Tag: DC Thammanna

  • ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಮತಚಲಾಯಿಸಿದ ಅಂಬಿ!

    ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಮತಚಲಾಯಿಸಿದ ಅಂಬಿ!

    ಮಂಡ್ಯ: ಮಾಜಿ ಸಚಿವ, ರೆಬಲ್ ಸ್ಟಾರ್ ಅಂಬರೀಶ್ ಅವರು ಮೊಬೈಲ್ ಟಾರ್ಚ್ ಲೈಟ್ ಸಹಾಯದಿಂದ ಮತದಾನ ಮಾಡಿದ್ದಾರೆ.

    ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯಲ್ಲಿ ಮತದಾನ ಮಾಡಲು ಅಂಬರೀಶ್ ಹಾಗೂ ಡಿ.ಸಿ.ತಮ್ಮಣ್ಣ ಸ್ವಗ್ರಾಮಕ್ಕೆ ಭೇಟಿ ನೀಡಿ ಮತದಾನವನ್ನು ಮಾಡಿದರು. ಈ ವೇಳೆ ವಿವಿ ಪ್ಯಾಟ್ ಬಳಿ ನಿಂತು ಏನೋ ಇಲ್ಲಿ ಕತ್ತಲೆ ಎಂದು ಬೆಂಬಲಿಗರಿಗೆ ಹೇಳಿದರು. ಬಳಿಕ ಬೆಂಬಲಿಗರು ಮೊಬೈಲ್ ಟಾರ್ಚ್ ವ್ಯವಸ್ಥೆ ಮಾಡಿದರು. ಮೊಬೈಲ್ ಟಾರ್ಚ್ ಬೆಳಕಿನ ಸಹಾಯದಿಂದ ಅಂಬರೀಶ್ ವೋಟ್ ಮಾಡಿದರು.

    ಮತಚಲಾಯಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಂಬಿ ಉಪಚುನಾವಣೆಯ ಫಲಿತಾಂಶ ಕುರಿತು ಈ ಚುನಾವಣೆ ಸರಿಯಿಲ್ಲ. ಮೂರು ಮೂರು ದಿನಕ್ಕೆ ಚುನಾವಣೆ 13 ದಿನಕ್ಕೆ ಕಳೆದುಹೋಗುತ್ತದೆ. ಮತ್ತೆ ಓಡಾಡಬೇಕು. 5 ಕ್ಷೇತ್ರದಲ್ಲಿ ಐದು ಕ್ಷೇತ್ರ ಗೆಲ್ಲುತ್ತೇವೆ ಎಂದರು. ಈ ವೇಳೆ ರಾಮನಗರದಲ್ಲಾದ ಬೆಳವಣಿಗೆಗಳಿಗೆ ಅದು ಸರಿಯಾದುದ್ದಲ್ಲ. ಆದರೆ ಒಳಗಡೆ ಏನೇನೂ ಮಾತುಕತೆಗಳು ನಡೆದಿದೆಯೋ ಯಾರಿಗೂ ಗೊತ್ತಿಲ್ಲ. ಮನಸ್ತಾಪ ಇರಬಹುದು ಅಥವಾ ಬೇರೆ ರೀತಿಯ ವ್ಯವಹಾರ ಇರಬಹುದು ಅಷ್ಟೇ ಎಂದರು.

    ಈ ಬಾರಿ ಮಂಡ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಆಳ್ವಿಕೆ ಮಾಡಲಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ರಾಜ್ಯದಲ್ಲೇ ಜೆಡಿಎಸ್, ಕಾಂಗ್ರೆಸ್ ಆಳ್ವಿಕೆಯಲ್ಲಿದೆ ಇನ್ನೂ ಮಂಡ್ಯದಲ್ಲಿ ಆಗೋದಿಲ್ಲವೇ ಈ ಬಾರಿ ದಾಖಲೆಯ ಅಂತರದಲ್ಲಿ ಶಿವರಾಮೇಗೌಡರು ಗೆಲ್ಲಲೇಬೇಕು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • Exclusive: ಸಾರಿಗೆ ಇಲಾಖೆಯ ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಗ್ ಫೈಟ್

    Exclusive: ಸಾರಿಗೆ ಇಲಾಖೆಯ ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಗ್ ಫೈಟ್

    ಬೆಂಗಳೂರು: ಕರ್ನಾಟಕ ಸಾರಿಗೆ ಸಂಸ್ಥೆಗೆ ಖರೀದಿ ಮಾಡಲು ಇಚ್ಛಿಸಿರುವ ಎಲೆಕ್ಟ್ರಿಟ್ ಬಸ್ ಸಂಸ್ಥೆಗೆ ಹೆಚ್ಚಿನ ನಷ್ಟ ಉಂಟಾಗುತ್ತದೆ ಎಂಬ ವರದಿಯ ಬಳಿಕವೂ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಅವರು ಬಸ್ಸುಗಳ ಖರೀದಿಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವರು ಹಾಗೂ ಎಂಡಿ ನಡುವೆ ಬಿಗ್ ಫೈಟ್‍ಗೆ ಕಾರಣವಾಗಿದೆ.

