Tag: DC Rohini Sindhuri

  • ರೋಹಿಣಿ ಸಿಂಧೂರಿಯಿಂದ 6 ಕೋಟಿ ಅಕ್ರಮ: ಸಾರಾ ಮಹೇಶ್ ಆರೋಪ

    ರೋಹಿಣಿ ಸಿಂಧೂರಿಯಿಂದ 6 ಕೋಟಿ ಅಕ್ರಮ: ಸಾರಾ ಮಹೇಶ್ ಆರೋಪ

    ಮೈಸೂರು: ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಮಹೇಶ್ 6 ಕೋಟಿ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದಾರೆ.

    ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಟ್ಟೆ ಬ್ಯಾಗ್ ಖರೀದಿಯಲ್ಲಿ ವ್ಯಾಪಕ ಅಕ್ರಮ ನಡೆಯುತ್ತಿದೆ. ಸುಮಾರು 6 ಕೋಟಿ ರೂ. ಅಕ್ರಮ ನಡೆದಿದೆ. ಸುಮಾರು 14,71,458 ಬಟ್ಟೆ ಬ್ಯಾಗ್ ಖರೀದಿ ಮಾಡಲಾಗಿದೆ. ಆದರೆ ಇದರ ವಾಸ್ತವ ಬೆಲೆ 1,47,15,000 ಆಗಿದೆ. ಅವರು ಖರೀದಿ ಮಾಡಿರುವುದು 7 ಕೋಟಿ ರೂ. ಕೊಟ್ಟು ಖರೀದಿ ಮಾಡಿದ್ದಾರೆ. ಅವರು ಬ್ಯಾಗ್‍ನಲ್ಲೇ 6 ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿದರು.ಇದನ್ನೂ ಓದಿ:ಸೆ.5ರಂದು ‘ಗೌರಿ ಲಂಕೇಶ್ ದಿನ’ವನ್ನಾಗಿ ಆಚರಿಸಲಿದೆ ಕೆನಡಾದ ಬರ್ನಾಬಿ ನಗರ

    ಈಜುಕೊಳ, ಜಿಮ್, ಕಟ್ಟಡ ನವೀಕರಣದ ಹಣವನ್ನು ಅವರಿಂದಲೇ ವಸೂಲಿ ಮಾಡಿ. ಸರ್ಕಾರದ ತನಿಖಾ ವರದಿಗಳ ಮೂಲಕ ಅವರ ತಪ್ಪು ಸಾಬೀತಾಗಿದೆ. ಅವರ 12 ವರ್ಷದ ಅವಧಿಯನ್ನು ಸೂಕ್ಷ್ಮವಾಗಿ ನಾನು ಗಮನಿಸಿದ್ದೇನೆ. ಅದಕ್ಕೆ ರೋಹಿಣಿ ಅವರು ಮೈಸೂರಿಗೆ ಬಂದಾಗ ವಿರೋಧಿಸಿದ್ದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    8 ಆರೋಪಗಳನ್ನು ಮಾಡಿದ ಸಾ.ರಾ!

    ನನ್ನ 8 ಆರೋಪಗಳ ಬಗ್ಗೆ ಅಧಿಕಾರಿಗಳೇ ವರದಿ ಕೊಟ್ಟಿದ್ದಾರೆ. ನಾನು ಸಿಎಂ ಹಾಗೂ ಸಿಎಸ್‍ರನ್ನು ಭೇಟಿ ಮಾಡಿದ್ದೇನೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ. ಮುಂದೆ ದಕ್ಷತೆ ಇಲ್ಲದ ಅಪ್ರಾಮಾಣಿಕ ಅಧಿಕಾರಿ ನೇಮಕ ಮಾಡದಂತೆ ಮನವಿ ಮಾಡಿಕೊಂಡಿದ್ದೇನೆ. ಕಟ್ಟಡ ಕಾಮಗಾರಿಯಲ್ಲಿ ಸರ್ಕಾರಿ ಹಣ ದುರುಪಯೋಗ ಮಾಡಿಕೊಂಡಿರುವುದು. ಪಾರಂಪರಿಕ ಕಟ್ಟಡದ ಆದೇಶವನ್ನು ಗಾಳಿಗೆ ತೂರಿರುವುದು. ಈ ಬಗ್ಗೆ ಅಧಿಕಾರಿಗಳೇ ವರದಿ ಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ:ಸುಧಾಮೂರ್ತಿ, ನಾರಾಯಣಮೂರ್ತಿಯನ್ನು ಶಾಲೆಯ ಉದ್ಘಾಟಕರಾಗಿ ಕರೆತರಬೇಕು: ಕಾರಜೋಳ

