Tag: DC

  • ಪುಂಡಪೋಕರಿಗಳಿಗೆ ಪಾಸ್ ಕೊಟ್ಟಿಲ್ಲ: ಮೇಯರ್-ಡಿಸಿ ನಡುವೆ ಫೈಟ್

    ಪುಂಡಪೋಕರಿಗಳಿಗೆ ಪಾಸ್ ಕೊಟ್ಟಿಲ್ಲ: ಮೇಯರ್-ಡಿಸಿ ನಡುವೆ ಫೈಟ್

    – ನಾನು ಸಣ್ಣ ಹುಡುಗ ಅಲ್ಲ, ಪಾಸ್ ಮಾರಾಟ ಮಾಡಿಕೊಂಡಿಲ್ಲ

    ದಾವಣಗೆರೆ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶವೇ ಲಾಕ್‍ಡೌನ್ ಆಗಿದೆ. ಆದರೆ ಅಗತ್ಯ ಸೇವೆಗಳಿಗೆ ಮನೆಯಿಂದ ಹೊರಬರಬೇಕಾದರೆ ಪಾಸ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸರಿಂದ ಪಾಸ್ ತೆಗೆದುಕೊಂಡು ಮನೆಯಿಂದ ಹೊರಬರಬಹುದು. ಆದರೆ ಈ ಪಾಸ್ ವಿಚಾರದಲ್ಲಿ ದಾವಣಗೆರೆಯ ಮೇಯರ್ ಮತ್ತು ಡಿಸಿ ನಡುವೆ ಫೈಟ್ ನಡೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಸೇವೆಗಳಿಗೆ ಪಾಸ್ ವಿತರಣೆ ಮಾಡಿದ್ದರು. ಮೇಯರ್ ಕೂಡ ಪಾಲಿಕೆ ವತಿಯಿಂದ ವ್ಯಾಪಾರಸ್ಥರಿಗೆ ಸಾವಿರಾರು ಪಾಸ್ ವಿತರಿಸಿದ್ದರು. ಆದರೆ ಮೇಯರ್ ನೀಡಿದ ಪಾಸ್ ದುರ್ಬಳಕೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆದ್ದರಿಂದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮೇಯರ್ ನೀಡಿದ್ದ ಪಾಸ್‍ಗಳನ್ನು ಅಸಿಂಧು ಮಾಡಿದ್ದಾರೆ. ಈ ವಿಚಾರದಲ್ಲಿ ಮೇಯರ್ ಬಿ.ಜಿ.ಅಜಯ್‍ಕುಮಾರ್ ಮತ್ತು ಡಿಸಿ ಮಹಾಂತೇಶ್ ಬೀಳಗಿ ನಡುವೆ ಜಗಳ ನಡೆದಿದೆ.

    ನಾನು ಪುಂಡಪೋಕರಿಗಳಿಗೆ ಪಾಸ್ ಕೊಟ್ಟಿಲ್ಲ. ಕಳೆದ 15 ದಿನಗಳಿಂದ ಪಾಸ್‍ಗಾಗಿ ಪಾಲಿಕೆ ಪರದಾಡಿದೆ. ಆದರೆ ಜಿಲ್ಲಾಡಳಿತ ಪಾಸ್ ಕೊಡಲಿಲ್ಲ. ನಾನು ವ್ಯಾಪಾರಿಗಳ ಕಷ್ಟ ನೋಡಲಾಗದೆ ಪಾಸ್ ನೀಡಿರುವೆ. ಆದರೆ ನಾನು ಪಾಸ್ ಮಾರಾಟ ಮಾಡಿಕೊಂಡಿಲ್ಲ. ಮೇಯರ್ ಸ್ಥಾನದಲ್ಲಿ ಕುಳಿತ ನನಗೆ ಕನಿಷ್ಠ ಜ್ಞಾನ ಇದೆ ಎಂದು ಡಿಸಿಗೆ ಮೇಯರ್ ಬಿ.ಜಿ. ಅಜಯ್‍ಕುಮಾರ್ ತಿರುಗೇಟು ನೀಡಿದ್ದಾರೆ.

    ನಾನು ಸಣ್ಣ ಹುಡುಗ ಅಲ್ಲ, ಪಾಲಿಕೆ ಸದಸ್ಯರ ಆಗ್ರಹದ ಮೇಲೆ ಪಾಸ್ ನೀಡಲಾಗಿದೆ. ಅಷ್ಟೇ ಅಲ್ಲದೇ ಎಲ್ಲ ದಾಖಲೆ ಪಡೆದು ಪಾಸ್ ನೀಡಲಾಗಿದೆ. ನಾನು ಕೊಟ್ಟ ಪಾಸ್ ಅಸಿಂಧು ಮಾಡಿ. ಆದರೆ ಬೇಕಾದಷ್ಟು ಪಾಸ್ ಜಿಲ್ಲಾಡಳಿತ ನೀಡಲಿ ಎಂದು ಮೇಯರ್ ಗರಂ ಆಗಿ ಮಾತನಾಡಿದರು.

  • ಶಂಕಿತ ಕೊರೊನಾ ರೋಗಿಗಳ ಬಗ್ಗೆ ನಿರ್ಲಕ್ಷ್ಯ 2 ಖಾಸಗಿ ಆಸ್ಪತ್ರೆಗಳು ಬಂದ್- ಜಿಲ್ಲಾಧಿಕಾರಿ

    ಶಂಕಿತ ಕೊರೊನಾ ರೋಗಿಗಳ ಬಗ್ಗೆ ನಿರ್ಲಕ್ಷ್ಯ 2 ಖಾಸಗಿ ಆಸ್ಪತ್ರೆಗಳು ಬಂದ್- ಜಿಲ್ಲಾಧಿಕಾರಿ

    ಕಲಬುರಗಿ: ದೇಶದಲ್ಲಿ ಕೊರೊನಾ ಪ್ರಕರಣಗಳು ಭಯಾನಕ ರೀತಿಯಲ್ಲಿ ಹೆಚ್ಚಾಗುತ್ತಿದ್ದು, ರಜ್ಯದಲ್ಲಿ ಸಹ 181ಕ್ಕೆ ತಲುಪಿದೆ. ಹೀಗಾಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಕೊರೊನಾ ವೈರಸ್ ಲಕ್ಷಣಗಳಿರುವವರ ಬಗ್ಗೆ ಮಾಹಿತಿ ನೀಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.

