Tag: dc office

  • ಕೆಐಡಿಬಿಯಿಂದ 1700 ಎಕರೆ ಭೂ ಸ್ವಾಧೀನಕ್ಕೆ ರೈತರ ವಿರೋಧ – ಬೃಹತ್ ಟ್ರಾಕ್ಟರ್  ರ‍್ಯಾಲಿ

    ಕೆಐಡಿಬಿಯಿಂದ 1700 ಎಕರೆ ಭೂ ಸ್ವಾಧೀನಕ್ಕೆ ರೈತರ ವಿರೋಧ – ಬೃಹತ್ ಟ್ರಾಕ್ಟರ್ ರ‍್ಯಾಲಿ

    ಚಿಕ್ಕಬಳ್ಳಾಪುರ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲಿ ಈಗಾಗಲೇ ಕೆಐಡಿಬಿ ಹಂತ-ಹಂತವಾಗಿ ಭೂಮಿ ಸ್ವಾಧೀನ ಪಡಿಸಿಕೊಳ್ತಿದೆ. ಈ ಹಿನ್ನೆಲೆ ರೈತರು ಆಕ್ರೋಶಗೊಂಡಿದ್ದು, ಇಂದು ಬೃಹತ್ ಟ್ರಾಕ್ಟರ್ ರ‍್ಯಾಲಿ ಮಾಡಿದ್ದಾರೆ.

    ಕಳೆದ ಮೂರು ವರ್ಷಗಳಿಂದ ಸಾವಿರಾರು ಎಕರೆ ರೈತರ ಭೂಮಿಯನ್ನ ಸ್ವಾಧೀನಪಡಿಸಿಕೊಂಡಿದ್ದ ಕೆಐಡಿಬಿ, ಇದೀಗ ಎರಡನೇ ಹಂತವಾಗಿ ರೈತರ ಫಲವತ್ತಾದ ಭೂಮಿ ಸ್ವಾಧೀನಕ್ಕೆ ಮುಂದಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಇಂದು ರೈತರು ಟ್ರಾಕ್ಟರ್ ರ್ಯಾಲಿ ಮಾಡಿಕೊಂಡು ಬೆಂಗಳೂರು ಗ್ರಾಮಾಂತರ ಜಿಲ್ಲಾ ಡಿಸಿ ಭವನಕ್ಕೆ ಲಗ್ಗೆ ಇಟ್ಟು ಆಕ್ರೋಶ ಹೊರಹಾಕಿದ್ದಾರೆ.

    ಸರ್ಕಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪಕ್ಕದ ದೇವನಹಳ್ಳಿಯ ಹಲವು ಹಳ್ಳಿಗಳಲ್ಲಿ ಮುಂದಿನ ದಿನ ಕೈಗಾರಿಕೆ ಅನುಕೂಲವಾಗಲಿ ಎಂದು ಸಾವಿರಾರು ಎಕರೆ ಭೂಮಿಯನ್ನ ಸ್ವಾಧೀನಪಡಿಸಿಕೊಂಡಿದೆ. ರೈತರಿಗೆ ಮೊದಲನೇ ಹಂತದ ಭೂಮಿಗೆ ಪರಿಹಾರ ಕೊಡುವ ಪ್ರಕ್ರಿಯೆ ಕೂಡ ಮುಗಿದಿಲ್ಲ. ಇದೀಗ 13 ಹಳ್ಳಿಗಳ 1700 ಎಕರೆ ರೈತರ ಭೂಮಿಯನ್ನ ಎರಡನೇ ಹಂತದಲ್ಲಿ ಭೂ ಸ್ವಾಧೀನಕ್ಕೆ ಮುಂದಾಗಿದ್ದು, ರೈತರ ಆಕ್ರೋಶಗೊಂಡಿದ್ದಾರೆ. ಇದನ್ನೂ ಓದಿ:  ಮತ್ತೆ ಕ್ಲೋಸ್ ಆಯ್ತು ಫ್ಲೈಓವರ್ – ಕಳಪೆ ಕಾಮಗಾರಿ ಎಂದ ತಜ್ಞರು

    15 ದಿನಗಳಿಂದ ಭೂ-ಸ್ವಾಧೀನ ಕೈಬಿಡುವಂತೆ ರೈತರು ಧರಣಿ ನಡೆಸಿ 15 ದಿನಗಳ ಗಡುವನ್ನ ನೀಡಿದ್ದರು. ಆದ್ರೆ ಫಲಿತಾಂಶ ಬಾರದ ಕಾರಣ ಇಂದು 13 ಹಳ್ಳಿಗಳ ರೈತರು ಡಿಸಿ ಕಚೇರಿವರೆಗೂ ಟ್ರಾಕ್ಟರ್ ರ‍್ಯಾಲಿ ನಡೆಸಿ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಆಗ್ರಹಿಸಿದ್ದಾರೆ. ರೈತರು ಇಂದು ಟ್ರಾಕ್ಟರ್ ರ‍್ಯಾಲಿ ನಡೆಸಲು, ಎಲ್ಲ ಹಳ್ಳಿಗಳಿಂದ ಟ್ರಾಕ್ಟರ್ ಗಳು ಚನ್ನರಾಯಪಟ್ಟಣಕ್ಕೆ ತಂದು ಡಿಸಿ ಕಚೇರಿಗೆ ಹೊರಡಲು ಯೋಜನೆ ರೂಪಿಸಿದ್ದರು. ಹೀಗಾಗಿ ಪೊಲೀಸ್ ಇಲಾಖೆ ಅಧಿವೇಶನ ಹಿನ್ನೆಲೆ ರೈತರ ಹೋರಾಟ ಜೋರಾಗಬಹುದೆಂದು ಟ್ರಾಕ್ಟರ್ ಗಳನ್ನ ಸೀಜ್ ಮಾಡಲು ಬೆಳಗ್ಗೆಯಿಂದ ಮುಂದಾಗಿದ್ದರು.