    ಇದು ಅಲ್ಲದೇ ಇನ್ನೂ ಮಹಾಮಸ್ತಕಾಭಿಷೇಕದಲ್ಲಿ ಎಷ್ಟು ಅಕ್ರಮ ಆಗಿರಬಹುದು. ರೋಹಿಣಿ ಸಿಂಧೂರಿ ಅವರ ಶಿಷ್ಯೆ ಎಂದು ಮನೀಷ್ ಅವರು ಹೇಳಿದ್ದರು. ಶಿಷ್ಯೆಗೆ ಇದೇ ಏನು ನೀವು ಹೇಳಿ ಕೊಟ್ಟಿರುವುದು? ಎಂದು ಮನೀಷ್ ಮುದ್ಗಲ್ ವಿರುದ್ದವೂ ವಾಗ್ದಾಳಿ ಮಾಡಿದರು.

    ಮುಖ್ಯ ಕಾರ್ಯದರ್ಶಿಗಳೇ ಏಕೆ ಸುಮ್ಮನಿದ್ದೀರಾ? ಎಲ್ಲಾ ದಾಖಲೆಗಳನ್ನು ನೀಡಿದರು ಸುಮ್ಮನೆ ಏಕೆ ಇದ್ದೀರಾ? ಕರ್ನಾಟಕ ರಾಜ್ಯದ ಜನರ ತೆರಿಗೆ ಹಣ ಆಂಧ್ರದಲ್ಲಿ ಆಸ್ತಿ ಮಾಡುವವರ ಪಾಲಾಗುತ್ತಿದೆ. ಇದಕ್ಕೆ ಸಿಎಂ ಮನೆಗೆ ಹೋಗಿದ್ದಿರಾ? ಈ ಕುರಿತು ಸಿಎಸ್ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ:ಚಿಂಕೆ ಭೇಟೆಯಾಡಿದ್ದವನ ಮೇಲೆ ಶೂಟೌಟ್

    ಈ ಬಗ್ಗೆ ಸಿಎಂ, ಸಿಎಸ್ ಭೇಟಿ ಮಾಡುತ್ತೇನೆ. ಅಮಾನತ್ತಿನಲ್ಲಿ ಇಟ್ಟು ತನಿಖೆ ಮಾಡಬೇಕು. ಇಲ್ಲ ಮುಖ್ಯ ಕಾರ್ಯದರ್ಶಿಗಳ ಕಚೇರಿ ಮುಂದೆ ಧರಣಿ ಮಾಡುತ್ತೇನೆ ಎಂದು ಹೇಳಿದರು.