    ಸಾರಿಗೆ ಇಲಾಖೆ ಎಂಡಿ ಪೊನ್ನುರಾಜ್ ಎಲೆಕ್ಟ್ರಿಕ್ ಬಸ್ ಖರೀದಿ ಮಾಡುವುದರಿಂದ ಸಂಸ್ಥೆಗೆ ಉಂಟಾಗಬಹುದಾದ ನಷ್ಟದ ಕುರಿತು ಸಂಪೂರ್ಣ ವರದಿ ನೀಡಿದ್ದಾರೆ. ಇದರ ನಡುವೆಯೂ ಸದ್ಯ ಸಚಿವರು ಒಟ್ಟು 80 ಎಲೆಕ್ಟ್ರಿಕ್ ಬಸ್ ಖರೀದಿಗೆ ಮುಂದಾಗಿದ್ದಾರೆ. ಸಿಎಂ ಕುಮಾರಸ್ವಾಮಿ ಸಂಪುಟ ಸಚಿವರ ಈ ನಡೆ ಹಲವು ಅನುಮಾನಕ್ಕೆ ಕಾರಣವಾಗಿದ್ದು, ಬಸ್ ಖರೀದಿ ಹಿಂದೆ ಸಚಿವರ ಸ್ವ-ಹಿತಾಸಕ್ತಿ ಇದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ. ಸರ್ಕಾರ ಸದ್ಯ 126 ಕೋಟಿ ರೂ. ವೆಚ್ಚದಲ್ಲಿ 80 ಬಸ್‍ಗಳನ್ನ ಖರೀದಿಸಲು ಮುಂದಾಗಿದೆ ಎನ್ನಲಾಗಿದ್ದು, ಇದರಲ್ಲಿ 60 ಎಸಿ ಎಲೆಕ್ಟ್ರಿಕ್ ಬಸ್ ಹಾಗೂ ಉಳಿದಂತೆ 20 ನಾನ್ ಎಸಿ ಎಲೆಕ್ಟ್ರಿಕ್ ಬಸ್ ಖರೀದಿ ಸಿದ್ಧತೆ ನಡೆದಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ಸಾರಿಗೆ ಇಲಾಖೆ ನೇರ ಬಸ್ ಖರೀದಿ ಮಾಡುವುರಿಂದ ಸಂಸ್ಥೆಗೆ ಉಂಟಾಗಬಹುದಾದ ನಷ್ಟ ಕಾರಣಗಳನ್ನು ಎಂಡಿ ಪೊನ್ನುರಾಜ್ ಅವರು ವರದಿ ನೀಡಿದ್ದಾರೆ. ಸಾರಿಗೆ ಸಂಸ್ಥೆಗೆ ಎಲೆಕ್ಟ್ರಿಕ್ ಬಸ್ ಖರೀದಿ ಮಾಡುವುದಕ್ಕಿಂತ ಅವುಗಳನ್ನು ಲೀಸ್‍ಗೆ ಪಡೆದು ಮೊದಲು ಪ್ರಯೋಗ ನಡೆಸಲು ಎಂಡಿ ಸಲಹೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಫೇಮ್ ಇಂಡಿಯಾ ಸ್ಕೀಮ್ ಅಡಿ ಮೆ|| ಗೋಲ್ಡ್ ಸ್ಟೋನ್ ಇನ್‍ಫ್ರಾಟೆಂಕ್ ಕಂಪೆನಿಯಿಂದ ಬಸ್ ಖರೀದಿಗೆ ಪ್ರಯತ್ನ ಮಾಡಲಾಗುತ್ತಿದೆ ಎನ್ನಲಾಗಿದೆ.

    ಎಲೆಕ್ಟ್ರಿಕ್ ಬಸ್ ಯಾಕೆ ಬೇಡ?
    ಒಂದು ಎಲೆಕ್ಟ್ರಿಕ್ ಬಸ್‍ನ ಒಟ್ಟಾರೆ ವೆಚ್ಚದ ಶೇ. 60 ರಷ್ಟು ಮೌಲ್ಯ ಬ್ಯಾಟರಿ ಒಂದೇ ಹೊಂದಿರುತ್ತದೆ. ಈ ಬಸ್ಸುಗಳಲ್ಲಿ ಆಳವಡಿಸಿರುವ ಬ್ಯಾಟರಿಗಳನ್ನು ಐದು ವರ್ಷಕ್ಕೆ ಒಮ್ಮೆ ಬದಲಾವಣೆ ಮಾಡಬೇಕು. ಇದರಿಂದ ಬಸ್ಸುಗಳ ನಿರ್ವಹಣೆ ಅಧಿಕ ಆಗಲಿದೆ. ಅಲ್ಲದೇ ಒಂದೊಮ್ಮೆ ಎಲೆಕ್ಟ್ರಿಕ್ ಬಸ್‍ನ ಬ್ಯಾಟರಿ ಹಾಳಾದರೆ ಇಡೀ ಬಸ್ ಹಾಳಾಗುತ್ತದೆ. ಇದರಿಂದ ಒಂದು ಬಸ್ ಮೇಲೆ ಹೂಡಿಕೆ ಮಾಡಿರುವ ಮೊತ್ತ ಸಂಪೂರ್ಣ ನಷ್ಟವಾಗಲಿದೆ. ಬಸ್ಸಿನಲ್ಲಿ ಬಳಸುವ ಬ್ಯಾಟರಿಯನ್ನು ಲೀಥಿಯಂ ಎಂಬ ಮೆಟಲ್ ನಿಂದ ತಯಾರು ಮಾಡುತ್ತಾರೆ. ಈ ಲೀಥಿಯಂ ನಿಕ್ಷೇಪ ಭಾರತದಲ್ಲಿ ಕಡಿಮೆ ಇರುವುದರಿಂದ ಅದರ ಬೆಲೆಯೂ ಅಧಿಕವಾಗಿದೆ. ಆದರೆ ಚೀನಾದಲ್ಲಿ ಈ ಎಲೆಕ್ಟ್ರಿಕ್ ಬಸ್ ಸೇವೆ ಯಶಸ್ವಿಯಾಗಿದ್ದು, ಆದರೆ ಅಲ್ಲಿ ಲೀಥಿಯಂ ನಿಕ್ಷೇಪ ಹೆಚ್ಚಾಗಿರುವುದರಿಂದ ಅವರಿಗೆ ಅನುಕೂಲ ಆಗಿದೆ ಎಂಬ ಅಂಶ ಮುಂದಿಟ್ಟಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆಯಷ್ಟೇ ಡೀಸೆಲ್ ಬೆಲೆ ಹೆಚ್ಚಾಗಿದೆ ಎಂಬ ಅಂಶದ ಮೇಲೆ ಟಿಕೆಟ್ ದರ ಹೆಚ್ಚಳ ಮಾಡಲು ಸಾರಿಗೆ ಇಲಾಖೆ ಮುಂದಾಗಿತ್ತು. ಸದ್ಯ ಸುಮಾರು 126 ಕೋಟಿ ರೂಪಾಯಿ ಖರ್ಚು ಮಾಡಿ ಎಲೆಕ್ಟ್ರಿಕ್ ಬಸ್ ಖರೀದಿ ಮಾಡಲಿ ಚಿಂತನೆ ನಡೆಸಿದೆ. ಆದರೆ ಈ ಹಿಂದೆ ಸಾರಿಗೆ ಸಚಿವರಾಗಿದ್ದ ರಾಮಲಿಂಗಾ ರೆಡ್ಡಿ ಅವರು ಎಲೆಕ್ಟ್ರಿಕ್ ಬಸ್ ಖರೀದಿ ಮಾಡಲು ನಿರಾಕರಿಸಿದ್ದರು. ಅಲ್ಲದೇ ಬಸ್ಸುಗಳ ನಿರ್ವಹಣೆ ಅಧಿಕ ವೆಚ್ಚವಾಗುತ್ತದೆ ಎಂಬ ಕಾರಣ ಮುಂದಿಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=amPQtHkZIq0

