ಯಕ್ತಿಯಿಂದಾಗಿ ಈಗ ಕಲಬುರಗಿ ಜಿಲ್ಲೆಯ ಹಲವರಿಗೆ ಕೊರೊನಾ ಬರುವ ಶಂಕೆ ಹೆಚ್ಚಾಗಿದೆ.

    ಅಧಿಕಾರಿಗಳು ಎಡವಿದ್ದೆಲ್ಲಿ?
    1. ಮೃತ ವೃದ್ಧನ ಜೊತೆ ಬರುವ ಸಂಬಂಧಿಕರಿಗೆ ಅಂಬುಲೆನ್ಸ್ ಯಾವ ಮಾಸ್ಕ್ ನೀಡಿರಲಿಲ್ಲ.
    2. ಶವ ಸಾಗಿಸಿದ ಅಂಬುಲೆನ್ಸ್ ಡ್ರೈವರ್ ಗೂ ಎನ್-95 ಕಿಟ್ ವಿತರಿಸಿಲ್ಲ
    3. ಶವ ಸಾಗಾಟ ನಂತರ ಅಂಬುಲೆನ್ಸ್ ಯಾವ ಸ್ವಚ್ಛತೆ ಕಾರ್ಯ ಸಹ ನಡೆಸಿಲ್ಲ
    4. ಶವಗಾರದ ಸುತ್ತಲಿರುವ ಇತರೆ ಜನರಿಗೆ ಜಾಗೃತಿ ನೀಡಲಿಲ್ಲ.
    5. ಕೊರೊನಾ ಕಾಯಿಲೆಯಿಂದ ಮೃತಪಟ್ಟ ಶವವನ್ನು ಕುಟುಂಬಸ್ಥರಿಂದಲೇ ಸ್ನಾನ ಮಾಡಿಸಲಾಗಿದೆ.
    6. ಮೃತನ ಶರೀರವನ್ನು ಸಂಪೂರ್ಣ ಪ್ಯಾಕ್ ಮಾಡಿರಲಿಲ್ಲ.
    7. ಮೃತದೇಹ ಸಾಗಿಸಲು ಬಳಸಿದ ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್‍ಗಳನ್ನು ನಾಶಪಡಿಸಿಲ್ಲ.
    8. ಮೃತ ವ್ಯಕ್ತಿ ಹೋಟೆಲ್,ಕಿರಾಣಿ ಅಂಗಡಿ, ಸೇರಿದಂತೆ ಇತರೆಡೆ ಭೇಟಿ ನೀಡಿದ್ದ ವಿಚಾರ ಗೊತ್ತಾಗಿದೆ. ಆದರೆ ಈ ಬಗ್ಗೆ ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು ಈಗ ಎಚ್ಚರಗೊಂಡು ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ.
    9. ಮೃತ ವ್ಯಕ್ತಿಯ ಬಡಾವಣೆಯ ಯಾವ ಜನರನ್ನು ಕೊರೊನಾ ಕಾಯಿಲೆ ಬಗ್ಗೆ ಪರೀಕ್ಷೆ ನಡೆಸಿಲ್ಲ.

    ಮೃತ ವ್ಯಕ್ತಿಯ ಒಟ್ಟು 46 ನಿಕಟವರ್ತಿಗಳನ್ನು ಚಿಕಿತ್ಸೆಗೆ ಒಳಪಡಿಸಿದ್ದು, ಅದರಲ್ಲಿ ಮೂರು ಜನರಿಗೆ ನೆಗಡಿ ಬಂದಿದ್ದರೆ ಓರ್ವ ಜ್ವರದಿಂದ ಬಳಲುತ್ತಿದ್ದಾನೆ. ಈಗ ಜಿಲ್ಲಾಡಳಿತ ಕಫ ಮಾದರಿಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದೆ.