    ಪರಿಣಾಮ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿತ್ತು. ಜೊತೆಗೆ ಚನ್ನರಾಯಪಟ್ಟಣ ಸರ್ಕಲ್ ನಿಂದ ಟ್ರಾಕ್ಟರ್ ಗಳು ತೆರಳಲು ಪೊಲೀಸರು ನಿರಾಕರಿಸಿದ್ರು. ಈ ಹೋರಾಟ ನೇತೃತ್ವ ವಹಿಸಿದ್ದ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೈರೇಗೌಡ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ನಾಲ್ಕು ಟ್ರಾಕ್ಟರ್ ಗಳಿಗೆ ಪೊಲೀಸರು ತೆರಳಲು ಅನುಮತಿ ನೀಡಿದ್ದು, ಟ್ರಾಕ್ಟರ್ ಗಳಲ್ಲೆ ಕುಳಿತ ರೈತರು ಡಿಸಿ ಕಚೇರಿವರೆಗೂ ರ‍್ಯಾಲಿಯಲ್ಲಿ ತೆರಳಿ ಭೂ-ಸ್ವಾಧೀನ ಕೈಬಿಡುವಂತೆ ಪ್ರತಿಭಟನೆ ನಡೆಸಿದ್ರು. ಇದನ್ನೂ ಓದಿ: ಪ್ರಿಯತಮನ ಕೊಲೆ ಮಾಡಿದ ಪ್ರಿಯತಮೆ 7 ವರ್ಷದ ಬಳಿಕ ಅರೆಸ್ಟ್!

    ಕೃಷಿ ಆಧಾರಿತ ಭೂಮಿಗಳನ್ನ ಸರ್ಕಾರ ಸ್ವಾಧೀನಪಡಿಸಿಕೊಂಡು ರೈತರನ್ನ ಸಂಕಷ್ಟಕ್ಕೆ ದುಡುತ್ತಿದೆ ಅಂತ ಆಕ್ರೋಶ ಹೊರಹಾಕಿದ್ರು. ವಿಮಾನ ನಿಲ್ದಾಣದ ಪಕ್ಕದ ಚನ್ನರಾಯಪಟ್ಟಣ ಹೋಬಳಿಯ ಹಲವು ಹಳ್ಳಿಗಳ ರೈತರ ಭೂಮಿಯನ್ನ ಮುಂದಿನ ಕೈಗಾರಿಕಾ ಘಟಕ ಸ್ಥಾಪನೆಗೆ ಕೆಐಡಿಬಿ ಭೂ-ಸ್ವಾಧೀನಕ್ಕೆ ಮುಂದಾಗಿದೆ. ಇದಕ್ಕೆ ಹಲವು ರೈತರು ತೀವ್ರ ವಿರೋಧ ವ್ಯಕ್ತಪಡಿಸಿ ಎರಡು ಬಾರಿ ಬೃಹತ್ ಹೋರಾಟ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

  • ಅಂಗಾರ ವಿರುದ್ಧ ಭೋಜೇಗೌಡ ಕಿಡಿ – ಡಿಸಿ ಕಚೇರಿ ಬಳಿ ಏಕಾಂಗಿ ಪ್ರತಿಭಟನೆ

    ಅಂಗಾರ ವಿರುದ್ಧ ಭೋಜೇಗೌಡ ಕಿಡಿ – ಡಿಸಿ ಕಚೇರಿ ಬಳಿ ಏಕಾಂಗಿ ಪ್ರತಿಭಟನೆ

    ಚಿಕ್ಕಮಗಳೂರು: ಜಿಲ್ಲಾಡಳಿತ ನನ್ನನ್ನು ನಿರ್ಲಕ್ಷ್ಯ ಮಾಡಿದೆ. ಜಿಲ್ಲಾಧಿಕಾರಿ ಉದ್ದೇಶ ಪೂರ್ವಕವಾಗಿ ಮಾಡಿದ್ದರೆ ಪ್ರಿವಿಲೇಜ್ ಮೂವ್ ಮಾಡಿ ಏನೆಂದು ತೋರಿಸುತ್ತಿದ್ದೆ. ಆದರೆ, ಇಲ್ಲಿ ಜಿಲ್ಲಾಧಿಕಾರಿಯನ್ನು ರಾಜಕಾರಣದ ಕೈಗೊಂಬೆ ಮಾಡಿಕೊಂಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ ಭೋಜೇಗೌಡರು, ಇಂದು ಜಿಲ್ಲಾಡಳಿತ ನನ್ನನ್ನು ನಿರ್ಲಕ್ಷ್ಯ ಮಾಡಿದೆ. ಯಾವುದೇ ಸಭೆ-ಕಾರ್ಯಕ್ರಮಗಳಿಗೆ ಕರೆಯುವುದಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿಯಾಗಿ ಕೂತು ಪ್ರತಿಭಟನೆ ನಡೆಸಿದರು.

    ಜಿಲ್ಲಾ ಮಂತ್ರಿಗಳಿಗೆ ಪ್ರೋಟೋಕಾಲ್ ಏನೆಂದು ಗೊತ್ತಿಲ್ಲವೇ? ಎಂಟು ಬಾರಿ ಶಾಸಕರಾಗಿದ್ದಾರೆ, ನಾನು ಹೇಳಿಕೊಡಬೇಕಾ? ಒಂದು-ಎರಡು ಬಾರಿಯಲ್ಲ ಹಲವು ಬಾರಿ ಹೇಳಿದ್ದೇನೆ. ಅವರು ನಮಗೆ ಬುದ್ಧಿ ಹೇಳಬೇಕು. ಸರ್ಕಾರ ಅವರಿಗೆ ಜನರ ದುಡ್ಡಲ್ಲಿ ಎಲ್ಲಾ ಅಧಿಕಾರಿಗಳನ್ನು ನೀಡಿದೆ. ಕೈಗೊಬ್ಬ-ಕಾಲಿಗೊಬ್ಬ ಪಿಎಗಳು ಇದ್ದಾರೆ. ಪಿಎಗಳ ಮೂಲಕ ಶಾಸಕರಿಗೆ ನಿಮ್ಮ ಪ್ರವಾಸದ ಕಾರ್ಯಕ್ರಮವನ್ನು ತಿಳಿಸಲು ಆಗುವುದಿಲ್ಲವೇ? ನಿಮ್ಮ ತಿಂಗಳ ಪ್ರವಾಸದ ಕಾಪಿ ಹಾಕುವುದಿಲ್ಲವೇ, ಕಾರ್ಯಕ್ರಮದ ಕಾಪಿಯನ್ನು ಶಾಸಕರಿಗೆ ಏಕೆ ಕಳಿಸುವುದಿಲ್ಲ ಎಂದು ಸಚಿವ ಅಂಗಾರ ವಿರುದ್ಧ ಕಿಡಿಕಾರಿದ್ದಾರೆ.