  • ಅಂದು ಶಿವರಾಮೇಗೌಡರ ವಿರುದ್ಧ ಎಚ್‍ಡಿಡಿ ಪ್ರತಿಭಟಿಸಿದ್ದು ಯಾಕೆ: ಉತ್ತರ ಕೊಟ್ಟ ಡಿಸಿ ತಮ್ಮಣ್ಣ

    ಅಂದು ಶಿವರಾಮೇಗೌಡರ ವಿರುದ್ಧ ಎಚ್‍ಡಿಡಿ ಪ್ರತಿಭಟಿಸಿದ್ದು ಯಾಕೆ: ಉತ್ತರ ಕೊಟ್ಟ ಡಿಸಿ ತಮ್ಮಣ್ಣ

    ಮಂಡ್ಯ: ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ಶಿವರಾಮೇಗೌಡರ ವಿರುದ್ಧ ಹಿಂದೆ ದೇವೇಗೌಡರು ಪ್ರತಿಭಟನೆ ನಡೆಸಿದ್ದು ಯಾಕೆ ಎನ್ನುವುದಕ್ಕೆ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಉತ್ತರ ಕೊಟ್ಟಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿವರಾಮೇಗೌಡ ಸುಸಂಸ್ಕೃತ ಕುಟುಂಬದಿಂದ ಬಂದವರು. ಅವರು ಬೀದಿಯಿಂದ ಬಂದವರಲ್ಲ. ಅವರಿಗೆ ಸಮಾಜದಲ್ಲಿ ಗೌರವ, ಘನತೆ ಇದೆ. ಕೇಸ್ ಇದ್ದ ಮಾತ್ರಕ್ಕೆ ಶಿವರಾಮೇಗೌಡರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದರು.

    ಇದೇ ವೇಳೆ ಸುಮಾರು 25 ವರ್ಷಗಳ ಹಿಂದೆ ಪತ್ರಕರ್ತ ಗಂಗಾಧರ್ ಕೊಲೆ ಕೇಸಿನ ವಿಚಾರವಾಗಿ, ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆ ಬಗ್ಗೆ ಮಾತನಾಡಿ, ಪತ್ರಕರ್ತ ಗಂಗಾಧರ್ ಮೂರ್ತಿ ಕೊಲೆ ಸಂದರ್ಭ ದೇವೇಗೌಡರು ಶಿವರಾಮೇಗೌಡ ವಿರುದ್ಧ ಪ್ರತಿಭಟಿಸಿದ್ದು ರಾಜಕೀಯದಲ್ಲಿ ಸಹಜ. ಸಿದ್ದರಾಮಯ್ಯ ಮತ್ತು ದೇವೇಗೌಡರು ಹಾವು ಮುಂಗುಸಿಯಂತಿದ್ದರು. ಇವತ್ತು ಅವರು ಒಂದಾಗಲಿಲ್ಲವೇ? ಹಾಗೆ ಅಂದು ಕಾರ್ಯಕರ್ತರ ಒತ್ತಡಕ್ಕೆ ಮಣಿದು ದೇವೇಗೌಡರು ಪ್ರತಿಭಟಿಸಿದ್ದರು. ದ್ವೇಷದಿಂದ ಪ್ರತಿಭಟನೆ ಮಾಡಿಲ್ಲ. ನಾವು ಅಷ್ಟೇ ಕೆಲವು ಸರಿ ಮನಸ್ಸಿಲ್ಲದೇ ಹೋದರೂ ಕಾರ್ಯಕರ್ತರನ್ನ ತೃಪ್ತಿಪಡಿಸುವ ಸಲುವಾಗಿ ಈ ರೀತಿ ಕೆಲಸ ಮಾಡಬೇಕಾಗತ್ತದೆ ಎಂದು ಶಿವರಾಮೇಗೌಡ ಪರ ಬ್ಯಾಟಿಂಗ್ ಮಾಡಿದರು.

    ಕೇಸು ದಾಖಲಾದ ಮಾತ್ರಕ್ಕೆ ಕೊಲೆಗಾರ ಅಂತ ತೀರ್ಮಾನವಾಗುವುದಿಲ್ಲ. ಶಿವರಾಮೇಗೌಡ ಲಾಂಗು, ಮಚ್ಚು ಹಿಡಿದು ಕೊಲೆ ಮಾಡುವುದನ್ನು ನೋಡಿದ್ದೀರಾ, ಅವರನ್ನ ಕೊಲೆಗಾರ ಅಂತ ಕರೆಯಲು ಎಂದು ಪ್ರಶ್ನಿಸಿದರು. ಇವೆಲ್ಲ ಸಹಜ. ನನ್ನ ಮೇಲೂ ಕ್ರಿಮಿನಲ್ ಕೇಸಿದೆ ಹಾಗಂತ ನಾನು ಕೊಲೆಗಾರನೇ? ಸಾಕ್ಷಿ ಆಧಾರ ಇದ್ದರೆ ಮಾತ್ರ ಅದಕ್ಕೆ ಬೆಲೆ ಎಂದು ಖಾರವಾಗಿ ಮಾತನಾಡಿದರು.

