Tag: DC

  • ಎರಡಕ್ಕಿಂತ ಹೆಚ್ಚು ಬಂದೂಕು ಹೊಂದಿರುವವರು ಹಿಂದಿರುಗಿಸಿ

    ಎರಡಕ್ಕಿಂತ ಹೆಚ್ಚು ಬಂದೂಕು ಹೊಂದಿರುವವರು ಹಿಂದಿರುಗಿಸಿ

    – ಲೈಸೆನ್ಸ್ ಶಸ್ತ್ರಾಸ್ತ್ರ ಪಡೆದವರು ಹಿಂದಿರುಗಿಸಲು ಸೂಚನೆ

    ಧಾರವಾಡ: ಶಸ್ತ್ರಾಸ್ತ್ರ ತಿದ್ದುಪಡಿ ಕಾಯ್ದೆ 2019ರ ಅನ್ವಯ ಕೇವಲ ಎರಡು ಬಂದೂಕುಗಳನ್ನು ಮಾತ್ರ ಹೊಂದಬಹುದಾಗಿದ್ದು, ಪರವಾನಗಿ ಮೂಲಕ ಎರಡಕ್ಕಿಂತ ಹೆಚ್ಚು ಬಂದೂಕು ಪಡೆದವರು ಹಿಂದಿರುಗಿಸುವಂತೆ ಜಿಲ್ಲಾಡಳಿತ ತಿಳಿಸಿದೆ.

    ಈ ಕುರಿತು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶ ಹೊರಡಿಸಿದ್ದು, ಶಸ್ತ್ರಾಸ್ತ್ರ (ತಿದ್ದುಪಡಿ) ಕಾಯ್ದೆ 2019ರ ಕಲಂ 3ರ ಅನ್ವಯ ಇತ್ತೀಚೆಗೆ ತಿದ್ದುಪಡಿ ಮಾಡಿದ ನಿಬಂಧನೆಯಡಿಯಲ್ಲಿ ಬಂದೂಕು ಪರವಾನಿಗೆಯಲ್ಲಿ ಲೇಸೆನ್ಸ್ ದಾರರು ಎರಡು ಆಯುಧಗಳನ್ನು ಮಾತ್ರ ಹೊಂದಲು ಅವಕಾಶವಿದೆ. ಮೂರನೇ ಬಂದೂಕಿಗೆ ಅವಕಾಶವಿಲ್ಲ. ಹೀಗಾಗಿ ಪರವಾನಿಗೆದಾರರು ಮೂರನೇ ಆಯುಧವನ್ನು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಜಮೆ ಮಾಡಲು ನಿರ್ದೇಶನ ನೀಡಲಾಗಿದೆ.

    ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಿಂದ ಲೈಸೆನ್ಸ್ ಪಡೆದಿರುವ ಲೈಸೆನ್ಸ್ ದಾರರು ಮೂರು ಆಯುಧಗಳನ್ನು ಹೊಂದಿದ್ದರೆ ಅಂತಹವರು ಡಿಸೆಂಬರ್ 13, 2020 ರೊಳಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹಸ್ತಾಂತರಿಸಲು ಸೂಚಿಸಲಾಗಿದೆ.

  • ಬೀದರ್ ಜಿಲ್ಲಾಧಿಕಾರಿಗೆ ಕೊರೊನಾ ಸೋಂಕು ದೃಢ

    ಬೀದರ್ ಜಿಲ್ಲಾಧಿಕಾರಿಗೆ ಕೊರೊನಾ ಸೋಂಕು ದೃಢ

    ಬೀದರ್: ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ಅವರಿಗೆ ಇಂದು ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.

    ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ ತಪಾಸಣೆ ಮಾಡಿಸಿದ್ದ ಜಿಲ್ಲಾಧಿಕಾರಿ ರಾಮಚಂದ್ರನ್ ಅವರಿಗೆ ಇಂದು ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಬ್ರೀಮ್ಸ್ ವೈದ್ಯರ ಸಲಹೆಯಂತೆ ಜಿಲ್ಲಾಧಿಕಾರಿಗಳು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ಕೆಲ ದಿನಗಳಿಂದ ಜಿಲ್ಲಾಧಿಕಾರಿಗೆ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನಲೆ ತಪಾಸಣೆ ಮಾಡಿಸಿದ್ದು, ಇಂದು ಕೊರೊನಾ ಪಾಸಿಟಿವ್ ಇರುವುದು ಧೃಡವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ವಿ.ಜಿ.ರೆಡ್ಡಿ ಪಬ್ಲಿಕ್ ಟಿವಿಗೆ ಸ್ಪಷ್ಟ ಪಡಿಸಿದ್ದಾರೆ. ಜಿಲ್ಲಾಧಿಕಾರಿಗಳು ಮೂರು ತಿಂಗಳಿನಿಂದ ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದು, ಕರ್ತವ್ಯ ಸಮಯದಲ್ಲೇ ಕೊರೊನಾ ಸೋಂಕಿತರ ಸಂಪರ್ಕದಿಂದಾಗಿ ಸೋಂಕು ತಗುಲಿರುವ ಸಾದ್ಯತೆ ಇದೆ.