    ಆರಂಭದಲ್ಲೇ ಜಿಲ್ಲಾ ಮಂತ್ರಿಗಳಿಗೂ ಹೇಳಿದ್ದೇನೆ. ಪ್ರಾಣೇಶ್ ಇದ್ದರೂ ನಿನ್ನದು ಬರಬೇಕು ಕಣಯ್ಯ ಎಂದಿದ್ದೇನೆ. ಅವರು ಉಪಸಭಾಪತಿ ಗೌರವವಿದೆ, ಸಮಾಧಾನದಲ್ಲಿ ಹೇಳಿದ್ದೇನೆ. ಅಧಿಕಾರಿಗಳ ಸಭೆಗಳಲ್ಲಿ ಭೋಜೇಗೌಡ ಇರುವುದಿಲ್ಲ ಸಭೆಯಲ್ಲಿ ಶಾಸಕರು, ಸಂಸದರು ಕೂತಾಗ ನಮಗೆ ಬೇರೆಯವರು ಕೇಳುತ್ತಾರೆ. ನಾನೊಬ್ಬ ಜನಪ್ರತಿನಿಧಿಯಾಗಿ ಸಭೆಗೆ ಹೋಗಿಲ್ಲ ಅಂದರೆ ಜನ ಏನೆಂದು ತಿಳಿದುಕೊಳ್ಳುತ್ತಾರೆ. ನೀವು ಶಿಷ್ಟಾಚಾರವನ್ನು ಪಾಲನೆ ಮಾಡಿದ್ದೀರಾ? ನಾನು ಶಾಸಕ ಅಲ್ವಾ. 6 ಜಿಲ್ಲೆ 39 ತಾಲೂಕಿನಲ್ಲಿ ನನಗೆ ಪ್ರೋಟೋಕಾಲ್ ಇದೆ ಎಂದು ಹೇಳಿದರು. ಇದನ್ನೂ ಓದಿ: ಉತ್ತಮ ಆಡಳಿತ ಕೊಡುವ ಮನೋಭಾವ ಇದ್ರೆ ಖಾತೆ ಕ್ಯಾತೆ ಬರಲ್ಲ- ಅಸಮಾಧಾನಿತರನ್ನು ಚಿವುಟಿದ ಅಂಗಾರ

    ಇದು ನನ್ನ ನೋಡೆಲ್ ಕ್ಷೇತ್ರ. ನಿಮ್ಮ ಗುಂಪುಗಾರಿಕೆ ಇದ್ದರೆ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ. ಜಿಲ್ಲಾ ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ ನನಗೆ ಅದು ಗೊತ್ತಿದೆ. ಆ ಶಾಸಕರು, ಈ ಶಾಸಕರನ್ನು ಕರೆಯಬಾರದು ಎಂದು ನಿಮ್ಮ ಗುಂಪುಗಾರಿಕೆಯಿಂದ ನಿಮ್ಮ ಪಕ್ಷದ ಕಚೇರಿಯಲ್ಲಿ ಅಥವಾ ಮನೆಯಲ್ಲಿ ಇಟ್ಟುಕೊಳ್ಳಿ ಎಂದು ಹೇಳಿ ಅಂಗಾರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

  • ದೆಹಲಿ ಗಲಭೆ ಖಂಡಿಸಿ ಹಾವೇರಿಯಲ್ಲಿ ರೈತರ ಉಪವಾಸ ಸತ್ಯಾಗ್ರಹ

    ದೆಹಲಿ ಗಲಭೆ ಖಂಡಿಸಿ ಹಾವೇರಿಯಲ್ಲಿ ರೈತರ ಉಪವಾಸ ಸತ್ಯಾಗ್ರಹ

    ಹಾವೇರಿ: ಗಣರಾಜ್ಯೋತ್ಸವ ದಿನದಂದು ರೈತರ ಹೆಸರಿನಲ್ಲಿ ದೆಹಲಿಯಲ್ಲಿ ನಡೆದ ಕಿಡಿಗೇಡಿಗಳ ಕೃತ್ಯ ಖಂಡಿಸಿ ಹಾವೇರಿಯಲ್ಲಿ ರೈತಸಂಘದ ಕಾರ್ಯಕರ್ತರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.

    ರೈತರು ನ್ಯಾಯಯುತ ಬೇಡಿಕೆಗಾಗಿ ಸತ್ಯಾಗ್ರಹ ನಡೆಸುವಾಗ ರೈತರ ಸತ್ಯಾಗ್ರಹಕ್ಕೆ ಮಸಿ ಬಳಿಯಲು ಕೆಲವು ಕಿಡಿಗೇಡಿಗಳು ಕೃತ್ಯ ನಡೆಸಿದ್ದಾರೆ. ಹೀಗಾಗಿ ಕಿಡಿಗೇಡಿಗಳ ಕೃತ್ಯವನ್ನ ಖಂಡಿಸಿ ಸತ್ಯಕ್ಕೆ ಸಾವಿಲ್ಲ ಎಂಬ ಘೋಷಣೆಯಡಿ ರೈತರು ನಗರದ ಜಿಲ್ಲಾಡಳಿತ ಭವನದ ಮುಂದೆ ಸತ್ಯಾಗ್ರಹ ನಡೆಸಿದರು.