    ಶಿವರಾಮೇಗೌಡ ಪರ ನಾಗಮಂಗಲ ಮತ್ತು ಮಂಡ್ಯದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ತಮ್ಮಣ್ಣ ಭಾಗಿಯಾಗಿರಲಿಲ್ಲ. ಇದರಿಂದ ಸಚಿವರಾದ ತಮ್ಮಣ್ಣ ಮತ್ತು ಪುಟ್ಟರಾಜು ನಡುವೆ ಮುನಿಸಿದ್ದು, ಪುಟ್ಟರಾಜು ಇರುವ ಸಭೆಗೆ ತಮ್ಮಣ್ಣ ಬರುತ್ತಿಲ್ಲ ಎಂಬ ಊಹಾಪೋಹ ಹರಿದಾಡಿತ್ತು. ಊಹಾಪೋಹಕ್ಕೆ ಸ್ಪಷ್ಟನೆ ನೀಡಿದ ತಮ್ಮಣ್ಣ ನಮ್ಮಿಬ್ಬರ ನಡುವೆ ಯಾತಕ್ಕೆ ಮುನಿಸು, ಚೇ ಚೇ ಅದೇಲ್ಲ ಏನೂ ಇಲ್ಲ. ನಾನು ಸಿಎಸ್ ಪುಟ್ಟರಾಜು ಚೆನ್ನಾಗಿದ್ದೇವೆ. ಆ ರೀತಿ ಅಸಮಾಧಾನ ಇದ್ದಿದ್ದರೆ ಬಹಿರಂಗವಾಗಿ ಹೇಳುತ್ತಿದ್ದೆ. ನಾಳೆ ಮದ್ದೂರಿನಲ್ಲಿ ನಡೆಯುವ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಪ್ರಚಾರ ಸಭೆಗೆ ಎಲ್ಲಾ ಶಾಸಕರು ಬರುತ್ತಿದ್ದಾರೆ. ಅದಕ್ಕೆ ತಯಾರಿ ನಡೆಯುತ್ತಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾವನಿಗೆ ಕುಮಾರಸ್ವಾಮಿ ಫುಲ್ ಕ್ಲಾಸ್!

    ಮಾವನಿಗೆ ಕುಮಾರಸ್ವಾಮಿ ಫುಲ್ ಕ್ಲಾಸ್!

    ಬೆಂಗಳೂರು: ಸಾರಿಗೆ ಅಧಿಕಾರಿಗಳ ಸಭೆಯಲ್ಲಿ ಸಂಬಂಧದಲ್ಲಿ ಮಾವನಾದ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣಗೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ಬಿಎಂಟಿಸಿ ಎಂಡಿ ಪೊನ್ನುರಾಜ್ ಪರ ನಿಂತು ಡಿ.ಸಿ ತಮ್ಮಣ್ಣಗೆ ಅವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಪೊನ್ನುರಾಜ್ ಪ್ರಾಮಾಣಿಕತೆ ಬಗ್ಗೆ ಪ್ರಶ್ನೆ ಎತ್ತುವರು ಇಲ್ಲ, ಅವರ ಬಗ್ಗೆ ನನಗೆ ವಿಶ್ವಾಸ ಇದೆ. ಪೊನ್ನುರಾಜ್ ಮೇಲೆ ಸುಖಾಸುಮ್ಮನೆ ಆರೋಪ ಮಾಡಬೇಡಿ. ನಿಮ್ಮ ಕೆಲಸ ನೀವು ಮಾಡಿ ಸಾಕು ಎಂದು ಸಿಎಂ ಎಚ್‍ಡಿಕೆ ಹೇಳಿದ್ದಾರೆ ಎನ್ನಲಾಗಿದೆ.

    ಎಲೆಕ್ಟ್ರಿಕ್ ಬಸ್ ಖರೀದಿಯಲ್ಲಿ ತಮಣ್ಣ ಪುತ್ರನ ಪಾತ್ರದ ಬಗ್ಗೆ ಸಿಎಂಗೆ ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಡಿ.ಸಿ ತಮ್ಮಣ್ಣ ತಮ್ಮ ಮಗನ ಪರ ವಹಿಸಿಕೊಂಡು ಪೊನ್ನುರಾಜ್ ವಿರುದ್ಧ ಅಕ್ರಮ ಆರೋಪ ಮಾಡುತ್ತಿದ್ದರು. ಈ ವೇಳೆ ಸಿಎಂ ಕುಮಾರಸ್ವಾಮಿ ಪೊನ್ನುರಾಜ್ ಪ್ರಾಮಾಣಿಕತೆ ಹೊಗಳಿ ತಮ್ಮಣ್ಣಗೆ ಕ್ಲಾಸ್ ತೆಗೆದುಕೊಂಡಿದ್ದರು ಎಂದು ತಿಳಿದುಬಂದಿದೆ.