    ಈ ಕುರಿತು ಕಲಬುರಗಿ ಜಿಲ್ಲಾಧಿಕಾರಿ ಶರತ್.ಬಿ ಎಚ್ಚರಿಕೆ ನೀಡಿದ್ದು, ಶಂಕಿತ ಕೊರೋನಾ ರೋಗಿಗಳನ್ನು ಬಹಳ ದಿನಗಳ ಕಾಲ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಿಕೊಂಡು ರೋಗ ಉಲ್ಬಣಿಸಿದ ಬಳಿಕ ಇಎಸ್‍ಐ ಮತ್ತು ಜಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಇದರಿಂದಾಗಿ ಸಾವು ಸಂಭವಿಸುತ್ತದೆ. ಹೀಗಾಗಿ ಇಂತಹ ಆಸ್ಪತ್ರೆಗಳನ್ನು ಬಂದ್ ಮಾಡುವ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

    ಸ್ಟಾರ್ ಆಸ್ಪತ್ರೆ ಸಿಬ್ಬಂದಿ ಕೊರೊನಾ ರೋಗ ಲಕ್ಷಣವುಳ್ಳ ರೋಗಿಯನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟವಾದ ಮಾಹಿತಿ ನೀಡಿಲ್ಲ. ಜೊತೆಗೆ ಆಸ್ಪತ್ರೆಯಲ್ಲಿ ಈ ಬಗ್ಗೆ ಯಾವುದೇ ದಾಖಲೆಗಳನ್ನು ಇಟ್ಟುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸ್ಟಾರ್ ಆಸ್ಪತ್ರೆಯನ್ನು ಬಂದ್ ಮಾಡಲಾಗಿದೆ. ಅದೇ ರೀತಿ ಬಹಮನಿ ಆಸ್ಪತ್ರೆಯನ್ನು ಬಂದ್ ಮಾಡಿ, ಸಿಬ್ಬಂದಿಯನ್ನು ಕ್ವಾರೈಂಟೀನ್ ನಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ.

    ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡುವ ಯತ್ನ ನಗರದಲ್ಲಿ ನಡೆದಿದೆ. ಇದು ಸ್ವತಃ ಜಿಲ್ಲಾಡಳಿತ ಅಥವಾ ಜಿಲ್ಲಾಧಿಕಾರಿಗಳ ಮೇಲೆ ನಡೆಸಿರುವ ಹಲ್ಲೆಯಂತಾಗಿದೆ. ಹಲ್ಲೆನಡೆಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಆಶಾ ಕಾರ್ಯಕರ್ತೆಯರು ಸರ್ಕಾರದ ಆದೇಶದ ಮೇರೆಗೆ ಆರೋಗ್ಯ ತಪಾಸಣೆಗೆ ಮನೆ-ಮನೆಗೆ ಭೇಟಿ ನೀಡುತ್ತಾರೆ. ಜನಗಣತಿ, ಎನ್‍ಪಿಆರ್ ಮತ್ತಿತರ ಯಾವುದೇ ಸರ್ವೇ ಮಾಡಿಸುತ್ತಿಲ್ಲ. ಅವರಿಗೆ ಸಹಕಾರ ನೀಡಬೇಕೆಂದು ಎಂದು ಅವರು ಕೋರಿದ್ದಾರೆ.

    ದೆಹಲಿ ಮತ್ತು ಇತರೆಡೆ ತೆರಳಿದ್ದ ಜಮಾತ್ ತಬ್ಲೀಘಿ ಸದಸ್ಯರು ಮುಕ್ತವಾಗಿ ಮುಂದೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಇದೇ ವೇಳೆ ಮನವಿ ಮಾಡಿದರು. ಇನ್ನು ನಗರದ ಆಸ್ಪತ್ರೆಗಳಲ್ಲಿರುವ ಆರೋಗ್ಯ ಕಾರ್ಯಕರ್ತೆಯರು ರೋಗಿಗಳನ್ನು ಸರಿಯಾಗಿ ಪ್ರಾಥಮಿಕ ಪರೀಕ್ಷೆ ಕೂಡ ನಡೆಸದೆ, ಇಎಸ್‍ಐ ಆಸ್ಪತ್ರೆಗೆ ಹೋಗುವಂತೆ ಶಿಫಾರಸು ಮಾಡುತ್ತಿರುವುದು ತಿಳಿದು ಬಂದಿದೆ. ಈ ಸಂಬಂಧ ನಿರ್ಲಕ್ಷ್ಯ ತೋರುವ “ಡಿ” ಗ್ರೂಪ್ ನಿಂದ ಹಿಡಿದು ವೈದ್ಯರ ವರೆಗೆ ಆರೋಗ್ಯ ತುರ್ತುಪರಿಸ್ಥಿತಿ ಉಲ್ಲಂಘನೆ ಆರೋಪದ ಮೇಲೆ ಗಂಭೀರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಮದು ಎಚ್ಚರಿಕೆ ನೀಡಿದ್ದಾರೆ.

  • ಕ್ವಾರಂಟೈನ್‍ನಲ್ಲಿರುವವರು ಗಂಟೆಗೊಂದು ಸೆಲ್ಫಿ ಅಪ್‍ಲೋಡ್ ಮಾಡಿ: ಡಿಸಿ ಸೂಚನೆ

    ಕ್ವಾರಂಟೈನ್‍ನಲ್ಲಿರುವವರು ಗಂಟೆಗೊಂದು ಸೆಲ್ಫಿ ಅಪ್‍ಲೋಡ್ ಮಾಡಿ: ಡಿಸಿ ಸೂಚನೆ

    ರಾಮನಗರ: ಮಹಾಮಾರಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರಾಮನಗರ ಜಿಲ್ಲೆಯಲ್ಲಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‍ನಲ್ಲಿರುವವರಿಗೆ ಸೆಲ್ಫಿ ತೆಗೆದು ಸರ್ಕಾರದ ಅಧಿಕೃತ ಮೊಬೈಲ್ ಅಪ್ಲಿಕೇಷನ್‍ನಲ್ಲಿ ಅಪ್‍ಲೋಡ್ ಮಾಡುವಂತೆ ರಾಮನಗರ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ನೀಡಿದ್ದಾರೆ.