    ಕೋವಿಡ್ ಸಂದರ್ಭದಲ್ಲಿ ತಾಯಿ ಹೃದಯ ಬೇಕು

    ಕೋವಿಡ್ ಸಂದರ್ಭದಲ್ಲಿ ತಾಯಿ ಹೃದಯ ಅಧಿಕಾರಿಗೆ ಇರಬೇಕಿತ್ತು. ಐಷಾರಾಮಿ ಜೀವನ ಮಾಡೋಕೆ ಸಾರ್ವಜನಿಕರ ಹಣ ಬಳಕೆ ಮಾಡಲಾಗಿದೆ. ಇದನ್ನು ಕೇಳಿದರೆ ನನ್ನ ಮೇಲೆ ಆರೋಪ ಮಾಡುತ್ತಾರೆ. ಗುತ್ತಿಗೆದಾರ ಕೊಡೋದೆಲ್ಲಾ ಅವರಿಗೆ ಕೊಟ್ಟಿದ್ದೇನೆ. ನಮಗೆ ಬಿಲ್ ಮಾಡಿಸಿ ಎಂದು ಗುತ್ತಿಗೆದಾರ ಕೇಳುತ್ತಿದ್ದಾರೆ. ಮೊದಲು ತನಿಖೆ ಆಗಬೇಕು. ಕ್ರಿಮಿನಲ್ ಕೇಸ್ ಬುಕ್ ಮಾಡಿ, ಕೆಲಸದಿಂದ ಅಮಾನತು ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರೋಹಿಣಿ ಸಿಂಧೂರಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅವರನ್ನು ಅಮಾನತು ಮಾಡಿ. ಇಲ್ಲ, ನಿಮ್ಮ ಕಚೇರಿ ಮುಂದೆ ಅಮರಾಣಾಂತ ಉಪವಾಸ ಮಾಡುತ್ತೇವೆ. ಒಳ್ಳೆಯ ಅಧಿಕಾರಿಗಳಿಗೆ ಕೈ ಮುಗಿಯುತ್ತೇವೆ. ಈ ರೀತಿಯ ಭ್ರಷ್ಟಾಚಾರ ಮಾಡುವ ಅಧಿಕಾರಿಗೆ ತಕ್ಕ ಶಿಕ್ಷೆಯಾಗಬೇಕು. ಬೇರೆ ಶಾಸಕರು ತಿರುಪತಿ ದೇವರಂತೆ ನಮಗೇಕೆ ಎಂದು ಸುಮ್ಮನಿದ್ದಾರೆ. ನಾನು ಶ್ರವಣ ಬೆಳಗೊಳದ ಗೊಮ್ಮಟೇಶ್ವರ ಇದ್ದಂತೆ ಎಂದು ಹೇಳಿದ್ದಾರೆ.

  • ಪ್ರತಾಪ್ ಸಿಂಹಗೆ ಶಕ್ತಿ ಇದ್ರೆ ಡಿಸಿಯನ್ನು ಬದಲಾವಣೆ ಮಾಡಿಕೊಳ್ಳಲಿ: ಡಿಕೆಶಿ

    ಪ್ರತಾಪ್ ಸಿಂಹಗೆ ಶಕ್ತಿ ಇದ್ರೆ ಡಿಸಿಯನ್ನು ಬದಲಾವಣೆ ಮಾಡಿಕೊಳ್ಳಲಿ: ಡಿಕೆಶಿ

    ಧಾರವಾಡ: ಮೈಸೂರು ಸಂಸದ ಪ್ರತಾಪ್ ಸಿಂಹರವರಿಗೆ ಶಕ್ತಿ ಇದ್ದರೆ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರನ್ನು ಬದಲಾವಣೆ ಮಾಡಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಪ್ರತಾಪ್ ಸಿಂಹ, ಸಚಿವರು ಸೇರಿ ಸಿಎಂ ಹತ್ತಿರ ಮಾತನಾಡಿ ಡಿಸಿ ಬದಲಾವಣೆ ಮಾಡಿಕೊಳ್ಳಲಿ. ಇದನ್ನೆಲ್ಲ ನೋಡಿ ಜನ ಉಗಿತಾ ಇದ್ದಾರೆ, ಡಿಸಿ ಕೆಲಸ ಪ್ರತಾಪ್ ಸಿಂಹ ಮಾಡಲು ಆಗುವುದಿಲ್ಲ. ಪ್ರತಾಪ್ ಸಿಂಹ ಕೆಲಸ ಡಿಸಿ ಮಾಡಲು ಆಗುವುದಿಲ್ಲ. ಏನೇ ಜಾರಿ ಮಾಡುವಿದ್ದರೂ ಡಿಸಿನೇ ಮಾಡಬೇಕು. ಸರಿಯೋ ತಪ್ಪೋ ಗೊತ್ತಿಲ್ಲ, ಆದರೆ ಇವರಿಗೆ ಸಮಸ್ಯೆ ಆದರೆ ಬದಲಿಸಿಕೊಳ್ಳಲಿ. ಐದೇ ನಿಮಿಷಕ್ಕೆ ಮಂತ್ರಿ, ಅಧಿಕಾರಿಗಳನ್ನು ಬದಲಿಸುತ್ತಿರಿ ಅಲ್ವಾ, ನಿಮಗೆ ಆಗದಿರುವವರನ್ನು ಬದಲಿಸಿಕೊಳ್ಳಿ, ನಿಮಗೆ ಬೇಕಾದವರನ್ನು ತಲೆ ಮೇಲೆ ಕುರಿಸಿಕೊಂಡು ಕೆಲಸ ಮಾಡಿ ಎಂದು ಕಿಡಿಕಾರಿದರು.

