ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿರುವ ವಿವಿಧ ಸ್ವ-ಸಹಾಯ ಸಂಘಗಳು, ಮಹಿಳಾ ಸ್ವ-ಸಹಾಯ ಸಂಘಗಳು, ಮೈಕ್ರೋ ಫೈನಾನ್ಸ್, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಾಲ ಮರುಪಾವತಿಗೆ ಎರಡು ತಿಂಗಳ ಅವಧಿ ವಿಸ್ತರಣೆ ಮಾಡಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಆದೇಶ ಹೊರಡಿಸಿದ್ದಾರೆ.
ಅಂದಹಾಗೆ ಜಿಲ್ಲೆಯಾದ್ಯಾಂತ ಮಹಿಳಾ ಸ್ವ-ಸಹಾಯ ಸಂಘಗಳು ಸೇರಿದಂತೆ ಮೈಕ್ರೋ ಫೈನಾನ್ಸ್ ಹಾಗೂ ವಿವಿಧ ಸ್ವ-ಸಹಾಯ ಸಂಘಗಳು ಸಾಲ ಪಾವತಿಗೆ ಒತ್ತಡ ಹೇರಿ ಅನಗತ್ಯ ಕಿರುಕುಳ ನೀಡುತ್ತಿರುವುದು ಕಂಡು ಬಂದಿದೆ. ಹೀಗಾಗಿ ಎಚ್ವೆತ್ತಿರುವ ಜಿಲ್ಲಾಧಿಕಾರಿ ಎರಡು ತಿಂಗಳ ಕಾಲ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಕೂಲಿ ಕಾರ್ಮಿಕರು, ಸಾರ್ವಜನಿಕರು ಮತ್ತು ಮಹಿಳೆಯರು ನಿಟ್ಟುಸಿರು ಬಿಡುವಂತಾಗಿದೆ.
ಸಾಲ ಮರು ಪಾವತಿಗೆ ಎರಡು ತಿಂಗಳ ಕಾಲಾವಕಾಶ ವಿಸ್ತರಣೆಯಾಗಿದೆ. ಸದ್ಯ ಈ ಎರಡು ತಿಂಗಳು ಸಾಲ ಮರುಪಾವತಿಗೆ ಬ್ರೇಕ್ ಬಿದ್ದಿದ್ದು, ಎರಡು ತಿಂಗಳ ನಂತರ ಸಾಲ ಮರು ಪಾವತಿ ಎಂದಿನಂತೆ ಕಂತುಗಳ ಪ್ರಕಾರ ಪಾವತಿಸಬೇಕಾಗುತ್ತದೆ.
ಮಡಿಕೇರಿ: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ಕೊಡಗು ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಅದರಲ್ಲೂ ಅತೀ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿರುವ ಕೇರಳ ಮತ್ತು ಕರ್ನಾಟಕಕ್ಕೆ ಸಂಪರ್ಕವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಹೀಗಿರುವಾಗ ಯಾರಾದ್ರೂ ನಿಯಮವನ್ನು ಮೀರಿ ಕರ್ನಾಟಕದ ಕೊಡಗಿಗೆ ಅಥವಾ ಕೊಡಗಿನಿಂದ ಕೇರಳಕ್ಕೆ ಎಂಟ್ರಿ ಕೊಟ್ಟರೆ ಯಾವುದೇ ಪರಿಶೀಲನೆಯನ್ನೂ ಮಾಡದೇ 14 ದಿನಗಳ ಕಾಲ ಕೋವಿಡ್ ಸೆಂಟರಿಗೆ ಕಳುಹಿಸುತ್ತಿದ್ದೇವೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಿಣಿ ಜಾಯ್ ಎಚ್ಚರಿಸಿದ್ದಾರೆ.