    ರಾಮನಗರ ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್‍ನಲ್ಲಿರಲು ಸೂಚಿಸಿರುವ ವ್ಯಕ್ತಿಗಳು ಕಡ್ಡಾಯವಾಗಿ ಪ್ರತಿ ಗಂಟೆಗೊಂದು ಸೆಲ್ಫಿ ಮತ್ತು ಲೊಕೇಶನ್ ಮೊಬೈಲ್ ಆಪ್‍ನಲ್ಲಿ ಅಪ್‍ಲೋಡ್ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಬೆಳಿಗ್ಗೆ 7ಗಂಟೆಯಿಂದ ರಾತ್ರಿ 9ಗಂಟೆಯ ತನಕ ಗಂಟೆಗೊಂದು ಸೆಲ್ಫಿ ಕಳುಹಿಸಬೇಕು. ರಾತ್ರಿ 9ರಿಂದ ಬೆಳಗ್ಗೆ 7 ಗಂಟೆಗೆಯವರೆಗಿನ ಅವಧಿಯನ್ನು ನಿದ್ರಾ ಅವಧಿಯೆಂದು ಪರಿಗಣಿಸಿದೆ. ಈ ಅವಧಿಯನ್ನು ಹೊರತು ಪಡಿಸಿ ಇನ್ನುಳಿದ ಅವಧಿಯಲ್ಲಿ ಪ್ರತಿ ಗಂಟೆಗೆ ಒಂದರಂತೆ ಒಟ್ಟು 14 ಸೆಲ್ಫಿಗಳನ್ನು ಅಪ್‍ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಹೋಂ ಕ್ವಾರಂಟೈನ್ ನಲ್ಲಿರುವವರು ತೆಗೆದು ಕಳುಹಿಸುವ ಸೆಲ್ಫಿಗಳನ್ನು ಯಾವುದೇ ರೀತಿಯಲ್ಲಿ ಸರ್ಕಾರ ಬಳಸಿಕೊಳ್ಳುವುದಿಲ್ಲ. ಸೆಲ್ಫಿಗಳ ಖಾಸಗಿತನವನ್ನು ಸರ್ಕಾರ ಗೌರವಿಸುತ್ತದೆ. ಹಾಗೆಯೇ ಅವುಗಳು ಸೋರಿಕೆಯಾಗದಂತೆ ಕ್ರಮವಹಿಸುತ್ತದೆ. ಹೀಗಾಗಿ ತಪ್ಪದೇ ಸೆಲ್ಫಿಗಳನ್ನು ತೆಗೆದು ಅಪ್‍ಲೋಡ್ ಮಾಡುವಂತೆ ತಿಳಿಸಲಾಗಿದೆ. ಹೋಂ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳು ಸೆಲ್ಫಿಗಳನ್ನು ತೆಗೆದು ಅಪ್‍ಲೋಡ್ ಮಾಡದಿರುವುದು ಕಂಡು ಬಂದರೆ ಅದನ್ನು ಲೋಪವೆಂದು ಪರಿಗಣಿಸಿ ಅಂತವರನ್ನು ಗೃಹ ನಿರ್ಬಂಧನದಿಂದ ತೆಗೆದು ಸರ್ಕಾರಿ ಸಮೂಹ ನಿರ್ಬಂಧನಕ್ಕೆ (ಮಾಸ್ ಕ್ವಾರಂಟೈನ್) ಸೇರಿಸಲಾಗುವುದು ಎಂದು ಡಿಸಿ ಎಚ್ಚರಿಸಿದ್ದಾರೆ.

  • ಮಳವಳ್ಳಿಯಲ್ಲಿ ಜಮಾತ್ ಧರ್ಮಗುರು ತಂದ ಆತಂಕ

    ಮಳವಳ್ಳಿಯಲ್ಲಿ ಜಮಾತ್ ಧರ್ಮಗುರು ತಂದ ಆತಂಕ

    – ಹಂತ ಹಂತವಾಗಿ ಲಾಕ್‍ಡೌನ್ ಸಡಿಲ

    ಮಂಡ್ಯ: ದೇಶದಲ್ಲಿ ತಲ್ಲಣವನ್ನೇ ಸೃಷ್ಟಿಸಿದ್ದ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಪ್ರಕರಣ ಈಗ ಮಂಡ್ಯ ಜಿಲ್ಲೆಯ ಮಳವಳ್ಳಿಯ ಜನರಲ್ಲೂ ಆತಂಕ ಉಂಟುಮಾಡಿದೆ.

    ದೆಹಲಿಯ ನಿಜಾಮುದ್ದೀನ್ ಧರ್ಮಸಭೆಗೂ ಮುನ್ನ ಮಳವಳ್ಳಿಗೆ ಧರ್ಮಗುರು ಭೇಟಿ ನೀಡಿದ್ದ. ಈ ಹಿನ್ನೆಲೆಯಲ್ಲಿ ಧರ್ಮಗುರುವಿನ ಜೊತೆ ಸಂಪರ್ಕದಲ್ಲಿದ್ದವರ ಹುಡುಕಾಟವನ್ನು ಮಾಡಲಾಗುತ್ತಿದೆ. ಧರ್ಮಗುರು ಮಳವಳ್ಳಿಯಲ್ಲಿ ಕೆಲವು ದಿನಗಳ ಕಾಲ ವಾಸವಿದ್ದ ಬಗ್ಗೆ ಮಾಹಿತಿ ಇದೆ. ಮಾಹಿತಿ ಆಧರಿಸಿ ವಾಸವಿದ್ದ ಆ ಕುಟುಂಬದ ಸದಸ್ಯರಿಗಾಗಿ ಹುಡುಕಾಟ ನಡೆಯುತ್ತಿದೆ.

    ಧರ್ಮಗುರು ಮೈಸೂರಿನಲ್ಲಿ ನೆಲೆಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಅವರ ಸಂಪರ್ಕದಲ್ಲಿದ್ದವರನ್ನ ಹುಡುಕಾಟ ಮಾಡುತ್ತಿದ್ದೀವಿ. ಸದ್ಯಕ್ಕೆ ಅಧಿಕಾರಿಗಳು ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲಿರುವ ಮುಸ್ಲಿಂ ಬ್ಲಾಕ್‍ನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ ವೆಂಕಟೇಶ್ ಮಾಹಿತಿ ನೀಡಿದ್ದಾರೆ.

