Tag: DC

  • ಕೋವಿಡ್ ಕೇರ್ ಸೆಂಟರ್‍ ಗೆ ಕೊಡಗು ಡಿಸಿ ದಿಢೀರ್ ಭೇಟಿ

    ಕೋವಿಡ್ ಕೇರ್ ಸೆಂಟರ್‍ ಗೆ ಕೊಡಗು ಡಿಸಿ ದಿಢೀರ್ ಭೇಟಿ

    ಮಡಿಕೇರಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರ ಬರಲು ಅತಂಕ ಪಡುತ್ತಿದ್ದಾರೆ. ಈ ನಡುವೆ ಸಾರ್ವಜನಿಕರ ಸೇವೆಗಾಗಿ ಲಭ್ಯವಿರುವ ಮಡಿಕೇರಿ ನಗರದ ಜಿಲ್ಲಾಧಿಕಾರಿ ಕಚೇರಿಗೂ ಕೊರೊನಾ ಬಿಸಿ ತಟ್ಟಿದೆ. ಕಚೇರಿಯಲ್ಲಿ ಕಾರ್ಯನಿರ್ವಾಹಿಸುವ ಐದು ಮಂದಿ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದೆ.

    ನಗರದಲ್ಲಿರುವ ಜಿಲ್ಲಾಢಳಿತ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 7 ಜನರಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಇದೀಗ ಜಿಲ್ಲಾಧಿಕಾರಿ ಸಹಿತ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇತರ ಸಿಬ್ಬಂದಿಗಳಿಗೆ ಆತಂಕ ಎದುರಾಗಿದೆ.

    ಕೊಡಗಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಇರುವ ಸರ್ಕಾರಿ ಅಸ್ಪತ್ರೆಗಳಲ್ಲಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಇಂದು ಸುಂಟಿಕೊಪ್ಪ, ಕುಶಾಲನಗರ ಮತ್ತು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಕುಶಾಲನಗರ ಮತ್ತು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಆಕ್ಸಿಜನ್ ನಿರ್ವಹಣಾ ವ್ಯವಸ್ಥೆಗಳನ್ನು ಪರಿಶೀಲಿಸಿ ಮಾಹಿತಿ ಪಡೆದರು.

    ಬಳಿಕ ಕುಶಾಲನಗರದ ಲಸಿಕಾ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಬಳಿಕ ಕೂಡಿಗೆಯ ಮೊರಾರ್ಜಿ ವಸತಿ ಶಾಲೆಯಲ್ಲಿ ತೆರೆಯಲಾಗಿರುವ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿದರು. ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕುಗಳಲ್ಲಿ ತೆರೆಯಲಾಗಿರುವ ಕೋವಿಡ್ ಕಂಟೈನ್‍ಮೆಂಟ್ ವಲಯಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಸರಿಪಡಿಸುವುದಾಗ ಭರವಸೆ ನೀಡಿದರು. ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕೊಡಗು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಜೊತೆಗಿದ್ದರು.

  • ಕೊನೆಯ ಓವರಿನಲ್ಲಿ 22 ರನ್ ಚಚ್ಚಿದ ಎಬಿಡಿ – ಬೆಂಗಳೂರಿಗೆ ರೋಚಕ 1 ರನ್ ಜಯ

    ಕೊನೆಯ ಓವರಿನಲ್ಲಿ 22 ರನ್ ಚಚ್ಚಿದ ಎಬಿಡಿ – ಬೆಂಗಳೂರಿಗೆ ರೋಚಕ 1 ರನ್ ಜಯ

    – ಹೆಟ್ಮಿಯರ್ ಸ್ಫೋಟಕ ಆಟ
    – ಅಗ್ರಸ್ಥಾನಕ್ಕೆ ಏರಿದ ಆರ್‌ಸಿಬಿ

    ಅಹಮದಾಬಾದ್: ಸೋಲುವ ಹಂತಕ್ಕೆ ಜಾರಿದ್ದ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಯ ಓವರಿನಲ್ಲಿ ಡೆಲ್ಲಿ ವಿರುದ್ಧ 1 ರನ್‍ನಿಂದ ರೋಚಕವಾಗಿ ಗೆದ್ದುಕೊಂಡಿದೆ.

    ಗೆಲ್ಲಲು 172 ರನ್‍ಗಳ ಕಠಿಣ ಗುರಿಯನ್ನು ಪಡೆದ ಡೆಲ್ಲಿ ನಾಯಕ ರಿಷಭ್ ಪಂತ್ ಮತ್ತು ಶಿಮ್ರಾನ್ ಹೆಟ್ಮಿಯರ್ ಅವರ ಅರ್ಧಶತಕದ ಹೊರತಾಗಿಯೂ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 170 ರನ್ ಹೊಡೆಯಿತು. ಈ ಮೂಲಕ ಒಟ್ಟು 10 ಅಂಕ ಸಂಪಾದಿಸಿದ ಆರ್‌ಸಿಬಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

    ಗೆದ್ದಿದ್ದು ಹೇಗೆ?
    ಡೆಲ್ಲಿ ತಂಡಕ್ಕೆ ಕೊನೆಯ 24 ಎಸೆತದಲ್ಲಿ 56 ರನ್ ಬೇಕಿತ್ತು. ಹರ್ಷಲ್ ಪಟೇಲ್ ಎಸೆದ 17ನೇ ಓವರ್‍ನಲ್ಲಿ 10 ರನ್ ಬಂದರೆ ಜೇಮಿಸನ್ ಎಸೆದ 18ನೇ ಓವರ್‍ನಲ್ಲಿ ಹೆಟ್ಮಿಯರ್ 3 ಸಿಕ್ಸರ್ ಸಿಡಿಸಿದರು. ಈ ಓವರಿನಲ್ಲಿ 21 ರನ್ ಬಂತು. ಈ ಮೂಲಕ ಪಂದ್ಯ ರೋಚಕ ಘಟಕ್ಕೆ ತಿರುಗಿತು. ಹರ್ಷಲ್ ಪಟೇಲ್‍ಎಸೆದ 19ನೇ ಓವರ್‍ನಲ್ಲಿ 11 ರನ್ ಬಂತು.