ಗಡಿ ದಾಟಿ ಬಂದವರು ವಿದೇಶದಿಂದ ವಾಪಸ್ ಆಗಿರುವ ಇತಿಹಾಸ ಇಲ್ಲದಿದ್ದರೂ ನೇರವಾಗಿ ಕೋವಿಡ್ ಸೆಂಟರಿಗೆ ಕಳುಹಿಸುತ್ತಿದ್ದೇವೆ. ಈಗಾಗಲೇ ಕೇರಳದಿಂದ ಬಂದ ಇಬ್ಬರನ್ನು ಕೊಡಗಿನಲ್ಲಿರುವ ಕೋವಿಡ್ ಸೆಂಟರಿಗೆ ಕಳುಹಿಸಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ವಿದೇಶದಿಂದ ಬಂದು ಹೋಂ ಕ್ವಾರಂಟೈನ್‍ನಲ್ಲಿ ಇರುವವರು ನಿಯಮ ಮೀರಿ ಹೊರಗೆ ಓಡಾಡಿದರೆ ಅವರ ವಿರುದ್ಧ ಕೇಸ್ ದಾಖಲಿಸುತ್ತೇವೆ. ಕಾನೂನು ಪ್ರಕಾರ ಶಿಕ್ಷೆಯಾಗುತ್ತೆ. ಹೀಗೆ ಶಿಕ್ಷೆಗೆ ಒಳಗಾದವರ ಪಾಸ್‍ಪೋರ್ಟ್ ಅಥವಾ ವೀಸಾಗಳಿಗೆ ಸಮಸ್ಯೆಯಾಗಲಿದ್ದು, ನಂತರ ಪುನಃ ನೀವು ವಿದೇಶಕ್ಕೆ ತೆರಳು ಸಮಸ್ಯೆಯಾಗುತ್ತೆ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಚಿಕ್ಕಬಳ್ಳಾಪುರ: ಹೋಂ ಕ್ವಾರಂಟೈನ್‍ನಲ್ಲಿರುವ ವ್ಯಕ್ತಿಯ ಕುಟುಂಬ ಒಂದು ವೇಳೆ ಬಾಡಿಗೆ ಮನೆಯಲ್ಲಿದ್ದು, ಮನೆಯ ಮಾಲೀಕರು ಅವರನ್ನು ಮನೆ ಖಾಲಿ ಮಾಡುವಂತೆ ಒತ್ತಡ ಹೇರಿ ಕಿರುಕುಳ ನೀಡುತ್ತಿದ್ದರೆ ಅಂತ ಮಾಲೀಕರ ವಿರುದ್ಧ ಕಠಿಣ ಕ್ರಮವನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ ಎಂದು ಡಿಸಿ ಆರ್.ಲತಾ ಹೇಳಿದ್ದಾರೆ.
ಬಾಡಿಗೆ ಮನೆಯಲ್ಲಿರುವ ಹೋಂ ಕ್ವಾರಂಟೈನ್‍ಗೆ ಒಳಗಾದವರಷ್ಟೇ ಅಲ್ಲದೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಆಶಾ ಕಾರ್ಯಕರ್ತರು, ಶುಶ್ರೂಷಕಿಯರು ಹಾಗೂ ಕೋವಿಡ್-19ರ ನಿಯಂತ್ರಣದಲ್ಲಿ ಕಾರ್ಯನಿರತರೆಲ್ಲರಿಗೂ ಈ ಕಾನೂನು ಅನ್ವಯವಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಜನರು ಲಾಕ್‍ಡೌನ್‍ಗೆ ಸಹಕರಿಸುತ್ತಿದ್ದಾರೆ. ಮತ್ತಷ್ಟು ಸಹಕಾರದ ಅಗತ್ಯ ಪೊಲೀಸರಿಗೆ ಬೇಕಾಗಿದೆ ಎಂದು ಮನವಿ ಮಾಡಿಕೊಂಡರು. ವರ್ತಕರು, ತರಕಾರಿ ಮಾರಾಟಗಾರರು ಮತ್ತಿತರರು ಅಗತ್ಯ ಸೇವೆಗಳಲ್ಲಿ ತೊಡಗಿದ್ದು ಅವರಿಗೆ ಓಡಾಡಲು ಅವಕಾಶ ನೀಡಿ ಪಾಸ್ ನೀಡಲಾಗುವುದು ಎಂದರು.
ಹೋಂ ಕ್ವಾರಂಟೈನ್ ನಡಿ ಇರುವವರು ಹೊರಗೆ ಓಡಾಡುವಂತಿಲ್ಲ. ಒಂದು ವೇಳೆ ಅನುಮತಿ ಇಲ್ಲದೆ ಓಡಾಡಿದರೆ ಅಂತವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ದಿನಸಿ, ಹಾಲು, ಔಷಧಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು ಲಭ್ಯವಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಸಾಮಾಜಿಕ ಅಂತರವನ್ನು ಕಾಪಾಡುವುದು ಅತ್ಯಗತ್ಯ ಎಂದು ತಿಳಿಸಿದರು.