    ಇದೇ ವೇಳೆ ಸಚಿವರ ಸಿಡಿ ಕೇಸ್ ಪ್ರಕರಣ ವಿಚಾರವಾಗಿ ಮಾತನಾಡಿದ ಡಿಕೆಶಿ, ಅದ್ಯಾವುದೋ ಒಂದು ವಿಡಿಯೋ ನೋಡಿ ಕಾಲಿಗೆ ಗುಂಡು ಹಾಕಿದ್ದಾರೆ. ಇನ್ನೊಂದು ವಿಡಿಯೋ ನೋಡಿ ಸರ್ಟಿಫಿಕೇಟ್ ಕೊಡುತ್ತಿದ್ದರೆ. ಇದಕ್ಕೆಲ್ಲ ನಾವು ಒಂದು ಹೋರಾಟ ಮಾಡುತ್ತೇನೆ ಎಂದರು.

    ಎಸ್‍ಐಟಿ ಕಚೇರಿಗಳು ಎಷ್ಟಿವೆ? ಸರ್ಕಲ್ ಇನ್ಸ್‌ಪೆಕ್ಟರ್‌ಗಳೆಲ್ಲರ ಲಿಸ್ಟ್ ತರಿಸುತ್ತೇನೆ. ಬಸವರಾಜ ಬೊಮ್ಮಾಯಿ ಗೃಹ ಮಂತ್ರಿಯಾಗಿಯೇ ಇದಕ್ಕೆ ಸಪೋರ್ಟ್ ಮಾಡಿದ್ದಾರೆ. ಮುಖ್ಯಮಂತ್ರಿಯೇ ನಿರ್ದೋಷಿಯಾಗಿ ಸಿಡಿ ಕೇಸ್‍ನಿಂದ ಹೊರ ಬರುತ್ತಾರೆ ಅಂತಾ ಹೇಳಿದ್ದಾರೆ. ಆದರೆ ನಮ್ಮ ದೇಶದಲ್ಲಿ ಕೋರ್ಟ್ ಇನ್ನು ಬದುಕಿದೆ ಹರಿಹಾಯ್ದರು.

    ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಬದಲಾವಣೆಯಾದರೂ ಮಾಡಿಕೊಳ್ಳಲಿ. ಅವರ ಜೊತೆಯಾದರು ಇಟ್ಟುಕೊಳ್ಳಲಿ. ಅದು ಅವರ ಪಾರ್ಟಿ ವಿಚಾರ. ನಮ್ಮವರನ್ನ ಕರೆದುಕೊಂಡು ಹೋಗಿ ಸರ್ಕಾರ ಮಾಡುತ್ತಾರಾ. ನಾವೇನು ಮಾಡೋಕೆ ಆಗುತ್ತೆ ಎಂದು ಹೇಳಿದರು. ಇದನ್ನು ಓದಿ: ಪ್ರತಾಪ್ ಸಿಂಹ ಪ್ರಶ್ನಿಸಿದ್ದಕ್ಕೆ ಕೋವಿಡ್ ಲೆಕ್ಕ ಬಿಡುಗಡೆ ಮಾಡಿದ ರೋಹಿಣಿ ಸಿಂಧೂರಿ

    ಕೋವಿಡ್ ನಿರ್ವಹಣೆಗೆ ಬಿಡುಗಡೆಯಾದ 41 ಕೋಟಿಯಲ್ಲಿ ವೆಚ್ಚ ಮಾಡಿರುವ 38 ಕೋಟಿ ರೂಪಾಯಿಯ ಲೆಕ್ಕ ಕೊಡಿ ಎಂದು ಸಂಸದ ಪ್ರತಾಪ್ ಸಿಂಹರವರು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಪ್ರಶ್ನಿಸಿದ್ದರು. ಈ ಹಿನ್ನೆಲೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭಾನುವಾರ ರಾತ್ರಿ ಮಾಧ್ಯಮಗಳ ಮೂಲಕ ಉತ್ತರ ನೀಡಿದ್ದರು.

