ದುಬೈ: ಐಪಿಎಲ್ 2020ರ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಬೆಂಗಳೂರು ರಾಯಲ್ಸ್ ತಂಡದ ಇಂದಿನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 197 ರನ್ ಗಳ ಸ್ಪಧಾತ್ಮಕ ಮೊತ್ತದ ಗುರಿಯನ್ನು ಪಡೆದುಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭಿಕರಾದ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಸ್ಫೋಟಕ ಆರಂಭ ನೀಡಿದರು. ಬೌಂಡರಿ, ಸಿಕ್ಸರ್ ಗಳೊಂದಿಗೆ ಬೌಲರ್ ಗಳನ್ನು ದಂಡಿಸಿದ ಈ ಜೋಡಿ ಪವರ್ ಪ್ಲೇ ಅಂತ್ಯಕ್ಕೆ ಬರೋಬ್ಬರಿ 63 ರನ್ ಗಳಿಸಿತ್ತು. ಇದರಲ್ಲಿ 5 ಬೌಂಡರಿ, 2 ಸಿಕ್ಸರ್ ಗಳೊಂದಿಗೆ ಪೃಥ್ವಿ ಶಾ 22 ಎಸೆತಗಳಲ್ಲಿ 42 ರನ್ ಗಳಿಸಿದ್ದರು. ಧವನ್ 14 ಎಸೆತಗಳಲ್ಲಿ 2 ಬೌಂಡರಿಗಳೊಂದಿಗೆ 20 ರನ್ ಕಾಣಿಕೆ ನೀಡಿದ್ದರು.

ಮೊದಲ 6 ಓವರ್ ಗಳಲ್ಲಿ 63 ರನ್ ಜೊತೆಯಾಟ ನೀಡಿದ್ದ ಧವನ್-ಶಾ ಜೋಡಿ ಟೂರ್ನಿಯಲ್ಲಿ 2ನೇ ಅತ್ಯಧಿಕ ಪವರ್ ಪ್ಲೇ ಸ್ಕೋರ್ ದಾಖಲಿಸಿತು. ಇದಕ್ಕೂ ಮುನ್ನ ರಾಜಸ್ಥಾನ ತಂಡ ಪವರ್ ಪ್ಲೇನಲ್ಲಿ 69 ರನ್ ಗಳಿಸಿತ್ತು.
ಬಿರುಸಿನ ಬ್ಯಾಟಿಂಗ್‍ನೊಂದಿಗೆ ಮುನ್ನುತ್ತಿದ್ದ ಪೃಥ್ವಿ ಶಾ ವೇಗಕ್ಕೆ ಸಿರಾಜ್ ಬ್ರೇಕ್ ಹಾಕಲು ಯಶಸ್ವಿಯಾದರು. 23 ಎಸೆತಗಳಲ್ಲಿ 42 ರನ್ ಗಳಿಸಿದ್ದ ಪೃಥ್ವಿ ಶಾ, ಸಿರಾಜ್ ಬೌಲಿಂಗ್‍ನಲ್ಲಿ ಎಬಿಡಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಬಂದ ಡೆಲ್ಲಿ ನಾಯಕ ಅಯ್ಯರ್ ಧವನ್‍ರೊಂದಿಗೆ ಕೂಡಿ ತಾಳ್ಮೆಯ ಆಟದೊಂದಿಗೆ ತಂಡದ ಮೊತ್ತವನ್ನು ಹೆಚ್ಚಿಸಲು ಪ್ರಯತ್ನಿಸಿದರು. ತಂಡ 82 ರನ್ ಗಳಿಸಿದ್ದ ಸಂದರ್ಭದಲ್ಲಿ ಬೌಲಿಂಗ್ ದಾಳಿಗೆ ಇಳಿದ ಉದಾನ 28 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 32 ರನ್ ಗಳಿಸಿದ್ದ ಧವನ್ ವಿಕೆಟ್ ಪಡೆದು ತಂಡಕ್ಕೆ 2ನೇ ಯಶಸ್ಸು ತಂದುಕೊಟ್ಟರು. 10 ಓವರ್ ಅಂತ್ಯದ ವೇಳೆಗೆ ಡೆಲ್ಲಿ 2 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿತ್ತು.