  • ನಂದಿಗಿರಿಧಾಮ ಲಾಕ್‍ಡೌನ್ ಮುಕ್ತಾಯ – ಸೆ.7ರಿಂದ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ

    ನಂದಿಗಿರಿಧಾಮ ಲಾಕ್‍ಡೌನ್ ಮುಕ್ತಾಯ – ಸೆ.7ರಿಂದ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ

    – ಬೆಳಗ್ಗೆ 8ರಿಂದ ಸಂಜೆ 5ಗಂಟೆಯವರೆಗೆ ಮಾತ್ರ ಅವಕಾಶ

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದ ಲಾಕ್‍ಡೌನ್ ಮುಕ್ತವಾಗಲಿದ್ದು, ಸೆಪ್ಟೆಂಬರ್ 07 ರಿಂದ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ ಅಂತ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

    ಕೊರೊನಾ ಹರಡುವ ಭೀತಿಯಿಂದ ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವೇಶವನ್ನ ಬಂದ್ ಮಾಡಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಲಾಕ್‍ಡೌನ್ ಆದೇಶ ಮಾಡಿತ್ತು. ಸದ್ಯ ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾಕ್‍ಡೌನ್ ಅನ್‍ಲಾಕ್ ಮಾರ್ಗಸೂಚಿ 4.0 ಬಿಡುಗಡೆ ನಂತರ ಜಿಲ್ಲಾಡಳಿತ ನಂದಿಬೆಟ್ಟಕ್ಕೆ ಹೇರಲಾಗಿದ್ದ ಲಾಕ್‍ಡೌನ್ ತೆರವುಗೊಳಿಸಿದೆ. ಇದೇ ತಿಂಗಳ 7ರಿಂದ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದು, ಪ್ರತಿದಿನ ಬೆಳಗ್ಗೆ 8ರಿಂದ ಸಂಜೆ 5ಗಂಟೆಯವರೆಗೆ ಮಾತ್ರ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಿ ಸಮಯ ನಿಗದಿ ಮಾಡಿದೆ.

    ಮುಂದಿನ ಸೋಮವಾರದಿಂದ ಪ್ರವಾಸಿಗರಿಗೆ ನಂದಿಬೆಟ್ಟ ಪ್ರವೇಶಕ್ಕೆ ಅವಕಾಶ ಸಿಗುತ್ತಿದ್ದು, ಸಾಕಷ್ಟು ಪ್ರವಾಸಿಗರು ನಂದಿಬೆಟ್ಟಕ್ಕೆ ಆಗಮಿಸುವ ಸಾಧ್ಯತೆಯಿದೆ. ಕೊರೊನಾ ಸೋಂಕಿನ ಆತಂಕದಿಂದ ಮನೆಯಲ್ಲಿದ್ದ ಜನರಿಗೆ ನಂದಿಬೆಟ್ಟದ ಪ್ರಾಕೃತಿಕ ಸೊಬಗು ಸೌಂದರ್ಯ ಸವಿಯುವ ಅವಕಾಶ ಸಿಗುತ್ತಿರೋದು ಸಂತಸ ತಂದಿದೆ.

    ಮಾಸ್ಕ್ ಧರಿಸದಿದ್ರೆ ದಂಡ:
    ನಂದಿಬೆಟ್ಟಕ್ಕೆ ಬರೋ ಪ್ರವಾಸಿಗರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸಿದವರಿಗೆ ಮಾತ್ರ ನಂದಿಬೆಟ್ಟಕ್ಕೆ ಪ್ರವೇಶ ನೀಡಲಾಗುವುದು ಅಂತ ನಂದಿಗಿರಿಧಾಮ ವಿಶೇಷಾಧಿಕಾರಿ ಗೋಪಾಲ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ನಂದಿಬೆಟ್ಟದ ತಪ್ಪಲು ಚೆಕ್‍ಪೋಸ್ಟ್ ಬಳಿಯೇ ಮಾಸ್ಕ್ ಧರಿಸಿರುವ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿ ನಂತರ ಪ್ರವಾಸಿಗರಿಗೆ ನಂದಿಗಿರಿಧಾಮಕ್ಕೆ ಪ್ರವೇಶ ನೀಡಲಾಗುವುದು. ಒಂದು ವೇಳೆ ಪ್ರವೇಶದ ವೇಳೆ ಮಾಸ್ಕ್ ಧರಿಸಿ ತದನಂತರ ಬೆಟ್ಟದ ಮೇಲೆ ಬಂದು ಮಾಸ್ಕ್ ಧರಿಸದೆ ಓಡಾಡಿ ನಿರ್ಲಕ್ಷ್ಯವಹಿಸಿದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

