Tag: DC

  • ಮೈಸೂರಿನ ಪ್ರವಾಸಿ ಸ್ಥಳಗಳಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ- ರೋಹಿಣಿ ಸಿಂಧೂರಿ

    ಮೈಸೂರಿನ ಪ್ರವಾಸಿ ಸ್ಥಳಗಳಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ- ರೋಹಿಣಿ ಸಿಂಧೂರಿ

    ಮೈಸೂರು: ಜಿಲ್ಲೆಯಲ್ಲಿ ಕೆಲದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಏಪ್ರಿಲ್ 10 ರಿಂದ ಕೆಲವು ಟಫ್ ರೂಲ್ಸ್ ಗಳನ್ನು ಹಾಕಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮುಂದಾಗಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿಣಿ ಸಿಂಧೂರಿ, ಈಗಾಗಲೇ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಪ್ರಾರಂಭವಾಗಿದ್ದು, ಏಪ್ರಿಲ್ 10 ರಿಂದ ಏಪ್ರಿಲ್ 20 ರವರೆಗೆ ಹಲವು ರಜೆಗಳು ಇರುವುದರಿಂದಾಗಿ ಮೈಸೂರಿಗೆ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ. ಈ ವೇಳೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಹಾಗಾಗಿ ಮೈಸೂರಲ್ಲಿ ಕೆಲವು ಟಫ್ ರೂಲ್ಸ್ ಗಳನ್ನು ಜಾರಿಗೆ ತರಲು ಮುಂದಾಗಿದ್ದೇವೆ ಎಂದರು.

    ಜಿಲ್ಲೆಯಲ್ಲಿ ಕೊರೊನಾವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಡಳಿತ ಕೆಲವು ಕ್ರಮಕ್ಕೆ ಮುಂದಾಗಿದ್ದು, ಈ ಪ್ರಕಾರ ಏಪ್ರಿಲ್ 10 ರಿಂದ ಏಪ್ರಿಲ್ 20ರ ವರೆಗೆ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ ಹೋಗಲು, ಚಿತ್ರಮಂದಿರಗಳಿಗೆ ತೆರಳಲು ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

    ನಾವು ಮೈಸೂರಿನಲ್ಲಿರುವ ಯಾವುದೇ ಪ್ರವಾಸಿತಾಣಗಳನ್ನು ಮುಚ್ಚುತಿಲ್ಲ ಬದಲಾಗಿ ಕೆಲವು ನಿಯಮಗಳನ್ನು ಜಾರಿಗೆ ತಂದಿದ್ದೇವೆ. ರಜೆಯ ಇರುವುದರಿಂದಾಗಿ ಪ್ರವಾಸಿಗರು ಬರುವ ನಿರೀಕ್ಷೆ ಇದ್ದು ಈ ಸಂದರ್ಭ ಜನ ಸಂದಣಿ ಜಾಸ್ತಿ ಇರುವ ಪ್ರದೇಶಗಳಲ್ಲಿ ನಿಗಾ ವಹಿಸಲಾಗುವುದು, ಈ ಎಲ್ಲಾ ಕಾರ್ಯಗಳಿಗಾಗಿ ಈಗಾಗಲೇ ಜಿಲ್ಲೆಯಲ್ಲಿ 300 ಹೋಂ ಗಾರ್ಡ್‍ಗಳನ್ನು ನೇಮಕ ಮಾಡಿದ್ದೇವೆ. ಮೈಸೂರಿಗೆ ಪ್ರವಾಸಕ್ಕೆ ಬರುವವರು ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ತರಬೇಕೆಂದು ಪ್ರವಾಸಿಗರಿಗೆ ಮನವಿ ಮಾಡಿಕೊಂಡರು.

    ಅದೇ ರೀತಿ ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಸಭೆ ಸಮಾರಂಭಗಳಿಗೆ ಪೊಲೀಸ್ ಇಲಾಖೆಯಿಂದ ಒಪ್ಪಿಗೆ ಪಡೆದುಕೊಂಡು ಸಮಾರಂಭಗಳನ್ನು ನಡೆಸಬೇಕೆಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಂಡರು.

  • ನಮ್ಮ ಹಳ್ಳಿಗೆ ಬಾರ್ ಬೇಡ – ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗೆ ಮನವಿ

    ನಮ್ಮ ಹಳ್ಳಿಗೆ ಬಾರ್ ಬೇಡ – ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗೆ ಮನವಿ

    ಚಿಕ್ಕಮಗಳೂರು: ತಾಲೂಕಿನ ಉದ್ದೇಬೋರನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯದಂಗಡಿ ತೆರೆಯಲು ಪ್ರಯತ್ನಿಸುತ್ತಿದ್ದಾರೆ. ದಯವಿಟ್ಟು ನಮ್ಮ ಹಳ್ಳಿಗೆ ಬಾರ್ ಬೇಡ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

    ಉದ್ದೇಬೋರನಹಳ್ಳಿ ಸುತ್ತಮುತ್ತಲಿನ ಸುಮಾರು 10ಕ್ಕೂ ಹೆಚ್ಚು ಗ್ರಾಮಗಳಿಗೆ ಉದ್ದೇಬೋರನಹಳ್ಳಿಯೇ ಕೇಂದ್ರ ಸ್ಥಳವಾಗಿದೆ. ಅಂಚೆ ಕಛೇರಿ, ಬ್ಯಾಂಕ್, ಆಸ್ಪತ್ರೆ, ನ್ಯಾಯಬೆಲೆ, ಪಶು ವೈದ್ಯಶಾಲೆ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿದಂತೆ ವಿವಿಧ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿದಿನ ನೂರಾರು ಜನ, ಮಹಿಳೆಯರು, ವಿದ್ಯಾರ್ಥಿಗಳು ಶಾಲಾ-ಕಾಲೇಜು, ವ್ಯವಹಾರಕ್ಕೆ ಉದ್ದೇಬೋರನಹಳ್ಳಿಗೆ ಆಗಮಿಸುತ್ತಾರೆ. ಗ್ರಾಮದಲ್ಲಿ ಮದ್ಯದಂಗಡಿ ತೆರೆಯುವುದರಿಂದ ನಾನಾ ರೀತಿ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಮದ್ಯದ ಅಂಗಡಿಗೆ ಅನುಮತಿ ನೀಡಬಾರದೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