    ಕೊನೆಯ 6 ಎಸೆತಕ್ಕೆ 14 ರನ್ ಬೇಕಿತ್ತು. ಸಿರಾಜ್ ಎಸೆದ ಮೊದಲ ಎರಡು ಎಸೆತದಲ್ಲಿ ಒಂದೊಂದು ರನ್ ಓಡಿದರೆ 3ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 4ನೇ ಎಸೆತದಲ್ಲಿ 2 ರನ್ ಬಂದರೆ 5 ಮತ್ತು 6ನೇ ಎಸೆತದಲ್ಲಿ ಪಂತ್ ಬೌಂಡರಿ ಹೊಡೆದರು. ಈ ಮೂಲಕ ಬೆಂಗಳೂರು ರೋಚಕವಾಗಿ 1 ರನ್‍ಗಳಿಂದ ಗೆದ್ದುಕೊಂಡಿತು.

    ಪೃಥ್ವಿ ಶಾ 21 ರನ್, ರಿಷಭ್ ಪಂತ್ ಔಟಾಗದೇ 58 ರನ್(48 ಎಸೆತ, 6 ಬೌಂಡರಿ) ಹೆಟ್ಮಿಯರ್ ಔಟಾಗದೇ 53 ರನ್(25 ಎಸೆತ, 2 ಬೌಂಡರಿ, 4 ಸಿಕ್ಸರ್) ಹೊಡೆದು ತಂಡವನ್ನು ಜಯದತ್ತ ತಂದಿದ್ದರು.

    ಜೇಮಿಸನ್ ಎಸೆದ 15ನೇ ಓವರಿನ ಮೊದಲ ಎಸೆತವನ್ನು ಹೆಟ್ಮಿಯರ್ ಬಲವಾಗಿ ಹೊಡೆದಿದ್ದರು. ಆದರೆ ಔಟ್ ಸೈಡ್ ಆಫ್‍ನಲ್ಲಿದ್ದ ಪಡಿಕ್ಕಲ್ ಕ್ಯಾಚ್ ಕೈ ಚೆಲ್ಲಿದ್ದರು. ಈ ವೇಳೆ ಹೆಟ್ಮೆಯರ್ 15 ರನ್ ಹೊಡೆದಿದ್ದರು.

    ಎಬಿಡಿ ಸ್ಫೋಟಕ ಆಟ:
    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು 30 ರನ್ ಗಳಿಸುವಷ್ಟರಲ್ಲಿ ವಿರಾಟ್ ಕೊಹ್ಲಿ 12 ರನ್, ದೇವದತ್ ಪಡಿಕ್ಕಲ್ 17 ರನ್ ಗಳಿಸಿ ಔಟಾದರು.

    ರಜತ್ ಪಟೀದಾರ್ 31 ರನ್(22 ಎಸೆತ, 2 ಬೌಂಡರಿ) ಹೊಡೆದರೆ ಗ್ಲೇನ್ ಮ್ಯಾಕ್ಸ್ ವೆಲ್ 25 ರನ್(20 ಎಸೆತ, 1 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು.

    5 ವಿಕೆಟ್ 139 ರನ್‍ಗಳಿಸಿದ್ದಾಗ ಎಬಿಡಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸ್ಟೋಯ್ನಿಸ್ ಎಸೆದ 20ನೇ ಓವರ್‍ನಲ್ಲಿ ಎಬಿಡಿ 3 ಸಿಕ್ಸ್ ಸಿಡಿಸಿದರು ಈ ಓವರ್‍ನಲ್ಲಿ 23 ರನ್ ರನ್ ಬಂತು. ಎಬಿಡಿ 35 ಎಸೆತದಲ್ಲಿ ಅರ್ಧಶತಕ ಹೊಡೆದರೆ 42 ಎಸೆತದಲ್ಲಿ 3 ಬೌಂಡರಿ, 5ಸಿಕ್ಸರ್ ಸಿಡಿಸಿ 75 ರನ್ ಗಳಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಬೆಂಗಳೂರು 5 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು.

  • ಸೋಂಕಿತರ ಚಿಕಿತ್ಸೆ ಬಗ್ಗೆ ತಪ್ಪು ಮಾಹಿತಿ- ಶೇ.50ರಷ್ಟು ಹಾಸಿಗೆ ಮೀಸಲಿಡದ ಹುಬ್ಬಳ್ಳಿಯ 3 ಆಸ್ಪತ್ರೆಗಳಿಗೆ ನೋಟಿಸ್

    ಸೋಂಕಿತರ ಚಿಕಿತ್ಸೆ ಬಗ್ಗೆ ತಪ್ಪು ಮಾಹಿತಿ- ಶೇ.50ರಷ್ಟು ಹಾಸಿಗೆ ಮೀಸಲಿಡದ ಹುಬ್ಬಳ್ಳಿಯ 3 ಆಸ್ಪತ್ರೆಗಳಿಗೆ ನೋಟಿಸ್