    ಮಾಸ್ಕ್ ಕಡ್ಡಾಯದ ಜೊತೆಗೆ ಸಾಮಾಜಿಕ ಅಂತರ ಸಹ ಕಾಯ್ದುಕೊಳ್ಳಬೇಕಿದೆ. ಕುಟುಂಬಸ್ಥರು ಹಾಗೂ ಸ್ನೇಹಿತರು ಗುಂಪುಗೂಡಿದರೂ ಸಾಮಾಜಿಕ ಅಂತರದ ಕಡೆ ಗಮನ ಹರಿಸಬೇಕು. ಅನಾವಶ್ಯಕವಾಗಿ ಗುಂಪುಗೂಡಬಾರದು, ಕೊರೊನಾ ಹರಡದಂತೆ ಮುಂಜಾಗ್ರತೆ ವಹಿಸಬೇಕು ಎಂದು ಗೋಪಾಲ್ ಮನವಿ ಮಾಡಿದ್ದಾರೆ. ಇದರ ಜೊತೆಗೆ ನಂದಿಗಿರಿಧಾಮದಲ್ಲಿ ಈಗಾಗಲೇ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದ್ದು, ಪ್ಲಾಸ್ಟಿಕ್ ನೀರಿನ ಬಾಟಲ್ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನ ಪ್ರವಾಸಿಗರು ತರಬಾರದು ಎಂದು ತಿಳಿಸಿದ್ದಾರೆ.

    ಪ್ರವಾಸಿಗರಿಗೆ ಕುಡಿಯುವ ನೀರು ಓದಗಿಸುವ ಸಲುವಾಗಿ ಆರ್‍ಓ ಪ್ಲಾಂಟ್‍ಗಳನ್ನ ಅಳವಡಿಸಲಾಗುತ್ತಿದೆ. 5 ತಿಂಗಳ ನಂತರ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ಪುನಾರರಂಭವಾಗಲಿದ್ದು, ಪ್ರವಾಸಿಗರು ನಂದಿಬೆಟ್ಟಕ್ಕೆ ಕಾಲಿಡೋಕೆ ತುದಿಗಾಲಲ್ಲಿ ಕಾತುರದಿಂದ ಕಾಯುತ್ತಿದ್ದಾರೆ. ರಾತ್ರಿ ಹಾಗೂ ಬೆಳ್ಳಂಬೆಳಗ್ಗೆಯೇ ಪ್ರವಾಸಿಗರು ಬಂದು ಕಾಯುವುದು ಬೇಡ. 8 ಗಂಟೆಯ ನಂತರ ಪ್ರವಾಸಿಗರು ಬಂದು ನಂದಿಬೆಟ್ಟದ ಸೊಬಗನ್ನ ಸವಿಯುವಂತೆ ಡಿಸಿ ಆರ್.ಲತಾ ಮನವಿ ಮಾಡಿದ್ದಾರೆ. ಒಂದು ವಾರ ಹಾಗೂ 15 ದಿನಗಳ ಕಾಲ ಪ್ರವಾಸಿಗರ ಸಂಖ್ಯೆಯನ್ನ ಅವಲೋಕಿಸಿ ಮುಂದಿನ ದಿನಗಳಲ್ಲಿ ಬೆಳಗ್ಗೆ ಇನ್ನೂ ಬೇಗ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡುವ ಬಗ್ಗೆ ತೀರ್ಮಾನಿಸಲಾಗುವುದು

  • ಸ್ಮಶಾನವಿಲ್ಲದೆ ಜನ ಕಂಗಾಲು- ಅಂತ್ಯಸಂಸ್ಕಾರಕ್ಕೆ ಹೊಳೆ ದಾಟಿ ದೇಹ ಕೊಂಡೊಯ್ಯಬೇಕು

    ಸ್ಮಶಾನವಿಲ್ಲದೆ ಜನ ಕಂಗಾಲು- ಅಂತ್ಯಸಂಸ್ಕಾರಕ್ಕೆ ಹೊಳೆ ದಾಟಿ ದೇಹ ಕೊಂಡೊಯ್ಯಬೇಕು

    – ಜನರ ಕಷ್ಟ ನೋಡಿಯೂ ಕಣ್ಮುಚ್ಚಿ ಕುಳಿತ ಅಧಿಕಾರಿಗಳು, ಜನಪ್ರತಿನಿಧಿಗಳು

    ಚಾಮರಾಜನಗರ: ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಶವಸಂಸ್ಕಾರಕ್ಕೆ ಸ್ಮಶಾನ ಇಲ್ಲ. ಅಂತ್ಯ ಸಂಸ್ಕಾರ ಮಾಡಬೇಕೆಂದರೆ ಶವ ಹೊತ್ತು ನದಿ ದಾಟಿ, ಅಲ್ಲಿರುವ ಜಮೀನುಗಳಲ್ಲೇ ಹೆಣ ಹೂಳಬೇಕು. ಇದು ಇಂದು ನಿನ್ನೆಯ ಸಮಸ್ಯೆಯಲ್ಲ ವರ್ಷಗಟ್ಟಲೆ ಗ್ರಾಮಸ್ಥರು ಪಡುತ್ತಿರುವ ಕಷ್ಟ.