    ಸದ್ಯಕ್ಕೆ ಗ್ರಾಮದಲ್ಲಿ ನೆಮ್ಮದಿ ಇದೆ. ಬಾರ್ ಓಪನ್ ಆಗುವುದರಿಂದ ತೊಂದರೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಸ್ಥಳಿಯರು ಗ್ರಾಮದ ನಿವೇಶನದಲ್ಲಿ ಗ್ರಾಮ ಪಂಚಾಯಿತಿಯಿಂದ ಅನುಮತಿಯನ್ನೂ ಪಡೆಯದೇ ಶೆಡ್ ನಿರ್ಮಿಸುತ್ತಿದ್ದಾರೆ. ಇದು ಮದ್ಯದ ಅಂಗಡಿ ತೆರೆಯಲು ಎಂದು ತಿಳಿದು ಬಂದಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

    ಈ ಹಿಂದೆ ಕೂಡ ಗ್ರಾಮದಲ್ಲಿ ಮದ್ಯದ ಅಂಗಡಿ ಇತ್ತು. ಸ್ಥಳಿಯರು ಹೋರಾಟ ಮಾಡಿ ಬೇರೆಡೆಗೆ ಸ್ಥಳಾಂತರಿಸಿದ್ದರು. ಈಗ ಮತ್ತೆ ಬಾರ್ ಪ್ರಾರಂಭಿಸಲು ಹೊರಟಿರುವುದು ಸ್ಥಳಿಯರ ಆತಂಕಕ್ಕೆ ಕಾರಣವಾಗಿದೆ. ಬಾರ್ ಅಥವಾ ಯಾವುದೇ ರೀತಿಯ ಮದ್ಯದಂಗಡಿ ಪ್ರಾರಂಭಿಸಿದರೆ ಸ್ತ್ರೀ ಶಕ್ತಿ ಸೇರಿದಂತೆ ವಿವಿಧ ಸಂಘಟನೆಗಳು ಮತ್ತು ಗ್ರಾಮಸ್ಥರು ಉಗ್ರ ಪ್ರತಿಭಟನೆಗೆ ಮುಂದಾಗುವುದಾಗಿ ತಿಳಿಸಿದ್ದಾರೆ.

  • 2ನೇ ಡೋಸ್ ಲಸಿಕೆ ಪಡೆದು 27 ದಿನ- ಚಾಮರಾಜನಗರ ಡಿಸಿಗೆ ಕೊರೊನಾ ದೃಢ

    2ನೇ ಡೋಸ್ ಲಸಿಕೆ ಪಡೆದು 27 ದಿನ- ಚಾಮರಾಜನಗರ ಡಿಸಿಗೆ ಕೊರೊನಾ ದೃಢ

    ಚಾಮರಾಜಕನಗರ: ಕೋವಿಶೀಲ್ಡ್ 2ನೇ ಡೋಸ್ ಲಸಿಕೆ ಪಡೆದು 27 ದಿನ ಕಳೆದ ಬಳಿಕವೂ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿದೆ.

    ಜಿಲ್ಲಾಧಿಕಾರಿಗೆ ಎರಡು ದಿನಗಳ ಹಿಂದೆ ನೆಗಡಿ, ಗಂಟಲು ನೋವು ಕಾಣಿಸಿಕೊಂಡಿದ್ದರಿಂದ ಶನಿವಾರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗಿತ್ತು. ಭಾನುವಾರ ಫಲಿತಾಂಶ ಬಂದಿದ್ದು, ಪಾಸಿಟಿವ್ ದೃಢಪಟ್ಟಿದೆ. ಸದ್ಯ ಅವರು ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ಖಚಿತ ಪಡಿಸಿದ್ದಾರೆ.

    ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಫೆ.8ರಂದು ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದಿದ್ದರು. ಮಾ.8ರಂದು ಎರಡನೇ ಡೋಸ್ ಲಸಿಕೆ ಸಹ ಪಡೆದಿದ್ದರು. ಕೋವಿಶೀಲ್ಡ್‍ನ ಎರಡನೇ ಡೋಸ್ ಪಡೆದು 27 ದಿನಗಳಾಗಿದೆ.

  • ಥಿಯೇಟರ್, ಬಸ್, ರೆಸ್ಟೋರೆಂಟ್‍ಗಳ ಮೇಲೆ ನಿಗಾ, ನಿಯಮ ಪಾಲನೆ ಕಡ್ಡಾಯ: ಡಿಸಿ

    ಥಿಯೇಟರ್, ಬಸ್, ರೆಸ್ಟೋರೆಂಟ್‍ಗಳ ಮೇಲೆ ನಿಗಾ, ನಿಯಮ ಪಾಲನೆ ಕಡ್ಡಾಯ: ಡಿಸಿ

    – ಚಿತ್ರಮಂದಿರ, ರೆಸ್ಟೋರೆಂಟ್‍ಗಳಲ್ಲಿ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ
    – ಸೋಂಕು ಪತ್ತೆಯಾದ ಎರಡು ಕಾಲೇಜುಗಳು ಬಂದ್
    – ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮ

    ಧಾರವಾಡ: ಸರ್ಕಾರದ ಮಾರ್ಗಸೂಚಿ ಅನ್ವಯ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಚಿತ್ರ ಮಂದಿರಗಳಲ್ಲಿ ಶೇ.50ಕ್ಕೂ ಹೆಚ್ಚು ಜನರಿಗೆ ಅವಕಾಶವಿಲ್ಲ. ನಿಯಮ ಮೀರಿ ಹೆಚ್ಚು ಜನ ಹತ್ತುವ ಬಸ್ ಸೇರಿದಂತೆ ಇತರೆ ವಾಹನಗಳನ್ನು ಸೀಸ್ ಮಾಡುತ್ತೇವೆ ಎಂದು ಜಿಲ್ಲಾಧಿಖಾರಿ ನಿತೇಶ್ ಪಾಟೀಲ್ ಎಚ್ಚರಿಸಿದರು.

    ಕೊರೊನಾ ನಿಯಮ ಜಾರಿ ಕುರಿತು ಅಧಿಕಾರಿಗಳ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜಿಮ್ ಹಾಗೂ ಸ್ವಿಮ್ಮಿಂಗ್ ಪೂಲ್ ಬಂದ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಚಿತ್ರ ಮಂದಿರಗಳಲ್ಲಿ ಸಹ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.