    ಡಿ.ಸಿ ತಮ್ಮಣ್ಣ ಅವರು ಎಚ್‍ಡಿ ದೇವೇಗೌಡರಿಗೆ ಬೀಗರಾಗಬೇಕು. ಆದ್ದರಿಂದ ತಮ್ಮಣ್ಣ ಅವರು ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮಾವನಾಗುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳ ಇಲ್ಲ

    ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳ ಇಲ್ಲ

    ಬೆಂಗಳೂರು: ಬಸ್ ದರ 18% ಹೆಚ್ಚಳ ಆಗಬೇಕೆಂದು ಸಿಎಂ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸದ್ಯಕ್ಕೆ ಹೆಚ್ಚಳ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

    ಸಿಎಂ ಜೊತೆಗೆ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಸ್ ದರ ಹೆಚ್ಚಳದ ಬಗ್ಗೆ ಸಿಎಂ ತೀರ್ಮಾನ ತೆಗೆದುಕೊಳ್ಳುತ್ತಾರೆ. ಡಿಸೇಲ್ ವಾಹನಗಳನ್ನು ಕಡಿಮೆ ಮಾಡಿ ಎಲೆಕ್ಟ್ರಿಕ್ ಬಿಎಂಟಿಸಿ ಬಸ್ ಓಡಿಸಲು ಚಿಂತನೆ ನಡೆದಿದೆ. ಕೇಂದ್ರ ಸರ್ಕಾರ 80 ಬಸ್ಸುಗಳನ್ನು ನೀಡುತ್ತಿದ್ದು, ಮತ್ತಷ್ಟು ಬಸ್ಸಿನ ವ್ಯವಸ್ಥೆಯನ್ನು ಕೇಳುತ್ತಿದ್ದೇವೆ ಎಂದು ತಿಳಿಸಿದರು.

    ಮಂಡ್ಯ ಲೋಕಸಭಾ ಉಪಚುನಾವಣೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನ ಮಗನಿಗೆ ಮಂಡ್ಯದಲ್ಲಿ ಟಿಕೆಟ್ ಕೇಳಿಲ್ಲ. ಲೋಕಸಭೆ ಆಕಾಂಕ್ಷಿಯೂ ಅಲ್ಲ. ಸಚಿವ ಪುಟ್ಟರಾಜು ಹಾಗೂ ಮಾಜಿ ಸಚಿವ ಚೆಲುವರಾಯಸ್ವಾಮಿ ಕಿತ್ತಾಟ ಮೊದಲಿನಿಂದಲೂ ನಡೆಯುತ್ತಲೇ ಇದೆ. ಇಬ್ಬರ ನಡುವಿನ ಕಿತ್ತಾಟ ಈಗಲೂ ಇದೆ. ಇದೇನು ಹೊಸತಲ್ಲ ಎಂದರು.

    ಪ್ರತಿ ಲೀಟರ್ ಡೀಸೆಲ್ ಬೆಲೆ 2.50 ರೂಪಾಯಿ ಇಳಿಕೆಯಾಗಿದ್ದು, ಕುಮಾರಸ್ವಾಮಿ ಸರ್ಕಾರ ತೈಲ ಬೆಲೆ ಇಳಿಸದೇ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಈಗ ಪ್ರಯಾಣ ದರ ಹೆಚ್ಚಿಸಿದರೆ ಮತ್ತೆ ಜನರ ಆಕ್ರೋಶಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಸ್ ಟಿಕೆಟ್ ದರ ಹೆಚ್ಚಳ ಮಾಡದೇ ಇರಲು ಸರ್ಕಾರ ನಿರ್ಧಾರ ಮಾಡಿದೆ ಎನ್ನುವ ಸುದ್ದಿಯನ್ನು ಅಕ್ಟೋಬರ್ 5 ರಂದೇ ಪಬ್ಲಿಕ್ ಟಿವಿ ಪ್ರಕಟಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧೆ..?

    ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧೆ..?

    ಮಂಡ್ಯ: ಮಾಜಿ ಪ್ರಧಾನಿ ದೇವೇಗೌಡರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಿಂದ ಸ್ಪರ್ಧಿಸುವಂತೆ ಈ ಹಿಂದೆಯೇ ಮನವಿ ಮಾಡಿಕೊಂಡಿರುವುದಾಗಿ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಹೇಳಿದ್ದು, ಇದರಿಂದ ದೇವೇಗೌಡರು ಜಿಲ್ಲೆಯಲ್ಲಿ ಸ್ಪರ್ಧಿಸುವ ಬಗ್ಗೆ ಚರ್ಚೆ ಶುರುವಾಗಿದೆ.

    ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಂಡ್ಯ ಜನರಿಗೆ ದೇವೇಗೌಡರ ಮೇಲೆ ಅಪಾರ ಪ್ರೀತಿ ಇದೆ. ಹೀಗಾಗಿ ದೇವೇಗೌಡರ ಬಳಿ ನಾವು ಮಾತನಾಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಿಂದ ಸ್ಪರ್ಧಿಸುವಂತೆ ಕೇಳಿಕೊಂಡಿದ್ದೇವೆ. ಕಡೆಗಾಲದಲ್ಲಿ ಮಂಡ್ಯ ಜಿಲ್ಲೆಯ ಜನರಿಗೆ ಆಸೆ ಪೂರೈಸಿ. ಯಾಕಂದರೆ ಇಲ್ಲಿನ ಜನರಿಗೆ ನಿಮ್ಮ ಮೇಲೆ ಅಪಾರ ಪ್ರೀತಿ ವಿಶ್ವಾಸ ಇದೆ ಎಂದು ಎಚ್‍ಡಿಡಿ ಅವರಲ್ಲಿ ಕೇಳಿಕೊಂಡಿದ್ದೇವೆ. ಈ ಬಗ್ಗೆ ದೇವೇಗೌಡರು ಏನೂ ಹೇಳಿಲ್ಲ. ಮಂಡ್ಯದಿಂದ ಸ್ಪರ್ಧಿಸುವ ತೀರ್ಮಾನ ಗೌಡರಿಗೆ ಬಿಟ್ಟಿದ್ದು. ಅವರು ಬಂದರೆ ಸಂತೋಷ ಎಂದು ಹೇಳಿದ್ದಾರೆ.