  • ಕೆಮ್ಮು, ಜ್ವರ ಇದ್ರೆ ಶರಣಬಸವೇಶ್ವರ ಜಾತ್ರೆಗೆ ಬರಬೇಡಿ: ಕಲಬುರಗಿ ಡಿಸಿ ಮನವಿ

    ಕೆಮ್ಮು, ಜ್ವರ ಇದ್ರೆ ಶರಣಬಸವೇಶ್ವರ ಜಾತ್ರೆಗೆ ಬರಬೇಡಿ: ಕಲಬುರಗಿ ಡಿಸಿ ಮನವಿ

    ಕಲಬುರಗಿ: ಶರಣರ ನಾಡು ಎಂದೇ ಖ್ಯಾತಿ ಪಡೆದಿರುವ ಕಲಬುರಗಿಯಲ್ಲಿ ಶ್ರೀ ಶರಣಬವೇಶ್ವರ ಜಾತ್ರೆ ನಡೆಯಲಿದೆ. ಆದರೆ ಈ ಬಾರಿಯ ಶರಣರ ಜಾತ್ರೆಗೂ ಭೀಕರ ಕೊರೊನಾ ಎಫೆಕ್ಟ್ ಎದುರಾಗಿದ್ದು, ಕೆಮ್ಮು, ಶೀತ, ಜ್ವರ ಇರುವ ಭಕ್ತರು ಜಾತ್ರೆಗೆ ಬರದಂತೆ ಜಿಲ್ಲಾಧಿಕಾರಿ ಬಿ. ಶರತ್ ಭಕ್ತರಲ್ಲಿ ಮನವಿ ಮಾಡಿದ್ದಾರೆ.

    ಕಲ್ಯಾಣ ಕರ್ನಾಟಕದ ಸುಪ್ರಸಿದ್ಧ ಜಾತ್ರೆಗಳಲ್ಲಿ ಕಲಬುರಗಿಯ ಶ್ರೀ ಶರಣಬಸವೇಶ್ವರ ಜಾತ್ರೆ ಪ್ರತಿ ವರ್ಷ ಅದ್ಧೂರಿಯಾಗಿ ನಡೆಯುತ್ತಿದೆ. ಈ ಜಾತ್ರೆಗೆ 1 ಲಕ್ಷಕ್ಕೂ ಹೆಚ್ಚು ಭಕ್ತರು ತೇರು ಎಳೆಯಲು ಆಗಮಿಸುತ್ತಾರೆ. ಆದರೆ ಹೀಗೆ ಆಗಮಿಸುವ ಭಕ್ತರಿಗೆ ಇದೀಗ ಚೀನಾದ ಮಹಾಮಾರಿ ಕೊರೊನಾ ಕರಿನೆರಳು ಆವರಿಸಿದೆ. ಹೀಗಾಗಿ ಜಾತ್ರೆಗೆ ಬರುವ ಭಕ್ತರು ಒಂದಿಷ್ಟು ಮುಂಜಾಗೃತೆ ವಹಿಸಿಕೊಳ್ಳಲು ಆರೋಗ್ಯ ಇಲಾಖೆ ಸೂಚಿಸಿದೆ. ಕೆಮ್ಮು, ಜ್ವರ, ಶೀತದಿಂದ ಬಳಲುತ್ತಿರುವ ಭಕ್ತರು ಜಾತ್ರೆಗೆ ಬರಬೇಡಿ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್ ಮನವಿ ಮಾಡಿದ್ದಾರೆ. ಈ ಮೂಲಕ ಯಾರಿಗಾದರೂ ಸೊಂಕು ಇದ್ದಲಿ ಅದು ಬೇರೆಯವರಿಗೆ ಹರಡದಿರಲಿ ಎಂಬ ಕಾರಣಕ್ಕೆ ಈ ಕ್ರಮ ಜರುಗಿಸಿರುವುದಾಗಿ  ಡಿಸಿ ಬಿ.ಶರತ್ ಅವರು ಹೇಳಿದ್ದಾರೆ.