    ಬಸ್‍ಗಳಲ್ಲಿ ಹೆಚ್ಚಿನ ಜನ ಪ್ರಯಾಣಿಸಿದರೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಹೆಚ್ಚಿನ ಜನ ಹತ್ತಿಸಿಕೊಂಡ ವಾಹನವನ್ನು ಸೀಸ್ ಮಾಡುತ್ತೇವೆ. ಅಂಗಡಿಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲು ಸೂಚನೆ ನೀಡಲಾಗಿದ್ದು, ಜಿಲ್ಲೆಯಲ್ಲಿ ಜಾತ್ರೆ ಹಾಗೂ ಮೆರವಣಿಗೆ ಮಾಡುವಂತಿಲ್ಲ. ವಸತಿ ನಿಲಯ, ಶಾಲೆ, ಬೋರ್ಡಿಂಗ್ ಶಾಲೆಗಳಲ್ಲಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು.

    ಜಿಲ್ಲೆಯ ಪಬ್ ಹಾಗೂ ರೆಸ್ಟೋರೆಂಟ್‍ಗಳು ನಿಯಮ ಪಾಲಿಸದಿದ್ದಲ್ಲಿ ಅಂತಹವುಗಳನ್ನು ಬಂದ್ ಮಾಡಲಾಗುವುದು. ರೆಸ್ಟೋರೆಂಟ್‍ಗಳಲ್ಲಿ 50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಗೊತ್ತಾಗದೆ ಜಿಲ್ಲೆಯ ಕೆಲ ಶಾಲೆಗಳಿಗೆ ಬಂದಿದ್ದರು. ವಾಪಸ್ ಮನೆಗೆ ಕಳುಹಿಸಲಾಗಿದೆ ಎಂದರು.

    ಜಿಲ್ಲೆಯ ಎರಡು ಕಾಲೇಜುಗಳಲ್ಲಿ ಮಾತ್ರ ಕೋವಿಡ್ ಪಾಸಿಟಿವ್ ಬಂದಿವೆ. ಅವರು ಸ್ವಯಂ ಪ್ರೇರಿತವಾಗಿ ಕಾಲೇಜಿಗೆ ರಜೆ ಘೋಷಣೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ 1.21 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಕೋವಿಡ್ ಸೋಂಕು ತಗುಲಿದರೆ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

  • ನಾನು ದಲಿತ ನಾಯಕ, ದಂಡ ಹಾಕ್ತೀರಾ – ಪತ್ನಿಗೆ ದಂಡ ಹಾಕಿದ್ದಕ್ಕೆ ಡಿಸಿಗೆ ವ್ಯಕ್ತಿ ಅವಾಜ್

    ನಾನು ದಲಿತ ನಾಯಕ, ದಂಡ ಹಾಕ್ತೀರಾ – ಪತ್ನಿಗೆ ದಂಡ ಹಾಕಿದ್ದಕ್ಕೆ ಡಿಸಿಗೆ ವ್ಯಕ್ತಿ ಅವಾಜ್

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆ ತೀವ್ರಗೊಳ್ಳುತ್ತಿದ್ದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಜಾರಿಗೆ ಮುಂದಾಗಿದೆ. ಜಿಲ್ಲೆಯಲ್ಲಿ ಮಾಸ್ಕ್ ಧರಿಸದೇ ಓಡಾಡುವವರಿಗೆ ಸ್ಥಳದಲ್ಲಿಯೇ ದಂಡ ವಿಧಿಸಿ ಬಿಸಿ ಮುಟ್ಟಿಸುತ್ತಿದೆ.

    ಸ್ವತಃ ಡಿಸಿ ನಿತೇಶ್ ಪಾಟೀಲ್ ನೇತೃತ್ವದಲ್ಲಿ ಅಧಿಕಾರಿಗಳು ದಂಡ ಕಾರ್ಯಾಚರಣೆಗೆ ಇಳಿದಿದ್ದು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ.

    ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಜನನಿಬಿಡ ಪ್ರದೇಶಗಳಿಗೆ ಭೇಟಿ ನೀಡಿ ಮಾಸ್ಕ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹುಬ್ಬಳ್ಳಿಯ ಅರ್ಬನ್ ಓಯಾಸಿಸ್ ಮಾಲ್‍ಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳನ್ನು ಕಂಡು ಮಾಸ್ಕ್ ಧರಿಸದ ಜನರು ಅಲ್ಲಿಂದ ಪರಾರಿಯಾಗಲು ಯತ್ನಿಸಿದರು. ಈ ವೇಳೆ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ದಂಡ ವಿಧಿಸಲು ಮುಂದಾದ ಅಧಿಕಾರಿಗಳ ಜೊತೆ ವಾಗ್ವಾದಕ್ಕೆ ಇಳಿದು ಜಗಳ ಮಾಡಿದ ಘಟನೆ ನಡೆದಿದೆ.

    ಸಾಮಾನ್ಯ ಜನರಿಗೆ ದಂಡ ವಿಧಿಸುತ್ತೀರಾ? ಅದೇ ರೀತಿ ನಿಮ್ಮ ಪತ್ನಿಗೂ ದಂಡ ಹಾಕುವ ತಾಕತ್ತು ನಿಮಗೆ ಇದ್ಯಾ ಎಂದು ಡಿಸಿ ಸಮ್ಮುಖದಲ್ಲೇ ಅಧಿಕಾರಿಗಳ ಜೊತೆ ವಾಗ್ದಾದ ನಡೆಸಿದರು. ಇದರಿಂದ ಸಿಟ್ಟಾದ ಅಧಿಕಾರಿಗಳು ವ್ಯಕ್ತಿಯನ್ನು ತಡೆದು ಮಹಿಳೆ ಮಾಸ್ಕ್ ಧರಿಸದಿರುವುದಕ್ಕೆ ದಂಡ ಕಟ್ಟಲೇಬೇಕು. ಇಲ್ಲದಿದ್ದರೇ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

    ಈ ವೇಳೆ ಪೊಲೀಸ್ ಸಿಬ್ಬಂದಿ ಜೊತೆ ವಾಗ್ವಾದಕ್ಕೆ ಇಳಿದ ವ್ಯಕ್ತಿ ನಾನು ದಲಿತ ನಾಯಕ, ಸುಮ್ಮನೆ ಬಿಡುವುದಿಲ್ಲ ಎಂದು ಅಧಿಕಾರಿಗಳಿಗೆ ಅವಾಜ್ ಹಾಕಿದರು. ಇದರಿಂದ ಸಿಟ್ಟಾದ ಡಿಸಿ ಹಾಗೂ ತಹಶೀಲ್ದಾರ್ ಸೇರಿದಂತೆ ಉಳಿದ ಸಿಬ್ಬಂದಿ ಸ್ಥಳದಲ್ಲೇ ದಂಡ ಕಟ್ಟಿ ಎಂದು ಎಚ್ಚರಿಕೆ ನೀಡಿದರು.