ಉಡುಪಿ: ನಗರದಲ್ಲಿ ಪತ್ತೆಯಾದ ಕೊರೊನಾ ಸೋಂಕಿತನ ಫೋನ್ ನೆಟ್ವರ್ಕ್ ಟ್ರ್ಯಾಕ್ ಮಾಡಲು ಉಡುಪಿ ಜಿಲ್ಲಾಡಳಿತ ನಿರ್ಧರಿಸಿದೆ. ಮಣಿಪಾಲ ಕೆಎಂಸಿಯ ಲ್ಯಾಬ್ ಟೆಕ್ನಿಷನ್ ಆಗಿರುವ ಸೋಂಕಿತ ವ್ಯಕ್ತಿ, ಮಾರ್ಚ್ 18ರಂದು ದುಬೈನಿಂದ ಮಂಗಳೂರಿಗೆ ಬಂದು ಇಳಿದಿದ್ದರು.
ಮಂಗಳೂರು ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಮೂಲಕ ಮಣಿಪಾಲದಲ್ಲಿರುವ ಮನೆ ಸೇರಿಕೊಂಡಿದ್ದಾರೆ. ಆನಂತರ ನಾನು ಎಲ್ಲೂ ಹೋಗಿಲ್ಲ. ಶೀತ ಕೆಮ್ಮು ಜ್ವರ ಶುರುವಾದ ಬಳಿಕ ನೇರವಾಗಿ ಜಿಲ್ಲಾಸ್ಪತ್ರೆಗೆ ಬಂದಿದ್ದಾಗಿ ಹೇಳಿಕೊಂಡಿದ್ದಾರೆ. ಉಡುಪಿ ಡಿಎಚ್‍ಒ ಜಿಲ್ಲಾಡಳಿತದ ಸಿಬ್ಬಂದಿ, ಪೊಲೀಸರು ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟ್ರಿ ಬಗ್ಗೆ ತರತರನಾಗಿ ವಿಚಾರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸೋಂಕಿತ ಮಾತ್ರ ಇಷ್ಟನ್ನೇ ಹೇಳಿಕೊಂಡಿದ್ದಾರೆ.
ಕೊರೊನಾ ಸೋಂಕಿತ ವ್ಯಕ್ತಿ ಎಂದು ದೃಢವಾದ ಕೂಡಲೇ ಸೋಂಕಿತನ ಪರಿಚಯಸ್ಥರು, ಸುತ್ತಮುತ್ತಲಿನವರು ಜಿಲ್ಲಾಡಳಿತಕ್ಕೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಐದು ದಿನಗಳಲ್ಲಿ ಸೋಂಕಿತ ವ್ಯಕ್ತಿ ಮಣಿಪಾಲ, ಉಡುಪಿ ಸುತ್ತಮುತ್ತ ಓಡಾಟ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯ ಫೋನ್ ನೆಟ್ವರ್ಕ್ ಟ್ರ್ಯಾಕ್ ಮಾಡಲು ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್‍ಪಿ ವಿಷ್ಣುವರ್ಧನ್ ಅವರಿಗೆ ಆದೇಶಿಸಿದ್ದಾರೆ.
ದುಬೈನಿಂದ ಮಾರ್ಚ್ 10ರಂದು ಬಂದಿಳಿದಿದ್ದ ಸೋಂಕಿತ ವ್ಯಕ್ತಿಯ ಫೋನ್ ನೆಟ್‌ವರ್ಕ್ ಎಲ್ಲೆಲ್ಲಿ ಹರಿದಾಡಿದೆ ಎಂಬ ಬಗ್ಗೆ ಪೊಲೀಸರು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಹೋಂ ಕ್ವಾರಂಟೈನ್‍ನಲ್ಲಿ ಇದ್ದ ಸಂದರ್ಭ ತಾವು ಐದು ದಿನವೂ ಆನ್‍ಲೈನ್ ಮೂಲಕ ಆಹಾರ ತರಿಸಿಕೊಂಡಿರುವುದಾಗಿ ತಿಳಿಸಿದ್ದರು. ಯಾರ ಜೊತೆಯೂ ನೇರವಾಗಿ ಸಂಪರ್ಕ ಮಾಡಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ಫೋನ್ ನೆಟ್ವರ್ಕ್ ಟ್ರ್ಯಾಕ್ ಮಾಡಿರುವ ಪೊಲೀಸರಿಗೆ ಸೋಂಕಿತ ವ್ಯಕ್ತಿಯ ಹೇಳಿಕೆ ಮತ್ತು ನೆಟ್ ವರ್ಕ್ ಗೆ ಸಂಬಂಧ ಇದೆಯೋ ಇಲ್ಲವೋ ಎಂದು ಇಂದು ಗೊತ್ತಾಗಲಿದೆ.