  • ಪಿಪಿಇ ಕಿಟ್ ಧರಿಸಿಕೊಂಡ ಬ್ಲಾಕ್ ಫಂಗಸ್ ರೋಗಿಗಳ ಆರೋಗ್ಯ ವಿಚಾರಿಸಿದ ಡಿಸಿ ರೋಹಿಣಿ ಸಿಂಧೂರಿ

    ಪಿಪಿಇ ಕಿಟ್ ಧರಿಸಿಕೊಂಡ ಬ್ಲಾಕ್ ಫಂಗಸ್ ರೋಗಿಗಳ ಆರೋಗ್ಯ ವಿಚಾರಿಸಿದ ಡಿಸಿ ರೋಹಿಣಿ ಸಿಂಧೂರಿ

    – ಜಿಲ್ಲಾಧಿಕಾರಿಗಳ ಎದುರು ಕಣ್ಣೀರಿಟ್ಟ ಕೊರೊನಾ ರೋಗಿಯ ಸಂಬಂಧಿ
    – ಮೈಸೂರಿನಲ್ಲಿ 21 ಬ್ಲಾಕ್ ಫಂಗಸ್ ಪ್ರಕರಣ

    ಮೈಸೂರು : ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿನ ಬ್ಲಾಕ್ ಫಂಗಸ್ ರೋಗಿಗಳ ಚಿಕಿತ್ಸೆಯ ವಾರ್ಡ್ ಗೆ ಇಂದು ಡಿಸಿ ರೋಹಿಣಿ ಸಿಂಧೂರಿ ಪಿಪಿಇ ಕಿಟ್ ಹಾಕಿಕೊಂಡು ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು.

    ನಂತರ ಮಾತನಾಡಿದ ಅವರು ಮೈಸೂರಿನಲ್ಲಿ 21 ಬ್ಲಾಕ್ ಫಂಗಸ್ ಪ್ರಕರಣ ಇದೆ. ಕೆ.ಆರ್.ಆಸ್ಪತ್ರೆಯಲ್ಲಿ 17, ಜೆಎಸ್‍ಎಸ್ ಆಸ್ಪತ್ರೆಯಲ್ಲಿ 3, ಅಪೋಲೋದಲ್ಲಿ 1 ಪ್ರಕರಣ ಇದ್ದು ಬ್ಲಾಕ್ ಫಂಗಸ್‍ನಿಂದ ಒಬ್ಬರು ಇದುವರೆಗೆ ಮೃತಪಟ್ಟಿದ್ದಾರೆ. ಈಗಾಗಲೇ ಬ್ಲಾಕ್ ಫಂಗಸ್ ಇದ್ದವರಿಗೆ ಚಿಕಿತ್ಸೆ ಕೊಡುತ್ತಿದ್ದೇವೆ. ಆದರೆ ರೋಗದ ಲಕ್ಷಣ ಇದ್ದವರು ಆದಷ್ಟು ಬೇಗನೆ ಆಸ್ಪತ್ರೆಗೆ ಬರುತ್ತಿಲ್ಲ.ಒಂದೇ ಕಡೆ ಮೂಗು ಸೋರುವಿಕೆ, ತಲೆ ವಿಪರೀತ ನೋವು. ಇದೆಲ್ಲವು ಬ್ಲಾಕ್ ಫಂಗಸ್ ಲಕ್ಷಣಗಳು ಆಗಿದೆ ಎಂದು ವಿವರಿಸಿದ ಅವರು, ಈಗ ಕೆ.ಆರ್ ಆಸ್ಪತ್ರೆಯಲ್ಲಿರುವ ಎಲ್ಲಾ ರೋಗಿಗಳು ಕ್ಷೇಮವಾಗಿದ್ದಾರೆ.

    ರೋಗಿಗಳು ಸಂಪೂರ್ಣ ಗುಣಮುಖವಾಗಲು ಬರೋಬ್ಬರಿ ಮೂರು ವಾರವೇ ಬೇಕು. ಧ್ಯಾನ ಹಾಗೂ ಸರ್ಜರಿಯೇ ಇದಕ್ಕೆ ಮದ್ದು. ಮೊದಲ ಹಂತದಲ್ಲಿದ್ದರೆ ಅದನ್ನ ಔಷಧೀಯಲ್ಲೇ ಗುಣಪಡಿಸಬಹುದು. ಆದರೆ ನಂತರ ಬಂದರೆ ಸರ್ಜರಿ ಅನಿವಾರ್ಯವಾಗಿದೆ. ಆದಷ್ಟು ಜನರು ಈ ಬಗ್ಗೆ ನಿಗಾ ವಹಿಸಿ ಎಂದು ಡಿಸಿ ರೋಹಿಣಿ ಸಿಂಧೂರಿ ಹೇಳಿದರು.