    ಧಾರವಾಡ: ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಹಾಸಿಗೆಗಳ ಪೈಕಿ ಶೇ.50ರಷ್ಟನ್ನು ಕಡ್ಡಾಯವಾಗಿ ಕೋವಿಡ್ ಚಿಕಿತ್ಸೆಗಾಗಿ ಮೀಸಲಿಡಲು ಧಾರವಾಡ ಜಿಲ್ಲಾಡಳಿತ ಏಪ್ರಿಲ್ 15ರಂದು ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳ ಸಭೆ ನಡೆಸಿ ನಿರ್ದೇಶನ ನೀಡಿತ್ತು. ಆದರೆ ಆಸ್ಪತ್ರೆಗಳು ತಪ್ಪು ಮಾಹಿತಿ ನೀಡುತ್ತಿದ್ದು, 3 ಆಸ್ಪತ್ರೆಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.

    ಸರ್ಕಾರದ ಆದೇಶ ಉಲ್ಲಂಘಿಸಿರುವ ಹುಬ್ಬಳ್ಳಿಯ ಪ್ರಮುಖ ಮೂರು ಆಸ್ಪತ್ರೆಗಳಿಗೆ ಸಾಂಕ್ರಾಮಿಕ ರೋಗ ಕಾಯ್ದೆ-1987 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ-2005 ರನ್ವಯ 24 ಗಂಟೆಯಲ್ಲಿ ಉತ್ತರ ನೀಡುವಂತೆ ತಿಳಿಸಿ, ಆರೋಗ್ಯ ಇಲಾಖೆಯಿಂದ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.

    ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಹುಬ್ಬಳ್ಳಿಯ ಶಕುಂತಲಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರ ಚಿಕಿತ್ಸೆಗಾಗಿ 75 ಹಾಸಿಗೆಗಳನ್ನು ಮೀಸಲಿಡಲಾಗಿದ್ದು, 31 ಜನ ಕೋವಿಡ್ ದೃಢಪಟ್ಟವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯವರು ತಿಳಿಸಿದ್ದರು. ಅದೇ ರೀತಿ ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್‍ನಲ್ಲಿ ಕೋವಿಡ್-19 ಸೋಂಕಿತರ ಚಿಕಿತ್ಸೆಗಾಗಿ 26 ಹಾಸಿಗೆಗಳನ್ನು ಮೀಸಲಿಡಲಾಗಿದ್ದು, 26 ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದು ಆಸ್ಪತ್ರೆಯಿಂದ ಮಾಹಿತಿ ನೀಡಲಾಗಿತ್ತು. ತತ್ವದರ್ಶಾ ಆಸ್ಪತ್ರೆ 150 ಹಾಸಿಗೆಗಳಿಗೆ ಅನುಮತಿ ಪಡೆದಿದ್ದು, ಇದರಲ್ಲಿ ಶೇ.50 ರಷ್ಟು ಅಂದರೆ 75 ಹಾಸಿಗೆಗಳನ್ನು ಕೋವಿಡ್-19 ಸೋಂಕಿತರಿಗೆ ಮೀಸಲಿಡಬೇಕು.

    ತತ್ವದರ್ಶಾ ಆಸ್ಪತ್ರೆಯವರು ಕೋವಿಡ್-19 ದೃಢಪಟ್ಟ ಪ್ರಕರಣಗಳ ಲ್ಯಾಬೋರೇಟರಿ ಫಲಿತಾಂಶ ಇಲ್ಲದೆ ಕೋವಿಡ್-19 ಪ್ರಕರಣಗಳೆಂದು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುವುದು ಕಂಡು ಬಂದಿದೆ. ಈ ಮೂರು ಆಸ್ಪತ್ರೆಗಳಲ್ಲಿ ಸರ್ಕಾರದ ನಿರ್ದೇಶನದಂತೆ ಕೋವಿಡ್ ಚಿಕಿತ್ಸೆಗಾಗಿ ಸರ್ಕಾರದ ನಿರ್ದೇಶನದ ಸ್ಪಷ್ಟ ಉಲ್ಲಂಘನೆ ಕಂಡುಬಂದ ಹಿನ್ನೆಲೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

  • ಲಾಕ್‍ಡೌನ್ ವೇಳೆ ಅನಗತ್ಯ ಓಡಾಟ- ಕೋಲಾರದಲ್ಲಿ 200ಕ್ಕೂ ಹೆಚ್ಚು ಬೈಕ್ ವಶಕ್ಕೆ

    ಲಾಕ್‍ಡೌನ್ ವೇಳೆ ಅನಗತ್ಯ ಓಡಾಟ- ಕೋಲಾರದಲ್ಲಿ 200ಕ್ಕೂ ಹೆಚ್ಚು ಬೈಕ್ ವಶಕ್ಕೆ

    ಕೋಲಾರ: ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೂ ಕೆಲವರು ಅನಗತ್ಯವಾಗಿ ಸಂಚರಿಸಿದ್ದು, ಪೊಲೀಸರು ಎಲ್ಲೆಡೆ ಬಂದೋಬಸ್ತ್ ಮಾಡಿದ್ದರು. ಹೀಗಾಗಿ ವಾಹನ ಸೀಜ್ ಮಾಡುವ ಮೂಲಕ ಬಿಸಿ ಮುಟ್ಟಿಸುತ್ತಿದ್ದಾರೆ.