    ಜಿಲ್ಲೆಯ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಇಂತಹ ಗಂಭೀರ ಸಮಸ್ಯೆ ಇದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ನದಿ ದಾಟಲು ಇತ್ತೀಚೆಗೆ ಗ್ರಾಮಸ್ಥರೇ ಮರದ ಹಲಗೆಗಳ ಸೇತುವೆ ನಿರ್ಮಿಸಿಕೊಂಡಿದ್ದಾರೆ. ಹೆಣ ಹೊರುವವರು ಜೀವ ಕೈಯಲ್ಲಿ ಹಿಡಿದು ಈ ಹಲಗೆಗಳ ಸೇತುವೆ ಮೇಲೆ ಸಾಗಬೇಕು ಶವ ಹೊತ್ತೊಯ್ಯುವಾಗ ಸ್ವಲ್ಪ ಯಾಮಾರಿದರು ಅಪಾಯ ತಪ್ಪಿದ್ದಲ್ಲ.

    ಗ್ರಾಮದ ಸರ್ವೇ ನಂಬರ್ 887 ಹಾಗೂ 888/1 ರಲ್ಲಿ ವಿವಿಧ ಸಮುದಾಯಗಳ ಸ್ಮಶಾನಕ್ಕೆ 7 ಎಕರೆ 16 ಗುಂಟೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಆದರೆ ಕೆಲ ಖಾಸಗಿ ವ್ಯಕ್ತಿಗಳು ಇದು ತಮಗೆ ಸೇರಬೇಕೆಂದು ನ್ಯಾಯಾಲಯ ಮೆಟ್ಟಿಲೇರಿದ್ದು, ವಿಚಾರಣೆ ನಡೆಯುತ್ತಿದೆ. ಆದರೆ ನ್ಯಾಯಾಲಯಕ್ಕೆ ಸಮರ್ಪಕ ದಾಖಲೆಗಳನ್ನು ಒದಗಿಸಿ ತ್ವರಿತಗತಿಯಲ್ಲಿ ವಿವಾದ ಬಗೆಹರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇದರ ಪರಿಣಾಮ ಶವಸಂಸ್ಕಾರಕ್ಕೆ ಜಾಗವಿಲ್ಲದೆ ಗ್ರಾಮಸ್ಥರು ಶವ ಹೊತ್ತು ನದಿದಾಟಲು ಹೆಣಗಾಟ ನಡೆಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮೂಲತಃ ಇದೇ ಗ್ರಾಮದವರು. ಇವರೂ ಈ ಸಮಸ್ಯೆಗೆ ಮುಕ್ತಿ ಕಾಣಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.

  • ಕೊರೊನಾ ಹಿನ್ನೆಲೆ ಕೋಲಾರದಲ್ಲಿ ಗಲ್ಲಿ ಗಣೇಶ ನಿಷೇಧ: ಡಿಸಿ ಸತ್ಯಭಾಮ

    ಕೊರೊನಾ ಹಿನ್ನೆಲೆ ಕೋಲಾರದಲ್ಲಿ ಗಲ್ಲಿ ಗಣೇಶ ನಿಷೇಧ: ಡಿಸಿ ಸತ್ಯಭಾಮ

    – ಮನೆಗಳಲ್ಲಿ ಅರಶಿಣ, ಗೋಧಿ ಹಿಟ್ಟಿನಿಂದ ಗಣೇಶ ತಯಾರಿಸಿ
    – ಸರಳ, ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆ

    ಕೋಲಾರ: ಕೊರೊನಾ ಹಿನ್ನೆಲೆ ಈ ಬಾರಿ ಸಾರ್ವಜನಿಕವಾಗಿ ಬೀದಿಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡಲು ಅವಕಾಶವಿಲ್ಲವೆಂದು ಜಿಲ್ಲಾಧಿಕಾರಿ ಸತ್ಯಭಾಮ ತಿಳಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಸಂಕಷ್ಟದ ಹಿನ್ನೆಲೆ ಗಣೇಶ ಹಬ್ಬವನ್ನು ಆಡಂಬರದಿಂದ ಆಚರಣೆ ಮಾಡದೆ, ಸರಳವಾಗಿ ಮತ್ತು ಭಕ್ತಿ-ಭಾವದಿಂದ ಆಚರಣೆ ಮಾಡುವಂತೆ ಜನರಲ್ಲಿ ಮನವಿ ಮಾಡಿದರು.