    ಪ್ರತಿ ದಿನ ಆಂಟಿಜನ್ ಟೆಸ್ಟ್: ನಮ್ಮ ಮನೆಯಲ್ಲಿ ನಾಲ್ವರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಮೂವರು ಮನೆಯಲ್ಲಿ, ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಆರೋಗ್ಯ ಸುಧಾರಣೆ ಕಂಡಿದೆ. ನಾನು ಕೋವಿಡ್ ಚೆಕ್ ಮಾಡಿಸಿದಾಗ ನೆಗೆಟಿವ್ ಬಂದಿದೆ. ನಾನು ನಿತ್ಯವೂ ಕೂಡ ಕೊರೊನಾ ತಪಾಸಣೆ ಮಾಡಿಸುತ್ತೇನೆ. ಆಂಟಿಜನ್ ಟೆಸ್ಟ್ ಮಾಡಿಸಿದ ಬಳಿಕವೇ ನಾನು ಸಹ ಕೆಲಸಕ್ಕೆ ಬರೋದು. ನಮ್ಮಿಂದಲೂ ಯಾರಿಗೂ ಸಮಸ್ಯೆ ಆಗಬಾರದು. ಹಾಗಾಗಿ ದಿನದ ತಪಾಸಣೆಯಲ್ಲಿ ನೆಗೆಟಿವ್ ಇದ್ದರೆ ಮಾತ್ರ ಕರ್ತವ್ಯಕ್ಕೆ ಬರುತ್ತೇನೆ ಎಂದು ಡಿಸಿ ರೋಹಿಣಿ ಸಿಂಧೂರಿ ಮಾಹಿತಿ ನೀಡಿದರು.

    ಇದು ಮೊದಲಲ್ಲ, ಮೂರನೇ ಬಾರಿ: ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿನ ಕೋವಿಡ್ ಪಾಸಿಟಿವ್ ರೋಗಿಗಳ ಆರೋಗ್ಯವನ್ನು ವಿಚಾರಿಸಲು ಹಿಂದೆ ಎರಡು ಬಾರಿ ಪಿಪಿಇ ಕಿಟ್ ಹಾಕಿಕೊಂಡು ವಾರ್ಡ್ ಗೆ ಹೋಗಿದ್ದೇನೆ. ಇಂದು ಮೂರನೇ ಭೇಟಿ. ಮಾಧ್ಯಮದವರಿಗೆ ಹಿಂದೆ ಮಾಹಿತಿ ನೀಡಿರಲಿಲ್ಲ. ಇವತ್ತು ಬ್ಲ್ಯಾಕ್ ಫಂಗಸ್ ಬಗ್ಗೆ ಜನರಿಗೆ ಅಗತ್ಯ ಮಾಹಿತಿ ನೀಡುವ ಸಲುವಾಗಿ ಮಾಧ್ಯಮದವರನ್ನು ಕರೆಸಬೇಕಾಯಿತು ಎಂದು ಸ್ಪಷ್ಟಪಡಿಸಿದರು.