    ಶರಣಬಸವೇಶ್ವರ ಜಾತ್ರೆ ಇಂದಿನಿಂದ ಪ್ರಾರಂಭವಾಗಿ 13 ದಿನಗಳ ಕಾಲ ನಡೆಯಲಿದ್ದು, ಈ ವೇಳೆ ಕನಿಷ್ಟ ಅಂದ್ರು 4 ಲಕ್ಷಕ್ಕೂ ಹೆಚ್ಚು ಭಕ್ತರು ಇಲ್ಲಿಗೆ ಆಗಮಿಸಿ ಶರಣನ ದರ್ಶನ ಪಡೆಯಲ್ಲಿದ್ದಾರೆ. ಹೀಗಾಗಿ ಅಷ್ಟು ಜನರ ಆರೋಗ್ಯದ ಜವಾಬ್ದಾರಿಯನ್ನು ಇದೀಗ ಜಿಲ್ಲಾಡಳಿತ ಹೊತ್ತುಕೊಂಡಿದೆ. ಜಿಲ್ಲಾಧಿಕಾರಿಗಳು ಕೈಗೊಂಡ ಕ್ರಮ ಸ್ವಾಗತ ಆದರೆ ಕೊರೊನಾ ಬಗ್ಗೆ ಜಾಗೃತಿ ಸಹ ಮೂಡಿಸಲಿ ಎನ್ನುವುದು ಭಕ್ತರ ಮನವಿಯಾಗಿದೆ.

    ಜಾತ್ರೆಯಲ್ಲಿ ಆರೋಗ್ಯ ಇಲಾಖೆಯ ಒಂದು ತಂಡ ಸಹ ಸ್ಥಳದಲ್ಲಿಯೇ ಠಿಕಾಣಿ ಹೂಡಿ ಭಕ್ತರ ಮೇಲೆ ಒಂದು ಕಣ್ಣಿಡಲಿದೆ. ಈ ವೇಳೆ ಯಾರಿಗಾದರೂ ಕೆಮ್ಮು, ಶೀತ, ಜ್ವರದ ಲಕ್ಷಣ ಕಂಡರೆ ಅಲ್ಲಿಯೇ ಅವರ ಆರೋಗ್ಯ ತಪಾಸಣೆಗೆ ಸಿದ್ಧತೆ ಮಾಡಿಕೊಂಡಿದೆ. ಈ ಮೂಲಕ ಕೊರೊನಾ ವೈರಸ್‍ಗೆ ಬ್ರೇಕ್ ಹಾಕಲು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಇದೀಗ ಮುಂದಾಗಿದೆ.

  • ಜನದಟ್ಟಣೆ ಪ್ರದೇಶದಲ್ಲಿ ಹೆಚ್ಚಿನ ನಿಗಾವಹಿಸಿ ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ಸಲಹೆ

    ಜನದಟ್ಟಣೆ ಪ್ರದೇಶದಲ್ಲಿ ಹೆಚ್ಚಿನ ನಿಗಾವಹಿಸಿ ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ಸಲಹೆ

    ಮಡಿಕೇರಿ: ಕೊರೊನಾ ವೈರಸ್ ಬಗ್ಗೆ ಜಿಲ್ಲೆಯ ಪ್ರವಾಸಿ ತಾಣಗಳು, ಬಸ್ ನಿಲ್ದಾಣಗಳು, ರೆಸಾರ್ಟ್‍ಗಳು, ಹೋಂ ಸ್ಟೇಗಳು ಹಾಗೂ ಹೋಟೆಲ್‍ಗಳಲ್ಲಿ ಹೆಚ್ಚಿನ ನಿಗಾವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸಲಹೆ ನೀಡಿದ್ದಾರೆ.

    ಕೊರೊನಾ ವೈರಸ್ ಬೆಂಗಳೂರಿನಲ್ಲಿ ಕಂಡು ಬಂದಿರುವ ಹಿನ್ನೆಲೆ ಜಿಲ್ಲೆಯಲ್ಲಿಯೂ ಸಹ ಇನ್ನಷ್ಟು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಆ ನಿಟ್ಟಿನಲ್ಲಿ ಪ್ರವಾಸಿ ತಾಣಗಳು ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ ಹೆಚ್ಚಿನ ನಿಗಾವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

    ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ಕೊರೊನಾ ವೈರಸ್ ಸಂಬಂಧಿಸಿದಂತೆ ಪ್ರವಾಸಿ ತಾಣಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಅನೀಸ್ ಕಣ್ಮಣಿ ಜಾಯ್ ಅವರು ಹೇಳಿದರು. ಈಗಾಗಲೇ ಜಿಲ್ಲೆಯ ಕರಿಕೆ, ಕುಟ್ಟ ಹಾಗೂ ಮಾಕುಟ್ಟ ಗಡಿ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಅದೇ ರೀತಿ ಜಿಲ್ಲೆಯ ವಿವಿಧ ಜನದಟ್ಟಣೆ ಸ್ಥಳಗಳಲ್ಲಿಯೂ ಈ ಬಗ್ಗೆ ಮುತುವರ್ಜಿ ವಹಿಸಬೇಕಿದೆ ಎಂದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ ಮೋಹನ್ ಅವರು ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ವೈರಸ್ ಕಂಡು ಬಂದಿಲ್ಲ. ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿ ದಾಸ್ತಾನು ಮಾಡಿಕೊಳ್ಳಲಾಗಿದೆ. ಹಾಗೆಯೇ ಪೋಸ್ಟರ್, ಬ್ಯಾನರ್, ಪ್ರವಾಸಿ ತಾಣಗಳು, ಗಡಿ ಪ್ರದೇಶ ಸೇರಿದಂತೆ ಜಿಲ್ಲೆಯ ಜನದಟ್ಟಣೆ ಪ್ರದೇಶಗಳಲ್ಲಿ ಮಾಹಿತಿ ಶಿಕ್ಷಣ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದರು.

    ವಿದೇಶದಿಂದ ಬರುವವರ ಬಗ್ಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಅವರಿಗೆ (94498 43263) ಕಡ್ಡಾಯವಾಗಿ ಮಾಹಿತಿ ನೀಡುವಂತಾಗಬೇಕು ಎಂದು ಕೋರಿದರು. ಹಾಗೆಯೇ 104 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಜಿಲ್ಲೆಯ ಎಲ್ಲಾ ಹಂತದ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೊಠಡಿ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಅವರು ಹೇಳಿದರು.

  • ಗಣಿ ಜಿಲ್ಲೆಯಲ್ಲಿ ಎರಡು ಶಂಕಿತ ಕೊರೊನಾ ವೈರಸ್ ಪ್ರಕರಣ ಪತ್ತೆ

    ಗಣಿ ಜಿಲ್ಲೆಯಲ್ಲಿ ಎರಡು ಶಂಕಿತ ಕೊರೊನಾ ವೈರಸ್ ಪ್ರಕರಣ ಪತ್ತೆ

    ಬಳ್ಳಾರಿ: ಕೊರೊನಾ ವೈರಸ್ ಗಣಿಜಿಲ್ಲೆಗೂ ಒಕ್ಕರಿಸಿತೆ ಎಂಬ ಅನುಮಾನ ಇದೀಗ ಎದ್ದಿದೆ.

    ಹೊಸಪೇಟೆ ಹಾಗೂ ಸಂಡೂರು ತಾಲೂಕಿನ ತೋರಣಗಲ್ಲಿನರುವ ಜಿಂದಾಲ್ ನಲ್ಲಿ ಶಂಕಿತ ಎರಡು ಪ್ರಕರಣಗಳು ಪತ್ತೆಯಾಗಿವೆ. ಹೊಸಪೇಟೆಯಲ್ಲಿ ಕಾಣಿಸಿಕೊಂಡಿರುವ ಶಂಕಿತ ವ್ಯಕ್ತಿ ದುಬೈನಿಂದ ಬಂದಿದ್ದು, ಕೊರೊನಾದ ಲಕ್ಷಣಗಳು ಕಂಡು ಬಂದಿದೆ ಎನ್ನಲಾಗುತ್ತಿದೆ.

    ಇಬ್ಬರು ವ್ಯಕ್ತಿಗಳ ರಕ್ತದ ಮಾದರಿಯನ್ನು ಪರೀಕ್ಷೆಗೆ ಗುರುವಾರ ಬೆಂಗಳೂರಿಗೆ ಕಳುಹಿಸಿ ಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾಹಿತಿ ನೀಡಿದ್ದಾರೆ.

    ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ, ಇದು ಸಾಮಾನ್ಯ. ಹೊರಗಿನಿಂದ ಬಂದ ವ್ಯಕ್ತಿಗಳಿಗೆ ಇರಬಹುದು ಎಂಬ ಉದ್ದೇಶದಿಂದ ಪರೀಕ್ಷೆ ಮಾಡಲಾಗುತ್ತಿದೆ. ನಮ್ಮ ಜಿಲ್ಲೆಯ ಜನರಲ್ಲಿ ಕರೊನಾ ವೈರಸ್ ಇರುವ ಬಗ್ಗೆ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದಿದ್ದಾರೆ.