    ಜಿಲ್ಲೆಯ ಮಾಲೂರು ಪೊಲೀಸರು ಅನಗತ್ಯವಾಗಿ ಓಡಾಡುತ್ತಿದ್ದ ನೂರಕ್ಕೂ ಹೆಚ್ಚು ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ಕೋಲಾರ ನಗರ ಪೊಲೀಸರು 26 ಬೈಕ್ ಗಳು ಹಾಗೂ ಜಿಲ್ಲೆಯ ವಿವಿಧೆಡೆ ಒಟ್ಟು 200ಕ್ಕೂ ಹೆಚ್ಚು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಜಿಲ್ಲೆಯಲ್ಲಿ ಕರ್ಫ್ಯೂ ಜಾರಿ ಇದ್ದರೂ ಅನಗತ್ಯವಾಗಿ ಓಡಾಡುತ್ತಿದ್ದ ಬೈಕ್ ಸವಾರರಿಗೆ ಪೊಲೀಸರ ಪುಲ್ ಡ್ರಿಲ್ ನಡೆಸಿದ್ದಾರೆ.

    ಸರ್ಕಾರ ಸ್ಪಷ್ಟವಾಗಿ ಹೇಳಿದೆ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಮನೆಯಿಂದ ಹೊರಬರಬೇಕು, ಉಳಿದಂತೆ ಮನೆಯಲ್ಲಿಯೇ ಇದ್ದು, ಕೊರೊನಾ 2ನೇ ಅಲೆ ತಡೆಯುವಂತೆ ಮನವಿ ಮಾಡಲಾಗಿದೆ. ಆದರೂ ಕೆಲವರು ಸುಖಾಸುಮ್ಮನೆ ಬೈಕ್ ಗಳಲ್ಲಿ ಸಂಚರಿಸುತ್ತಿದ್ದರು, ಇಂತಹವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಬೈಕ್‍ಗಳಿಗಾಗಿ ಜನ ಪೊಲೀಸ್ ಠಾಣೆ ಎದುರು ಜಮಾಯಿಸಿದ್ದು, ಎಲ್ಲೆಡೆ ಕಂಡು ಬಂತು.

    ಡಿಸಿ, ಎಸ್‍ಪಿ ಸಿಟಿ ರೌಂಡ್ಸ್

    ಡಿಸಿ ಡಾ.ಆರ್.ಸೆಲ್ವಮಣಿ ಹಾಗೂ ಎಸ್‍ಪಿ ಕಾರ್ತಿಕ್ ರೆಡ್ಡಿ ಖುದ್ದು ನಗರ ಪ್ರದಕ್ಷಿಣೆ ಹಾಕಿ ಲಾಕ್‍ಡೌನ್ ಪರಿಶೀಲನೆ ನಡೆಸಿದರು. ನಗರದ ನಗರದ ಅಮ್ಮವಾರಿಪೇಟೆ, ಎಂಬಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚಿರಿಸಿ, ಪರಿಶೀಲನೆ ನಡೆಸಿದರು.

    ಅನ್ಯಗತ್ಯವಾಗಿ ಓಡಾಟ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಡಿಸಿ ಸೆಲ್ವಮಣಿ, ಎಲ್ಲ ಕಡೆ ಬ್ಯಾರಿಕೇಡ್ ಹಾಕಿ ನಾಕಾಬಂಧಿ ಮಾಡುವಂತೆ ಸೂಚಿಸಿದರು. ಕೋಲಾರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ಇದೇ ವೇಳೆ ಮನವಿ ಮಾಡಿದರು. ನಗರದಲ್ಲಿ ಪ್ರದಕ್ಷಿಣೆ ಹಾಕಿ ಬಂದೋ ಬಸ್ತ್ ಪರಿಶೀಲನೆ ನಡೆಸಿದ ಎಸ್ಪಿ ಕಾರ್ತಿಕ್ ರೆಡ್ಡಿ, ಅನಗತ್ಯವಾಗಿ ಓಡಾಟ ನಡೆಸಿದ ಬೈಕ್‍ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

  • ಯಾದಗಿರಿಯಲ್ಲಿ ಸಾವಿರ ಗಡಿ ದಾಟಿದ ಸಕ್ರಿಯ ಪ್ರಕರಣಗಳ ಸಂಖ್ಯೆ- ಜಿಲ್ಲಾಡಳಿತದಿಂದ ಸೆಮಿ ಲಾಕ್‍ಡೌನ್

    ಯಾದಗಿರಿಯಲ್ಲಿ ಸಾವಿರ ಗಡಿ ದಾಟಿದ ಸಕ್ರಿಯ ಪ್ರಕರಣಗಳ ಸಂಖ್ಯೆ- ಜಿಲ್ಲಾಡಳಿತದಿಂದ ಸೆಮಿ ಲಾಕ್‍ಡೌನ್

    ಯಾದಗಿರಿ: ಜಿಲ್ಲೆಯಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಸಾವಿರ ಗಡಿ ದಾಟುತ್ತಿದೆ. ನಗರದ ವ್ಯಾಪಾರ ವಹಿವಾಟು ಸ್ತಬ್ಧಗೊಂಡಿದೆ. ಹೀಗಾಗಿ ಯಾದಗಿರಿ ಜಿಲ್ಲಾಡಳಿತ ಲಾಕ್‍ಡೌನ್ ಮಾಡಲು ಮುಂದಾಗಿದೆಯೇ ಎಂಬ ಅನುಮಾನ ಈಗ ಕಾಡುತ್ತಿದೆ.