    ಇದೇ ವೇಳೆ ಮಾತನಾಡಿದ ಅವರು ಪ್ರಜ್ವಲ್ ರೇವಣ್ಣ, ಮಂಡ್ಯದಿಂದ ಸ್ಪರ್ಧಿಸುವ ಬಗ್ಗೆ ನಮಗೆ ಗೊತ್ತಿಲ್ಲ. ಮದ್ದೂರು ಪುರಸಭೆಯಲ್ಲಿ ಜೆಡಿಎಸ್‍ಗೆ ಸರಳ ಬಹುಮತ ಬಂದಿದ್ದು, ಜೆಡಿಎಸ್ ಪಕ್ಷದ ಟಿಕೆಟ್ ಸಿಗದೇ ಹಲವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಅವರಲ್ಲಿ ನಾಲ್ಕು ಮಂದಿ ಈಗಾಗಲೇ ಪಕ್ಷಕ್ಕೆ ಬರುತ್ತೇವೆ ಅಂತಿದ್ದಾರೆ. ಅವರು ಪಕ್ಷಕ್ಕೆ ಬಂದರೆ ಸ್ವಾಗತ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾವೆಲ್ಲ ಒಂದೇ ತಾಯಿ ಮಕ್ಕಳಿದ್ದಂತೆ, ಸರ್ಕಾರ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಬದ್ಧ- ಡಿಸಿ ತಮ್ಮಣ್ಣ

    ನಾವೆಲ್ಲ ಒಂದೇ ತಾಯಿ ಮಕ್ಕಳಿದ್ದಂತೆ, ಸರ್ಕಾರ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಬದ್ಧ- ಡಿಸಿ ತಮ್ಮಣ್ಣ

    ಗದಗ: ನಾವೆಲ್ಲ ಒಂದೇ ತಾಯಿ ಮಕ್ಕಳಿದ್ದಂತೆ. ನಮ್ಮ ಸರ್ಕಾರವೂ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

    ನಗರದ ನೂತನ ಬಸ್ ನಿಲ್ದಾಣದಲ್ಲಿ ಗ್ರಂಥಾಲಯ ಹಾಗೂ ಶುದ್ಧನೀರಿನ ಘಟಕವನ್ನು ಉದ್ಘಾಟಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರವೂ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಆಡಿದ ಆವೇಶದ ಮಾತುಗಳನ್ನು ಪ್ರತಿಪಕ್ಷಗಳು ರಾಜಕೀಯಕ್ಕೆ ಬಳಸಬಾರದು. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿರುವುದನ್ನು ಶೀಘ್ರದಲ್ಲೇ ಸರಿ ಪಡಿಸಲಾಗುವುದು ಎಂದರು.

    ಅಖಂಡ ಕರ್ನಾಟಕ ಏಕೀಕರಣಕ್ಕೆ ಆಲೂರು ವೆಂಕಟರಾಯರು ಅಡಿಪಾಯ ಹಾಕಿದ್ದು, ಅವರ ಆಶಯದಂತೆ ರಾಜ್ಯದ ಅಭಿವೃದ್ಧಿ ಮಾಡಲಾಗುವುದು. ಉತ್ತರ ಕರ್ನಾಟಕ ಭಾಗದಲ್ಲಿ ಪ್ರತ್ಯೇಕ ರಾಜ್ಯದ ಹೋರಾಟದ ಕೂಗು ಸರಿಯಲ್ಲ ಎಂದು ಹೇಳಿದರು.

    ಉತ್ತರ ಕರ್ನಾಟಕ ಗಂಡುಮೆಟ್ಟಿದ ನಾಡು. ಗೋಕಾಕ್ ಚಳುವಳಿಯ ಮೂಲಕ ಅಖಂಡ ಕರ್ನಾಟಕದ ಹೋರಾಟ ಆರಂಭವಾಯ್ತು. ರಾಜ್ಯದ ನಾಲ್ಕು ಸಾರಿಗೆ ವಿಭಾಗಗಳಲ್ಲಿ ಯಾವುದೇ ತಾರತಮ್ಯ ಇಲ್ಲ. ಆಡಳಿತದ ದೃಷ್ಟಿಯಿಂದ ಈ ಹಿಂದೆ ವಿಭಾಗಗಳನ್ನು ಮಾಡಿರುವುದು ಸರಿಯಾಗಿದೆ ಎಂದು ಸಚಿವರು ತಿಳಿಸಿದ್ರು.

  • ಸಾಲಮನ್ನಾ ವಿಚಾರದಲ್ಲಿ ಎಲ್ಲರನ್ನೂ ತೃಪ್ತಿ ಪಡಿಸಲು ಸಾಧ್ಯವಿಲ್ಲ: ಡಿ.ಸಿ ತಮ್ಮಣ್ಣ

    ಸಾಲಮನ್ನಾ ವಿಚಾರದಲ್ಲಿ ಎಲ್ಲರನ್ನೂ ತೃಪ್ತಿ ಪಡಿಸಲು ಸಾಧ್ಯವಿಲ್ಲ: ಡಿ.ಸಿ ತಮ್ಮಣ್ಣ

    ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಈಗಾಗಲೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದ್ದರಿಂದ ಸಾಲಮನ್ನಾ ವಿಚಾರದಲ್ಲಿ ಎಲ್ಲರನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

    ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಹೊಸ ಪ್ರಾದೇಶಿಕ ಸಾರಿಗೆ ಕಚೇರಿ ಉದ್ಘಾಟನೆಗೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ಮನುಷ್ಯನನ್ನು ತೃಪ್ತಿ ಮಾಡಲು ಸಾಧ್ಯವಿಲ್ಲ, ಕುಮಾರಸ್ವಾಮಿ ಮಾಡಿದ ಸಾಲಮನ್ನಾದಷ್ಟು ಬೇರೆ ಯಾವುದೇ ಸರ್ಕಾರ ಮಾಡಿಲ್ಲ. ರಾಜ್ಯ ಸರ್ಕಾರ ವಿವಿಧ ಮೂಲಗಳಿಂದ ಸಂಪನ್ಮೂಲಗಳನ್ನು ಸಂಗ್ರಹಿಸಿ ರೈತರ ಸಾಲಮನ್ನಾ ಮಾಡಿದೆ ಎಂದರು.