ಮೂಲತಃ ದಾವಣಗೆರೆ ಜಿಲ್ಲೆಯವರಾದ ಸೋಂಕಿತ ವ್ಯಕ್ತಿ ಮಣಿಪಾಲ ಕೆಎಂಸಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದಾರೆ. ಹೋಮ್ ಕ್ವಾರಂಟೈನ್‍ನಲ್ಲಿ ಇದ್ದ ಸಂದರ್ಭದಲ್ಲಿ ಅವರು ಸಾರ್ವಜನಿಕವಾಗಿ ಓಡಾಡಿದ್ದರೆ, ಜನರನ್ನು ಸಂಪರ್ಕಿಸಿದ್ದರೆ, ಅವರಿಗೂ ಸೋಂಕು ತಗಲುವ ಸಾಧ್ಯತೆ ಇದೆ. ಸಂಪರ್ಕ ಮಾಡಿದ ವ್ಯಕ್ತಿಗಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಲ್ಯಾಬ್ ಟೆಕ್ನಿಷನ್ ಆಗಿರುವ ಸೋಂಕಿತ ವ್ಯಕ್ತಿ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದರೆ ದೊಡ್ಡ ಅವಘಡ ತಪ್ಪಿದಂತಾಗುತ್ತದೆ. ಉಡುಪಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಪೊಲೀಸರ ಮಾಹಿತಿಗಾಗಿ ಕಾಯುತ್ತಿದೆ.
ಹಾಸನ: ಇನ್ನು ಮೇಲೆ ವಾರ್ನಿಂಗ್ ಇರಲ್ಲ. ಆಕ್ಷನ್ ಅಷ್ಟೇ ಇರುತ್ತೆ ಎಂದು ಕಫ್ರ್ಯೂ ಉಲ್ಲಂಘಿಸುವ ಮಂದಿಗೆ ಹಾಸನ ಎಸ್ಪಿ ಶ್ರೀನಿವಾಸ್ ಗೌಡ ಖಡಕ್ ವಾರ್ನಿಂಗ್ ರವಾನಿಸಿದ್ದಾರೆ.
ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ, ಎಸ್‍ಪಿ, ಜಿಪಂ ಸಿಇಒ ಜಂಟಿ ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ಎಷ್ಟೇ ಬುದ್ಧಿವಾದ ಹೇಳಿದರೂ ಪದೇ ಪದೇ ಅಂಗಡಿ ತೆಗೆಯುವವರು ಮತ್ತು ಕಾನೂನು ಉಲ್ಲಂಘನೆ ಮಾಡುತ್ತಿರುವವರ ಬಗ್ಗೆ ಮಾತನಾಡಿದ ಎಸ್‍ಪಿ ಶ್ರೀನಿವಾಸ್ ಗೌಡ, ಮೊದಲು ಎಚ್ಚರಿಕೆ ಕೊಡುವುದು ನಮ್ಮ ಕರ್ತವ್ಯ. ಈಗ ಎಚ್ಚರಿಕೆ ಕೊಟ್ಟಾಗಿದೆ. ಇನ್ನು ನಿಯಮ ಮೀರಿ ನಡೆದರೆ ಆಕ್ಷನ್ ತೋರಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಷ್ಟೇ ಅಲ್ಲದೆ ನಿಯಮ ಮೀರಿರುವ ಹೋಟೆಲ್, ಹೋಂಸ್ಟೇ ಮೇಲೆ ಈಗಾಗಲೇ ಮೂರು ಕೇಸ್ ದಾಖಲಾಗಿದೆ ಎಂದು ಕೂಡ ತಿಳಿದರು. ಈ ವೇಳೆ ಜಿಲ್ಲಾಧಿಕಾರಿ ಗಿರೀಶ್ ಮಾತನಾಡಿ ಯಾರಾದರೂ ವಿದೇಶದಿಂದ ಬಂದವರು ಮನೆಯಿಂದ ಹೊರಗೆ ಓಡಾಡುತ್ತಿದರೆ ನಮ್ಮ ಗಮನಕ್ಕೆ ತನ್ನಿ ಎಂದು ಜಿಲ್ಲೆಯ ಜನರಲ್ಲಿ ಮನವಿ ಮಾಡಿದರು.