    ಆಗ ನನ್ನ ಬಳಿ 150 ರೂಪಾಯಿ ಮಾತ್ರ ಇದೆ ಎಂದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಅಧಿಕಾರಿಗಳು 250 ರೂಪಾಯಿ ದಂಡ ಕಟ್ಟಿಸಿಕೊಂಡು ಸ್ಥಳದಲ್ಲೇ ಬಿಸಿ ಮುಟ್ಟಿಸಿದ್ದಾರೆ.

  • ಸ್ಫೋಟಕ್ಕೆ ಸಂಚು ರೂಪಿಸಿದ್ದ ಕ್ರಷರ್‌ಗೆ ಜಿಲ್ಲಾಡಳಿತ ದಾಳಿ – ನಾಲ್ವರ ಬಂಧನ

    ಸ್ಫೋಟಕ್ಕೆ ಸಂಚು ರೂಪಿಸಿದ್ದ ಕ್ರಷರ್‌ಗೆ ಜಿಲ್ಲಾಡಳಿತ ದಾಳಿ – ನಾಲ್ವರ ಬಂಧನ

    ಕೋಲಾರ: ರಾಜ್ಯದಲ್ಲಿ ನಡೆದ ಅಕ್ರಮ ಜಿಲೆಟಿನ್ ಸ್ಫೋಟ ಪ್ರಕರಣಗಳ ನಂತರ ಎಚ್ಚೆತ್ತಿರುವ ಗಣಿ ಇಲಾಖೆ ರಾಜ್ಯದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಮೇಲೆ ಹದ್ದಿನ ಕಣ್ಣಿಟ್ಟಿದೆ. ಪರಿಣಾಮ ಇಂದು ಜಿಲ್ಲೆಯಲ್ಲಿ ಅಕ್ರಮವಾಗಿ ಬ್ಲಾಸ್ಟಿಂಗ್ ಮಾಡಲು ಮುಂದಾಗಿದ್ದವರ ಮೇಲೆ ಜಿಲ್ಲಾಡಳಿತ ದಾಳಿ ಮಾಡಿ ನಾಲ್ವರನ್ನು ಬಂಧಿಸಿದೆ.

    ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಆನಿಮಿಟ್ಟನಹಳ್ಳಿ ಗ್ರಾಮದ ಬಳಿ. ಜಿಲ್ಲಾಪಂಚಾಯತ್ ಸದಸ್ಯೆ ಗೀತಾ ಅವರ ಪತಿ ವೆಂಕಟೇಶ್ ಗೌಡ ಎಂಬವರ ಒಡೆತನದ ವೆಂಕಟೇಶ್ವರ ಸ್ಟೋನ್ ಕ್ರಷರ್ ನಲ್ಲಿ ಅಕ್ರಮವಾಗಿ ಬ್ಲಾಸ್ಟಿಂಗ್ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜಿಲ್ಲಾಧಿಕಾರಿಗಳ ತಂಡ ದಾಳಿ ಮಾಡಿದಾಗ ಬ್ಲಾಸ್ಟಿಂಗ್ ಮಾಡಲು ಬಂಡೆಗಳಲ್ಲಿ ಸುಮಾರು 70 ಹೋಲ್‍ಗಳನ್ನು ಮಾಡಿ ಅದರಲ್ಲಿ ಜಿಲೆಟಿನ್ ಹಾಗೂ ಮೋನಿಯನ್ ತುಂಬಿರುವುದು ಕಂಡುಬಂದಿದೆ. ದಾಳಿ ವೇಳೆ ಜಿಲ್ಲಾಧಿಕಾರಿಗಳ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಕ್ರಷರ್ ಮಾಲೀಕ ವೆಂಕಟೇಶ್ ಗೌಡ ತಲೆಮರೆಸಿಕೊಂಡಿದ್ದಾರೆ.

    ರಾಜ್ಯದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದ ಜಿಲೆಟಿನ್ ಸ್ಫೋಟ ಪ್ರಕರಣದ ನಂತರ ಕಲ್ಲುಗಣಿಗಾರಿಕೆ ಸ್ಫೋಟಕ್ಕೂ ಮೊದಲು ಡೈರೆಕ್ಟರ್ ಜನರಲ್ ಮತ್ತು ಮೈನ್ಸ್ ಸೇಪ್ಟಿ ಇಲಾಖೆಯಿಂದ ಅನುಮತಿ ಪಡೆಯಬೇಕು, ಬ್ಲಾಸ್ಟಿಂಗ್ ಮಾಡುವ ಮೊದಲು ಅಗತ್ಯ ತಾಂತ್ರಿಕ ಸಿಬ್ಬಂದಿ ನೇಮಕ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಹಾಗಾಗಿ ಅನುಮತಿ ಪಡೆಯುವವರೆಗೂ ಜಿಲ್ಲೆಯಲ್ಲಿ ಬ್ಲಾಸ್ಟಿಂಗ್ ಮಾಡದಂತೆ ಜಿಲ್ಲಾಡಳಿತ ಜಿಲ್ಲೆಯ ಎಲ್ಲಾ ಗಣಿಮಾಲೀಕರಿಗೂ ನೋಟೀಸ್ ನೀಡಿತ್ತು.

    ಆದರೆ ಜಿಲ್ಲೆಯ ಆನಿಮಿಟ್ಟನಹಳ್ಳಿ ವೆಂಕಟೇಶ್ವರ ಸ್ಟೋನ್ ಕ್ರಷರ್‌ ನಲ್ಲಿ ಈ ನಿಯಮವನ್ನು ಗಾಳಿಗೆ ತೂರಿ ಬ್ಲಾಸ್ಟಿಂಗ್ ಮಾಡಲು ಮುಂದಾಗಿತ್ತು. ಈ ವೇಳೆ ದಾಳಿ ಮಾಡಿದ ಜಿಲ್ಲಾಧಿಕಾರಿ ಸೆಲ್ವಮಣಿ ಹಾಗೂ ಎಸ್ಪಿ ಕಾರ್ತಿಕ್ ರೆಡ್ಡಿ ಮತ್ತು ತಂಡ ನಾಲ್ವರನ್ನು ಬಂಧಿಸಿ ಅಕ್ರಮ ಸ್ಫೋಟಕ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದಾರೆ.