    ಇದೇ ವೇಳೆ ಸಾಲಮನ್ನಾ ವಿಚಾರದಲ್ಲಿ ಎಲ್ಲರನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ತೃಪ್ತಿ ಪಡುವುದು ಪಡದೇ ಇರುವುದು ರೈತರಿಗೆ ಬಿಟ್ಟದ್ದು. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದೆ. ಸಮ್ಮಿಶ್ರ ಸರ್ಕಾರವೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ ಸಾಲ ಮನ್ನಾ ಮಾಡಿದೆ. ಸಾಲಮನ್ನಾದಿಂದ ಸಾಕಷ್ಟು ರೈತರಿಗೆ ಅನುಕೂಲವಾಗಿದೆ ಎಂದು ಹೇಳಿದ್ದಾರೆ.

    ಸಾರಿಗೆ ಇಲಾಖೆ ಅಧುನಿಕ ತಂತ್ರಜ್ಞಾನ ಅಳವಡಿಕೆ ಮಾಡಿ ಇಲಾಖೆಯಲ್ಲಿ ಉಂಟಾಗುತ್ತಿರುವ ಹಣದ ಸೋರಿಕೆಯನ್ನು ತಡೆಯಲಾಗುವುದು. ರಾಜ್ಯ ಬೇರೆ ಯಾವುದೇ ಇಲಾಖೆಯೂ ಸಹ ಇಷ್ಟು ಪ್ರಮಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ಅವಕಾಶ ನೀಡಿಲ್ಲ. ಅದ್ದರಿಂದ ಇಲಾಖೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುವುದಾಗಿ ಹೇಳಿದರು.

  • ಬೆಂಗಳೂರಿಗರ ಮೇಲೆ ಟ್ರಾನ್ಸ್ ಪೋರ್ಟ್ ಸೆಸ್: ಸಾರಿಗೆ ಸಚಿವರಿಂದ ಶಾಕ್!

    ಬೆಂಗಳೂರಿಗರ ಮೇಲೆ ಟ್ರಾನ್ಸ್ ಪೋರ್ಟ್ ಸೆಸ್: ಸಾರಿಗೆ ಸಚಿವರಿಂದ ಶಾಕ್!

    ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸೆಸ್ ಹಾಕಿ ಭಾರೀ ಟೀಕೆಗೆ ಗುರಿಯಾಗಿರುವ ಸರ್ಕಾರ ಈಗ ವಿಶೇಷವಾಗಿ ಬೆಂಗಳೂರಿಗರ ಮೇಲೆ ವಿಶೇಷ ಸೆಸ್ ಹಾಕಲು ಮುಂದಾಗಿದೆ.

    ಹೌದು. ಈಗಾಗಲೇ ನಷ್ಟದಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮೇಲಕ್ಕೆ ಎತ್ತಲು ಹೊಸ ಟ್ರಾನ್ಸ್ ಪೋರ್ಟ್ ಸೆಸ್ ಹಾಕಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.

    ಹದಗೆಟ್ಟ ರಸ್ತೆಗಳಿಂದಾಗಿ ಬಿಎಂಟಿಸಿ ಬಸ್‍ಗಳು ಹಾಳಾಗುತ್ತಿದೆ. ಈ ಬಸ್‍ ಗಳ ನಿರ್ವಹಣೆಗೆ ವರ್ಷಕ್ಕೆ ಕೋಟ್ಯಂತರ ರೂ. ಹಣವನ್ನು ಬಿಬಿಎಂಟಿಸಿ ವ್ಯಯಿಸುತ್ತಿದೆ. ಹೀಗಾಗಿ ಬಿಎಂಟಿಸಿಗೆ ತಗಲುವ ವೆಚ್ಚವನ್ನು ಸರಿದೂಗಿಸಲು ಬೆಂಗಳೂರಿಗೆ ಮೇಲೆ ಸಾರಿಗೆ ಸೆಸ್ ಹಾಕುವ ಪ್ರಸ್ತಾಪವನ್ನು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಅವರು ಬಿಬಿಎಂಪಿ ಮುಂದಿಡಲಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಈ ವಿಚಾರದ ಬಗ್ಗೆ ಬಿಬಿಎಂಪಿಯ ವಿರೋಧಪಕ್ಷ ನಾಯಕ ಪದ್ಮನಾಭ ರೆಡ್ಡಿ ಪ್ರತಿಕ್ರಿಯಿಸಿ, ರಸ್ತೆಯಲ್ಲಿ ಓಡಾಡುವುದಕ್ಕೆ ಯಾವುದೇ ಸೆಸ್ ಕಟ್ಟಿ ಅಂತ ಜನರಿಗೆ ಹೇಳುವುದಕ್ಕೆ ಆಗೋದಿಲ್ಲ. ಯಾಕೆಂದರೆ ಸಾರ್ವಜನಿಕರು ಈಗಾಗಲೇ ಆಸ್ತಿ ತೆರಿಗೆ ಪಾವತಿ ಮಾಡುತ್ತಾರೆ. ಅದೇ ತೆರಿಗೆಯಲ್ಲಿ ಸರ್ಕಾರ ರಸ್ತೆ ಹಾಗೂ ಸಾರ್ವಜನಿಕ ಮೂಲಭೂತ ಸೌಕರ್ಯಗಳ ವ್ಯವಸ್ಥೆ ನಿರ್ವಹಣೆ ಮಾಡಬೇಕು. ರಸ್ತೆ ವಿಚಾರಕ್ಕೆ ಬಂದಾಗ ಪ್ರತಿಯೊಂದು ವಾಹನ ಖರೀದಿಸಿದಾಗ ಸಾರಿಗೆ ಸರ್ಕಾರಕ್ಕೆ ತೆರಿಗೆ ಪಾವತಿ ಮಾಡಲಾಗುತ್ತದೆ. ಹೀಗಿರುವಾಗ ಸೆಸ್ ಕಟ್ಟಿ ಅನ್ನೋದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