ಜಿಲ್ಲೆಯಲ್ಲಿ ಯಾವುದೇ ಕೊರೊನ ಪಾಸಿಟಿವ್ ಕೇಸ್ ಕಂಡು ಬಂದಿಲ್ಲ. ಎಲ್ಲರೂ ಒಟ್ಟಾಗಿ ಸರ್ಕಾರದ ನಿಯಮಗಳನ್ನು ಪಾಲಿಸಿ ರೋಗ ಹರಡದಂತೆ ತಡೆಯಬೇಕು ಎಂದು ಮನವಿ ಮಾಡಿದರು.
ಮಡಿಕೇರಿ: ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಕೊಡಗು ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಲಾಕ್‍ಡೌನ್ ಘೋಷಿಸಿದ್ದರು, ಜೆಲ್ಲೆಯ ಹಲವೆಡೆ ವ್ಯಾಪಾರ ವಹಿವಾಟು ಎಂದಿನಂತೆ ನಡೆಯುತ್ತಿವೆ.
ಮಡಿಕೇರಿ ತಾಲೂಕಿನ ನಾಪೋಕ್ಲುವಿನಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಇನ್ನು ಸಂತೆಗಳು ರದ್ದಾಗಿರುವುದರಿಂದ ಜನರು ದಿನಸಿ ಅಂಗಡಿಗಳಿಗೆ ಮುಗಿ ಬಿದ್ದು ನೂಕುನುಗ್ಗಲು ಉಂಟಾಗಿದೆ. ಮತ್ತೊಂದು ಮಡಿಕೇರಿಯಲ್ಲಿ ಜನರು ಮತ್ತು ವಾಹನ ಓಡಾಟ ಎಂದಿನಂತೆ ಆರಂಭವಾಯಿತು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೆಕ್ಷನ್ 144/3 ಜಾರಿ ಮಾಡಿದ್ರು ಹೆಚ್ಚು ವಾಹನಗಳು ರಸ್ತೆಗಿಳಿದಿದ್ದರಿಂದ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ವಾಹನಗಳಿಗೆ ತಡೆಯೊಡ್ಡಲಾಯಿತು. ಅದಕ್ಕೂ ಜನರು ಬಗ್ಗದಿದ್ದಾಗ ಗರಂ ಆದ ಪೊಲೀಸರು ಮತ್ತೆ ನಗರಗಳತ್ತ ಜನ ಸುಳಿದರೆ ಕೇಸ್ ಹಾಕಬೇಕಾಗುತ್ತದೆ ಎಂದು ಬೆದರಿಸಿ ಕಳುಹಿಸಬೇಕಾಯಿತು. ಇನ್ನು ವಾಣಿಜ್ಯ ಮಳಿಗೆಗಳನ್ನು ತೆರೆದಿದ್ದರಿಗೆ ವಾರ್ನಿಂಗ್ ಮಾಡಿ ಮುಚ್ಚಿಸಬೇಕಾಯಿತು.
ಮಡಿಕೇರಿ: ಕೊಡಗಿನಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಆಸ್ಪತ್ರೆಗೆ ದಾಖಲಾಗುವಷ್ಟರಲ್ಲೇ ನೇರವಾಗಿ ಮತ್ತು ಪರೋಕ್ಷವಾಗಿ 300ಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿದ್ದಾನೆ ಎನ್ನುವ ಅಘಾತಕಾರಿ ವಿಷಯ ಬಹಿರಂಗವಾಗಿದೆ.
ಮಾರ್ಚ್ 15ರಂದು ದುಬೈನಿಂದ ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ಬಂದು ಬಳಿಕ ಕೊಡಗಿಗೆ ಬಂದಿದ್ದ ವ್ಯಕ್ತಿಗೆ ಗುರುವಾರ ಸೋಂಕು ಇರುವುದು ಖಚಿತವಾಗಿತ್ತು. ಬಳಿಕ ಈ ವ್ಯಕ್ತಿಯ ಪ್ರಯಾಣದ ಜಾಡು ಹಿಡಿದು ತನಿಖೆ ನಡೆಸಿದ ಜಿಲ್ಲಾಡಳಿತಕ್ಕೆ ಶಾಕಿಂಗ್ ಮಾಹಿತಿ ಸಿಕ್ಕಿದೆ. ಈ ವ್ಯಕ್ತಿಯೂ 300ಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿದ್ದಾನೆ ಎಂದು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ಮಾಹಿತಿ ನೀಡಿದ್ದಾರೆ.