    ಇತ್ತ ಮಂಡ್ಯದಲ್ಲಿ ಕೊರೊನಾ ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಂತ ಹಂತವಾಗಿ ಲಾಕ್‍ಡೌನ್ ಸಡಿಲಗೊಳಿಸುತ್ತಿದೆ. ಇಂದಿನಿಂದ ಸೆಲೂನ್, ಬೇಕರಿ ತೆರೆಯಲು ಡಿಸಿ ಡಾ.ಎಂ.ವಿ.ವೆಂಕಟೇಶ್ ಅನುಮತಿ ನೀಡಿದ್ದಾರೆ. ಆದರೆ ಕೆಲವು ಷರತ್ತು ವಿಧಿಸಿ ಅನುಮತಿ ನೀಡಿದ್ದಾರೆ. ಸೆಲೂನ್, ಬೇಕರಿ ಮಾಲೀಕರ ಮನವಿಗೆ ಸ್ಪಂದಿಸಿ ಅನುಮತಿ ನೀಡಿದ್ದೇನೆ. ಆದರೆ ಮಾಸ್ಕ್, ಹ್ಯಾಂಡ್ ಗ್ಲೌಸ್ ಬಳಸುವಂತೆ ಸೂಚನೆ ನೀಡಿದ್ದೇನೆ. ಯಾಕೆಂದರೆ ಮುಂಜಾಗೃತೆ ವಹಿಸದಿದ್ದರೆ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಡಿಸಿ ತಿಳಿಸಿದ್ದಾರೆ.

    ಇತ್ತ ಮೈಸೂರು ಜಿಲ್ಲೆಯಲ್ಲಿ ಸೋಂಕಿತರು ಸಂಖ್ಯೆ ಹೆಚ್ಚಾಗುತ್ತಿದೆ. ಈ ವೇಳೆಯಲ್ಲಿ ಸೆಲೂನ್, ಬೇಕರಿ ತೆರೆಯಲು ಅನುಮತಿ ಕೊಟ್ಟಿದ್ದಕ್ಕೆ ಕೆಲವು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೋಳಿ, ಕುರಿ, ಮೇಕೆ, ಮೀನು ಮಾಂಸ ಮಾರಾಟಕ್ಕೂ ಅವಕಾಶ ಮಾಡಿಕೊಡಲಾಗಿದೆ.

  • ನಾವೇನು ಪಿಕ್‍ನಿಕ್‍ಗೆ ಅಲ್ಲ, ನಿಮ್ಮ ಪ್ರಾಣ ಉಳಿಸಲು ಹೊರಗೆ ಹೋರಾಡ್ತಿದ್ದೇವೆ: ಡಿಸಿ ಗರಂ

    ನಾವೇನು ಪಿಕ್‍ನಿಕ್‍ಗೆ ಅಲ್ಲ, ನಿಮ್ಮ ಪ್ರಾಣ ಉಳಿಸಲು ಹೊರಗೆ ಹೋರಾಡ್ತಿದ್ದೇವೆ: ಡಿಸಿ ಗರಂ

    ಮೈಸೂರು: ನಗರದಲ್ಲಿ ಕ್ವಾರಂಟೈನ್ ಮಾಡಲು ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಗರಂ ಆಗಿದ್ದಾರೆ.

    ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಾಡ್ಜ್ ಗಳಲ್ಲಿ ಕ್ವಾರೆಂಟೈನ್ ಮಾಡಲು ವಿರೋಧ ಮಾಡಿದ್ದಕ್ಕೆ ಕಿಡಿಕಾರಿದ್ದಾರೆ. ನಾವೇನು ಪಿಕ್ ನಿಕ್‍ಗೆ ಹೊರಗಡೆ ಓಡಾಡುತ್ತಿಲ್ಲ. ನಿಮ್ಮ ಪ್ರಾಣ ಊಳೀಸಲು ಹೊರಗಡೆ ಹೋರಾಡುತ್ತಿದ್ದೇವೆ. ಕ್ವಾರೆಂಟೈನ್ ಆಗುವವರಿಗೂ ಕುಟುಂಬ, ಮಕ್ಕಳಿದ್ದಾರೆ. ಅವರನ್ನು ಮಾನವೀಯತೆಯಿಂದ ನೋಡಿ ಎಂದು ತಿಳಿಸಿದ್ದಾರೆ.

    ಒಂದು ಪ್ರಕರಣ ಸ್ಥಳೀಯರ ವಿರೋಧ ಸಹಿಸಬಹುದು. ಆದರೆ ಮುಂದೆ ಇನ್ನೂ ಹೆಚ್ಚಾದರೆ ಸ್ಥಳೀಯರು ಸಹಕಾರ ಕೊಡಲೇಬೇಕು. ಕ್ವಾರಂಟೈನ್ ಆದವರು ಉದ್ದೇಶಪೂರ್ವಕವಾಗಿ ಹೊರಗಿಲ್ಲ. ಅವರೆಲ್ಲ ಬದುಕಬೇಕು ಅಂತಾನೆ ಕ್ವಾರೆಂಟೈನ್ ಆಗುತ್ತಿದ್ದಾರೆ ಎಂದು ಹೇಳಿದ್ದಾರೆ.

    ಜನರು ವಿರೋಧ ಮಾಡುವುದಕ್ಕೂ ಮುನ್ನ ಒಮ್ಮೆ ಯೋಚನೆ ಮಾಡಬೇಕು. ನಿಮಗಾಗಿ ನಾವು ಹೊರಗಿದ್ದು ಕೆಲಸ ಮಾಡ್ತಿದ್ದೀವಿ. ಅದನ್ನ ಅರ್ಥ ಮಾಡಿಕೊಂಡು ಜಿಲ್ಲಾಡಳಿತಕ್ಕೆ ಸಹಕಾರ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಹಣ್ಣು, ತರಕಾರಿ ಮಾರಾಟಕ್ಕೆ ಜಿಲ್ಲಾಡಳಿತ ಅನುಮತಿ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಹಣ್ಣು, ತರಕಾರಿ ಮಾರಾಟಕ್ಕೆ ಜಿಲ್ಲಾಡಳಿತ ಅನುಮತಿ