    ದೆಹಲಿಯಲ್ಲಿನ ರೈತರ ಸತ್ಯಾಗ್ರಹ ಹತ್ತಿಕ್ಕಲು ಕಾಣದ ಕೈಗಳು ಕಿಡಿಗೇಡಿಗಳ ಮೂಲಕ ಕೃತ್ಯ ನಡೆಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಮತ್ತು ರಾಜ್ಯ ಸರಕಾರದ ರೈತ ವಿರೋಧಿ ನೀತಿ ವಿರುದ್ಧ ರೈತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಕೂಡಲೇ ಸರಕಾರಗಳು ರೈತರ ಸತ್ಯಾಗ್ರಹಕ್ಕೆ ಮಸಿ ಬಳಿಯುವ ಕೃತ್ಯಗಳನ್ನು ಮಾಡುವ ಕಿಡಿಗೇಡಿಗಳನ್ನು ಬಿಡದೇ ರೈತರ ನ್ಯಾಯಯುತ ಬೇಡಿಕೆ ಈಡೇರಿಸಲು ಮುಂದಾಗಬೇಕಿದೆ ಎಂದು ಆಗ್ರಹಿಸಿದರು.

  • ಡಿಸಿ ಕಚೇರಿಯಲ್ಲಿ ಅನಂತ್‍ಕುಮಾರ್ ಹೆಗ್ಡೆ ಧರಣಿ- ಅಧಿಕಾರಿಗಳು ಕಕ್ಕಾಬಿಕ್ಕಿ!

    ಡಿಸಿ ಕಚೇರಿಯಲ್ಲಿ ಅನಂತ್‍ಕುಮಾರ್ ಹೆಗ್ಡೆ ಧರಣಿ- ಅಧಿಕಾರಿಗಳು ಕಕ್ಕಾಬಿಕ್ಕಿ!

    – ಬಿಎಸ್‍ಎನ್‍ಎಲ್ ಅಧಿಕಾರಿಗಳಿಗೆ ಸಂಸದರ ಖಡಕ್ ವಾರ್ನಿಂಗ್
    – ರಾತ್ರಿ 9 ಬಳಿಕ ಬಿಡುಗಡೆಯಾದ ಅಧಿಕಾರಿಗಳು

    ಕಾರವಾರ: ಕೆಲಸ ಆಗುವವರೆಗೂ ಧರಣಿ ಕೂರುತ್ತೇನೆ. ಇಂದು ಎಲ್ಲಿಗೂ ಹೋಗೊಲ್ಲ ಎಂದು ಸಂಸದ ಅನಂತ್‍ಕುಮಾರ್ ಹೆಗ್ಡೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಧರಣಿ ಕುಳಿತ ಪ್ರಸಂಗ ಇಂದು ನಡೆದಿದೆ. ಬಳಿಕ ರಾತ್ರಿ 9 ಗಂಟೆ ಸುಮಾರಿಗೆ ಸಂಸದರು ಕಚೇರಿಯಿಂದ ಹೊರ ನಡೆದು ಮಂಗಳವಾರದವರೆಗೆ ಅಧಿಕಾರಿಗಳಿಗೆ ಸಮಯ ನೀಡಿದ್ದಾರೆ.

    ಹೌದು. ಈ ಕೋಪಕ್ಕೆ ಕಾರಣವೂ ಇದೆ. ಗುರುವಾರ ಕಾರವಾರದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಂಸದರು ಮಧ್ಯಾಹ್ನದ ವೇಳೆ ಜಿಲ್ಲೆಯಲ್ಲಿನ 231 ಗ್ರಾಮ ಪಂಚಾಯ್ತಿಗಳಿಗೆ ಉಚಿತ ಬಿಎಸ್‍ಎನ್‍ಎಲ್ ವೈಫೈ ನೀಡಿರುವ ಕುರಿತು ಮಾಹಿತಿ ಪಡೆದರು. ಈ ವೇಳೆ ಜಿಲ್ಲೆಯಲ್ಲಿ ಎಲ್ಲಾ ಗ್ರಾಮಪಂಚಾಯ್ತಿಗಳಿಗೂ ವೈಪೈ ನೀಡಲಾಗಿದ್ದು, ಕಾರ್ಯನಿರ್ವಹಿಸುತ್ತಿದೆ ಎಂದು ಬಿಎಸ್‍ಎನ್‍ಎಲ್‍ನ ಜಿಎಂ ಆರ್.ವಿ.ಜನ್ನು ದಾಖಲೆಗಳನ್ನು ನೀಡಿದರು. ಆದರೆ ಜಿಲ್ಲೆಯಲ್ಲಿ ಉಚಿತ ವೈಫೈ ನೀಡಿರುವ ಪೈಕಿ ಕೇವಲ 148 ಗ್ರಾಮ ಪಂಚಾಯ್ತಿಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಉಳಿದ 62 ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ.