ಇವರೆಲ್ಲರಿಗೂ ಹೋಂ ಕ್ವಾರಂಟೈನ್ ಮಾಡಲಾಗಿದ್ದು, ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದೇವೆ. ವ್ಯಕ್ತಿಯ ಮನೆಯ ಸುತ್ತ 75 ಮನೆಗಳಿರುವ ಪ್ರದೇಶವನ್ನು ಅತೀ ಸೂಕ್ಷ್ಮ. ಹಾಗೆಯೇ ಅಲ್ಲಿಂದ ಐದು ಕಿ.ಮೀ ವ್ಯಾಪ್ತಿಯನ್ನು ಸೂಕ್ಷ್ಮ ವಲಯಗಳು ಎಂದು ಘೋಷಿಸಿದ್ದೇವೆ ಎಂದರು.
ಅವರೆಲ್ಲರಿಗೂ ಮನೆ ಬಿಟ್ಟು ಬರದಂತೆ ಸೂಕ್ತ ಬಂದೋಬಸ್ತ್ ಮಾಡಿದ್ದೇವೆ. ಗ್ರಾಮದ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ವಾಹನ ಹಾಗೂ ಪ್ರತ್ಯೇಕ ಕೊಠಡಿಗಳಲ್ಲಿ ಬಿಇಓ ನೇತೃತ್ವದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಶಾಲಾ ಶಿಕ್ಷಕರು ವ್ಯಕ್ತಿಯ ನೇರ ಸಂಪರ್ಕ ಹೊಂದಿದ್ದರು. ನೇರ ಸಂಪರ್ಕದಲ್ಲಿದ್ದ ಶಿಕ್ಷಕರ ಜೊತೆಗೆ ಆ ಶಾಲೆಗಳ ಎಲ್ಲಾ ಶಿಕ್ಷಕರಿಗೂ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದರು.
ಕಲಬುರಗಿ: ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತ ಕ್ರಮವಾಗಿ ಕಲಬುರಗಿ ನಗರದ ವಾರ್ಡ್ ನಂಬರ್ 30ರ ಜೊತೆ 14ಅನ್ನು ಕೂಡ ಕಂಟೇನ್‍ಮೆಂಟ್ ಝೋನ್ ಎಂದು ಗುರುತಿಸಿ ಎರಡು ವಾರ್ಡ್ ಗಳಲ್ಲಿ ಸ್ಯಾನಿಟೇಷನ್ ಮಾಡಲಾಗಿದೆ.
ಕೋವಿಡ್-19 ಪರೀಕ್ಷೆಗೆ ನವದೆಹಲಿಯಿಂದ ಈಗಾಗಲೇ ರಿ-ಏಜೆಂಟ್ ಬಂದಿದ್ದು, ಮಾರ್ಚ್ 21ರಿಂದ ಪ್ರಯೋಗಾಲಯ ಆರಂಭವಾಗಲಿದೆ. ಮಹಾರಾಷ್ಟ್ರದಲ್ಲಿ ಹೆಚ್ಚಿನ ಕೊರೊನಾ ಸೋಂಕು ಕಂಡು ಬಂದಿರುವುದರಿಂದ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಹೋಗುವ ಮತ್ತು ಅಲ್ಲಿಂದ ಬರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬಸ್‍ಗಳ ಸೇವೆ ರದ್ದುಗೊಳಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಬರುವ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ಸುಳ್ಳು ಸುದ್ದಿ ಹರಿಸಿದರೆ ಅಂತವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಸಹಾಯವಾಣಿ ಕೇಂದ್ರಗಳನ್ನು 2ರಿಂದ 4ಕ್ಕೆ ಹೆಚ್ಚಳ ಮಾಡಲಾಗಿದೆ. ಈ ಮೂಲಕ ಯಾವುದೇ ಆತಂಕ ಇದ್ದಲ್ಲಿ ಸಹಾಯವಾಣಿ ಸಂಖ್ಯೆ: 08472-278648, 278698, 278604, 278677 ನಂಬರಿಗೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದಾರೆ.