    ಚಿತ್ರದುರ್ಗ: ಸತತ ಬರದಿಂದ ಕಂಗಾಲಾಗಿದ್ದ ರೈತರು ಇದೀಗ ಕೊರೊನಾ ಹರಡದಂತೆ ದಿಢೀರ್ ಆದಂತಹ ಭಾರತ ಲಾಕ್ ಡೌನ್ ನಿಂದಾಗಿ ತಾವು ಬೆಳೆದ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಲಾಗದೆ ಜಮೀನಿನಲ್ಲೇ ಕೊಳೆತು ಹೋಗುವ ಮೂಲಕ ಮತ್ತಷ್ಟು ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಈ ಸುದ್ದಿಯನ್ನು ವೀಕ್ಷಿಸಿರುವ ಜಿಲ್ಲಾಧಿಕಾರಿ ವಿನೋತ್ ಪ್ರಿಯ, ಜಿಲ್ಲೆಯ ಎಲ್ಲ ತಾಲೂಕು ವ್ಯಾಪ್ತಿಯಲ್ಲಿ ಬರುವ ರೈತರು ತಾವು ಬೆಳೆದ ತೋಟಗಾರಿಕಾ ಉನ್ನಗಳಾದ ಹಣ್ಣು ಮತ್ತು ತರಕಾರಿಗಳನ್ನು ಸರಬರಾಜು ಮಾಡಲು ಲಾಕ್‍ಡೌನ್ ಆದೇಶದಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

     ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹುಲಿಕುಂಟೆ ಗ್ರಾಮದ ಜಯ್ಯಣ್ಣ ಹಾಗು ನಾಗಣ್ಣ ಎಂಬ ರೈತರು ಪ್ರತ್ಯೆಕವಾಗಿ ತಲಾ 3 ಎಕರೆ ಜಮೀನಿನಲ್ಲಿ ಸುಮಾರು 40 ಟನ್ ಕರ್ಬೂಜ ಬೆಳೆದಿದ್ದರು. ಅಲ್ಲದೆ ಹಾಲಗೊಂಡನಹಳ್ಳಿಯಲ್ಲಿ ತಿಪ್ಪೇಸ್ವಾಮಿ ಸಹ ತಮ್ಮ 4 ಎಕರೆ ಜಮೀನನಲ್ಲಿ ಸುಮಾರು 50 ಟನ್ ಕರ್ಬೂಜ ಬೆಳೆದಿದ್ದು, ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಗುರುಸಿದ್ದಪ್ಪ ಮೂರು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದು ಕೈ ಸುಟ್ಕೊಂಡಿದ್ದಾರೆ.

    ಈ ಬಾರಿ ಅತಿ ಕಡಿಮೆ ಅವಧಿ ಅಂದರೆ ಕೇವಲ 60 ದಿನಗಳಲ್ಲಿ ಬೆಳೆ ಕೈಗೆ ಬರುವ ಬೆಳೆ ಅಂತ ಬಿತ್ತನೆ ಮಾಡಿದ್ದರು. ಅದರಲ್ಲೂ ಯುಗಾದಿ, ರಾಮನವಾಮಿ ಹಾಗೂ ಜಾತ್ರೆಗಳ ಸೀಸನ್ ಇರೋದ್ರಿಂದ ಉತ್ತಮ ಬೆಲೆ ಸಿಗುತ್ತದೆ ಎಂಬ ನಿಟ್ಟಿನಲ್ಲಿ ಅಪಾರ ಲಾಭದ ನಿರೀಕ್ಷೆಯಲ್ಲಿ ಅನ್ನದಾತರು ಇದ್ದರು. ಆದರೆ ಕೊರೊನಾ ವೈರಸ್ ಅವರ ಆಸೆಗೆ ತಣ್ಣೀರೆರಚಿದೆ ಅಂತ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿದ ಬಳಿಕ ಅನ್ನದಾತರ ಸಂಕಷ್ಟ ಅರಿತ ಜಿಲ್ಲಾಡಳಿತ ಉತ್ತಮ ನಿರ್ಧಾರ ಕೈಗೊಂಡಿದೆ.

    ಜಿಲ್ಲೆಯ ಎಲ್ಲ ತಾಲೂಕುಗಳ ರೈತರು ತಾವು ಬೆಳೆದ ಅಥವಾ ದಾಸ್ತಾನು ಮಾಡಿಕೊಂಡಿರುವ ಹಣ್ಣು ಮತ್ತು ತರಕಾರಿಗಳನ್ನು ಆಯಾ ಮಾರುಕಟ್ಟೆಗೆ, ಹೊರ ಜಿಲ್ಲೆಗಳಿಗೆ ಮತ್ತು ಹೊರ ರಾಜ್ಯಗಳಿಗೆ ಸಾಗಿಸಲು ಅನುಮತಿ ನೀಡಲಾಗಿದೆ. ಜಿಲ್ಲೆಯ ತೋಟಗಾರಿಕೆ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಸಗಟು ವ್ಯಾಪಾರಿಗಳು ಖರೀದಿಸಿ ಮಾರಾಟ ಮಾಡಲು ಕೂಡ ಅನುಮತಿ ನೀಡಲಾಗಿದೆ. ಸಗಟು ವ್ಯಾಪಾರಿಗಳು ತೋಟಗಾರಿಕೆಗೆ ಸಂಬಂಧಿಸಿದ ಕೂಲಿಕಾರರಿಗೆ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಜರ್ ಗಳನ್ನು ಒದಗಿಸಬೇಕು. ಮತ್ತು ಕಡ್ಡಾಯವಾಗಿ ಇವುಗಳನ್ನು ಉಪಯೋಗಿಸುವ ಮೂಲಕ ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾರಾಟ ವ್ಯವಹಾರ ನಡೆಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

  • ಡಿಸಿ, ಎಸ್‌ಪಿ, ನೋಡಿ ಮನೆ ಮೇಲೆ ಹತ್ತಿ ಕೂತ್ರೂ ಕೇಸ್ ಬಿತ್ತು

    ಡಿಸಿ, ಎಸ್‌ಪಿ, ನೋಡಿ ಮನೆ ಮೇಲೆ ಹತ್ತಿ ಕೂತ್ರೂ ಕೇಸ್ ಬಿತ್ತು

    – ಗುಂಪಾಗಿ ಕುಳಿತವರ ಮೇಲೆ ಕೇಸ್

    ಚಿಕ್ಕಮಗಳೂರು: ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಆದರೆ ಕೆಲವರು ಮಾತ್ರ ಗುಂಪು ಸೇರುತ್ತಿದ್ದಾರೆ. ಹೀಗೆ ಸೇರುತ್ತಿರುವವರನ್ನು ಹುಡುಕಿ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ.