    ಇದಲ್ಲದೇ ಈ ಹಿಂದೆ ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯದ ಕಾರ್ಯಕ್ರಮದಲ್ಲಿ ಬಿಎಸ್‍ಎನ್‍ಎಲ್‍ನ ನೆಟ್‍ವರ್ಕ್ ಸಮಸ್ಯೆ ಸರಿಪಡಿಸುವಂತೆ ಜನರು ಕೇಳಿಕೊಂಡಿದ್ದರು. ಹೀಗಾಗಿ ಈ ಕುರಿತು ಸಹ ಪಬ್ಲಿಕ್ ಟಿವಿ ಸಂಸದರಿಗೆ ಮಾಹಿತಿ ನೀಡಿತ್ತು. ಬಿಎಸ್‍ಎನ್‍ಎಲ್‍ನ ಸುಳ್ಳುಮಾಹಿತಿ ಬಗ್ಗೆ ಬೆಳಕು ಚಲ್ಲಿತ್ತು. ಜಿಲ್ಲೆಯಲ್ಲಿ ಗ್ರಾಮಪಂಚಾಯ್ತಿಗಳಿಗಲ್ಲದೇ ಹಲವು ಮೊಬೈಲ್ ಟವರ್ ಸಿದ್ಧವಾಗಿದ್ದರೂ ಯಾವುದೂ ಕೂಡ ಕಾರ್ಯನಿರ್ವಹಿಸದಿದ್ದರೂ ಬಿಎಸ್‍ಎನ್‍ಎಲ್ ಅಧಿಕಾರಿಗಳು ಎಲ್ಲವೂ ಸುಸ್ಥಿತಿಯಲ್ಲಿದೆ ಎಂದು ಸುಳ್ಳುದಾಖಲೆ ತೋರಿಸಿತ್ತು. ಹೀಗಾಗಿ ಈ ವಿಷಯ ಕುರಿತು ಗರಂ ಆದ ಸಂಸದ ಅನಂತ್‍ಕುಮಾರ್ ಹೆಗ್ಡೆ ಸಂಜೆ ಆರು ಘಂಟೆಗೆ ಮುಗಿಯಬೇಕಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಂದೇ ಎಲ್ಲಾ ಸರಿಯಾಗಬೇಕು ಎಂದು ಪಟ್ಟು ಹಿಡಿದರು.

    ಅಷ್ಟಕ್ಕೇ ಸುಮ್ಮನಾಗದ ಸಂಸದರು ಇಂದೇ ಸರಿಯಾಗಬೇಕು ಅಲ್ಲಿವರೆಗೂ ಕಚೇರಿ ಬಿಟ್ಟು ನಾನೂ ತೆರಳುವುದಿಲ್ಲ ನೀವೂ ತೆರಳುವಂತಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲೇ ಕುಳಿತರು. ಇದರಿಂದಾಗಿ ಬಿಎಸ್‍ಎನ್‍ಎಲ್ ಅಧಿಕಾರಿಗಳು ಕಕ್ಕಾ ಬಿಕ್ಕಿಯಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲೇ ಲಾಕ್ ಆಗಿದ್ದರು.

    ಈ ಮಧ್ಯೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಂಸದರು, “ಒಂದು ವರ್ಷಗಳಿಂದ ಬಿಎಸ್‍ಎನ್‍ಎಲ್, ಜಿಎಸ್‍ಎನ್‍ಎಲ್, ಸಿಎಸ್‍ಎ ತಮ್ಮ ಆಂತರಿಕ ಜಗಳದಿಂದ ಗ್ರಾಮ ಪಂಚಾಯ್ತಿಗಳಿಗೆ ವೈಫೈ ನೀಡದೆ ಇಡೀ ಗ್ರಾಮ ಪಂಚಾಯ್ತಿ ಕಾರ್ಯ, ಚಟುವಟಿಕೆ ನಿಂತುಹೋಗುವಂತಾಗಿದೆ. ಇಂದೇ ಎಲ್ಲಾ ಸಮಸ್ಯೆ ಬಗೆಹರಿಯಬೇಕು ಅಲ್ಲಿಯವರೆಗೂ ಕಚೇರಿ ಬಿಟ್ಟು ತೆರಳುವುದಿಲ್ಲ ಇಲ್ಲಿಯೇ ಧರಣಿ ಕೂರುತ್ತೇನೆ, ಅಧಿಕಾರಿಗಳನ್ನು ಸಹ ಬಿಡುವುದಿಲ್ಲ ಎಂದರು.

    ಅಧಿಕಾರಿಗಳು ಸಹ ಸಂಸದರ ಈ ದಿಢೀರ್ ನಿರ್ಧಾರದಿಂದ ತಲೆಕೆಡಿಸಿಕೊಂಡಿದ್ದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದರನ್ನು ಓಲೈಸುವ ಕೆಲಸ ಮಾಡಿದರು. ಬಳಿಕ ಸುಮಾರು ರಾತ್ರಿ 9 ಗಂಟೆ ಸುಮಾರಿಗೆ ಸಂಸದರು ಜಿಲ್ಲಾಧಿಕಾರಿಗಳ ಕಚೇರಿಯಿಂದ ಹೊರ ಬಂದರು.

  • ಕೊರೊನಾ ಭೀತಿ: ಡಿಸಿ ಕಚೇರಿ ಸಿಬ್ಬಂದಿಗೆ ಮರದ ಕೆಳಗೆ ಕೆಲಸ

    ಕೊರೊನಾ ಭೀತಿ: ಡಿಸಿ ಕಚೇರಿ ಸಿಬ್ಬಂದಿಗೆ ಮರದ ಕೆಳಗೆ ಕೆಲಸ

    – ಸಾರ್ವಜನಿಕರಿಗೆ ವಿನಾಕಾರಣ ಕಚೇರಿ ಒಳಗೆ ಪ್ರವೇಶವಿಲ್ಲ

    ರಾಯಚೂರು: ಕೊರೊನಾ ವೈರಸ್ ಭೀತಿಯಿಂದ ರಾಯಚೂರಿನಲ್ಲಿ ಸರ್ಕಾರಿ ಅಧಿಕಾರಿಗಳು ಬೀದಿಗೆ ಬರುವಂತಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚು ಸಾರ್ವಜನಿಕ ಸಂಪರ್ಕ ಇರುವ ಜಿಲ್ಲಾಧಿಕಾರಿ ಕಚೇರಿಯ ಆವಾಕ, ಜಾವಕ ವಿಭಾಗಗಳನ್ನ ಕಚೇರಿಯಿಂದ ಹೊರಕ್ಕೆ ಇಡಲಾಗಿದೆ. ವಾಹನ ಪಾರ್ಕಿಂಗ್ ಬಳಿ ಟೇಬಲ್ ಹಾಕಿಕೊಂಡು ಸಿಬ್ಬಂದಿ ಕುಳಿತಿದ್ದಾರೆ.