  • ಚಿಕ್ಕಬಳ್ಳಾಪುರ ಎಸ್‍ಪಿ, ಡಿಸಿಗೆ ಡಿಕೆಶಿ ಖಡಕ್ ವಾರ್ನಿಂಗ್

    ಚಿಕ್ಕಬಳ್ಳಾಪುರ ಎಸ್‍ಪಿ, ಡಿಸಿಗೆ ಡಿಕೆಶಿ ಖಡಕ್ ವಾರ್ನಿಂಗ್

    ಚಿಕ್ಕಬಳ್ಳಾಪುರ: ನಮ್ಮ ಕಾರ್ಯಕರ್ತರಿಗೆ ಕಿರುಕುಳ ಕೊಟ್ಟರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ- ನಾನು ಬಂದು ಧರಣಿ ಮಾಡುತ್ತೇವೆ. ನಿಮ್ಮ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಸ್‍ಪಿ ಹಾಗೂ ಜಿಲ್ಲಾಧಿಕಾರಿಗೆ ಎಚ್ಚರಿಸಿದರು.

    ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಜನಧ್ವನಿ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಇಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜನಧ್ವನಿ ಯಾತ್ರೆ ನಡೆಯಿತು. ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಕಂದವಾರ ಕೆರೆಗೆ ಬಾಗಿನ ಅರ್ಪಿಸಿದರು. ನಂತರ ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿ ರೋಡ್ ಶೋ ಹಾಗೂ ಕಾಲ್ನಿಡಿಗೆ ಮೂಲಕ ಶಿಡ್ಲಘಟ್ಟ ವೃತ್ತಕ್ಕೆ ಬಂದ ಕಾಂಗ್ರೆಸ್ ನಾಯಕರು ಶಿಡ್ಲಘಟ್ಟ ವೃತ್ತದಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ಕಾರ್ಯಕರ್ತರೊಬ್ಬರು ನನಗೆ ದೂರು ಕೊಟ್ಟಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರ ಕಿರುಕುಳ ಜಾಸ್ತಿ ಆಗಿದೆಯಂತೆ. ನಮ್ಮ ಕಾರ್ಯಕರ್ತರಿಗೆ ಕಿರುಕುಳ ಕೊಟ್ಟರೆ ಸಿದ್ದರಾಮಯ್ಯ- ನಾನು ಬಂದು ಧರಣಿ ಮಾಡುತ್ತೇವೆ. ನಿಮ್ಮ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ವಾರ್ನ್ ಮಾಡಿದರು. ಇದೇ ವೇಳೆ ನಿನ್ನೆ ಇದ್ದ ಮಂತ್ರಿ ಇಂದು ಇಲ್ಲ ಇವತ್ತು ಇರೋರು ನಾಳೆ ಇರಲ್ಲ. ಸರ್ಕಾರಗಳೇ ಉರುಳಿ ಹೋಗುತ್ತವೆ. ಸೂರ್ಯ ಹುಟ್ಟಿ ಮುಳುಗಿ ಹೋಗುತ್ತಾನೆ, ಹೀಗಾಗಿ ನಿಮ್ಮ ತಪ್ಪು ತಿದ್ದಿಕೊಳ್ಳಿ ಎಂದು ಡಿಕೆಶಿ ಎಚ್ಚರಿಸಿದರು.

    ನಾಳೆ ವಿಧಾನಸಭೆ ಅಧಿವೇಶನ ಇದ್ದು, ಇಂದು ಯಾಕೆ ಜನಧ್ವನಿ ಯಾತ್ರೆ ಆರಂಭ ಮಾಡಬೇಕಿತ್ತು ಎಂದು ಹಲವರು ಕೇಳುತ್ತಿದ್ದಾರೆ. ಈ ದಿನ ಬುದ್ಧ, ಬಸವಣ್ಣನವರು ಮನೆ ಬಿಟ್ಟ ಗಳಿಗೆ. ಏಸು ಕ್ರಿಸ್ತ ಶಿಲುಬೆಗೆ ಏರಿದ, ಭೀಮಾಭಾಯಿಯವರು ಅಂಬೇಡ್ಕರ್ ಗೆ ಜನ್ಮ ಕೊಟ್ಟ, ಗಾಂಧೀಜಿ ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡ, ಸೋನಿಯಾ ಗಾಂಧಿಯವರು ದೇಶದ ಅರ್ಥಿಕತೆಗಾಗಿ ಪ್ರಧಾನಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದಂತಹ ಗಳಿಗೆಯಲ್ಲಿ ನಾವೆಲ್ಲ ಸೇರಿದ್ದೇವೆ. ಈ ಪವಿತ್ರ ಗಳಿಗೆಯಲ್ಲಿ ಜನಧ್ವನಿ ಯಾತ್ರೆ ಆರಂಭ ಮಾಡಿದ್ದೇವೆ ಎಂದು ತಿಳಿಸಿದರು.

  • ಫೆಬ್ರವರಿ 20ರಂದು ಕುಂಚಾವರಂನಲ್ಲಿ ಕಲಬುರಗಿ ಡಿಸಿ ಗ್ರಾಮ ವಾಸ್ತವ್ಯ

    ಫೆಬ್ರವರಿ 20ರಂದು ಕುಂಚಾವರಂನಲ್ಲಿ ಕಲಬುರಗಿ ಡಿಸಿ ಗ್ರಾಮ ವಾಸ್ತವ್ಯ

    ಕಲಬುರಗಿ: ಗ್ರಾಮೀಣ ಜನರ ಹತ್ತು-ಹಲವಾರು ಕುಂದುಕೊರತೆಗಳನ್ನು ಸ್ಥಳದಲ್ಲಿಯೇ ಪರಿಹಾರ ನೀಡಲು ರಾಜ್ಯ ಸರ್ಕಾರದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ ಪರಿಕಲ್ಪನೆಯಡಿ ಕಲಬುರಗಿ ಜಿಲ್ಲಾಧಿಕಾರಿ ವಿ.ವಿ ಜ್ಯೋತ್ಸ್ನಾ ಅವರು ಇದೇ ಫೆಬ್ರವರಿ 20 ಶನಿವಾರ ಚಿಂಚೋಳಿ ತಾಲೂಕಿನ ಕುಂಚಾವರಂ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

