Tag: dc priyanka mari francis

  • ಅಕ್ರಮ ಮರಳು ಮಾಫಿಯಾದವರ ಶೆಡ್ ತೆರವುಗೊಳಿಸಿ: ಉಡುಪಿ ಡಿಸಿ ಆದೇಶ

    ಅಕ್ರಮ ಮರಳು ಮಾಫಿಯಾದವರ ಶೆಡ್ ತೆರವುಗೊಳಿಸಿ: ಉಡುಪಿ ಡಿಸಿ ಆದೇಶ

    ಉಡುಪಿ: ಮರಳು ಮಾಫಿಯಾ ನಡೆಸುವ ಮಂದಿ ವಿರುದ್ಧ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಜಿಲ್ಲಾಧಿಕಾರಿ, ಎಸ್‍ಪಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿದ್ದಾರೆ.

    ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಹೊಳೆ ದಡದಲ್ಲಿರುವ ಅಕ್ರಮ ಶೆಡ್‍ಗಳನ್ನು ಮತ್ತು ಈ ಸಂಬಂಧ ಸಂಗ್ರಹಿಸಿಟ್ಟಿರುವ ಮೂಲ ಸೌಕರ್ಯಗಳನ್ನು ತಕ್ಷಣವೇ ತೆರವುಗೊಳಿಸಲು ಪೊಲೀಸರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಅಕ್ರಮಗಳನ್ನು ತಡೆಯಲು ನದಿ ತೀರದಲ್ಲಿ ನಿರ್ಮಿಸಲಾದ ಶೆಡ್‍ಗಳನ್ನು ತೆರವುಗೊಳಿಸಿ ಮುಟ್ಟುಗೋಲು ಹಾಕಲು ಆದೇಶ ಹೊರಡಿಸಿದ್ದಾರೆ.

    ಕಾರ್ಯಾಚರಣೆಗೆ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಪೊಲೀಸರನ್ನೊಳಗೊಂಡ ತಂಡದಲ್ಲಿ ಗಣಿ ಅಧಿಕಾರಿಗಳಿದ್ದು, ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಯ ನೇತೃತ್ವದಲ್ಲಿ ದಾಳಿ ನಡೆಸಲಿದ್ದಾರೆ.

    ಈ ಕಾರ್ಯಾಚರಣೆ ತಕ್ಷಣದಿಂದ ಕಾರ್ಯರೂಪಕ್ಕೆ ಬರಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸರ್ವೇ ಕಾರ್ಯ ಶುರುಮಾಡಿದ್ದಾರೆ. ಜಿಲ್ಲೆಯ ಮೂಲೆ ಮೂಲೆಯಲ್ಲಿರುವ ಮರಳು ದಿಬ್ಬಗಳಿಗೆ ಭೇಟಿಕೊಟ್ಟು ಜಿಪಿಎಸ್ ಸರ್ವೇ ನಡೆಸುತ್ತಿದ್ದಾರೆ. ಹೊಸ ಸರ್ವೇ- ಹೊಸಾ ಟೆಂಡರ್ ಕರೆಯಬೇಕೆಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

    ಕುಂದಾಪುರ ತಾಲೂಕಿನ ಕಂಡ್ಲೂರು ಗ್ರಾಮದಲ್ಲಿ ರಾತ್ರೋ ರಾತ್ರಿ ಭಾರೀ ಮರಳು ಕಳ್ಳಸಾಗಣೆ ನಡೆಯುತ್ತಿದೆ ಎಂಬ ಮಾಹಿತಿ ಜಿಲ್ಲಾಧಿಕಾರಿಗಳಿಗೆ ಸಿಕ್ಕಿತ್ತು. ಏಪ್ರಿಲ್ 2ರ ರಾತ್ರಿ 10 ಗಂಟೆ ಸುಮಾರಿಗೆ ಕಾರ್ಯಾಚರಣೆಗೆ ಹೊರಟ ಜಿಲ್ಲಾಧಿಕಾರಿ ಪ್ರಿಯಾಂಕ, ತಮ್ಮ ಗನ್ ಮ್ಯಾನ್ ಜೊತೆ ಜಿಲ್ಲಾ ಪಂಚಾಯತ್‍ನ ಕಾರನ್ನು ತೆಗೆದುಕೊಂಡು ತೆರಳಿದ್ದರು. ಅಕ್ರಮ ಮರಳುಗಾರಿಕೆ ದಾಳಿಗೆ ಕುಂದಾಪುರ ಎಸಿ ಶಿಲ್ಪಾ ನಾಗ್, ಸ್ಥಳೀಯ ಅಂಪಾರು ಗ್ರಾಮದ ಲೆಕ್ಕಾಧಿಕಾರಿ ಜೊತೆಯಾಗಿ ತೆರಳಿದ್ದರು. ಅಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಮರಳು ಕದಿಯುತ್ತಿದ್ದ ಕಳ್ಳರನ್ನು ಬಂಧಿಸಲು ಯತ್ನಿಸಿದಾಗ ಸ್ಥಳದಲ್ಲಿದ್ದ ಸುಮಾರು 40 ಜನ ಒಟ್ಟಾಗಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಎಸಿಯವರನ್ನು ಸುತ್ತುವರೆದಿದ್ದಾರೆ. ಈ ಸಂದರ್ಭ ಮಾತಿನ ಚಕಮಕಿ ನಡೆದು ಅಧಿಕಾರಿಗಳ ಹತ್ಯೆಗೆ ಸ್ಥಳೀಯರು ಮುಂದಾಗಿದ್ದರು.

    ಇದನ್ನೂ ಓದಿ: ಉಡುಪಿ ಡಿಸಿ ಮೇಲೆ ಕೊಲೆ ಯತ್ನ ನಡೆದ ಮರಳು ಅಡ್ಡೆ ಕಾಂಗ್ರೆಸಿಗರದ್ದು: ರಘುಪತಿ ಭಟ್