    ರಸ್ತೆಯಲ್ಲೆ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿರುವ ಸಿಬ್ಬಂದಿ ಮರದ ಕೆಳಗೆ ಫೈಲ್ ಗಳನ್ನ ಹಿಡಿದು ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಆದೇಶದ ಮೇರೆಗೆ ಎರಡು ವಿಭಾಗ ಕಚೇರಿಯಿಂದ ಹೊರಗೆ ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ ಕಚೇರಿ ಆವರಣದಲ್ಲಿ ಹೆಚ್ಚು ಜನ ನಿಲ್ಲದಂತೆ ಸೂಚನೆ ನೀಡಲಾಗಿದ್ದು, ಗುಂಪುಗುಂಪಾಗಿ ಕಚೇರಿಗೆ ಬರುವ ಜನರನ್ನ ಪೊಲೀಸ್ ಸಿಬ್ಬಂದಿ ಚದುರಿಸುತ್ತಿದ್ದಾರೆ. ವಾಹನಗಳನ್ನ ಒಳಬರದಂತೆ ತಡೆಹಿಡಿಯುತ್ತಿದ್ದಾರೆ.

    ಸಂತೆ, ಜಾತ್ರೆ, ಉರುಸುಗಳನ್ನು ಬಂದ್ ಮಾಡಲಾಗಿದೆ. ಔಷಧಿ ಅಂಗಡಿಯಲ್ಲಿ ಹ್ಯಾಂಡ್ ಸೈನೆಟೈಸ್ ಹಾಗೂ ಮಾಸ್ಕ್ ಹೆಚ್ಚಿನ ದರ ಮಾರಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಅಂತ ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ. ಎನ್‍ಡಿಆರ್‍ಆಫ್ ನಿಂದ ಹಣ ಬಳಕೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಸೋಂಕಿತರ ಆರೋಗ್ಯಕ್ಕೆ ಬೇಕಾಗುವ ವಸ್ತು ಖರೀದಿಸಲು ಸೂಚಿಸಲಾಗಿದೆ.

    ಸರ್ಕಾರಿ ಕಚೇರಿಗಳಿಗೆ ಅನಾವಶ್ಯಕವಾಗಿ ಬರೋದು ಬೇಡ. ಡಿಸಿ ಕಚೇರಿಯಲ್ಲಿ ಆವಕ ಸಿಬ್ಬಂದಿಯನ್ನು ಹೊರಗಡೆ ನಿಯೋಜಿಸಲಾಗಿದೆ. ಬಾರ್ ಹಾಗೂ ರೆಸ್ಟೋರೆಂಟ್ ಇಂದಿನಿಂದ ಬಂದ್ ಮಾಡಲಾಗುವುದು. ಆಧಾರ್ ನೋಂದಣಿ ಕೇಂದ್ರಗಳನ್ನು ಒಂದು ವಾರ ಬಂದ್ ಮಾಡಲಾಗುವುದು. ಪ್ರತಿಭಟನೆ ಕೊಡುವವರು ಕಡಿಮೆ ಜನರು ಬಂದು ಮನವಿ ಕೊಡಿ ಅಂತ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.

  • ಮೈಕ್ರೋ ಫೈನಾನ್ಸ್ ಕಾಟ – ಕಿರುಕುಳಕ್ಕೆ ಬೇಸತ್ತ ಮಹಿಳೆಯರಿಂದ ಪ್ರತಿಭಟನೆ

    ಮೈಕ್ರೋ ಫೈನಾನ್ಸ್ ಕಾಟ – ಕಿರುಕುಳಕ್ಕೆ ಬೇಸತ್ತ ಮಹಿಳೆಯರಿಂದ ಪ್ರತಿಭಟನೆ

    ಶಿವಮೊಗ್ಗ: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್‌ನವರ ಕಾಟ ಹೆಚ್ಚಾಗಿದ್ದು, ಈ ಕೂಡಲೇ ಸಂತ್ರಸ್ತ ಮಹಿಳೆಯರ ಸಾಲ ಮನ್ನಾ ಮಾಡುವಂತೆ ಹಾಗೂ ಮೈಕ್ರೋ ಫೈನಾನ್ಸ್‌ಗಳನ್ನು ಮುಚ್ಚುವಂತೆ ಆಗ್ರಹಿಸಿ ಶಿವಮೊಗ್ಗದಲ್ಲಿ ಇಂದು ಜಿಲ್ಲಾ ಋಣಮುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಮಾಯಿಸಿದ ನೂರಾರು ಮಹಿಳೆಯರು ಈ ಕೂಡಲೇ ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಪಡೆದುಕೊಂಡವರ ಸಾಲವನ್ನು ಋಣಮುಕ್ತ ಕಾಯ್ದೆಯಡಿ ಜಾರಿಗೆ ತಂದು ಮನ್ನಾ ಮಾಡಬೇಕೆಂದು ಒತ್ತಾಯಿಸಿದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ಭಾಗದಲ್ಲಿ ರೈತ ಮತ್ತು ಕೂಲಿ ಕಾರ್ಮಿಕ ಮಹಿಳೆಯರ ಗುಂಪುಗಳನ್ನಾಗಿ ಮಾಡಿ ಮೈಕ್ರೋ ಫೈನಾನ್ಸ್‌ನವರು ಸಾಲ ನೀಡಿ ನಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರತಿಭಟನಾನಿರತ ನೊಂದ ಮಹಿಳೆಯರು ಆರೋಪಿಸಿದರು.