    ಜಿಲ್ಲೆಯ ಆಲ್ದೂರು ಸಮೀಪದ ಬನ್ನೂರಿನಲ್ಲಿ ಅಂಗಡಿ ಮುಂದೆ ಸುಮಾರು ಎಂಟತ್ತು ಜನ ಗುಂಪಾಗಿ ಸೇರಿ ಹರಟೆ ಹೊಡೆಯುತ್ತಿದ್ದರು. ಇದೇ ವೇಳೆ, ಜಿಲ್ಲಾ ಕೇಂದ್ರದಿಂದ ಶೃಂಗೇರಿಗೆ ತೆರಳುತ್ತಿದ್ದ ಜಿಲ್ಲಾಧಿಕಾರಿ ಬಗಾದಿ ಗೌತಮ್ ಹಾಗೂ ಎಸ್‌ಪಿ ಹರೀಶ್ ಪಾಂಡೆ ಅಂಗಡಿ ಬಳಿಯ ಗುಂಪನ್ನು ನೋಡಿ ಗಾಡಿ ನಿಲ್ಲಿಸಿದ್ದಾರೆ. ಇದನ್ನು ಕಂಡ ಜನ ಎದ್ವೋ-ಬಿದ್ವೋ ಅಂತ ಓಡಿದ್ದಾರೆ.

    ಹೀಗೆ ಓಡಿ ಹೋದವರು ಹೆಂಚಿನ ಮನೆ ಹಾಗೂ ಶೀಟಿನ ಮನೆ ಮೇಲೆ ಹತ್ತಿ ಕೂತಿದ್ದಾರೆ. ಮನೆ ಮೇಲೆ ಕೂತಿದ್ದ ಜನರಿಗೆ ಕೆಳಗಿಳಿಯುವಂತೆ ಎಷ್ಟೇ ಮನವಿ ಮಾಡಿಕೊಂಡರೂ ಕೆಳಗೆ ಇಳಿದಿಲ್ಲ. ಮನೆಯ ಒಂದು ತುದಿಯಲ್ಲಿ ಲಾಠಿ ಹಿಡಿದ ಪೊಲೀಸರು ಕೆಳಗೆ ಇಳಿಯುತ್ತಿಯೋ ಇಲ್ಲ ಮೇಲೆ ಬಂದು ಬಾರಿಸಬೇಕೋ ಎಂದು ಕೆಳಗೆ ಇಳಿಯುವಂತೆ ಹೇಳಿದ್ದಾರೆ. ಆದರೂ ಇಳಿದಿಲ್ಲ. ಹೀಗೆ ಅಧಿಕಾರಿಗಳು ಹೋಗುವವರೆಗೂ ಮನೆ ಮೇಲೆಯೇ ಕುಳಿತಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನು ಕೆಳಗಿಳಿಸಿದ್ದಾರೆ. ಲಾಕ್ ಡೌನ್ ಜಾರಿಯಲ್ಲಿದ್ದರೂ ಗುಂಪು ಸೇರಲು ಕಾರಣಕರ್ತರಾದ ಅಂಗಡಿ ಮಾಲೀಕ ಹಾಗೂ ಓಡಿ ಹೋದ ಇಬ್ಬರು ಸೇರಿ ಮೂವರ ಮೇಲೆ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೊಸಪೇಟೆಯ ಒಂದೇ ಕುಟುಂಬದ ಮೂವರಿಗೆ ಕೊರೊನಾ ಸೋಂಕು

    ಹೊಸಪೇಟೆಯ ಒಂದೇ ಕುಟುಂಬದ ಮೂವರಿಗೆ ಕೊರೊನಾ ಸೋಂಕು

    ಬಳ್ಳಾರಿ: ಜಿಲ್ಲೆಯ ಹೊಸಪೇಟೆಯ ಎಸ್.ಆರ್ ನಗರದ ಒಂದೇ ಕುಟುಂಬದ ಮೂವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

    ಕೊರೊನಾ ಗುಣಲಕ್ಷಣಗಳು ಕಂಡ ಬಂದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆಯಷ್ಟೇ ಮೂವರನ್ನು ಬಳ್ಳಾರಿಯ ವಿಮ್ಸ್ ಗೆ ಪರೀಕ್ಷೆಗೆ ಕರೆದೊಯ್ಯಲಾಗಿತ್ತು. ಇಂದು ಮೂವರ ವರದಿ ಬಂದಿದ್ದು, ಮೂವರಲ್ಲೂ ಸೋಂಕು ಇರುವುದು ದೃಢವಾಗಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸ್ಪಷ್ಟಪಡಿಸಿದ್ದಾರೆ.

    ಸೋಂಕಿತರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತಿದ್ದು, ಈ ಮೂವರು ಇತ್ತೀಚೆಗೆ ಬೆಂಗಳೂರಿನಿಂದ ವಾಪಸ್ಸಾಗಿದ್ದರು. ಬಳಿಕ ತೀವ್ರ ಜ್ವರದಿಂದ ಬಳಲುತ್ತಿದ್ದ ಕಾರಣ ಈ ಮೂವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ, ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇಂದು ರಕ್ತ ಪರೀಕ್ಷೆ ವರದಿ ಕೊರೊನಾ ಪಾಸಿಟಿವ್ ಬಂದಿದೆ. ಇತ್ತ ವಿಷಯ ಗೊತ್ತಾದ ನಂತರ ಇಡೀ ಬಡಾವಣೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಿಗೂ ಬ್ಯಾರಿಕೇಡ್ ಅಳವಡಿಸಿ, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    ಸೋಂಕು ಇರುವುದು ದೃಢಪಟ್ಟಿದ್ದರಿಂದ ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ ಸೋಮವಾರ ಸಂಜೆಯಿಂದಲೇ ನಿಯಮ ಜಾರಿಗೆ ಬರುವಂತೆ, ಒಳ ಹಾಗೂ ಹೊರಹೋಗುವ ಎಲ್ಲಾ ರೀತಿಯ ವಾಹನ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿದೆ. ಬೆಳಿಗ್ಗೆ 9ರಿಂದ ಹತ್ತು ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, ಕುಟುಂಬದ ಒಬ್ಬ ಸದಸ್ಯರು ಹೊರಬರಲು ಅವಕಾಶವಿದೆ.