    ಅಂದು ಜಿಲ್ಲಾಧಿಕಾರಿಗಳು ಬೆಳಗ್ಗೆ 10ರಿಂದ ಸಾಯಂಕಾಲ 5 ಗಂಟೆಯವರೆಗೆ ಗ್ರಾಮದಲ್ಲಿಯೇ ಇದ್ದು, ಗ್ರಾಮದ ಜನರ ಅಳಲನ್ನು ಆಲಿಸಲಿದ್ದಾರೆ. ಜಿಲ್ಲಾಧಿಕಾರಿಗಳೊಂದಿಗೆ ಸೇಡಂ ಸಹಾಯಕ ಆಯುಕ್ತರು, ಚಿಂಚೋಳಿ ತಾಲೂಕಿನ ತಹಶೀಲ್ದಾರರು ಸೇರಿದಂತೆ ಕಂದಾಯ ಇಲಾಖೆಯ ಇತರೆ ಅಧಿಕಾರಿಗಳು ಹಾಜರಿರಲಿದ್ದು, ಅಂದು ರಾತ್ರಿ ಗ್ರಾಮದಲ್ಲಿಯೇ ಮೊಕ್ಕಾಂ ಹೂಡಲಿದ್ದಾರೆ.

    ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಎಲ್ಲಾ ಅರ್ಹ ಬಡ ಕುಟುಂಬಗಳಿಗೆ ಬಿ.ಪಿ.ಎಲ್ ಕಾರ್ಡ್ ದೊರೆತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲಿದ್ದಾರೆ. ಗುಡಿಸಲು ರಹಿತ ವಾಸದ ಮನೆ ನಿರ್ಮಾಣ ಕುರಿತು ಕ್ರಮ ವಹಿಸಲಿದ್ದಾರೆ. ಅರ್ಹ ವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯ ದೊರೆಯುತ್ತಿರುವ ಬಗ್ಗೆ ಪರಿಶೀಲಿಸಲಿದ್ದಾರೆ. ಗ್ರಾಮದಲ್ಲಿ ಸ್ಮಶಾನಭೂಮಿ ಲಭ್ಯತೆಯ ಮತ್ತು ಆಶ್ರಯ ಯೋಜನೆಯಡಿ ಅವಶ್ಯಕತೆಯಿದ್ದಲ್ಲಿ ಲಭ್ಯ ಜಮೀನನ್ನು ಕಾಯ್ದಿರಿಸಲು ಆದೇಶಿಸಲಿದ್ದಾರೆ.

    ಗ್ರಾಮದಲ್ಲಿನ ಎಲ್ಲಾ ಪಹಣಿಯಲ್ಲಿನ ಲೋಪದೋಷಗಳು, ಪಹಣಿ ಕಾಲಂ 3 ಮತ್ತು ಆಕಾರ್ಬಂದ್ ತಾಳೆ ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು. ಎಲ್ಲಾ ಪಹಣಿಗಳಲ್ಲಿಯೂ ಕೂಡ ಕಾಲಂ ನಂ.3 ಮತ್ತು ಕಾಲಂ ನಂ.9 ತಾಳೆ ಹೊಂದುವಂತೆ ಸೂಕ್ತ ಆದೇಶಗಳನ್ನು ಜಿಲ್ಲಾಧಿಕಾರಿಗಳು ಹೊರಡಿಸಲಿದ್ದಾರೆ. ಗ್ರಾಮದಲ್ಲಿ ಪೌತಿ (ಮರಣ) ಹೊಂದಿದ ಖಾತೆದಾರರ ಹೆಸರನ್ನು ಪಹಣಿಯ ಕಾಲಂ ನಂ. 9 ತೆಗೆದು ನೈಜ ವಾರಸುದಾರರ ಹೆಸರಿಗೆ ಸೇರಿಸುವುದು, ಸರ್ಕಾರಿ ಜಮೀನು ಅಕ್ರಮ ಒತ್ತುವರಿ ತೆರವುಗೊಳಿಸುವಕ್ಕೆ ಸೂಚನೆ ನೀಡಲಿದ್ದಾರೆ. ಜಮೀನಿನ ಹದ್ದು ಬಸ್ತು, ಪೋಡಿ, ಪೋಡಿ ಮುಕ್ತ ಗ್ರಾಮ, ದರಕಾಸ್ತು ಪೋಡಿ (ನಮೂನೆ 1-5 ಮತ್ತು ನಮೂನೆ 6-10ನ್ನು ಭರ್ತಿ ಮಾಡಿ ದರಕಾಸ್ತು ಪೋಡಿ ಮಾಡುವುದು), ಕಂದಾಯ ಗ್ರಾಮಗಳ ರಚನೆ ಸೇರಿದಂತೆ ಗ್ರಾಮದಲ್ಲಿನ ಇತರೆ ಕುಂದುಕೊರತೆಗಳನ್ನು ಸಹ ಆಲಿಸಿ ಪರಿಹಾರ ಕಲ್ಪಿಸಲಿದ್ದಾರೆ.

    ಗ್ರಾಮಸ್ಥರಲ್ಲಿ ಅರಿವು: ಗ್ರಾಮ ವಾಸ್ತವ್ಯದ ಭಾಗವಾಗಿ ಆಧಾರ್ ಕಾರ್ಡ್ ಅನುಕೂಲತೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಆನ್‍ಲೈನ್ ಮುಖಾಂತರ ಪಡೆಯುವ ಬಗ್ಗೆ, ನಿರಂತರ ಮತದಾರರ ಪಟ್ಟಿ ಪರಿಷ್ಕರಣೆ, ಅತಿವೃಷ್ಠಿ-ಅನಾವೃಷ್ಠಿ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗೃತೆ ಕ್ರಮ ಸೇರಿದಂತೆ ಸರ್ಕಾರದಿಂದ ಸಾರ್ವಜನಿಕರಿಗೆ ದೊರೆಯಬಹುದಾದ ವಿವಿಧ ಇಲಾಖೆಗಳ ಸವಲತ್ತುಗಳ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಗುತ್ತದೆ.