    ಇಂದು ಬೆಳಗ್ಗೆಯಿಂದ ಅಗತ್ಯ ವಸ್ತುಗಳ ಖರೀದಿ ಮತ್ತು ವ್ಯಾಪಾರಕ್ಕೆ ಮಾತ್ರ ಜಿಲ್ಲಾಡಳಿತ ಅವಕಾಶ ನೀಡಿದ್ದು, ವಿಶೇಷ ಅಧಿಕಾರದ ಮೂಲಕ ವ್ಯಾಪಾರ ವಹಿವಾಟಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಬ್ರೇಕ್ ಹಾಕಿದ್ದಾರೆ. ಅಂಗಡಿ ಮುಂಗಟ್ಟುಗಳನ್ನು ನಗರಸಭೆ ಅಧಿಕಾರಿಗಳು ಏಕಾಏಕಿ ಮುಚ್ಚಿಸಿದ್ದಾರೆ.

    ಶಹಪುರ, ಸುರಪುರ, ಗುರುಮಿಠಕಲ್ ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ಲಾಕ್‍ಡೌನ್ ಪರಿಸ್ಥಿತಿ ಬಿಂಬಿತವಾಗುತ್ತಿದೆ. ಜಿಲ್ಲಾಡಳಿತದ ಈ ನಿರ್ಣಯಕ್ಕೆ ಸಾರ್ವಜನಿಕರು ಮತ್ತು ವ್ಯಾಪಾರಸ್ಥರ ಆಕ್ರೋಶ ಹೊರಹಾಕುತ್ತಿದ್ದಾರೆ.

  • ನಿಮ್ಮ ಆರೋಗ್ಯದ ವಿಚಾರದಲ್ಲಿ ನಿಮಗೇ ಅಸಡ್ಡೆ ಯಾಕೆ- ಉಡುಪಿ ಡಿಸಿ ಪ್ರಶ್ನೆ

    ನಿಮ್ಮ ಆರೋಗ್ಯದ ವಿಚಾರದಲ್ಲಿ ನಿಮಗೇ ಅಸಡ್ಡೆ ಯಾಕೆ- ಉಡುಪಿ ಡಿಸಿ ಪ್ರಶ್ನೆ

    ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದ್ದು, ಪ್ರತಿ ದಿನ ನೂರರ ಮೇಲೆ ಕೇಸ್ ದಾಖಲಾಗುತ್ತಿವೆ. ಜನ ಕೋವಿಡ್ ಮಾರ್ಗಸೂಚಿ ಪಾಲಿಸದೆ ಓಡಾಡುತ್ತಿರುವುದರಿಂದ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಸ್ಕ್ ಹಾಕದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ನಗರದ ಹೊರಭಾಗದಲ್ಲಿ ರೈಡ್ ಗೆ ಇಳಿದ ಡಿಸಿ, ಉಡುಪಿ ತಾಲೂಕಿನ ಸಂತೆಕಟ್ಟೆ ಬ್ರಹ್ಮಾವರದಲ್ಲಿ ಮಾಸ್ಕ್ ಹಾಕದವರಿಗೆ ದಂಡ ವಿಧಿಸಿದ್ದಾರೆ. ಖಾಸಗಿ ಬಸ್ ಗಳಿಂದ ನಿಯಮ ಉಲ್ಲಂಘನೆಯಾಗುತ್ತಿದ್ದು, ಪೀಕ್ ಹವರ್ ನಲ್ಲಿ ಬಸ್ ಗಳು ತುಂಬಿ ತುಳುಕುತ್ತಿರುತ್ತವೆ. ಬಸ್ ಗಳನ್ನು ತಡೆದು ದಂಡ ಹಾಕಿದ ಅಧಿಕಾರಿಗಳು, ಚಾಲಕ ಹಾಗೂ ನಿರ್ವಾಹಕರ ಮೇಲೆ ಕ್ರಿಮಿನಲ್ ಕೇಸ್ ಹಾಕುವ ಎಚ್ಚರಿಕೆ ನೀಡಿದ್ದಾರೆ.

    ನಿಂತು ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ ಡಿಸಿ, ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಂಗಡಿ ಮಾಲೀಕರು, ಮೆಡಿಕಲ್, ಬ್ಯಾಂಕ್ ಗಳ ಮೇಲೆ ಡಿಸಿ 5 ಸಾವಿರ ದಂಡ ಹಾಕಿದ್ದಾರೆ. ಮಾಸ್ಕ್ ಹಾಕದ ಸಾರ್ವಜನಿಕರ ಮೇಲೆ 100 ರೂಪಾಯಿ ದಂಡ ವಿಧಿಸಿದ್ದಾರೆ. ಬಸ್ ನಿಂದ ಕೆಳಗಿಳಿಸಿ ತೆರಳಿದ ಜಿಲ್ಲಾಧಿಕಾರಿ ವಿರುದ್ಧ ವಿದ್ಯಾರ್ಥಿನಿಯರು ಅಸಮಧಾನ ವ್ಯಕ್ತಪಡಿಸಿದರು. ಹೆಚ್ಚುವರಿ ಪ್ರಯಾಣಿಕರನ್ನು ಕರೆದುಕೊಂಡು ಹೋದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಯಾಣಿಕರು ಯಾವುದೇ ಕಾರಣಕ್ಕೂ ನಿಂತು ಪ್ರಯಾಣ ಮಾಡಬಾರದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

    ಜಿಲ್ಲಾಧಿಕಾರಿ ಮಾಧ್ಯಮಗಳ ಜೊತೆ ಮಾತನಾಡಿ, ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದರೂ ಜನ ಮಾರ್ಗಸೂಚಿ ಪಾಲಿಸುತ್ತಿಲ್ಲ. ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲಿದ್ದರೂ ಅಸಡ್ಡೆ ಯಾಕೆ? ಸಾಂಕ್ರಾಮಿಕ ರೋಗ ಹತೋಟಿಗೆ ಬರುವ ತನಕ ಜಾಗರೂಕರಾಗಿರಿ ಎಂದರು.