    ಇಡೀ ನಗರದಾದ್ಯಂತ ಔಷಧ ಸಿಂಪಡಿಸಲಾಗುವುದು. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ಮಾಡುವರು. ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮನವಿ ಮಾಡಿದ್ದಾರೆ.

  • ಓರ್ವನಿಂದ 9 ಮಂದಿಗೆ ಕೊರೊನಾ – ನಂಜನಗೂಡು ಸ್ತಬ್ಧ, ಮನೆಗಳಿಗೆ ಆಹಾರ ವಿತರಣೆ

    ಓರ್ವನಿಂದ 9 ಮಂದಿಗೆ ಕೊರೊನಾ – ನಂಜನಗೂಡು ಸ್ತಬ್ಧ, ಮನೆಗಳಿಗೆ ಆಹಾರ ವಿತರಣೆ

    – ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆ
    – ಮನೆಯಿಂದ ಯಾರೂ ಹೊರ ಬರುವಂತಿಲ್ಲ
    – 10 ಮನೆಗೆ ಓರ್ವ ಪೊಲೀಸ್ ಸಿಬ್ಬಂದಿ ನೇಮಕ

    ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 12ಕ್ಕೆ ಏರಿದ್ದು, ಒಂದೇ ದಿನದಲ್ಲಿ 5 ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದ ಹಿನ್ನೆಲೆ ನಂಜನಗೂಡಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಎರಡನೇ ದಿನವೂ ನಾಕಾಬಂದಿ ಮುಂದುವರೆದಿದೆ.

    ನಂಜನಗೂಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಂದ್ ಆಗಿವೆ. ಮೈಸೂರು-ಊಟಿ, ಕೇರಳ ಮತ್ತು ತಮಿಳುನಾಡು ಸಂಪರ್ಕ ಕಲ್ಪಿಸುವ ಹೆದ್ದಾರಿ ಸೇರಿದಂತೆ ಪಟ್ಟಣಕ್ಕೆ ನಾಲ್ಕು ಕಡೆಯಿಂದ ಸಂಪರ್ಕಿಸೋ ಎಲ್ಲಾ ಮುಖ್ಯ ರಸ್ತೆಗಳನ್ನು ಸಹ ಬಂದ್ ಮಾಡಲಾಗಿದೆ. ಪಾಸ್ ಹೊಂದಿರುವ ವಾಹನಗಳಿಗೆ, ದಿನಸಿ ಪದಾರ್ಥ ತರೋ ವಾಹನ ಹೊರತುಪಡಿಸಿ ಎಲ್ಲಾ ವಾಹನಗಳ ಪ್ರವೇಶ ರದ್ದು ಮಾಡಲಾಗಿದೆ. ನಂಜನಗೂಡು ಪಟ್ಟಣದಿಂದ ಯಾರು ಹೊರಹೋಗದಂತೆ ಮತ್ತು ಒಳ ಬರದಂತೆ ಪೊಲೀಸರು ನಾಕಾಬಂಧಿ ಹಾಕಿದ್ದು, ನಂಜನಗೂಡು ಸಂಪೂರ್ಣ ಸ್ತಬ್ಧವಾಗಿದೆ.

    ಈ ಬಗ್ಗೆ ಜಿಲ್ಲಾ ಉಸ್ತವಾರಿ ಸಚಿವ ವಿ. ಸೋಮಣ್ಣ ಅವರು ಮಾತನಾಡಿ, ಮೈಸೂರಿನಲ್ಲಿ 12 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇಬ್ಬರು ವಿದೇಶದಿಂದ ಬಂದವರು ಹಾಗೂ ಉಳಿದ 10 ಮಂದಿ ಜುಬಿಲೆಂಟ್ ಕಾರ್ಖಾನೆಯ ನೌಕರರಿಗೆ ಸೋಂಕು ತಗುಲಿದೆ. ಇದು ನೋವಿನ ಸಂಗತಿ ಹೀಗೆ ಆಗಬಾರದಿತ್ತು, ಆದರೆ ಆಗೋಗಿದೆ. ಈ ಬಗ್ಗೆ ಯಾವೆಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. 6 ಮಂದಿ ಕೋವಿಡ್-19ಗಾಗಿ ಪ್ರತ್ಯೇಕವಾಗಿ ಮಾಡಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 6 ಮಂದಿ ಬೇರೆ ಬೇರೆ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಅವರು ಕೂಡ ಇಂದು ಕೋವಿಡ್-19ಗಾಗಿ ಇರುವ ಆಸ್ಪತ್ರೆಗೆ ಶಿಫ್ಟ್ ಆಗಲಿದ್ದಾರೆ ಎಂದು ಮಾಹಿತಿ ನೀಡಿದರು.

    ಹೋಂ ಕ್ವಾರಂನ್‍ಟೈನ್‍ನಲ್ಲಿ ಇರಬೇಕು ಎಂದು ಗುರುತಿಸಿದ ಮಂದಿ ಮನೆಯಿಂದ ಹೊರಹೋಗುತ್ತಿದ್ದಾರೆ. ಹೀಗಾಗಿ ಅವರು ಮನೆಬಿಟ್ಟು ಹೊರಹೋಗದಂತೆ ನೋಡಿಕೊಳ್ಳಲು 10 ಮನೆಗಳಿಗೆ ಒಬ್ಬ ಪೊಲೀಸ್ ಸಿಬ್ಬಂದಿ, ಆರೋಗ್ಯ ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿಯನ್ನು ನೇಮಿಸಲಾಗುತ್ತೆ. ಅವರು 10 ಮನೆಯಲ್ಲಿ ಕ್ವಾರಂಟೈನ್‍ನಲ್ಲಿರುವ ಮನೆ ಮಂದಿ ಮೇಲೆ ನಿಗವಹಿಸಲಿದ್ದಾರೆ. ಅಧಿಕಾರಿಗಳಿಗೆ ವಹಿಸಿರುವ ಮನೆಗಳಿಗೆ ಆಹಾರ ತಂದು ಕೊಡುವುದು, ಔಷಧಿಗಳನ್ನು ತಂದುಕೊಡುವುದು ಹಾಗೂ ಅಗತ್ಯ ವಸ್ತುಗಳನ್ನು ತಂದುಕೊಡುವ ವ್ಯವಸ್ಥೆಯನ್ನು ಅವರೇ ನೋಡಿಕೊಳ್ಳುತ್ತಾರೆ. ಇಂದು ಸಂಜೆಯಿಂದಲೇ ಈ ನಿಯಮ ಜಾರಿಗೆ ಬರಲಿದೆ ಎಂದರು.

    ಮನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ವಿಡಿಯೋ ಕಾನ್ಫರೆನ್ಸ್ ಮುಖಾಂತರ ತಹಶೀಲ್ದಾರ್‍ಗಳ ಜೊತೆಗೂ ಚರ್ಚೆ ನಡೆಸಿದ್ದೇನೆ. ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಹಾಗೆಯೇ ಹೋಂ ಕ್ವಾರಂಟೈನ್ ಆಗುವ ಮಂದಿಗೆ ಹಾಕುತ್ತಿಒರುವ ಸ್ಟಾಂಪ್ ಅಳಸಿ ಹೋಗುತ್ತಿದೆ ಎನ್ನುವುದು ತಿಳಿದು ಬಂದಿದೆ. ಆದ್ದರಿಂದ ಇನ್ನು ಮುಂದೆ ಚುನಾವಣೆ ಸಮಯದಲ್ಲಿ ಮತದಾರರು ವೋಟ್ ಹಾಕುವಾಗ ಅವರ ಬೆರಳಿಗೆ ಹಾಕುವ ಇಂಕ್‍ಯನ್ನು ಹೋಂ ಕ್ವಾರಂಟೈನ್ ಸ್ಟಾಂಪ್ ಜೊತೆಗೆ ಶಂಕಿತರ ಬೆರಳಿಗೆ ಹಾಕಲು ನಿರ್ಧರಿಸಿದ್ದೇವೆ ಎಂದು ಸಚಿವರು ತಿಳಿಸಿದರು.

  • ದಾವಣಗೆರೆ 3ನೇ ಕೊರೊನಾ ಪ್ರಕರಣದ ಟ್ರಾವೆಲ್ ಹಿಸ್ಟರಿ ಬಿಡುಗಡೆ

    ದಾವಣಗೆರೆ 3ನೇ ಕೊರೊನಾ ಪ್ರಕರಣದ ಟ್ರಾವೆಲ್ ಹಿಸ್ಟರಿ ಬಿಡುಗಡೆ

    ದಾವಣಗೆರೆ: ಜಿಲ್ಲೆಯ ಮೂರನೇ ಕೊರೊನಾ ಪಾಸಿಟಿವ್ ಪ್ರಕರಣದ ಟ್ರಾವೆಲ್ ಹಿಸ್ಟರಿಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ.

    ಅಮೆರಿಕಾದ ಚಿಕಾಗೋ ಸಮೀಪದ ಪ್ರಡ್ಯೂ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ 21 ವರ್ಷದ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಇಂದು ಸುದ್ದಿಗೋಷ್ಠಿ ಮಾಡಿ ಬಿಡುಗಡೆ ಮಾಡಿದ್ದಾರೆ.

    1. ಮಾರ್ಚ್ 15ರಂದು ಅಮೆರಿಕಾದಲ್ಲಿರುವ ತನ್ನ ವಿಶ್ವವಿದ್ಯಾಲಯದ ಹಾಸ್ಟೆಲ್ ನಿಂದ ಉಬರ್ ಕ್ಯಾಬ್‍ನಲ್ಲಿ ಚಿಕಾಗೊ ಟ್ರಾವೆಲ್. ಅಲ್ಲಿಂದ ಏರ್ ಇಂಡಿಯಾ ಎಐ 126 ವಿಮಾನದಲ್ಲಿ ಸೀಟ್ ನಂಬರ್ 12ರಲ್ಲಿ ಭಾರತಕ್ಕೆ ಪ್ರಯಾಣ.
    2. ಮಾರ್ಚ್ 17ರಂದು ಬೆಳಗ್ಗೆ 12.30ಕ್ಕೆ ದೆಹಲಿ ಬಂದಿದ್ದ. ಅಲ್ಲಿಂದ ಎಐ 504 ಏರ್ ಇಂಡಿಯಾ ವಿಮಾನದ ಸೀಟ್ ನಂಬರ್ ಡಿ 17ರಲ್ಲಿ ಪ್ರಯಾಣಿಸಿ ಬೆಂಗಳೂರಿಗೆ 3 ಗಂಟೆ ತಲುಪಿದ್ದ. ವಿಮಾನ ನಿಲ್ದಾಣದಿಂದ 4 ಗಂಟೆಗೆ ಸ್ವಂತ ಕಾರಿನಲ್ಲಿ ಹೊರಟು ಹತ್ತು ಗಂಟೆಗೆ ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ತಲುಪಿದ್ದ ಸೋಂಕಿತ.
    3. ನಂತರದ ದಿನಗಳಲ್ಲಿ ಅಲ್ಲಿಂದ ಸರ್ವೇಕ್ಷಣಾ ತಂಡದ ಅವಲೋಕನದಲ್ಲಿದ್ದರು.
    4. ಮಾರ್ಚ್ 24ರಂದು ಭೀಮಸಮುದ್ರದಿಂದ ದಾವಣಗೆರೆಯ ಜೆಎಂಐಟಿ ಗೆಸ್ಟ್ ಹೌಸ್‍ಗೆ ಬಂದಿದ್ದ ಆತ ಗೆಸ್ಟ್ ಹೌಸ್ ನಲ್ಲಿ ಹೋಮ್ ಕ್ವಾರೆಂಟೈನ್ ನಲ್ಲಿದ್ದ.
    5. ಮಾರ್ಚ್ 26ರಂದು ಆತನ ಗಂಟಲು ದ್ರವ ಶಿವಮೊಗ್ಗದ ವಿ.ಆರ್.ಡಿ.ಎಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
    6. ಮಾರ್ಚ್ 28ರಂದು ಆತನ ವರದಿ ಬಂದಿದ್ದು, ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು.

    ಕೊರೊನಾ ಪಾಸಿಟಿವ್ ಬಂದಿರುವ ಸೋಂಕಿತನ ಜೊತೆ ನೇರ ಸಂಪರ್ಕದಲ್ಲಿದ್ದ ಎಂಟು ಮಂದಿಯನ್ನು ಗುರುತಿಸಿದ್ದು, ಅವರನ್ನು ಹೋಮ್ ಕ್ವಾರೆಂಟೈನ್ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ದಾರೆ.