ಸಹಾಯವಾಣಿಗೆ ಹುಸಿ ಕರೆ ಮಾಡಿದ್ದವರನ್ನು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಸರ್ಕಾರಿ ವ್ಯವಸ್ಥೆಯಲ್ಲಿ 32 ವೆಂಟಿಲೇಟರ್ ಲಭ್ಯವಿದ್ದು, ಜಿಮ್ಸ್ ಮತ್ತು ಇ.ಎಸ್.ಐ.ಸಿ.ಯ ಐಸೋಲೇಷನ್ ವಾರ್ಡ್ ನಲ್ಲಿ ತಲಾ 2 ವೆಂಟಿಲೇಟರ್ ಗಳು ಕೊರೊನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಮೀಸಲಿರಿಸಲಾಗಿದೆ. ಅಗತ್ಯವಿದ್ದಲ್ಲಿ ಹೆಚ್ಚಿನ ವೆಂಟಿಲೇಟರ್ ಗಳನ್ನು ತರಿಸಲಾಗುವುದು ಎಂದು ಡಿಸಿ ಮಾಹಿತಿ ನೀಡಿದ್ದಾರೆ.
– 500 ಮೀ. ವ್ಯಾಪ್ತಿಯ ಪ್ರದೇಶ ಬಫರ್ ಜೋನ್
– 306 ಜನರ ಮೇಲೆ ನಿಗಾ, ಮಾರುಕಟ್ಟೆಗಳು ಬಂದ್
ಮಡಿಕೇರಿ: ದುಬೈನಿಂದ ಮರಳಿದ ಕೊಡಗಿನ 35 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜನತೆ ಯಾವುದಕ್ಕೂ ಆತಂಕ ಪಡಬೇಕಾಗಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್.ಕೆ.ಜಾಯ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರಿನ ಮೆಡಿಕಲ್ ಕಾಲೇಜಿನ ವರದಿ ಪ್ರಕಾರ ವಿದೇಶಕ್ಕೆ ತೆರಳಿ ವಾಪಸ್ಸಾಗಿದ್ದ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಹೀಗಾಗಿ ಕೊಡಗಿನಲ್ಲಿ ಕೊರೊನಾ ವೈರಸ್ ಪತ್ತೆಯಾದ ವ್ಯಕ್ತಿಯ ಗ್ರಾಮದ 500 ಮೀಟರ್ ಪ್ರದೇಶವನ್ನು ಬಫರ್ ಜೋನ್ ಎಂದು ಘೋಷಿಸಲಾಗಿದ್ದು, ಗ್ರಾಮದ 306 ಜನರ ಜನರ ಮೇಲೆ ನಿಗಾ ವಹಿಸಲಾಗಿದೆ ಎಂದು ವಿವರಿಸಿದರು.
ಕೊಡಗಿನ ಕೊಂಡಂಗೇರಿ ನಿವಾಸಿ ಕೊರೊನಾ ಶಂಕಿತನಾಗಿದ್ದು, ಹೀಗಾಗಿ ಗ್ರಾಮದ 500 ಮೀಟರ್ ಪ್ರದೇಶವನ್ನು ಬಫರ್ ಜೋನ್ ಎಂದು ಘೋಷಿಸಿದ್ದೇವೆ. ಹಾಗೆಯೇ ಗ್ರಾಮದ 306 ಜನರ ಮೇಲೆ ಪೊಲೀಸ್ ಹಾಗೂ ಆರೊಗ್ಯ ಇಲಾಖೆಯಿಂದ ಚೆಕ್‍ಪೋಸ್ಟ್ ನಿರ್ಮಿಸಿ ತೀವ್ರ ನಿಗಾ ವಹಿಸಲಾಗಿದೆ. ಮಾರ್ಚ್ 31 ರವರೆಗೆ ಗ್ರಾಮದಲ್ಲೇ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಲಾಗುವುದು. ಗ್ರಾಮಸ್ಥರು ಯಾವುದೇ ಕಾರಣಕ್ಕೂ ಮದುವೆ, ಶುಭ-ಸಮಾರಂಭಗಳಿಗೆ ಹೋಗುವಂತಿಲ್ಲ ತಿಳಿಸಿದರು.