    ಗ್ರಾಮೀಣ ಭಾಗಕ್ಕೆ ಕಡಿಮೆ ಸಂಖ್ಯೆಯಲ್ಲಿ ಬಸ್ ಇದೆ. ಕಾಲೇಜು ಬಿಡುವ ಸಂದರ್ಭದಲ್ಲಿ ಸಿದ್ಧಾಪುರ ರಸ್ತೆಯಲ್ಲಿ ಒಂದೇ ಬಸ್ ಇದೆ. ಹೀಗಾಗಿ ತುಂಬಿದ ಬಸ್ ನಲ್ಲೇ ಓಡಾಡಬೇಕಾಗುತ್ತದೆ. ಬಸ್ ನಿಂದ ಇಳಿಸಿದರೆ ಎಲ್ಲಿಗೆ ಹೋಗಬೇಕು ಎಂದು ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

  • ಕೋವಿಡ್ ನಿಯಮ ಉಲ್ಲಂಘನೆ- ಅಂಗಡಿಗಳನ್ನು ಸೀಜ್ ಮಾಡಿಸಿದ ಡಿಸಿ

    ಕೋವಿಡ್ ನಿಯಮ ಉಲ್ಲಂಘನೆ- ಅಂಗಡಿಗಳನ್ನು ಸೀಜ್ ಮಾಡಿಸಿದ ಡಿಸಿ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಶತಕದ ಆಸುಪಾಸಿನಲ್ಲಿ ಪತ್ತೆಯಾಗುತ್ತಿದ್ದು, ಇಷ್ಟಾದರೂ ಅಂಗಡಿ ಮಾಲೀಕರು ಡೋಂಟ್ ಕೇರ್ ಎನ್ನುತ್ತಿದದ್ದಾರೆ. ಕೊರೊನಾ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ.

    ಈ ಹಿನ್ನೆಲೆಯಲ್ಲಿ ಕೊಡಗಿನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಎಸ್‍ಪಿ ಕ್ಷಮಾ ಮೀಶ್ರ ಅವರು ಇಂದು ಕೊಡಗು ಜಿಲ್ಲೆಯ ಕುಶಾಲನಗರದ ರಥ ಬೀದಿಗೆ ದಿಡೀರ್ ಭೇಟಿ ನೀಡಿ, ರಥ ಬೀದಿಯಲ್ಲಿರುವ ಅಂಗಡಿಗಳ ಬಳಿ ಪರಿಶೀಲನೆ ನಡೆಸಿದರು. ಅಂಗಡಿಗಳಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಗಮನಕ್ಕೆ ಬಂದ ಕೋಡಲೇ 10ಕ್ಕೂ ಹೆಚ್ಚು ಅಂಗಡಿಗಳನ್ನು ಸೀಜ್ ಮಾಡಿಸಿದ್ದಾರೆ.

    ರಥ ಬೀದಿಯಲ್ಲಿರುವ ಬಟ್ಟೆ ಅಂಗಡಿ, ರೇಸಾನ್ ಹಾಗೂ ಚಿನ್ನದಂಗಡಿಗಳಿಗೆ ಬೀಗ ಹಾಕಿಸಿದ್ದಾರೆ. ಕೊಡಗಿನಲ್ಲಿ ದಿನದಿಂದ ದಿನಕ್ಕೆ ಕೊವಿಡ್ ಸ್ಫೋಟಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸ್ವತಃ ಫೀಲ್ಡಿಗಿಳಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದ ಹತ್ತಕ್ಕೂ ಹೆಚ್ಚು ವ್ಯಾಪಾರಸ್ಥರ ಅಂಗಡಿಗಳಿಗೆ ಬೀಗ ಹಾಕಿಸಿ ಜಿಲ್ಲೆಯ ಜನರಿಗೆ ಕೋವಿಡ್ ನಿಯಮಗಳ ಪಾಲನೆ ಕುರಿತು ಎಚ್ಚರಿಕೆ ನೀಡಿದ್ದಾರೆ.

  • ಖಾಸಗಿ ಆಸ್ಪತ್ರೆಗಳು ಶೇ.50 ಹಾಸಿಗೆ ಸರ್ಕಾರಿ ಕೋಟಾ ಮೀಸಲಿಡಬೇಕು: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

    ಖಾಸಗಿ ಆಸ್ಪತ್ರೆಗಳು ಶೇ.50 ಹಾಸಿಗೆ ಸರ್ಕಾರಿ ಕೋಟಾ ಮೀಸಲಿಡಬೇಕು: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

    ಶಿವಮೊಗ್ಗ: ಸರ್ಕಾರದ ಆದೇಶದ ಪ್ರಕಾರ ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಶೇ.50 ರಷ್ಟು ಹಾಸಿಗೆಗಳನ್ನು ಸರ್ಕಾರಿ ಕೋಟಾದ ಅಡಿಯಲ್ಲಿ ಕಡ್ಡಾಯವಾಗಿ ಮೀಸಲಿರಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೂಚನೆ ನೀಡಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ನಗರದ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ಅವರು, ಕೋವಿಡ್ ಎರಡನೇ ಅಲೆಯನ್ನು ಎದುರಿಸಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದೆ. ಕೋವಿಡ್ ಪಾಸಿಟಿವ್ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳ ಸೌಲಭ್ಯವನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಲಿದೆ. ಅಂತಹ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಆಸ್ಪತ್ರೆಗಳು ತಮ್ಮಲ್ಲಿನ ಜನರಲ್ ಹಾಸಿಗೆ, ಆಕ್ಸಿಜನ್ ಬೆಡ್, ಐಸಿಯು, ವೆಂಟಿಲೇಟರ್ ಸೌಲಭ್ಯ ಹೊಂದಿರುವ ಬೆಡ್‍ಗಳ ಪೈಕಿ ಶೇ.50ರಷ್ಟನ್ನು ಸರ್ಕಾರದ ಕೋಟಾದ ಅಡಿ ನೀಡಬೇಕು ಎಂದರು.