    ಡಿಸಿ ತಮ್ಮಣ್ಣ ವಿರುದ್ಧ ಬಿಬಿಎಂಪಿ ಪಾಲಿಕೆ ಸದಸ್ಯರು ಗರಂ ಆಗಿದ್ದು, ಈಗಾಗ್ಲೇ ಹಲವು ಸೆಸ್ ಗಳನ್ನು ಜನ ಕಟ್ಟುತ್ತಿದ್ದಾರೆ. ಈ ಮಧ್ಯೆ ಹೊಸ ಸೆಸ್ ಹಾಕೋ ಯಾವುದೇ ಪ್ರಸ್ತಾವನೆ ಸರಿಯಲ್ಲ. ಬಿಎಂಟಿಸಿ ಬಸ್ ಗಳೇ ಸಾಕಷ್ಟು ಜಾಹೀರಾತು ಹಾಕೊಂಡು ಬೆಂಗಳೂರಿನ ತುಂಬಾ ಓಡಾಡುತ್ತಿವೆ. ಬಿಎಂಟಿಸಿ ಓಡಾಡೋದ್ರಿಂದಲ್ಲೇ ನಮ್ಮ ರಸ್ತೆಗಳು ಹಾಳಾಗಿವೆ. ಹೀಗಾಗಿ ಬಿಎಂಟಿಸಿಯೇ ಬಿಬಿಎಂಪಿಗೆ ತೆರಿಗೆ ಕಟ್ಟಲಿ ಎಂದು ಕಿಡಿಕಾರಿದ್ದಾರೆ.

    ಸಾರಿಗೆ ಸೆಸ್ ಹಾಕುವ ನಿರ್ಧಾರಕ್ಕೆ ಮೇಯರ್ ಸಂಪತ್‍ ರಾಜ್ ಪ್ರತಿಕ್ರಿಯಿಸಿ, ಈ ಬಗ್ಗೆ ಯಾವುದೇ ಪ್ರಸ್ತಾಪ ಬಿಬಿಎಂಪಿಗೆ ಬಂದಿಲ್ಲ. ಸಚಿವರು ಈ ರೀತಿಯ ಸೆಸ್ ಹಾಕುವ ವಿಚಾರ ಹೇಳಿದ್ದು ಗಮನಕ್ಕೆ ಬಂದಿದೆ. ಬಿಎಂಟಿಸಿ ಬಸ್ ಗಳ ಓಡಾಟದಿಂದ ನಮ್ಮ ರಸ್ತೆಗಳು ಹಾಳಾಗುತ್ತಿವೆ ಎನ್ನುವ ವಿಚಾರ ಹಲವು ಬಾರಿ ಪಾಲಿಕೆಯಲ್ಲಿ ಚರ್ಚೆಯಾಗಿದೆ. ಸೆಸ್ ವಿಧಿಸುವುದು ಅಷ್ಟು ಸುಲಭದ ಕೆಲಸವಲ್ಲ. ಜಾರಿಯಾಗುವ ಮೊದಲು ಸರ್ಕಾರದ ವಲಯದಲ್ಲಿರುವ ಚರ್ಚೆಯಾಗಬೇಕು. ಪಾಲಿಕೆಯಲ್ಲಿ ಚರ್ಚೆಯಾಗಬೇಕು. ಇದೂವರೆಗೂ ಈ ಪ್ರಸ್ತಾಪ ನಮಗೆ ಬಂದಿಲ್ಲ. ಬಂದ ಮೇಲೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.

  • ಶೌಚಾಲಯ ಪರಿಶೀಲನೆ ನಡೆಸಿದ ಸಚಿವ ತಿಮ್ಮಣ್ಣ: ಮುಜುಗರಕ್ಕೀಡಾದ ಮಹಿಳೆಯರು

    ಶೌಚಾಲಯ ಪರಿಶೀಲನೆ ನಡೆಸಿದ ಸಚಿವ ತಿಮ್ಮಣ್ಣ: ಮುಜುಗರಕ್ಕೀಡಾದ ಮಹಿಳೆಯರು

    ಚಿಕ್ಕಮಗಳೂರು: ಬಸ್ ನಿಲ್ದಾಣದ ಶೌಚಾಲಯ ವ್ಯವಸ್ಥೆ ತಿಳಿಯಲು ಸಾರಿಗೆ ಸಚಿವ ಡಿಸಿ ತಿಮ್ಮಣ್ಣ ಅವರೇ ನೇರವಾಗಿ ಮಹಿಳಾ ಶೌಚಾಲಯಕ್ಕೆ ಹೋದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಸಾರಿಗೆ ಅಧಿಕಾರಿಗಳಿಗೆ ಚುರುಕು ಮುಟ್ಟಿಸಲು ಸಚಿವರು ಮುಂದಾಗಿದ್ದು, ಇಂದು ಚಿಕ್ಕಮಗಳೂರು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದ್ದರು. ಹೀಗಾಗಿ ಶೌಚಾಲಯದ ವ್ಯವಸ್ಥೆ ತಿಳಿಯಲು ಪುರುಷರು ಹಾಗೂ ಮಹಿಳಾ ಶೌಚಾಲಯಗಳಿಗೆ ಸ್ವತಃ ತಾವೇ ಭೇಟಿ ನೀಡಿ ಪರಿಶೀಲನೆಗೆ ಮುಂದಾದರು. ಮಹಿಳಾ ಶೌಚಾಲಯಕ್ಕೆ ಸಚಿವರ ಭೇಟಿಯಿಂದಾಗಿ ನಿಲ್ದಾಣದಲ್ಲಿದ್ದ ಮಹಿಳೆಯರು ಮುಜುಗರಕ್ಕೆ ಒಳಗಾದರು.

    ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಇಲ್ಲದಿರುವುದಕ್ಕೆ ಸಚಿವ ತಿಮ್ಮಣ್ಣ ಅವರು ಅಸಮಾಧಾನ ಹೊರಹಾಕಿ, ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. ಅಲ್ಲದೇ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.