ಇದೇ 31 ರವರೆಗೆ ಸಂತೆಗಳು, ಮಾರ್ಕೆಟ್ ಹಾಗೂ ಜಾತ್ರೆಗಳನ್ನು ನಡೆಸುವಂತಿಲ್ಲ. ಹಣ್ಣು, ತರಕಾರಿ ಹಾಗೆಯೇ ಮೆಡಿಕಲ್ ಕ್ಲಿನಿಕ್‍ಗಳನ್ನು ಅಲ್ಲಿಯೇ ತೆರೆಯಲಾಗಿದೆ. ಈಗಾಗಲೇ 185 ಕೊರೊನಾ ಶಂಕಿತರನ್ನು ಅವರವರ ಮನೆಯಲ್ಲೇ ತಪಾಸಣೆಗೆ ನಡೆಸಲಾಗುತ್ತಿದೆ. ವಿದೇಶಗಳಿಂದ ಜಿಲ್ಲೆಗೆ ಬಂದಿರುವ 5 ಪ್ರವಾಸಿಗರನ್ನು ಅವರು ಉಳಿದಿರುವ ಹೋಂ ಸ್ಟೇಗಳಲ್ಲೇ ಇರುವಂತೆ ತಿಳಿಸಿದ್ದೇವೆ. ಅಲ್ಲದೆ ಐಪಿಸಿ ಸೆಕ್ಷನ್ 144(3) ಕಾನೂನು ವ್ಯಾಪ್ತಿಗೆ ಒಳಪಡುವ ಹೋಟೆಲ್, ರೆಸ್ಟೋರೆಂಟ್ಸ್, ಅಂಗಡಿಗಳನ್ನು ತೆರೆಯುವಂತಿಲ್ಲ. ಇದಕ್ಕೆ ಗ್ರಾಮಸ್ಥರು ಸಹಕರಿಸಬೇಕು ಎಂದು ಮನವಿ ಮಾಡಿದರು.
ರಾಯಚೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ 144 ಸೆಕ್ಷನ್ ಜಾರಿಯಾಗಿದ್ದು, ಅಧಿಕಾರಿಗಳು ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ನಗರಸಭೆ ಹಾಗೂ ಪೊಲೀಸ್ ಅಧಿಕಾರಿಗಳು ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದಾರೆ.
ಆಹಾರ, ನೀರು, ಔಷಧಿ ಸೇರಿ ಅಗತ್ಯ ವಸ್ತು ಮಾರಾಟಕ್ಕೆ ಮಾತ್ರ ಅವಕಾಶವಿದೆ. ಹೋಟೆಲ್ ಗಳಲ್ಲಿ ಊಟ, ತಿಂಡಿ ಪಾರ್ಸಲ್ ಮಾರಾಟಕ್ಕೆ ಮಾತ್ರ ಅನುವು ಮಾಡಿಕೊಡಲಾಗಿದೆ. ಬೀದಿ ಬದಿಯ ಟೀ ಅಂಗಡಿ, ಮಟನ್, ಚಿಕನ್ ಕಬಾಬ್ ಸೆಂಟರ್ ಸೇರಿ ಇತರೆ ಅಂಗಡಿಗಳನ್ನು ಬಂದ್ ಮಾಡಲಾಗುತ್ತಿದೆ.
ಎಲ್ಲಾ ಅಂಗಡಿಗಳನ್ನು ಬಂದ್ ಮಾಡುವಂತೆ ಆಟೋ ರಿಕ್ಷಾದಲ್ಲಿ ಧ್ವನಿ ವರ್ಧಕ ಮೂಲಕ ಸೂಚನೆ ನೀಡಲಾಗುತ್ತಿದೆ. ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಸೂಚನೆ ಮೆರೆಗೆ ವ್ಯಾಪಾರ ವಹಿವಾಟು ಬಂದ್ ಮಾಡಲಾಗುತ್ತಿದೆ.
ರಾಯಚೂರು ಜಿಲ್ಲೆಯಲ್ಲಿ ಒಟ್ಟು 71 ಜನ ವಿದೇಶದಿಂದ ಬಂದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 259 ಜನ ಹೋಮ್ ಕೋರೈಂಟೆನ್ ನಲ್ಲಿದ್ದಾರೆ. ರಾಯಚೂರು ಹಾಗೂ ಸಿಂಧನೂರು ತಾಲೂಕಿನಲ್ಲಿ ಹೆಚ್ಚು ಜನ ಹೋಂ ಕೇರ್ ನಲ್ಲಿದ್ದಾರೆ.