    ಒಂದು ವೇಳೆ ಈ ಬೆಡ್‍ಗಳನ್ನು ಬಳಸುವುದಿದ್ದರೆ ಜಿಲ್ಲಾಡಳಿತದಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕು. ಈ ನಿರ್ದೇಶನ ಉಲ್ಲಂಘಿಸುವ ಆಸ್ಪತ್ರೆಗಳ ವಿರುದ್ಧ ಈ ಬಾರಿ ಕ್ರಮ ಜರುಗಿಸುವುದು ಖಚಿತ ಎಂದು ಅವರು ಎಚ್ಚರಿಕೆ ನೀಡಿದರು. ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಈ ಹಿಂದೆಯೇ ನಿಗದಿಪಡಿಸಿದೆ. ಅದರಂತೆ ಶುಲ್ಕ ವಿಧಿಸಲು ಅವಕಾಶವಿದೆ. ಹೆಚ್ಚುವರಿ ಶುಲ್ಕ ವಿಧಿಸುವ ಕುರಿತು ದೂರುಗಳು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ಇದಕ್ಕೂ ಮೊದಲು ಜಿಲ್ಲಾಧಿಕಾರಿ ಅವರು ಎಲ್ಲಾ ತಾಲೂಕು ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಕೋವಿಡ್ ನಿರ್ವಹಣೆ ಕುರಿತು ಸೂಚನೆಗಳನ್ನು ನೀಡಿದರು.

    ಪ್ರಸ್ತುತ ಗಾಜನೂರಿನಲ್ಲಿ ಕೋವಿಡ್ ಕೇರ್ ಸೆಂಟರ್ ಸಜ್ಜುಗೊಳಿಸಲಾಗಿದೆ. ಎಲ್ಲಾ ತಾಲೂಕುಗಳಲ್ಲಿ ಸಹ ಕೇರ್ ಸೆಂಟರ್ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ಮನೆ ಆರೈಕೆಯಲ್ಲಿ ಇರುವ ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಮಾಹಿತಿಯನ್ನು ಪ್ರತಿದಿನ ಪಡೆಯಲು ತಾಲೂಕು ಮಟ್ಟದಲ್ಲಿ ತಂಡ ರಚಿಸಬೇಕು. ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ತಾಲೂಕು ಕೇಂದ್ರಗಳಲ್ಲಿ ಕಂಟ್ರೋಲ್ ರೂಂ ಆರಂಭಿಸಬೇಕು. ಪ್ರತಿ ತಾಲೂಕಿನಲ್ಲಿ ಕನಿಷ್ಟ 50 ಆಕ್ಸಿಜನ್ ಬೆಡ್ ಸೌಲಭ್ಯ ಇರಬೇಕು. ವ್ಯಾಕ್ಸಿನೇಷನ್ ಲಭ್ಯತೆ ಬಗ್ಗೆ ಪ್ರತಿ ದಿನ ಮಾಹಿತಿ ನೀಡಬೇಕು. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಮುಂಜಾಗ್ರತಾ ಕ್ರಮಗಳ ಮೇಲುಸ್ತುವಾರಿಗೆ ಪೊಲೀಸ್ ಇಲಾಖೆ ನೇತೃತ್ವದಲ್ಲಿ ನೋಡಲ್ ಅಧಿಕಾರಿ ನೇಮಕ ಮಾಡಲಾಗುವುದು. ಅಂಬುಲೆನ್ಸ್ ನಿರ್ವಹಣೆಗೆ ನೋಡಲ್ ಅಧಿಕಾರಿ ನೇಮಕ ಮಾಡಬೇಕು ಎಂದು ಹೇಳಿದರು.

    ರೂಪಾಂತರಿತ ಕರೋನಾ ಅತ್ಯಂತ ವೇಗವಾಗಿ ಹರಡುತ್ತಿದ್ದು, ಪ್ರಾಥಮಿಕ ಸೋಂಕಿತರಲ್ಲಿ ಶೇ.30ರಷ್ಟು ಮಂದಿಗೆ ಪಾಸಿಟಿವ್ ಕಂಡು ಬರುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಹೇಳಿದರು.

    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ ಎಂ.ಎಲ್, ಅಪರ ಪೊಲೀಸ್ ವರಿಷ್ಟಾಧಿಕಾರಿ ಡಾ.ಶೇಖರ್ ಎಚ್.ಟಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಶಿಮ್ಸ್ ನಿರ್ದೇಶಕ ಡಾ.ಸಿದ್ಧಪ್ಪ, ವಿವಿಧ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

  • ಸಿಎಂ ಸಂಪರ್ಕ- ಕೊರೊನಾ ಟೆಸ್ಟ್ ಮಾಡಿಸಿಕೊಂಡ ಧಾರವಾಡ ಡಿಸಿ

    ಸಿಎಂ ಸಂಪರ್ಕ- ಕೊರೊನಾ ಟೆಸ್ಟ್ ಮಾಡಿಸಿಕೊಂಡ ಧಾರವಾಡ ಡಿಸಿ

    ಧಾರವಾಡ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ, ಸಿಎಂ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾರೆ.

    ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಅವರನ್ನು ಭೇಟಿಯಾಗಿದ್ದಕ್ಕೆ ಜಿಲ್ಲಾಧಿಕಾರಿ ತಪಾಸಣೆಗೊಳಪಟ್ಟಿದ್ದಾರೆ. ಲೋಕಸಭಾ ಉಪಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ, ಬೆಳಗಾವಿಗೆ ತೆರಳುವ ಮುನ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಿದ್ದ ಸಿಎಂ ಅವರನ್ನು ಜಿಲ್ಲಾಧಿಕಾರಿ ಭೇಟಿ ಮಾಡಿದ್ದರು.

    ಸಿಎಂ ಹುಬ್ಬಳ್ಳಿ ಏರಪೋರ್ಟ್ ನಲ್ಲಿ ಹೆಚ್ಚು ಹೊತ್ತು ಇರಲಿಲ್ಲ. ಆಗ ಮಾಸ್ಕ್ ಹಾಕಿಕೊಂಡು, ಅಂತರ ಪಾಲಿಸಿದ್ದೇವೆ. ಈಗಷ್ಟೇ ನಾನು ಸಹ ಟೆಸ್ಟ್ ಮಾಡಿಸಿಕೊಂಡಿದ್ದೇನೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಗೂ ಟೆಸ್ಟ್ ಮಾಡಿಸಿಕೊಳ್ಳಲು ಹೇಳಿದ್ದೇನೆ, ಯಾರೂ ಸಹ ಹತ್ತಿರ ಹೋಗಿರಲಿಲ್ಲ, ಆರು ಅಡಿ ಅಂತರದಲ್ಲೇ ಇದ್ವಿ ಎಂದು ಹೇಳಿದರು.

  • ಉಡುಪಿ ಡಿಸಿ ಹೆಸರಿನಲ್ಲಿ ನಕಲಿ ಖಾತೆ- 7 ಸಾವಿರಕ್ಕೆ ರೂಪಾಯಿಗೆ ಬೇಡಿಕೆ

    ಉಡುಪಿ ಡಿಸಿ ಹೆಸರಿನಲ್ಲಿ ನಕಲಿ ಖಾತೆ- 7 ಸಾವಿರಕ್ಕೆ ರೂಪಾಯಿಗೆ ಬೇಡಿಕೆ

    ಉಡುಪಿ: ಜಿಲ್ಲೆಯ ಡಿಸಿ ಜಿ.ಜಗದೀಶ್ ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಖದೀಮರು ಏಳು ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.

    ಉಡುಪಿ ಡಿಸಿ ಜಿ ಜಗದೀಶ್ ಈ ಬಗ್ಗೆ ಫೇಸ್ಬುಕ್‍ನಲ್ಲಿ ಸ್ಪಷ್ಟನೆ ನೀಡಿದ್ದು, ನನ್ನ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಓಪನ್ ಆಗಿದೆ ಎಂದು ಬರೆದುಕೊಡಿದ್ದಾರೆ. ನಾನು ಪೊಲೀಸರಿಗೆ ದೂರು ನೀಡಿದ್ದೇನೆ. ನನ್ನ ಖಾತೆಯಿಂದ ಯಾರಾದರೂ ಹಣಕ್ಕೆ ಬೇಡಿಕೆ ಇಟ್ಟರೆ ಅದಕ್ಕೆ ಯಾರೂ ಸ್ಪಂದಿಸಬೇಡಿ ಎಂದು ವಿನಂತಿ ಮಾಡಿದ್ದಾರೆ. ಜಗದೀಶ್ ಮಲಾಲಗದ್ದೆ ಎಂಬ ಹೆಸರಿನಲ್ಲಿ ಖದೀಮರು 7000 ರುಪಾಯಿ ಹಣಕ್ಕೆ ಬೇಡಿಕೆ ಇಟ್ಟಿರುವ ಸ್ಕ್ರೀನ್ ಶಾಟ್ ಗಳನ್ನು ಡಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ನನ್ನ ಕುಟುಂಬಸ್ಥರಿಗೆ ಹಣಕಾಸಿನ ಅಗತ್ಯ ಇದೆ ನಾನು ಒಂದು ನಂಬರ್ ಕಳುಹಿಸುತ್ತೇನೆ ಅದಕ್ಕೆ ಆನ್‍ಲೈನ್ ಮೂಲಕ ಹಣ ರವಾನೆ ಮಾಡಿ ಎಂದು ಖದೀಮ ಮೆಸೇಜ್ ಮಾಡಿದ್ದಾನೆ. ಉಡುಪಿ ಜಿಲ್ಲೆಯಲ್ಲಿ ಕಳೆದ ಒಂದೆರಡು ತಿಂಗಳ ಹಿಂದಿನಿಂದ ಜಿಲ್ಲೆಯ ಹಲವು ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಓಪನ್ ಮಾಡಿ ಇದೇ ರೀತಿ ಹಣಕ್ಕೆ ಬೇಡಿಕೆ ಇಡುವ ಪ್ರಕರಣಗಳು ನಡೆದಿತ್ತು. ಇದೀಗ ಡಿಸಿ ಅವರಿಗೂ ಅದೇ ರೀತಿ ಮಾಡಿರುವುದು ಬೆಳಕಿಗೆ ಬಂದಿದೆ.