    ಗುಂಪಿನ ಆಧಾರದ ಮೇಲೆ ಸಾಲ ನೀಡಿರುವ ಫೈನಾನ್ಸ್‌ನ ಪ್ರತಿನಿಧಿಗಳು ನಿತ್ಯ ಮನೆಗೆ ಬಂದು ಕಿರುಕುಳ ನೀಡುತ್ತಿದ್ದಾರೆ. ಈಗಾಗಲೇ ಅತಿವೃಷ್ಟಿಯಿಂದಾಗಿ ಕೂಲಿ ಕೆಲಸವೂ ಇಲ್ಲದಂತಾಗಿದ್ದು, ರಾಷ್ಟ್ರೀಯ ಬ್ಯಾಂಕುಗಳಲ್ಲಿ ಬಡಜನತೆಗೆ ಸಾಲ ಸೌಲಭ್ಯ ನೀಡಲಾಗುತ್ತಿಲ್ಲ. ಹೀಗಾಗಿ ಮೈಕ್ರೋ ಫೈನಾನ್ಸ್ ಮೂಲಕ ಹಣ ಪಡೆದುಕೊಳ್ಳಲಾಗುತ್ತಿತ್ತು. ಇದೀಗ ಕಾನೂನುಗಳನ್ನು ಉಲ್ಲಂಘಿಸಿ ವಿಪರೀತ ಬಡ್ಡಿ ವಿಧಿಸಿ ನಮಗೆ ವಿನಾಕಾರಣ ಮೈಕ್ರೋ ಫೈನಾನ್ಸ್ ತೊಂದರೆ ನೀಡುತ್ತಿದೆ ಎಂದು ಮಹಿಳೆಯರು ದೂರಿದ್ದಾರೆ.

    ಶೇ. 25ರಿಂದ 40ರವರೆಗೆ ಬಡ್ಡಿ ವಿಧಿಸಿರುವುದು ಅಲ್ಲದೇ, ಸಾಲ ಪಡೆದಿರುವ ಮಹಿಳೆಯರ ಮನೆಗೆ ನಿರಂತರವಾಗಿ ಬಂದು ಕಿರುಕುಳ ನೀಡಲಾಗುತ್ತಿದೆ. ಈ ಕೂಡಲೇ ಜಿಲ್ಲಾಧಿಕಾರಿಗಳು ನೂರಾರು ಮಹಿಳೆಯರ ಸಮಸ್ಯೆ ಮನಗಂಡು ಮೈಕ್ರೋ ಫೈನಾನ್ಸ್‌ನವರ ವ್ಯವಹಾರಕ್ಕೆ ಕಡಿವಾಣ ಹಾಕಬೇಕಿದೆ. ಜೊತೆಗೆ ಋಣಮುಕ್ತ ಕಾಯ್ದೆ ಜಾರಿಗೆ ತಂದು ನಮ್ಮ ಸಾಲ ಮನ್ನಾ ಮಾಡಬೇಕೆಂದು ಮಹಿಳೆಯರು ಆಗ್ರಹಿಸಿದರು.

  • ಸಿಎಂ ಬರೋವರೆಗೂ ಕಚೇರಿಯಿಂದ ಹೋಗಲ್ಲ ಎಂದು ಪಟ್ಟು ಹಿಡಿದ ವೃದ್ಧೆ

    ಸಿಎಂ ಬರೋವರೆಗೂ ಕಚೇರಿಯಿಂದ ಹೋಗಲ್ಲ ಎಂದು ಪಟ್ಟು ಹಿಡಿದ ವೃದ್ಧೆ

    ದಾವಣಗೆರೆ: ಸಿಎಂ ಕುಮಾರಸ್ವಾಮಿ ಅವರು ಸ್ಥಳಕ್ಕೆ ಬಂದು ಪರಿಹಾರ ನೀಡುವವರೆಗೂ ಜಿಲ್ಲಾಧಿಕಾರಿ ಕಚೇರಿ ಬಿಟ್ಟು ಹೋಗಲ್ಲ ಎಂದು ವೃದ್ಧೆ ಪಟ್ಟು ಹಿಡಿದು ಕುಳಿತ ಘಟನೆ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ.

    ಹರಿಹರ ತಾಲೂಕಿನ ಬುಳ್ಳಾಪುರ ಗ್ರಾಮದ ರತ್ನಮ್ಮ ಎಂಬ ವೃದ್ಧೆ ಸಿಎಂ ಅವರು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದು ಕುಳಿತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ಗೋಮಾಳ ಜಾಗದಲ್ಲಿ ನಿರ್ಮಿಸಿಕೊಂಡಿದ್ದ ವೃದ್ದೆಯ ಮನೆಯನ್ನು ತೆರವು ಮಾಡಲಾಗಿತ್ತು. ದಾವಣಗೆರೆ ಜಿಲ್ಲಾಧಿಕಾರಿಗಳ ಆದೇಶದಂತೆ ಗೋಮಾಳ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಗಳನ್ನು ಅಧಿಕಾರಿಗಳು ತೆರವು ಮಾಡಿದ್ದರು.

    ಇದರಿಂದ ಮನೆ ಕಳೆದುಕೊಂಡ ವೃದ್ಧೆ, ಹಲವು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ಪರಿಹಾರಕ್ಕಾಗಿ ಅಲೆದಾಡಿದ್ದಾರೆ. ತನಗೆ ಮನೆ ಬೇಕು ಎಂದು ಕಚೇರಿಗೆ ಅಲೆದಾಡಿ ವೃದ್ಧೆ ಬೇಸತ್ತಿದ್ದರು. ಆದ್ದರಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕುಳಿತು ಸಿಎಂ ಕುಮಾರಸ್ವಾಮಿಯವರು ಬರಲಿ, ನನ್ನ ಸಮಸ್ಯೆಗೆ ಪರಿಹಾರ ನೀಡಲಿ. ಸಿಎಂ ಬರುವವರೆಗೂ ನಾನು ಹೋಗಲ್ಲ ಅಂತ ಗೋಳಾಡಿದ್ದಾರೆ. ಕೊನೆಗೆ ಕಚೇರಿಯಲ್ಲಿದ್ದ ಅಧಿಕಾರಿಗಳು ವೃದ್ಧೆಯ ಮನ ಓಲೈಸಿ ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿಸಿ ಕಚೇರಿ ದ್ವಾರದಲ್ಲಿ ಮಲಗಿಸಿ, ಮಗನಿಂದ ತಾಯಿಯ ದಯಾಮರಣಕ್ಕೆ ಮನವಿ

    ಡಿಸಿ ಕಚೇರಿ ದ್ವಾರದಲ್ಲಿ ಮಲಗಿಸಿ, ಮಗನಿಂದ ತಾಯಿಯ ದಯಾಮರಣಕ್ಕೆ ಮನವಿ

    ತುಮಕೂರು:ನಿಗೂಢ ಖಾಯಿಲೆಯಿಂದ ನರಳುತಿದ್ದ ತಾಯಿಯ ದಯಾಮರಣಕ್ಕೆ ಅನುಮತಿ ಕೊಡುವಂತೆ ಮಗನೊಬ್ಬ ತುಮಕೂರು ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.