ಪಡಿಕ್ಕಲ್ ಸೂಪರ್ ಕ್ಯಾಚ್: ಡೆಲ್ಲಿ ಬ್ಯಾಟಿಂಗ್ ವೇಗಕ್ಕೆ ಕಡಿವಾಣ ಹಾಕಲು ನಿರ್ಧರಿಸಿ ಕ್ಯಾಪ್ಟನ್ ಕೊಹ್ಲಿ 12ನೇ ಓವರಿನಲ್ಲಿ ಮೊಯಿನ್ ಅಲಿಗೆ ಬೌಲಿಂಗ್ ನೀಡಿದ್ದರು. ಈ ಓವರಿನ 3ನೇ ಎಸೆತದಲ್ಲಿ ಭಾರೀ ಹೊಡೆತಕ್ಕೆ ಕೈ ಹಾಕಿದ ಅಯ್ಯರ್‍ರನ್ನು ಬೌಂಡರಿ ಲೈನ್‍ನಲ್ಲಿ ಪಡಿಕ್ಕಲ್ ಅದ್ಭುತ ಕ್ಯಾಚ್ ಪಡೆದು ಔಟ್ ಮಾಡಿದರು.
ಸ್ಟೋಯ್ನಿಸ್ ಫಿಫ್ಟಿ: ಬಳಿಕ ಬಂದ ಸ್ಟೋಯ್ನಿಸ್, ರಿಷಬ್ ಪಂತ್‍ಗೆ ಸಾಥ್ ನೀಡಿ ಬಿರುಸಿನ ಆಟಕ್ಕೆ ಮುಂದಾದರು. 14ನೇ ಓವರ್ ಅಂತ್ಯಕ್ಕೆ ಡೆಲ್ಲಿ 3 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿತ್ತು. 15ನೇ ಓವರ್ ನಲ್ಲಿ ದಾಳಿಗಿಳಿದ ಸೈನಿ ಬೌಲಿಂಗ್‍ನಲ್ಲಿ ಸ್ಟೋಯ್ನಿಸ್ ಲಾಗ್‍ಆನ್‍ನಲ್ಲಿ ಕ್ಯಾಚ್ ನೀಡಿದ್ದರು. ಆದರೆ ಚಹಲ್, ಸ್ಟೋಯ್ನಿಸ್‍ಗೆ ಜೀವದಾನ ನೀಡಿದರು. ಸ್ಲಾಗ್ ಓವರ್ ನಲ್ಲಿ ರನ್ ನೀಡುವುದನ್ನು ನಿಯಂತ್ರಿಸಲು ಮತ್ತೆ ವಿಫಲವಾದ ಆರ್ ಸಿಬಿ ಬೌಲರ್ ಗಳು ದುಬಾರಿಯಾಗಿ ಪರಿಣಮಿಸಿದರು.
ಮೊದಲ ಎಸೆತದಿಂದಲೂ ಚೆಂಡನ್ನು ಬೌಂಡರಿಗೆ ಅಟ್ಟಬೇಕು ಎಂದು ಪವರ್ ಫುಲ್ ಹೊಡೆತಗಳಿಗೆ ಮುಂದಾದ ಸ್ಟೋಯ್ನಿಸ್ 3 ಬೌಂಡರಿ, 2 ಸಿಕ್ಸರ್ ಗಳೊಂದಿಗೆ 25 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದರು. 18 ಓವರ್ ಗಳ ಅಂತ್ಯಕ್ಕೆ ಡೆಲ್ಲಿ 171 ರನ್ ಪೇರಿಸಿತ್ತು. ಈ ಹಂತದಲ್ಲಿ ಭಾರೀ ಹೊಡೆತಕ್ಕೆ ಮುಂದಾದ ಪಂತ್, ಸಿರಾಜ್ ಬೌಲಿಂಗ್‍ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಅಂತಿಮ 5 ಓವರ್ ಗಳಲ್ಲಿ ಡೆಲ್ಲಿ ತಂಡದ ಆಟಗಾರರು 79 ರನ್ ಗಳಿಸಿ ಆರ್‍ಸಿಬಿಗೆ ಭಾರೀ ಮೊತ್ತದ ಗುರಿಯನ್ನೇ ನೀಡಿದರು. ಸ್ಟೋಯ್ನಿಸ್ 53 ರನ್, ಹೆಟ್ಮಾಯರ್ 11 ರನ್ ಗಳಿಸಿ ಅಜೇಯರಾಗಿ ಉಳಿದರು.

ಆರ್.ಸಿ.ಬಿ ಪರ ಸಿರಾಜ್ ಮೂರು ವಿಕೆಟ್ ಪಡೆದರೆ, ಉದಾನ ಮತ್ತು ಅಲಿ 1 ವಿಕೆಟ್ ಪಡೆದರು. ಸೈನಿ 3 ಓವರ್ ಬೌಲ್ ಮಾಡಿ 48 ರನ್ ಬಿಟ್ಟುಕೊಡುವುದರೊಂದಿಗೆ ದುಬಾರಿಯಾಗಿ ಪರಿಣಮಿಸಿದರು.
ಪಂದ್ಯದ ಆರಂಭಕ್ಕೂ ಮುನ್ನವೇ ಗಾಯದ ಸಮಸ್ಯೆಯಿಂದ ಅಮಿತ್ ಮಿಶ್ರಾ ಅಲಭ್ಯರಾದರು. ಈ ಹಿನ್ನೆಲೆಯಲ್ಲಿ ರವಿಚಂದ್ರನ್ ಅಶ್ವಿನ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದರು. ಇತ್ತ ಪಂದ್ಯದಲ್ಲಿ ಡೆಲ್ಲಿ ತಂಡದ ಹೊಸ ಜರ್ಸಿಯೊಂದಿಗೆ ಕಣಕ್ಕೆ ಇಳಿದಿತ್ತು.