    ಈ ಹಿಂದೆ ಗಣೇಶ ಮೂರ್ತಿಗಳನ್ನು ಗಲ್ಲಿಗಳಲ್ಲಿ ಪ್ರತಿಷ್ಟಾಪನೆ ಮಾಡುವ ಜೊತೆಗೆ ಸಾರ್ವಜನಿಕವಾಗಿ ವಿಸರ್ಜನೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಎಲ್ಲೆಡೆ ಜನರನ್ನು ಬೆಂಬಿಡದೆ ಕಾಡುತ್ತಿರುವುದರಿಂದ ಗಣೇಶ ಮೂರ್ತಿಗಳನ್ನು ಸಾರ್ವಜನಿಕವಾಗಿ ಪ್ರತಿಷ್ಟಾಪನೆ ಮಾಡಲು ಮತ್ತು ವಿಸರ್ಜನೆ ಮಾಡಲು ಅವಕಾಶವಿಲ್ಲ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮನೆಗಳಲ್ಲಿ ಮಾಡಿಕೊಂಡು ಪೂಜೆ ಮಾಡಿ, ಬಳಿಕ ವಿಸರ್ಜನೆ ಮಾಡುವಂತೆ ಸೂಚಿಸಿದರು.

    ಮಾರುಕಟ್ಟೆಗಳಲ್ಲಿ ಪಿಒಪಿ ಗಣಪತಿಗಳ ಮಾರಾಟಕ್ಕೂ ಅವಕಾಶವಿಲ್ಲ, ಒಂದು ವೇಳೆ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಎಲ್ಲರೂ ಮನೆಗಳಲ್ಲಿ ಅರಿಶಿನ ಪುಡಿ ಮತ್ತು ಗೋದಿ ಹಿಟ್ಟಿನಿಂದ ಗಣೇಶನ ವಿಗ್ರಹಗಳನ್ನು ತಯಾರಿಸಿ ರೋಗಮುಕ್ತರಾಗುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ ರೆಡ್ಡಿ ಸೇರಿದಂತೆ ಪರಿಸರ ನಿಯಂತ್ರಣ ಅಧಿಕಾರಿಗಳು ಉಪಸ್ಥಿತರಿದ್ದರು.

  • ಐಷಾರಾಮಿ ಸೌಲಭ್ಯ ತಳ್ಳಿಹಾಕಿ ಸರ್ಕಾರಿ ಆಸ್ಪತ್ರೆಯಲ್ಲಿ ಡಿಸಿ ಪತ್ನಿಗೆ ಹೆರಿಗೆ

    ಐಷಾರಾಮಿ ಸೌಲಭ್ಯ ತಳ್ಳಿಹಾಕಿ ಸರ್ಕಾರಿ ಆಸ್ಪತ್ರೆಯಲ್ಲಿ ಡಿಸಿ ಪತ್ನಿಗೆ ಹೆರಿಗೆ

    ಗದಗ: ಕೊರೊನಾ ಮಧ್ಯೆಯೂ ಐಷಾರಾಮಿ ಸವಲತ್ತುಗಳನ್ನು ಬದಿಗೆ ತಳ್ಳಿ ಪತ್ನಿಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವ ಮೂಲಕ ಗದಗ ಜಿಲ್ಲಾಧಿಕಾರಿ ಸುಂದರೇಶ್ ಬಾಬು ಸರಳತೆ ಮೆರೆದಿದ್ದಾರೆ.

    ನಗರದ ಕೆಸಿ ರಾಣಿ ರಸ್ತೆಯ ದುಂಡಪ್ಪ, ಮಾನ್ವಿ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದಾರೆ. ಡಿಸಿ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ.

    ಸರ್ಕಾರಿ ಆಸ್ಪತ್ರೆ ಅಂದರೆ ಮೂಗು ಮುರಿಯುವ ಜನರಿಗೆ ಸರ್ಕಾರಿ ವೈದ್ಯರ ಮೇಲೆ ನಂಬಿಕೆ ಇಟ್ಟು ತಮ್ಮ ಪತ್ನಿಗೆ ಹೆರಿಗೆ ಮಾಡಿಸಿದ ಡಿಸಿ ಇತರರಿಗೆ ಮಾದರಿಯಾಗಿದ್ದಾರೆ. ಸರಳತೆ ಮೆರೆದ ಡಿಸಿ ನಡೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳ ಸಹವಾಸವೇ ಬೇಡ ಅನ್ನೋರು ಜಾಸ್ತಿ ಜನರಿದ್ದಾರೆ. ಆದರೆ ಸರ್ಕಾರಿ ವೈದ್ಯರ ಮೇಲಿನ ನಂಬಿಕೆಯಿಂದ ಡಿಸಿ ಒಳ್ಳೆಯ ನಿರ್ಧಾರಕ್ಕೆ ಬಂದಿದ್ದು, ವೈದ್ಯರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