    ಶಾಲೆ-ಅಂಗನವಾಡಿಗೂ ಭೇಟಿ: ಗ್ರಾಮದಲ್ಲಿರುವ ಸರ್ಕಾರಿ ವಸತಿ ನಿಲಯ, ಸರ್ಕಾರಿ ಶಾಲೆ ಹಾಗೂ ಅಂಗನವಾಡಿಗಳಿಗೂ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಭೇಟಿ ನೀಡಿ ಶಿಕ್ಷಣ ಬೋಧನೆ, ಆಹಾರ ಮತ್ತು ಕಲಿಕೆಯ ಗುಣಮಟ್ಟ ಪರಿಶೀಲಿಸಲಿದ್ದಾರೆ.

    ಸಾಂಸ್ಕೃತಿಕ ಸಂಜೆ: ಗ್ರಾಮ ವಾಸ್ತವ್ಯದಲ್ಲಿ ಸಂದರ್ಭದಲ್ಲಿ ಗ್ರಾಮೀಣ ಭಾಗದ ಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸಲು ಸಾಯಂಕಾಲ ಸಾಂಸ್ಕೃತಿಕ ಸಂಜೆ ಸಹ ಆಯೋಜಿಸಲಾಗಿದೆ.

    ಗ್ರಾಮ ವಾಸ್ತವ್ಯದಲ್ಲಿ ಭಾಗಿಯಾಗಲು ಡಿ.ಸಿ.ಮನವಿ: ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಜನರ ಮನೆ ಬಾಗಿಲಿಗೆ ಬರುತ್ತಿರುವುದರಿಂದ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲು ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಜಿಲ್ಲೆಯ ಆಯಾ ಗ್ರಾಮದ ಗ್ರಾಮಸ್ಥರು ತಮ್ಮ ಕುಂದುಕೊರತೆಗಳ ಪರಿಹಾರಕ್ಕೆ ಅಗತ್ಯ ದಾಖಲಾತಿಗಳೊಂದಿಗೆ ಖುದ್ದಾಗಿ ಬಂದು ಬಗೆಹರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.

    ತಹಶೀಲ್ದಾರರಿಂದಲೂ ಗ್ರಾಮ ವಾಸ್ತವ್ಯ: ಜಿಲ್ಲಾಧಿಕಾರಿಗಳು ಚಿಂಚೋಳಿ ತಾಲೂಕಿನ ಕುಂಚಾವರಂನಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದು, ಅದೇ ರೀತಿ ಮಹಾರಾಷ್ಟ್ರದ ಗಡಿಯಲ್ಲಿರುವ ಆಳಂದ ತಾಲೂಕಿನ ನಂದಗೂರ ಗ್ರಾಮದಲ್ಲಿ ಕಲಬುರಗಿ ಸಹಾಯಕ ಆಯುಕ್ತರು ಮತ್ತು ಆಳಂದ ತಹಶೀಲ್ದಾರರು ಜಂಟಿಯಾಗಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಉಳಿದಂತೆ ಸೇಡಂ ತಾಲೂಕಿನ ಗೌಡನಹಳ್ಳಿ, ಚಿತ್ತಾಪೂರ ತಾಲೂಕಿನ ಗುಂಡಗುರ್ತಿ, ಶಹಾಬಾದ ತಾಲೂಕಿನ ಅಲದಿಹಾಳ, ಕಲಬುರಗಿ ತಾಲೂಕಿನ ಅವರಾದ(ಬಿ), ಕಮಲಾಪುರ ತಾಲೂಕಿನ ಡೊಂಗರಗಾಂವ, ಕಾಳಗಿ ತಾಲೂಕಿನ ರಟಕಲ್, ಅಫಜಲಪೂರ ತಾಲೂಕಿನ ರೇವೂರ(ಬಿ), ಜೇವರ್ಗಿ ತಾಲೂಕಿನ ರಾಜವಾಳ ಹಾಗೂ ಯಡ್ರಾಮಿ ತಾಲೂಕಿನ ಮಂಗಳೂರ ಗ್ರಾಮದಲ್ಲಿ ಆಯಾ ತಾಲೂಕಿನ ತಹಶೀಲ್ದಾರರು ಸಾರ್ವಜನಿಕರ ಕುಂದುಕೊರತೆಗಳನ್ನು ಬಗೆಹರಿಸಲಿದ್ದಾರೆ.

  • ಮುಸುಕಿನ ಗುದ್ದಾಟ ಬಹಿರಂಗ – ಸಾರಾ ಹೇಳುತ್ತಿದ್ದಂತೆ ಸಭೆಯಿಂದ ತೆರಳಿದ ರೋಹಿಣಿ ಸಿಂಧೂರಿ

    ಮುಸುಕಿನ ಗುದ್ದಾಟ ಬಹಿರಂಗ – ಸಾರಾ ಹೇಳುತ್ತಿದ್ದಂತೆ ಸಭೆಯಿಂದ ತೆರಳಿದ ರೋಹಿಣಿ ಸಿಂಧೂರಿ

    ಮೈಸೂರು: ಮೊದಲ ಬಾರಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಶಾಸಕ ಸಾರಾ ಮಹೇಶ್ ಮುಖಾಮುಖಿಯಾಗಿದ್ದಾರೆ. ಆದರೆ ಮುಖಾಮುಖಿಯಾದ ಮೊದಲ ಸಭೆಯಲ್ಲೇ ಇಬ್ಬರ ಮುಸುಕಿನ ಗುದ್ದಾಟ ಬಹಿರಂಗವಾಗಿದೆ.

    ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ ವಿಧಾನಮಂಡಲ ಕಾಗದ ಪತ್ರಗಳ ಸಮಿತಿ ಸಭೆ ನಡೆಸಲಾಗಿತ್ತು. ಕಾಗದ ಪತ್ರಗಳ ಸಮಿತಿಯ ಅಧ್ಯಕ್ಷ ಸಾರಾ ಮಹೇಶ್ ಹಾಜರಿದ್ದರು. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾಧಿಕಾರಿಗೆ ಆಸನದ ವ್ಯವಸ್ಥೆ ಇರಲಿಲ್ಲ. ಆಸನದ ವ್ಯವಸ್ಥೆ ಇರದ ಕಾರಣ ಜಿಲ್ಲಾಧಿಕಾರಿ ವೇದಿಕೆ ಮುಂಭಾಗದ ಕುರ್ಚಿಯಲ್ಲಿ ಕುಳಿತರು.