    ಅಲ್ಲದೆ ಸಕಾಲಕ್ಕೆ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಮತ್ತೊಂದು ಪ್ರಕರಣ ತೋರಣಗಲ್ಲಿನ ಜಿಂದಾಲ್ ಪ್ರದೇಶದಿಂದ ವರದಿಯಾಗಿದ್ದು, ಆ ವ್ಯಕ್ತಿಯ ರಕ್ತದ ಮಾದರಿಯನ್ನೂ ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

  • ಕೊರೊನಾ ಭೀತಿ- ಹೋಟೆಲ್‍ಗೆ ಆಗಮಿಸುವ ಪ್ರವಾಸಿಗರ ಮಾಹಿತಿ ತಕ್ಷಣ ನೀಡಲು ಡಿಸಿ ಸೂಚನೆ

    ಕೊರೊನಾ ಭೀತಿ- ಹೋಟೆಲ್‍ಗೆ ಆಗಮಿಸುವ ಪ್ರವಾಸಿಗರ ಮಾಹಿತಿ ತಕ್ಷಣ ನೀಡಲು ಡಿಸಿ ಸೂಚನೆ

    ಬಳ್ಳಾರಿ: ತಮ್ಮ ಹೋಟೆಲ್‍ಗಳಿಗೆ ದೇಶ ಮತ್ತು ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ಮಾಹಿತಿಯನ್ನು ತಕ್ಷಣ ಗಮನಕ್ಕೆ ತರುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರು ಹೋಟಲ್ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

    ಕೊರೊನಾಗೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲೆಯ ಹೋಟೆಲ್‍ ಮಾಲೀಕರೊಂದಿಗೆ ಡಿಸಿ ನಕುಲ್ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ದೇಶದ ವಿವಿಧ ರಾಜ್ಯಗಳ ಹಾಗೂ ವಿದೇಶಗಳ ಅದರಲ್ಲೂ ವಿಶೇಷವಾಗಿ ಕೊರೊನಾ ಸೊಂಕು ಕಂಡುಬಂದ ದೇಶಗಳಿಂದ ಬರುವ ಪ್ರವಾಸಿಗರ ಮಾಹಿತಿಯನ್ನು ತಕ್ಷಣ ನೀಡಲೇಬೇಕು ಎಂದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಜನಸ್ಪಂದನಾ ಕೇಂದ್ರಕ್ಕೆ ಮಾಹಿತಿ ನೀಡಬಹುದಾಗಿದೆ. ಈ ಕೇಂದ್ರದ ರೂಂ ಮೊ.ನಂ: 82778 88866 ಹಾಗೂ ದೂ: 08392-277100ಗೆ ಕರೆ ಮಾಡಬಹುದು ಮತ್ತು ವಾಟ್ಸಾಪ್ ಮಾಡಬಹುದು. 1077 ಉಚಿತ ಸಹಾಯವಾಣಿಗೂ ಕರೆ ಮಾಡಿ ಮಾಹಿತಿ ನೀಡಬಹುದು. ಈ ಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿ ಲಭ್ಯವಿರುತ್ತಾರೆ. ನಮ್ಮ ಸಿಬ್ಬಂದಿ 24 ಗಂಟೆಗಳ ಕಾಲ ಈ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಡಿಸಿ ನಕುಲ್ ತಿಳಿಸಿದರು.

    ಕೊರೊನಾ ವೈರಸ್‍ಗೆ ಸಂಬಂಧಿಸಿದ ಲಕ್ಷಣಗಳ ಬಗ್ಗೆ ಸಭೆಯಲ್ಲಿ ವಿವರಿಸಿದ ಡಿಸಿ ನಕುಲ್ ಅವರು, ಈ ರೀತಿಯ ಲಕ್ಷಣಗಳು ಪ್ರವಾಸಿಗರಲ್ಲಿ ಕಂಡು ಬಂದಲ್ಲಿಯೂ ಸಹ ಮಾಹಿತಿ ನೀಡಿ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಭಯಬೇಡ ಜಾಗೃತಿಯಿರಲಿ ಎಂದು ಹೇಳಿದರು.