  • ಪ್ರವಾಹ ನಿಯಂತ್ರಣ ಕಾರ್ಯಗಳಿಗೆ 5 ಕೋಟಿ ರೂ. ಬಿಡುಗಡೆ – ಧಾರವಾಡ ಡಿಸಿ

    ಪ್ರವಾಹ ನಿಯಂತ್ರಣ ಕಾರ್ಯಗಳಿಗೆ 5 ಕೋಟಿ ರೂ. ಬಿಡುಗಡೆ – ಧಾರವಾಡ ಡಿಸಿ

    ಧಾರವಾಡ: ಅತಿವೃಷ್ಟಿಯಿಂದ ಧಾರವಾಡ ಜಿಲ್ಲೆಯ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳಗಳು ಉಕ್ಕಿ ಹರಿದು ನೆರೆಹಾವಳಿ ಎದುರಿಸುವ ನವಲಗುಂದ ತಾಲೂಕಿನ ವಿವಿಧ ಹಳ್ಳಿಗಳು ಮತ್ತು ನಾಲೆಗಳ ಪ್ರದೇಶಗಳಿಗೆ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ್ ಭೇಟಿ ಪರಿಶೀಲಿಸಿದರು.

    ಯಮನೂರು ಗ್ರಾಮದ ಬಳಿ ಬೆಣ್ಣೆಹಳ್ಳದಿಂದ ಉಂಟಾಗುವ ಪರಿಸ್ಥಿತಿ, ಅಮರಗೋಳ ಗ್ರಾಮದ ಬಳಿಯ ನರಗುಂದ ಸೇತುವೆ, ಗೊಬ್ಬರಗುಂಪಿ, ಅಳಗವಾಡಿ, ಹೆಬ್ಬಾಳ, ಜಾವೂರ, ಹನಸಿ, ಶಿರಕೋಳ ಗ್ರಾಮಗಳ ಸುತ್ತಮುತ್ತಲಿನ ಕೃಷಿ ಭೂಮಿ ಮತ್ತು ಹಳ್ಳ, ಕೊಳ್ಳಗಳನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು. ಹನಸಿ – ಶಿರಕೋಳ ಮಧ್ಯೆ ತುಪ್ಪರಿಹಳ್ಳದ ಹರಿವಿನಿಂದ ಹಾನಿಗೀಡಾಗಿರುವ ರಸ್ತೆಯನ್ನು ನೋಡಿ ದುರಸ್ತಿಗೆ ಅನುದಾನ ಲಭ್ಯವಿದ್ದು ಕೂಡಲೇ ಒದಗಿಸುವದಾಗಿ ಹೇಳಿದರು.

    ಪ್ರವಾಹ ನಿಯಂತ್ರಣ ಮತ್ತು ಪರಿಹಾರ ಕಾರ್ಯಗಳಿಗೆ 5 ಕೋಟಿ ರೂ.ಬಿಡುಗಡೆಯಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸೂಚನೆಗಳನ್ನು ನೀಡಲಾಗಿದೆ. ಅತಿವೃಷ್ಟಿ ಬಾಧಿತವಾಗುವ ಜಿಲ್ಲೆಯ 83 ಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರವಾಹ ಎದುರಾದರೆ ಜನರ ಸ್ಥಳಾಂತರಕ್ಕೆ ಪರಿಹಾರ ಕೇಂದ್ರಗಳನ್ನು ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

  • ಶಿವಮೊಗ್ಗದಲ್ಲಿ ಮಕ್ಕಳಿಲ್ಲದೆ ಸ್ವಾತಂತ್ರ್ಯೋತ್ಸವ ಆಚರಣೆಗೆ ಸಿದ್ಧತೆ

    ಶಿವಮೊಗ್ಗದಲ್ಲಿ ಮಕ್ಕಳಿಲ್ಲದೆ ಸ್ವಾತಂತ್ರ್ಯೋತ್ಸವ ಆಚರಣೆಗೆ ಸಿದ್ಧತೆ

    – ಮಕ್ಕಳ ಬದಲಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಾರ್ಯಕ್ರಮ
    – ಸ್ವಾತಂತ್ರ್ಯ ಹೋರಾಟಗಾರರಿಗೆ ಆಹ್ವಾನವಿಲ್ಲ
    – ಸರ್ಕಾರದ ಮಾರ್ಗಸೂಚಿಯಂತೆ ಆಯೋಜನೆ