    ಸಭೆಯಲ್ಲಿ ಡಿಸಿ ಮಾಸ್ಕ್ ಹಾಕಿಕೊಂಡು ಮಾತು ಆರಂಭಿಸಿದರು. ಆಗ ಸಾರಾ ಮಹೇಶ್ ಅವರು, ನಿಮ್ಮ ಮಾತು ಕೇಳುತ್ತಿಲ್ಲ. ಮಾಸ್ಕ್ ತೆಗೆದು ಮಾತನಾಡಿ ಎಂದರು. ನಾನು ಮಾಸ್ಕ್ ತೆಗೆಯವುದಿಲ್ಲ, ಮಾಸ್ಕ್ ತೆಗೆದು ಮಾತನಾಡಬಾರದು. ಅದಕ್ಕಾಗಿ ಮಾಸ್ಕ್ ತೆಗೆಯುವುದಿಲ್ಲ ಎಂದು ಡಿಸಿ, ಸಾರಾ ಮಹೇಶ್ ಗೆ ಉತ್ತರ ಕೊಟ್ಟರು. ಈ ಸಭೆಯಲ್ಲಿ ನನಗೆ ಸಂಬಂಧಿಸಿದ ವಿಷಯಗಳ ಚರ್ಚೆ ಇಲ್ಲ. ಹಾಗಾಗಿ ನೀವು ಸಮ್ಮತಿಸಿದರೆ ನಾನು ಸಭೆಯಿಂದ ಹೋಗುತ್ತೇನೆ ಎಂದು ಡಿಸಿ ಹೇಳಿದರು.

    ಈ ವೇಳೆ ಡಿಸಿ ಮಾತಿಗೆ ಉತ್ತರಿಸಿದ ಸಾರಾ ನಿಮ್ಮನ್ನು ನಾವು ಸಭೆಗೆ ಕರೆದಿರಲಿಲ್ಲ. ಆದರೂ ತಾವು ಸಭೆಗೆ ಬಂದಿದ್ದಿರಿ ಸಂತೋಷ. ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಯಾವುದೇ ಸಭೆಯ ಮಾಹಿತಿ ಕೊಡುವುದು ಕರ್ತವ್ಯ. ಅದಕ್ಕೆ ಮಾಹಿತಿ ಕೊಟ್ಟಿದ್ದೇವೆ ಅಷ್ಟೇ. ಮೈಸೂರಿಗೆ ಬಂದ ಕಾಗದ ಪತ್ರಗಳ ಸಮಿತಿಯನ್ನು ನೀವು ಸ್ವಾಗತಿಸಿಲ್ಲ. ಆದರೂ ಪರವಾಗಿಲ್ಲ. ಸಮಯ ಇದ್ರೆ ಇರಿ, ಬೇರೆ ಕೆಲಸ ಇದ್ರೆ ಹೋಗಿ ಎಂದು ಸಾರಾ ಮಹೇಶ್ ಹೇಳಿದರು. ಸಾರಾ ಈ ರೀತಿ ಹೇಳುತ್ತಿದ್ದಂತೆಯೇ ಸಭೆಯಿಂದ ತಕ್ಷಣವೇ ಡಿಸಿ ಕಾರು ಹತ್ತಿ ಬೇಸರದಿಂದ ತೆರಳಿದರು.

  • ಐಎಎಸ್ ಕನಸು ಕಾಣುತ್ತಿರುವ ಬಡ ಅಭ್ಯರ್ಥಿಗಳಿಗೆ ಯಾದಗಿರಿ ಡಿಸಿ ಪಾಠ

    ಐಎಎಸ್ ಕನಸು ಕಾಣುತ್ತಿರುವ ಬಡ ಅಭ್ಯರ್ಥಿಗಳಿಗೆ ಯಾದಗಿರಿ ಡಿಸಿ ಪಾಠ

    – ನಾನೂ ಬಡ ಕುಟುಂಬದಿಂದ ಹೆಣ್ಣುಮಗಳು
    – ಸಾಧಿಸುವ ಛಲವಿದ್ದರೆ, ಬಡತನ ಮೆಟ್ಟಿ ಸಾಧಿಸಬಹುದು

    ಯಾದಗಿರಿ: ಐಎಎಸ್, ಐಪಿಎಸ್ ಕನಸು ಹೊತ್ತಿರುವ ಬಡ ಅಭ್ಯರ್ಥಿಗಳಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಅವರು ಸ್ಫೂರ್ತಿ ತುಂಬಿದ್ದು, ಒಂದು ದಿನದ ವಿಶೇಷ ಉಪನ್ಯಾಸ ನೀಡಿದ್ದಾರೆ.

    ಜಿಲ್ಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುತ್ತಿರುವ ಯುವಕರಿಗಾಗಿ ಎ1 ಆಫಿಸರ್ಸ್ ಅಕಾಡೆಮಿ ಏರ್ಪಡಿಸಿದ್ದ ಒಂದು ತಿಂಗಳ ಉಚಿತ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಅವರು ಕೆಲಸಗಳ ಮಧ್ಯೆ ಬಿಡುವು ಮಾಡಿಕೊಂಡು, ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದ್ದಾರೆ. ಐಎಎಸ್ ಕನಸು ಕಾಣುತ್ತಿರುವ ಯಾವುದೇ ಅಭ್ಯರ್ಥಿಗಳಿಗೆ ಮಾಹಿತಿ ನೀಡಲು ನಾನು ಸದಾ ಸಿದ್ಧ. ಸಮಯ ಸಿಕ್ಕಾಗ ನಿಮ್ಮ ಜೊತೆಗೆ ಕಳೆಯುತ್ತೇನೆ ಎಂದು ಭರವಸೆ ನೀಡಿದ್ದಾರೆ.

    ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಆರ್. ವಿದ್ಯಾರ್ಥಿಗಳಿಗೆ ಐಎಎಸ್ ಪಾಸ್ ಮಾಡುವ ತಂತ್ರಗಾರಿಕೆ ಕುರಿತು ಬೋಧಿಸಿದರು. ತಮ್ಮ ಅಭ್ಯಾಸ ದಿನಗಳನ್ನು ಮೆಲುಕು ಹಾಕಿದ ಅವರು, ನಾನು ಕೂಡ ಬಡತನದ ಮನೆಯಿಂದ ಬಂದ ಹೆಣ್ಣುಮಗಳು, ಸಾಧಿಸುವ ಛಲವಿದ್ದರೆ ಬಡತನವನ್ನು ಸುಲಭವಾಗಿ ಮೆಟ್ಟಿ ನಿಲ್ಲಬಹುದು ಎಂದರು.