    ಸರ್ಕಾರದಿಂದ ಮಾರ್ಗಸೂಚಿ ಬಂದಿದೆ. ಎಲ್ಲಾ ಜಿಲ್ಲಾಧಿಕಾರಿಗಳು ಆಸ್ಪತ್ರೆಗೆ ಭೇಟಿ ಕೊಟ್ಟು ಮಾಹಿತಿ ಜೊತೆಗೆ ಸಭೆ ಮಾಡಬೇಕೆಂದು. ಹಾಗಾಗಿ ಕೆ.ಆರ್.ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೇನೆ. ಇದು ಮೊದಲ ಭೇಟಿಯಲ್ಲ, ಈಗಾಗಲೇ ಎರಡು ಬಾರಿ ಬಂದಿದ್ದೇನೆ. ಸದ್ಯ ಬ್ಲಾಕ್ ಫಂಗಸ್ ಹೆಚ್ಚಾಗಿರುವ ಕಾರಣ ಇಲ್ಲಿ ಹೆಚ್ಚಿನ ಗಮನ ಹರಿಸಿದ್ದೇವೆ. ಬ್ಲಾಕ್ ಫಂಗಸ್‍ನ ಸಮಸ್ಯೆ ಹೆಚ್ಚಾಗಿರುವ ಕಾರಣ. ನಾನು ಕೆ.ಆರ್ ಆಸ್ಪತ್ರೆ ಭೇಟಿ ಕೊಟ್ಟು ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ. ಇದಕ್ಕೆ ಬೇಕಾದ ಸೂಕ್ತ ಔಷಧಿ ಬಗ್ಗೆ ಸರ್ಕಾರಕ್ಕೆ ತಿಳಿಸುತ್ತೇನೆ. ಜೆಎಸ್‍ಎಸ್ ಆಸ್ಪತ್ರೆಯಿಂದಲು ಔಷಧಿಯ ಬೇಡಿಕೆ ಬಂದಿದೆ. ಹಾಗಾಗಿ ಸರ್ಕಾರಕ್ಕೆ ಪತ್ರ ಬರೆದು ಔಷಧಿಗಾಗಿ ಮನವಿ ಮಾಡುತ್ತೇವೆ. ಸದ್ಯ ಇರುವುದರಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿದ್ದೇವೆ. ಅವರಿಗೆ ಸಮಸ್ಯೆ ಆಗದಂತೆ ಎಚ್ಚರ ವಹಿಸಿದ್ದೇವೆ ಎಂದರು.

    ಜಿಲ್ಲಾಧಿಕಾರಿಗಳ ಎದುರು ಕಣ್ಣೀರಿಟ್ಟ ಕೊರೊನಾ ರೋಗಿಯ ಸಂಬಂಧಿ: ಆಸ್ಪತ್ರೆಗೆ ಡಿಸಿ ರೋಹಿಣಿ ಸಿಂಧೂರಿ ಭೇಟಿ ನೀಡಿದ್ದ ವೇಳೆ ರೋಗಿಗಳ ಸಂಬಂಧಿಗಳು ಕೊರೊನಾ ವಾರ್ಡ್ ಗಳಲ್ಲಿನ ಅವ್ಯವಸ್ಥೆ ಬಗ್ಗರ ಗಮನಕ್ಕೆ ತಂದರು. ಮೆಡಿಸಿನ್ ಇಲ್ಲ, ವಾರ್ಡ್ ಗಳಲ್ಲಿ ಸ್ವಚ್ಚತೆ ಇಲ್ಲ. ಸೆಕ್ಯೂರಿಟಿಗಳು ಸೌಜನ್ಯವಾಗಿ ವರ್ತಿಸಲ್ಲ ಎಂದು ದೂರಿದರು. ಎಲ್ಲರ ದೂರು ಆಲಿಸಿದ ಡಿಸಿ ರೋಹಿಣಿ ಸಿಂಧೂರಿ, ತಕ್ಷಣವೇ ಕಂಪ್ಲೇಂಟ್ ಬಾಕ್ಸ್ ಆರಂಭಿಸಿ. ಪ್ರತಿ ರೋಗಿ ಸಂಬಂಧಿಯ ದೂರು ಅಲ್ಲಿ ದಾಖಲಾಗಲಿ. ಎಲ್ಲ ದೂರನ್ನು ನಾನೇ ಪ್ರತಿ ದಿನ ಸಂಜೆ ಪರಿಶೀಲಿಸುತ್ತೇನೆ ಎಂದರು.

    ನೀವೂ ಒಂದು ಹೆಣ್ಣಾಗಿ ಇಷ್ಟೊಂದು ಸೇವೆ ಮಾಡ್ತಿದ್ದೀರಾ. ನಿಮಗೆ ನಮ್ಮ ಧನ್ಯವಾದಗಳು, ಆದರೆ ಈ ಸಮಸ್ಯೆ ಬಗೆಹರಿಸಿ. ನಮಗೆ ನರ್ಸ್ ಕರೆ ಮಾಡಿ ಕೆಟ್ಟದಾಗಿ ಬೈತಾರೆ ಎಂದು ಮಹಿಳೆಯೊಬ್ಬರು ಡಿಸಿ ಬಳಿ ಕಣ್ಣೀರಿಟಟು ಬೇಸರ ಹೊರಹಾಕಿದರು. ಈ ವೇಳೆ ಮಹಿಳೆಗೆ ಸಾಂತ್ವನ ಹೇಳಿ ಅಧಿಕಾರಿಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.