    ಶಿವಮೊಗ್ಗ: ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಿದ್ಧತೆ ಮಾಡುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ಡಿಎಆರ್ ಪೆರೇಡ್ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆದರೆ ಈ ಬಾರಿ ಶಾಲಾ ಮಕ್ಕಳು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಸೀಮಿತ ಸಂಖ್ಯೆಯಲ್ಲಿ ಮಾತ್ರ ಸಾರ್ವಜನಿಕರು ಭಾಗವಹಿಸಲು ಅವಕಾಶವಿದ್ದು, ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನರ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಿರಬೇಕು. ಸಮಾರಂಭದ ಕೊನೆಯಲ್ಲಿ ಶಾಲಾ ಮಕ್ಕಳ ಬದಲಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಲು ಕ್ರಮ ಕೈಗೊಳ್ಳಬೇಕು. ಸಮಾರಂಭದಲ್ಲಿ ವೈದ್ಯರು, ನರ್ಸ್‍ಗಳು, ಆಶಾ ಕಾರ್ಯಕರ್ತರು, ಪೌರ ಕಾರ್ಮಿಕರು ಸೇರಿದಂತೆ ಆಯ್ದ ಕೊರೊನಾ ವಾರಿಯರ್ಸ್‍ಗಳನ್ನು ಗೌರವಿಸಲಾಗುವುದು.

    ಈ ಬಾರಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಸಮಾರಂಭಕ್ಕೆ ಆಹ್ವಾನಿಸಲಾಗುವುದಿಲ್ಲ. ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ತೆರಳಿ ಅವರನ್ನು ಸನ್ಮಾನಿಸಿ ಗೌರವಿಸಲು ವ್ಯವಸ್ಥೆ ಮಾಡಬಹುದಾಗಿದೆ. ಉಳಿದಂತೆ ಪ್ರತಿ ವರ್ಷದಂತೆ ಸಂಭ್ರಮದಿಂದ ಸ್ವಾತಂತ್ರ್ಯೋತ್ಸವ ಆಯೋಜಿಸಬೇಕು. ಎಲ್ಲ ಪ್ರಮುಖ ವೃತ್ತಗಳನ್ನು ಹಾಗೂ ಸರ್ಕಾರಿ ಕಚೇರಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

  • ಕೊರೊನಾ ವಾರಿಯರ್ಸ್‍ಗೆ ಕೊಲೆ ಬೆದರಿಕೆ- ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಡಿಸಿ ಸೂಚನೆ

    ಕೊರೊನಾ ವಾರಿಯರ್ಸ್‍ಗೆ ಕೊಲೆ ಬೆದರಿಕೆ- ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಡಿಸಿ ಸೂಚನೆ

    ಚಾಮರಾಜನಗರ: ಕಂಟೈನ್ಮೆಂಟ್ ಝೋನ್‍ಗೆ ಬಂದರೆ ಮಚ್ಚು, ಲಾಂಗ್ ತರುತ್ತೇವೆ ಎಂದು ಕೊರೊನಾ ವಾರಿಯರ್ಸ್ ಗೆ ಜೀವ ಬೆದರಿಕೆ ಹಾಕಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.

    ಕೊಲೆ ಬೆದರಿಕೆ ಹಾಕುಲಾಗುತ್ತಿದೆ ರಕ್ಷಣೆ ಬೇಕು ಎಂದು ನರ್ಸ್ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಗುಂಡ್ಲುಪೇಟೆಯಲ್ಲಿ ನಡೆದ ಪುನಶ್ಚೇತನ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಕೊರೊನಾ ವಾರಿಯರ್ಸ್ ಗೆ ತೊಂದರೆಯಾದರೆ ಜಿಲ್ಲಾಡಳಿತ ಸುಮ್ಮನೆ ಕೂರುವುದಿಲ್ಲ, ಜೀವದ ಹಂತು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಅವರಗೆ ಬೆದರಿಕೆ ಹಾಕಿದರೆ ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

    ವಿಪತ್ತು ನಿರ್ವಹಣೆ ಸೆಕ್ಷನ್ 51ರ ಅಡಿ ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಈ ಮೂಲಕ ಕೊರೊನಾ ವಾರಿಯರ್ಸ್ ರಕ್ಷಣೆಗೆ ಮುಂದಾಗಿದ್ದಾರೆ. ಕೊರೊನಾ ವಾರಿಯರ್ಸ್‍ಗಳ ಮೇಲೆ ಹಲ್ಲೆ ಹಾಗೂ ಜೀವ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆ ಈ ಕ್ರಮ ಕೈಗೊಂಡಿದ್ದಾರೆ.

  • ಕೊರೊನಾ ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸನ್ನದ್ಧ: ಶಿವಮೊಗ್ಗ ಡಿಸಿ

    ಕೊರೊನಾ ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸನ್ನದ್ಧ: ಶಿವಮೊಗ್ಗ ಡಿಸಿ

    ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೋವಿಡ್ ಬೆಡ್‍ಗಳು ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಸಜ್ಜುಗೊಳಿಸಿದ್ದು, ಜನರು ಗಾಬರಿಯಾಗುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.

    ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದೂವರೆಗೆ 27,029 ಜನರ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದೆ. 24,899 ನೆಗೆಟಿವ್ ವರದಿ ಬಂದಿದ್ದು, 1727 ಪಾಸಿಟಿವ್ ಕಂಡು ಬಂದಿದೆ. ಇವರ ಪೈಕಿ 925 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. 771 ಮಂದಿ ಮಾತ್ರ ವಿವಿಧ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದ್ದು, ಪ್ರತಿ ದಿನ 950 ಜನರ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದಾಗಿ ಪಾಸಿಟಿವ್ ಪ್ರಕರಣಗಳಲ್ಲಿ ಹೆಚ್ಚಳ ಉಂಟಾಗಿದೆ ಎಂದು ಹೇಳಿದರು.

    ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗ ಲಕ್ಷಣವಿರುವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಸ್ತುತ 233 ಮಂದಿ ಇದ್ದಾರೆ. ವಿವಿಧ ಕಡೆಗಳಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ 436 ಮಂದಿ ಇದ್ದಾರೆ. 550 ಬೆಡ್ ಉಪಯೋಗಕ್ಕೆ ಸಿದ್ಧವಾಗಿದ್ದು, ಇನ್ನೂ 400 ಬೆಡ್‍ಗಳು ಸಜ್ಜುಗೊಳಿಸಲಾಗುತ್ತಿದೆ. ಪ್ರಸ್ತುತ 37 ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ 300 ಬೆಡ್‍ಗಳ ಸೌಲಭ್ಯ ಸಿದ್ಧವಿದೆ ಎಂದರು.

    ಸಾಂದರ್ಭಿಕ ಚಿತ್ರ

    ಪ್ರಸ್ತುತ 28 ವೆಂಟಿಲೇಟರ್‍ಗಳು ಮೆಗ್ಗಾನ್‍ನಲ್ಲಿ ಲಭ್ಯವಿದ್ದು, ಇನ್ನೂ 37 ವೆಂಟಿಲೇಟರ್‍ಗಳು ಒಂದು ವಾರದ ಒಳಗಾಗಿ ಲಭ್ಯವಾಗಲಿವೆ. ಹೆಚ್ಚುತ್ತಿರುವ ಕೊರೊನಾ ಪಾಸಿಟಿವ್ ಪ್ರಕರಣಗಳಿಗೆ ತಕ್ಕಂತೆ ಮೂಲ ಸೌಲಭ್ಯಗಳನ್ನು ಕೂಡ ಹೆಚ್ಚಿಸಲಾಗುತ್ತಿದೆ. ರೋಗ ಲಕ್ಷಣವಿಲ್ಲದ ಪಾಸಿಟಿವ್ ವ್ಯಕ್ತಿಗಳಿಗೆ ಮನೆಯಲ್ಲಿ ಐಸೋಲೇಷ್‍ಗೆ ವ್ಯವಸ್ಥೆ ಇದ್ದರೆ ಅನುಮತಿ ನೀಡಲಾಗುತ್ತಿದೆ. ಅಂತಹ ವ್ಯಕ್ತಿಗಳನ್ನು ಆರಂಭದಲ್ಲಿ ಮೆಗ್ಗಾನ್‍ಗೆ ಕರೆ ತಂದು ಎದೆ ಎಕ್ಸ್ ರೇ, ರಕ್ತ ಪರೀಕ್ಷೆ ಇತ್ಯಾದಿ ಕಡ್ಡಾಯ ತಪಾಸಣೆಗಳನ್ನು ಮಾಡಲಾಗುವುದು. ಆ ಬಳಿಕ ವೈದ್ಯರ ತಂಡ ಮನೆಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದ ಬಳಿಕ ಅಂಬುಲೆನ್ಸ್ ಮೂಲಕ ಮನೆಗೆ 24 ಗಂಟೆಯೊಳಗಾಗಿ ಕರೆ ತರಲಾಗುವುದು. ಹೋಂ ಕ್ವಾರೆಂಟೈನ್‍ನಲ್ಲಿ ಇರುವವರನ್ನು ತಪಾಸಣೆ ನಡೆಸಲು ಪ್ರಸ್ತುತ ಶಿವಮೊಗ್ಗ ನಗರದಲ್ಲಿ 5 ತಂಡಗಳನ್ನು ರಚಿಸಲಾಗಿದೆ ಎಂದರು.

    ಜನರು ಸಹ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಜನರ ಸಹಕಾರದಿಂದ ಮಾತ್ರ ಕೊರೊನಾ ಹರಡುವುದನ್ನು ನಿಯಂತ್ರಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.