    ನಿಸ್ತೇಜ ಸ್ಥಿತಿಯಲ್ಲಿರುವ ತಾಯಿಯನ್ನು ಡಿಸಿ ಕಚೇರಿ ದ್ವಾರದಲ್ಲಿ ಮಲಗಿಸಿ ದಯಾಮರಣಕ್ಕಾಗಿ ಮಗ ಅಂಗಲಾಚಿದ್ದಾರೆ. ತುಮಕೂರು ನಗರದ ಗಾರ್ಡನ್ ರಸ್ತೆಯ ನಿವಾಸಿ ನಾಗರಾಜ್ ತನ್ನ ತಾಯಿ ನಾಗರತ್ನಮ್ಮಾರ ದಯಾಮರಣಕ್ಕಾಗಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ದಯಾಮರಣಕ್ಕೆ ಸುಪ್ರೀಂ ಅನುಮತಿ: ಏನಿದು ಲಿವಿಂಗ್ ವಿಲ್? ತೀರ್ಪಿನಲ್ಲಿ ಏನಿದೆ? ತಪ್ಪು ಮಾಡಿದ್ರೆ ಶಿಕ್ಷೆ ಏನು?

    ಕೈಕಾಲು ಸ್ವಾದೀನ ಕಳೆದುಕೊಂಡ ನಾಗರತ್ನಮ್ಮ ಕಳೆದ 10 ವರ್ಷದಿಂದ ಹಾಸಿಗೆ ಹಿಡಿದಿದ್ದಾರೆ. ನಾಗರತ್ನಮ್ಮ ಅವರಿಗೆ ಎಷ್ಟೇ ಚಿಕಿತ್ಸೆ ಕೊಡಿಸಿದರೂ ಕಾಯಿಲೆ ಮಾತ್ರ ಗುಣಮುಖವಾಗಿರಲಿಲ್ಲ. ಇದರಿಂದ ಬೇಸತ್ತ ಮಗ ನಾಗರಾಜು ತಾಯಿಯನ್ನು ಕರೆದುಕೊಂಡು ಡಿಸಿ ಕಚೇರಿ ಬಳಿ ಹೋಗಿ ತಾಯಿಯ ದಯಾಮರಣಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.

    ನಂತರ ತಾಯಿ ಮಗನ ಪರಿಸ್ಥಿತಿ ನೋಡಿದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅವರು ತಕ್ಷಣ ನಾಗರತ್ನಮ್ಮಾಳರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರೀ ಮಳೆಗೆ ಮಂಗ್ಳೂರು ಜಲಾವೃತ- ಚರಂಡಿ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಸೂಚನೆ

    ಭಾರೀ ಮಳೆಗೆ ಮಂಗ್ಳೂರು ಜಲಾವೃತ- ಚರಂಡಿ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಸೂಚನೆ

    ಮಂಗಳೂರು: ಅಪರೂಪದ ಪ್ರವಾಹಕ್ಕೆ ಮಂಗಳೂರು ಮುಳುಗಿದ್ದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರೋ ದಕ್ಷಿಣ ಕನ್ನಡ ಜಿಲ್ಲಾಡಳಿತ ಚರಂಡಿ ಒತ್ತುವರಿ ತೆರವಿಗೆ ನಿರ್ಧರಿಸಿದೆ.

    ಚರಂಡಿ, ಕಾಲುವೆ ಒತ್ತುವರಿ ಬಗ್ಗೆ ಮೂರು ದಿನದಲ್ಲಿ ವರದಿ ಕೊಡುವಂತೆ ಪಾಲಿಕೆ ಆಯುಕ್ತರಿಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚಿಸಿದ್ದಾರೆ. ಕಡಲ ನಗರಿಯಲ್ಲಿ ದಾಖಲೆ ಮಳೆಯಾಗಿದ್ರೂ ಪ್ರವಾಹದಿಂದ ಮುಳುಗಿದ್ದ ಎಲ್ಲರನ್ನೂ ನಿಬ್ಬೇರಿಸಿತ್ತು. ಪ್ರವಾಹೋತ್ತರ ಭೇಟಿ ವೇಳೆ ಸಂಸದ ನಳಿನ್ ಕುಮಾರ್ ಕಟೀಲ್‍ಗೂ ಮೊದ್ಲು ಚರಂಡಿ ಸರಿ ಮಾಡಿಸಿ ಅಂತ ಸ್ಥಳೀಯರು ಕ್ಲಾಸ್ ತೆಗೆದುಕೊಂಡಿದ್ದರು.

    ಅತ್ತಾವರ, ಅಳಕೆ, ಕುದ್ರೋಳಿ, ಕೊಟ್ಟಾರ, ಜೆಪ್ಪಿನಮೊಗರು, ಬಿಜೈ, ಆನೆಗುಂಡಿಯಲ್ಲಿ ರಸ್ತೆ, ಮನೆಗಳು ಜಲಾವೃತಗೊಂಡಿತ್ತು. ಮುಂಗಾರು ಆರಂಭ ಹೊತ್ತಲ್ಲೇ ಮತ್ತೊಮ್ಮೆ ಪ್ರವಾಹ ಆಗೋದನ್ನು ತಪ್ಪಿಸಲು ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ನಿರ್ಧರಿಸಿದ್ದು ವಿಶೇಷವಾಗಿದೆ.